ಪುರುಷಸೂಕ್ತಭಾಷ್ಯಮ್ ೭

ಪುರುಷಸೂಕ್ತಭಾಷ್ಯಮ್ ೭


ಡಿವಿಜಿಯವರ ಭಾವಸಾರ—

ನಮೋऽಸ್ವನನ್ತಾಯ ಸಹಸ್ರಮೂರ್ತಯೇ
ಸಹಸ್ರಪಾದಾಕ್ಷಿಶಿರೋರುಬಾಹವೇ |
ಸಹಸ್ರನಾಮ್ನೇ ಪುರುಷಾಯ ಶಾಸತೇ (ಶಾಶ್ವತೇ)
ಸಹಸ್ರಕೋಟಿಯುಗಧಾರಿಣೇ ನಮಃ ||

ವೇದವು ಜೀವ-ಜಗತ್ತು-ಈಶ್ವರರ ಬಗೆಗಿನ ಅರಿವೆಂಬ ತತ್ತ್ವಜ್ಞಾನ, ಅಲೌಕಿಕವಸ್ತುಬೋಧನೆ, ಇಂದ್ರಿಯಾತೀತ-ಲೋಕಾತೀತ ತತ್ತ್ವಸ್ವರೂಪ, ಜಗದ್ರಹಸ್ಯ, ಜೀವೇಶ್ವರ-ವಿವೇಕ, ಪರಮಸತ್ಯವನ್ನು ತಿಳಿಸಿಕೊಡುವ ವಾಕ್-ಪ್ರಬಂಧ. ಪುರುಷಸೂಕ್ತವು ಅಂತಹ ವಿಚಾರವುಳ್ಳ ವೇದದ ಒಂದು ಸಾರಸಂಗ್ರಹಭೂತ ಭಾಗ. ಇದು ಋಗ್ವೇದ ಸಂಹಿತೆಯ ೮ನೆಯ ಅಷ್ಟಕದ ೪ನೆಯ ಅಧ್ಯಾಯದ ೧೭-೧೯ನೆಯ ವರ್ಗದಲ್ಲಿ (೧೦ನೆಯ ಮಂಡಲದ ೮ನೆಯ ಪ್ರಪಾಠಕದ ೪ನೆಯ ಅನುವಾಕದಲ್ಲಿ) ೧೬ ಋಕ್ಕುಗಳುಳ್ಳ ಭಾಗ.

ಇಲ್ಲಿ ಮಂತ್ರಗಳನ್ನು ೩ ವಿಭಾಗಗಳಲ್ಲಿ ವಿಸ್ತರಿಸಲಾಗಿದೆ.
೧-೧೮ ಪೂರ್ವನಾರಾಯಣ
೧೯-೨೪ ಉತ್ತರನಾರಾಯಣ
೨೫-೩೦ ವೈಷ್ಣವಾನುವಾಕ

ಪುರುಷಸೂಕ್ತವೆಂಬ ಹೆಸರು ಸಾಮಾನ್ಯವಾಗಿ ಪೂರ್ವನಾರಾಯಣಕ್ಕೆ ರೂಢಿಯಾಗಿದ್ದರೂ, ವಿಷಯಸಮಗ್ರತೆಯ ದೃಷ್ಟಿಯಿಂದ ಮೇಲ್ಕಂಡ ಮೂರು ಭಾಗಗಳನ್ನೂ ಏಕಗ್ರಂಥವೆಂದು ಭಾವಿಸುವುದು ಪದ್ಧತಿ. ಪುರುಷಸೂಕ್ತವೆಂದರೆ ಪುರುಷನನ್ನು ಕುರಿತ ಸೂಕ್ತ. ಪುರುಷ ಎಂದರೆ ಪರಮಾತ್ಮ. ಯಾವ ಮಹಾಸತ್ತ್ವವು ಮನುಷ್ಯನಿಗೆ ತಿಳಿದಿರುವ ಎಲ್ಲದರಲ್ಲಿಯೂ ತುಂಬಿಕೊಂಡು ಜಗದಾಕಾರವಾಗಿರುತ್ತದೆಯೋ ಅದೇ ಪುರುಷ. ಸೂಕ್ತವೆಂದರೆ (ಸು ಉಕ್ತ) ಸರಿಯಾದ ಹೇಳಿಕೆ. ಚರಾಚರ ಪ್ರಪಂಚದಲ್ಲಿ ಅಂತರ್ಯಾಮಿಯಾಗಿದ್ದುಕೊಂಡು ಜೀವಲೀಲೆಯಲ್ಲಿ ನಮಗೆ ಗೋಚರವಾಗಿರುವ ಪರಮಾತ್ಮವಸ್ತುವನ್ನು ಕುರಿತ ಪ್ರಮಾಣವಾಕ್ಯವೇ ಪುರುಷಸೂಕ್ತ.

ಪಾರಾಯಣ—

ಈ ಒಂದು ಸೂಕ್ತದ ನಿತ್ಯಪಾರಾಯಣವು ಸಕಲ ಉಪನಿಷತ್ತುಗಳ ಪಾರಾಯಣಕ್ಕೆ ಸಮಾನವೆನ್ನುವುದುಂಟು. ಪಾರಾಯಣವೆಂದರೆ ಕೇವಲ ಪಠನವಲ್ಲ; ಆದರೆ ಪರಾಯಣತೆ— ತದೇಕ ನಿಷ್ಠೆ, ಅರ್ಥಮನನ. ಇದು ಗಾತ್ರದಲ್ಲಿ ಸಣ್ಣದು. ಮೇಲ್ನೋಟಕ್ಕೆ ಸರಳ ಪದಪ್ರಯೋಗದಂತೆ ಕಂಡುಬಂದರೂ, ಅದರರ್ಥವು ಚಿಂತಿಸಿದಷ್ಟೂ ಅಗಾಧವೂ, ವಿಸ್ತಾರವೂ ಆದದ್ದು. ಪುರುಷಸೂಕ್ತದ ಮಹಿಮೆಯನ್ನನುಭವಿಸ ಬಯಸುವವರು ಕೇವಲ ಅದರ ಮೇಲ್ನೋಟದ ಶಬ್ದಾರ್ಥ-ವಾಚ್ಯಾರ್ಥಗಳನ್ನು ಮಾತ್ರ ನೋಡದೆ, ಅದರ ಭಾವಾರ್ಥ, ತಾತ್ಪರ್ಯಾರ್ಥ, ಧ್ವನಿತಾರ್ಥಗಳನ್ನು ಸುಸಂಸ್ಕೃತ ಮನೋಬುದ್ಧಿಗಳ ಏಕಾಗ್ರ ಪರಿಶ್ರಮದಿಂದಲೂ, ಕಾವ್ಯಾಲಂಕಾರಾರ್ಥಗಳನ್ನು ಊಹನ-ಕಲ್ಪನ ಸಾಮರ್ಥ್ಯ-ಪ್ರತಿಭೆಗಳಿಂದಲೂ, ಸಾವಿರಾರು ವರ್ಷಗಳ ಹಿಂದಿನ ಕಾಲದ ಸಮಾಜದ ವಾತಾವರಣವನ್ನು ಪರಿಭಾವಿಸಿಕೊಂಡು, ಅಂದಿನ ಭಾಷಾರೂಢಿಯನ್ನು ಸ್ವಾತ್ಮೀಕರಿಸಿಕೊಂಡು, ಆ ಕಾಲದ ಲಕ್ಷ್ಯಸೂಕ್ಷ್ಮಗಳನ್ನು ನಾವು ಅಂತರಂಗದಲ್ಲಿ ಪ್ರತ್ಯಕ್ಷೀಕರಿಸಿಕೊಂಡು ಮನನಮಾಡಬೇಕು.

ಹೀಗೆ ಸಂಪಾದಿಸಿದ ತತ್ತ್ವಾರ್ಥಜ್ಞಾನವು ಮನನದಿಂದ ಕ್ರಮೇಣ ನಮ್ಮ ಸ್ವಭಾವಕ್ಕೆ ಅಂತರ್ಗತವಾಗಿ, ತನ್ಮೂಲಕ ತತ್ತ್ವದ ಜೀವನಾನುಸಂಧಾನ, ಧರ್ಮಸಂದರ್ಶನ, ಶ್ರೇಯಃಪ್ರಾಪ್ತಿಗಳಾಗುತ್ತವೆ. ಹೀಗೆ, ಶ್ರದ್ಧಾಬುದ್ಧಿಪೂರ್ವಕ ನಡೆಯುವ ವ್ಯಾಸಂಗಕ್ಕೆ ಪಾರಾಯಣವೆಂಬ ಹೆಸರು ಸಲ್ಲತಕ್ಕದ್ದು.

ಮಂತ್ರದ ಮಹಿಮೆ ಅದರ ಅಕ್ಷರದಲ್ಲಲ್ಲ, ನಮ್ಮ ಮನನದಲ್ಲಿ. ದೇವರ ವರ ನಮ್ಮ ಭಕ್ತಿಗೆ ತಕ್ಕಂತೆ. ದೇವರಲ್ಲಿರುವುದನ್ನೆಲ್ಲ ಅವನು ಕೊಟ್ಟರೆ ನಾವು ಹೊತ್ತುಕೊಳ್ಳಲಾರೆವು. ನಮ್ಮ ಯೋಗ್ಯತೆ (ಪಾತ್ರತೆ) ಯಂತೆ ಅವನ ಅನುಗ್ರಹ. ಹೀಗಾಗಿ, ನಮ್ಮ ಉದ್ಧಾರದ ಮೊದಲ ಮೆಟ್ಟಿಲು ನಮ್ಮ ಶ್ರದ್ಧೆ-ಪ್ರಯತ್ನಗಳೇ. ಮಂತ್ರಾಕ್ಷರಗಳು ನಿಮಿತ್ತ ಮಾತ್ರ. ಅಕ್ಕಿಯನ್ನು ಅನ್ನವಾಗಿಸುವುದು ಪಾತ್ರೆಯಲ್ಲ, ಬೆಂಕಿಯುರಿ. ಮಂತ್ರದಿಂದ ತತ್ತ್ವದರ್ಶನವನ್ನುಂಟಾಗಿಸುವುದು ಮನಸ್ಸಿನ ಕಾವು. ಅದೇ ಶ್ರದ್ಧೆ. ಅದೇ ತಪಸ್ಸು.


ಪುರುಷ ಶಬ್ದಾರ್ಥ—


೧) ಮನುಷ್ಯ, ಗಂಡಸು— ದಿನಬಳಕೆಯ ಅರ್ಥ.
೨) ಜಗನ್ಮೂಲವಸ್ತುವಾದ ಪರಬ್ರಹ್ಮದ ವ್ಯಕ್ತಸ್ವರೂಪ— ಪರಮಾತ್ಮ, ಭಗವಂತ, ಪರಮೇಶ್ವರ, ನಾರಾಯಣ, ದೇವರು— ವೇದಾದಿ ಶಾಸ್ತ್ರಗಳಲ್ಲಿನ ಅರ್ಥ.


ಪುರುಷ ಶಬ್ದವು ಸಂಸ್ಕೃತದ "ಪೂ" ಧಾತುವಿನಿಂದ ಬಂದದ್ದು. ಆ ಧಾತುವಿಗೆ ("ಪಾಲನಮಾಡುವುದು / ಪರಿಪಾಲಿಸುವುದು / ಸಲಹುವುದು / ರಕ್ಷಿಸುವುದು / ಪೋಷಿಸುವುದು") "ಭರ್ತಿಮಾಡುವುದು", "ಪೂರಯಿಸುವುದು", "ತುಂಬುವುದು" ಎಂದರ್ಥ (ಪೄ ಪಾಲನ-ಪೂರಣಯೋಃ). ಯಾವ ಒಂದು ಸತ್ತ್ವವು ಎಲ್ಲರಲ್ಲಿಯೂ ತುಂಬಿಕೊಂಡಿರುತ್ತದೆಯೋ (ಎಲ್ಲರನ್ನೂ ಪರಿಪಾಲಿಸುತ್ತಿದೆಯೋ) ಅದು, ಆ ದಶೆ (ದೆಸೆ, ಅವಸ್ಥೆ, ಸ್ಥಿತಿ) ಯಲ್ಲಿ "ಪುರುಷ" ಎಂದೆನ್ನಿಸಿಕೊಳ್ಳುತ್ತದೆ.


ಪುರುಷ ಶಬ್ದಾರ್ಥ—


೧) ಮನುಷ್ಯ, ಗಂಡಸು— ದಿನಬಳಕೆಯ ಅರ್ಥ.
೨) ಜಗನ್ಮೂಲವಸ್ತುವಾದ ಪರಬ್ರಹ್ಮದ ವ್ಯಕ್ತಸ್ವರೂಪ— ಪರಮಾತ್ಮ, ಭಗವಂತ, ಪರಮೇಶ್ವರ, ನಾರಾಯಣ, ದೇವರು— ವೇದಾದಿ ಶಾಸ್ತ್ರಗಳಲ್ಲಿನ ಅರ್ಥ.


ಪುರುಷ ಶಬ್ದವು ಸಂಸ್ಕೃತದ "ಪೂ" ಧಾತುವಿನಿಂದ ಬಂದದ್ದು. ಆ ಧಾತುವಿಗೆ ("ಪಾಲನಮಾಡುವುದು / ಪರಿಪಾಲಿಸುವುದು / ಸಲಹುವುದು / ರಕ್ಷಿಸುವುದು / ಪೋಷಿಸುವುದು") "ಭರ್ತಿಮಾಡುವುದು", "ಪೂರಯಿಸುವುದು", "ತುಂಬುವುದು" ಎಂದರ್ಥ (ಪೄ ಪಾಲನ-ಪೂರಣಯೋಃ). ಯಾವ ಒಂದು ಸತ್ತ್ವವು ಎಲ್ಲರಲ್ಲಿಯೂ ತುಂಬಿಕೊಂಡಿರುತ್ತದೆಯೋ (ಎಲ್ಲರನ್ನೂ ಪರಿಪಾಲಿಸುತ್ತಿದೆಯೋ) ಅದು, ಆ ದಶೆ (ದೆಸೆ, ಅವಸ್ಥೆ, ಸ್ಥಿತಿ) ಯಲ್ಲಿ "ಪುರುಷ" ಎಂದೆನ್ನಿಸಿಕೊಳ್ಳುತ್ತದೆ.


  • ಪುರುಷಃ ಸರ್ವಪೂರಣಾತ್ || (ಶಾಂಕರ ಕಠಭಾಷ್ಯ— ೧-೩-೧೧)— ಎಲ್ಲವನ್ನೂ ಪೂರಣಮಾಡುವುದರಿಂದಾಗಿ (ತುಂಬುವುದರಿಂದಾಗಿ, ಪೂರ್ಣಮಾಡುವುದರಿಂದಾಗಿ) ಪುರುಷನು.
  • ಸಃ ಯತ್ ಪೂರ್ವಃ ಅಸ್ಮಾತ್ ಸರ್ವಸ್ಮಾತ್, ಸರ್ವಾನ್ ಪಾಪ್ಮನಾ ಔಷತ್, ತಸ್ಮಾತ್ ಪುರುಷಃ || (ಬೃಹದಾರಣ್ಯಕ— ೧-೪-೧)— ಯಾವನು ಈ ಎಲ್ಲಕ್ಕಿಂತಲೂ ಪೂರ್ವನು (ಹಿಂದಿನವನು), ಎಲ್ಲವನ್ನೂ (ಎಲ್ಲರನ್ನೂ) ಪಾಪದಿಂದ ಮುಕ್ತಿಗೊಳಿಸಿದವನೋ (ಔಷತ್— ಉಷ ದಾಹೇ / ಭಸ್ಮೀಕರಣೇ— ಎಲ್ಲರ ಪಾಪಗಳನ್ನು ಸುಟ್ಟವನೋ— ಹರಿರ್ಹರತಿ ಪಾಪಾನಿ— ಶ್ರೀಹರಿಯು ಪಾಪಪರಿಹರಿಸುವವನು), ಅದರಿಂದಾಗಿ ಅವನು ಪುರುಷನು.
  • ಸಃ ವಾ ಅಯಂ ಪುರುಷಃ ಸರ್ವಾಸು ಪೂರ್ಷು ಪುರಿಶಯಃ || (ಬೃಹದಾರಣ್ಯಕ— ೨-೫-೧೮)— ಅವನೇ ಈ ಪುರುಷನು, ಯಾವನು ಎಲ್ಲ (ಪೂರ್ಷು— ಪೂಃ ಎಂದರೆ ಲೋಕಗಳು; "ಇಮಾ ವೈ ಲೋಕಾಃ ಪೂಃ, ಅಯಂ ಪುರುಷ…"— ಶತಪಥಬ್ರಾಹ್ಮಣ) ಲೋಕಗಳಲ್ಲಿ ಹಾಗೂ ದೇಹಗಳಲ್ಲಿ ಆಶ್ರಯಿಸಿರುವನು (ನೆಲೆಸಿರುವನು).
  • ಪುರಿ ಶೇತೇ ಯತಸ್ತಸ್ಮಾತ್ ಪುರುಷೋ ಜೀವ ಉಚ್ಯತೇ |
ಸರ್ವಂ ಪೂರಯತೀತ್ಯೇವಂ ಪುರುಷೋ ಬ್ರಹ್ಮ ಭಣ್ಯತೇ ||
(ಅನುಭೂತಿಪ್ರಕಾಶ— ೧೬-೩೭)— ದೇಹದಲ್ಲಿ ಶಯನಿಸಿರುವುದರಿಂದಾಗಿ ಪುರುಷನು ಜೀವನೆನಿಸುತ್ತಾನೆ (ಜೀವಾತ್ಮ), ಅಥವಾ ಜೀವಾತ್ಮನು ಪುರುಷನೆನಿಸುತ್ತಾನೆ. ಎಲ್ಲವನ್ನೂ ತುಂಬುತ್ತಾನೆಂಬುದರಿಂದಾಗಿಯೂ ಬ್ರಹ್ಮವು ಪುರುಷನೆನ್ನಲ್ಪಡುವುದು.


ಪುರ ಎಂದರೆ ದೇಹ. ದೇಹ ಧರಿಸಿದವನು ಪುರುಷ. ಪ್ರಪಂಚದ ಮೂಲವಸ್ತುವಾದ ಬ್ರಹ್ಮವು ತಾತ್ವಿಕವಾಗಿ (ಮೂಲಸ್ಥಿತಿಯಲ್ಲಿ) ಅಮೂರ್ತವಾದದ್ದು, ಉಪಾಧಿರಹಿತವಾದದ್ದು, ಅಮೇಯವಾದದ್ದು, ಅನಂತಚೈತನ್ಯಯುತವಾದದ್ದು. ಅದು ತನ್ನ ಒಂದಂಶದಲ್ಲಿ ಮಾತ್ರ ರೂಪತಾಳಿ "ನಾನು", "ನಾನು"— ಎಂದುಕೊಂಡು ಹೊರಟಿರುವುದರಿಂದಲೇ ಈ ಎಲ್ಲ ಪ್ರಪಂಚ. ಆ "ನಾನು", "ನಾನು" ಎನ್ನುವ ವಸ್ತುವೇ ಜೀವ; ಅದೇ ಆತ್ಮ— ಜೀವಾತ್ಮ. ಅದೇ ಬ್ರಹ್ಮದ ವ್ಯಕ್ತರೂಪ.


ನಿರಾಕಾರಬ್ರಹ್ಮದ ಸಾಕಾರದಶೆಯೇ ಪುರುಷ. ನಾಮರೂಪಾದಿರಹಿತವಾದ ಪರಬ್ರಹ್ಮವು ರೂಪಧಾರಣೆ ಮಾಡಿದಾಗ ಪುರುಷ. ಆದ್ದರಿಂದಲೇ ಭಗವಂತನಿಗೆ "ಆದಿಪುರುಷ" ಎಂಬ ಹೆಸರು.
"ಸ ವೈ ಶರೀರೀ ಪ್ರಥಮಃ ||"
ಎನ್ನುತ್ತದೆ ಶ್ರುತಿ. ಹೀಗೆ, ಬ್ರಹ್ಮವು ಸೃಷ್ಟಿಗಾಗಿ ಕಾರ್ಯರೂಪವನ್ನು ಧರಿಸಿದ್ದೇ ಪುರುಷನೆನಿಸಿದೆ. ಆ ಕಾರ್ಯಾವಸರದಲ್ಲಿ ನಾನಾರೂಪತಾಳಿದ್ದೇ "ವಿರಾಟ್". ಈ ಸಮಸ್ತ ಜೀವಕೋಟಿಯಲ್ಲಿ, ಬ್ರಹ್ಮದ ಎಲ್ಲ ವ್ಯಕ್ತರೂಪಗಳಲ್ಲಿ, ಅತ್ಯಂತ ಮೇಲ್ಮಟ್ಟದ ಮನಸ್ಸು, ಚಿತ್ತ, ಬುದ್ಧಿ, ಅಹಂಕಾರಾದಿ ಅಂತಃಕರಣಗಳಿರುವ ಮನುಷ್ಯನಲ್ಲಿ ಜೀವೋತ್ತಮರೂಪ ಪಡೆದಿರುವುದರಿಂದ ಪುರುಷ ಎಂಬ ಹೆಸರನ್ನು ಕಾರ್ಯಬ್ರಹ್ಮವನ್ನು ಬಿಟ್ಟರೆ, ಮನುಷ್ಯನಿಗೆ ಮಾತ್ರ ವಿಶೇಷವಾಗಿ ಅನ್ವಯಿಸಿದೆ.


ಸಮಸ್ತಪ್ರಾಣಿವರ್ಗದಲ್ಲಿ ಪುರುಷನು ಉತ್ತಮ; ಆತನಲ್ಲಿ ಅಂತರ್ಭೂತವಾಗಿರುವ ಬ್ರಹ್ಮಚೈತನ್ಯವು ಇನ್ನೂ ಉತ್ತಮ; ಆ ಚೈತನ್ಯದ ವಿಶೇಷಾವತಾರವೇ ಪರಮೇಶ್ವರ, ಮಹಾವಿಷ್ಣು, ಶ್ರೀಮನ್ನಾರಾಯಣ. ಆದ್ದರಿಂದಲೇ ಆತನನ್ನು ಆದಿಪುರುಷ, ಅಧಿಪುರುಷ, ಪರಮಪುರುಷ, ಪುರುಷೋತ್ತಮ ಎಂದಿವೆ ವೇದಶಾಸ್ತ್ರಗಳು. ರೂಢಿಯಲ್ಲಿರುವ ಪುರುಷನೆಂದರೆ "ಸ್ತ್ರೀಯಲ್ಲದ" ಎಂಬ ಸಾಮಾನ್ಯಾರ್ಥವು ಇಲ್ಲಿ ಗ್ರಾಹ್ಯವಲ್ಲ. ಪುರುಷಸೂಕ್ತದಲ್ಲಿ ವಿವಕ್ಷಿತನಾಗಿರುವವನು ಪರಮಾತ್ಮನಾದ ವಿರಾಟ್ ಪುರುಷ. ಆತಲ್ಲಿ ಸಮಸ್ತ ಚರಾಚರಗಳೂ ಅಡಗಿರುವುದರಿಂದ, ಆತನು ಲಿಂಗಭೇದರಹಿತನು. ಆದ್ದರಿಂದ ಇಲ್ಲಿ ಪುರುಷನೆಂದರೆ ದೇಹಧಾರಿಯಾಗಿರುವ ಚೈತನ್ಯ ಎಂದರ್ಥ. 


ಪುರುಷಸೂಕ್ತಮ್— ಪೂರ್ವನಾರಾಯಣಮ್—


ಈಶ್ವರನ ಅನಂತರೂಪಿತ್ವ


ಹರಿಃ ಓಮ್ ||
ಸಹಸ್ರಶೀರ್ಷಾ ಪುರುಷಃ | ಸಹಸ್ರಾಕ್ಷಃ ಸಹಸ್ರಪಾತ್ |
ಸ ಭೂಮಿಂ ವಿಶ್ವತೋ ವೃತ್ವಾ | ಅತ್ಯತಿಷ್ಠದ್ದಶಾಂಗುಲಮ್ || ೧ ||


"ಸ್ಮೃತಿಮಾತ್ರೇಣ ಪುಂಸಾಂ ಪಾಪಂ ಹರತಿ ಇತಿ ಹರಿಃ"— ಶಾಂಕರಭಾಷ್ಯ. 


ದೇವರ ಅಳತೆಮೀರಿದ ಗಾತ್ರ


ಹರಿಃ ಓಮ್ ||


ಸಾಸಿರದ ತಲೆಯವನು, ಸಾಸಿರದ ಕಣ್ಣವನು |
ಸಾಸಿರದ ಕಾಲವನು, ಪುರುಷನಾದಿಮನು |
ಧರೆಯನೆಲ್ಲೆಡೆಯುಮಾವರಿಸಿ ಅದರಾಚೆಯುಂ |
ಹರಡಿಹನು ನಾಲ್ಕಾರು ಬೆರಲ ದೂರದೊಳಂ || ೧ ||


ಕೇವಲ ಸ್ಮರಣೆಮಾತ್ರದಿಂದಲೇ ಮಾನವರ ಪಾಪವನ್ನು ಅಪಹರಿಸುತ್ತಾನಾದ್ದರಿಂದ ಹರಿಯೆನಿಸಿದ್ದಾನೆ ಭಗವಂತ, ಮಹಾವಿಷ್ಣುವು. ಓಂಕಾರವು ಪರಬ್ರಹ್ಮವಸ್ತುವಿಗೆ ಅನಾದಿಕಾಲದಿಂದ ಬಂದಿರುವ ಹೆಸರು. ವೇದಪಾಠಾರಂಭದಲ್ಲಿ "ಹರಿಃ ಓಮ್" ಎಂದು ಭಗವಂತನನ್ನು ಸ್ಮರಿಸುವುದು ಪುರಾತನ ಸಂಪ್ರದಾಯ.

ಡಾ| ಶಾಮ ಭಟ್ಟರ "ವೇದ ಮಂತ್ರ ಗೀತಾಂಜಲಿ"ಯಿಂದ—

ಸೃಷ್ಟಿಗೊಂಡನು ಸೃಷ್ಟಿಕರ್ತನು ಸೃಷ್ಟಿಗಾಗಿಯೆ ಯಜ್ಞಹುತನು |
ದೃಷ್ಟಿಗೋಚರ ತ್ವಷ್ಟನರಿತರೆ ಪುರುಷಜ್ಞಾನದ ಅಮರನವನು ||

ತಲೆಯ ಸಾಸಿರ ಪ್ರಜ್ಞ ಪುರುಷನು ನೋಳ್ವ ಸಾಸಿರ ನಯನದಿಂದ |
ಪಾದಸಾಸಿರದಿಂದ ಹರಡಿಹ ವಿಶ್ವದಗಲವ ಮೀರಿ ಹರಿದು ||

ಡಾ| ಬನ್ನಂಜೆ ಗೋವಿಂದಾಚಾರ್ಯರ ಭಾಷ್ಯದಿಂದ—

ಪರಮಪುರುಷನಾದ ನಾರಾಯಣನೆ ನಿಜವಾದ ಪುರುಷ. ಅವನ ಜ್ಞಾನಾನಂದಮಯ ಅವಯವಗಳನ್ನು ನಿರೂಪಿಸಲು ಪುರುಷಸೂಕ್ತ ಹೊರಟಿದೆ. ಹೀಗೆ, ಪುರುಷೋತ್ತಮನನ್ನು ಪ್ರತಿಪಾದಿಸುವ ಸೂಕ್ತವೆಂದೆ ಇದು ಪುರುಷಸೂಕ್ತವಾಯಿತು. ಎಲ್ಲೆಡೆಯೂ ವ್ಯಾಪಿಸಿರುವುದರಿಂದ ವಿಷ್ಣುವಿಗೆ ಪುರುಷನೆಂದು ಹೆಸರು. ಈ ಮಹಾಪುರುಷನ ವಿರಾಡ್-ರೂಪದ ನಿರೂಪಣೆ ಇಲ್ಲಿ ಬಂದಿದೆ. ಅಂತರ್ಯಾಮಿ ನಾರಾಯಣ ಈ ಮಂತ್ರದ ಋಷಿ. ಪುರುಷನಾಮಕ ನಾರಾಯಣ ದೇವತೆ. 

ಸಾವಿರ ಶಿರಗಳ ಪುರುಷऽ
ಸಾವಿರ ಕಣ್ ಗಳು ಕಾಲುಗಳು |
ಭೂಮಿಯ ಸುತ್ತೂ ಮುತ್ತಿಯು ಮತ್ತೂ
ಹತ್ತಂಗುಲ ಎತ್ತರದವನು || ೧ ||

ಸಹಸ್ರಶೀರ್ಷಾ— ಸಾವಿರಾರು ತಲೆಯವನು, ಪುರುಷಃ— ಎಲ್ಲರ ದೇಹದೊಳಗೆ ಅಂತರ್ಯಾಮಿಯಾದ ನಾರಾಯಣನು, ಸಹಸ್ರಾಕ್ಷಃ— ಸಾವಿರಾರು ಕಣ್ಣುಗಳುಳ್ಳವನು, ಸಹಸ್ರಪಾತ್— ಸಾವಿರಾರ ಕಾಲುಗಳುಳ್ಳವನು, ಸಃ— ಅವನು, ಭೂಮಿಮ್— ಪ್ರಕೃತಿದೇವತೆಯಾದ ಲಕ್ಷ್ಮಿಯನ್ನು, ವಿಶ್ವತಃ— ಎಲ್ಲ ಬಗೆಯಿಂದಲೂ, ವೃತ್ವಾ— ವ್ಯಾಪಿಸಿ, ಅತ್ಯತಿಷ್ಠತ್— ಮೀರಿನಿಂತಿದ್ದಾನೆ, ದಶಾಙ್ಗುಲಮ್— ಹತ್ತಾರುಪಟ್ಟು.

ಪರಮಪುರುಷನಿಗೆ ಸಾವಿರಾರು ತಲೆಗಳು; ಸಾವಿರಾರು ಕಣ್ಣುಗಳು; ಸಾವಿರಾರು ಕಾಲುಗಳು. ಅವನು ಪ್ರಕೃತಿದೇವತೆಯಾದ ರಮೆಯನ್ನು ಕೂಡ ಕಾಲ-ದೇಶ-ಗುಣಗಳಿಂದ ಮೀರಿ ಸಾವಿರಪಟ್ಟು ಎತ್ತರದಲ್ಲಿದ್ದಾನೆ.

ಪುರುಷ ಎಂದರೆ ಪೂರ್ಣನಾಗಿರುವವನು— 'ಪುರು ಸಃ'. 
ಈ ವಿಶ್ವ ಸೃಷ್ಟಿಯಾಗುವ ಮೊದಲೆ ಇದ್ದವನು— 'ಪೂರ್ವಮೇವ ಆಸ ಇತಿ ಪುರುಷಃ'.
ಎಲ್ಲೆಡೆ ತುಂಬಿರುವವನು ಮತ್ತು ಎಲ್ಲವನ್ನೂ ಬಲ್ಲವನು— 'ಪುರು ಸರತಿ'. 
ಬ್ರಹ್ಮಾಂಡವೆಂಬ, ಪಿಂಡಾಂಡವೆಂಬ ಪುರದೊಳಗೆ ತುಂಬಿದವನು— 'ಪುರಿ ಶೇತೇ'. 
ದೇಹದೊಳಗೆ ಅಂತರ್ಯಾಮಿಯಾಗಿ ನಿಂತು ಬೆಳಗಿಸುವವನು— 'ಪುರಃ ಓಷತಿ'.

ಪುರುಷನಾಮಕರೂಪಗಳು ಮೂರು—
೧) ವಿಶ್ವಸೃಷ್ಟಿಗಿಂತ ಮೊದಲು ವಿಶ್ವಸೃಷ್ಟಿಗಾಗಿ ತಳೆದ ರೂಪ;
೨) ವಿಶ್ವಸೃಷ್ಟಿಯಾದ ಮೇಲೆ ಬ್ರಹ್ಮಾಂಡದೊಳಗೆ ತುಂಬಿದ ರೂಪ; 
೩) ಜೀವಜಾತಗಳ ಸೃಷ್ಟಿಯಾದ ಮೇಲೆ ಪಿಂಡಾಂಡದೊಳಗೆ (ಅವುಗಳ ದೇಹದೊಳಗೆ) ತುಂಬಿದ ರೂಪ.
ಅಥವಾ—
೧) ಸರ್ವಗತನಾದ ನಾರಾಯಣ;
೨) ಬ್ರಹ್ಮಾಂಡಮಾನಿಯಾದ ಚತುರ್ಮುಖನೊಳಗಿರುವ ನಾರಾಯಣ;
೩) ಪಿಂಡಾಂಡಮಾನಿಯಾದ ಶಿವನೊಳಗಿರುವ ನಾರಾಯಣ.

ಸಾಯಣಾದಿ ಭಾಷ್ಯಕಾರರಂದಂತೆ ಸಕಲ ಪ್ರಾಣಿಗಳ ಸಕಲ ಅವಯವಗಳೊಳಗೆ ಪರಮಪುರುಷನ ಆಯಾ ಅವಯವಗಳಿರುವುದರಿಂದ ಆತನಿಗೆ ಅನಂತ ಅವಯವಗಳು (ಪಿಂಡಾಂಡ ಪುರುಷ).

ಅರ್ಜುನನಿಗೆ ಕುರುಕ್ಷೇತ್ರದ ಯುದ್ಧರಂಗದಲ್ಲಿ ಭಗವಂತನು ತೋರಿದ ವಿಶ್ವರೂಪದಲ್ಲಿ ಜ್ಞಾನಾನಂದಮಯವಾದ ಅನಂತ ತಲೆ-ಕಣ್ಣು-ಕಾಲುಗಳಿವೆ (ಬ್ರಹ್ಮಾಂಡ ಪುರುಷ).

ವಿಶ್ವಸೃಷ್ಟಿಗೂ ಪೂರ್ವದಲ್ಲಿ, ವಿಶ್ವಸೃಷ್ಟಿಗಾಗಿ ಪ್ರಳಯಜಲದಲ್ಲಿ ಪವಡಿಸಿದ ಶ್ರೀಮನ್ನಾದಿನಾರಾಯಣ ಹಾಗೂ ಚತುರ್ಮುಖನೊಳಗಿನ ನಾರಾಯಣ (ಪರಮ ಪುರುಷ, ಆದಿಪುರುಷ).

ಅವನ ಅನಂತ ಗುಣಗಳೇ ಅವನ ಅನಂತ ರೂಪಗಳು, ಅನಂತ ಅವಯವಗಳು. ಅವನಿಗೆ ಅನಂತ ಜ್ಞಾನೇಂದ್ರಿಯಗಳು, ಅನಂತ ಕರ್ಮೇಂದ್ರಿಯಗಳು. 

'ಸ ಭೂಮಿಮ್'— ಇಲ್ಲಿ ಭೂಮಿ ಬರಿಯ ಪೃಥಿವಿಯಲ್ಲ; ಪ್ರಕೃತಿನಿರ್ಮಿತವಾದ ಇಡಿಯ ವಿಶ್ವ ಮತ್ತು ಭೂನಾಮಕಳಾದ ಲಕ್ಷ್ಮಿ ಕೂಡ. ಅವನು ಜಡಪ್ರಕೃತಿ, ಚೇತನಪ್ರಕೃತಿ— ಎರಡನ್ನೂ ಮೀರಿ ನಿಂತಿದ್ದಾನೆ. 

ದಶಾಂಗುಲ ಎಂಬಲ್ಲಿಯೂ, ದಶಶಬ್ದವು ಸಹಸ್ರಶಬ್ದದಂತೆಯೇ ಆನಂತ್ಯವಾಚಕ. ಅನಂತವಾಗಿ ವ್ಯಾಪಿಸಿದ್ದಾನೆ ಎಂದೇ ಅರ್ಥ. ಹೀಗಾಗಿ ಇಲ್ಲಿ ಭೂಮಿ ಎಂದರೆ ಪಾರ್ಥಿವಶರೀರವೂ ಹೌದು. ಭೂಮಿ ಎಂದರೆ ಬ್ರಹ್ಮಾಂಡ; ಭೂಮಿ ಎಂದರೆ ಪಿಂಡಾಂಡ. (ಬ್ರಹ್ಮಾಂಡವ್ಯಾಪ್ತ ಪುರುಷನು ಅದನ್ನು ಮೀರಿ ಅನಂತವಾಗಿ ವ್ಯಾಪಿಸಿರುವನು. ಪಿಂಡಾಡವ್ಯಾಪ್ತ ಪುರುಷನೂ ಅದರ ಹೊರಕ್ಕೆ ಹತ್ತಂಗುಲ ವ್ಯಾಪಿಸಿರುವನು; ಪಿಂಡಾಂಡದೊಳಗೆ ನಾಭಿಯಿಂದ ಹತ್ತಂಗುಲ ಮೇಲಿನ ಹೃದಯಾಕಾಶದಲ್ಲಿ ನೆಲೆಸಿರುವನು; ಹತ್ತಂಗುಲ ಪರಿಮಾಣದ ಹೃದಯದಲ್ಲಿ ನೆಲೆಸಿದ್ದಾನೆ.)

ಆರ್. ಎಲ್. ಕಶ್ಯಪರ ಆಧ್ಯಾತ್ಮಿಕಭಾಷ್ಯದಿಂದ— 

…….ಪುರುಷನು ದಶದಿಕ್ಕುಗಳನ್ನೂ ಮೀರಿ ನಿಂತವನು. ಈ ಪುರುಷನು ಪ್ರತಿ ಜೀವಿಯ ಕಣ್ಣುಗಳ ಮೂಲಕ ನೋಡುತ್ತಾನೆ. ಪ್ರತಿ ಜೀವಿಯ ಕಾಲುಗಳ ಮೂಲಕ ನಡೆಯುತ್ತಾನೆ. ಆದ್ದರಿಂದ, ಎಲ್ಲ ಜೀವಿಗಳ ಎಲ್ಲ ರೀತಿಯ ಮುಖಗಳನ್ನು ಹೊಂದಿದ್ದಾನೆ (ಶ್ವೇತಾಶ್ವತರೋಪನಿಷತ್ ೩.೩, ೪.೩), ಅರ್ಥಾತ್ ವಿಶ್ವತೋಮುಖನು.

ಅಂಗುಲ = ದಿಕ್ಕು ಅಥವಾ ಅವಕಾಶದ ಅಳತೆ. ಪುರುಷನ ಶಕ್ತಿಯು (ಪ್ರಭಾವವು, ವ್ಯಾಪ್ತಿಯು) ಹತ್ತು ದಿಕ್ಕುಗಳನ್ನೂ ಮೀರಿದ್ದು. ಪುರುಷನ ಸಣ್ಣ ಭಾಗದಿಂದ ಇಡೀ ವಿಶ್ವ ಪ್ರಕಟಗೊಂಡಿದೆ. ಉದಾ— ಸಮುದ್ರದಲ್ಲಿ ಎಲ್ಲಾ ನೀರು ಸೇರಿಕೊಂಡಿದ್ದರೂ, ಒಂದಿಷ್ಟು ನೀರು ಮಾತ್ರ ಇಂಗಿ ಮೋಡವಾಗುತ್ತದೆ. ಆ ಮೋಡ ಮಳೆಯಾಗುತ್ತದೆ. ಮಳೆ ಮತ್ತೆ ನದಿಗಳನ್ನು ಸೃಷ್ಟಿಸುತ್ತದೆ. ನದಿಗಳು ಸಮುದ್ರ ಸೇರುತ್ತವೆ. ಇದರಂತೆಯೇ ಸೃಷ್ಟಿಯ ಸಕಲ ಪ್ರಾದುರ್ಭಾವವು ಪರಾತ್ಪರ (ಪರಮ) ಸಮುದ್ರದಿಂದ ಹೊರಬಂದು ಮತ್ತೆ ಅದನ್ನೇ ಸೇರುತ್ತದೆ. ಆದರೂ, ಈ ಪ್ರಾದುರ್ಭಾವವು ಪರಮಸಮುದ್ರದ ಒಂದು ಕಿರು ಅಂಶಮಾತ್ರ.

ಇಲ್ಲಿಗೆ ಪುರುಷಸೂಕ್ತದ ಮೊದಲ ಮಂತ್ರದ ಭಾಷ್ಯಾನುವಾದ-ಸಂಗ್ರಹ-ವಿಸ್ತಾರವು ಮುಗಿಯಿತು.

Comments

Popular posts from this blog

ಲಘುನ್ಯಾಸದ ಬೆಳಕಿನಲ್ಲಿ ಶಿವದರ್ಶನ ೧೩—ಲಘುನ್ಯಾಸಮನ್ತ್ರಾರ್ಥವಿಚಾರ ೮

ಲಘುನ್ಯಾಸದ ಬೆಳಕಿನಲ್ಲಿ ಶಿವದರ್ಶನ ೯—ಲಘುನ್ಯಾಸಮಂತ್ರಾರ್ಥವಿಚಾರ ೪

ತೈತ್ತಿರೀಯಕೃಷ್ಣಯಜುಸ್ಸಂಹಿತಾಭಾಷ್ಯಾರ್ಥಸಮುಚ್ಚಯಃ ೧.೧.೪