ಪುರುಷಸೂಕ್ತಭಾಷ್ಯಮ್ ೧
ತೈತ್ತಿರೀಯಕೃಷ್ಣಯಜುರ್ವೇದೀಯ ಸೂಕ್ತಗಳ ಕನ್ನಡಭಾಷ್ಯ
ॐ श्रीगुरुगणाधिपतये नमः
ॐ व्याससरस्वतीभ्यां नमः
ॐ उमामहेश्वराभ्यां नमः
ॐ लक्ष्मीनारायणाभ्यां नमः
ॐ तत्सत्परब्रह्मणे नमः
ॐ आदिपराशक्त्यै नमः
ॐ कृष्णयजुर्वेदमूर्तये नमः
ॐ वेदर्षिभ्यो नमः
ॐ सायणादिवेदभाष्यकारेभ्यो नमः
ॐ श्रीमज्जगद्गुरुपरम्पराभ्यो नमः
೧. ಪುರುಷಸೂಕ್ತಭಾಷ್ಯಮ್ (ನಾರಾಯಣಾನುವಾಕಭಾಷ್ಯಮ್) ೧
ಪೀಠಿಕೆ
ಪುರುಷಸೂಕ್ತ (ಅಥವಾ ಪೌರುಷಸೂಕ್ತ— ಪುರುಷಸ್ಯ ಇದಂ ಪೌರುಷಮ್, ಪುರುಷದೇವತಾಕಂ ಸೂಕ್ತಂ ಪೌರುಷಸೂಕ್ತಮ್— ಪುರುಷನ ಇದು ಪೌರುಷ / ಪುರುಷನಿಗೆ ಸಂಬಂಧಿಸಿದ್ದು / ಪುರುಷನೇ ದೇವತೆಯಾಗುಳ್ಳ ಸೂಕ್ತ) ಎಂದು ಪ್ರಸಿದ್ಧವಾದ ಸೂಕ್ತವು ಋಗ್ವೇದ (10.90), ಶುಕ್ಲಯಜುರ್ವೇದದ ವಾಜಸನೇಯ ಸಂಹಿತೆ (31.1), ಕಾಣ್ವ ಸಂಹಿತೆ (ಅಧ್ಯಾಯ 35.1), ಶತಪಥ ಬ್ರಾಹ್ಮಣ (13.6.2.11), ಕೃಷ್ಣಯಜುರ್ವೇದದ ತೈತ್ತಿರೀಯ ಆರಣ್ಯಕ (3.12.1), ಸಾಮವೇದ ಜೈಮಿನೀಶಾಖೆ (ಸಂಹಿತಾ - ಆರಣಂ ಖಂಡಮ್ ೩ - ಋಕ್ ೬-೧೦, ಮತ್ತು ಖಂಡಮ್ ೪ - ಋಕ್ ೧,೨),ಸಾಮವೇದ ಜೈಮಿನೀಯ-ತಲವಕಾರಶಾಖೆ (ಪುರುಷವ್ರತಂ ಸಪ್ತ - ಆರಣಂ ವ್ರತಪರ್ವ-ಖಂಡಮ್ - ೮, ಸಾಮ - ೧೦-೧೬), ಸಾಮವೇದ ಕೌಥುಮಶಾಖೆ (ಪುರುಷವ್ರತಮ್, ಪ್ರಪಾಠಕಃ ೭, ದಶತಿಃ ೪, ಋಚಃ ೩-೭), ಸಾಮವೇದ ಕೌಥುಮ ಹಾಗೂ ರಾಣಾಯನಿಶಾಖೆ (ಆರಣ್ಯಗೇಯಗಾನ, ವ್ರತಪರ್ವ, ಖಂಡ ೬, ಸಾಮಗಳು ೧-೬) ಅಥರ್ವವೇದ ಶೌನಕಸಂಹಿತಾ (ಕಾಂಡ 19, ಅನುವಾಕ 1, ಸೂಕ್ತ 6,7), ಅಥರ್ವವೇದ ಪೈಪ್ಪಲಾದಸಂಹಿತಾ (9.5) ಹಾಗೂ ಆಪಸ್ತಂಬ ಶ್ರೌತಸೂತ್ರ (16.28.3, 20.20.2) ಗಳಲ್ಲಿ ಮಂತ್ರಾನುಕ್ರಮದಲ್ಲಿ, ಮಂತ್ರಗಳ ಸಂಖ್ಯೆಯಲ್ಲಿ ಹಾಗೂ ಕೆಲವು ಪದಗಳಲ್ಲಿ ಅಲ್ಪಸ್ವಲ್ಪ ವ್ಯತ್ಯಾಸಗಳೊಂದಿಗೆ, ಆಯಾ ವೇದದ ವಿಭಿನ್ನ ಸ್ವರವೈಶಿಷ್ಟ್ಯದೊಂದಿಗೆ ಕಂಡುಬರುತ್ತದೆ. ಇದು ವೃದ್ಧಹಾರೀತ ಸಂಹಿತೆಯಲ್ಲಿ (5.3.86) “ಸಹಸ್ರಶೀರ್ಷಸೂಕ್ತ” ವೆಂದೂ, ಬೌಧಾಯನ ಧರ್ಮಸೂತ್ರ (4.7.5) ದಲ್ಲಿ “ಸಹಸ್ರಾಕ್ಷಸೂಕ್ತ” ವೆಂದೂ ಉಲ್ಲೇಖಿತವಾಗಿದೆ. ಹೀಗೆ ಇದಕ್ಕೆ ಸಾರ್ವಭೌಮ ಪ್ರಾಮಾಣ್ಯವು ಸುಪ್ರತಿಷ್ಠಿತವಾಗಿದೆ.
ಇದು ಸಮಸ್ತವೇದಗಳಿಗೂ ಮೂಲಸೂಕ್ತ. ಸೃಷ್ಟಿಯ ಆದಿಯ ನಾದಬ್ರಹ್ಮವೆನಿಸಿದ ಪ್ರಣವನಾದ / ಓಂಕಾರದ ಅ, ಉ, ಮ— ಎಂಬ ೩ ಅಕ್ಷರಗಳಿಂದ ಭೂಃ, ಭುವಃ, ಸುವಃ— ಎಂಬ ಗಾಯತ್ರಿಯ ಮೂರು ವ್ಯಾಹೃತಿಗಳೂ, ಇವುಗಳಿಂದ ಗಾಯತ್ರಿಯ ೩ ಪಾದಗಳೂ, ಇವುಗಳಿಂದ ೩ ವರ್ಗಗಳ ಪುರುಷಸೂಕ್ತವೂ, ಇದರಿಂದ ತ್ರಯೀ ಎನಿಸಿದ ಋಗ್ಯಜುಸ್ಸಾಮಮಂತ್ರಾತ್ಮಕ ಸಮಗ್ರ ಶ್ರುತಿವಾಙ್ಮಯವೂ ಹೊರಹೊಮ್ಮಿತು. ಹೀಗಾಗಿ ಪುರುಷಸೂಕ್ತವು ಸಮಸ್ತವೇದಗಳ ಸಾರಸರ್ವಸ್ವ. ಪುರುಷಸೂಕ್ತಪಠನದಿಂದ ಇಡೀ ವೇದವನ್ನು ಪಠಿಸಿದ ಫಲ.
ಹೀಗಾಗಿಯೇ ಬಾದರಾಯಣರಾದ (ಬದರಿಕಾಶ್ರಮನಿವಾಸಿಗಳಾದ) ಭಗವಾನ್ ವೇದವ್ಯಾಸರು ಮಹಾಭಾರತದ ಮೋಕ್ಷಧರ್ಮಪರ್ವದಲ್ಲಿ ಹಾಗೂ ಪಾದ್ಮಪುರಾಣದಲ್ಲಿ ಹೀಗೆ ಹೇಳಿದ್ದಾರೆ—
ಇದಂ ಪುರುಷಸೂಕ್ತಂ ಹಿ
ಸರ್ವವೇದೇಷು ಪಠ್ಯತೇ |
ಅತಃ ಶ್ರುತಿಭ್ಯಃ ಸರ್ವಾಭ್ಯೋ
ಬಲವತ್ಸಮುದೀರಿತಮ್ ||
ಈ ಪುರುಷಸೂಕ್ತವಾದರೋ ಎಲ್ಲಾ ವೇದಗಳಲ್ಲೂ ಪಠಿಸಲ್ಪಡುವುದು. ಹೀಗಾಗಿ ಇದು ಬೇರೆಲ್ಲ ವೇದಮಂತ್ರಗಳಿಗಿಂತಲೂ ಅತಿ ಪ್ರಭಾವಶಾಲಿಯಾದುದೆಂದು ಹೇಳಲ್ಪಟ್ಟಿರುವುದು.
ಅದಕ್ಕಾಗಿಯೇ ಶೌನಕ-ಆಪಸ್ತಂಬ-ಬೋಧಾಯನಾದಿ ಮಹರ್ಷಿಗಳೂ ಜಪ-ಹೋಮ-ಪೂಜಾ-ಪ್ರಾಯಶ್ಚಿತ್ತಾದಿಗಳಲ್ಲಿ ಪುರುಷಸೂಕ್ತಮಂತ್ರಗಳ ವಿನಿಯೋಗವನ್ನು ಹೇರಳವಾಗಿ ವಿಧಿಸಿರುವರು.
ಋಗ್ವೇದದಲ್ಲಿ (3.62.10) ಬರುವ ಗಾಯತ್ರೀಮಂತ್ರದ ದೇವತೆಯಾದ ಸವಿತೃವು ಋಗ್ವೇದದ (10.90) ಪುರುಷಸೂಕ್ತದ ಪುರುಷನ ತದ್ರೂಪವಾಗಿದೆ ಎನ್ನಲಾಗಿದ್ದು, ಇಡೀ ವೈದಿಕಸಂಪ್ರದಾಯವು ಪುರುಷಸೂಕ್ತದ ಮೇಲ್ಪಂಕ್ತಿಯನ್ನು ಅನುಸರಿಸುತ್ತದೆ (ವೇದಾಃ ಪುರುಷಸೂಕ್ತಗಾಃ). ಛಾಂದೋಗ್ಯೋಪನಿಷತ್ (3.12.5.6) ಗಾಯತ್ರೀಮಂತ್ರದ ಹಿರಿಮೆಯನ್ನು ಸ್ತುತಿಸುತ್ತಾ, (10.90.3) “ತದೇತದೃಚಾಭ್ಯನೂಕ್ತಮ್” ಎಂದಿದೆ ಹಾಗೂ ಗಾಯತ್ರೀ ಮಂತ್ರದ ನಾಲ್ಕು ಸಾಲುಗಳ ಮತ್ತು ಪುರುಷನ ನಾಲ್ಕುಹೆಜ್ಜೆಗಳ ಸಾಮ್ಯತೆಯನ್ನು ನಿರೂಪಿಸುತ್ತದೆ.
ಶಂಕರಾಚಾರ್ಯರ ಪ್ರಕಾರ, ಬ್ರಹ್ಮನ ಇನ್ನೊಂದು ಹೆಸರೇ ಗಾಯತ್ರೀ. ಗಾಯತ್ರಿಯು ಭೌತಿಕ ಜಗವನ್ನು ಪ್ರತಿಪಾದಿಸಿದರೆ, ಬ್ರಹ್ಮ / ಪುರುಷನು ಗಾಯತ್ರಿಯ ೩ ಪಾದಗಳನ್ನೂ ಪರಿಪೂರ್ಣಗೊಳಿಸಿ (ಪುರುಷಃ ಸರ್ವಪೂರಣಾತ್) , ಸಂಪೂರ್ಣತೆಯನ್ನೀಯುತ್ತಾನೆ; ಅದನ್ನೂ ಮೀರಿ ನಿಂತಿದ್ದಾನೆ; ಹಾಗೂ ಸ್ವತಃ ವ್ಯಕ್ತನಾಗದೇ ಸಕಲಚರಾಚರಗಳ ಅಂತರ್ಯಾಮಿಯಾಗಿ ಗುಪ್ತವಾಗಿ, ಅವ್ಯಕ್ತವಾಗಿ, ಅಗೋಚರನಾಗಿ ನೆಲೆಸಿರುವನು (ಪುರಿ ಶಯನಾತ್ ಪುರುಷಃ). ಗಾಯತ್ರಿಯ ೩ ಪಾದಗಳು ಸಮಸ್ತ ಚೇತನಾಚೇತನವನ್ನು ಒಳಗೊಂಡಿದ್ದರೆ, ಅದರಾಚೆಗಿನ ತುರೀಯ / ೪ನೇ ಪಾದವು ಉಳಿದ ೩ ಪಾದಗಳ ಮೂಲ ಅವ್ಯಕ್ತರೂಪವಾಗಿದೆ. ವ್ಯಕ್ತಪಾದಗಳು ನಿಸ್ಸಂದೇಹವಾಗಿ ಪುರುಷನ ಭವ್ಯತೆಯನ್ನು ಸೂಚಿಸುವುವಾದರೂ, ಪುರುಷನ ನೈಜಸ್ವರೂಪವು ಇದನ್ನೆಲ್ಲ ಮೀರಿದುದಾಗಿದೆ.
ಮಧ್ವಾಚಾರ್ಯರ ಮತದಂತೆ—
“ಸ ಪೂರ್ಣತ್ವಾತ್ ಪುಮಾನ್ ನಾಮ ಪೌರುಷೇ ಸೂಕ್ತ ಈರಿತಃ |
ಸ ಏವಾಖಿಲವೇದಾರ್ಥಃ ಸರ್ವಶಾಸ್ತ್ರಾರ್ಥ ಏವ ಚ ||”
“ಪುರುಷಸೂಕ್ತದಲ್ಲಿ ಪುರುಷನೆಂದರೆ ಪರಿಪೂರ್ಣತೆಯೆಂದೂ, ಅವನೇ ಅಖಿಲವೇದದ ಅರ್ಥಸ್ವರೂಪನೂ, ವೇದಪ್ರತಿಪಾದ್ಯನೂ, ಸರ್ವಶಾಸ್ತ್ರಗಳ ತಾತ್ಪರ್ಯನೂ ಆಗಿರುವನೆಂದು ವಿವರಿಸಲ್ಪಟ್ಟಿದೆ.”
ಋಗ್ವೇದೀಯ ಪುರುಷಸೂಕ್ತವು ೧೬ ಮಂತ್ರಗಳಿಂದ ಕೂಡಿದ್ದು, ನಾಮ, ಲೋಕ, ಕರ್ಮ, ಮಾತು, ಚಿಂತನೆ, ವೀರ್ಯ, ಅನ್ನ, ಮನಸ್ಸು, ಇಂದ್ರಿಯಸಮೂಹ, ಮಣ್ಣು, ನೀರು, ಬೆಂಕಿ, ಗಾಳಿ, ಆಕಾಶ, ಶ್ರದ್ಧೆ ಮತ್ತು ಜೀವ— ಈ ೧೬ ಕಲೆಗಳ ನಿಯಾಮಕನಾಗಿ ಷೋಡಶಕಲಃ ಪುರುಷಃ ಎನಿಸಿದ ಭಗವಂತನ ಷೋಡಶೋಪಚಾರಪೂಜೆಗೆ ಪ್ರಧಾನಮಂತ್ರವಾಗಿದೆ. ತೈತ್ತಿರೀಯಕೃಷ್ಣಯಜುರ್ವೇದಾರಣ್ಯಕದಲ್ಲಿನ ೨ ಹೆಚ್ಚುವರಿ ಪುರುಷಸೂಕ್ತಮಂತ್ರಗಳು ಚಿತ್ ಪ್ರಕೃತಿ / ಅಕ್ಷರಪುರುಷ / ಲಕ್ಷ್ಮೀದೇವಿ ಹಾಗೂ ಭಗವಂತನನ್ನು / ವಿಷ್ಣುವನ್ನು ಒಳಗೊಂಡು, ಜೀವ / ಕ್ಷರ, ಲಕ್ಷ್ಮೀ / ಅಕ್ಷರ ಹಾಗೂ ಪುರುಷೋತ್ತಮರ ತ್ರಿಪುಟಿಯನ್ನೊಳಗೊಂಡು ೧೮ ಮಂತ್ರಗಳಾಗಿ ವಿಸ್ತರಿಸಿದೆ. ಕ್ಷರಃ ಸರ್ವಾಣಿ ಭೂತಾನಿ (ಭಗವದ್ಗೀತೆ) ಎಂಬಂತೆ ೧೫ ಜಡ ಕಲೆಗಳೆಂಬ ಬಂಧನಗಳನ್ನೊಳಗೊಂಡ ಸಂಸಾರಿ ಜೀವನೇ ೧೬ನೆಯ ಕ್ಷರಪುರುಷ. ಹೀಗೆ ಚೇತನಾಚೇತನಾತ್ಮಕವಾದ ಸಮಸ್ತ ವಿಶ್ವವು ೧೬ ಕಲೆಗಳಲ್ಲಿ ಸೇರಿತು. ಈ ೧೫ ಜಡಬೇಲಿಗಳಲ್ಲಿ ೧೬ನೆಯ ಜೀವನನ್ನು ಬಿಗಿದವಳೇ ೧೭ನೆಯ ಕಲೆಯಾದ ಚಿತ್ ಪ್ರಕೃತಿ / ಜಗನ್ಮಾತೆ ಮಹಾಲಕ್ಷ್ಮೀದೇವಿ. ಇವಳೇ ಅಕ್ಷರಪುರುಷ (ಕೂಟಸ್ಥೋऽಕ್ಷರ ಉಚ್ಯತೇ— ಭಗವದ್ಗೀತಾ). ಈ ಬಂಧನಗಳಿಂದ ಜೀವನನ್ನು ಬಿಡುಗಡೆಗೊಳಿಸಿ ಮೋಕ್ಷಪ್ರದನಾದವನು ೧೮ನೆಯ ಪರತತ್ತ್ವವಾದ ಪುರುಷೋತ್ತಮ ಪರಮಾತ್ಮಾ / ಭಗವಂತನಾದ ನಾರಾಯಣ.
ದ್ವಾವಿಮೌ ಪುರುಷೌ ಲೋಕೇ ಕ್ಷರಶ್ಚಾಕ್ಷರ ಏವ ಚ |
ಕ್ಷರ೯ ಸರ್ವಾಣಿ ಭೂತಾನಿ ಕೂಟಸ್ಥೋऽಕ್ಷರ ಉಚ್ಯತೇ || ೧೬ ||
ಉತ್ತಮಃ ಪುರುಷಸ್ತ್ವನ್ಯಃ ಪರಮಾತ್ಮೇತ್ಯುದಾಹೃತಃ |
ಯೋ ಲೋಕತ್ರಯಮಾವಿಶ್ಯ ಬಿಭರ್ತ್ಯವ್ಯಯ ಈಶ್ವರಃ || ೧೭ ||
ಯಸ್ಮಾತ್ ಕ್ಷರಮತೀತೋऽಹಮಕ್ಷರಾದಪಿ ಚೋತ್ತಮಃ |
ಅತೋऽಸ್ಮಿ ಲೋಕೇ ವೇದೇ ಚ ಪ್ರಥಿತಃ ಪುರುಷೋತ್ತಮಃ || ೧೮ ||
(ಭಗವದ್ಗೀತಾ ಅಧ್ಯಾಯ ೧೫)
ಪುರುಷ ಪದದ ಅರ್ಥ- ವಿವರಣೆಗಳು—
೧) “ಪುರತಿ ಅಗ್ರೇ ಗಚ್ಛತಿ”— ‘ಯಾವುದು ಮುಂದಕ್ಕೆ ಹೊಗುತ್ತದೋ ಅದು.’ “ಪುರ ಅಗ್ರಗಮನೇ” ಎಂಬ ಧಾತುವಿನಿಂದ “ಪುರಃ ಕುಷನ್” ಎಂಬ ಪಾಣಿನೀಯ ಉಣಾದಿಸೂತ್ರ ೫೨೩ರಿಂದ ನಿಷ್ಪನ್ನವಾದದ್ದೇ ಪುರುಷಶಬ್ದವು.
೨) “ಪಿಪರ್ತಿ ಪೂರಯತಿ ಬಲಮ್ ”— ‘ಎಲ್ಲದಕ್ಕೂ ಬಲವನ್ನು ತುಂಬಿಸುವಂಥದ್ದು, ತನ್ನ ಶಕ್ತಿಯ ಮೂಲಕ ಎಲ್ಲವನ್ನೂ ತೃಪ್ತಿಗೊಳಿಸುವಂಥದ್ದು.’ “ಪೃ ಪಾಲನಪೂರಣಪ್ರೀತಿವ್ಯಾಯಾಮೇಷು” ಎಂಬ ಧಾತುಜನ್ಯ.
೩) “ಪುರಿ ಶೇತೇ” (ಶತಪಥ ಬ್ರಾಹ್ಮಣ ೧೩.೬.೨.೧)— ‘ಪುರ / ಶರೀರದಲ್ಲಿ ನೆಲೆಸಿರುವಂಥದ್ದು.’
೪) “ಪೃ - ಪಾಲನ-ಪೂರಣಯೋಃ”— ‘ಪೃ’ ಧಾತುವಿನಿಂದ ನಿಷ್ಪನ್ನಗೊಂಡ, ‘ರಕ್ಷಿಸು’, ‘ಪಾಲಿಸು’, ‘ವ್ಯಾಪಿಸು’, ‘ತುಂಬಿಸು’ ಇತ್ಯಾದಿ ಅರ್ಥಗಳನ್ನು ಕೊಡುವ ಪದ ಪುರುಷ.
೫) ‘ಆತ್ಮಾ’ ಎಂಬರ್ಥ (ಅಮರಕೋಶ) ಕೊಡುವುದರಿಂದ ಜಡಪ್ರಕೃತಿಗೆ ಚೇತನಪ್ರದವಾಗಿದೆ.
೬) ಸಮಸ್ತ ಜಗದ ಸೃಷ್ಟಿಕರ್ತ ಹಾಗೂ ಪ್ರೇರಣಾದಾತನೆಂಬರ್ಥದಲ್ಲಿ ಸವಿತೃವಿನ ಅನುರೂಪನಾಗಿದ್ದಾನೆ. “ಸೂ - ಪ್ರಸವೇ ಪ್ರೇರಣೇ ಚ |”
೭) “ಪುರಾಣ್ಯನೇನ ಸೃಷ್ಟಾನಿ ನೃತಿರ್ಯಗೃಷಿದೇವತಾಃ |
ಶೇತೇ ಜೀವೇನ ರೂಪೇಣ ಪುರೇಷು ಪುರುಷೋ ಹ್ಯಸೌ ||”—(ಶ್ರೀಮದ್ಭಾಗವತಪುರಾಣ ೭.೧೪.೩೭ ) ‘ನರ,ಮೃಗ,ಋಷಿ,ದೇವತೆ ಮುಂತಾದ ವಿವಿಧ ಪುರ / ದೇಹಗಳನ್ನು ಸೃಷ್ಟಿಸಿದ ಈ ಪುರುಷನು ಜೀವಾತ್ಮರೂಪದಲ್ಲಿ ಅವುಗಳೊಳಗೆ ವಾಸವಾಗಿದ್ದಾನೆ.’
೮) “ಪುರುಸಂಜ್ಞೇ ಶರೀರೇऽಸ್ಮಿನ್ ಶಯನಾತ್ಪುರುಷೋ ಹರಿಃ”— ‘ಪುರುವೆಂದು ಕರೆಯಲ್ಪಡುವ ಈ ಶರೀರದಲ್ಲಿ ನೆಲೆಸಿರುವುದರಿಂದ ಶ್ರೀಹರಿಯೇ / ವಿಷ್ಣುವೇ (“ವಿಶ್ವಂ ವ್ಯಾಪ್ನೋತಿ ಪ್ರವಿಶತಿ ಚ”) ಪುರುಷನೆನಿಸಿದ್ದಾನೆ.
೯) ಋಗ್ವೇದದ ಸೂಕ್ತಗಳಲ್ಲಿ ಹಾಗೂ ಉಪನಿಷತ್ತಿನಲ್ಲಿ ಪುರುಷತತ್ತ್ವವು ಅಂತಿಮ ಹಾಗೂ ಏಕೈಕ ವೈಶ್ವಿಕ ತತ್ತ್ವ ಮತ್ತು ಸೂಕ್ಷ್ಮಾತಿಸೂಕ್ಷ್ಮರೂಪವುಳ್ಳದ್ದಾಗಿ (ಅತೀಂದ್ರಿಯ ಸತ್ಯ)ಯೂ, ಬೃಹದಾಕಾರವುಳ್ಳದ್ದಾಗಿಯೂ (“ಅಣೋರಣೀಯಾನ್ ಮಹತೋ ಮಹೀಯಾನ್”) ವಿವರಿಸಲ್ಪಟ್ಟಿದೆ.
೧೦) “ಯಃ ಪುನರ್ ಏತಂ ತ್ರಿಮಾತ್ರೇಣ ಓಮ್ ಇತಿ ಅನೇನ ಏವ ಅಕ್ಷರೇಣ ಪರಂ ಪುರುಷಂ ಅಭಿಧ್ಯಾಯೀತ | ಸ ತೇಜಸಿ ಪುರುಷೇ ಸಮ್ಪನ್ನಃ | ಯಥಾ ಪಾದೋದರಃ ತ್ವಚಾ ನಿರ್ಮುಚ್ಯತ ಏವಂ ಹ ವೈ ಸ ಪಾಪ್ಮನಾ ವಿನಿರ್ಮುಕ್ತಃ ||” (ಪ್ರಶ್ನೋಪನಿಷತ್ ೫.೫)— ಇಲ್ಲಿ ಪುರುಷನು ಅ, ಉ, ಮ— ಗಳೆಂಬ ಮೂರು ಮಾತ್ರೆಗಳಿಂದ ಕೂಡಿದ ಪ್ರಣವಾಕ್ಷರ / ಓಂಕಾರಸ್ವರೂಪನೆಂದು ಹೇಳಲ್ಪಟ್ಟಿದ್ದು, ಅವನು ತೇಜೋಪುರುಷನಾದ ಭಾಸ್ಕರನಲ್ಲಿ ಅಂತರ್ಗತನಾಗಿದ್ದು, ಯಾವನು ಈ ಪ್ರಣವದಿಂದಲೇ ಆ ಪರಮ ಪುರುಷನನ್ನು ಧ್ಯಾನಿಸುವನೋ ಅಂಥವನು— ಹೇಗೆ ಸರ್ಪವು (ತನ್ನ ಉದರವನ್ನೇ ಪಾದವಾಗಿ ಬಳಸುವ ಪಾದೋದರ / ಉರ ಅಥವಾ ಎದೆಯಿಂದಲೇ ಗಮನ ಮಾಡುವ ಉರಗ) ತನ್ನ ಜೀರ್ಣವಾದ ಚರ್ಮವನ್ನು ಕಳಚುವುದೋ ಹಾಗೆಯೇ— ಸರ್ವ ಪಾಪಗಳಿಂದ ಬಿಡುಗಡೆ ಹೊಂದುವನು. “ಸ ಏತಸ್ಮಾತ್ ಜೀವಘನಾತ್ ಪರಾತ್ಪರಂ ಪುರಿಶಯಂ ಪುರುಷಮ್ ಈಕ್ಷತೇ ||”— ಅಂಥವನು ಈ ಜೀವಾತ್ಮನಿಗಿಂತ ಆಚೆಗಿನ ಪರಾತ್ಪರನಾದ, ದೇಹಸ್ಥನಾದ ಪುರುಷನನ್ನು ತನ್ನ ಹೃದಯಾಕಾಶದಲ್ಲಿ ಕಾಣುವನು. “ಸರ್ವೇಷಾಂ ಸಂಸಾರಿಣಾಂ ಜೀವಾನಾಮ್ ಆತ್ಮಭೂತಃ ||” (ಶಂಕರಭಾಷ್ಯ) ಸಕಲ ಸೃಷ್ಟಿಯ ಜೀವರುಗಳ ಆತ್ಮನಾಗಿರುವನು. “ಸ ಹಿ ಅನ್ತರಾತ್ಮಾ ಲಿಙ್ಗರೂಪೇಣ ಸರ್ವಭೂತಾನಾಮ್ ||”— ಅವನು ಸರ್ವ ಚರಾಚರಗಳ ಅಂತರಾತ್ಮನಾಗಿ ಲಿಂಗರೂಪದಲ್ಲಿ ನೆಲೆಸಿರುವನು. “ತಸ್ಮಿನ್ ಹಿ ಲಿಙ್ಗಾತ್ಮನಿ ಸಂಹತಾಃ ಸರ್ವೇ ಜೀವಾಃ ||”— ಆ ಲಿಂಗರೂಪೀ ಆತ್ಮನಲ್ಲಿ ಸರ್ವ ಜೀವರೂ ನೆಲೆಸಿರುತ್ತಾರೆ. ಇದು ವಿಶ್ವಾತ್ಮಭಾವ.
ಯಾವುದು ಸಮಸ್ತ ಭೌತಿಕಶರೀರಗಳನ್ನು ಪ್ರವೇಶಿಸಿ ನೆಲೆಸಿರುವ ತತ್ತ್ವವೋ (“ಸರ್ವಶರೀರಾನುಪ್ರವಿಷ್ಟಮ್”), ಅದೇ ಸೌರಮಂಡಲಾಂತರ್ಗತ ತತ್ತ್ವವೂ ಆಗಿದೆಯೆಂದು ಧ್ಯಾನಿಸಲ್ಪಡುವುದು. “ಯೋಸಾವಸೌ (ಯಃ ಅಸೌ ಅಸೌ) ಪುರುಷಃ, ಆದಿತ್ಯಮಣ್ಡಲಸ್ಥೋ ವ್ಯಾಹೃತಿಃ ಅವಯವಃ ಪುರುಷಃ, ಪುರುಷಃ - ಆಕಾರತ್ವಾತ್ ||” (ಈಶಾವಾಸ್ಯೋಪನಿಷತ್ತು—೧೬ನೇ ಮಂತ್ರ) ಈ ಆಂತರಿಕಸತ್ಯವು ಪುರುಷ; ಅವನ ಅವಯವಗಳು ಭೂಃ,ಭುವಃ,ಸುವಃ ಎಂಬ ೩ ವ್ಯಾಹೃತಿಗಳು. “ಪೂರ್ಣಂ ವಾ ಅನೇನ ಪ್ರಾಣಬುದ್ಧ್ಯಾತ್ಮನಾ ಜಗತ್ಸಮಸ್ತಮಿತಿ ಪುರುಷಃ || (ಶಂಕರಭಾಷ್ಯ)— ಇದೇ ಸತ್ಯದಿಂದ ಪ್ರಾಣ-ಬುದ್ಧಿ-ಆತ್ಮದ ಮೂಲಕ ಸಮಸ್ತ ಜಗತ್ತು ತುಂಬಿರುವುದು / ಸೃಷ್ಟಿಯಾಗಿರುವುದು / ಚೈತನ್ಯಯುತವಾಗಿರುವುದಾಗಿದೆ.
೧೧) “ಅಂಗುಷ್ಠಮಾತ್ರಃ ಪುರುಷೋ ಮಧ್ಯ ಆತ್ಮನಿ ತಿಷ್ಠತಿ | ಈಶಾನೋ ಭೂತಭವ್ಯಸ್ಯ ನ ತತೋ ವಿಜುಗುಪ್ಸತೇ, ಏತದ್ವೈ ತತ್ ||”— (ಕಠೋಪನಿಷತ್ ಅಧ್ಯಾಯ ೨. ವಲ್ಲೀ೧. ಮಂತ್ರಶ್ಲೋಕ ೧೨) ಅಂಗುಷ್ಠ (ಹೆಬ್ಬೆರಳಿನ) ಗಾತ್ರದ ಪುರುಷನು ಆತ್ಮದ ಮಧ್ಯಭಾಗದಲ್ಲಿ ನೆಲೆಸಿದ್ದಾನೆ. ಭೂತ -ಭವಿಷ್ಯಗಳಲ್ಲೂ (ಈಶಾನ) ಪುರುಷನು ಪರಮೇಶ್ವರನೆನಿಸಿದ್ದಾನೆ. ಇದನ್ನರಿತರೆ ಅನಂತರ ಯಾವುದೇ ದುಃಖ - ಜಿಗುಪ್ಸೆಗಳಿಲ್ಲ. ಇದೇ ಅದು (ಪರಬ್ರಹ್ಮ ಪರಮಾತ್ಮಾ). ಅಂಗುಷ್ಠದ ಪರಿಮಾಣವು ಹೃದಯಕಮಲದ ವ್ಯಾಪ್ತಿಯ ಸೂಚಕ. ಯೋಗಿಗಳ ಅಂತರ್ದೃಷ್ಟಿಗೆ ಸುಲಭವಾಗಿ ಗೋಚರಿಸುವ ಆತ್ಮನು ಅದರ ತೆರೆದ ಭಾಗದಲ್ಲಿದ್ದು ವಿಶ್ರಮಿಸಿಕೊಳ್ಳುತ್ತಾನೆ. “ಜ್ಯೋತಿಃ -ಇವ ಅಧೂಮಕಃ”— ಪರಮ ಪುರುಷನ ಸ್ವರೂಪ ಹೊಗೆಯಿಲ್ಲದ ಅಗ್ನಿಯಂತೆ / ಬೆಳಕಿನಂತೆ. ಇಂದ್ರಿಯವ್ಯಾಪಾರಗಳು ಭೌತಿಕ ಅವಯವಗಳಿಗಿಂತ ಶ್ರೇಷ್ಠ. “ಇನ್ದ್ರಿಯೇಭ್ಯಃ ಪರಂ ಮನೋ ಮನಸಃ ಸತ್ತ್ವಮ್ ಉತ್ತಮಮ್ | ಸತ್ತ್ವಾದಧಿ ಮಹಾನಾತ್ಮಾ ಮಹತೋ ಅವ್ಯಕ್ತಮ್ ಉತ್ತಮಮ್ | ಅವ್ಯಕ್ತಾತ್ ತು ಪರಃ ಪುರುಷಃ ವ್ಯಾಪಕೋ ಅಲಿಙ್ಗಃ - ಏವ ಚ | ಯಂ ಜ್ಞಾತ್ವಾ ಮುಚ್ಯತೇ ಜನ್ತುಃ - ಅಮೃತತ್ವಂ ಚ ಗಚ್ಛತಿ ||”— (ಕಠೋಪನಿಷತ್ ಅಧ್ಯಾಯ ೨. ವಲ್ಲೀ ೩. ಮಂತ್ರಶ್ಲೋಕ ೭, ೮) ಇಂದ್ರಿಯಗಳಿಗಿಂತ ಮನಸ್ಸು ಶ್ರೇಷ್ಠ. ಮನಸ್ಸಿಗಿಂತ ಸತ್ತ್ವ / ಶಕ್ತಿ / ಚೇತನ / ಧೀಶಕ್ತಿ / ಬುದ್ಧಿ ಉತ್ತಮ. ಮಹತ್ತತ್ತ್ವವು ( / ಆತ್ಮಾ) ಬುದ್ಧಿಗಿಂತ ಮಿಗಿಲು. ಮಹತ್ ( /ಆತ್ಮಾ)ಗಿಂತ ಸಮಗ್ರ ಚರಾಚರಾತ್ಮಕ ಅಸ್ತಿತ್ವದ ಅವ್ಯಕ್ತ ಆಧಾರ / ಅವ್ಯಕ್ತತತ್ತ್ವವು ಹೆಚ್ಚಿನದು. ಅವ್ಯಕ್ತಕ್ಕಿಂತಲೂ ಅತೀತನು ಹಾಗೂ ಮಿಗಿಲಾದವನು ಸರ್ವವ್ಯಾಪಕನಾದ ಲಿಂಗಭೇದರಹಿತನಾದ ಪರಮಪುರುಷನು. ಅತೀತತೆ / ಶ್ರೇಷ್ಠತೆಯು ವ್ಯಾಪಕತ್ವದ ದೃಷ್ಟಿಯಿಂದ ಹೇಳಲ್ಪಟ್ಟಿದೆ. ಇವುಗಳಲ್ಲಿ ಮೇಲುಮೇಲ್ಮಟ್ಟದವು ತಮಗಿಂತ ಕೆಳಮಟ್ಟದವನ್ನು ಒಳಗೊಂಡಿರುತ್ತವೆ. ಯಾವ ಈ ಪುರುಷನನ್ನು ಹಾಗೂ ಈ ತಾರತಮ್ಯವನ್ನು ತಿಳಿದು, ಜೀವಿಯು ಸಂಸಾರಚಕ್ರದಿಂದ ಮುಕ್ತನಾಗಿ ಅಮೃತತ್ವ / ಅಮರತ್ವ / ಜರಾಮರಣಜನ್ಮರಹಿತ ನಾಗುತ್ತಾನೆ.
೧೨) ಇಂದ್ರಿಯಗೋಚರ ಶ್ರೇಣಿಯಲ್ಲಿ ಅತ್ಯುನ್ನತವಾಗಿರುವ ಅವ್ಯಕ್ತವು ಸರ್ವವ್ಯಾಪಿಯಾಗಿರುವ ಆಕಾಶವೆಂದೂ ಕರೆಯಲ್ಪಟ್ಟಿದೆ. ಬ್ರಹ್ಮವಿದ್ಯೋಪನಿಷತ್ (೧೪) ಪ್ರಕಾರ ಆಕಾಶ, ವಾಯು ಮತ್ತು ಪ್ರಾಣಗಳು ಆತ್ಮನನ್ನು ಸಂಕೇತಿಸುತ್ತವೆ— “ವಾಯುಃ ಪ್ರಾಣಸ್ತಥಾऽऽಕಾಶಸ್ತ್ರಿವಿಧೋ ಜೀವ ಸಂಜ್ಞಕಃ”. “ಲಿಂಗ್ಯತೇ ಗಮ್ಯತೇ ಯೇನ ತತ್ ಅಲಿಂಗಮ್, ಬುಧ್ಯಾದಿ; ತದ್ ಅವಿದ್ಯಮಾನಮ್” (ಶಂಕರಭಾಷ್ಯ)— ದೃಷ್ಟಿಗೋಚರ ಗೋಳದಲ್ಲಿ ಆಕಾಶವನ್ನು ಮೀರಿರುವ ಪುರುಷನನ್ನು ಗುರುತಿಸಲಾಗಲಿ / ಕಾಣಲಾಗಲಿ ಸಾಧ್ಯವಿಲ್ಲ. ಆದ್ದರಿಂದ ಅದು ಅಲಿಂಗ.
೧೩) “ದಿವ್ಯೋ ಹಿ ಅಮೂರ್ತಃ ಪುರುಷಃ, ಸ ಬಾಹ್ಯಾಭ್ಯಂತರೋ ಹಿ ಅಜಃ | ಅಪ್ರಾಣೋ ಹಿ ಅಮನಾಃ ಶುಭ್ರೋ ಹಿ ಅಕ್ಷರಾತ್ಪರತಃ ಪರಃ || (ಮುಂಡಕೋಪನಿಷತ್ ಮುಂಡಕ ೨, ಖಂಡ ೧, ಮಂತ್ರಶ್ಲೋಕ ೨)— ಸ್ಥಿರತೆ, ನಿರಂತರತೆ ಹಾಗೂ ಅಮೂರ್ತನಾದರೂ (ಮೂರ್ತರೂಪವಿಲ್ಲದಿದ್ದರೂ) ಎಲ್ಲದರೊಳಹೊರಗೂ ವ್ಯಾಪಿಸಿರುವಿಕೆ— ಈ ಗುಣಗಳಿರುವವನೇ ಪುರುಷ. ಮನಃ-ಪ್ರಾಣ ರಹಿತವಾದ ಶುಭ್ರವಾದ, ಸರ್ವಮೂಲವೆನಿಸಿದ ಅಕ್ಷರ (ನಾಶವಿಲ್ಲದ)ವೆನಿಸಿದ ಅವ್ಯಕ್ತಕ್ಕಿಂತಲೂ ಮಿಗಿಲಾದ ಹಾಗೂ ಅತೀತವಾದ / ಅದರಾಚೆಗಿನ ಯಾವುದೇ ನಾಮರೂಪಲಿಂಗಾದಿ ಉಪಾಧಿರಹಿತವಾಗಿ ನಿರುಪಾಧಿಕವೆನಿಸಿದ ತತ್ತ್ವವೇ ಪುರುಷ. ಆತನಲ್ಲೇ ಆಕಾಶವೆಂಬ ಜಗದ್ವ್ಯಾಪಾರವಿಷಯಸಹಿತವಾದ ಅಕ್ಷರತತ್ತ್ವವು ಓತಪ್ರೋತವಾಗಿ ಅಡಕವಾಗಿದೆ. “ಪುರುಷ ಏವ ಇದಂ ವಿಶ್ವಮ್”— (೨.೧.೧೦) ಒಂದರ್ಥದಲ್ಲಿ ಈ ವಿಶ್ವವೇ ಪುರುಷನು. ಪುರುಷತತ್ತ್ವವು ಸಮಸ್ತಜೀವಿಗಳ ಹೃದಯಗುಹೆಯಲ್ಲಿ ಅಂತರ್ಗತವಾಗಿದೆ— “ನಿಹಿತಂ ಗುಹಾಯಾಮ್” .
೧೪) ಪುರುಷನು ಮಾನವಸ್ವರೂಪದಲ್ಲೂ ಕಲ್ಪಿತನಾಗಿರುವನು— (ಬೃಹದಾರಣ್ಯಕ ಉಪನಿಷತ್ ೧.೪.೧) “ಆತ್ಮಾ ಏವ ಇದಮ್ ಅಗ್ರೇ, ಆಸೀತ್ ಪುರುಷವಿಧಃ”. ಆತನು / ಶರೀರದೊಳಗಿದ್ದು ಶರೀರೀ ಎನಿಸಿದ ಆತ್ಮಾ / ಪುರುಷನು ವಿಶ್ವದ ಪ್ರಪ್ರಥಮ ಹಿರಣ್ಯವರ್ಣದ ಅಂಡದಿಂದ ಉದ್ಭವಿಸಿದ ಪ್ರಜಾಪತಿಯೆಂದೂ ಕರೆಯಲ್ಪಟ್ಟಿರುವನು— “ಆತ್ಮಾ ಇತಿ ಪ್ರಜಾಪತಿಃ ಪ್ರಥಮ-ಅಂಡಜಃ ಶರೀರೀ ಅಭಿಧೀಯತೇ”.
೧೫) “ಆದಿಕರ್ತಾ ಚ ಭೂತಾನಾಮ್”— (ಶ್ರೀರಾಮಾನುಜಾಚಾರ್ಯರು)
ಪುರುಷನು ಆದಿಯುಗದ ಸೃಷ್ಟಿಕರ್ತನೆಂದಿರುವರು.
೧೬) “ಯೇನ ಏಷಃ ಭೂತೈಃ ತಿಷ್ಠತಿ ಹಿ ಅಂತರಾತ್ಮಾ”— (ಮುಂಡಕೋಪನಿಷತ್ ೨.೧.೯)
ಪುರುಷನು ಜೀವಿಗಳ ಅಂತರಂಗದಲ್ಲಿ ಆತ್ಮನ ಆತ್ಮನೇ ಆಗಿ, ಕಾರಣಶರೀರನಾಗಿ, ಆತ್ಮನ ಒಳಗಿದ್ದು ಅಂತರಾತ್ಮನೆನಿಸಿ, ಸ್ಥೂಲ-ಸೂಕ್ಷ್ಮಶರೀರಗಳಿಂದ ಆವರಿಸಲ್ಪಟ್ಟು ನೆಲೆಸಿರುವನು.
೧೭) “ಇಹ ಏವ ಅಂತಃ ಶರೀರೇ ಸೋಮ್ಯ ಸ ಪುರುಷೋ ಯಸ್ಮಿನ್ ಏತಾಃ ಷೋಡಶಕಲಾಃ ಪ್ರಭವಂತಿ ಇತಿ”— (ಪ್ರಶ್ನೋಪನಿಷತ್ ೬.೨ )
ಇಹಲೋಕದ ಸಮಸ್ತ ಜೀವಿಗಳ ಅಂತರಾತ್ಮನಾಗಿರುವ ಆ ಪುರುಷನಲ್ಲೇ ಜಗತ್ ಸೃಷ್ಟಿಯ ೧೬ ಕಲೆ / ಅಂಶಗಳೂ ನಿಹಿತವಾಗಿವೆ. ಪರಮಪುರುಷನು ೧೫ ದಿನಗಳ ಶುಕ್ಲಪಕ್ಷದ ಕೊನೆಯ ಪೌರ್ಣಮಿಯ ಚಂದ್ರಮನಂತೆ ಷೋಡಶಕಲಾಪರಿಪೂರ್ಣನು.
೧೮) “ಸ ಯತ್ ಪೂರ್ವೋ ಅಸ್ಮಾತ್ ಸರ್ವಸ್ಮಾತ್ ಸರ್ವಾನ್ ಪಾಪ್ಮನಃ, ಔಷತ್ ತಸ್ಮಾತ್ ಪುರುಷಃ, ಓಷತಿ ಹ ವೈ ಸ ತಂ ಯೋ ಅಸ್ಮಾತ್ ಪೂರ್ವೋ ಬುಭೂಷತಿ, ಯ ಏವಂ ವೇದ ||”— (ಬೃಹದಾರಣ್ಯಕೋಪನಿಷತ್ ೧.೪.೧)
ಪುರ— ಪೂರ್ವಮ್ / ಆದಿಯಲ್ಲಿ / ಸೃಷ್ಟಿಗೂ ಹಿಂದೆ; ಔಷತ್— ಸಕಲ ಪ್ರತಿಬಂಧಕಗಳು, ಪಾಪಗಳು ಹಾಗೂ ನ್ಯೂನತೆಗಳು ಸುಡಲ್ಪಟ್ಟವು, ನಾಶಮಾಡಲ್ಪಟ್ಟವು. ಹೀಗೆ ಪುರುಷನೆನಿಸಿದನು. ಅಂದರೆ, ಸೃಷ್ಟಿಕರ್ತನು ಸರ್ವಸ್ವತಂತ್ರನಾಗಿದ್ದು, ಅವನ ಆಯ್ಕೆ-ಅಧಿಕಾರಗಳನ್ನು ತಡೆಯುವ ಶಕ್ತಿ ಯಾವುದೂ ಇರಲಿಲ್ಲವೆಂಬುದು, ಪ್ರಾರಂಭದಲ್ಲೇ ಸಕಲ ಪ್ರತಿಬಂಧಕಗಳೂ ಸುಡಲ್ಪಟ್ಟವೆಂಬುದರ ಅರ್ಥ. ಆತ್ಮಾ > ಪುರುಷವಿಧ / ಜೀವಾಕಾರ > ಅಹಂ > ವಾಕ್, ಮನ, ಪ್ರಾಣವೆಂಬ ೩ ಪ್ರಸಿದ್ಧ ಕೋಶಗಳು ಅಥವಾ ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ, ಆನಂದಮಯವೆಂಬ ೫ / ಪಂಚ ಕೋಶಗಳು. ಮೂರ್ತಬ್ರಹ್ಮವಾದ (೧) ವಾಕ್— ಮರ್ತ್ಯ / ಸತ್ / ಪೃಥ್ವಿ / ಮನುಷ್ಯರು ಹಾಗೂ, ಅಮೂರ್ತಬ್ರಹ್ಮವಾದ, ಅಮರ್ತ್ಯ / ಅಮೃತ / ತ್ಯತ್ ಆದ ಮುಂದಿನ ೨ ಘಟಕಗಳು— (೨) ಮನ— ಅಂತರಿಕ್ಷ / ಪಿತೃಗಳು ಮತ್ತು (೩) ಪ್ರಾಣ— ದ್ಯುಲೋಕ / ದೇವಲೋಕ / ದೇವತೆಗಳ ದ್ಯೋತಕ. ಈ ೩ ಸ್ತರಗಳಿಂದ ಪುರುಷನ / ಪ್ರಜಾಪತಿಯ ಶರೀರಸಂಯೋಜನೆ. ಈ ೩ ಮೂಲವಸ್ತುಗಳ ರಸ / ಸತ್ವವು ಸೌರಮಂಡಲ / ಮಂಡಲ (ಮಂಡ = ರಸ, ಸಾರ, ಸತ್ವ). ಹೀಗೆ ಅವನು ವಿರಾಜನು / ವಿರಾಟ್ (ವಿಶೇಷವಾದ ರಾಜನು).
“ವಿರಾಜಮಸೃಜದ್ಬ್ರಹ್ಮಾ ಸೋऽಸೃಜತ್ ಪುರುಷಂ ವಿರಾಟ್ |
ಪುರುಷಂ ತಂ ಮನುಂ ವಿದ್ಧಿ ಯಸ್ಯೇऽಯಂ ಮಾನವೀಪ್ರಜಾ ||”
ನಿರ್ಗುಣ ಪರಬ್ರಹ್ಮ > ಸೃಷ್ಟಿಕರ್ತ ಬ್ರಹ್ಮಾ > ವಿರಾಜ / ವಿರಾಟ್ > ಪುರುಷ / ಮನು > ಮಾನವಾದಿ ಸಮಸ್ತ ಜೀವಿಗಳ ಉತ್ಪತ್ತಿ (—ಸುರೇಶ್ವರಾಚಾರ್ಯಕೃತ ವಾರ್ತಿಕ)
೧೯) “ಆದಿತ್ಯಃ ಚಕ್ಷುಃ | ಚಕ್ಷುರಾಯತ್ತಾ ಹಿ ಪುರುಷಸ್ಯ ಮಹತೀ ಮಾತ್ರಾ | ಚಕ್ಷುಷಾ ಹ್ಯಯಂ ಮಾತ್ರಾಃ ಚರತಿ | ಸತ್ಯಂ ವೈ ಚಕ್ಷುಃ | ಅಕ್ಷಿಣಿ ಅವಸ್ಥಿತೋ ಹಿ ಪುರುಷಃ | ಸರ್ವೋ ಅರ್ಥೇಷು ಚರತಿ ||”— (ಮೈತ್ರಾಯಣೀಯ ಉಪನಿಷತ್ ೬.೬)
ಸೂರ್ಯನು ಅಂತರ್ದೃಷ್ಟಿಯ ಸಾಧನ / ಧೀಃಪ್ರೇರಕ. ಚಕ್ಷುರಿಂದ್ರಿಯಶಕ್ತಿಯೇ ಪುರುಷನ ಮಹತ್ತಮವಾದ / ಶ್ರೇಷ್ಠವಾದ ಮಾತ್ರಾ / ಕರಣ / ಇಂದ್ರಿಯವು. ಇದಕ್ಕಾಗಿಯೇ “ಸರ್ವೇಂದ್ರಿಯಾಣಾಂ ನಯನಂ ಪ್ರಧಾನಮ್” ಎನ್ನಲಾಗಿದೆ. ಎಲ್ಲ ಇಂದ್ರಿಯಗಳಲ್ಲಿ ಕಣ್ಣೇ ಪ್ರಧಾನ. ಎಲ್ಲ ಇಂದ್ರಿಯಗಳೂ (೫ ಜ್ಞಾನೇಂದ್ರಿಯಗಳು ಹಾಗೂ ೫ ಕರ್ಮೇಂದ್ರಿಯಗಳು) ನೇತ್ರೇಂದ್ರಿಯದಿಂದಾಗಿಯೇ ಕೆಲಸಮಾಡುತ್ತವೆ. ಆದ್ದರಿಂದ ಚಕ್ಷುವು / ಕಣ್ಣಿನ ಇಂದ್ರಿಯಶಕ್ತಿಯು ಸತ್ಯಸ್ವರೂಪವಾಗಿದೆ. ಕಣ್ಣುಗಳಲ್ಲಿ ಪುರುಷನು ಅವಸ್ಥಿತನಾಗಿರುವನು / ನೆಲೆಸಿರುವನು. ಹೀಗೆ ಕಣ್ಣುಗಳಲ್ಲಿ ಸ್ಥಿರವಾಗಿರುವ ಪುರುಷನು ಸರ್ವ ಇಂದ್ರಿಯಾರ್ಥಗಳಲ್ಲಿ / ವಿಷಯಗಳಲ್ಲಿ (ಕಣ್ಣು— ದೃಶ್ಯ, ಕಿವಿ— ಶ್ರವ್ಯ, ಮೂಗು— ಆಘ್ರೇಯ, ನಾಲಗೆ— ರಸ್ಯ / ಆಸ್ವಾದ್ಯ, ಚರ್ಮ— ಸ್ಪೃಶ್ಯ ಎಂಬ ೫ ಜ್ಞಾನ + ೫ ಕರ್ಮೇಂದ್ರಿಯ ವಿಷಯಗಳಾದ ವಾಕ್— ಮಾತು, ಪಾಣಿ— ಕರಕುಶಲಕರ್ಮ / ಕೈಕೆಲಸ, ಪಾದ— ಕಾಲಿನ ಕರ್ಮ, ಪಾಯು / ಗುದ— ಮಲವಿಸರ್ಜನೆ, ಉಪಸ್ಥ / ಲಿಂಗ / ಗುಹ್ಯ— ಮೂತ್ರವಿಸರ್ಜನೆ+ಮೈಥುನ) ಪ್ರೇರಣೆ / ಪ್ರಚೋದನೆಯನ್ನು ನೀಡಿ, ಆಯಾ ಕರ್ಮಗಳನ್ನು ಮಾಡಿಸುತ್ತಾನೆ.
೨೦) “ಯ ಏಷೋ ಅಂತರಾದಿತ್ಯೇ ಹಿರಣ್ಮಯಃ ಪುರುಷೋ ದೃಶ್ಯತೇ | ಹಿರಣ್ಮಯಃ ಶ್ಮಶ್ರುಃ, ಹಿರಣ್ಯಕೇಶಃ, ಆಪ್ರಣಖಾತ್ (ಆ + ಪ್ರ + ನಖಾತ್) ಸರ್ವ ಏವ ಸುವರ್ಣಃ”— (ಛಾಂದೋಗ್ಯೋಪನಿಷತ್ ೧.೬.೬)
ಯಾವ ಈ ಹಿರಣ್ಮಯ / ಚಿನ್ನದ ಬಣ್ಣದ ಪುರುಷನು ದೇಹದೊಳಗಿನ ಅಂತರಾತ್ಮನಾಗಿಯೂ, ಹೊರಗಣ ಸೌರವ್ಯೂಹದ ಆದಿತ್ಯನಾಗಿಯೂ ಕಾಣುವನೋ, ಆತನು ಬಂಗಾರದಂಥ ಗಡ್ಡ, ತಲೆಗೂದಲು, ಹಾಗೂ ಉಗುರುಗಳ ತುದಿಗಳ ವರೆಗೂ ಸರ್ವಾಂಗವೂ ಸುವರ್ಣವರ್ಣದವನಾಗಿರುವನು. ಆತನು, ಅಂತರಾದಿತ್ಯನಾಗಿ / ಸವಿತೃಸೂರ್ಯನಾರಾಯಣನಾಗಿ ನಮ್ಮ ಶರೀರವನ್ನೆಲ್ಲ ವ್ಯಾಪಿಸಿ ಅದನ್ನು ಪವಿತ್ರವನ್ನಾಗಿಯೂ, ಪ್ರಚೋದಿಸಿ ಸಚೇತನವಾಗಿಯೂ ಮಾಡುವನು. ಆತನೇ ಹೊರಗೆ ಕಾಣುವ ಬಹಿರಾದಿತ್ಯನಾಗಿ / ಸೂರ್ಯನಾಗಿ ತನ್ನ ಬಂಗಾರದಂಥ ಕಿರಣಗಳಿಂದ ಬ್ರಹ್ಮಾಂಡವನ್ನೆಲ್ಲ ತುಂಬಿ ಅದನ್ನೂ ಪವಿತ್ರಗೊಳಿಸಿ, ಸಕಲ ಚರಾಚರಗಳನ್ನೂ ಪ್ರಚೋದಿಸಿ ಲೋಕಗಳನ್ನು ಚಟುವಟಿಕೆಗಳಿಂದ ಕೂಡಿರುವಂತೆ ಮಾಡುವನು. ಹೇಗೆ ಸೂರ್ಯನು ಹಗಲು-ರಾತ್ರಿಗಳನ್ನು, ಕಾಲವನ್ನು, ಋತುಗಳ ವೈವಿಧ್ಯವನ್ನು, ಜಲಚಕ್ರವನ್ನು, ಸಕಲ ಜೀವಿಗಳ ಆಯುಷ್ಯಾವಧಿಯನ್ನು, ಸಮಸ್ತ ವಸ್ತುಗಳ ವಿಕಾಸ-ಅವನತಿಗಳನ್ನು, ದಿಕ್ಕುಗಳನ್ನು ಹಾಗೂ ಅಯನಗಳನ್ನು ನಿಗದಿಪಡಿಸುವನೋ, ಹಾಗೆಯೇ, ಅಂತರಾದಿತ್ಯನಾದ ಪುರುಷನು ಗ್ರಹಿಸುತ್ತಾನೆ, ನಿಶ್ಚಯಿಸುತ್ತಾನೆ, ಸಂಕಲ್ಪಿಸುತ್ತಾನೆ, ಸಂಯೋಜಿಸುತ್ತಾನೆ ಹಾಗೂ ಸಾಮಾನ್ಯ ನಡವಳಿಕೆಯನ್ನು ಮೊದಲು ಪ್ರೇರಿಸುತ್ತಾನೆ. ಸೂರ್ಯ ಮತ್ತು ನಮ್ಮ ಕಣ್ಣುಗಳ / ಅಂತರ್ದೃಷ್ಟಿಯ ಹಿಂದಿರುವ ತತ್ವವು ಪುರುಷನೇ ಆಗಿರುವನು.
೨೧) “ತತ್ ಯತ್ ತತ್ ಸತ್ಯಮ್ ಅಸೌ ಸಃ, ಆದಿತ್ಯಃ, ಯಃ, ಏಷಃ, ಏತಸ್ಮಿನ್ ಮಂಡಲೇ ಪುರುಷಃ, ಯಃ, ಚ ಅಯಂ ದಕ್ಷಿಣೇ ಅಕ್ಷನ್ ಪುರುಷಃ, ತೌ, ಏತೌ, ಅನ್ಯೋನ್ಯಸ್ಮಿನ್ (ಅನ್ಯಃ, ಅನ್ಯಸ್ಮಿನ್) ಪ್ರತಿಷ್ಠಿತೌ | ರಶ್ಮಿಭಿಃ, ಏಷಃ, ಅಸ್ಮಿನ್ ಪ್ರತಿಷ್ಠಿತಃ, ಪ್ರಾಣೈಃ, ಅಯಮ್, ಅಮುಷ್ಮಿನ್ ||” (ಬೃಹದಾರಣ್ಯಕೋಪನಿಷತ್ ೫.೫.೨)—
ಅದಾದರೋ ಸತ್ಯವಾದ ವಿಚಾರವು. ಯಾವುದೆಂದರೆ, ಈ ಸೌರಮಂಡಲದಲ್ಲಿರುವ ಪುರುಷನಾದ ಸೂರ್ಯ / ಅದಿತಿಪುತ್ರನಾದ ಆದಿತ್ಯ ಹಾಗೂ ಈ ದೇಹದ ಬಲಗಣ್ಣಿನಲ್ಲಿರುವ ಪುರುಷ (ಎಡಗಣ್ಣಿನಲ್ಲಿ ಚಂದ್ರ)— ಇವರಿಬ್ಬರೂ ಒಬ್ಬರು ಮತ್ತೊಬ್ಬರಲ್ಲಿ ಅನ್ಯೋನ್ಯವಾಗಿ ಸ್ಥಿತರಾಗಿದ್ದಾರೆ (ಸೂರ್ಯನು ಬಲಗಣ್ಣಿನಲ್ಲೂ, ಬಲಗಣ್ಣಿನ ಪುರುಷನು ಸೂರ್ಯನಲ್ಲೂ ಇರುವನು). ಸೌರಮಂಡಲದ ಪುರುಷನು ಬೆಳಕಿನ ಕಿರಣಗಳಿಂದ ಕೂಡಿ ಲೋಕವನ್ನು ಬೆಳಗಿದರೆ, ಬಲಗಣ್ಣಿನ ಪುರುಷನು ಪ್ರಾಣಶಕ್ತಿಗಳಿಂದ / ಪಂಚಪ್ರಾಣ-ಪಂಚ ಉಪಪ್ರಾಣಗಳಿಂದ ಕೂಡಿ ಶರೀರವನ್ನು ಚೈತನ್ಯಯುತವನ್ನಾಗಿ ಮಾಡುವನು.
೨೨) “ಯದ್ವೇವ (ಯತ್ ಉ ಏವ) ಸಪ್ತದಶ | ಸಪ್ತದಶಃ, ವೈ ಪುರುಷಃ | ದಶ ಪ್ರಾಣಾಃ | ಚತ್ವಾರಿ ಅಂಗಾನಿ | ಆತ್ಮಾ ಪಂಚದಶಃ, ಗ್ರೀವಾಃ ಷೋಡಶ್ಯಃ, ಶಿರಃ ಸಪ್ತದಶಮ್ || ಪುರುಷಃ ಪ್ರಜಾಪತಿಃ | ಅಗ್ನಿಃ, ಯಾವಾನ್ ಅಗ್ನಿಃ ಯಾವತೀ ಅಸ್ಯ ಮಾತ್ರಾ ತಾವತ್ ಏವ ಏನಮ್ ಏತತ್ ಸಮಿಂಧೇ ||” (ಶತಪಥ ಬ್ರಾಹ್ಮಣ)—
ಸೂರ್ಯನ ರೂಪಕ್ಕಿಂತ ಹೆಚ್ಚಾಗಿ, ಮಾನವಚಹರೆಯನ್ನು ಹೋಲುವ, ೧೭ ಅಂಗಗಳುಳ್ಳವನು ಪುರುಷನು. ಪ್ರಾಣ-ಅಪಾನ-ವ್ಯಾನ-ಉದಾನ-ಸಮಾನ— ಎಂಬ ೫ ಪ್ರಾಣಗಳು, ನಾಗ-ಕೂರ್ಮ-ಕೃಕಲ-ದೇವದತ್ತ-ಧನಂಜಯ— ಎಂಬ ೫ ಉಪಪ್ರಾಣಗಳು, ಹೀಗೆ ಒಟ್ಟು ೧೦ ಪ್ರಾಣಗಳು. ೪ ಅಂಗಗಳು— ೨ ಕೈಗಳು ಮತ್ತು ೨ ಕಾಲುಗಳು. ೧೫ ನೆಯದೇ ಆತ್ಮಾ / ಇಡೀ ಶರೀರ. ೧೬ ನೆಯದು ಕುತ್ತಿಗೆ / ಕೊರಳು / ಕತ್ತು. ಶಿರಸ್ / ತಲೆಯೇ ೧೭ ನೆಯದು. ಅಗ್ನಿಗೆ ಸಮಾನವಾದವನು ಈ ಪುರುಷನು. ಹಾಗಾಗಿ, ಈ ಪುರುಷನ ಶರೀರವು ಪವಿತ್ರವಾದುದು, ಸಕಲ ಸಾಧನೆಗಳಿಗೆ ಆಶ್ರಯ, ಆಧಾರವಾದುದು. ಅದರಲ್ಲಿ ಅಗ್ನಿಯು / ಪುರುಷನು ಎಲ್ಲಿಯವರೆಗೆ ನೆಲೆಸಿರುವನೋ ಅಲ್ಲಿಯವರೆಗೆ ಈ ಶರೀರವನ್ನು ಬೆಳಗುವನು ( ಶರೀರಸ್ಥ / ಬ್ರಹ್ಮಾಂಡಸ್ಥನಾದ ಪುರುಷನನ್ನು ಈ ೧೭ ಅಂಗಗಳೆಂಬ ಸಮಿಧೆಗಳ ಮೂಲಕ, ಸೇವೆಯೆಂಬ ಯಜ್ಞದಲ್ಲಿ ತೊಡಗಿ ಬೆಳಗಿಸುವೆನು). ಅಗ್ನಿಯು ಆರಿದಾಗ / ಪುರುಷನು ದೇಹವನ್ನು ಬಿಟ್ಟಾಗ ಶರೀರ ತಣ್ಣಗಾಗಿ, ನಿರ್ಜೀವವಾಗುವುದು. ಅಂತರಿಕ್ಷದ ಸೂರ್ಯನಿಗೆ, ಭೂಮಿಯ ಅಗ್ನಿಯು ಪರ್ಯಾಯ ಪ್ರತಿನಿಧಿಯಾಗಿ, ಪುರುಷನಾಗಿ ಗುರುತಿಸಲ್ಪಟ್ಟಿರುವನು.
೨೩) “ಆಪೋ ವಾ ಇದಮ್ ಆಸನ್ ಸಲಿಲಮ್ ಏವ | ಸ ಪ್ರಜಾಪತಿರ್ ಏಕಃ ಪುಷ್ಕರಪರ್ಣೇ ಸಮ್-ಅಭವತ್ | ತಸ್ಯ ಅನ್ತರ್-ಮನಸಿ ಕಾಮಃ ಸಮ್-ಅವರ್ತತ | ಇದಂ ಸೃಜೇಯಮ್ ಇತಿ | ತಸ್ಮಾದ್ ಯತ್-ಪುರುಷೋ ಮನಸಾ ಅಭಿಗಚ್ಛತಿ ತದ್ ವಾಚಾ ವದತಿ, ತತ್ ಕರ್ಮಣಾ ಕರೋತಿ | ತದ್ ಏಷಾ ಅಭ್ಯನೂಕ್ತಾ ||... (ತೈತ್ತಿರೀಯ ಆರಣ್ಯಕ ೧.೨೩.೧)
ಮೊದಲು ಇದೆಲ್ಲವೂ ಜಲಮಯವಾಗಿತ್ತು. ಆಗ, ಪ್ರಜಾಪತಿಯು / ಪುರುಷನು ಸಾಕಾರನಾಗಿ ಕಮಲಪತ್ರದ ಮೇಲೆ ಒಬ್ಬನೇ ಇದ್ದವನಾದನು. ಆತನ ಮನಸ್ಸಿನೊಳಗೆ ಈಗ ತೋರುತ್ತಿರುವ ವಿಶ್ವವನ್ನು ಸೃಜಿಸಬೇಕೆಂಬ ಸಂಕಲ್ಪ / ಕಾಮನೆಯು ಉಂಟಾಯಿತು. ಹೇಗೆ ವ್ಯಕ್ತಿಯೋರ್ವನು ಮನಸ್ಸಿನಿಂದ ಯೋಚಿಸಿದ್ದನ್ನು ಮಾತಿನ ರೂಪದಲ್ಲಿ ಹೇಳುತ್ತಾನೆಯೋ, ಅದನ್ನೇ ತನ್ನ ಕಾರ್ಯದಲ್ಲೂ ಆಚರಿಸುವನೋ ಅಂತೆಯೇ ಈ ಪುರುಷನೂ ಸಂಕಲ್ಪಿಸಿದ್ದನ್ನು ಕಾರ್ಯರೂಪಕ್ಕೆ ತರಲು ತೊಡಗಿದನು ಎಂಬುದಾಗಿ ಆತನಿಂದಲೇ ವೇದದಲ್ಲಿ ಲೋಕಮುಖಕ್ಕೆ ವಾಗ್ರೂಪವಾಗಿ ಹೇಳಲ್ಪಟ್ಟಿದೆ.
೨೪) *“ಕಾಮಸ್ತದಗ್ರೇ ಸಮವರ್ತತಾಧಿ ಮನಸೋ ರೇತಃ ಪ್ರಥಮಂ ಯದಾಸೀತ್ | ಸತೋ ಬಂಧುಮಸತಿ ನಿರವಿಂದನ್ ಹೃದಿ ಪ್ರತೀಷ್ಯಾ ಕವಯೋ ಮನೀಷಾ ಇತಿ ||”—* _*(ಋಗ್ವೇದಸಂಹಿತಾ ೧೦.೧೨೯.೪, ತೈತ್ತಿರೀಯಾರಣ್ಯಕಮ್ ೧.೨೩.೨)*_
*(ಅಗ್ರೇ)* ಸೃಷ್ಟಿಪೂರ್ವದಲ್ಲಿ, *(ಪ್ರಥಮಮ್)* ಹಿಂದಿನ ಸೃಷ್ಟಿಯಲ್ಲಿ / ಕಲ್ಪದಲ್ಲಿ, ಮುಕ್ತರಾಗದ ಸಕಲರ ಪ್ರಳಯಕಾಲದ ಉಳಿಕೆ ಕರ್ಮಗಳೆಂಬ, *(ಯದ್ ರೇತಃ)* ಯಾವ ರೇತಸ್ / ಬೀಜವು, *(ಮನಸಃ ಅಧಿ ಆಸೀತ್)* ಪರಬ್ರಹ್ಮನ / ಪ್ರಜಾಪತಿಯ / ಪರಮಪುರುಷನ ವಿಶ್ವಪ್ರಜ್ಞೆ / ಮನಸ್ಸನ್ನು ಆಶ್ರಯಿಸಿ ಇತ್ತೋ ಅದು, *(ಕಾಮಃ ಸಮ್-ಅವರ್ತತ)* ಅವರನ್ನು ಅವರವರ ಕರ್ಮಗಳಿಗನುಸಾರ, ಅನುಭವದ ಮೂಲಕ ಕರ್ಮಕ್ಷಯಕ್ಕಾಗಿ, ಪುನಃ ಸೃಷ್ಟಿಮಾಡಬೇಕೆಂಬ ಬಯಕೆ / ಕಾಮನೆಯು ಪುರುಷನಲ್ಲಿ ಉಂಟಾಗುವಂತೆ ಮಾಡಿತು. ಹೀಗೆ, *(ಅಸತಿ ಸತಃ ಬಂಧುಮ್)* ಅಸತ್ / ಪರಬ್ರಹ್ಮನಿಂದಾದ ಇಂದ್ರಿಯಾತೀತ ಅವ್ಯಕ್ತ ಹಾಗೂ ಇಂದ್ರಿಯಗ್ರಾಹ್ಯ ಸತ್ / ವ್ಯಕ್ತ— ಇವುಗಳ ಸಂಬಂಧವನ್ನು (ಅಸತ್ತಿನಲ್ಲಿ / ಅವ್ಯಕ್ತದಲ್ಲಿ ಸತ್ತು / ವ್ಯಕ್ತವು ಪೂರ್ವದಲ್ಲಿ ಬಂಧಿಸಲ್ಪಟ್ಟಿರುವುದನ್ನು ಅಥವಾ ಅಸತ್ತಿನಲ್ಲಿ ಸತ್ತೆಯ ಬೀಜವಿರುವುದೆಂಬರೀತಿಯ ಸಂಬಂಧಕಲ್ಪಿಸಲು), *(ಕವಯಃ)* ತಪೋಧ್ಯಾನಾದಿಗಳ ಮೂಲಕ ಕವಿ-ಋಷಿ-ಮನೀಷಿಗಳು, *(ಹೃದಿ ಆ-ಪ್ರತೀಷ್ಯ)* ತಮ್ಮ ಹೃದಯಕಮಲದಲ್ಲಿ ಚೆನ್ನಾಗಿ ವಿಮರ್ಶಿಸಿ, ಸೃಷ್ಟಿವಿಜ್ಞಾನದ ರಹಸ್ಯವನ್ನು ಪ್ರಾಪ್ತಿಮಾಡಿ, *(ಮನೀಷಾ ಇತಿ)* ಸೃಷ್ಟಿಯ ಕಾರಣವು ಸಮಸ್ತ ಜೀವರ ಕರ್ಮರಾಶಿಗಳನ್ನು ದಾಖಲಿಸಿರುವ ಸರ್ವಸಾಕ್ಷಿಯಾದ ಪರಬ್ರಹ್ಮ / ಪರಮಪುರುಷನ ವಿಶ್ವಪ್ರಜ್ಞೆ / ಪ್ರಜ್ಞಾನ (ಪ್ರಜ್ಞಾನಂ ಬ್ರಹ್ಮ) / ಸಮಷ್ಟಿಪ್ರಜ್ಞೆ ಎಂಬುದಾಗಿ, *(ನಿರ್-ಅವಿಂದನ್)* ನಿರ್ಣಯಕ್ಕೆ ಬಂದರು.
*೨೫) “....ಉಪೈನಂ ತದುಪನಮತಿ | ಯತ್ ಕಾಮೋ ಭವತಿ ಯ ಏವಂ ವೇದ | ಸ ತಪೋ ತಪ್ಯತ || ತಪಸ್ತಪ್ತ್ವಾ ಶರೀರಮ್ ಅಧೂನತ | ತಸ್ಯ ಯನ್ಮಾಂಸಮ್ ಆಸೀತ್ ತತೋ ಅರುಣಾಃ ಕೇತವೋ ವಾತರಶನಾ ಋಷಯಃ ಉದತಿಷ್ಠನ್ | ಯೇ ನಖಾಃ ತೇ ವೈಖಾನಸಾಃ | ಯೇ ವಾಲಾಃ ತೇ ವಾಲಖಿಲ್ಯಾಃ | ಯೋ ರಸಃ ಸೋ ಅಪಾಮ್ ಅನ್ತರತಃ ಕೂರ್ಮಂ ಭೂತಂ ಸರ್ಪನ್ತಂ ತಮ್ ಅಬ್ರವೀತ್— ಮಮ ವೈ ತ್ವಙ್ಮಾಂಸಾ ಸಮಭೂತ್ ನ ಇತಿ ಅಬ್ರವೀತ್ ಪೂರ್ವಮ್ ಏವ ಅಹಮ್ ಇಹ ಆಸಮ್ ಇತಿ | ತತ್ ಪುರುಷಸ್ಯ ಪುರುಷತ್ವಮ್ | ಸ ಸಹಸ್ರ-ಶೀರ್ಷಾ ಸಹಸ್ರ-ಅಕ್ಷಃ ಸಹಸ್ರ-ಪಾತ್ ಭೂತ್ವಾ ಉದತಿಷ್ಠತ್ ||”—* _*(ತೈತ್ತಿರೀಯಾರಣ್ಯಕ ೧|೨೩|೩-೭)*_
_*(ಉಪ ಏನಂ ತದ್ ಉಪನಮತಿ)* ತದ್ವಾಚ್ಯನಾದ ಪುರುಷನು ಇನ್ನೂ ವ್ಯಕ್ತವಾಗದ ಹಾಗೂ ಈಗಾಗಲೇ ಸೃಷ್ಟವಾದವುಗಳ ನಡುವಿನ ಸೇತುವೆಯಂತಿದ್ದು, ತಪೋಮುಖೇನ ಎಲ್ಲವನ್ನೂ ಸೃಜಿಸಿ ಇವೆರಡರ ನಡುವಿನ ಅಂತರವನ್ನು ಕಡಿಮೆಗೊಳಿಸುತ್ತಾನೆ / ಇಲ್ಲವಾಗಿಸುತ್ತಾನೆ. ಹೀಗೆ ಪ್ರಜಾಪತಿಯು / ಪುರುಷನು ಯಾವ ಸೃಷ್ಟಿಕಾಮನೆಯುಳ್ಳವನಾದನೋ ಅದಕ್ಕಾಗಿ ತಪಗೈದನು *(ಯತ್ ಕಾಮಃ ಭವತಿ ಯ ಏವಂ ವೇದ | ಸ ತಪಃ ಅತಪ್ಯತ ||)*. ಹೀಗೆ ತಪಸ್ಸು ಮಾಡಿ ಬ್ರಹ್ಮಾನಂದದಿಂದ ಪುಳಕಿತನಾಗಿ ಆತನ ರೂಪವು ರೋಮಾಂಚಿತವಾಗಿ ಕಂಪಿಸಿತು / ಆತನು ತನ್ನ ದೈವೀಶರೀರವನ್ನು ಕುಲುಕಿದನು *(ತಪಃ ತಪ್ತ್ವಾ ಶರೀರಂ ಅಧೂನತ | ತಸ್ಯ ಯತ್ ಮಾಂಸಮ್ ಆಸೀತ್ ತತಃ ಅರುಣಾಃ ಕೇತವಃ ವಾತರಶನಾಃ ಋಷಯಃ ಉತ್-ಅತಿಷ್ಠನ್ |)*. ಆತನ ಆಕಾರದಲ್ಲಿ ಮಾಂಸದಂತಿದ್ದ ಅವಯವಗಳಿಂದ ಮಂದೇಹರು, ಅರುಣರು, ಕೇತುಗಳು ಮುಂತಾದ ನಿತ್ಯವೂ ಸೂರ್ಯನಿಗೆ ಉಪಟಳ ನೀಡುತ್ತಿರುವ ಅಸುರರೂ, ವಾತರಶನರೆಂಬ ಋಷಿಗಳೂ ಉದ್ಭವಿಸಿದರು. *(ಯೇ ನಖಾಃ ತೇ ವೈಖಾನಸಾಃ | ಯೇ ವಾಲಾಃ ತೇ ವಾಲಖಿಲ್ಯಾಃ |)* ಪ್ರಜಾಪತಿ ಪುರುಷನ ಉಗುರಿನಂಥ ಭಾಗಗಳಿಂದ ವೈಖಾನಸರು ಹಾಗೂ ರೋಮದಂಥ ಭಾಗಗಳಿಂದ ವಾಲಖಿಲ್ಯರು ಎಂಬ ಋಷಿಗಳೂ ಹೊರಹೊಮ್ಮಿದರು. *(ಯಃ ರಸಃ ಸಃ ಅಪಾಮ್ ಅಂತರತಃ ಕೂರ್ಮಂ ಭೂತಂ ಸರ್ಪಂತಂ ತಮ್ ಅಬ್ರವೀತ್)* “ರಸೋ ವೈ ಸಃ” ಎಂಬಂತೆ ರಸರೂಪನಾದ ಪ್ರಜಾಪತಿಯ / ಪುರುಷನ ಘನವಾದ ಉದಕ / ರಸ ಎಂಬ ಪ್ರಧಾನ ಅಂಶವು ಆಮೆಯಾಕೃತಿಯಲ್ಲಿ ಘನೀಕೃತವಾಗಿ ಹೊರಬಂತು. ಹೀಗೆ ಉಂಟಾಗಿ ಸೃಷ್ಟಿಜಲರಾಶಿಯೊಳಗೆ ಸಂಚರಿಸುತ್ತಿದ್ದ / ತೆವಳುತ್ತಿದ್ದ ಆ ಕೂರ್ಮವನ್ನು ನೋಡಿ ಪ್ರಜಾಪತಿಯು ಅದನ್ನು ಪ್ರಶ್ನಿಸಿದನು. *(ಮಮ ವೈ ತ್ವಕ್-ಮಾಂಸಾ ಸಮಭೂತ್)* “ನೀನು ನನ್ನ ಚರ್ಮ / ತ್ವಚೆ ಹಾಗೂ ಮಾಂಸಗಳಿಂದ ಉಂಟಾದೆಯೋ?” ಎಂಬುದಾಗಿ. *(ನ ಇತಿ ಅಬ್ರವೀತ್, ಪೂರ್ವಮ್ ಏವ ಅಹಮ್ ಇಹ ಆಸಮ್ ಇತಿ |)* “ಇಲ್ಲ. ಅದಕ್ಕಿಂತಲೂ ಮುಂಚೆಯೇ ನಾನಿದ್ದೆ” ಎಂದು ಆಮೆಯು ಹೇಳಿತು. *(ತತ್ ಪುರುಷಸ್ಯ ಪುರುಷತ್ವಮ್ |)* ಆಮೆಯ ಆಕಾರವು ಈಗಷ್ಟೇ ಗೋಚರಿಸಿದರೂ, ಅದರ ಆತ್ಮವು ಅಲ್ಲಿ ಎಂದೆಂದಿಗೂ ಇತ್ತು, ಪೂರ್ವದಲ್ಲೇ ನಿತ್ಯವಾಗಿತ್ತು. ಆ ಆತ್ಮವೇ ಪುರುಷನಾಗಿದ್ದನು. ಇದೇ ವಾಸ್ತವವಾಗಿ ಪುರುಷನ ಸ್ವರೂಪವಾಗಿದೆ. *“ಪೂರ್ವಂ ಸಮಭೂತ್”* ಯಾವುದು ಮೊದಲೇ ಅಸ್ತಿತ್ವದಲ್ಲಿತ್ತೋ ಅದೇ ಪುರುಷತತ್ತ್ವವು. *(ಸಃ ಸಹಸ್ರಶೀರ್ಷಾ ಸಹಸ್ರಾಕ್ಷಃ ಸಹಸ್ರಪಾತ್ ಭೂತ್ವಾ ಉದತಿಷ್ಠತ್ ||)* ಅಂತಹ ಪರಮಪುರುಷನೇ ಸಾವಿರಾರು / ಅಸಂಖ್ಯಾತ ಶಿರಸ್ಸುಗಳು, ಕಣ್ಣುಗಳು, ಪಾದಗಳುಳ್ಳವನಾಗಿ ನಾನಾ ಜೀವರುಗಳ ರೂಪದಲ್ಲಿ ಪ್ರಕಟನಾದನು. ಇದು ಸೃಷ್ಟಿಯ ಅಗಾಧತೆ ಹಾಗೂ ಅಪರಿಮಿತತೆಯ ದ್ಯೋತಕವಾಗಿದೆ._
_ಇದು ಪುರುಷಸೂಕ್ತೋಕ್ತ ಸೃಷ್ಟಿಗೂ ಪೂರ್ವದ ಪ್ರಜಾಪತಿಯ ಸೃಷ್ಟಿಯ ಬಯಕೆಯೇ ಮುಂತಾದ ಪ್ರಕ್ರಿಯೆಗಳನ್ನು ಹೇಳುವುದರಿಂದ ಬಹುಶಃ ಇದನ್ನು ಪುರುಷಸೂಕ್ತದ ಪೀಠಿಕೆಯೆನ್ನಬಹುದು. ಸೃಷ್ಟಿಜಲರಾಶಿಯಲ್ಲಿ ತೇಲಿದ ಪ್ರಜಾಪತಿಯು ಆದಿಕೂರ್ಮದ ಸಾರಸತ್ತ್ವಮಾತ್ರವಾಗಿದ್ದು, ಪ್ರಕೃತಿಯನ್ನು ಪ್ರತಿನಿಧಿಸುತ್ತಾನೆ. ಆತನೇ ಕಾರ್ಯಬ್ರಹ್ಮನು. ಪುರುಷನು ಅದಕ್ಕೂ ಪೂರ್ವದ ಕಾರಣಬ್ರಹ್ಮನು. ಪ್ರಕೃತಿಯು ಪುರುಷಸಾನ್ನಿಧ್ಯದಲ್ಲಿ ತನ್ನ ಪರಿಪರಿಯ ರೂಪಗಳನ್ನು ಪ್ರಕಟಿಸಿ ವಿರಾಜಿಸುವುದನ್ನು *“ವಿರಾಟ್”* ಎನ್ನಲಾಗಿದೆ._
೨೬) “....ತದೇಷಾ ಅಭ್ಯನೂಕ್ತಾ ವಿಧಾಯ ಲೋಕಾನ್ ವಿಧಾಯ ಭೂತಾನಿ ವಿಧಾಯ ಸರ್ವಾಃ ಪ್ರದಿಶೋ ದಿಶಶ್ಚ | ಪ್ರಜಾಪತಿಃ ಪ್ರಥಮಜಾ ಋತಸ್ಯ ಆತ್ಮನಾ ಆತ್ಮಾನಮ್ ಅಭಿಸಂವಿವೇಶ || ಇತಿ ಸರ್ವಮ್ ಏವೇದಮ್ ಆಪ್ತ್ವಾ ಸರ್ವಮ್ ಅವರುಧ್ಯ ತದ್ ಏವ ಅನುಪ್ರವಿಶತಿ ಯ ಏವಂ ವೇದ ||” (ತೈತ್ತಿರೀಯಾರಣ್ಯಕಮ್ ೧.೨೩.೧೮-೨೦)
ಅದನ್ನನುಸರಿಸಿ (ತದ್ ಅನು), ಮುಂದೆ (ಅಭಿ), ಹೀಗೆ / ಇದನ್ನು ಹೇಳಿದೆ (ಏಷಾ ಉಕ್ತಾ)— ಬ್ರಹ್ಮಾಂಡದ ಆದ್ಯ ಶಿಶು ಪ್ರಜಾಪತಿಯು / ಪುರುಷನು (ಋತಸ್ಯ ಪ್ರಥಮಜಾಃ ಪ್ರಜಾಪತಿಃ— ಋತವೆಂದರೆ ವಿಶ್ವನಿಯಮ ಹಾಗೂ ವ್ಯವಸ್ಥಿತ ಕಾರ್ಯಾಚರಣೆಯ ಕ್ರಮ, ಕಾಲದೇಶಾದಿ ಇತಿಮಿತಿಗಳಿಂದ ಅಬಾಧಿತ ವಾಸ್ತವಿಕತೆ), ಸೃಷ್ಟ್ಯಾದಿಯ ಜಲರಾಶಿಯು ಒದಗಿಸಿದಂಥ ಸಾಮಗ್ರಿಗಳಿಂದ ಅಥವಾ ಆದಿಕೂರ್ಮರೂಪದಲ್ಲಡಗಿದ್ದ ಆ ಸಾಮಗ್ರಿಗಳ ಸತ್ವಗಳಿಂದ ಸಮಸ್ತಲೋಕಗಳನ್ನು ಉಂಟುಮಾಡಿ (ಲೋಕಾನ್ ವಿಧಾಯ), ಸಕಲ ಜೀವಿಗಳನ್ನೂ ಸೃಜಿಸಿ (ಭೂತಾನಿ ವಿಧಾಯ), ಎಲ್ಲ ದಿಕ್ಕು-ಉಪದಿಕ್ಕುಗಳನ್ನು ಸೃಷ್ಟಿಸಿ (ಸರ್ವಾಃ ದಿಶಃ ಪ್ರದಿಶಃ ಚ ವಿಧಾಯ), ತಾನೇ ಸ್ವತಃ ಅವೆಲ್ಲವನ್ನೂ ಪ್ರವೇಶಿಸಿದನು (ಆತ್ಮನಾ ಆತ್ಮಾನಮ್ ಅಭಿ-ಸಂ-ವಿವೇಶ). ಹೀಗೆ ಸರ್ವಾತ್ಮನೂ, ವಿಶ್ವಾತ್ಮನೂ ಆಗುತ್ತಾನೆ. ಹೀಗೆ ವ್ಯಾಪಿಸುವುದರಿಂದ ಪ್ರಜಾಪತಿಯು ಅವೆಲ್ಲವನ್ನೂ ತನ್ನೊಳಗೇ ಹೊಂದಿರುವಂತೆ ಮಾಡಿ (ಇತಿ ಸರ್ವಮ್ ಏವ ಇದಮ್ ಆಪ್ತ್ವಾ), ಅವೆಲ್ಲವನ್ನೂ ತನ್ನ ನಿಯಮಮೀರದಂತೆ ನಿಯಂತ್ರಿಸಿ / ಅವರೋಧಿಸಿ (ಸರ್ವಮ್ ಅವರುಧ್ಯ), ಅವನ್ನೇ ಪುನಃ ಪ್ರವೇಶಿಸಿ ಅನ್ತರ್ಯಾಮಿಯೂ, ನಿಯಾಮಕನೂ ಆಗಿರುವನು (ತದ್ ಏವ ಅನುಪ್ರವಿಶತಿ). ಬ್ರಹ್ಮಾಂಡವು ಆತನನ್ನು ಅತಿಕ್ರಮಿಸುವುದಿಲ್ಲ, ಆದರೆ ಪ್ರಜಾಪತಿಯೇ ಸೃಷ್ಟಿಯನ್ನೂ ಮೀರಿ ನಿಂತಿರುವನು. ಪ್ರಜಾಪತಿಯ ಈ ಸ್ವರೂಪವೇ ಪುರುಷ (ಯಃ -ಏವಂ ವೇದ).
೨೭) ಪುರ್-ಉಷ— ಪುರದಲ್ಲಾಗುವ, ನಗರದಲ್ಲಾಗುವ ಉಷೆಯ ಉದಯ; ಪುರದ ಪ್ರಕಾಶ; ದೇಹದಲ್ಲಾಗುವ ಜ್ಞಾನಜ್ಯೋತಿಯ ಉದಯ; ಶುಕ್ಲಶೋಣಿತಯುಗ್ಮದಲ್ಲಾಗುವ ಚೈತನ್ಯದ, ಪ್ರಾಣಶಕ್ತಿಯ ಉದಯ; ಬೆಳಕಿನಿಂದ ತುಂಬಿರುವವನು (ಉಷಯಾ ಪೂರ್ಣಃ)
೨೮) ಪುರು-ಷ— ಅನಂತ ಆನಂದ ಹಾಗೂ ಜ್ಞಾನಪೂರ್ಣನು, ಸ್ವರ್ಗದ ಪ್ರಜೆ.
೨೯) ಒಬ್ಬ ನಿಪುಣ ಸಂಗೀತಗಾರನು ಸಪ್ತಸ್ವರಗಳ ಭೇದಗಳಿಂದ ಸುಶ್ರಾವ್ಯ ಸಂಗೀತವನ್ನು ಸೃಜಿಸುವಂತೆಯೇ, ಪುರುಷ ಎಂಬ ೩ ಅಕ್ಷರಗಳು ಸೃಷ್ಟಿಯ ಅನಂತ ವೈವಿಧ್ಯತೆಯನ್ನು ಪ್ರಕಟಿಸುವಂಥವು. (ಜಿನ್ ಲೀ ಮೀ)
೩೦) “ಪುರುಷೋ ಹ ವೈ ನಾರಾಯಣೋ ಅಕಾಮಯತ ಅತಿತಿಷ್ಠ ಇಯಂ ಸರ್ವಾಣಿ ಭೂತಾನಿ ಅಹಮ್ ಏವ ಇದಂ ಸರ್ವಂ ಸ್ಯಾಮ್ ಇತಿ ||” (ಶತಪಥಬ್ರಾಹ್ಮಣಮ್ ೧೩.೬.೧.೧)
ಈ ಪುರುಷನಾದ ನಾರಾಯಣನೇ ಈ ಸಮಸ್ತ ಸೃಷ್ಟಿಯನ್ನೂ, ಚರಾಚರಗಳನ್ನೂ ವ್ಯಾಪಿಸಬೇಕೆಂದೂ ಮತ್ತು ಅವೆಲ್ಲವೂ ತಾನೇ ಆಗಬೇಕೆಂದೂ ಬಯಸಿದನು.
೩೧) “ಅಥ ಪುರುಷೋ ಹ ವೈ ನಾರಾಯಣೋऽಕಾಮಯತ ಪ್ರಜಾಸ್ಸೃಜೇಯೇತಿ ||” (ನಾರಾಯಣಾಥರ್ವಶೀರ್ಷೋಪನಿಷತ್ / ನಾರಾಯಣೋಪನಿಷತ್ ಆರಂಭದಲ್ಲಿ)
ಬಳಿಕ ಸಾಕ್ಷಾತ್ ಪರಮಪುರುಷನಾದ ಶ್ರೀಮನ್ನಾರಾಯಣನು ಪ್ರಜೆಗಳನ್ನು / ಸಂತತಿಯನ್ನು ಸೃಜಿಸುವೆನೆಂಬುದಾಗಿ ಬಯಸಿದನು / ಸಂಕಲ್ಪಿಸಿದನು ಎನ್ನಲಾಗಿದ್ದು, ಇಲ್ಲಿ ನಾರಾಯಣನನ್ನೇ ಪುರುಷನೆನ್ನಲಾಗಿದೆ.
೩೨) ಆಪೋ ನಾರಾ ಇತಿ ಪ್ರೋಕ್ತಾ ಆಪೋ ವೈ ನರಸೂನವಃ |
ತಾ ಯದಸ್ಯ ಅಯನಂ ಪೂರ್ವಂ ತೇನ ನಾರಾಯಣಃ ಸ್ಮೃತಃ ||
(ಮನುಸ್ಮೃತಿಃ ೧.೧೦)
ಆಪಃ ಎಂದರೆ ಜಲರಾಶಿ / ಜೀವರಾಶಿ. ಅದನ್ನು “ನಾರಾಃ” ಎಂದೂ ಕರೆಯುತ್ತಾರೆ. ಸೃಷ್ಟಿಯ ಆದಿಯಲ್ಲಿ / ಸೃಷ್ಟಿಗೂ ಪೂರ್ವದಲ್ಲಿ ಸಕಲ ಜೀವಾತ್ಮರ ಆಶ್ರಯಸ್ಥಾನ, ಮೂಲಸ್ಥಳ, ವಿಶ್ರಾಂತಿಧಾಮ (ಅಯನಮ್) ಯಾವುದೋ ಅದೇ ಈ ಪರಮಪದ. ಹೀಗಾಗಿಯೇ ಇವನಿಗೆ ನಾರಾಯಣ ಎಂಬ ಹೆಸರು. ಜಲರಾಶಿಯು ತನ್ನನ್ನು ಸೃಜಿಸಿದ ಆತ್ಮನ (ನರನ) ಸಂತತಿಯೇ ಆಗಿದೆ. ಅದು ಆತ್ಮನ ಸಹಜ ಆವಾಸಸ್ಥಾನ. ಸ್ವಯಂ ತನ್ನ ಸ್ವಾಭಾವಿಕ ಸ್ಥಿತಿಯಲ್ಲಿ ನೆಲೆಸಿರುವ ಆತ್ಮನೇ ಪುರುಷನು. ಈತನೇ ಸೃಷ್ಟಿಸಂಕಲ್ಪವೆಂಬ ಬಯಕೆಯನ್ನು ಹೊಂದಿದಾಗ ಸೃಷ್ಟಿಕರ್ತನಾದ ಪ್ರಜಾಪತಿಯೆನಿಸುತ್ತಾನೆ. ಪುರುಷನೆಂದರೆ ಈ ಸೃಷ್ಟಿಸ್ಥಿತಿಲಯಾದ್ಯವಸ್ಥಾತೀತ ಮೂಲತತ್ತ್ವ. ಹೀಗೆ ನಾನಾ ಅವಸ್ಥೆಗಳನ್ನು ತ್ಯಜಿಸುವುದನ್ನೇ “ಪುರುಷಮೇಧ” ಎಂದು ಸಾಂಕೇತಿಕವಾಗಿ ಹೇಳಲಾಗಿದೆ.
೩೩) ಆಪ ಏವ ಇದಂ ಅಗ್ರ ಆಸುಃ ತಾ ಆಪಃ ಸತ್ಯಮ್ ಅಸೃಜನ್ತ | ಸತ್ಯಂ ಬ್ರಹ್ಮ | ಬ್ರಹ್ಮ ಪ್ರಜಾಪತಿಮ್ | ಪ್ರಜಾಪತಿರ್ ದೇವಾನ್ | ತೇ ದೇವಾಃ ಸತ್ಯಮ್ ಏವ ಉಪಾಸತೇ | ತದೇತತ್ ತ್ರ್ಯಕ್ಷರಂ ಸ-ತಿ-ಯಮ್ ಇತಿ, ಸ ಇತಿ ಏಕಮ್ ಅಕ್ಷರಮ್, ತಿ ಇತಿ ಏಕಮ್ ಅಕ್ಷರಮ್, ಯಮ್ ಇತಿ ಏಕಮ್ ಅಕ್ಷರಮ್ | ಪ್ರಥಮ-ಉತ್ತಮೇ ಅಕ್ಷರೇ ಸತ್ಯಮ್, ಮಧ್ಯತೋ ಅನೃತಮ್ | ತದ್ ಏತದ್ ಅನೃತಮ್ ಉಭಯತಃ ಸತ್ಯೇನ ಪರಿಗೃಹೀತಮ್ || (ಬೃಹದಾರಣ್ಯಕೋಪನಿಷತ್ ೫.೫.೧)
ಮೊದಲು (ಅಗ್ರೇ), ಈ (ಇದಂ), ಜಲರಾಶಿ ಮಾತ್ರವೇ (ಆಪಃ, ಏವ) ಇತ್ತು (ಆಸುಃ). ಆ (ತಾಃ), ಜಲರಾಶಿಯು (ಆಪಃ), ಸತ್ಯವನ್ನು (ಸತ್ಯಂ), ಸೃಜಿಸಿತು (ಅಸೃಜನ್ತ). ಸತ್ಯವೇ ಬ್ರಹ್ಮವೂ ಆಗಿತ್ತು (ಸತ್ಯಂ ಬ್ರಹ್ಮ). ಈ ಬ್ರಹ್ಮವು ಸೃಷ್ಟಿಯ ಉತ್ಕಟವಾದ ಬಯಕೆಯಿಂದ ಪ್ರಜಾಪತಿಯನ್ನು ಉಂಟುಮಾಡಿತು (ಬ್ರಹ್ಮ ಪ್ರಜಾಪತಿಮ್). ಪ್ರಜಾಪತಿಯು ಸಮಸ್ತ ಸೃಷ್ಟಿಯ ನೇರ ಜವಾಬ್ದಾರಿಯನ್ನು ಹೊತ್ತ ದೇದೀಪ್ಯಮಾನವಾಗಿ ಪ್ರಕಾಶಿಸುವ ದೇವತೆಗಳನ್ನು ಸೃಜಿಸಿದನು (ಪ್ರಜಾಪತಿಃ, ದೇವಾನ್— ದಿವು ದ್ಯುತಿ-ಕಾನ್ತಿ-ಕ್ರೀಡಾ-ಗತಿ-ಅರ್ದನ-ಪರಿಕೂಜನ-ಮದ-ಮೋದನ-ವಿಜಿಗೀಷಾ-ವ್ಯವಹಾರ-ಸ್ತುತಿ-ಸ್ವಪ್ನೇಷು, ದಿವಿ ಪ್ರೀಣನೇ ವಾ ಇತಿ ದೇವಃ— ದೇವತೆಗಳೆಂದರೆ ಬೆಳಗುವ-ಆಕರ್ಷಕ-ಲೀಲಾಮಯ-ಸರ್ವತ್ರಗಮನಶೀಲ-ಅಸುರಶಕ್ತಿನಾಶನ-ಸಂಗ್ರಾಮಗಳಲ್ಲಿ ಸತ್ಯದ ಪರವಾಗಿ ಘೋಷಣೆಗಳನ್ನು ಕೂಗುವ-ಪರಮಾನಂದೋನ್ಮತ್ತ-ಸದಾ ಮೋದದಿಂದಿರುವ, ತಮ್ಮ ಭಕ್ತರಿಗೂ ಹರ್ಷವನ್ನುಂಟುಮಾಡುವ-ಸದಾ ಸತ್ಯವನ್ನು ಗೆಲ್ಲಿಸುವ ಇಚ್ಛೆಯುಳ್ಳ-ದುಷ್ಟನಾಶಕ್ಕಾಗಿ, ಶಿಷ್ಟರಕ್ಷಣೆಗಾಗಿ ನಾನಾವಿಧ ಮಾಯಾವ್ಯವಹಾರಗೈವ-ಸ್ತುತ್ಯರ್ಹ-ಭಕ್ತರಿಗೆ ಕನಸಿನಂತೆ ಗೋಚರವಾಗುವ, ತಾವೆಂದೂ ಕಣ್ಮುಚ್ಚಿ ನಿದ್ರಿಸದ, ಭಕ್ತಪ್ರಿಯರೂ, ಭಕ್ತಿಗೆ ಪ್ರಿಯವನ್ನುಂಟುಮಾಡುವವರೂ ಆಗಿರುವವರು.).
ಆ ದೇವತೆಗಳು (ತೇ ದೇವಾಃ), ತಮ್ಮ ನೇರಜನಕನಾದ ಪ್ರಜಾಪತಿಗಿಂತಲೂ ಹೆಚ್ಚಾಗಿ ಅದಕ್ಕೂ ಮೂಲವಾದ ಬ್ರಹ್ಮಸ್ವರೂಪಿ ಪರಮಸತ್ಯವನ್ನೇ / ಪರಮಪುರುಷನನ್ನೇ (ಸತ್ಯಮ್ ಏವ), ಉಪಾಸಿಸುತ್ತಾರೆ (ಉಪಾಸತೇ). ಹೀಗಾಗಿ (ತದ್ / ತಸ್ಮಾತ್), ಈ ಮೂರಕ್ಷರಗಳು (ತ್ರ್ಯಕ್ಷರಂ), ಸ, ತಿ, ಯಮ್— ಎಂಬುದೇ ಪರಮಪುರುಷವಾಚಕವಾದವುಗಳು (ಸ-ತಿ-ಯಮ್-ಇತಿ). ಸ ಎಂಬುದೊಂದಕ್ಷರ (ಸ ಇತಿ ಏಕಮ್ ಅಕ್ಷರಮ್), ತಿ ಎಂಬುದೊಂದಕ್ಷರ (ತಿ ಇತಿ ಏಕಮ್ ಅಕ್ಷರಮ್), ಯಮ್ ಎಂಬುದೊಂದಕ್ಷರ (ಯಮ್ ಇತಿ ಏಕಮ್ ಅಕ್ಷರಮ್). ಮೊದಲಕ್ಷರ ಸ ಹಾಗೂ ಕೊನೆಯಕ್ಷರ ಯಮ್— ಇವೇ ಸತ್ಯವಾಚಕಗಳು (ಪ್ರಥಮ-ಉತ್ತಮೇ ಅಕ್ಷರೇ ಸತ್ಯಮ್). ಇವುಗಳ ನಡುವಿನ ತಿ ಅಕ್ಷರವು ಮಿಥ್ಯೆ / ನಶ್ವರವೆನಿಸಿದ ಸಮಗ್ರ ಸೃಷ್ಟಿವಾಚಕ (ಮಧ್ಯತಃ, ಅನೃತಮ್). ಹೀಗೆ ಈ ನಶ್ವರವಾದ ಸಮಸ್ತ ಸೃಷ್ಟಿಯು (ತದ್ ಏತದ್ ಅನೃತಮ್), ತನ್ನ ಇಕ್ಕೆಲಗಳಲ್ಲೂ (ಉಭಯತಃ), ಆ ಶಾಶ್ವತಸತ್ಯದಿಂದ ಆಧರಿಸಿ ಹಿಡಿಯಲ್ಪಟ್ಟಿರುವುದು (ಸತ್ಯೇನ ಪರಿಗೃಹೀತಮ್). ಹೀಗಾಗಿ ಆ ಪರಮಸತ್ಯವನ್ನೇ ದೇವತೆಗಳೂ, ಜ್ಞಾನಿಗಳೂ ಆಶ್ರಯಿಸಬೇಕಾಗುತ್ತದೆ. ಅದೇ ಪುರುಷ. ಸಮಸ್ತ ಸೃಷ್ಟಿಯನ್ನು ಪ್ರತಿನಿಧಿಸುವ ಮಧ್ಯದ ಅಕ್ಷರವು ಮೊದಲನೆಯ ಹಾಗೂ ಕೊನೆಯ ಅಕ್ಷರಗಳಿಂದ ವಾಚ್ಯವಾದ ಬ್ರಹ್ಮ / ಪುರುಷ ದ ತ್ಯಾಗವನ್ನೊಳಗೊಂಡಿದೆ. ಇದೇ ನಿಜವಾಗಿ ಪುರುಷಮೇಧ.
೩೪) ಸ ಏತಂ ಪುರುಷಮೇಧಂ ಪಂಚರಾತ್ರಂ ಯಜ್ಞಕ್ರತುಮ್ ಅಪಶ್ಯತ್ | ತಮ್ ಆಹರತ್ | ತೇನ ಅಯಜತ | ತೇನ ಇಷ್ಟ್ವಾ ಅತಿ-ಅತಿಷ್ಠತ್ ಸರ್ವಾಣಿ ಭೂತಾನಿ ಇದಂ ಸರ್ವಮ್ ಅಭವತ್ || (ಶತಪಥಬ್ರಾಹ್ಮಣಮ್ ೧೩.೬.೧.೧)
ಆ ಪರಮಪುರುಷನು (ಸಃ), ಪುರುಷಮೇಧವೆನಿಸಿದ (ಪುರುಷಮೇಧಂ), ಈ (ಏತಂ), ೫ ಸ್ತರದ / ಪಂಚಮಹಾಭೂತಾತ್ಮಕ ಪಂಚೀಕರಣ ಯಜ್ಞವನ್ನು (ಪಂಚರಾತ್ರಂ ಯಜ್ಞಕ್ರತುಮ್), ಕಂಡನು (ಅಪಶ್ಯತ್). ಅದನ್ನೇ ಪರಿಗ್ರಹಿಸಿದನು (ತಮ್ ಆಹರತ್). ಅದರಿಂದಲೇ ಸೃಷ್ಟಿಯೆಂಬ ಯಜನ / ಯಜ್ಞ ವನ್ನು ಮಾಡಿದನು (ತೇನ ಅಯಜತ). ಇಂತಹ ಪುರುಷಮೇಧವೆಂಬ ಇಷ್ಟಿಯನ್ನು / ಇಷ್ಟಪ್ರದವಾದ ಯಜ್ಞವನ್ನು ಮಾಡಿದಾಗ (ತೇನ ಇಷ್ಟ್ವಾ), ಸಮಸ್ತ ಚರಾಚರಗಳೂ (ಸರ್ವಾಣಿ ಭೂತಾನಿ), ತೋರುತ್ತಿರುವ ಈ ಸೃಷ್ಟಿಯೆಲ್ಲವೂ (ಇದಂ ಸರ್ವಂ), ಉಂಟಾಯಿತು (ಅಭವತ್). ಇದನ್ನಾಚರಿಸಿ ಪರಮಪುರುಷನು ತಾನೇ ಇದೆಲ್ಲವೂ ಆಗಿ, ಈ ಸೃಷ್ಟಿಯನ್ನೆಲ್ಲ ಮೀರಿ ನಿಂತವನಾದನು / ವಿಶ್ವಾತೀತಶಕ್ತಿಯಾದನು (ಅತಿ ಅತಿಷ್ಠತ್— ಅತ್ಯತಿಷ್ಠತ್).
೩೫) ಪುರುಷಂ ಹ ನಾರಾಯಣಂ ಪ್ರಜಾಪತಿರುವಾಚ ಯಜಸ್ವ ಯಜಸ್ವೇತಿ || (ಶತಪಥಬ್ರಾಹ್ಮಣಮ್ ೧೨.೩.೪.೧)
ಇನ್ನೊಂದೆಡೆ ಈ ಸ್ವಯಮ್ ಅರ್ಪಣೆಯ ಪುರುಷಮೇಧವನ್ನು “ಮಾಡು ಮಾಡು” ಎಂದು (ಯಜಸ್ವ ಯಜಸ್ವ ಇತಿ), ಪರಮಪುರುಷನೇ ಆದ ನಾರಾಯಣನಿಗೆ (ಪುರುಷಂ ಹ ನಾರಾಯಣಂ), ಪ್ರಜಾಪತಿಯು ವಿಧಿಸಿದನೆನ್ನಲಾಗಿದೆ (ಪ್ರಜಾಪತಿಃ ಉವಾಚ).
೩೬) ಇಮೇ ವೈ ಲೋಕಾಃ ಪೂರಯಮ್ ಏವ ಪುರುಷೋ ಯೋ ಅಯಂ ಪವತೇ ಸೋ ಅಸ್ಯಾಂ ಪುರಿ ಶೇತೇ ತಸ್ಮಾತ್ ಪುರುಷಃ ||
(ಶತಪಥಬ್ರಾಹ್ಮಣಮ್ ೧೩.೬.೨.೧)
ಸೃಷ್ಟಿಸಂಕಲ್ಪದ ಸಿದ್ಧಿಗಾಗಿ ಆ ಪುರುಷನು ತನ್ನ ಅತೀಂದ್ರಿಯತ್ವ, ನಿರಾಕಾರತ್ವ, ನಿರ್ಗುಣತ್ವ ಹಾಗೂ ತನ್ನ ಪವಿತ್ರ ಸ್ವರೂಪಗಳನ್ನು ಪುರುಷಮೇಧರೂಪದಲ್ಲಿ ತ್ಯಾಗಮಾಡಲೇಬೇಕಾಗುತ್ತದೆ. ಬಳಿಕ ತಾನೇ ಸೃಷ್ಟಿರೂಪಿಯಾಗಿ ಇಂದ್ರಿಯಗೋಚರನಾಗಿ, ಸಾಕಾರನಾಗಿ, ನಾನಾ ಆಕಾರನಾಗಿ, ತ್ರಿಗುಣಮಯನಾಗಿ, ವಿಶ್ವರೂಪಿಯಾಗಿ ವ್ಯಕ್ತನಾಗುತ್ತಾನೆ. ಹೀಗೆ ಪುರುಷನು ತ್ಯಾಗಮಾಡಿದರೆ ಮಾತ್ರ ಪ್ರಜಾಪತಿಯು ಸೃಷ್ಟಿಕರ್ತನಾಗಲು ಸಾಧ್ಯ. ದೇವತೆಗಳೂ ನಿರಾಕಾರನಾದ ಪುರುಷನನ್ನು ಸೃಷ್ಟಿಯಜ್ಞಕ್ಕೆ ಸಮರ್ಪಿಸಿ, ಸಾಕಾರಸೃಷ್ಟಿಗೆ ಪೂರಕರಾದರು. ಹೀಗೆ ಈ ಪುರುಷನೇ (ಯಃ ಪುರುಷಃ, ವೈ), ಈ (ಇಮೇ), ಸಮಸ್ತಲೋಕಗಳನ್ನು (ಲೋಕಾಃ) ತಾನೇ ತುಂಬಿಕೊಂಡು (ಪೂರಯಮ್ ಏವ), ಅವುಗಳಲ್ಲೆಲ್ಲ (ಅಸ್ಯಾಂ ಪುರಿ) ಅಂತರ್ಗತನಾಗಿದ್ದು (ಶೇತೇ) ಅವನ್ನು ಈತನೇ (ಅಯಂ), ಸಜೀವಗೊಳಿಸುವನಾದ್ದರಿಂದಲೇ (ಪವತೇ, ತಸ್ಮಾತ್) ಪುರುಷನೆನಿಸುವನು (ಪುರುಷಃ).
೩೭) ಸಾಂಖ್ಯದರ್ಶನದ ಪ್ರಕಾರ, ಸೃಷ್ಟಿಯಲ್ಲಿ ಒಟ್ಟು ಚತುರ್ವಿಂಶತಿ (೨೪) ತತ್ತ್ವಗಳಿವೆ. ೨೫ನೆಯದೇ ಆತ್ಮ / ಪುರುಷ ತತ್ತ್ವ. ಮಧ್ವಾಚಾರ್ಯರು / ಆನಂದತೀರ್ಥರು ಹೇಳಿದಂತೆ ಈ ಪುರುಷನು ಮಾನವಜೀವಿಯಲ್ಲ / ಜೀವಾತ್ಮನಲ್ಲ, ಏಕೆಂದರೆ ಆತನು ಪರಿಪೂರ್ಣನಾದ ಪರಮಾತ್ಮನು ಹಾಗೂ ಸಮಗ್ರ ಅಸ್ತಿತ್ವವನ್ನು ಪ್ರತಿನಿಧಿಸುವವನು.
೩೮) ಭಗವಾನಿತಿ ಶಬ್ದೋऽಯಂ ತಥಾ ಪುರುಷ ಇತ್ಯಪಿ |
ವರ್ತತೇ ನಿರುಪಾಧಿಶ್ಚ ವಾಸುದೇವೋऽಖಿಲಾತ್ಮನಿ ||
(ಪದ್ಮಪುರಾಣೇ ಉತ್ತರಖಣ್ಡೇ ೬.೨೨೬)
ಈ ಭಗವಾನ್ ಎಂಬ ಹಾಗೆಯೇ ಪುರುಷ ಎಂಬ ಶಬ್ದವಾಚ್ಯನೂ ಹಾಗೂ ಯಾವುದೇ ಉಪಾಧಿ / ನಾಮ-ಸಂಕೇತಗಳಿಲ್ಲದೆ ನಿರುಪಾಧಿಕನಾಗಿಯೂ ಪರಮಾತ್ಮನಾದ ವಾಸುದೇವನು ಅಖಿಲ / ಎಲ್ಲ ಆತ್ಮಗಳೊಳಗೂ ನೆಲೆಸಿ ಪ್ರವರ್ತಿಸುತ್ತಿರುವನು.
೩೯) ಸರ್ವಲೋಕಪತಿಃ ಸಾಕ್ಷಾತ್ಪುರುಷಃ ಪ್ರೋಚ್ಯತೇ ಹರಿಃ |
ತಂ ವಿನಾ ಪುಣ್ಡರೀಕಾಕ್ಷಂ ಕೋऽನ್ಯಃ ಪುರುಷಶಬ್ದಭಾಕ್ ||
(ನರಸಿಂಹಪುರಾಣಮ್)
ಸಾಕ್ಷಾತ್ ಶ್ರೀಹರಿಯು ಸಕಲಲೋಕಗಳ ಅಧಿಪತಿಯಾಗಿ ಪುರುಷನೆಂದು ಕರೆಯಲ್ಪಡುತ್ತಾನೆ. ಅಂತಹ ಕಮಲನೇತ್ರನನ್ನು ಹೊರತುಪಡಿಸಿ ಬೇರಾರು ತಾನೇ ಪುರುಷಶಬ್ದಕ್ಕೆ ಭಾಜನರಾಗಬಲ್ಲರು?
೪೦) ಪರಃ ಸ ಪುರುಷೋ ಜ್ಞೇಯೋ
ಹ್ಯವ್ಯಕ್ತೋऽಕ್ಷರ ಏವ ತು || ೧೬೧.೬ ||
ಅವ್ಯಕ್ತವೂ (ಸುವ್ಯಕ್ತವಾಗಿ ಇಂದ್ರಿಗೋಚರನಲ್ಲದವನೂ), ಅಕ್ಷರವೂ (ನ ಕ್ಷರತೀತಿ ಅಕ್ಷರಃ— ನಾಶವಾಗದವನು) ಆದ ಆ ಪರತತ್ತ್ವವನ್ನೇ ಪುರುಷನೆಂದು ತಿಳಿಯಬೇಕು.
ಅಪರಶ್ಚ ಕ್ಷರಸ್ತಸ್ಮಾತ್
ಪ್ರಕೃತ್ಯನ್ವಿತ ಏವ ಚ |
ನಿರಾಕಾರಾತ್ ಸಾವಯವಃ
ಪುರುಷಃ ಸಮಜಾಯತ || ೧೬೧.೭ ||
(ಬ್ರಹ್ಮಪುರಾಣಮ್)
ಆ ಪರತತ್ತ್ವವೆನಿಸಿದ ಪುರುಷತತ್ತ್ವಕ್ಕಿಂತ ಬೇರೆಯಾದ ಪ್ರಕೃತಿ / ಸೃಷ್ಟಿಯು ಕ್ಷರವಾದದ್ದು (ನಾಶ / ಬದಲಾವಣೆಯುಳ್ಳದ್ದು). ಈ ಪ್ರಕೃತಿ / ಮಾಯೆಯನ್ನು ಬಳಸಿಕೊಂಡು ಆ ನಿರಾಕಾರನಾದ ಪರಮಪುರುಷನು ವಿಶ್ವದ ಸಕಲ ಚರಾಚರಗಳೆಂಬ ಅವಯವಸಹಿತನಾಗಿ (ಅಂಗೋಪಾಂಗಸಮೇತನಾಗಿ) ಸಾಕಾರಜಗತ್ತಾಗಿ ಸೃಷ್ಟಿಯ ರೂಪದಿಂದ ಮೈದಳೆದನು.
೪೧) ಪರಶ್ಚ ಪುರುಷೋ ಜ್ಞೇಯಃ
ಪ್ರಕೃತಿಶ್ಚ ಪರಾ ಸ್ಮೃತಾ ||
(ವಾಯುಪುರಾಣಮ್ ೫.೧೮)
ಪುರುಷನು ಪರತತ್ತ್ವನೆಂದೂ, ಪ್ರಕೃತಿಯು ಪರಾದೇವತೆಯೆಂದೂ / ಪರಾಶಕ್ತಿಯೆಂದೂ ಸ್ಮರಿಸಲ್ಪಟ್ಟಿದೆ.
೪೨) ಪರಂ ಬ್ರಹ್ಮ ಪರಂ ಧಾಮ
ಪವಿತ್ರಂ ಪರಮಂ ಭವಾನ್ |
ಪುರುಷಂ ಶಾಶ್ವತಂ ದಿವ್ಯಮ್
ಆದಿದೇವಮಜಂ ವಿಭುಮ್ ||
(ಶ್ರೀಮದ್ಭಗವದ್ಗೀತಾ ೧೦.೧೨)
ಅರ್ಜುನನು ಕೃಷ್ಣನಿಗೆ ಹೇಳುತ್ತಾನೆ— “ನೀನೇ ಪರಬ್ರಹ್ಮವೂ, ಪರಮಮೋಕ್ಷಧಾಮವೂ, ಪರಮಪವಿತ್ರನೂ, ಪುರುಷನೂ, ಶಾಶ್ವತನೂ, ದಿವ್ಯನೂ / ಪರಂಜ್ಯೋತಿಯೂ, ಜನನರಹಿತನಾದ ಅಜನೂ, ಲೋಕದ ವಿಶೇಷವಾದ ಪ್ರಭುವೂ, ಆದಿದೇವನೂ ಆಗಿರುವಿಯೆಂದು ನಿನ್ನನ್ನು ನಾನು ತಿಳಿಯುತ್ತೇನೆ.”
೪೩) ಅಪಾಣಿಪಾದೋ ಜವನೋ ಗ್ರಹೀತಾ
ಪಶ್ಯತ್ಯಚಕ್ಷುಃ ಸ ಶೃಣೋತ್ಯಕರ್ಣಃ |
ನ ವೇತ್ತಿ ವೇದ್ಯಂ ನ ಚ ತಸ್ಯಾಸ್ತಿ ವೇತ್ತಾ
ತಮಾಹುರಗ್ರ್ಯಂ ಪುರುಷಂ ಮಹಾನ್ತಮ್ ||
(ಶ್ವೇತಾಶ್ವತರೋಪನಿಷತ್ ೩-೧೭,೧೯)
ಕೈಕಾಲುಗಳಿಲ್ಲದೆಯೂ ಹಿಡಿಯಬಲ್ಲವನೂ, ನಡೆಯಬಲ್ಲವನೂ, ಕಣ್ಣಿಲ್ಲದೆಯೂ ನೋಡುವವನೂ, ಕಿವಿಯಿಲ್ಲದೆಯೇ ಕೇಳಬಲ್ಲವನೂ, ಆತನು ಸ್ವಯಂ ತನಗಿಂತ ಶ್ರೇಷ್ಠವಾದ ಬೇರಾವುದನ್ನೂ ತಿಳಿಯುವವನಲ್ಲ, ಆದರೆ ಸಕಲರಿಂದಲೂ ತಿಳಿಯಲ್ಪಡಬೇಕಾದ ಪರಮಶ್ರೇಷ್ಠತಮನು (ವೇದ್ಯನು). ಆತನನ್ನೇ ಅಗ್ರಗಣ್ಯನೆಂದೂ, ಮೊತ್ತಮೊದಲಿನವನೆಂದೂ, ಮಹಾಪುರುಷನೆಂದೂ ಹೇಳುವರು.
ಪುರುಷಸೂಕ್ತಮಾಹಾತ್ಮ್ಯಮ್
ಪುರುಷಸೂಕ್ತವು ಅಷ್ಟಮಹಾಮಂತ್ರಗಳಲ್ಲಿ ಒಂದು. ಪ್ರಣವ, ಮಾತೃಕಾಮಂತ್ರ, ವ್ಯಾಹೃತಿ, ನಾರಾಯಣಾಷ್ಟಾಕ್ಷರ, ವಾಸುದೇವದ್ವಾದಶಾಕ್ಷರ, ಬ್ರಹ್ಮಗಾಯತ್ರಿ, ವಿಶ್ವಾಮಿತ್ರಗಾಯತ್ರಿ ಮತ್ತು ಪುರುಷಸೂಕ್ತ— ಇವೇ ಆ ಮಹಾಮಂತ್ರಗಳು. (—ಬನ್ನಂಜೆ ಗೋವಿಂದಾಚಾರ್ಯ)
ವೇದೇಷು ಪೌರುಷಂ ಸೂಕ್ತಂ
ಪುರಾಣೇಷು ಚ ವೈಷ್ಣವಮ್ |
ಭಾರತೇ ಭಗವದ್ಗೀತಾ
ಧರ್ಮಶಾಸ್ತ್ರೇಷು ಮಾನವಮ್ ||
(ಪಾದ್ಮಪುರಾಣಮ್, ಶ್ರೀವೈಖಾನಸಗೃಹ್ಯಸೂತ್ರೇ ಚತುರ್ಥಖಂಡಃ)
ಸರ್ವಪುರಾಣಗಳಲ್ಲಿ ವಿಷ್ಣುಸಂಬಂಧಿಪುರಾಣವೂ, ಲಕ್ಷಶ್ಲೋಕಾತ್ಮಕಮಹಾಭಾರತದಲ್ಲಿ ೭೦೦ ಶ್ಲೋಕಗಳ ಭಗವದ್ಗೀತೆಯೂ, ಸಕಲ ಸ್ಮೃತಿಗಳಲ್ಲಿ ಮನುಸ್ಮೃತಿಯೂ ಹೇಗೆ ಸಾರಭೂತವೂ ಶ್ರೇಷ್ಠವೂ ಆಗಿರುವುದೋ, ಅಂತೆಯೇ ಸಕಲವೇದಗಳಲ್ಲಿ ಪುರುಷಸೂಕ್ತವು ಸಾರತಮವೂ, ಶ್ರೇಷ್ಠತಮವೂ ಆಗಿರುವುದು.
ಮಥ್ಯಮಾನಸ್ತತಸ್ತಸ್ಮಾತ್
ಸಾಮರ್ಗ್ಯಜುಷಸಂಕುಲಾತ್ |
ತತ್ಸೂಕ್ತಂ ಪುರುಷಂ ದಿವ್ಯಂ
ದಧ್ನೋ ಘೃತಮಿವೋತ್ಥಿತಮ್ ||
(ಪಾಂಚರಾತ್ರಾಗಮೇ ಲಕ್ಷ್ಮೀತನ್ತ್ರೇ ೫೦-೧೩,೧೪)
ಹೇಗೆ ಮೊಸರಿನಿಂದ ಮಥನಮಾಡಿ ಪಡೆದ ಬೆಣ್ಣೆಯನ್ನು ಕಾಯಿಸಿ ತುಪ್ಪವೆಂಬ ಶ್ರೇಷ್ಠದ್ರವ್ಯವವನ್ನು ಪಡೆಯಲಾಗುವುದೋ ಹಾಗೆಯೇ ಋಕ್ಕುಗಳೂ, ಯಜುಸ್ಸುಗಳೂ, ಸಾಮಗಳೂ ತುಂಬಿರುವ ವೇದಸಾಗರದ ಮಥನದಿಂದ ಸಮುದ್ಭೂತವಾದ ಸಾರವಸ್ತುವೇ ದಿವ್ಯವಾದ ಪುರುಷಸೂಕ್ತವು.
ಇದಂ ಪುರುಷಸೂಕ್ತಂ ಹಿ
ಸರ್ವವೇದೇಷು ಪಾರ್ಥಿವ |
ಋತಂ ಸತ್ಯಂ ಚ ವಿಖ್ಯಾತಮ್
ಋಷಿಭಿಃ ಪರಿಚಿನ್ತಿತಮ್ ||
(ಮಹಾಭಾರತೇ ಶಾನ್ತಿಪರ್ವಣಿ ೩೩೮.೫)
ಹೇ ರಾಜನೇ! ಈ ಪುರುಷಸೂಕ್ತವಾದರೋ ಸರ್ವವೇದಗಳಲ್ಲಿಯೂ ಋತ-ಸತ್ಯಸ್ವರೂಪಿಯೆಂದು ವಿಖ್ಯಾತವಾಗಿದೆಯೆಂದು ಪ್ರಾಚೀನ ಋಷಿಗಳಿಂದ ಕಲ್ಪಿತವಾಗಿದೆ.
ಬ್ರಹ್ಮಯಜ್ಞೇ ಜಪನ್ ಸೂಕ್ತಂ
ಪುರುಷಂ ಚಿನ್ತಯನ್ ಹರಿಮ್ |
ಸ ಸರ್ವಾನ್ ಜಪತೇ ವೇದಾನ್
ಸಾಂಗೋಪಾಂಗವಿಧಾನತಃ ||
(ವಿಷ್ಣುಧರ್ಮೋತ್ತರಪುರಾಣಮ್)
ಬ್ರಹ್ಮಯಜ್ಞ / ಸ್ವಾಧ್ಯಾಯದಲ್ಲಿ ಶ್ರೀಹರಿಯನ್ನೇ ಚಿಂತಿಸುತ್ತಾ / ಧ್ಯಾನಿಸುತ್ತಾ ಪುರುಷಸೂಕ್ತವನ್ನು ಜಪಿಸಿದವನು ಸಕಲ ಅಂಗೋಪಾಂಗ ಸಹಿತವಾದ ವೇದರಾಶಿಯನ್ನೇ ಜಪಿಸಿದಂತೆ ಆಗುತ್ತದೆ.
ಸನತ್ಕುಮಾರಸಂಹಿತೋಕ್ತಫಲ
ಪೂರ್ವಂ ಸನತ್ಕುಮಾರೇಣ
ಪೃಷ್ಟೋ ವಿಷ್ಣುಸ್ಸನಾತನಃ |
ಉಕ್ತವಾನ್ ಪೌರುಷಂ ಹೋಮೈರ್-
-ವಿಧಾನಂ ಕಾಮದಂ ನೃಣಾಮ್ ||
ಹಿಂದೆ ಬ್ರಹ್ಮಮಾನಸಪುತ್ರನಾದ ಸನತ್ಕುಮಾರನಿಂದ ಪ್ರಶ್ನಿಸಲ್ಪಟ್ಟ ವಿಷ್ಣುವು ಪುರುಷಸೂಕ್ತಹೋಮವಿಧಿಯು ನರರಿಗೆ ಇಷ್ಟಾರ್ಥಪ್ರದವಾದುದು ಎಂದನು.
ವಕ್ಷ್ಯಾಮಿ ತದಹಂ ಪುಣ್ಯಂ
ಶೃಣುಧ್ವಂ ಮುನಿಸತ್ತಮಾಃ |
ಪುತ್ರಪ್ರದಮಪುತ್ರಾಣಾಂ
ಜಯದಂ ಜಯಕಾಮಿನಾಮ್ ||
ಅಂತಹ ಪುಣ್ಯತಮವಾದ ಪುರುಷಸೂಕ್ತದ ಫಲವನ್ನು ಹೇಳುವೆನು. ಮುನಿಶ್ರೇಷ್ಠರೇ! ಕೇಳಿರಿ. ಮಕ್ಕಳಿಲ್ಲದವರಿಗೆ ಪುತ್ರಪ್ರದ, ಜಯಕಾಮಿಗಳಿಗೆ ವಿಜಯಪ್ರದ.
ಶ್ರೀದಂ ಶ್ರೀಕಾಮಿನಾಂ ಪುಂಸಾಂ
ರಾಜ್ಯದಂ ರಾಜ್ಯಕಾಮಿನಾಮ್ |
ಧಾನ್ಯದಂ ಧಾನ್ಯಕಾಮಾನಾಂ
ಕೀರ್ತಿದಂ ಕೀರ್ತಿಕಾಮಿನಾಮ್ ||
ಸಿರಿಯನ್ನು ಬಯಸುವವರಿಗೆ ಸಂಪತ್ಪ್ರದ, ಭೂಮಿಯನ್ನು / ರಾಜ್ಯವನ್ನು ಬಯಸುವವರಿಗೆ ರಾಜ್ಯಪ್ರದ. ಆಹಾರಧಾನ್ಯಾದಿಕಾಮರಿಗೆ ಧಾನ್ಯಪ್ರದ. ಕೀರ್ತಿಯ ಆಸೆಯುಳ್ಳವರಿಗೆ ಯಶಃಪ್ರದ.
ಭುಕ್ತಿದಂ ಭುಕ್ತಿಕಾಮಾನಾಂ
ಮುಕ್ತಿದಂ ಮುಕ್ತಿಕಾಮಿನಾಮ್ |
ಬಹುನಾ ಕಿಮಿಹೋಕ್ತೇನ
ಸರ್ವಸಿದ್ಧಿಪ್ರದಂ ನೃಣಾಮ್ ||
ಭೋಗೇಚ್ಛುಗಳಿಗೆ ಭೋಗಪ್ರದ. ಮುಮುಕ್ಷುಗಳಿಗೆ ಮೋಕ್ಷದಾಯಕ. ಹೆಚ್ಚೇನನ್ನು ಹೇಳಲಿ? ಮಾನವರಿಗೆ ಸಕಲವನ್ನೂ ಸಿದ್ಧಿಸುವಂತೆ ಮಾಡುವುದು ಈ ಪುರುಷಸೂಕ್ತವು.
Comments
Post a Comment