ಪುರುಷಸೂಕ್ತಭಾಷ್ಯಮ್ ೭
ಪುರುಷಸೂಕ್ತಭಾಷ್ಯಮ್ ೭ ಡಿವಿಜಿಯವರ ಭಾವಸಾರ— ನಮೋऽಸ್ವನನ್ತಾಯ ಸಹಸ್ರಮೂರ್ತಯೇ ಸಹಸ್ರಪಾದಾಕ್ಷಿಶಿರೋರುಬಾಹವೇ | ಸಹಸ್ರನಾಮ್ನೇ ಪುರುಷಾಯ ಶಾಸತೇ (ಶಾಶ್ವತೇ) ಸಹಸ್ರಕೋಟಿಯುಗಧಾರಿಣೇ ನಮಃ || ವೇದವು ಜೀವ-ಜಗತ್ತು-ಈಶ್ವರರ ಬಗೆಗಿನ ಅರಿವೆಂಬ ತತ್ತ್ವಜ್ಞಾನ, ಅಲೌಕಿಕವಸ್ತುಬೋಧನೆ, ಇಂದ್ರಿಯಾತೀತ-ಲೋಕಾತೀತ ತತ್ತ್ವಸ್ವರೂಪ, ಜಗದ್ರಹಸ್ಯ, ಜೀವೇಶ್ವರ-ವಿವೇಕ, ಪರಮಸತ್ಯವನ್ನು ತಿಳಿಸಿಕೊಡುವ ವಾಕ್-ಪ್ರಬಂಧ. ಪುರುಷಸೂಕ್ತವು ಅಂತಹ ವಿಚಾರವುಳ್ಳ ವೇದದ ಒಂದು ಸಾರಸಂಗ್ರಹಭೂತ ಭಾಗ. ಇದು ಋಗ್ವೇದ ಸಂಹಿತೆಯ ೮ನೆಯ ಅಷ್ಟಕದ ೪ನೆಯ ಅಧ್ಯಾಯದ ೧೭-೧೯ನೆಯ ವರ್ಗದಲ್ಲಿ (೧೦ನೆಯ ಮಂಡಲದ ೮ನೆಯ ಪ್ರಪಾಠಕದ ೪ನೆಯ ಅನುವಾಕದಲ್ಲಿ) ೧೬ ಋಕ್ಕುಗಳುಳ್ಳ ಭಾಗ. ಇಲ್ಲಿ ಮಂತ್ರಗಳನ್ನು ೩ ವಿಭಾಗಗಳಲ್ಲಿ ವಿಸ್ತರಿಸಲಾಗಿದೆ. ೧-೧೮ ಪೂರ್ವನಾರಾಯಣ ೧೯-೨೪ ಉತ್ತರನಾರಾಯಣ ೨೫-೩೦ ವೈಷ್ಣವಾನುವಾಕ ಪುರುಷಸೂಕ್ತವೆಂಬ ಹೆಸರು ಸಾಮಾನ್ಯವಾಗಿ ಪೂರ್ವನಾರಾಯಣಕ್ಕೆ ರೂಢಿಯಾಗಿದ್ದರೂ, ವಿಷಯಸಮಗ್ರತೆಯ ದೃಷ್ಟಿಯಿಂದ ಮೇಲ್ಕಂಡ ಮೂರು ಭಾಗಗಳನ್ನೂ ಏಕಗ್ರಂಥವೆಂದು ಭಾವಿಸುವುದು ಪದ್ಧತಿ. ಪುರುಷಸೂಕ್ತವೆಂದರೆ ಪುರುಷನನ್ನು ಕುರಿತ ಸೂಕ್ತ. ಪುರುಷ ಎಂದರೆ ಪರಮಾತ್ಮ. ಯಾವ ಮಹಾಸತ್ತ್ವವು ಮನುಷ್ಯನಿಗೆ ತಿಳಿದಿರುವ ಎಲ್ಲದರಲ್ಲಿಯೂ ತುಂಬಿಕೊಂಡು ಜಗದಾಕಾರವಾಗಿರುತ್ತದೆಯೋ ಅದೇ ಪುರುಷ. ಸೂಕ್ತ ವೆಂದರೆ (ಸು ಉಕ್ತ) ಸರಿಯಾದ ಹೇಳಿಕೆ. ಚರಾಚರ ಪ್ರಪಂಚದಲ್ಲಿ ಅಂತರ್ಯ...