ಉಪನಿಷದ್ಭಾಷ್ಯಾರ್ಥಸಮುಚ್ಚಯಃ ೨— ತೈತ್ತಿರೀಯೋಪನಿಷತ್ ೧
ತೈತ್ತಿರೀಯ ಉಪನಿಷತ್ತು
ಪೀಠಿಕಾಭಾಗ
ಇದು ಕೃಷ್ಣಯಜುರ್ವೇದದ ತೈತ್ತಿರೀಯಸಂಹಿತೆಯ ವೇದಾಂತಭಾಗವಾಗಿದ್ದು, ತೈತ್ತಿರೀಯ ಆರಣ್ಯಕದ ೭,೮,೯ನೇ ಅಧ್ಯಾಯಗಳೇ ಅನುಕ್ರಮವಾಗಿ ಇದರ ೩ ಭಾಗಗಳಾಗಿ— ಶೀಕ್ಷಾವಲ್ಲೀ, ಬ್ರಹ್ಮಾನಂದವಲ್ಲೀ ಹಾಗೂ ಭೃಗುವಲ್ಲೀ ಎಂಬುದಾಗಿ— ವಿಸ್ತೃತವಾಗಿದೆ. ಇದು ಬ್ರಹ್ಮಚರ್ಯಾಶ್ರಮದಿಂ(ವಿದ್ಯಾರ್ಥಿದೆಸೆಯಿಂ)ದ ಗೃಹಸ್ಥಾಶ್ರಮಕ್ಕೆ ಕಾಲಿಡುತ್ತಿರುವ ಮೋಕ್ಷಾರ್ಥೀ ಬ್ರಹ್ಮಜಿಜ್ಞಾಸುಗಳಿಗೆ, ಸರಳವಾಗಿ ಅನುಷ್ಠಾನಕ್ಕೆ ತಂದು ಸಾಧನೆ ಮಾಡಬಹುದಾದ ಬಹಳಷ್ಟು ಮಹತ್ತ್ವಪೂರ್ಣ ವಿಚಾರಧಾರೆಗಳನ್ನೊಳಗೊಂಡಿದೆ.
ಮೊದಲನೆಯ ಶೀಕ್ಷಾವಲ್ಲೀ / ಶಿಕ್ಷಾವಲ್ಲಿಯು ೧೨ ಅನುವಾಕಗಳಿಂದ ಕೂಡಿದ್ದು, ‘ಏನೇನು ಕಲಿಯಬೇಕು, ವೇದೋಚ್ಚಾರಣಾಕ್ರಮ, ಅಧ್ಯಯನ ಮತ್ತು ನೀತಿಬೋಧಕವಿಚಾರ-ನಿಯಮಗಳ ಸಹಿತ ಮೂಲಭೂತ ಜ್ಞಾನದ ತಳಹದಿಯಾಗಿದೆ.
ಎರಡನೆಯದಾದ ಆನಂದವಲ್ಲಿ / ಬ್ರಹ್ಮಾನಂದವಲ್ಲಿಯು ‘ಬ್ರಹ್ಮವು ಆನಂದಸ್ವರೂಪ’ ಎಂಬುದನ್ನು ೯ ಅನುವಾಕಗಳಲ್ಲಿ ವಿವರಿಸುತ್ತದೆ.
ಮೂರನೆಯ / ಕೊನೆಯದಾದ ಭೃಗುವಲ್ಲಿಯು ಬ್ರಹ್ಮಾನಂದವನ್ನು ಪಡೆಯಬೇಕಾದರೆ ತಪಸ್ಸು ಮಾಡಬೇಕೆಂದು ಹೇಳುವುದು. ಇದರಲ್ಲೇ ವರುಣನು ತನ್ನ ಮಗ ಭೃಗುವಿಗೆ ವಾರುಣೀ ವಿದ್ಯೆಯನ್ನು ಉಪದೇಶಿಸಿದ ಕುರಿತು ೧೦ ಅನುವಾಕಗಳಲ್ಲಿ ವಿವರಿಸಿದೆ.
ಇದೊಂದು ಮುಖ್ಯವಾದ ಸಸ್ವರ ಉಪನಿಷತ್. ಶಂಕರಾಚಾರ್ಯರು ತಮ್ಮ ಬ್ರಹ್ಮಸೂತ್ರಭಾಷ್ಯದಲ್ಲಿ ಅತಿ ಹೆಚ್ಚು ಉದ್ಧರಿಸಿದ್ದು. ಗುರುಕುಲದ ಅಧ್ಯಯನದ ಬಳಿಕ ಶಿಷ್ಯನೋರ್ವನು ತನ್ನ ಮನೆಗೆ ಹಿಂತಿರುಗುವಾಗ, ಗುರುವು ಬೋಧಿಸುವ ಆತನ ಭಾವೀಜೀವನಕ್ಕೆ ಅಗತ್ಯವಾದ ಕಿವಿಮಾತು, ನೀತಿಪಾಠ, ಬುದ್ಧಿವಾದಗಳನ್ನೆಲ್ಲ ಒಳಗೊಂಡಿದೆ. ಅವನು ಏನು ಮಾಡಬೇಕು? ಏನು ಮಾಡಬಾರದು? ಎಂಬಿತ್ಯಾದಿಗಳ ವಿವರ ಇದರಲ್ಲಿದೆ.
ಇದರಲ್ಲಿ ಗೃಹಸ್ಥಾಶ್ರಮಿಗಳಾಗಿರುವ ಜನಸಾಮಾನ್ಯರಿಗೆ “ವಾರುಣೀ ವಿದ್ಯೆ” ಎಂಬ ಸುಲಭ ಮಾರ್ಗದ ಉಪಾಸನಾ ಪದ್ಧತಿಯ ವಿವರಣೆ ಇದೆ. ‘ವರುಣ’ನು ತನ್ನ ಮಗ ‘ಭೃಗು’ವಿ(ವಾರುಣಿ)ಗೆ ಇದನ್ನು ಉಪದೇಶಿಸಿದುದರಿಂದ ಇದು ವಾರುಣೀ ವಿದ್ಯೆ. ಘೋರಪಾತಕಿಯೂ ಪಶ್ಚಾತ್ತಾಪ ಹೊಂದಿ, ಬಳಿಕ ಈ ಮಾರ್ಗದ ಉಪಾಸನೆಯಿಂದ ಆ ಜನ್ಮದಲ್ಲೇ ಅಮೃತತ್ವವನ್ನು ಪಡೆಯಬಹುದಾದ ಅತ್ಯಂತ ಸರಳ ಪದ್ಧತಿಯಿದು.
ಇಂದು ಗುರುಕುಲಗಳಿಲ್ಲವಾದರೂ, ವೇದಾಧ್ಯಾಯಿಗಳು ವಿರಳವಾದರೂ, ಈ ಉಪನಿಷತ್ತು ಇಂದಿಗೂ ಪ್ರಸ್ತುತವೇ. ಶಾಲಾಕಾಲೇಜುಗಳಲ್ಲಿ ಓದು ಮುಗಿಸಿ, ಜೀವನಕ್ಕಾಗಿ ಯಾವುದೇ ಉದ್ಯೋಗವನ್ನು ಹಿಡಿದ ಯಾವುದೇ ಗೃಹಸ್ಥನಿಗೂ ಇದು ಅಗತ್ಯ. ಬ್ರಹ್ಮಜಿಜ್ಞಾಸೆಯುಳ್ಳ ಯಾವುದೇ ಸಾಧಕನಿಗೂ ಈ ಉಪನಿಷತ್ತು ನೆರವು ನೀಡುತ್ತದೆ.
ವಾರುಣೀವಿದ್ಯೆಯನ್ನರಿತು ಅದರಂತೆ ಬಾಳಿದ ಉಪಾಸಕನಲ್ಲಿ ಯಾವ ಅಲೌಕಿಕ ಸಿದ್ಧಿಗಳೂ ಕಾಣದಿದ್ದರೂ, ‘ಮಹಾತ್ಮ’ ನೆಂಬ ಗುರುತು ಸಿಗದಿದ್ದರೂ, ಅಂಥ ಹೆಚ್ಚುಗಾರಿಕೆಯಿರದಿದ್ದರೂ, ಅವನಿಗೆ ಸದ್ಯೋಮುಕ್ತಿಯಾಗದಿದ್ದರೂ, ಜನಸಾಮಾನ್ಯರಿಗೆ ಹೆಚ್ಚು ಅನುಕೂಲಕರವಾದ ಈ ವಿದ್ಯೆಯಿಂದ ಅವನು ಎಲ್ಲರಂತೆ ಸಂಸಾರಸ್ಥನಾಗಿ ಒಂದುದಿನ ಎಲ್ಲರಂತೆ ಶರೀರತ್ಯಾಗ ಮಾಡಿದರೂ, ಅವನಿಗೆ ಪುನರ್ಜನ್ಮವಿಲ್ಲ; ಸದ್ಗತಿ ಸಿಕ್ಕಿ, ನಿಧಾನವಾಗಿಯಾದರೂ ಕ್ರಮಮುಕ್ತಿಯಾಗುವುದು. ಸಾಧನೆಯ ಹಾದಿ ಸುಗಮ; ಪತನದ ಭಯವಿರದು.
ರಸಮಯನಾದ ಜೀವಾತ್ಮನು ಜಗದೆಲ್ಲೆಡೆ ಹಬ್ಬಿರುವ ಸಹಜಾನಂದವನ್ನು ಗುರುತಿಸಿ ಆನಂದಮಯತ್ವವನ್ನು ಹೊಂದಬೇಕೆನ್ನುವುದೇ ಈ ತೈತ್ತಿರೀಯ ಉಪನಿಷತ್ತಿನ ಸಂದೇಶ.
ಶಾಙ್ಕರಭಾಷ್ಯಮ್
ಭಾಷ್ಯ—
೧. ಮಂಗಲಸ್ತುತಿ
ಯಸ್ಮಾಜ್ಜಾತಂ ಜಗತ್ಸರ್ವಂ ಯಸ್ಮಿನ್ನೇವ ಪ್ರಲೀಯತೇ ।
ಯೇನೇದಂ ಧಾರ್ಯತೇ ಚೈವ ತಸ್ಮೈ ಜ್ಞಾನಾತ್ಮನೇ ನಮಃ ॥೧॥
(ಯಸ್ಮಾತ್) ಯಾವನಿಂದ, (ಸರ್ವಂ ಜಗತ್) ಜಗತ್ತೆಲ್ಲವೂ, (ಜಾತಮ್) ಜನಿಸಿದೆಯೋ, (ಯಸ್ಮಿನ್ ಏವ) ಯಾವನಲ್ಲಿಯೇ ಇದೆಲ್ಲವೂ, (ಪ್ರಲೀಯತೇ) ಲಯಹೊಂದುತ್ತದೆಯೋ, (ಯೇನ ಇದಂ ಧಾರ್ಯತೇ ಚ) ಮತ್ತು ಯಾವನಿಂದ ಈ ಜಗವೆಲ್ಲವೂ ಆಧರಿಸಲ್ಪಡುವುದೋ / ಯಾವನು ಇದಕ್ಕೆಲ್ಲ ಆಧಾರವಾಗಿರುವನೋ, (ತಸ್ಮೈ) ಅಂತಹ, (ಜ್ಞಾನಾತ್ಮನೇ) ಜ್ಞಾನಸ್ವರೂಪಿಯಾದ ಆತ್ಮ / ಪರಮಾತ್ಮನಿಗೆ, (ನಮಃ) ನಮಸ್ಕಾರ.
ಭಾಷ್ಯ—
ಯೈರಿಮೇ ಗುರುಭಿಃ ಪೂರ್ವಂ ಪದವಾಕ್ಯಪ್ರಮಾಣತಃ ।
ವ್ಯಾಖ್ಯಾತಾಸ್ಸರ್ವವೇದಾರ್ಥಾ-
ಸ್ತಾನ್ ನಿತ್ಯಂ ಪ್ರಣತೋsಸ್ಮ್ಯಹಮ್ ॥೨॥
(ಪೂರ್ವಮ್) ಹಿಂದೆ, (ಇಮೇ) ಈ, (ಸರ್ವವೇದಾರ್ಥಾಃ) ಎಲ್ಲಾ ವೇದಗಳ ಅರ್ಥಗಳು, (ಪದವಾಕ್ಯಪ್ರಮಾಣತಃ) ಪದ-ವಾಕ್ಯ-ಪ್ರಮಾಣಾದಿಗಳ ಮೂಲಕ, (ಯೈಃ ಗುರುಭಿಃ) ಯಾವ ಗುರುಗಳಿಂದ, (ವ್ಯಾಖ್ಯಾತಾಃ) ವ್ಯಾಖ್ಯಾನಿಸಲ್ಪಟ್ಟಿವೆಯೋ, (ತಾನ್) ಅವರನ್ನು, (ಅಹಮ್) ನಾನು, (ಪ್ರಣತಃ ಅಸ್ಮಿ) ನಮಸ್ಕರಿಸಿದವನಾಗಿದ್ದೇನೆ.
ಭಾಷ್ಯ—
ತೈತ್ತಿರೀಯಕಸಾರಸ್ಯ ಮಯಾऽऽಚಾರ್ಯಪ್ರಸಾದತಃ ।
ವಿಸ್ಪಷ್ಟಾರ್ಥರುಚೀನಾಂ ಹಿ ವ್ಯಾಖ್ಯೇऽಯಂ ಸಪ್ರಣೀಯತೇ ॥೩॥
(ಆಚಾರ್ಯಪ್ರಸಾದತಃ ಹಿ) ಗುರುಕೃಪೆಯ ದೆಸೆಯಿಂದಲೇ, (ವಿಸ್ಪಷ್ಟಾರ್ಥರುಚೀನಾಂ) ವಿಶೇಷವಾಗಿ, ಸ್ಪಷ್ಟವಾದ ಅರ್ಥವನ್ನರಿಯುವ ಅಭಿರುಚಿಯುಳ್ಳವರಿಗಾಗಿ, (ತೈತ್ತಿರೀಯಕಸಾರಸ್ಯ) ತೈತ್ತಿರೀಯಕೃಷ್ಣಯಜುರ್ವೇದದ ಸಾರರೂಪವಾದ ತೈತ್ತಿರೀಯೋಪನಿಷತ್ತಿನ, (ಇಯಮ್ ವ್ಯಾಖ್ಯಾ) ಈ ವಿವರಣೆಯು, (ಮಯಾ) ನನ್ನಿಂದ, (ಸಪ್ರಣೀಯತೇ) ಸಮ್ಯಕ್ ರೀತಿಯಿಂದ ಪ್ರಣೀತವಾಗಿದೆ/ ವಿರಚಿಸಲ್ಪಟ್ಟಿದೆ/ ಪ್ರಕೃಷ್ಟವಾದ, ಶ್ರೇಷ್ಠವಾದ ರೀತಿಯಲ್ಲಿ ಆನೀತವಾಗಿದೆ/ ಅಂತರಂಗದಿಂದ ಹೊರಕ್ಕೆ ತರಲ್ಪಟ್ಟಿದೆ.
ಭಾಷ್ಯ—
೨. ಕರ್ಮಗಳನ್ನು ಇಲ್ಲವಾಗಿಸುವಿಕೆ
ನಿತ್ಯಾನಿ ಅಧಿಗತಾನಿ ಕರ್ಮಾಣಿ ಉಪಾತ್ತದುರಿತಕ್ಷಯಾರ್ಥಾನಿ, ಕಾಮ್ಯಾನಿ ಚ ಫಲಾರ್ಥಿನಾಂ ಪೂರ್ವಸ್ಮಿನ್ ಗ್ರನ್ಥೇ । ಇದಾನೀಂ ಕರ್ಮೋಪಾದಾನಹೇತುಪರಿಹಾರಾಯ ಬ್ರಹ್ಮವಿದ್ಯಾ ಪ್ರಸ್ತೂಯತೇ ||
ಅನ್ವಯಾರ್ಥಃ-
ನಿತ್ಯಾನಿ ಕರ್ಮಾಣಿ (ಸಂಧ್ಯಾವಂದನವೇ ಮುಂತಾದ ನಿತ್ಯವೂ ಅನುಷ್ಠಾನಿಸಬೇಕಾದ ಕರ್ಮಗಳು), ಉಪಾತ್ತದುರಿತಕ್ಷಯಾರ್ಥಾನಿ (ಜನ್ಮ-ಜನ್ಮಾಂತರಗಳಲ್ಲಿ ಸಂಗೃಹೀತವಾದ ಪಾಪಗಳನ್ನು ಕರಗಿಸುವುದಕ್ಕಾಗಿ,ಕಡಿಮೆ ಮಾಡಲೋಸುಗ ಇರುವಂಥವು); ಚ (ಮತ್ತು) ಕಾಮ್ಯಾನಿ (ಪುತ್ರಕಾಮೇಷ್ಟಿಯೇ ಮೊದಲಾದ ಕಾಮ್ಯಕರ್ಮಗಳು), ಫಲಾರ್ಥಿನಾಂ (ವಿಶೇಷ ಫಲ/ಇಷ್ಟಾರ್ಥಗಳನ್ನು ಬಯಸುವವರಿಗಾಗಿ ) (ಇತಿ- ಎಂಬುದಾಗಿ) ಪೂರ್ವಸ್ಮಿನ್ ಗ್ರನ್ಥೇ (ಹಿಂದಿನ ಗ್ರಂಥದಲ್ಲಿ) ಅಧಿಗತಾನಿ (ಪ್ರಾಪ್ತವಾಗಿವೆ / ಅಧ್ಯಯನ ಮಾಡಲ್ಪಟ್ಟಿವೆ.)।
ಈಗ, ಕರ್ಮ ಮಾಡಲು ಕಾರಣವಾಗುವ ಎಲ್ಲವನ್ನೂ/ ಕರ್ಮಾಚರಣೆಯಲ್ಲಿ ಪರ್ಯವಸಾನಗೊಳ್ಳುವ ಎಲ್ಲ ಕಾರಣಗಳನ್ನೂ ಇಲ್ಲವಾಗಿಸಲು, ಬ್ರಹ್ಮದ ಅರಿವನ್ನು ಬೋಧಿಸುವ ಶಾಸ್ತ್ರ (ವೇದಾಂತ/ಉಪನಿಷತ್/ಉತ್ತರಮೀಮಾಂಸೆ)ವು ಪ್ರಸ್ತಾವಿಸಲ್ಪಡುತ್ತದೆ.
ತಾತ್ಪರ್ಯಮ್-
ಬ್ರಹ್ಮಜ್ಞಾನವುಂಟಾದರೆ ಸಮಸ್ತ ಕರ್ಮಗಳೂ ಆತನ ಪಾಲಿಗೆ ಶೂನ್ಯ. “ನಾನು ಮಾಡುವವ”ನೆಂಬ ಅಭಿಮಾನವನ್ನು ಬಿಟ್ಟಿರುವುದರಿಂದ, “ನಾಹಂ ಕರ್ತಾ”, ಅಹಂಭಾವದಿಂದ ಬ್ರಹ್ಮಭಾವಕ್ಕೆ ಅವನ ಮನಃಸ್ಥಿತಿಯು ಮೇಲೇರುವುದು. ಅಂಥವನು ಮಾಡಿದರೂ ಅವನಿಗೆ ಅದರ ಫಲವು ಅಂಟಲಾರದು. ಕಮಲಪತ್ರಕ್ಕೆ ನೀರು ಹೇಗೋ ಹಾಗೆ. ಆದ್ದರಿಂದ ಅದು ಫಲದಾಯಕವಲ್ಲದ್ದರಿಂದ ಕರ್ಮವೆನಿಸಲಾರದು. ಪಾಪಪುಣ್ಯಗಳ ಲೇಪವಿರಲಾರದು. ಇದರಿಂದ ಅವನು ಕರ್ಮಾತೀತನೂ, ಕರ್ಮಫಲಾತೀತನೂ, ನಿಷ್ಕಾಮಕರ್ಮಯೋಗಿಯೂ ಆಗುವನು. ಹೀಗೆ ಬ್ರಹ್ಮಜ್ಞಾನವು ಕರ್ಮಕ್ಕೆ/ ತತ್ಫಲಕ್ಕೆ ಕಾರಣವಾಗುವ ಎಲ್ಲವನ್ನೂ ಕೊನೆಗಾಣಿಸುವುದು. ಆದ್ದರಿಂದ ಮೇಲಿನ ವಾಕ್ಯದಲ್ಲಿ ಆಚಾರ್ಯ ಆದಿಶಂಕರ ಭಗವತ್ಪಾದರು ಹೀಗೆ ಹೇಳಿದ್ದಾರೆ.
೩. ಕರ್ಮ ಹಾಗೂ ಮೋಕ್ಷಗಳ ಮೂಲ
ಕರ್ಮಹೇತುಃ ಕಾಮಃ ಸ್ಯಾತ್ , ಪ್ರವರ್ತಕತ್ವಾತ್ । ಆಪ್ತಕಾಮಾನಾಂ ಹಿ ಕಾಮ-ಅಭಾವೇ ಸ್ವ-ಆತ್ಮನಿ ಅವಸ್ಥಾನಾತ್ ಪ್ರವೃತ್ತ್ಯನುಪಪತ್ತಿಃ (ಪ್ರವೃತ್ತಿ+ಅನುಪಪತ್ತಿಃ) । ಆತ್ಮಕಾಮತ್ವೇ ಚ ಆಪ್ತಕಾಮತಾ । ಆತ್ಮಾ ಚ ಬ್ರಹ್ಮ । ತದ್ವಿದಃ ಹಿ ಪರಪ್ರಾಪ್ತಿಂ ವಕ್ಷ್ಯತಿ । ಅತಃ ಅವಿದ್ಯಾ-ನಿವೃತ್ತೌ ಸ್ವಾತ್ಮನಿ ಅವಸ್ಥಾನಂ ಪರಪ್ರಾಪ್ತಿಃ, ‘ಅಭಯಂ ಪ್ರತಿಷ್ಠಾಂ ವಿನ್ದತೇ’, ‘ಏತಮ್ ಆನನ್ದಮಯಮ್ ಆತ್ಮಾನಮ್ ಉಪಸಙ್ಕ್ರಾಮತಿ’ ಇತ್ಯಾದಿಶ್ರುತೇಃ ||
ಬಯಕೆ/ ಆಸೆಯೇ ಕರ್ಮಕ್ಕೆ ಕಾರಣ; ಯಾಕೆಂದರೆ ಕರ್ಮದಲ್ಲಿ ಪ್ರವರ್ತಿಸುವಂತೆ/ ತೊಡಗುವಂತೆ ಮಾಡುವುದೇ ಈ ಬಯಕೆ.
ಬಯಕೆಗಳನ್ನು ಪೂರೈಸಿಕೊಂಡವರಿಗೆಯಾದರೋ, ಆಸೆಗಳಿಲ್ಲದಿರುವುದರಿಂದ ತಮ್ಮ ಆತ್ಮಭಾವದಲ್ಲೇ ಅವರು ಸ್ಥಿತರಾಗಿರುವುದರಿಂದ, ಅವರ ‘ಕರ್ಮದಲ್ಲಿ ತೊಡಗಿಸಿಕೊಳ್ಳುವಿಕೆ’ಯು ಅರ್ಥಹೀನ / ನಿರಾಧಾರವಾದುದು.
ಹಾಗೆಯೇ, ಆತ್ಮವನ್ನರಿಯಬೇಕೆಂಬ ವಾಂಛೆಯು / ಬಯಕೆಯು ಉಂಟಾಗುವುದೇ / ಆತ್ಮಕಾಮತ್ವವೇ, ಸಕಲ ಆಸೆಗಳನ್ನು ಪೂರೈಸಿಕೊಂಡಿರುವ ಸ್ಥಿತಿ / ಆಪ್ತಕಾಮತೆಯಾಗಿದೆ.
ಆತ್ಮವೇ ಬ್ರಹ್ಮವು; ಸಕಲ ಚರಾಚರಾಂತರ್ಗತ ಚೈತನ್ಯ ಶಕ್ತಿಯು.
ಅದನ್ನು ತಿಳಿದವನೇ ಮೋಕ್ಷದ ಕುರಿತು ಹೇಳುವನು; ಬೇರೆಯವರಿಗೆ ಅದನ್ನು ಬೋಧಿಸುವ ಅಧಿಕಾರವಿಲ್ಲ.
ಆದ್ದರಿಂದ, ಲೌಕಿಕ ರಾಗ-ದ್ವೇಷಾದಿ ಅವಿದ್ಯೆಯು ನಾಶವಾದವನು, ತನ್ನಾತ್ಮಭಾವದಲ್ಲೇ ನೆಲೆನಿಂತಾಗ ಆತನಿಗೆ ಪರಗತಿಯು / ಮುಕ್ತಿಯು ಪ್ರಾಪ್ತವಾಯಿತು ಎನ್ನುತ್ತಾರೆ. ‘ನಿರ್ಭಯತ್ವವನ್ನೂ, ಸ್ಥೈರ್ಯ / ಸ್ಥಿರತೆ / ಗೌರವವನ್ನೂ ಹೊಂದುತ್ತಾನೆ’, ‘ಈ ಆನಂದಮಯನಾದ ಆತ್ಮನನ್ನು ಸಮೀಪಿಸುತ್ತಾನೆ’ ಇತ್ಯಾದಿ ವೇದೋಕ್ತಿಗಳಲ್ಲಿ ಹೇಳಿದ ಸ್ಥಿತಿಯು ಇದೇ ಆಗಿದೆ.
೪. ಮೋಕ್ಷದ ಸ್ವರೂಪ
ಕಾಮ್ಯಪ್ರತಿಷಿದ್ಧಯೋಃ ಅನಾರಂಭಾತ್ ಆರಬ್ಧಸ್ಯ ಚ ಉಪಭೋಗಾನಾಂ ಕ್ಷಯಾತ್ ನಿತ್ಯಾನುಷ್ಠಾನೇನ ಚ ಪ್ರತ್ಯವಾಯ-ಅಭಾವಾತ್ ಅಯತ್ನತಃ ಏವ ಸ್ವಾತ್ಮನಿ ಅವಸ್ಥಾನಃ ಮೋಕ್ಷಃ | ಅಥವಾ, ನಿರತಿಶಯಾಯಾಃ ಪ್ರೀತಃ ಸ್ವರ್ಗಶಬ್ದವಾಚ್ಯಾಯಾಃ ಕರ್ಮಹೇತುತ್ವಾತ್ ಕರ್ಮಭ್ಯಃ ಏವ ಮೋಕ್ಷಃ ಇತಿ ಚೇತ್ ||
ಫಲಾಪೇಕ್ಷೆಯುಳ್ಳ ಕಾಮ್ಯ ಕರ್ಮಗಳಲ್ಲಿ ಹಾಗೂ ಮಾಡಬಾರದ ನಿಷಿದ್ಧಕರ್ಮಗಳಲ್ಲಿ ತೊಡಗದಿರುವುದರಿಂದ, ಮತ್ತು ಈಗಾಗಲೇ ಮಾಡಿರುವ (ಪ್ರಾರಬ್ಧ) ಕರ್ಮಗಳ ಫಲಸ್ವರೂಪವಾದ ವಿವಿಧ ಉಪಭೋಗಸಾಧನಗಳು ಈಗಾಗಲೇ ಅನುಭವಿಸಿ ಮುಗಿದುಹೋಗಿರುವುದರಿಂದ, ಹಾಗೂ ನಿತ್ಯಾನುಷ್ಠಾನವಾದ ಸಂಧ್ಯಾವಂದನಾದಿಗಳಿಂದ ಮಾಯಾರೂಪೀ ಅವಿದ್ಯಾ ಅಜ್ಞಾನಾದಿ ಆವರಣ-ವಿಕ್ಷೇಪಗಳ ಅಡೆತಡೆಗಳು ಇಲ್ಲವಾಗುವುದರಿಂದ, ಪ್ರಯತ್ನವಿಲ್ಲದೇ ತನ್ನ ಸ್ವರೂಪವಾದ ಆತ್ಮನಲ್ಲೇ ಮನಸ್ಸು, ಚಿತ್ತ, ಬುದ್ಧಿ, ಅಹಂಕಾರಗಳೆಂಬ ಅಂತಃಕರಣಚತುಷ್ಟಯವು ನೆಲೆ ನಿಲ್ಲುವಿಕೆಯೇ ಮೋಕ್ಷವು. (ಇಲ್ಲಿ ಆವರಣವೆಂದರೆ ನಿಜದ ಅರಿವಾಗದಂತೆ ಮಾಡುವ ಮಾಯಾಕವಚ. ಕನ್ನಡಿಗೆ ಧೂಳು ಕವಿದಂತೆ. ವಿಕ್ಷೇಪವೆಂದರೆ ನಿಜವನ್ನು ಬಿಟ್ಟು ಇನ್ನೊಂದು ಮಿಥ್ಯೆಯನ್ನೇ ನಿಜವೆಂದು ತಿಳಿಯುವುದು; ಹಗ್ಗವನ್ನು ಹಗ್ಗವೆಂದರಿಯದೆ ಹಾವೆಂದು ಭಾವಿಸುವುದು; ದೇಹವೇ ಆತ್ಮವೆಂದು ತಿಳಿಯುವುದು.)
ಹಾಗಲ್ಲದಿದ್ದರೆ, ಯಜ್ಞಾದಿಕರ್ಮಗಳಿಂದಾಗಿ ಅತಿಶಯವಾದ ಸುಖಯುಕ್ತ ಸ್ವರ್ಗವು ಪ್ರಾಪ್ತಿಯಾಗುತ್ತದೆ ಎಂಬ ಮಾತಿನಿಂದ ಸಂತುಷ್ಟನಾಗಿ, ಕರ್ಮಗಳಿಂದಲೇ ಮೋಕ್ಷವು ಎಂದರೆ,
೫. ಕರ್ಮಫಲದ ನಶ್ವರತೆ
ನ, ಕರ್ಮ-ಅನೇಕತ್ವಾತ್ | ಅನೇಕಾನಿ ಹಿ ಆರಬ್ಧಫಲಾನಿ, ಅನಾರಬ್ಧಫಲಾನಿ ಚ ಅನೇಕಜನ್ಮಾನ್ತರಕೃತಾನಿ ವಿರುದ್ಧಫಲಾನಿ ಕರ್ಮಾಣಿ ಸಮ್ಭವನ್ತಿ | ಅತಃ ತೇಷು ಅನಾರಬ್ಧ-ಫಲಾನಾಮ್ ಏಕಸ್ಮಿನ್ ಜನ್ಮನಿ ಉಪಭೋಗೇನ ಕ್ಷಯ-ಅಸಮ್ಭವಾತ್ ಶೇಷ-ಕರ್ಮ-ನಿಮಿತ್ತ-ಶರೀರ-ಆರಮ್ಭ-ಉಪಪತ್ತಿಃ | ಕರ್ಮಶೇಷ-ಸದ್-ಭಾವ-ಸಿದ್ಧಿಃ ಚ ‘ತದ್ ಯಃ ಇಹ ರಮಣೀಯಚರಣಾ’, ‘ತತಃ ಶೇಷೇಣ’ ಇತ್ಯಾದಿ-ಶ್ರುತಿ-ಸ್ಮೃತಿ-ಶತೇಭ್ಯಃ ||
ಹಾಗಲ್ಲ. ಕರ್ಮವು ಅನೇಕವಿಧವಾಗಿರುವುದರಿಂದ, ಪುಣ್ಯಕರ್ಮವು ಕ್ಷೀಣಿಸಿ, ಪಾಪಕರ್ಮದ ಫಲಪ್ರಾಪ್ತಿಯಾಗುವಾಗ “ಕ್ಷೀಣೇ ಪುಣ್ಯೇ ಮರ್ತ್ಯಲೋಕಂ ವಿಶಂತಿ” ಎಂಬಂತೆ, ಸ್ವರ್ಗದಿಂದ ಪತನಹೊಂದುತ್ತಾನೆ. ಆದ್ದರಿಂದ, ಕರ್ಮಫಲಸ್ವರೂಪಿ ಸ್ವರ್ಗವು ನಶ್ವರಸುಖ; ಮೋಕ್ಷವಾದರೋ ಶಾಶ್ವತಸುಖ.
ಅನೇಕ (ಏಕವಲ್ಲದ, ಹಲವಾರು) ಅನ್ಯಜನ್ಮಗಳಲ್ಲಿ ಮಾಡಲ್ಪಟ್ಟ (ಅನ್ಯತ್ ಜನ್ಮ - ಜನ್ಮಾನ್ತರಮ್, ಬೇರೆ ಜನ್ಮ) ಕರ್ಮಗಳ, ಅನೇಕ( ಹಲವು) ವಿಧಗಳಾದ ಈಗಾಗಲೇ ಫಲನೀಡಲಾರಂಭಿಸಿದವು, ಇನ್ನೂ ಫಲನೀಡಲಾರಂಭಿಸದವು, (ಒಳ್ಳೆಯ ಫಲದಾಯಕ ಪುಣ್ಯಕರ್ಮಗಳು) ಹಾಗೂ ನಮ್ಮ ಇಚ್ಛೆಗೆ ವಿರುದ್ಧವಾದ ಫಲದಾಯಕ (ಪಾಪ) ಕರ್ಮಗಳು - (ಎಂಬುದಾಗಿ) ಇವೆ / ಸಂಭವಿಸುತ್ತವೆ.
ತಾತ್ಪರ್ಯ- ಹಿಂದಿನ ಅನೇಕ ಜನ್ಮಗಳಲ್ಲಿ ಮಾಡಿದ ಕರ್ಮಗಳು ( ಸಂಚಿತಕರ್ಮಗಳು) ಬಹುತೆರನಾಗಿವೆ. ಕೆಲವು ಈಗಾಗಲೇ ತಮ್ಮ ಫಲಕೊಡಲಾರಂಭಿಸಿವೆ (ಪ್ರಾರಬ್ಧಕರ್ಮಗಳು); ಮತ್ತೆ ಕೆಲವು ಇನ್ನೂ ಫಲನೀಡಲು ಆರಂಭಿಸಿಲ್ಲ (ಅನಾರಬ್ಧಫಲಕರ್ಮಗಳು); ಮುಂದೆ ಮಾಡಬಹುದಾದವು (ಆಗಾಮಿಕರ್ಮಗಳು); ಪುಣ್ಯಕರ್ಮಗಳು; ಪಾಪಕರ್ಮಗಳು…..ಇತ್ಯಾದಿ. ಆದ್ದರಿಂದ, ಕರ್ಮಫಲವೂ ವೈವಿಧ್ಯವುಳ್ಳದ್ದು; ಶಾಶ್ವತಾನಂದವಾದ ಮೋಕ್ಷವೆಂಬ ಸ್ಥಿರಫಲದಾಯಕವಲ್ಲ.
ಆದ್ದರಿಂದ, ಒಂದೇ ಜನ್ಮದಲ್ಲಿ ಉಪಭೋಗಿಸಿದರೆ / ಅನುಭವಿಸಿದರೆ,
ಅವುಗಳಲ್ಲಿ (ಬಹುವಿಧವಾದ ಕರ್ಮಗಳಲ್ಲಿ), ಇನ್ನೂ ಫಲನೀಡಲಾರಂಭಿಸದೇ ಇರುವ ಕರ್ಮಗಳ ಕ್ಷಯವು ಆಗಲಾರದು / ಅಸಂಭವವಾದುದು. ಇದರಿಂದಾಗಿ, ಉಳಿಕೆ ಕರ್ಮದ ಫಲೋಪಭೋಗಕ್ಕಾಗಿ ಆತ್ಮನು ಪುನಃ ಶರೀರಧಾರಣೆ ಮಾಡಬೇಕಾಗುತ್ತದೆ.
ಆದ್ದರಿಂದ ಕರ್ಮಫಲದ ಉಳಿಕೆಯಿಂದಲೇ ಸತ್ತಾಮಾತ್ರವಾದ ಜೀವಭಾವದ ಸಿದ್ಧಿಯು / ದೇಹಧಾರಣೆಯು / ಮರುಹುಟ್ಟು— ‘ಆದ್ದರಿಂದ ಇಲ್ಲಿ ಯಾವನು ನಿಷ್ಕಾಮಕರ್ಮಯೋಗಿಯಾಗಿಯೋ, ಭಕ್ತಿಭಂಡಾರಿಯಾಗಿಯೋ, ಆತ್ಮಜ್ಞಾನವನ್ನು ಪಡೆದೋ ಬದುಕಿನಲ್ಲಿ ರಮಣೀಯವಾದ ಹೆಜ್ಜೆಗಳನ್ನಿಡಬೇಕು’, ‘ಅನಂತರ / ಸಾವಿನ ನಂತರ ಶೇಷಕರ್ಮದಿಂದ ಪುನರ್ಜನ್ಮ’— ಇತ್ಯಾದಿಯಾದ ನೂರಾರು ವೇದ-ಸ್ಮೃತಿಗಳ ವಾಕ್ಯಗಳಿಂದ ಸಿದ್ಧವಾಗುವುದು.
೬. ನಿತ್ಯಕರ್ಮವು ಭವಿಷ್ಯತ್ಕರ್ಮಫಲವನ್ನು ನಾಶಪಡಿಸದು
ಇಷ್ಟಾನಿಷ್ಟಫಲಾನಾಮ್ ಅನಾರಬ್ಧಾನಾಂ ಕ್ಷಯಾರ್ಥಾನಿ ನಿತ್ಯಾನಿ ಇತಿ ಚೇತ್, ನ, ಅಕರಣೇ ಪ್ರತ್ಯವಾಯ-ಶ್ರವಣಾತ್ | ಪ್ರತ್ಯವಾಯ-ಶಬ್ದಃ ಹಿ ಅನಿಷ್ಟವಿಷಯಃ | ನಿತ್ಯ-ಅಕರಣ-ನಿಮಿತ್ತಸ್ಯ ಪ್ರತ್ಯವಾಯಸ್ಯ ದುಃಖರೂಪಸ್ಯ ಆಗಾಮಿನಃ ಪರಿಹಾರಾರ್ಥಾನಿ ನಿತ್ಯಾನಿ ಇತಿ ಅಭಿ+ಉಪ+ಗಮಾತ್, ನ ಅನಾರಬ್ಧ-ಫಲ-ಕರ್ಮ-ಕ್ಷಯಾರ್ಥಾನಿ |
ಯದಿ ನಾಮ ಅನಾರಬ್ಧಫಲಕರ್ಮಕ್ಷಯಾರ್ಥಾನಿ ನಿತ್ಯಾನಿ ಕರ್ಮಾಣಿ, ತಥಾಪಿ ಅಶುದ್ಧಮ್ ಏವ ಕ್ಷಪಯೇಯುಃ, ನ ಶುದ್ಧಮ್, ವಿರೋಧ-ಅಭಾವಾತ್ |
ನ ಹಿ ಇಷ್ಟಫಲಸ್ಯ ಕರ್ಮಣಃ ಶುದ್ಧರೂಪತ್ವಾತ್ ನಿತ್ಯೈರ್ವಿರೋಧ- ಉಪಪದ್ಯತೇ | ಶುದ್ಧಾಶುದ್ಧಯೋಃ ಹಿ ವಿರೋಧೋ ಯುಕ್ತಃ ||
ಇನ್ನೂ ಫಲಕೊಡಲಾರಂಭಿಸದ ಇಷ್ಟ-ಅನಿಷ್ಟ ಫಲಗಳ / ಸುಖ-ದುಃಖಗಳ ಕ್ಷಯಕ್ಕಾಗಿ / ನಾಶಕ್ಕಾಗಿ ನಿತ್ಯಕರ್ಮಗಳೋ ಎಂದರೆ, ಹಾಗಲ್ಲ; (ಯಾಕೆಂದರೆ) ನಿತ್ಯಕರ್ಮವನ್ನು ಮಾಡದಿರುವುದು ವಿವಿಧ ಅಡ್ಡಿ-ಆತಂಕ / ವಿಘ್ನ / ಪ್ರತ್ಯವಾಯಗಳಿಂದಾಗಿ ಎಂದು ಸಾಮಾನ್ಯವಾಗಿ ಕೇಳಿಬರುವುದರಿಂದಾಗಿ. ಪ್ರತ್ಯವಾಯವೆಂಬುದು ಇಷ್ಟವಲ್ಲದ ವಿಷಯ. ನಿತ್ಯಕರ್ಮವನ್ನು ಮಾಡದಿರುವುದರ ನಿಮಿತ್ತ / ಕಾರಣವಾದ ದುಃಖರೂಪವಾದ ಆಗಾಮಿ / ಭವಿಷ್ಯತ್ತಿನ / ಮುಂದೆ ಬರಲಿರುವ ಪ್ರತ್ಯವಾಯದ / ವಿಘ್ನದ ಪರಿಹಾರಕ್ಕಾಗಿ ನಿತ್ಯಕರ್ಮಗಳಿವೆ ಎಂಬ ವಿರೋಧಾಭಾಸವು ಪುನರಾವೃತ್ತಿಯಾಗುವುದರಿಂದ, ನಿತ್ಯಕರ್ಮವು ಇನ್ನೂ ಫಲನೀಡಲಾರಂಭಿಸದ / ಅನಾರಬ್ಧಫಲರೂಪೀ ಕರ್ಮಗಳ ಕ್ಷಯಕ್ಕೆ ಕಾರಣವಾಗಲಾರದು.
ಒಂದುವೇಳೆ, ನಿತ್ಯಕರ್ಮಗಳು ಇನ್ನೂ ಫಲನೀಡಲಾರಂಭವಾಗದ ಕರ್ಮಗಳ ಕ್ಷಯಕ್ಕೆ ಕಾರಣವಾಗುವುವು ಎಂದು ಭಾವಿಸಿದರೂ, ಹಾಗಿದ್ದ ಪಕ್ಷದಲ್ಲಿ ಅಶುದ್ಧಕರ್ಮಗಳನ್ನೇ ಕಳೆಯುವುವೇ ಹೊರತು ಶುದ್ಧ / ಪುಣ್ಯಕರ್ಮಗಳನ್ನಲ್ಲ. ಏಕೆಂದರೆ, ಪುಣ್ಯಕರ್ಮಕ್ಕೆ ನಿತ್ಯಕರ್ಮದ ಯಾವುದೇ ವಿರೋಧವಿಲ್ಲ. ನಿತ್ಯಕರ್ಮವು ಪಾಪಕರ್ಮವನ್ನಷ್ಟೇ ತೊಳೆಯುವುದು.
ಇಷ್ಟಫಲವನ್ನೀಯುವ ಕರ್ಮದ ಶುದ್ಧರೂಪದಿಂದಾಗಿ, ನಿತ್ಯಕರ್ಮಗಳೊಂದಿಗೆ ಪುಣ್ಯ /ಶುದ್ಧಕರ್ಮಗಳ ವಿರೋಧವುಂಟಾಗುವುದಿಲ್ಲ. ಆದರೆ, ಶುದ್ಧ-ಅಶುದ್ಧ (ಪುಣ್ಯ-ಪಾಪ) ಕರ್ಮಗಳಿಗಾದರೋ ಪರಸ್ಪರ ವಿರೋಧವು ಯುಕ್ತ (ಯೋಗ್ಯ / ಉಚಿತ) ವಾದುದೇ ಆಗಿದೆಯಲ್ಲವೇ?
೭. ಆತ್ಮಜ್ಞಾನವಾಗದೇ ಕರ್ಮನಾಶವಾಗದು, ಕಾಮ ಕರಗದು
ನ ಚ ಕರ್ಮಹೇತೂನಾಂ ಕಾಮಾನಾಂ ಜ್ಞಾನಾಭಾವೇ ನಿವೃತ್ತಿ-ಅಸಮ್ಭವಾತ್ ಅಶೇಷ-ಕರ್ಮಕ್ಷಯ-ಉಪಪತ್ತಿಃ | ಅನಾತ್ಮವಿದಃ, ಹಿ ಕಾಮಃ | ಅನಾತ್ಮಫಲವಿಷಯತ್ವಾತ್ | ಸ್ವಾತ್ಮನಿ ಚ ಕಾಮ-ಅನುಪಪತ್ತಿಃ | ನಿತ್ಯಪ್ರಾಪ್ತತ್ವಾತ್ | ಸ್ವಯಂ ಚ ಆತ್ಮಾ ಪರಂಬ್ರಹ್ಮ - ಇತಿ ಉಕ್ತಮ್ ||
ಹಾಗೆಯೇ (ಚ) , ಕರ್ಮಕ್ಕೆ ಕಾರಣವಾದ ಬಯಕೆಗಳ (ಫಲ / ಬಯಕೆಗಳನ್ನುದ್ದೇಶಿಸಿಯೇ ಕರ್ಮವು ಮಾಡಲ್ಪಡುವುದಲ್ಲವೇ?) ನಿವೃತ್ತಿಯು / ಇಲ್ಲದಿರುವಿಕೆಯು, ಆತ್ಮಜ್ಞಾನವಾಗದ ವಿನಾ ಅಸಂಭವವಾಗಿರುವುದರಿಂದ, ಆತ್ಮಜ್ಞಾನವಿಲ್ಲದೇ ಸಮಸ್ತಕರ್ಮಗಳ ನಾಶವು ಸಂಭವಿಸಲಾರದು. ಆತ್ಮಜ್ಞಾನಿಯಲ್ಲದವನಿಗೇ ಕಾಮ / ಬಯಕೆಯು ಉಂಟಾಗುತ್ತದೆಯಲ್ಲವೇ? ಏಕೆಂದರೆ, ಕಾಮಕ್ಕೆ ವಿಷಯವು ಅನಾತ್ಮರೂಪೀಫಲವೇ (ಸ್ವ-ರೂಪ / ಆತ್ಮಸ್ವರೂಪ- ವಲ್ಲದ ವಿಷಯವೇ) ಆಗಿದೆ. ಅಂತೆಯೇ, ತನ್ನಲ್ಲೇ ತನಗೆ ಕಾಮವುಂಟಾಗಲಾರದು. ಯಾಕೆಂದರೆ, ಆತ್ಮವು ನಿತ್ಯವಾಗಿಯೇ ಇರುವುದರಿಂದ, ಹೊಸದಾಗಿ ಅದರ ಪ್ರಾಪ್ತಿಯ ಬಯಕೆಯ ಅವಶ್ಯಕತೆಯಿಲ್ಲ. ಹಾಗೆಯೇ, ಸ್ವಯಂ ಆತ್ಮವೇ ಪರಬ್ರಹ್ಮವೆಂದು ಹೇಳಿದೆ.
೮. ನಿತ್ಯಕರ್ಮಲೋಪವೇ ಪಾಪಜನಕವಲ್ಲ;
ಪ್ರಯತ್ನವೇನೂ ಇಲ್ಲದೆ ಆತ್ಮಜ್ಞಾನವಿಲ್ಲ
ನಿತ್ಯಾನಾಂ ಚ ಅಕರಣಮ್ ಅಭಾವಃ | ತತಃ ಪ್ರತ್ಯವಾಯ-ಅನುಪಪತ್ತಿಃ, ಇತಿ ಅತಃ, ಪೂರ್ವ-ಉಪಚಿತ-ದುರಿತೇಭ್ಯಃ ಪ್ರಾಪ್ಯಮಾಣಾಯಾಃ ಪ್ರತ್ಯವಾಯ-ಕ್ರಿಯಾಯಾಃ ನಿತ್ಯ-ಅಕರಣಂ ಲಕ್ಷ್ಯಮ್ ಇತಿ “ಅಕುರ್ವನ್ ವಿಹಿತಂ ಕರ್ಮ ” (ಮನುಸ್ಮೃತಿಃ ೧೧.೧೪) ಇತಿ ಶತುಃ ನ ಅನುಪಪತ್ತಿಃ | ಅನ್ಯಥಾ, ಅಭಾವಾದ್ ಭಾವೋತ್ಪತ್ತಿಃ ಇತಿ ಸರ್ವಪ್ರಮಾಣವ್ಯಾಕೋಪಃ - ಇತಿ ಅತಃ ಅಯತ್ನತಃ ಸ್ವ-ಆತ್ಮನಿ ಅವಸ್ಥಾನಮ್ ಇತಿ ಅನುಪಪನ್ನಮ್ ||
ಹಾಗೆಯೇ, ನಿತ್ಯಕರ್ಮಗಳ ಮಾಡದಿರುವಿಕೆಯು ಅಭಾವ / ಲೋಪ / ಕೊರತೆ ಎನಿಸುವುದು. ಇದರಿಂದಾಗಿ ವಿಘ್ನಗಳುಂಟಾಗವು. (ಅಭಾವದಿಂದ ಭಾವವುಂಟಾಗದು.) ಹಾಗಾಗಿ, ಹಿಂದೆ ಮಾಡಿದ ಪಾಪಗಳಿಂದ ಪ್ರಾಪ್ತವಾಗಬಹುದಾದ ಪ್ರತ್ಯವಾಯ (ವಿಘ್ನ)ವೆಂಬ ಕ್ರಿಯೆಯ ಲಕ್ಷ್ಯವು (ಗುರುತು) ನಿತ್ಯಕರ್ಮವನ್ನು ಮಾಡದಂತೆ ಮಾಡುವುದು. (ಹೊರತು ನಿತ್ಯಕರ್ಮ ಮಾಡದಿರುವುದರಿಂದ ನಿತ್ಯಕರ್ಮಕ್ಕೆ ಅಡ್ಡಿ ಬರುವುದಲ್ಲ, ಹಿಂದಿನ ಪಾಪಗಳಿಂದಾಗಿ ವಿಘ್ನ ಬರುವುದು.) “ಯೋಗ್ಯ (ವಿಹಿತ)ಕರ್ಮವನ್ನು ಮಾಡದೇ ನಿಂದ್ಯಕರ್ಮಗಳನ್ನು ಮಾಡುವ ವ್ಯಕ್ತಿಯು ಬಳಿಕ ಪ್ರಾಯಶ್ಚಿತ್ತಕರ್ಮವನ್ನು ಮಾಡಬೇಕಾಗುವುದು” ಎಂಬ ಮನುಸ್ಮೃತಿವಚನದ “ಅಕುರ್ವನ್” ಎಂಬುದರ ಶತೃ (ಅತ್) ಪ್ರತ್ಯಯವು ಅಸಂಬದ್ಧವಲ್ಲ. ಅಲ್ಲವಾದರೆ, ಅಭಾವದಿಂದ ಭಾವೋತ್ಪತ್ತಿಯಾಗುವುದೆಂದು ಹೇಳುವ ಮೂಲಕ ಸಾರ್ವಕಾಲಿಕ ಪ್ರಮಾಣಕ್ಕೆ ವ್ಯತಿರಿಕ್ತವಾದ ವಾದವಾಗುವುದು. ಹಾಗಾಗಿ, ಯಾವುದೇ ಯತ್ನವಿಲ್ಲದೆಯೇ ತನ್ನಲ್ಲಿ ತಾನು ನೆಲೆನಿಲ್ಲುವನು (ಆತ್ಮಸ್ಥನಾಗುವನು) ಎಂಬುದು ಹೊಂದಿಕೆಯಾಗದು.
೯. ಕರ್ಮಗಳಿಂದಾಗಿ ಮೋಕ್ಷವಲ್ಲ
ಯತ್ ಚ ಉಕ್ತಂ ನಿರತಿಶಯಪ್ರೀತೇಃ ಸ್ವರ್ಗಶಬ್ದವಾಚ್ಯಾಯಾಃ ಕರ್ಮನಿಮಿತ್ತತ್ವಾತ್ ಕರ್ಮಾರಭ್ಯಃ ಏವ ಮೋಕ್ಷಃ ಇತಿ | ತತ್ ನ | ನಿತ್ಯತ್ವಾತ್ ಮೋಕ್ಷಸ್ಯ | ನ ಹಿ ನಿತ್ಯಂ ಕಿಂಚಿದ್ ಆರಭ್ಯತೇ | ಲೋಕೇ ಯದ್ ಆರಬ್ಧಂ ತದ್ ಅನಿತ್ಯಮ್ ಇತಿ | ಅತಃ, ನ ಕರ್ಮಾರಭ್ಯಃ, ಮೋಕ್ಷಃ ||
ಇನ್ನು, ಸ್ವರ್ಗವೆಂದು ಕರೆಯಲ್ಪಡುವ ಬೇರೆ ಮಿಗಿಲಾದುದಿಲ್ಲದ ಸುಖವು ಕರ್ಮದಿಂದಲೇ ಆಗುವುದರಿಂದ, ಮೋಕ್ಷವೂ ಕರ್ಮದಿಂದಲೇ? ಎಂಬುದಾಗಿ. ಹಾಗಲ್ಲ. ಯಾಕೆಂದರೆ, ಮೋಕ್ಷವು ನಿತ್ಯವಾದುದು (ಎಂದೆಂದೂ ಇರುವಂಥದ್ದು). ಹೀಗೆ ಯಾವಾಗಲೂ ಇರುವಂಥದ್ದು ಯಾವುದೂ ಕೂಡ ಹೊಸದಾಗಿ ಸಂಭವಿಸಲಾರದಲ್ಲವೇ? ಲೋಕದಲ್ಲಿ ಯಾವುದು ಆರಂಭವಾಯಿತೋ / ಸಂಭವಿಸಿತೋ ಅದು ಆ ಮೊದಲು ಇರಲಿಲ್ಲವಾದುದರಿಂದ ಅನಿತ್ಯವೆಂದಾಯಿತು. ಆದ್ದರಿಂದ, ಮೋಕ್ಷವು
ಕರ್ಮಗಳಿಂದ ಹೊಸದಾಗಿ ಉಂಟಾಗುವುದಲ್ಲ.
೧೦. ಜ್ಞಾನಕರ್ಮಗಳೆರಡೂ ಜೊತೆಗಿದ್ದರೂ ಮೋಕ್ಷವಿಲ್ಲ
ವಿದ್ಯಾಸಹಿತಾನಾಂ ಕರ್ಮಣಾಂ ನಿತ್ಯಾರಮ್ಭಸಾಮರ್ಥ್ಯಮ್ ಇತಿ ಚೇತ್ | ನ | ವಿರೋಧಾತ್ | ನಿತ್ಯಂ ಚ ಆರಭ್ಯತೇ ಚ ಇತಿ ವಿರುದ್ಧಮ್ | ಯದ್ ವಿನಷ್ಟಂ ತದ್ ಏವ ನ ಉತ್ಪದ್ಯತೇ ಇತಿ ಪ್ರಧ್ವಂಸ-ಅಭಾವವತ್ ನಿತ್ಯಃ ಅಪಿ ಮೋಕ್ಷಃ ಆರಭ್ಯಃ ಏವ ಇತಿ ಚೇತ್ | ನ | ಮೋಕ್ಷಸ್ಯ ಭಾವರೂಪತ್ವಾತ್ | ಪ್ರಧ್ವಂಸ-ಅಭಾವಃ ಅಪಿ ಆರಭ್ಯತೇ ಇತಿ ಅಭಾವಸ್ಯ ವಿಶೇಷ-ಅಭಾವಾತ್ ವಿಕಲ್ಪಮಾತ್ರಮ್ ಏತತ್ | ಭಾವ-ಪ್ರತಿಯೋಗೀ ಹಿ ಅಭಾವಃ | ಯಥಾ ಹಿ ಅಭಿನ್ನಃ ಅಪಿ ಭಾವಃ ಘಟ-ಪಟ-ಆದಿಭಿಃ ವಿಶಿಷ್ಯತೇ ಭಿನ್ನಃ ಇವ ‘ಘಟಭಾವಃ’, ‘ಪಟಭಾವಃ’ ಇತಿ ಏವಂ ನಿರ್ವಿಶೇಷಃ ಅಪಿ ಅಭಾವಃ ಕ್ರಿಯಾಗುಣಯೋಗಾತ್ ದ್ರವ್ಯಾದಿವತ್ ವಿಕಲ್ಪ್ಯತೇ | ನ ಹಿ ಅಭಾವಃ ಉತ್ಪಲಾದಿವತ್ ವಿಶೇಷಣಸಹಭಾವೀ, ವಿಶೇಷಣವತ್ತ್ವೇ ಭಾವಃ ಏವ ಸ್ಯಾತ್ ||
ಆತ್ಮವಿದ್ಯಾ (ಜ್ಞಾನ)ಸಹಿತವಾದ ಕರ್ಮಗಳಿಗೆ ನಿತ್ಯವಾದ ಮೋಕ್ಷವನ್ನುಂಟುಮಾಡುವ ಸಾಮರ್ಥ್ಯವಿದೆ ಎಂದರೆ ಹಾಗಲ್ಲ. ಅವೆರಡೂ ವಿರುದ್ಧವಾದುದರಿಂದ. ಯಾವಾಗಲೂ ಇರುವಂಥದ್ದು(ನಿತ್ಯವು) ಹೊಸದಾಗಿ ಉಂಟಾಗುತ್ತದೆ ಎಂಬುದು ಪರಸ್ಪರ ವಿರುದ್ಧ ಹೇಳಿಕೆಗಳು. ಯಾವುದು ನಾಶವಾಗಿ ಹೋಗಿದೆಯೋ ಅದೇ ಹುಟ್ಟುವುದಿಲ್ಲ ಎಂಬ ಪ್ರಧ್ವಂಸಾಭಾವತತ್ತ್ವ#ದಂತೆ, ಮೋಕ್ಷವು ನಿತ್ಯವಾದುದಾದರೂ ಹೊಸದಾಗಿ ಸಂಭವಿಸಬೇಕು ಎಂದರೆ, ಅದೂ ಅಲ್ಲ. ಮೋಕ್ಷದ ಭಾವರೂಪತೆಯಿಂದಾಗಿ (ಅಭಾವರೂಪವಲ್ಲದಿರುವುದರಿಂದ). ಪ್ರಧ್ವಂಸಾಭಾವವೂ ಪುನಃ ಹುಟ್ಟುವುದು— ಇಲ್ಲಿ ‘ಅಭಾವ’ದ ವಿಶೇಷ ವಿಧ/ವಿಕಲ್ಪ ಒಂದನ್ನು ಹೇಳಲಾಗಿದೆಯೇ ಹೊರತು (ಇದು ಕೇವಲ ಹೇಳಿಕೆ ಮಾತ್ರವೇ ಹೊರತು) ನಿಜವಾಗಿ ಅಂಥದ್ದರ ಅಸ್ತಿತ್ವವೇ ಇಲ್ಲ. ಭಾವಕ್ಕೆ (ಸತ್ತೆಗೆ / ಇರುವಿಕೆಗೆ) ವಿರೋಧಪದವೇ ಅಭಾವ (ಇಲ್ಲದಿರುವಿಕೆ / ಅಸತ್ತೆ) ಅಲ್ಲವೇ? ಹೇಗೆ ಪ್ರತ್ಯೇಕವಲ್ಲದ ಭಾವವು ಘಟ (ಪಾತ್ರೆ) - ಪಟ (ಚಿತ್ರ) ಮುಂತಾದುವುಗಳೊಂದಿಗೆ ಸೇರಿ, ‘ಘಟಭಾವ’, ‘ಪಟಭಾವ’ ಎಂದು ವಿಭಿನ್ನ ಭಾವ ತಾಳುವುದೋ ಅಂತೆಯೇ, ನಿರ್ವಿಶೇಷವಾದರೂ ಅಭಾವವು ಕ್ರಿಯೆ-ಗುಣಗಳ ಸಂಯೋಗದಿಂದ ಬೇರೆ ಬೇರೆ ದ್ರವ್ಯ (ಪದಾರ್ಥ / ವಸ್ತು) ಗಳಂತೆ ವಿಕಲ್ಪಹೊಂದುತ್ತದೆ / ಜನರಿಂದ ಕಲ್ಪಿತವಾಗುತ್ತದೆ. ಆದರೆ, ವಾಸ್ತವವಾಗಿ ಅಭಾವವು (ಇಲ್ಲದಿರುವಿಕೆಯು / ಅಸತ್ತೆಯು) ನೈದಿಲೆಯೇ ಮುಂತಾದುವುಗಳಂತೆ (ಕೆಂಪಾದ ನೈದಿಲೆ, ನೀಲೋತ್ಪಲ ಇತ್ಯಾದಿ) ವಿಶೇಷಣಗಳ ಸಹಿತವಾಗಿರುವಂಥದ್ದೇ ಅಲ್ಲ. ಯಾಕೆಂದರೆ, ವಿಶೇಷಣಗಳಿದ್ದುದಾದರೆ ಅಭಾವವು ಭಾವವೇ ಆಗಿಬಿಡುವುದು. ಆದ್ದರಿಂದ ವಾಸ್ತವದಲ್ಲಿ ಕ್ರಿಯೆಯ ಅಭಾವ, ಗುಣದ ಅಭಾವ ಇತ್ಯಾದಿ ವಿಕಲ್ಪಗಳಿಲ್ಲ. ಏಕೆಂದರೆ ಅಭಾವದಲ್ಲಿ ವಿಶೇಷಗಳಿಲ್ಲ. ಏನೂ (ಸಂಪೂರ್ಣವಾಗಿ) ಇಲ್ಲದಿರುವಿಕೆಯೇ ಅಭಾವವು. ಸ್ವಲ್ಪ ಕಡಿಮೆಯಿದ್ದರೆ (ಅಪೂರ್ಣ) ಕೊರತೆ (ನ್ಯೂನತೆ) ಎನ್ನಲ್ಪಡುವುದು.
# ನೈಯಾಯಿಕರ (ಗೌತಮಮುನಿಯ ನ್ಯಾಯದರ್ಶನದ) ಪ್ರಕಾರ ಅಭಾವವು ೪ ತೆರನಾದುದು— (೧) ಪ್ರಾಗಭಾವ (ಪ್ರಾಕ್ + ಅಭಾವ; ಕಾರ್ಯವು ಮೊದಲು ಇಲ್ಲದಿರುವಿಕೆ), (೨) ಪ್ರಧ್ವಂಸಾಭಾವ (ನಾಶವಾದ ನಂತರ ಇಲ್ಲದಿರುವಿಕೆ), (೩) ಅನ್ಯೋನ್ಯಾಭಾವ (ಒಂದು ಇನ್ನೊಂದಲ್ಲದಿರುವಿಕೆ) ಹಾಗೂ (೪) ಅತ್ಯಂತಾಭಾವ (ಇಲ್ಲವೇ ಇಲ್ಲವೆಂಬುದು); ಪ್ರಧ್ವಂಸಾಭಾವವು ನಿತ್ಯವು. ಆದರೆ ಉತ್ತರಮೀಮಾಂಸೆ / ವೇದಾಂತದರ್ಶನದ ಪ್ರಕಾರ ಪ್ರಧ್ವಂಸಾಭಾವವೆಂಬುದರ ಅಸ್ತಿತ್ವವೇ ಇಲ್ಲ; ಇದು ಕೇವಲ ಮಾತಿಗೆ ಮಾತ್ರ ಹೇಳುವಂಥದ್ದು, ಯಥಾರ್ಥದಲ್ಲಿ ಇಲ್ಲ.
ವಿದ್ಯಾ-ಕರ್ಮ-ಕರ್ತುಃ ನಿತ್ಯತ್ವಾತ್ ವಿದ್ಯಾ-ಕರ್ಮ-ಸನ್ತಾನ-ಜನಿತ-ಮೋಕ್ಷ-ನಿತ್ಯತ್ವಮ್ ಇತಿ ಚೇತ್ | ನ | ಗಙ್ಗಾಸ್ರೋತೋವತ್ ಕರ್ತೃತ್ವಸ್ಯ ದುಃಖರೂಪತ್ವಾತ್ | ಕರ್ತೃತ್ವ-ಉಪರಮೇ ಚ ಮೋಕ್ಷ-ವಿಚ್ಛೇದಾತ್ ||
ಜ್ಞಾನ-ಕರ್ಮಗಳ ಕರ್ತೃವಿನ ನಿತ್ಯತ್ವದಿಂದ (ಕರ್ತೃವು ನಿತ್ಯನಾದುದರಿಂದ), ಜ್ಞಾನ-ಕರ್ಮಸಮೂಹದಿಂದ ಉಂಟಾದ ಮೋಕ್ಷವೂ ನಿತ್ಯವಾಗಿರಬಹುದಲ್ಲ? ಎಂದರೆ, ಹಾಗಲ್ಲ. ಗಂಗಾನದೀಪ್ರವಾಹವು ಪಾಪಹರವಾದರೂ, ಅದನ್ನು ದಾಟುವುದು ಸುಲಭಸಾಧ್ಯವಲ್ಲ, ಕಷ್ಟದಿಂದ ಕೂಡಿದೆ. ಅಂತೆಯೇ, ಗಂಗೆ ಬತ್ತಿದರೆ ಮೋಕ್ಷಕ್ಕೆ ದಾರಿಯಿಲ್ಲವಾಗುವುದು. ಗಂಗೆಗೂ ಪಾಪಹರಶಕ್ತಿಯಿಂದಾಗಿ, ಬಹುಜನರಿಂದ ಬಳಸಲ್ಪಟ್ಟು, ಮಲಿನವಾಗಿ ಕ್ಲೇಶವುಂಟಾಗುವುದು. ಹಾಗಾಗಿ, ಗಂಗಾಪ್ರವಾಹದಂತೆ ಮಾಡುವವನಿರುವುದು ದುಃಖರೂಪವಾದುದು. ಏಕೆಂದರೆ, ಮಾಡುವವನ ಮಾಡುವಿಕೆಯು ನಿಂತಾಗ, ಮೋಕ್ಷಸ್ಥಿತಿಯೂ ಇಲ್ಲವಾಗುತ್ತದೆ. ಆದರೆ, ಕರ್ಮವನ್ನು ಸದಾ ಮಾಡುತ್ತಲೇ ಇರಲು ಯಾರೂ ಬಯಸಲಾರರಾದ್ದರಿಂದ, ಜ್ಞಾನಕರ್ಮಸಮುಚ್ಚಯವು ನಿತ್ಯಮೋಕ್ಷವನ್ನುಂಟುಮಾಡದು.
೧೧. ಉಪನಿಷತ್ ಯಾಕಾಗಿ?
ತಸ್ಮಾತ್ (ಅವಿದ್ಯಾಕಾಮ)ಕರ್ಮ-ಉಪಾದಾನ-ಹೇತು-ನಿವೃತ್ತೌ ಸ್ವಾತ್ಮನಿ ಅವಸ್ಥಾನಂ ಮೋಕ್ಷಃ - ಇತಿ | ಸ್ವಯಂ ಚ ಆತ್ಮಾ ಬ್ರಹ್ಮ | ತದ್-ವಿಜ್ಞಾನಾದ್ ಅವಿದ್ಯಾನಿವೃತ್ತಿಃ , ಮೋಕ್ಷಃ - ಇತಿ ಬ್ರಹ್ಮವಿದ್ಯಾರ್ಥಾ ಉಪನಿಷದ್ ಆರಭ್ಯತೇ ||
ಆದ್ದರಿಂದ, ಕರ್ಮಸ್ವೀಕಾರಕ್ಕೆ (ಕರ್ಮ ಮಾಡಲು) ಕಾರಣವಾದ ಅವಿದ್ಯಾಕಾಮದ (ಲೌಕಿಕ ಬಯಕೆಯ) ನಿವೃತ್ತಿಯಾದಾಗ, ತನ್ನಾತ್ಮದಲ್ಲೇ ತಾನು ನೆಲಸಿದಾಗ ಮೋಕ್ಷ ಎಂಬುದಾಗಿ. ಆತ್ಮವು ತಾನೇ ಬ್ರಹ್ಮವು. ಇದನ್ನರಿತಾಗ ಕರ್ಮಕ್ಕೆ ಮೂಲವಾದ ಬಯಕೆಯು ಇಲ್ಲವಾಗುವುದೇ ಮೋಕ್ಷವು— ಎಂಬ ಬ್ರಹ್ಮವಿದ್ಯಾಪ್ರತಿಪಾದಕವಾದ ಉಪನಿಷತ್ ಆರಂಭಿಸಲ್ಪಡುತ್ತದೆ.
೧೨. ಉಪನಿಷತ್ ಎಂದರೇನು?
ಉಪನಿಷತ್— ಇತಿ ವಿದ್ಯಾ ಉಚ್ಯತೇ | ತತ್-ಶೀಲಿನಾಂ ಗರ್ಭ-ಜನ್ಮ-ಜರಾ-ಆದಿ-ನಿಶಾತನಾತ್ ತದ್-ಅವಸಾನಾದ್ ವಾ, ಬ್ರಹ್ಮಣಃ ವಾ ಉಪ-ನಿ-ಗಮಯಿತೃತ್ವಾತ್ | ಉಪನಿಷಣ್ಣಂ ವಾ ಅಸ್ಯಾಂ ಪರಂ ಶ್ರೇಯಃ— ಇತಿ | ತದರ್ಥತ್ವಾತ್ ಗ್ರನ್ಥೋऽಪಿ ಉಪನಿಷತ್ ||
ಉಪನಿಷತ್ತೆಂದು ವಿದ್ಯೆಯು ಹೇಳಲ್ಪಡುತ್ತದೆ. ಆ ವಿದ್ಯೆಯನ್ನು (ಆತ್ಮತತ್ತ್ವವನ್ನು) ಅಭ್ಯಸಿಸುವವರಿಗೆ ಗರ್ಭವಾಸ, ಜನನ, ಮುಪ್ಪು ಮುಂತಾದ ದೋಷಗಳನ್ನು ಕೆತ್ತಿಬಿಡುವುದರಿಂದ ಅಥವಾ ಇಲ್ಲವಾಗಿಸುವುದರಿಂದ, ಬ್ರಹ್ಮದ ಬಳಿಗೆ ಕೊಂಡೊಯ್ಯುವುದರಿಂದ, ಅಥವಾ ಇದರಲ್ಲಿ ಪರಮಶ್ರೇಯಸ್ಸು ಹುದುಗಿರುವುದರಿಂದ ಇದು ಉಪನಿಷತ್. ಆತ್ಮವಿದ್ಯೆಯನ್ನೀಯುವುದರಿಂದ ಅಂತಹ ಗ್ರಂಥವೂ ಉಪನಿಷತ್ತೆನಿಸುವುದು.
|| ಇತಿ ತೈತ್ತಿರೀಯೋಪನಿಷತ್ - ಶಾಙ್ಕರಭಾಷ್ಯಪೀಠಿಕಾ ||
ಉಪನಿಷದ್ ಭಾಗ
೧. ಶೀಕ್ಷಾವಲ್ಲೀ
ಒಂದನೆಯ ಅನುವಾಕ (ಶಾಂತಿಮಂತ್ರ /ಮಂಗಲಸ್ತುತಿ / ಪ್ರಾರ್ಥನಾಮಂತ್ರ)
ಈ ಉಪನಿಷತ್ತಿನ ಪ್ರಾರಂಭದಲ್ಲಿ ಋಷಿಗಳು ಮೊದಲು ತಮಗೆ ಸಮೀಪದಲ್ಲಿರುವ ಉಪದೇವತೆಗಳನ್ನು ಪ್ರಾರ್ಥಿಸಿ, ಅನಂತರ ತಮ್ಮ ಉಪಾಸ್ಯ ದೇವತೆಯನ್ನು ನಮಸ್ಕರಿಸುತ್ತಾರೆ. ಬಳಿಕ ರಕ್ಷಣೆ ಕೋರುತ್ತಾರೆ.
ಉಪದೇವತೆಗಳು—
ಹರಿಃ ॐ || ಶಂ ನೋ ಮಿತ್ರಃ ಶಂ ವರುಣಃ । ಶಂ ನೋ ಭವತ್ವರ್ಯಮಾ । ಶಂ ನ ಇನ್ದ್ರೋ ಬೃಹಸ್ಪತಿಃ । ಶಂ ನೋ ವಿಷ್ಣುರುರುಕ್ರಮಃ ||
ಉಪಾಸ್ಯದೇವತೆ—
ನಮೋ ಬ್ರಹ್ಮಣೇ । ನಮಸ್ತೇ ವಾಯೋ । ತ್ವಮೇವ ಪ್ರತ್ಯಕ್ಷಂ ಬ್ರಹ್ಮಾsಸಿ । ತ್ವಾಮೇವ ಪ್ರತ್ಯಕ್ಷಂ ಬ್ರಹ್ಮ ವದಿಷ್ಯಾಮಿ । ಋತಂ ವದಿಷ್ಯಾಮಿ । ಸತ್ಯಂ ವದಿಷ್ಯಾಮಿ । ತನ್ಮಾಮವತು । ತದ್ವಕ್ತಾರಮವತು । ಅವತು ಮಾಮ್ । ಅವತು ವಕ್ತಾರಮ್ । ॐ ಶಾನ್ತಿಶ್ಶಾನ್ತಿಶ್ಶಾನ್ತಿಃ ॥೧॥
ಅರ್ಥ
ಹೇ ಭಗವಂತನೇ! ಪರಮಾತ್ಮನೇ! ನಿನಗೆ ಸುಸ್ವಾಗತ(ॐ).
ಸೂರ್ಯದೇವನು (ಮಿತ್ರಃ), ನಮಗೆ (ನೋ / ನಃ / ಅಸ್ಮಭ್ಯಮ್), ಶುಭಕರನಾಗಲಿ [ಶಂ (ತನೋತು)].
ವರುಣದೇವನು(ವರುಣಃ), ಶಾಂತಿಯನ್ನೀಯಲಿ [ಶಂ (ತನೋತು)].
ಪಿತೃದೇವತೆಯಾದ ಅರ್ಯಮನು (ಅರ್ಯಮಾ), ನಮಗೆ (ನೋ), ಮಂಗಲಪ್ರದನು (ಶಂ), ಆಗಲಿ (ಭವತು).
ದೇವತೆಗಳ ಒಡೆಯನಾದ ಇಂದ್ರನೂ, ದೇವಗುರುಗಳಾದ ಬೃಹಸ್ಪತಿಯೂ (ಇನ್ದ್ರಃ ಬೃಹಸ್ಪತಿಃ), ನಮಗೆ (ನಃ), ಶುಭ ಉಂಟುಮಾಡಲಿ [ಶಂ (ಕುರ್ಯಾತ್)].
ವಿಸ್ತಾರವಾದ ಹೆಜ್ಜೆಗಳನ್ನಿಡುವ (ಉರುಕ್ರಮಃ), ಸ್ಥಿತಿಕರ್ತನಾದ ವಿಷ್ಣುವು (ವಿಷ್ಣುಃ), ನಮಗೆ (ನಃ), ಸುಖವನ್ನೀಯಲಿ (ಶಂ).
ಮೂಲಪರಬ್ರಹ್ಮನಿಗೆ / ಸೃಷ್ಟಿಕರ್ತ ಚತುರ್ಮುಖ ಬ್ರಹ್ಮನಿಗೆ (ಬ್ರಹ್ಮಣೇ) ನಮಸ್ಕಾರ (ನಮೋ / ನಮಃ).
ಹೇ ವಾಯುದೇವನೇ! (ವಾಯೋ!) (ದ್ವೈತಸಿದ್ಧಾಂತದ ಪ್ರಕಾರ ಇಂದಿನ ವಾಯುದೇವನು ಮುಂದಿನ ಸೃಷ್ಟಿಕರ್ತ ಬ್ರಹ್ಮ. ಅಂತಹ) ನಿನಗೆ (ತೇ/ ತುಭ್ಯಂ), ನಮನಗಳು (ನಮಃ).
ನೀನೇ (ತ್ವಮ್ ಏವ), ಪ್ರತ್ಯಕ್ಷ / ಸ್ವಯಂ ಗಾಳಿಯ ರೂಪದಲ್ಲಿ ಸೋಕಿ ಅನುಭವವೇದ್ಯನಾದ (ಪ್ರತ್ಯಕ್ಷಂ), ಬ್ರಹ್ಮನೇ (ಬ್ರಹ್ಮಾ) / ಪರಬ್ರಹ್ಮವೇ(ಬ್ರಹ್ಮ), ಆಗಿರುವಿ (ಅಸಿ). (ಭವಿಷ್ಯದರ್ಥದಲ್ಲಿ ವಾಯುವೇ ಬ್ರಹ್ಮನೆಂಬ ಸೂಚನೆಯೂ ಇದಾಗಿದೆ.).
ನಿನ್ನನ್ನೇ (ತ್ವಾಮ್ ಏವ), ಪ್ರತ್ಯಕ್ಷಪರಬ್ರಹ್ಮವೆಂದು (ಪ್ರತ್ಯಕ್ಷಂ ಬ್ರಹ್ಮ), ಹೇಳುವೆನು (ವದಿಷ್ಯಾಮಿ).
ಬದಲಾಗದ ಸ್ಥಿರತೆ / ನಿತ್ಯತ್ವ / ನಿಷ್ಕಪಟತೆ / ಋಜುತ್ವ / ನಿಯಮರೂಪ / ವಾಸ್ತವಿಕವಾದ ಸತ್ತೆ (ಇರುವಿಕೆ) / ಪಾರಮಾರ್ಥಿಕ ಸತ್ಯವಾದ ಋತವೇ ನೀನಾಗಿರುವೆ ಎಂದು ಹೇಳುವೆನು (ಋತಂ ವದಿಷ್ಯಾಮಿ).
ಲೌಕಿಕ / ವ್ಯಾವಹಾರಿಕ ಸತ್ಯವೂ ನೀನಾಗಿರುವೆ ಎಂದೂ ನುಡಿಯುವೆನು (ಸತ್ಯಂ ವದಿಷ್ಯಾಮಿ).
ಆದ್ದರಿಂದ (ತತ್ / ತಸ್ಮಾತ್), ನನ್ನನ್ನು (ಮಾಮ್), ರಕ್ಷಿಸು (ಅವತು).
ಆದ್ದರಿಂದ (ತತ್ / ತಸ್ಮಾತ್), ಈ ಮಂತ್ರವನ್ನು ಜಪಿಸುವವನನ್ನೂ / ಬೋಧಿಸುವವನನ್ನೂ (ವಕ್ತಾರಮ್), ರಕ್ಷಿಸು (ಅವತು).
ನನ್ನನ್ನು (ಮಾಮ್), ಸಲಹು (ಅವತು); ಜಪಕ-ಬೋಧಕರನ್ನೂ (ವಕ್ತಾರಮ್), ಪಾಲಿಸು (ಅವತು).
ಹೇ ದೇವದೇವನೇ! (ॐ), ಆಧಿದೈವಿಕ, ಆಧಿಭೌತಿಕ ಹಾಗೂ ಆಧ್ಯಾತ್ಮಿಕ ತಾಪತ್ರಯಗಳು ಶಮನಗೊಳ್ಳಲಿ / ಶಾಂತವಾಗಲಿ(ಶಾನ್ತಿಃ ಶಾನ್ತಿಃ ಶಾನ್ತಿಃ).
ಸಾರಾಂಶ
ನಮ್ಮ ನಿಜಮಿತ್ರನೆನಿಸಿದ ಸೂರ್ಯನು ನಮಗೆ ಸುಖಶಾಂತಿಗಳನ್ನು ನೀಡಲಿ. ನಮಗೆ ಲೌಕಿಕ ಸುಖ ಸೌಕರ್ಯಗಳನ್ನಿತ್ತು ಪೊರೆವ ವರುಣನು ನಮಗೆ ಶಾಂತಿ ನೀಡಲಿ. ನಮ್ಮ ಸಮಸ್ತ ಪಿತೃಪರಂಪರೆಯ ಪ್ರಾತಿನಿಧಿಕ ಶಕ್ತಿಯಾದ ಅರ್ಯಮನು ನಮಗೆ ಶುಭವನ್ನೀಯಲಿ. ಜಗತ್ತಿನ ಸಕಲ ದೇವತೆಗಳ ಸಮನ್ವಯ ಶಕ್ತಿಯಾದ ಇಂದ್ರನೂ, ಅವನ ಪ್ರಜ್ಞಾಶಕ್ತಿಯಾದ (ದೇವಗುರುವೆನಿಸಿದ) ಬೃಹಸ್ಪತಿಯೂ ನಮಗೆ ಶುಭಪ್ರದನಾಗಲಿ. ತುಂಬ ಸಣ್ಣರೂಪದ ವ್ಯಾಪ್ತಿಯುಳ್ಳ ಜೀವಾತ್ಮರಾದ ನಮಗೆ, (ವಾಮನಾವತಾರದಲ್ಲಿ ತ್ರಿವಿಕ್ರಮನಾದಂಥ) ಭೂ-ಅನ್ತರಿಕ್ಷ-ದ್ಯುಲೋಕಗಳ ವಿಶಾಲ ವ್ಯಾಪ್ತಿಯನ್ನಾವರಿಸುವ ಸಾಮರ್ಥ್ಯವನ್ನೀಯಬಲ್ಲ ವ್ಯಾಪಕ ಗುಣದ ವಿಷ್ಣುಶಕ್ತಿಯು ನಮಗೆ ಶಾಂತಿ ನೀಡಲಿ.
ಇವೆಲ್ಲದರ ಮೂಲವಾದ ಪರಬ್ರಹ್ಮ ತತ್ತ್ವಕ್ಕೆ ನಮಸ್ಕಾರ. ಅಂತಹ ಪರಬ್ರಹ್ಮ ತತ್ತ್ವದಿಂದ ಸೃಷ್ಟಿಯಾದ ಜಗತ್ತೆಂಬ ವಾಯುವಿಗೆ ನಮಸ್ಕಾರ. ಇಂತಹ ಚೈತನ್ಯಶೀಲ ವಾಯುವೇ ತಾನಾದ ಜಗತ್ತೆಂಬ ಪ್ರಜಾಪತಿ ಬ್ರಹ್ಮನೇ, ನೀನು ನಮ್ಮ ಕಣ್ಣಿಗೆ ಕಾಣುವ ಪರಬ್ರಹ್ಮವೇ ಆಗಿರುವಿ. “ ಯತೋ ವಾಚೋ ನಿವರ್ತನ್ತೇ ಅಪ್ರಾಪ್ಯ ಮನಸಾ ಸಹ ”— ಮಾತುಗಳು ಮನಸ್ಸಿನೊಂದಿಗೆ ಯಾರನ್ನು ತಲುಪಲಸಾಧ್ಯವಾಗಿ ಹಿಂದಿರುಗುತ್ತವೆಯೋ, ಯಾರು ಮನ-ಮಾತುಗಳಿಗೆ ನಿಲುಕನೋ ಅಂತಹವನು ಪರಬ್ರಹ್ಮ. ಆದುದರಿಂದ, ಪ್ರಜಾಪತಿಬ್ರಹ್ಮನೆಂಬ ವಾಯುವೇ! ಪರಬ್ರಹ್ಮತತ್ತ್ವವೇ ರೂಪಾಂತರಗೊಂಡು ಈ ಜಗತ್ತಾಗಿದೆ. ಜಗತ್ತೇ ನೀನು. ಆದುದರಿಂದ ನಿನ್ನನ್ನೇ ‘ನಮಗೆ ಗೋಚರಿಸುವ ಪರಬ್ರಹ್ಮ’ ಎಂದು ಹೇಳುತ್ತೇವೆ.
ವಾಸ್ತವಿಕವಾಗಿ ಇದ್ದುದನ್ನೇ ಹೇಳುತ್ತೇನೆ. ಸತ್ಯವನ್ನೇ ಹೇಳುತ್ತೇನೆ. ಆ ಪರಬ್ರಹ್ಮತತ್ತ್ವವು ನನ್ನನ್ನು ರಕ್ಷಿಸಲಿ. ಹೇಳುವವರನ್ನು ಅದು ರಕ್ಷಿಸಲಿ. ನನ್ನನ್ನೂ , ನನಗೆ ಬೋಧಿಸುವ ಗುರುಗಳನ್ನೂ ರಕ್ಷಿಸಲಿ, ರಕ್ಷಿಸಲಿ. ಓಂ ಶಾಂತಿಃ ಶಾಂತಿಃ ಶಾಂತಿಃ ||
ಮಿತ್ರನು ನಮ್ಮ ಪ್ರಾಣದಲ್ಲಿದ್ದು, ವರುಣನು ಅಪಾನದಲ್ಲೂ, ಅರ್ಯಮನು ನೇತ್ರದಲ್ಲೂ, ಇಂದ್ರನು ಬಲದಲ್ಲೂ, ಬೃಹಸ್ಪತಿಯು ವಾಕ್-ಬುದ್ಧಿಗಳಲ್ಲೂ, ವಿಷ್ಣುವು ಪಾದಗಳಲ್ಲೂ ನೆಲೆಸಿ, ನಮ್ಮನ್ನು ಬ್ರಹ್ಮವಿದ್ಯಾ-ಶ್ರವಣ-ಧಾರಣ-ಸಮರ್ಥರಾಗುವಂತೆ ನಮಗೆ ಅನುಕೂಲ ಮಾಡಿಕೊಟ್ಟು, ಅದರಿಂದುಂಟಾಗುವ ಶಾಶ್ವತ ಸುಖವನ್ನೀಯಲಿ.
ಹೀಗೆ ಇದರಲ್ಲಿ, ಮಿತ್ರ, ವರುಣ, ಅರ್ಯಮ, ಇಂದ್ರ, ಬೃಹಸ್ಪತಿ, ತ್ರಿವಿಕ್ರಮರೂಪೀ ವಿಷ್ಣು, ಪರಬ್ರಹ್ಮ, ಪ್ರಜಾಪತಿ ಬ್ರಹ್ಮ (ವಾಯು)— ಈ ನಾಮ-ರೂಪ-ಗುಣಗಳಿರುವ ಭಗವಂತನನ್ನು ಪ್ರಾರ್ಥಿಸಲಾಗಿದೆ.
ಅಧೋಲೋಕ, ಮಧ್ಯಲೋಕ ಹಾಗೂ ಊರ್ಧ್ವಲೋಕಗಳೆಂಬ ಮೂರೂ ಲೋಕಗಳಿಗೂ ಶಾಂತಿಯುಂಟಾಗಲಿ. ಋಕ್, ಯಜುಸ್, ಸಾಮಗಳೆಂಬ ತ್ರಯೀವಿದ್ಯೆ / ವೇದರಾಶಿಗಳು ಶಾಂತಿಯನ್ನೀಯಲಿ. ಹರಿ, ಹರ, ಬ್ರಹ್ಮರೆಂಬ ತ್ರಿಮೂರ್ತಿಗಳಿಂದ ಲೋಕಕ್ಕೆ ಶುಭವಾಗಲಿ. ಕಾಯ, ವಾಕ್ ಮತ್ತು ಮನಸ್ಸುಗಳಿಗೆ ಶಾಂತಿಯಿರಲಿ. ಬೇಸಿಗೆ, ಮಳೆ, ಚಳಿಗಾಲಗಳೆಂಬ ವರ್ಷದ ಮೂರೂ ಕಾಲಗಳಲ್ಲೂ ಲೋಕವು ಶಾಂತಿಯುತವಾಗಿರಲಿ. ಸತ್ತ್ವ, ರಜ, ತಮೋಗುಣಗಳು ಪರಸ್ಪರ ಪೂರಕವಾಗಿ ವಿಶ್ವಶಾಂತಿ ನೆಲೆಸಲಿ. ಸತ್ಯ, ನ್ಯಾಯ, ನೀತಿಗಳು ಗೆದ್ದು ಶಾಂತಿ ನೆಲೆಸಲಿ. ಪ್ರಕೃತಿಯ ಘನ-ದ್ರವ-ಅನಿಲಗಳು ವಿಶ್ವಶಾಂತಿಗೆ ಪೂರಕವಾಗಿರಲಿ. ಮನೋನಿಯಂತ್ರಣ, ಇಂದ್ರಿಯವಿಜಯ ಹಾಗೂ ತೃಪ್ತಿ-ಸಮಾಧಾನಗಳು ನಮಗೆ ಸಿದ್ಧಿಸಲಿ. ಕಾಮ-ಕ್ರೋಧಾದಿ ಅರಿಷಡ್ವರ್ಗವು ಶಮನವಾಗಲಿ. ಚಿತ್ತಕ್ಷೋಭೆಯು ಅಳಿಯಲಿ.
ವಿವರಣೆ
ॐ
‘ಓಂ’ಕಾರವು ಮಂಗಲಸೂಚಕ, ಆದಿನಾದಬ್ರಹ್ಮಸಂಜ್ಞೆ, ಆರಂಭ / ಅಂತ್ಯಸೂಚಕವಾದ ಪ್ರಣವಾಕ್ಷರ; “ಹಾಗೆಯೇ ಆಗಲಿ” ಎಂಬ ಒಪ್ಪಿಗೆ / ಅನುಮತಿಸೂಚಕ; ಸ್ವೀಕಾರಾರ್ಥಕ; ವಿಘ್ನಗಳನ್ನು ದೂರಗೊಳಿಸುವಿಕೆ /ತಿರಸ್ಕರಿಸುವಿಕೆ; ಶುಭಸೂಚಕ; ಅತ್ಯಧಿಕ ಶಕ್ತಿಭರಿತ ಶಬ್ದ; ಒಂದು ಚಿರಂತನ ಶಬ್ದ (ಏಕಾಕ್ಷರ); ತನ್ನ ೩ ಮಾತ್ರೆಗಳನ್ನೇ ೩ ಪಾದಗಳಾಗಿ ಹೊಂದಿರುವ ದೈವೀಗಾಯತ್ರೀಚ್ಛಂದಸ್ಸಿನಲ್ಲಿರುವ ಒಂದು ಮಂತ್ರ; ವಿಷಯಾತೀತ ಹಾಗೂ ಏಕಮೇವ ಸತ್ಯದ ಚಿತ್ರ ಅಥವಾ ಸಂಕೇತ; ಪರಮೋಚ್ಚ ಶಬ್ದಾತೀತ ಮೌನಸಿದ್ಧ ಸತ್ಯದ ಬೀಜಾಕ್ಷರ; ಉಪನಿಷದುಕ್ತ ಶಬ್ದಗಳು ಮತ್ತು ಮೌನದ ನಡುವಣ ಸೇತುವೆ; ಅನಾಹತ ನಾದ (ಆಹತ— ಹೊಡೆತ / ಕಂಪನ; ಅದಿಲ್ಲದೇ ಉಂಟಾದದ್ದು— ಅನಾಹತ— ಓಂಕಾರ ಮಾತ್ರ. ವೈಜ್ಞಾನಿಕವಾಗಿ, ಶಬ್ದವು ಕಂಪನದಿಂದಲೇ ಉತ್ಪತ್ತಿಯಾಗುತ್ತದೆ. ಆದರೆ, ಇದು ಭೌತವಿಜ್ಞಾನವನ್ನು ಮೀರಿದ್ದು.); ಅನಿರ್ಬಂಧ (ನಿರ್ಬಂಧ / ಅಡೆತಡೆಗಳಿಲ್ಲದ್ದು); ಅಸ್ಫುಟ (ಅವ್ಯಕ್ತ, ಅಶುಕ್ಲ, ಅಭಿನ್ನ- ತುಂಡಾಗದ್ದು, ಅಭೇದ್ಯ, ಅಚ್ಛಿದ್ರ— ರಂಧ್ರ ಮಾಡಲಸಾಧ್ಯ, ಅರಳದ /ಮೊಗ್ಗು, ಹಿಂಸಾರಹಿತ, ವಿಕಮನ / ಕಾಮನಾರಹಿತ ವೈರಾಗ್ಯ); ಜ್ಞೇಯ (ತಿಳಿಯಲ್ಪಡಬೇಕಾದ ರಹಸ್ಯಜ್ಞಾನ).
ಪರಬ್ರಹ್ಮವಾಚಕ (ತಸ್ಯ ವಾಚಕಃ ಪ್ರಣವಃ— ಪಾತಂಜಲ ಯೋಗಸೂತ್ರ, ಸಮಾಧಿಪಾದ- ೨೭, ಪರಮೇಶ್ವರನನ್ನು ವ್ಯಕ್ತಪಡಿಸುವ ಶಬ್ದ; ಪ್ರಕರ್ಷಣೇನ ನೂಯತೇ ಸ್ತೂಯತೇ ಅನೇನ ಇತಿ | ಪ್ರಣೌತಿ ಸ್ತೌತಿ ಈಶ್ವರಮ್ | ಪ್ರಣಮನ್ತಿ ಅನೇನ ಇತಿ ವಾ ಪ್ರಣವಃ ||— ಬಹುಪ್ರಭಾವಯುತವಾಗಿ, ಅತ್ಯಾಕರ್ಷಕವಾಗಿ ಇದರಿಂದ ಪರಬ್ರಹ್ಮವು ಸ್ತುತಿಸಲ್ಪಡುತ್ತದೆ; ಜಗದೀಶ್ವರನನ್ನು ನಮಿಸುತ್ತದೆ, ಸ್ತುತಿಸುತ್ತದೆ ಇದು; ಈ ಅಕ್ಷರದ ಪಠಣದ್ವಾರಾ ಭಗವಂತನಿಗೆ / ಪರಮಾತ್ಮನಿಗೆ ಪ್ರಣಾಮ ಮಾಡುತ್ತಾರೆ ಎಂಬಿತ್ಯಾದಿ ಕಾರಣಗಳಿಂದ ಪ್ರಣವವೆನಿಸಿದೆ ಈ ಓಂಕಾರ.); ಜೀವನಚಕ್ರದ ಕೇಂದ್ರ (ಮುಂಡಕೋಪನಿಷತ್— ೨.೨.೬); ಆಕಾಶ / ಶೂನ್ಯಪ್ರದೇಶ / ಹೃದಯಾಕಾಶ (ಯಜುರ್ವೇದ— ಓಂ ಖಂ ಬ್ರಹ್ಮ ||); ದೇಹದೊಳಗಿನ ಆತ್ಮಾ (ಮುಂಡಕೋಪನಿಷತ್ ೨.೨.೬— ಓಮ್ ಇತಿ ಏವಂ ಧ್ಯಾಯತ ಆತ್ಮಾನಮ್ ||).
ಶ್ವೇತಾಶ್ವತರೋಪನಿಷತ್ತು (೧.೧೪) ಹೀಗೆ ಹೇಳುತ್ತದೆ—
ಸ್ವದೇಹಮ್-ಅರಣಿಂ ಕೃತ್ವಾ ಪ್ರಣವಂ ಚ-ಉತ್ತರ-ಅರಣಿಮ್ |
ಧ್ಯಾನ-ನಿರ್ಮಥನಾಭ್ಯಾಸಾತ್ ದೇವಂ ಪಶ್ಯೇತ್-ನಿಗೂಢವತ್ ||
ತನ್ನ ದೇಹವನ್ನೇ ಅಗ್ನಿಯನ್ನುತ್ಪಾದಿಸುವ ಬೆಂಕಿಪೆಟ್ಟಿಗೆಯಂತೆ ಬಳಸಿ, ಪ್ರಣವವನ್ನು ಬೆಂಕಿಕಡ್ಡಿಯಂತೆ ಪ್ರಯೋಗಿಸಿ, ಶ್ರವಣ-ಮನನಾದಿಗಳ ಮೂಲಕ ಯಮ-ನಿಯಮಾದಿಗಳ ದಾರಿಯಲ್ಲಿ ಸತತವಾದ ಮನೋಮಥನ-ನಿರಂತರ ಅಭ್ಯಾಸಗಳಿಂದ ದೃಢವಾದ ಧ್ಯಾನವನ್ನು ಸಿದ್ಧಿಮಾಡಿಕೊಂಡು, ಮೊಸರಿನ ಮಥನದಿಂದ ನವನೀತ ಪಡೆದಂತೆ, ಕ್ಷೀರಾಬ್ಧಿಮಥನದಿಂದ ಸುಧೆಯನ್ನು ಪಡೆದಂತೆ, ತನ್ನ ಅಸ್ತಿತ್ವದಲ್ಲೇ ಅಡಗಿರುವ ಪರಬ್ರಹ್ಮವನ್ನು ಕಾಣಬೇಕು.
ಗೋಪಥ ಬ್ರಾಹ್ಮಣದಲ್ಲಿ ಹೀಗಿದೆ—
ಅಮೃತಂ ವೈ ಪ್ರಣವಃ | ಅಮೃತೇನ-ಏವ ತತ್-ಮೃತ್ಯುಂ ತರತಿ | ತದ್ ಯಥಾ ಮನ್ತ್ರೇಣ ವಾ ಗರ್ತಂ ಸಂ ಕ್ರಮೇತ ಏವಂ ತತ್-ಪ್ರಣವೇನ-ಅಪ ಸಂತನೋತಿ || (ಮನ್ತ್ರೇಣ ಸೇತುನಾ ದಂಡೇನ ವಾ)
ಪ್ರಣವವು ಅಮೃತಸ್ವರೂಪಿ. ಅಮೃತದಿಂದಲೇ ಅಲ್ಲವೆ ಆ ಮೃತ್ಯುವನ್ನು ದಾಟಬಹುದು? ಅದು ಹೇಗೆಂದರೆ, ಮಂತ್ರಶಕ್ತಿಯಿಂದ / ಮಂತ್ರಾಲೋಚನೆ-ಉಪಾಯಾದಿಗಳಿಂದ / ಸೇತುವೆಯಿಂದ / ದಂಡ, ಊರುಗೋಲು ಮುಂತಾದ ಸನ್ನೆಗಳಿಂದ ಹಳ್ಳ/ಗುಂಡಿಗಳನ್ನು ಹೇಗೆ ದಾಟಬಹುದೋ ಅಂತೆಯೇ, ಓಂಕಾರವೆಂಬ ಸನ್ನೆಗೋಲಿನಿಂದ ಸಂಸಾರ / ಭವಸಾಗರವನ್ನೇ ದಾಟಬಹುದು; ಅದಿಲ್ಲವಾದರೆ, ವ್ಯಾವಹಾರಿಕ ಜೀವನದ ಕ್ಲೇಶಗಳಲ್ಲೇ ಮುಳುಗುವ ಸಾಧ್ಯತೆಯಿದೆ.
ಅದು ಮತ್ತೂ ಹೇಳುತ್ತದೆ— ಆತ್ಮಭೈಷಜ್ಯಂ ಆತ್ಮಕೈವಲ್ಯಂ ಓಂಕಾರಃ— ಆತ್ಮವ(ನಮ್ಮ) ನ್ನಾವರಿಸುವ ಸಕಲ ಸಾಂಸಾರಿಕ ತಾಪತ್ರಯಗಳೆಂಬ ಘೋರವ್ಯಾಧಿಗೆ / ಭವರೋಗಕ್ಕೆ ಸೂಕ್ತ ಔಷಧಿ / ಚಿಕಿತ್ಸೆ; ಸಕಲ ದುಷ್ಟ-ಭ್ರಷ್ಟ ಬಂಧನಗಳಿಂದ ಬಿಡುಗಡೆಗೆ / ಅವು ನಮ್ಮನ್ನಂಟದಿರಲು ಸಹಾಯಕ.
ಭಗವದ್ಗೀತೆಯು “ಓಮ್, ತತ್ ಮತ್ತು ಸತ್— ಇವು ೩ ಬ್ರಹ್ಮನನ್ನೇ ಸೂಚಿಸುತ್ತವೆ (ಓಂ ತತ್ ಸದ್ ಇತಿ ನಿರ್ದೇಶೋ ಬ್ರಹ್ಮಣಃ ತ್ರಿವಿಧಃ ಸ್ಮೃತಃ ||) ಎಂದು ಹೇಳಿದೆ.
ಮಾಂಡೂಕ್ಯೋಪನಿಷತ್ತಿನ ಪ್ರಕಾರ— “ಭೂತ, ವರ್ತಮಾನ, ಭವಿಷ್ಯ ಎಂಬ ಸಕಲವೂ ಓಂಕಾರವೇ. ಬೇರೆ ಯಾವುದು ಈ ಮೂರು ಕಾಲಗಳನ್ನೂ ಮೀರಿ ನಿಂತಿದೆಯೋ ಅದೂ ಸಹ ಓಂಕಾರವೇ ಆಗಿದೆ (ಭೂತಂ ಭವತ್-ಭವಿಷ್ಯದ್ ಇತಿ ಸರ್ವಂ ಓಂಕಾರ ಏವ | ಯತ್ ಚ ಅನ್ಯತ್ರ ತ್ರಿಕಾಲಾತೀತಂ ತದಪ್ಯೋಂಕಾರ ಏವ ||)” .
ಅಕಾರ-ಉಕಾರ-ಮಕಾರಗಳ ಸಂಗಮ; (ಈ ೩ ಶಬ್ದಗಳು ಅಥವಾ ಶಬ್ದಗಳ ಏಕಾಂಶಗಳು ಸಂಸ್ಕೃತದ ವರ್ಣಮಾಲೆಯ ಎಲ್ಲ ಅಕ್ಷರಗಳನ್ನು ಪ್ರತಿನಿಧಿಸುತ್ತವೆ. ವಾಸ್ತವದಲ್ಲಿ, ಮಿಕ್ಕೆಲ್ಲ ಅಕ್ಷರಗಳು ಈ ಶಬ್ದಾಂಶಗಳ ವಿಸ್ತರಣೆಗಳು, ಮಾರ್ಪಾಡುಗಳು / ಸಂಯೋಜನೆಗಳಾಗಿವೆ. ಸಾಂಪ್ರದಾಯಿಕವಾಗಿ, ‘ಅ’ ಶಬ್ದಾಂಶವು ದೈವತ್ವದ ಮೊಟ್ಟಮೊದಲ ಹೊರಹೊನಲು ಮತ್ತು ಎಲ್ಲ ಪ್ರಾಪಂಚಿಕ ವ್ಯವಹಾರಗಳ ಆಧಾರವಾದ ವಿಷ್ಣುವನ್ನು ಸಂಕೇತಿಸುತ್ತದೆ. ಇದು ವಿಸರ್ಗ (ವಿಶೇಷೇಣ ಸೃಜ್ಯತೇ ಇತಿ ವಿಸರ್ಗಃ— ವಿಶೇಷವಾಗಿ ಸೃಷ್ಟಿಸಲ್ಪಡುತ್ತದೆ ಎಂಬುದರಿಂದ ವಿಸರ್ಗ)ದ ಲಕ್ಷಣವಾಗಿದೆ. ಎರಡನೆಯ ಅಂಶವಾದ ‘ಉ’ ಕಾರವು ಒಳಗಿನಿಂದ ಹೊರಹರಿವು, ಹೊಮ್ಮುವಿಕೆ, ಉಳಿವು, ಮುಂದುವರೆಯುವಿಕೆ, ಸಂರಕ್ಷಣೆ, ಪದದ ಸಮಗ್ರೀಕರಣ ಮತ್ತು ಶಬ್ದಾರ್ಥದ ವ್ಯವಹಾರವನ್ನು ಪ್ರತಿನಿಧಿಸುತ್ತದೆ. ಕೊನೆಯ ಅಂಶವಾದ (ಅನುಸ್ವಾರವನ್ನು ಪ್ರತಿನಿಧಿಸುವ) “ಮ್” ಕಾರವು, ಮುಚ್ಚಿಕೊಳ್ಳುವುದು, ನಿರ್ಗಮನ, ಗ್ರಹಿಕೆ, ವಿಘಟನೆ, ಉಸಿರನ್ನೆಳೆದುಕೊಳ್ಳುವಿಕೆ— ಇವುಗಳ ಸೂಚಕ. “ಅ” ನಾಭಿ, “ಉ” ಹೃದಯ ಮತ್ತು “ಮ್” ಶಿರವಾಗಿದೆ. ಅವುಗಳ ಉತ್ಪತ್ತಿಸ್ಥಾನವೂ ಇವೇ ಆಗಿವೆ. ನಾಭಿ, ಹೃತ್, ಮೂರ್ಧಾ— ಇವು ಸೇರಿ “ಆತ್ಮಾ”, “ಪ್ರಾಣಶಕ್ತಿ”, “ಜೀವನ” ವಾಗುವುದು. ವಾಸ್ತವಿಕವಾಗಿ ಇದೊಂದು ಮನನ ಮತ್ತು ಏಕಾಗ್ರತೆಗೆ ಸೂಕ್ತವಾದ ಮಂತ್ರವಾಗಿದೆ.
ಅನ್ನ(ನೀರು,ಆಹಾರ)-ಉಸಿರು(ವಾಯು)-ಮನೆ(ಭೂಮಿ)ಗಳ ಕಾರಣಸ್ವರೂಪ; ವಿಷ್ಣು-ಮಹೇಶ್ವರ-ಬ್ರಹ್ಮರೆಂಬ ತ್ರಿಮೂರ್ತಿಸ್ವರೂಪಸೂಚಕ; ಪರಮೇಶ್ವರನ ಸಂಕೇತ; ಸ್ವಾಗತಸೂಚಕವೂ ಹೌದು. ಇಡಿಯ ಜಗತ್ತಿನ ಕಂಪನ / ಸೃಷ್ಟಿನಾದವು ಓಂಕಾರಕ್ಕೆ ಸಮಶ್ರುತಿಯಾದಾಗ ಪ್ರಲಯ ಸಂಭವಿಸುವುದು. ಅದೇ ಓಂಕಾರವೆಂಬ ಆದಿನಾದಬ್ರಹ್ಮಮೂಲದಿಂದ / ಶಬ್ದಬ್ರಹ್ಮದಿಂದ ಸೃಷ್ಟಿಯ ಆದಿಯಲ್ಲಿ ವೇದಮಾತೆ ಗಾಯತ್ರಿಯ ಭೂಃ-ಭುವಃ-ಸುವಃ— ಎಂಬ ಮೂರು ವ್ಯಾಹೃತಿಗಳೂ, ಅವುಗಳಿಂದ ೩ ಪಾದಗಳ ಗಾಯತ್ರಿಯೂ, ಈ ವೇದಮಾತೆಯಿಂದ ಋಗ್ಯಜುಸ್ಸಾಮಗಳೆಂಬ ೩ ತೆರನಾದ ಮಂತ್ರಸಮೂಹಗಳಿಂದ ಕೂಡಿದ ೪ ವೇದಗಳೂ, ತರುವಾಯ ಪಂಚಭೂತಾತ್ಮಕವಾದ ನಾನಾಕಂಪನಗಳುಳ್ಳ ಜಗತ್ತೂ ಸೃಷ್ಟಿಯಾಗುವುದು. ಸೂಕ್ಷ್ಮಸ್ತರದಲ್ಲಿ ನೋಡಿದಾಗ ಪ್ರತಿಯೊಂದು ಪರಮಾಣುವಿನಲ್ಲೂ, ಧನಾತ್ಮಕ ಪ್ರೊಟಾನ್ ಹಾಗೂ ತಟಸ್ಥ ನ್ಯೂಟ್ರಾನುಗಳ ಸುತ್ತ ಸದಾ ಎಲೆಕ್ಟ್ರಾನುಗಳೆಂಬ ಋಣಾತ್ಮಕ ಕಣಗಳ ಕಂಪನವಿರುತ್ತದೆ. ಸ್ಥೂಲಸ್ತರದಲ್ಲಿ, ಸೌರಮಂಡಲದಲ್ಲಿ ಗ್ರಹಗಳೆಲ್ಲ ಸೂರ್ಯನ ಸುತ್ತ ತಿರುಗುತ್ತಿವೆಯಷ್ಟೆ? ಇದೂ ಒಂದು ರೀತಿಯ ಕಂಪನ / ಚಲನೆ. ಇವೆಲ್ಲಕ್ಕೂ ಮೂಲ ಪ್ರಣವನಾದ. ಇವೆಲ್ಲವೂ ಕೊನೆಗೆ ಲೀನವಾಗುವುದೂ ಅದರಲ್ಲೇ. ಅದಕ್ಕೇ ಹೇಳಿರುವುದು ಭಗವಂತ / ಆದಿಶಕ್ತಿ ಸೃಷ್ಟಿ-ಸ್ಥಿತಿ-ಲಯ— ಈ ಎಲ್ಲಕ್ಕೂ ಮೂಲಕಾರಣ ಎಂದು.
ಯೋಗಿ ಯಾಜ್ಞವಲ್ಕ್ಯರೆಂದಂತೆ,
ಪ್ರಣವಾದ್ಯಾಃ ಸ್ಮೃತಾಃ - ಮನ್ತ್ರಾಃ - ಚತುರ್ವರ್ಗಫಲಪ್ರದಾಃ |
ತಸ್ಮಾತ್ ಚ ನಿಃಸೃತಾಃ ಸರ್ವೇ ಪ್ರಲೀಯನ್ತೇ ಚ ತತ್ರ ವೈ ||
ಮಙ್ಗಲ್ಯಂ ಪಾವನಂ ಧರ್ಮ್ಯಂ ಸರ್ವಕಾಮಪ್ರದಾಯಕಮ್ |
ಓಙ್ಕಾರಂ ಪರಮಂ ಬ್ರಹ್ಮ ಸರ್ವಮನ್ತ್ರೇಷು ನಾಯಕಮ್ ||
ಪ್ರಜಾಪತೇಃ ಮುಖೋತ್ಪನ್ನಂ ತಪಃಸಿದ್ಧಸ್ಯ ವೈ ಪುರಾ ||
ತಥಾ ಜಗದಿದಂ ಸರ್ವಮ್ - ಓಙ್ಕಾರೇಣೈವ ಧಾರ್ಯತೇ |
ಜಪೇನ ದಹತೇ ಪಾಪಂ ಪ್ರಾಣಾಯಾಮೈಃ - ತಥಾ ಮಲಮ್ |
ಧ್ಯಾನೇನ ಜನ್ಮನಿರ್ಯಾಣಂ ಧಾರಣಾಭಿಸ್ತು ಮುಚ್ಯತೇ ||
ಪ್ರಣವದಿಂದಾರಂಭಿಸಲ್ಪಟ್ಟ ಮಂತ್ರಗಳೇ ಧರ್ಮಾರ್ಥಕಾಮಮೋಕ್ಷಾಖ್ಯ ಚತುರ್ವಿಧವಾದ ಫಲವನ್ನೀಯುವಂಥವು. ಅದರಿಂದಲೇ (ಓಂಕಾರದಿಂದಲೇ) ಇವೆಲ್ಲವೂ ಹೊರಬಂದಿವೆ ಹಾಗೂ ಅದರಲ್ಲೇ ಕೊನೆಗೆ ಲೀನವಾಗುವುವು. ಮಂಗಲಕರ, ಪವಿತ್ರ, ಧರ್ಮಬುದ್ಧಿಪ್ರದಾಯಕ, ಸಕಲ ಬಯಕೆಗಳನ್ನೀಯುವಂಥದ್ದು ಓಂಕಾರ. ಅದೇ ಪರಬ್ರಹ್ಮವು; ಎಲ್ಲ ಮಂತ್ರಗಳ ಅಧಿಪತಿ. ಇದು ಹಿಂದೆ ತಪಃಸಿದ್ಧನಾದ ಪ್ರಜಾಪತಿಯ ಮುಖದಿಂದ ಉತ್ಪನ್ನವಾಯಿತು. ಅಂತೆಯೇ, ಈ ಜಗವೆಲ್ಲವೂ ಓಂಕಾರದಿಂದಲೇ ಧರಿಸಲ್ಪಟ್ಟಿದೆ (ಜಗಕ್ಕೇ ಅದು ಆಧಾರಭೂತವಾಗಿದೆ). ಓಂಕಾರಜಪದಿಂದ ಪಾಪವು ದಹಿಸಲ್ಪಡುವುದು. ಓಂಕಾರಸಹಿತ ಪ್ರಾಣಾಯಾಮಗಳಿಂದ ಶಾರೀರಿಕ-ಮಾನಸಿಕ-ಆಧ್ಯಾತ್ಮಿಕಾದಿಸ್ತರಗಳ ಸಕಲ ಕೊಳೆಗಳು ನಿವಾರಿಸಲ್ಪಡುವುವು. ಪ್ರಣವಧ್ಯಾನದಿಂದ ಜನನಮರಣಗಳಿಂದ ಬಿಡುಗಡೆಯೂ, ಪ್ರಣವದ ಧಾರಣಾಸಮಾಧಿಗಳಿಂದ ಮೋಕ್ಷವೂ ಉಂಟಾಗುವುದು.
ವರ್ಣತ್ರಯಾತ್ಮಕಾಃ - ಹಿ-ಏತೇ ರೇಚಕ-ಪೂರಕ-ಕುಂಭಕಾಃ |
ಸಃ - ಏವ ಪ್ರಣವಃ ಪ್ರೋಕ್ತಃ ಪ್ರಾಣಾಯಾಮಃ - ಚ ತನ್ಮಯಃ ||
ನಿಃಶ್ವಾಸ(ಉಸಿರು ಬಿಡುವಿಕೆ)-ಉಚ್ಛ್ವಾಸ(ಉಸಿರೆಳೆದುಕೊಳ್ಳುವಿಕೆ)-ಬಳಿಕ ಸಾಮಾನ್ಯ ವಿರಾಮ— ಇವು ಅ,ಉ,ಮ— ಗಳೆಂಬ ವರ್ಣತ್ರಯಾತ್ಮಕವಾದವುಗಳು. ಇವುಗಳ ಸಮುಚ್ಚಯವೇ ಪ್ರಣವ. ಇದರಲ್ಲೇ ತನ್ಮಯವಾಗಿರುವಿಕೆ / ಉಸಿರಾಟದ ಗತಿಯನ್ನು ಮಾತ್ರ ಗಮನಿಸುತ್ತಾ ಉಸಿರಾಟವನ್ನು ನಿಯಂತ್ರಿತವಾಗಿ ನಡೆಸುವುದಕ್ಕೇ ಪ್ರಾಣಾಯಾಮವೆನ್ನುವರು.
ಸ(/ಹ)ಕಾರೇಣ ಬಹಿರ್ಯಾತಿ ಹ(/ಸ)ಕಾರೇಣ ವಿಶೇತ್ ಪುನಃ |
ಹಂಸ-ಹಂಸ-ಇತಿ-ಅಮುಂ ಮನ್ತ್ರಂ(/ಹಂಸಾತ್ಮಿಕಾಂ ಭಗವತೀಂ) ಜೀವೋ ಜಪತಿ ಸರ್ವದಾ ||
(ವಿಜ್ಞಾನ-ಭೈರವ ತನ್ತ್ರ / ಆವರಣದೊಳಗಿನದ್ದು ಶಕ್ತಿ ಸಂಗಮ ತಂತ್ರದ ಪಾಠ)
ಹಕಾರಸ್ಯ ಸಕಾರಸ್ಯ ಲೋಪೇ ಕಾಮಕಲಾ ಭವೇತ್ |
ಸೋऽಹಮ್-ಇತಿ-ಅತ್ರ ದೇವೇಶಿ ಪ್ರಣವಃ ಪರಿತಿಷ್ಠತಿ ||
(ಶಕ್ತಿ-ಸಙ್ಗಮ ತನ್ತ್ರ)
ಜೀವನು ತನ್ನ ಪ್ರತಿ ಉಸಿರಲ್ಲೂ “ಹಂಸಃ ಸೋऽಹಮ್” ಎಂಬ ಮಂತ್ರವನ್ನು (/ಹಂಸಾತ್ಮಿಕೆಯಾದ ಭಗವತಿಯನ್ನು) ತನಗರಿವಿಲ್ಲದಂತೆಯೇ ಸದಾ ಜಪಿಸುತ್ತಿರುವನು. ಇದನ್ನು ಅಜಪಾಜಪ ಎಂದೂ ಕರೆಯುತ್ತಾರೆ. “ಸೋऽಹಂ” ಎಂಬ ಪ್ರಾಣಾಯಾಮದಲ್ಲಿ ಸಕಾರವು ರೇಚಕ, ಹಕಾರವು ಪೂರಕ. ಸ್+ಓऽ+ಹ್+ಅಂ— ಇಲ್ಲಿ, ಸ,ಹ ಗಳು ಲೋಪವಾದಾಗ ಓಮ್ ಸಿದ್ಧವಾಗುತ್ತದೆ / ಉಳಿದುಕೊಳ್ಳುತ್ತದೆ. ಸ,ಹ ಗಳ ಸಂಧಿಸ್ಥಾನವು (ಹಂಸಃ ಸೋऽಹಂ ನಲ್ಲಿ ಹ್+ಅಂ+ಸಃ ಸೋ+ಅ+ಹಂ) ಅಂ / ಅ. ಈ ಒಳಗೂ ಹೋಗದ, ಹೊರಗೂ ಬರದ ಶ್ವಾಸವೇ ಕುಂಭಕ / ಶೂನ್ಯ ವಿರಾಮ. ಹಾಗೆ, ಪ್ರಾಣವು— “ಹಂಸಃ ಸೋऽಹಂ” ಪಕ್ಷದ್ವಯ-ತ್ಯಾಗಾತ್ (ಹ ಮತ್ತು ಸ) ಪ್ರಣವಃ” ಕುಂಭಕವು, ಉಸಿರೆಳೆದು ಹೊರಬಿಡುವ ಮುನ್ನ ದೇಹದೊಳಗೂ (ಅಂತಃ /ಆಭ್ಯಂತರ ಕುಂಭಕ), ನಿಃಶ್ವಾಸದ ನಂತರ ಉಚ್ಛ್ವಾಸಕ್ಕೆ ಮುನ್ನ ಶರೀರದಾಚೆಗೂ (ಬಾಹ್ಯ / ಬಹಿಃ ಕುಂಭಕ) ಇರಬಹುದು.
ನ ಪ್ರಾಣೇನ ನ-ಅಪಾನೇನ ಮರ್ತ್ಯೋ ಜೀವತಿ ಕಶ್ಚನ |
ಇತರೇಣ ತು ಜೀವನ್ತಿ ಯಸ್ಮಿನ್ ಏತೌ-ಉಪಾಶ್ರಿತೌ ||
ಊರ್ಧ್ವಂ ಪ್ರಾಣಮ್-ಉನ್ನಯತಿ-ಅಪಾನಂ ಪ್ರತ್ಯಗ್-ಅಸ್ಯತಿ |
ಮಧ್ಯೇ ವಾಮನಮ್-ಆಸೀನಂ ವಿಶ್ವೇದೇವಾ ಉಪಾಸತೇ ||
(ಕಠೋಪನಿಷತ್)
ರೇಚಕ ಪೂರಕಗಳ / ಪೂರಕ ರೇಚಕಗಳ ನಡುವಿನ ಅಲ್ಪ ಕುಂಭಕ / ವಿರಾಮವು ಬಹುಸೂಕ್ಷ್ಮವಾಗಿದ್ದು, ಸುಲಭವಾಗಿ ನಮ್ಮ ಗಮನಕ್ಕೆ ಬರುವುದಿಲ್ಲ. ಈ ವಿರಾಮವು ಬಹುಮುಖ್ಯವಾಗಿದ್ದು, ಇದನ್ನು ಕಠೋಪನಿಷತ್ತಿನಲ್ಲಿ “ವಾಮನ” ಎಂದು ಕರೆದಿದ್ದು, ಇಲ್ಲಿ ಪ್ರಾಣವು ಅಂತರ್ಗತವಾಗಿದೆ. ಪ್ರಾಣ-ಅಪಾನಗಳು ಇವನನ್ನೇ / ಇದನ್ನೇ ಆಶ್ರಯಿಸಿವೆ. ಇದರಿಂದಾಗಿಯೇ ಮಾನವ ಜೀವಂತವಾಗಿರುವನು.
ಇದು ಅನೈಚ್ಛಿಕ, ಸ್ವಯಂ ಪ್ರೇರಿತ, ಅಜಾಗೃತ ಸ್ಥಿತಿಯಲ್ಲಿನ ಜಪ. ವ್ಯಕ್ತಿಯು ಇದಕ್ಕೆ ತನ್ನನ್ನು ಶ್ರುತಿಗೂಡಿಸಿಕೊಂಡು ಕುಂಭಕವನ್ನು (ಉಚ್ಛ್ವಾಸವೂ ಅಲ್ಲದ, ನಿಃಶ್ವಾಸವೂ ಅಲ್ಲದ ಉಸಿರು, ಉಸಿರೇ ಇಲ್ಲದ ಉಸಿರು) ಅರಿತುಕೊಳ್ಳಬೇಕು. ಓಂಕಾರವನ್ನು ಪಠಿಸುವುದಕ್ಕಿಂತ, ಅಂತರಾಳದಲ್ಲಿ ಪ್ರತಿಧ್ವನಿಸುವ ಇದನ್ನು ಶ್ರವಣ ಮಾಡಬೇಕು. ಅಲೌಕಿಕ / ಅಂತಿಮ ವಿಶ್ರಾಂತಿಯಾಗಿರುವುದರಿಂದ ಇದೇ ಪರಾ ವಾಕ್. ಅಲ್ಲಿ ಎರಡಿಲ್ಲವಾದ್ದರಿಂದ ಅದು ಅನಾಹತ (ಘರ್ಷಣೆಯಿಲ್ಲ). ಇದರ ಸ್ಥಾನ ವ್ಯಕ್ತಿಯ ಕೇಂದ್ರ (ಹೃತ್ / ಹೃದಯ). ಇಲ್ಲಿಂದ ಅಂಕುರವಾಗುವ ಪ್ರಾಣವು ಪಶ್ಯನ್ತೀ, ಮಧ್ಯಮಾ ಗಳ ಮೂಲಕ ಹೊರಹೊಮ್ಮಿ, ಮೂಗಿನ ತುದಿಯ ಹೊರಗಡೆಯಿಂದ ೧೨ ಅಂಗುಲಗಳ ದೂರ ಕ್ರಮಿಸುತ್ತದೆ (ದ್ವಾದಶಾಂತ). ಹೀಗೆ ಓಂಕಾರವನ್ನುಚ್ಚರಿಸಿದಾಗ ಅದು ಪ್ರಾಣವಾಯುವಿನ (ಉಸಿರಿನ) ಗತಿಯನ್ನೇ ಅನುಸರಿಸುತ್ತದೆ. ಆದರೆ, ಅದರ ಕುರಿತು ಧ್ಯಾನ ಮಾಡಿದಾಗ, ಅದು ವೈಖರೀ (ವಾಕ್ ಇಂದ್ರಿಯ / ಸಾಮಾನ್ಯವಾಗಿ ಕೇಳಿಸುವ ವ್ಯಕ್ತ ಮಾತು)ಯಿಂದ ಒಳಹೊಕ್ಕು, ಮಧ್ಯಮಾ, ಪಶ್ಯನ್ತೀ ಗಳ ಮೂಲಕ ಹಾದು ವ್ಯುತ್ಕ್ರಮಗತಿಯಲ್ಲಿ ಹೃದಯ (ಪರಾ) ವನ್ನು ಮುಟ್ಟುತ್ತದೆ. ಆಗ, ಹೃದಯದಲ್ಲಿ ಅನೈಚ್ಛಿಕ ಓಂ ಕೇಳಿಸುತ್ತದೆ ಮತ್ತು ಅನುಭವವಾಗುತ್ತದೆ.
ಕಠೋಪನಿಷತ್ತು ಹೀಗೆ ಹೇಳುತ್ತದೆ—
ಸರ್ವೇ ವೇದಾ ಯತ್ಪದಮಾಮನಂತಿ
ತಪಾಂಸಿ ಸರ್ವಾಣಿ ಚ ಯದ್ವದಂತಿ |
ಯದಿಚ್ಛಂತೋ ಬ್ರಹ್ಮಚರ್ಯಂ ಚರಂತಿ
ತತ್ತೇ ಪದಂ ಸಂಗ್ರಹೇಣ (ಪ್ರವಕ್ಷ್ಯೇ ||) ಬ್ರವೀಮ್ಯೋಮಿತ್ಯೇತತ್ ||
ಏತತ್ ಹಿ ಏವ ಅಕ್ಷರಂ ಬ್ರಹ್ಮ ಏತತ್ ಹಿ ಏವ ಅಕ್ಷರಂ ಪರಮ್ |
ಏತದ್ಧ್ಯೇವಾಕ್ಷರಂ ಜ್ಞಾತ್ವಾ ಯೋ ಯದಿಚ್ಛತಿ ತಸ್ಯ ತತ್ ||(೧.೨.೧೫-೧೬)
ಎಲ್ಲಾ ವೇದಗಳೂ ಯಾವ ಪದವನ್ನು ವಿವರಿಸುತ್ತವೆಯೋ, ಎಲ್ಲ ತಪಸ್ಸುಗಳ ಸಾರವೇನಿದೆಯೋ, ಯಾವುದನ್ನು ತಿಳಿಯಲು ಇಚ್ಛಿಸಿ ಬ್ರಹ್ಮಚರ್ಯವ್ರತವನ್ನು ಅನುಷ್ಠಾನಿಸುವರೋ, ಆ ಪದ / ಸ್ಥಾನ / ಪದವಿ / ಅಕ್ಷರ / ಶಬ್ದವನ್ನು ಸಂಗ್ರಹರೂಪವಾಗಿ (ಹೇಳುವೆನು) ಹೇಳುತ್ತೇನೆ; ಅದೇ ಓಮ್ ಎಂಬುದು. ಅಂದರೆ, ಸಕಲ ವೇದಾದಿಗಳ ಸಾರ, ಸಮಸ್ತ ಜೀವರ ಪರಮ(ಚರಮ)ಲಕ್ಷ್ಯದ ಸಾರರೂಪವಾದ ಏಕಾಕ್ಷರ ಪದವೇ ಪ್ರಣವ / ಓಂಕಾರ. ಇದೇ ನಾಶವಾಗದ ಬ್ರಹ್ಮ; ಇದೇ ಶ್ರೇಷ್ಠವಾದ ಅಕ್ಷರ. ಈ ಅ-ಕ್ಷರ(ನಾಶವಿಲ್ಲದ್ದು)ವನ್ನೇ ತಿಳಿದು ಯಾವನು ಏನನ್ನು ಬಯಸುವನೋ ಅವನಿಗೆ ಅದು ಲಭಿಸುವುದು.
ಪ್ರಶ್ನೋಪನಿಷತ್ತಿನ ಪ್ರಕಾರ—
ಏತದ್ವೈ ಸತ್ಯಕಾಮ ಪರಂ ಚ ಅಪರಂ ಚ ಬ್ರಹ್ಮ ಯದ್ ಓಂಕಾರಃ ||
(೫.೨)
ಯಃ ಪುನರೇತಂ ತ್ರಿಮಾತ್ರೇಣ ಓಮಿತ್ಯೇತೇನೈವ ಅಕ್ಷರೇಣ ಪರಂ ಪುರುಷಮಭಿಧ್ಯಾಯೀತ || (೫.೫)
ಎಲೈ ಸತ್ಯಕಾಮನೇ! ಪರ(ಕಾರಣ)ವೂ ಅಪರ(ಕಾರ್ಯ)ವೂ ಆದ ಬ್ರಹ್ಮವೇ ಓಂಕಾರ. ಯಾವನು ಈ ಮೂರು ಮಾತ್ರೆಗಳ “ಓ೩ಮ್” ಎಂಬ ಅಕ್ಷರದಿಂದ ಪರಮಪುರುಷನನ್ನು ಕುರಿತು ಧ್ಯಾನಿಸುವನೋ— ಅರ್ಥಾತ್ ಓಂಕಾರವು ಆ ಪುರುಷೋತ್ತಮನ ದ್ಯೋತಕವಾಗಿದೆ. ಅದನ್ನು ಧ್ಯಾನಿಸಿದರೆ, ಅವನನ್ನೇ ತಿಳಿಯಬಹುದು.
ಯಜುರ್ವೇದದ ತೈತ್ತಿರೀಯಾರಣ್ಯಕದಲ್ಲಿರುವಂತೆ—
ಓಮಿತಿ ಬ್ರಹ್ಮ | ಓಮಿತಿ ಇದಗ್ಂ ಸರ್ವಮ್ ||(೧.೮)
ಓಮ್ ಎಂದರೆ ಬ್ರಹ್ಮವು. ಓಮ್ ಎಂದರೆ ಇದೆಲ್ಲವೂ ಆಗಿದೆ.
ಛಾಂದೋಗ್ಯೋಪನಿಷತ್ತಿನ ವಾಕ್ಯ—
ತದ್ಯಥಾ ಶಂಕುನಾ ಸರ್ವಾಣಿ ಪರ್ಣಾನಿ ಸಂತೃಣ್ಣ್ಯಾನಿ ಏವಮೋಂಕಾರೇಣ ಸರ್ವಾ ವಾಕ್ ಸಂತೃಣ್ಣಾ | ಓಂಕಾರ ಏವ ಇದಂ ಸರ್ವಮ್ || (೨.೨೩.೩)
ಹೇಗೆ ಎಲ್ಲಾ ಎಲೆಗಳೂ ಶಂಕುವೆಂಬ ನಾರಿನಿಂದ ಕೊರೆಯಲ್ಪಟ್ಟಿವೆಯೋ ಅಂತೆಯೇ, ಸಕಲ ವಾಕ್ಕು (ಮಂತ್ರ / ಮಾತು)ಗಳೂ ಓಂಕಾರದಿಂದ ಕೊರೆಯಲ್ಪಟ್ಟಿವೆ / ಪರಿಪ್ಲುತವಾಗಿವೆ. ಇದೆಲ್ಲವೂ ಓಂಕಾರವೇ.
ಮಾಂಡೂಕ್ಯೋಪನಿಷತ್ತು ಹೀಗೆ ಹೇಳಿದೆ—
ಓಮಿತ್ಯೇತದಕ್ಷರಮಿದಂ ಸರ್ವಮ್ || (೧)
ಓಮ್ ಎಂಬೀ ಅಕ್ಷರವು ಇದೆಲ್ಲವೂ (ಆಗಿದೆ).
ಪ್ರಣವೋ ಹ್ಯಪರಂ ಬ್ರಹ್ಮ ಪ್ರಣವಶ್ಚ ಪರಃ ಸ್ಮೃತಃ |
ಅಪೂರ್ವೋऽನಂತರೋऽಬಾಹ್ಯೋऽನಪರಃ ಪ್ರಣವೋऽವ್ಯಯಃ ||
ಪ್ರಣವವು ಅಪರ (ಕಾರ್ಯ)ಬ್ರಹ್ಮವೂ, ಪರ (ಕಾರಣ)ಬ್ರಹ್ಮವೂ ಆಗಿದೆ. ಎಲ್ಲಕ್ಕೂ ಮೂಲಕಾರಣವಾದ ಶುದ್ಧ ಸ್ವರೂಪ ಪರಬ್ರಹ್ಮ. ಎಲ್ಲವನ್ನೂ ಮಾಡುವ ಕ್ರಿಯಾಸ್ವರೂಪೀ ಬ್ರಹ್ಮವೇ ಅಪರಬ್ರಹ್ಮ; ಇದು ಮೂಲ ಪರಬ್ರಹ್ಮದ ರೂಪಾಂತರ. ಬ್ರಹ್ಮವಸ್ತುವು ಅಪೂರ್ವವೂ (ಆದಿಯಿಲ್ಲದ ನಿತ್ಯತತ್ತ್ವ), ಅನ್-ಅಂತರವೂ (ಜಗತ್ತಿನಿಂದ ಪ್ರತ್ಯೇಕ ಅಂತರ / ಗ್ಯಾಪ್ ಇಲ್ಲದೆ ಅದರೊಳಗೇ ಸೇರಿಕೊಂಡದ್ದೂ ಅಥವಾ ಒಳಭಾಗವಿಲ್ಲದ್ದೂ), ಅಬಾಹ್ಯವೂ (ಹೊರಭಾಗವಿಲ್ಲದ್ದೂ— ಒಳಹೊರಗಿಲ್ಲದ್ದೂ ಅಥವಾ ಜಗತ್ತಿನಿಂದ ಹೊರಗಿಲ್ಲದೇ ಜಗತ್ತಿನಲ್ಲೇ ಬೆರೆತಿರುವಂಥದ್ದೂ), ಅನ್-ಅಪರವೂ (ಅಪರವಲ್ಲದ್ದೂ— ಪರಾಸ್ವರೂಪಿಯೂ), ಪ್ರ-ನವವೂ (ಪ್ರಕೃಷ್ಟವೂ, ನಿತ್ಯ ನವೀನವೂ, ನವಶಕ್ತಿಸ್ವರೂಪವಾದದ್ದೂ), ಅವ್ಯಯವೂ (ವ್ಯಯವಾಗದ್ದೂ / ಕ್ಷಯಿಸದ ಅಕ್ಷಯಸ್ವರೂಪವೂ) ಆಗಿದೆ.
ಸರ್ವಸ್ಯ ಪ್ರಣವೋ ಹ್ಯಾದಿರ್ಮಧ್ಯಮಂತಸ್ತಥೈವ ಚ |
ಏವಂ ಹಿ ಪ್ರಣವಂ ಜ್ಞಾತ್ವಾ ವ್ಯಶ್ನುತೇ ತದನಂತರಮ್ ||
ಪ್ರಣವವು (ಓಂಕಾರವು) ಜಗತ್ತಿನ ಎಲ್ಲದರ ಆದಿಯೂ, ಮಧ್ಯವೂ, ಅಂತ್ಯವೂ ಆಗಿದೆಯೆಂದು ತಿಳಿದರೆ, ಆ ಬಳಿಕ ಅಂಥವನು ಪ್ರಣವಸ್ವರೂಪವನ್ನೇ ಸೇರುತ್ತಾನೆ.
ಪ್ರಣವಂ ಹೀಶ್ವರಂ ವಿದ್ಯಾತ್ ಸರ್ವಸ್ಯ ಹೃದಯೇ ಸ್ಥಿತಮ್ |
ಸರ್ವವ್ಯಾಪಿನಮೋಂಕಾರಂ ಜ್ಞಾತ್ವಾ ಧೀರೋ ನ ಶೋಚತಿ ||
ಓಂಕಾರವನ್ನು ಎಲ್ಲರ ಹೃದಯದಲ್ಲಿ ಸ್ಥಿತನಾದ ಜಗದೀಶ್ವರನೆಂದೇ ತಿಳಿಯಬೇಕು. ಸರ್ವವ್ಯಾಪಿಯಾದ (ಎಲ್ಲೆಡೆ ಹಬ್ಬಿರುವ) ಓಂಕಾರವನ್ನು ಅರಿತು, ಧೀರನಾದವನು ಎಂಥ ಪರಿಸ್ಥಿತಿಯಲ್ಲೂ ಶೋಕ-ಮೋಹಾದಿಗಳಿಗೆ ಒಳಗಾಗಲಾರನು.
ಅಮಾತ್ರೋऽನಂತಮಾತ್ರಶ್ಚ ದ್ವೈತಸ್ಯೋಪಶಮಃ ಶಿವಃ |
ಓಂಕಾರೋ ವಿದಿತೋ ಯೇನ ಸ ಮುನಿರ್ನೇತರೋ ಜನಃ ||
(ಗೌಡಪಾದಕೃತ-ಮಾಂಡೂಕ್ಯಕಾರಿಕಾ ೧. ೨೬-೨೯)
ಮಾತ್ರೆಗಳಿಲ್ಲದ (ಅಳತೆಯಿಲ್ಲದ), ಅನಂತಮಾತ್ರಾಕಾಲ ಉಚ್ಚರಿಸಬಹುದಾದುದೂ ಆದ, ಜೀವ-ಶಿವ ಎಂಬ ದ್ವೈತಭೇದವನ್ನು ಇಲ್ಲವಾಗಿಸಿ ಜೀವಬ್ರಹ್ಮೈಕ್ಯಭಾವವನ್ನುಂಟುಮಾಡುವ ಮಂಗಲಸ್ವರೂಪವಾದ ಓಂಕಾರವು ಯಾವನಿಂದ ತಿಳಿಯಲ್ಪಡುವುದೋ ಅವನೇ ಮುನಿಯು; ಅಲ್ಲವಾದರೆ ನಿಜಾರ್ಥದಲ್ಲಿ ಮುನಿಯೆನಿಸಲಾರನು.
ಓಂ ತದಾತ್ಮಾ | ಓಂ ತತ್ಸತ್ಯಮ್ ||
(ತೈತ್ತಿರೀಯ ನಾರಾಯಣಪನ್ನ / ಮಹಾನಾರಾಯಣೋಪನಿಷತ್ ೨೯)
ಓಮ್ ಎಂಬ ತದ್ ವಾಚ್ಯವಾದ ಆ ಬ್ರಹ್ಮವು ನಮ್ಮೊಳಗಿನ ಆತ್ಮವೇ ಆಗಿದೆ. ಅದೇ ಸತ್ಯಸ್ವರೂಪವೂ ಹೌದು.
ಓಮಿತ್ಯೇಕಾಕ್ಷರಂ ಬ್ರಹ್ಮ ವ್ಯಾಹರನ್ ಮಾಮನುಸ್ಮರನ್ |
ಯಃ ಪ್ರಯಾತಿ ತ್ಯಜನ್ ದೇಹಂ ಸ ಯಾತಿ ಪರಮಾಂ ಗತಿಮ್ ||
(ಭಗವದ್ಗೀತೆ ೮.೧೩)
ಓಮ್ ಎಂಬ ಏಕಾಕ್ಷರರೂಪೀ ಬ್ರಹ್ಮವನ್ನು ಉಚ್ಚರಿಸುತ್ತಾ, ನನ್ನನ್ನೇ (ಭಗವಂತನನ್ನೇ) ಸ್ಮರಿಸುತ್ತಾ ಯಾವನು ದೇಹಬಿಡುತ್ತಾನೋ (ಮರಣ ಹೊಂದುತ್ತಾನೋ), ಅಂಥವನು ಪರಮಗತಿಯಾದ ಮೋಕ್ಷವನ್ನೈದುವನು.
ಯದಕ್ಷರಂ ವೇದವಿದೋ ವದಂತಿ ವಿಶನ್ತಿ ಯದ್ಯತಯೋ ವೀತರಾಗಾಃ |
ಯದಿಚ್ಛಂತೋ ಬ್ರಹ್ಮಚರ್ಯಂ ಚರನ್ತಿ ತತ್ತೇ ಪದಂ ಸಂಗ್ರಹೇಣ ಪ್ರವಕ್ಷ್ಯೇ ||
(ಭ.ಗೀ.೮.೧೧)
ಯಾವ ನಾಶವಿರದ ಪ್ರಣವಾಕ್ಷರವನ್ನು ವೇದಜ್ಞರು ಹೇಳುತ್ತಾರೋ, ರಾಗ (ಆಸೆ)-ದ್ವೇಷಾದಿ ಅರಿಷಡ್ವರ್ಗವನ್ನು (ಕಾಮ-ಕ್ರೋಧ-ಲೋಭ-ಮೋಹ-ಮದ-ಮಾತ್ಸರ್ಯಗಳನ್ನು) ಬಿಟ್ಟ ಯತಿಗಳು ಯಾವುದನ್ನು ಕೊನೆಗೆ ಪ್ರವೇಶಿಸುವರೋ, ಯಾವುದನ್ನೇ ಇಚ್ಛಿಸಿ ಬ್ರಹ್ಮಚರ್ಯವ್ರತವನ್ನು ಆಚರಿಸುವರೋ, ಆ ಪದವನ್ನು ನಿನಗೆ (ಅರ್ಜುನನಿಗೆ) ಸಂಗ್ರಹರೂಪವಾಗಿ ಹೇಳುವೆನು— ಎಂದಿದ್ದಾನೆ ಗೀತಾಚಾರ್ಯ ಶ್ರೀಕೃಷ್ಣ.
ರಸೋऽಹಮಪ್ಸು ಕೌಂತೇಯ ಪ್ರಭಾಸ್ಮಿ ಶಶಿಸೂರ್ಯಯೋಃ |
ಪ್ರಣವಃ ಸರ್ವವೇದೇಷು ಶಬ್ದಃ ಖೇ ಪೌರುಷಂ ನೃಷು ||
(ಭ.ಗೀ.೭.೮)
ಎಲೈ ಕುಂತೀಪುತ್ರ ಅರ್ಜುನ! ನಾನು (ಕೃಷ್ಣನು) ದ್ರವರೂಪ ಪದಾರ್ಥಗಳಲ್ಲೆಲ್ಲ ರಸ / ಸಾರವಾಗಿದ್ದೇನೆ; ಚಂದ್ರಸೂರ್ಯರ ಪ್ರಭೆಯೂ ನಾನೇ; ಸರ್ವ ವೇದವಾಙ್ಮಯದಲ್ಲಿ ಪ್ರಣವನೇ ನಾನು; ಆಕಾಶದಲ್ಲಿ ಶಬ್ದವೂ, ನರರಲ್ಲಿನ ಪೌರುಷವೂ ನಾನೇ— ಎಂದಿದ್ದಾನೆ ಜಗದ್ಗುರು ಶ್ರೀಕೃಷ್ಣ.
ಮಹರ್ಷೀಣಾಂ ಭೃಗುರಹಂ ಗಿರಾಮಸ್ಮ್ಯೇಕಮಕ್ಷರಮ್ |
ಯಜ್ಞಾನಾಂ ಜಪಯಜ್ಞೋऽಸ್ಮಿ ಸ್ಥಾವರಾಣಾಂ ಹಿಮಾಲಯಃ ||
(ಭ.ಗೀ.೧೦.೨೫)
ಮಹರ್ಷಿಗಳಲ್ಲಿ (ತ್ರಿಮೂರ್ತಿಗಳನ್ನೂ ಪರೀಕ್ಷಿಸಿದ) ಭೃಗುವೂ, ಸಕಲ ವಾಕ್ಕುಗಳಲ್ಲಿ ಓಮ್ ಎಂಬ ಏಕಾಕ್ಷರವೂ, ಯಜ್ಞಗಳಲ್ಲಿ ಶ್ರೇಷ್ಠವಾದ ಜಪಯಜ್ಞವೂ, ಸ್ಥಿರವಾಗಿರುವವುಗಳಲ್ಲಿ ಹಿಮಾಲಯವೂ ನಾನೇ.
ಆದ್ಯಂ ಚ ತ್ರ್ಯಕ್ಷರಂ ಬ್ರಹ್ಮ ತ್ರಯೀ ಯಸ್ಮಿನ್ ಪ್ರತಿಷ್ಠಿತಾ |
ಏಕಾಕ್ಷರಂ ಪರಂ ಬ್ರಹ್ಮ ಪ್ರಾಣಾಯಾಮಃ ಪರಂ ತಪಃ ||
(ಅತ್ರಿಸ್ಮೃತಿಃ ೧.೧೧)
ಮೊತ್ತಮೊದಲನೆಯದೂ, ಪ್ರಮುಖವಾದುದೂ, ಅಕಾರ-ಉಕಾರ-ಮಕಾರವೆಂಬ ಮೂರು ಅಕ್ಷರಗಳಿಂದಾದುದೂ ಆದ ಓಂಕಾರವೆಂಬುದು ಬ್ರಹ್ಮವೇ. ಇದರಲ್ಲೇ ಋಕ್-ಯಜುಸ್-ಸಾಮಗಳೆಂಬ ಮೂರು ಬಗೆಯ ಮಂತ್ರಗಳಿಂದ ಕೂಡಿ ತ್ರಯೀ ಎನಿಸಿದ ವೇದರಾಶಿಯೂ ಪ್ರತಿಷ್ಠಿತವಾಗಿದೆ (ಅಂತರ್ಗತವಾಗಿದೆ). ಈ ಪ್ರಣವವೆಂಬ ಏಕಾಕ್ಷರವು ಪರಂಬ್ರಹ್ಮಸ್ವರೂಪಿ. ಪ್ರಾಣಾಯಾಮವು (ಉಸಿರಾಟದ ಕ್ರಮಬದ್ಧ ನಿಯಂತ್ರಣ) ಶ್ರೇಷ್ಠವಾದ ತಪಸ್ಸೇ ಆಗಿದೆ.
ಪ್ರಣವಾದ್ಯಾಸ್ತ್ರಯೋ ವೇದಾಃ ಪ್ರಣವೇ ಪರ್ಯವಸ್ಥಿತಾಃ |
ವಾಙ್ಮಯಂ ಪ್ರಣವಃ ಸರ್ವಂ ತಸ್ಮಾತ್ ಪ್ರಣವಮಭ್ಯಸೇತ್ ||
(ಅತ್ರಿ.ಸ್ಮೃ. ೧.೯)
ಋಗ್ಯಜುಸ್ಸಾಮ ಮಂತ್ರಯುಕ್ತವಾಗಿ ತ್ರಯೀ ಎನಿಸಿದ ವೇದಗಳು ಪ್ರಣವದಿಂದಲೇ ಆರಂಭವಾಗುತ್ತವೆ; ಅದರಲ್ಲೇ ನೆಲೆ ನಿಂತಿವೆ. ಸಮಗ್ರ ವಾಙ್ಮಯರಾಶಿ (ಸಾಹಿತ್ಯ) ಯೂ ಓಂಕಾರಮಯವಾದುದು. ಆದ್ದರಿಂದ, ಓಂಕಾರವನ್ನು ಪಠಿಸಬೇಕು / ಧ್ಯಾನಿಸಬೇಕು / ಪ್ರಣವೋಚ್ಚಾರಣೆಯನ್ನು ಸರಿಯಾದ ಕ್ರಮದಲ್ಲಿ ಅಭ್ಯಸಿಸಬೇಕು.
ಹೀಗೆ, ಓಂಕಾರದ ಮಹತ್ತ್ವವೂ ಅನಂತ; ಅದನ್ನುಚ್ಚರಿಸದೇ ಮಾಡಿದ ವೇದೋಕ್ತಕರ್ಮಗಳೂ, ವೇದಪಠಣವೂ ನಿಷ್ಫಲ— ಎಂಬ ಬಗ್ಗೆ ಸಾಕಷ್ಟು / ಅನಂತ ಪ್ರಮಾಣಗಳಿವೆ. ಅದು ಅನಿರ್ವಚನೀಯ; ಅವರ್ಣನೀಯ; ಪದಗಳಿಗೆ, ವರ್ಣನೆಗೆ, ಮಾತಿಗೆ ನಿಲುಕದ್ದಾಗಿದೆ.
ಮಿತ್ರಃ
ಸವಿತೃವು / ಸೂರ್ಯನು / ದ್ವಾದಶಾದಿತ್ಯರಲ್ಲಿ ಒಬ್ಬನಾದ ಆದಿತ್ಯನೆಂದೇ ಪ್ರಸಿದ್ಧನಾದ ಅತ್ಯಂತ ಪ್ರಾಚೀನ ದೇವತೆ; ಬಾನ ಭಾಸ್ಕರ, ಹಗಲಿನ ಹಾಗೂ ಪ್ರಾಣದ ಅಭಿಮಾನಿ ದೇವತೆ. ಪ್ರತ್ಯಕ್ಷ ಕಾಣುವ ದೇವನಾದ ರವಿ, ಸಕಲ ಜೀವರ ಪ್ರಾಣಸ್ವರೂಪನಾಗಿದ್ದಾನೆ. ತನ್ನ ಪ್ರಭಾವವಿರುವಷ್ಟರ ಮಿತಿಯಲ್ಲಿರುವವರನ್ನು ತ್ರಾಣ ಮಾಡುವವನು / ರಕ್ಷಿಸುವವನು ಮಿತ್ರ. ಕಾಲಮಾಪನಕ್ಕಾಧಾರನಾಗಿ ಜೀವಜಗತ್ತನ್ನು ಕಾಯುವವನು. ಹಗಲಿರುಳು, ಮಾಸ-ಋತುಗಳಿಗೆ ಕಾರಣನಾಗಿ ಸಕಲ ಸೃಷ್ಟಿಯನ್ನು ಪಾಲಿಸುವವನು. ಇವನು ಲೋಕದ ಜೀವರ ಕರ್ಮಸಾಕ್ಷಿ. ಪ್ರಾಣವಾಯುವಿನ ರೂಪಿನಲ್ಲಿರುವ ಇವನಿಂದಾಗಿ ನಾವು ಉಸಿರಾಡುತ್ತೇವೆ, ಬದುಕಿದ್ದೇವೆ, ಚಟುವಟಿಕೆಗಳಲ್ಲಿ (ಹೆಚ್ಚಾಗಿ ಹಗಲು ಹೊತ್ತಿನಲ್ಲಿ) ನಿರತರಾಗಿದ್ದೇವೆ.
" ಮಿತಾತ್ ತ್ರಾಯತೇ, ಇತಿ ಮಿತ್ರಃ" ಪರಿಮಿತವಾದ ಜೀವತ್ವದಿಂದ ದೇವತ್ವಕ್ಕೆ, ದೇವತ್ವದಿಂದ ಅಪರಿಮಿತವಾದ ಬ್ರಹ್ಮಾತ್ಮತ್ವಕ್ಕೇರಿಸಬಲ್ಲ ಕೃಪಾಳುವೇ ಮಿತ್ರನು / ಸವಿತೃವು. "ಸ್ವಪ್ರಭಾವಲಯಮಿತೌ ತ್ರಾಯತೇ, ಇತಿ ಮಿತ್ರಃ" ತನ್ನ ಪ್ರಭಾವಲಯದ ಮಿತಿಯಲ್ಲಿ ರಕ್ಷಿಸುತ್ತಾನಾದ್ದರಿಂದ ಮಿತ್ರನು.
ವರುಣಃ
"ವೃಣೋತಿ ಸರ್ವಂ ವ್ರಿಯತೇ ಅನ್ಯೈಃ ಇತಿ ವಾ ವರುಣಃ" — "ಜಲರೂಪದಿಂದ, ವೃಷ್ಟಿರೂಪದಿಂದ ಎಲ್ಲವನ್ನೂ ಆವರಿಸುವವನು ಅಥವಾ ಇತರ ಎಲ್ಲರಿಂದಲೂ ಪರಿಗ್ರಹಿಸಲ್ಪಡುವವನು ವರುಣನು". ಪಶ್ಚಿಮದಿಶಾಧಿಪತಿ, ಮಳೆಯ ದೇವತೆ, ಸಾಗರದ ಅಧಿಪತಿ, ರಾತ್ರಿಯ ಹಾಗೂ ಅಪಾನದ ಅಭಿಮಾನಿದೇವತೆ. "ವರ್ಷಮ್ (ವರ್) ಉತ್ಪಾದ್ಯ (ಉ) ಆನಯತೀತಿ (ನ) ವರುಣಃ"— ಮಳೆಯನ್ನು ಉತ್ಪಾದಿಸಿ ಕರೆತರುತ್ತಾನೆಂಬುದರಿಂದಲೂ ವರುಣನೆಂಬ ಹೆಸರು.
ಹೀಗೆಯೇ, "ಅರ್ಯಂ ಶ್ರೇಷ್ಠಂ ಮಿಮೀತೇ, ಇತಿ ಅರ್ಯಮಃ ಪಿತೄಣಾಂ ರಾಜಾ"— ಶ್ರೇಷ್ಠವಾದ ಪರತತ್ತ್ವವನ್ನು ಅಳೆಯಬಲ್ಲವನು, ಅರಿತವನು, ಪಿತೃಗಳ ರಾಜನು ಅರ್ಯಮನು, ಕಣ್ಣಿಗೂ ಸೂರ್ಯನಿಗೂ ಅಭಿಮಾನಿಯು. "ಇನ್ದತಿ ಇತಿ ಇನ್ದ್ರಃ, ಇದಿ ಪರಮೈಶ್ವರ್ಯೇ"— ದೇವತೆಗಳಲ್ಲಿ ಪರಮಶ್ರೇಷ್ಠನೂ ಅಧಿಪನೂ ಆದವನು ಇಂದ್ರನು ಪೂರ್ವದಿಗಧಿಪತಿಯು, ಬಲಾಭಿಮಾನಿಯು. "ಬೃಹತ್ಯಾಃ ವಾಚಃ ಪತಿಃ ಬೃಹಸ್ಪತಿಃ"— ಬೃಹತ್ತಾದ ಮಾತಿನ / ವಾಕ್ಕಿನ ಅಧಿಪತಿಯೇ ದೇವಗುರು, ಇಂದ್ರನ ಮಸ್ತಿಷ್ಕವಾದ ಬೃಹಸ್ಪತಿಯು, ಬುದ್ಧಿಗೂ ಅಧಿಪತಿ. "ವಿಶ್ವಂ ವ್ಯಾಪ್ನೋತಿ ಪ್ರವಿಶತಿ ಚ ಇತಿ ವಿಷ್ಣುಃ"— ವಿಶ್ವವನ್ನೆಲ್ಲ ವ್ಯಾಪಿಸಿ ಪ್ರವೇಶಿಸಿರುವುದರಿಂದ ವಿಷ್ಣುವು, ಪಾದಾಭಿಮಾನಿ. "ವಾತೀತಿ ವಾಯುಃ"— ಬೀಸುತ್ತದೆಂಬುದರಿಂದ, ಸದಾ ಗತಿಶೀಲವಾಗಿರುವುದರಿಂದ ವಾಯುವು, ಸೂತ್ರಾತ್ಮಾ, ಕರ್ಮಫಲಾಧಿಪತಿ, ಪ್ರಜಾಪತಿ ಬ್ರಹ್ಮ, ಪ್ರತ್ಯಕ್ಷಬ್ರಹ್ಮ. "ಪ್ರಾಣಿತಿ ಜೀವತಿ ಬಹುಕಾಲಂ, ಪ್ರಾಣಿತಿ ಅನೇನೇತಿ ವಾ ಪ್ರಾಣಃ"— ಉಸಿರಾಡುತ್ತದೆ, ಬದುಕುತ್ತದೆ ಬಹುಕಾಲ ಅಥವಾ ಇವನಿಂದಲೇ ಉಸಿರಾಡುತ್ತದಾದ್ದರಿಂದ ವಾಯುವೇ ಪ್ರಾಣ. ಮಾನಸ ಸತ್ಯವೇ ಋತ. ವಾಚಿಕ ಸತ್ಯವೇ ಸತ್ಯ.
ಶಾಙ್ಕರಭಾಷ್ಯಮ್
ಶಂ ಸುಖಂ ಪ್ರಾಣವೃತ್ತೇಃ
" ಮಿತಾತ್ ತ್ರಾಯತೇ, ಇತಿ ಮಿತ್ರಃ" ಪರಿಮಿತವಾದ ಜೀವತ್ವದಿಂದ ದೇವತ್ವಕ್ಕೆ, ದೇವತ್ವದಿಂದ ಅಪರಿಮಿತವಾದ ಬ್ರಹ್ಮಾತ್ಮತ್ವಕ್ಕೇರಿಸಬಲ್ಲ ಕೃಪಾಳುವೇ ಮಿತ್ರನು / ಸವಿತೃವು. "ಸ್ವಪ್ರಭಾವಲಯಮಿತೌ ತ್ರಾಯತೇ, ಇತಿ ಮಿತ್ರಃ" ತನ್ನ ಪ್ರಭಾವಲಯದ ಮಿತಿಯಲ್ಲಿ ರಕ್ಷಿಸುತ್ತಾನಾದ್ದರಿಂದ ಮಿತ್ರನು.
ವರುಣಃ
"ವೃಣೋತಿ ಸರ್ವಂ ವ್ರಿಯತೇ ಅನ್ಯೈಃ ಇತಿ ವಾ ವರುಣಃ" — "ಜಲರೂಪದಿಂದ, ವೃಷ್ಟಿರೂಪದಿಂದ ಎಲ್ಲವನ್ನೂ ಆವರಿಸುವವನು ಅಥವಾ ಇತರ ಎಲ್ಲರಿಂದಲೂ ಪರಿಗ್ರಹಿಸಲ್ಪಡುವವನು ವರುಣನು". ಪಶ್ಚಿಮದಿಶಾಧಿಪತಿ, ಮಳೆಯ ದೇವತೆ, ಸಾಗರದ ಅಧಿಪತಿ, ರಾತ್ರಿಯ ಹಾಗೂ ಅಪಾನದ ಅಭಿಮಾನಿದೇವತೆ. "ವರ್ಷಮ್ (ವರ್) ಉತ್ಪಾದ್ಯ (ಉ) ಆನಯತೀತಿ (ನ) ವರುಣಃ"— ಮಳೆಯನ್ನು ಉತ್ಪಾದಿಸಿ ಕರೆತರುತ್ತಾನೆಂಬುದರಿಂದಲೂ ವರುಣನೆಂಬ ಹೆಸರು.
ಹೀಗೆಯೇ, "ಅರ್ಯಂ ಶ್ರೇಷ್ಠಂ ಮಿಮೀತೇ, ಇತಿ ಅರ್ಯಮಃ ಪಿತೄಣಾಂ ರಾಜಾ"— ಶ್ರೇಷ್ಠವಾದ ಪರತತ್ತ್ವವನ್ನು ಅಳೆಯಬಲ್ಲವನು, ಅರಿತವನು, ಪಿತೃಗಳ ರಾಜನು ಅರ್ಯಮನು, ಕಣ್ಣಿಗೂ ಸೂರ್ಯನಿಗೂ ಅಭಿಮಾನಿಯು. "ಇನ್ದತಿ ಇತಿ ಇನ್ದ್ರಃ, ಇದಿ ಪರಮೈಶ್ವರ್ಯೇ"— ದೇವತೆಗಳಲ್ಲಿ ಪರಮಶ್ರೇಷ್ಠನೂ ಅಧಿಪನೂ ಆದವನು ಇಂದ್ರನು ಪೂರ್ವದಿಗಧಿಪತಿಯು, ಬಲಾಭಿಮಾನಿಯು. "ಬೃಹತ್ಯಾಃ ವಾಚಃ ಪತಿಃ ಬೃಹಸ್ಪತಿಃ"— ಬೃಹತ್ತಾದ ಮಾತಿನ / ವಾಕ್ಕಿನ ಅಧಿಪತಿಯೇ ದೇವಗುರು, ಇಂದ್ರನ ಮಸ್ತಿಷ್ಕವಾದ ಬೃಹಸ್ಪತಿಯು, ಬುದ್ಧಿಗೂ ಅಧಿಪತಿ. "ವಿಶ್ವಂ ವ್ಯಾಪ್ನೋತಿ ಪ್ರವಿಶತಿ ಚ ಇತಿ ವಿಷ್ಣುಃ"— ವಿಶ್ವವನ್ನೆಲ್ಲ ವ್ಯಾಪಿಸಿ ಪ್ರವೇಶಿಸಿರುವುದರಿಂದ ವಿಷ್ಣುವು, ಪಾದಾಭಿಮಾನಿ. "ವಾತೀತಿ ವಾಯುಃ"— ಬೀಸುತ್ತದೆಂಬುದರಿಂದ, ಸದಾ ಗತಿಶೀಲವಾಗಿರುವುದರಿಂದ ವಾಯುವು, ಸೂತ್ರಾತ್ಮಾ, ಕರ್ಮಫಲಾಧಿಪತಿ, ಪ್ರಜಾಪತಿ ಬ್ರಹ್ಮ, ಪ್ರತ್ಯಕ್ಷಬ್ರಹ್ಮ. "ಪ್ರಾಣಿತಿ ಜೀವತಿ ಬಹುಕಾಲಂ, ಪ್ರಾಣಿತಿ ಅನೇನೇತಿ ವಾ ಪ್ರಾಣಃ"— ಉಸಿರಾಡುತ್ತದೆ, ಬದುಕುತ್ತದೆ ಬಹುಕಾಲ ಅಥವಾ ಇವನಿಂದಲೇ ಉಸಿರಾಡುತ್ತದಾದ್ದರಿಂದ ವಾಯುವೇ ಪ್ರಾಣ. ಮಾನಸ ಸತ್ಯವೇ ಋತ. ವಾಚಿಕ ಸತ್ಯವೇ ಸತ್ಯ.
Comments
Post a Comment