ಲಘುನ್ಯಾಸದ ಬೆಳಕಿನಲ್ಲಿ ಶಿವದರ್ಶನ ೧೩—ಲಘುನ್ಯಾಸಮನ್ತ್ರಾರ್ಥವಿಚಾರ ೮
ಲಘುನ್ಯಾಸಭಾಷ್ಯಮ್ ೮
೮೯) ರುದ್ರಾಭಿಷೇಕವನ್ನು ಯಾವ ದ್ರವ್ಯಗಳಿಂದ, ಯಾವ ಮಂತ್ರಪೂರ್ವಕವಾಗಿ ಮಾಡಬೇಕು?
ಅಥೈತಸ್ಯ ಮೂರ್ಧ್ನಿ ಹಿರಣ್ಯಕಲಶೋದಕೇನ ಸನ್ತತಧಾರಾ-ಅಭಿಷಿಞ್ಚನ್ ದಧ್ನಾ, ಮಧುನಾ, ಪಯಸಾ, ಸರ್ಪಿಷಾ, ಚೇಕ್ಷುರಸೇನಾಮ್ರರಸೇನ, ನಾಲಿಕೇರಸಲಿಲೇನ, ಪುಷ್ಪೋದಕೇನ, ಫಲೋದಕೇನ, ಗನ್ಧೋದಕೇನ, ಕುಶೋದಕೇನ, ತದಲಾಭೇ ಶುದ್ಧೋದಕೇನ ವಾ# ನಮಸ್ತೇ ರುದ್ರ ಮನ್ಯವ ಇತ್ಯೇಕಾದಶಾನುವಾಕಾನ್, ಸರ್ವೋ ವೈ ರುದ್ರ ಇತಿ ತ್ರಿರನುವಾಕಾನ್, ಅಗ್ನಾವಿಷ್ಣೂ ಸಜೋಷಸ ಇತ್ಯೇಕಾದಶಾನುವಾಕಾನಾಮೇಕಮೇಕಂ ಜಪೇತ್ | ಸರ್ವೇಷಾಂ ವಾರೇ ವಾರೇ ಪುನರಾರಾಧನಮುತ್ತರಾರಾಧನಂ ರೌದ್ರಮನ್ತ್ರೇಣ ಜಪಾನ್ತೇ ಜಪಾನ್ತೇ | ಸದಾ ಗೃಹೀ ಪಾಪಕ್ಷಯಾರ್ಥೀ ವ್ಯಾಧಿನಾಶಾರ್ಥೀ ಪುತ್ರಾರ್ಥೀ ಕಾಮ್ಯಾರ್ಥೀ ಚ ಕುರ್ವೀತ ||
ಅನಂತರ (ಅಥ), ಈತನ / ಶಿವನ (ಏತಸ್ಯ), ಶಿರದ ಮೇಲೆ (ಮೂರ್ಧ್ನಿ), ಸ್ವರ್ಣಕಲಶಜಲದಿಂದ ನಿರಂತರಧಾರಾರೂಪವಾಗಿ ಅಭಿಷೇಚಿಸುತ್ತಾ, ಮೊಸರಿನಿಂದ (ದಧ್ನಾ), ಜೇನಿನಿಂದ (ಮಧುನಾ), ಹಾಲಿನಿಂದ (ಪಯಸಾ), ತುಪ್ಪದಿಂದ (ಸರ್ಪಿಷಾ), ಹಾಗೆಯೇ (ಚ), ಕಬ್ಬಿನಹಾಲಿನಿಂದ (ಇಕ್ಷುರಸೇನ), ಮಾವಿನಹಣ್ಣಿನ ರಸದಿಂದ (ಆಮ್ರರಸೇನ), ಎಳನೀರಿನಿಂದ (ನಾರಿಕೇಲಸಲಿಲೇನ), ಹೂವಿನರಸದಿಂದ / ಹೂವಿನ ಸಹಿತವಾದ ಉದಕ ಅಥವಾ ನೀರಿನಿಂದ, ಹಣ್ಣಿನರಸದಿಂದ, ಗಂಧಮಿಶ್ರಿತ ಜಲದಿಂದ / ಸುಗಂಧಿತಜಲದಿಂದ, ದರ್ಭೆಹಾಕಿದ ನೀರಿನಿಂದ, ಅಥವಾ ಇವಾವುವೂ ಲಭಿಸದ ಪಕ್ಷದಲ್ಲಿ ಕೇವಲ ಶುದ್ಧಜಲದಿಂದ (ಇಕ್ಷುರಸವಿಲ್ಲದಿದ್ದರೆ ಗುಡೋದಕ / ಬೆಲ್ಲನೀರು; ಆಮ್ರರಸಕ್ಕೆ ಪರ್ಯಾಯವಾಗಿ ಆಮ್ಲರಸ / ಹುಳಿನೀರು / ನಿಂಬೆರಸ),
“ನಮಸ್ತೇ ರುದ್ರ ಮನ್ಯವೇ” ಎಂದು ಮುಂತಾದ ಕೃಷ್ಣಯಜುರ್ವೇದೀಯ ತೈತ್ತಿರೀಯ ಸಂಹಿತೆಯ ೧೧ ಅನುವಾಕಗಳ ರುದ್ರಪ್ರಶ್ನ / ರುದ್ರಾಧ್ಯಾಯ / ನಮಕವನ್ನೂ , “ಸರ್ವೋ ವೈ ರುದ್ರಃ” ಎಂಬಿತ್ಯಾದಿ ೩ ಅನುವಾಕಗಳ ತ್ವರಿತರುದ್ರವನ್ನೂ, “ಅಗ್ನಾವಿಷ್ಣೂ ಸಜೋಷಸೇಮಾಃ” ಎಂದು ಮುಂತಾದ ೧೧ ಅನುವಾಕಗಳ ಚಮಕಪ್ರಶ್ನ / ಚಮಕಾಧ್ಯಾಯ ದ ಒಂದೊಂದು ಅನುವಾಕವನ್ನೂ ಒಂದೊಂದುಬಾರಿ ಜಪಿಸಬೇಕು. ಹೀಗೆ ಚಮಕದ ಎಲ್ಲ ಅನುವಾಕಗಳಿಗೂ ಪ್ರತಿ ಬಾರಿಯೂ ಜಪಿಸಿದ ಕೊನೆಗೆ ರುದ್ರಪರ ಮಂತ್ರಗಳಿಂದ ಪುನಃ ಶಿವಾರಾಧನೆ ಹಾಗೂ ಉತ್ತರಾರಾಧನೆಯನ್ನು ಮಾಡಬೇಕು. ಇಂತಹ ರುದ್ರಾರಾಧನೆಯನ್ನು ಪಾಪನಾಶವನ್ನು ಬಯಸುವ, ರೋಗಪರಿಹಾರವನ್ನು ಇಚ್ಛಿಸುವ, ಸತ್ಸಂತತಿಯನ್ನು ಬಯಸುವ ಹಾಗೂ ಸಮಸ್ತಕಾಮನಾಸಿದ್ಧಿಯನ್ನು ಬಯಸುವ ಗೃಹಸ್ಥನಾದವನು ಯಾವಾಗಲೂ ಆಚರಿಸಬೇಕು.
೯೦) ಮಹಾನ್ಯಾಸದ ಆನುಪೂರ್ವಿಯು ಹೇಗಿದೆ?
[ # ಬೋಧಾಯನೋಕ್ತ ಮಹಾನ್ಯಾಸದ ಆನುಪೂರ್ವಿ ಹೀಗಿದೆ— ಸಂತತಧಾರಾ-ಅಭಿಷಿಞ್ಚನ್ ಪಯಸಾ ಸರ್ಪಿಷಾ ಮಧುನಾ ಚೇಕ್ಷುರಸೇನಾಮ್ರರಸೇನ ನಾಳಿಕೇರಸಲಿಲೇನ ಪುಷ್ಪೋದಕೇನ ಫಲೋದಕೇನ ಗಂಧೋದಕೇನ ಕುಶೋದಕೇನ ಚ ತದಲಾಭೇ ಶುದ್ಧೋದಕೇನ ವಾ…|
ಪಾಠಾನ್ತರೇ—
ಪ್ರಥಮೇ ಗನ್ಧತೋಯಂ ಚ ದ್ವಿತೀಯೇ ಪುಷ್ಪಸಾರಸಮ್ ( / ಪಞ್ಚಗವ್ಯಕಮ್) |
ಪಞ್ಚಾಮೃತಂ ತೃತೀಯೇ ತು ಚತುರ್ಥೇ ಘೃತಮೀರಿತಮ್ ||
ಪಞ್ಚಮೇ ತು ಪಯಃ ಪ್ರೋಕ್ತಂ ಷಷ್ಠೇ ಚ ದಧಿ ಕೀರ್ತಿತಮ್ |
ಸಪ್ತಮೇ ಮಧುನಾ ಚೈವ ಹ್ಯಷ್ಟಮೇತ್ವಿಕ್ಷುಸಾರಸಮ್ ||
ನವಮೇ ನಾಳಿಕೇರಂ ಚ ದಶಮೇ ತು ಫಲೋದಕಮ್ |
ಏಕಾದಶೇ ಶುದ್ಧಜಲಂ ರುದ್ರದ್ರವ್ಯಮಿತೀರಿತಮ್ || ]
೯೧) ಏನೇನನ್ನು ಬಯಸುವವನು ಈ ರೀತಿಯಾಗಿ ರುದ್ರಾರಾಧನೆಯನ್ನು ಮಾಡಬೇಕು? ರುದ್ರಾರಾಧನೆಯ ಫಲಗಳೇನು? ಮಾಡಿಸಿದ ಆಚಾರ್ಯರಿಗೆ ಏನನ್ನು ದಕ್ಷಿಣೆಯಾಗಿ ನೀಡಬೇಕು?
ಶ್ರೀಕಾಮಶ್ಶಾನ್ತಿಕಾಮಃ ಪುಷ್ಟಿಕಾಮಸ್ತುಷ್ಟಿಕಾಮಃ ಪ್ರಜ್ಞಾಕಾಮೋ ಮೇಧಾಕಾಮ ಆರೋಗ್ಯಕಾಮೋऽನ್ನಾದ್ಯಕಾಮೋ ವಾ ಏವಂ ಕುರ್ವನ್ನಾಚಾರ್ಯಾಯ ದಕ್ಷಿಣಾಂ ದದ್ಯಾದ್ದಶಗಾಃ ಸವತ್ಸಾಃ ಸಪಯಸಃ ಸ್ವರ್ಣಶೃಙ್ಗೀರೌಪ್ಯಖುರಾ ಮೌಕ್ತಿಕಮಾಲಾಃ | ತದಲಾಭೇ, ಏಕಾಂ ವಾ ಗಾಂ ದದ್ಯಾದೇಕಾದಶಬ್ರಾಹ್ಮಣಾನ್ ಭೋಜಯೇದಶ್ವಮೇಧಕ್ರತುಸಹಸ್ರಫಲಮವಾಪ್ನೋತೀತ್ಯಾಹ ಭಗವಾನ್ ಭೋಧಾಯನೋ ಭಗವಾನ್ಬೋಧಾಯನಃ ||
ಸಿರಿಸಂಪತ್ತನ್ನು ಬಯಸುವವನೂ, ಶಾಂತಿಯನ್ನು ಇಚ್ಛಿಸುವವನೂ, ದೇಹದ ಸುಪೋಷಣೆ-ದೃಢಕಾಯತ್ವೇಚ್ಛುಕನು, ತೃಪ್ತಿ-ಆನಂದಗಳ ವಾಂಛೆಯಿರುವವನೂ, ಸುಪ್ರಜ್ಞಾಬಲವನ್ನು ಬಯಸುವವನೂ, ಅಮಿತ ಮೇಧಾಶಕ್ತಿಯನ್ನು ಇಚ್ಛಿಸುವವನೂ, ಉತ್ತಮ ಶಾರೀರಿಕ ಹಾಗೂ ಮಾನಸಿಕ ಆರೋಗ್ಯದ ಕಾಮನೆಯುಳ್ಳವನೂ ಅಥವಾ ಒಳ್ಳೆಯ ಅನ್ನರೂಪಿಯಾದ ಆಹಾರವನ್ನಿಚ್ಛಿಸುವವನೂ (“ಅನ್ನರೂಪಮ್ ಆದ್ಯಂ ಭಕ್ಷ್ಯಮ್ ಅನ್ನಾದ್ಯಮ್ ”— ಅನ್ನರೂಪದ, ಭಕ್ಷಣೆಗೆ ಯೋಗ್ಯವಾದ ಪ್ರಧಾನ ಆಹಾರ), ಈ ರೀತಿಯಾಗಿ ರುದ್ರ-ತ್ವರಿತರುದ್ರ-ಚಮಕಮಂತ್ರಗಳಿಂದ ಪರಶಿವನ ಅಭಿಷೇಕವನ್ನು ಕೊನೆಗೆ ಪುರುಷಸೂಕ್ತಸಹಿತವಾಗಿ ವೇದ-ಶಾಸ್ತ್ರೋಕ್ತವಿಧಿವತ್ತಾಗಿ ಆಚರಿಸಿ, ಪುರೋಹಿತರಿಗೆ ಸವತ್ಸರಾದ (ಕರು ಸಹಿತ), ಹಾಲನ್ನೀಯುವ, ಚಿನ್ನದ ಕವಚವಿರುವ ಶೃಂಗ / ಕೋಡು / ಕೊಂಬುಳ್ಳ (ಸ್ವರ್ಣಶೃಂಗೀ), ರಜತ / ರೌಪ್ಯ / ಬೆಳ್ಳಿಯಿಂದ ಸುಶೋಭಿತವಾದ ಕಾಲಗೊರಸುಗಳುಳ್ಳ (ರೌಪ್ಯ-ಖುರಾಃ) ಹಾಗೂ ಮುತ್ತಿನ ಮಾಲೆಗಳಿಂದ / ಬಾಲಗಳಿಂದ ಅಲಂಕೃತವಾದ ಹತ್ತು ಗೋವುಗಳನ್ನು ದಕ್ಷಿಣೆಯಾಗಿ ನೀಡಬೇಕು. ಅದಿಲ್ಲವಾದರೆ, ಒಂದಾದರೂ ಗೋವನ್ನು ನೀಡಬೇಕು; ೧೧ ಮಂದಿ ಬ್ರಾಹ್ಮಣರಿಗೆ / ಬ್ರಹ್ಮವೇತ್ತರಿಗೆ ಅನ್ನದಾನವನ್ನು ಮಾಡಿಸಬೇಕು. ಹೀಗೆ ಮಾಡಿದರೆ ಸಾವಿರ ಅಶ್ವಮೇಧಯಾಗಗಳನ್ನು ಮಾಡಿದ ಫಲವನ್ನು ಪ್ರಾಪ್ತಿಮಾಡಿಕೊಳ್ಳುತ್ತಾನೆಂದು ಭಗವಾನ್ ಬೋಧಾಯನಮಹರ್ಷಿಗಳು ಹೇಳಿರುವರು.
ಏವಂ ಯಃ ಕುರುತೇ ನಿತ್ಯಂ ಸರ್ವಪಾಪೈಃ ಪ್ರಮುಚ್ಯತೇ |
ಸರ್ವಾನ್ಕಾಮಾನವಾಪ್ನೋತಿ ಶಿವಸಾಯುಜ್ಯಮಾಪ್ನುಯಾತ್ ||
ಯಾವನು ಪ್ರತಿದಿನವೂ ಹೀಗೆ ರುದ್ರಾಭಿಷೇಕಪೂರ್ವಕ ಶಿವಾರಾಧನೆಯನ್ನು ಮಾಡುವನೋ ಆತನು ತನ್ನ ಎಲ್ಲ ಪಾಪಗಳಿಂದ ಮುಕ್ತನಾಗುತ್ತಾನೆ; ಎಲ್ಲ ಕಾಮನೆಗಳನ್ನು ಪಡೆಯುತ್ತಾನೆ; ಕೊನೆಯಲ್ಲಿ ಪರಶಿವನೊಂದಿಗೇ ಐಕ್ಯನಾಗಿ ಸಾಯುಜ್ಯಮುಕ್ತಿಯನ್ನೈದುವನು.
೯೨) ಈ ರುದ್ರಾಧ್ಯಾಯವನ್ನು ಕಂಡ ಋಷಿ, ಇದರ ಛಂದಸ್ಸು, ಪ್ರತಿಪಾದ್ಯದೇವತೆ ಯಾರು? ಈ ಮಂತ್ರವು ಎಲ್ಲಿ ವಿನಿಯೋಗವಾಗುವುದು / ಬಳಸಲ್ಪಡುವುದು?
ಅಸ್ಯ ಶ್ರೀರುದ್ರಸ್ಯ ಪ್ರಶ್ನಸ್ಯ | ಅಘೋರ ಋಷಿಃ | ಅನುಷ್ಟುಪ್ ಛನ್ದಃ | ಶ್ರೀಸಙ್ಕರ್ಷಣಮೂರ್ತಿಸ್ವರೂಪೋ ಯೋऽಸಾವಾದಿತ್ಯಃ ಪರಮಪುರುಷಃ ಸ ಮೃತ್ಯುಞ್ಜಯರುದ್ರೋ ದೇವತಾ | ಅಗ್ನಿಕ್ರತುಚರಮಾಯಾಮಿಷ್ಟಿಕಾಯಾಮ್ | ಸಕೃದಾವರ್ತನ ( / ಏಕಾದಶಾವರ್ತನ) ರುದ್ರಾಭಿಷೇಕೇ ( / ಶತರುದ್ರೀಯಾಭಿಷೇಕೇ) ವಿನಿಯೋಗಃ ||
ಈ ರುದ್ರಪ್ರಶ್ನ / ರುದ್ರಾಧ್ಯಾಯ / ರುದ್ರಪರವಾದ ಪ್ರಪಾಠಕಕ್ಕೆ, ಅಘೋರನೇ ಋಷಿಯು. ಅನುಷ್ಟುಪ್ ಛನ್ದಸ್ಸು. (ಮಹಾವಿಷ್ಣುವಿನ ವಾಸುದೇವ, ಸಂಕರ್ಷಣ, ಪ್ರದ್ಯುಮ್ನ, ಅನಿರುದ್ಧ ಎಂಬ ತುರೀಯ, ಸುಷುಪ್ತಿ, ಸ್ವಪ್ನ, ಜಾಗ್ರದವಸ್ಥೆಗಳ ರಕ್ಷಕರಾದ ಚತುರ್ಮೂರ್ತಿಗಳ ಪೈಕಿ ಆದಿಶೇಷರೂಪಿಯಾದ) ಶ್ರೀ ಸಂಕರ್ಷಣಮೂರ್ತಿಸ್ವರೂಪನಾದ, ಯಾವ ಈ ಪ್ರತ್ಯಕ್ಷಗೋಚರನಾದ ಗಗನದಲ್ಲಿ ಬೆಳಗುವ ಆದಿತ್ಯಸ್ವರೂಪಿಯೂ ಆದ, ಪರಮಪುರುಷನಾದ ಆ ಮೃತ್ಯು / ಯಮನನ್ನು ಮೀರಬಲ್ಲ ಮೃತ್ಯುಂಜಯರುದ್ರನೇ ದೇವತೆಯು. ಶತರುದ್ರೀಯ ಹವನದ ಕೊನೆಯ / ಚರಮ ಭಾಗದಲ್ಲಿ ಅಥವಾ ಅದರ ಪ್ರತೀಕವಾಗಿ (ಮಾಯಾ), ಒಂದು ಬಾರಿ ( / ೧೧ ಬಾರಿ) ರುದ್ರಾಭಿಷೇಕದಲ್ಲಿ ( / ಶತರುದ್ರೀಯಾಭಿಷೇಕದಲ್ಲಿ / ೧೦೦ ರುದ್ರದೇವತೆಗಳ ಸಮೂಹದ ಅಭಿಷೇಕದಲ್ಲಿ) ವಿನಿಯೋಗವು / ಉಪಯೋಗವು ಈ ಮಂತ್ರಸಮೂಹವು.
ಸಕಲಸ್ಯ ರುದ್ರಾಧ್ಯಾಯಸ್ಯ ಶ್ರೀರುದ್ರೋ ದೇವತಾ | ಏಕಾ ಗಾಯತ್ರೀಚ್ಛನ್ದಃ | ತಿಸ್ರೋऽನುಷ್ಟುಭಃ | ತಿಸ್ರಃ ಪಙ್ಕ್ತಯಃ | ಸಪ್ತಾನುಷ್ಟುಭೋ ದ್ವೇ ಜಗತ್ಯೌ | ಪರಮೇಷ್ಠಿ ಋಷಿಃ | ಜಗತೀಚ್ಛನ್ದಃ | ಮಮ ಸಕುಟುಮ್ಬಸ್ಯ (ಅಸ್ಯ ಯಜಮಾನಸ್ಯ) ಸಮಸ್ತಪಾಪಕ್ಷಯಾರ್ಥೇ ಶ್ರೀಸಾಮ್ಬಸದಾಶಿವರುದ್ರಪ್ರೀತ್ಯರ್ಥೇ ಶ್ರೀರುದ್ರಜಪಾಭಿಷೇಕೇ ( / ಏಕಾದಶವಾರ-ರುದ್ರಾಭಿಷೇಕೇ / ಶತರುದ್ರೀಯಾಭಿಷೇಕೇ) ವಿನಿಯೋಗಃ ||
ಸಮಗ್ರ ರುದ್ರಾಧ್ಯಾಯಕ್ಕೆ ಶ್ರೀರುದ್ರನೇ ದೇವತೆಯು. ಇದರಲ್ಲಿ ೧ ಗಾಯತ್ರೀಚ್ಛಂದಸ್ಸಿನ ಮಂತ್ರವೂ, ೩ ಅನುಷ್ಟುಪ್ ಛಂದೋಮಂತ್ರಗಳೂ, ೩ ಪಂಕ್ತಿಶ್ಛಂದಸ್ಸಿನ ಮಂತ್ರಗಳೂ, ಮತ್ತೆ ೭ ಅನುಷ್ಟುಪ್ ಮಂತ್ರಗಳೂ, ೨ ಜಗತೀಚ್ಛಂದೋನಿಬದ್ಧ ಮಂತ್ರಗಳೂ ಇವೆ. ಇವಿಷ್ಟು ಅಘೋರಋಷಿದೃಷ್ಟವಾದರೆ, ಮುಂದಿನ ಮಂತ್ರಗಳಿಗೆ ಪರಮೇಷ್ಠಿಯೇ / ಬ್ರಹ್ಮನೇ ಋಷಿಯು. ಜಗತೀಚ್ಛಂದಸ್ಸು. ಕುಟುಂಬ ಸಹಿತನಾದ ನನ್ನ (ಈ ಯಜಮಾನನ) ಎಲ್ಲ ಪಾಪಗಳ ನಾಶಕ್ಕಾಗಿ, ಅಂಬಾ / ಉಮಾ / ಪಾರ್ವತೀ ಸಮೇತ (ಅಮ್ಬಯಾ ಸಹಿತಃ ಸಾಮ್ಬಃ) ನಾದ ನಿತ್ಯಮಂಗಲಸ್ವರೂಪಿಯಾದ ಸದಾ-ಶಿವ-ರುದ್ರನ (ಸದಾ— ಸರ್ವದಾ, ಶಿವ— ಮಂಗಲ) ಪ್ರೀತಿಗಾಗಿ ಶ್ರೀರುದ್ರಜಪಾಭಿಷೇಕದಲ್ಲಿ (ಏಕಾದಶರುದ್ರಾಭಿಷೇಕದಲ್ಲಿ / ಶತರುದ್ರಾಭಿಷೇಕದಲ್ಲಿ / ಈ ಶತರುದ್ರೀಯ ಅಥವಾ ಶತರುದ್ರಿಯಮಂತ್ರಗಳನ್ನು ರುದ್ರಾಭಿಷೇಕದಲ್ಲಿ) ತೊಡಗಿಸಿಕೊಳ್ಳುವಿಕೆ / ವಿನಿಯೋಗವು / ಪ್ರಯೋಜನವು.
{ಲಘುನ್ಯಾಸಮಂತ್ರದಲ್ಲಿ ಈ ಮೇಲಿನ ರೀತಿಯಲ್ಲಿ ಹೇಳಿದ್ದರೂ, ಈ ಛಂದಸ್ಸುಗಳು ಈಗ ಪ್ರಯೋಗದಲ್ಲಿರುವ ರುದ್ರಾಧ್ಯಾಯಕ್ಕೆ ಸರಿಹೊಂದುವುದಿಲ್ಲ. ಇದೇ ಲೇಖಕರು ಮುಂದೆ ಬರೆಯಲಿರುವ ಶ್ರೀಭಗವತ್ತತ್ತ್ವರತ್ನಾಕರ ಭಾಗ ೩ “ರುದ್ರಭಾಷ್ಯಗಳಲ್ಲಿ ಶಿವವೈಭವ” ಎಂಬ ಕೃತಿಯಲ್ಲಿ ಈಗ ಪ್ರಯೋಗದಲ್ಲಿರುವ ರುದ್ರಮಂತ್ರಗಳ ಛಂದಸ್ಸುಗಳ ವಿಚಾರವನ್ನು ಪ್ರಸ್ತುತಪಡಿಸಲಿರುವರು.}
೯೩) ರುದ್ರಾಭಿಷೇಕಪೂರ್ವದ ಷಟ್-ಅಂಗ-ನ್ಯಾಸವು ಹೇಗೆ?
ಅಥ ಷಡಙ್ಗನ್ಯಾಸಃ ||
ಇನ್ನು ೬ ಅಂಗಗಳಲ್ಲಿ ೬ ಮಂತ್ರಗಳ ಮೂಲಕ ಪರಮಾತ್ಮನ ೬ ರೂಪಗಳ ಪ್ರತಿಷ್ಠಾಪನೆ / ನಿಕ್ಷೇಪ / ಇಡುವಿಕೆ.
ಓಂ ಮನೋ ಜ್ಯೋತಿರ್ಜುಷತಾಮಾಜ್ಯಂ ವಿಚ್ಛಿನ್ನಂ ಯಜ್ಞಗ್ಂ ಸಮಿಮಂ ದಧಾತು | ಯಾ ಇಷ್ಟಾ ಉಷಸೋ ನಿಮ್ರುಚಶ್ಚತಾಃ ಸಂ ದಧಾಮಿ ಹವಿಷಾ ಘೃತೇನ || (ತೈತ್ತಿರೀಯಸಂಹಿತಾ ೧.೫.೧೦.೬)
ಪದ-ವಿಭಾಗಃ—
ಮನಃ ಜ್ಯೋತಿಃ ಜುಷತಾಮ್ ಆಜ್ಯಂ ವಿಚ್ಛಿನ್ನಂ ಯಜ್ಞಂ ಸಮ್ ಇಮಂ ದಧಾತು | ಯಾಃ ಇಷ್ಟಾಃ ಉಷಸಃ ನಿಮ್ರುಚಃ ಚ ತಾಃ ಸಂ ದಧಾಮಿ ಹವಿಷಾ ಘೃತೇನ ||
ಅನುವಾದ—
ಓ ಮನಸ್ಸೇ! ಓ ಜ್ಯೋತಿಯೇ!! ಓ ಮನವೆಂಬ ಮಾರ್ಗದರ್ಶಕ ಬೆಳಕೇ!!! ನಮ್ಮ ಆಜ್ಯ (ತುಪ್ಪ) ರೂಪೀ ಹವಿಸ್ಸಿನ ಸಮರ್ಪಣೆಯನ್ನು ಆನಂದದದಿಂದ ಸ್ವೀಕರಿಸಿ ಆಮೋದಿಸು. ಚದುರಿದ ಈ ಯಜ್ಞವು ಏಕೀಕರಣಗೊಳ್ಳಲಿ. ಯಜ್ಞಕ್ಕೆ ಬೇಕಾದ ಬೆಳಗು ಜಾವದ ಪ್ರೇರಣೆಗಳು ಹಾಗೂ ಕಾಂತಿಯುತವಾದ ರಹಸ್ಯಾರ್ಥಕ ಶಬ್ದಗಳನ್ನು ನಾನು ಜ್ಯೋತಿ ಹಾಗೂ ಅರ್ಪಣೆಗಳ ಮೂಲಕ ಒಟ್ಟುಗೂಡಿಸಿ ಗ್ರಹಿಸಿಕೊಳ್ಳುವಂತಾಗಲಿ (ಅರಿಯುವಂತಾಗಲಿ).
ಭಟ್ಟಭಾಸ್ಕರಭಾಷ್ಯ—
ಅಗ್ನಿಹೋತ್ರಮನ್ತ್ರೌ ಉಪಸ್ಥಾನಾರ್ಥೌ | ತತ್ರ ಪ್ರಥಮಾ— ‘ ಮನಃ ’ ಇತಿ ವಿರಾಟ್ ||
ಅಗ್ನಿಹೋತ್ರದ ೨ ಮಂತ್ರಗಳು ಅಗ್ನಿಯ ಸಮೀಪದಲ್ಲಿದ್ದು ಉಪಾಸನೆ-ಅನುಸಂಧಾನ ಮಾಡುವುದಕ್ಕಾಗಿ. ಅಲ್ಲಿ / ಅವುಗಳಲ್ಲಿ ಮೊದಲನೆಯದು— ‘ಮನೋ ಜ್ಯೋತಿಃ…’ ಎಂಬ ವಿರಾಟ್ ಛಂದಸ್ಸಿನ ಈ ಮಂತ್ರ.
ಹೇ ಅಗ್ನೇ! ತವ ಜ್ಯೋತಿಃ | ಕೀದೃಶಂ? ಮನನೀಯಮ್ | ಯದ್ವಾ— ಮನಶ್ಶೇಷಮ್ ಉದ್ವಾಸಿತೇನ ಪೀಡಿತಂ ಯತ್ ಮನನೀಯಮ್ ಏವ ಆಸೀತ್, ನ ಅದ್ಯತ್ವೇ ವಿದ್ಯತೇ ತದಿದಮ್ ಆಜ್ಯಂ ಜುಷತಾಂ ಸೇವತಾಮ್, ಅನೇನ ಕರ್ಮಣಾ ಪೂರ್ವವತ್ ಸಮೃದ್ಧಮ್ ಅಸ್ತು | ಯದ್ ವಾ— ಮನಃ ಸದಾ ಮನನೀಯಂ ಮನೋಹರಮ್ ಅಗ್ನ್ಯಾಖ್ಯಂ ಜ್ಯೋತಿಃ ಉದ್ವಾಸನಾ-ಅಪರಾಧಂ ಚೇತಸಿ ಅಕೃತ್ವಾ ಜುಷತಾಮ್ ಆಜ್ಯಮ್ ಇತಿ | ತತಃ, ವಿಚ್ಛಿನ್ನಮ್ ಉದ್ವಾಸನೇ ತವ ಯಜ್ಞಮ್ ಇಮಂ ಸಂದಧಾತು ||
(ತೈ.ಸಂ.೧.೫.೩)*
ಅಯ್ಯಾ ಅಗ್ನಿಯೇ! ನಿನ್ನ ಜ್ಯೋತಿಯು / ಬೆಳಕು / ಪ್ರಕಾಶವು (ಜ್ಯೋತಿಃ) ಎಂಥದ್ದು? ಯುಕ್ತ್ಯಾದಿಗಳಿಂದ ಚಿಂತನ-ಮನನಾದಿಗಳಿಂದ ತಿಳಿಯಲ್ಪಡಬೇಕಾದ ಸ್ವರೂಪ (ಮನಃ) . ಅಥವಾ— ಮನಸ್ಸಿನಲ್ಲಿ ಜನ್ಮಾಂತರಗಳಿಂದ ಉಳಿದುಕೊಂಡಿರುವ ಪೂರ್ವಕರ್ಮ ಸಂಸ್ಕಾರ / ವಾಸನೆ ಗಳಿಂದ ಪೀಡಿತವಾಗಿ, ಯಾವ ಈ ಜ್ಯೋತಿಸ್ವರೂಪೀ ಪರಮಾತ್ಮನ ಮನನವಾಗಬೇಕಾಗಿತ್ತೋ, ಕರ್ಮವಾಸನಾಮಾಯೆಯಿಂದ / ಚಿತ್ತದಿಂದ ಮನಸ್ಸು ಆವರಿಸಲ್ಪಟ್ಟು ಇದೀಗ ಮನನ-ಧ್ಯಾನಗಳು ಆಗದಿರುವುದರಿಂದ (ತಸ್ಮಾತ್ ಇದಂ— ತದಿದಂ), ಈ ಆಹುತಿಯನ್ನು ನೀನು ಸೇವಿಸಬೇಕು. ಈ ಕರ್ಮದಿಂದ ನಿನ್ನ ಮಸುಕಾದ ಜ್ಯೋತಿಯು ಹಿಂದಿನಂತೆಯೇ ಪ್ರಖರವಾಗಿ ಬೆಳಗಲಿ ಅಥವಾ ಈ ಕರ್ಮದಿಂದ ನಮ್ಮ ಪೂರ್ವಕರ್ಮಸಂಸ್ಕಾರದ ಪೊರೆಯು ಕಳಚಿ, ಮುಚ್ಚಿಹೋಗಿದ್ದ ಆತ್ಮಜ್ಯೋತಿಯು ಮತ್ತೆ ಪ್ರಕಾಶಮಾನವಾಗಿ ಬೆಳಗಲಿ, ಆತ್ಮಜ್ಞಾನವುಂಟಾಗಲಿ. ಅಥವಾ— (ಮನಃ) ಸದಾ ಮನನೀಯವೂ ಮನೋಹರವೂ ಆದ ಅಗ್ನಿಯೆಂಬ ಜ್ಯೋತಿಯು ಚಿತ್ತದಲ್ಲಿರುವ ಸಕಲ ಪೂರ್ವದುರಿತಗಳನ್ನು ಇಲ್ಲವಾಗಿಸಿ / ಮನಶ್ಶುದ್ಧಿ-ಚಿತ್ತಶುದ್ಧಿಗಳನ್ನುಂಟುಮಾಡಿ, ಆಹುತಿಯನ್ನು ಸ್ವೀಕರಿಸಬೇಕು ಎಂಬುದಾಗಿ. ಹೀಗೆ ಮಾಡಿದ ಮೇಲೆ, ಹಿಂದೆ ಉದ್ವಾಸನೆಗೊಂಡು ವಿಚ್ಛಿನ್ನವಾಗಿದ್ದ, ಕುಂದಿಹೋಗಿದ್ದ ನಿನ್ನ ಯಜ್ಞೀಯ ಜ್ಯೋತಿಯನ್ನು ಪುನಸ್ಸಂಯೋಜಿಸು / ಬೆಳಗಿಸು / ಪ್ರಜ್ವಲಿತವಾಗುವಂತೆ ಮಾಡು. ಆಹುತಿ ಪಡೆದು ಚೆನ್ನಾಗಿ ಪ್ರಜ್ವಲಿಸು. ನಮ್ಮ ಮನೆ-ಮನಗಳೆರಡನ್ನೂ ಬೆಳಗು.
ವಿಚ್ಛಿನ್ನ-ನಿಮಿತ್ತಃ ಹೋಮಃ— “ಮನೋ ಜ್ಯೋತಿಃ” ಇತಿ | ತ್ರಿಷ್ಟುಪ್ ಇಯಮ್, ವಿರಾಟ್ ವಾ ||
ವಿಚ್ಛಿನ್ನನಿರೋಧನಿಮಿತ್ತವಾದ ಹೋಮಮಂತ್ರವು ― “ಮನೋ ಜ್ಯೋತಿಃ” ಎಂಬುದು. ಇದು ತ್ರಿಷ್ಟುಪ್ ಅಥವಾ ವಿರಾಟ್ ಎಂಬ ಛಂದಸ್ಸಿನ ಮಂತ್ರ.
ಪೂರ್ವಾರ್ಧ-ಋಚಃ ವ್ಯಾಖ್ಯಾತಃ | (ಈ ಋಕ್ಕಿನ ಮೊದಲ ಅರ್ಧವು ಮೇಲೆ ತೈ.ಸಂ.೧.೫.೩ರ ವ್ಯಾಖ್ಯಾನದಲ್ಲಿ ವ್ಯಾಖ್ಯಾನಿಸಲ್ಪಟ್ಟಿದೆ.) ಸರ್ವಸ್ಯ ಮನಃ ದ್ಯೋತಮಾನಃ ಅಯಮ್ ಅಗ್ನಿಃ ಇದಮ್ ಆಜ್ಯಂ ಜುಷತಾಮ್, ಜುಷಮಾಣಃ ಚ ಇಮಂ ವಿಚ್ಛಿನ್ನಂ ಯಜ್ಞಂ ಸಂ ದಧಾತು ಇತಿ | {ಎಲ್ಲರ ಮನವನ್ನು ಬೆಳಗುತ್ತಿರುವ ಜ್ಞಾನವಾಹಿ ನರಗಳಲ್ಲಿನ ಇಚ್ಛಾ-ಜ್ಞಾನ-ಕ್ರಿಯಾಶಕ್ತಿಯ / Action potential nerve conduction ರೂಪವಾದ ಈ ಅಗ್ನಿದೇವನು ಈ ಯಜ್ಞಹವಿಸ್ಸನ್ನು / ಆಹುತಿಯನ್ನು / ಸಂಕಲ್ಪವನ್ನು ಸ್ವೀಕರಿಸಿ ಸೇವಿಸಿ ತೃಪ್ತಿಹೊಂದಲಿ (ಜುಷ ಸೇವನೇ ಪರಿತರ್ಪಣೇ). ನಮ್ಮೆಲ್ಲರ ಮನಸ್ಸುಗಳು ಪರಮಾತ್ಮವಿಷಯವನ್ನೇ / ಸತ್ಸಂಕಲ್ಪಗಳನ್ನೇ ತರ್ಕಿಸುತ್ತಿರಲಿ / ಯೋಚಿಸುತ್ತಿರಲಿ, ಪ್ರೀತಿಸಲಿ (ಜುಷ ಪ್ರೀತೌ ಪರಿತರ್ಕಣೇ). ಹೀಗೆ ಪರಮಾತ್ಮವಿಷಯಕ ಚಿಂತನಾಪೂರ್ವಕವಾದ ಭಕ್ತಿಯಿಂದ ಸಮರ್ಪಿಸಿದ ಆಹುತಿಯನ್ನು ಸೇವಿಸುತ್ತ, ಈ ಅಪರಿಪೂರ್ಣವಾದ, ಭಂಗಗೊಂಡ ಯಜ್ಞ / ಸೇವೆ / ತಪಸ್ಸು / ಸತ್ಕರ್ಮವನ್ನು ಪರಿಪೂರ್ಣಗೊಳಿಸಲಿ, ಯಶಸ್ವಿಗೊಳಿಸಲಿ.}
“ಯಾಃ ಇಷ್ಟಾಃ ತಾಃ ಸಂ ದಧಾಮಿ” ಇತಿ ವಚನಾತ್ ಮಯಿ ಪ್ರೋಷಿತೇ ಪ್ರಮತ್ತೇ ವಾ ಯಾಃ ಉಷಸಃ, ಅನ್ಯೈಃ ಯಜಮಾನೈಃ ಇಷ್ಟಾಃ, ಮಯಾ ಅನಿಷ್ಟಾಃ, ಇತಿ-ಅರ್ಥ-ಸಿದ್ಧಮ್ |
“ಯಾವ ಇಷ್ಟಾರ್ಥಗಳಿವೆಯೋ ಅವುಗಳನ್ನು ಪೂರೈಸಿಕೊಳ್ಳುವೆನು” ಎಂಬ ಮಾತಿನಿಂದ ನನ್ನಲ್ಲಿಲ್ಲದ (ನನ್ನಿಂದ ದೂರವಾದ) ಅಥವಾ ನನ್ನಿಂದ ಪ್ರವರ್ಧಿತವಾದ / ಪ್ರೇರಿತವಾದ ಆದರೆ ನನಗಾಗಿ (ಋತ್ವಿಜರಿಗಾಗಿ) ಬಯಸದ ಯಾವ ಅಜ್ಞಾನತಮೋನಿವಾರಕವಾದ ಇತರ ಯಜಮಾನರುಗಳ / ಯಜ್ಞಕರ್ತೃಗಳ ಇಷ್ಟಾರ್ಥಗಳಿವೆಯೋ ಅವುಗಳ ಪೂರೈಕೆಗಾಗಿ ಎಂಬರ್ಥವು ಸಿದ್ಧವಾಗುತ್ತದೆ.
ಯದ್ ವಾ— ಇಷ್ಟಾಃ ಯಾಗಾರ್ಹಾಃ ಮಯಾ ಅನಿಷ್ಟಾಃ ಸಂಧಾತುಂ ಯಾಃ ಇಷ್ಟಾಃ |
ಅಥವಾ, ಯಾಗಕ್ಕೆ ಬೇಕಾದ ಹವಿರ್ದ್ರವ್ಯ, ಋತ್ವಿಜರು ಇತ್ಯಾದಿ / ಆಯಾಯ ಯಾಗದ ಫಲರೂಪವಾಗಿ ಲಭಿಸುವ ಇಷ್ಟಾರ್ಥಗಳು, ನನಗಾಗಿ ನೇರವಾಗಿ ಇಚ್ಛಿಸದಂಥವು ಯಾವ ಇಷ್ಟಾರ್ಥಗಳಿವೆಯೋ ಅಂಥವುಗಳೆಂದೂ ಹೇಳಬಹುದು.
ಇಚ್ಛತೇಃ ನಿಷ್ಠಾ (ಪಾ.ಅ.ಸೂ. ೩.೨.೧೦೨), ಇಷೇಃ ವಾ ಗತಿಕರ್ಮಣಃ |
ಇಷ್ಟಾಃ ಎಂಬಲ್ಲಿಯ ಇಚ್ಛೆಗೆ ನಿಷ್ಠೆ ಎಂದರ್ಥವಿದೆ. ಉದಾ— ಯಾವ ವಿಷಯದಲ್ಲಿ ಇಚ್ಛೆಯಿದೆಯೋ ಅದರ ಕುರಿತು ನಿಷ್ಠೆಯೂ ಇರುತ್ತದೆ. ಅಥವಾ, ‘ಇಷ್ ಗತೌ ಅಭೀಕ್ಷ್ಣ್ಯೇ ಇಚ್ಛಾಯಾಮ್’’ ಎಂಬ ಧಾತುವಿನಂತೆ ಗತಿಶೀಲತೆ, ನಿರಂತರತೆ, ಇಚ್ಛೆ / ಬಯಕೆ ಎಂಬರ್ಥಗಳಿವೆ.
ಇಷ್ಟಾಃ ಗತಾಃ ವಿನಾ ಯಾಗೇನ ಅತಿವಾಹಿತಾಃ |
ಯಾಗಾಗ್ನಿಯು ಕುಂದಿಹೋಗಿ ಯಜ್ಞವು ವಿಚ್ಛಿನ್ನವಾಗಿರುವುದರಿಂದ ನಮ್ಮ ಇಷ್ಟಾರ್ಥಗಳೂ ಸಿದ್ಧಿಸದೇ ಹೋಗಿರುವುವು.
ಉಷಸಃ ಅಹಃ-ಆರಂಭಾಃ ಪ್ರಾತಃ ಚ, ನಿಮ್ರುಚಃ ಚ ಸಾಯಂ ಚ ಇತಿ ಯಾವತ್ | ಮ್ರುಚು ಮ್ಲುಚು ಸ್ತೇಯಕರಣೇ | ಸಮ್ಪದಾದಿಲಕ್ಷಣಃ ಕ್ವಿಪ್ (ಪಾ.ಅ.ಸೂ. ೩.೩.೧೦೮) |
ಸೂರ್ಯನ / ಉಷೆಯ ಉದಯದಿಂದ ಹಗಲಿನ ಆರಂಭವಾಗುವ ಬೆಳಗಿನ ಸಮಯವೇ ಪ್ರಾತಃಕಾಲ. ಅಂತೆಯೇ, “ಯಾ ಇಷ್ಟಾ ಉಷಸೋ ನಿಮ್ರುಚಶ್ಚ ತಾಃ ಸಂದಧಾಮಿ” ಎಂಬಲ್ಲಿ ನಿಮ್ರುಚಃ ಎಂದರೆ ಸಾಯಂಕಾಲ. “ಮ್ರುಚು ಮ್ಲುಚು ಸ್ತೇಯಕರಣೇ” ಎಂಬ ಧಾತುವಿನಂತೆ ಸ್ತೇಯ / ಕದಿಯುವಿಕೆ ಯ ಕಾಲ ರಾತ್ರಿಕಾಲ. ಸಂಪತ್ತಿನ ಸಂಗ್ರಹವೆಂಬುದಕ್ಕೆ ಕ್ವಿಪ್ ಪ್ರತ್ಯಯ ಬಂದಿದೆ ಎಂದಿದೆ ಪಾಣಿನಿಯ ಅಷ್ಟಾಧ್ಯಾಯೀ ಸೂತ್ರ.
ತಾಃ ಸಂ ದಧಾಮಿ, ಅನೇನ ಘೃತೇನ ಏವ ಹವಿಷಾ ಚರುಣಾ ಸಂಗತಾಃ ಕರೋಮಿ, ಅನೇನ ಹವಿಷಾ ಯಾಗವತೀಃ ಕರೋಮಿ |
ಹೀಗೆ ವಿಚ್ಛಿನ್ನಗೊಂಡ ಯಜ್ಞವನ್ನು ಈ ತುಪ್ಪ / ಹವಿಸ್ಸು / ಧಾನ್ಯದ ಚರುವಿನ ಆಹುತಿಯ ಮೂಲಕ ಮರುಸಂಧಾನಗೊಳಿಸುತ್ತೇನೆ / ಪುನಃ ಪ್ರಾರಂಭಿಸಿ ಮುಂದುವರಿಸುತ್ತೇನೆ. ಈ ಹವಿಸ್ಸಿನ ಸಮರ್ಪಣೆಯ ಮೂಲಕ ಯಾಗಪರಿಪೂರ್ಣತೆಯನ್ನು ಮಾಡುತ್ತೇನೆ.
ಅಥ ಅಪರಮ್— ಯಾಃ ಇಷ್ಟಾಃ ಪೂರ್ವಂ ಮಯಾ ಯಾಗವತ್ಯಃ ಕೃತಾಃ, ಯಾಃ ಉಷಸಃ ಉದಯಾಃ ದಿವಸಾಃ ಇತಿ ಅರ್ಥಃ, ಯಾಃ ಚ ನಿಮ್ರುಚಃ, ಲುಪ್ತಯಾಗಾಃ ಉಷಸಃ ತಾಃ ಉಭಯೀಃ ಉಷಸಃ, ಅನೇನ ಹವಿಷಾ ಸಂ ದಧಾಮಿ, ಸಂಯೋಜಯಾಮಿ, ಯಾಗವತೀಃ ಏವ ಸರ್ವಾಃ ಕರೋಮಿ, ಇಷ್ಟ-ಅನಿಷ್ಟ-ವಿಭಾಗ-ರಹಿತಾಃ ಕರೋಮಿ ಇತಿ ಅರ್ಥಃ ||
ಇನ್ನೊಂದರ್ಥ— ಯಾವ ಇಷ್ಟಗಳು ಹಿಂದೆ ನನ್ನಿಂದ ಯಾಗಯುತವನ್ನಾಗಿ ಮಾಡಲ್ಪಟ್ಟವೋ / ಯಜ್ಞದಷ್ಟು ಪವಿತ್ರ ಹಾಗೂ ತ್ಯಾಗ-ಸೇವಾ-ಲೋಕಹಿತಕಾರಕಮಯವನ್ನಾಗಿ ಪರಿವರ್ತಿಸಲ್ಪಟ್ಟವೋ, ಯಾವ ಬೆಳಗುಗಳು / ಹಗಲುಗಳು / ಪ್ರಜ್ಞಾನಜ್ಯೋತಿಯುಕ್ತ ಕರ್ಮಗಳು ಹಾಗೂ ಯಾವ ರಾತ್ರಿಗಳು / ಅಜ್ಞಾನಾಂಧಕಾರಯುಕ್ತ ಕರ್ಮಗಳು ಇವೆಯೋ, ಇವೆರಡನ್ನೂ ಈ ಹವಿಸ್ಸಿನಿಂದ ಸಂಯೋಜಿಸಿ, ಇವೆಲ್ಲವನ್ನೂ ಯಜ್ಞದಂತೆಯೇ ಪವಿತ್ರೀಕರಿಸುತ್ತೇನೆ, ಸುಖದುಃಖಗಳೆರಡನ್ನೂ ಇಷ್ಟ-ಅನಿಷ್ಟವೆಂದು ಪ್ರತ್ಯೇಕಿಸದೆ ಸಮಭಾವ-ಸಮಚಿತ್ತ-ಸ್ಥಿತಪ್ರಜ್ಞತೆಯಿಂದ ಕಾಣುತ್ತೇನೆ ಎಂದರ್ಥ. “ಬಂದದ್ದೆಲ್ಲಾ ಬರಲಿ ಶ್ರೀಗೋವಿಂದನ ದಯೆಯೊಂದಿರಲಿ” ಎಂಬಂತೆ ಜೀವನವನ್ನು ನಡೆಸುತ್ತೇನೆ ಎಂಬ ಭಾವ ಇಲ್ಲಿದೆ.
ಸಾಯಣಭಾಷ್ಯ—
ಕಲ್ಪಃ— “ಮನೋ ಜ್ಯೋತಿರ್ಜುಷತಾಮಿತಿ ಬೃಹಸ್ಪತಿವರ್ತಿ-ಅರ್ಚಾ ಉಪತಿಷ್ಠತೇ” ಇತಿ ||
ಬೋಧಾಯನಕಲ್ಪಸೂತ್ರವು ಹೇಳಿದೆ— “ಮನೋ ಜ್ಯೋತಿಃ ಜುಷತಾಮ್— ಎಂಬುದು ಬೃಹಸ್ಪತಿಯ ಕುರಿತಾದ ಅರ್ಚನೆಯಾಗಿರುತ್ತದೆ” ಎಂಬುದಾಗಿ.
ಪಾಠಃ ತು— ಮನೋ ಜ್ಯೋತಿಃ— ಇತಿ | ಉದ್ವಾಸನಾ ಅಪರಾಧ-ಪರಿಹಾರಾಯ ಮನಃ ಮಾನನೀಯಮ್ ಅಗ್ನೇಃ ಜ್ಯೋತಿಃ ಹವ್ಯಮ್ ಆಜ್ಯಂ ಸೇವತಾಮ್ | ವಿಚ್ಛಿನ್ನಮ್ ಇಮಂ ಯಜ್ಞಂ ಸಂದಧಾತು |
(ತೈ.ಸಂ. ೧.೫.೩)
ಸಂಹಿತಾಪಾಠವಾದರೋ— “ಮನೋ ಜ್ಯೋತಿಃ…” ಎಂದು. ಉದ್ವಾಸನವೆಂಬ ವಿಧಿಯಲ್ಲಿನ ಅಕಾರ್ಯದೋಷ (ಮಾಡಬಾರದ್ದನ್ನು ಮಾಡಿದ ತಪ್ಪು) / ಅಪರಾಧ ದ ಪರಿಹಾರಕ್ಕಾಗಿ ಮಾನನೀಯನಾದ / ಗೌರವಾರ್ಹನಾದ ಅಗ್ನಿಯ ಜ್ಯೋತಿಯು ಹವಿಸ್ಸಿನ ಆಹುತಿಯನ್ನು ಸೇವಿಸಲಿ. ವಿಘ್ನಗಳಿಂದ ಭೇದಿಸಲ್ಪಟ್ಟ ಈ ಯಜ್ಞವನ್ನು ಪುನಃ ಅಖಂಡವನ್ನಾಗಿ ಸೇರಿಸಲಿ / ಒಂದುಗೂಡಿಸಲಿ.
ಯಾಃ ಉಷಸಃ ಪ್ರಾತಃಕಾಲ-ಉಪಲಕ್ಷಿತಾಃ ಆಹುತಯಃ, ಯಾಃ ಚ ನಿಮ್ರುಚಃ, ಅಸ್ತಮಯಕಾಲ-ಉಪಲಕ್ಷಿತಾಃ ಆಹುತಯಃ, ಇಷ್ಟಾಃ ಇತರೈಃ ಯಜಮಾನೈಃ ಅನುಷ್ಠಿತಾಃ ಮಯಾ ತು ಅನ್ತರಿತಾಃ ತಾಃ ಸರ್ವಾಃ ಆಹುತೀಃ ಅನೇನ ಘೃತೇನ ಹವಿಷಾ ಸಂದಧಾಮಿ, ಅವಿಚ್ಛಿನ್ನಾಃ ಕರೋಮಿ ||
ಯಾವ ಬೆಳಗ್ಗಿನ / ಪ್ರಾತಸ್ಸಂಧ್ಯಾಕಾಲದ ಆಹುತಿಗಳು ಹಾಗೂ ಯಾವ ಸಾಯಂಸಂಧ್ಯಾಕಾಲದ ಆಹುತಿಗಳು, ಇತರ ಯಜಮಾನರುಗಳಿಂದ ಅನುಷ್ಠಾನಿಸಲ್ಪಟ್ಟ, ನಾನೂ ಅಂತರ್ಗತನಾದ / ಜೊತೆಸೇರಿಕೊಂಡ ಆ ಎಲ್ಲಾ ಆಹುತಿಗಳನ್ನೂ ಈ ತುಪ್ಪದ ಹವಿಸ್ಸಿನಿಂದ ಒಂದುಗೂಡಿಸುತ್ತೇನೆ / ಅನುಸಂಧಾನ ಮಾಡುತ್ತೇನೆ, ಅವಿಚ್ಛಿನ್ನವಾಗಿ / ಅಖಂಡಿತವಾಗಿ ಮಾಡುತ್ತೇನೆ.
ಆಧ್ಯಾತ್ಮಿಕಭಾಷ್ಯ—
ಮನೋ— (ಮನಃ) ಹೇ ಮನಸ್ಸೇ!
ಜ್ಯೋತಿಃ— ಓ ಜ್ಯೋತಿಯೇ / ಪ್ರಕಾಶನೇ!
ಜುಷತಾಮಾಜ್ಯಮ್— (ಆಜ್ಯಮ್)ಹವಿಸ್ಸಿನೊಳು / ನಮ್ಮ ಅರ್ಪಣೆಗಳಿಂದ ನೀನು, (ಜುಷತಾಮ್)ಆಮೋದಿಸು / ಮುದಗೊಳ್ಳು.
ವಿಚ್ಛಿನ್ನಂ ಯಜ್ಞಗ್ಂ ಸಮಿಮಂ ದಧಾತು— (ವಿಚ್ಛಿನ್ನಂ) ಚದುರಿದ / ಹರಡಿಹೋದ, (ಇಮಂ ಯಜ್ಞಗ್ಂ / ಯಜ್ಞಂ) ಈ ಯಜ್ಞವನ್ನು, (ಸಂದಧಾತು) ಆ ಜ್ಯೋತಿಸ್ವರೂಪನು ಏಕೀಕರಣಗೊಳಿಸಲಿ / ಒಟ್ಟುಗೂಡಿಸಲಿ / ಸಂಧಿಸುವಂತೆ ಮಾಡಲಿ / ಒಂದುಗೂಡಿಸಲಿ.
ಅಥವಾ—
ಮನೋ— (ಮನಃ) ನಮ್ಮ ಮನಸ್ಸು,
ಜ್ಯೋತಿಃ-ಆಜ್ಯಂ ಜುಷತಾಮ್— ಸತ್ಯಪ್ರಕಾಶಸ್ವರೂಪಿಯಾದ ಪರಮಾತ್ಮವಿಚಾರವೆಂಬ / ಲೋಕಹಿತಕರವಾದ ಆಚಾರ-ವಿಚಾರಗಳೆಂಬ ಹವಿಸ್ಸನ್ನೇ ಸದಾ ಸೇವಿಸುತ್ತಾ ಮೋದಹೊಂದಲಿ / ಆನಂದಿಸಲಿ.
ವಿಚ್ಛಿನ್ನಮ್ ಇಮಂ ಯಜ್ಞಮ್ ಸಂದಧಾತು— ಹೀಗೆ ನಾವು ಸದಾಚಾರವಿಚಾರಗಳೆಂಬ ಹವಿರ್ದ್ರವ್ಯಮಯವಾದ ಮನೋಜ್ಯೋತಿಯುತರಾದಾಗ, ಸತ್ಯ-ಧರ್ಮ-ನ್ಯಾಯಾದಿ ಭಗವತ್ತತ್ತ್ವಪ್ರೇರಿತ ಲೋಕಹಿತಪೂರಕವಾದ ಯಜ್ಞದಂಥ ಪವಿತ್ರತಮ ಮಾರ್ಗದಿಂದ ಒಂದೊಮ್ಮೆ ವಿಚಲಿತರಾಗಿದ್ದರೂ (ವಿಚ್ಛಿನಮ್ ಇಮಂ ಯಜ್ಞಮ್) ಈ ಸತ್ಸಂಕಲ್ಪರೂಪೀ ಹವಿಸ್ಸಿನಿಂದ ಸಂಪ್ರೀತನಾದ ಭಗವಂತನು ಮತ್ತೆ ನಮ್ಮನ್ನು ಸತ್ಪಥಕ್ಕೆ ಕರೆತಂದು, ನಮ್ಮ ಬಾಳನ್ನು ಪರಿಪೂರ್ಣವಾಗಿಸಿ ಸಾರ್ಥಕಗೊಳಿಸಲಿ (ಸಂದಧಾತು).
ಯಾ ಇಷ್ಟಾ ಉಷಸೋ ನಿಮ್ರುಚಶ್ಚ ತಾಃ ಸಂ ದಧಾಮಿ ಹವಿಷಾ ಘೃತೇನ— (ಯಾಃ ಉಷಸಃ ನಿಮ್ರುಚಃ ಚ ಇಷ್ಟಾಃ) ಯಾವ ಬೆಳಗಿನ / ಹಗಲಿನ ಕಾಲದಲ್ಲಿ ಮಾಡುವ ಹಾಗೂ ಸಾಯಂ / ರಾತ್ರಿಯ ಕಾಲದಲ್ಲಿ ಇಷ್ಟಪ್ರಾಪ್ತಿ-ಅನಿಷ್ಟನಿವೃತ್ತಿಗಾಗಿ ಮಾಡುವ ವೇದೋಕ್ತ ದೇವತಾರಾಧನಾವಿಧಾನಗಳಿವೆಯೋ / ಇಷ್ಟಿಗಳಿವೆಯೋ / ಯಜ್ಞ-ಯಾಗಾದಿಗಳಿವೆಯೋ, (ತಾಃ ಘೃತೇನ ಹವಿಷಾ ಸಂದಧಾಮಿ) ಅವುಗಳನ್ನು ಕಾಂತಿಯುತವಾದ / ಸನ್ಮಾರ್ಗದಲ್ಲಿ ಸಂಗೃಹೀತವಾದ ದ್ರವ್ಯಗಳ ಸಮರ್ಪಣೆಯಿಂದ ನೆರವೇರಿಸುವೆ / ನೆರವೇರಿಸುವಂತಾಗಲಿ.
ಅಥವಾ—
ಯಜ್ಞಕ್ಕೆ ಬೇಕಾದ ಉಷಃಕಾಲದ ಧೀಃಪ್ರೇರಣೆಗಳು ಹಾಗೂ ಕಾಂತಿಯುತ ಗೂಢ ವೈದಿಕಶಬ್ದಗಳನ್ನು ನಾನು ಜ್ಯೋತಿ ಹಾಗೂ ಅರ್ಪಣೆಗಳ ಮೂಲಕ ಒಟ್ಟುಗೂಡಿಸುವಂತೆ / ಸಂಗ್ರಹಿಸುವಂತೆ (ಸಮ್ಯಕ್, ಸರಿಯಾಗಿ ಗ್ರಹಿಸುವಂತೆ, ಅರ್ಥೈಸುವಂತೆ) ಆಗಲಿ.
ಅಥವಾ—
ಯಾವ ಹಗಲಿನ ಹಾಗೂ ರಾತ್ರಿಯ ನನ್ನ ಅಭೀಷ್ಟಗಳಿವೆಯೋ ಅವೆಲ್ಲವನ್ನೂ ಪರಮಾತ್ಮನಾದ ನಿನಗೇ ಮೊದಲು ಅರ್ಪಿಸಿ ಬಳಿಕ ನಿನ್ನ ಪ್ರಸಾದರೂಪವಾಗಿ ನಾನು ಬಳಸಿಕೊಳ್ಳುವಂತಾಗಲಿ. ಎಲ್ಲವೂ ನಿನ್ನದೇ ಅನುಗ್ರಹದಿಂದ ಪ್ರಾಪ್ತವಾದುದೆಂಬ ಭಾವವು ನನ್ನಲ್ಲಿ ಸದಾ ಜಾಗೃತವಾಗಿದ್ದು, ಎಂದಿಗೂ ದುರಹಂಕಾರವು ನನ್ನತ್ತ ಸುಳಿಯದಿರಲಿ.
ಬ್ರಹ್ಮಾತ್ಮನೇ ಹೃದಯಾಯ ನಮಃ ||
ಬ್ರಹ್ಮನು ನೆಲೆಸಿ ಬ್ರಹ್ಮಾತ್ಮಕವಾದ, ಚೈತನ್ಯಯುತವಾದ, ಸಮಗ್ರದೇಹವನ್ನು ಸಕ್ರಿಯಗೊಳಿಸುವ, ನನ್ನ ಹೃದಯಕ್ಕೆ ನಮಸ್ಕಾರ.
ಓಂ ಅಬೋಧ್ಯಗ್ನಿಸ್ಸಮಿಧಾ ಜನಾನಾಂ ಪ್ರತಿಧೇನುಮಿವಾऽऽಯತೀಮುಷಾಸಮ್ | ಯಹ್ವಾ ಇವ ಪ್ರ ವಯಾಮುಜ್ಜಿಹಾನಾಃ ಪ್ರ ಭಾನವಃ ಸಿಸ್ರತೇ ನಾಕಮಚ್ಛ || (ತೈ.ಸಂ.೪.೪.೪.೫)
ಪದ-ವಿಭಾಗ—
ಓಂ ಅಬೋಧಿ ಅಗ್ನಿಃ ಸಮಿಧಾ ಜನಾನಾಂ ಪ್ರತಿ ಧೇನುಮ್ ಇವ ಆಯತೀಮ್ ಉಷಾಸಮ್ | ಯಹ್ವಾಃ ಇವ ಪ್ರ ವಯಾಮ್ ಉಜ್ಜಿಹಾನಾಃ ಪ್ರ ಭಾನವಃ ಸಿಸ್ರತೇ ನಾಕಮ್ ಅಚ್ಛ ||
ಅಧ್ಯಾತ್ಮಿಕಭಾಷ್ಯ / ಅನುವಾದ—
ಜನಾನಾಮ್ ಋತ್ವಿಗ್ಜನರ ಸಮಿಧಾ ಸಮಿಧೆಯಿಂದ ಅಗ್ನಿಃ ಅಗ್ನಿಯು ಅಬೋಧಿ ಪ್ರಜ್ವಲಿಸಲ್ಪಟ್ಟು (ಹೊತ್ತಿಸಲ್ಪಟ್ಟು) ಜಾಗೃತಗೊಂಡಿರುವನು. ಆಯತೀಮ್ ಆಗಮಿಸುತ್ತಿರುವ ಉಷಾಸಮ್ ಪ್ರತಿ ಉಷಃಕಾಲಕ್ಕೆ ಸರಿಯಾಗಿ (ಅರುಣೋದಯವು ಸಮೀಪಿಸಲಾಗಿ) ಧೇನುಮ್ ಇವ ಹಸುವನ್ನು ಹಾಲುಗರೆಯಲು ಎಬ್ಬಿಸುವಂತೆ, ಜ್ಞಾನೋದಯಕಾಲವು ಬಂದಾಗ ಸಮಿಧೆಯಲ್ಲಿ ಸುಪ್ತವಾಗಿದ್ದ ಅಗ್ನಿಯು (ನಮ್ಮೊಳಗೇ ಸುಪ್ತವಾಗಿರುವ ಜ್ಞಾನಶಕ್ತಿಯು) ಜಾಗೃತಗೊಂಡು ಯಜಮಾನನನ್ನು (ಯಜ್ಞಮಾಡುವವನನ್ನು, ಜಿಜ್ಞಾಸುವನ್ನು) ಜಾಗೃತಗೊಳಿಸುತ್ತಾನೆ. ವಯಾಮ್ ಪಕ್ಷಿಗಳ ಸಮೂಹದಲ್ಲಿ (ಜನಸಾಮಾನ್ಯರ ನಡುವೆ) ಪ್ರೋಜ್ಜಿಹಾನಾಃ ಬಿರುಸಾಗಿ ಮೇಲೇರಬಲ್ಲ (ಆಧ್ಯಾತ್ಮಿಕತೆಯ ಔನ್ನತ್ಯವನ್ನೇರಿದ) ಯಹ್ವಾಃ ಇವ ಗರುಡ ಮುಂತಾದ ದೊಡ್ಡ ಪಕ್ಷಿಗಳಂತೆ (ಮಹಾತ್ಮರಂತೆ, ಅವಧೂತರಂತೆ, ಆತ್ಮಜ್ಞಾನಿಗಳಂತೆ) ಭಾನವಃ ಆ ಅಗ್ನಿಯ ರಶ್ಮಿಗಳು (ಜ್ಞಾನಕಿರಣಗಳು) ನಾಕಮ್ ಅಚ್ಛ ಸ್ವರ್ಗವನ್ನು ತಲುಪಲು (ಈ ದೇಹಮಾತ್ರವೇ ನಾನೆಂಬ ದೇಹಾತ್ಮಭಾವದ ಸ್ತರದಿಂದ ನಾನು ಆತ್ಮನು, ಬ್ರಹ್ಮನು, ಎಲ್ಲರೊಳಗಿರುವ ವಿಶ್ವವ್ಯಾಪಿಯಾದ ಮೂಲತತ್ತ್ವವು ಎಂಬ ಬ್ರಹ್ಮಾತ್ಮಭಾವದ / ವಿಶ್ವಾತ್ಮಭಾವದ / ಸರ್ವಾತ್ಮಭಾವದ ಸ್ತರಕ್ಕೇರಲು) ಪ್ರಸಿಸ್ರತೇ ಅತಿಶಯವಾಗಿ ಪ್ರಸರಿಸುತ್ತವೆ (ಲೋಕಾತೀತವಾಗಿ, ವಿಶೇಷವಾಗಿ ಸಾಧಕನ ಸರ್ವಾಂಗಗಳಲ್ಲೂ, ಸರ್ವಕರ್ಮಗಳಲ್ಲೂ, ಸರ್ವದಾ ಜಾಗರೂಕ ಸ್ಥಿತಿ ಹಾಗೂ ಸಾಕ್ಷೀಭಾವವನ್ನುಂಟುಮಾಡಲು ಬಹುವಾಗಿ ಪ್ರಸರಣಗೊಳ್ಳುತ್ತವೆ).
ಸಾಯಣಭಾಷ್ಯ—
ಅಥ ದ್ವಿತೀಯಾಂ ತ್ರಿಷ್ಟುಭಮ್ ಆಹ— ಜನಾನಾಮ್ ಋತ್ವಿಜಾಂ ಸಂಬಂಧಿನಾ (ಸಂಬಂಧಿನ್ಯಾ) ಸಮಿಧಾ ಅಯಮ್ ಅಗ್ನಿಃ ಅಬೋಧಿ ಬೋಧಿತಃ ಪ್ರಜ್ವಾಲಿತಃ ಅಭೂತ್ |
ಬಳಿಕ ಕೃಷ್ಣಯಜುರ್ವೇದೀಯ ತೈತ್ತಿರೀಯಸಂಹಿತೆಯ ೪ನೇ ಕಾಂಡದ ೪ನೇ ಪ್ರಪಾಠಕ / ಪ್ರಶ್ನ ದ ೪ನೇ ಅನುವಾಕದ ಮೊದಲ ೩ ಗಾಯತ್ರೀಚ್ಛಂದಸ್ಸಿನ ಮಂತ್ರಗಳ ತರುವಾಯ ಬರುವ ೩ ತ್ರಿಷ್ಟುಪ್ ಛಂದಸ್ಸಿನ ಮಂತ್ರಗಳಲ್ಲಿ ೨ನೆಯದಾದ, ಹೀಗಾಗಿ ಈ ಅನುವಾಕದ ೫ನೆಯ ಮಂತ್ರವನ್ನು ಹೇಳುತ್ತಾನೆ (ತೈ.ಸಂ.೪.೪.೪.೫)— ಯಜಮಾನರಿಗೆ / ಋತ್ವಿಜರಿಗೆ ಸಂಬಂಧಿಸಿದ ಸಮಿಧೆ / ಸಮಿತ್ತಿನಿಂದ ಈ ಅಗ್ನಿಯು ಪ್ರಜ್ವಲಿಸಲ್ಪಟ್ಟು ನಮ್ಮ ಕಣ್ಣಿಗೆ ಗೋಚರವಾಯಿತು / ನಮ್ಮ ಅರಿವಿಗೆ / ಬೋಧೆಗೆ ಬಂತು. (ಈ ಅಗ್ನಿಯು ಜನರ ಬುದ್ಧಿಯನ್ನು ಜಾಗೃತಗೊಳಿಸಿದನು / ಜ್ಞಾನ ಅಥವಾ ಬೋಧೆ ಯನ್ನುಂಟುಮಾಡಿಮಾಡಿದನು)
ತತ್ರ ದೃಷ್ಟಾಂತಃ— ಆಯತೀಮ್ ಉಷಾಸಂ ಪ್ರತಿ ಧೇನುಮ್ ಉಷಃಕಾಲೇ ಸಮಾಗತೇ ಸತಿ ದೋಹನಾರ್ಥಂ ಶಯನಾತ್ ಧೇನುಂ ಯಥಾ ಉತ್ಥಾಪಯತಿ ತದ್ವತ್ |
ಇದಕ್ಕೆ ಉದಾಹರಣೆ— ಉಷೆಯು ಉದಿಸಿ ಬಂದ ಹಾಗೆ ಹಾಲ್ಗರೆಯಲು ಹಸುವನೆಬ್ಬಿಸುವಂದದಿ ಯಜ್ಞಾಗ್ನಿಯುದಯಿಸಲು ಇಂಧನ / ಸಮಿಧೆಯೊಳಗಿನ ಅಗ್ನಿಯ ಪ್ರಾದುರ್ಭಾವ / ಜಾಗೃತಿಯಾಯಿತು. ತನ್ಮೂಲಕ ಯಜ್ಞಾಗ್ನಿಯ ಪ್ರೇರಣೆಯಿಂದ ಜನಮನದ ಜಾಗೃತಿಯೂ ಆಯಿತೆಂಬ ಭಾವ.
ಬುಧ್ಯಮಾನಸ್ಯ ಅಗ್ನೇಃ ಭಾನವಃ ರಶ್ಮಯಃ ಪ್ರೋಜ್ಜಿಹಾನಾಃ ಪ್ರಕರ್ಷೇಣ ಉದ್ಗಚ್ಛನ್ತಃ ನಾಕಮ್ ಅಚ್ಛ ಸ್ವರ್ಗಮ್ ಅಭಿಪ್ರಾಪ್ತುಂ ಪ್ರ-ಸಿಸ್ರತೇ, ಅತಿಶಯೇನ ಪ್ರಸರನ್ತಿ |
ಹೀಗೆ ಅದಾಗತಾನೇ ಪ್ರಜ್ವಲಿಸುತ್ತಿರುವ ಅಗ್ನಿಯ / ಅದಾಗತಾನೇ ಉದಿಸುತ್ತಿರುವ ಭಾನು / ಸೂರ್ಯನ ಕಿರಣಗಳು / ರಶ್ಮಿಗಳು ಬಹು ಬಿರುಸಾಗಿ ಮೇಲೇರುತ್ತಾ / ಸಂಚರಿಸುತ್ತಾ ನಾಕ / ಸ್ವರ್ಗವನ್ನು ತಲುಪಲು / ಹೊಂದಲು ಅತಿಶಯವಾಗಿ ಪಸರಿಸುತ್ತವೆ.
ತತ್ರ ದೃಷ್ಟಾನ್ತಃ— ವಯಾಂ ಯಹ್ವಾ ಇವ ವಯಾಂ ವೀನಾಂ ಪಕ್ಷಿಣಾಂ ಮಧ್ಯೇ ಯಹ್ವಾ ಮಹಾನ್ತಃ ಪಕ್ಷಿಣಃ ಯಥಾ ಪ್ರಕರ್ಷೇಣ ಉತ್ಪತನ್ತಿ ತದ್ವತ್ ||
ಇದಕ್ಕೆ ನಿದರ್ಶನ— ವಿಃ ಎಂದರೆ ಪಕ್ಷಿ (ವಾತಿ ಗಚ್ಛತೀತಿ ವಿಃ). ವಯಾಂ ಎಂಬುದು ವೀನಾಂ (ಪಕ್ಷಿಗಳ) ಎಂಬ ಲೌಕಿಕಪ್ರಯೋಗದ ವೈದಿಕ / ಆರ್ಷ ಆಯಾಮ. “ವಯಾಂ ಯಹ್ವಾಃ ಇವ” ಎಂದರೆ, ಪಕ್ಷಿಗಳಲ್ಲಿ ಗಿಡುಗ, ಗರುಡ, ಹದ್ದುಗಳಂಥ ದೊಡ್ಡಹಕ್ಕಿಗಳು ಹೇಗೆ ಬಹುವೇಗವಾಗಿ ಅತ್ಯುನ್ನತ ಆಗಸಕ್ಕೆ ಮೇಲೇರಿ ಹಾರಾಡುತ್ತವೋ ಹಾಗೆಯೇ ಯಜ್ಞಾಗ್ನಿಯ ರಶ್ಮಿಗಳು ಸಮಿಧೆ-ಹವಿಸ್ಸು-ಆಹುತಿಗಳನ್ನು ದೇವತೆಗಳಿಗೊಯ್ಯಲು ಬಹುವೇಗವಾಗಿ ಹಾಗೂ ಬಲಶಾಲಿಯಾಗಿ ಸ್ವರ್ಗಲೋಕದೆಡೆಗೆ ಚಾಚುತ್ತವೆಂದರ್ಥ.
ವಿಷ್ಣ್ವಾತ್ಮನೇ ಶಿರಸೇ ಸ್ವಾಹಾ ||
ಲೋಕಸ್ಥಿತಿಕಾರಕ-ವಿಷ್ಣುಶಕ್ತ್ಯಾತ್ಮಕವಾದ, ದೇಹಸ್ಥಿತಿಕಾರಕವಾದ ನನ್ನ ದೇಹದ ಮೂರ್ಧನ್ಯವೂ ಶ್ರೇಷ್ಠವೂ ಪ್ರಧಾನಭಾಗವೂ ನಿಯಂತ್ರಣಕೇಂದ್ರವೂ ಆದ ಶಿರಸ್ಸು / ಶೀರ್ಷ / ತಲೆಗೆ “ಸು-ಆಹಾ”— ಶುಭವಾಗಲೆಂದು ಹೇಳುವೆನು; ನಮಿಸುವೆನು (ದೇವತೆಗಳಿಗೆ ಸ್ವಾಹಾ, ವಷಟ್ ಹಾಗೂ ನಮಸ್ಕಾರಗಳು; ಪಿತೃಗಳಿಗೆ ಸ್ವಧಾಕಾರ. ಇಲ್ಲಿ ವಿಷ್ಣುವು ದೇವತಾಸ್ವರೂಪವಾದ್ದರಿಂದ ಸ್ವಾಹಾಕಾರವು ಪ್ರಯೋಗಿಸಲ್ಪಟ್ಟಿದೆ).
ಓಂ ಮೂರ್ಧಾನಂ ದಿವೋ ಅರತಿಂ ಪೃಥಿವ್ಯಾ ವೈಶ್ವಾನರಮೃತಾಯ ಜಾತಮಗ್ನಿಮ್ | ಕವಿಗ್ಂ ಸಮ್ರಾಜಮತಿಥಿಂ ಜನಾನಾಮಾಸನ್ನಾ ಪಾತ್ರಂ ಜನಯನ್ತ ದೇವಾಃ ||
(ತೈ.ಸಂ.೧.೪.೧೩.೧, ಋ.ಸಂ.೬.೨.೧)
ಪದ-ವಿಭಾಗ—
ಓಂ ಮೂರ್ಧಾನಂ ದಿವಃ ಅರತಿಂ ಪೃಥಿವ್ಯಾಃ ವೈಶ್ವಾನರಮ್ ಋತಾಯ ಜಾತಮ್ ಅಗ್ನಿಮ್ | ಕವಿಂ ಸಂ-ರಾಜಮ್ ಅತಿಥಿಂ ಜನಾನಾಮ್ ಆಸನ್ನಾಃ ಪಾತ್ರಂ ಜನಯನ್ತ ದೇವಾಃ ||
ಭಟ್ಟಭಾಸ್ಕರಭಾಷ್ಯ—
ಸ್ಥಾಲ್ಯಾ ಧ್ರುವಂ ಗೃಹ್ಣಾತಿ— ಮೂರ್ಧಾನಮ್ ಇತಿ ಚತುಷ್ಪದಯಾ ತ್ರಿಷ್ಟುಭಾ ||
“ತಿಷ್ಠನ್ತಿ ಅತ್ರ ಅನ್ನಾದೀನಿ ಇತಿ ಸ್ಥಾಲೀ”― ಅನ್ನ ಮುಂತಾದ ಆಹಾರ್ಯ ಪದಾರ್ಥಗಳನ್ನು ಸಂಗ್ರಹಿಸಿಡುವ ಪಾತ್ರೆಗೆ ಸ್ಥಾಲೀ ಎನ್ನುವರು. ಘೃತಪಾತ್ರೆಯಿಂದ ಹವಿರ್ದ್ರವ್ಯವಾದ ತುಪ್ಪವನ್ನು ಧ್ರುವವೆಂಬ ಯಜ್ಞಪಾತ್ರಪ್ರಭೇದದಲ್ಲಿ ತೆಗೆದುಕೊಳ್ಳುತ್ತಾನೆ― “ಮೂರ್ಧಾನಂ ದಿವೋ…” ಎಂಬ ೪ ಪಾದಗಳ ತ್ರಿಷ್ಟುಪ್ ಛಂದಸ್ಸಿನ ಮಂತ್ರಪಠನೆಯೊಂದಿಗೆ.
ಮೂರ್ಧಾನಂ ಶಿರೋಭೂತಮ್ | (ಮೂರ್ಧಾಪ್ರಾಯವಾದವನನ್ನು, ಶಿರಸ್ತುಲ್ಯವಾದವನನ್ನು, ತಲೆಗೆ ಸಮನಾದವನನ್ನು) ಕಸ್ಯ? ದಿವಃ ದ್ಯುಲೋಕಸ್ಯ | (ಯಾರ / ಯಾವುದರ? ಸ್ವರ್ಗದ / ದೇವಲೋಕದ ಶಿರೋಪ್ರಾಯನಾದವನನ್ನು) ಅರತಿಂ ಗನ್ತಾರಮ್ | … | ಪೃಥಿವ್ಯಾಶ್ಚ ಗನ್ತಾರಂ ಪ್ರಜಾನಾಂ ರಕ್ಷಣಾರ್ಥಂ ಪೃಥಿವ್ಯಾಮ್ ಅಪಿ ವರ್ತಮಾನಮ್ | … | (ಅರತಿಂ— “ಋ ಗತಿಪ್ರಾಪಣಯೋಃ” ಧಾತು— ಹೋಗುವವನನ್ನು, ದೇವತೆಗಳಿಗೆ ಹವಿಸ್ಸನ್ನು ಪಡೆಯಿಸುವವನನ್ನು, ಪೃಥಿವಿಗೂ ಹೋಗುವವನನ್ನೂ, ಜನರ ರಕ್ಷಣೆಗಾಗಿ ಭೂಮಿಯಲ್ಲೂ ಇರುವವನನ್ನು) ವೈಶ್ವಾನರಂ ವಿಶ್ವೇಷಾಂ ನರಾಣಾಂ ಸಂಬಂಧಿನಮ್ | … | (ವಿಶ್ವಮ್ ಎಂದರೆ ಎಲ್ಲ, ಸಮಗ್ರ ಎಂದರ್ಥ. ಜಗತ್ತಿನ ಎಲ್ಲ ಮನುಷ್ಯರಿಗೆ ಸಂಬಂಧಿಸಿದವನು ಎಂಬುದರಿಂದ ವೈಶ್ವಾನರನೆನಿಸಿದ ಅಗ್ನಿಯನ್ನು ಅಥವಾ ವಿಶ್ವನರನ ಪುತ್ರನಾಗಿ ಜನಿಸಿ ವೈಶ್ವಾನರನೆನಿಸಿದ ಅಗ್ನಿದೇವನನ್ನು)_ ಋತಾಯ ಸತ್ಯಾಯ ಯಜ್ಞಾಯ ವಾ ಜಾತಮ್ | (ಆಯಾ ಕಾಲದೇಶವ್ಯಕ್ತಿಧರ್ಮಕ್ಕನುಗುಣವಾದ ನಿಯಮವೇ ಋತ. ಸಾರ್ವಕಾಲಿಕ, ಸಾರ್ವದೇಶಿಕ, ಸಾರ್ವತ್ರಿಕ / ಸಾರ್ವಜನಿಕ ನಿಯಮವೇ ಸತ್ಯ. ಹವಿರ್ದ್ರವ್ಯಗಳಿಂದಾಚರಿಸುವುದು ದ್ರವ್ಯಯಜ್ಞ, ತಪಸಾಚಾರ ತಪೋಯಜ್ಞ, ಸದ್ಗ್ರಂಥಗಳ ಸ್ವಂತ ಅಧ್ಯಯನವೇ ಸ್ವಾಧ್ಯಾಯಯಜ್ಞ. ಪರತತ್ತ್ವಾದಿಗಳ ಆಚಾರವಿಚಾರಗಳೇ ಜ್ಞಾನಯಜ್ಞ. ಕಲಿಯುಗದಲ್ಲಿ ದಾನ, ಸೇವಾದಿಗಳೂ ಯಜ್ಞತುಲ್ಯ. ಹೀಗೆ, ಇಂಥ ಋತ, ಸತ್ಯ ಅಥವಾ ಯಜ್ಞಕ್ಕಾಗಿ ಜನಿಸಿದವನೇ ಅಗ್ನಿಯು. ಅಂಥವನನ್ನು) ಕವಿಂ ಮೇಧಾವಿನಮ್ | (ಸೃಜನಶೀಲನಾದ, ಹೊಸತನ್ನು ಸೃಷ್ಟಿಸುವ ಮೇಧಾಯುತನಾದ ಕವಿಯನ್ನು) _ಸಮ್ರಾಜಂ ಸಮ್ಯಗ್-ರಾಜನ್ತಮ್ | … | (ಚೆನ್ನಾಗಿ ಹೊಳೆಯುವ, ಬೆಳಗುವ, ರಾರಾಜಿಸುವವನನ್ನು / ರಾಜೃ ದೀಪ್ತೌ ಧಾತು) ಜನಾನಾಂ ಯಜಮಾನಲಕ್ಷಣಾನಾಮ್ ಅತಿಥಿಂ ಯಜಮಾನಗೃಹಾನ್ ಸಾತತ್ಯೇನ ಗಚ್ಛನ್ತಮ್ | … | ಯಜಮಾನಗೃಹೇಷು ಅತನ್ತಮ್ ಇತಿ ಅರ್ಥಃ | (ಯಜ್ಞಕರ್ತೃಗಳಾದ ಯಜಮಾನ-ಜನರ ಮನೆಗೆ ಸತತವೂ ಹೋಗುತ್ತಿರುವ, ಗಮಿಸುತ್ತಿರುವ ಅತಿಥಿಯನ್ನು; ಅತಿಥಿಃ— “ಅತ ಸಾತತ್ಯಗಮನೇ” ಧಾತುಃ),_ ಈದೃಶಮ್ ಅಗ್ನಿಂ ದೇವಾಃ ಪಾತ್ರಮ್ ಆಜನಯನ್ತ, ಆಭಿಮುಖ್ಯೇನ ಜನಿತವನ್ತಃ | (ಇಂತಹ ಅಗ್ನಿಯನ್ನು ದೇವತೆಗಳು ತಮಗಾಗಿ ಹವಿಸ್ಸನ್ನು ಸಂಗ್ರಹಿಸಿ ತರುವ ಪಾತ್ರೆಯನ್ನಾಗಿ / ಅದಕ್ಕೆ ಪಾತ್ರನನ್ನಾಗಿ / ಆ ಪಾತ್ರತೆಯನ್ನು ಅಥವಾ ಯೋಗ್ಯತೆಯನ್ನು ಅಗ್ನಿಗಿತ್ತು, ಆತನನ್ನು ಅಗ್ರಗಣ್ಯನನ್ನಾಗಿ, ಯಜ್ಞಕ್ಕೆ ಮುಂದಾಗಿ ಹೋಗುವವನನ್ನಾಗಿ ಮಾಡಿದರು. “ಅಗಿ ಗತೌ” ಧಾತುವಿನಿಂದ ಅಗ್ನಿಶಬ್ದ). ಪಿಬತಿ ಅನೇನ ಇತಿ ಪಾತ್ರಮ್ | … | ಸೋಮಂ ಪಾತುಂ ತತ್-ಪಾತ್ರತಯಾ ಅಗ್ನಿಂ ಕೃತವನ್ತಃ, ಇತಿ ಅರ್ಥಃ | (ಇದರಿಂದ ಪಾನಮಾಡುತ್ತಾನೆ / ಕುಡಿಯುತ್ತಾನಾದ್ದರಿಂದ ಇದು ಪಾ-ತ್ರವು / ಪಾತ್ರೆಯು. ಯಜ್ಞದಲ್ಲಿ ಸೋಮವನ್ನು ಕುಡಿಯಲು ಅರ್ಹನನ್ನಾಗಿ / ಮಾಧ್ಯಮವನ್ನಾಗಿ ಅಗ್ನಿಯನ್ನು ಮಾಡಿದರೆಂದರ್ಥ.) ಕೀದೃಶಂ ತತ್-ಪಾತ್ರಮ್ ಇತಿ ಅತಃ, ಆಹ— ಆಸನ್ ಆಸ್ಯೇ | ದ್ವಿತೀಯಾರ್ಥೇ ಸಪ್ತಮೀ, ತಸ್ಯಾಃ ಚ ಲುಕ್ | ಅಗ್ನಿಮ್ ಆಸ್ಯಂ ಕೃತವನ್ತಃ, ಇತಿ ಯಾವತ್ | … | (ಆ ಪಾತ್ರವು ಎಂಥದ್ದೆಂದು ಹೇಳುತ್ತಾನೆ― ಮುಖ / ಬಾಯಿಯನ್ನು. ಹೀಗೆ ದ್ವಿತೀಯವಿಭಕ್ತ್ಯರ್ಥದಲ್ಲಿ ಸಪ್ತಮೀಪ್ರಯೋಗ ಬಂದಿದೆ. ಅದಕ್ಕೆ ಲುಕ್ ಪ್ರತ್ಯಯವೂ ಬಂದಿದೆ. ಅಗ್ನಿಯನ್ನು ದೇವತೆಗಳು ತಮ್ಮ ಬಾಯಿಯನ್ನಾಗಿ ಮಾಡಿದರೆಂಬುದಾಗಿ ಇದರರ್ಥವು.) ಯದ್ವಾ— ನಿಮಿತ್ತ-ಸಪ್ತಮೀ ಏಷಾ, ಆಸ್ಯ-ನಿಮಿತ್ತಮ್ ಆಸ್ಯತ್ವಾಯ ಅಗ್ನಿಃ ಅಸ್ಮಾಕಮ್ ಆಸ್ಯಮ್ ಇವ ಭೂಯಾತ್ ಇತಿ | (ಅಥವಾ— ಇದು ನಿಮಿತ್ತಸಪ್ತಮೀಪ್ರಯೋಗವು. ಈ ಕಾರಣಕ್ಕಾಗಿ ಎಂಬರ್ಥದಲ್ಲಿ. ಬಾಯಿಯ ನಿಮಿತ್ತವಾಗಿ, ಸಮಸ್ತ ದೇವಸಮೂಹದ ಬಾಯಿಯಾಗಿ, ಅಗ್ನಿಯು ನಮ್ಮ ಬಾಯಿಯಂತೆ ಇರಲಿ ಎಂದು ದೇವತೆಗಳು ಸಂಕಲ್ಪಿಸಿದರು.) ಅಗ್ನಿನಾ ಹಿ ಆಸ್ಯೇನ ದೇವಾಃ ಆಹುತೀಃ ಪಿಬನ್ತಿ, ಅಗ್ನಿಮುಖತ್ವಾತ್ ತೇಷಾಮ್ || (ಅಗ್ನಿಯೆಂಬ ಬಾಯಿಯಿಂದಲೇ ದೇವತೆಗಳೆಲ್ಲ ಯಜ್ಞದ ಆಹುತಿಗಳನ್ನು ಪಾನಮಾಡುತ್ತಾರೆ, ಅವರೆಲ್ಲರ ಬಾಯಿಯು ಅಗ್ನಿಯಾಗಿರುವುದರಿಂದ.)
ಸಾಯಣಭಾಷ್ಯ—
ಬೌಧಾಯನಕಲ್ಪಸೂತ್ರೇ— “ಮೂರ್ಧಾನಂ ದಿವೋ ಅರತಿಂ ಪೃಥಿವ್ಯಾ ಇತಿ ಸ್ಥಾಲ್ಯಾ ಧ್ರುವಂ ಪೂರ್ಣಂ ಗೃಹ್ಣಾತಿ ಏಷ ತೇ ಯೋನಿರಗ್ನಯೇ ತ್ವಾ ವೈಶ್ವಾನರಾಯ ಇತಿ ಹಿರಣ್ಯೇ ಸಾದಯೇತ್” ಇತಿ |
ಸೂತ್ರರ್ಷಿಗಳಾದ ಬೋಧಾಯನರು ತಮ್ಮ ಕಲ್ಪಸೂತ್ರದಲ್ಲಿ— “ಮೂರ್ಧಾನಂ ದಿವೋ ಅರತಿಂ ಪೃಥಿವ್ಯಾಃ— ಎಂದು ಪಾತ್ರೆಯಿಂದ ಧ್ರುವವೆಂಬ ಕಿರು-ಯಜ್ಞಪಾತ್ರೆಯಲ್ಲಿ ತುಂಬ ಘೃತವನ್ನು ಸ್ವೀಕರಿಸಿ, ‘ಇದು ನಿನ್ನದೇ. ಅಗ್ನಿಯಾದ, ವೈಶ್ವಾನರನಾದ ನಿನಗಿದೋ’ ಎಂಬುದಾಗಿ ಅಗ್ನಿಯ ಸಪ್ತಜಿಹ್ವೆಗಳಲ್ಲೊಂದಾದ ಹಿರಣ್ಯದಲ್ಲಿ ನಿಕ್ಷೇಪಿಸಬೇಕು / ಸಮರ್ಪಿಸಬೇಕು / ಇಡಬೇಕು” ಎಂಬುದಾಗಿ (ಹೇಳಿರುವರು).
ಪಾಠಃ ತು— ಮೂರ್ಧಾನಮ್ ಇತಿ | (ಮಂತ್ರಪಾಠವಾದರೋ “ಮೂರ್ಧಾನಂ ದಿವೋ ಅರತಿಂ ಪೃಥಿವ್ಯಾ ವೈಶ್ವಾನರಮೃತಾಯ ಜಾತಮಗ್ನಿಮ್ | ಕವಿಗ್ಂ ಸಮ್ರಾಜಮತಿಥಿಂ ಜನಾನಾಮಾಸನ್ನಾ ಪಾತ್ರಂ ಜನಯನ್ತ ದೇವಾಃ” ಎಂದು.) ಅತ್ರ ಗೃಹೀತ್ವಾ ಧ್ರುವೋऽಸಿ ಇತ್ಯಾದಿಕಂ ಪಠೇತ್ | (ಇಲ್ಲಿ ಈ ಮಂತ್ರವನ್ನು ತೆಗೆದುಕೊಂಡು “ಧ್ರುವೋऽಸಿ” ಮುಂತಾದವನ್ನು ಪಠಿಸಬೇಕು.) ತದುಕ್ತಂ ಬೌಧಾಯನೇನ “ಅಥ ಏನಮ್ ಅಧಿವದತೇ ಧ್ರುವಃ ಅಸಿ ಇತಿ” ಇತಿ | (ಹಾಗಾಗಿ ಬೋಧಾಯನಕಲ್ಪಸೂತ್ರದಲ್ಲಿ ಹೇಳಿದೆ “ಅನಂತರ ಇದನ್ನು ಕುರಿತು ಹೇಳುತ್ತಾನೆ ― ಧ್ರುವವು ನೀನಾಗಿದ್ದಿ ಎಂದು” ಎಂಬುದಾಗಿ.) ಮೂರ್ಧಾನಮ್ ಇತಿ ಮನ್ತ್ರೇ ಸ್ತುಮಃ— ಇತಿ ಪದಮ್ ಅಧ್ಯಾಹೃತ್ಯ ಅಗ್ನಿಂ ವಯಂ ಸ್ತುಮಃ— ಇತಿ ಯೋಜನೀಯಮ್ | (‘ಮೂರ್ಧಾನಂ ದಿವೋ ಅರತಿಂ...’ ಎಂಬ ಮಂತ್ರದಲ್ಲಿ ‘ಸ್ತುತಿಸುತ್ತೇವೆ’ ಎಂಬ ಪದವನ್ನು ಅಧ್ಯಾಹಾರ / ಹೊರಗಿನಿಂದ ಸ್ವೀಕಾರ ಮಾಡಿ, ‘ಅಗ್ನಿಯನ್ನು ನಾವು ಸ್ತುತಿಸುತ್ತೇವೆ’ ಎಂದು ಸೇರಿಸಬೇಕು / ಸಂಯೋಜಿಸಬೇಕು.) ಕೀದೃಶಮ್ ಅಗ್ನಿಮ್? (ಎಂತಹ ಅಗ್ನಿ?) ದಿವಃ ಮೂರ್ಧಾನಂ ಶಿರೋವತ್ ಉನ್ನತದೇಶೇ ಸೂರ್ಯರೂಪೇಣ ಅವಸ್ಥಾಯ ದ್ಯುಲೋಕಸ್ಯ ಭಾಸಕಮ್ | (ದೇವಲೋಕ / ಸ್ವರ್ಲೋಕ / ಸ್ವರ್ಗ ದ ಶೀರ್ಷವನ್ನು / ಶಿರದಂತೆ ಎತ್ತರವಾದ ಪ್ರದೇಶದಲ್ಲಿ ಸೂರ್ಯರೂಪನಾಗಿ ನೆಲೆಸಿ ದ್ಯುಲೋಕ / ಬೆಳಕಿನ ಲೋಕ / ಅಂತರಿಕ್ಷ-ಸ್ವರ್ಲೋಕಗಳನ್ನೆಲ್ಲ ಬೆಳಗುತ್ತಿರುವವನನ್ನು,) ಅರತಿಂ ಪೃಥಿವ್ಯಾಃ ರತಿಃ ಉಪರತಿಃ, ತದ್ ರಹಿತಮ್ | (ಅ-ರತಿ ಯನ್ನು / ಪೃಥಿವಿಯ ರತಿ / ಭೂಮಿಯಲ್ಲಿನ ರಮಿಸುವಿಕೆ, ಇಲ್ಲದಿರುವವನನ್ನು) ನ ಹಿ ಪೃಥಿವ್ಯಾಃ ಉಪರಿ ಕದಾಚಿತ್ ಅಗ್ನಿಃ ಉಪರಮತೇ, ಕಿನ್ತು ದಾಹ-ಪಾಕ-ಪ್ರಕಾಶೈಃ ಸರ್ವಾನ್ ಅನುಗೃಹ್ಣನ್ ಸರ್ವದಾ ವರ್ತತೇ | (ಭೂಮಿಯ ಮೇಲೆ ಎಂದಿಗೂ ಅಗ್ನಿಯು ಕ್ರೀಡಿಸುವುದಿಲ್ಲ, ಆದರೆ ದಹಿಸುವ, ಬೇಯಿಸುವ, ಬೆಳಗುವ ಗುಣ-ಸ್ವಭಾವಗಳಿಂದ ಎಲ್ಲರನ್ನೂ ಅನುಗ್ರಹಿಸುತ್ತಾ ಯಾವಾಗಲೂ ಇರುವನು.) ಸ ಚ ಅಗ್ನಿಃ ವೈಶ್ವಾನರನಾಮಕಃ | (ಅಂಥ ಅಗ್ನಿಯೇ ವೈಶ್ವಾನರನೆಂಬ ಹೆಸರಿನವನು.) ಯಥಾ ದಿವಿ ನಾಕಃ ನಾಮ ಅಗ್ನಿಃ, ರಕ್ಷೋಹಾ ಇತಿ ಆಮ್ನಾತಂ ತಥಾ ಪೃಥಿವ್ಯಾಂ ವೈಶ್ವಾನರಃ | (ಹೇಗೆ ಸ್ವರ್ಗದಲ್ಲಿ ನಾಕನೆಂಬ ಅಗ್ನಿಯು ರಕ್ಷೋಗಣಗಳ / ದುಷ್ಟಸಮೂಹಗಳ ನಾಶಕನೆಂದು ವೇದಗಳಲ್ಲೇ ಹೇಳಿದೆಯೋ, ಅಂತೆಯೇ ಭುವಿಯಲ್ಲಿ ವೈಶ್ವಾನರನು.) ತಥಾ ಪೃಥಿವ್ಯಾಮ್ ಋತಾಯ ಜಾತಂ ಯಜ್ಞಾರ್ಥಮ್ ಆಹವನೀಯಾದಿರೂಪೇಣ ಉತ್ಪನ್ನಮ್ | (ಹಾಗೆಯೇ, ಭೂಮಿಯಲ್ಲಿ ಋತ / ಕಾಲಧರ್ಮ-ನಿಯಮಗಳಿಗಾಗಿ ಜನಿಸಿದವನನ್ನು, ಯಜ್ಞಕ್ಕಾಗಿ ಆಹವನೀಯ-ಗಾರ್ಹಪತ್ಯ-ದಕ್ಷಿಣಾಗ್ನಿಗಳ ರೂಪದಿಂದ ಉತ್ಪನ್ನನಾದವನನ್ನು,) ಕವಿಂ ಸ್ವಭಕ್ತಾನ್ ಅನುಗ್ರಹೀತುಮ್ ಅಭಿಜ್ಞಮ್ | (ಕವಿಯನ್ನು— ತನ್ನ ಭಕ್ತರನ್ನು ಅನುಗ್ರಹಿಸುವುದರಲ್ಲಿ ಕುಶಲನಾದವನನ್ನು / “ಅಭಿ ಸಾಕಲ್ಯೇನ ಜಾನಾತಿ ಇತಿ ಅಭಿಜ್ಞಃ, ತಮ್” ಎಲ್ಲರೀತಿಯಿಂದಲೂ ಬಲ್ಲವನು, ನಿಪುಣ, ಪ್ರವೀಣ, ಚತುರ, ದಕ್ಷನಾದವನನ್ನು) ಸಮ್ರಾಜಂ ಸಮ್ಯಗ್ ದೀಪ್ಯಮಾನಮ್ | (ಸಮ್ರಾಟನನ್ನು / ಚೆನ್ನಾಗಿ ಬೆಳಗುವವನನ್ನು) ಜನಾನಾಂ ಯಜಮಾನಾನಾಮ್ ಅತಿಥಿಂ ಹವಿರ್ಭಿಃ ಸತ್ಕಾರಯೋಗ್ಯಮ್ | (ಜನರ / ಯಜ್ಞಮಾಡುವ ಯಜಮಾನರ ಅತಿಥಿಯಾದ, ಹವಿಸ್ಸುಗಳಿಂದ ಸತ್ಕಾರಯೋಗ್ಯನಾದವನನ್ನು) ಆಸನ್, ಈದೃಶಸ್ಯ ಅಗ್ನೇಃ ಆಸ್ಯೇ ಹೋತುಂ ದೇವಾಃ ಪಾತ್ರಂ ಸೋಮಗ್ರಹಚಮಸರೂಪಮ್ ಆಜನಯನ್ತ ಸರ್ವತಃ, ಐನ್ದ್ರ-ವಾಯವಾದಿ-ಸ್ಥಾನೇಷು ಉತ್ಪಾದಿತವನ್ತಃ || (ಇಂತಹ / ಹೀಗಿರುವ ಅಗ್ನಿಯ ಬಾಯಿಯಲ್ಲಿ ಹೋಮಿಸಲು ದೇವತೆಗಳು ಯಜ್ಞಪಾತ್ರವಿಶೇಷವಾದ ಸೋಮಗ್ರಹಚಮಚರೂಪವಾದ ಪಾತ್ರೆಯನ್ನು ಸೃಜಿಸಿದರು; ಪೂರ್ವ-ವಾಯವ್ಯಾದಿ ಸರ್ವದಿಕ್ಕುಗಳಲ್ಲೂ ಹೋಮಿಸಲು ಉತ್ಪಾದಿಸಿದರು.)
ರುದ್ರಾತ್ಮನೇ ಶಿಖಾಯೈ ವಷಟ್ ||
ರುದ್ರಾತ್ಮಕವಾದ ಶಿಖೆಗೆ ವಷಟ್ಕಾರವು. ಶಿಖಾಸ್ಥಾನವು ಶಿರದಲ್ಲಿ ಮುಖ್ಯಭಾಗ. ಅಲ್ಲಿ ಉಸಿರಾಟ ಹಾಗೂ ರಕ್ತಪರಿಚಲನೆಯನ್ನು ನಿಯಂತ್ರಿಸುವ ಮೆದುಳಿನ ಕೇಂದ್ರಗಳಿವೆ. ಇವೆರಡೂ ನಮ್ಮ ಉಳಿವಿಗೆ ಅಗತ್ಯ. ಇನ್ನು ವಷಟ್ ಎಂಬುದು ದೇವತೆಗಳನ್ನುದ್ದೇಶಿಸಿ ಹವಿಸ್ಸನ್ನು ಸಮರ್ಪಿಸುವ ಮಂತ್ರ. ಸ್ವಾಹಾ, ಶ್ರೌಷಟ್, ವೌಷಟ್, ವಷಟ್, ಸ್ವಧಾ— ಈ ೫ ಶಬ್ದಗಳು ಯಜ್ಞಾಗ್ನಿಯ ಮುಂದೆ ದೇವಹವಿರ್ದಾನದಲ್ಲಿ ಪ್ರಯೋಗಿಸಲ್ಪಡುತ್ತವೆ. ಹೀಗಾಗಿ, ರುದ್ರಾತ್ಮಕವಾದ ಶಿಖೆಯಲ್ಲಿ ಕಲ್ಪಿತನಾದ ರುದ್ರದೇವನಿಗೆ ಸಮರ್ಪಣೆ.
ಓಂ ಮರ್ಮಾಣಿ ತೇ ವರ್ಮಭಿಶ್ಛಾದಯಾಮಿ ಸೋಮಸ್ತ್ವಾ ರಾಜಾऽಮೃತೇನಾಭಿऽವಸ್ತಾಮ್ | ಉರೋರ್ವರೀಯೋ ವರಿವಸ್ತೇ ಅಸ್ತು ಜಯನ್ತಂ ತ್ವಾಮನು ಮದನ್ತು ದೇವಾಃ ||
(ತೈ.ಸಂ.೪.೬.೪.೧೪)
ಪದ-ವಿಭಾಗಃ —
ಓಂ ಮರ್ಮಾಣಿ ತೇ ವರ್ಮಭಿಃ ಛಾದಯಾಮಿ ಸೋಮಃ ತ್ವಾ ರಾಜಾ ಅಮೃತೇನ ಅಭಿ-ವಸ್ತಾಮ್ | ಉರೋಃ ವರೀಯಃ ವರಿವಃ ತೇ ಅಸ್ತು ಜಯನ್ತಂ ತ್ವಾಮ್ ಅನು-ಮದನ್ತು ದೇವಾಃ ||
ಸಾಯಣಭಾಷ್ಯಮ್ ―
ಮರ್ಮಾಣಿ ತೇ― ಇತಿ | (“ಮರ್ಮಾಣಿ ತೇ…” ಎಂಬ ಮಂತ್ರವು.) ಹೇ ಯಜಮಾನ! ತೇ ತವ ಮರ್ಮಾಣಿ ವರ್ಮಭಿಃ ಕವಚೈಃ ಛಾದಯಾಮಿ | (ಅಯ್ಯಾ ಯಜ್ಞಕರ್ತೃವೆ! ನಿನ್ನ ದೇಹದ ಮರ್ಮಸ್ಥಾನಗಳನ್ನು ರಕ್ಷಾಕವಚಗಳಿಂದ ಆಚ್ಛಾದಿಸುತ್ತೇನೆ / ಮುಚ್ಚುತ್ತೇನೆ.) ಸೋಮಃ, ರಾಜಾ ತ್ವಾಮ್ ಅಮೃತೇನ ಮರಣನಿವಾರಕೇಣ ಕೇನಾಪಿ ಕವಚವಿಶೇಷೇಣ ಅಭಿವಸ್ತಾಮ್ ಅಭಿತಃ, ಆಚ್ಛಾದಯತು | (ಸೋಮನು / ಉಮಾಸಮೇತ ಹರನು / ಚಂದ್ರನು / ಸೋಮರಸಾಭಿಮಾನಿ ದೇವತೆಯು, ಪ್ರಕಾಶಿಸುತ್ತಿರುವ (ರಾಜಾ— ರಾಜ್ ದೀಪ್ತೌ), ಮರಣನಿವಾರಕವಾದ ಅದಾವುದೋ ಅಮೃತಮಯ ವಿಶೇಷಕವಚದಿಂದ, ನಿನ್ನನ್ನು ಎಲ್ಲೆಡೆಯಿಂದ ಆಚ್ಛಾದಿಸಲಿ / ಆವರಿಸಲಿ.) ತೇ ತವ ವರಿವಃ ಧನಮ್ ಉರೋಃ ವರೀಯಃ ಅಸ್ತು, ಅನ್ಯದೀಯಾತ್ ಅಧಿಕಾತ್ ಅಪಿ ಅತ್ಯನ್ತಮ್ ಅಧಿಕಮ್ ಅಸ್ತು | (ನಿನ್ನ ಧನಸಂಪತ್ತು / ಪೂಜನೀಯತೆ / ಗೌರವ / ಭಗವತ್ಪೂಜಾದಿಸೇವೆಯು ಅನ್ಯರಿಗಿಂತ ಅಧಿಕಾಧಿಕವಾಗಿ ವರ್ಧಿಸಲಿ.) ಜಯನ್ತಂ ವಿಜಯಂ ಪ್ರಾಪ್ನುವನ್ತಂ ತ್ವಾಂ ದೇವಾಃ, ಅನುಮದನ್ತು ಅನುಕೂಲಾಃ ಭೂತ್ವಾ ಹೃಷ್ಯನ್ತು || (ಹೀಗೆ, ಬದುಕಿನಲ್ಲಿ ಗೆಲುವನ್ನು ಹೊಂದುತ್ತಿರುವ ನಿನ್ನನ್ನು ದೇವತೆಗಳು ಅನುಕೂಲರಾಗಿ ವರ್ತಿಸಿ ಹರ್ಷಿತನನ್ನಾಗಿಸಲಿ / ಮುದಗೊಳಿಸಲಿ.)
(ಮರ್ಮ— ಮೃ ಮನಿನ್ / ಮೃಙ್ ಪ್ರಾಣತ್ಯಾಗೇ ಧಾತು. ಜೀವನಸ್ಥಾನ, ಸಂಧಿಸ್ಥಾನ, ತಾತ್ಪರ್ಯ ಎಂಬರ್ಥಗಳಿವೆ. “ಸನ್ನಿಪಾತಃ ಸಿರಾ-ಸ್ನಾಯು-ಸನ್ಧಿ-ಮಾಂಸಾಸ್ಥಿಸಮ್ಭವಃ | ಮರ್ಮಾಣಿ ತೇಷು ತಿಷ್ಠನ್ತಿ ಪ್ರಾಣಾಃ ಖಲು ವಿಶೇಷತಃ ||”— ಭಾವಪ್ರಕಾಶಸಂಹಿತಾ. ವಾತ-ಪಿತ್ತ-ಕಫಗಳೆಂಬ ತ್ರಿದೋಷಗಳ ವಿಕಾರೋತ್ಪಾದಕ ಮೇಲನವೇ ಸನ್ನಿಪಾತವು. ಸಿರಾ ಎಂದರೆ ನಾಡಿ. ಸ್ನಾಯು— ಮಾಂಸಪೇಶಿ / ಮಾಂಸವು ಮೂಳೆಗೆ ಸೇರುವ ಭಾಗ. ಸಂಧಿ— ಮೂಳೆಗಳ ಸೇರುವಿಕೆ / ಗಂಟು. ಮಾಂಸ, ಅಸ್ಥಿ— ಎಲುಬು / ಮೂಳೆ. ಇವುಗಳಲ್ಲಿ ಪ್ರಾಣವು ವಿಶೇಷವಾಗಿ ನೆಲೆಸಿರುವುದರಿಂದ ಮರ್ಮಸ್ಥಾನಗಳೆಂದು ಕರೆಯಲ್ಪಟ್ಟಿವೆ.)
ಈಶ್ವರಾತ್ಮನೇ ಕವಚಾಯ ಹುಮ್ ||
ಈಶ್ವರಾಂಶವೇ ನಮ್ಮ ಎದೆಗವಚವಾಗಿ ರಕ್ಷಕವಾಗಿದೆ. ಅಂತಹ ಹೃದಯರಕ್ಷಕವಾದ, ಈಶ್ವರಾತ್ಮಕವಾದ ಎದೆಗೂಡಿಗೆ ಶತ್ರುಬಾಧೆಗಳನ್ನು ತಿರಸ್ಕರಿಸುವ, ಪ್ರತಿಷೇಧ ಮಾಡುವ ಸಾಮರ್ಥ್ಯವಿದೆ. ಅಂತಹ ಈಶ್ವರಾತ್ಮಕವಾದ “ಹುಂ” ಎಂಬ ರಕ್ಷಾಮಂತ್ರಕವಚವು ನಮ್ಮನ್ನು ರಕ್ಷಿಸಲಿ. (ಹುಂ ಎಂದರೆ ವೇದ, ಸಂಸ್ಕೃತಗಳಲ್ಲಿ ಅವ್ಯಕ್ತವಾದ ಶತ್ರುಪ್ರತಿಷೇಧಸೂಚಕ, ವೈರಿತಿರಸ್ಕಾರಸೂಚಕ, ದುಷ್ಟಶಕ್ತಿ ಉಚ್ಚಾಟನಸೂಚಕ ಮಂತ್ರಮಯ ಶಬ್ದ. ಉದಾ— “ಕೇವಲ ತನ್ನ ಹುಂಕಾರಮಾತ್ರದಿಂದಲೇ ಮಹರ್ಷಿಗಳು ಅಸುರನನ್ನು ಭಸ್ಮಗೈದರು”, “ಹುಂ ಫಟ್ ಸ್ವಾಹಾ” ಮುಂತಾಗಿ ರಕ್ಷಾಮಂತ್ರ-ತಂತ್ರಾದಿಗಳಲ್ಲಿ ಪ್ರಯೋಗಗಳಿವೆ.)
ಓಂ ವಿಜ್ಯಂ ಧನುಃ ಕಪರ್ದಿನೋ ವಿಶಲ್ಯೋ ಬಾಣವಾಗ್ಂ ಉತ | ಅನೇಶನ್ನಸ್ಯೇಷವ ಆಭುರಸ್ಯ ನಿಷಙ್ಗಥಿಃ ||
(ತೈ.ಸಂ.೪.೫.೧.೧೨)
ಪದ-ವಿಭಾಗಃ —
ಓಮ್, ವಿಜ್ಯಮ್, ಧನುಃ, ಕಪರ್ದಿನಃ, ವಿಶಲ್ಯಃ, ಬಾಣವಾನ್, ಉತ, ಅನೇಶನ್ ಅಸ್ಯ ಇಷವಃ ಆಭುಃ ಅಸ್ಯ ನಿಷಙ್ಗಥಿಃ ||
ಸಾಯಣಭಾಷ್ಯಮ್—
ವಿಜ್ಯಂ ಧನುಃ— ಇತಿ | (ವಿಜ್ಯಂ ಧನುಃ….ಎಂಬುದಾಗಿ.) ಕಪರ್ದಃ ಜಟಾಜೂಟಃ, ಸಃ ಅಸ್ಯ ಅಸ್ತಿ ಇತಿ ಕಪರ್ದೀ ರುದ್ರಃ, ತಸ್ಯ ಧನುಃ ವಿಜ್ಯಂ ವಿಗತ-ಜ್ಯಾಕಮ್ ಅಸ್ತು | (ಕಪರ್ದವೆಂದರೆ ತಲೆಗೂದಲಿನ ಜಟೆ. ಅದು ಇವನಿಗೆ ಇದೆಯೆಂಬುದರಿಂದ ಕಪರ್ದೀ, ಎಂದರೆ ರುದ್ರನು. ಆತನ ಧನುಸ್ಸು / ಬಿಲ್ಲು ಹಗ್ಗ / ಶಿಂಜಿನಿಯಿಲ್ಲದುದಾಗಲಿ.) ಉತ ಅಪಿ ಚ ಬಾಣಾಃ, ಅಸ್ಮಿನ್, ತಿಷ್ಠನ್ತಿ ಇತಿ ಬಾಣವಾನ್ ಇಷುಧಿಃ | (ಹಾಗೆಯೇ, ಬಾಣಗಳು ಇದರಲ್ಲಿ ಇರುತ್ತವೆಂಬುದರಿಂದ ಬತ್ತಳಿಕೆಯು ಬಾಣವಾನ್, ಬಾಣವಂತ ಎನಿಸಿದೆ. “ಇಷವಃ ಧೀಯನ್ತೇ ಇಸ್ಮಿನ್ ಇತಿ ಇಷುಧಿಃ— ತೂಣೀರಃ, ತೂಣ್ಯತೇ ಪೂರ್ಯತೇ ಬಾಣೈಃ ಇತಿ”, “ಇಷ್ಯತಿ ಗಚ್ಛತಿ ಇತಿ ಇಷುಃ”— ಗತಿಶೀಲವಾದದ್ದಾದ್ದರಿಂದ ಇಷುವೆನಿಸಿದೆ ಬಾಣ.) ಸಃ, ಚ ವಿ-ಶಲ್ಯಃ ಅಸ್ತು | (ಅದು / ಈ ಬತ್ತಳಿಕೆಯಾದರೋ ಶಲ್ಯ / ಶಸ್ತ್ರ / ಶರ / ಬಾಣ ವಿರಹಿತವಾಗಲಿ. “ಶಲತಿ ಚಲತಿ ಇತಿ ಶಲ್ಯಃ, ಶೄಣಾತಿ ಹನ್ತಿ ಅನೇನ ಇತಿ ಶೄ ಹಿಂಸಾಯಾಂ ಶರಃ, ಬಣ ಶಬ್ದೇ ಗತೌ ವಾ ಬಾಣಃ, ಬಣನಂ ಶಬ್ದಃ, ತದ್ ಅಸ್ಯ ಅಸ್ತಿ ಇತಿ ಬಾಣಃ) ಇಷುಗತಾನಾಂ ಶಲ್ಯಾನಾಂ ತದ್-ಉದರೇ ಗೋಪಿತತ್ವೇನ ಬಹಿಃ ಆವಿರ್ಭೂತ-ಶಲ್ಯ-ರಹಿತಃ ಅಸ್ತು | (ಇಷುವೆನಿಸಿದ ಶಸ್ತ್ರಗಳ ಇಷುಧಿಯೊಳಗೆ ಸಂರಕ್ಷಿತವಾಗಿರುವಿಕೆಯಿಂದ, ಹೊರಬಂದ ಬಾಣಗಳಿಲ್ಲದಿರಲಿ ಅರ್ಥಾತ್, ಶಿಂಜಿನಿಗೆ ಪೋಣಿಸದೆ ಬಾಣಗಳು ಬತ್ತಳಿಕೆಯಲ್ಲೇ ಅಡಗಿರಲಿ, ರುದ್ರನ ಕೋಪದಿಂದ ನಮ್ಮೆಡೆಗೆ ಚಿಮ್ಮದಿರಲಿ.) ಅಸ್ಯ ರುದ್ರಸ್ಯ ಇಷವಃ, ಬಾಣಾಃ ಇಷುಧೌ ಪ್ರಕ್ಷಿಪ್ತಾಃ ಅನೇಶನ್ ವೇದ್ಧುಮ್ ಅಸಮರ್ಥಾಃ ಭವನ್ತು | (ಹೀಗಾಗಿ, ಇಂತಹ ರುದ್ರನ ಬಾಣಗಳು, ತೂಣೀರದಲ್ಲೇ ನಿಕ್ಷೇಪಿತವಾಗಿ, ಹೊರಬರದಿರುವುದರಿಂದ,ನಮ್ಮನ್ನು ತಿವಿಯಲು / ವೇಧನಮಾಡಲು ಶಕ್ತವಾಗದಿರಲಿ.) ಅಸ್ಯ ರುದ್ರಸ್ಯ ನಿಷಙ್ಗಥಿಃ ಬಾಣಾಧಾರಃ ಆಭುಃ ಅಸ್ತು, ಈಶತ್ ಪ್ರಭುಃ ಅಸ್ತು | (ಈ ರುದ್ರನ ಬಾಣಾಧಾರವು / ಬತ್ತಳಿಕೆಯು ಈಗಲೇ ಪ್ರಭುವಾಗಲಿ “ಆಶು ಪ್ರಭುಃ— ಆಭುಃ”) ಕುಡ್ಯನಿಖಾತಶಙ್ಖಾ ವಾ ಸಞ್ಚಿತತ್ವೇನ ಬಾಣಾನ್ ಧಾರಯಿತುಮೇವ ಪ್ರಭವತು, ನ ತು ಬಾಣಾಕರ್ಷಣಯೋಗ್ಯಃ, ಇತಿ ಅರ್ಥಃ | (ಮನೆಯ ಗೋಡೆಯನ್ನೂ ಭೇದಿಸಿ ಹರನ ಬಾಣವು ಬರುವ ಶಂಕೆಯಿಂರುವುದರಿಂದಲೋ ಎಂಬಂತೆ, ಸಂಗ್ರಹಕೋಷದಂತೆ ಬತ್ತಳಿಕೆಯು ಬಾಣಗಳನ್ನು ಧರಿಸಲು ಮಾತ್ರ ಸಮರ್ಥವಾಗಲಿ, ಬಾಣಗಳನ್ನು ಹೊರಬಿಡಲು ಶಕ್ತವಾಗದಿರಲಿ ಎಂದರ್ಥ.) ಅಥವಾ, ನಿಷಙ್ಗಥಿಃ ಖಡ್ಗಕೋಶಃ | ಸಃ ಅಪಿ ಪೂರ್ವವತ್ ಕ್ವಚಿತ್ ಆರೋಪಿತತ್ವೇನ ಖಡ್ಗಂ ಧಾರಯಿತುಮ್ ಏವ ಪ್ರಭವತು, ನ ತು ಖಡ್ಗಾಕರ್ಷಣಸಮರ್ಥಃ || (ಅಥವಾ— ನಿಷಂಗಥಿಯೆಂದರೆ ಕತ್ತಿಯ ಒರೆ. ಅದೂ ಸಹ, ಹಿಂದೆ ಹೇಳಿದ ಬತ್ತಳಿಕೆಯಂತೆಯೇ, ಖಡ್ಗವನ್ನು ಧಾರಣೆಮಾಡಲು ಮಾತ್ರ ಪೂರಕವಾಗಿರಲಿ ಹೊರತು ಖಡ್ಗಪ್ರಯೋಗಕ್ಕೆ ಅವಕಾಶನೀಡದಿರಲಿ. ಹೀಗೆ, ಶಿವನ ಬತ್ತಳಿಕೆ / ಕತ್ತಿಯ ಒರೆಯನ್ನೂ ಸದ್ಯಃಪ್ರಭುವಾಗಿ ಪ್ರಾರ್ಥಿಸಲಾಗಿದೆ.)
ತಾತ್ಪರ್ಯ—
ಜಟಾಜೂಟಧರನಾದ ರುದ್ರನ / ಕಪರ್ದಿಯ (ಕಪರ್ದಿನಃ) , ಪಿನಾಕವೆಂಬ ಬಿಲ್ಲು / ಧನುಸ್ಸು (ಧನುಃ) , ನಮ್ಮೆಡೆಗೆ ಜ್ಯಾ / ಶಿಂಜಿನಿ / ಹಗ್ಗವಿಲ್ಲದಂತಾಗಿ ಹಾನಿರಹಿತವಾಗಲಿ (ವಿಜ್ಯಮ್). ಆತನ ಬತ್ತಳಿಕೆ ಬರಿದಾಗಲಿ (ಬಾಣವಾನ್ ವಿಶಲ್ಯಃ) . ಅಥವಾ (ಉತ) , ಅದರಿಂದ ನಮ್ಮೆಡೆಗೆ ಬಾಣಗಳು ಚಿಮ್ಮಲು ಅಶಕ್ತವಾಗಲಿ (ಅಸ್ಯ ಇಷವಃ ಅನೇಶನ್) . ಆತನ ಒರೆಯಿಂದ ಕತ್ತಿಯು ನಮ್ಮೆಡೆಗೆ ಬೀಸದೆ ಅದರೊಳಗೇ ಸ್ಥಿರವಾಗಿರಲಿ (ಅಸ್ಯ ನಿಷಙ್ಗಥಿಃ ಆಭುಃ) . ಹೀಗೆ ರುದ್ರನು ನಮ್ಮೆಡೆಗೆ ಶಿವಕರನಾಗಲಿ / ಮಂಗಲಕರನಾಗಲಿ.
ಸದಾಶಿವಾತ್ಮನೇ ನೇತ್ರತ್ರಯಾಯ ವೌಷಟ್ ||
ಸರ್ವಮೂಲನಾದ ಸದಾಶಿವನು ನಮ್ಮ ನೇತ್ರೇಂದ್ರಿಯದಲ್ಲಿ ಸ್ಥಿತನಾಗಿ ಮಾರ್ಗದರ್ಶನ ಮಾಡುತ್ತಾನೆ; ಜಗತ್ತನ್ನೇ ನಮಗೆ ತೋರಿಕೊಡುತ್ತಾನೆ. ಪರಮಪುರುಷನು ನಮ್ಮ ಕಣ್ಣಿನಲ್ಲಿರುವನೆಂದು ಉಪನಿಷತ್ತೂ ಹೇಳಿದೆ. ಅದಕ್ಕಾಗಿಯೇ “ಸರ್ವೇಂದ್ರಿಯಾಣಾಂ ನಯನಂ ಪ್ರಧಾನಮ್” ಅಲ್ಲವೆ? ಹೀಗೆ ಸೂರ್ಯಾತ್ಮಕವಾದ ಬಲಗಣ್ಣು, ಚಂದ್ರಾತ್ಮಕವಾದ ಎಡಗಣ್ಣು ಹಾಗೂ ಜ್ಞಾನಾತ್ಮಕವಾದ ಮೂರನೆಯ ಕಣ್ಣು— ಹೀಗೆ ತ್ರಿನೇತ್ರನಾದವನು ಅವ್ಯಕ್ತಪರಮಾತ್ಮನಾದ ಸದಾಶಿವನು. ಆತನ ವ್ಯಕ್ತವಾಗಿರುವ ಪ್ರತಿರೂಪವೇ ಈ ಸಮಸ್ತ ಸೃಷ್ಟಿ. ಹಾಗಾಗಿ, ನಮ್ಮ ನೇತ್ರೇಂದ್ರಿಯದಲ್ಲಿರುವ ಸದಾಶಿವಾತ್ಮನಿಗಿದೋ ನಾನು ನನ್ನನ್ನೇ ಸಮರ್ಪಿಸಿಕೊಳ್ಳುತ್ತಿದ್ದೇನೆ. ಹಿಂದೆಯೇ ಹೇಳಿದಂತೆ, ಸ್ವಾಹಾ, ಸ್ವಧಾ, ವಷಟ್, ವೌಷಟ್, ಶ್ರೌಷಟ್ ಗಳು ಯಜ್ಞಮುಖದಲ್ಲಿ ದೇವತೆಗಳಿಗೆ ಹವಿಸ್ಸಿನ ಸಮರ್ಪಣೆಯ ಸೂಚಕಗಳು ಹಾಗೂ “ನಮಃ” ಎಂಬುದು ದೇವತಾರಾಧನೆಯಲ್ಲಿ ಬರುವ ಇನ್ನೊಂದು “ನ ಮಮ” ಇದು ನನ್ನದಲ್ಲ, ಎಲ್ಲವೂ ನೀನಿತ್ತುದೇ ಎಂಬರ್ಥದ ನಮಸ್ಕಾರವಾಚಕ ಶಬ್ದ. (ಹಿಂದೆ ಬಹುಶಃ “ಶಿಖಾಯೈ ವಷಟ್” ಎಂಬಲ್ಲಿ ಶಿಖೆಯು ಏಕವಚನವಾದುದರಿಂದಲೋ ಎಂಬಂತೆ “ವ - ಷಟ್” ಎಂದರೆ, ಇಲ್ಲಿ ಕಣ್ಣುಗಳೆರಡು ಎಂಬರ್ಥದಲ್ಲಿ “ವೌ - ಷಟ್” ರಾಮಃ ರಾಮೌ ಎಂದಂತೆ, ದ್ವಿವಚನಾರ್ಥಕವೆಂದೂ ಅರ್ಥೈಸಬಹುದು.)
ಓಂ ಸಹಸ್ರಾಣಿ ಸಹಸ್ರಧಾ ಬಾಹುವೋಸ್ತವ ಹೇತಯಃ | ತಾಸಾಮೀಶಾನೋ ಭಗವಃ ಪರಾಚೀನಾ ಮುಖಾ ಕೃಧಿ ||
(ತೈ.ಸಂ.೪.೫.೧೦.೧೨)
ಪದ-ವಿಭಾಗಃ —
ಓಮ್, ಸಹಸ್ರಾಣಿ, ಸಹಸ್ರಧಾ, ಬಾಹುವೋಃ, ತವ, ಹೇತಯಃ | ತಾಸಾಮ್, ಈಶಾನಃ, ಭಗವಃ, ಪರಾಚೀನಾ, ಮುಖಾ, ಕೃಧಿ ||
ಸಾಯಣಭಾಷ್ಯಮ್—
ಸಹಸ್ರಾಣಿ— ಇತಿ | (ಸಹಸ್ರಾಣಿ….ಎಂಬ ಮಂತ್ರ) ಹೇ ರುದ್ರ! ತವ ಬಾಹುವೋಃ ಹಸ್ತಯೋಃ ಹೇತಯಃ ಸಹಸ್ರಧಾ ಸಹಸ್ರಪ್ರಕಾರಾಃ ಸಹಸ್ರಾಣಿ ಸಹಸ್ರಸಙ್ಖ್ಯಾಕಾಃ ವಿದ್ಯನ್ತೇ | (ಹೇ ರುದ್ರನೇ! ನಿನ್ನ ತೋಳು-ಕರಗಳ ಆಯುಧಗಳು ಸಾವಿರಾರು ವಿಧವಾಗಿವೆ; ಸಹಸ್ರಾರುಸಂಖ್ಯೆಯಲ್ಲಿವೆ) ಹೇತ್ಯುಃ ಖಡ್ಗ-ಅಸಿ-ಶೂಲಮ್ ಇತಿ ಏವಂ ಜಾತಿಭೇದೇನ ಸಹಸ್ರಪ್ರಕಾರತ್ವಮ್ | (ಶಸ್ತ್ರ / ಆಯುಧ ಕ್ಕೆ ಖಡ್ಗ, ಕತ್ತಿ, ಈಟಿ ಎಂದುಮುಂತಾಗಿ ಆಕಾರಭೇದದಿಂದ ಸಾವಿರಾರುವಿಧದ ಭೇದಗಳಿವೆ.)_ ಏಕೈಕಸ್ಯಾಂ ಜಾತೌ ಬಹವಃ ಸಹಸ್ರಸಙ್ಖ್ಯಾಕಾಃ | (ಇಂತಹ ಒಂದೊಂದು ಜಾತಿಯಲ್ಲೂ ಬಹಳ ಸಾವಿರಾರುಸಂಖ್ಯೆಯವು ಇವೆ.) ಹೇ ಭಗವಃ! ಷಡ್ಗುಣೋಪೇತ! ತ್ವಮ್ ಈಶಾನಃ ಸಮರ್ಥಃ ಸಂರತಾನಾಂ ತಾಸಾಂ ಹೇತೀನಾಂ ಮುಖಾ ಮುಖಾನಿ ಶಲ್ಯಾನಿ ಪರಾಚೀನಾ ಕೃಧಿ ಅಸ್ಮತ್ತಃ ಪರಾಙ್ಮುಖಾನಿ ಕುರು || (ಈಶ್ವರತ್ವ / ಐಶ್ವರ್ಯ, ವೀರ್ಯ / ಪರಾಕ್ರಮ, ಯಶಸ್ಸು / ಕೀರ್ತಿ, ಶ್ರೀ / ಸಿರಿಸಂಪದ, ಜ್ಞಾನ ಹಾಗೂ ವೈರಾಗ್ಯ— ಈ ೬ ಗುಣಗಳು / ಭಗ, ಪರಿಪೂರ್ಣವಾಗಿ ಇರುವುದರಿಂದ ಭಗ-ವಾನ್ ಎನಿಸಿದ ರುದ್ರನೆ! ನೀನು ಸರ್ವಸಮರ್ಥನೂ, ಸರ್ವಶಕ್ತನೂ ಆಗಿ ಈಶಾನನೆನಿಸಿರುವೆ. ಸಂಗರ / ಸಮರದಲ್ಲಿ ನಿರತವಾಗಿರುವ / ತೊಡಗಿರುವ ನಿನ್ನ ಆಯುಧಗಳ ಹರಿತವಾದ ಬಾಯಿ / ಮುಖ ಗಳನ್ನು ನಮ್ಮೆಡೆಯಿಂದ ಪರಾಙ್ಮುಖಗೊಳಿಸು / ನಮ್ಮೆಡೆಗೆ ಗುರಿಮಾಡದೇ, ಬೇರೆಡೆಗೆ ತಿರುಗಿಸು ಹೇ ಶಂಭೋ!!! ನಮಗೆ ನೀನು ಶಾಂತಶಿವನಾಗು.)
ಸರ್ವಾತ್ಮನೇ ಅಸ್ತ್ರಾಯ ಫಟ್ ||
ಎಲ್ಲರೊಳಗಿದ್ದು ಸರ್ವಾತ್ಮಕನಾದ ಪರಮೇಶ್ವರನೆಂಬ ಲೋಕರಕ್ಷಕ ಅಸ್ತ್ರ (ಮಂತ್ರಪೂರ್ವಕ ಶಸ್ತ್ರ)ಕ್ಕೆ ವಂದನೆಗಳು. ಸರ್ವದೇವತೆಗಳೂ ನೆಲೆಸಿರುವ ನಮ್ಮ ಅಂಗೈಗಳಿಂದ ದೇವದೇವನಿಗೆ ನಮಸ್ಕಾರ. ಮಂತ್ರಪೂರ್ವಕವಾದ “ಫಟ್” ಎಂಬ ಕರತಾಡನದ ಶಬ್ದದೊಂದಿಗೆ ದುಷ್ಟಶಕ್ತಿಗಳು, ಚಿತ್ತಚಾಂಚಲ್ಯಗಳು ದೂರವಾಗಲಿ. ಹೀಗೆ ಅನಿಷ್ಟದೂರೀಕರಣಕ್ಕೆ “ಫಟ್” ಕಾರವು ಯಶಸ್ಕರವಾದ ಅಸ್ತ್ರವಾಗಲಿ. ಮುದ್ರಾವಿಜ್ಞಾನದ ಪ್ರಕಾರ ಪಂಚಭೂತಗಳ ತತ್ತ್ವಗಳು ೫ ಬೆರಳುಗಳಲ್ಲಿವೆ. ನಮ್ಮ ಶರೀರವೂ ಪಂಚಭೂತಾತ್ಮಕವಾದುದು. ಹೀಗಾಗಿ, ಅಂಗೈಗಳು ಇಡಿಯ ಶರೀರವನ್ನೇ ಪ್ರತಿನಿಧಿಸುತ್ತವೆ. ನಮ್ಮ ರಕ್ಷಣೆಗಾಗಿ ನಾವು ಅವಲಂಬಿಸುವುದು ಮೊತ್ತಮೊದಲಿಗೆ ಈ ಅಂಗೈ ಅಥವಾ ಅಂಗೈಯಲ್ಲಿನ ಆಯುಧವನ್ನು. ಹೀಗಾಗಿ ಕರನ್ಯಾಸ, ಅಂಗನ್ಯಾಸಗಳಲ್ಲಿ ಕರತಾಡನವೆಂಬ ಕೊನೆಯ ಅಂಗವು ನಮ್ಮ ರಕ್ಷಣೆಗಾಗಿ ಹಾಗೂ ದುಷ್ಟಶಕ್ತಿನಿರೋಧಕ್ಕಾಗಿ ಮಾಡುವ ದಿಗ್ಬಂಧವಾಗಿದೆ. ಆಕ್ಯುಪ್ರೆಷರ್ ನ ಪ್ರಕಾರ ಅಂಗೈಯು ಪೂರ್ಣಮೆದುಳನ್ನು ಪ್ರತಿನಿಧಿಸುವುದು. ಹೀಗಾಗಿ, ಕರತಾಡನದಿಂದ ನಾವು ನಮ್ಮ ಮಸ್ತಿಷ್ಕವನ್ನು ಪ್ರಚೋದಿಸಿ, ಜಾಗೃತಗೊಳಿಸಿ, ಎಚ್ಚರವಾಗಿರಲು ಸಹಕಾರಿಯಾಗುತ್ತದೆ. “ಫಟ್” ಎಂದರೆ ಅನುಕರಣಶಬ್ದ. ಕರತಾಡನದಿಂದ ಬರುವ ಶಬ್ದಕ್ಕೆ ಸಂವಾದಿಯಾದದ್ದು; ಅದನ್ನನುಕರಿಸುವಂಥ ಶಬ್ದ. “ಫಟ್” ಎಂದರೆ ಅಸ್ತ್ರಬೀಜ. “ಫಡಸ್ತ್ರಂ ಶಸ್ತ್ರಮಾಯುಧಮ್”— ಫಟ್ ಎಂಬುದು ಅಸ್ತ್ರ, ಶಸ್ತ್ರ ಮತ್ತು ಆಯುಧ. ಇನ್ನು, ಸ್ವಾಹಾಕಾರದ ಬದಲೂ ಸಹ ಫಟ್ ಕಾರವನ್ನು ಪ್ರಯೋಗಿಸಲಾಗುತ್ತದೆಂಬುದು ವೇದಭಾಷ್ಯಕಾರ ಮಹೀಧರನ ಮತ. ಈ ಅರ್ಥದಲ್ಲಿ ದೇವತಾವಂದನೆ, ಸಮರ್ಪಣೆಗಳೆಂಬ ಅರ್ಥವೂ ಬರುತ್ತದೆ.
[ಟಿಪ್ಪಣಿ— ಕರಷಡಂಗನ್ಯಾಸದ ಪಾಠಾಂತರ— ಅಗ್ನಿಹೋತ್ರಾತ್ಮನೇ ಅಂಗುಷ್ಠಾಭ್ಯಾಂ ನಮಃ (ಅಗ್ನಿಹೋತ್ರಸ್ವರೂಪಿಯಾದ ರುದ್ರನು ಎರಡೂ ಹೆಬ್ಬೆರಳುಗಳಲ್ಲಿರಲಿ. ಆತನಿಗೆ ನಮನ.)| ದರ್ಶಪೂರ್ಣಾತ್ಮನೇ ತರ್ಜನೀಭ್ಯಾಂ ನಮಃ (ದರ್ಶ-ಪೂರ್ಣಮಾಸ-ಸ್ವರೂಪಿಯಾದ ಹರನು ನನ್ನೆರಡು ತೋರುಬೆರಳುಗಳಲ್ಲಿ ನೆಲೆಸಿರಲಿ. ಅಂಥವನಿಗೆ ನಮಸ್ಕಾರ.)| ಚಾತುರ್ಮಾಸ್ಯಾತ್ಮನೇ ಮಧ್ಯಮಾಭ್ಯಾಂ ನಮಃ (ಚಾತುರ್ಮಾಸ್ಯ ಸ್ವರೂಪನಾದ ಭವನು ನನ್ನೆರಡೂ ನಡುಬೆರಳುಗಳಲ್ಲಿರಲಿ. ಆತನಿಗೆ ನಮಸ್ಕಾರ.)| ನಿರೂಢಪಶುಬಂಧಾತ್ಮನೇ ಅನಾಮಿಕಾಭ್ಯಾಂ ನಮಃ (ನಿರೂಢಪಶುಬಂಧ ಸ್ವರೂಪನಾದ ಶರ್ವನು ನನ್ನೆರಡೂ ಉಂಗುರಬೆರಳುಗಳಲ್ಲಿರಲಿ. ಆತನಿಗೆ ನಮಸ್ಕಾರ.) | ಜ್ಯೋತಿಷ್ಟೋಮಾತ್ಮನೇ ಕನಿಷ್ಠಿಕಾಭ್ಯಾಂ ನಮಃ (ಜ್ಯೋತಿಷ್ಟೋಮಯಾಗಸ್ವರೂಪನಾದ ಉಮಾಮಹೇಶ್ವರನು ನನ್ನೆರಡೂ ಕಿರುಬೆರಳುಗಳಲ್ಲಿ ಸಾನ್ನಿಧ್ಯ ವಹಿಸಲಿ. ಅವನಿಗೆ ನಮಸ್ಕಾರ.) | ಸರ್ವಕ್ರತ್ವಾತ್ಮನೇ ಕರತಲ-ಕರಪೃಷ್ಠಾಭ್ಯಾಂ ನಮಃ (ಸರ್ವಯಜ್ಞಗಳ ರೂಪನಾದ ಪರಮೇಶ್ವರನು ಅಂಗೈ ಹಾಗೂ ಹಸ್ತಗಳ ಹಿಂಬದಿಗಳಲ್ಲಿ ನೆಲೆಸಿರಲಿ. ಅವನಿಗೆ ನಮನಗಳು.)| (ಇತಿ ಕರನ್ಯಾಸಃ) || (ಇದೇ ರೀತಿಯಲ್ಲಿ ಹೃದಯಾದಿ ಷಡಂಗಗಳಲ್ಲೂ ಪರಶಿವನ ರೂಪಗಳನ್ನು ನ್ಯಾಸಮಾಡಬೇಕು / ಇಡಬೇಕು.) ಅಗ್ನಿಹೋತ್ರಾತ್ಮನೇ ಹೃದಯಾಯ ನಮಃ | ದರ್ಶಪೂರ್ಣಾತ್ಮನೇ ಶಿರಸೇ ಸ್ವಾಹಾ | ಚಾತುರ್ಮಾಸ್ಯಾತ್ಮನೇ ಶಿಖಾಯೈ ವಷಟ್ | ನಿರೂಢಪಶುಬಂಧಾತ್ಮನೇ ಕವಚಾಯ ಹುಮ್ | ಜ್ಯೋತಿಷ್ಟೋಮಾತ್ಮನೇ ನೇತ್ರತ್ರಯಾಯ ವೌಷಟ್ | ಸರ್ವಕ್ರತ್ವಾತ್ಮನೇ ಅಸ್ತ್ರಾಯ ಫಟ್ | (ಇತಿ ಅಂಗನ್ಯಾಸಃ) || ಭೂರ್ಭುವಸ್ಸುವರೋಮಿತಿ ದಿಗ್ಬಂಧಃ || (ಇಲ್ಲಿ ಅಗ್ನಿಹೋತ್ರ, ದರ್ಶಪೂರ್ಣ, ಚಾತುರ್ಮಾಸ್ಯ, ನಿರೂಢಪಶುಬಂಧ, ಜ್ಯೋತಿಷ್ಟೋಮ ಎಂಬ ಯಾಗಗಳನ್ನೂ, ಸರ್ವ ಕ್ರತುಗಳನ್ನೂ ಉಲ್ಲೇಖಿಸಿದೆ. ಭೂಃ, ಭುವಃ, ಸುವಃ, ಓಮ್ ಎಂಬುದಾಗಿ ಗಾಯತ್ರಿಯ ತ್ರಿವ್ಯಾಹೃತಿಗಳನ್ನು ಪ್ರಣವಸಹಿತವಾಗಿ ದಿಗ್ಬಂಧಮಂತ್ರವಾಗಿ ಪ್ರಯೋಗಿಸಲಾಗಿದೆ.) ]
೯೪) ಲಘುನ್ಯಾಸದ ಕೊನೆಗೆ ಪುನಃ ರುದ್ರಧ್ಯಾನವನ್ನು ಹೇಗೆ ಮಾಡಲಾಗುವುದು?
ಧ್ಯಾನಮ್
ಆ-ಪಾತಾಲ-ನಭಸ್ಥಲಾನ್ತಭುವನ-
-ಬ್ರಹ್ಮಾಣ್ಡಮಾವಿಸ್ಫುರತ್
ಜ್ಯೋತಿ-ಸ್ಫಾಟಿಕಲಿಙ್ಗ-ಮೌಲಿವಿಲಸತ್-
-ಪೂರ್ಣೇನ್ದುವಾನ್ತಾಮೃತೈಃ |
ಅಸ್ತೋಕಾಪ್ಲುತಮೇಕಮೀಶಮನಿಶಂ
ರುದ್ರಾನುವಾಕಾನ್ ಜಪನ್
ಧ್ಯಾಯೇದೀಪ್ಸಿತಸಿದ್ಧಯೇ ಧ್ರುವಪದಂ
ವಿಪ್ರೋऽಭಿಷಿಞ್ಚೇಚ್ಛಿವಮ್ ||
(“ಸೂರ್ಯಾಶ್ವೈರ್ಮಸಜಸ್ತಥಾ ಸಗುರವಃ ಶಾರ್ದೂಲವಿಕ್ರೀಡಿತಮ್”— ೧೯ ಅಕ್ಷರಗಳ ವೃತ್ತಿಯ ಅತಿಧೃತಿಯೆಂಬ ವೈದಿಕಚ್ಛಂದಸ್ಸಿನಿಂದ ಉದಿಸಿದ ಲೌಕಿಕವಾದ ಶಾರ್ದೂಲವಿಕ್ರೀಡಿತವೃತ್ತಮ್)
ಪಾತಾಲದಿಂದ ಆರಂಭಿಸಿ ನಭ / ಅಂತರಿಕ್ಷದ ತನಕ ವ್ಯಾಪಿಸಿರುವ ಸಕಲಭುವನಗಳ ಸಮೂಹವಾದ ಇಡೀ ಬ್ರಹ್ಮಾಂಡವನ್ನೆಲ್ಲಾ ಆವರಿಸಿ ಪ್ರಕಾಶಿಸುತ್ತಿರುವ ಜ್ಯೋತಿಸ್ಫಟಿಕಲಿಂಗದ ಮೌಲಿ / ಶಿರ ದಲ್ಲಿ ವಿಲಾಸಿಸುತ್ತಿರುವ ಪೂರ್ಣಚಂದ್ರನಿಂದ ವಾಂತ / ವಮಿತ / ಹೊರಚೆಲ್ಲಿದ ಅಮೃತತುಲ್ಯ ಬೆಳದಿಂಗಳೆಂಬ, ಬಿಂದುವಲ್ಲದ ಅಖಂಡಸಿಂಧುವಿನಿಂದ (ಅಸ್ತೋಕ), ಸತತವಾಗಿ (ಅನಿಶಮ್), ತೋಯ್ದ / ಅಭಿಷಿಕ್ತವಾದ (ಆಪ್ಲುತಮ್), ಏಕಮೇವಾದ್ವಿತೀಯನಾದ (ಏಕಮ್), ಶಾಶ್ವತಗತಿಯಾದ (ಧ್ರುವಪದಮ್) ಈಶನನ್ನು (ಈಶಮ್), ವೇದಾಧ್ಯಾಯಿಯು (ವಿಪ್ರಃ), ತನ್ನ ಅಭೀಷ್ಟಸಿದ್ಧಿಗಾಗಿ ರುದ್ರಪ್ರಶ್ನದ ೧೧ ಅನುವಾಕಗಳನ್ನು ತ್ವರಿತರುದ್ರ ಹಾಗೂ ಚಮಕಪ್ರಶ್ನಸಹಿತವಾಗಿ ಜಪಿಸುತ್ತಾ / ಪಠಿಸುತ್ತಾ, ಕೊನೆಗೆ ಪುರುಷಸೂಕ್ತವನ್ನೂ ಪಠಿಸುತ್ತಾ, ಧ್ಯಾನಿಸಬೇಕು ಹಾಗೂ ಆ ಪರಶಿವನ ಪ್ರತೀಕವನ್ನು ಅಭಿಷೇಕ ಮಾಡಬೇಕು.
ಶಾನ್ತಂ ಪದ್ಮಾಸನಸ್ಥಂ ಶಶಧರಮಕುಟಂ
ಪಞ್ಚವಕ್ತ್ರಂ ತ್ರಿಣೇತ್ರಂ
ಶೂಲಂ ವಜ್ರಂ ಚ ಖಡ್ಗಂ ಪರಶುಮಭಯಮ-
ಪ್ಯೇಕಭಾಗೇ ವಹನ್ತಮ್ |
ನಾಗಂ ಪಾಶಂ ಚ ಘಣ್ಟಾಮಥ ವರದಕರಂ
ಸಾಙ್ಕುಶಂ ವಾಮಭಾಗೇ
ಸರ್ವಾಲಙ್ಕಾರದೀಪ್ತಂ ಸ್ಪಟಿಕಮಣಿನಿಭಂ
ನೌಮಿ ಸಾದಾಶಿವಾಖ್ಯಮ್ ||
(ಏಕವಿಂಶತ್ಯಕ್ಷರಾ ವೃತ್ತಿಃ; ಪ್ರಕೃತಿಶ್ಛನ್ದಃ; ಸ್ರಗ್ಧರಾವೃತ್ತಮ್— “ಮ್ರಭ್ನೈರ್ಯಾನಾಂ ತ್ರಯೇಣ ತ್ರಿಮುನಿಯತಿಯುತಾ ಸ್ರಗ್ಧರಾ ಕೀರ್ತಿತೇऽಯಮ್”)
ಶಾಂತಮೂರ್ತಿಯೂ, ಪದ್ಮಾಸನಸ್ಥಿತನೂ, ಶಶಾಂಕಮೌಳಿಯೂ, (ಸದ್ಯೋಜಾತ, ವಾಮದೇವ, ಅಘೋರ, ಈಶಾನ, ತತ್ಪುರುಷ ಎಂಬ) ಪಂಚಮುಖನೂ, ಮುಕ್ಕಣ್ಣನೂ, ಬಲಭಾಗದ ಕರಗಳಲ್ಲಿ ತ್ರಿಶೂಲ, ವಜ್ರಾಯುಧ, ಖಡ್ಗ, ಪರಶು / ಕೊಡಲಿ ಹಾಗೂ ಅಭಯಕರಮುದ್ರಾಂಕಿತನಾದ, ಎಡಭಾಗದಲ್ಲಿ ನಾಗ / ಸರ್ಪ, ಪಾಶ / ಹಗ್ಗ, ಘಂಟೆ / ಡಮರು, ಅಂಕುಶ ಹಾಗೂ ವರದಮುದ್ರಾಂಕಿತನಾದ, ಸಕಲ ಅಲಂಕಾರವಿಭೂಷಿತನಾಗಿ ಸ್ಫಟಿಕಮಣಿಯಂತೆ ಹೊಳೆಯುವ ಮೂಲ ಸದಾಶಿವನಿಗೆ ನೇರವಾಗಿ ಸಂಬಂಧಿಸಿದವನೆನ್ನಲಾದ ರುದ್ರಮೂರ್ತಿಯನ್ನು ನಮಿಸುತ್ತೇನೆ.
ಬ್ರಹ್ಮಾಣ್ಡವ್ಯಾಪ್ತದೇಹಾ ಭಸಿತಶಶಿರುಚೋ
ಭಾಸಯನ್ತೋ ಭುಜಙ್ಗೈಃ
ಕಂಠೇ ಕಾಲಾಃ ಕಪರ್ದಾಃ ಕಲಿತಶಶಿಕಲಾ-
-ಶ್ಚಣ್ಡಕೋದಣ್ಡಹಸ್ತಾಃ |
ತ್ರ್ಯಕ್ಷಾ ರುದ್ರಾಕ್ಷಭೂಷಾಃ ಪ್ರಣತಭಯಹರಾಃ
ಶಾಮ್ಭವಾ ಮೂರ್ತಿಭೇದಾಃ
ರುದ್ರಾಃ ಶ್ರೀರುದ್ರಸೂಕ್ತಪ್ರಕಟಿತವಿಭವಾಃ
ನಃ ಪ್ರಯಚ್ಛನ್ತು ಸೌಖ್ಯಮ್ ||
(ಏಕವಿಂಶತ್ಯಕ್ಷರಾ ವೃತ್ತಿಃ; ಪ್ರಕೃತಿಶ್ಛನ್ದಃ; ಸ್ರಗ್ಧರಾವೃತ್ತಮ್— “ಮ್ರಭ್ನೈರ್ಯಾನಾಂ ತ್ರಯೇಣ ತ್ರಿಮುನಿಯತಿಯುತಾ ಸ್ರಗ್ಧರಾ ಕೀರ್ತಿತೇऽಯಮ್”)
ಇಡಿಯ ಈ ಬ್ರಹ್ಮಾಂಡವನ್ನೇ ವ್ಯಾಪಿಸಿರುವ ದೇಹವುಳ್ಳವರಾದ, ಭಸ್ಮಲೇಪನ-ಚಂದ್ರಮೌಳಿತ್ವಗಳಿಂದ ಸುಶೋಭಿತರಾದ, ಸರ್ಪಾಭರಣವಿಭೂಷಿತರಾಗಿ ಬೆಳಗುತ್ತಿರುವವರಾದ, ಕಂಠದಲ್ಲಿ ಕಾಲಕೂಟವಿಷವನ್ನುಂಡು ಕಪ್ಪುಬಣ್ಣವುಳ್ಳ, ಕಪರ್ದ / ಜಟಾಜೂಟ / ಜಟೆ ಉಳ್ಳವರಾಗಿ, ಶಶಿಕಲೆ / ಚಂದ್ರಕಲೆ / (ಅಮಾವಾಸ್ಯೆಯಿಂದ ಪಾಡ್ಯದ ಮೂಲಕ ಹುಣ್ಣಿಮೆವರೆಗಿನ ೧೬) ಚಂದ್ರನ ಷೋಡಶಕಲೆಗಳಲ್ಲಿ ಒಂದು ಚಂದ್ರಕಲೆಯನ್ನು / ಅಂಶವನ್ನು ಧರಿಸಿದವರಾದ, ಪ್ರಚಂಡವಾದ / ತೀಕ್ಷ್ಣವಾದ / ಹರಿತವಾದ / ನಿಶಿತವಾದ / ಕೋಪಾವಿಷ್ಟವಾಗಿ ಹೂಡಿರುವ ಕೋದಂಡವನ್ನು (“ಕು ಶಬ್ದೇ”— ಕು ಅಂದರೆ ಕೂಜನ, ಶಬ್ದ. “ಕೌಃ ಶಬ್ದಾಯಮಾನಃ ದಣ್ಡಃ ಅಸ್ಯ ಇತಿ ಕೋದಣ್ಡಮ್”— ಕಾವ್ ಎಂಬ ಶಬ್ದವನ್ನುಂಟುಮಾಡುವ ದಂಡವು ಇದಕ್ಕಿದೆ ಎಂಬುದರಿಂದ ಕೋದಂಡವೆನಿಸಿದೆ) ಹಸ್ತದಲ್ಲಿ ಧರಿಸಿದವರಾದ, ಮುಕ್ಕಣ್ಣರಾದ / ತ್ರಿ-ಅಕ್ಷಿಯುಳ್ಳವರಾಗಿ ತ್ರ್ಯಕ್ಷರೆನಿಸಿದ, ರುದ್ರಾಕ್ಷಿಯಿಂದ ಭೂಷಿತರಾದ, ತಮ್ಮನ್ನು ಪ್ರಣಾಮಮಾಡುವವರ ಭಯವನ್ನು ಹೋಗಲಾಡಿಸುವವರಾದ, ಆ ಪರಶಿವನಾದ ಶಂಭುವಿನಿಂದ ಉದ್ಭವಿಸಿದ / ಶಂಭುವಿಗೆ ಸಂಬಂಧಿಸಿದವರೂ, ಆಪ್ತರೂ, ಆತನ ಪ್ರತಿರೂಪರೂ, ಅವತಾರಿಗಳೂ ಆಗಿ ಶಾಂಭವರೆನಿಸಿದ, ಆತನಿಗಿಂತ ಮೂರ್ತಿ / ದೇಹ ಮಾತ್ರ ಬೇರೆಯಾಗಿರುವ ಆದರೆ ಆತನ ಶಕ್ತಿಸ್ವರೂಪರೇ ಆದ, ಶ್ರೀರುದ್ರಸೂಕ್ತಾದಿ ಮಂತ್ರಗಳ ಪ್ರಕಾಶಕ್ಕೆ ಕಾರಣರಾದ ಅಥವಾ ರುದ್ರಮಂತ್ರಗಳಲ್ಲಿ ವರ್ಣಿಸಿರುವ ವಿಭವ / ಮಹಿಮೆ / ವೈಭವ ವುಳ್ಳ, ಏಕಾದಶ (೧೧) / ಶತ / ಸಹಸ್ರ / ಅನಂತ ರುದ್ರರ ಸಮೂಹವು / ರುದ್ರಗಣಗಳು / ರುದ್ರರು, ನಮಗೆ (ನಃ), ಸೌಖ್ಯವನ್ನು (“ಸುಖಸ್ಯ ಭಾವಃ ಸೌಖ್ಯಮ್”— ಸುಖದ ಭಾವನೆಯೇ ಸೌಖ್ಯವು) ದಯಪಾಲಿಸಲಿ (ಪ್ರ-ಯಚ್ಛನ್ತು).
ಸ್ಮೇರಾನನಂ ಚನ್ದ್ರಕಲಾವತಂಸಂ
ಗಙ್ಗಾಧರಂ ಶೈಲಸುತಾಸಹಾಯಮ್ |
ತ್ರಿಲೋಚನಂ ಭಸ್ಮಭುಜಙ್ಗಭೂಷಂ
ಧ್ಯಾಯೇತ್ ಪಶೂನಾಂ ಪತಿಮೀಶಿತಾರಮ್ ||
(“ಸ್ಯಾದಿನ್ದ್ರವಜ್ರಾ ಯದಿ ತೌ ಜಗೌ ಗಃ”― ಏಕಾದಶಾಕ್ಷರವೃತ್ತ್ಯಾಂ ವೈದಿಕೇ ತ್ರಿಷ್ಟುಪ್-ಛನ್ದಸಿ ಲೌಕಿಕಮ್ ಇನ್ದ್ರವಜ್ರಾವೃತ್ತಮ್; "ಉಪೇನ್ದ್ರವಜ್ರಾ ಜತಜಾಸ್ತತೋ ಗೌ"— ಇಂದ್ರವಜ್ರಾ, ಉಪೇಂದ್ರವಜ್ರಾ ವೃತ್ತಗಳ ಮಿಶ್ರಣವಾದ ಇದು "ಉಪಜಾತಿವೃತ್ತ".)
ಮಂದಸ್ಮಿತವದನನಾದ / ನಗುಮುಖದವನಾದ, ಚಂದ್ರಾಂಶವನ್ನು / ಶಶಿಖಂಡವನ್ನು ಶಿರೋಭೂಷಣವನ್ನಾಗಿ ಧರಿಸಿದ, ಗಂಗಾನದಿಯ ಅಭಿಮಾನಿದೇವತೆಯಾದ ಗಂಗಾಮಾತೆಯನ್ನು ಜಟೆಯಲ್ಲಿ ಧರಿಸಿ ಗಂಗಾಧರನಾದ, ಪರ್ವತರಾಜನಾದ ಹಿಮವಂತನ ಪುತ್ರಿ ಪಾರ್ವತಿಯ ಸಹಚಾರಿಯೂ ಸಹಾಯಕಾರಿಯೂ ಸಹವರ್ತಿಯೂ ವಲ್ಲಭನೂ ಆದ (“ಸಹ ಅಯತೇ ಗಚ್ಛತಿ ಇತಿ ಸಹಾಯಃ, ಅಯ ಗತೌ ಧಾತುಃ”— ಒಟ್ಟಿಗೆ ಸಂಚರಿಸುವವನು ಸಹಾಯನು), ಮೂರುಕಣ್ಣುಗಳುಳ್ಳವನಾದ, ಭಸ್ಮಲೇಪನ ಹಾಗೂ ಸರ್ಪಗಳಿಂದ ವಿಭೂಷಿತನಾದ, ಸಕಲಭೂತಾಧಿಪನಾಗಿ, ಪಾಂಚಭೌತಿಕ ಶರೀರವೆಂಬ ಪಾಶಕ್ಕೆ ಕಟ್ಟುಬಿದ್ದು ಪಶುಗಳೆನಿಸಿದ ಸಕಲ ಜೀವಾತ್ಮರ ಒಡೆಯನಾಗಿ ಪಶುಪತಿಯೆನಿಸಿದ ಈಶ್ವರನನ್ನು / ಪ್ರಭು ವನ್ನು ಧ್ಯಾನಿಸಬೇಕು.
೯೫) ಏಕಾದಶರುದ್ರರ ಸ್ವರೂಪವೇನು? ಅವರನ್ನು ಹೇಗೆ ಆವಾಹಿಸಲಾಗುತ್ತದೆ?
ಗಗನವರ್ಣಂ ಪಲ್ಲವಾಜಿನಧರಂ ನೀಲಕಣ್ಠಪಿಞ್ಛವಿರಾಜಮಾನಂ ಚನ್ದ್ರಶೇಖರಂ ತ್ರಿಣೇತ್ರಂ ಸಾಯುಧವಾಹನಗಣಪತ್ನೀಕಂ ಮೃಗವ್ಯಾಧನಾಮಾನಂ ಶ್ರೀರುದ್ರಮಾವಾಹಯಾಮಿ || ೧ ||
ನೀಲಾಕಾಶದ ಮೈಬಣ್ಣದವನಾದ, ಚಿಗುರಿನಂತೆ ಬಲು ಮೃದುವಾದ ಚರ್ಮವನ್ನು ಧರಿಸಿದವನಾದ, ದೇವಾಸುರರು ಕೈಗೊಂಡ ಸಮುದ್ರಮಥನದ ಕಾಲದಲ್ಲಿ ಉದ್ಭವಿಸಿದ ಕಾಲಕೂಟ / ಹಾಲಾಹಲ ವೆಂಬ ವಿಷವನ್ನುಂಡು, ಮಯೂರಪುಚ್ಛದಂತಹ / ನವಿಲಿನ ಜುಟ್ಟಿನಂತಹ / ನೀಲಕಂಠಪಕ್ಷಿಯಾದ ನವಿಲಿನ ಪುಚ್ಛ ಅಥವಾ ಬಾಲದಂತಹ / ಶಿಖೆಯಂತಹ / ಗರಿಯಂತಹ (ಪಿಞ್ಛ = feather) ನೀಲವರ್ಣದ ಕಂಠದಿಂದ ಶೋಭಿಸುವವನಾದ, ಚಂದ್ರನನ್ನು ಶಿರದಲ್ಲಿ ಧರಿಸಿದ, ಮುಕ್ಕಣ್ಣನಾದ, ತನ್ನ ತ್ರಿಶೂಲ, ಪಿನಾಕಧನುಸ್ಸೇ ಮುಂತಾದ ಸರ್ವ ಆಯುಧಗಳು, ನಂದಿಯೆಂಬ ವಾಹನ, ಪ್ರಮಥಗಣಗಳು, ಪತ್ನಿಯಾದ ಗಿರಿಜೆ— ಇವರ ಸಮೇತನಾದ, ಏಕಾದಶರುದ್ರರಲ್ಲೊಬ್ಬನಾದ ಮೃಗವ್ಯಾಧ ನೆಂಬ ಹೆಸರಿನ, ಅರ್ಜುನನಿಗೆ ಪಾಶುಪತಾಸ್ತ್ರವನ್ನು ಅನುಗ್ರಹಿಸಿದ ಆದಿಕಿರಾತ ಮಲ್ಲಿಕಾರ್ಜುನನಾದ, ನಮ್ಮ ಮನದಲ್ಲುದಿಸುವ ಮಾಯಾಮೃಗಗಳಂತಹ ನಾನಾ ಮಿಥ್ಯಾನಶ್ವರಯೋಚನೆಗಳನ್ನು ವ್ಯಾಧ / ಬೇಡ ನಂತೆ ಬೇಟೆಯಾಡಿ ಹೋಗಲಾಡಿಸುವಂತಹ ಪ್ರಥಮ ಶ್ರೀರುದ್ರಭಗವಂತನನ್ನು ಆವಾಹಿಸುತ್ತೇನೆ / ಆಮಂತ್ರಿಸುತ್ತೇನೆ / ಸ್ವಾಗತಿಸುತ್ತೇನೆ.
ಮನ್ದಾರಗೌರವರ್ಣಂ ವ್ಯಾಘ್ರಚರ್ಮಾಮ್ಬರಧರಂ ವಿಲಸಜ್ಜಟಾಜೂಟಮಿನ್ದುಶೇಖರಂ ತ್ರಿಣೇತ್ರಂ ಸಾಯುಧವಾಹನಗಣಪತ್ನೀಕಂ ಶರ್ವನಾಮಾನಂ ಶ್ರೀರುದ್ರಮಾವಾಹಯಾಮಿ || ೨ ||
ಸ್ತುತ್ಯವಾದ ದೇವಲೋಕದ ಪಂಚವೃಕ್ಷಗಳಲ್ಲೊಂದಾದ ಮಂದಾರವೃಕ್ಷದ ಪುಷ್ಪದಂತಹ ಬಿಳಿಯ ಬಣ್ಣದವನಾದ / ಗೌರವರ್ಣ ಅಥವಾ ಚಂದ್ರವರ್ಣ ಅಥವಾ ಬಿಳಿ ಉದ್ದಿನ ಕಾಳಿನ ಬಣ್ಣದವನಾದ (“ಮನ್ದ್ಯತೇ ಸ್ತೂಯತೇ ಪ್ರಶಸ್ಯತೇ ವಾ ಇತಿ ಮನ್ದಾರಃ”— ಸ್ತುತಿಸಲ್ಪಡುತ್ತದೆ, ಪ್ರಶಂಸಿಸಲ್ಪಡುತ್ತದೆಂಬುದರಿಂದ ಮಂದಾರ. “ಪಞ್ಚ-ಏತೇ ದೇವತರವಃ ಮನ್ದಾರಃ ಪಾರಿಜಾತಕಃ | ಸನ್ತಾನಃ ಕಲ್ಪವೃಕ್ಷಃ ಚ ಪುಂಸಿ ವಾ ಹರಿಚನ್ದನಮ್ ||”— ಮಂದಾರ, ಪಾರಿಜಾತ, ಸಂತಾನ / ವಂಶವೃಕ್ಷ / ಬಿದಿರು, ಕಲ್ಪವೃಕ್ಷ / ಕಲ್ಪಿಸಿದ್ದನ್ನು ಕೊಡುವ ಮರ / ಭೂಲೋಕದಲ್ಲಿ ತೆಂಗಿನ ಮರ ಹಾಗೂ ಹರಿಚಂದನ— ಈ ೫ ಪುಲ್ಲಿಂಗಶಬ್ದಗಳು ೫ ಮುಖ್ಯವಾದ ದೇವವೃಕ್ಷಗಳೆಂದು ಅಮರಕೋಷವು ಹೇಳುತ್ತದೆ. “ಸಮ್-ತನೋತಿ ವಿಸ್ತಾರಯತಿ ಪತ್ರಪುಷ್ಪಾದೀನ್ ಇತಿ ಸನ್ತಾನಃ”— ಬಹುವಿಸ್ತಾರವಾಗಿ ತನ್ನನ್ನು ತಾನು ಪಸರಿಸಿಕೊಳ್ಳುವಂಥ ಬಿದಿರು ಸಂತಾನವೃಕ್ಷವೆನಿಸಿದೆ. “ಪಾರಿಭದ್ರೇ ನಿಮ್ಬತರುಃ ಮನ್ದಾರಃ ಪಾರಿಜಾತಕಃ” ಎಂಬಲ್ಲಿ ಅಮರಕೋಷವು ಮಂದಾರವನ್ನೇ ಪಾರಿಭದ್ರವೆಂದಿದೆ. ಹಾಗೆಯೇ, ಅಮರಕೋಷದಲ್ಲೇ ಇನ್ನೊಂದೆಡೆ “ಅರ್ಕಾಹ್ವ-ವಸುಕಾಸ್ಫೋತಗಣರೂಪವಿಕೀರಣಾಃ | ಮನ್ದಾರಶ್ಚ ಅರ್ಕಪರ್ಣೇऽತ್ರ ಶುಕ್ಲೇऽಲರ್ಕಪ್ರತಾಪಸೌ ||” ಎಂಬಲ್ಲಿ ಮಂದಾರವೆಂದರೆ ಅರ್ಕವೃಕ್ಷ / ಎಕ್ಕ ಎಂದೂ ಹೇಳಿದೆ. ಆದರೆ, ಇಲ್ಲಿ ಮುಖ್ಯವಾಗಿ ಬಿಳಿಯ ಮಂದಾರಪುಷ್ಪದ ಬಣ್ಣಕ್ಕೆ ಹೋಲಿಸಲಾಗಿದೆ.), ಹುಲಿಯ ಚರ್ಮವನ್ನೇ ವಸ್ತ್ರವಾಗಿ ಧರಿಸಿದ, ವಿಲಾಸಯುಕ್ತವಾದ ಜಟೆಯುಳ್ಳ, ಇಂದುಶೇಖರ / ಚಂದ್ರಶೇಖರ ನಾದ, ಮುಕ್ಕಣ್ಣನಾದ, ತನ್ನ ತ್ರಿಶೂಲ-ಪಿನಾಕಧನುಸ್ಸೇ ಮುಂತಾದ ಆಯುಧಗಳು, ನಂದೀವಾಹನ, ಶಿವಗಣಗಳು, ಪತ್ನಿಯಾದ ಪಾರ್ವತಿ— ಇವರ ಸಮೇತನಾದ, ಶರ್ವ ನೆಂಬ ಹೆಸರುಳ್ಳ (“ಶೃಣಾತಿ ಸರ್ವಾಃ ಪ್ರಜಾಃ ಸಂಹರತಿ ಪ್ರಲಯೇ, ಸಂಹಾರಯತಿ ವಾ ಭಕ್ತಾನಾಂ ಪಾಪಾನಿ”― ಸಮಸ್ತ ಸೃಷ್ಟಿಯನ್ನು ಪ್ರಳಯಕಾಲದಲ್ಲಿ ಸಂಹರಿಸುವವನು ಅಥವಾ ತನ್ನ ಭಕ್ತರ ಪಾಪಗಳನ್ನು ನಾಶಮಾಡುವವನು ಎಂಬುದರಿಂದ ಶಿವನು ಶರ್ವನೆನಿಸಿರುವನು) ದ್ವಿತೀಯ ರುದ್ರದೇವನನ್ನು ರುದ್ರಾಭಿಷೇಕಪೂರ್ವಕ ಆರಾಧನೆಗಾಗಿ ಆವಾಹಿಸುತ್ತೇನೆ / ಆಮಂತ್ರಿಸುತ್ತೇನೆ / ಸ್ವಾಗತಿಸುತ್ತೇನೆ.
ಗೋಕ್ಷೀರವರ್ಣಂ ಭೂರುಹಚೀರಧರಂ ಘಣ್ಟಾಮಣ್ಡಿತಮಿನ್ದುಶೇಖರಂ ತ್ರಿಣೇತ್ರಂ ಸಾಯುಧವಾಹನಗಣಪತ್ನೀಕಂ ನಿರ್-ಋತಿನಾಮಾನಂ ಶ್ರೀರುದ್ರಮಾವಾಹಯಾಮಿ || ೩ ||
ಗೋವಿನ ಹಾಲಿನಂತಹ ಬಿಳಿಯಾದ ಮೈಬಣ್ಣದವನಾದ, (“ಭುವಿ ರೋಹತಿ ಪ್ರಾದುರ್ಭವತೀತಿ ಭೂರುಹಃ ವೃಕ್ಷಃ”— ಭೂಮಿಯಲ್ಲಿ ಮೇಲಕ್ಕೇರುತ್ತಾ ಬೆಳೆಯುವಂಥದ್ದು ಭೂರುಹ / ವೃಕ್ಷ; ಚೀರಮ್— ಮರದ ತೊಗಟೆ.) ಮರದ ತೊಗಟೆಯನ್ನು ಧರಿಸಿದ, ಘಂಟೆಯೊಂದಿಗೆ ವಿಭೂಷಿತನಾದ, ಚಂದ್ರಮೌಳೀಶ್ವರನಾದ, ತ್ರಿನಯನನಾದ, ತನ್ನ ಆಯುಧ-ನಂದೀವಾಹನ-ಪ್ರಮಥಗಣ-ಸತಿ ಗೌರಿ ಸಹಿತನಾದ, ನಿರ್-ಋತಿ ನಾಮಕನಾದ (“ನಿರ್ಗತಾ ಋತಿಃ ಅಶುಭಂ ಯಸ್ಮಾತ್ ಇತಿ ನಿರ್-ಋತಿಃ”— ಯಾವನಿಂದ ಋತಿ / ಅಶುಭವು ನಿರ್ಗತ / ನಿವಾರಣೆ ಯಾಗುವುದೋ ಅಂತಹ ಮಂಗಲಮಯನಾದ ಶಿವನೇ ನಿರ್-ಋತಿಯು) ತೃತೀಯ ರುದ್ರಭಗವಂತನನ್ನು ರುದ್ರಾಭಿಷೇಕಪೂರ್ವಕ ಪೂಜೋಪಚಾರಕ್ಕಾಗಿ ಆವಾಹಿಸುತ್ತಿದ್ದೇನೆ / ಬಳಿಗೆ ಬರುವಂತೆ ಆಹ್ವಾನಿಸುತ್ತಿದ್ದೇನೆ.
ಮುಕ್ತಾಭವರ್ಣಂ ಗಜಾಜಿನಧರಂ ಪದ್ಮಕಙ್ಕಾಲಾಙ್ಕಮಿನ್ದುಶೇಖರಂ ತ್ರಿಣೇತ್ರಂ ಸಾಯುಧವಾಹನಗಣಪತ್ನೀಕಂ ಅಜೈಕಪಾತ್-ನಾಮಾನಂ (ಅಜೈಕಪಾನ್ನಾಮಾನಂ) ಶ್ರೀರುದ್ರಮಾವಾಹಯಾಮಿ || ೪ ||
ಮುತ್ತಿನಂತೆ ಬೆಳಗುವ ಬಣ್ಣವುಳ್ಳ, ಗಜಚರ್ಮಾಂಬರನಾದ / ಆನೆಯ ಚರ್ಮವನ್ನು ವಸ್ತ್ರವಾಗಿ ಧರಿಸಿದ, ಅಸ್ಥಿಪಂಜರ / ತಲೆಬುರುಡೆಮಾತ್ರವನ್ನು (ಕಙ್ಕಾಲ) ತನ್ನ ಸಂಪದ್ರೂಪೀ (ಪದ್ಮಮ್), ಆಭೂಷಣವಾಗಿ ಧರಿಸಿ (ಅಙ್ಕಮ್), ರುಂಡಮಾಲಾಧರನಾದ, ಇಂದುವನ್ನು ಶಿರದಲ್ಲಿ ಧರಿಸಿದ, ತ್ರ್ಯಂಬಕನಾದ, ತನ್ನ ಆಯುಧ-ನಂದಿ-ಗಣ-ಭಾರ್ಯೆ— ಇವರ ಸಹಿತನಾದ, ಅಜೈಕಪಾತ್ (ಅಜ-ಏಕಪಾತ್) ಎಂಬ ಹೆಸರಿನ ಚತುರ್ಥರುದ್ರನನ್ನು (“ಅಜಸ್ಯ ಛಾಗಸ್ಯ ಏಕಃ ಪಾದ ಇವ ಪಾದೋ ಯಸ್ಯ ಸಃ ಅಜೈಕಪಾತ್”— ಆಡಿನ ೧ ಪಾದದಂಥ ಪಾದವು ಯಾವನದೋ ಅವನು ಎಂಬುದು ಈ ಶಬ್ದದ ವಿವರಣೆಯಾದರೂ, ಇಲ್ಲಿ ಶಿವನು ಜನ್ಮರಹಿತನಾಗಿ ಅಜನೂ, ಏಕಮೇವಾದ್ವಿತೀಯನಾಗಿ ಕೇವಲ ತನ್ನ ಒಂದಂಶಮಾತ್ರದಿಂದ ಜಗವನ್ನಿಡೀ ಸೃಜಿಸಿ, ಅದನ್ನು ಒಂದೇ ಹೆಜ್ಜೆಯಿಂದ ಕ್ರಮಿಸಬಲ್ಲವನಾದುದರಿಂದ / ವ್ಯಾಪಿಸಬಲ್ಲನಾದುದರಿಂದ ಏಕಪಾದನೂ ಎಂಬುದಾಗಿ ತಿಳಿದು ಧ್ಯಾನಿಸಬೇಕು) ಆವಾಹಿಸುತ್ತೇನೆ.
ನಾಗಾಧಿಪವರ್ಣಂ ಕೃತ್ತಿವಾಸಸಂ ನಾಗಭೂಷಣಾಙ್ಕಮಿನ್ದುಶೇಖರಂ ತ್ರಿಣೇತ್ರಂ ಸಾಯುಧವಾಹನಗಣಪತ್ನೀಕಂ ಅಹಿರ್ಬುಧ್ನ್ಯನಾಮಾನಂ ಶ್ರೀರುದ್ರಮಾವಾಹಯಾಮಿ || ೫ ||
ನಾಗಗಳ ಅಧಿಪತಿಯಾದ ಅನಂತ / ಶೇಷನಾಗ / ಆದಿಶೇಷ / ವಾಸುಕಿ ಯಂತಹ ಮೈಬಣ್ಣವುಳ್ಳ, ಗಜಾಸುರನ ಚರ್ಮದಿಂದ ತನ್ನ ಕಟಿಪ್ರದೇಶವನ್ನು ಮುಚ್ಚಿಕೊಂಡು ಕೃತ್ತಿವಾಸನೆನಿಸಿದ (“ಕೃತ್ತ್ಯಾ ಗಜಾಸುರಚರ್ಮಣಾ ವಸ್ತೇ ಸ್ವಕಟಿದೇಶಮ್ ಆಚ್ಛಾದಯತಿ ಯಃ ಸಃ ಕೃತ್ತಿವಾಸಃ”), ಸರ್ಪಾಭರಣವಿಭೂಷಿತನಾದ, ಚಂದ್ರನನ್ನು ಮೌಳಿಯಲ್ಲಿ ಧರಿಸಿದ, ತ್ರ್ಯಂಬಕನಾದ, ತನ್ನ ತ್ರಿಶೂಲ-ಪಿನಾಕಧನುವೇ ಮುಂತಾದ ಆಯುಧಗಳು-ನಂದೀವಾಹನ-ಪ್ರಮಥಗಣ-ಪತ್ನಿಯಾದ ಗಿರಿಜೆಯ ಸಮೇತನಾದ, ಅಹಿರ್ಬುಧ್ನ್ಯ ನೆಂಬ ಹೆಸರಿನ ಪಂಚಮರುದ್ರನನ್ನು ಆವಾಹಿಸುತ್ತೇನೆ / ಆಮಂತ್ರಿಸುತ್ತೇನೆ / ಬಳಿಗೆ ಕರೆಯುತ್ತೇನೆ.
ಅಹಿರ್ಬುಧ್ನ್ಯ—
೧) ವಿಶ್ವಕರ್ಮ ಶಿಲ್ಪಶಾಸ್ತ್ರದ ಪ್ರಕಾರ, ಏಕಾದಶರುದ್ರರಲ್ಲಿ ಮೂರನೆಯವನು. ಬಲಭಾಗದ ಕೈಗಳಲ್ಲಿ ಗದೆ, ಚಕ್ರ, ಖಡ್ಗ, ಡಮರು, ಮುದ್ರೆ, ಶೂಲ, ಅಂಕುಶ ಮತ್ತು ಅಕ್ಷಮಾಲೆ. ಎಡಭಾಗದ ಕರಗಳಲ್ಲಿ ತೋಮರ (ಕಬ್ಬಿಣದ ಸಲಾಕೆ), ಪಟ್ಟಿಶ, ಕವಚ, ಕಪಾಲ, ತರ್ಜನೀ, ಘಟ, ಶಕ್ತಿ ಹಾಗೂ ಪರಶು / ಖಡ್ಗ.
೨) ರೂಪಮಂಡನವೆಂಬ ಶಿಲ್ಪಶಾಸ್ತ್ರದ ಪ್ರಕಾರ, ಏಕಾದಶರುದ್ರರಲ್ಲಿ ಒಂಭತ್ತನೆಯವನು.
೩) Puranic Encyclopedia ದ ಪ್ರಕಾರ, ವಿಶ್ವಕರ್ಮ-ಸುರಭಿಯರ ೫ ಗಂಡು ಮಕ್ಕಳಲ್ಲೊಬ್ಬ. ಅವರೇ ಅಜೈಕಪಾತ್, ಅಹಿರ್ಬುಧ್ನ್ಯ, ತ್ವಷ್ಟಾ, ರುದ್ರ, ಬರ್ಹಿಷ್ಮತಿ ಮತ್ತು ಸಂಜ್ಞಾ ಎಂಬ ಮಗಳು.
೪) Purana index ನ ಪ್ರಕಾರ, ಭೂತ ಹಾಗೂ ಸರೂಪರ ಮಗ. ಏಕಾದಶರುದ್ರರಲ್ಲೊಬ್ಬ.
೫) ಅಹಿ— ಸರ್ಪ, ಬುಧ್ನ್ಯ— ವಿಶ್ವದ ಆಧಾರ. ಶೇಷ / ಅನಂತ, ಸಾವಿರಾರು ಹೆಡೆಯ ಸರ್ಪ. ಆತನ ಶಿರದ ಮೇಲೆ ಇಡೀ ಜಗತ್ತೇ ನಿಂತಿದೆ.
೬) ಗಾರ್ಹಪತ್ಯಾಗ್ನಿ (ಐತರೇಯ ಬ್ರಾಹ್ಮಣ ೩.೩೬).
೭) ಅಭಿಷಿಂಚಿತ ಸೋಮವನ್ನು ಶುದ್ಧೀಕರಿಸಲು ಅಥವಾ ಪಾರ್ಥಿವಸ್ತರದಿಂದ ಯೋಗಮಾರ್ಗದಲ್ಲಿ ಶುದ್ಧಿಹೊಂದಿ, ಮೇಲೇರಿ, ಶರೀರದ ಊರ್ಜೆಯನ್ನು ಉನ್ನತೀಕರಿಸಿ, ಷಟ್ಚಕ್ರಭೇದನ ಮಾಡಿ, ಸಮಾಧಿಸ್ಥಿತಿಗೇರುವ ಕುಂಡಲಿನೀ ಸ್ವರೂಪಿಯಾದ ಶಕ್ತಿ. (ತೈತ್ತಿರೀಯ ಬ್ರಾಹ್ಮಣ ೧.೫.೧.೫ ಹಾಗೂ ಅದರ ಸಾಯಣಭಾಷ್ಯ)
೮) ಯಾವ ಈ ಅಹಿ / ಸರ್ಪದಿಂದ ಬುಧರೂಪಿಯಾದ ಬೋಧ / ಜ್ಞಾನ / ಆತ್ಮಜ್ಞಾನದ ಪ್ರಾಪ್ತಿಯಾಗುವುದೋ ಅಂತಹ ಗುರುಸ್ವರೂಪ.
೯) ಸ್ಥಾಣುವಿನ ಪುತ್ರ, ಬ್ರಹ್ಮನ ಪೌತ್ರ / ಮೊಮ್ಮಗ. ಏಕಾದಶರುದ್ರರಲ್ಲೊಬ್ಬ. (ಮಹಾಭಾರತ)
ಅಞ್ಜನವರ್ಣಂ ಕೃಷ್ಣಮೃಗಚರ್ಮವಾಸೋವಸಾನಂ ಸುವರ್ಣಮೇಷಸಂಯುಕ್ತಂ ವೀಣಾವೇಣೂದ್ಯತ್ಕರನಖನೇಪಥ್ಯಮಿನ್ದುಶೇಖರಂ ತ್ರಿಣೇತ್ರಂ ಸಾಯುಧವಾಹನಗಣಪತ್ನೀಕಂ ಪಿನಾಕಿನಾಮಾನಂ ಶ್ರೀರುದ್ರಮಾವಾಹಯಾಮಿ || ೬ ||
ಅಂಜನ / ಕಾಡಿಗೆ ಯ ಬಣ್ಣದವನಾದ (“ ಅಜ್ಯತೇ ಅನೇನ ಇತಿ ಅಞ್ಜನಮ್, ಅಞ್ಜ ಕರಣೇ, ವ್ಯಕ್ತಾಯಾಂ, ಮರ್ಷಣೇ / ಕ್ಷಮಾಯಾಂ / ನಿಷ್ಪನ್ನೇ, ಕಾನ್ತ್ಯಾಮ್, ಗತೌ ವಾ ಇತಿ ಧಾತುಃ ”― ಕರಣ / ಸರ್ವಕರ್ತೃತ್ವ / ಎಲ್ಲವನ್ನೂ ಮಾಡುವಿಕೆ, ವ್ಯಕ್ತಪಡಿಸುವಿಕೆ, ಮರ್ಷಣ / ಕ್ಷಮಿಸುವಿಕೆ / ಸಿದ್ಧಿಸುವಿಕೆ / ವ್ಯುತ್ಪತ್ತಿಸುವಿಕೆ, ಕಾಂತಿ / ದ್ಯುತಿ / ಬೆಳಕು, ಗತಿ / ಗತಿಶೀಲತೆ ಎಂಬರ್ಥದ ಅಞ್ಜ್ ಧಾತುವಿನಿಂದ ಬಂದಿದೆ ಅಂಜನ ಶಬ್ದ.), ಕೃಷ್ಣಮೃಗದ ಚರ್ಮವೆಂಬ ವಸನವನ್ನು ತನ್ನ ವಸ್ತ್ರವನ್ನಾಗಿ ಮಾಡಿಕೊಂಡ, ಬಂಗಾರದ ಟಗರಿನ ಸಹಿತನಾದ, (ವೀಣಾ-ವೇಣು-ಉದ್ಯತ್ ಕರ-ನಖ-ನೇಪಥ್ಯಮ್) ವೀಣೆ, ಕೊಳಲುಗಳನ್ನು ತನ್ನ ಕೈ-ಉಗುರುಗಳಲ್ಲಿ ಅಲಂಕರಿಸಿಕೊಂಡ, ಚಂದ್ರಮೌಳೀಶ್ವರನಾದ, ತ್ರಿನೇತ್ರನಾದ, ಆಯುಧ-ವಾಹನ-ಗಣ-ಪತ್ನಿ ― ಸಮೇತನಾದ, ಪಿನಾಕೀ (“ಪಿನಾಕವೆಂಬ ಧನುಸ್ಸನ್ನು ಧರಿಸಿದವನು ಪಿನಾಕಿನ್ / ಪಿನಾಕೀ”― “ಪಿನಾಕಃ ಅಸ್ಯ ಅಸ್ತಿ ಇತಿ ಪಿನಾಕೀ”) ಎಂಬ ಹೆಸರಿನವನಾದ, ಏಕಾದಶ (೧೧) ರುದ್ರರಲ್ಲಿ ೬ನೆಯ (ಷಷ್ಠ) ರುದ್ರನನ್ನು ರುದ್ರಾಭಿಷೇಕಪೂರ್ವಕ ಆರಾಧನೆಗಾಗಿ ಆವಾಹನೆ ಮಾಡುತ್ತೇನೆ. (“ಅಲಙ್ಕಾರಪ್ರಿಯೋ ವಿಷ್ಣುಃ, ಅಭಿಷೇಕಪ್ರಿಯಃ ಶಿವಃ | ನಮಸ್ಕಾರಪ್ರಿಯೋ ಭಾನುಃ, ಬ್ರಾಹ್ಮಣೋ ಭೋಜನಪ್ರಿಯಃ ||”― ವಿಷ್ಣುವು ಅಲಂಕಾರಪ್ರಿಯನು. ಶಿವನು ಅಭಿಷೇಕಪ್ರಿಯನು. ಸೂರ್ಯನು ನಮಸ್ಕಾರಪ್ರಿಯನು. ಬ್ರಾಹ್ಮಣನು ಸ್ವಾದಿಷ್ಟ, ಸಾತ್ತ್ವಿಕ, ಸಾವಧಾನ, ವಿಧ್ಯುಕ್ತ ಭೋಜನವನ್ನು ಇಷ್ಟಪಡುತ್ತಾನೆ.)
ಪಞ್ಚವರ್ಣಂ ಪಞ್ಚಚಿತ್ರಾಮ್ಬರಧರಮನೇಕವಿಲಪನ್ತಮಿನ್ದುಶೇಖರಂ ತ್ರಿಣೇತ್ರಂ ಸಾಯುಧವಾಹನಗಣಪತ್ನೀಕಂ ಭವನಾಥನಾಮಾನಂ ಶ್ರೀರುದ್ರಮಾವಾಹಯಾಮಿ || ೭ ||
“ಪಞ್ಚ ವರ್ಣಾಃ, ಅಸ್ಯ ಇತಿ ಪಞ್ಚವರ್ಣಃ, ತಮ್ ಪಞ್ಚವರ್ಣಮ್ |”— ೫ ಬಣ್ಣಗಳು ಇವನದು ಎಂಬುದರಿಂದ ಭವನಾಥನೆಂಬ ರುದ್ರನು ನೀಲ, ಶ್ವೇತ / ಬಿಳಿ, ಪೀತ / ಹಳದಿ, ಅಸಿತ / ಕೃಷ್ಣ / ಕಪ್ಪು ಹಾಗೂ ಅರುಣ / ಕೆಂಪು ಎಂಬ ಪಂಚವರ್ಣಾತ್ಮಕನು. ವರ್ಣಚಿತ್ರಾಕೃತಿಗೆ ನೀಲದ ಬದಲು ಹರಿತವರ್ಣ / ಹಸಿರು ಬಣ್ಣ.
“ವರ್ಣಂ ಲೇಪಂ ತತಃ ಕುರ್ಯಾಚ್ಛಿಲ್ಪಶಾಸ್ತ್ರವಿಚಕ್ಷಣೈಃ |
ಶ್ವೇತಂ ಪೀತಂ ತಥಾ ರಕ್ತಂ ಹರಿತಂ ಕೃಷ್ಣಮೇವ ಚ ||
ಪಞ್ಚವರ್ಣಂ ಪೃಥಿವ್ಯಾದಿವರ್ಣಾನಾಮಧಿದೈವತಾಃ |
ಉತ್ತಮಂ ಧಾತವಃ ಪ್ರೋಕ್ತಾ ಮಧ್ಯಮಾ ವೃಕ್ಷಸಮ್ಭವಾಃ ||”
(ಸಂಜ್ಞಾರ್ಥತತ್ತ್ವಕೋಶ— ವಿದ್ವಾನ್ ಡಿ.ವಿ.ಹೊಳ್ಳ, ಕುಂದಾಪುರ)
“ರಜಾಂಸಿ ಪಞ್ಚವರ್ಣಾನಿ ಮಣ್ಡಲಾರ್ಥಂ ಹಿ ಕಾರಯೇತ್ |
ಶಾಲಿತಣ್ಡುಲಚೂರ್ಣೇನ ಶುಕ್ಲಂ ವಾ ಯವಸಮ್ಭವಮ್ ||
ರಕ್ತಂ ಕುಸುಮ್ಭಸಿನ್ದೂರಗೌರಿಕಾದಿಸಮುದ್ಭವಮ್ |
ಹರಿತಾಲೋದ್ಭವಂ ಪೀತಂ ರಜನೀಸಮ್ಭವಂ ಕ್ವಚಿತ್ ||
ಕೃಷ್ಣಂ ದಗ್ಧಪುಲಾಕೈಸ್ತು ಕೃಷ್ಣೈರ್ದ್ರವ್ಯೈರಥಾಪಿ ವಾ |
ಹರಿತಂ ಬಿಲ್ವಪತ್ರೋತ್ಥಂ ಪೀತಕೃಷ್ಣವಿಮಿಶ್ರಿತಮ್ ||”
“ಅಕಾರೋಕಾರಮಕಾರನಾದಬಿನ್ದುಯುಕ್ತೇ ಪ್ರಣವೇ ಚ”— ಅ, ಉ, ಮ, ನಾದ, ಬಿಂದು— ಈ ಐದನ್ನೊಳಗೊಂಡ ಪ್ರಣವಾಕ್ಷರವಾದ ಓಙ್ಕಾರವೂ ಪಂಚವರ್ಣಾತ್ಮಕವಾದುದು. ಹೀಗಾಗಿ ಶಿವನು ಪ್ರಣವಾರ್ಥಸ್ವರೂಪನು, ಪ್ರಣವಾಕ್ಷರವಾಚ್ಯನು, ಪ್ರಣವನಾದವೇದ್ಯನು. (—ಆಧಾರ— ವಾಚಸ್ಪತ್ಯಮ್).
ಪಂಚಾಂಬರಗಳು ― ನಿರ್ಮಲಾಂಬರ, ವಿಮಲಾಂಬರ, ಮಹದಂಬರ, ಕಲಾಂಬರ, ಬ್ರಹ್ಮಾಂಬರ.
ಪಂಚಾಕಾರಗಳು ― ಚತುರಸ್ರ, ಅರ್ಧಚಂದ್ರ, ತ್ರಿಕೋಣ, ಷಟ್ಕೋಣ, ವೃತ್ತ, ಚಿತ್ರಾಕಾರ.
(ವೇದಾಂತ; ಸಂಜ್ಞಾರ್ಥ ತತ್ತ್ವಕೋಶ)
ಹೀಗೆ ಪಂಚವರ್ಣಮಯನೂ, ಪಂಚಾಕ್ಷರಾತ್ಮಕನೂ (ನಮಃ ಶಿವಾಯ), ಪ್ರಣವಸ್ವರೂಪನೂ, ೫ ವಿಧದ ಚಿತ್ರವಿಚಿತ್ರವಾದ ವಸ್ತ್ರ / ಅಂಬರಗಳನ್ನು ಧರಿಸಿದವನೂ, ಬಹುವಿಧವಾಗಿ ಶೋಕಾನ್ವಿತವಚನಗಳಿಂದ ವಿಲಪಿಸುತ್ತಾ ತನ್ನ ಭಕ್ತರ ದುಃಖ-ದುಮ್ಮಾನಗಳಿಗೆ ಅನುಕಂಪಾರ್ದ್ರಹೃದಯನಾಗಿ ರೋದಿಸುತ್ತಾ ರುದ್ರನೆನಿಸಿದವನೂ, ಇಂದುಮೌಳಿಯೂ ಮುಕ್ಕಣ್ಣನೂ ಆದ, ತನ್ನ ತ್ರಿಶೂಲ-ಪಿನಾಕಧನ್ವಾದಿ ಆಯುಧಗಳು-ನಂದೀವಾಹನ-ಪ್ರಮಥಗಣ-ಸತಿಯಾದ ಪಾರ್ವತಿ— ಇವರ ಸಹಿತನಾದ, ಭವನಾಥ ನೆಂಬ ಹೆಸರಿನ ಸಪ್ತಮ / ೭ನೆಯ ರುದ್ರರೂಪವುಳ್ಳ (ಭವ ಎಂದರೆ ಸಂಸಾರ, ಸೃಷ್ಟಿ. “ಭವತಿ ಇತಿ ಭವಃ”— ಇರುವುದೆಲ್ಲವೂ, ತೋರುವುದೆಲ್ಲವೂ ಭವ. ಅದಕ್ಕೆಲ್ಲ ಸ್ವಾಮಿಯಾಗಿರುವವನೇ ಭವನಾಥನು.) ಭಗವಾನ್ ಸದಾಶಿವನನ್ನು ಅಭಿಷೇಕಪೂರ್ವಕವಾದ ಉಪಾಸನೆಗಾಗಿ ಆಹ್ವಾನಿಸುತ್ತೇನೆ.
ಪ್ರಮಥಗಣ— ಇದು ಶಿವನ ಗಣದ ಹೆಸರು. ಇದರಲ್ಲಿ ಒಟ್ಟು ೩೬ ಕೋಟಿ ಮಂದಿ ಇದ್ದಾರೆ. ಶತ್ರುಗಳ ಪ್ರಮಥನವನ್ನು / ಮರ್ದನವನ್ನು / ನಾಶವನ್ನು ಮಾಡಬಲ್ಲವರು. “ಪ್ರಮಥತಿ ಪ್ರಮಥ್ನಾತಿ ಇತಿ ವಾ ಪ್ರಮಥಃ ||” ಅವರಲ್ಲಿ ನಾನಾವಿಧದ ಗಣಗಳಿರುವರು. ಇವರ / ಈ ಶಿವಪರಿಷತ್ತಿನ ವಿವಿಧ ರೀತಿಯ ಗಣಗಳು, ಅವರ ಲಕ್ಷಣ, ಗುಣ-ಸ್ವಭಾವ, ಹಾವ-ಭಾವ, ವೇಷ-ಭೂಷಣಾದಿಗಳ ಕುರಿತಾಗಿ ಕಾಲಿಕಾಪುರಾಣದಲ್ಲಿ “ಪರಿಷದೋತ್ಪತ್ತಿಃ” ಎಂಬ ೨೯ನೆಯ ಅಧ್ಯಾಯದಲ್ಲಿ ವಿವರವಾಗಿ ಹೇಳಲಾಗಿದೆ.
ಭಸ್ಮವರ್ಣಂ ಕನ್ಥಾಚ್ಛಾದಿತ-ದರ್ಪಣರಾಜಮಾನಮಿನ್ದುಶೇಖರಂ ತ್ರಿಣೇತ್ರಂ ಸಾಯುಧವಾಹನಗಣಪತ್ನೀಕಂ ಮಹೇಶ್ವರನಾಮಾನಂ ಶ್ರೀರುದ್ರಮಾವಾಹಯಾಮಿ || ೮ ||
ಭಸ್ಮದ / ಬೂದಿಯ ಬಣ್ಣದವನಾದ (Ash-coloured) (“ಬಭಸ್ತಿ ಇತಿ ಭಸ್ಮನ್, ಭಸ + ಮನಿನ್, ಭಸ್ ದೀಪ್ತೌ, ಭರ್ತ್ಸನೇ ಧಾತುಃ”, ದಹಿಸಲ್ಪಟ್ಟ ಗೋಮಯದ ವಿಕಾರ, ದಗ್ಧಕಾಷ್ಠಾದಿವಿಕಾರ, ಶಿವಾಂಗಭೂಷಣ. “ಅಸ್ಯಾಙ್ಗಭೂಷಣಂ ಭಸ್ಮ ವಿಭೂತಿರ್ಭೂತಿರಸ್ಯ ತು”— “ಇವನ / ಶಿವನ ದೇಹಭೂಷಣವಿದು ಭಸ್ಮವು, ವಿಭೂತಿಯು ಈತನ ಭೂತಿ / ಮಹಿಮೆ / ಸಂಪತ್ತು / ಮಹಾದೇವನ ಅಣಿಮಾದ್ಯಷ್ಟಪ್ರಕಾರ ವೈಭವ”— ಶಬ್ದರತ್ನಾವಲೀ. ಶಿವಭಸ್ಮವು ಮನ್ಮಥದೇಹಭಸ್ಮವೂ ಹೌದು.), ಚಿಂದಿಬಟ್ಟೆಯನ್ನಷ್ಟೇ ಮುಚ್ಚಿಕೊಂಡು ಪರಮವಿರಾಗಿಯೂ ದಿಗಂಬರನೂ ಆದ (“ಭಿಕ್ಷಾ ಪ್ರಾಣಸ್ಯ ರಕ್ಷಾರ್ಥಂ ಕನ್ಥಾ ಶೀತನಿವಾರಿಣೀ | ಅಚಲಾ ಕೇಶವೇ ಭಕ್ತಿಃ ವಿಭವೈಃ ಕಿಂ ಪ್ರಯೋಜನಮ್”— ಪುರಾಣೋಕ್ತಿ. ಪ್ರಾಣರಕ್ಷಣೆಗೆ ಬೇಕಾದಷ್ಟೇ ಭಿಕ್ಷೆ / ಆಹಾರ, ಚಳಿಯಿಂದ ರಕ್ಷಣೆಗೆ ಬೇಕಾದಷ್ಟೇ ಬಟ್ಟೆ, ಕೇಶವನಲ್ಲೇ ನಿಶ್ಚಲಭಕ್ತಿ— ಇವಿಷ್ಟು ಸಾಕು. ಬೇರೆ ವೈಭವಗಳಿಂದೇನು ಪ್ರಯೋಜನ?), ಇವಿಷ್ಟೇ ಅಲಂಕಾರವನ್ನು ತಾನೇ ನೋಡಿಕೊಳ್ಳುವ ದರ್ಪಣ / ಕನ್ನಡಿಯಿಂದ ವಿರಾಜಮಾನನಾದ, ಚಂದ್ರನನ್ನು ಶಿರದಲ್ಲಿ ಧರಿಸಿದ, ತ್ರಿನಯನನಾದ, ಆಯುಧ-ವಾಹನ-ಗಣ-ಪತ್ನೀಸಮೇತನಾದ, ಮಹೇಶ್ವರ ನಾಮಕನಾದ ಅಷ್ಟಮ (೮ನೆಯ)ರುದ್ರದೇವನನ್ನು ಆವಾಹಿಸುತ್ತೇನೆ / ಆಮಂತ್ರಿಸುತ್ತೇನೆ.
“ಆರೋಗ್ಯಂ ಭಾಸ್ಕರಾದಿಚ್ಛೇತ್, ಶ್ರಿಯಮಿಚ್ಛೇತ್ ಹುತಾಶನಾತ್ |
ಜ್ಞಾನಂ ಮಹೇಶ್ವರಾದಿಚ್ಛೇತ್, ಮೋಕ್ಷಮಿಚ್ಛೇಜ್ಜನಾರ್ದನಾತ್ ||”
ಆರೋಗ್ಯವನ್ನು ಸೂರ್ಯನಿಂದಲೂ (ನೇತ್ರರೋಗವು ಮುಂಜಾನೆ / ಮುಸ್ಸಂಜೆಯ ಮಂದರಶ್ಮಿಗಳನ್ನು ನೋಡುವುದರಿಂದ, ವಿಟಮಿನ್ ಡಿ ಚರ್ಮದ ಮೂಲಕ, ಸರ್ವತೋಮುಖ ಆರೋಗ್ಯವು ಸೂರ್ಯನಮಸ್ಕಾರದಿಂದ...ಇತ್ಯಾದಿ), ಅಗ್ನಿ / ಹುತಾಶನ ನಿಂದ ಶ್ರೀ / ಸಿರಿ / ಸಂಪತ್ತನ್ನೂ, ಮಹೇಶ್ವರ / ಶಿವ ನಿಂದ ಜ್ಞಾನವನ್ನೂ, ಜನಾರ್ದನ / ವಿಷ್ಣು ವಿನಿಂದ ಮೋಕ್ಷವನ್ನೂ ಬೇಡಬೇಕು / ಇಚ್ಛಿಸಬೇಕು / ಬಯಸಬೇಕು. ಹೀಗಾಗಿ, ಜ್ಞಾನಗುರು ದಕ್ಷಿಣಾಮೂರ್ತಿರೂಪೀ ಶಿವ. “ತೈಲಧಾರೆಯಂತೆ ಮನಸು ಕೊಡು ಹರಿಯಲ್ಲಿ ಶಂಭೋ” ಎಂದು ಮನೋಭಿಮಾನಿಯಾದ, ಅಹಂತತ್ತ್ವಾಭಿಮಾನಿಯಾದ ಶಿವನನ್ನು ಪ್ರಾರ್ಥಿಸಬೇಕು.
ಕಲ್ಪವೃಕ್ಷವರ್ಣಂ ಕಲ್ಪಲತಾಧರಂ ರತ್ನಾಕಲ್ಪಿತಶತಶೋಭಿತಮಿನ್ದುಶೇಖರಂ ತ್ರಿಣೇತ್ರಂ ಸಾಯುಧವಾಹನಗಣಪತ್ನೀಕಂ ಸ್ಥಾಣುನಾಮಾನಂ ಶ್ರೀರುದ್ರಮಾವಾಹಯಾಮಿ || ೯ ||
ಬೇಡಿದ್ದನ್ನು / ಕಲ್ಪಿಸಿದ್ದನ್ನು ಕೊಡುವ ಸ್ವರ್ಗದ ಕಲ್ಪವೃಕ್ಷದಂತಹ ಮೈಬಣ್ಣವುಳ್ಳ, ಬಯಸಿದ್ದನ್ನು / ಸಂಕಲ್ಪಿಸಿದ್ದನ್ನು ನೀಡಬಲ್ಲ ದೇವಲೋಕದ ಕಲ್ಪಲತೆಯನ್ನು ಧರಿಸಿರುವ, ನೂರಾರು ರತ್ನಗಳಿಂದ ಶೋಭಿತನಾದವನೆಂದು ಕಲ್ಪಿತನಾದ, ಇಂದುಶೇಖರನೂ ತ್ರ್ಯಂಬಕನೂ ಆದ, ಆಯುಧ-ವಾಹನ-ಗಣ-ಪತ್ನಿ ಸಮೇತನಾದ ಸ್ಥಾಣು ನಾಮಕನಾದ ನವಮ (೯ನೆಯ) ರುದ್ರಭಗವಂತನನ್ನು ಆವಾಹನೆಮಾಡುತ್ತೇನೆ / ಆಹ್ವಾನಿಸುತ್ತೇನೆ.
“ತಿಷ್ಠತಿ ಇತಿ ಸ್ಥಾಣುಃ, ಸ್ಥಾ ಧಾತುಃ”— ಸ್ಥಿರವಾಗಿ, ಅಚಲವಾಗಿ, ನಾಶವಾಗದೆ ಶಿಲೆಯಂತೆ ಇರುತ್ತಾನೆಂಬುದರಿಂದ ಶಿವನು ಸ್ಥಾಣುವೆನಿಸಿರುವನು. ವಾಮನಪುರಾಣದ ೪೬ನೆಯ ಅಧ್ಯಾಯದಲ್ಲಿ ಶಿವನಿಗೆ ಈ ಹೆಸರು ಬರಲು ಕಾರಣ ಹೀಗಿದೆ— “ಆ ಪ್ರಳಯಜಲದಿಂದ ಲಿಂಗರೂಪದಲ್ಲಿ ನಾನು (ಶಿವನು)ಮೇಲೇಳುತ್ತಾ ಸಮಸ್ತ ಪ್ರಜೆಗಳನ್ನು ಸೃಷ್ಟಿಸಿದೆನು. ಬಳಿಕ ನಾನು ಆ ತೇಜೋರಹಿತರಾದ ಪ್ರಜೆಗಳನ್ನು ನೋಡಿ ಮಹಾಕ್ರೋಧಾವಿಷ್ಟನಾಗಿ ಲಿಂಗವನ್ನು ಕಿತ್ತೆಸೆದೆನು. ಹಾಗೆ ಮೇಲಕ್ಕೆ ಎಸೆದ ಲಿಂಗವು ನೀರಿನ ಮೇಲೆಯೇ ಯಾವಾಗ ಸ್ಥಿರವಾಗಿ ನಿಂತಿತೋ, ಅಂದಿನಿಂದ ಶಿವನು ಸ್ಥಾಣುವೆಂದೇ ಹೆಸರಾದನು.”
ಆದಿತ್ಯವರ್ಣಂ ಕೌಶೇಯದ್ಯುತಿಬರ್ಹಧರಮರುಣವರ್ಣಪ್ರಸಾಧನಮಿನ್ದುಶೇಖರಂ ತ್ರಿಣೇತ್ರಂ ಸಾಯುಧವಾಹನಗಣಪತ್ನೀಕಂ ಭವನಾಮಾನಂ ಶ್ರೀರುದ್ರಮಾವಾಹಯಾಮಿ || ೧೦ ||
ಆದಿತ್ಯ / ಸೂರ್ಯನಂತಹ ಹೊಂಬಣ್ಣದವನಾದ, ದ್ಯುತಿ / ಹೊಳಪಿನಿಂದ ಕೂಡಿದ ಕೌಶೇಯ (“ಕೋಶೇ ಭವಂ ಕೌಶೇಯಮ್, ಕೃಮಿಕೋಶೋತ್ಥ-ವಸ್ತ್ರಾದಿ”― ಕೋಶದೊಳಗಿರುವಂಥದ್ದು ಕೌಶೇಯವು. ಹುಳದ ಗೂಡಿನಿಂದ ಮಾಡಿದ ವಸ್ತ್ರಾದಿಗಳು ಕೌಶೇಯವೆನಿಸಿವೆ) / ರೇಷ್ಮೆಯ ವಸ್ತ್ರವನ್ನು (ಬರ್ಹ ― ಸ್ತೃತೌ; ಸ್ತೃಞ್ > ಸ್ತೃ ಆಚ್ಛಾದನೇ) ಧರಿಸಿದ, ಕಶ್ಯಪ-ವಿನತೆಯರ ಮೊದಲ ಮಗನಾದ ವಿಷ್ಣುವಾಹನ ವೈನತೇಯ ಗರುಡನ ಅಣ್ಣನಾದ ವಿನತೆಯ ಆತುರಕ್ಕೆ ಬಲಿಯಾಗಿ ತತ್ತಿ ಅವಧಿಪೂರ್ವದಲ್ಲೇ ಆಕೆಯಿಂದಲೇ ಒಡೆಯಲ್ಪಟ್ಟು ಸೊಂಟದ ಕೆಳಭಾಗವು ಬೆಳಯದ ವಿಕಲಾಂಗನಾದ, ಸೂರ್ಯಪ್ರಕಾಶದ ತಾಪವನ್ನು ಕೊಂಚ ಲಘುವಾಗಿಸಿ ಲೋಕಕಾರುಣ್ಯನಾದ, ಸೂರ್ಯನ ಸಾರಥಿಯಾಗಿ ಏಕಚಕ್ರದ ಸಪ್ತಾಶ್ವದ ರಥವನ್ನು ಮುನ್ನಡೆಸುವ ಅರುಣನ ಕೆಂಬಣ್ಣವನ್ನು ತನ್ನ ಪ್ರಸಾಧನ / ಅಲಂಕಾರವನ್ನಾಗಿ (make up) ಮಾಡಿಕೊಂಡ, ಇಂದುಶೇಖರನೂ ತ್ರಿಣೇತ್ರನೂ ಆಯುಧ-ವಾಹನ-ಗಣ-ಪತ್ನೀಸಮೇತನಾದ ಭವ ನೆಂಬ ಹೆಸರಿನ ದಶಮ (೧೦ನೆಯ) ರುದ್ರದೇವನನ್ನು ಅಭಿಷೇಕಪೂರ್ವಕ ಅರ್ಚನೆಗಾಗಿ ಆವಾಹಿಸುತ್ತೇನೆ / ಆಹ್ವಾನ ಮಾಡುತ್ತೇನೆ.
ಕುನ್ದೇನ್ದುಸ್ವಚ್ಛವರ್ಣಮ್ ಅನುಪಮೇಯದ್ಯುತಿಬರ್ಹಧರಂ ಧೃತಮುದ್ರಾಪರಶುಹರಿಣಜಾನುಕಂ ಶುಕಾದಿಮುನಿಗಣಸಂಯುಕ್ತಂ ಶಾನ್ತಮನುಗ್ರಹಂ ಶ್ರೀವಾಸುಕಿ-ಶಙ್ಖ-ಗುಲಿಕ-ಮಹಾಶಙ್ಖ-ಶ್ವೇತಧನಞ್ಜಯ-ಧೃತರಾಷ್ಟ್ರ-ಶಙ್ಖಚೂಡಾಮಣಿ-ಮಹಾತಕ್ಷಕ-ಕಮ್ಬಲಾಶ್ವತರೈಲಾಪತ್ರ-ಕಾರ್ಕೋಟಕಾದಿನಾಗಭೂಷಣಾಙ್ಕಮಿನ್ದುಶೇಖರಂ ತ್ರಿಣೇತ್ರಂ ಸಾಯುಧವಾಹನಗಣಪತ್ನೀಕಂ ಕಪಾಲಿನಾಮಾನಂ ಶ್ರೀರುದ್ರಮಾವಾಹಯಾಮಿ || ೧೧ ||
ಕುಂದ ಎಂದರೆ ಒಂದು ವಿಧದ ಮಲ್ಲಿಗೆ, ಕೋಲುಮಲ್ಲಿಗೆ, ದುಂಡುಮಲ್ಲಿಗೆ, ಮೊಲ್ಲೆ ಹೂವು, ತಾವರೆ, ಪರಿಮಳಯುಕ್ತ ಕರವೀರ, ಕುಬೇರನ ನವನಿಧಿಗಳಲ್ಲೊಂದು, ೯ರ ಸಂಖ್ಯಾಸೂಚಕ, ವಿಷ್ಣು, ಪರ್ವತದ ಹೆಸರು ಇತ್ಯಾದಿ ಅರ್ಥಗಳಿವೆ. ಇಲ್ಲಿ ಕಪಾಲಿ ನಾಮಕ ರುದ್ರನ ಅಚ್ಛಬಿಳಿಬಣ್ಣಕ್ಕಾಗಿ ಮೊಲ್ಲೆಹೂವನ್ನು ಹೋಲಿಸಲಾಗಿದೆ. ಹಾಗೆಯೇ ಕುಂದಿರದ ಇಂದು / ಪೌರ್ಣಮಿಯ ಚಂದ್ರ ನಂತಹ ಸ್ವಚ್ಛ ಬಿಳಿಯ ಬಣ್ಣದವನೂ, ಹೋಲಿಸಲಾಗದಂತಹ (ಅನ್-ಉಪಮೇಯ), ಪ್ರಕಾಶ / ಹೊಳು / ಮೆರುಗು (ದ್ಯುತಿ), ಉಳ್ಳ ವಸ್ತ್ರ / ಆಚ್ಛಾದನ (ಬರ್ಹ) ವನ್ನು ಧರಿಸಿದ, ಜ್ಞಾನ-ಅಭಯ-ವರದಮುದ್ರಾಂಕಿತಹಸ್ತನೂ, ಪರಶು / ಕೊಡಲಿಯನ್ನು ಹೊಂದಿದವನೂ, ಹರಿಣ / ಜಿಂಕೆಯ ಚರ್ಮವನ್ನು ಮೊಣಕಾಲತನಕ ಸುತ್ತಿಕೊಂಡವನೂ, ವ್ಯಾಸಪುತ್ರ ಜೀವನ್ಮುಕ್ತ ಶಿವಾಂಶನಾದ ಶುಕಯೋಗಿಯೇ ಮೊದಲಾದ ಮುನಿಗಣದಿಂದ ಕೂಡಿದ, ಶಾಂತರೂಪಿಯಾಗಿ ಅನುಗ್ರಹದೃಷ್ಟಿಯನ್ನು ಬೀರುವ, ಶ್ರೀವಾಸುಕಿ-ಶಂಖ-ಗುಳಿಗ-ಮಹಾಶಂಖ-ಶ್ವೇತ (ಬಿಳಿಯ) ಧನಂಜಯ-ಧೃತರಾಷ್ಟ್ರ-ಶಂಖಚೂಡಾಮಣಿ-ಮಹಾತಕ್ಷಕ-ಕಂಬಲಾಶ್ವತ-ರೈಲಾಪತ್ರ-ಕಾರ್ಕೋಟಕವೇ ಮುಂತಾದ ನಾನಾ ನಾಗಗಳಿಂದ ವಿಭೂಷಿತನಾದವನೆಂಬ ಚಿಹ್ನೆ / ಸಂಕೇತ ವುಳ್ಳ, ಚಂದ್ರಮೌಳೀಶ್ವರನೂ, ಸೂರ್ಯ-ಚಂದ್ರ-ಅಗ್ನಿಯೆಂಬ ಮೂರು ಕಣ್ಣುಗಳನ್ನು ಕ್ರಮವಾಗಿ ತನ್ನ ಬಲ-ಎಡ-ಹಣೆಗಳಲ್ಲಿ ಹೊಂದಿರುವವನೂ, ತನ್ನ ಸಕಲ ಆಯುಧಗಳೂ, ತನ್ನ ಹಾಗೂ ತನ್ನ ಪರಿವಾರದ ನಂದೀ, ಸಿಂಹ / ವ್ಯಾಘ್ರ (ಪಾರ್ವತಿ), ಮೂಷಿಕ(ಗಣಪತಿ), ಮಯೂರಾ(ಕುಮಾರ)ದಿ ಸಕಲ ವಾಹನಗಳೂ, ವೀರಭದ್ರ-ಭೈರವ-ವಿನಾಯಕಾದಿ ಸಕಲ ಪ್ರಮಥಗಣಗಳೂ, ದಕ್ಷಪುತ್ರಿಯಾಗಿ ದಾಕ್ಷಾಯಿಣಿಯಾದ, ಪರ್ವತ / ಗಿರಿ ರಾಜನಾದ ಹಿಮವಂತನ ಪುತ್ರಿಯಾಗಿ ಪಾರ್ವತಿ / ಗಿರಿಜೆ / ಹೈಮವತೀ ಎನಿಸಿದ ಗೌರವರ್ಣದಿಂದ ಗೌರಿಯಾದ ಪತ್ನೀಸಮೇತನಾದ, ಕಪಾಲೀ (ಕಪಾಲಿನ್) ಎಂಬ ಹೆಸರಿನ ಏಕಾದಶಮ (೧೧ನೆಯ) ರುದ್ರದೇವನನ್ನು ಆವಾಹಿಸುತ್ತೇನೆ.
ಕಪಾಲೀ― “ಕಪಾಲಮಾಲಾ ಅಸ್ತಿ ಅಸ್ಯ ಇತಿ ಕಪಾಲೀ”― ಕಪಾಲ / ತಲೆಬುರುಡೆಗಳನ್ನೇ ಹಾರವನ್ನಾಗಿಸಿ ಸ್ಮಶಾನವಾಸಿಯಾದ / ರುದ್ರಭೂಮಿಯಲ್ಲಿ ನೆಲೆಸಿದ ರುದ್ರನನ್ನು ಕಪಾಲೀ ಎನ್ನಲಾಗಿದೆ. “ಕಂ ಮಸ್ತಕಂ ಪಾಲಯತಿ ಇತಿ ಕಪಾಲಃ” ತಲೆಯನ್ನು ರಕ್ಷಿಸುವುದೇ ಕಪಾಲವು. ಕಪಾಲಿನಾಮಕ ರುದ್ರನನ್ನು ನಂಬಿದ ಸಾಧಕರ ಪಂಗಡಕ್ಕೆ ಕಾಪಾಲಿಕರೆಂದು ಹೆಸರು. “ಕಂ ಬ್ರಹ್ಮಶಿರಃ ಪಾಲಯತಿ ವ್ರತಕಾಲೇ ಇತಿ ವಾ ಕಪಾಲೀ”― ಬ್ರಹ್ಮನು ಸೃಷ್ಟಿತಪೋವ್ರತನಿಷ್ಠನಾಗಿರುವಾಗ ಆತನ ಶಿರವನ್ನು ಪಾಲಿಸುವವನು ಪರಮೇಶ್ವರನಾದ್ದರಿಂದಲೂ ಶಿವನು ಕಪಾಲಿನ್. ನ-ಕಾರಾಂತ ಪುಲ್ಲಿಂಗ ಕಪಾಲಿನ್ ಶಬ್ದದ ಪ್ರಥಮಾವಿಭಕ್ತಿಯ ರೂಪಗಳು ಏಕ, ದ್ವಿ, ಬಹುವಚನಗಳಲ್ಲಿ ಕಪಾಲೀ, ಕಪಾಲಿನೌ, ಕಪಾಲಿನಃ ಎಂದಾಗುತ್ತದೆ. ಇನ್ನು, ಸ್ಕಾನ್ದಪುರಾಣದ ಆವನ್ತ್ಯಖಂಡದಲ್ಲಿ ಮೊದಲನೆಯದಾದ ಆವಂತ್ಯಕ್ಷೇತ್ರಮಾಹಾತ್ಮ್ಯದಲ್ಲಿ ಶಿವನಿಂದ ಬ್ರಹ್ಮನ ೫ನೆಯ ಕಪಾಲದ ಛೇದನ ಹಾಗೂ ಇಂತಹ ಬ್ರಹ್ಮನ ತಲೆಬುರುಡೆಯಿಂದ ಮಾಡಿದ ಭಿಕ್ಷಾಪಾತ್ರೆಯ ಧಾರಣೆಯಿಂದ “ಕಪಾಲೀ” ಎಂಬ ಹೆಸರಿನಿಂದ ದೇವತೆಗಳಿಂದ ಈ ಕ್ಷೇತ್ರದಲ್ಲಿ ದ್ವಾದಶಜ್ಯೋತಿರ್ಲಿಂಗಗಳಲ್ಲೊಂದು ಶಿವಲಿಂಗದ ಸ್ಥಾಪನೆಯಾಗುತ್ತದೆ. ಇದೇ ಪುರಾಣದ ಪ್ರಭಾಸಖಂಡದಲ್ಲಿ ಕಪಾಲೀಶ್ವರರುದ್ರಮಾಹಾತ್ಮ್ಯವು ವರ್ಣಿತವಾಗಿದೆ.
ಟಿಪ್ಪಣಿ―
ಏಕಾದಶರುದ್ರರ ಹೆಸರುಗಳು ಶ್ಲೋಕರೂಪದಲ್ಲಿ―
ಮೃಗವ್ಯಾಧಶ್ಚ ಶರ್ವಶ್ಚ ನಿರ್-ಋತಿಶ್ಚಾಜ-ಏಕಪಾತ್ |
ಅಹಿರ್ಬುಧ್ನ್ಯಃ ಪಿನಾಕೀ ಚ ಭವನಾಥೋ ಮಹೇಶ್ವರಃ |
ಸ್ಥಾಣುರ್ಭವಃ ಕಪಾಲೀ ಚ ರುದ್ರಾಶ್ಚೈಕಾದಶಾಃ ಸ್ಮೃತಾಃ ||
ಇವರ ವರ್ಣಾದಿಸಂಕ್ಷಿಪ್ತವಿವರ ಶ್ಲೋಕಮಯವಾಗಿ―
ಮೃಗವ್ಯಾಧಸ್ತು ಗಗನಾಚ್ಛರ್ವೋ ಮನ್ದಾರಗೌರತಃ |
ನಿರ್-ಋತಿಶ್ಚಾಥ ಗೋಕ್ಷೀರಾನ್ಮುಕ್ತಾಭಾದಜ-ಏಕಪಾತ್ ||
ನಾಗಾಧಿಪಾದಹಿರ್ಬುಧ್ನ್ಯಃ ಪಿನಾಕೀ ಚಾಞ್ಜನಾದಪಿ |
ಭವನಾಥಃ ಪಞ್ಚವರ್ಣಾದ್ಭಸ್ಮವರ್ಣಾನ್ಮಹೇಶ್ವರಃ ||
ಸ್ಥಾಣುಶ್ಚ ಕಲ್ಪವೃಕ್ಷಾಚ್ಚ ಭವಶ್ಚಾದಿತ್ಯವರ್ಣತಃ |
ಕುನ್ದೇನ್ದುಸ್ವಚ್ಛವರ್ಣಾಚ್ಚ ಕಪಾಲೀತಿ ವ್ಯವಸ್ಥಿತಿಃ ||
(ಆಧಾರ― ಮಂತ್ರಮಂಜರೀ ― ಮಿತ್ತೂರು ಸಂಪ್ರತಿಷ್ಠಾನ)
ಇನ್ನು, ಇಲ್ಲಿ ಬರುವ “ಧನಂಜಯ” ಎಂಬ ಹೆಸರಿನ ಬಗ್ಗೆ―
ಕಮ್ಬಲಾಶ್ವತರೌ ನಾಗೌ ಧೃತರಾಷ್ಟ್ರಬಲಾಹಕೌ |
ಮಣಿಮಾನ್ ಕುಣ್ಡಧಾರಶ್ಚ ಕಾರ್ಕೋಟಕಧನಞ್ಜಯೌ ||
(ವ್ಯಾಸಮಹಾಭಾರತ ೨|೯|೯)
ಕಂಬಲ, ಅಶ್ವತರ, ಧೃತರಾಷ್ಟ್ರ, ಬಲಾಹಕ, ಮಣಿಮಂತ, ಕುಂಡಧಾರ, ಕಾರ್ಕೋಟಕ, ಧನಂಜಯ ಮುಂತಾದ ಸರ್ಪರಾಜರು ವರುಣಸಭೆಯಲ್ಲಿ ವಿರಾಜಮಾನರಾಗಿರುವರು. ಪ್ರಸ್ತುತ ರುದ್ರನ ವರ್ಣನೆಯು ಇದೇ ಸರ್ಪರಾಜನನ್ನು ಹೇಳಿರುವುದೆಂಬುದು ಗ್ರಾಹ್ಯ. ರುದ್ರನು ಸರ್ಪಭೂಷಣನಷ್ಟೆ?
ಸರ್ವಾನ್ ಜನಪದಾನ್ ಜಿತ್ವಾ ವಿತ್ತಮಾಶ್ರಿತ್ಯ ಕೇವಲಮ್ |
ಮಧ್ಯೇ ಧನಸ್ಯ ತಿಷ್ಠಾಮಿ ತೇನಾಹುರ್ಮಾಂ ಧನಞ್ಜಯಮ್ ||
(ವ್ಯಾಸಮಹಾಭಾರತ ೪|೪೨|೧೩)
“ಎಲ್ಲ ರಾಜ್ಯಗಳನ್ನು / ಜಿಲ್ಲೆಗಳನ್ನು / ಜನಪದಗಳನ್ನು ಗೆದ್ದು, ಸಂಪತ್ತನ್ನಾಶ್ರಯವಾಗಿಸಿಕೊಂಡು ಧನರಾಶಿಯ ನಡುವೆ ನಾನಿರುವುದರಿಂದ (ಸಂಪದ್ಭರಿತನಾಗಿರುವುದರಿಂದ) ನನ್ನನ್ನು ಧನಂಜಯನೆನ್ನುವರು” ಎಂದಿರುವನು ಅರ್ಜುನ. ಹಾಗೆಯೇ, ಗೀತೆಯ ಶಾಂಕರಭಾಷ್ಯದಲ್ಲಿ “ಯತ್ ದಿಗ್ವಿಜಯೇ ಧನಂ ಪ್ರಭೂತಮ್ ಅಜಯತ್ ತೇನ ಧನಞ್ಜಯಃ | ‘ಪಾಣ್ಡವಾನಾಂ ಧನಞ್ಜಯಃ’ ಇತಿ ಭಗವದ್ವಚನಾತ್”― ದಿಗ್ವಿಜಯದ ಮೂಲಕ ಹೇರಳವಾದ ಧನವನ್ನು ಜಯಿಸಿ ಸಂಪಾದಿಸಿರುವುದರಿಂದ ಅರ್ಜುನನು ಧನಂಜಯನು. ಹಾಗೆಯೇ, ಪಾಂಡವರಲ್ಲಿ ತಾನು ಧನಂಜಯನೆಂಬ ಗೀತಾಚಾರ್ಯೋಕ್ತಿಯಿಂದ, ಅರ್ಜುನನು ಹಿಂದಿನ ನರ-ನಾರಾಯಣ ಋಷಿಗಳ ರೂಪದ ಭಗವದವತಾರದಲ್ಲಿ ನರನಾಗಿದ್ದ ಶೇಷನಾಗನ ಅಂಶವೇ ಆಗಿರುವನು. ರಾಮನೊಂದಿಗೆ ಲಕ್ಷ್ಮಣನಾಗಿದ್ದು, ಬಳಿಕ ಕೃಷ್ಣನೊಂದಿಗೆ ಅರ್ಜುನನಾದನು.
ಅಲ್ಲದೆ, ಪಂಚ ಉಪಪ್ರಾಣಗಳಲ್ಲಿ ಧನಂಜಯನೂ ಒಬ್ಬ. ನಾಗ, ಕೂರ್ಮ, ಕೃಕಲ, ದೇವದತ್ತ, ಧನಂಜಯ ― ಇವೇ ನಮ್ಮ ದೇಹದಲ್ಲಿರುವ ಪಂಚ ಉಪಪ್ರಾಣಗಳು. ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ ― ಇವು ನಮ್ಮ ದೇಹದ ಪಂಚ ಪ್ರಾಣಗಳು. “ಧನಞ್ಜಯಃ ಪೋಷಣಕರಃ” ― ವೇದಾನ್ತಸಾರದ ಪ್ರಕಾರ. “ನ ಜಹಾತಿ ಮೃತಂ ಚಾಪಿ ಸರ್ವವ್ಯಾಪೀ ಧನಞ್ಜಯಃ” ಎಂದಿದೆ ಸುಬೋಧಿನೀ.
“ಧನಂ ಜಯತಿ ಸಮ್ಪಾದಯತಿ ಇತಿ”, “ಶ್ರಿಯಮಿಚ್ಛೇತ್ ಹುತಾಶನಾತ್” ಎಂಬುದರಿಂದ ಧನಂಜಯನೆಂದರೆ ಅಗ್ನಿಯೆಂದೂ ಆಗುತ್ತದೆ.
|| ಇತಿ ದಮ್ಬೆಕೃಷ್ಣಮೂರ್ತಿಶಾಸ್ತ್ರಿಣಾ ಕರ್ಣಾಟಕೀಯಭಾಷಾಯಾಂ ವಿರಚಿತಂ ರುದ್ರಪೀಠಿಕಾಭಾಷ್ಯಸಹಿತಂ ಲಘುನ್ಯಾಸಭಾಷ್ಯಮ್, ರುದ್ರಾಧ್ಯಾಯಮಾಹಾತ್ಮ್ಯೇನ ಚ ಸಂವಲಿತಮ್ ಸಮ್ಪೂರ್ಣಮಸ್ತು ||
|| ಇಲ್ಲಿಗೆ ದಂಬೆಕೃಷ್ಣಮೂರ್ತಿಶಾಸ್ತ್ರಿಯಿಂದ ಕನ್ನಡಭಾಷೆಯಲ್ಲಿ ವಿರಚಿತವಾದ ರುದ್ರಾಧ್ಯಾಯಮಹಾತ್ಮೆಯಿಂದ ಕೂಡಿದ, ರುದ್ರಪೀಠಿಕಾಸಹಿತವಾದ, ಲಘುನ್ಯಾಸಭಾಷ್ಯವು ಗುರು-ದೈವಾನುಗ್ರಹದಿಂದ ಪರಿಪೂರ್ಣವಾದುದಾಗಲಿ ||
|| ಶ್ರೀಗುರುಭ್ಯೋ ನಮಃ ||
|| ಹರೇ ರಾಮ ||
Comments
Post a Comment