ತೈತ್ತಿರೀಯಕೃಷ್ಣಯಜುಸ್ಸಂಹಿತಾಭಾಷ್ಯಾರ್ಥಸಮುಚ್ಚಯಪೀಠಿಕಾ

॥ ओ३म् ॥
ತೈತ್ತಿರೀಯಕೃಷ್ಣಯಜುಸ್ಸಂಹಿತಾಭಾಷ್ಯ-ಪೀಠಿಕಾ
(ವಿವಿಧಮೂಲಗಳ ಸಹಾಯದಿಂದ)

- ಡಾ || ದಂಬೆ ಕೃಷ್ಣಮೂರ್ತಿ ಶಾಸ್ತ್ರೀ,
ಎಂ.ಬಿ.ಬಿ.ಎಸ್., ಸಂಸ್ಕೃತ ಕೋವಿದ.

ಆಧಾರಗ್ರಂಥಗಳು:-

(೧) ಯಜುರ್ವೇದಸಂಹಿತಾಭಾಷಾಭಾಷ್ಯ (ರಾಷ್ಟ್ರಧರ್ಮಪ್ರಧಾನ)- ವಿದ್ವಾನ್ ಜಯದೇವಶರ್ಮಾ(ಹಿಂದೀಮೂಲ)
(೨) ಸಾಯಣಭಾಷ್ಯ (ಕರ್ಮಪ್ರಧಾನ)- (ಸಂಸ್ಕೃತಮೂಲ)
(೩) ದಯಾನಂದಭಾಷ್ಯ (ವೈಜ್ಞಾನಿಕ, ನಿರಾಕಾರ/ಅಮೂರ್ತತತ್ತ್ವಾಧಾರಿತ)-(ಸಂಸ್ಕೃತ-ಹಿಂದೀಮೂಲ)
(೪) ಮಹರ್ಷಿ ಅರವಿಂದರ ವಿಚಾರಧಾರಾಧಾರಿತ ಯಜುರ್ಭಾಷ್ಯ(ಆಧ್ಯಾತ್ಮಿಕ)- (ಆರ್. ಎಲ್. ಕಶ್ಯಪ್ ರಇಂಗ್ಲೀಷ್ ಮೂಲದ ಕನ್ನಡಾನುವಾದ)ರ. ವಿ. ಜಹಗೀರದಾರ
(೫) ಭಟ್ಟಭಾಸ್ಕರಭಾಷ್ಯ

(೧)ಜಯದೇವಶರ್ಮಭಾಷ್ಯಪೀಠಿಕೆ
ಮೂಲಮ್ ಅನುಸೃತ್ಯ ವಾದ:  ಅನುವಾದ:
  ಅನುವಾದ ಎಂದರೆ ಮೂಲವನ್ನನುಸರಿಸಿ, ಅದರ ಆಧಾರದಲ್ಲಿ ಹೇಳುವಿಕೆ.
ಅನ್ಯತ್ ಭಾಷಾ ಭಾಷಾಂತರಮ್
ಮೂಲವನ್ನು ಯಥಾವತ್ತಾಗಿ ಶಬ್ದಶ: ಯಾವುದೇ ವ್ಯತ್ಯಾಸವಿಲ್ಲದೆ ಬೇರೊಂದು ಭಾಷೆಗೆ ಪರಿವರ್ತಿಸುವುದು ಭಾಷಾಂತರ.

 ಯೇ ಅರ್ವಾಙ್ ಮಧ್ಯ ಉತ ವಾ ಪುರಾಣಂ
ವೇದಂ ವಿದ್ವಾಂಸಮಭಿತೋ ವದಂತಿ |
ಆದಿತ್ಯಮೇವ ತೇ ಪರಿ ವದಂತಿ ಸರ್ವೇ ||

  ಯಾರು ಇತ್ತೀಚೆಗಿನ, ಮಧ್ಯಕಾಲೀನ, ಅಥವಾ ಬಹು ಹಿಂದಿನ ವೈದಿಕ ವಿದ್ವಾಂಸರ ಕುರಿತು ವರ್ಣಿಸುತ್ತಾರೋ, ಅವರೆಲ್ಲರೂ ‘ಆದಿತ್ಯ’ನ ವರ್ಣನೆಯನ್ನೇ ಮಾಡಿದಂತೆ. ಈ ಪ್ರಕಾರವಾಗಿ, ಅಥರ್ವವೇದದಲ್ಲಿ ವ್ರಾತ್ಯಪ್ರಜಾಪತಿಯ ವೇದಿಕೆಯ ವರ್ಣನೆಯಲ್ಲಿ ಹೇಳಲಾಗಿದೆ.
ಋಚ: ಪ್ರಾಂಚವಸ್ತಂತವೋ ಯಜೂಗ್ಂಷಿ ತಿರ್ಯಂಚ: ||
- ಅಥರ್ವವೇದ ೧೫|೩|೬||
    ಪ್ರಜಾಪತಿಯ ಆಸನಪೀಠದಲ್ಲಿ ಋಕ್ಕುಗಳೇ ಪೂರ್ವ-ಪಶ್ಚಿಮವಾಗಿ ಉದ್ದುದ್ದವಾಗಿರುವ ದಾರಗಳು/ತಂತುಗಳು. ಯಜುಸ್ಸುಗಳು ಅಡ್ಡಡ್ಡವಾಗಿರುವ ತಂತುಗಳು. ಅಂದರೆ ಬಹುಶ: ಉದ್ದವು ಅಗಲಕ್ಕಿಂತ ದೀರ್ಘವಾದುದರಿಂದ, ಋಗ್ವೇದವು ಯಜುರ್ವೇದಕ್ಕಿಂತ ಗಾತ್ರದಲ್ಲಿ ದೊಡ್ಡದೆಂದೂ ಅರ್ಥೈಸಬಹುದು.
   ಕಾಲಾದೃಚ: ಸಮಭವನ್ ಯಜು: ಕಾಲಾದಜಾಯತ ||
- ಅಥರ್ವವೇದ ೧೯|೫೪|೩||
  ಕಾಲನಿಂದಾಗಿ (‘ಕಾಲ:’ ಸಂಸ್ಕೃತದಲ್ಲಿ ಪುಲ್ಲಿಂಗಶಬ್ದ) ಋಕ್ಕುಗಳು ಉದ್ಭವಿಸಿದವು;  ಯಜುಸ್ಸುಗಳೂ ಕಾಲದ ದೆಸೆಯಿಂದಲೇ ಜನಿಸಿದವು. ಕಾಲ, ಪ್ರಜಾಪತಿ, ಆದಿತ್ಯ, ಗರುತ್ಮಾನ್-ಸುಪರ್ಣಾ, ಬ್ರಹ್ಮ, ಬ್ರಹ್ಮಾ - ಇವೆಲ್ಲವೂ ಆ ಒಬ್ಬನೇ ಒಬ್ಬನಾದ, ಪರಮೇಶ್ವರನಾದ, ಪರಬ್ರಹ್ಮಸ್ವರೂಪಿಯ ನಾನಾ ನಾಮರೂಪಗಳು.
ತಮೃಚಶ್ಚ ಸಾಮಾನಿ ಚ ಯಜೂಗ್ಂಷಿ ಚ ಬ್ರಹ್ಮ ಚ ಅನುವ್ಯಚಲನ್ ||
- ಅಥರ್ವವೇದ ೧೫|೬|೮||
   ಆ ವ್ರಾತ್ಯ-ಪ್ರಜಾಪತಿಯನ್ನು ಋಗ್ಯಜುಸ್ಸಾಮಾಥರ್ವವೇದಗಳು ಅನುಸರಿಸಿ ನಡೆದವು. ಇಲ್ಲಿ, ಪ್ರಜಾಪತಿಯೆಂದು ಪರಮೇಶ್ವರನನ್ನೇ ಸಂಬೋಧಿಸಲಾಗಿದೆ. ಅವನಿಂದಲೇ ನಾಲ್ಕೂ ವೇದಗಳು ಹುಟ್ಟಿದವು ಮತ್ತು ಅಂತಹ ವೇದಗಳು ಯಜ್ಞಸ್ವರೂಪನಾದ ಭಗವಂತನ ವಾಣಿಗಳೇ ಆಗಿವೆ. ಆ ಯಜ್ಞಮಯಪರಮೇಶ್ವರನ ಸ್ವರೂಪವೇನು? ಹಾಗೂ ಪ್ರಸ್ತುತ ನಡೆಯುತ್ತಿರುವ ಯಜ್ಞವು ಹೇಗಿದೆ? ಎಂಬುದನ್ನು ವಿವರಿಸಲು ಹೆಚ್ಚಿನ ಅವಕಾಶದ ಅಗತ್ಯವಿದೆ. ಆದರೂ, ಇಷ್ಟು ಮಾತ್ರ ಹೇಳಬಹುದು- ಅದೇನೆಂದರೆ, ಕರ್ಮಕಾಂಡೋಕ್ತ ಯಜ್ಞವು ಆ ಮಹಾನ್ ವಿರಾಟ್ ಯಜ್ಞಪುರುಷನ ಪ್ರತಿನಿಧಿ ಅಥವಾ ಅವನ ಸ್ವರೂಪದ ನಿದರ್ಶಕ ಮಾತ್ರ. ಹಾಗೆಯೇ, ಈ ವೇದಗಳು ಆ ಮಹಾಯಜ್ಞದ ಪ್ರತಿಪಾದನೆಯೊಂದಿಗೆ ಈ ಕರ್ಮಪರಯಜ್ಞಗಳನ್ನೂ ಹೇಳುತ್ತವೆ. ಯಜುರ್ವೇದದಲ್ಲಿ ಹೇಳಿದೆ-
ಸುಪರ್ಣೋsಸಿ ಗರುತ್ಮಾಂಸ್ತ್ರಿವೃತ್ತೇ ಶಿರೋ ಗಾಯತ್ರಂ ಚಕ್ಷು: ಬೃಹದ್ರಥಂತರೇ ಪಕ್ಷೌ ಸ್ತೋಮ ಆತ್ಮಾ ಛಂದಾಗ್ಂಸಿ ಅಂಗಾನಿ ಯಜೂಗ್ಂಷಿ ನಾಮ | ಸಾಮ ತೇ ತನೂರ್ವಾಮದೇವ್ಯಂ ಯಜ್ಞಾಯಜ್ಞಿಯ: ಪುಚ್ಛಂ ಧಿಷ್ಣ್ಯಾ: ಶಫಾ: | ಸುಪರ್ಣೋsಸಿ ಗರುತ್ಮಾನ್ ದಿವಂ ಗಚ್ಛ ಸ್ವ: ಪತ ||
  ನೀನು (ಪರಮಾತ್ಮನು) ಸುಪರ್ಣಾ; ವಿನತೆಯ ಮಗನಾದ ಗರುಡಸ್ವರೂಪನು; ಶ್ರೇಷ್ಠವಾದ ರೆಕ್ಕೆಗಳುಳ್ಳ ಗರುಡರೂಪನು. ನಿನ್ನ (ಶಿರವು)ತಲೆಯು ತ್ರಿವೃತ್ತವೆಂಬ ಸ್ತೋಮ(ಒಂದು ವಿಧದ ಮಂತ್ರಸ್ವರೂಪ); ಕಣ್ಣು ಗಾಯತ್ರವೆಂಬ ಸಾಮ; ಬೃಹತ್ ಹಾಗೂ ರಥಂತರ ಸಾಮಗಳು ೨ ರೆಕ್ಕೆಗಳು; ಸ್ತೋಮವು ನಿನ್ನ ಆತ್ಮ; ಛಂದಸ್ಸುಗಳೇ(ಅಥರ್ವವೇದವೇ) ನಿನ್ನ ಅಂಗಾಂಗಗಳು; ಯಜುರ್ಮಂತ್ರಗಳೇ ನಿನ್ನ ನಾನಾ ನಾಮಗಳು; ವಾಮದೇವ್ಯಸಾಮವು ನಿನ್ನ ದೇಹ; ಯಜ್ಞಾಯಜ್ಞಿಯ ಸಾಮವು ನಿನ್ನ ಬಾಲವು; ಧಿಷ್ಣ್ಯಾಗ್ನಿಗಳು ನಿನ್ನ ಕಾಲುಗಳ  ಗೊರಸುಗಳು….
     ಈ ಮೇಲಿನ ಮಂತ್ರದಲ್ಲಿ ನಾಲ್ಕೂ ವೇದಗಳನ್ನು ವರ್ಣಿಸಲಾಗಿದೆ. ಕರ್ಮಕಾಂಡದ ದೃಷ್ಟಿಯಲ್ಲಿ ಗರುಡಾಕೃತಿಯ ಯಜ್ಞವೇದಿಯಲ್ಲಿ ನಡೆಸುವ ಯಜ್ಞದ ವರ್ಣನೆಯೂ ಸ್ಪಷ್ಟವಾಗುತ್ತದೆ. ಈ ‘ಸುಪರ್ಣಾ’ ರೂಪದ ಪರಮೇಶ್ವರನ ವರ್ಣನೆಯನ್ನು ವೇದವು ಸ್ವತ: ಮಾಡುತ್ತದೆ-
ಸುಪರ್ಣಾಂ ವಿಪ್ರಾ ಕವಯೋ ವಚೋಭಿರೇಕಂ ಸನ್ತಂ ಬಹುಧಾ ಕಲ್ಪಯಂತಿ
    - ಋಗ್ವೇದ ೧೦|೭|೪
    ವೇದವಿದಪ್ರಾಜ್ಞರು ಸುಪರ್ಣಾ ಎಂಬ ಏಕಮೇವಾದ್ವಿತೀಯವಾಗಿರುವ ಪರಬ್ರಹ್ಮತತ್ತ್ವವನ್ನು  ಬಹುವಿಧದಿಂದ ಕಲ್ಪಿಸುತ್ತಾರೆ.
  ಈ ‘ಸುಪರ್ಣಾ’ ಎಂಬ ಯಜ್ಞದ ವಿಸ್ತಾರವೆಷ್ಟೆಂದು ಋಗ್ವೇದವು ಹೀಗೆ ಹೇಳಿದೆ-
ಷಟ್ತ್ರಿಂಶಾಚ್ಚತುರ: ಕಲ್ಪಯಂತಶ್ಛಂದಾಗ್ಂಸಿ ಚ ದಧತ ಆದ್ವಾದಶಮ್ |
ಯಜ್ಞಂ ವಿಮಾಯ ಕವಯೋ ಮನೀಷ ಋಕ್ಸಾಮಾಭ್ಯಾಂ ಪ್ರ ರಥಂ ವರ್ತ್ತಯಂತಿ ||
- ಋ.೧೦|೧೧೪|೬||
   ಉಪಾಂಶು ಹಾಗೂ ಅಂತರ್ಯಾಮ, ಇಂದ್ರವಾಯವಾದಿ ದ್ವಿದೈವತ್ಯ ೩ ಗ್ರಹಗಳು, ಶುಕ್ರಾಮಂಥಿಗಳ ೨ ಗ್ರಹಗಳು, ಆಗ್ರಯಣ,ಉಕ್ಥ ಹಾಗೂ ಧ್ರುವ- ಈ ೩, ೧೨ ಋತುಗ್ರಹಗಳು, ಐಂದ್ರಾಗ್ನ ಹಾಗೂ ಸಾವಿತ್ರ ಎಂಬೆರಡು, ವೈಶ್ವದೇವ ೨, ಮರುತ್ವತೀಯ ೩, ಮಾಹೇಂದ್ರ ೧, ಆದಿತ್ಯ ಮತ್ತು ಸಾವಿತ್ರ ೨, ವೈಶ್ವದೇವ, ಪಾತ್ನೀವತ ಮತ್ತು ಹಾರಿಯೋಜನ-೩, ಹೀಗೆ ಯಜ್ಞಾಂಗವಾದ ಒಟ್ಟು ೩೬ ಗ್ರಹಗಳು ಹಾಗೂ ಇವುಗಳೊಂದಿಗೆ ಅತ್ಯಗ್ನಿಷ್ಟೋಮದಲ್ಲಿ ಅಂಶು,ಅದಾಭ್ಯ, ದಧಿಗ್ರಹ ಮತ್ತು ಷೋಡಶೀ ಎಂಬ ೪ ಸೇರಿ ಒಟ್ಟು ೪೦ ಗ್ರಹಗಳು.
ಅಥವಾ
  ಯಜ್ಞಾಂಗಗಳನ್ನು ಹಾಗೂ ಪ್ರಉಗ್ ಇತ್ಯಾದಿ ೧೨ ಶಸ್ತ್ರಗಳನ್ನು, ಗಾಯತ್ರಿಯೇ ಮುಂತಾದ ಸಮಸ್ತ ಛಂದಸ್ಸುಗಳನ್ನು  ಧರಿಸಿರುವ ಜ್ಞಾನಿಗಳು ಯಜ್ಞದ ವಿವಿಧ ಪ್ರಕಾರಗಳಿಂದ ಪ್ರಜ್ಞಾಪೂರ್ವಕವಾಗಿ ನಿರ್ಮಿಸಿದ ‘ರಥ’- ರಮಿಸಲು ಯೋಗ್ಯವಾದ ರಸಸ್ವರೂಪನಾದ ಪರಮೇಶ್ವರನ ಸ್ವರೂಪ-ವನ್ನು ಋಕ್ ಹಾಗೂ ಸಾಮ - ಇವೆರಡರ ಮೂಲಕ ೨ ಅಶ್ವಗಳಿಂದ ನಡೆಸಲ್ಪಡುವ ರಥದಂತೆ-ಯಜ್ಞಸ್ವರೂಪವನ್ನು -ನಡೆಸುತ್ತಾರೆ.
  ಹೀಗೆ ಕರ್ಮಕಾಂಡರೀತ್ಯಾ ಯಜ್ಞಸ್ವರೂಪವನ್ನು ವರ್ಣಿಸಿದರೆ, ಅಧ್ಯಾತ್ಮಯಜ್ಞವನ್ನೂ ವೇದವೇ ಸ್ವತ: ಹೀಗೆ ವರ್ಣಿಸುತ್ತದೆ-
ಸಹಸ್ರಧಾ ಪಂಚದಶಾನ್ಯುಕ್ಥಾ ಯಾವದ್ ದ್ಯಾವಾಪೃಥಿವೀ ತಾವದಿತ್ತತ್ |
ಸಹಸ್ರಧಾ ಮಹಿಮಾನಂ ಸಹಸ್ರಂ ಯಾವದ್ ಬ್ರಹ್ಮ ವಿಷ್ಠಿತಂ ತಾವತೀ ವಾಕ್ ||
  ೧೫ ಉಕ್ಥಗಳು ಸಾವಿರಾರುವಿಧದ ದೇಹಗಳಲ್ಲಿ ಸಹಸ್ರಾರು ರೂಪಗಳಾಗಿ ವಿರಾಜಿಸುತ್ತಿದೆ. {ಉಕ್ಥಾ(ಸ್ತ್ರೀಲಿಂಗ) ಎಂದರೆ ಒಂದು ವಿಧದ ಛಂದಸ್ಸು. ಉಕ್ಥ (ಪುಲ್ಲಿಂಗಶಬ್ದ) ಎಂದರೆ ಸ್ತುತಿ, ಅಗ್ನಿಯ ಒಂದು ವಿಧ, ಹೇಳಿಕೆ, ಮಂತ್ರೋಚ್ಚಾರಣೆಯ ಒಂದು ವಿಧ, ವಾಕ್ಯ, ಕಾವ್ಯ, ಲೇಖನ ಇತ್ಯಾದಿ ಅರ್ಥಗಳಿವೆ.} ದ್ಯುಲೋಕ/ಬೆಳಕಿನ ಲೋಕ ಹಾಗೂ ಪೃಥ್ವಿಗಳೆಷ್ಟು ವಿಸ್ತಾರವಾಗಿವೆಯೋ ಬ್ರಹ್ಮವೂ ಅಷ್ಟೇ (ಅದಕ್ಕೂ ಮೀರಿ) ವಿಸ್ತಾರವಾಗಿದೆ. ಅದರ ಮಹಾನ್ ಸಾಮರ್ಥ್ಯವೂ ಸಹಸ್ರಾರು ವೈವಿಧ್ಯತೆಯಿಂದ ಕೂಡಿದೆ. ವಿಶೇಷವಾಗಿ ಬ್ರಹ್ಮವು ೨ ಪ್ರಕಾರದ್ದಾಗಿದೆ(ಸಾಕಾರ,ನಿರಾಕಾರ). ಅಂತೆಯೇ ವಾಣಿಯೂ ವಿಸ್ತಾರವಾಗಿದೆ. ಈ ದೇಹದಲ್ಲಿ ೧೫ ಉಕ್ಥಗಳಿವೆ- ೫ ಜ್ಞಾನೇಂದ್ರಿಯಗಳು(ಕಣ್ಣು,ಕಿವಿ,ಮೂಗು,ನಾಲಿಗೆ,ಚರ್ಮ), ೫ ಕರ್ಮೇಂದ್ರಿಯಗಳು(ವಾಕ್,ಪಾಣಿ,ಪಾದ,ಪಾಯು,ಉಪಸ್ಥ), ಹಾಗೂ ೫ ಭೂತಗಳು(ಪೃಥ್ವಿ/ಅಸ್ಥಿಮಾಂಸಗಳು, ಅಪ್/ರಕ್ತಾದಿ ರಸಧಾತುಗಳು, ತೇಜ/ಜಾಠರಾದಿ ಅಗ್ನಿಗಳು, ವಾಯು/ಪಂಚಪ್ರಾಣಗಳು, ಆಕಾಶ/ಅವಕಾಶ).
     ಆದರೆ, ಬ್ರಹ್ಮವು ಅನಂತವಾದುದರಿಂದ ಅವನ ವಾಗ್ರೂಪವಾದ ವೇದವಾಣಿಯೂ ಅನಂತ ಜ್ಞಾನಯುತವಾಗಿದೆ. ಪ್ರತಿಯೊಂದು ದೇಹದಲ್ಲೂ ಆ ಯಜ್ಞದ ಸ್ವರೂಪವೇ ಅಡಗಿದೆ. ವೇದಿ(ಕುಂಡ)ಗತವಾದ ಯಜ್ಞವಾದರೋ ಅದರ ಪ್ರತಿನಿಧಿಮಾತ್ರ. ಯಜುರ್ವೇದದ ದ್ವಾರಾ ಆ ಯಜ್ಞಗಳ ಸಮಸ್ತಕಾರ್ಯ ಹಾಗೂ ವ್ಯವಸ್ಥೆಯ ವರ್ಣನೆ ಮಾಡಲ್ಪಟ್ಟಿದೆ. ಶ್ರುತಿಯು ಹೀಗೆ ಹೇಳುತ್ತದೆ-
ಯಜುರ್ಭಿರಾಪ್ಯಂತೇ ಗ್ರಹಾ: || (ಯಜು. ೧೯/೨೮)
ಸತ್ಯಂ ಯಜ್ಞೇನ | ಯಜ್ಞೋ ಯಜುರ್ಭಿ: || (ಯಜು. ೨೦/೧೨)
    ಹೀಗಾಗಿ, ಯಜುರ್ವೇದವು ಯಜ್ಞವನ್ನು ಸಾಂಗೋಪಾಂಗವಾಗಿ, ಅದರ ಕಾರ್ಯ(ವಿನಿಯೋಗ)ಸಹಿತವಾಗಿ ವರ್ಣಿಸಬೇಕು. ಯಜ್ಞವೇ ಸ್ವಯಂ ಒಬ್ಬ ಪ್ರಜಾಪತಿ. ಸಮಸ್ತ ವಿಶ್ವದಲ್ಲಿ ಪರಮೇಶ್ವರ, ರಾಜ್ಯದಲ್ಲಿ ರಾಜಾ, ಮನೆಯಲ್ಲಿ ಯಜಮಾನ, ಕುಲದಲ್ಲಿ ಕುಲಪತಿ/ಆಚಾರ್ಯ, ಹಾಗೂ ದೇಹದಲ್ಲಿ ಆತ್ಮಾ / ಮುಖ್ಯಪ್ರಾಣ - ಇವರೆಲ್ಲ ಪ್ರಜಾಪತಿಸ್ವರೂಪರೇ.
ಅಥಾತಸ್ಸಂಹಿತಾಯಾ ಉಪನಿಷದಂ ವ್ಯಾಖ್ಯಾಸ್ಯಾಮ: | ಪಞ್ಚಸ್ವಧಿಕರಣೇಷು | ಅಧಿಲೋಕಮ್ | ಅಧಿಜ್ಯೌತಿಷಮ್ | ಅಧಿವಿದ್ಯಮ್ | ಅಧಿಪ್ರಜಮ್ | ಅಧ್ಯಾತ್ಮಮ್ | ತಾ ಮಹಾಸಗ್ಂಹಿತಾ ಇತ್ಯಾಚಕ್ಷತೇ | ಅಥಾಧಿಲೋಕಮ್ | ಪೃಥಿವೀ ಪೂರ್ವರೂಪಮ್ | ದ್ಯೌರುತ್ತರರೂಪಮ್ | ಆಕಾಶಸ್ಸಂಧಿ: | ವಾಯುಸ್ಸಂಧಾನಮ್ | ಇತ್ಯಧಿಲೋಕಮ್ | ಅಥಾಧಿಜ್ಯೌತಿಷಮ್ | ಅಗ್ನಿ: ಪೂರ್ವರೂಪಮ್ | ಆದಿತ್ಯ ಉತ್ತರರೂಪಮ್ | ಆಪಸ್ಸಂಧಿ: | ವೈದ್ಯುತಸ್ಸಂಧಾನಮ್ | ಇತ್ಯಧಿಜ್ಯೌತಿಷಮ್ | ಅಥಾಧಿವಿದ್ಯಮ್ | ಆಚಾರ್ಯ: ಪೂರ್ವರೂಪಮ್ | ಅಂತೇವಾಸ್ಯುತ್ತರರೂಪಮ್ | ವಿದ್ಯಾ ಸನ್ಧಿ: | ಪ್ರವಚನಗ್ಂ ಸನ್ಧಾನಮ್ | ಇತ್ಯಧಿವಿದ್ಯಮ್ | ಅಥಾಧಿಪ್ರಜಮ್ | ಮಾತಾ ಪೂರ್ವರೂಪಮ್ | ಪಿತಾ ಉತ್ತರರೂಪಮ್ | ಪ್ರಜಾ ಸನ್ಧಿ: | ಪ್ರಜನನಗ್ಂ ಸನ್ಧಾನಮ್ | ಇತ್ಯಧಿಪ್ರಜಮ್ | ಅಥಾಧ್ಯಾತ್ಮಮ್ | ಅಧರಾಹನು: ಪೂರ್ವರೂಪಮ್ | ಉತ್ತರಾಹನುರುತ್ತರರೂಪಮ್ | ವಾಕ್ಸನ್ಧಿ: | ಜಿಹ್ವಾ ಸನ್ಧಾನಮ್ | ಇತೀಮಾ ಮಹಾಸಗ್ಂಹಿತಾ: ||
   ಇದು ಸಂಹಿತೆಯ ಉಪನಿಷತ್ತು ; ಏಕೆಂದರೆ ಒಂದೇ ಸಂಹಿತೆಯನ್ನು ೫ ಅಧಿಕರಣಗಳಲ್ಲಿ ೫ ರೀತಿಯಿಂದ ವ್ಯಾಖ್ಯಾನಿಸಲಾಗಿ, ೫ ಮಹಾಸಂಹಿತೆಗಳಾಗಿ ಮಾರ್ಪಟ್ಟಿದೆ.
    ಅಧಿಲೋಕ, ಅಧಿಜ್ಯೌತಿಷ, ಅಧಿವಿದ್ಯ, ಅಧಿಪ್ರಜ ಹಾಗೂ ಅಧ್ಯಾತ್ಮ. ಅಧಿಲೋಕದಲ್ಲಿ ಪೃಥಿವೀ, ಸೂರ್ಯ, ಆಕಾಶ ಹಾಗೂ ವಾಯು - ಇವುಗಳ ಹೆಚ್ಚಿನ ವರ್ಣನೆಯಿದೆ. ಅಧಿಜ್ಯೌತಿಷದಲ್ಲಿ ಅಗ್ನಿ, ಆದಿತ್ಯ, ಜಲ ಹಾಗೂ ವಿದ್ಯುತ್ತುಗಳ, ಅಧಿವಿದ್ಯದಲ್ಲಿ ಆಚಾರ್ಯ, ಅಂತೇವಾಸೀ, ವಿದ್ಯಾ ಹಾಗೂ ಪ್ರವಚನಗಳ, ಅಧಿಪ್ರಜದಲ್ಲಿ ಪಿತಾ, ಮಾತಾ, ಪ್ರಜಾ ಹಾಗೂ ಪ್ರಜನನಗಳ, ಮತ್ತು ಅಧ್ಯಾತ್ಮದಲ್ಲಿ ಅಧರಾಹನು(ಕೆಳದವಡೆ), ಉತ್ತರಾಹನು(ಮೇಲ್ದವಡೆ), ವಾಕ್ ಹಾಗೂ ಜಿಹ್ವೆಗಳ ಬಗೆಗೆ(?) ಅಥವಾ ಅಧಿ+ಅತ್ಮ = ಆತ್ಮಾನಂ ಅಧಿಕೃತ್ಯ = ಆತ್ಮದ ಕುರಿತು, ಆತ್ಮವೇ ಎಲ್ಲದಕ್ಕೂ ಮೂಲಸೆಲೆ/ಆಶ್ರಯಸ್ಥಾನ ಎಂಬ ಬಗ್ಗೆ ವಿವರಿಸಲಾಗಿದೆ. ಒಟ್ಟಿನಲ್ಲಿ, ಇದರಲ್ಲಿ ವ್ಯಷ್ಟಿ-ಸಮಷ್ಟಿಭೇದದಿಂದ ರಾಜಾ, ಪೃಥಿವೀ, ಪ್ರಜೆ ಹಾಗೂ ಪ್ರಜಾಪಾಲನೆಯ ಬಗ್ಗೆಯೂ ವಿಷಯವಿಸ್ತಾರಗಳಿವೆ.
  ಈ ಐದೂ ಅಧಿಕರಣಗಳ ಯಥಾವತ್ ಪ್ರತ್ಯೇಕವ್ಯಾಖ್ಯೆಮಾಡುವುದು ಬಹುದೊಡ್ಡ ಜ್ಞಾನ ಹಾಗೂ ಪ್ರತಿಭಾಯುತ ಕಾರ್ಯವಾಗಿದೆ. ಸೂಕ್ಷ್ಮದೃಷ್ಟಿಯಿಂದ ಅವಲೋಕಿಸುವಾಗ, ಯಜುರ್ವೇದಮಂತ್ರಗಳ ವ್ಯಾಖ್ಯಾನವನ್ನು ಈ ಐದೂ ರೂಪಗಳಲ್ಲಿ ಮಾಡಬಹುದು. ಇದರ ದಿಗ್ದರ್ಶನವನ್ನು ಪ್ರಸ್ತುತ ಗ್ರಂಥದಲ್ಲಿ ೨ನೇ ಸ್ಥಾನದಲ್ಲಿ ನೀಡಲಾಗಿದೆ. ಮೊದಲನೇ ಸ್ಥಾನವನ್ನು ರಾಜಾ, ಪ್ರಜೆ ಹಾಗೂ ಪ್ರಜಾಪಾಲನೆಯ ದೃಷ್ಟಿಯ ಭಾಷ್ಯಕ್ಕೆ ಪ್ರಸ್ತುತ ಕೃತಿಯಲ್ಲಿ ನೀಡಲಾಗಿದೆ. ಪಾಠಕರು ಈ ದೃಷ್ಟಿಯಲ್ಲಿ ಇದನ್ನು ಅಧ್ಯಯನ ಮಾಡಬೇಕು.
    ಇದಲ್ಲದೆ, ಯಜುರ್ವೇದದ ವಿಷಯವಾಗಿ ಬ್ರಾಹ್ಮಣಗ್ರಂಥಗಳಲ್ಲಿ ಈ ಕೆಳಕಂಡಂತೆ ಉಕ್ತವಾಗಿರುವ ವಿಶೇಷ ವಿಚಾರಗಳು ಮನನಯೋಗ್ಯ. ಇವುಗಳು ಯಜುರ್ವೇದದ ಸ್ವರೂಪವನ್ನರಿಯಲು ಬಹು ಸಹಕಾರಿ.
(१) ಯಜುಷಾ ಹ ವೈ ದೇವಾ ಅಗ್ರೇ ಯಜ್ಞಂ ತೇನಿರೇ ಅಥ ಋಚಾ ಅಥ ಸಾಮ್ನಾ | ತದಿದಮಪ್ಯೇತರ್ಹಿ ಯಜುಷಾ ಏವಾಗ್ರೇ ಯಜ್ಞಂ ತನ್ವತೇsಥರ್ಚಾsಥ ಸಾಮ್ನಾ | ಯಜೋ ಹ ವೈ ನಾಮ ಏತತ್ ಯದ್ ಯಜುರಿತಿ | - ಶತಪಥಬ್ರಾಹ್ಮಣ ೪|೬|೭|೧೩||
     ವಿದ್ವಾಂಸರಿಂದ ಪ್ರಪ್ರಥಮವಾಗಿ ಯಜುಸ್ಸಿನಿಂದಲೇ ಮೊದಲಯಜ್ಞವು ನೆರವೇರಿತು ; ತರುವಾಯ ಋಕ್ಕುಗಳಿಂದ; ನಂತರ ಸಾಮಗಳಿಂದ. ಯಜುಸ್ಸುಗಳು ಯಜ್ಞದ ಸಾಧನವಾದ್ದರಿಂದಲೇ “ಯಜು:” ಎಂಬ ಹೆಸರನ್ನು ಪಡೆದವು.
 (२) ಋಗ್ಭ್ಯೋ ಜಾತಂ ವೈಶ್ಯಂ ವರ್ಣಮಾಹು: | ಯಜುರ್ವೇದಂ ಕ್ಷತ್ರಿಯಸ್ಯಾಹುರ್ಯೋನಿಮ್ | ಸಾಮವೇದೋ ಬ್ರಾಹ್ಮಣಾನಾಂ ಪ್ರಸೂತಿ: | ಪೂರ್ವಂ ಪೂರ್ವೇಭ್ಯೋ ವಚ: ಏತದೂಚು: || - ತೈತ್ತಿರೀಯಬ್ರಾಹ್ಮಣ ೩|೧೨|೯||
   ಋಗ್ವೇದಮಂತ್ರಗಳಿಂದ ವೈಶ್ಯವರ್ಣ, ವೈಶ್ಯೋಚಿತ ಕೃಷಿ-ಗೌರಕ್ಷಾ-ವಾಣಿಜ್ಯಾದಿ ವೃತ್ತಿಗಳು ಹಾಗೂ ವೈಶ್ಯಸಂಬಂಧಿತ ನಾನಾ ಶಿಲ್ಪಗಳ ಉತ್ಪತ್ತಿಯಾಯಿತು. ಯಜುರ್ವೇದವು ಕ್ಷಾತ್ರೋಚಿತ ಕರ್ಮಾದಿಗಳನ್ನು ಪ್ರಧಾನವಾಗಿ ಉಪದೇಶಿಸುತ್ತದೆ. ಸಾಮವೇದವು ಬ್ರಾಹ್ಮಣೋಚಿತ ಸ್ತುತಿ-ಉಪಾಸನೆಗಳ ಮೂಲಕಾರಣಸ್ವರೂಪವಾಗಿದೆ. ಹಿಂದಿನ ವಿದ್ವಾಂಸರು, ಹಿಂದಿನ ಶಿಷ್ಯರಿಗೆ ಈ ರೀತಿ ಉಪದೇಶಿಸುತ್ತಿದ್ದರು.
(३) ಯಮೋ ವೈವಸ್ವತೋ ರಾಜಾ ಇತ್ಯಾಹ | ತಸ್ಯ ಪಿತರೋ ವಿಶ: | ತ ಇಮೇ ಸಮಾಸತ ಇತಿ ಸ್ಥವಿರಾ ಉಪಸೇಮತಾ ಭವನ್ತಿ | ತಾನುಪದಿಶತಿ ಯಜೂಂಷಿ ವೇದ: | ಸೋऽಯಮಿತಿ ||
    ವಿವಸ್ವಾನಪುತ್ರ ಯಮನು ರಾಜನೆಂದು ಹೇಳಿದ್ದಾರೆ. ಪಿತೃಗಣವೇ ಅವನ ಪ್ರಜೆಗಳು. ಪಿತೃಗಳು ಸ್ಥಿರರೂ, ವೃದ್ಧರೂ ಆಗಿರುತ್ತಾರೆ. ಅವರಿಗೆ/ಅವರ ವಿಷಯಗಳನ್ನು ಯಜುರ್ವೇದವು ಉಪದೇಶಿಸುತ್ತದೆ. ಅದೇ ಯಜುರ್ವೇದ/ “ಇವನು(ಜೀವಾತ್ಮನು) ಅವನೇ(ಪರಮಾತ್ಮನೇ)” ಎಂಬುದಾಗಿ.
  ಈ ಉದ್ಧರಣೆಯೂ ಯಜುರ್ವೇದವು ರಾಜಾ ಮತ್ತು ಪ್ರಜೆಗಳ ರಾಷ್ಟ್ರಪಾಲನೆಯ ಕರ್ತವ್ಯಗಳ ಉಪದೇಶವನ್ನು ಮಾಡುವುದೆಂಬುದನ್ನು ಪುಷ್ಟೀಕರಿಸುತ್ತದೆ.
   ವಿಷ್ಣುಭಾಗವತಪುರಾಣದಲ್ಲಿ ಹೀಗೆ ಹೇಳಿದೆ-
ತಾಸಾಂ ಸ ಚತುರ: ಶಿಷ್ಯಾನುಪಾಹೂಯ ಮಹಾಮತಿ:|
ಏಕೈಕಾಂ ಸಂಹಿತಾಂ ಬ್ರಹ್ಮನ್ ಏಕೈಕಸ್ಮೈ ದದೌ ವಿಭು:||
ಪೈಲಾಯ ಸಂಹಿತಾಮಾದ್ಯಾಂ ಬಹ್ವೃಚಾಖ್ಯಾಮುವಾಚ ಹ|
ವೈಶಂಪಾಯನಸಂಜ್ಞಾಯ ನಿಗದಾಖ್ಯಂ ಯಜುರ್ಗಣಮ್||
ಸಾಮ್ನಾಂ ಜೈಮಿನಯೇ ಪ್ರಾಹ ತಥಾ ಛನ್ದೋಗಸಂಹಿತಾಮ್|
ಅಥರ್ವಾಙ್ಗಿರಸೀಂ ನಾಮ ಸ್ವಶಿಷ್ಯಾಯ ಸುಮನ್ತವೇ||
   ಪರಾಶರನಿಂದ ಸತ್ಯವತಿಯಲ್ಲಿ ಭಗವಂತನು ತನ್ನ ಅಂಶಾಂಶಕಲೆಯಿಂದ ಕೃಷ್ಣ ದ್ವೈಪಾಯನನಾಗಿ ಅವತರಿಸಿ, ಸಮಗ್ರವೇದರಾಶಿಯನ್ನು  ೪ ವಿಭಾಗಗಳನ್ನಾಗಿ ಮಾಡಿದನು. ಅವುಗಳಲ್ಲಿ ೨ನೇ ವಿಭಾಗದಲ್ಲಿ ಓತಪ್ರೋತವಾಗಿದ್ದ ಋಕ್ಕುಗಳು,ಯಜುಸ್ಸುಗಳು ಹಾಗೂ ಸಾಮಮಂತ್ರಗಳನ್ನು ಉದ್ಧರಿಸಿ ೪ ಸಂಹಿತೆಗಳನ್ನಾಗಿ ಮಾಡಿದನು. ಅವುಗಳಲ್ಲಿ ಬಹ್ವೃಚವೆಂಬ ಋಕ್ಸಂಹಿತೆಯನ್ನು ಪೈಲನಿಗೂ, ನಿಗದವೆಂಬ ಯಜು:ಸಂಹಿತೆಯನ್ನು ವೈಶಂಪಾಯನನಿಗೂ, ಛಂದೋಗವೆಂಬ ಸಾಮಸಂಹಿತೆಯನ್ನು ಜೈಮಿನಿಗೂ, ಅಥರ್ವಾಂಗಿರಸೀ ಎಂಬ ಸಂಹಿತೆಯನ್ನು ತನ್ನ ಶಿಷ್ಯನಾದ ಸುಮಂತುವಿಗೂ ಪ್ರದಾನಮಾಡಿದನು.
ವೈಶಂಪಾಯನಶಿಷ್ಯಾ ವೈ ಚರಕಾಧ್ವರ್ಯವೋऽಭವನ್|
ಯಚ್ಚೇರುರ್ಬ್ರಹ್ಮಹತ್ಯಾಂಹ: ಕ್ಷಯಣಂ ಸ್ವಗುರೋರ್ವ್ರತಮ್||
   ವೈಶಂಪಾಯನರ ಶಿಷ್ಯರು ತಮ್ಮ ಗುರುಗಳಾದ ವೈಶಂಪಾಯನರ ಬ್ರಹ್ಮಹತ್ಯಾಪಾಪಕ್ಷಯಕ್ಕಾಗಿ ಪ್ರಾಯಶ್ಚಿತ್ತವ್ರತವನ್ನು ಆಚರಿಸಿದುದರಿಂದ “ಚರಕಾಧ್ವರ್ಯುಗಳು” ಎಂದು ಕರೆಯಲ್ಪಟ್ಟರು. (ಯಜ್ಞದಲ್ಲಿ ಋಗ್ವೇದಿ- ಹೋತೃ, ಯಜುರ್ವೇದಿ - ಅಧ್ವರ್ಯು, ಸಾಮವೇದಿ - ಉದ್ಗಾತೃ ಹಾಗೂ ಚತುರ್ವೇದಜ್ಞ - ಬ್ರಹ್ಮಸ್ಥಾನವನ್ನು ನಿರ್ವಹಿಸುತ್ತಾರೆ.)
   ಈ ವಿಚಾರವಾಗಿ ಪ್ರಾಯಶ: ಎಲ್ಲ ಪುರಾಣಗಳಲ್ಲೂ ಕೆಳಗಿನ ಕಥೆಯನ್ನು ಹೇಳಲಾಗಿದೆ. ಬ್ರಹ್ಮಹತ್ಯಾಪಾಪಕ್ಷಯಕ್ಕಾಗಿ ವೈಶಂಪಾಯನನ ಶಿಷ್ಯರಲ್ಲೊಬ್ಬನಾದ ಯಾಜ್ಞವಲ್ಕ್ಯನು “ಇತರ ಶಿಷ್ಯರೆಲ್ಲರೂ ಅಲ್ಪಜ್ಞರು” ಎಂದು ಅಹಂಕಾರದಿಂದ ಹೀಗಳೆದು, ತಾನೊಬ್ಬನೇ ಪ್ರಾಯಶ್ಚಿತ್ತವ್ರತವನ್ನು ಕೈಗೊಳ್ಳುವೆನೆಂದನು. ಆಗ ಕ್ರುದ್ಧರಾದ ವೈಶಂಪಾಯನರು, “ನಿನ್ನ ಅಹಂಕಾರದ ನುಡಿಗಳಿಗಾಗಿ, ನಾನು ಕಲಿಸಿದ ವಿದ್ಯೆಯನ್ನೆಲ್ಲ ವಮನ(ವಾಂತಿ)ಮಾಡು” ಎಂದರು. ಯಾಜ್ಞವಲ್ಕ್ಯನು ಅವೆಲ್ಲವನ್ನೂ ವಮನಮಾಡಿದನು. ಆಗ, ಉಳಿದ ಶಿಷ್ಯರುಗಳು ವಿದ್ಯಾಲೋಲುಪರಾಗಿ, ತಿತ್ತಿರಿಪಕ್ಷಿಗಳ ರೂಪದಿಂದ ಅದೆಲ್ಲವನ್ನೂ ಸ್ವೀಕರಿಸುತ್ತಾರೆ. ಆದ್ದರಿಂದ ಅದು ತೈತ್ತಿರೀಯಶಾಖೆಯೆಂದು ಪ್ರಸಿದ್ಧವಾಯಿತು. ಅಲ್ಲದೆ, ಅದರಲ್ಲಿ ಸಂಹಿತೆ ಹಾಗೂ ಬ್ರಾಹ್ಮಣಭಾಗಗಳು ಓತಪ್ರೋತವಾಗಿ ಸಂಮಿಶ್ರವಾಗಿರುವುದರಿಂದ ಕೃಷ್ಣ(ಕಪ್ಪು)ಯಜುರ್ವೇದವೆಂದೂ ಹೆಸರು ಪಡೆಯಿತು. [ವೇದಗಳಲ್ಲಿ ೪ ಭಾಗಗಳಿವೆ - ಸಂಹಿತಾ/ಮಂತ್ರಭಾಗ(ಬ್ರಹ್ಮಚರ್ಯಾಶ್ರಮಕ್ಕೆ ಕಂಠಸ್ಥೀಕರಣಕ್ಕೆ ಮೂಲಸಂಹಿತೆ), ಬ್ರಾಹ್ಮಣ(ಮಂತ್ರಗಳ ವಿವರಣೆ ಹಾಗೂ ವಿನಿಯೋಗ/ಬಳಕೆ- ಗೃಹಸ್ಥಾಶ್ರಮಿಗಳ ವೇದೋಕ್ತ ಕರ್ಮಾನುಷ್ಠಾನಕ್ಕೆ), ಆರಣ್ಯಕ(ವಾನಪ್ರಸ್ಥಾಶ್ರಮಿಗಳಿಗಾಗಿ ಅರಣ್ಯದಲ್ಲಿ ಅಧ್ಯಯನ ಮಾಡಲು) ಮತ್ತು ಉಪನಿಷತ್/ವೇದಾಂತ(ಸಂನ್ಯಾಸಾಶ್ರಮಿಗಳಿಗೆ ಮೋಕ್ಷೋಪಾಯಕ್ಕಾಗಿ).]
     ಯಾಜ್ಞವಲ್ಕ್ಯನು ಇದರ ತರುವಾಯ ಭಗವಾನ್ ಆದಿತ್ಯನ ಉಪಾಸನೆಮಾಡಿ ಯಜುಸ್ಸುಗಳ ಸಮೂಹವನ್ನು(ಯಜುರ್ಗಣವನ್ನು) ಪಡೆದನು. ಈ ಕುರಿತು ಭಾಗವತ ಹೀಗನ್ನುತ್ತದೆ -
ಏವಂ ಸ್ತುತ: ಸ ಭಗವಾನ್ ವಾಜಿರೂಪಧರೋ ಹರಿ:|
ಯಜೂಂಷ್ಯಯಾತಯಾಮಾನಿ ಮುನಯೇऽದಾತ್ ಪ್ರಸಾದಿತ:||
ಯಜುರ್ಭಿರಕರೋಚ್ಛಾಖಾ ದಶಪಞ್ಚ  ಶತೈರ್ವಿಭು:|
ಜಗೃಹುರ್ವಾಜಸಂನ್ಯಸ್ತಾ ಕಾಣ್ವಮಾಧ್ಯನ್ದಿನಾದಯ:||
   ಹೀಗೆ ಯಾಜ್ಞವಲ್ಕ್ಯನಿಂದ ಸ್ತುತಿಸಲ್ಪಟ್ಟ ಆ ವೇಗವಾದ ಕಿರಣ(ವಾಜಿ)ಯುಕ್ತರೂಪೀ ಭಗವಾನ್ ಸೂರ್ಯನಾರಾಯಣನು ಪ್ರಸನ್ನನಾಗಿ
ಅಯಾತಯಾಮಗಳಾದ(ಯಾಮ/ಜಾವಕಾಲ ಕಳೆದು ಹಳಸಿದಂತಲ್ಲದೆ ಹೊಸತಾದ,ತಾಜಾ)ಯಜುಸ್ಸುಗಳನ್ನು ಆ ಮುನಿಗೆ ದಯಪಾಲಿಸಿದನು. ಆ ವಿದ್ವಾನ್ ಯಾಜ್ಞವಲ್ಕ್ಯಮುನಿಯು ನೂರಾರು ಶಾಖೆಗಳಿಂದ ಕೂಡಿದ್ದ ಯಜುರ್ಮಂತ್ರಗಳಿಂದ ೧೫ ಶಾಖೆಗಳನ್ನು ಉದ್ಧರಿಸಿದನು. ವಾಜಿರೂಪದಿಂದ ಬಂದ ಇದನ್ನು ವಾಜಸನೇಯೀ ಸಂಹಿತೆಯೆಂದು ಕರೆಯಲಾಯಿತು. ಇದನ್ನು ಕಾಣ್ವ, ಮಾಧ್ಯಂದಿನ ಮುಂತಾದ ಮುನಿಗಳು ಪರಿಗ್ರಹಿಸಿದರು. ಇವೇ ಮುಂದೆ ಕಾಣ್ವಾದಿ ಶಾಖೆಗಳಾಗಿ ಬೆಳೆದವು. ಈ ವಾಜಸನೇಯೀ ಸಂಹಿತೆಯೂ ಶುಕ್ಲ(ಸ್ವಚ್ಛ, ಬ್ರಾಹ್ಮಣಮಿಶ್ರವಿರದ ಸಂಹಿತೆಯಿಂದ ಕೂಡಿದ)ಯಜುರ್ವೇದವೆಂಬ ಹೆಸರನ್ನು ಪಡೆಯಿತು.
   ಭಾಗವತದಂತೆಯೇ ಇತರ ಪುರಾಣಗಳಲ್ಲೂ, ಯಾಜ್ಞವಲ್ಕ್ಯನು ಗುರುವಿನಿಂದ ಪ್ರತ್ಯೇಕನಾಗಿ ಸೂರ್ಯನನ್ನು ಕುರಿತು ತಪಸ್ಸು ಮಾಡಿ ಯಜುರ್ವೇದವನ್ನು ಪಡೆದನೆಂಬ ಕಥೆಯ ಉಲ್ಲೇಖವು ಪ್ರಾಯಶ: ಎಲ್ಲೆಡೆ ಸಮಾನರೂಪದಿಂದ ಕಂಡುಬರುತ್ತದೆ. ಇದರಿಂದಾಗಿ ಕೆಲವು ಪುರಾಣಗಳ ಆಧಾರದಿಂದ ಕೆಳಕಂಡಂತೆ ಅಭಿಪ್ರಾಯಪಡಬಹುದಾಗಿದೆ.
(೧) ಯಾಜ್ಞವಲ್ಕ್ಯದ್ವಾರಾ ಪ್ರಾಪ್ತವಾದ ಈ ಯಜುರ್ವೇದವು ವೈಶಂಪಾಯನಿಗೆ ವ್ಯಾಸದತ್ತವಾದ ಯಜುರ್ವೇದಕ್ಕಿಂತ ಖಂಡಿತವಾಗಿ ಬೇರೆಯಾದುದು. ಅಂದರೆ, ವ್ಯಾಸನು ವೈಶಂಪಾಯನನಿಗೆ ಆ ಯಜುರ್ವೇದಮಂತ್ರಗಳನ್ನು ಉಪದೇಶಿಸಲಿಲ್ಲ.
(೨) ವ್ಯಾಸ-ವೈಶಂಪಾಯನರಿಗಿಂತ ಪೂರ್ವದಲ್ಲೂ ಯಜುರ್ವೇದವು ಶುದ್ಧ ಹಾಗೂ ಸ್ವತಂತ್ರರೂಪದಿಂದ ಅಸ್ತಿತ್ವದಲ್ಲಿತ್ತು. ಹಾಗೂ
(೩) ವ್ಯಾಸನ ಹೊರತಾಗಿ ಅನ್ಯ ವಿದ್ವಾಂಸರಲ್ಲೂ ಯಜುರ್ವೇದದ ಅಸ್ತಿತ್ವವಿತ್ತು.

  ಮೀಮಾಂಸಾತೀರ್ಥ ಪಂಡಿತ ಜಯದೇವಜೀ ಶರ್ಮರ ಪ್ರಕಾರ ವಾಜಸನೇಯೀ ಸಂಹಿತೆಯು ಪ್ರತ್ಯಕ್ಷಗೋಚರನಾದ ಸೂರ್ಯನಿಂದ ಪಡೆದದ್ದು ಎಂಬ ಅಭಿಪ್ರಾಯ ಮೂಢನಂಬಿಕೆ. ವಾಯುಪುರಾಣ ಹಾಗೂ ಬ್ರಹ್ಮಾಂಡಪುರಾಣದ ಪ್ರಕಾರ-
ತತ: ಸ ಧ್ಯಾನಮಾಸ್ಥಾಯ ಸೂರ್ಯಮಾರಾಧಯದ್ದ್ವಿಜ:|
ಸೂರ್ಯಬ್ರಹ್ಮ ಯದುಚ್ಛಿನ್ನಂ ಖಂ ಗತ್ವಾ ಪ್ರತಿತಿಷ್ಠತಿ||
ತತೋ ಯಾನಿ ಗತಾನ್ಯೂರ್ಧ್ವಂ ಯಜೂಂಷ್ಯಾದಿತ್ಯಮಂಡಲೇ|
ತಾನಿ ತಸ್ಮೈ ದದೌ ತುಷ್ಟ: ಸೂರ್ಯೋ ವೈ ಬ್ರಹ್ಮರಾತಯೇ||
  
   ಅನಂತರ ಯಾಜ್ಞವಲ್ಕ್ಯನು ಸೂರ್ಯನಾರಾಯಣನನ್ನು ಕುರಿತು ಧ್ಯಾನಸ್ಥನಾದನು. ಯಾವ ಸೂರ್ಯಗತವೇದವು ಲೋಪವಾಗಿತ್ತೋ, ಆಕಾಶದಲ್ಲಿ ಪ್ರತಿಷ್ಠಿತವಾಗಿತ್ತೋ, ಹಾಗೆ ಮೇಲೆ ಹೋಗಿದ್ದ ಆ ಮಂತ್ರಗಳಲ್ಲಿ, ಆದಿತ್ಯಮಂಡಲಗತವಾದ ಯಜುಸ್ಸುಗಳನ್ನು(ಶುಕ್ಲಯಜುರ್ವೇದ ವಾಜಸನೇಯೀ ಸಂಹಿತೆಯನ್ನು) , ಪ್ರಸನ್ನನಾದ ಭಗವಾನ್ ಸೂರ್ಯನು ಆ ಬ್ರಹ್ಮರಾತಿ(ಬ್ರಹ್ಮವಿದ್ಯಾಪ್ರಾಪ್ತಿಯಲ್ಲಿ ನಿರತನಾದ) ಯಾಜ್ಞವಲ್ಕ್ಯನಿಗೆ ದಯಪಾಲಿಸಿದನು.
  ಇಲ್ಲೊಂದು ಸಂದೇಹ ಬರಬಹುದು ಕೆಲವರಿಗೆ. ಜಡವಾಗಿರುವ, ಕೇವಲ ಭೌತಿಕವಾದ ಸೂರ್ಯವೆಂಬ ನಕ್ಷತ್ರವು ಹೇಗೆ ವೇದವನ್ನುಪದೇಶಿಸಿತು ಎಂಬುದಾಗಿ. ಅದಕ್ಕೆ ಪರಿಹಾರವನ್ನು ಪುರಾಣಗಳೇ ನೀಡುತ್ತವೆ. ವಾಜಿ(ಅಶ್ವ)ರೂಪದಿಂದ ಬಂದು ಉಪದೇಶಿಸಿದನು. ಆದ್ದರಿಂದ ವಾಜಸನೇಯೀ ಸಂಹಿತೆ ಎಂದು ಪ್ರಸಿದ್ಧ.
  ಆದರೆ, ಜಯದೇವಜೀ ಶರ್ಮರ ಪ್ರಕಾರ, ಯಾಜ್ಞವಲ್ಕ್ಯನು ವೈಶಂಪಾಯನನಿಗೆ ವ್ಯಾಸಪ್ರದತ್ತವಾದ ಯಜುರ್ವೇದದಲ್ಲಿ ಸಂಹಿತಾಬ್ರಾಹ್ಮಣಗಳು ಮಿಶ್ರವಾಗಿ ಗೊಂದಲಕರವಾಗಿರುವುದರಿಂದಲೋ ಅಥವಾ ವೈಶಂಪಾಯನರ ಬ್ರಹ್ಮಹತ್ಯಾ ದೋಷನಿವೃತ್ತಿಗಾಗಿಯೋ, ವೈಶಂಪಾಯನರನ್ನು ತೊರೆದು ವಾಜಸನೇಯ ಎಂಬ ಮತ್ತೊಂದು ಋಷಿ ಪರಂಪರೆಯಲ್ಲಿ ದೀಕ್ಷೆ ಪಡೆದು, ಪುನ: ಸಮಸ್ತ ಯಜುಸ್ಸುಗಳನ್ನು ಅಧ್ಯಯನ ಮಾಡಿ, ಮಿಶ್ರವಿರದ ಶುದ್ಧ ಯಜುಸ್ಸಂಹಿತೆಯನ್ನು ಪಡೆದನು.
   ಪಾಣಿನೀಯ ವ್ಯಾಕರಣಸೂತ್ರ ಹೀಗೆ ಹೇಳುತ್ತದೆ-
ತಿತ್ತಿರಿವರತನ್ತುಖಣ್ಡಿಕೋಖಾಚ್ಛಣ್ ||( ಪಾ.ಅಷ್ಟಾಧ್ಯಾಯೀ ೪| ೩ |೧೦೩||)
  ಅಂದರೆ, ತಿತ್ತಿರಿ ಮುಂತಾದ ಪದಗಳಿಗೆ ತೇನ ಪ್ರೋಕ್ತಮ್ ಅಧೀಯತೇ ಎಂಬರ್ಥದಲ್ಲಿ ಛಣ್ ಪ್ರತ್ಯಯವು ಆದೇಶವಾಗುತ್ತದೆ. ಹಾಗಾಗಿ ತಿತ್ತಿರಿಣಾ ಪ್ರೋಕ್ತಮಧೀಯತೇ ಇತಿ ತೈತ್ತಿರೀಯಾ | ಹಾಗಾಗಿ, ತಿತ್ತಿರಿಮಹರ್ಷಿಯಿಂದ ಉಪದೇಶಪಡೆದು, ಕಲಿತವರು ತೈತ್ತಿರೀಯರಾದರು ಮತ್ತು ಆ ಶಾಖೆಯೂ ತೈತ್ತಿರೀಯವೆನಿಸಿತು. ಹಾಗೆಯೇ ಪಾಣಿನಿಯು ಶೌನಕಾದಿಭ್ಯಶ್ಛನ್ದಸಿ |(ಪಾ.ಅ. ೪| ೩ | ೯೩ ||) ಎಂದೂ ಹೇಳಿದ್ದಾನೆ. ಶೌನಕಾದಿಗಳ ಪರಂಪರೆಯಲ್ಲಿ ವಾಜಸನೇಯ ಮಹರ್ಷಿಯ ಹೆಸರೂ ಇದೆ. ಅವನ ಶಿಷ್ಯರು ವಾಜಸನೇಯಿಗಳು. ಬೇರೆ ಶಾಖೆಗಳಿಗೂ ಆಯಾ ಋಷಿಗಳ ಹೆಸರೇ ಇರುವುದರಿಂದ ವಾಜೀರೂಪನಿಂದ ದತ್ತವಾದುದೆಂಬುದು ತಪ್ಪೆಂದು ಜಯದೇವ ಶರ್ಮರ ಅಭಿಪ್ರಾಯ.
    ಪಾಣಿನೀಯ ಸಂಪ್ರದಾಯದಲ್ಲಿ ಕೆಳಗಿನ ಮಾತು ಪ್ರಸಿದ್ಧ-
  1. ವೈಶಂಪಾಯನರಿಗೆ ಆಲಂಬಿ, ಪಲಂಗ/ಫಲಿಂಗ, ಕಮಲ, ಋಚಾಭ, ಆರುಣಿ, ತಾಂಡ್ಯ, ಶ್ಯಾಮಾಯನ, ಕಠ ಹಾಗೂ ಕಲಾಪೀ ಎಂಬ ೯ ಮಂದಿ ಶಿಷ್ಯರಿದ್ದರು.
  2. ಕಲಾಪಿಗೆ ಹರಿದ್ರು, ಛಗಲೀ, ಉಲಪ ಹಾಗೂ ತುಂಬುರು ಎಂಬ ೪ ಜನ ಶಿಷ್ಯರು.

  ಇಲ್ಲಿ ಯಾಜ್ಞವಲ್ಕ್ಯನ ಹೆಸರು ಎಲ್ಲೂ ಕಂಡುಬರುವುದಿಲ್ಲ. ಅವನು ಅತೀ ಪ್ರಾಚೀನನೂ, ಅವನಿಂದ ಪ್ರೋಕ್ತವಾದ ಶತಪಥಬ್ರಾಹ್ಮಣವೂ ಬಹು  ಪುರಾತನವಾದುದೆಂಬ ಪ್ರತೀತಿಯಿದೆ. ಪಾಣಿನಿಯ “ಅಷ್ಟಾಧ್ಯಾಯೀ” ಎಂಬ ವ್ಯಾಕರಣಸೂತ್ರಗ್ರಂಥಕ್ಕೆ ವೃತ್ತಿಬರೆದ ಕಾಶಿಕಾವೃತ್ತಿಕಾರನು ಯಾಜ್ಞವಲ್ಕ್ಯನು ಪ್ರಾಚೀನ ಬ್ರಾಹ್ಮಣಕಾರರಿಗಿಂತ ನಂತರದವನೆಂದು ಹೇಳಿದರೂ, ವ್ಯಾಕರಣಮಹಾಭಾಷ್ಯಕಾರನಾದ ಪತಂಜಲಿಯ ಪ್ರಕಾರ ಅವರೆಲ್ಲರೂ ಸಮಕಾಲೀನರು. ಆದ್ದರಿಂದ, ಶುಕ್ಲ ಹಾಗೂ ಕೃಷ್ಣವೆಂಬ ಹೆಸರು ಬರಲು ಬೇರೆಯೇ ಕಾರಣವಿದೆ.
      ಸರ್ ಮೋನಿಯರ್ ವಿಲಿಯಮ್ಸ್ ಎಂಬ ಪಾಶ್ಚಾತ್ಯ ಶಬ್ದಾರ್ಥಕೋಶಕರ್ತೃವಿನ ಪ್ರಕಾರ, ಸಂಹಿತೆ ಹಾಗೂ ಬ್ರಾಹ್ಮಣಭಾಗಗಳು ಮಿಶ್ರವಾಗಿರುವುದರಿಂದ ‘ಕೃಷ್ಣ(ಕಪ್ಪು, ಕಲುಷಿತ)’ ಹಾಗೂ ಅವು ಪ್ರತ್ಯೇಕವಾಗಿದ್ದು ಶುದ್ಧಸಂಹಿತೆಯು ಲಭ್ಯವಿರುವುದರಿಂದಾಗಿ ‘ಶುಕ್ಲ(ಬಿಳಿ, ಸ್ವಚ್ಛ)’ . ಇದೂ ಸಹ ಸರಿಯೆಂದು ಕಾಣಿಸುವುದಿಲ್ಲ. ಏಕೆಂದರೆ, ಮಿಶ್ರವಾಗಿರುವುದು ಅದರ ವೈಶಿಷ್ಟ್ಯವೇ ಹೊರತು, ಕಳಂಕವಲ್ಲ.
  ಇನ್ನೊಂದು ವಿಚಾರವಿದೆ. ವೇದವ್ಯಾಸನ ಮೂಲ ಹೆಸರು ‘ಕೃಷ್ಣ(ದ್ವೈಪಾಯನ)’. ಇವನಿಂದ ಉಪದೇಶಿಸಲ್ಪಟ್ಟದ್ದು ‘ಕೃಷ್ಣಯಜುರ್ವೇದ’ ಎಂದಾಗಿರಬಹುದು. ಇದರ ಹೊರತಾಗಿ, ವಾಜಸನೇಯ ಪರಂಪರೆಯಲ್ಲಿ ಬಂದಿರುವುದು ‘ಶುಕ್ಲಯಜುರ್ವೇದ’.
    ಭಾಷ್ಯಕಾರ ಪಂಡಿತ ಮಹೀದಾಸನ ಪ್ರಕಾರ, ‘ವ್ಯಾಸೇನ ಅನುಪದಿಷ್ಟತ್ತ್ವಾತ್’,  ವ್ಯಾಸನಿಂದ ಉಪದೇಶಿಸಲ್ಪಡದಿರುವುದರಿಂದಾಗಿ ಕೃಷ್ಣೇತರವಾದುದು ಶುಕ್ಲವೆನಿಸಿತು. ಕೃಷ್ಣವರ್ಣದ ವಿರೋಧಪದ ಶುಕ್ಲವರ್ಣ ಎಂಬುದರಿಂದಾಗಿ. ಅಲ್ಲದೆ, ಅವನು ಕೆಳಗಿನ ಸಮರ್ಥನೆಯನ್ನೂ ನೀಡಿದ್ದಾನೆ.
ವೇದೋಪಕ್ರಮಣೇ ಚತುರ್ದಶೀಪೌರ್ಣಿಮಾಗ್ರಹಣಾತ್ ಶುಕ್ಲಯಜು:|
ಪ್ರತಿಪದಾಯುಕ್ತಪೌರ್ಣಿಮಾಗ್ರಹಣಾತ್ ಕೃಷ್ಣಯಜು:||
   ಚತುರ್ದಶೀಯುಕ್ತವಾದ ಹುಣ್ಣಿಮೆಯನ್ನು ವೇದಾರಂಭಕ್ಕೆ ಪರಿಗಣಿಸುವುದರಿಂದಾಗಿ, ಅದು ಶುಕ್ಲಪಕ್ಷವಾದುದರಿಂದ ಶುಕ್ಲಯಜುರ್ವೇದವೆಂದು ಕರೆಯಲ್ಪಡುತ್ತದೆ. ಪಾಡ್ಯದಿಂದ ಕೂಡಿದ ಪೌರ್ಣಮೀಗ್ರಹಣದಿಂದಾಗಿ, ಅದು ಕೃಷ್ಣಪಕ್ಷವಾದುದರಿಂದ ಕೃಷ್ಣಯಜುರ್ವೇದವೆಂದು ಪ್ರಸಿದ್ಧ. ಬ್ರಾಹ್ಮಣಗ್ರಂಥಗಳಲ್ಲಿ ಕೆಳಗಿನಂತೆ ಉಲ್ಲಿಖಿತವಾಗಿದೆ.

(೧) ತದ್ಯಚ್ಛುಕ್ಲಂ ತದ್ವಾಚೋ ರೂಪಮ್| ಋಚೋ ಅಗ್ನೇರ್ಮೃತ್ಯೋಃ| ಸಾ ಯಾ ಸಾ ವಾಗ್ ಋಕ್ ಸಾ| ಅಥ ಯೋऽಗ್ನಿರ್ಮೃತ್ಯುಃ ಸಃ| ಅಥ ಯತ್ಕೃಷ್ಣಂ ತದಪಾಂ ರೂಪಮ್ ಅನ್ನಸ್ಯ ಮನಸೋ ಯಜುಷ: || ತದ್ಯಾಸ್ತಾ ಆಪೋऽನ್ನಂ ತತ್| ಅಥ ಯನ್ಮನೋ ಯಜುಸ್ತತ್|| (ಜೈಮಿನೀಯೋಪನಿಷದ್ ಬ್ರಾಹ್ಮಣ ೧|೨೫||)
     ಶುಕ್ಲ(ಯಜುರ್ವೇದ)ವು ವಾಣಿಯ ರೂಪವಾಗಿದೆ. ಹಾಗೆಯೇ, ಋಕ್ಕಿನ, ಅಗ್ನಿಯ ಹಾಗೂ ಮೃತ್ಯುವಿನ ರೂಪವೂ ಆಗಿದೆ. ಯಾವ ಆ ವಾಕ್ಕು/ವಾಣಿಯು ಇದೆಯೋ, ಅದು ಋಕ್ಕೇ ಆಗಿದೆ. ಹಾಗೆಯೇ ಅಗ್ನಿಯೇ ಮೃತ್ಯುವು. ಅಂತೆಯೇ, ಯಾವ ಕೃಷ್ಣ(ಯಜುರ್ವೇದ)ವು ಇದೆಯೋ ಅದು ನೀರಿನ, ಅನ್ನದ, ಮನಸ್ಸಿನ ಹಾಗೂ ಯಜುಸ್ಸಿನ ರೂಪವು. ಯಾವ ಆಪಸ್ಸುಗಳು(ನೀರು) ಇವೆಯೋ, ಅವೇ ಅನ್ನವಾಗಿವೆ. ಹಾಗೆಯೇ, ಮನಸ್ಸೇ ಯಜುಸ್ಸು.
           (ಆದ್ದರಿಂದ, ಶುಕ್ಲಯಜುರ್ವೇದವು ವಾಗ್ರೂಪವಾದರೆ, ಕೃಷ್ಣಯಜುರ್ವೇದವು ಮನೋರೂಪ. ಶುಕ್ಲವು ಅಗ್ನಿಸ್ವರೂಪ. ಕೃಷ್ಣವು ಆಪಸ್ವರೂಪ. ಶುಕ್ಲವು ಋಕ್ಸ್ವರೂಪ; ಕೃಷ್ಣವು ಯಜುಸ್ಸ್ವರೂಪ. ಶುಕ್ಲವು ಮೃತ್ಯುಸ್ವರೂಪ; ಕೃಷ್ಣವು ಅನ್ನದ ಸ್ವರೂಪ.)
     ಇದು ‘ಕೃಷ್ಣ’ ಮತ್ತು ‘ಶುಕ್ಲ’ ಗಳ ಆಧ್ಯಾತ್ಮಿಕ ವಿವರಣೆಯಾಗಿದೆ. ಅಧ್ಯಾತ್ಮದಲ್ಲಿ ವಾಣಿ(ವಾಕ್/ಮಾತು)ಯು ಶುಕ್ಲ ಹಾಗೂ ಮಾನಸ ಸಂಕಲ್ಪವು ಕೃಷ್ಣ. ಯಾವ ರೀತಿಯಲ್ಲಿ ಆಪ(ಜಲ)ರೂಪೀ-ಅನ್ನನಿರ್ಮಿತವಾದ ಶರೀರದಲ್ಲಿ ಕ್ರಿಯೆಯು ನಡೆಯುತ್ತದೋ, ಹಾಗೆಯೇ ವೇದವಾಣಿಗಳಲ್ಲೊಂದಾದ ಯಜುರ್ವೇದವು ಕರ್ಮಕಾಂಡದಲ್ಲಿ ನಮ್ಮನ್ನು ನಿಯುಕ್ತಿಗೊಳಿಸುವುದು.
(೨) ಯಜ್ಞೋ ಹಿ ಕೃಷ್ಣ: | ಸ ಯ: ಸ ಯಜ್ಞ: | ತತ್ ಕೃಷ್ಣಾಜಿನಮ್ ||
ಯಜ್ಞವು ಕೃಷ್ಣವು. ಅದೇ ಕೃಷ್ಣಾಜಿನವು. ಇದರ ತಾತ್ಪರ್ಯವು ಪ್ರಾಯಶ: ‘ಯಜ್ಞದಲ್ಲಿ ವಿನಿಯೋಗವಾಗುವ ಯಜುರ್ವೇದವೇ ಕೃಷ್ಣಯಜುರ್ವೇದ’. ಅಂತೆಯೇ ಯಜುರ್ವೇದದ ಶುದ್ಧಸಂಹಿತೆಯನ್ನು ಶುಕ್ಲವೆಂದು ಕರೆದುದಾಗಿರಬಹುದು.
(೩) ಅಸೌ ವಾ ಆದಿತ್ಯ: ಶುಕ್ರ: | ಏಷ ವೈ ಶುಕ್ರೋ ಯ ಏಷಸ್ತಪತಿ ||(ಶತಪಥಬ್ರಾಹ್ಮಣ)
ಆದಿತ್ಯನು ಶುಕ್ರನು. ಯಾವ ಇವನು ಆತಪದಿಂದ(ಬಿಸಿಲಿನಿಂದ)ಜಗಕ್ಕೆಲ್ಲ ತಾಪ(ಉಷ್ಣ/ಶಾಖ)ವನ್ನೀಯುತ್ತಿದ್ದಾನೋ ಅವನೇ ಶುಕ್ರನು.
(೪) ತತ್ರ ಹ್ಯಾದಿತ್ಯ: ಶುಕ್ರಶ್ಚರತಿ | ಆದಿತ್ಯನು ಶುಕ್ರರೂಪನಾಗಿ, ಬೆಳಕಿನ ಸ್ವರೂಪದಿಂದ ಜಗದಗಲಕ್ಕೂ ಸಂಚರಿಸುವನು. ಇದರಿಂದಾಗಿ, ಆದಿತ್ಯನು ಶುಕ್ರ(ಬೆಳ್ಳಗಿನ ಪ್ರಕಾಶಮಯ)ನಾದ್ದರಿಂದ, ಅವನಿಂದ ಪ್ರಾಪ್ತವಾದ ಯಜುರ್ಗಣವು ಶುಕ್ರ/ಶುಕ್ಲ ಯಜುಸ್ಸೆಂದು ಹೇಳಲ್ಪಟ್ಟಿದೆ.

    ಆದಿತ್ಯನು ಪರಮೇಶ್ವರನ ವೇದಮಯತ್ವರೂಪವೆಂಬುದನ್ನು ನಾವು ಹಿಂದೆಯೇ ಹೇಳಿದ್ದೇವೆ. ಶುದ್ಧಯಜುರ್ವೇದವು ಪರಮೇಶ್ವರನಿಂದಲೇ ಪ್ರಾಪ್ತವಾಯಿತು. ಅದಕ್ಕಾಗಿಯೇ ಇದಕ್ಕೆ ‘ವಾಜಸನೇಯ ಸಂಹಿತೆ’ ಎಂಬ ಹೆಸರು. ಇದನ್ನು ಸಮರ್ಥಿಸುವ ಈ ಕೆಳಕಂಡ ಋಕ್ಕು ಋಗ್ವೇದ ಹಾಗೂ ಅಥರ್ವವೇದಗಳಲ್ಲಿ ಬರುತ್ತದೆ.
ಯದಾ ವಾಜಮಸನದ್ ವಿಶ್ವರೂಪಮಾ ದ್ಯಾಮರುಕ್ಷದುತ್ತರಾಭಿಸದ್ಮ ||
ಬೃಹಸ್ಪತಿಂ ವೃಷಭಂ ವರ್ಧಯನ್ತೋ ನಾನಾ ಸನ್ತೋ ಬಿಭ್ರತೋ ಜ್ಯೋತಿರಾಸಾ ||
ಯಾವಾಗ ವಿದ್ವಾನನೂ ಜ್ಞಾನಿಯೂ ಆದ ದೇವಗುರು ಬೃಹಸ್ಪತಿಯು, ವೇದಜ್ಞಪುರುಷನೂ ‘ವಿಶ್ವರೂಪ ವಾಜ(ಯಜ್ಞ/ಮುನಿ)’ನೂ ಆದ ಪರಮೇಶ್ವರನ ವಿಶ್ವಮಯಜ್ಞಾನವಾದ ವೇದವನ್ನು ಪಡೆಯುತ್ತಾನೋ ಹಾಗೂ ಅವನು ತೇಜೋಮಯ ಮೋಕ್ಷ /ಪರಮಪದವನ್ನು ಪಡೆಯುತ್ತಾನೋ ಆವಾಗ, ನಾನಾ ವಿದ್ವಾಂಸರು/ಜ್ಞಾನಿಗಳು, ಬೃಹಸ್ಪತಿಯ ಮೇಲೆ ಮೇಘರಾಶಿಗೆ ಸಮನಾದ ಜ್ಞಾನಪ್ರದಾನ ಮಾಡುತ್ತಿರುವ ಆ ಪರಮೇಶ್ವರನ ನಾನಾವಿಧವಾದ ಮುಖಗಳಿಂದ ಜ್ಞಾನರೂಪಜ್ಯೋತಿಯನ್ನು ಧಾರಣೆಮಾಡುತ್ತಾ,  ಅವನ ಮಹಿಮೆಯನ್ನು ಹೆಚ್ಚು ಹೆಚ್ಚು ಪ್ರಚುರಪಡಿಸಿದರು. ಇಲ್ಲಿ ‘ಬೃಹಸ್ಪತಿ’ ಶಬ್ದ ದೇವಗುರು/ಆಚಾರ್ಯ ಹಾಗೂ ಪರಮೇಶ್ವರ- ಈ ಇಬ್ಬರನ್ನೂ ಸೂಚಿಸುವುದು.
      ಈ ಮಂತ್ರದಲ್ಲಿ ವಿದ್ವಾಂಸರಾದ ಆಚಾರ್ಯ ಮತ್ತು ಪರಮೇಶ್ವರರು ಪರಮೋನ್ನತ ಪದವಿಯಲ್ಲಿ ವಿರಾಜಮಾನರಾಗಿರುವಿಕೆ, ಮತ್ತು ಅವರಿಂದ ಜ್ಞಾನಪ್ರಾಪ್ತಿ ಮಾಡಿಕೊಳ್ಳುವ ವಿದ್ವಾಂಸರು ಅವರ ವಿದ್ಯೆಯ ಮಹಿಮೆಯನ್ನು ವರ್ಣಿಸುವಿಕೆ- ಇವು ಕಂಡುಬರುತ್ತವೆ. ಪೂರ್ಣ ವೇದಮಯ ಜ್ಞಾನವನ್ನು ‘ವಿಶ್ವರೂಪ ವಾಜ’ ಎಂಬ ಶಬ್ದದಿಂದ ಸೂಚಿಸಲಾಗಿದೆ. ಯಾವ ವಿದ್ವಾನನು ಆ ವಾಜವನ್ನು ಸ್ವಯಂ ಪ್ರಾಪ್ತಿ ಮಾಡಿಕೊಳ್ಳುವನೋ ಹಾಗೂ ಇತರರಿಗೆ ಉಪದೇಶಿಸಿ, ವಿವರಣೆ ಕೊಡುವನೋ ಅಂತಹ ವಿದ್ವಾನನು ವೇದದ ಅನುಸಾರ ‘ವಾಜಸನ’ ಎಂದು ಕರೆಯಲ್ಪಡುವನು; ಅವನ ಶಿಷ್ಯ ‘ವಾಜಸನೇಯ’. ಈ ಆಖ್ಯಾನದಿಂದ ಗುರುಪರಂಪರಾನುಗತವಾಗಿ ಪರಮೇಶ್ವರ(ಆದಿತ್ಯ)ನಿಂದ ಪ್ರಾಪ್ತವಾದ ಶುದ್ಧ ಯಜುರ್ವೇದವೇ ‘ಶುಕ್ಲ’; ಇದರಲ್ಲಿ ಸಂದೇಹವಿಲ್ಲ. ಯಜ್ಞಕ್ರಿಯೆಗಳಲ್ಲಿ ವಿನಿಯೋಗವಾಗುವ, ಬ್ರಾಹ್ಮಣಾದಿ ವಿವರಣೆ/ಅರ್ಥವಾದಗಳ ಸಹಿತವಾಗಿರುವ ಅನ್ಯಶಾಖೆಯು ಯಜ್ಞಮಯವಾಗಿರುವುದರಿಂದ ‘ಕೃಷ್ಣ’ ವೆಂದು ಪ್ರಸಿದ್ಧವಾಯಿತು. ಈ ವಿಚಾರದ ಬಗ್ಗೆ ಹೆಚ್ಚಿನ ಅಧ್ಯಯನ/ಸಂಶೋಧನೆ ಆಗಬೇಕಿದೆ. ಮಹರ್ಷಿ ದಯಾನಂದ ಸರಸ್ವತಿಯವರು ಈ ಬಗ್ಗೆ ಏನೂ ಹೇಳಿಲ್ಲ.
  ಕುಮಾರಿಲಭಟ್ಟರ ಮಾತಿನಂತೆ-
ಆಗಮಪ್ರವಣಶ್ಚಾಹಂ ನಾಪವಾದ್ಯ: ಸ್ಖಲನ್ನಪಿ|
ನ ಹಿ ಸದ್ವರ್ತ್ಮನಾ ಗಚ್ಛನ್ ಸ್ಖಲಿತೇಷ್ವಪ್ಯಪೋದ್ಯತೇ||
ವೇದದಲ್ಲಿ ಬಹಳ ಆಸಕ್ತಿಯುಳ್ಳವ ನಾನು. ತಪ್ಪಿದರೂ ದೂಷಿಸತಕ್ಕುದಲ್ಲ. ಸನ್ಮಾರ್ಗದಲ್ಲಿ ಹೋಗುತ್ತಾ, ಎಡವಿದರೂ ದೂಷಿಸಲ್ಪಡುವುದಿಲ್ಲ ಅಲ್ಲವೇ?
ಹಾಗೆಯೇ-
ಗಚ್ಛತ: ಸ್ಖಲನಂ ಕ್ವಾಪಿ ಭವತ್ಯೇವ ಪ್ರಮಾದತ:|
ಹಸನ್ತಿ ದುರ್ಜನಾಸ್ತತ್ರ ಸಮಾದಧತಿ ಸಜ್ಜನಾ:||
ನಡೆಯುವವನಿಗೆ ಒಮ್ಮೊಮ್ಮೆ ಅರಿಯದೆ ಹೆಜ್ಜೆ ತಪ್ಪುವುದು ಸಹಜ. ಅಂಥ ಸಂದರ್ಭದಲ್ಲಿ ದುರ್ಜನರು ಅಪಹಾಸ್ಯ ಮಾಡುತ್ತಾರೆ. ಆದರೆ, ಸಹೃದಯಿಗಳು ಸಮಾಧಾನವನ್ನೋ, ತಿದ್ದುಪಡಿಯನ್ನೋ ಸೂಚಿಸುತ್ತಾರೆ.

(೨)ಸಾಯಣಕೃತ-ತೈತ್ತಿರೀಯಸಂಹಿತಾಭಾಷ್ಯ-ಪೀಠಿಕೆ
ಗಜವದನಮಚಿಂತ್ಯಂ ತೀಕ್ಷ್ಣದಂತಂ ತ್ರಿನೇತ್ರಂ
ಬೃಹದುದರವಿಶೇಷಂ ಭೂತರಾಜಂ ಪುರಾಣಮ್ |
ಅಮರವರಸುಪೂಜ್ಯಂ ರಕ್ತವರ್ಣಂ ಸುರೇಶಂ
ಪಶುಪತಿಸುತಮೀಶಂ ವಿಘ್ನರಾಜಂ ನಮಾಮಿ ||೧||
(ಮಾಲಿನೀವೃತ್ತಮ್- “ನನಮಯಯಯುತೇಯಂ ಮಾಲಿನೀ ಭೋಗಿಲೋಕೈ:)
ಆನೆಯ ಮೊಗದವನೂ, ಚಿಂತನೆಗೆ ನಿಲುಕದವನೂ, ಹರಿತವಾದ ದಂತ(ಕೋರೆಹಲ್ಲು) ಉಳ್ಳವನೂ, ೩ ಕಣ್ಣುಗಳುಳ್ಳವನೂ, ಆಕಾರದಲ್ಲಿ ವಿಶೇಷವಾಗಿ ದೊಡ್ಡ ಹೊಟ್ಟೆಯಿಂದ ಗುರುತಿಸಲ್ಪಡುವವನೂ, ಭೂತಗಣಗಳ ರಾಜನೂ, ಪುರಾತನನೂ, ದೇವೇಂದ್ರನಿಂದ ಸುಪೂಜಿತನೂ, ರಕ್ತದಂತಹ ಕಡುಗೆಂಪು ಮೈಬಣ್ಣದವನೂ, ಸುರಗಣಗಳ ಒಡೆಯನೂ, ಪಶುಪತಿಯ ಸುತನೂ, ಎಲ್ಲಕ್ಕೂ ಈಶನೂ ಆದಂತಹ ವಿಘ್ನರಾಜ(ವಿಘ್ನಕಾರಕ+ವಿಘ್ನಹಾರಕ)ನನ್ನು ನಮಸ್ಕರಿಸುತ್ತೇನೆ.
ಮೂಲಾಧಾರೇ ಚತುಷ್ಪತ್ರೇ ಪದ್ಮಕಿಂಜಲ್ಕಶೋಭಿತೇ |
ದಾಡಿಮೀಕುಸುಮಪ್ರಖ್ಯೇ ತರುಣಾದಿತ್ಯಸಂನಿಭೇ ||೨||
(ಅನುಷ್ಟುಪ್- “ಪಂಚಮಂ ಲಘು ಸರ್ವತ್ರ ಸಪ್ತಮಂ ದ್ವಿಚತುರ್ಥಯೋ: | ಗುರು ಷಷ್ಠಂ ಚ ಪಾದಾನಾಂ ಚತುರ್ಣಾಂ ಸ್ಯಾದನುಷ್ಟುಭಿ”)
ಮೂಲಾಧಾರಚಕ್ರದ ಚತುರ್ದಳಪತ್ರದಲ್ಲಿ ಪದ್ಮಕೇಸರಗಳಿಂದ ಶೋಭಿತವಾದ, ದಾಳಿಂಬೆಹೂವಿನಂತೆಯೂ, ತರುಣ ಸೂರ್ಯನಂತೆಯೂ ಕಂಗೊಳಿಸುವ,
ಭಗಾಖ್ಯೇ ಕುಂಡಲೀಚಕ್ರೇ ಪೂಜಯೇತ್ಪರಮೇಶ್ವರೀಮ್ |
ಅಂಕುಶಂ ಚಾಕ್ಷಸೂತ್ರಂ ಚ ಪಾಶಪುಸ್ತಕಧಾರಿಣೀಮ್ |
ಮುಕ್ತಾಹಾರಸಮಾಯುಕ್ತಾಂ ದೇವೀಂ ಧ್ಯಾಯೇಚ್ಚತುರ್ಭುಜಾಮ್ ||೩||
(ಅನುಷ್ಟುಪ್)
ಭಗವೆಂಬ ಹೆಸರಿನ ಕುಂಡಲೀಚಕ್ರಸಂಸ್ಥಿತಳಾದ, ಅಂಕುಶ ಹಾಗೂ ಅಕ್ಷಸೂತ್ರ(ಜಪಮಾಲೆ)ಗಳನ್ನು ಧರಿಸಿರುವ, ಪಾಶ-ಪುಸ್ತಕಧಾರಿಣಿಯಾದ, ಮುತ್ತಿನಹಾರವನ್ನು ಧರಿಸಿದ, ೪ ಭುಜಯುತಳಾದ ದೇವಿ ಪರಮೇಶ್ವರಿಯನ್ನು ಪೂಜಿಸಿ,ಧ್ಯಾನಿಸಬೇಕು.
ಕಪಿಲಸಟಮುದಂಚತ್ಕರ್ಣಮಗ್ನೀನ್ದ್ವಿನಾಕ್ಷಂ
ವಿವೃತವದನವಿದ್ಯುಜ್ಜಿಹ್ವಮುತ್ಫುಲ್ಲನಾಸಮ್ |
ಅರಿದರಕರಯುಗ್ಮಂ ಯೋಗಪಟ್ಟಾಂಗಜಾನು-
-ಸ್ಥಿತಕರಮರುಣಾಂಘ್ರಿಂ ಶ್ರೀನೃಸಿಂಹಂ ನತೋऽಸ್ಮಿ ||೪||
(ಮಾಲಿನೀವೃತ್ತಮ್)
ಗೋರೋಚನದಂತೆ ಕೆಂಪುಮಿಶ್ರಿತ ಹಳದಿ ಬಣ್ಣದ ಜಟೆಯಿಂದ ಹೊರಕ್ಕೆ ಹೊರಡುತ್ತಿರುವ ಕಿವಿಗಳುಳ್ಳವನಾದ, ಅಗ್ನಿ-ಇಂದು(ಚಂದ್ರ)-ಇನ(ಸೂರ್ಯ)ರೇ ಕಣ್ಣುಗಳಾಗಿರುವವನಾದ, ತೆರೆದ ಬಾಯಿಯುಳ್ಳ, ಮಹಾಪ್ರಭಾಯುತ ನಾಲಿಗೆಯುಳ್ಳ, ಅರಳಿದ ನಾಸಿಕವುಳ್ಳ, ಶತ್ರುಭೀತಿಕರವಾದ ಹಸ್ತಗಳೆರಡುಳ್ಳ, ಯೋಗಪಟುವಿನಂಥ ಶರೀರವುಳ್ಳ, ಮೊಣಕಾಲಸಂಧಿಯವರೆಗೆ ಚಾಚಿಕೊಂಡಿರುವ ಕರಗಳುಳ್ಳ, ಎಳೆಗೆಂಪು ಬಣ್ಣದ ಚರಣಗಳುಳ್ಳ ಶ್ರೀನರಸಿಂಹನನ್ನು ನಮಸ್ಕರಿಸುತ್ತೇನೆ.
ನಮಾಮಿ ವಿಷ್ಣುಂ ವಿಧಿಯಜ್ಞರೂಪಂ
ಸರಸ್ವತೀಂ ಚಾಪಿ ತದೀಯ ಜಿಹ್ವಾಮ್ |
ತ್ರೈವಿದ್ಯವೃದ್ಧಾನ್ವಿದುಷೋ ಗುರೂಂಶ್ಚ
ಬೌಧಾಯನಾಚಾರ್ಯಪದದ್ವಯಂ ಚ ||೫||
(‘ಮಾಲಾ’ ಎಂಬ ಉಪಜಾತಿವೃತ್ತಪ್ರಭೇದ; ಉಪೇಂದ್ರವಜ್ರಾ+ಉ.ವ.+ಇಂದ್ರವಜ್ರಾ+ಇ.ವ. ಕ್ರಮವಾಗಿ ೪ ಪಾದಗಳು; “ಸ್ಯಾದಿಂದ್ರವಜ್ರಾ ಯದಿ ತೌ ಜಗೌ ಗ:”, “ಉಪೇಂದ್ರವಜ್ರಾ ಜತಜಾಸ್ತತೋ ಗೌ”)
ವಿಧ್ಯುಕ್ತ ಯಜ್ಞರೂಪೀ ವಿಷ್ಣುವನ್ನೂ, ಅವನ ನಾಲಿಗೆ(ಮುಖವಾಣಿ)ಯೋ ಎಂಬಂತಿರುವ ಸರಸ್ವತೀದೇವಿಯನ್ನೂ, ವೇದಜ್ಞಾನವೃದ್ಧರನ್ನೂ, ವಿದ್ವಾಂಸರನ್ನೂ, ಗುರುಪರಂಪರೆಯನ್ನೂ, ಹಾಗೂ ಸೂತ್ರಕಾರರಾದ ಭೋಧಾಯನಾಚಾರ್ಯರ ಚರಣದ್ವಂದ್ವವನ್ನೂ ನಮಿಸುತ್ತೇನೆ.
ವಾಗೀಶಾದ್ಯಾ: ಸುಮನಸ: ಸರ್ವಾರ್ಥಾನಾಮುಪಕ್ರಮೇ |
ಯಂ ನತ್ವಾ ಕೃತಕೃತ್ಯಾ: ಸ್ಯುಸ್ತಂ ನಮಾಮಿ ಗಜಾನನಮ್ ||೬||
(ಅನುಷ್ಟುಪ್)
ಬ್ರಹ್ಮಾದಿ ಸುಮನಸರು(ದೇವತೆಗಳು) ಯಾವುದೇ ಕಾರ್ಯಾರಂಭದಲ್ಲಿ ಯಾರನ್ನು ನಮಿಸಿ ಕೃತಕೃತ್ಯರಾಗುವರೋ, ಅಂತಹ ಗಣಪತಿಯನ್ನು ನಮಸ್ಕರಿಸುತ್ತೇನೆ.
ಯಸ್ಯ ನಿಶ್ವಸಿತಂ ವೇದಾ ಯೋ ವೇದೇಭ್ಯೋऽಖಿಲಂ ಜಗತ್ |
ನಿರ್ಮಮೇ ತಮಹಂ ವಂದೇ ವಿದ್ಯಾತೀರ್ಥಮಹೇಶ್ವರಮ್ ||೭||
(ಅನುಷ್ಟುಪ್)
ಯಾರಿಂದ ವೇದಗಳು ನಿಶ್ವಸಿತವಾದವೋ(ಹೊರಹೊಮ್ಮಿದವೋ), ಯಾರು ಆ ವೇದಗಳ ಆಧಾರದಲ್ಲೇ ಸಮಸ್ತ ಜಗತ್ತನ್ನು ನಿರ್ಮಿಸಿದನೋ, ಅಂತಹ, ವಿದ್ಯೆಯ ಆಶ್ರಯಸ್ಥಾನವಾದಂಥ ಮಹೇಶ್ವರನನ್ನು(ಪರಮಾತ್ಮನನ್ನು) ನಾನು ವಂದಿಸುತ್ತೇನೆ.
ತತ್ಕಟಾಕ್ಷೇಣ ತದ್ರೂಪಂ ದಧದ್ಬುಕ್ಕಮಹೀಪತಿ: |
ಅನ್ವಶಾನ್ಮಾಧವಾಚಾರ್ಯಂ ವೇದಾರ್ಥಸ್ಯ ಪ್ರಕಾಶನೇ ||೮||
(ಅನುಷ್ಟುಪ್)
ಆ ಪರಮಾತ್ಮನ ಕೃಪಾಕಟಾಕ್ಷ(ವಾರೆನೋಟ)ದಿಂದ ಅವನ ರೂಪವನ್ನೇ ಧರಿಸಿರುವ(“ರಾಜಾ ಪ್ರತ್ಯಕ್ಷದೇವತಾ” ಎಂಬಂತೆ) ಬುಕ್ಕರಾಜನು, ವೇದಾರ್ಥವನ್ನು ಪ್ರಕಾಶಿಸಲು ಮಾಧವಾಚಾರ್ಯನಿಗೆ ಅನುಜ್ಞೆಯನ್ನಿತ್ತನು.
ಸ ಪ್ರಾಹ ನೃಪತಿಂ ರಾಜನ್ಸಾಯಣಾರ್ಯೋ ಮಮಾನುಜ: |
ಸರ್ವಂ ವೇತ್ತ್ಯೇಷ ವೇದಾನಾಂ ವ್ಯಾಖ್ಯಾತೃತ್ವೇ ನಿಯೋಜ್ಯತಾಮ್ ||೯||
(ಅನುಷ್ಟುಪ್)
ಅವನು(ಮಾಧವಾಚಾರ್ಯನು) ರಾಜನಿಗೆ ಹೀಗೆ ಹೇಳಿದನು-”ರಾಜನ್! ನನ್ನ ತಮ್ಮನಾದ ಸಾಯಣಾಚಾರ್ಯನು ಅದೆಲ್ಲವನ್ನೂ ಬಲ್ಲನು. ಅವನನ್ನೇ ವೇದವ್ಯಾಖ್ಯಾನಕ್ಕೆ ತಾವು ನಿಯೋಜಿಸಬೇಕು”.
ಇತ್ಯುಕ್ತೋ ಮಾಧವಾರ್ಯೇಣ ವೀರಬುಕ್ಕಮಹೀಪತಿ: |
ಅನ್ವಶಾತ್ಸಾಯಣಾಚಾರ್ಯಂ ವೇದಾರ್ಥಸ್ಯ ಪ್ರಕಾಶನೇ ||೧೦||
(ಅನುಷ್ಟುಪ್)
ಈ ರೀತಿಯಾಗಿ ಮಾಧವಾಚಾರ್ಯನಿಂದ ಹೇಳಲ್ಪಟ್ಟ ವೀರನಾದ ಬುಕ್ಕರಾಜನು, ವೇದಾರ್ಥಪ್ರಕಾಶನಕ್ಕಾಗಿ ಸಾಯಣಾಚಾರ್ಯರನ್ನು ಆಜ್ಞಾಪಿಸಿದನು.
ಯೇ ಪೂರ್ವೋತ್ತರಮೀಮಾಂಸೇ ತೇ ವ್ಯಾಖ್ಯಾಯಾತಿಸಂಗ್ರಹಾತ್ |
ಕೃಪಾಲುರ್ಮಾಧವಾಚಾರ್ಯೋ ವೇದಾರ್ಥಂ ವಕ್ತುಮುದ್ಯತ: ||೧೧||
ಆ ಕೃಪಾಳುವಾದ ಮಾಧವಾಚಾರ್ಯನು, ಯಾವ ಪೂರ್ವೋತ್ತರಮೀಮಾಂಸೆಗಳಿವೆಯೋ(ಪೂರ್ವಮೀಮಾಂಸೆ ಕರ್ಮಕಾಂಡ, ಉತ್ತರಮೀಮಾಂಸೆ ವೇದಾಂತ/ಬ್ರಹ್ಮಸೂತ್ರಗಳು) ಅವನ್ನು ಸಂಗ್ರಹರೂಪದಲ್ಲಿ ವ್ಯಾಖ್ಯಾನಿಸಿ, ವೇದಾರ್ಥವನ್ನು ಹೇಳಲು ತೊಡಗಿದನು.
ಬ್ರಾಹ್ಮಣಂ ಕಲ್ಪಸೂತ್ರೇ ದ್ವೇ ಮೀಮಾಂಸಾಂ ವ್ಯಾಕೃತಿಂ ತಥಾ |
ಉದಾಹೃತ್ಯಾಥ ತೈ: ಸರ್ವೈರ್ವೇದಾರ್ಥ: ಸ್ಪಷ್ಟಮೀರ್ಯತೇ ||೧೨||
ತೈತ್ತಿರೀಯ ಬ್ರಾಹ್ಮಣವನ್ನೂ, ೨ ಕಲ್ಪಸೂತ್ರಗಳನ್ನೂ, ಜೈಮಿನಿಪ್ರಣೀತವಾದ ಪೂರ್ವಮೀಮಾಂಸಾಶಾಸ್ತ್ರವನ್ನೂ, ವ್ಯಾಕರಣಶಾಸ್ತ್ರವನ್ನೂ ಬಳಸಿಕೊಂಡು, ಅವೆಲ್ಲದರ ಸಹಾಯದಿಂದ ಸೋದಾಹರಣವಾಗಿಯೂ, ಸ್ಪಷ್ಟವಾಗಿಯೂ, ವೇದಾರ್ಥವು ಹೇಳಲ್ಪಡುತ್ತದೆ.
ನನು ಕೋऽಯಂ ವೇದೋ ನಾಮ, ಕಿಂ ಚ ತಲ್ಲಕ್ಷಣಂ, ಕೇ ವಾ ತಸ್ಯ ವಿಷಯಸಂಬಂಧಪ್ರಯೋಜನಾಧಿಕಾರಿಣ:, ಕಥಂ ವಾ ತಸ್ಯ ಪ್ರಾಮಾಣ್ಯಂ, ನ ಖಲ್ವೇತಸ್ಮಿನ್ಸರ್ವಸ್ಮಿನ್ನಸತಿ ವೇದೋ ವ್ಯಾಖ್ಯಾನಯೋಗ್ಯೋ ಭವತಿ|
‘ಅಯಂ ವೇದ: ನಾಮ ಕ:?’ ನನು? ತಲ್ಲಕ್ಷಣಂ(ತತ್+ಲಕ್ಷಣಂ; ತಸ್ಯ ಲಕ್ಷಣಂ)ಚ ಕಿಮ್? ತಸ್ಯ ವಿಷಯಸಂಬಂಧಪ್ರಯೋಜನಾಧಿಕಾರಿಣ: ವಾ ಕೇ? ತಸ್ಯ ಪ್ರಾಮಾಣ್ಯಂ ವಾ ಕಥಮ್? ಏತಸ್ಮಿನ್ ಸರ್ವಸ್ಮಿನ್ ಅಸತಿ, ವೇದ: ವ್ಯಾಖ್ಯಾನಯೋಗ್ಯ: ನ  ಭವತಿ ಖಲು?

‘ಈ ವೇದವೆಂದರೇನು?’ ಅಲ್ಲವೇ? ಮತ್ತು ಅದರ ಲಕ್ಷಣವೇನು? ಅದರ ವಿಷಯ,ಸಂಬಂಧ, ಪ್ರಯೋಜನಕ್ಕೆ ಅಧಿಕಾರಿಗಳಾದರೋ ಯಾರು? ಅದರ ಪ್ರಾಮಾಣ್ಯ/ಪ್ರಮಾಣತ್ವ/ಅಧಿಕೃತತೆಯಾದರೋ ಹೇಗೆ/ಎಂತು? ಇವೆಲ್ಲಕ್ಕೂ ಸೂಕ್ತವಾದ ಉತ್ತರವಿರದಿದ್ದರೆ, ವೇದಕ್ಕೆ ವ್ಯಾಖ್ಯಾನ ಬರೆಯುವ ಅಗತ್ಯವಿಲ್ಲ. ಅಲ್ಲವೇ?
ಅತ್ರೋಚ್ಯತೇ - ಇಷ್ಟಪ್ರಾಪ್ತ್ಯನಿಷ್ಟಪರಿಹಾರಯೋರಲೌಕಿಕಮುಪಾಯಂ ಯೋ ಗ್ರಂಥೋ ವೇದಯತಿ ಸ ವೇದ: |
ಇದಕ್ಕೆ ಉತ್ತರ ಹೀಗಿದೆ - ಇಷ್ಟಪ್ರಾಪ್ತಿ ಹಾಗೂ ಅನಿಷ್ಟಪರಿಹಾರಗಳ ಅಲೌಕಿಕ ಉಪಾಯವನ್ನು ಯಾವ ಗ್ರಂಥವು ತಿಳಿಸುತ್ತದೋ ಅದೇ ವೇದ.
ಅಲೌಕಿಕಪದೇನ ಪ್ರತ್ಯಕ್ಷಾನುಮಾನೇ ವ್ಯಾವರ್ತೇತೇ |
‘ಅಲೌಕಿಕ’ ಪದದಿಂದ  ಪ್ರತ್ಯಕ್ಷ ಹಾಗೂ ಅನುಮಾನಗಳೆರಡೂ ಉದ್ದೇಶಿತವಾಗಿವೆ.
ಅನುಭೂಯಮಾನಸ್ರಕ್ಚಂದನವನಿತಾದೇರಿಷ್ಟಪ್ರಾಪ್ತಿಹೇತುತ್ವಮೌಷಧಸೇವಾದೇರನಿಷ್ಟಪರಿಹಾರಹೇತುತ್ವಂ ಚ ಪ್ರತ್ಯಕ್ಷತ: ಸಿದ್ಧಮ್ |
ಅನುಭವಿಸಲ್ಪಡುವ ಪುಷ್ಪಮಾಲಾಲಂಕೃತ, ಚಂದನಾದಿಭೂಷಿತ ವನಿತಾ(ಪತ್ನಿ)ದಿಗಳು ಸಂತಾನಾದಿ ಇಷ್ಟಪ್ರಾಪ್ತಿಗೋಸ್ಕರ, ಮತ್ತು ಔಷಧಸೇವನಾದಿಗಳು ರೋಗಾದಿ ಅನಿಷ್ಟಪರಿಹಾರಕ್ಕಾಗಿ - ಎಂಬುದು ಪ್ರತ್ಯಕ್ಷತ: ಸಿದ್ಧವಾದ ಫಲಗಳು.
ಸ್ವೇನಾನುಭವಿಷ್ಯಮಾಣಸ್ಯ ಪುರುಷಾಂತರಗತಸ್ಯ ಚ ತಥಾತ್ವಮನುಮಾನಗಮ್ಯಮ್ |
ತನ್ನಿಂದ ಹಾಗೂ ಇತರ ಪುರುಷ(ಪುರ/ದೇಹದಲ್ಲಿರುವವ ಪುರುಷ, ಜೀವಾತ್ಮ)ರಿಂದ ಭವಿಷ್ಯದಲ್ಲಿ ಅನುಭವಿಸಲ್ಪಡುವಂಥದ್ದು ಹೀಗೆಯೇ ಇರಬಹುದೆಂಬುದು ಅನುಮಾನ/ಊಹಿಸುವ ವಿಷಯ.
ಏವಂ ತರ್ಹಿ ಭಾವಿಜನ್ಮಗತಸುಖಾದೀನಾಮಪ್ಯನುಮಾನಗಮ್ಯತೇತಿ ಚೇತ್ |
ಹೀಗಿದ್ದರೆ, ಮುಂದಿನ ಜನ್ಮದ ಸುಖಾದಿಗಳೂ ಕೂಡ ಅನುಮಾನದ ವಿಷಯವೇ.
ನ ತದ್ವಿಶೇಷಸ್ಯಾನವಗಮಾತ್ |
ಅದು ತಿಳಿಯದೇ ಇರುವುದು ವಿಶೇಷವೇನಲ್ಲ.
ನ ಖಲು ಜ್ಯೋತಿಷ್ಟೋಮಾದಿರಿಷ್ಟಪ್ರಾಪ್ತಿಹೇತು: ಕಲಂಜಭಕ್ಷಣವರ್ಜನಾದಿರನಿಷ್ಟಪರಿಹಾರಹೇತುರಿತ್ಯಮುಮರ್ಥಂ ವೇದವ್ಯತಿರೇಕೇಣಾನುಮಾನಸಹಸ್ರೇಣಾಪಿ ತಾರ್ಕಿಕಶಿರೋಮಣಿರಪ್ಯನುಮಾತುಂ ಶಕ್ನೋತಿ |
ಜ್ಯೋತಿಷ್ಟೋಮಾದಿ ಯಾಗಗಳು ಇಷ್ಟಪ್ರಾಪ್ತಿಗೆ ಕಾರಣ, ಮಾಂಸಭಕ್ಷಣವರ್ಜನಾದಿಗಳು ಅನಿಷ್ಟಪರಿಹಾರಹೇತು - ಎಂಬ ಈ ಅರ್ಥವನ್ನು, ವೇದವ್ಯತಿರಿಕ್ತವಾದ ಅನುಮಾನಸಹಸ್ರಗಳಿಂದಲೂ ತಾರ್ಕಿಕಶಿರೋಮಣಿಯೂ ಕೂಡ ಅನುಮಾನಿಸಲು ಶಕ್ತರಲ್ಲವಲ್ಲವೇ?
ತಸ್ಮಾದಲೌಕಿಕೋಪಾಯಬೋಧಕೋ ವೇದ ಇತಿ ನ ಲಕ್ಷಣಸ್ಯಾತಿನಿಷ್ಪತ್ತಿ: |
ಆದ್ದರಿಂದ, ವೇದವು ಅಲೌಕಿಕೋಪಾಯಬೋಧಕವು ಎಂಬುದು ವೇದಲಕ್ಷಣದ ಬಗೆಗಿನ ಅತಿಶಯೋಕ್ತಿಯಲ್ಲ.
ಅಥ ಏವೋಕ್ತಮ್ -
“ಪ್ರತ್ಯಕ್ಷೇಣಾನುಮಿತ್ಯಾ ವಾ ಯಸ್ತೂಪಾಯೋ ನ ಬುಧ್ಯತೇ |
ಏನಂ ವಿದಂತಿ ವೇದೇನ ತಸ್ಮಾದ್ವೇದಸ್ಯ ವೇದತಾ ||” ಇತಿ |
ಪ್ರತ್ಯಕ್ಷವಾಗಿಯಾಗಲೀ, ಅನುಮಾನದಿಂದಲಾಗಲೀ ಯಾವ ಸಮಸ್ಯೆಗೆ ಪರಿಹಾರ ತಿಳಿಯುವುದಿಲ್ಲವೋ, ಅದನ್ನು ವೇದದಿಂದ ಪಡೆಯುತ್ತಾರೆ. ಆದ್ದರಿಂದಲೇ ವೇದಕ್ಕೆ ವೇದತ್ವ. (ವೇದ ಎಂದರೆ ಜ್ಞಾನ)
ಸ ಏವೋಪಾಯೋ ವೇದಸ್ಯ ವಿಷಯ: | ತದ್ಬೋಧ ಏವ ಪ್ರಯೋಜನಮ್ |
ಆ ಉಪಾಯವೇ ವೇದದ ವಿಷಯ. ಅದರ ತಿಳುವಳಿಕೆಯೇ ವೇದದ ಪ್ರಯೋಜನ.

  

   

    

Comments

Popular posts from this blog

ಲಘುನ್ಯಾಸದ ಬೆಳಕಿನಲ್ಲಿ ಶಿವದರ್ಶನ ೧೩—ಲಘುನ್ಯಾಸಮನ್ತ್ರಾರ್ಥವಿಚಾರ ೮

ಲಘುನ್ಯಾಸದ ಬೆಳಕಿನಲ್ಲಿ ಶಿವದರ್ಶನ ೯—ಲಘುನ್ಯಾಸಮಂತ್ರಾರ್ಥವಿಚಾರ ೪

ತೈತ್ತಿರೀಯಕೃಷ್ಣಯಜುಸ್ಸಂಹಿತಾಭಾಷ್ಯಾರ್ಥಸಮುಚ್ಚಯಃ ೧.೧.೪