ಲಘುನ್ಯಾಸದ ಬೆಳಕಿನಲ್ಲಿ ಶಿವದರ್ಶನ ೫— ರುದ್ರಾಧ್ಯಾಯಮಾಹಾತ್ಮ್ಯ

ರುದ್ರಾಧ್ಯಾಯಮಾಹಾತ್ಮ್ಯ

೧) ನಮಸ್ಕಾರ-ಮಂಗಲ-ಪ್ರಾರ್ಥನೆ


ಯತ್ಸತ್ಯೇನ ಜಗತ್ಸತ್ಯಂ ಯತ್ಪ್ರಕಾಶೇನ ಭಾತಿ ತತ್ |
ಯದಾನನ್ದೇನ ನನ್ದನ್ತಿ ತಸ್ಮೈ ಶ್ರೀಗುರವೇ ನಮಃ ||

ಯಾವ ಏಕಮೇವ ಸತ್ಯದಿಂದ (ಸತ್ತೆಯಿಂದ / ಅಸ್ತಿತ್ವದಿಂದ / ಇರುವಿಕೆಯಿಂದ) ಈ ಜಗತ್ತೇ ಸತ್ಯವಾಗಿ (ಸತ್ ಆಗಿ / ಭಗವಂತನರೂಪವೇ ಆಗಿ) ಗೋಚರಿಸುವುದೋ ಅಥವಾ ಯಾವ ಸತ್ಯಸ್ವರೂಪನಾದ ಗುರುವಿನಿಂದ ಈ ಜಗತ್ತಿನ ಕುರಿತು ಯಥಾರ್ಥಜ್ಞಾನವು ನಮಗೆ ಉಂಟಾಗುವುದೋ, ಯಾವನ ಜ್ಞಾನಪ್ರಭೆಯಿಂದ ಇದೆಲ್ಲವೂ ಬೆಳಗುವುದೋ, ಯಾವ ಪರಮಾನಂದದಿಂದ (ಬ್ರಹ್ಮಾನಂದದಿಂದ / ಆತ್ಮಾನಂದದಿಂದ / ನಿತ್ಯಾನಂದದಿಂದ) ಸಮಸ್ತಜೀವಕೋಟಿಗಳೂ ತಮ್ಮ ಕಷ್ಟ-ನೋವುಗಳನ್ನೆಲ್ಲ ಕಳೆದುಕೊಂಡು ಆನಂದತುಂದಿಲರಾಗುವರೋ ( ಹರ್ಷಾತಿರೇಕದಿಂದ ಪುಳಕಿತರಾಗುವರೋ / ಬ್ರಹ್ಮಾನಂದವನ್ನೇ ಪಡೆಯುವರೋ), ಅಂತಹ ಅಖಂಡಮಂಡಲಾಕಾರನೂ, ಸಕಲಚರಾಚರವ್ಯಾಪ್ತನೂ, ಪರಮಾತ್ಮಪದದರ್ಶನವನ್ನುಂಟುಮಾಡುವವನೂ ಆದ ಪರಮಾತ್ಮನ ಆ ಗುರುಮೂರ್ತಿಗೆ (ಸದ್ಗುರುವಿನ ಸ್ವರೂಪಕ್ಕೆ / ದಕ್ಷಿಣಾಮೂರ್ತಿರೂಪಕ್ಕೆ / ತ್ರಿಮೂರ್ತಿರೂಪೀದತ್ತನಿಗೆ / ಜಗದ್ಗುರು ಕೃಷ್ಣನಿಗೆ / ಶಂಕರ-ರಾಮಾನುಜ-ಮಧ್ವಾದಿ ಸಕಲಗುರುಪರಂಪರೆಗೆ) ನಮಸ್ಕಾರ.

ಅಭೀಪ್ಸಿತಾರ್ಥಸಿಧ್ಯರ್ಥಂ ಪೂಜಿತೋ ಯಸ್ಸುರೈರಪಿ |
ಸರ್ವವಿಘ್ನಚ್ಛಿದೇ ತಸ್ಮೈ ಗಣಾಧಿಪತಯೇ ನಮಃ ||

ಬಯಸಿದ ಸಮಸ್ತದ ಸಿದ್ಧಿಗಾಗಿ, ದೇವಾನುದೇವತೆಗಳಿಂದಲೂ ಯಾರು ಪೂಜಿತನಾಗಿರುವನೋ, ಅಂತಹ ಸರ್ವವಿಘ್ನಗಳ ಛೇದಕನಾದ ಮಹಾಗಣಪತಿಗೆ ನಮನಗಳು.

ಹರ ಶಮ್ಭೋ ಮಹಾದೇವ ವಿಶ್ವೇಶಾಮರವಲ್ಲಭ |
ಶಿವ ಶಂಕರ ಸರ್ವಾತ್ಮನ್! ನೀಲಕಣ್ಠ ನಮೋऽಸ್ತುತೇ ||

ಸಕಲಾರ್ತಿಹರನಾದ ಹರನೆ! ಮಂಗಲಾವತಾರನಾದ ಶಂಭುವೆ!! ದೇವಾಧಿದೇವನಾದ ಮಹಾದೇವನೆ!!! ಎಲ್ಲದರ ಒಡೆಯನಾದ ವಿಶ್ವೇಶನೆ, ವಿಶ್ವನಾಥನೆ!!!! ಮರಣವಿಲ್ಲದ ಸಕಲ ಅಮರರ (ದೇವತೆಗಳ) ಒಡೆಯನೆ! ಮಂಗಲಸ್ವರೂಪಿಯಾದ ಶಿವನೆ!! ಮಂಗಲಕರನಾದ ಶಂ-ಕರನೆ!! ಲೋಕದ ಕಷ್ಟಗಳೆಂಬ ವಿಷವನ್ನುಂಡು ನೀಲಿಕುತ್ತಿಗೆಯುಳ್ಳ ನೀಲಕಂಠನೆ!!! ಸಕಲ ಜೀವರೊಳಗಿನ ಅಂತರಾತ್ಮನಾದ ಸರ್ವಾತ್ಮನೆ!!!! ನಿನಗೆ ನಮಸ್ಕಾರವಿರಲಿ.

ನಮಶ್ಶಿವಾಯ ಸಾಮ್ಬಾಯ ಸಗಣಾಯ ಸಸೂನವೇ |
ಸನನ್ದಿನೇ ಸಗಙ್ಗಾಯ ಸಚನ್ದ್ರಾಯ ನಮೋ ನಮಃ ||

ಜಗದಂಬೆಯಾದ ಪಾರ್ವತೀಸಮೇತನಾದ, ೩೨ಕೋಟಿ ಪ್ರಮಥಗಣಸಹಿತನಾದ, ಗಣೇಶ-ಸ್ಕಂದರೆಂಬ ಮಕ್ಕಳ ಸಹಿತನಾದ, ನಂದೀವಾಹನಸಮೇತನಾದ, ಗಂಗಾಧರನಾದ, ಚಂದ್ರಶೇಖರನಾದ ಪರಶಿವನಿಗೆ ಮತ್ತೆ ಮತ್ತೆ ನಮಸ್ಕಾರಗಳು, ವಂದನೆಗಳು, ಪ್ರಣತಿಗಳು.

ಉಮಾಮಹೇಶ್ವರಂ ವನ್ದೇ ಗುರುಂ ತಂ ಕುಲದೈವತಮ್ |
ಇಷ್ಟದೈವಂ ಹರಿಂ ವನ್ದೇ ಜನ್ಮಸಾಫಲ್ಯಸಿದ್ಧಯೇ ||

ಜ್ಞಾನಗುರುವಾದ ಹಾಗೂ ನನ್ನ ಕುಲದೇವರೂ ಆದ ಉಮಾಮಹೇಶ್ವರನನ್ನು ವಂದಿಸುತ್ತೇನೆ. ಹಾಗೆಯೇ, ನನ್ನ ಇಷ್ಟದೈವವಾದ ಶೇಷಶಯನನಾದ ಶ್ರೀಮನ್ನಾದಿನಾರಾಯಣನನ್ನೂ ವಂದಿಸುತ್ತೇನೆ. ಇವರೀರ್ವರನ್ನೂ ನನ್ನ ಈ ಜನ್ಮದ ಸಫಲತೆಯ ಸಿದ್ಧಿಗಾಗಿ ಶರಣುಹೊಂದುತ್ತೇನೆ.

ಹರೀಶೇಶ-ಹರಿ-ಸ್ಕನ್ದ-ದುರ್ಗಾರ್ಯಗಣಪಾತ್ಮನಾ |
ಮೂರ್ತಿಭೇದೇನ ಪೂಜ್ಯಾಯ ಬ್ರಹ್ಮಣೇ ಪರಮಾತ್ಮನೇ ||

ಹರೀಶ (ಕಪೀಶ)ನಾದ, ವಾಯುನಂದನನಾದ, ಕೇಸರೀತನಯನಾದ, ಅಂಜನಾಶೋಕನಾಶಕನಾದ ಆಂಜನೇಯ (ಹನೂಮಂತ), ಈಶ (ಶಿವ), ಹರಿ (ವಿಷ್ಣು), ಸ್ಕಂದ (ಸುಬ್ರಹ್ಮಣ್ಯ), ದುರ್ಗೆ, ಆರ್ಯ (ಅಯ್ಯಪ್ಪ / ಶಾಸ್ತಾರ / ಹರಿಹರ), ಗಣಪತಿ— ಹೀಗೆ ವಿಭಿನ್ನ ರೂಪಗಳನ್ನು ತಾಳಿದ ಸರ್ವಪೂಜ್ಯನಾದ ಪರಬ್ರಹ್ಮ ಪರಮಾತ್ಮ ಸರ್ವಮೂಲಶಕ್ತಿಗೆ ಶರಣು ಶರಣು.

ದೇಹೋ ದೇವಾಲಯಃ ಪ್ರೋಕ್ತೋ ಜೀವೋ ದೇವಸ್ಸದಾಶಿವಃ |
ತ್ಯಜೇದಜ್ಞಾನನಿರ್ಮಾಲ್ಯಂ ಸೋऽಹಂಭಾವೇನ ಪೂಜಯೇತ್ ||

ಈ ನಮ್ಮ ದೇಹವೇ ದೇವಾಲಯವೆಂದೂ, ಜೀವವೇ (ಆತ್ಮವೇ) ದೇವನಾದ ಸದಾಶಿವ (ಪರಮಾತ್ಮ)ನೆಂದೂ ಪ್ರೋಕ್ತವಾಗಿದೆ (ಜ್ಞಾನಿಗಳಿಂದ ಹೇಳಲ್ಪಟ್ಟಿದೆ). ಹೀಗಾಗಿ, ನಾನಾರೀತಿಯ ಮಾಯಾರೂಪೀ ಅಜ್ಞಾನ-ಭ್ರಾಂತಿಗಳೆಂಬ ಕೊಳೆಯನ್ನು ತ್ಯಜಿಸಿ, ನಮ್ಮೊಳಗೇ ಅಂತರ್ಯಾಮಿಯಾಗಿ ನೆಲೆಸಿರುವ ಅವನೇ ನಾನೆಂಬ ಆತ್ಮವೆಂಬ ಭಾವದಿಂದ ಪೂಜಿಸಬೇಕು.

ವನ್ದೇ ಶಮ್ಭುಮುಮಾಪತಿಂ ಸುರುಗುರುಂ ವನ್ದೇ ಜಗತ್ಕಾರಣಂ
ವನ್ದೇ ಪನ್ನಗಭೂಷಣಂ ಮೃಗಧರಂ ವನ್ದೇ ಪಶೂನಾಂಪತಿಮ್ |
ವನ್ದೇ ಸೂರ್ಯಶಶಾಙ್ಕವಹ್ನಿನಯನಂ ವನ್ದೇ ಮುಕುನ್ದಪ್ರಿಯಂ
ವನ್ದೇ ಭಕ್ತಜನಾಶ್ರಯಂ ಚ ವರದಂ ವನ್ದೇ ಶಿವಂ ಶಙ್ಕರಮ್ ||

ಶಂಭುವನ್ನು, ಉಮಾಪತಿಯನ್ನು ವಂದಿಸುತ್ತೇನೆ. ದೇವತೆಗಳ ಮೂಲಜನಕನೂ ಸುರಶ್ರೇಷ್ಠನೂ, ಜಗತ್ತಿಗೇ ಕಾರಣನೂ ಆದ ಸದಾಶಿವನನ್ನು ವಂದಿಸುತ್ತೇನೆ. ನಾಗಾಭರಣನೂ, ನಂದೀವಾಹನನಾದ (ಮೃಗಜಾತಿಯ ಗಜದ ಚರ್ಮವನ್ನು ವಸನವಾಗಿ ಧರಿಸಿದ / ಮೃಗನಾಮಕ ಯಜ್ಞಧಾರಕನಾದ / (ಮೃಗ = ಯಾಚನೆ) ಕಪಾಲ ಅಥವಾ ಭಿಕ್ಷಾಪಾತ್ರೆಯನ್ನು ಧರಿಸಿದ) ಪರಶಿವನನ್ನು ವಂದಿಸುತ್ತೇನೆ. ಕರ್ಮಪಾಶಗಳಿಂದ ಪಾಂಚಭೌತಿಕ ದೇಹದೊಳಗೆ ಬಂಧಿತರಾಗಿ ಪಶುಗಳೆನಿಸಿದ ಜೀವರ ಒಡೆಯನಾಗಿ ಪಶುಪತಿಯೆನಿಸಿದ ಶಂಭುವನ್ನು ವಂದಿಸುತ್ತೇನೆ. ಸೂರ್ಯಚಂದ್ರಾಗ್ನಿಗಳನ್ನು ತನ್ನ ಬಲ-ಎಡ-ಹಣೆಗಣ್ಣುಗಳಾಗಿ ಹೊಂದಿದ ಮುಕ್ಕಣ್ಣ ಶಿವನನ್ನು ವಂದಿಸುತ್ತೇನೆ. ವಿಷ್ಣುವಿಗೆ ಅತಿಪ್ರಿಯನಾದ ಶಂಕರನನ್ನು ನಮಿಸುತ್ತೇನೆ. ತನ್ನ ಭಕ್ತಜನರಿಗೆ ಬೇಡಿದ ವರ ನೀಡುವ ಮೂಲಕ ಆಶ್ರಯಸ್ಥಾನವಾದ ಉಮಾಮಹೇಶ್ವರನನ್ನು ನಮಸ್ಕರಿಸುತ್ತೇನೆ. ಹಾಗೂ, ಲೋಕಮಂಗಲಕರನಾಗಿ ಶಿವನೆನಿಸಿದ, ಶಂ-ಕರ (ಶಂ― ಮಂಗಲ)ನೆನಿಸಿದ ಭಗವಂತನನ್ನು ತ್ರಿಕರಣಪೂರ್ವಕ ಭಕ್ತಿಶ್ರದ್ಧಾದರಾತಿಶಯಗಳಿಂದ ಪ್ರಣಾಮ ಮಾಡುತ್ತೇನೆ.

{“ಶಂ ಮಙ್ಗಲಂ ಭವತಿ ಅಸ್ಮಾತ್ ಇತಿ ಶಮ್ಭುಃ”, “ಸುಖಸ್ಯ ಭಾವಯಿತಾ ಶಮ್ಭುಃ”— “ಮಂಗಲವು ಇವನಿಂದಾಗಿ ಎಂಬುದರಿಂದ ಶಿವನು ಶಂಭುವೆನಿಸಿರುವನು”, “ಸುಖದ ಭಾವನೆಯನ್ನು (ಅನುಭವವನ್ನು) ಉಂಟುಮಾಡುವವನು ಶಂಭುವು”. ಕಶ್ಯಪ-ಸುರಭಿಯರ ಪುತ್ರನಾದ ತ್ವಷ್ಟೃವಿನ ಮಗ ವಿಶ್ವರೂಪ. ಈ ವಿಶ್ವರೂಪನ ೧೪ ಮಕ್ಕಳಲ್ಲಿ ಹರ, ಬಹುರೂಪ, ತ್ರ್ಯಂಬಕ, ಅಪರಾಜಿತ, ವೃಷಾಕಪಿ, ಶಂಭು, ಕಪರ್ದೀ, ರೈವತ, ಮೃಗವ್ಯಾಧ, ಸರ್ಪ ಮತ್ತು ಕಪಾಲೀ— ಎಂಬ ೧೧ ಮಕ್ಕಳು ಏಕಾದಶರುದ್ರರೆನಿಸಿದರೆಂದು ಅಗ್ನಿಪುರಾಣ ದ ೧೮ನೆಯ ಅಧ್ಯಾಯದಲ್ಲಿದೆ.}

೨) ಲಿಂಗ— ಶಬ್ದದ ಅರ್ಥವನ್ನು ಹೇಗೆ ವಿವರಿಸಲಾಗಿದೆ?


“ಲೀನಂ ಗಮಯತಿ ಇತಿ ಲಿಙ್ಗಮ್”

ಎಲ್ಲವೂ ಯಾವುದರಲ್ಲಿ ಲೀನವಾಗುತ್ತದೋ ಅದು ಲಿಂಗ.

“ಸೂಕ್ಷ್ಮತ್ವಾತ್ ಲಿಙ್ಗಮುಚ್ಯತೇ”

ಅದು ಅಣುವಿಗಿಂತಲೂ ಅಣುವಾಗಿ ಸೂಕ್ಷ್ಮತಮವಾಗಿ ಅವ್ಯಕ್ತವೂ ಇಂದ್ರಿಯಗ್ರಾಹ್ಯವಲ್ಲದುದೂ ಆಗಿರುವುದರಿಂದಲೂ ಕೇವಲ ಚಿಹ್ನೆ, ಗುರುತು, ಸೂಚಕ, ಸಂಕೇತ ಎಂಬರ್ಥದಲ್ಲೂ ಲಿಂಗವೆಂದು ಕರೆಯಲ್ಪಟ್ಟಿದೆ.

ಹಿಮಾಲಯಪರ್ವತವನ್ನೇ ಶಿವನಾಗಿ ಕಲ್ಪಿಸಿದಾಗ, ಅದರ ಪ್ರವೇಶದ್ವಾರವಾದ “ಹರದ್ವಾರ (ಈಗಿನ ಹರಿದ್ವಾರ)” ವೇ ಶಿವನನ್ನು ತಲುಪಲು ಇರುವ ಮಾರ್ಗವೂ, ಗಂಗಾನದಿಯ ಭೌತಿಕ ಉತ್ಪತ್ತಿಯೂ, ಆರಂಭಿಕ ಹರಿವೂ ಇಂತಹ ಶಿವರೂಪೀ ಹಿಮಾಲಯದಲ್ಲೇ ಆಗಿರುವುದರಿಂದ ಶಿವನು ಗಂಗಾಧರನಾದುದನ್ನೂ ಅರ್ಥೈಸಬಹುದು. ಬಹುಶಃ ಹಿಮಾಲಯದ ಸೂಕ್ಷ್ಮರೂಪವೇ ಶಿವಲಿಂಗರೂಪ.

೩) ಶಿವ ಎಂಬ ಶಬ್ದದ ರಹಸ್ಯಾರ್ಥವೇನು?


ಶೇತೇ ಇತಿ ಶಿವಃ (ಶೀಙ್ ಸ್ವಪ್ನೇ ಧಾತುಃ)

ಕಣ್ಣು ಮುಚ್ಚಿ ಸದಾ ಆತ್ಮಧ್ಯಾನಮಗ್ನನಾಗಿರುವವನೇ ಶಿವನು.

ಶ್ರಯತೇ ಸರ್ವೈಃ ಏಷಃ ಇತಿ ಶಿವಃ (ಶ್ರಿಞ್ ಸೇವಾಯಾಮ್ ಧಾತುಃ)

ಎಲ್ಲವೂ ಯಾವುದರಲ್ಲಿ, ಯಾವನಲ್ಲಿ ಆಶ್ರಿತವೋ, ಯಾರನ್ನು ಆಶ್ರಯಿಸಿ ಎಲ್ಲವೂ ಇರುವುದೋ, ಯಾರನ್ನು ಸೇರಿ ಲೀನವಾಗಿ ಸರ್ವವೂ ಇದೆಯೋ, ಅದೇ, ಅವನೇ ಶಿವ. ಪಾಪಹರನಾಗಿ ಹರ. ಹರ, ಹರಿ ಇವೆರಡು ಶಬ್ದಗಳಿಗೂ “ಹೃಞ್ ಹರಣೇ (ಹರಿಸು)” ಎಂಬ ಒಂದೇ ಧಾತು ಮೂಲ. “ಈಶ್ವರಃ ಸರ್ವಭೂತಾನಾಮ್”— ಎಂಬುದರಿಂದ ಸಕಲಭೂತಗಣಗಳ (ಸೃಷ್ಟಿಯ) ನಾಥನಾದ ಶಿವನೇ ಭೂತನಾಥ. ಭೌತಿಕ(ಶಾರೀರಿಕ)-ದೈವಿಕ-ಆಧ್ಯಾತ್ಮಿಕ ತಾಪ-ರೋಗಗಳಿಗೆ ಭವರೋಗಹರನಾದ ಶಿವನೇ “ಪ್ರಥಮೋ ದೈವ್ಯೋ ಭಿಷಕ್”— ಮೊತ್ತಮೊದಲ ದೈವಿಕವೈದ್ಯ, ವೈದ್ಯನಾಥೇಶ್ವರ. “ಈಶಾನಃ ಸರ್ವವಿದ್ಯಾನಾಮ್” ಎಂಬುದರಿಂದ ವಿದ್ಯಾಗುರುವಾಗಿ, ಜ್ಞಾನೋಪದೇಶಕನಾಗಿ ದಕ್ಷಿಣಾಮೂರ್ತಿ. ಅವಧೂತಯೋಗಿಯಾದುದರಿಂದ ಸಾಮಾನ್ಯರ ಕಣ್ಣಿಗೆ ಮರುಳಪ್ಪ, ಮರುಳಸಿದ್ಧ!! ಆತನದು ವಿಚಿತ್ರರೂಪ ಮಾತ್ರವಲ್ಲ, ಸದಾ ಭಕ್ತರನ್ನುದ್ಧರಿಸುವ ಹುಚ್ಚು ಆತನಿಗೆ!!!

೪) ಶಿವಭಕ್ತಿಭಾವದ ಪರಾಕಾಷ್ಠೆಯ ಸ್ವರೂಪವೇನು?


ಮಾ ಗಚ್ಛ ತ್ವಮಿತಸ್ತತೋ  ಗಿರಿಶ ಭೋ ಮಯ್ಯೇವ ವಾಸಂ ಕುರು
ಸ್ವಾಮಿನ್ನಾದಿಕಿರಾತ ಮಾಮಕಮನಃಕಾನ್ತಾರಸೀಮಾನ್ತರೇ |
ವರ್ತನ್ತೇ ಬಹವೋ ಮೃಗಾ ಮದಜುಷೋ ಮಾತ್ಸರ್ಯಮೋಹಾದಯ-
-ಸ್ತಾನ್ ಹತ್ವಾ ಮೃಗಯಾವಿನೋದರುಚಿತಾಲಾಭಂ ಚ ಸಂಪ್ರಾಪ್ಸ್ಯಸಿ ||
( ಸೂರ್ಯಾಶ್ವೈರ್ಮಸಜಸ್ತಥಾ ಸಗುರವಃ “ಶಾರ್ದೂಲವಿಕ್ರೀಡಿತಮ್”— ವೃತ್ತಮ್)

ಹೇ ಕೈಲಾಸವಾಸಿಯೆ! (ಭೋ ಗಿರಿಶ!), ನೀನು (ತ್ವಮ್), ಇಲ್ಲಿ ಅಲ್ಲಿ ಎಂದು ಬೇರೆಲ್ಲೂ (ಇತಃ ತತಃ), ಹೋಗಬೇಡ (ಮಾ ಗಚ್ಛ). ನೀನು ಇಲ್ಲಿಂದ ಹೋಗಬೇಡ (ತ್ವಮ್ ಇತಃ ಮಾ ಗಚ್ಛ). ಬಳಿಕ (ತತಃ), ನನ್ನಲ್ಲೇ ವಾಸಮಾಡು (ಮಯಿ ಏವ ವಾಸಂ ಕುರು). ಹೇ ಸ್ವಾಮಿಯಾದ ಆದಿಕಿರಾತನೆ! (ಸ್ವಾಮಿನ್! ಆದಿಕಿರಾತ!!), ನನ್ನ ಮನವೆಂಬ ಕಾಡಿನ ಎಲ್ಲೆಯೊಳಗೆ (ಮಾಮಕ-ಮನಃಕಾನ್ತಾರ-ಸೀಮಾನ್ತರೇ), ಮಾತ್ಸರ್ಯ ( ಮತ್ಸರಭಾವ / ಹೊಟ್ಟೆಕಿಚ್ಚು / ಇತರಿಗೆ ಒಳ್ಳೆಯದಾಗುವುದನ್ನು ದ್ವೇಷಿಸುವಿಕೆ) ಹಾಗೂ ಮೋಹ (ಅವಿದ್ಯೆ ; ದುಃಖ ;  ದೇಹಾದಿಗಳಲ್ಲಿ ತಾನು, ತನ್ನದೆಂಬ ಭಾವ ಅಥವಾ ಭ್ರಮೆ) ಮುಂತಾದ (ಮಾತ್ಸರ್ಯ-ಮೋಹಾದಯಃ), ಮದಯುಕ್ತವಾದ (ಮದಜುಷಃ), ಬಹಳಷ್ಟು ಮೃಗಗಳು (ಬಹವಃ ಮೃಗಾಃ), ಇವೆ (ವರ್ತನ್ತೇ). ಹೀಗಾಗಿ (ಚ), ಅವುಗಳನ್ನು ಕೊಂದು ನೀನು (ತಾನ್ ಹತ್ವಾ), ಬೇಟೆಯ ವಿನೋದದ ಲಾಭವನ್ನು (ಮೃಗಯಾವಿನೋದರುಚಿತಾಲಾಭಂ), ಪ್ರಾಪ್ತಿಮಾಡಿಕೊಳ್ಳುವೆ (ಸಂಪ್ರಾಪ್ಸ್ಯಸಿ).

ಗಭೀರೇ ಕಾಸಾರೇ ವಿಶತಿ ವಿಜನೇ ಘೋರವಿಪಿನೇ
ವಿಶಾಲೇ ಶೈಲೇ ಚ ಭ್ರಮತಿ ಕುಸುಮಾರ್ಥಂ ಜಡಮತಿಃ |
ಸಮರ್ಪ್ಯೈಕಂ ಚೇತಸ್ಸರಸಿಜಮುಮಾನಾಥ ಭವತೇ
ಸುಖೇನೈವ ಸ್ಥಾತುಂ ಜನ ಇಹ ನ ಜಾನಾತಿ ಕಿಮಹೋ ||
(ರಸೈ ರುದ್ರೈಶ್ಛಿನ್ನಾ ಯಮನಸಭಲಾಗಃ “ಶಿಖರಿಣೀ”— ವೃತ್ತಮ್)

ಹೇ ಉಮಾ-ನಾಥನೆ! ಗೌರೀವಲ್ಲಭನೆ!! (ಉಮಾನಾಥ!), ಅತಿಗಂಭೀರವೂ ಅಗಾಧವೂ ಆದ (ಗಭೀರೇ— “ಗಚ್ಛತಿ ಜಲಮ್ ಅತ್ರ ಇತಿ ಗಭೀರಮ್, ತಸ್ಮಿನ್”— ಇಳಿಜಾರಾದ / ತಗ್ಗಾದ / ಆಳವಾದ ಪ್ರದೇಶದಲ್ಲಿ), ಕಾಸಾರದಲ್ಲಿ (ಕಾಸಾರೇ— “ಕಸ್ಯ ಜಲಸ್ಯ ಆಸಾರೋ ಯತ್ರ, ಕಾಸಂ ಶಬ್ದಂ ಋಚ್ಛತಿ ಪ್ರಾಪ್ನೋತಿ ಜಲ-ಗಮನಪತನಾದಿ ಕಾಲೇ ವಾ ಇತಿ ಕಾಸಾರಃ, ತಸ್ಮಿನ್”— ನೀರಿನ ಧಾರೆ ಎಲ್ಲಿಯೋ ಅದು ಅಥವಾ ನೀರಿನ ಹರಿಯುವಿಕೆ / ಮೇಲಿಂದ ಕೆಳಕ್ಕೆ ಧುಮುಕುವಿಕೆ / ಸುರಿಯುವಿಕೆ ಯ ಕಾಲದಲ್ಲಿ ಶಬ್ದವನ್ನುಂಟುಮಾಡುವಂಥದ್ದು ಕಾಸಾರ, ಅದರಲ್ಲಿ / ಸರೋವರದಲ್ಲಿ / ಜಲಾಶಯದಲ್ಲಿ / ಜಲಪಾತದಲ್ಲಿ / ಜಲಧಾರೆಯಲ್ಲಿ) ಯಾವ ಮಂದಬುದ್ಧಿಯು (ದಡ್ಡನು—ಜಡಮತಿಃ), ನಿನ್ನ ಪೂಜೆಗೆ ಹೂವಿಗಾಗಿ (ಕುಸುಮಾರ್ಥಮ್),  ಪ್ರವೇಶಿಸುತ್ತಾನೋ (ವಿಶತಿ), ಶಿವಪೂಜೆಗೆ ಬೇಕಾದ ಹೂವುಗಳಿಗಾಗಿ ನಿರ್ಜನವೂ (ವಿಜನೇ), ಗಹನವೂ ಆದ ಘೋರಾರಣ್ಯದಲ್ಲಿ (ಘೋರವಿಪಿನೇ), ಹಾಗೂ (ಚ), ವಿಶಾಲವೂ ವಿಸ್ತಾರವೂ ಆದ ಪರ್ವತ-ಶಿಖರಗಳಲ್ಲಿ ಪರಿಭ್ರಮಿಸುತ್ತಾನೋ (ಸುತ್ತಾಡುತ್ತಾನೋ) ಅಂತಹ ವ್ಯಕ್ತಿಯು (ಜನಃ), ನಿನ್ನಲ್ಲೇ ಏಕಾಗ್ರವಾದ ಮನಸ್ಸೆಂಬ ತಾವರೆಹೂವನ್ನು ನಿನಗೆ ಸಮರ್ಪಿಸಿ (ಏಕಂ ಚೇತಃ-ಸರಸಿಜಂ ಭವತೇ ಸಮರ್ಪ್ಯ), ಈ ಜಗದಲ್ಲಿ (ಇಹ), ಅಷ್ಟರಿಂದಲೇ ಸುಖವಾಗಿ ಇರಲು ಸಾಧ್ಯವೆಂದು (ಸುಖೇನ ಏವ ಸ್ಥಾತುಮ್), ತಿಳಿಯದಿರುವುದು (ನ ಜಾನಾತಿ), ಏನಾಶ್ಚರ್ಯವಿದು!! (ಕಿಮ್ ಅಹೋ!!). ಅರ್ಥಾತ್, ಶಿವನಿಗೆ ಬಾಹ್ಯಾಡಂಬರ ಬೇಡ. ಅವೆಲ್ಲ ಇದ್ದರೂ ಚಿತ್ತತನ್ಮಯತೆ ಇಲ್ಲದಿದ್ದರೆ ಎಲ್ಲವೂ ವ್ಯರ್ಥ. ಕೇವಲ ಚಿತ್ತೈಕಾಗ್ರ ಶಿವಧ್ಯಾನವೊಂದರಿಂದಲೇ (ಶಿವನ ಚರಿತ್ರೆ-ಲೀಲಾ-ಭಜನೆ-ಸ್ತೋತ್ರಾದಿಗಳಲ್ಲಿ ಮಗ್ನನಾಗಿರುವುದರಿಂದಲೇ) ಆತನು ಪ್ರಸನ್ನನಾಗಿ ಇಹಪರಸೌಖ್ಯವನ್ನೀಯುವನು.

ಕ್ರೀಡಾರ್ಥಂ ಸೃಜಸಿ ಪ್ರಪಞ್ಚಮಖಿಲಂ ಕ್ರೀಡಾಮೃಗಾಸ್ತೇ ಜನಾ
ಯತ್ಕರ್ಮಾಚರಿತಂ ಮಯಾ ಚ ಭವತಃ ಪ್ರೀತ್ಯೈ ಭವತ್ಯೇವ ತತ್ |
ಶಮ್ಭೋ ಸ್ವಸ್ಯ ಕುತೂಹಲಸ್ಯ ಕರಣಂ ಮಚ್ಚೇಷ್ಟಿತಂ ನಿಶ್ಚಿತಂ
ತಸ್ಮಾನ್ಮಾಮಕರಕ್ಷಣಂ ಪಶುಪತೇ ಕರ್ತವ್ಯಮೇವ ತ್ವಯಾ ||
(“ಸೂರ್ಯಾಶ್ವೈರ್ಮಸಜಸ್ತಥಾ ಸಗುರವಃ ಶಾರ್ದೂಲವಿಕ್ರೀಡಿತಮ್”— ವೃತ್ತಮ್)

ಹೇ ಶಂಭೋ! (ಶಮ್ಭೋ), ಅಖಿಲ ವಿಶ್ವವನ್ನು (ಅಖಿಲಂ ಪ್ರಪಞ್ಚಮ್), ನಿನ್ನ (ತೇ / ತವ), ಆಟಕ್ಕಾಗಿ (ವಿನೋದಕ್ಕಾಗಿ) ನೀನು ಸೃಜಿಸುವೆ (ಕ್ರೀಡಾರ್ಥಂ ಸೃಜಸಿ). ಲೋಕದ ಮಂದಿಯೆಲ್ಲ (ಜನಾಃ), ನಿನ್ನ ಆಟದ ಮೃಗಗಳು (ಕ್ರೀಡಾಮೃಗಾಃ). ಅಂತೆಯೇ (ಚ), ನನ್ನಿಂದ (ಮಯಾ), ಏನೆಲ್ಲ ಕರ್ಮವು ಮಾಲ್ಪಡುತ್ತದೆಯೋ (ಯತ್ ಕರ್ಮ ಆಚರಿತಂ ಮಯಾ), ಅದೆಲ್ಲವೂ (ತತ್), ನಿನ್ನ ಪ್ರೀತಿಗಾಗಿಯೇ ಆಗಿರುತ್ತದೆ (ಭವತಃ ಪ್ರೀತ್ಯೈ ಏವ ಭವತಿ). ನಾನು ಮಾಡುವ ಚೇಷ್ಟಿತಗಳೆಲ್ಲವೂ / ಕರ್ಮಗಳೆಲ್ಲವೂ (ಮತ್-ಚೇಷ್ಟಿತಮ್), ಕ್ರೀಡಾರತನಾದ ನಿನ್ನ ಕೇವಲವಾದ ಕುತೂಹಲದ  (ಉತ್ಸುಕತೆಯ) ಫಲವೇ ಆಗಿದೆಯೇ ಹೊರತು ಬೇರೇನಲ್ಲ, ನನ್ನದೇನೂ ಇಲ್ಲ (ಸ್ವಸ್ಯ ಕುತೂಹಲಸ್ಯ ಕರಣಮ್), ಎಂಬುದು ನಿಶ್ಚಿತ (ನಿಘಂಟು ; ನಿಶ್ಚಿತಮ್). ಹಾಗಾಗಿ (ತಸ್ಮಾತ್), ಹೇ ಪಶುಪತಿಯೇ (ಪಶುಪತೇ), ನಿನ್ನಿಂದ (ತ್ವಯಾ), ನನ್ನಯ ರಕ್ಷಣೆಯು (ಮಾಮಕ-ರಕ್ಷಣಮ್), ಮಾಡಲ್ಪಡಲೇಬೇಕು (ಕರ್ತವ್ಯಮ್ ಏವ).

ಮಾರ್ಗಾವರ್ತಿತಪಾದುಕಾ ಪಶುಪತೇರಂಗಸ್ಯ ಕೂರ್ಚಾಯತೇ
ಗಣ್ಡೂಷಾಮ್ಬುನಿಷೇಚನಂ ಪುರರಿಪೋರ್ದಿವ್ಯಾಭಿಷೇಕಾಯತೇ |
ಕಿಞ್ಚಿದ್ಭಕ್ಷಿತಮಾಂಸಶೇಷಕಬಳಂ ನವ್ಯೋಪಹಾರಾಯತೇ
ಭಕ್ತಿಃ ಕಿಂ ನ ಕರೋತ್ಯಹೋ! ವನಚರೋ ಭಕ್ತಾವತಂಸಾಯತೇ ||
(ಶಂಕರಾಚಾರ್ಯಕೃತ ಶಿವಾನನ್ದಲಹರೀ- ಶ್ಲೋಕ ೬೩)
(ಶಾರ್ದ್ರೂಲವಿಕ್ರೀಡಿತವೃತ್ತಮ್)

ಶಿವನ ಮೇಲೆ ಸದಾ ಭಕ್ತಿಯು ಮನದಲ್ಲಿದ್ದರೆ, ಮಾರ್ಗದಲ್ಲಿ ನಿತ್ಯವೂ ತಿರುಗಾಡುವ (ಆವರ್ತಿಸುವ) ನನ್ನ ಕಾಲಿನ ಪಾದುಕೆ (ಪಾದರಕ್ಷೆ)ಗಳು ಆ ಪಶುಪತಿಯಾದ ಶಿವನ ಅಂಗಗಳಿಗೆ (ದೇಹಕ್ಕೆ) ಮಸಾಜು ಮಾಡಿದಂತಾಗುತ್ತದೆ ಅಥವಾ ಆತನ ಮೈಯ ಕೊಳೆಕಳೆಯುವ ಕೂರ್ಚದಂತೆ (ಬ್ರಶ್ ನಂತೆ) ವರ್ತಿಸುವುದು. ಗಂಡೂಷಾಂಬು (ಬಾಯಿಮುಕ್ಕಳಿಸಿದ ನೀರಿನ) ಸಿಂಚನವು (ಪುರರಿಪುವಿನ)ತ್ರಿಪುರಾಸುರರನ್ನು ಕೊಂದು ತ್ರಿಪುರಾರಿಯೆನಿಸಿದ ಹರನ ದಿವ್ಯವಾದ ಅಭಿಷೇಕವಾಗುತ್ತದೆ. ತಿಂದುಳಿದ ಮಾಂಸದ ಕವಳವು ಶಿವನಿಗೆ ನವೀನವಾದ ಉಪಾಹಾರವಾಗಿ ಸಮರ್ಪಿತವಾಗುವುದು. ವನದಲ್ಲಿ ಸದಾ ಸಂಚರಿಸುವ ವನವಾಸಿ ಕಾಡುಮನುಷ್ಯರೂ, ಮಾಂಸ-ಮದ್ಯಗಳನ್ನೇ ಶಿವನಿಗೆ ನಿವೇದಿಸಿದ ಬೇಡರಕಣ್ಣಪ್ಪನಂಥವರೂ, ಗುರುದ್ರುಹನಂಥ ಕ್ರೂರಿಗಳೂ ಆತನ ಅನುಗ್ರಹದಿಂದ ಭಕ್ತಶ್ರೇಷ್ಠರಾಗುತ್ತಾರೆಂದು ಇತಿಹಾಸ-ಪುರಾಣಾದಿಗಳಲ್ಲಿ ಕಂಡುಬರುವುದು. (ಶಿವಪುರಾಣದ ಗುರುದ್ರುಹನ ಕಥೆ ಮುಂದೆ ೧೮ನೆಯ ಪ್ರಶ್ನೆಯ ಉತ್ತರದಲ್ಲಿ ನೋಡಿ) ಆಹಾ!! ಏನಾಶ್ಚರ್ಯವಿದು? ಭಕ್ತಿಯೆಂಬುದು ಏನನ್ನು ತಾನೇ ಮಾಡುವುದಿಲ್ಲ? ಭಕ್ತಿಯು ಸರ್ವಾರ್ಥಸಾಧಕ, ಎಲ್ಲವನ್ನೂ ಕೊಡುವುದು ಎಂದರ್ಥ.

ಈ ಮೇಲಿನ ಶಿವಭಕ್ತಿಭಾವಪರಿಪ್ಲುತವಾದ ಪದ್ಯಗಳು ಆದಿಶಂಕರಾಚಾರ್ಯವಿರಚಿತವಾದ ಶಿವಾನನ್ದಲಹರೀ ―ಇಂದ ಆಯ್ದ ಅಣಿಮುತ್ತುಗಳು.


೫) ಶಿವಸಙ್ಕಲ್ಪಸೂಕ್ತದ ಸಾರವೇನು?


(ವಾಜಸನೇಯಿಶುಕ್ಲಯಜುರ್ವೇದಸಂಹಿತಾ ಅಧ್ಯಾಯ ೩೪, ಮಂತ್ರಶ್ಲೋಕ ೧-೬)

ಶಿವಸಙ್ಕಲ್ಪಋಷಿಃ | ವಿರಾಟ್-ತ್ರಿಷ್ಟುಪ್-ಛನ್ದಃ | ಮನೋ (ಮನೋಭಿಮಾನಿರುದ್ರೋ) ದೇವತಾ ||

ಯಜ್ಜಾಗ್ರತೋ ದೂರಮುದೈತಿ ದೈವಂ
ತದು ಸುಪ್ತಸ್ಯ ತಥೈವೈತಿ |
ದೂರಂಗಮಂ ಜ್ಯೋತಿಷಾಂ ಜ್ಯೋತಿರೇಕಂ
ತನ್ಮೇ ಮನಃ ಶಿವಸಙ್ಕಲ್ಪಮಸ್ತು || ೧ ||

ಯಾವುದು (ಯತ್), ಎಚ್ಚರವಾಗಿದ್ದಾಗ (ಜಾಗ್ರತಃ), ತನ್ನ ಕಲ್ಪನಾಲೋಕದಲ್ಲಿ ಅತ್ತಿತ್ತ ದೂರ ದೂರಕ್ಕೆ ಸಂಚರಿಸುತ್ತದೋ (ದೂರಮ್ ಉದೈತಿ), ಅದುವೇ (ತತ್ ಉ), ನಿದ್ರಿಸುತ್ತಿರುವಾಗ (ಸುಪ್ತಸ್ಯ), ಅಂತೆಯೇ (ತಥಾ ಏವ), ಹಾಗೆಯೇ ಕನಸಿನ ಲೋಕದಲ್ಲಿ ವಿಹರಿಸುತ್ತದೆ ಅಥವಾ ಹಿಂತಿರುಗಿ ಬರುತ್ತದೆ (ಏತಿ). ಹೀಗೆ, ಬಹುದೂರ ಗಮಿಸುವಂತಹ (ದೂರಂ-ಗಮಮ್), ಸಕಲ ಬೆಳಕುಗಳನ್ನು ಕಾಣಬಲ್ಲ, ಅವೆಲ್ಲಕ್ಕೂ ಮೂಲವಾದ ಏಕಮೇವವಾದ, ಬೆಳಕುಗಳಿಗೇ ಬೆಳಕಾದ (ಜ್ಯೋತಿಷಾಮ್ ಏಕಂ ಜ್ಯೋತಿಃ), ಅಂತಹ (ತತ್), ದೈವೀದತ್ತವಾದ (ದೈವಮ್), ನನ್ನ (ಮೇ / ಮಮ), ಮನಸ್ಸು (ಮನಃ), ಮಂಗಲಕರವಾದ ಸಂಕಲ್ಪ / ಚಿಂತನೆ / ಯೋಚನೆ ಗಳುಳ್ಳದ್ದಾಗಲಿ (ಶಿವ-ಸಙ್ಕಲ್ಪಮ್ ಅಸ್ತು).

ಯೇನ ಕರ್ಮಾಣ್ಯಪಸೋ ಮನೀಷಿಣೋ
ಯಜ್ಞೇ ಕೃಣ್ವನ್ತಿ ವಿದಥೇಷು ಧೀರಾಃ |
ಯದಪೂರ್ವಂ ಯಕ್ಷಮನ್ತಃ ಪ್ರಜಾನಾಂ
ತನ್ಮೇ ಮನಃ ಶಿವಸಙ್ಕಲ್ಪಮಸ್ತು || ೨ ||

ಯಾವುದರಿಂದ (ಯೇನ), ಬುದ್ಧಿವಂತರೂ / ಮನೀಷಿಗಳೂ / ಮನನಶೀಲರೂ ಆದ (ಮನೀಷಿಣಃ), ಧೀರರು / ಧೈರ್ಯಶಾಲಿಗಳು (ಧೀರಾಃ), ಯೋಗಿಗಳು / ವೇದವೇತೃಗಳು ಸೇರಿರುವ ಯಜ್ಞ-ಯಾಗಗಳಲ್ಲಿ (ವಿದಥೇಷು ಯಜ್ಞೇ), ಯಜ್ಞದಂಥ ಪವಿತ್ರತಮವಾದ (ಅಪಸಃ), ಕರ್ಮಗಳನ್ನು (ಕರ್ಮಾಣಿ), ಆಚರಿಸುತ್ತಾರೋ (ಕೃಣ್ವನ್ತಿ), ಜೀವಿಗಳ ಒಳಗೆ (ಪ್ರಜಾನಾಮ್ ಅನ್ತಃ), ಯಾವ (ಯದ್), ಅತುಲ್ಯವಾದ / ಅಸದೃಶವಾದ / ಹೋಲಿಕೆಯಿಲ್ಲದಂತಹ ಅಪೂರ್ವವಾದ (ಅಪೂರ್ವಮ್), ಪೂಜನೀಯವಾದ / ಪೂಜ್ಯವಾದ / ಯಜನೀಯವಾದ / ಯಾಜ್ಯವಾದ ಅವ್ಯಕ್ತವೂ ಅಜ್ಞಾತವೂ (x ― ಯಕ್ಸ್ ― ಯಕ್ಷ) ಆದ ಆತ್ಮತತ್ತ್ವವಿದೆಯೋ (ಯಕ್ಷಮ್), ಅದರಿಂದ ಪ್ರೇರಿತವಾದ ನನ್ನ ಮನಸ್ಸು (ತತ್ ಮೇ / ಮಮ ಮನಃ), ಶುಭವಾದ ಚಿಂತನೆಗಳಿಂದ ಕೂಡಿರಲಿ (ಶಿವಸಙ್ಕಲ್ಪಮ್ ಅಸ್ತು).

ಯತ್ಪ್ರಜ್ಞಾನಮುತ ಚೇತೋ ಧೃತಿಶ್ಚ
ಯಜ್ಜ್ಯೋತಿರನ್ತರಮೃತಂ ಪ್ರಜಾಸು |
ಯಸ್ಮಾನ್ನ ಋತೇ ಕಿಞ್ಚನ ಕರ್ಮ ಕ್ರಿಯತೇ
ತನ್ಮೇ ಮನಶ್ಶಿವಸಙ್ಕಲ್ಪಮಸ್ತು || ೩ ||

ಯಾವುದು (ಯತ್), ಪ್ರಜ್ಞಾನ / ಬುದ್ಧಿ / ಚೈತನ್ಯ / ಪಾಂಡಿತ್ಯ / ಪ್ರಕೃಷ್ಟವಾದ ಜ್ಞಾನ ಅಥವಾ ನಿಷ್ಕೃಷ್ಟವಾದ / ಯಥಾರ್ಥವಾದ ತಿಳುವಳಿಕೆಯಿದೆಯೋ (ಪ್ರಜ್ಞಾನಮ್— “ಯೇನೇಕ್ಷತೇ ಶೃಣೋತೀದಂ ಜಿಘ್ರತೇ ವ್ಯಾಕರೋತಿ ಚ | ಸ್ವಾದ್ವಸ್ವಾದೂ ವಿಜಾನಾತಿ ತತ್ ಪ್ರಜ್ಞಾನಮುದೀರಿತಮ್ ||”— ಪಂಚತಂತ್ರೋಕ್ತಿ— ಯಾವುದರಿಂದ ನೋಡಲ್ಪಡುತ್ತದೋ, ಕೇಳುತ್ತಾನೋ, ಆಘ್ರಾಣಿಸಲ್ಪಡುತ್ತದೋ, ಸಾಧು / ವ್ಯಾಕರಣಬದ್ಧ ಶಬ್ದಗಳು ವ್ಯುತ್ಪತ್ತಿಸಲ್ಪಡುವುವೋ ಹಾಗೂ, ಒಳ್ಳೆಯ ಮತ್ತು ಕೆಟ್ಟ ಸ್ವಾದ / ರುಚಿಗಳನ್ನು ತಿಳಿಯುತ್ತಾನೋ, ಆ ಶಕ್ತಿಯೇ ಪ್ರಜ್ಞಾನವೆನಿಸಿದೆ. “ಪ್ರಜ್ಞಾನಂ ಬ್ರಹ್ಮ”— ಪ್ರಜ್ಞಾನವೇ ಪರಬ್ರಹ್ಮ ಎಂಬುದು ಋಗ್ವೇದೋಕ್ತಿ.), ಹಾಗೆಯೇ (ಉತ), ಯಾವುದು ಚೇತಸ್ / ಚಿತ್ತ ಎನಿಸಿದೆಯೋ (ಚೇತಃ), ಮತ್ತು (ಚ), ಯಾವುದು ದೃಢತೆ / ಧೃತಿ / ಧಾರಣಾಶಕ್ತಿಯೆನಿಸಿದೆಯೋ (ಧೃತಿಃ), ಯಾವುದು (ಯತ್), ಜೀವರಲ್ಲಿ (ಪ್ರಜಾಸು), ಒಳಗಡೆ ಸುಪ್ತವಾಗಿರುವ (ಅನ್ತಃ), ನಂದದ ಬೆಳಕಾಗಿರುವುದೋ (ಅಮೃತಂ ಜ್ಯೋತಿಃ), ಯಾವುದರ ಹೊರತಾಗಿ (ಯಸ್ಮಾತ್ ಋತೇ), ಯಾವುದೇ ಕೆಲಸವನ್ನು ಮಾಡಲಸಾಧ್ಯವೋ (ಕಿಞ್ಚನ ಕರ್ಮ ನ ಕ್ರಿಯತೇ), ಅಂತಹ (ತತ್),  ಮನೋಭಿಮಾನಿದೇವತೆಯಾದ ಭಗವಾನ್ ರುದ್ರನು (ಮನಃ), ನನಗೆ (ಮೇ / ಮಹ್ಯಮ್), ಸತ್ಸಂಕಲ್ಪಗಳನ್ನೇ / ಸಚ್ಚಿಂತನೆಗಳನ್ನೇ / ಒಳ್ಳೆಯ ಯೋಚನೆಗಳನ್ನೇ ಉಂಟುಮಾಡಲಿ (ಶಿವಸಙ್ಕಲ್ಪಮ್ ಅಸ್ತು).

ಯೇನೇದಂ ಭೂತಂ ಭುವನಂ ಭವಿಷ್ಯತ್
ಪರಿಗೃಹೀತಮಮೃತೇನ ಸರ್ವಮ್ |
ಯೇನ ಯಜ್ಞಸ್ತಾಯತೇ ಸಪ್ತಹೋತಾ
ತನ್ಮೇ ಮನಶ್ಶಿವಸಙ್ಕಲ್ಪಮಸ್ತು || ೪ ||

(ಯೇನ)ಯಾವ, (ಅಮೃತೇನ)ಅವಿನಾಶಿಯಾದ ಆತ್ಮದೊಂದಿಗೆ ಯುಕ್ತವಾದ ಮನಸ್ಸಿನಿಂದ, (ಸಪ್ತಹೋತಾ)೫ ಪ್ರಾಣಗಳು, ಜೀವಾತ್ಮ ಹಾಗೂ ಅವ್ಯಕ್ತ— ಎಂಬೀ ಸಪ್ತ ಹೋತೃಗಳ ಕೊಡು-ಕೊಳ್ಳುವಿಕೆಯುಳ್ಳ, (ಯಜ್ಞಃ)ಸೃಷ್ಟಿಯಜ್ಞವು, (ಯೇನ ತಾಯತೇ)ಯಾ ಮನಸ್ಸಿನಿಂದ ಪಾಲಿಸಲ್ಪಟ್ಟು ಪೋಷಿಸಲ್ಪಟ್ಟು ವಿಸ್ತೃತವಾಗಿ ಹಬ್ಬಿ, (ಇದಮ್)ಈ, (ಭೂತಂ ಭವಿಷ್ಯತ್ ಭುವನಂ ಸರ್ವಮ್)ಭೂತ, ವರ್ತಮಾನ / ಭವತ್, ಭವಿಷ್ಯತ್ತುಗಳೆಂಬ ಎಲ್ಲ ಕಾಲಗಳ ಸಮಗ್ರ ಭುವನವೂ / ಚತುರ್ದಶಲೋಕಗಳೂ, (ಪರಿಗೃಹೀತಮ್)ಪರಿಗ್ರಹಿಸಲ್ಪಟ್ಟಿರುವುದೋ / ಸಮನ್ತತಃ ಅಥವಾ ಎಲ್ಲೆಡೆಯಿಂದಲೂ ಸ್ವೀಕರಿಸಲ್ಪಟ್ಟಿರುವುದೋ / ಯಾವ ಮನಸ್ಸು ತ್ರಿಕಾಲಜ್ಞಾನವನ್ನೂ ಸಮಸ್ತ ಸೃಷ್ಟಿಯನ್ನೂ ಯೋಗಾಭ್ಯಾಸಾದಿಗಳಿಂದ ತಿಳಿಯುವಂತಹುದೂ, ಕರ್ಮ-ಉಪಾಸನೆ-ಜ್ಞಾನಗಳ ಸಾಧನವೂ ಆಗಿರುವುದೋ, (ತತ್)ಅಂತಹ, (ಮೇ / ಮಮ)ನನ್ನ, (ಮನಃ)ಮನಸ್ಸು, (ಶಿವಸಙ್ಕಲ್ಪಮ್ ಅಸ್ತು)ಆ ಪರಮಾತ್ಮನ ಧ್ಯಾನದಿಂದ ಕೂಡಿ ಸದಾ ಲೋಕಕಲ್ಯಾಣಕಾರ್ಯಗಳಲ್ಲೇ ನನ್ನನ್ನು ತೊಡಗಿಸುವಂತಾಗಲಿ.

ಯಸ್ಮಿನ್ ಋಚಸ್ಸಾಮ ಯಜೂಂಷಿ ಯಸ್ಮಿನ್
ಪ್ರತಿಷ್ಠಿತಾ ರಥನಾಭಾವಿವಾರಾಃ |
ಯಸ್ಮಿಂಶ್ಚಿತ್ತಂ ಸರ್ವಮೋತಂ ಪ್ರಜಾನಾಂ
ತನ್ಮೇ ಮನಶ್ಶಿವಸಙ್ಕಲ್ಪಮಸ್ತು || ೫ ||

(ಯಸ್ಮಿನ್)ಯಾವುದರಲ್ಲಿ, (ಋಚಃ— ಋಕ್ ಶಬ್ದದ ಬಹುವಚನರೂಪ; ಋಕ್, ಋಚೌ, ಋಚಃ)ಋಚೆಗಳೂ / ಋಕ್ಕುಗಳೂ / ಋಗ್ವೇದವೂ, (ಯಸ್ಮಿನ್)ಯಾವುದರಲ್ಲಿ, (ಯಜೂಂಷಿ— ಯಜುಸ್ ಶಬ್ದದ ಬಹುವಚನರೂಪ; ಯಜುಃ, ಯಜುಷೀ, ಯಜೂಂಷಿ)ಯಜುಸ್ಸುಗಳೂ / ಯಜುರ್ಮಂತ್ರಗಳೂ / ಯಜುರ್ವೇದವೂ, (ಸಾಮ— ಸಾಮನ್ ಶಬ್ದದ ಏಕವಚನರೂಪ; ಸಾಮ, ಸಾಮನಿ, ಸಾಮಾನಿ)ಸಾಮನ್ ಗಳೂ / ಸಾಮಮಂತ್ರಗಳೂ / ಸಾಮವೇದವೂ, ಹಾಗೂ ಈ ಋಕ್-ಯಜುಸ್-ಸಾಮ ಮಿಶ್ರಿತವಾದ ಅಥರ್ವವೇದವೂ, (ರಥನಾಭೌ)ರಥದ ಗಾಲಿಗಳ ಕೇಂದ್ರಬಿಂದು(hub)ವಿನೊಂದಿಗೆ ಸೇರಿಕೊಂಡ, (ಅರಾಃ - ಇವ)ಅರೆಕಾಲು(spokes)/ ಕಡ್ಡಿ ಗಳಂತೆಯೇ, (ಪ್ರತಿಷ್ಠಿತಾಃ)ಸಂಯೋಜಿತವಾಗಿವೆಯೋ / ಸುಪ್ರತಿಷ್ಠಿತವಾಗಿವೆಯೋ / ಸೇರಿಕೊಂಡಿವೆಯೋ / ನೆಲೆಸಿವೆಯೋ, (ಪ್ರಜಾನಾಮ್)ಜೀವರುಗಳ, (ಯಸ್ಮಿನ್)ಯಾವ ಮನಸ್ಸಿನಲ್ಲಿ, ಈ ಜನ್ಮ ಹಾಗೂ ಪೂರ್ವಜನ್ಮಕೋಟಿಗಳ (ಸರ್ವಮ್)ಎಲ್ಲಾ, ಸಂಸ್ಕಾರಗಳು / ಕರ್ಮವಾಸನೆಗಳು ಸಂಗ್ರಹರೂಪವಾಗಿ, (ಓತಮ್)ಪೋಣಿಸಲ್ಪಟ್ಟು ಅಂತರ್ವ್ಯಾಪ್ತವಾಗಿರುವ, (ಚಿತ್ತಮ್)ಚಿತ್ತವಿದೆಯೋ, (ತತ್ / ತಾದೃಶಮ್)ಅಂತಹ, (ಮೇ / ಮಮ)ನನ್ನ, (ಮನಃ)ಮನವು, ಸದಾ (ಶಿವಸಙ್ಕಲ್ಪಮ್ ಅಸ್ತು)ಸದಾಶಿವನ ಲೋಕಕಲ್ಯಾಣಕಾರೀಸಂಕಲ್ಪಕ್ಕೆ ಪೂರಕವಾಗಿ ಆತನ ಕೈಯ ಉಪಕರಣದಂತೆಯೇ ಚಿಂತಿಸಿ ನನ್ನನ್ನು ಶುಭಕಾರ್ಯಗಳಲ್ಲೇ ತೊಡಗಿಸುವಂತಾಗಲಿ.

ಸುಷಾರಥಿರಶ್ವಾನಿವ ಯನ್ಮನುಷ್ಯಾನ್
ನೇನೀಯತೇऽಭೀಶುಭಿರ್ವಾಜಿನ ಇವ |
ಹೃತ್ಪ್ರತಿಷ್ಠಂ ಯದಜಿರಂ ಜವಿಷ್ಠಂ
ತನ್ಮೇ ಮನಶ್ಶಿವಸಙ್ಕಲ್ಪಮಸ್ತು || ೬ ||

(ಸುಷಾರಥಿಃ— ಸು+ಸಾರಥಿಃ; ರೇಫಕ್ಕಾಗಿ ಷಕಾರಾದೇಶ)ಉತ್ತಮ / ಅನುಭವಿ / ಚತುರ / ನಿಪುಣ ಸಾರಥಿಯು, (ಅಭೀಶುಭಿಃ)ಜೀನು / ಪ್ರಗ್ರಹ / ನಿಯಂತ್ರಕ ಹಗ್ಗಗಳ ಸಹಾಯದಿಂದ, (ವಾಜಿನಃ ಇವ) ವೇಗವಾಗಿಯೋ ಎಂಬಂತೆ, (ಅಶ್ವಾನ್ ಇವ) ರಥದ ಅಶ್ವಗಳನ್ನು ಒಯ್ಯುವಂತೆ (“ಅಶ್ನುತೇ ಮಾರ್ಗಂ ವ್ಯಾಪ್ನೋತಿ ಇತಿ ಅಶ್ವಃ; ಅಶೂ ವ್ಯಾಪ್ತೌ ಧಾತುಃ”— ಮಾರ್ಗವನ್ನು ವೇಗವಾಗಿ ಕ್ರಮಿಸುವಂಥದ್ದು), (ಯತ್)ಯಾವ ಮನಸ್ಸು, (ಮನುಷ್ಯಾನ್)ಮನುಷ್ಯರನ್ನು, (ನೇನೀಯತೇ)ನಡೆಸುವುದೋ / ಕರೆದೊಯ್ಯುವುದೋ, (ತತ್)ಅಂತಹ, (ಅಜಿರಮ್)ವಾಯುವಿನಂತೆ ಅತಿ ಚಂಚಲವೂ ಶೀಘ್ರಗಮನಶೀಲವೂ, (ಜವಿಷ್ಠಮ್)ಬಹುಜವವುಳ್ಳದ್ದೂ / ಮನೋವೇಗವುಳ್ಳದ್ದೂ ಆಗಿ, (ಹೃತ್-ಪ್ರತಿಷ್ಠಮ್)ಹೃದಯದಲ್ಲಿ / ಶರೀರದ ಪ್ರಧಾನಭಾಗದಲ್ಲಿ / ಮಸ್ತಕದಲ್ಲಿ ಪ್ರತಿಷ್ಠಿತವಾಗಿರುವ / ಸ್ಥಿತವಾಗಿರುವ (ಯದ್)ಯಾವ, (ಮೇ)ನನ್ನ, (ಮನಃ)ಮನಸ್ಸು, (ಶಿವಸಙ್ಕಲ್ಪಮ್ ಅಸ್ತು)ಆ ಪರಶಿವ ಪರಮಾತ್ಮನನ್ನೇ ಸದಾ ಶ್ರವಣ-ಮನನ-ನಿಧಿಧ್ಯಾಸನಾದಿಗಳಿಂದಲೂ, ಶ್ರವಣ(ಪರೀಕ್ಷಿತನಂತೆ)-ಕೀರ್ತನ(ಶುಕನಂತೆ)-ಸ್ಮರಣ(ಪ್ರಹ್ಲಾದನಂತೆ)-ಪಾದಸೇವನ(ಲಕ್ಷ್ಮಿಯಂತೆ)-ಅರ್ಚನ(ಪೃಥು ಮಹಾರಾಜನಂತೆ)-ವಂದನ(ಅಕ್ರೂರನಂತೆ)-ದಾಸ್ಯ(ಹನುಮಂತನಂತೆ)-ಸಖ್ಯ(ಅರ್ಜುನನಂತೆ)-ಆತ್ಮನಿವೇದನೆ(ಬಲಿಯಂತೆ)ಯೆಂಬ ನವವಿಧ ಭಕ್ತಿಯಿಂದಲೂ (“ಶ್ರವಣಂ ಕೀರ್ತನಂ ವಿಷ್ಣೋಃ ಸ್ಮರಣಂ ಪಾದಸೇವನಮ್ | ಅರ್ಚನಂ ವನ್ದನಂ ದಾಸ್ಯಂ ಸಖ್ಯಮಾತ್ಮನಿವೇದನಮ್ ||”), ಯಮ-ನಿಯಮ-ಆಸನ-ಪ್ರಾಣಾಯಾಮ-ಪ್ರತ್ಯಾಹಾರ-ಧಾರಣಾ-ಧ್ಯಾನ-ಸಮಾಧಿಗಳೆಂಬ ಅಷ್ಟಾಂಗಪಾತಂಜಲರಾಜಯೋಗಮಾರ್ಗದಿಂದಲೂ, ಕರ್ಮ-ಜ್ಞಾನ-ಭಕ್ತಿಯೆಂಬ ತ್ರಿವಿಧಮುಕ್ತಿಮಾರ್ಗದಿಂದಲೂ, ಮಂತ್ರ-ಜಪ-ತಂತ್ರ-ದ್ರವ್ಯಾದಿ ನಾನಾವಿಧದ ಯಜ್ಞ / ಯೋಗ ಗಳಿಂದಲೂ ಚಿಂತಿಸುತ್ತಾ ತದೇಕಚಿತ್ತನಾಗಿ ನಿತ್ಯ-ಸತ್-ಚಿತ್-ಆನಂದವನ್ನು ಪಡೆಯುತ್ತಾ ಕರ್ತವ್ಯಕರ್ಮವನ್ನು ನಿಷ್ಠೆಯಿಂದಲೂ ಅನಾಸಕ್ತಿಯೋಗದಿಂದಲೂ ನಿಷ್ಕಾಮಭಾವದಿಂದಲೂ ಯದೃಚ್ಛಾಲಾಭಸಂತುಷ್ಟನಾಗಿ ಆಚರಿಸುವಂತಾಗಲಿ. ಇದಕ್ಕೆ ಬೇಕಾದ ಭಗವತ್ಪ್ರೇರಣೆಯು, ಪರಮಾತ್ಮನ ದಯೆಯು, ಜಗನ್ಮಾತೆಯ ಅನುಗ್ರಹವು, ಗುರುಕೃಪೆಯು ಸದಾ ಒದಗಿಬರಲಿ.

೬) ಭಗವತ್ತತ್ತ್ವರಹಸ್ಯ / ಶಿವರಹಸ್ಯ ಎಂದರೇನು?


ಸೃಷ್ಟಿಯಲ್ಲಿ ೨ ತತ್ತ್ವಗಳು ಪ್ರಧಾನವಾಗಿ ಇವೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣನೂ “ದ್ವನ್ದ್ವೋ ಸಾಮಸಿಕಸ್ಯ ಚ”— ಸಮಾಸಗಳಲ್ಲಿ ದ್ವಂದ್ವಸಮಾಸವೇ (ಅಂದರೆ ಆತ್ಮ-ಅನಾತ್ಮ ಎಂಬ ೨ ವಿಭಿನ್ನ ತತ್ತ್ವರೂಪ) ನಾನಾಗಿದ್ದೇನೆ ಎಂದಿದ್ದಾನೆ. ಆ, ೨ ತತ್ತ್ವಗಳೇ ಆತ್ಮ / ಪುರುಷ / ಶಿವ / ವಿದ್ಯೆ ಹಾಗೂ ಅನಾತ್ಮ / ಪ್ರಕೃತಿ / ಶಕ್ತಿ / ಅವಿದ್ಯೆ. ಇವುಗಳಲ್ಲಿ, ಮೊದಲನೆಯದು ಎಲ್ಲದಕ್ಕೂ ಅಸ್ತಿತ್ವವನ್ನು ಕೊಟ್ಟು ಪ್ರಕಾಶಿಸುವ ಶುದ್ಧಪ್ರಜ್ಞೆ. ಇದು ಜ್ಞಾನ ಹಾಗೂ ಪ್ರಜ್ಞಾಜ್ಯೋತಿ / ಚೈತನ್ಯಸ್ವರೂಪ. ಎರಡನೆಯದು ದ್ರವ್ಯ / ಶಕ್ತಿ. ಇದು ಅಜ್ಞಾನ ಹಾಗೂ ತಮಸ್ / ಅಂಧಕಾರಸ್ವರೂಪಿ. ಇದು ಶರೀರ-ಮನಸ್-ಬುದ್ಧಿ, ಗ್ರಹಿಸುವವನು-ಭಾವಿಸುವವನು-ಯೋಚಿಸುವವನು, ವಸ್ತುಗಳು-ಭಾವನೆಗಳು-ಯೋಚನೆಗಳು, ಕಾಲ ಹಾಗೂ ಅವಕಾಶ / ಆಕಾಶ— ಇವುಗಳನ್ನು ಒಳಗೊಳ್ಳುತ್ತದೆ.

ಒಬ್ಬನೇ ದೇವನು / ಶಿವನು ತನ್ನ ದೈವತ್ವವನ್ನು ವಿವಿಧ ಹಂತಗಳಲ್ಲಿ ಹಾಗೂ ವಿಭಿನ್ನ ತೀವ್ರತೆಗಳಲ್ಲಿ ಪ್ರಕಟಪಡಿಸಿದಾಗ ಆತನು ದ್ರವ್ಯ / ಶಕ್ತಿ / ಪ್ರಕೃತಿ ಯೊಂದಿಗೆ ಹೆಚ್ಚು ಹೆಚ್ಚಾಗಿ ಬೆರೆತು / ಸೇರಿಕೊಂಡು ಜಡವಾಗಿದ್ದ ಅದನ್ನು ಚೈತನ್ಯಮಯವಾಗಿಸುತ್ತಾನೆ. ಇದೇ ಸೃಷ್ಟಿಪ್ರಕ್ರಿಯೆ. ಹೀಗಾಗಿಯೇ ಶಿವ-ಶಕ್ತಿ, ಪುರುಷ-ಪ್ರಕೃತಿ, ಆತ್ಮ-ದ್ರವ್ಯಗಳ ಸಂಗಮವನ್ನೇ ನಾವು ಈ ಸಮಗ್ರ ಸೃಷ್ಟಿಯ ಬೀಜ / ಮೂಲ / ಬೇರು ಎನ್ನುತ್ತೇವೆ. “ಶಿವನು” ಅವಕಾಶ / ಆಕಾಶ-ಕಾಲಗಳ ಆಯಾಮದಲ್ಲಿ ಪ್ರವರ್ತಿಸಿದಾಗ “ಈಶ್ವರ” ನೆನಿಸುತ್ತಾನೆ. ಆತನೇ ಶಬ್ದ-ಸ್ಪರ್ಶ ಗುಣಗಳಿರುವ ವಾಯುವಿನಲ್ಲಿ ಪ್ರವರ್ತಿಸಿದಾಗ “ಸದಾಶಿವ” ನು. ಶಬ್ದ-ಸ್ಪರ್ಶ-ರೂಪತನ್ಮಾತ್ರೆಗಳಿರುವ ಅಗ್ನಿಯಲ್ಲಿ ಪ್ರವರ್ತಿಸಿದ ಶಿವನು “ರುದ್ರ” ನು. ಇದರ ವಿವರ ಈ ಕೆಳಗಿನಂತಿದೆ.

    ಮೂಲಭೂತಾಂಶ       ಗುಣಲಕ್ಷಣಗಳು                              ದೇವತಾರೂಪ                ಕಾರ್ಯ
      (ಅಧಿಭೂತ)                  (ಅಧ್ಯಾತ್ಮ)                     (ಅಧಿದೈವ) (ನಿಯಂತ್ರಣ)

೧) ಆಕಾಶ                        ಶಬ್ದ                     ಈಶ್ವರ                          ನಿದ್ದೆ
೨) ವಾಯು                      ಶಬ್ದ, ಸ್ಪರ್ಶ                      ಸದಾಶಿವ                       ಉಸಿರಾಟ
೩) ಅಗ್ನಿ                           ಶಬ್ದ, ಸ್ಪರ್ಶ, ರೂಪ           ರುದ್ರ                     ನಾನಾ ಆಕಾರಜ್ಞಾನ
೪) ಜಲ                           ಶಬ್ದ, ಸ್ಪರ್ಶ, ರೂಪ, ರಸ           ವಿಷ್ಣು                     ಸ್ಥಿತಿ / ಪಾಲನೆ
೫) ಪೃಥ್ವೀ                        ಶಬ್ದ, ಸ್ಪರ್ಶ, ರೂಪ, ರಸ, ಗಂಧ       ಬ್ರಹ್ಮಾ                           ಸೃಷ್ಟಿ

ಮೇಲೆ ಆತ್ಮ / ಪುರುಷನ ಪ್ರಾಧಾನ್ಯತೆ ಇರುವಲ್ಲಿ ಅಧಿದೈವ. ಯಾವುದರಲ್ಲಿ ಆತ್ಮ ಹಾಗೂ ದ್ರವ್ಯ (ಪುರುಷ ಮತ್ತು ಪ್ರಕೃತಿ)ಗಳು ಸರಿಸುಮಾರಾಗಿ ಸಮತೋಲನವಾಗಿವೆಯೋ ಅದೇ ಅಧ್ಯಾತ್ಮ. ಜೀವ, ಜಗತ್ತು ಮತ್ತು ಈಶ್ವರರು ಅನುಕ್ರಮವಾಗಿ ಅಧ್ಯಾತ್ಮ, ಅಧಿಭೂತ ಹಾಗೂ ಅಧಿದೈವಗಳ ಪ್ರತೀಕ. ಇವೆಲ್ಲವೂ ಶಿವ / ಪರಮಪುರುಷನದೇ ಅಭಿವ್ಯಕ್ತಿಗಳು. ಇವು ಮೂರೂ, ಜಗತ್ತೆಂಬ ಬದುಕಿನ ನಾಟಕವನ್ನು ದಿನವೂ ಆಡುತ್ತವೆ.

ಅಧಿಭೂತತತ್ತ್ವವು ಹೆಚ್ಚಾದರೆ ಬರಿಯ ಇಂದ್ರಿಯವಾದಿಯೂ, ಇಂದ್ರಿಯವಿಷಯಭೋಗಿಯೂ, ಆಧ್ಯಾತ್ಮಿಕಕುರುಡನೂ, ಅಜ್ಞಾನಿಯೂ ಆಗುವನು. ಅಧಿದೈವತತ್ತ್ವವು ವರ್ಧಿಸಿದವನು ಆಧ್ಯಾತ್ಮಿಕವಾಗಿ ವಿಕಸಿತನಾದವನೂ, ಪರಿಶುದ್ಧನೂ, ಉದಾತ್ತನೂ, ಒಬ್ಬ ಆತ್ಮಸಂಯಮಿಯೂ ಆಗುವನು. ಇನ್ನು, ಅಧಿಭೂತ ಹಾಗೂ ಅಧಿದೈವತತ್ತ್ವಗಳೆರಡೂ ಯಾರಲ್ಲಿ ಸರಿಸಮವಾಗಿವೆಯೋ ಅಂಥವರು ಅಜ್ಞಾನಿಗಳೂ, ತತ್ತ್ವಾನ್ವೇಷಕರೂ, ನಿಜವಾದ ಸಾಧಕರೂ ಆಗುವರು. ಅಂಥವನು ಒಬ್ಬ ಅಧ್ಯಾತ್ಮತೃಷೆಯುಳ್ಳವನೆಂದು ಗುರುತಿಸಲ್ಪಡುತ್ತಾನೆ. ಅವನು  ತನ್ನೆಲ್ಲ ಮಾನಸಿಕ ತುಮುಲ-ಜಂಜಾಟಗಳಿಂದ ಬಿಡುಗಡೆಹೊಂದಬೇಕೆಂಬ ಅನಿರ್ವಚನೀಯವಾದ ತೀವ್ರ ಹಂಬಲವುಳ್ಳವನೆಂದು ತನ್ನನ್ನು ತಾನು ಭಾವಿಸುತ್ತಾನೆ.

  1. ಶಿವನು ತನ್ನ ತಪಸ್ಸನ್ನು ತಾನೇ ನಿಲ್ಲಿಸಿದರೆ ಶಾಂತನು. ಬೇರೆಯವರಿಂದ ವಿಘ್ನವುಂಟಾಗಿ ನಿಲ್ಲಿಸಿದರೆ ಮಹಾಕೋಪವುಳ್ಳವನಾಗಿ ರೌದ್ರಭಾವದ ರುದ್ರನಾಗಿ ಮೂರನೆಯ ಕಣ್ಣಿನಿಂದ ಅಂಥವರನ್ನು ಭಸ್ಮಮಾಡಿದಾಗ ಅವರಿಗೆ ೧೦೦% ತೊಂದರೆಯಾದರೆ, ಶಿವನಿಗೆ ನಾಡೀಬಂಧ ಮಾತ್ರ ಬಿಟ್ಟುಹೋಗಿದ್ದರೂ, ಆಸನವು ಸ್ಥಿರವಾಗಿದ್ದು ಕೇವಲ ೦.೦೧%ರಷ್ಟು ಹಾನಿಯಾಗುವುದು. ಬಳಿಕ ಶಿವನು ಪುನಃ ಬಂಧವನ್ನು ಹಾಕಿಕೊಂಡು ತಪೋನಿರತನಾಗುವನು.
  2. ಈತನು ಇತರರಿಗಾಗಿ ಯಾವುದೇ ಕಷ್ಟವನ್ನು ಸಹಿಸಲು ಸಿದ್ಧನೆಂಬುದು ಹಾಲಾಹಲವನ್ನುಂಡ ಸಂದರ್ಭದಿಂದ ತಿಳಿಯುತ್ತದೆ.
  3. ಈತನು ಪರಮವಿರಾಗಿ ಯೆಂದು ಸ್ಮಶಾನವಾಸ, ಗಂಧಚಂದನಗಳಿಲ್ಲದೆ ಕೇವಲ ಚಿತಾಭಸ್ಮಲೇಪನ, ಯಾವ ವಿಶೇಷ ವೇಷಭೂಷಣಗಳಿಲ್ಲದೆ ದಿಗಂಬರತ್ವ, ಸರ್ಪಾಭರಣ, ರುಂಡಮಾಲೆಗಳಿಂದ ತಿಳಿಯುವುದು.
  4. ಶಿವನು ಬೇಗನೆ ಪ್ರಸನ್ನನಾಗುವುದರಿಂದ ಆಶುತೋಷನು. ದೇವದೈತ್ಯರೀರ್ವರಿಂದಲೂ ಉಪಾಸಿಸಲ್ಪಡುವವನು.
  5. ಸಕಲ ಭೂತನಾಥ ನಾದ್ದರಿಂದ ಕೇವಲ ಶಿವನಾಮಸ್ಮರಣೆಯೊಂದಿಗೆ ಭಸ್ಮಧಾರಣೆ ಮಾಡಿದರೆ ಶಿಶುಗಳನ್ನೂ ಭೂತಬಾಧೆಗಳಿಂದ ರಕ್ಷಿಸಿ ಒಳ್ಳೆಯ ನಿದ್ರೆಯನ್ನುಂಟುಮಾಡುವನು.
  6. ಈತನು ವೀರ್ಯವು ಎಂದೂ ಪತನವಾಗದಂತಹ ಆತ್ಮನಿಗ್ರಹವುಳ್ಳವನಾದ್ದರಿಂದ ಊರ್ಧ್ವರೇತಸ್. ಇದರಿಂದ ಓಜಸ್ಸು (ಶಕ್ತಿ, ಕಾಂತಿ) ವರ್ಧಿಸಿ, ಸಂಕಲ್ಪವೆಲ್ಲವೂ ಸಿದ್ಧಿಸುವುದು. ಈತನು ಕಲ್ಪನಾತೀತ ದಿವ್ಯಶತವರ್ಷಗಳ ನಿರಂತರ ಲೈಂಗಿಕಕ್ಷಮತೆಯುಳ್ಳವನಾದರೂ, ಸತತವೂ ತನ್ನ ಸಂಕಲ್ಪಮಾತ್ರದಿಂದಲೇ ಸೃಷ್ಟಿಕಾರ್ಯನಿರತನು.
  7. ಸಂಹಾರಕಾಲದಲ್ಲಿ ಮುಂದಿನ ಸೃಷ್ಟಿಗೆ ಪೂರಕ ವಾತಾವರಣವನ್ನು ನಿರ್ಮಿಸುವನು.
  8. ಶಿವನ ಡಮರುಗದಿಂದ ೫೨ ಸ್ವರಗಳುಂಟಾಗಿ ಅವುಗಳಿಂದ ೫೨ ನಾದಬೀಜಗಳ / ಶಬ್ದಬ್ರಹ್ಮ / ಬೀಜಮಂತ್ರಗಳ / ಅಕ್ಷರಗಳ / ೧೪ ಮಾಹೇಶ್ವರಸೂತ್ರಗಳ ರೂಪದಲ್ಲಿ ವರ್ಣಮಾಲೆಯ ಸೃಷ್ಟಿಯಾಯಿತು. ಅವುಗಳಿಂದ ವಿಶ್ವದ ಉತ್ಪತ್ತಿಯಾಯಿತು. ನದ-ನಾದವೆಂದರೆ ಸತತಪ್ರವಾಹ. ಈ ನಾದಬೀಜಗಳಿಂದ “ದ ದಮ್” ಅಂದರೆ “ದದಾಮಿ ತುಭ್ಯಮ್” (ನಾನು ನಿನಗೆ ಕೊಡುತ್ತೇನೆ) ಎಂಬ ನಾದವಾಯಿತು. ಶಿವನು ವಿಶ್ವಕ್ಕೆ ಜ್ಞಾನ, ಪಾವಿತ್ರ್ಯ, ತಪಸ್ಸುಗಳನ್ನು ಕೊಡುತ್ತೇನೆಂಬ ಭರವಸೆಯಿತ್ತಿರುವನು.
  9. ಶಿವನು ಶಕ್ತಿಯೊಂದಿಗೆ ಐಕ್ಯವಾಗಿ ಅರ್ಧನಾರೀಶ್ವರ, ಉಮಾಮಹೇಶ್ವರ, ಭವಾನೀಶಂಕರ ಮುಂತಾದ ರೂಪತಳೆದ ಅದ್ವೈತಸ್ವರೂಪಿ.
  10. ನಟರಾಜನಾದ ಶಿವನಿಗೆ ಸಮಾಧಿ / ನಿರ್ಗುಣ ಹಾಗೂ ತಾಂಡವ / ಲಾಸ್ಯ / ನೃತ್ಯ / ಸಗುಣ ಎಂಬೆರಡು ಸ್ಥಿತಿಗಳಿವೆ.
  11. ನಟರಾಜನಾದ ಶಿವನ ನೃತ್ಯವನ್ನು ಉತ್ಪತ್ತಿ, ಸ್ಥಿತಿ, ಲಯ, ತಿರೋಭಾವ (ಮಾಯಾऽऽವರಣ) ಹಾಗೂ ಅನುಗ್ರಹ (ಮಾಯಾನಿರಸನ)— ಈ ೫ ಈಶ್ವರೀಕ್ರಿಯೆಗಳ ಪ್ರತೀಕವೆಂದು ಪರಿಗಣಿಸಲಾಗಿದೆ.
  12. ಶಿವಗಣಗಳಲ್ಲೊಬ್ಬನಾದ ತಂಡುವು ಮೊದಲು ಶಿವನ ನಾಟ್ಯವನ್ನು ಭರತಮುನಿಗಳಿಗೆ ತೋರಿಸಿದ್ದರಿಂದ ಅದು ತಾಂಡವನೃತ್ಯವೆನಿಸಿತು. ಬಳಿಕ ಭರತಮುನಿಯು ನಾಟ್ಯಶಾಸ್ತ್ರವನ್ನು ವಿರಚಿಸಿದನು.
  13. ಶಿವನ ತ್ರಿ-ಶೂಲದ ಮೂರು ತುದಿಗಳು ಉತ್ಪತ್ತಿ-ಸ್ಥಿತಿ-ಲಯಗಳ ಹಾಗೂ ಇಚ್ಛಾ-ಜ್ಞಾನ-ಕ್ರಿಯೆಗಳ ಪ್ರತೀಕ.
  14. ಪಾಶವೆಂದರೆ ಕಾಲಪಾಶ / ಮೃತ್ಯುಪಾಶ. ಮೃಗವು ೪ ವೇದಗಳ ಪ್ರತೀಕ. ಪರಶು / ಕೊಡಲಿಯು ಅಜ್ಞಾನವಿಧ್ವಂಸದ ಪ್ರತೀಕ.
  15. ಶಿವಲಿಂಗದೊಂದಿಗೆ ಪಾಣಿಪೀಠ / ಯೋನಿಯಿದ್ದರೂ, ಸೃಷ್ಟಿಯು ಶಿವನ ಸಂಕಲ್ಪದಂತೆ ಆಗುವುದೇ ಹೊರತು ಕೇವಲ ಮೈಥುನದಿಂದಾಗಲಾರದು.
  16. ಪ್ರಸಿದ್ಧವಾದ ದ್ವಾದಶಜ್ಯೋತಿರ್ಲಿಂಗಗಳು ಶಿವನ ತೇಜಸ್ಸಿನ ಪ್ರಕಾಶಪಡಿಸುವಿಕೆಯೇ ಆಗಿದ್ದು, ೧೩ನೆಯದು ಕಾಲಪಿಂಡವೆಂದು ಕರೆಯಲ್ಪಟ್ಟಿದ್ದು, ಇದು ಕಾಲಮರ್ಯಾದೆಯಾಚೆಗಿನ ನಮ್ಮ ಪಿಂಡ / ದೇಹವೇ ಆಗಿರುವುದು.
  17. ತೈತ್ತಿರೀಯೋಪನಿಷತ್ತಿನಲ್ಲಿ ಬ್ರಹ್ಮ, ಮಾಯೆ, ಜೀವ, ಮನಸ್, ಬುದ್ಧಿ, ಚಿತ್ತ, ಅಹಂ-ಕಾರ ಮತ್ತು ಪಂಚಮಹಾಭೂತಗಳು— ಈ ೧೨ ತತ್ತ್ವಗಳನ್ನು ದ್ವಾದಶಜ್ಯೋತಿರ್ಲಿಂಗಗಳು ಎನ್ನಲಾಗಿದೆ.
  18. ನರ್ಮದಾನದಿಯಲ್ಲಿ (ಗಂಡಕೀನದಿಯಲ್ಲಿ ಸಾಲಿಗ್ರಾಮ ಸಿಕ್ಕಿದಂತೆ) ಸಿಗುವ ವಿಶಿಷ್ಟಾಕಾರದ ಬೆಣಚು ಕಲ್ಲುಗಳಿಗೆ ಬಾಣಲಿಂಗಗಳೆನ್ನುವರು. ಯಾಜ್ಞವಲ್ಕ್ಯಸಂಹಿತೆಯ ಪ್ರಕಾರ, ಬಾಣಾಸುರನು ಹಿಂದೆ ಪೂಜೆಗಾಗಿ  ಲಿಂಗಗಳನ್ನು ತಯಾರಿಸಿ, ಪೂಜಿಸಿ, ನರ್ಮದಾತೀರದ ಪರ್ವತದಲ್ಲಿ ವಿಸರ್ಜಿಸಿದ್ದು, ಕಾಲಾಂತರದಲ್ಲಿ ಅವು ನದಿಯನ್ನು ಸೇರಿವೆ ಎನ್ನಲಾಗಿದೆ. ಗಂಗಾ, ಯಮುನೆಗಳಲ್ಲೂ ಸ್ವಲ್ಪ ಪ್ರಮಾಣದಲ್ಲಿ ಇವು ಕಂಡುಬರುತ್ತವೆ. ಸಾಲಿಗ್ರಾಮ, ಬಾಣಲಿಂಗಗಳು ರಂಧ್ರಗಳಿಲ್ಲದ ಭಾರವಾದ ಕಲ್ಲುಗಳಾಗಿದ್ದು, ಬೇಗನೆ ಸವೆಯುವುದಿಲ್ಲ.
  19. ಶಿವದೇವಾಲಯದಲ್ಲಿ ಮಾನವನಿರ್ಮಿತ / ಮಾನವಸ್ಥಾಪಿತವಾದ ಸ್ಥಿರಲಿಂಗವಿದ್ದರೆ ಮಾತ್ರ ಅರ್ಧಪ್ರದಕ್ಷಿಣೆಯು ಅನ್ವಯಿಸುವುದು. ಸ್ವಯಂಭೂಲಿಂಗ / ಮನೆಯಲ್ಲಿ ಪೂಜಿಸುವ ಚಲಲಿಂಗಕ್ಕಿದು ಅನ್ವಯಿಸದು.
  20. ಶಿವಪೂಜೆಗೆ ಮುನ್ನ ಭಸ್ಮಧಾರಣೆಯನ್ನು ತೋರುಬೆರಳು, ಮಧ್ಯಮ ಹಾಗೂ ಅನಾಮಿಕಗಳಿಂದ ಮಾಡಬೇಕು. ಹೂವುಗಳ ತೊಟ್ಟುಗಳು ಶಿವನ ಕಡೆಗಿರುವಂತೆ ಸಮರ್ಪಿಸಬೇಕು. ಬಿಲ್ವಪತ್ರೆಗಳ ತೊಟ್ಟುಗಳು ನಮ್ಮ ಕಡೆಗಿರುವಂತೆ ಸಮರ್ಪಿಸಬೇಕು. ಲಿಂಗದಲ್ಲಿ ಅಭಿಷೇಕದಿಂದಾದ ಘರ್ಷಣೆಯ ಆಹತ-ನಾದ ಹಾಗೂ ಸೂಕ್ಷ್ಮವಾದ ಅನಾಹತನಾದ ಎಂಬೆರಡು ಪವಿತ್ರಕಗಳು ಮತ್ತು ಬಿಲ್ವಪತ್ರೆಯಲ್ಲಿನ ಪವಿತ್ರಕ— ಇವು ಮೂರರ ಶಕ್ತಿಯೂ ತೊಟ್ಟಿನ ಮೂಲಕ ನಮ್ಮೆಡೆಗೆ ಹರಿದುಬರುವುದು.
  21. ಆರತಿಯನ್ನು ಬಲಗೈ ತೋರುಬೆರಳು ಮತ್ತು ಹೆಬ್ಬೆರಳಿನಿಂದ ಹಿಡಿದು ಪೂರ್ಣವರ್ತುಲಾಕಾರವಾಗಿ ಗಡಿಯಾರದ ಮುಳ್ಳಿನ ದಿಕ್ಕಿನಂತೆಯೇ ಮೂರು ಸುತ್ತು ಬೆಳಗಬೇಕು.
  22. ಶಿವನಿಗೆ ವಿಶೇಷವಾಗಿ ಪ್ರಿಯವಾದ ವ್ರತಗಳು— ಪ್ರದೋಷವ್ರತ (ಪ್ರತಿ ತಿಂಗಳ ಶುದ್ಧ ಹಾಗೂ ಬಹುಳ ತ್ರಯೋದಶಿಯ ಸೂರ್ಯಾಸ್ತಕ್ಕಿಂತ ಮೊದಲ ಮೂರು ಘಳಿಗೆಕಾಲವೇ ಪ್ರದೋಷಕಾಲ; ಕೃಷ್ಣಪಕ್ಷದ ಶನಿವಾರ ಬಂದರೆ ವಿಶೇಷ— ೪ ಪ್ರಕಾರಗಳು— ಸೋಮಪ್ರದೋಷ, ಭೌಮಪ್ರದೋಷ, ಶನಿಪ್ರದೋಷ, ಪಕ್ಷಪ್ರದೋಷ.), ೧೬ ಸೋಮವಾರಗಳ ವ್ರತ, ಶ್ರಾವಣಸೋಮವಾರವ್ರತ ಹಾಗೂ ಮಹಾಶಿವರಾತ್ರಿವ್ರತ (ಮಾಘ ಬಹುಳ ಚತುರ್ದಶಿ).

ಯಸ್ಯಾಙ್ಕೇ ಚ ವಿಭಾತಿ ಭೂಧರಸುತಾ ದೇವಾಪಗಾ ಮಸ್ತಕೇ
ಭಾಲೇ ಬಾಲವಿಧುರ್ಗಲೇ ಚ ಗರಲಂ ಯಸ್ಯೋರಸಿ ವ್ಯಾಲರಾಟ್ |
ಸೋऽಯಂ ಭೂತಿವಿಭೂಷಣಸ್ಸುರವರಸ್ಸರ್ವಾಧಿಪಸ್ಸರ್ವದಾ
ಸರ್ವಸ್ಸರ್ವಗತಶ್ಶಿವಶ್ಶಶಿನಿಭಶ್ಶ್ರೀಶಙ್ಕರಃ ಪಾತು ಮಾಮ್ ||
(ಗೋಸ್ವಾಮಿ ತುಲಸೀದಾಸರ ರಾಮಚರಿತಮಾನಸದಿಂದ)

ಶ್ರೀಶಙ್ಕರಃ ಪಾತು ಮಾಮ್— ಭಗವಾನ್ ಶಂಕರನು ನನ್ನನ್ನು ರಕ್ಷಿಸಲಿ, ಪಾಲಿಸಲಿ. ಶಮ್ ಅಂದರೆ ಮಂಗಲ, ಶುಭ. ಕರ— ಉಂಟುಮಾಡುವವನು. ನಮ್ಮ ಬದುಕಿಗೆ ಶುಭವನ್ನು ಉಂಟುಮಾಡುವವನು ಶಂ-ಕರನು.

ಯಸ್ಯಾಙ್ಕೇ ಚ ವಿಭಾತಿ ಭೂಧರಸುತಾ— ಯಾರ (ಯಸ್ಯ), ಎಡ-ತೊಡೆಯಲ್ಲಿ (ಅಂಕೇ), ಪರ್ವತರಾಜನಾದ (ಭೂಧರ- ಪರ್ವತ) ಹಿಮವಂತನ ಪುತ್ರಿ (ಸುತಾ) ಪಾರ್ವತಿಯು / ಗಿರಿ-ಜಾ (ಗಿರಿಗೆ ಜನಿಸಿದವಳು) ವಿಶೇಷವಾಗಿ ಶೋಭಿಸುವಳೋ / ಬೆಳಗುವಳೋ (ವಿ-ಭಾತಿ, ಭಾ— ಪ್ರಕಾಶ),

ದೇವಾಪಗಾ ಮಸ್ತಕೇ— ದೇವಲೋಕದಿಂದ ಈಚೆಗೆ ಆಗಮಿಸುತ್ತಿರುವ (ದೇವ+ಅಪ+ಗಾ) ಗಂಗೆಯು ಯಾರ ಮಸ್ತಕ / ಶಿರ ದಲ್ಲಿ ಶೋಭಿಸುವಳೋ ಅಂತಹ ಶಿವನು / ಶಂಕರನು.

೭) ಶಿವನ ಗಂಗಾಧರತ್ವದ ನಾನಾರ್ಥಗಳೇನು?


೧) ಅದು ಜ್ಞಾನಗಂಗೆಯು ಗುರುವಿನ ಮಸ್ತಕದಿಂದ ಶಿಷ್ಯನಿಗೆ ಹರಿಯುವುದರ ಪ್ರತೀಕ.
೨) ಇದು ಶಿವನ ಅವಿಚ್ಛಿನ್ನವಾದ / ನಿರಂತರವಾದ ರಾಮಧ್ಯಾನದ / ಆತ್ಮಧ್ಯಾನದ / ಭಗವದ್ಭಕ್ತಿಯ / ತಪಸ್ಸಿನ ಪ್ರತೀಕ.
೩) ನಮ್ಮ ಮನಸ್ಸನ್ನು ಸದಾ ಶಾಂತವಾಗಿ, ನಮ್ಮ ಮನಸ್ಥಿತಿಯನ್ನು ತಂಪಾಗಿ, ನಮ್ಮ ಭಾವನೆಗಳನ್ನು ತಾಳ್ಮೆಯಿಂದ, ಅರಿಷಡ್ವರ್ಗಕ್ಕೆ ಸೋಲದೆ ಸಾಕ್ಷೀಭಾವದಿಂದ ನಿರೀಕ್ಷಿಸಬೇಕು ಎಂಬುದರ ಪ್ರತೀಕ ಶಿವನ ಶಿರದ ತಂಪಾದ ಗಂಗಾಜಲಧಾರೆ.
೪) ಪ್ರತಿಯೊಂದು ವಸ್ತುವಿನ, ಚೈತನ್ಯದ ಹಾಗೂ ಪವಿತ್ರಕಗಳ ಕೇಂದ್ರಬಿಂದುವೆಂರೆ “ಗಂ”. “ಗಂ” / ಬೀಜಮಂತ್ರಗಳು ಯಾವುದರಿಂದ ಗಮನ ಮಾಡುತ್ತವೆಯೋ / ಹೊರಡುತ್ತವೆಯೋ ಅಂತಹ ಪ್ರವಾಹವೇ ಗಂ-ಗಾ. ಶಿವನ ತಲೆಯಿಂದಲೇ ಎಲ್ಲ ಬೀಜಮಂತ್ರಗಳೂ ಹುಟ್ಟುವುರ ಪ್ರತೀಕವೇ ಶಿವನ ತಲೆಯಿಂದ ಆದ ಗಂಗಾವತಾರ. ಪೃಥ್ವಿಯ ಮೇಲಿನ ಗಂಗೆಯಲ್ಲಿ ಈ ಆಧ್ಯಾತ್ಮಿಕ ಗಂಗೆಯ ಅಂಶವಿರುವುದರಿಂದಲೇ ಅದು ಭೌತಿಕ / ಬಾಹ್ಯವಾಗಿ ಎಷ್ಟೇ ಮಲಿನವಾದರೂ ಅದರ ಆಧ್ಯಾತ್ಮಿಕ ಪಾವಿತ್ರ್ಯವು ಹಾಗೇ ಇರುತ್ತದೆ.

೫) ದೇವತೆಗಳಲ್ಲಿ “ಸದಾಶಿವನಿಗೆ ಅದೇ ಧ್ಯಾನ” ಎಂಬಂತೆ, ಬಂಧ-ಮುದ್ರೆಗಳ ಸಹಿತ ಪದ್ಮಾಸನದಲ್ಲಿ ಸತತವಾಗಿ ನಾಮಸ್ಮರಣೆ ಮಾಡುವವನು ಶಿವನು. ಅಧಿಕವಾದ ತಪೋಜ್ವಾಲೆಯ ತಾಪವನ್ನು ತಣಿಸಲು ಗಂಗೆ, ಚಂದ್ರ, ಹಾವು, ಹಿಮಾಚ್ಛಾದಿತ ಕೈಲಾಸನಿವಾಸ— ಇಂತಹ ಶೀತಲತೆಯನ್ನು ತನ್ನೊಂದಿಗಿಟ್ಟಿರುವನು.

೮) ಶಿವನಿಗೇಕೆ ಚಂದ್ರಕಲೆ ಹಾಗೂ ವಿಷಕಂಠತ್ವ?


ಭಾಲೇ ಬಾಲವಿಧುಃ ಗಲೇ ಚ ಗರಲಮ್— ಭಾಲಪ್ರದೇಶ / ಹಣೆಯಲ್ಲಿ ಬಾಲಚಂದ್ರ / ಸಣ್ಣ ಚಂದ್ರಕಲೆ (ವಿಧುಃ— ಚಂದ್ರ) ಹಾಗೂ (ಚ), ಕಂಠದಲ್ಲಿ (ಗಲೇ), ವಿಷ (ಗರಲಮ್).

 ಶಿರದ ಚಂದ್ರಾಂಶವು ಸುಖ / ಅಮೃತತ್ವ / ಔಷಧಿಯ ಪ್ರತೀಕವಾದರೆ, ಕಂಠದ ವಿಷವು ದುಃಖ / ಮರಣ / ರೋಗಗಳ ಸೂಚಕ. ಹೀಗೆ ಇವೆರಡೂ ದ್ವಂದ್ವಗಳಿರುವ ಬದುಕಿನಲ್ಲಿ ಶಿವನಂತೆ ಸ್ಥಿತಪ್ರಜ್ಞರಾಗಬೇಕೆಂಬುದು ತಾತ್ಪರ್ಯ.
ಶಿವನ ಶಿರದಲ್ಲಿನ ಚಂದಿರನು ಪೂರ್ಣನಲ್ಲ, ವಕ್ರನು. ಗುರುವು ಪೂರ್ಣನಾದರೂ ಶಿಷ್ಯನು ಪರಿಪೂರ್ಣನಾಗಿರದಿದ್ದರೂ, ಗುರುವನ್ನು ಆಮಂತ್ರಿಸಿದಾಗ ಜೊತೆಗೆ ಶಿಷ್ಯನೂ ಗೌರವವನ್ನು ಪಡೆಯುವುದರ ಸಂಕೇತ ಶಿವನೊಂದಿಗಿರುವ ಚಂದ್ರಕಲೆ. ಅಲ್ಲದೆ, ಚಂದಿರನು ಮಮತೆ, ಕ್ಷಮಾಶೀಲತೆ ಹಾಗೂ ವಾತ್ಸಲ್ಯಗಳ ಪ್ರತೀಕವೂ ಹೌದು.

೯) ಶಿವನ ನೀಲಕಂಠತ್ವದ ಅರ್ಥವೇನು?


ಹಲವರು ಕಷ್ಟವೆಂಬ ವಿಷವನ್ನುಂಡು ತಾವೂ ಕಠೋರಹೃದಯಿಗಳಾಗಿ ಇತರರಿಗೆ ವಿಷವನ್ನೇ / ಕೆಡುಕನ್ನೇ ವಾಂತಿ ಮಾಡುತ್ತಾರೆ. ಕೆಲವರಂತೂ ಕಷ್ಟವೆಂಬ ವಿಷಕ್ಕೆ ತಾವೇ ಬಲಿಯಾಗಿಬಿಡುತ್ತಾರೆ. ಆದರೆ, ಶಿವನು ಹಾಗಲ್ಲ; ತಾನೂ ಪೂರ್ಣವಾಗಿ ನುಂಗದೇ, ಇತರರೆಡೆಗೆ ವಮನವನ್ನೂ ಮಾಡದೆ, ಕಂಠದಲ್ಲೇ ಇರಿಸಿ (ಕಷ್ಟವನ್ನು ನುಂಗಿಕೊಂಡು), ಅದನ್ನು ತನ್ನ ಅಲಂಕಾರವಾಗಿ ಮಾಡಿ, ಸಮಭಾವದಿಂದಿದ್ದು ತನ್ನತನವನ್ನು, ಧ್ಯಾನವನ್ನು ಕಾಪಿಡುತ್ತಾನೆ.

೧೦) ಶಿವನು ಯಾಕೆ ನಾಗಭೂಷಣನು ಹಾಗೂ ವಿಭೂತಿಧಾರಕನು?


ಯಸ್ಯೋರಸಿ ವ್ಯಾಲರಾಟ್— ಯಾರ ಎದೆಯಲ್ಲಿ (ಯಸ್ಯ ಉರಸಿ), ಸರ್ಪರಾಜನಿರುವನೋ (ವ್ಯಾಲ-ರಾಟ್) ಅಂಥವನು ಶಿವನು.

೧) ಹಾವು ಭಯಕಾರಕ. ಶಿವನು ಅಂತಹ ಹಾವನ್ನೇ ಹಾರವನ್ನಾಗಿಸಿದ್ದು ಆತನು ಭಯವರ್ಜಿತನೆಂಬುದರ ದ್ಯೋತಕ.

೨) ಸರ್ಪವು ಕಾಲದ ಸೂಚಕ. ಕಾಲವೆಂಬ ಸರ್ಪವು ನಮ್ಮನ್ನು ದಿನವೂ ಬಿಗಿಹಿಡಿಯುತ್ತಾ, ಕೊನೆಗೆ ಕಚ್ಚಿ ನಮ್ಮನ್ನು ಮರಣಕ್ಕೆ ದೂಡುವುದು. ಹೀಗಾಗಿ ಕಾಲ ಹಾಗೂ ಮರಣಗಳು ನಮಗೆ ಭಯಕಾರಕ. ಆದರೆ ಶಿವನು ಕಾಲದ ದೇವತೆ, ಮೃತ್ಯುದೇವತೆ, ಮೃತ್ಯುಞ್ಜಯ, ಕಾಲನಿಗೂ ಕಾಲನು. ಇದು ಆತನ ಕಾಲಾತೀತತೆಯ ದ್ಯೋತಕ. ಇದು ನಮ್ಮ ನಿಜಸ್ವರೂಪವಾದ ಆತ್ಮದ ಸ್ವಭಾವವೂ ಹೌದಾದ್ದರಿಂದ ನಾವೂ ಸಹ ಕಾಲ-ಮರಣಾತೀತರು; ಭಯಪಡಬೇಕಾಗಿಲ್ಲ. ಆತ್ಮಕ್ಕೆ ವಯಸ್ಸಿಲ್ಲ, ಹುಟ್ಟಿಲ್ಲ, ಸಾವಿಲ್ಲ. ಕೇವಲ ಪಾಂಚಭೌತಿಕ ಶರೀರ ಮಾತ್ರ ದಿನೇ ದಿನೇ ಶೀರ್ಯಮಾಣವಾದದ್ದು, ಕ್ಷಯಿಸುವಂಥದ್ದು.

೩) ಶಿವನ ಕೊರಳ ಸರ್ಪವು ವಿಷದಂತಹ ಋಣಾತ್ಮಕ ಯೋಚನೆ / ಸಂಕಲ್ಪಗಳನ್ನು ಹೊರಕಕ್ಕುತ್ತಿರುವ ಮನಸ್ಸಿನ ಪ್ರತಿನಿಧಿಯೂ ಹೌದು. ಆದರೆ ಅಂತಹ ಮನಸ್ಸನ್ನು ಸರಿಯಾಗಿ ನಿಯಂತ್ರಿಸಿದರೆ ಅದು ಪ್ರಶಾಂತವಾಗುವುದು; ನಮ್ಮೊಳಗೇ ಆಗಲಿ, ಇತರರೊಂದಿಗಾಗಲೀ ಘರ್ಷಣೆಯಲ್ಲಿ ತೊಡಗುವುದಿಲ್ಲ. ಅದು ಶಿವನಂತೆಯೇ ಶಾಂತವಾಗಿ ಬುಸುಗುಡದೆ, ವಿಷಕಾರದೆ ಧ್ಯಾನದಲ್ಲಿ / ಧನಾತ್ಮಕತೆಯಲ್ಲಿ ನೆಲೆನಿಲ್ಲುವುದು.

೪) ಸರ್ಪವು / ನಾಗವು ಜ್ಞಾನಸೂಚಕ / ಪವಿತ್ರಕದ ಸಂಜ್ಞೆ. ಅದ್ಯಾತ್ಮಿಕ ಉನ್ನತಿಗೆ ನಾಗಗಳು ಏಣಿಗಳಿದ್ದಂತೆ. ಶಿವನ ತಲೆಯ ಮೇಲೆ ೧, ಕೊರಳಿನಲ್ಲಿ ೧, ಎರಡೂ ತೋಳುಗಳಲ್ಲಿ ಒಂದೊಂದು, ಎರಡು ಮಣಿಕಟ್ಟುಗಳಲ್ಲೂ ಒಂದೊಂದು, ಸೊಂಟಕ್ಕೆ ೧ ಹಾಗೂ ೨ ತೊಡೆಗಳಲ್ಲಿ ಒಂದೊಂದು— ಹೀಗೆ ೯ ಸ್ಥಳಗಳಲ್ಲಿ ೯ ನಾಗಗಳಿರುತ್ತವೆ. ಅರ್ಥಾತ್, ಶಿವನ ಶರೀರವು ಪವಿತ್ರಕಗಳಿಂದಲೇ ರಚಿಸಲ್ಪಟ್ಟಿದೆ.

೫) ಈ ನವನಾಗಗಳನ್ನು ನವನಾರಾಯಣರು ಎಂದೂ ಹೇಳುವರು. ಇವರಿಂದಲೇ ನವನಾಥರ ಉತ್ಪತ್ತಿ.

೬) ೧ ನಾಗವು ಕುಂಡಲಿನಿಯಾಗಿ ನಮ್ಮ ದೇಹದಲ್ಲಿದೆ. ೫ ನಾಗಗಳು ಪಂಚಪ್ರಾಣಗಳಾಗಿವೆ. ಉಳಿದ ೩ ನಾಗಗಳು ನಮ್ಮ ದೇಹದಲ್ಲಿಲ್ಲ. ಆದ್ಯಾತ್ಮಿಕ ಉನ್ನತಿ ಹೊಂದಿದರೆ ಬರಬಹುದು.

೭) ನಾಗನು ಪುರುಷತತ್ತ್ವ, ಲೈಂಗಿಕತೆ ಹಾಗೂ ಸಂತತಿಯ ಪ್ರತೀಕ.

ಸೋऽಯಂ ಭೂತಿವಿಭೂಷಣಃ— ಅಂತಹ ಇವನು ವಿಭೂತಿಯಿಂದ ಅಲಂಕೃತನು / ಮಹಿಮಾನ್ವಿತನು (ಭೂತಿ— ವಿಭೂತಿ, ಮಹಿಮೆ).

ಇನ್ನು, ಶಿವನ ಶವ- ಭಸ್ಮಧಾರಣೆ -ಯೆಂಬ ಭೂಷಣವು, ನಮ್ಮ ಶರೀರಗಳು ಈಗಾಗಲೇ ಮೃತ, ಜಡವಸ್ತು; ಒಂದು ದಿನ ಭಸ್ಮವಾಗುವಂಥದ್ದು “ಭಸ್ಮಾನ್ತಗ್ಂ ಶರೀರಮ್”. ಹೀಗಾಗಿ ನಾವು ಬದುಕಿದ್ದಾಗಲೇ ದೇಹಪ್ರಜ್ಞೆಯಿಂದ ಮೇಲಕ್ಕೆ ಆತ್ಮಪ್ರಜ್ಞೆಗೇರಬೇಕು. ಭೂ-ಭವ ಎಂದರೆ ಜನ್ಮಕ್ಕೆ ಬರುವುದು. ಅಸ್-ಅಸ್ಮ-ಅಶ್ಮ ಎಂದರೆ ಬೂದಿ, ಮೋಡ, ಪರ್ವತ. ಯಾವುದು ಜನ್ಮಕ್ಕೆ ಬಂದು ಬೂದಿಯಾಗಿ ಹೋಗುವುದೋ ಅದಕ್ಕೆ ಭಸ್ಮೀಕೃತವಾಯಿತು ಎನ್ನುತ್ತಾರೆ. ಶ್ಮ (ಸ್ಮ) ಎಂದರೆ ರಕ್ಷೆ, ಬೂದಿ ಹಾಗೂ ಶೃ-ಶನ್ ಎಂದರೆ ಹರಡಿರುವುದು. ಹೀಗಾಗಿ ಬೂದಿ ಹರಡಿರುವುದೇ ಸ್ಮ(/ಶ್ಮ)ಶಾನ. ಪೃಥ್ವಿಯು ಅಗ್ನಿಯಿಂದ (ಅಗ್ನಿಗೋಳವಾದ ಸೂರ್ಯನಿಂದ) ಹುಟ್ಟಿದೆ. ಹಾಗೆಯೇ, ಪೃಥ್ವಿಯಲ್ಲಿನ ಸಕಲ ಜೀವರೂ ಆ ಅಗ್ನಿಯ (ವಿಶ್ವವ್ಯಾಪಿಯಾಗಿ ನಮ್ಮ ಶರೀರದಲ್ಲೂ ಇರುವ ವೈಶ್ವಾನರಾಗ್ನಿಯ) ತೇಜಸ್ಸಿನಿಂದಲೇ ಜನಿಸುತ್ತವೆ ಹಾಗೂ ಅದೇ ತೇಜಸ್ಸಿನಲ್ಲಿ ಕೊನೆಗೆ ವಿಲೀನವಾಗುತ್ತವೆ. ಪೃಥ್ವಿಯ ಸಮಷ್ಟಿಸ್ಮೃತಿಯ ಪ್ರತಿನಿಧಿಯಾದ ವ್ಯಷ್ಟಿಸ್ಮೃತಿಯ ಸ್ಥಾನ ಮಾನವನ ತಲೆಬುರುಡೆ. ಪೃಥ್ವಿ ಹಾಗೂ ತಲೆಬುರುಡೆಗಳೆರಡರ ಆಕಾರವೂ ಒಂದೇ. ಭಸ್ಮದಲ್ಲಿ ಜನ್ಮಪೂರ್ವದ ಹಾಗೂ ಜನ್ಮಾನಂತರದ ೩ ವಿಧದ ಸ್ಮೃತಿಗಳಿರುತ್ತವೆ—  ಯಜ್ಞಸ್ಮೃತಿ (ವೇದ / ಜ್ಞಾನ ದ ಸ್ಮರಣೆ), ಪಾರ್ಥಿವಸ್ಮೃತಿ (ದೇಹಭಾವ) ಹಾಗೂ ತನ್ಮಯಸ್ಮೃತಿ (ಭಗವನ್ಮಯ / ಆತ್ಮ ಸ್ಮರಣೆ). ಶಿವನ ಭಸ್ಮದ ೩ ಪಟ್ಟೆಗಳು ಇವುಗಳ ದ್ಯೋತಕ. ಅಲ್ಲದೆ, ಜ್ಞಾನ-ಪಾವಿತ್ರ್ಯ-ತಪಸ್ಸು (ಯೋಗಸಾಧನೆ)ಗಳ ಸಂಕೇತವೂ ಹೌದು. ಭಸ್ಮವು ಮೃತ್ಯುಲಹರಿಗಳನ್ನು ಸೂಸುವಂಥದ್ದು. “ಅಜ್ಞಾನವನ್ನು ತೊರೆಯಿರಿ; ದೇಹವು ಶಾಶ್ವತಸತ್ಯವಲ್ಲ; ಅದರಿಂದ ಸಿಗುವ ಭೌತಿಕ ಇಂದ್ರಿಯಸುಖಗಳೂ ನಿತ್ಯವಲ್ಲ / ನಶ್ವರ / ತಾತ್ಕಾಲಿಕ; ಹೀಗಾಗಿ ಅದರಲ್ಲಿ ಮೋಹಗೊಳ್ಳಬೇಡಿ / ದೇಹಸುಖದ, ಸಂಸಾರಸುಖದ ನಶ್ವರತೆಯ ಬಂಧನಕ್ಕೆ ಸಿಲುಕದಿರಿ” ಎಂಬುದು ಶಿವನ ಭಸ್ಮಧಾರಣೆಯ ಸಂದೇಶ.

_“ಬಭಸ್ತಿ ಇತಿ ಭಸ್ಮನ್, ಭಸ್ ಭರ್ತ್ಸನ-ದೀಪ್ತ್ಯೋಃ ಧಾತುಃ”_ ― ಜುಗುಪ್ಸೆ / ನಿಂದೆ ಹಾಗೂ ದೀಪ್ತಿ / ಬೆಳಕು ಎಂಬರ್ಥದ ಭಸ್ ಧಾತುವಿನಿಂದ ಭಸ್ಮಶಬ್ದದ ವ್ಯುತ್ಪತ್ತಿ. ಭಸ್ಮವು ದೇಹಭಾವವನ್ನು ನಶ್ವರ, ಅನಿತ್ಯವೆಂದು ನಿಂದಿಸುತ್ತದೆ. ಭಸ್ಮವು ಇಂಧನವು ಹೊತ್ತಿ ಉರಿದು ಬೆಳಗಿದ ಬಳಿಕ ಉಂಟಾಗುತ್ತದೆ.

೧೧) ಶಿವನಿಗೆ ಸರ್ವೇಶ್ವರತ್ವವು ಹೇಗೆ?

ಸುರವರಃ ಸರ್ವಾಧಿಪಃ ಸರ್ವದಾ— ಯಾವಾಗಲೂ (ಸರ್ವದಾ), ಸಮಸ್ತ ದೇವತೆಗಳಲ್ಲಿ ಶ್ರೇಷ್ಠನಾದವನೂ (ಸುರವರಃ), ಇಡೀ ಸೃಷ್ಟಿಯ ಈಶ್ವರನೂ / ಅಧಿಪತಿಯೂ (ಸರ್ವಾಧಿಪಃ) ಆದವನು ಶಿವನು.

ಒಮ್ಮೆ ದೇಹಪ್ರಜ್ಞೆಯಿಂದ ಮೇಲೇರಿದರೆ ಜಗತ್ತಿನ ಒಡೆಯನಾಗಲಾರನೆ? ಆ ಬಳಿಕ ಯಾವೊಬ್ಬನೂ ಆತನನ್ನು ಹೆದರಿಸಬಲ್ಲನೆ? ಅಂಥವನಿಗೆ ಲಂಚ-ಆಮಿಷ ಒಡ್ಡಬಲ್ಲನೆ? ತಪ್ಪುಮಾಡಲು ಬಲಾತ್ಕರಿಸಬಲ್ಲನೆ? ಇಲ್ಲ, ಸಾಧ್ಯವಿಲ್ಲ. ನಮ್ಮೆಲ್ಲ ಆಸೆ-ಆಮಿಷಗಳಿಗೆ ದೇಹಪ್ರಜ್ಞೆ / ಈ ದೇಹವೇ ನಾನೆಂಬ ಭಾವ ವೇ ಕಾರಣ. ದೇಹಪ್ರಜ್ಞೆಯಿರುವವರೆಗೆ ಸನ್ನಿವೇಶಗಳನ್ನು / ಸಂದರ್ಭಗಳನ್ನು ನಿರ್ಮಿಸುವ / ಗೆಲ್ಲುವ / ಎದುರಿಸುವ ಸಾಮರ್ಥ್ಯ ಬರದು. ರಜೋ, ತಮೋ ಗುಣಗಳ ಪ್ರತೀಕವಾದ ಕ್ರೂರ ಹುಲಿಯನ್ನು ಮಣಿಸಿ, ವ್ಯಾಘ್ರಚರ್ಮದ ಮೇಲೆ ಕುಳಿತ ಶಿವನು ನಿರ್ಗುಣನು.

ಸರ್ವಃ ಸರ್ವಗತಃ ಶಶಿನಿಭಃ— ಸೃಷ್ಟಿಯ ಸರ್ವಸ್ವವೂ ಆತನೇ. ಆತನನ್ನು ಬಿಟ್ಟು ಬೇರೊಂದಿಲ್ಲ (ಸರ್ವಃ). ದೇಹಪ್ರಜ್ಞೆಯನ್ನು ಮೀರಿದವನಾದ್ದರಿಂದಲೇ ಆತನು ವಿಶ್ವದೆಲ್ಲೆಡೆಯೂ ಪಸರಿಸಿರುವನು (ಸರ್ವ-ಗತನಾಗಿರುವನು). ಸಕಲರ ಮನಸ್ಸಿಗೂ ಆಹ್ಲಾದಜನಕನಾದ (ಇದರಿಂದ ಮನಸ್ಸನ್ನು ಪ್ರಶಾಂತಗೊಳಿಸಬಲ್ಲ), ಓಷಧೀಶನಾದ ಚಂದ್ರನಂತೆ (ಶಶಿ-ನಿಭಃ) ಪ್ರಪ್ರಥಮ ದೈವೀವೈದ್ಯನಾಗಿ (“ಪ್ರಥಮೋ ದೈವ್ಯೋ ಭಿಷಕ್), ಅಮೃತಸ್ವರೂಪನಾಗಿ, ಮೃತ್ಯುಂಜಯನಾಮಕನಾಗಿ ವಿರಾಜಮಾನನಾಗಿರುವನು.

೧೨) ಶಿವನ ಮೂರುಕಣ್ಣುಗಳ ವಿಶೇಷಾರ್ಥಗಳೇನು?


ಶಿವನು ಮುಕ್ಕಣ್ಣನು, ೩ ಕಣ್ಣುಳ್ಳವನು. ಬಲ-ಎಡ-ಹಣೆಗಣ್ಣುಗಳು ಅನುಕ್ರಮವಾಗಿ ಸೂರ್ಯ, ಚಂದ್ರ, ಅಗ್ನಿಗಳ ಅಥವಾ ಸ್ಥಿತಿ, ಸೃಷ್ಟಿ, ಲಯಗಳ ಅಥವಾ ಪಿಂಗಳಾ, ಇಡಾ, ಸುಷುಮ್ನಾನಾಡಿಗಳ ಅಥವಾ ನ್ಯಾಯ, ಪ್ರೇಮ, ಜ್ಞಾನ / ಅತೀಂದ್ರಿಯಶಕ್ತಿಗಳ ಪ್ರತೀಕ. ಸರ್ವೇಶ್ವರನು ನ್ಯಾಯ ಹಾಗೂ ಪ್ರೇಮಗಳನ್ನು ಸರಿದೂಗಿಸಿ ಆಡಳಿತ ಮಾಡುತ್ತಾನೆ. ಪ್ರೇಮವಿರದ ನ್ಯಾಯವು ಕೆಲವೊಮ್ಮೆ ಕರಾಳವೆನಿಸಿದರೆ, ನ್ಯಾಯವಿಲ್ಲದ ಪ್ರೇಮವು ಕುರುಡುಪ್ರೇಮ / ಕೇವಲ ಭಾವನಾತ್ಮಕವಾಗಿ, ಲೋಕದಲ್ಲಿ ಅನಾಚರಿಗಳು ಹೆಚ್ಚುವರು. ಹೀಗಾಗಿ, ಶಿವನು ಇವೆರಡನ್ನೂ ಸರಿದೂಗಿಸಿಕೊಂಡು, ಜ್ಞಾನದೃಷ್ಟಿಯಿಂದ ಲೋಕದ ಅಜ್ಞಾನವನ್ನು ಕಳೆಯುವ ಅದ್ಭುತ ಆಡಳಿತಗಾರನು.

ಅಲ್ಲದೆ ಈ ಮೂರು ಕಣ್ಣುಗಳು ಕ್ರಮವಾಗಿ ರಜ, ತಮ ಹಾಗೂ ಸತ್ತ್ವಗುಣಗಳ, ವರ್ತಮಾನ, ಭೂತ ಹಾಗೂ ಭವಿಷ್ಯಗಳ, ಶಿವ, ಸುಂದರ ಹಾಗೂ ಸತ್ಯಗಳ, ಬ್ರಹ್ಮಾ, ರುದ್ರ ಹಾಗೂ ವಿಷ್ಣುಗಳ, ಋಗ್, ಯಜುಸ್ ಮತ್ತು ಸಾಮಗಳ, ಮರ್ತ್ಯ, ಪಾತಾಳ ಹಾಗೂ ಸ್ವರ್ಗಗಳ, ಕಾಲ, ದ್ರವ್ಯ ಹಾಗೂ ಆಕಾಶಗಳ, ಧನ, ಋಣ ಹಾಗೂ ತಟಸ್ಥಗಳ, ಕ್ರಿಯಾ, ಇಚ್ಛಾ ಹಾಗೂ ಜ್ಞಾನಗಳ,   ಜೀವ, ಜಗತ್ ಹಾಗೂ ಈಶ್ವರರ — ಇತ್ಯಾದಿಗಳ ಪ್ರತೀಕ.

ಹೀಗೆ, ಶಿವನು ಪಾರಮಾರ್ಥಿಕಸತ್ಯವೂ, ವಿಶ್ವದ ಅಂತಸ್ಸತ್ತ್ವವೂ, ಎಲ್ಲ ಜೀವರ ಅಂತರಾತ್ಮನೂ ಆಗಿರುವನೆಂಬುದನ್ನು ನಾವು ಕಾಣಬಹುದು. ಆತನು ಜಗದೀಶನೂ, ನವಸೃಷ್ಟಿಗೆ ಕಾರಣವಾಗುವಂತಹ ಲಯಕರ್ತನೂ ಆಗಿರುವನು. ಇದರೊಂದಿಗೆ, ಶಂಕರಾಚಾರ್ಯ, ದಕ್ಷಿಣಾಮೂರ್ತಿ ಮುಂತಾದ ವಿವಿಧ ಗುರುರೂಪಿ ಅವತಾರಸ್ವರೂಪನಾಗಿ, ಕೊನೆಗೆ ಸತ್ಯವನ್ನು ತಲುಪಬಲ್ಲ ಪಥದ ದಿಗ್ದರ್ಶಕನಾಗಿ “ಸತ್ಯಂ ಶಿವಂ ಸುಂದರಮ್” ಎನಿಸಿರುವನು.

೧೩) ಶಿವನಿಗೆ ಲಿಂಗಾರ್ಚನೆಯು ಏಕೆ?


ಮಧ್ಯಮೇ ಚ ಹೃದಯಸ್ಯ ಲಲಾಟೇ
ಸ್ಥಾಣುವಜ್ಜ್ವಲತಿ ಲಿಙ್ಗಮದೃಶ್ಯಮ್ |
ಅಸ್ತಿ ಗಾರ್ಗಿ ಪರಮಾರ್ಥಮಿದಂ ತತ್
ಪಶ್ಯ ಪಶ್ಯ ಮನಸಾ ಶಿವರೂಪಮ್ ||

ಮೂಲಾಧಾರ-ಸ್ವಾಧಿಷ್ಠಾನ-ಮಣಿಪೂರ-ಅನಾಹತ-ವಿಶುದ್ಧ-ಆಜ್ಞಾ— ಎಂಬ ಷಟ್ಚಕ್ರಗಳಲ್ಲಿ ೪ನೆಯದಾದ ಅನಾಹತ / ಹೃದಯಚಕ್ರ ಹಾಗೂ ಹಣೆಯಲ್ಲಿ ಭ್ರೂಮಧ್ಯದಲ್ಲಿರುವ ೬ನೆಯ ಆಜ್ಞಾಚಕ್ರಗಳಲ್ಲಿ ಲಿಂಗರೂಪಿನಿಂದ ಪ್ರಕಾಶಿಸುವ ಇದೇ ನಿಜಪರಮಾರ್ಥವಾಗಿದೆ. ಎಲೈ ಗಾರ್ಗಿಯೆ! ಅದನ್ನು, ಆ ಶಿವನ ಜ್ಯೋತಿರ್ಲಿಂಗರೂಪವನ್ನು ಮನಸ್ಸಿನಿಂದಲೇ ನೋಡು ನೋಡು ಎಂದು ಯೋಗಗ್ರಂಥಗಳು ಲಿಂಗರೂಪವು ಪ್ರತೀಕಮಾತ್ರವಲ್ಲ, ಯೋಗಿಗಳ ಅಂತರ್ದೃಷ್ಟಿಯಲ್ಲಿ ಕಾಣುವಂತಹ ರೂಪವೂ ಹೌದೆಂದು ಸ್ವಷ್ಟವಾಗಿ ಹೇಳಿರುವುದರಿಂದ ಶಿವನ ಲಿಂಗಪೂಜೆಗೆ ಇದು ಪ್ರಮಾಣವಾಗಿರುವುದು.


ಏಕ ಏವ ರುದ್ರೋ ನ ದ್ವಿತೀಯಾಯ ತಸ್ಥೇ

“ರುದ್ರನೋರ್ವನೇ ಇರುವನು. ಎರಡನೆಯವರಾರೂ ಇಲ್ಲ” ಎಂದಿದೆ ಶ್ರುತಿ. ನಿರ್ಗುಣ, ನಿರಾಕಾರನಾದ ಪರಮಾತ್ಮನ ಧ್ಯಾನಕ್ಕೆ ಸುಲಭವಾಗಲು ಲಿಂಗದ ಪರಿಕಲ್ಪನೆ ಬಂತು. ಸಾಧಕನು ಸಾಕಾರ-ಸಗುಣೋಪಾಸನೆಯಿಂದ ನಿರಾಕಾರ-ನಿರ್ಗುಣೋಪಾಸನೆಗೇರಬೇಕೆಂಬುದೇ ಸನಾತನವಾದ ಶಿವಲಿಂಗಾರಾಧನೆಯ ಉದ್ದೇಶ. ಲಿಂಗವೆಂಬುದು ಅಖಂಡರೂಪದ ಒಂದು ಬಿಂದು ಮಾತ್ರ. ಅಖಂಡಸ್ವರೂಪದ ಚಿಂತನೆಗೆ ಶಿವಲಿಂಗವು ಆರಂಭದಲ್ಲಿ ಒಂದು ಕೇಂದ್ರಬಿಂದುವಾಗಿದ್ದರೂ, ಸಾಧಕನು ಕ್ರಮಕ್ರಮವಾಗಿ ಸಾಧನೆಯಲ್ಲಿ ಮೇಲೇರಿ ಈ ಬಿಂದುವನ್ನು ಮೀರಿ ಸಿಂಧುವಿನಂತೆ ಅಖಂಡಾಕಾರವೃತ್ತಿಯನ್ನು ಬೆಳೆಸಿಕೊಳ್ಳುವುದೇ ಶಿವಲಿಂಗಮುಖೇನ ಮಾಡುವ ರುದ್ರಾರ್ಚನೆಯ ರಹಸ್ಯ. ಇದನ್ನು ಪರಿಪೂರ್ಣವಾಗಿ ಸಾಧಿಸಿದವನು ಉಪನಿಷತ್ತುಗಳಲ್ಲಿ ವರ್ಣಿಸಿದಂತೆ “ಶಾನ್ತಂ ಶಿವಮ್ ಅದ್ವೈತಮ್” ಎಂಬ ಸ್ಥಿತಿಗೇರುತ್ತಾನೆ.

ಲೀನಮ್ ಅರ್ಥಂ ಗಮಯತಿ ಇತಿ ಲಿಙ್ಗಮ್

ತನ್ನೊಳಗೇ ಅಡಕವಾಗಿರುವ ಪರಮೇಶ್ವರನನ್ನು ನೆನಪಿಸಿಕೊಳ್ಳಲು, ತನ್ನಲ್ಲೇ ಲೀನವಾಗಿರುವನು ಭಗವಂತನು ಎಂಬ ಅರ್ಥವನ್ನು ನೆನಪಿಸಲು / ಹೊಂದಲು ನಮಗೆ ಸಹಕಾರಿಯಾದುದೇ ಲಿಂಗವೆಂಬ ಗುರುತು / ಚಿಹ್ನೆ. ಮನಸ್ಸಿನಂತೆ ಮಹಾದೇವ ಎಂಬ ಮಾತಿನಂತೆಯೇ ಮನಸ್ಸು ಮಾಡಿದರೆ ಜಗವೆಲ್ಲವೂ ಶಿವಮಯವಾಗಿ ತೋರಬಲ್ಲದು.

೧೪) “ಅಭಿಷೇಕಪ್ರಿಯಃ ಶಿವಃ” ಎಂಬುದರ ಗೂಢಾರ್ಥಗಳೇನು?

೧) ಭಗವಂತನು ತೇಜೋರೂಪದಿಂದ ಪಾತಾಳದಿಂದ ದ್ಯುಲೋಕದವರೆಗೆ ವ್ಯಾಪಿಸಿ ತೋರಿಕೊಂಡಾಗ ಆತನ ಆವಿರ್ಭಾವವು ಲಿಂಗಾಕಾರವಾಗಿತ್ತು. ಹೊಳೆಯುತ್ತಿರುವ ಆ ಲಿಂಗದ ಮೇಲ್ಭಾಗದಲ್ಲಿರುವ ಪೂರ್ಣಚಂದ್ರನ ಕಲೆಗಳಿಂದ ಜಾರುತ್ತಿರುವ ಅಮೃತಧಾರೆಗಳಿಂದ ಲಿಂಗವು ತೋಯಿಸಲ್ಪಡುತ್ತಿತ್ತು. ಇದು ಪರಮೇಶ್ವರನು ದೇವತೆಗಳಿಗಾಗಿ ಪ್ರಕಟಪಡಿಸಿದ ರೂಪವಾಗಿತ್ತು. ಇಂಥ ರೂಪವನ್ನು ಚಿಂತಿಸುತ್ತಾ, ನಿಧಾನಗತಿಯಿಂದ ಸಾವಧಾನವಾಗಿ (ಅವಧಾನ / ಏಕಾಗ್ರತೆಯ ಸಹಿತವಾಗಿ) ರುದ್ರಾಧ್ಯಾಯವನ್ನು ಪಠಿಸುತ್ತಾ, ಲಿಂಗಕ್ಕೆ ಅಭಿಷೇಕವನ್ನು ಮಾಡಬೇಕು. ಅದರೊಳಗೆ ಹಾಗೂ ಮನದೊಳಗೆ ಲಿಂಗವನ್ನೂ ಮೀರಿದ ಚಿನ್ಮಯನಾದ ಶಿವನನ್ನು ಚಿಂತಿಸಬೇಕು.

೨) ದೇವಾಸುರರು ಕೈಗೊಂಡ ಕ್ಷೀರಸಾಗರಮಥನದಲ್ಲಿ ಉತ್ಪನ್ನವಾದ ಘೋರಾತಿದಾರುಣವಾದ ಹಾಲಾಹಲ / ಕಾಲಕೂಟ ವಿಷವನ್ನುಂಡು ಲೋಕವನ್ನುಳಿಸಿ ನಂಜುಂಡೇಶ್ವರನೂ, ನೀಲಕಂಠನೂ, ವಿಷಕಂಠನೂ, ಶ್ರೀಕಂಠೇಶ್ವರನೂ ಆದ ಶಿವನ ಆ ವಿಷದ ತಾಪವನ್ನು ಹೋಗಲಾಡಿಸುವ ಸಂಕೇತವಾಗಿಯೂ ಅಭಿಷೇಕವನ್ನು ಮಾಡಲಾಗುತ್ತದೆ.

೩) ಪಾವನತಮ ಗಂಗೆಯನ್ನು ಶಿರದಲ್ಲಿ ಧರಿಸಿ, ಸದಾ ಗಂಗಾವಾರಿಯಿಂದ ಅಭಿಷೇಕಪ್ರಿಯನಾದ ಶಿವನು ಬೇಗನೆ ಪ್ರಸನನ್ನನಾಗಲೆಂದೂ ನಾವು ಅಭಿಷೇಕಮಾಡುತ್ತೇವೆ.

೪) ಅಭಿಷೇಕವು ನಿತ್ಯ ಅಂತರಂಗ-ಬಹಿರಂಗ ಶುದ್ಧಿಯ ಅಗತ್ಯತೆಯ ಸಂಕೇತವೂ ಹೌದು.

೫) ನಿರಂತರವಾದ ಜಲಾಭಿಷೇಕವು ನಮ್ಮ ಚಿತ್ತವು ತೈಲಧಾರೆಯಂತೆ ಭಗವಂತನಲ್ಲೇ ಏಕಾಗ್ರವಾಗಿ ನೆಲೆನಿಲ್ಲಲಿ ಹಾಗೂ ಮಾಡುವ ಕಾರ್ಯದಲ್ಲಿಯೂ ಚಿತ್ತೈಕಾಗ್ರತೆಯೂ, ಕಾರ್ಯ-ಕರಣಶುದ್ಧಿಗಳೂ ಸ್ಥಿರವಾಗಿದ್ದು ಕೈಗೊಂಡದ್ದೆಲ್ಲವೂ ಕೈಗೂಡಲೆಂಬುದರ ದ್ಯೋತಕವೂ ಹೌದು.

೬) ನಾವು ಸದಾ ತಣ್ಣೀರಿನಂತೆ ಪ್ರಶಾಂತಚಿತ್ತರಾಗಿರಬೇಕು, ಬಿಸಿಹಗೆ ಕೋಪತಾಪಗಳನ್ನು ಬಿಟ್ಟು ಸೌಮ್ಯ ಶಾಂತ ಸಮಚಿತ್ತತೆಯ ಸ್ಥಿರಬುದ್ಧಿ / ಸ್ಥಿತಪ್ರಜ್ಞತೆಯ ಭಾವ ನಮ್ಮದಾಗಿರಬೇಕೆಂಬುದರ ಸೂಚಕ.

೭) ತಣ್ಣೀರಿನ ಸ್ನಾನವು ಸರ್ವರೀತಿಯಿಂದಲೂ ಸರ್ವಾವಯವಗಳಿಗೂ ಆರೋಗ್ಯಕರವೆಂಬುದರ ಸೂಚಕ. ಶಿವನು ಪ್ರಥಮ ದೈವೀ ಭಿಷಗ್ವರನಲ್ಲವೆ? ದೇವವೈದ್ಯನ ಆರೋಗ್ಯರಕ್ಷಣೆಗಾಗಿನ ಸೂತ್ರವಿದು.

೮) ಜಲಸ್ನಾನವು ಕೆಲವು ಗಂಟೆಗಳ ನಿದ್ದೆ ಕೊಡುವಷ್ಟೇ ವಿಶ್ರಾಂತಿ ಹಾಗೂ ನವಚೈತನ್ಯವನ್ನು ನಮ್ಮ ದೇಹಕ್ಕೆ ಉಂಟುಮಾಡುತ್ತದೆ. ಹಾಗಾಗಿ ದಿನನಿತ್ಯ ಮಾಡುವ ಸ್ನಾನವು ನಮ್ಮ ಆರೋಗ್ಯವನ್ನು ಕಾಪಿಡುವುದೆಂಬುದರ ದ್ಯೋತಕವೂ ಹೌದು.

೯) ಲಿಂಗ-ಪಾಣಿಪೀಠಗಳಲ್ಲಿ ಶಿವ-ಶಕ್ತಿಗಳು ಒಟ್ಟಿಗೆ ಇರುವುದರಿಂದ ಪ್ರಚಂಡಶಕ್ತಿಯು ನಿರ್ಮಾಣವಾಗಿ, ಲಿಂಗದ ಮೇಲೆ ಹಾಗೂ ಬರುವ ಭಕ್ತರ ಮೇಲೆ ಹಾನಿಯಾಗದಂತೆ ನೀರಿನ ಧಾರೆಯು ಲಿಂಗದ ಮೇಲೆ ಸಂತತ ಬೀಳುವಂತೆ ಮಾಡುತ್ತಾರೆ. ಈ ಜಲಧಾರಾಭಿಷೇಕದಿಂದ ಸೂಕ್ಷ್ಮವಾದ ಓಂಕಾರ (ನಿರ್ಗುಣಬ್ರಹ್ಮವಾಚಕ) ದ ನಿರ್ಮಾಣವಾದಂತೆಯೇ, ಜೀವರ ಮೇಲೆ ನಾಮಜಪದ ಸತತ ಧಾರೆಯಾದರೆ ಬಂಧಮುಕ್ತಿಯಾಗಿ ಜ್ಞಾನಚಕ್ಷುವು ತೆರೆದು ನಿರ್ಗಣೋಪಾಸನೆಗೇರಲು ಸಾಧ್ಯವಾಗುವುದು.

೧೦) ಶಿವನು ಸದಾ ಕ್ರಿಯಾಶೀಲನೂ, ಸೃಷ್ಟ್ಯುನ್ಮುಖನೂ ಆದ್ದರಿಂದ, ಇದರ ಪ್ರತೀಕವಾಗಿ ಶಿವಲಿಂಗ ಹಾಗೂ ಪಾಣಿಪೀಠ / ಜಗನ್ಮಾತಾಯೋನಿಗಳನ್ನು ಸತತವೂ ಅಭಿಷೇಕದಿಂದ ಒದ್ದೆಯಾಗಿಡಲಾಗುತ್ತದೆ.

ಹೀಗೆ ಶಿವನ ಅಭಿಷೇಕಪ್ರಿಯತೆಯು ನಾನಾ ವಿಚಾರಗಳನ್ನು ನಮಗೆ ಬೋಧಿಸಬಲ್ಲದು.


ಸರ್ವದೇವಾತ್ಮಕೋ ರುದ್ರಃ ಸರ್ವೇ ದೇವಾಃ ಶಿವಾತ್ಮಕಾಃ
(ರುದ್ರಹೃದಯೋಪನಿಷತ್)

ರುದ್ರನು ಸರ್ವದೇವರನ್ನೂ ಒಳಗೊಂಡಿರುವನು. ಸಕಲ ದೇವರುಗಳೂ ಶಿವನನ್ನು ತಮ್ಮೊಳಗೆ ಹೊಂದಿರುವರು. ಹೀಗಾಗಿ ರುದ್ರಾಭಿಷೇಕದಿಂದ ಸರ್ವದೇವತಾಪ್ರಸನ್ನತೆಯೂ ಆಗಬಲ್ಲದು.

೧೫) ರುದ್ರಾಧ್ಯಾಯದ ಮಹಿಮೆಯು ಸ್ಮೃತಿಗಳಲ್ಲಿ ಹೇಗೆ ಹೇಳಲ್ಪಟ್ಟಿದೆ?


ನಮಕಂ ಚಮಕಂ ಚೈವ ಪೌರುಷಂ ಸೂಕ್ತಮೇವ ಚ |
ನಿತ್ಯಂ ತ್ರಯಂ ಪ್ರಯುಞ್ಜಾನೋ ಬ್ರಹ್ಮಲೋಕೇ ಮಹೀಯತೇ ||
ಸತತಂ ರುದ್ರಜಾಪ್ಯೋऽಸೌ ಪರಾಂ ಮುಕ್ತಿಮವಾಪ್ಸ್ಯತಿ ||

ನಮಕ / ರುದ್ರಾಧ್ಯಾಯ / ರುದ್ರಪ್ರಶ್ನ , ಚಮಕ / ಚಮಕಾಧ್ಯಾಯ / ಚಮಕಪ್ರಶ್ನ ಹಾಗೂ ಪುರುಷಸೂಕ್ತ— ಇವು ಮೂರನ್ನು ನಿತ್ಯವೂ ಅನುಷ್ಠಾನಮಾಡುವವನು ಸತ್ಯಲೋಕವೂ, ಯೋಗಿಗಳ ಬ್ರಹ್ಮವಿದರ ಲೋಕವೂ ಆದ ಬ್ರಹ್ಮಲೋಕವನ್ನು ಹೊಂದುವನು. ಸತತವೂ ರುದ್ರವನ್ನು ಜಪಿಸುವಂಥವನು ಪರಾಗತಿಯನ್ನು / ಆತ್ಯಂತಿಕ ಮುಕ್ತಿಯನ್ನು ಹೊಂದುತ್ತಾನೆ ಎಂಬುದು ಸ್ಮೃತಿವಚನ. ಹೀಗೆ ರುದ್ರಾಧ್ಯಾಯದ ಮಹಿಮೆಯು ಅಗಣಿತವೂ, ಅನಂತವೂ, ಅನಿರ್ವಚನೀಯವೂ, ಧರ್ಮಾರ್ಥಕಾಮಮೋಕ್ಷಾಖ್ಯ ಚತುರ್ವಿಧಪುರುಷಾರ್ಥಸಾಧಕವೂ ಆಗಿದೆ.

೧೬) ರುದ್ರಾನುಷ್ಠಾನದಿಂದ ಕೃಷ್ಣನಿಗೇನು ಫಲ ದೊರೆಯಿತೆನ್ನುತ್ತದೆ ಮಹಾಭಾರತ?


ಶ್ರೀರುದ್ರಾನುಷ್ಠಾನದಿಂದ, ಶಿವಪಾರ್ವತಿಯರನ್ನು ಪ್ರಸನ್ನೀಕರಿಸಿದ ಸಾಕ್ಷಾತ್ ಶ್ರೀಕೃಷ್ಣನೇ ಧರ್ಮದಲ್ಲಿ ದೃಢತ್ವ, ಯುದ್ಧದಲ್ಲಿ ಶತ್ರುಹಾನಿ, ಶ್ರೇಷ್ಠ ಯಶಸ್ಸು, ಪರಮಶ್ರೇಷ್ಠವಾದ ಅತುಲ ಬಲ, ಯೋಗಪ್ರಿಯತೆ, ಶಿವಸಾನ್ನಿಧ್ಯ, ನೂರಾರು ಸತ್ಪುತ್ರರನ್ನು ಶಿವನಿಂದ ವರವಾಗಿ ಪಡೆದನು. ದ್ವಿಜರಲ್ಲಿ ಅಕ್ರೋಧ / ಮೈತ್ರ, ಪಿತೃಗಳ ಪ್ರಸನ್ನತೆ, ನೂರಾರು ಮಕ್ಕಳ ಬಳಿಕವೂ ಶ್ರೇಷ್ಠವಾದ ಉಪಭೋಗಭಾಗ್ಯ, ಸ್ವವಂಶದ ಪ್ರೀತಿ-ಅಭಿಮಾನ, ತಾಯಿಯ ಆಶೀರ್ವಾದ, ಶಮ / ಮನೋನಿಗ್ರಹ / ಮನಃಪ್ರಶಮನ ಹಾಗೂ ದಾಕ್ಷ್ಯ / ದಕ್ಷತೆ / ಸಮರ್ಥತೆಗಳನ್ನು ಪಾರ್ವತಿಯಲ್ಲಿ ಬೇಡಲು ಆಕೆಯು, “ಮುಂದೆ ಹೀಗಾಗಲಿದೆ. ನನ್ನ ಮಾತು ಸುಳ್ಳಾಗದು. ೧೬,೦೦೦ ಕನ್ಯೆಯರ ಪತಿತ್ವವೂ, ಅವರಲ್ಲಿ ಪ್ರೀತಿಯೂ, ಆದರೂ ನಿನಗೆ ಅಕ್ಷಯತ್ವವೂ / ಕ್ಷೀಣತ್ವರಾಹಿತ್ಯವೂ, ಬಂಧುಬಾಂಧವರ ಪ್ರೀತಿ, ಶರೀರಭೋಗ, ನಿತ್ಯವೂ ಮನೆಯಲ್ಲಿ ನೂರಾರು ಅತಿಥಿಗಳ ಸತ್ಕಾರಗಳು ಸಾಕಾರಗೊಳ್ಳಲಿವೆ” ಎಂದು ಕೃಷ್ಣನಿಗೆ ವರವಿತ್ತಳು.

ಧರ್ಮೇ ದೃಢತ್ವಂ ಯುಧಿ ಶತ್ರುಘಾತಂ
ಯಶಸ್ತಥಾಗ್ರ್ಯಂ ಪರಮಂ ಬಲಂ ಚ |
ಯೋಗಪ್ರಿಯತ್ವಂ ತವ ಸನ್ನಿಕರ್ಷಂ
ವೃಣೇ ಸುತಾನಾಂ ಚ ಶತಂ ಶತಾನಿ ||

ಇತ್ಯಾದಿಯಾಗಿ ಮಹಾಭಾರತ ದ ಆನುಶಾಸನಿಕಪರ್ವದ ೧೬ನೇ ಅಧ್ಯಾಯದಲ್ಲಿ ಹೇಳಿದೆ.

ಇದೇ ವ್ಯಾಸಭಾರತ ದ ಆನುಶಾಸನಿಕಪರ್ವದಲ್ಲಿ ಯುಧಿಷ್ಠಿರನಿಗೆ ಭೀಷ್ಮಾಚಾರ್ಯರೂ, ದ್ರೋಣಪರ್ವದಲ್ಲಿ ಅರ್ಜುನನಿಗೆ ಭಗವಾನ್ ವೇದವ್ಯಾಸರೂ, ಧರ್ಮರಾಜನಿಗೆ ಶ್ರೀಕೃಷ್ಣಪರಮಾತ್ಮನೂ ಶ್ರಿರುದ್ರಾಧ್ಯಾಯಜಪದಿಂದ ಸರ್ವಾರ್ಥವೂ ಸಿದ್ಧಿಸುವುದೆಂದು ಹೇಳಿದ್ದಾರೆ.

ಯಜುಷಾಂ ಶತರುದ್ರಿಯಮ್

ಶತರುದ್ರಿಯವೆಂಬ ರುದ್ರನ ನೂರಾರು ಹೆಸರು, ಲೀಲೆ, ಮಹಿಮೆಗಳುಳ್ಳ ಮಂತ್ರಭಾಗವು ಸಮಸ್ತಯಜುರ್ಮಂತ್ರಗಳಲ್ಲೇ ಶ್ರೇಷ್ಠವೂ, ಸಾಕ್ಷಾತ್ ಶಿವಸ್ವರೂಪವೂ ಆಗಿದೆಯೆಂದು ವ್ಯಾಸಮಹಾಭಾರತದ ಆನುಶಾಸನಿಕಪರ್ವದ ೧೪ನೇ ಅಧ್ಯಾಯದ ೧೫೯ನೇ ಶ್ಲೋಕದಲ್ಲಿದೆ.

ನಾಸ್ತಿ ಶರ್ವಸಮೋ ದಾನೇ ನಾಸ್ತಿ ಶರ್ವಸಮೋ ರಣೇ |
ನಾಸ್ತಿ ಶರ್ವಸಮೋ ದೇವೋ ನಾಸ್ತಿ ಶರ್ವಸಮಾ ಗತಿಃ ||
(ಮಹಾಭಾರತ, ಆನುಶಾಸನಿಕಪರ್ವ, ಅಧ್ಯಾಯ ೧೬, ಶ್ಲೋ.೧೧)

ವಾಸುದೇವ ಕೃಷ್ಣನು ಅರ್ಜುನನಿಗೆ ಹೇಳಿದ್ದು— ದಾನದಲ್ಲಿ ಶಿವನಿಗೆ ಸಮನಾದವರಿಲ್ಲ. ರಣರಂಗದಲ್ಲಿ ಶಿವತುಲ್ಯರಿಲ್ಲ. ಶಿವನಿಗೆ ಸಮನಾದ ದೇವನೂ ಇಲ್ಲ. ಶಿವನೇ ಅನನ್ಯಗತಿಕನು, ಸಕಲಶರಣ್ಯನು.

೧೭) ರುದ್ರಾನುಷ್ಠಾನದ ಫಲವನ್ನು ವಿವಿಧ ಪುರಾಣಗಳು ಹೇಗೆ ಹೇಳಿವೆ?


ಸ್ಕಾಂದಪುರಾಣ ದಲ್ಲಿ ಅಲ್ಪಾಯುಷಿಯಾದ ರಾಜಕುವರನೋರ್ವನು ಅತಿರುದ್ರಾನುಷ್ಠಾನದಿಂದ ೧೦,೦೦೦ ವರ್ಷಗಳ ಆಯುಸ್ಸನ್ನು ಪಡೆದ ಉಪಾಖ್ಯಾನವಿದೆ. ಕೂರ್ಮಪುರಾಣ ದಲ್ಲಿ ಶ್ರಿಕೃಷ್ಣಪರಮಾತ್ಮನು ಶ್ರೀರುದ್ರಾಧ್ಯಾಯಜಪತತ್ಪರನಾದ ಪ್ರಸಂಗವಿದೆ. ಇನ್ನು, ಲಿಙ್ಗಪುರಾಣ ಮತ್ತು ಮಹಾಭಾರತದ ಖಿಲಭಾಗ (ಉಳಿಕೆಭಾಗ)ವೆನಿಸಿದ ಹರಿವಂಶಪುರಾಣ ಗಳಲ್ಲಿ ಶ್ರೀಕೃಷ್ಣನು ಶ್ರೀರುದ್ರಮಂತ್ರವನ್ನು ಪುರಶ್ಚರಣೆ ಮಾಡಿ ಶ್ರೀಪಂಚಾಕ್ಷರೀಮಂತ್ರವನ್ನು ಜಪಿಸಿದ ವೃತ್ತಾಂತವು ವಿವರವಾಗಿ ಹೇಳಲ್ಪಟ್ಟಿರುವುದು.

೧೮) ಶಿವಪುರಾಣದ ಪ್ರಕಾರ ಗುರುದ್ರುಹನೆಂಬ ಕ್ರೂರಿಯು ಗುಹನಾಗಿ ಮುಕ್ತನಾದುದು ಹೇಗೆ?


ಶಿವಪುರಾಣದ ಪ್ರಕಾರ, ಗುರುದ್ರುಹನೆಂಬ ಕ್ರೂರನಾದ ಬೇಡನು ಶಿವರಾತ್ರಿಯ ದಿನ ಏನೂ ಸಿಗದೆ ಹಗಲಿಡೀ ಉಪವಾಸವಾಗಿ ರಾತ್ರಿ ಬಿಲ್ವವೃಕ್ಷದಲ್ಲಿ ಅಕಸ್ಮಾತ್  ಕುಳಿತು, ಜಿಂಕೆಗೆ ಗುರಿಹಿಡಿದಾಗ ಆತನ ಸೋರೆಬುರುಡೆಯಿಂದ ನೀರೂ, ಮರದಿಂದ ಬಿಲ್ವಪತ್ರೆಗಳೂ ಆತನಿಗರಿವಿಲ್ಲದೆಯೇ ಮರದ ಅಡಿಯಲ್ಲಿದ್ದ ಶಿವಲಿಂಗಕ್ಕೆ ಬೀಳುತ್ತವೆ. ಆ ಶಿವರಾತ್ರಿಯ ಮೊದಲ ಜಾವದ ಪೂಜೆಸಂಪನ್ನವಾದ ಪುಣ್ಯಫಲದಿಂದ ಆತನು ಜಿಂಕೆಯನ್ನು ಕೊಲ್ಲದೆ ಮನೆಯಲ್ಲಿ ಹೇಳಿ ಬರಲು ಕಳುಹಿಸುತ್ತಾನೆ. ಮತ್ತೆ ಮತ್ತೆ ರಾತ್ರಿಯ ಉಳಿದ ಜಾವಗಳಲ್ಲೂ ಆತನಿಗರಿವಿಲ್ಲದೆಯೇ ಶಿವಾರಾಧನೆ ನಡೆದು, ಆತನಿಗೆ ಬೆಳಗಾಗುವ ಹೊತ್ತಿಗೆ ಶಿವಕೃಪೆಯಿಂದ ಪೂರ್ಣಜ್ಞಾನೋದಯವಾಗಿ ಮರಳಿಬಂದ ಜಿಂಕೆಪರಿವಾರವನ್ನೇ ಕೊಲ್ಲದೇ ಬಿಟ್ಟುಬಿಡುತ್ತಾನೆ. ಇದರಿಂದ ಸುಪ್ರೀತನಾದ ಪರಶಿವನು ಪ್ರತ್ಯಕ್ಷನಾಗಿ ಗುರುದ್ರುಹನಿಗೆ “ಗುಹ” ನೆಂದು ನಾಮಕರಣವಿತ್ತು, ಮುಂದೆ ವಿಷ್ಣುವು ರಾಮಾವತಾರದಲ್ಲಿ ವನವಾಸಗೈದಾಗ, ಆತನೊಂದಿಗೆ ಸ್ನೇಹಯೋಗವೂ, ಆತನ ಸೇವಾಯೋಗದಿಂದ ದುರ್ಲಭವಾದ ಮುಕ್ತಿಯೂ ಆತನಿಗೆ ದೊರೆಯುವಂತೆ ಅನುಗ್ರಹ ಮಾಡುತ್ತಾನೆ. ಆ ಜಿಂಕೆಗಳಿಗೂ ಗುರುದ್ರುಹಬೇಡನೊಂದಿಗೆ ಶಿವದರ್ಶನವಾಗಿ ಮುಕ್ತಿಯಾಗುವುದು!! ( “ಏತಸ್ಮಿನ್ನನ್ತರೇ ತೇ ತು ಕೃತ್ವಾ ಶಙ್ಕರದರ್ಶನಮ್ | ಸರ್ವೇ ಪ್ರಣಮ್ಯ ಸನ್ಮುಕ್ತಿಂ ಮೃಗಯೋನೇಃ ಪ್ರಪೇದಿರೇ ||”― ಶಿವಪುರಾಣ, ಕೋಟಿರುದ್ರಸಂಹಿತಾ, ಅಧ್ಯಾಯ ೪೦)

೧೯) ಶಿವಪರವಾದ ಉಪನಿಷತ್ತುಗಳಾವುವು? ಎಷ್ಟಿವೆ?


ಮುಕ್ತಿಕೋಪನಿಷತ್ ನ ಪ್ರಕಾರ ೧೦೮ ಉಪನಿಷತ್ತುಗಳಿವೆ. ಅವುಗಳಲ್ಲಿ ಈ ೧೪ ಶೈವೋಪನಿಷತ್ತುಗಳೆಂದು ಪ್ರಸಿದ್ಧ— ಕೈವಲ್ಯ, ಅಥರ್ವಶಿಖಾ, ಜಾಬಾಲ, ಬೃಹಜ್ಜಾಬಾಲ, ಪಂಚಬ್ರಹ್ಮ, ಗಣಪತಿ, ಭಸ್ಮಜಾಬಾಲ, ರುದ್ರಹೃದಯ, ಶ್ವೇತಾಶ್ವತರ, ರುದ್ರಾಕ್ಷಜಾಬಾಲ, ಅಕ್ಷಮಾಲಿಕಾ, ಶರಭ, ದಕ್ಷಿಣಾಮೂರ್ತಿ, ಕಾಲಾಗ್ನಿ ಹಾಗೂ ಅಥರ್ವಶಿರಸ್. ಇವುಗಳಲ್ಲದೆ, ಲಭ್ಯವಾಗಿರುವ ಇನ್ನೂ ೧೫ ಶೈವೋಪನಿಷತ್ತುಗಳು ― ನೀಲರುದ್ರೋಪನಿಷತ್, ಪಾರಾಯಣೋಪನಿಷತ್, ಬಿಲ್ವೋಪನಿಷತ್, ಮೃತ್ಯುಲಾಙ್ಗೂಲೋಪನಿಷತ್, ರುದ್ರೋಪನಿಷತ್, ಲಿಙ್ಗೋಪನಿಷತ್, ವಜ್ರಪಞ್ಜರೋಪನಿಷತ್, ವಟುಕೋಪನಿಷತ್, ಶಿವಸಙ್ಕಲ್ಪೋಪನಿಷತ್ ೧, ಶಿವಸಙ್ಕಲ್ಪೋಪನಿಷತ್ ೨, ಶಿವೋಪನಿಷತ್, ಸದಾನನ್ದೋಪನಿಷತ್, ಸಿದ್ಧಾನ್ತಶಿಖೋಪನಿಷತ್, ಸಿದ್ಧಾನ್ತಸಾರೋಪನಿಷತ್ ಹಾಗೂ ಹೇರಮ್ಬೋಪನಿಷತ್.

೨೦) ಶಿವನ ಮಹಿಮೆಯ ಕುರಿತು ಶ್ವೇತಾಶ್ವತರೋಪನಿಷತ್ತು ಏನನ್ನು ಹೇಳುತ್ತದೆ?

 ಶ್ವೇತಾಶ್ವತರೋಪನಿಷತ್ತು , ಸಮಸ್ತ ಉಪನಿಷತ್ತುಗಳಲ್ಲೇ ಪ್ರಧಾನವಾದ ೧೩ ಉಪನಿಷತ್ತುಗಳಲ್ಲಿ ಒಂದು. ಇದರಲ್ಲಿ, ದೇವದೇವನನ್ನು ಹರ, ರುದ್ರ, ಶಿವ ಎಂದು ಕರೆಯಲಾಗಿದೆ. ಜನರ ಮನೋಭಾವವು ತ್ರಿಮೂರ್ತಿತತ್ತ್ವ ಹಾಗೂ ಬಹುದೇವತಾರಾಧನೆಯನ್ನು ಸ್ವೀಕರಿಸಿದೆ. ಹೀಗಾಗಿ, ನಾನಾ ದೇವತೆಗಳಿಗೆ ಸಂಬಂಧಿಸಿದ ಪುರಾಣಸಾಹಿತ್ಯ ಹಾಗೂ ರೂಪಕಾದಿಗಳಲ್ಲಿ ಆಯಾ ಪ್ರಾಸಂಗಿಕ ದೇವರ ಮಹತ್ತ್ವವನ್ನು ಪ್ರತಿಪಾದಿಸುವಾಗ, ಅದಕ್ಕಾಗಿ ಮಾತ್ರ ಉಳಿದ ದೇವರುಗಳನ್ನು ಕೆಳಗೆಂದು ಹೇಳುವುದರಿಂದ ಜನತೆ ಅಸಮಾಧಾನಪಡುವುದಿಲ್ಲ, ಅಸಹನೆತಾಳುವುದಿಲ್ಲ, “ನಮ್ಮ ಧರ್ಮಕ್ಕೆ ಅಪಮಾನವಾಯಿತು” ಎನ್ನುವುದಿಲ್ಲ. “ತತ್ ತತ್ ಅರ್ಥಪ್ರಶಂಸಾ” ಎಂಬ ನ್ಯಾಯದಂತೆ “ಅದರಲ್ಲಿ ಅದೇ ಮುಖ್ಯ” ಎಂಬ ಉದಾರಭಾವದಿಂದ ಸಹಜವಾಗಿ ಸ್ವೀಕರಿಸುತ್ತಾರೆ. ಇದೇ ಶಿವಾನುಸಂಧಾನ, ಅದೇ ಭಾರತೀಯತೆ, ಇದೇ ವಿಶಾಲ ಹಿಂದುತ್ವವೂ ಆಗಿದೆ.

ಶ್ವೇತಾಶ್ವತರೋಪನಿಷತ್ ಹೀಗೆ ಹೇಳಿದೆ—

ಯ ಏಕೋ ಜಾಲವಾನೀಶತ ಈಶನೀಭಿಸ್ಸರ್ವಾಂಲ್ಲೋಕಾನೀಶತ ಈಶನೀಭಿಃ |
ಯ ಏವೈಕ ಉದ್ಭವೇ ಸಂಭವೇ ಚ ಯ ಏತದ್ವಿದುರಮೃತಾಸ್ತೇ ಭವನ್ತಿ || ೩-೧ ||

ಯಾವ ಒಬ್ಬನೇ ಒಬ್ಬನಾದ (ಯಃ ಏಕಃ), ಸೃಷ್ಟಿಜಾಲ / ಜಗಜ್ಜಾಲವನ್ನು ಹೆಣೆದಿರುವ / ಹೊಂದಿರುವ ಈಶನು ಮಾತ್ರ (ಜಾಲವಾನ್), ತನ್ನ ಶಕ್ತಿಗಳಿಂದ (ಈಶನೀಭಿಃ), ಇದನ್ನು ಹೆಣೆಯಲು ಸಮರ್ಥನಾದನು (ಈಶತ). ಈತನು ಸರ್ವಲೋಕಗಳನ್ನೂ (ಸರ್ವಾನ್ ಲೋಕಾನ್), ತನ್ನ ಶಕ್ತಿಸಾಮರ್ಥ್ಯಗಳಿಂದ ವಿನಿರ್ಮಿಸಲು, ತನ್ನ ನಿಯಂತ್ರಕ ಶಕ್ತಿಗಳಿಂದ (ಈಶನೀಭಿಃ), ತತ್ತತ್ ಸ್ಥಾನಗಳಲ್ಲೇ ನಿಲ್ಲುವಂತೆ ಮಾಡಲು ಹಾಗೂ ಅದರ ಈಶ್ವರನಾಗಲು ಶಕ್ತನಾದನು (ಈಶತ).

ಏಕೋ ಹಿ ರುದ್ರೋ ನ ದ್ವಿತೀಯಾಯ ತಸ್ಥುರ್ಯ ಇಮಾಂಲ್ಲೋಕಾನೀಶತ ಈಶನೀಭಿಃ |
ಪ್ರತ್ಯಙ್ಜನಾಂಸ್ತಿಷ್ಠತಿ ಸಂಚುಕೋಪಾನ್ತಕಾಲೇ ಸಂಸೃಜ್ಯ ವಿಶ್ವಾ ಭುವನಾನಿ ಗೋಪಾಃ || ೩-೨ ||

ರುದ್ರನು (ರುದ್ರಃ), ಒಬ್ಬನೇ (ಏಕಃ ಹಿ). ಹೀಗಾಗಿ, ಜ್ಞಾನಿಗಳು ಎರಡನೆಯವನಿಗಾಗಿ (ದ್ವಿತೀಯಾಯ), ಬಯಸಲಿಲ್ಲ (ನ ತಸ್ಥುಃ). ಯಾವ ಇವನು ತನ್ನ ಅಸದೃಶ ಶಕ್ತಿಸಾಮರ್ಥ್ಯಗಳಿಂದ (ಈಶನೀಭಿಃ), ಈ ಎಲ್ಲಾ ಲೋಕಗಳನ್ನು (ಇಮಾನ್ ಲೋಕಾನ್), ಆಳುತ್ತಾ (ಈಶತ), ಪ್ರತಿಯೊಬ್ಬ (ಪ್ರತ್ಯಕ್), ವ್ಯಕ್ತಿಯ ಒಳಗೂ ಇದ್ದು (ಜನಾನ್ ತಿಷ್ಠತಿ), ಎಲ್ಲ (ವಿಶ್ವಾ), ಲೋಕಗಳನ್ನೂ (ಭುವನಾನಿ),  ಸುಂದರವಾಗಿ ಸೃಜಿಸಿ (ಸಂಸೃಜ್ಯ), ಅಂತ್ಯಕಾಲ ಬಂದಾಗ (ಅನ್ತಕಾಲೇ), ರುದ್ರನಾಗಿ ರೋಷಾವಿಷ್ಟನಾಗಿ ಎಲ್ಲವನ್ನೂ ಸಂಹರಿಸಿ (ಸಂ-ಚುಕೋಪ), ಸೃಷ್ಟಿ-ಲಯಗಳ ಮಧ್ಯಕಾಲದಲ್ಲಿ ಎಲ್ಲರೊಳಗೆ ಗುಪ್ತವಾಗಿದ್ದು, ಲೋಕಗಳ ಸ್ಥಿತಿ / ಪಾಲನೆ / ರಕ್ಷಣೆ / ಸಂಗೋಪನೆಯನ್ನು ಮಾಡುತ್ತಾನೆ (ಗೋಪಾಃ).

ವಿಶ್ವತಶ್ಚಕ್ಷುರುತ ವಿಶ್ವತೋಮುಖೋ ವಿಶ್ವತೋ ಬಾಹುರುತ ವಿಶ್ವತಸ್ಪಾತ್ |
ಸಂ ಬಾಹುಭ್ಯಾಂ ಧಮತಿ ಸಂ ಪತತ್ರೈರ್ದ್ಯಾವಾಭೂಮೀ ಜನಯನ್ದೇವ ಏಕಃ || ೩-೩ ||

ವಿಶ್ವದ ಎಲ್ಲೆಡೆ ಜೀವರ ಕಣ್ಣುಗಳಲ್ಲಿದ್ದು ಹಾಗೂ ಸರ್ವಸಾಕ್ಷಿಯಾಗಿ ಲೆಕ್ಕವಿಲ್ಲದಷ್ಟು ಕಣ್ಣುಗಳುಳ್ಳವನೂ (ವಿಶ್ವತಃ ಚಕ್ಷುಃ ಉತ), ಸರ್ವಭಕ್ಷಕನಾಗಿ ಜಗದಗಲ ಮುಖ / ಬಾಯಿ ಉಳ್ಳವನೂ (ವಿಶ್ವತಃ ಮುಖಃ), ಹಾಗೆಯೇ (ಉತ), ಸರ್ವಾಧಾರನಾಗಿ ಪ್ರಪಂಚದಾದ್ಯಂತ ತೋಳುಗಳುಳ್ಳವನೂ (ವಿಶ್ವತಃ ಬಾಹುಃ), ಸೃಷ್ಟಿಯ ಎಲ್ಲೆಡೆಯೂ ಜೀವಿಗಳ ಪಾದಗಳಾಗಿ ಸರ್ವರ ಚಲನೆಗೂ ಆಧಾರನಾಗಿ ಅನಂತಪಾದಗಳುಳ್ಳವನೂ (ವಿಶ್ವತಃ ಪಾತ್), ಭೂಮ್ಯಂತರಿಕ್ಷಗಳನ್ನು (ದ್ಯಾವಾ-ಭೂಮೀ), ಪತನವಾಗದಂತೆ ಹಿಡಿದಿಟ್ಟು ರಕ್ಷಿಸುವ (ಸಂ-ಪತ-ತ್ರೈಃ), ತನ್ನ ಬಾಹುಗಳಿಂದ (ಬಾಹುಭ್ಯಾಮ್), ಜಗಕ್ಕೆಲ್ಲ ಜನ್ಮಕೊಟ್ಟು (ಜನಯನ್), ಮೊದಲು ಸೃಷ್ಟಿಯ ಸರ್ವಶಬ್ದಗಳಿಗೂ ಮೂಲವಾದ ಓಂಕಾರದ ಜನಕನಾಗಿ, ಕೊನೆಗೆ ಎಲ್ಲವನ್ನೂ ಪ್ರಳಯಾಗ್ನಿಸಂಯೋಗಗೊಳಿಸಿ ಪ್ರಣವನಾದದ ಅನಂತದಲ್ಲೇ ಲೀನಗೊಳಿಸುವ (ಸಂ-ಧಮತಿ— “ಧ್ಮಾ ಶಬ್ದಾಗ್ನಿಸಂಯೋಗಯೋಃ” ಧಾತು— “ಧಮಃ” ಎಂದರೆ ಅಗ್ನಿಸಂಯೋಗಕರ್ತಾ, ಶಬ್ದಕರ್ತಾ ಎಂದಿದೆ ಶಬ್ದಕಲ್ಪದ್ರುಮ), ದೇವನು (ದೇವಃ), ಒಬ್ಬನೇ ಆಗಿರುವನು (ಏಕಃ).

ಯೋ ದೇವಾನಾಂ ಪ್ರಭವಶ್ಚೋದ್ಭವಶ್ಚ
ವಿಶ್ವಾಧಿಪೋ ರುದ್ರೋ ಮಹರ್ಷಿಃ |
ಹಿರಣ್ಯಗರ್ಭಂ ಜನಯಾಮಾಸ ಪೂರ್ವಂ
ಸ ನೋ ಬುದ್ಧ್ಯಾ ಶುಭಯಾ ಸಂಯುನಕ್ತು || ೩-೪ ||

ವಿಶ್ವದ ಅಧಿಪತಿಯಾಗಿ ವಿಶ್ವನಾಥನೆನಿಸಿದ (ವಿಶ್ವಾಧಿಪಃ), ಸಕಲಜ್ಞಾನದರ್ಶಿಯೂ ಆಗಿ ಮೊತ್ತಮೊದಲ ಮಹಾನ್ ಋಷಿಯೆನಿಸಿದ (ಮಹರ್ಷಿಃ), ಯಾವನು (ಯಃ), ಸಕಲ ದೇವರುಗಳ ರೂಪದಿಂದ ತಾನೇ ಉದ್ಭವಿಸಿ / ಹುಟ್ಟಿ (ಉದ್ಭವಃ ಚ), ಅವರ ಅಸ್ತಿತ್ವಕ್ಕೆ ಕಾರಣಕರ್ತ / ಜನಕ ನಾಗಿ (ಪ್ರಭವಃ ಚ), ಸಕಲ ಸೃಷ್ಟಿಯ ಪೂರ್ವದಲ್ಲಿ / ಮೊದಲಿಗೆ (ಪೂರ್ವಮ್), ಜಗದ ಮೂಲವಾದ ಚಿನ್ನದ ಬಣ್ಣದ ಅಂಡಾಕಾರವಾದ ದ್ರವ್ಯವನ್ನು ತನ್ನ ಗರ್ಭದಲ್ಲಿ ಹೊಂದಿದ ಹಿರಣ್ಯಗರ್ಭ / ಪ್ರಜಾಪತಿ / ಸೃಷ್ಟಿಕರ್ತನನ್ನೇ (ಹಿರಣ್ಯಗರ್ಭಮ್), ಹುಟ್ಟಿಸಿದನೋ (ಜನಯಾಮಾಸ), ಅಂತಹ (ಸಃ), ರುದ್ರನು (ರುದ್ರಃ), ನಮ್ಮನ್ನು (ನಃ / ಅಸ್ಮಾನ್),  ಸದ್ಬುದ್ಧಿಯುಳ್ಳವರನ್ನಾಗಿ ಮಾಡಲಿ (ಬುದ್ಧ್ಯಾ ಶುಭಯಾ ಸಂ-ಯುನಕ್ತು) ಅಥವಾ ನಮ್ಮ ಬುದ್ಧಿಯನ್ನು ಸಚ್ಚಿಂತನೆಗಳೊಂದಿಗೆ ಸಂಯೋಜಿಸಲಿ ಅಥವಾ ತನ್ನ ಸರ್ವಹಿತಕಾರಕಬುದ್ಧಿಯಿಂದ ನಮ್ಮನ್ನೆಲ್ಲ ಒಂದುಗೂಡಿಸಲಿ / ಒಗ್ಗಟ್ಟಾಗಿ ವಿಶ್ವಹಿತಕಾರಕರಾಗುವಂತೆ ಮಾಡಲಿ.

ಮಾಯಾಂ ತು ಪ್ರಕೃತಿಂ ವಿದ್ಯಾತ್ ಮಾಯಿನಂ ತು ಮಹೇಶ್ವರಮ್
(೪-೧೦)

ಈ ಪ್ರಕೃತಿಯನ್ನು ಮಾಯೆ / ಮಹಾಮಾಯೆಯೆಂದೂ, ಮಹೇಶ್ವರನನ್ನು ಮಹಾಮಾಯಿ / ಮಾಯಾಲೋಲ / ಮಾಯೆಯನ್ನು ಒಳಗೊಂಡವನು ಎಂದೂ ತಿಳಿಯಬೇಕು ಎನ್ನುತ್ತದೆ ಶ್ವೇತಾಶ್ವತರೋಪನಿಷತ್.

ವಿಶ್ವಸ್ಯೈಕಂ ಪರಿವೇಷ್ಟಿತಾರಂ ಜ್ಞಾತ್ವಾ ದೇವಂ ಮುಚ್ಯತೇ ಸರ್ವಪಾಶೈಃ
(೫-೧೩ ಉತ್ತರಾರ್ಧ)

“ಈಶಾವಾಸ್ಯಮಿದಂ ಸರ್ವಮ್” “ಇದೆಲ್ಲವೂ ಈಶನಿಂದ ಆವೃತವಾದದ್ದು, ಆಚ್ಛಾದಿಸಲ್ಪಟ್ಟದ್ದು / ಮುಚ್ಚಲ್ಪಟ್ಟದ್ದು (ವಸ ಆಚ್ಛಾದನೇ ಧಾತುಃ), ವಾಸಿಸಲ್ಪಡುವಂಥದ್ದು, ಆತನದೇ ನಿವಾಸ / ಮನೆ (ವಸ ನಿವಾಸೇ)”_ ಎಂದು ಶುಕ್ಲಯಜುಸ್ಸಂಹಿತೆಯಲ್ಲಿ ಬರುವ ಯಾಜ್ಞೀಯಮನ್ತ್ರೋಪನಿಷತ್ / ಈಶಾವಾಸ್ಯೋಪನಿಷತ್ ನಲ್ಲಿ ಹೇಳಿರುವಂತೆಯೇ, ಶ್ವೇತಾಶ್ವತರೋಪನಿಷತ್ ನಲ್ಲಿಯೂ “ವಿಶ್ವವನ್ನು ಆವರಿಸಿರುವ ಏಕಮೇವದೇವನನ್ನು ತಿಳಿದು ಸರ್ವಪಾಶವಿಮುಕ್ತನಾಗುತ್ತಾನೆ / ಸಕಲ ಬಂಧನಗಳಿಂದ ಬಿಡುಗಡೆ ಹೊಂದುತ್ತಾನೆ / ಆಶಾಪಾಶಗಳಿಂದ ಮುಕ್ತನಾಗುತ್ತಾನೆ” ಎನ್ನಲಾಗಿದೆ.

ಭಾವಗ್ರಾಹ್ಯಮನೀಡಾಖ್ಯಂ
ಭಾವಾಭಾವಕರಂ ಶಿವಮ್ |
ಕಲಾಸರ್ಗಕರಂ ದೇವಂ
ಯೇ ವಿದುಸ್ತೇ ಜಹುಸ್ತನುಮ್ ||
(೫-೧೪)

ಭಕ್ತಿಭಾವಕ್ಕೆ ಸಿಲುಕುವವನೂ (ಭಾವಗ್ರಾಹ್ಯಮ್), ಶರೀರವೆಂಬ ಮನೆಯಿಲ್ಲದ ನಿರಾಕಾರನಾದ, ಭೌತಿಕಗೃಹವಿಲ್ಲದೆ ಅನಿಕೇತನನಾದ  ಪರಮಾತ್ಮಸ್ವರೂಪನೂ (ಅ-ನೀಡ-ಆಖ್ಯಮ್), ಭಾವ-ಅಭಾವ / ಇರುವಿಕೆ-ಇಲ್ಲದಿರುವಿಕೆ / ಸೃಷ್ಟಿ-ಲಯ / ಸತ್-ಅಸತ್— ಇವೆರಡನ್ನೂ ಉಂಟುಮಾಡುವವನೂ (ಭಾವ-ಅಭಾವ-ಕರಮ್, ಮಂಗಲಮಯನೂ (ಶಿವಮ್), ತನ್ನ ಕೇವಲ ಒಂದು ಕಲೆ / ಅಂಶ ಮಾತ್ರದಿಂದ ಸಮಸ್ತಸೃಷ್ಟಿಯನ್ನೂ ಉಂಟುಮಾಡುವವನೂ ಆದ (ಕಲಾ-ಸರ್ಗ-ಕರಮ್), ದೇವದೇವನನ್ನು (ದೇವಮ್), ಯಾರು (ಯೇ), ತಿಳಿಯುವರೋ (ವಿದುಃ), ಅವರು (ತೇ), ದೇಹಾದಿ ಪಾಂಚಭೌತಿಕಬಂಧನಗಳನ್ನೂ (ತನುಮ್), ಮೋಹಾದಿ ಅರಿಷಡ್ವರ್ಗಬಂಧನವನ್ನೂ ಕಳೆದುಕೊಂಡು (ಜಹುಃ), ಆತ್ಮವನ್ನರಿತು ಮುಕ್ತರಾಗುವರು.

ತಮೀಶ್ವರಾಣಾಂ ಪರಮಂ ಮಹೇಶ್ವರಂ
ತಂ ದೇವತಾನಾಂ ಪರಮಂ ಚ ದೈವತಮ್ |
ಪತಿಂ ಪತೀನಾಂ ಪರಮಂ ಪರಸ್ತಾದ್
ವಿದಾಮ ದೇವಂ ಭುವನೇಶಮೀಡ್ಯಮ್ ||
(೬-೭)

ನಾನಾ ಈಶ್ವರರ ಪರಮೇಶ್ವರನಾದ ಮಹೇಶ್ವರನಾದ ಅವನನ್ನು, ಸಕಲ ದೇವತೆಗಳ ಪರಮದೈವತನಾದವನನ್ನು, ಸಕಲ ಭುವನ (=ಲೋಕ)ಸ್ತುತನಾದ, ಸಕಲ ಪತಿಗಳ ಅಧಿಪತಿಯಾದ, ಪರಾತ್ಪರನಾದ, ಅನಂತಕೋಟಿಸೂರ್ಯಪ್ರಕಾಶದಿಂದ ಬೆಳಗುವ ದೇವದೇವನಾದ ಭಗವಂತನನ್ನು ಅರಿಯೋಣ.

೨೧) ದೇವರಲ್ಲಿ ಮತ್ತು ಗುರುವಿನಲ್ಲಿ ಭಕ್ತಿಯಿದ್ದರೆ ಎಂತಹ ಫಲಪ್ರಾಪ್ತಿಯಾಗಬಲ್ಲದು?


ಯಸ್ಯ ದೇವೇ ಪರಾಭಕ್ತಿಃ
ಯಥಾ ದೇವೇ ತಥಾ ಗುರೌ |
ತಸ್ಯೈತೇ ಕಥಿತಾ ಹ್ಯರ್ಥಾಃ
ಪ್ರಕಾಶನ್ತೇ ಮಹಾತ್ಮನಃ
ಪ್ರಕಾಶನ್ತೇ ಮಹಾತ್ಮನ ಇತಿ ||
(೬-೨೩)

ಯಾರಿಗೆ ದೇವರಲ್ಲಿ ಶ್ರೇಷ್ಠವಾದ ಭಕ್ತಿಯಿರುವುದೋ, ಹೇಗೆ ದೇವರಲ್ಲೋ ಹಾಗೆಯೇ ಗುರುವಿನಲ್ಲೂ ಇರುವುದೋ, ಅಂತಹ ಮಹಾತ್ಮನಿಗೇ / ಪುಣ್ಯಾತ್ಮನಿಗೇ / ಸಾಧಕನಿಗೇ ಈ ಮಂತ್ರಗಳ ನಿಜವಾದ ಅರ್ಥಗಳು ಗೋಚರವಾಗುವುವು ಹಾಗೂ ಅನುಭವವೇದ್ಯವಾಗುವುವು ಎಂಬುದಾಗಿ ಶ್ವೇತಾಶ್ವತರೋಪನಿಷತ್ತು ತನ್ನ ಅಂತಿಮ ಮಂತ್ರದಲ್ಲಿ ಹೇಳಿದೆ.

೨೨) “ಶಿವ” ಎಂಬೆರಡಕ್ಷರದ ಮಹಾತ್ಮೆಯೇನು?


ವಿದ್ಯಾಸು ಶ್ರುತಿರುತ್ಕೃಷ್ಟಾ ರುದ್ರೈಕಾದಶಿನೀ ಶ್ರುತೌ |
ತತ್ರ ಪಞ್ಚಾಕ್ಷರೀ ತಸ್ಯಾಂ ಶಿವ ಇತ್ಯಕ್ಷರದ್ವಯಮ್ ||

“ವಿದ್ಯೆಗಳಲ್ಲೆಲ್ಲ ಶ್ರುತಿಯು ಶ್ರೇಷ್ಠ. ಶ್ರುತಿಯಲ್ಲಿ ರುದ್ರೈಕಾದಶಿನೀ ಶ್ರೇಷ್ಠ; ಅದರಲ್ಲಿ “ನಮಃ ಶಿವಾಯ” ಎಂಬ ಪಂಚಾಕ್ಷರೀಮಂತ್ರವು; ಅದರಲ್ಲಿಯೂ ‘ಶಿವ’ ಎಂಬೀ ೨ ಅಕ್ಷರಗಳು ಸರ್ವಶ್ರೇಷ್ಠ” ಎಂಬುದು ಪುರಾಣವಚನ.


ಶಿವೋಪನಿಷತ್ ನಲ್ಲಿ ಹೀಗಿದೆ―

ಪಶುಪಾಶಪರಶ್ಶಾನ್ತಃ
ಪರಮಜ್ಞಾನದೇಶಿಕಃ |
ಶಿವಶ್ಶಿವಾಯ ಭೂತಾನಾಂ
ತಂ ವಿಜ್ಞಾಯ ವಿಮುಚ್ಯತೇ || ೧-೧೬ ||

(ಪಶು-ಪಾಶ-ಪರಃ)ಕರ್ಮಶರೀರವೆಂಬ ಪಾಶಬದ್ಧವಾದ ಜೀವರ ಪರವಾಗಿಯೇ ಸದಾ ಇರುವವನೂ, (ಶಾನ್ತಃ) ಪರಮಶಾಂತಸ್ವರೂಪಿಯೂ, (ಪರಮ-ಜ್ಞಾನ-ದೇಶಿಕಃ) ಶ್ರೇಷ್ಠವಾದ ಆತ್ಮಜ್ಞಾನ / ಪರತತ್ತ್ವಜ್ಞಾನವನ್ನು ಬೋಧಿಬಲ್ಲ ಗುರು / ದೇಶಿಕ / ಆಚಾರ್ಯನೂ, (“ದೇಶೇ ಪ್ರಸಿತಃ, ಆಸಕ್ತಃ ಪ್ರಕೃಷ್ಟಶುಭ್ರಃ ವಾ ಇತಿ ದೇಶಿಕಃ”— ದೇಶದಲ್ಲಿ, ದೇಶದ ಹಿತದಲ್ಲೇ ಸದಾ ಆಸಕ್ತನಾದ ಬಹಳ ಶ್ರೇಷ್ಠವಾದ ಶುಭ್ರಮನಸ್ಸಿನವನೇ ದೇಶಿಕನು / ಪುರೋಹಿತನು / ಗುರುವು), (ಭೂತಾನಾಂ ಶಿವಾಯ)ಸಕಲ ಚರಾಚರಗಳಿಗೂ ಶಿವತಮ / ಮಂಗಲತಮ ನಾದವನು ಶಿವನು. ಅದಕ್ಕಾಗಿಯೇ ಜೀವಪರನಾದವನು. (ತಮ್)ಆತನನ್ನು, (ವಿಜ್ಞಾಯ) ಈ ರೀತಿಯಾಗಿ ತಿಳಿದವನು, (ವಿಮುಚ್ಯತೇ) ಮುಕ್ತಿಯನ್ನು ಹೊಂದುವನು.

ಏತದೇವ ಪರಂ ಜ್ಞಾನಂ
ಶಿವ ಇತ್ಯಕ್ಷರದ್ವಯಮ್ |
ವಿಚಾರಾದ್ಯಾತಿ ವಿಸ್ತಾರಂ
ತೈಲಬಿನ್ದುರಿವಾಮ್ಭಸಿ || ೧-೧೭ ||

ಶಿವ ಎಂಬೆರಡಕ್ಷರವೇ (ಶಿವಃ ಇತಿ ಏತದ್ ಅಕ್ಷರದ್ವಯಮ್ ಏವ), ಪರಮಜ್ಞಾನಸ್ವರೂಪವಾದುದೆಂಬುದನ್ನು (ಪರಂ ಜ್ಞಾನಮ್), ಸತತವಾಗಿ ವಿಚಾರಮಾಡುವುದರಿಂದ (ವಿಚಾರಾತ್), ನೀರಿನಲ್ಲಿ (ಅಮ್ಭಸಿ), ಎಣ್ಣೆಯ ಬಿಂದುವು ಹರಡುವಂತೆಯೇ (ತೈಲಬಿನ್ದುಃ ಇವ), ಜೀವಾತ್ಮನು ಭಾವವಿಸ್ತಾರವನ್ನು ಹೊಂದಿ ಪರಮಾತ್ಮತ್ವಕ್ಕೇರುವನು. (ವಿಸ್ತಾರಂ ಯಾತಿ)

ಸಕೃದುಚ್ಚಾರಿತಂ ಯೇನ
ಶಿವ ಇತ್ಯಕ್ಷರದ್ವಯಮ್ |
ಬದ್ಧಃ ಪರಿಕರಸ್ತೇನ
ಮೋಕ್ಷೋಪಗಮನಂ ಪ್ರತಿ || ೧-೧೮ ||

ಯಾವನಿಂದ (ಯೇನ), ಒಂದೇ ಒಂದು ಬಾರಿ (ಸಕೃತ್), ಶಿವ ಎಂಬೆರಡಕ್ಷರವು (ಶಿವ ಇತಿ ಅಕ್ಷರ-ದ್ವಯಮ್), ಉಚ್ಚರಿಸಲ್ಪಡುವುದೋ (ಉಚ್ಚಾರಿತಮ್), ಆತನಿಂದ (ತೇನ), ಮೋಕ್ಷದ ಸಮೀಪ ಹೋಗಲು (ಮೋಕ್ಷ-ಉಪ-ಗಮನಂ ಪ್ರತಿ), ತಯಾರಿಮಾಡಲ್ಪಟ್ಟಂತೆಯೇ (ಬದ್ಧಃ ಪರಿಕರಃ), ಎಂದು ತಿಳಿಯಬೇಕು.

ದ್ವ್ಯಕ್ಷರಶ್ಶಿವಮನ್ತ್ರೋऽಯಂ
ಶಿವೋऽಪನಿಷದಿ ಸ್ಮೃತಃ |
ಏಕಾಕ್ಷರಃ ಪುನಶ್ಚಾಯಮ್
ಓಮಿತ್ಯೇವಂ ವ್ಯವಸ್ಥಿತಃ || ೧-೧೯ ||

ಈ (ಅಯಮ್), ಎರಡಕ್ಷರದ (ದ್ವಿ-ಅಕ್ಷರಃ), ಶಿವಮಂತ್ರವು (ಶಿವಮನ್ತ್ರಃ), ಸಾಕ್ಷಾತ್ ಶಿವಸ್ವರೂಪವೆಂದೇ (ಶಿವಃ), ಶಿವೋಪನಿಷತ್ತಿನಲ್ಲಿ (ಉಪನಿಷದಿ), ಸ್ಮರಿಸಲ್ಪಟ್ಟಿದೆ (ಸ್ಮೃತಃ). ಹಾಗೆಯೇ (ಪುನಃ), ಇದೇ (ಅಯಮ್), ಏಕಾಕ್ಷರಿಯಾಗಿ (ಏಕಾಕ್ಷರಃ), “ಓಮ್” ಎಂಬುದಾಗಿಯೂ (ಓಮ್ ಇತಿ ಏವಮ್), ವಿಧಿಪೂರ್ವಕವಾಗಿ ಹೇಳಲ್ಪಟ್ಟಿರುವುದು. (ವಿ-ಅವಸ್ಥಿತಃ)

ನಾಮಸಙ್ಕೀರ್ತನಾದೇವ
ಶಿವಸ್ಯಾಶೇಷಪಾತಕೈಃ |
ಯತಃ ಪ್ರಮುಚ್ಯತೇ ಕ್ಷಿಪ್ರಂ
ಮನ್ತ್ರೋऽಯಂ ದ್ವ್ಯಕ್ಷರಃ ಪರಃ || ೧-೨೦ ||

ಶಿವನ (ಶಿವಸ್ಯ), ಈ (ಅಯಮ್), ಎರಡಕ್ಷರದ (ದ್ವ್ಯಕ್ಷರಃ), ಮಂತ್ರವು (ಮನ್ತ್ರಃ), ನಾಮಸಂಕೀರ್ತನೆಯಿಂದಲೇ (ನಾಮಸಙ್ಕೀರ್ತನಾದ್ ಏವ), ಸಮಸ್ತಪಾಪಗಳಿಂದಲೂ (ಅಶೇಷಪಾತಕೈಃ), ಶೀಘ್ರವಾಗಿ (ಕ್ಷಿಪ್ರಮ್),  ವಿಮುಕ್ತಿಗೊಳಿಸುವುದರಿಂದಾಗಿ (ಯತಃ ಪ್ರಮುಚ್ಯತೇ), ಪರಮಮಂತ್ರವೆಂದೂ (ಪರಃ), ಮಂತ್ರರಾಜವೆಂದೂ ಹೇಳಲ್ಪಟ್ಟಿದೆ.

ಯಶ್ಶಿವಂ ಶಿವಮಿತ್ಯೇವಂ
ದ್ವ್ಯಕ್ಷರಂ ಮನ್ತ್ರಮಭ್ಯಸೇತ್ |
ಏಕಾಕ್ಷರಂ ವಾ ಸತತಂ
ಸ ಯಾತಿ ಪರಮಂ ಪದಮ್ || ೧-೨೧ ||

ಯಾವನು (ಯಃ), ಶಿವ-ಶಿವನೆಂದು (ಶಿವಮ್ ಶಿವಮ್ ಇತಿ ಏವಮ್), ಎರಡಕ್ಷರದ (ದ್ವ್ಯಕ್ಷರಮ್), ಮಂತ್ರವನ್ನು (ಮನ್ತ್ರಮ್), ಅಥವಾ (ವಾ), ಓಮ್ ಎಂಬ ಏಕಾಕ್ಷರವನ್ನು (ಏಕಾಕ್ಷರಮ್), ಎಡೆಬಿಡದೆ (ಸತತಮ್),  ಪುನಃ ಪುನಃ ಉಚ್ಚರಿಸುವನೋ / ಜಪಿಸುವನೋ / ಅಭ್ಯಾಸಮಾಡುವನೋ (ಅಭ್ಯಸೇತ್), ಅಂಥವನು (ಸಃ), ಪರಮಪದವನ್ನು / ಮುಕ್ತಿಯನ್ನು (ಪರಮಂ ಪದಮ್) ಹೊಂದುವನು (ಯಾತಿ).

೨೩) ರುದ್ರಾಧ್ಯಾಯದ ಮಹಿಮೆಯೇನು?


ರುದ್ರಾಧ್ಯಾಯದ ಮಹಿಮೆಯನ್ನು ಜಾಬಾಲೋಪನಿಷತ್ ನಲ್ಲಿ ಹೀಗೆ ಹೇಳಿದೆ— ಬ್ರಹ್ಮಚಾರಿಗಳು ಗುರು ಯಾಜ್ಞವಲ್ಕ್ಯರನ್ನು, “ಕಿಂಜಾಪ್ಯೇನ ಅಮೃತತ್ವಂ ಬ್ರೂಹೀತಿ” “ಏನನ್ನು ಜಪಿಸಿದರೆ ಅಮೃತತ್ವ / ಮರಣವಿಲ್ಲದ ಮೋಕ್ಷಸ್ಥಿತಿ ಯು ಪ್ರಾಪ್ತವಾಗುವುದೆಂದು ಹೇಳು” ಎಂದು ಪ್ರಶ್ನಿಸಿದಾಗ ಯೋಗಿ ಯಾಜ್ಞವಲ್ಕ್ಯರು, “ಶತರುದ್ರಿಯೇಣ ಇತಿ, ಏತಾನಿ ಹ ವಾ ಅಮೃತಸ್ಯ ನಾಮಧೇಯಾನಿ, ಏತೈಃ ಹ ವಾ ಅಮೃತೋ ಭವತಿ” _“ಶತರುದ್ರಿಯದಿಂದ ಎಂದು ಉತ್ತರಿಸುತ್ತಾರೆ. ಈ ನೂರಾರು ನಾಮಧೇಯಗಳು ಅಮೃತಸ್ವರೂಪನವು / ಅವಿನಾಶಿಯಾದ ಪರಮಾತ್ಮನವು; ಹೀಗಾಗಿ ಅಮೃತಸ್ವರೂಪನ ಈ ಹೆಸರುಗಳ / ನಾಮಗಳ— ಇವುಗಳ ಜಪದಿಂದ ಜಪಿಸುವವನೂ ಅ-ಮೃತನೇ ಆಗುವನು”  ಎನ್ನುತ್ತಾರೆ.

೨೪) ರುದ್ರಪಾಠದಿಂದ ಯಾವ ಯಾವ ಪಾಪಗಳು ಪರಿಹಾರವಾಗುವುವು?

ಕೈವಲ್ಯೋಪನಿಷತ್ — “ಅನೇನ ಜ್ಞಾನಮಾಪ್ನೋತಿ ಸಂಸಾರಾರ್ಣವನಾಶನಮ್ | ತಸ್ಮಾದೇವಂ ವಿದಿತ್ವೈನಂ ಕೈವಲ್ಯಂ ಫಲಮಶ್ನುತೇ ||”

“ರುದ್ರಾನುಷ್ಠಾನದಿಂದ ಸಂಸಾರಸಾಗರವನ್ನು ನಾಶಮಾಡುವಂತಹ ಜ್ಞಾನವನ್ನು ಹೊಂದುತ್ತಾನೆ. ಹೀಗಾಗಿ, ಇದನ್ನು ಚೆನ್ನಾಗಿ ಅರ್ಥಾನುಸಂಧಾನದೊಂದಿಗೆ, ಫಲಜ್ಞಾನದೊಂದಿಗೆ ತಿಳಿದು ಕೈವಲ್ಯ / ಮುಕ್ತಿ ಯ ಫಲವನ್ನೇ ಹೊಂದುತ್ತಾನೆ” ಎಂದಿದೆ. ಅಲ್ಲದೆ, ಇದೇ ಉಪನಿಷತ್, “ಯಃ ಶತರುದ್ರೀಯಮಧೀತೇ ಸೋऽಗ್ನಿಹೂತೋ ಭವತಿ” “ಯಾವನು ಈ ಶತರುದ್ರೀಯವನ್ನು ಅಧ್ಯಯನಮಾಡುತ್ತಾನೋ ಅವನು ತನ್ನ ಸರ್ವಪಾಪಗಳನ್ನೂ ಯಜ್ಞಾಗ್ನಿಯಲ್ಲಿ ಸುಟ್ಟುಬಿಡುತ್ತಾನೆ” ಎನ್ನುತ್ತದೆ. ತೈತ್ತಿರೀಯ ಸಂಹಿತೆ ಯಲ್ಲಿ, “ರುದ್ರೋ ವಾ ಏಷ ಯದಗ್ನಿಃ” “ಈ ರುದ್ರನೇ ಅಗ್ನಿಯು / ಅಗ್ನಿಯೇ ರುದ್ರನು” ಎಂದು ಭಾವಿಸಿ ಶತರುದ್ರೀಯಹವನ (ರುದ್ರಹೋಮ) ಮಾಡಿದರೆ ಯಜಮಾನರು, ಅಧ್ವರ್ಯು / ಋತ್ವಿಜ ರು, ಸಮಸ್ತ ಭಕ್ತಜನರೂ ಸುಖವನ್ನು ಪಡೆಯುವರೆಂದೂ, ದುಃಖದೂರರಾಗುವರೆಂದೂ ಘೋಷಿಸಿದೆ. ಕರ್ಮಾಂಗವಾದ ಇದನ್ನು ನಿತ್ಯ, ನೈಮಿತ್ತಿಕ ಹಾಗೂ ಕಾಮ್ಯಕರ್ಮವಾಗಿಯೂ ಆಚರಿಸಬಹುದು. “ಸುರಾಪಾಃ ಸ್ವರ್ಣಹಾರೀ ಚ ರುದ್ರಜಾಪೀ ಪ್ರಮುಚ್ಯತೇ” “ಸುರೆ / ಮದ್ಯ ವನ್ನು ಪಾನಮಾಡಿದವರೂ, ಸ್ವರ್ಣ / ಚಿನ್ನ ವನ್ನು ಅಪಹರಿಸಿದವರೂ ರುದ್ರಮಂತ್ರಜಪಾನುಷ್ಠಾನದಿಂದ ಈ ಪಾಪಗಳಿಂದ ಮುಕ್ತರಾಗುತ್ತಾರೆ” ಎಂಬ ಮಾತಿನಂತೆ ಇದನ್ನು ಪ್ರಾಯಶ್ಚಿತ್ತಕರ್ಮವಾಗಿಯೂ ಆಚರಿಸಬಹುದಾಗಿದೆ. ಇದನ್ನು, “ಸರ್ವದಾ ಸಕೃದ್ವಾ ಜಪೇತ್” “ರುದ್ರಮಂತ್ರವನ್ನು ಯಾವಾಗಲೂ ಜಪಿಸಬೇಕು. ಸಾಧ್ಯವಾಗದಿದ್ದರೆ ಒಮ್ಮೆಯಾದರೂ ಜಪಿಸಬೇಕು” ಎಂಬುದರಿಂದ ರುದ್ರವು ಒಮ್ಮೆ ಜಪಿಸಿದರೂ ವಿಶೇಷಫಲದಾಯಕವೆಂದು ತಿಳಿಯುವುದು.

೨೫) ರುದ್ರಾನುಷ್ಠಾನ-ಪುರಶ್ಚರಣೆಗಳ ವಿಧಿ-ವಿಧಾನಗಳು ಹೇಗೆ?

ಶ್ರೀರುದ್ರಾನುಷ್ಠಾನವು ಜಪ, ಹೋಮ, ಅರ್ಚನ, ಅಭಿಷೇಕಗಳೆಂದು ನಾಲ್ಕು ವಿಧವಾಗಿದೆ. ಶ್ರೀಬೋಧಾಯನಾಚಾರ್ಯ ರ (ಮಹಾನ್ಯಾಸಪ್ರಕರಣದ) ಪ್ರಕಾರ, ಜಪಾಂಗರುದ್ರವೆಂದರೆ ಕೇವಲ ರುದ್ರಮಂತ್ರದ ಜಪಮಾಡುವುದು. ಅರ್ಚನಾಂಗರುದ್ರವೆಂದರೆ ರುದ್ರಪಠನ ಮಾಡುತ್ತ, ತಿಲದಿಂದಲೋ, ಬಿಲ್ವದಿಂದಲೋ, ಅಕ್ಷತೆಯಿಂದಲೋ ರುದ್ರಲಿಂಗವನ್ನು ಅರ್ಚಿಸುವುದು. ತಿಲ-ಬಿಲ್ವಾರ್ಚನೆಯಿಂದ ಅಪಮೃತ್ಯು ನಿವಾರಣೆಯಾಗುವುದೆಂದು ಹೇಳಿದೆ. ಅಭಿಷೇಕಾಂಗರುದ್ರವೆಂದರೆ ರುದ್ರಜಪವನ್ನು ಮಾಡುತ್ತಾ, ಶಿವಲಿಂಗಕ್ಕೆ ಹಾಲು, ಕಬ್ಬಿನರಸ, ಜೇನುತುಪ್ಪ, ಮಾವಿನಹಣ್ಣಿನ ರಸ ಅಥವಾ ಎಳನೀರಿನಿಂದ ಅಥವಾ ಕೇವಲ ಶುದ್ಧೋದಕ (ಶುದ್ಧಜಲ) ದಿಂದ ಅಭಿಷೇಕಮಾಡುವುದು. ಇನ್ನು, ಹೋಮಾಂಗರುದ್ರವು ಸಮಗ್ರಪಕ್ಷ, ದಶಾಂಶಪಕ್ಷ, ಶತಾಂಶಪಕ್ಷವೆಂದು ೩ ವಿಧ. ಸಮಗ್ರ ರುದ್ರಾಧ್ಯಾಯವನ್ನು ಜಪಿಸಿ ಹೋಮಮಾಡುವುದು ಮೊದಲನೆಯ ಪಕ್ಷ. ಜಪದ ಹತ್ತನೆಯ ಒಂದಂಶದಷ್ಟು ಸಂಖ್ಯೆಯಷ್ಟು ಆಹುತಿ ಕೊಟ್ಟರೆ ದಶಾಂಶಪಕ್ಷ. ಜಪಸಂಖ್ಯೆಯ ೧೦೦ರಲ್ಲೊಂದಂಶ ಆಹುತಿ ನೀಡಿದರೆ ಮೂರನೆಯ ಪಕ್ಷ. ಈ ಮೂರಕ್ಕೂ ರುದ್ರ “ಪುರಶ್ಚರಣಪದ್ಧತಿ” ಎನ್ನುವರು. ಜಪ-ಹೋಮ-ತರ್ಪಣ-ಮಾರ್ಜನ-ವಿಪ್ರಭೋಜನವೆಂಬ ಪಂಚಾಂಗಗಳಿಂದ ಕೂಡಿದ್ದು ಪುರಶ್ಚರಣ. ಇದರಿಂದ ಮಂತ್ರಸಿದ್ಧಿ.

೨೬) ಲಘುರುದ್ರವೆಂದರೇನು?

ಈ ರುದ್ರವು ಪ್ರತ್ಯೇಕವಾಗಿ ೫ ವಿಧವಾಗಿರುತ್ತದೆ. “ರೂಪಮ್, ರುದ್ರಃ, ರುದ್ರೀ, ಮಹಾರುದ್ರಃ, ಅತಿರುದ್ರಃ” ಎಂಬುದಾಗಿ. ಇದರಲ್ಲಿ, ನಮಕ-ಚಮಕಯುಗ್ಮಕ್ಕೆ “ರೂಪ” ಎಂದು ಹೆಸರು. ಇವೆರಡೂ ಸೇರಿದರೆ ಅದೇ ರುದ್ರಾಧ್ಯಾಯದ ಸ್ವರೂಪವೆಂದರ್ಥ. ನಮಕ-ಚಮಕಗಳನ್ನು ಒಂದು ಬಾರಿ ಪಠಿಸುವುದು ಎಂಬ ಅಭಿಪ್ರಾಯ. ಇದಕ್ಕೆ ಆಧಾರ― “ನಮಸ್ತೇ ರುದ್ರಾಗ್ನಾವಿಷ್ಣೂ ಇತ್ಯಧ್ಯಾಯದ್ವಯೇನ ಚ | ಆವರ್ತನಮಿತಿ ಪ್ರೋಕ್ತಮ್…” . ಹೀಗೆ, ರುದ್ರಪ್ರಶ್ನದ ೧೧ ಅನುವಾಕಗಳನ್ನು ೧ ಬಾರಿ ಪಠಿಸಿ, ಚಮಕಪ್ರಶ್ನದ ೧ನೆಯ ಅನುವಾಕವನ್ನು ಪಠಿಸಬೇಕು. ಪುನಃ ರುದ್ರದ ೧೧ ಅನುವಾಕಗಳನ್ನು ಆವರ್ತಿಸಿ, ಚಮಕದ ೨ನೆಯ ಅನುವಾಕವನ್ನು ಪಠಿಸಬೇಕು. ಹೀಗೆ ೧೧ ಬಾರಿ ಪೂರ್ಣ ರುದ್ರದ ಪಠನ ಹಾಗೂ ಒಂದು ಬಾರಿ ಚಮಕದ ೧೧ ಅನುವಾಕಗಳ ಪಠನೆಯಾದಾಗ ಅದನ್ನು “ರುದ್ರೈಕಾದಶಿನೀ / ಏಕಾದಶರುದ್ರ” ಎನ್ನಲಾಗಿದೆ. ಇದು ೧೧ ಆವೃತ್ತಿಯಾದಾಗ “ರುದ್ರೀ / ಲಘುರುದ್ರ” . ಆಧಾರ― “ಏಕಃ ಪಾಠೋ ನಮಸ್ತೇऽಸ್ಯ ಹ್ಯನುವಾಕಃ ಪರಸ್ಯ ಚ | ತೈರೇಕಾದಶರುದ್ರೈರ್ಲಘುರುದ್ರಃ ಪ್ರಕೀರ್ತಿತಃ || ಏಕಾದಶಭಿರೇತೈಸ್ತು ಮಹಾರುದ್ರಃ ಪ್ರಕೀರ್ತಿತಃ | ಏಕಾದಶಮಹಾರುದ್ರೈರತಿರುದ್ರೋ ಬುಧೈಃ ಸ್ಮೃತಃ ||” ಈ ಲಘುರುದ್ರಗಳ ೧೧ ಆವೃತ್ತಿಯಿಂದ ೧ ಮಹಾರುದ್ರವೂ, ೧೧ ಮಹಾರುದ್ರಗಳಿಂದ ೧ ಅತಿರುದ್ರವೂ ಆಗುವುದು.

೨೭) ನಮಕ ಎಂದರೇನು? ಇದು ಯಾವ ವೇದದಲ್ಲಿ ಎಲ್ಲಿ ಬರುತ್ತದೆ?

ಈ ರುದ್ರಾಧ್ಯಾಯವು “ನಮಃ” ಪದಬಾಹುಳ್ಯದಿಂದಾಗಿ “ನಮಕ” ವೆಂದು ಕರೆಯಲ್ಪಟ್ಟಿರುವುದೂ, ಮುಂದಿನ ಚಮಕಪ್ರಶ್ನದಲ್ಲಿ “ಚ ಮೇ” ಎಂಬುದು ಅನೇಕಬಾರಿ ಪುನರಾವರ್ತಿತವಾಗಿರುವುದೂ ಕಂಡುಬರುತ್ತದೆ. ತೈತ್ತಿರೀಯ ಕೃಷ್ಣಯಜುರ್ವೇದ ಸಂಹಿತೆಯ ೪ ನೆಯ ಕಾಂಡದ ೫ ನೆಯ ಪ್ರಪಾಠಕವಾದ, ಬಹುಶ್ರೇಷ್ಠತಮವೂ, ಪವಿತ್ರತಮವೂ, ಸರ್ವಸಿದ್ಧಿಪ್ರದವೂ, ಸರ್ವಸಾರವಾಗಿರುವುದರಿಂದ ಉಪನಿಷತ್ತುಲ್ಯವೂ ಆದ ಈ ರುದ್ರಾಧ್ಯಾಯವೆಂಬ ದಿವ್ಯಮಂತ್ರಭಾಗವು ಶ್ರೌತಯಾಗವಾದ “ಮಹಾಗ್ನಿಚಯನ” ದಲ್ಲಿ ಅಜಕ್ಷೀರಹೋಮದ ಮಂತ್ರಸಮೂಹವಾಗಿದೆ. ಅದನ್ನೇ ರುದ್ರಾರಾಧನೆಯಲ್ಲಿ ಪ್ರಯೋಗಿಸಲಾಗುತ್ತದೆ. ಶಿವಪ್ರೀತಿಕರವಾದ ಇದು ಕ್ಷಿಪ್ರಫಲಪ್ರದವೆಂದು ಪ್ರಕೀರ್ತಿತವಾಗಿದೆ. ಶ್ರೌತಯಾಗಗಳಲ್ಲಿ ಅಗ್ನಿಚಯನಕ್ಕಾಗಿ ಸಿದ್ಧಪಡಿಸಿದ ಇಟ್ಟಿಗೆಯ ವೇದಿಯ ಚರಮ / ಅಂತಿಮ / ಕೊನೆಯ / ತುತ್ತತುದಿಯ ಇಷ್ಟಕ / ಇಟ್ಟಿಗೆಯ ಮೇಲೆ ಈ ಮಂತ್ರಗಳ ಮೂಲಕ ಅಜಕ್ಷೀರಹೋಮ ಮಾಡುವ ವಿಧಿ ಶ್ರೌತಸೂತ್ರಪ್ರೋಕ್ತವಾದುದು.

೨೮) ಪಂಚಾಕ್ಷರೀಮಂತ್ರದ ವೇದಮೂಲವು ಯಾವುದು?

ಪಠನಗಂಭೀರವೂ, ಶ್ರವಣಮನೋಹರವೂ, ವಿಶೇಷಫಲಪ್ರದವೂ ಆದ ಈ ರುದ್ರಾಧ್ಯಾಯದ ೮ ನೆಯ ಅನುವಾಕದಲ್ಲಿಯೇ, ಅತ್ಯಂತ ಸುಪ್ರಸಿದ್ಧವಾದ “ನಮಶ್ಶಿವಾಯ” ಎಂಬ ಪಂಚಾಕ್ಷರೀಮಂತ್ರವು (ಮೊದಲು “ಓಂ” ಸೇರಿಸಿ ಗಣಿಸಿದರೆ ಷಡಕ್ಷರಿಮಂತ್ರ), “ನಮಃ ಶಿವಾಯ ಚ ಶಿವತರಾಯ ಚ” ಎಂಬ ಪೂರ್ಣಮಂತ್ರದ ಒಂದು ಭಾಗವಾಗಿ ಅಡಕವಾಗಿರುವುದು. ಇದಕ್ಕೆ ವಾಮದೇವನೇ ಋಷಿಯು, ಪಂಕ್ತಿಯೇ ಛಂದಸ್ಸು, ಸದಾಶಿವರುದ್ರನೇ ದೇವತೆಯು.

೨೯) ರುದ್ರಮಂತ್ರವನ್ನು ಎಲ್ಲೆಲ್ಲಿ ಪ್ರಯೋಗಿಸುವರು?

ಈ ರುದ್ರಾಧ್ಯಾಯವು ೧೧ ಅನುವಾಕಗಳಿಂದ ಕೂಡಿದ್ದು, ಪ್ರತಿ ಅನುವಾಕದಲ್ಲೂ “ಚಿತ್ಯಗ್ನೌ ಹೋಮಮನ್ತ್ರಾಃ— ಅಗ್ನಿಋಷಿಃ” ಎಂಬ ಉಲ್ಲೇಖವಿದೆ. ಈ ೧೧ ಅನುವಾಕಗಳಲ್ಲಿ ಒಟ್ಟು ೧೬೯ ಮಂತ್ರಗಳಿದ್ದು, ರುದ್ರಹೋಮದಲ್ಲಿ ಇವುಗಳ ಮೂಲಕ ತಿಲಾದಿ ಆಹುತಿಗಳನ್ನು ಸಮರ್ಪಿಸಲಾಗುತ್ತದೆ. ವಿಶಿಷ್ಟಾದ್ವೈತಿಗಳಲ್ಲಿ ವಿಶೇಷವಾಗಿ ಶ್ರಾದ್ಧದ ಬ್ರಾಹ್ಮಣಭೋಜನಕಾಲದಲ್ಲಿ ಅಭಿಶ್ರವಣಮಂತ್ರವಾಗಿಯೂ ಪಠಿಸುವ ಪದ್ಧತಿಯಿರುವುದು. ಅನ್ನಸೂಕ್ತದಲ್ಲೂ ಇದರ “ನಮಸ್ಸಹಮಾನಾಯ” ಎಂಬ ೩ ನೆಯ ಅನುವಾಕವು ಸಂಕಲಿತವಾಗಿದೆ. ಮಹಾನ್ಯಾಸಪೂರ್ವಕ ರುದ್ರಾಭಿಷೇಕ-ಜಪಾದಿಗಳಲ್ಲಿ ೨ ರಿಂದ ೯ ರವರೆಗಿನ ೮ ಅನುವಾಕಗಳನ್ನು ೩೦೦ ವಿಭಾಗಮಾಡಿ ರುದ್ರತ್ರಿಶತೀ ಅರ್ಚನೆಯನ್ನು ಬಿಲ್ವಾರ್ಚನೆಪೂರ್ವಕ ಮಾಡುವ ವಿಧಿಯೂ ಇದೆ.

೩೦) ಮಹಾರುದ್ರ, ಅತಿರುದ್ರ...ಎಂದರೇನು?

ಇನ್ನು, ರುದ್ರಾಭಿಷೇಕವು ಏಕವಾರ (ಸಕೃದಾವರ್ತನ / ಒಂದು ಬಾರಿ), ಏಕಾದಶವಾರ (೧೧ ಬಾರಿ) ಹಾಗೂ ಶತರುದ್ರೀಯ (೧೨೧ ಬಾರಿ ಶತರುದ್ರೀಯಮಂತ್ರವೆನಿಸಿದ ರುದ್ರಾಧ್ಯಾಯಪೂರ್ವಕ ಅಭಿಷೇಕ)— ಎಂದು ನಾನಾಬಗೆಯಾಗಿರುವುದು. ಸಕೃದಾವರ್ತನ ದಲ್ಲಿ ೧ ಬಾರಿ “ನಮಸ್ತೇ ರುದ್ರ ಮನ್ಯವ..” ಎಂಬ ೧೧ ಅನುವಾಕಗಳ ರುದ್ರಾಧ್ಯಾಯ, “ಸರ್ವೋ ವೈ ರುದ್ರಸ್ತಸ್ಮೈ..” ಎಂಬ ಋಗ್ಯಜುರ್ಮಂತ್ರಮಿಶ್ರಿತ ಸಂಕಲನವಾದ ರುದ್ರಪ್ರಾರ್ಥನಾಮಂತ್ರ / ತ್ವರಿತರುದ್ರ ಹಾಗೂ “ಅಗ್ನಾವಿಷ್ಣೂ…” ಎಂಬ ೧೧ ಅನುವಾಕಗಳ ಚಮಕಾಧ್ಯಾಯಗಳು ಪೂರ್ತಿಯಾಗಿ ಪಠಿಸಲ್ಪಡುವುವು. ಏಕಾದಶರುದ್ರ ದಲ್ಲಿ ೧ ಬಾರಿಯ ರುದ್ರಕ್ಕೆ ಚಮಕದ ೧ ಅನುವಾಕದಂತೆ, ಅನುಕ್ರಮವಾಗಿ ೧೧ ಬಾರಿ ರುದ್ರವೂ ೧ ಬಾರಿ ಚಮಕವೂ ಪಠಿಸಲ್ಪಡುವುದು. ಶತರುದ್ರಾಭಿಷೇಕ ದಲ್ಲಿ ೧೧ ಮಂದಿ ಋತ್ವಿಜರಿಂದ ೧೧ ಬಾರಿ, ಅಂದರೆ ಒಟ್ಟು ೧೨೧ ಬಾರಿ ರುದ್ರವೂ ೧೧ ಬಾರಿ ಚಮಕವೂ ಪಠಿತವಾಗುವುವು. ೧೨೧ ಮಂದಿ ಋತ್ವಿಜರು ಪ್ರತಿಯೊಬ್ಬರೂ ೧೧ ಬಾರಿಯಂತೆ ೧೨೧×೧೧ = ೧೩೩೧ ಬಾರಿ ರುದ್ರಪಠನ ಮಾಡುವುದೇ ಮಹಾರುದ್ರ / ಸಹಸ್ರರುದ್ರ . ಅಂತೆಯೇ, ೧೩೩೧ ಮಂದಿ ಋತ್ವಿಜರು ೧೧ ಬಾರಿ ರುದ್ರ ಪಠಿಸಿದಾಗ ಆಗುವ ೧೪,೬೪೧ ಆವರ್ತನೆಗೆ ಅತಿರುದ್ರ / ಅಯುತರುದ್ರ ವೆಂದು ಹೆಸರು. ಇದೇ ರೀತಿ, ೧೪,೬೪೧ ಮಂದಿ ಋತ್ವಿಜರು ೧೧ ಬಾರಿ ಪಠಿಸಿದ ೧,೬೧,೦೫೧ ರುದ್ರಾವರ್ತನೆಗೆ ಲಕ್ಷರುದ್ರ ವೆಂತಲೂ, ೧,೬೧,೦೫೧ ಮಂದಿ ಋತ್ವಿಜರು ೧೧ ಬಾರಿ ಪಠಿಸಿದ ೧೭,೭೧,೫೬೧ ರುದ್ರಸಂಖ್ಯೆಗೆ ನಿಯುತರುದ್ರ ವೆಂದೂ, ೧೭,೭೧,೫೬೧ ಮಂದಿ ಪಠಿಸಿದ ೧,೯೪,೮೭,೧೭೧ ರುದ್ರಾವೃತ್ತಿಗೆ ಕೋಟಿರುದ್ರ ವೆಂದೂ ಮುಂತಾಗಿ ಹೇಳುವರು. ರುದ್ರಜಪ-ಹೋಮಗಳಲ್ಲಿ ಮಹಾರುದ್ರ, ಅತಿರುದ್ರಗಳು ಹೆಚ್ಚು ಪ್ರಚಲಿತವಾಗಿದ್ದರೆ, ಶತರುದ್ರವು ಅಭಿಷೇಕದಲ್ಲಿ ಪ್ರಸಿದ್ಧವಾದುದು.

೩೧) ನಮಕ-ಚಮಕಗಳ ಪಠನದಿಂದೇನು ಲಾಭ?

ಜಪೇತ್ ಸಮಗ್ರಂ ನಮಕಂ ಸಮಗ್ರಂ ಚಮಕಂ ತಥಾ |
ರುದ್ರಮಿತ್ಯುಚ್ಯತೇ ಸಿದ್ಧಿಃ ಸರ್ವಾಘೌಘವಿನಾಶನಮ್ ||

ನಮಕವನ್ನು ಸಮಗ್ರವಾಗಿ, ಹಾಗೆಯೇ ಇಡೀ ಚಮಕವನ್ನು ಜಪಿಸಿ ಮಾಡುವ ರುದ್ರಜಪವು, ಎಲ್ಲ ಜಪಕರ ಎಲ್ಲಾ ಪಾಪಸಮೂಹದ ವಿನಾಶವೆಂಬ ಫಲಸಿದ್ಧಿಪ್ರದವೆಂದು ಹೇಳಲಾಗುತ್ತದೆ.

೩೨) ಹರಿ-ಹರರಲ್ಲಿ ಭೇದವಿಲ್ಲ. ಹೇಗೆ?

ಶಿವಾಯ ವಿಷ್ಣುರೂಪಾಯ ಶಿವರೂಪಾಯ ವಿಷ್ಣವೇ |
ಶಿವಸ್ಯ ಹೃದಯಂ ವಿಷ್ಣುರ್ವಿಷ್ಣೋಶ್ಚ ಹೃದಯಂ ಶಿವಃ ||

ವಿಷ್ಣುರೂಪಿಯಾದ ಶಿವನಿಗೂ ಶಿವರೂಪನಾದ ವಿಷ್ಣುವಿಗೂ ನಮಸ್ಕಾರಗಳು. ಲೋಕಶಂಕರನಾದ ಶಿವನ ಹೃದಯವೇ ವಿಷ್ಣುವೂ, ಲೋಕವ್ಯಾಪ್ತನಾದ ವಿಷ್ಣುವಿನ ಹೃದಯವೇ ಶಿವನೂ ಆಗಿರುವನೆಂಬುದು ಶತಸ್ಸಿದ್ಧವಾದುದು ಹಾಗೂ ಪಾರಮಾರ್ಥಿಕವಾದ ಸತ್ಯವೂ ಹೌದು. ಹರಿ-ಹರರಲ್ಲಿ ಭೇದವೆಣಿಸಿದವರನ್ನು ಹರಿ-ಹರರೀರ್ವರೂ ಮೆಚ್ಚುವುದಿಲ್ಲ.

೩೩) ಶಿವನಾಮಸ್ಮರಣೆ ಹೇಗೆ?

ಶಿವ ಶಿವೇತಿ ಶಿವೇತಿ ಶಿವೇತಿ ವಾ
ಭವ ಭವೇತಿ ಭವೇತಿ ಭವೇತಿ ವಾ|
ಹರ ಹರೇತಿ ಹರೇತಿ ಹರೇತಿ ವಾ
ಭವ ಮನಶ್ಶಿವಮೇವ ನಿರನ್ತರಮ್ ||

ಎಲೆ ನನ್ನ ಮನವೇ!! ನೀನು ಸದಾ ಶಿವ-ಶಿವನೆಂದು,  ಶಿವನೆಂದು, ಶಿವನೆಂದು ಅಥವಾ, ಭವ-ಭವನೆಂದು, ಭವನೆಂದು, ಭವನೆಂದು ಅಥವಾ, ಹರ-ಹರನೆಂದು, ಹರನೆಂದು, ಹರನೆಂದೋ, ಶಿವನನ್ನೇ ನಿರಂತರವೂ ಸ್ಮರಿಸುತ್ತಿರು. ಇಲ್ಲಿ ಭವನೆಂದರೆ ಸೃಷ್ಟಿಪ್ರತಿಪಾದಕವಾದರೆ, ಶಿವನೆಂದರೆ ಸ್ಥಿತಿವಾಚಕವೂ, ಹರನೆಂದರೆ ಲಯಸೂಚಕವೂ ಆಗಿರುವುದು. “ಭವತಿ ಸರ್ವಮ್ ಅನೇನ ಇತಿ ಭವಃ”, “ಶಂ ತನೋತಿ ಸರ್ವೇಷಾಂ ವಶೀ ಚ ಇತಿ ಶಿವಃ”, “ಹರತಿ ಸರ್ವಮ್ ಇತಿ ಹರಃ”.

೩೪) ಶಿವನನ್ನು ಯಾವರೀತಿ ಧ್ಯಾನಿಸಬಹುದು?

ಧ್ಯಾಯೇನ್ನಿತ್ಯಂ ಮಹೇಶಂ ರಜತಗಿರಿನಿಭಂ ಚಾರುಚನ್ದ್ರಾವತಂಸಂ
ರತ್ನಾಕಲ್ಪೋಜ್ಜ್ವಲಾಙ್ಗಂ ಪರಶುಮೃಗವರಾಭೀತಿಹಸ್ತಂ ಪ್ರಸನ್ನಮ್ |
ಪದ್ಮಾಸೀನಂ ಸಮನ್ತಾತ್ ಸ್ತುತಮಮರಗಣೈರ್ವ್ಯಾಘ್ರಕೃತ್ತಿಂ ವಸಾನಂ
ವಿಶ್ವಾದ್ಯಂ ವಿಶ್ವವನ್ದ್ಯಂ ನಿಖಿಲಭಯಹರಂ ಪಞ್ಚವಕ್ತ್ರಂ ತ್ರಿನೇತ್ರಮ್ ||
(ಧರ್ಮಸಿನ್ಧುಃ)
(ಏಕವಿಂಶತ್ಯಕ್ಷರಾವೃತ್ತ್ಯಾಂ ಪ್ರಕೃತಿಚ್ಛನ್ದಸಿ ಸ್ರಗ್ಧರಾವೃತ್ತಮ್— “ಮ್ರಭ್ನೈರ್ಯಾನಾಂ ತ್ರಯೇಣ ತ್ರಿಮುನಿಯತಿಯುತಾ ಸ್ರಗ್ಧರಾ ಕೀರ್ತಿತೇಯಮ್”)

ಮುಕ್ಕಣ್ಣನೂ, ಪಂಚಾನನನೂ / ೫ ಮುಖದವನೂ, ಎಲ್ಲರ ಭಯವನ್ನಪಹರಿಸುವವನೂ, ಸರ್ವವಂದ್ಯನೂ / ವಿಶ್ವದ ಎಲ್ಲರಿಂದ ನಮಸ್ಕಾರಯೋಗ್ಯನೂ, ಎಲ್ಲಕ್ಕೂ ಮೂಲನೂ / ವಿಶ್ವಾದ್ಯನೂ, ಕೈಲಾಸಪರ್ವತದ ರಜತಾದ್ರಿನಿವಾಸನೂ, ಸುಂದರ ಚಂದಿರನನ್ನು ಮ (/ಮು)ಕುಟದಲ್ಲಿ ಧರಿಸಿದ, ರತ್ನಪ್ರಭೆಯಂತೆ ಉಜ್ವಲವಾಗಿ ಬೆಳಗುವ ಶರೀರವುಳ್ಳ, ಕೊಡಲಿ-ನಂದೀ-ವರದಾಭಯಹಸ್ತ ಮುಂತಾದವನ್ನು ಧರಿಸಿರುವ, ಪ್ರಸನ್ನವದನ / ಶಾಂತಮುಖಮುದ್ರೆ ಉಳ್ಳವನಾದ, ಪದ್ಮಾಸನದಲ್ಲಿ ಕುಳಿತ, ಸುತ್ತ ಎಲ್ಲೆಡೆಯಿಂದಲೂ ದೇವಗಡಣದಿಂದ ಆವರಿಸಲ್ಪಟ್ಟು ಸ್ತುತಿಸಲ್ಪಡುತ್ತಿರುವ, ವ್ಯಾಘ್ರಚರ್ಮೋತ್ತರೀಯಕನಾದ ಮಹೇಶನನ್ನು ಅನುದಿನವೂ ಧ್ಯಾನಿಸಬೇಕು.

೩೫) ರುದ್ರನು ಮರುತ್ತುಗಳ ತಂದೆಯೇ?

“ಆ ತೇ ಪಿತುರ್ಮರುತಾಂ ಸುಮ್ನಮೇತು” ಎನ್ನುತ್ತವೆ ವೇದಗಳು. ಹೀಗಾಗಿ, ರುದ್ರನು ಮರುತ್ತರ ತಂದೆಯೇ ಹೌದು. ಈ ಮರುತ್ತರು ವಾಯುದೇವತೆಗಳು, ಪ್ರಾಣಗಳಿಗೂ ಅಧಿದೇವತೆಗಳು, ರುದ್ರಶಿವನು “ಪ್ರಾಣಾಧಿಪಃ ಕೃತ್ತಿವಾಸಾಃ ಪಿನಾಕೀ”, “ಪ್ರಾಣಸ್ಯ ಪ್ರಾಣಮ್” ಎಂಬ ಶ್ರುತಿವಚನಗಳಿಂದ ಪ್ರಾಣಗಳಿಗೂ ಸ್ವಾಮಿಯಾದ ಭಗವಂತ. “ತ್ರಿಷಷ್ಟಿಃ ತ್ವಾ ಮರುತಃ” (ಋಗ್ವೇದ ೮.೯೬.೮)— ಇಲ್ಲಿ ೬೩ ಮರುತ್ತರು ೬೩ ವಿದ್ಯಾದೇವತೆಗಳು. ಜೈನಧರ್ಮದಲ್ಲೂ ೬೩ ಮಂದಿ ಪುರಾತನ ಶಲಾಕಾಪುರುಷರೆಂಬ ಮಹಾತ್ಮರ ಉಲ್ಲೇಖವಿದೆ. ಪ್ರಾಚೀನ ಶೈವರಲ್ಲಿ ೬೩ ಪುರಾತನರ ಬಗ್ಗೆ ನಂಬಿಕೆಯಿದೆ. ಇಲ್ಲೆಲ್ಲಾ, ಹೇಳಿರುವ ೬೩ ವ್ಯಕ್ತಿಗಳು ೬೩ ವಿದ್ಯೆಗಳ ಪ್ರತಿನಿಧಿಗಳು. ೬೪ನೆಯದಾದ ಬ್ರಹ್ಮವಿದ್ಯೆಯ ದೇವತೆಯಾದರೋ ಉಮಾಹೈಮವತಿಯೇ ಆಗಿರುವಳೆಂಬುದು ಕೇನೋಪನಿಷತ್ತಿನ ಹೇಳಿಕೆ. ಶಿವ-ಶಕ್ತಿಗಳ ಅಭೇದತತ್ತ್ವದಿಂದಾಗಿ, ೬೩ ವಿದ್ಯೆಗಳೂ ೬೪ನೆಯದಾದ ಅಧ್ಯಾತ್ಮವಿದ್ಯಾಮೂರ್ತಿಯಾದ ಶಿವನ ಸಂತಾನ / ಸೃಷ್ಟಿಯೇ ಹೌದು.

ಕ್ಷುದ್ರಾಃ ತ್ರಿಷಷ್ಟಿವಿದ್ಯಾಃ ಸ್ಯುಃ ತತ್ಫಲಂ ನಶ್ವರಂ ಭವೇತ್ |
ಚತುಷ್ಷಷ್ಟಿತಮೀ ಬ್ರಹ್ಮವಿದ್ಯಾ ತ್ವಮೃತದಾಯಿನೀ ||

೬೩ ವಿದ್ಯೆಗಳೂ ಕ್ಷುದ್ರವಿದ್ಯೆಗಳು. ಅವುಗಳ ಫಲವು ನಶ್ವರ / ಅಶಾಶ್ವತ. ಆದರೆ, ೬೪ನೆಯದಾದ ಬ್ರಹ್ಮವಿದ್ಯೆಯಾದರೋ ಅಮೃತತ್ವವನ್ನೀಯುವಂಥಾದ್ದು ಎಂದಿದೆ ಕಾಳಿಕಾಪುರಾಣ.

“ಜ್ಞಾನಂ ಮಹೇಶ್ವರಾದಿಚ್ಛೇತ್” ಎಂಬ ಮಾತಿನಂತೆ ಈ ಆತ್ಮಜ್ಞಾನವನ್ನು ಮಹೇಶ್ವರನ ಆರಾಧನೆಯಿಂದ ಪಡೆಯಬೇಕು. “ಈಶಾನಸ್ಸರ್ವವಿದ್ಯಾನಾಮ್” ಎಂಬ ವೇದವಚನವು ಶಿವನು ಸರ್ವವಿದ್ಯಾಧಿಪತಿಯೆಂದೂ, ಲೋಕಗುರುವೆಂದೂ ಸಾರುತ್ತದೆ.

ಕೈಲಾಸೇಶ್ವರಲಿಙ್ಗಂ ಚ ಪಞ್ಚಲಿಙ್ಗೇಶ್ವರಂ ವಯಮ್ |
ಮಹಾಲಿಙ್ಗೇಶ್ವರಂ ವೈ ಸ|ಹಸ್ರಲಿಙ್ಗೇಶ್ವರಂ ನುಮಃ ||

ಕೇಪು-ಖಂಡಿಗ ಶಿವಕ್ಷೇತ್ರದಲ್ಲಿರುವ ರವೀಶಸ್ಥಾಪಿತ ಕೈಲಾಸೇಶ್ವರನನ್ನೂ, ವಿಟ್ಲಸೀಮಾ ದೇವರಾದ ಪಾಂಡವಪ್ರತಿಷ್ಠಾಪಿತ ಪಂಚಲಿಂಗೇಶ್ವರನನ್ನೂ, ಪುತ್ತೂರ ಹತ್ತೂರ ಸೀಮೆಯ ಮಹತೋಭಾರ ಮಹಾಲಿಂಗೇಶ್ವರನನ್ನೂ, ಉಪ್ಪಿನಂಗಡಿಯ ಸಂಗಮಕ್ಷೇತ್ರಸ್ಥನಾದ ಸಹಸ್ರಲಿಂಗೇಶ್ವರನನ್ನೂ ನಾವು ನುತಿಗೈಯುತ್ತೇವೆ / ಸ್ತುತಿಸುತ್ತೇವೆ.

ಶ್ರೀರುದ್ರಾನುಷ್ಠಾನಗಳ ಹಾಗೂ ರುದ್ರಮಹಿಮೆಯ ಕುರಿತು ಬರೆದು ಮುಗಿಸುವುದು ಶಕ್ಯವಲ್ಲ. ಈ ವಿಶಾಲ ಪೃಥ್ವಿಯನ್ನೇ ಬರೆಯುವ ಕಾಗದವನ್ನಾಗಿಯೂ, ದೇವಲೋಕದ ಕಲ್ಪತರುವಿನ ಟೊಂಗೆಯನ್ನೇ ಲೇಖನಿಯನ್ನಾಗಿಯೂ, ಸಮುದ್ರವನ್ನೇ ಶಾಯಿಕುಪ್ಪಿಯನ್ನಾಗಿಯೂ ಮಾಡಿಕೊಂಡು ಸಾಕ್ಷಾತ್  ಶ್ರೀಶಾರದೆಯೇ ಬರೆಯಹೊರಟರೂ ಬಹುಶಃ ಶ್ರೀರುದ್ರಮಹಿಮೆಯನ್ನು ಬರೆದು ಮುಗಿಸಲಳವಲ್ಲ. ಹೀಗಿರುವಾಗ, ಸಾಮಾನ್ಯರ ಪಾಡೇನು? ನಾವು ಕೇವಲ ಶುದ್ಧಭಕ್ತಿಯಿಂದ ಶ್ರೀರುದ್ರಮಹಾದೇವನನ್ನು ಸ್ಮರಿಸಿ ಕೃತಕೃತ್ಯರಾಗೋಣ ಅಲ್ಲವೆ?


ಸಾಮಾನ್ಯವಾಗಿ ರುದ್ರಪೀಠಿಕೆ, ಲಘುನ್ಯಾಸ / ಮಹಾನ್ಯಾಸ, ರುದ್ರ, ಸರ್ವೋ ವೈ ರುದ್ರ, ಚಮಕ— ಹೀಗೆ ಪಠಿಸುವುದು ಪದ್ಧತಿ. ಹಾಗಾಗಿ ಮೊದಲಿಗೆ ರುದ್ರಮಹಿಮೆ ಹಾಗೂ ರುದ್ರಾಧ್ಯಾಯಪ್ರಶಂಸೆಗಳನ್ನು ಪ್ರಸ್ತುತಪಡಿಸಿ, ಬಳಿಕ ರುದ್ರಪೀಠಿಕೆ ಹಾಗೂ ಲಘುನ್ಯಾಸಗಳ ವಿಸ್ತೃತವಾದ ಭಾಷ್ಯ / ವ್ಯಾಖ್ಯಾನವನ್ನು ಸಜ್ಜನಮಹನೀಯರ ಮುಂದಿಡುತ್ತಿರುವೆ. ಈ ಅಲ್ಪಜ್ಞನ ತಪ್ಪುಗಳನ್ನು ತಿದ್ದಿಸಿ, ಒಪ್ಪುಗಳನ್ನು ಮುದ್ದಿಸಿ ಬೆನ್ನುತಟ್ಟಿ ಹರಸಬೇಕಾಗಿ ವಿನಂತಿ.

ಯಾ ಸೃಷ್ಟಿಸ್ಸ್ರಷ್ಟುರಾದ್ಯಾ ವಹತಿ ವಿಧಿಹುತಂ ಯಾ ಹವಿರ್ಯಾ ಚ ಹೋತ್ರೀ
ಯೇ ದ್ವೇ ಕಾಲಂ ವಿಧತ್ತಶ್ಶ್ರುತಿವಿಷಯಗುಣಾ ಯಾ ಸ್ಥಿತಾ ವ್ಯಾಪ್ಯ ವಿಶ್ವಮ್ |
ಯಾಮಾಹುಸ್ಸರ್ವ-ಬೀಜ(/ಭೂತ)ಪ್ರಕೃತಿರಿತಿ ಯಯಾ ಪ್ರಾಣಿನಃ ಪ್ರಾಣವನ್ತಃ
ಪ್ರತ್ಯಕ್ಷಾಭಿಃ ಪ್ರಪನ್ನಸ್ತನುಭಿರವತು ವಸ್ತಾಭಿರಷ್ಟಾಭಿರೀಶಃ ||

ಯಾವುದು ಸೃಷ್ಟಿಕರ್ತನಾದ ಭಗವಂತನ ಮೊದಲ ಸೃಷ್ಟಿಯೋ ಅಂತಹ ಜಲ, ವಿಧಿವತ್ತಾಗಿ ಹೋಮಿಸಿದ ಹವಿಸ್ಸನ್ನು ಒಯ್ಯುವ ಯಾವ ಅಗ್ನಿ, ಹೋಮಿಸುವ ಯಾವ ಹೋತೃ / ಯಜಮಾನ / ಆತ್ಮ / ಯಷ್ಟಾ, ಯಾವೆರಡು ಕಾಲವನ್ನು, ಹಗಲು-ರಾತ್ರಿಗಳನ್ನು ವಿಧಿಯಂತೆ ಉಂಟುಮಾಡುತ್ತಾರೆಯೋ / ಸೂಚಿಸುತ್ತಾರೆಯೋ ಅಂತಹ ಸೂರ್ಯ-ಚಂದ್ರರು, ಯಾವುದು ಈ ವಿಶ್ವವಿಡೀ ವ್ಯಾಪಿಸಿ ಕಿವಿಗೆ ವಿಷಯವಾದ ಶಬ್ದತನ್ಮಾತ್ರೆಮಾತ್ರವನ್ನು ತನ್ನ ಗುಣವಾಗಿಸಿಕೊಂಡಿರುವುದೋ ಅಂತಹ ಆಕಾಶ, ಯಾರನ್ನು ಸಕಲ ಚರಾಚರಗಳ ಬೀಜಸ್ವರೂಪವಾದ ಮೂಲಪ್ರಕೃತಿಯೆಂಬರೋ ಅಂತಹ ಅವನಿ / ಭೂಮಿ ಹಾಗೂ ಯಾರಿಂದ ಸಕಲ ಪ್ರಾಣಿಗಳೂ / ಜೀವರೂ ಪ್ರಾಣವಂತರಾಗಿರುವರೋ ಅಂತಹ ವಾಯು— ಪ್ರತ್ಯಕ್ಷವಾಗಿ ಇಂದ್ರಿಯಗ್ರಾಹ್ಯವಾದ ಈ ೮ ರೂಪಗಳಿಂದ ಸಂಪನ್ನನಾಗಿ ಅಷ್ಟಮೂರ್ತಿಯೆನಿಸಿದ ಪರಶಿವ ಪರಮಾತ್ಮನಾದ ಜಗದೀಶನು ನಿಮ್ಮನ್ನು ರಕ್ಷಿಸಲಿ. (ಇದು ಮಹಾಕವಿ ಕಾಳಿದಾಸ ನ ಸುಪ್ರಸಿದ್ಧ ನಾಟಕವಾದ ಅಭಿಜ್ಞಾನಶಾಕುನ್ತಲಮ್ ನ ಪ್ರಥಮ ಅಂಕದ ನಾಂದೀಶ್ಲೋಕ.)

Comments

Popular posts from this blog

ಲಘುನ್ಯಾಸದ ಬೆಳಕಿನಲ್ಲಿ ಶಿವದರ್ಶನ ೧೩—ಲಘುನ್ಯಾಸಮನ್ತ್ರಾರ್ಥವಿಚಾರ ೮

ಲಘುನ್ಯಾಸದ ಬೆಳಕಿನಲ್ಲಿ ಶಿವದರ್ಶನ ೯—ಲಘುನ್ಯಾಸಮಂತ್ರಾರ್ಥವಿಚಾರ ೪

ತೈತ್ತಿರೀಯಕೃಷ್ಣಯಜುಸ್ಸಂಹಿತಾಭಾಷ್ಯಾರ್ಥಸಮುಚ್ಚಯಃ ೧.೧.೪