ಲಘುನ್ಯಾಸದ ಬೆಳಕಿನಲ್ಲಿ ಶಿವದರ್ಶನ ೬—ಲಘುನ್ಯಾಸಮಂತ್ರಾರ್ಥವಿಚಾರ ೧


|| ಶ್ರೀಗಣೇಶಾಯ ನಮಃ ||
|| ಓಂ ನಮಃ ಶಿವಾಯ ||
|| ಶ್ರೀಗುರುಭ್ಯೋ ನಮಃ ||
|| ಹರಿಃ ಓ೩ಮ್ ||

|| ಅಥ ಲಘುನ್ಯಾಸಭಾಷ್ಯಮ್ ||

( ರುದ್ರಪೀಠಿಕಾಭಾಗಃ)

೩೬) ಋಗ್ವೇದ ಖಿಲಮಂತ್ರಕ್ಕೆ ಅಥವಾ ಒಂದು ಸ್ವಸ್ತಿಮಂತ್ರಕ್ಕೆ ಉದಾಹರಣೆ ಯಾವುದು? ಅದರ ಪದ ವಿಭಾಗ, ಭಾವಾರ್ಥ, ವಿವರಣೆ ನೀಡುವಿರಾ?

ಖಿಲವೆಂದರೆ ಉಳಿಕೆ, ಶೇಷ. ಅಖಿಲವೆಂದರೆ ಸಮಗ್ರ. ಋಗ್ವೇದದ ಸಂಹಿತೆಯಲ್ಲಿ ಬರದ ಋಕ್ ಮಂತ್ರಭಾಗವನ್ನು ಖಿಲಭಾಗವೆನ್ನುವರು. ಉದಾ— ಹರಿವಂಶವು ಮಹಾಭಾರತದ ಖಿಲಭಾಗ.

ಓಂ ಅಗ್ಂಹೋಮುಚ ಮಾಂಗಿರ ಸಂ ಗಯಂ ಚ ಸ್ವಸ್ತ್ಯಾತ್ರೇಯಂ ಮನಸಾ ಚ ತಾರ್ಕ್ಷ್ಯಮ್ | ಪ್ರಯತ ಪಾಣಿಃ ಶರಣಂ ಪ್ರಪದ್ಯೇ ಸ್ವಸ್ತಿ ಸಂಬಾಧೇಷ್ವಭಯಂ ನೋ ಅಸ್ತು ||

ಪದ-ವಿಭಾಗಃ—

ಓಂ ಅಂ ಹೋಮ್ ಉಚಮ್ ಆಂಗಿರಸಂ ಗಯನ್ ಚ ಸ್ವಸ್ತಿ (ಸು + ಅಸ್ತಿ) ಆತ್ರೇಯಂ ಮನಸಾ ಚ ತಾರ್ಕ್ಷ್ಯಮ್ | ಪ್ರಯತಪಾಣಿಃ ಶರಣಂ ಪ್ರಪದ್ಯೇ ಸ್ವಸ್ತಿ ಸಂ ಬಾಧೇಷು ಅಭಯಂ ನಃ ಅಸ್ತು ||

ಅನ್ವಯಾರ್ಥಃ—

(ಓಂ) ಆರಂಭ ಮಂಗಲ ಸೂಚಕ; ದೇವತಾಹ್ವಾನ ಸೂಚಕ; ಶುಭಸೂಚಕ.
(ಸ್ವಸ್ತಿ) ಒಳ್ಳೆಯದಾಗಲಿ ಎಂಬ ಶುಭಸೂಚಕಪದ.
(ಅಂ) ಋಗ್ವೇದವನ್ನು, (ಹೋಮ್) ಯಜುರ್ವೇದವನ್ನು, (ಉಚಮ್— ಉಕ್ಥಮ್) ಸಾಮವೇದವನ್ನು, (ಚ) ಮತ್ತು, (ಆಂಗಿರಸಂ) ಅಥರ್ವವೇದವನ್ನು, (ಗಯನ್— ಗಾಯನ್ / ಗಯಂ) ಪಠಿಸುತ್ತಾ / ಪುಣ್ಯಾತ್ಮನೂ ರಾಜರ್ಷಿಯೂ ಆದ ಗಯನನ್ನು, (ಆತ್ರೇಯಂ) ಅತ್ರಿಪುತ್ರನಾದ ಭಗವಾನ್ ದತ್ತಗುರುವನ್ನು / ಅತ್ರಿವಂಶಜನಾದ ಆತ್ರೇಯಮಹರ್ಷಿಯನ್ನು, (ಚ) ಮತ್ತು, (ತಾರ್ಕ್ಷ್ಯಂ) ವಿಷ್ಣುವಾಹನವಾದ ವೈನತೇಯ ಗರುಡನನ್ನು, (ಮನಸಾ) ಮನಸ್ಸಿನಿಂದಲೇ ಸ್ಮರಿಸಿ,(ಪ್ರಯತಪಾಣಿಃ) ಮುಗಿದ / ನಮಸ್ಕಾರಮುದ್ರೆಯ ಕೈಯುಳ್ಳವನಾಗಿ, (ಶರಣಂ ಪ್ರಪದ್ಯೇ) ಶರಣು ಹೊಂದುತ್ತೇನೆ. (ನಃ— ಅಸ್ಮಭ್ಯಂ) ನಮಗೆ, (ಬಾಧೇಷು) ಬಾಧೆ / ವಿಘ್ನ / ಅಡ್ಡಿ-ಆತಂಕಗಳ ಬಗ್ಗೆ, (ಸಮ್ ಅಭಯಮ್) ನಿರಂತರವಾದ ಅಭಯವು, (ಅಸ್ತು) ಇರಲಿ. (ಸ್ವಸ್ತಿ) ಎಲ್ಲರಿಗೂ ಒಳ್ಳೆಯದಾಗಲಿ.

ಭಾವಾರ್ಥಃ ವಿವರಣಮ್ ಚ—

ಸಕಲ ವೇದಮಂತ್ರಗಳ ಪಠಣವೂ ಪ್ರಣವಾಕ್ಷರವೆನಿಸಿದ, ಭಗವದ್ವಾಚ್ಯವಾದ ಏಕಾಕ್ಷರಿಯಾದ, ಶಬ್ದಬ್ರಹ್ಮವೆನಿಸಿದ “ಓಂ”ಕಾರದೊಂದಿಗೇ ಆರಂಭಿಸಲ್ಪಡಬೇಕು ಎಂಬುದು ಪೂರ್ವಸೂರಿಗಳ, ಪ್ರಾಜ್ಞರ ಮತ. ಇದು ಭಗವಂತನಿಗೆ ಸ್ವಾಗತಸೂಚಕವೂ ಹೌದು.

ಸ್ವಸ್ತಿವಾಚನವೂ ಸಹ ಸಕಲಕಾರ್ಯಾರಂಭಕ್ಕೆ ವಿಘ್ನನಿವಾರಣಾಸೂಚಕ, ಶುಭದಾಯಕ.

ಋಗ್ವೇದವು “ಅಗ್ನಿಮೀಳೇ ಪುರೋಹಿತಂ” ಎಂದು ಅ-ಕಾರದಿಂದಲೇ ಪ್ರಾರಂಭವಾಗುವುದರಿಂದಲೂ, ಇದು ಪ್ರಧಾನವಾಗಿ ಭಗವಂತನಾದ ವಿಷ್ಣುವನ್ನು ಸ್ತುತಿಸುವುದರಿಂದಲೂ, “ಅ”ಕಾರವು ವಿಷ್ಣುವಾಚಕವಾದುದರಿಂದಲೂ, ಋಗ್ವೇದವನ್ನು ಇಲ್ಲಿ ಸಂಕ್ಷಿಪ್ತವಾಗಿ ಪ್ರತಿನಿಧಿಸುತ್ತದೆ. ಋಗ್ವೇದವನ್ನು ಎಂಬರ್ಥದಲ್ಲಿ “ಅಂ” ಎಂದು ಪ್ರಯೋಗಿಸಿದ್ದು (ರಾಮಂ— ರಾಮನನ್ನು ಎಂದಂತೆ) ಕಾಣಬರುತ್ತದೆ. ಯಜುರ್ವೇದದಲ್ಲಿ “ಹ,ಶ,ಷ,ಸ” ಗಳೆಂಬ ಕರ್ಕಶವ್ಯಂಜನಗಳ ಹಿಂದೆ ಬರುವ ಅನುಸ್ವಾರಕ್ಕೆ “ಗ್ಂ” ಆದೇಶವಾಗುತ್ತದೆ. ಇದು ಯಜುರ್ವೇದದ ಭಾಷಾ ಪ್ರಯೋಗದ ವಿಶೇಷತೆ / ವೈಶಿಷ್ಟ್ಯ. ಹಾಗಾಗಿಯೇ ಇಲ್ಲಿ ಅಂ ಹೋಮುಚಮಾಂಗಿರಸಂ” ಎಂಬಲ್ಲಿ “ಹೋ”ಕಾರದ ಹಿಂದಿನ ಅನುಸ್ವಾರವು “ಅಂ” ಬದಲು “ಅಗ್ಂ” ಎಂದಾಗಿದೆ.

“ಹೋ” ಎಂದರೆ “ಹ್ವಯತೇ ಆಹ್ವಯತೇ ಅನೇನ ಇತಿ”— ದೇವತೆಗಳನ್ನು ಹೋಮಾಗ್ನಿಯಲ್ಲಿ ಆಹ್ವಾನಿಸಿ, ಹವಿಸ್ಸನ್ನು ಹೋಮಿಸಿ, ಅರ್ಪಿಸಲಾಗುತ್ತದೆ. ಯಜ್ಞ / ಹೋಮಪ್ರಧಾನವಾದದ್ದು ಯಜುರ್ವೇದ. ಆದ್ದರಿಂದ, ಯಜುರ್ವೇದವನ್ನು ಸೂಚ್ಯವಾಗಿ “ಹೋಮ್” ಎನ್ನಲಾಗಿದೆ.

“ಉಚಮ್”— ಉಕ್ಥಮ್— ಸಾಮವೇದವಾಚ್ಯ ಶಬ್ದ.

“ಆಂಗಿರಸಂ”— ಅಥರ್ವಾಂಗಿರಸ ಮಹರ್ಷಿಸಂಕಲಿತವಾದದ್ದು ಅಥರ್ವ / ಆಥರ್ವಣವೇದ. ಆದ್ದರಿಂದ, ಅಂಗಿರಸ ಸಂಕಲಿತವಾದದ್ದು ಆಂಗಿರಸಸಂಹಿತೆ. ಅದೇ ಅಥರ್ವವೇದ.

“ಗಯಂ ಚ”— “ಗಯನ್ + ಚ” ಇವೆರಡನ್ನು ಕೂಡಿಸಿ ಪಠಿಸುವಾಗ ಗಯಂಚ ಎಂದಾಗುತ್ತದೆ. ಗಯನ್ ಎಂಬುದು ಬಹುಶಃ ಗಾಯನ್ ಎಂಬುದರ ಆರ್ಷ / ವೈದಿಕ ಪ್ರಯೋಗ. ೪ ವೇದಗಳನ್ನೂ ಗಾನಮಾಡುತ್ತಾ, ಪಠಿಸುತ್ತಾ, ಉಚ್ಚರಿಸುತ್ತಾ ಎಂದರ್ಥ. ಗಯ— ಎಂದರೆ ಪ್ರಖ್ಯಾತ ಭಾಗವತೋತ್ತಮನೆನಿಸಿದ, ಬ್ರಹ್ಮಜ್ಞಾನಿಯಾದ, ರಾಜರ್ಷಿಯಾಗಿದ್ದ ಪುರಾತನ ಮಹಾರಾಜನೊಬ್ಬನ ಹೆಸರೂ ಹೌದು. ಹೀಗೆ ಅವನ ಸ್ಮರಣೆ / ಭಗವದ್ಭಕ್ತರ ಸ್ಮರಣೆಯು ಭಗವಂತನಿಗೂ ಪ್ರಿಯವಾಗುವುದೆಂದೂ, ನಮಗೂ ಅಂಥವರ ಕೃಪೆಯಿಂದ ಭಗವದ್ಭಕ್ತಿ-ಜ್ಞಾನಾದಿಗಳು ಉದಿಸಲೆಂದೂ ಗಯನ ಪುಣ್ಯಸ್ಮರಣೆಯೂ ಇದಾಗುತ್ತದೆ.

ಗಯಾಃ ಎಂದರೆ ಪ್ರಾಣಾಃ / ಪ್ರಾಣಗಳು ಎಂಬರ್ಥವೂ ಇದೆ. ಹಾಗಾಗಿ, ಗಯಂ ಎಂದರೆ ಪ್ರಾಣದೇವರನ್ನು / ವಾಯುದೇವನನ್ನು ಮನಸಾ ಸ್ಮರಿಸಿ ವಂದಿಸುತ್ತೇನೆಂದರ್ಥ.

ಆತ್ರೇಯನೆಂದರೆ ಅವಧೂತಪರಂಪರೆಯ ಸ್ಥಾಪಕ, ತ್ರಿಮೂರ್ತಿ ಸ್ವರೂಪ ಸದ್ಗುರು ದತ್ತಾತ್ರೇಯ. ಗುರುವಿಲ್ಲದೆ ವಿದ್ಯೆಯಿಲ್ಲ, ಮುಕ್ತಿಯಿಲ್ಲ.
“ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ
ಪರಿ ಪರಿ ಶಾಸ್ತ್ರವನೋದಿದರೇನು ವ್ಯರ್ಥವಾಯಿತು ಭಕುತಿ”
“ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್”— ಎಂಬ ಸೂಕ್ತಿಗಳಂತೆ, ಅಜ್ಞಾನವೆಂಬ ತಿಮಿರದಿಂದ ಅಂಧನಾದವನ ಚಕ್ಷುಗಳನ್ನು ಜ್ಞಾನವೆಂಬ ಅಂಜನಶಲಾಕೆಯಿಂದ ತೆರೆದ ಗುರುಮೂರ್ತಿಗೆ ನಮೋ ನಮಃ— ಗುರುವು ಶಿಷ್ಯೋದ್ಧಾರಕ್ಕೆ / ಸಾಧಕನ ಬಂಧಮುಕ್ತಿಗೆ ಸಾಧನಜ್ಯೋತಿ / ಮಾರ್ಗದರ್ಶಕ ಕೈದೀವಿಗೆ. ಅಲ್ಲದೆ, ಗುರುಪರಂಪರೆಯಲ್ಲೇ ಬರುವ ಆಯುರ್ವೇದ ಮಹರ್ಷಿ, ಆತ್ರೇಯಸಂಹಿತೆಯ ಕರ್ತೃ ಆತ್ರೇಯರ ಸ್ಮರಣೆಯೂ ಆಗುತ್ತದೆ. ಅತ್ರಿಯು ಬ್ರಹ್ಮಮಾನಸ ಪುತ್ರರಲ್ಲೊಬ್ಬ, ಸಪ್ತರ್ಷಿಗಳಲ್ಲೊಬ್ಬ. ಅಂಥವರ ವಂಶಜರು ಆತ್ರೇಯರು.

ತಾರ್ಕ್ಷ್ಯನೆಂದರೆ ವಿಷ್ಣುವಿನ ರಥ / ವಾಹನನಾದ, ವಿನತೆ-ಕಶ್ಯಪ(ತಾರ್ಕ್ಷ)  ಸುತನಾದ, ವೈನತೇಯ ಗರುಡ. ಇವನು ವೇದಾಭಿಮಾನೀ / ವಿದ್ಯಾಭಿಮಾನೀ ದೇವತೆ. ಆದ್ದರಿಂದ, ವೇದ/ ವಿದ್ಯೆಯ ಸಿದ್ಧಿಗಾಗಿ ಇವನ ಸ್ಮರಣೆ, ಶರಣಾಗತಿ.

ಪ್ರಯತಪಾಣಿಯೆಂದರೆ ಚೆನ್ನಾಗಿ, ಪ್ರಕೃಷ್ಟವಾಗಿ ಯತ— ಬಿಗಿಹಿಡಿದ, ನಿಯಂತ್ರಿತ, ದುಷ್ಕಾರ್ಯಗಳಿಂದ ದೂರವಾದ, ಶರಣಾಗತಿದ್ಯೋತಕವಾದ ನಮಸ್ಕಾರಮುದ್ರೆಯುಳ್ಳ ಪಾಣಿ / ಕರಗಳುಳ್ಳವನು.

ರಾಮಾನುಜಾಚಾರ್ಯರು ಪ್ರಪತ್ತಿ / ಶರಣಾಗತಿಮಾರ್ಗವನ್ನೇ ಶ್ರೇಷ್ಠವೆಂದು ಬೋಧಿಸಿರುವರು.
“ಸರ್ವಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ |
ಅಹಂ ತ್ವಾ ಸರ್ವಪಾಪೇಭ್ಯೋ ಮೋಕ್ಷಯಿಷ್ಯಾಮಿ ಮಾ ಶುಚಃ ||”
ಎಂಬ ಗೀತಾಚಾರ್ಯನ ಅಭಯವಾಕ್ಯದಂತೆ ಭಗವಂತನಿಗೆ ಸರ್ವಾತ್ಮನಾ ಶರಣಾಗುವಿಕೆಯನ್ನು ಇಲ್ಲಿ “ಶರಣಂ ಪ್ರಪದ್ಯೇ” ಎಂದು ಹೇಳಲಾಗಿದೆ.

ಹಾಗೇ, ಯಾವುದೇ ಕಾರ್ಯಾರಂಭದಲ್ಲಿ, ಮುಂದೆ ಬರಬಹುದಾದ ವಿಘ್ನಗಳ ಪರಿಹಾರಕ್ಕಾಗಿ ಪ್ರಾರ್ಥಿಸುವುದು ನಮ್ಮ ಪರಂಪರೆ. ಅದಕ್ಕಾಗಿ, ನಮ್ಮ ಕಾರ್ಯಗಳಿಗೆ ಬರಬಹುದಾದ ಸಕಲ ಬಾಧೆಗಳಿಂದ ಪರಿಹಾರಕ್ಕೆ ಭಗವಂತನ ಎಡೆಬಿಡದ ಅಭಯವು ನಮ್ಮ ಮೇಲಿರಲಿ ಎಂಬುದಕ್ಕಾಗಿ “ಸ್ವಸ್ತಿ ಸಂ ಬಾಧೇಷ್ವಭಯಂ ನೋ ಅಸ್ತು” ಎನ್ನಲಾಗಿದೆ. ಇಲ್ಲಿ ಸಮ್ ಎಂದರೆ “ಸಮ್-ಪ್ರಕರ್ಷ-ಆಶ್ಲೇಷ-ನೈರಂತರ್ಯ-ಔಚಿತ್ಯ-ಅಭಿಮುಖ್ಯೇಷು” ಎಂಬಂತೆ ನಿರಂತರವಾಗಿ ಅಭಯವಿರಲಿ; ಚೆನ್ನಾಗಿ / ಪ್ರಕೃಷ್ಟವಾಗಿ ಬಹುವಾಗಿ ಉಚಿತ / ಯೋಗ್ಯ ರೀತಿಯ ಅಭಯವಿರಲಿ ಎಂದರ್ಥ.

ಕೊನೆಗೆ “ಸ್ವಸ್ತಿ” ಯ ಪುನರುಕ್ತಿಯು “ಸರ್ವೇ ಜನಾಃ ಸುಖಿನೋ ಭವಂತು” ಎಂಬ ಭಾರತೀಯ ಋಷಿಪರಂಪರೆಯು ಸರ್ವಸಮಭಾವಕ್ಕೆ, “ತನ್ನಂತೆ ಪರರ ಬಗೆ”ವ ಉದಾತ್ತ / ವಿಶಾಲ ಭಾವಕ್ಕೆ ನೀಡಿರುವ ಪ್ರಾಮುಖ್ಯತೆಯ ದ್ಯೋತಕವಾಗಿದೆ.

೩೭) ಅಂಗಿರಸರೆಂದರೆ ಯಾರು? ತಾರ್ಕ್ಷ್ಯ / ಗರುಡನು ಸೂರ್ಯನಿಗೆ ಹೇಗೆ ಸಂಬಂಧಿ?

“THE KHILA - SUKTAS OF THE RIGVEDA:  A STUDY” By Usha R. Bhise— ಇದರಿಂದಾಯ್ದ ಈ ಮಂತ್ರದ ಇಂಗ್ಲಿಷ್ ಭಾಷಾಂತರದ ಕನ್ನಡಾನುವಾದ ―

ಅತ್ರಿವಂಶಜರ ಹಿತೈಷಿಯೂ (ಆತ್ರೇಯಮ್), ಅಂಗಿರಸಗೋತ್ರಜರ ಪೋಷಕನಿಧಿಯೂ ಎನಿಸಿರುವ (ಆಂಗಿರಸಮ್ ಗಯಮ್), ಅಪಾಯದಿಂದ / ಪಾಪದಿಂದ—  ಪಾರುಮಾಡುವವನಾದ / ಮುಕ್ತಿ ಅಥವಾ ಬಿಡುಗಡೆ ಮಾಡುವವನಾದ / ಅಪಾಯ ಅಥವಾ ಪಾಪ -ಮೋಚನನಾದ (ಅಂಹೋ-ಮುಚಮ್), ತಾರ್ಕ್ಷ್ಯದೇವನನ್ನು (ತಾರ್ಕ್ಷ್ಯಮ್), ಮುಗಿದ ಕರಗಳುಳ್ಳವನಾಗಿ / ಕೈಮುಗಿದ ನಮಸ್ಕಾರಮುದ್ರೆಯುಳ್ಳವನಾಗಿ (ಪ್ರಯತ-ಪಾಣಿಃ), ನಾನು ಶರಣು ಹೊಂದುತ್ತೇನೆ (ಶರಣಂ ಪ್ರಪದ್ಯೇ). ಎಲ್ಲರಿಗೂ ಒಳ್ಳೆಯದಾಗಲಿ (ಸ್ವಸ್ತಿ). ನಮಗೆ (ನಃ), ಅಡ್ಡಿ-ಆತಂಕಗಳಿಂದ ಸದಾ ಭಯವಿಲ್ಲದಿರಲಿ, ಅವು ನಿವಾರಣೆಯಾಗಲಿ (ಬಾಧೇಷು ಸಮ್ ಅಭಯಮ್ ಅಸ್ತು).

  • ಪ್ರಯತಪಾಣಿಃ— ವರಪಡೆಯಲು, ದೈವಾನುಗ್ರಹಕ್ಕೆ ಪಾತ್ರನಾಗಲು ಅತ್ಯಾಸಕ್ತನಾಗಿರುವವನ ದೇಹಭಂಗಿ, ಕೈಗಳ ಮುದ್ರೆ; ನಮಸ್ಕಾರಮುದ್ರೆ.
  • ಆಂಗಿರಸಂ ಗಯಮ್— ಋಗ್ವೇದಸಂಹಿತೆಯ ೬.೩೫.೫ರ ಮಂತ್ರದ್ರಷ್ಟಾರನು ತನ್ನ ವಂಶವನ್ನು ಅಂಗೀರಸವೆನ್ನುತ್ತಾನೆ. ೪.೪೦.೧ರಲ್ಲಿ ಬೃಹಸ್ಪತಿಯು ಅಂಗಿರಸರ ನಾಯಕನೆನ್ನಲಾಗಿದೆ. ಹಾಗೆಯೇ, “ಉಷಸ್ ”ನು ಅಂಗಿರಸರಲ್ಲಿ ಮೊದಲಿಗನು (ಋ.೭.೭೫.೧; ೭೯.೩). ಅಂಗಿರಸನು ವಿವಿಧರೀತಿಗಳಲ್ಲಿ ವೈದಿಕ ಋಷಿಗಳೊಂದಿಗೆ ಸಂಬಂಧವಿರುವ / ಸಂಪರ್ಕವಿರುವ ಪ್ರಾಚೀನ ಮಹರ್ಷಿಯೆನಿಸಿರುವನು. ತಾರ್ಕ್ಷ್ಯನು ಇಲ್ಲಿ ಅಂಗಿರಸರ ಬಹುಮೂಲ್ಯ ಆಶ್ರಯಸ್ಥಾನವೆನ್ನಲಾಗಿದೆ.
  • ಸ್ವಸ್ತಿ ಆತ್ರೇಯಮ್— ಅತ್ರಿಯು ಸೂರ್ಯನನ್ನು ರಾಹುವೆಂಬ ದೈತ್ಯನ ಕರಾಳಬಂಧದಿಂದ ಬಿಡುಗಡೆಗೊಳಿಸಿದನು (ಋ.೫.೪೦). ಹಾಗಾಗಿ, ಸೌರದೇವತೆ / ಸೂರ್ಯಸಂಬಂಧಿ ದೇವತೆಯಾದ ತಾರ್ಕ್ಷ್ಯನ ಸ್ತುತಿಯು ಅತ್ರಿಯೊಂದಿಗೆ ಬಂದಿರುವುದು ನಿರೀಕ್ಷಿತ.

೩೮) ವೃದ್ಧಶ್ರವಾಃ, ಪೂಷಾ, ತಾರ್ಕ್ಷ್ಯ, ಬೃಹಸ್ಪತಿ— ಇವರು ಯಾರು? ತಾರ್ಕ್ಷ್ಯನು ಅರಿಷ್ಟನೇಮಿಯೆಂದೇಕೆ ಕರೆಯಲ್ಪಟ್ಟಿರುವನು?

ಸ್ವಸ್ತಿ ನ ಇಂದ್ರೋ ವೃದ್ಧಶ್ರವಾಃ ಸ್ವಸ್ತಿ ನಃ ಪೂಷಾ ವಿಶ್ವವೇದಾಃ | ಸ್ವಸ್ತಿ ನಸ್ತಾರ್ಕ್ಷ್ಯೋ ಅರಿಷ್ಟನೇಮಿಃ ಸ್ವಸ್ತಿ ನೋ ಬೃಹಸ್ಪತಿರ್ದಧಾತು ||

ಪದ-ವಿಭಾಗಃ—

ಸು ಅಸ್ತಿ ನಃ ಇಂದ್ರಃ ವೃದ್ಧಶ್ರವಾಃ ಸು ಅಸ್ತಿ ನಃ ಪೂಷಾ ವಿಶ್ವವೇದಾಃ | ಸು ಅಸ್ತಿ ನಃ ತಾರ್ಕ್ಷ್ಯಃ ಅರಿಷ್ಟನೇಮಿಃ ಸು ಅಸ್ತಿ ನಃ ಬೃಹಃ ಪತಿಃ ದಧಾತು ||

ಅನ್ವಯಾರ್ಥಃ—

ವೃದ್ಧಶ್ರವಾಃ ಇಂದ್ರಃ— ವೃದ್ಧನಾದ ದೇವಗುರು ಬೃಹಸ್ಪತಿಯ ಮಾತನ್ನು ಶ್ರವಣಮಾಡಿ ಅನುಸರಿಸುವ / ಬಹು ಕೀರ್ತಿಯುಳ್ಳವನಾದ ದೇವೇಂದ್ರನು,

ನಃ ಸ್ವಸ್ತಿ (ದಧಾತು)— ನಮಗೆ ಮಂಗಲವನ್ನೀಯಲಿ.

ವಿಶ್ವವೇದಾಃ ಪೂಷಾ— ಸರ್ವಜ್ಞನಾದ ಪೂಷನ್ ದೇವನು,

ನಃ ಸ್ವಸ್ತಿ (ದಧಾತು)— ನಮಗೆ ಶುಭವೀಯಲಿ.

ಅರಿಷ್ಟನೇಮಿಃ ತಾರ್ಕ್ಷ್ಯಃ— ಅನಿಷ್ಟಗಳನ್ನು ನಾಶಮಾಡುವ ವಿಷ್ಣುವಾಹನ ಗರುಡನು,

ನಃ ಸ್ವಸ್ತಿ ದಧಾತು— ನಮಗೆ ಹಿತವನ್ನೀಯಲಿ.

(ದೇವಗುರುಃ) ಬೃಹಸ್ಪತಿಃ ನಃ ಸ್ವಸ್ತಿ ದಧಾತು— (ದೇವಗುರುಗಳಾದ) ಬೃಹಸ್ಪತಿಗಳು ನಮಗೆ ಒಳ್ಳಿತನ್ನೀಯಲಿ.

ಭಾವಾರ್ಥಃ ವಿವರಣಂ ಚ—

“ವೃದ್ಧಾತ್ ಬೃಹಸ್ಪತೇಃ ಶೃಣೋತಿ ಇತಿ ವೃದ್ಧಶ್ರವಾಃ”— ವಯೋವೃದ್ಧನೂ, ಜ್ಞಾನವೃದ್ಧನೂ ಆದ ದೇವಗುರು ಬೃಹಸ್ಪತಿಯ ಮಾತನ್ನು ಪಾಲಿಸುವವ ಎಂಬುದರಿಂದ ಇಂದ್ರನನ್ನು ವೃದ್ಧಶ್ರವಾಃ ಎನ್ನಲಾಗಿದೆ. ಅಲ್ಲದೆ, “ವೃದ್ಧೇಭ್ಯಃ ಶೃಣೋತಿ ಇತಿ”— ಹಿರಿಯರ ಮಾತನ್ನಾಲಿಸುವವನು, ಪಾಲಿಸುವವನು. “ವೃದ್ಧಂ ಪ್ರಭೂತಂ ಶ್ರವಃ ಶ್ರವಣಂ ಸ್ತೋತ್ರಂ ಹವಿರ್ಲಕ್ಷಣಮನ್ನಂ ವಾ ಯಸ್ಯ”— ಅತಿಯಾದ ಸ್ತುತಿ, ಪ್ರಶಂಸೆ, ಕೀರ್ತಿಗಳು ಯಾವನದೋ ಅವನು ಅಥವಾ ಬಹುವಾದ ಹವಿಸ್ಸಿನ ರೂಪವಾದ ಅನ್ನ / ದೊಡ್ಡ ಹವಿರ್ಭಾಗವು ಯಾವನದೋ ಅವನು ಇಂದ್ರನು, ದೇವತೆಗಳ ಒಡೆಯ, ಮನಸ್ಸಿನ ಅಧಿದೇವತೆ, ಸಕಲೇಂದ್ರಿಯಾಭಿಮಾನೀ ದೇವತೆಗಳ ಅಧಿಪತಿ ಸಕಲೇಂದ್ರಿಯಗಳೊಡೆಯನಾದ ಮನಸ್ಸಿನ ಅಭಿಮಾನಿಯಾದ ಇಂದ್ರನು. “ವೃದ್ಧಂ ಶ್ರವಃ ಧನಂ ಕೀರ್ತಿಃ ವಾ ಯಸ್ಯ”— ಅಧಿಕವಾದ ಸಂಪತ್ತು ಅಥವಾ ಕೀರ್ತಿ, ಪ್ರಸಿದ್ಧಿಗಳು ಯಾವನದೋ ಅವನು. ಪುರಾಣಗಳಲ್ಲಿ ಹಲವೆಡೆ ಇಂದ್ರನನ್ನು ತೆಗಳಿದರೂ, ವೇದಗಳಲ್ಲಿ ಇಂದ್ರಸ್ತುತಿಯು ಬಹುವಾಗಿದೆ.

“ಇಂದತೇ ಇತಿ ಇಂದ್ರಃ”— ‘ಇದಿ ಪರಮೈಶ್ವರ್ಯೇ’ ಧಾತು. ಶ್ರೇಷ್ಠವಾದ ಆಧ್ಯಾತ್ಮಿಕ ಸಂಪತ್ತು / ಬ್ರಹ್ಮಜ್ಞಾನವುಳ್ಳವನೇ ಇಂದ್ರ.

“ವಿಶ್ವಂ ಸರ್ವಂ ವೇತ್ತಿ ಇತಿ ವಿಶ್ವವೇದಾಃ”— ವಿಶ್ವವನ್ನೇ / ಎಲ್ಲವನ್ನು ತಿಳಿಯುತ್ತಾನೆ / ತಿಳಿದವನು ಎಂಬುದು ವಿಶ್ವವೇದಾಃ ಪದದ ಅರ್ಥ. ಸರ್ವಜ್ಞ ಎಂದರ್ಥ.

“ಪೂಷತಿ ಇತಿ ಪೂಷ ವೃದ್ಧೌ ಧಾತೋಃ ನಿಷ್ಪನ್ನಃ ಪೂಷನ್ ಶಬ್ದಃ, ತಸ್ಯ ಪ್ರಥಮೈಕವಚನಂ ಪೂಷಾ ಇತಿ ಸೂರ್ಯವಾಚಕಃ”— ಜಗದ ಸಕಲ ಜೀವರನ್ನು ಆಹಾರಾದಿಗಳನ್ನು ಸೃಜಿಸಿ ಪೋಷಿಸುತ್ತಾನೆ, ಬೆಳೆಸುತ್ತಾನೆ ಎಂಬರ್ಥ ಕೊಡುವ ಪೂಷನ್ ಶಬ್ದವು ಪೂಷ ವೃದ್ಧೌ ಧಾತುಜನ್ಯವಾಗಿದೆ. ಅದರ ಪ್ರಥಮಾವಿಭಕ್ತಿ ಏಕವಚನವು ಪೂಷಾ ಎಂದಾಗಿದೆ. ಅಲ್ಲದೆ,
“ಧಾತಾ ಮಿತ್ರೋऽರ್ಯಮಾ ಶಕ್ರೋ ವರುಣಸ್ತ್ವಂಶ ಏವ ಚ |
ಭಗೋ ವಿವಸ್ವಾನ್ ಪೂಷಾ ಚ ಸವಿತಾ ದಶಮಸ್ತಥಾ ||
ಏಕಾದಶಸ್ತಥಾ ತ್ವಷ್ಟಾ ದ್ವಾದಶೋ ವಿಷ್ಣುರುಚ್ಯತೇ |
ಜಘನ್ಯಜಸ್ತು ಸರ್ವೇಷಾಮಾದಿತ್ಯಾನಾಂ ಗುಣಾಧಿಕಃ ||”
— ಮಹಾಭಾರತೇ ೧.೬೫.೧೫ -೧೬.
ಹೀಗೆ ಮಹಾಭಾರತದ ಪ್ರಕಾರ, ಧಾತಾ, ಅರ್ಯಮಾ, ಶಕ್ರ (ಇಂದ್ರ), ವರುಣ, ಅಂಶ, ಭಗ, ವಿವಸ್ವಾನ್, ಪೂಷಾ, ಹತ್ತನೆಯವನಾದ ಸವಿತಾ, ಹಾಗೆಯೇ, ೧೧ನೆಯವನಾದ ತ್ವಷ್ಟಾ, ಹಾಗೂ ೧೨ನೆಯವನಾದ ವಿಷ್ಣುವು— ಇವರು ಕಶ್ಯಪ ಹಾಗೂ ಅದಿತಿದೇವಿಯ ೧೨ ಮಕ್ಕಳಾದ ದ್ವಾದಶ ಆದಿತ್ಯರು. ಇವರಲ್ಲಿ, ಕೊನೆಯವನಾದ ವಿಷ್ಣುವು ಎಲ್ಲರಿಗಿಂತ ಶ್ರೇಷ್ಠನು. ಇಲ್ಲಿ ಪೂಷನ್ನನು ದ್ವಾದಶಾದಿತ್ಯರಲ್ಲಿ ೯ನೆಯವನು.
ಇಂತಹ ಸೂರ್ಯ / ಪೂಷನ್ನನು ಲೋಕದೀಪಕನಾಗಿ, ಸಕಲರ ಕರ್ಮಸಾಕ್ಷಿಯಾಗಿ, ವಿಶ್ವವೇದ / ಸರ್ವಜ್ಞನೂ ಹೌದು.

“ಅರಿಷ್ಟಾನ್ ಅಶುಭಾನ್ ಉಪದ್ರವಾನ್ ನಯತಿ ವಿನಾಶಮ್ ಇತಿ ಅರಿಷ್ಟನೇಮಿಃ”— ಸಕಲ ತೊಂದರೆಗಳನ್ನು ವಿನಾಶದೆಡೆಗೆ ಒಯ್ಯುತ್ತಾನೆಂಬುದರಿಂದ ತಾರ್ಕ್ಷ್ಯನೆಂದೆನಿಸಿದ ಗರುಡನು ಅರಿಷ್ಟನೇಮಿಯೆನಿಸಿರುವನು. ಅಲ್ಲದೆ,
“ತಾರ್ಕ್ಷ್ಯಶ್ಚಾರಿಷ್ಟನೇಮಿಶ್ಚ ಗರುಡಶ್ಚ ಮಹಾಬಲಃ |
ಅರುಣಶ್ಚಾರುಣಿಶ್ಚೈವ ವಿನತಾಯಾಃ ಸುತಾಃ ಸ್ಮೃತಾಃ ||”
— ಹರಿವಂಶೇ
ಮಹಾಭಾರತದ ಖಿಲ (ಪ್ರಕ್ಷಿಪ್ತ / ಉಳಿಕೆ / ಶೇಷ) ಭಾಗವಾದ ಹರಿವಂಶದ ಪ್ರಕಾರ, ತಾರ್ಕ್ಷ್ಯ, ಅರಿಷ್ಟನೇಮಿ, ಮಹಾಬಲಶಾಲಿಯಾದ ಗರುಡ, ಸೂರ್ಯಸಾರಥಿಯಾದ ಅರುಣ ಹಾಗೂ ಅರುಣಿ— ಇವರು  ವಿನತೆಯ ಮಕ್ಕಳೆಂದು ಸ್ಮರಿಸಲ್ಪಟ್ಟಿದ್ದಾರೆ. ಹೀಗೆ, ಸಕಲ ಪಾಪವಿದೂರನಾದ ವಿಷ್ಣುವಾಹನನಾದ ವೈನತೇಯ ಗರುಡನನ್ನು ಸ್ಮರಿಸಲಾಗಿದೆ.

“ಬೃಹತ್ಯಾಃ ವಾಚಃ ಪತಿಃ ಬೃಹಸ್ಪತಿಃ”— ಬೃಹತ್ತಾದ ವಾಕ್ಕಿನ ಪತಿಯು ಬೃಹಸ್ಪತಿಯು, ದೇವಗುರುವು.

ಹೀಗೆ, ಸುಪ್ರಸಿದ್ಧನಾದ ಇಂದ್ರನೂ, ಸರ್ವಜ್ಞನಾದ ಸೂರ್ಯನೂ, ಅರಿಷ್ಟನಾಶಕನಾದ ಗರುಡನೂ, ದೇವಪುರೋಹಿತನಾದ ವಾಕ್ಪತಿ / ವಾಗೀಶ / ವಾಚಸ್ಪತಿ / ಬೃಹಸ್ಪತಿಯೂ ನಮಗೆ ಮಂಗಳವುಂಟುಮಾಡಲೆಂಬುದು ಈ ಸ್ವಸ್ತಿವಾಚನ ಮಂತ್ರದ ಸಾರ.

೩೯) ಸರ್ವಸ್ವರೂಪಿಯಾದ ಭಗವಂತನೆಂದರೆ ಯಾರು? ಅವನನ್ನು ಏನೆಂದು ಪ್ರಾರ್ಥಿಸಬೇಕು?

ಸರ್ವೇಷು ಕಾಲೇಷು ಸಮಸ್ತದೇಶೇಷ್ವಶೇಷಕಾರ್ಯೇಷು ತಥೇಶ್ವರೇಶ್ವರಃ | ಸರ್ವಸ್ವರೂಪೀ ಭಗವಾನನಾದಿರ್ಮಮಾಸ್ತು ಮಾಂಗಲ್ಯವಿವೃದ್ಧಯೇ (ಮಾಂಗಲ್ಯಾಭಿವೃದ್ಧಯೇ) ಹರಿಃ ||

ಪದ-ವಿಭಾಗಃ—

ಸರ್ವೇಷು ಕಾಲೇಷು ಸಮಸ್ತ-ದೇಶೇಷು ಅ-ಶೇಷ-ಕಾರ್ಯೇಷು ತಥಾ ಈಶ್ವರ-ಈಶ್ವರಃ | ಸರ್ವ-ಸ್ವರೂಪೀ ಭಗವಾನ್ ಅನಾದಿಃ ಮಮ ಅಸ್ತು ಮಾಂಗಲ್ಯ-ವಿ-ವೃದ್ಧಯೇ (ಮಾಂಗಲ್ಯ-ಅಭಿವೃದ್ಧಯೇ) ಹರಿಃ ||

ಅನ್ವಯಾರ್ಥಃ—

ಸರ್ವೇಷು ಕಾಲೇಷು— ಎಲ್ಲಾ ಕಾಲಗಳಲ್ಲೂ (ಯಾವಾಗಲೂ, ಸದಾ, ಸರ್ವದಾ, ಕಷ್ಟಕಾಲದಲ್ಲೂ, ಸುಖಕಾಲದಲ್ಲೂ, ಹಗಲೂ, ಇರುಳೂ, ಬೇಸಿಗೆ-ಮಳೆ-ಚಳಿಗಾಲಗಳಲ್ಲೂ);

ಸಮಸ್ತ-ದೇಶೇಷು— ಎಲ್ಲಾ ಪ್ರದೇಶಗಳಲ್ಲೂ (ಎಲ್ಲಾ ದೇಶಗಳಲ್ಲೂ, ನಾವು ಎಲ್ಲಿದ್ದರೂ);

ತಥಾ ಅ-ಶೇಷ-ಕಾರ್ಯೇಷು— ಹಾಗೆಯೇ, ಎಲ್ಲಾ ಕಾರ್ಯಗಳಲ್ಲೂ (ನಾವು ಮಾಡುವ ಎಲ್ಲ ಕೆಲಸಗಳಲ್ಲಿ ಒಂದನ್ನೂ ಬಿಡದೆ ಎಲ್ಲದರಲ್ಲೂ; ಲೌಕಿಕ ವ್ಯವಹಾರ, ಕೃಷಿ ಮುಂತಾದವುಗಳಲ್ಲೂ, ಧಾರ್ಮಿಕ-ಆಧ್ಯಾತ್ಮಿಕ ಸ್ವಾಧ್ಯಾಯ, ಪೂಜಾಯಜ್ಞಾದಿಗಳಲ್ಲೂ);

ಈಶ್ವರ-ಈಶ್ವರಃ— ಸಕಲ ಅಧಿಪತಿಗಳ ಸಾರ್ವಭೌಮ ಚಕ್ರವರ್ತಿಯಾದ ಪರಮೇಶ್ವರ ಭಗವಂತನಾದ (ಈಶ್ವರಾಣಾಮ್ ಈಶ್ವರಃ);

ಸರ್ವ-ಸ್ವರೂಪೀ— ವಿಶ್ವದ / ಸೃಷ್ಟಿಯ ಎಲ್ಲದರ ಮೂಲಸ್ವರೂಪವೇ ತಾನಾಗಿರುವ,

ಅನಾದಿಃ ಭಗವಾನ್#— ಆದಿಯಿಲ್ಲದೆ ಅನಾದಿಯೆನಿಸಿದ, ಭಗವಂತನು,

ಹರಿಃ— ಶ್ರೀಹರಿಯೆನಿಸಿದ ಮಹಾವಿಷ್ಣುವು (ಹರಿರ್ಹರತಿ ಪಾಪಾನಿ— ತನ್ನ ಭಕ್ತರ ಸಕಲ ದುರಿತಗಳನ್ನು ಪರಿಹರಿಸುವುದರಿಂದಲೂ, ಗಜೇಂದ್ರನ ಆರ್ತ ಮೊರೆಗೆ ಓಗೊಟ್ಟು ಮೊಸಳೆಯಿಂದಲೂ, ಸಂಸಾರಬಂಧನದಿಂದಲೂ ಅದನ್ನು ಮುಕ್ತಿಗೊಳಿಸಿ, ಕಷ್ಟಪರಿಹರಿಸಿದ್ದರಿಂದಲೂ ಹರಿಯೆನಿಸಿದ ಶ್ರೀಮನ್ನಾದಿನಾರಾಯಣನು);

ಮಮ ಮಾಂಗಲ್ಯವಿವೃದ್ಧಯೇ (ಮಾಂಗಲ್ಯಾಭಿವೃದ್ಧಯೇ) ಅಸ್ತು— ನನ್ನ (ನಮ್ಮ) ಶುಭವನ್ನು, ಹಿತವನ್ನು, ಮಂಗಲವನ್ನು ವರ್ಧಿಸಲಿ, ಹೆಚ್ಚಿಸುವವನಾಗಲಿ. (ಲೌಕಿಕ / ಐಹಿಕ ಹಾಗೂ ಪಾರಲೌಕಿಕ / ಆಮುಷ್ಮಿಕ ಅಭಿವೃದ್ಧಿಯನ್ನುಂಟುಮಾಡುವವನಾಗಲಿ.)

೪೦) ಭಗವಾನ್ ಶಬ್ದದ ಅರ್ಥವ್ಯಾಪ್ತಿಯೇನು?

# ಭಗವಾನ್—

ತದ್ಬ್ರಹ್ಮ ತತ್ಪರಂ ಧಾಮ ತದ್ಧ್ಯೋऽಯಂ ಮೋಕ್ಷಕಾಂಕ್ಷಿಣಾ |
ಶ್ರುತಿವಾಕ್ಯೋದಿತಂ ಸೂಕ್ಷ್ಮಂ ತದ್ವಿಷ್ಣೋಃ ಪರಮಂ ಪದಮ್ ||

ವೇದೋಪನಿಷದ್ವಾಕ್ಯಗಳಲ್ಲಿ ಹುಟ್ಟಿದ ಅತಿಸೂಕ್ಷ್ಮವೂ ಗಹನವೂ ಆದ “ತತ್” ಪದದ ವಾಚ್ಯನಾಗಿ ಬ್ರಹ್ಮ (ನಕಾರಾಂತ ನಪುಂಸಕಲಿಂಗ ಬ್ರಹ್ಮನ್ ಶಬ್ದವು ಪರಬ್ರಹ್ಮವಾಚಕ, ಪುಲ್ಲಿಂಗ ಬ್ರಹ್ಮನ್ ಶಬ್ದವು ಚತುರ್ಮುಖ ಸೃಷ್ಟಿಕರ್ತನಾದ ಬ್ರಹ್ಮಾ ಎಂಬವನ ವಾಚಕ) / ಪರಬ್ರಹ್ಮನೆನಿಸಿದ, ಮೋಕ್ಷಕಾಂಕ್ಷಿಯಿಂದ ಯಾವ ಪರಮಧಾಮವು ಬಯಸಲ್ಪಡುವುದೋ ಅಂತಹ ವೈಕುಂಠವೂ ಆದ, ಆ ವಿಷ್ಣುವಿನ ಪರಮಪದ / ಸ್ಥಾನವೇ,

ತದೇವ ಭಗವದ್ವಾಚ್ಯಂ ಸ್ವರೂಪಂ ಪರಮಾತ್ಮನಃ |
ವಾಚಕೋ ಭಗವಚ್ಛಬ್ದಃ ತಸ್ಯಾದ್ಯಸ್ಯಾಕ್ಷರಾತ್ಮನಃ ||

ಅದೇ / ಪರಮಾತ್ಮನ ಆ ಸ್ವರೂಪವೇ “ಭಗವತ್” ಶಬ್ದದಿಂದ ಕರೆಯಲ್ಪಟ್ಟಿರುವುದು. ಸರ್ವಕ್ಕೂ ಆದ್ಯಕಾರಣನೂ, ಆದಿಮೂಲನೂ ಆದ ಆ ನಾಶವಿರದ ಅ-ಕ್ಷರಾತ್ಮನ ವಾಚಕವೇ ತಕಾರಾಂತ ಪುಲ್ಲಿಂಗ “ಭಗವತ್” ಶಬ್ದವು. ಇದು ಭಗವಾನ್, ಭಗವನ್ತೌ, ಭಗವನ್ತಃ ಎಂದು ಪ್ರಥಮಾವಿಭಕ್ತಿಯ ಏಕವಚನ, ದ್ವಿವಚನ, ಬಹುವಚನಗಳಲ್ಲಿ ರೂಪತಾಳುತ್ತದೆ. “ನ ಕ್ಷರತಿ ಇತಿ ಅಕ್ಷರಃ”— ನಾಶವಾಗದ್ದು ಎಂಬುದರಿಂದಾಗಿ ಅ-ಕ್ಷರ.

ಏವಂ ನಿಗದಿತಾರ್ಥಸ್ಯ ನ ತತ್ತ್ವಂ ತಸ್ಯ ತತ್ತ್ವತಃ |
ಜ್ಞಾಯತೇ ಯೇನ ತಜ್ಜ್ಞಾನಂ ಪರಮನ್ಯತ್ ತ್ರಯೀಮಯಮ್ ||

ಆ ಭಗವತ್ ತತ್ತ್ವವು ಹೀಗೆ ನಿಗದಿತವಾದ ಅರ್ಥವನ್ನು ಹೊಂದಿದೆಯೆಂಬುದೇ ವೇದಸಮ್ಮತವಾದ ಜ್ಞಾನವೆಂದು ತಾತ್ತ್ವಿಕವಾಗಿ  ಯಾರಿಂದ ತಿಳಿಯಲ್ಪಡುವುದೋ, ಅದಕ್ಕಿಂತ ಶ್ರೇಷ್ಠವಾದ ಜ್ಞಾನ ಬೇರೊಂದಿಲ್ಲ.

ಅಶಬ್ದಗೋಚರಸ್ಯಾಪಿ ತಸ್ಯೈವ ಬ್ರಹ್ಮಣೋ ದ್ವಿಜ |
ಪೂಜಾಯಾಂ ಭಗವಚ್ಛಬ್ದಃ ಕ್ರಿಯತೇ ಹ್ಯೌಪಚಾರಿಕಃ ||

ಹೇ ದ್ವಿಜನೆ! “ಯತೋ ವಾಚೋ ನಿವರ್ತನ್ತೇ ಅಪ್ರಾಪ್ಯ ಮನಸಾ ಸಹ”― ಮಾತು ಮತ್ತು ಮನಸ್ಸುಗಳು ಯಾವನನ್ನು ತಲುಪಲಾರದೆ ಹಿಂದಿರುಗುವುವೋ ಅಂತಹ, ಶಬ್ದಕ್ಕೆ ಗೋಚರನಲ್ಲದ ಅದೇ ಬ್ರಹ್ಮದ ಪೂಜೆಯಲ್ಲಿ ಔಪಚಾರಿಕವಾಗಿ / ಉಪಚಾರಕ್ಕಾಗಿ “ಭಗವತ್” ಶಬ್ದವು ಪ್ರಯೋಗಿಸಲ್ಪಡುವುದು.

ಶುದ್ಧೇ ಮಹಾವಿಭೂತ್ಯಾಖ್ಯೇ ಪರೇ ಬ್ರಹ್ಮಣಿ ವರ್ತತೇ |
ಮೈತ್ರೇಯ! ಭಗವಚ್ಛಬ್ದಃ ಸರ್ವಕಾರಣಕಾರಣೇ ||

ಹೇ ಮೈತ್ರೇಯನೆ! ಎಲ್ಲ ಕಾರಣಗಳಿಗೂ ಮೂಲಕಾರಣವಾದ ಮಹಾವಿಭೂತಿ / ಮಹಿಮೆಯುಳ್ಳ ಶುದ್ಧಪರಬ್ರಹ್ಮದಲ್ಲಿ ಭಗವತ್ ಶಬ್ದವು ನೆಲೆಸಿರುವುದು.

ಸಂಭರ್ತ್ತೇತಿ ತಥಾ ಭರ್ತ್ತಾ ಭಕಾರೋऽರ್ಥದ್ವಯಾನ್ವಿತಃ |
ತೇನಾಗಮಯಿತಾ ಸ್ರಷ್ಟಾ ಗಕಾರಾರ್ಥಸ್ತಥಾ ಮುನೇ ||

ಹೇ ಮುನಿಯೆ! ಜಗವನ್ನೆಲ್ಲ ತುಂಬುವವನು / ಸಂಭರ್ತಾ / ಭರಣಮಾಡುವವನು (ಭರಣಿ— ತುಂಬಿಸಿಡುವಂಥದ್ದು) ಹಾಗೂ ಜಗಕ್ಕೆಲ್ಲ ಭರ್ತಾ / ಪತಿಯೂ ಆಗಿರುವನೆಂಬ ೨ ಅರ್ಥಗಳು ಮೊದಲ ಅಕ್ಷರವಾದ ಭಕಾರಕ್ಕಿದೆ. ಆತನಿಂದಲೇ ಆಗಮಿಸಿರುವುದು / ಹೊರಬಂದಿರುವುದು ಈ ಸಮಸ್ತಸೃಷ್ಟಿ ಹಾಗೂ ಇದರ ಮೂಲ ಸ್ರಷ್ಟಾ / ಸೃಷ್ಟಿಕರ್ತನು ಆ ಪರಬ್ರಹ್ಮವೇ ಎಂಬುದು ೨ನೆಯದಾದ ಗಕಾರದ ಅರ್ಥ.

ಐಶ್ವರ್ಯಸ್ಯ ಸಮಗ್ರಸ್ಯ ವೀರ್ಯ್ಯಸ್ಯ ಯಶಸಃ ಶ್ರಿಯಃ |
ಜ್ಞಾನವೈರಾಗ್ಯಯೋಶ್ಚೈವ ಷಣ್ಣಾಂ ಭಗ ಇತೀಂಗನಾ ||

ಸಮಗ್ರವಾದ / ಪರಿಪೂರ್ಣವಾದ—  ಈಶ್ವರತ್ವ / ಆಧಿಪತ್ಯ / ಐಶ್ವರ್ಯ, ವೀರ್ಯ / ಪರಾಕ್ರಮ, ಯಶಸ್ಸು / ಕೀರ್ತಿ, ಶ್ರೀ / ಸಂಪತ್ತು, ಜ್ಞಾನ ಹಾಗೂ ವೈರಾಗ್ಯ— ಈ ಆರಕ್ಕೆ ಭಗ ಎಂದು ಹೆಸರು. ಇವೆಲ್ಲವೂ ಪರಿಪೂರ್ಣವಾಗಿರುವವನೇ ಭಗವಾನ್ / ಭಗವಂತನು.

ವಸಂತಿ ಯತ್ರ ಭೂತಾನಿ ಭೂತಾತ್ಮನ್ಯಖಿಲಾತ್ಮನಿ |
ಸ ಚ ಭೂತೇಷ್ವಶೇಷೇಷು ವಕಾರಾರ್ಥಸ್ತತೋऽವ್ಯಯಃ ||

ಎಲ್ಲಿ / ಯಾರಲ್ಲಿ, ಸಕಲ ಭೂತಾತ್ಮನೂ ಅಖಿಲಾತ್ಮನೂ / ಸರ್ವಾತ್ಮನೂ ಆಗಿರುವ ಪರಮಾತ್ಮನಲ್ಲಿ ಎಲ್ಲ ಚರಾಚರಗಳೂ ವಾಸವಾಗಿವೆಯೋ ಹಾಗೆಯೇ, ಅಶೇಷವಾದ / ಉಳಿಕೆಯಿರದ ಸರ್ವಭೂತಗಳಲ್ಲೂ ಯಾವ ಅವ್ಯಯನು / ಅವಿನಾಶಿಯು ವಾಸವಾಗಿರುವನೋ, ಆ ಪರಮಾತ್ಮನ ಭಗವತ್ ಶಬ್ದದ “ವ” ಕಾರವು ಈ ರೀತಿಯ ವಾಸವಾಗಿರುವಿಕೆಯಿಂದ ಬಂದಿದೆ.

ಏವಮೇವ ಮಹಾಬಾಹೋ! ಭಗವಾನಿತಿ ಸತ್ತಮ |
ಪರಮಬ್ರಹ್ಮಭೂತಸ್ಯ ವಾಸುದೇವಸ್ಯ ನಾನ್ಯಗಃ ||

ಈ ರೀತಿಯಾಗಿ ಎಲೈ ಮಹಾಬಾಹುವೇ! ಸಾತ್ವಿಕರಲ್ಲಿ ಶ್ರೇಷ್ಠನೇ!! ಪರಮ ಬ್ರಹ್ಮನಾದ ಪರಬ್ರಹ್ಮನಾದ ವಾಸುದೇವನಿಗೇ ಭಗವಾನ್ ಎಂಬ ಹೆಸರೇ ಹೊರತು ಬೇರೆಯವರಿಗೆ ಸಲ್ಲುವುದಿಲ್ಲ.

ತತ್ರ ಪೂಜ್ಯ-ಪದಾರ್ಥೋಕ್ತಿ-ಪರಿಭಾಷಾ-ಸಮನ್ವಿತಃ |
ಶಬ್ದೋऽಯಂ ನೋಪಚಾರೇಣ ಅನ್ಯತ್ರ ಹ್ಯುಪಚಾರತಃ ||

ಆ ವಾಸುದೇವನ ಕುರಿತು ಹೇಳುವ ಸಂದರ್ಭದಲ್ಲಿ ಹಾಗೂ ಪೂಜ್ಯವಾದ ಪದ-ಅರ್ಥ-ಉಕ್ತಿ / ಮಾತು- ಪರಿಭಾಷೆಗಳಿಂದ ಕೂಡಿದ ಈ ಭಗವಾನ್ ಶಬ್ದವು ಕೇವಲ ಉಪಚಾರಮಾತ್ರವಾಗಿರದೇ ನಿಜಾರ್ಥದಲ್ಲೂ ಅನ್ವಯಿಸುವುದು. ಆದರೆ, ಬೇರೆಡೆಗಳಲ್ಲಿ ಕೇವಲ ಉಪಚಾರಕ್ಕಾಗಿ / ಶಿಷ್ಟಾಚಾರಕ್ಕಾಗಿ ಮಾತ್ರ ಭಗವಾನ್ ಶಬ್ದದ ಪ್ರಯೋಗವಿದೆ.

ಉತ್ಪತ್ತಿಂ ಪ್ರಲಯಂ ಚೈವ ಭೂತಾನಾಮಗತಿಂ ಗತಿಮ್ |
ವೇತ್ತಿ ವಿದ್ಯಾಮವಿದ್ಯಾಂ ಚ ಸ ವಾಚ್ಯೋ ಭಗವಾನಿತಿ ||

ಉತ್ಪತ್ತಿ, ಪ್ರಲಯ, ಸಕಲ ಭೂತಗಳ ಸ್ಥಾವರತ್ವ-ಜಂಗಮತ್ವಗಳು / ದುರ್ಗತಿ-ಸದ್ಗತಿಗಳು / ಆಗು-ಹೋಗುಗಳು ಹಾಗೂ ವಿದ್ಯೆ-ಅವಿದ್ಯೆಗಳು— ಈ ಆರನ್ನೂ ಯಾವನು ತಿಳಿಯುತ್ತಾನೋ ಅಂಥವನೇ ಭಗವಾನ್ ಎಂದು ಕರೆಯಲ್ಪಡುವನು.

ಜ್ಞಾನಶಕ್ತಿಬಲೈಶ್ವರ್ಯವೀರ್ಯ್ಯತೇಜಾಂಸ್ಯಶೇಷತಃ |
ಭಗವಚ್ಛಬ್ದವಾಚ್ಯಾನಿ ವಿನಾ ಹೇಯೈರ್ಗುಣಾದಿಭಿಃ ||
— ವಿಷ್ಣುಪುರಾಣೇ ಅಂಶಃ ೬, ಅಧ್ಯಾಯಃ ೫

ಹೇಯ / ತ್ಯಾಜ್ಯವಾದ ಗುಣಗಳ ಹೊರತಾದ, ಅಶೇಷವಾದ / ಪರಿಪೂರ್ಣವಾದ ಜ್ಞಾನ (ಸರ್ವಜ್ಞತ್ವ), ಶಕ್ತಿ (ಸರ್ವಶಕ್ತತ್ವ), ಬಲ (ಸರ್ವಬಲತ್ವ), ಐಶ್ವರ್ಯ (ಸಕಲೈಶ್ವರ್ಯತ್ವ), ವೀರ್ಯ / ಪರಾಕ್ರಮ (ಪೂರ್ಣಪರಾಕ್ರಮತ್ವ), ತೇಜಸ್ಸು (ಪರಿಪೂರ್ಣ ತೇಜಸ್ಸು)— ಇವುಗಳು ಭಗವತ್ ಶಬ್ದವಾಚ್ಯಗಳಾಗಿವೆ.
(ವಿಷ್ಣುಪುರಾಣದ ೬ನೆಯ ಅಂಶದ ೫ನೆಯ ಅಧ್ಯಾಯದಿಂದ)


೪೧) ಗಾಯತ್ರೀಮನ್ತ್ರದ ವಿಸ್ತಾರ ಹಾಗೂ ಅರ್ಥವೇನು?

ಓಂ ಭೂಃ | ತತ್ಸವಿತುರ್ವರೇಣ್ಯಮ್ | ಓಂ ಭುವಃ | ಭರ್ಗೋ ದೇವಸ್ಯ ಧೀಮಹಿ | ಓಗ್ಂ ಸುವಃ | ಧಿಯೋ ಯೋ ನಃ ಪ್ರಚೋದಯಾತ್ ||
ಓಂ ಭೂಃ | ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ | ಓಂ ಭುವಃ | ಧಿಯೋ ಯೋ ನಃ ಪ್ರಚೋದಯಾತ್ | ಓಗ್ಂ ಸುವಃ | ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋ ನಃ ಪ್ರಚೋದಯಾತ್ ||

ವಿವರಣಮ್—

ಓಂ ಭೂಃ— ಅಮ್ಮಾ ಭೂದೇವಿಯೇ! ನಿನಗೆ ನನ್ನ ನಮಸ್ಕಾರಗಳು.

ತತ್-ಸವಿತುಃ ವರೇಣ್ಯಮ್— ಆ ಭಾನುಮಂಡಲದಲ್ಲಿ ಗೋಚರಿಸುವ ಶ್ರೇಷ್ಠನೂ, ವರಣೀಯನೂ (ಸ್ವೀಕಾರಯೋಗ್ಯನೂ / ಉಪಾಸ್ಯನೂ) ಆದ ಸವಿತೃಸೂರ್ಯನನ್ನು ಪ್ರತ್ಯಕ್ಷವಾಗಿ ನೋಡಿ, ನಮಸ್ಕರಿಸಿ, ಸ್ತುತಿಸಿ, ಉಪಾಸಿಸುತ್ತೇನೆ.

ಓಂ ಭುವಃ— ಅಯ್ಯಾ ಅಂತರಿಕ್ಷವೆನಿಸಿದ ಭುವರ್ಲೋಕವೇ! ನಿನಗೆ ವಂದನೆಗಳು.

ಭರ್ಗೋ ದೇವಸ್ಯ ಧೀಮಹಿ— ಅಂತರಿಕ್ಷದಲ್ಲಿ ಗೋಚರಿಸುವ ಸೂರ್ಯದೇವನ ವರ್ಚಸ್ಸನ್ನು / ಪ್ರಭೆಯನ್ನು ಧ್ಯಾನಿಸುತ್ತೇವೆ. (“ಆದಿತ್ಯಾಂತರ್ಗತಂ ವರ್ಚೋ ಭರ್ಗಾಖ್ಯಂ ತನ್ಮುಮುಕ್ಷುಭಿಃ |
ಜನ್ಮಮೃತ್ಯುವಿನಾಶಾಯ ದುಃಖಸ್ಯ ತ್ರಿತಯಸ್ಯ ಚ ||
ಧ್ಯಾನೇನ ಪುರುಷೋ ಯಶ್ಚ ದ್ರಷ್ಟವ್ಯಃ ಸೂರ್ಯಮಂಡಲೇ ||— ಯೋಗಿಯಾಜ್ಞವಲ್ಕ್ಯೋಕ್ತಮ್ ಆಹ್ನಿಕತತ್ತ್ವಮ್.
“ಯದಾದಿತ್ಯಗತಂ ತೇಜೋ ಜಗದ್ಭಾಸಯತೇऽಖಿಲಮ್ |
ಯಚ್ಚಂದ್ರಮಸಿ ಯಚ್ಚಾಗ್ನೌ ತತ್ತೇಜೋ ವಿದ್ಧಿ ಮಾಮಕಮ್ ||— ಗೀತಾಚಾರ್ಯ ಕೃಷ್ಣೋಕ್ತಿ. ಆದಿತ್ಯಗತ ತೇಜಸ್ಸು ಸ್ವತಃ ಭಗವಂತನೇ ಎಂಬುದಕ್ಕಿದು ಆಧಾರ.)

ಓಗ್ಂ (ಓಂ) ಸುವಃ— ಹೇ ಸುವರ್ಲೋಕವೆನಿಸಿದ, ಸ್ವರ್ಲೋಕವೆನಿಸಿದ, ದೇವತೆಗಳ ನಿವಾಸವಾದ ಸ್ವರ್ಗಲೋಕವೇ! ನಿನ್ನನ್ನು ವಂದಿಸುತ್ತೇನೆ.

ಧಿಯೋ ಯೋ ನಃ ಪ್ರಚೋದಯಾತ್— ಯಾವ ಆದಿತ್ಯಮಂಡಲಾಂತರ್ಗತವಾದ ಭಗವತ್ತೇಜಸ್ಸಿದೆಯೋ ಅದರ ಮೂಲನಾದ ಭಗವಂತನು (ಯಃ), ನಮ್ಮ (ನಃ / ಅಸ್ಮಾಕಂ), ಬುದ್ಧಿಗಳನ್ನು (ಧಿಯಃ), ಪ್ರಚೋದಿಸಲಿ / ಸನ್ಮಾರ್ಗದಲ್ಲಿ ಪ್ರೇರಿಸಲಿ (ಪ್ರಚೋದಯಾತ್).

ಓಂ ಭೂಃ— ಹೇ ಸಕಲಜೀವಾಧಾರಭೂತವಾದ ಭೂಮಾತೆಯೇ! (ಭೂ ಆಧಾರೇ)/ ಹೇ ಯಜ್ಞಾಗ್ನಿಯೇ (ದೃಷ್ಟಿಗೋಚರವಾದ ಭೂಮಿಯಲ್ಲಿನ ಪವಿತ್ರವಾದ ಅಗ್ನಿಯೇ! ಭೂರಿತ್ಯಗ್ನಿಃ— ತೈತ್ತಿರೀಯೋಪನಿಷತ್) / ಅಕಾರವಾಚ್ಯನಾದ ಋಗ್ವೇದಮೂರ್ತಿಯೇ! / ಹೇ ಸರ್ವಾಧಾರನಾದ ಪರಮೇಶ್ವರನೇ!

ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ— ಸ್ವಪ್ರಕಾಶದಿಂದ ಬೆಳಗುವ(ದೀವ್ಯತಿ ಇತಿ ದೇವಃ, ತಸ್ಯ— ದೇವಸ್ಯ), ಆ ಸವಿತೃ ಸೂರ್ಯನಾರಾಯಣಾಂತರ್ಗತವಾದ ನಿನ್ನ (ತತ್-ಸವಿತುಃ) ವರಣೀಯವಾದ, ಶ್ರೇಷ್ಠವಾದ (ವರೇಣ್ಯಂ), ಜ್ಯೋತಿರ್ಮಂಡಲದ ಪ್ರಭೆಯನ್ನು (ಭರ್ಗಃ), ಧ್ಯಾನಿಸುತ್ತೇವೆ (ಧೀಮಹಿ).

ಓಂ ಭುವಃ— ಹೇ ಆಕಾಶವೇ! / ಹೇ ವಾಯುದೇವನೇ! (ಭುವ ಇತಿ ವಾಯುಃ— ತೈತ್ತಿರೀಯೋಪನಿಷತ್) / ಹೇ ಗಾಯತ್ರಿಯ ಸಪ್ತಮಹಾವ್ಯಾಹೃತಿಗಳಲ್ಲೊಬ್ಬನೇ! / ಉಕಾರವಾಚ್ಯನಾದ ಯಜುರ್ವೇದಪುರುಷನೇ! (“ಅಕಾರಂ ಚಾಪ್ಯುಕಾರಂ ಚ ಮಕಾರಂ ಚ ಪ್ರಜಾಪತಿಃ | ವೇದತ್ರಯಾನ್ನಿರದುಹತ್ ಭೂರ್ಭುವಸ್ಸುವರಿತೀತಿ ವಾ ||— ಮನುಸ್ಮೃತಿಃ ೨.೭೩; ಅಕಾರ— ಋಗ್ವೇದ, ಉಕಾರ- ಯಜುರ್ವೇದ; ಮಕಾರ— ಸಾಮವೇದ> >ಸೇರಿದರೆ ಓಂಕಾರ);

ಧಿಯೋ ಯೋ ನಃ ಪ್ರಚೋದಯಾತ್— ಆ ಆದಿತ್ಯಪ್ರಭಾಮಂಡಲಾಂತರ್ಗತನಾದ ನಾರಾಯಣನು (ಯಃ), ನಮ್ಮ ಬುದ್ಧಿ-ಚಿತ್ತಾದಿಗಳನ್ನು (ನಃ/ ಅಸ್ಮಾಕಂ ಧಿಯಃ), ಪ್ರಕೃಷ್ಟವಾಗಿ / ಚೆನ್ನಾಗಿ ಚೋದಿಸಲಿ / ಪ್ರೇರಿಸಲಿ; ಸದ್ಬುದ್ಧಿಯನ್ನು ಕರುಣಿಸಿ, ಸತ್ಕಾರ್ಯಪ್ರೇರಕನಾಗಲಿ; ಸಚ್ಚಿಂತನೆ (ಒಳ್ಳೆಯ ಯೋಚನೆ), ಸದ್ವಾಣಿ (ಒಳ್ಳೆಯ ಮಾತು) ಹಾಗೂ ಸತ್ಕೃತಿಗೆ (ಒಳ್ಳೆಯ ಕಾರ್ಯ) ಪ್ರಚೋದನೆಯನ್ನೀಯಲಿ.

ಓಗ್ಂ (ಓಂ) ಸುವಃ— ಹೇ ಪುಣ್ಯಧಾಮವಾದ ದೇವಲೋಕವೇ! ಸ್ವರ್ಗವೇ! ಸೌಂದರ್ಯಯುಕ್ತವಾಗಿ ದೇವತೆಗಳ ದಿವ್ಯಜ್ಯೋತಿಗಳಿಂದ ಶೋಭಾಯಮಾನವಾಗಿರುವ ಲೋಕವೇ! / ಮಕಾರವಾಚ್ಯನಾದ ಸಾಮವೇದಪುರುಷನೇ! ಆದಿತ್ಯನೇ!(ಸುವರಿತ್ಯಾದಿತ್ಯಃ— ತೈತ್ತಿರೀಯೋಪನಿಷತ್) ನಿನಗೆ ನಮಸ್ಕಾರವು.

ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋ ನಃ ಪ್ರಚೋದಯಾತ್—

ಲೋಕದ ಪ್ರಸವ / ಹುಟ್ಟಿಗೆ ಕಾರಣನಾದುದರಿಂದ ಪ್ರ-ಸವಿತೃವೆನಿಸಿದ ಪರಮಾತ್ಮನ ನೇತ್ರವೂ, ದಿವ್ಯತಮವೂ ಶ್ರೇಷ್ಠತಮವೂ ಪವಿತ್ರತಮವೂ ದೇದೀಪ್ಯಮಾನವೂ ಲೋಕದ ಬೆಳಕೂ ಆದ ಬಾನ ಭಾಸ್ಕರನ ಪ್ರಭಾಮಂಡಲವನ್ನು ನಾವೆಲ್ಲರೂ ಧ್ಯಾನಿಸೋಣ (ಧೀಮಹಿ— ಧ್ಯಾಯೇಮ). ಯಾವ ಆ ಜ್ಯೋತಿಸ್ವರೂಪೀ ಭಗವಂತನು ಕತ್ತಲೆ ಕಳೆದು ಹಗಲುಂಟುಮಾಡಿ ಸಕಲಜೀವರನ್ನೂ ತತ್ತತ್ ಕಾರ್ಯಾದಿಗಳಲ್ಲಿ ಚೋದಿಸುವಂತೆ, ನಮ್ಮ ಅಜ್ಞಾನದ ಅಂಧಕಾರವನ್ನು ಹೋಗಲಾಡಿಸಿ ಜ್ಞಾನಕಿರಣಗಳಿಂದ ನಮ್ಮ ಬುದ್ಧಿಗಳನ್ನು ಪ್ರಚೋದಿಸಿ, ಸುಜ್ಞಾನ, ಆತ್ಮಜ್ಞಾನ, ಬ್ರಹ್ಮಜ್ಞಾನ, ಲೋಕಜ್ಞಾನಾದಿಗಳನ್ನು ನಮಗಿತ್ತು ನಮ್ಮನ್ನು ಅನುಗ್ರಹಿಸಲಿ.

ಇದು ವೇದಮಾತೆಯೂ ವೇದಸಾರಭೂತವೂ ಆದ ಸವಿತೃ ಗಾಯತ್ರೀಮಂತ್ರದ ವಿಸ್ತಾರ. ಮುಂದೆ, ಚತುರ್ವೇದಾರಂಭ ಮಂತ್ರಗಳನ್ನು ಲಘುನ್ಯಾಸದಲ್ಲಿ ಉದ್ಧರಿಸಲಾಗಿದೆ.

೪೨) ಋಗ್ವೇದಾರಂಭಮಂತ್ರವು ಯಾವುದು? ಅದರ ವಿವಿಧ ಭಾಷ್ಯಗಳು / ಅರ್ಥವಿವರಣೆಗಳು ಯಾವುವು?

ಓಂ ಅಗ್ನಿಮೀಳೇ ಪುರೋಹಿತಂ ಯಜ್ಞಸ್ಯ ದೇವಮೃತ್ವಿಜಮ್ | ಹೋತಾರಂ ರತ್ನಧಾತಮಮ್ ||

ಪದ-ವಿಭಾಗಃ—

ಓಂ ಅಗ್ನಿಮ್ ಈಳೇ (ಈಡೇ) ಪುರಃ ಹಿತಂ ಯಜ್ಞ-ಸ್ಯ ದೇವಮ್ ಋತ್ವಿಜಮ್ | ಹೋತಾ-ರಂ ರತ್ನ-ಧಾ-ತಮಮ್ ||

ಸ್ಕಂದಸ್ವಾಮಿ-ಭಾಷ್ಯಮ್—

ಋಷಿಃ ಆದ್ಯಃ ಮಧುಚ್ಛಂದಾಃ “ವೈಶ್ವಾಮಿತ್ರಃ” (ಮೊದಲ ಋಷಿಯು ವೈಶ್ವಾಮಿತ್ರ ಮಧುಚ್ಛಂದನು.)  |
ಋಗ್ವೇದಸ್ಯ ಆದ್ಯಃ, ಋಷಿಃ ಮಧುಚ್ಛಂದಾಃ ನಾಮ (ಋಗ್ವೇದದ ಆದಿ ಋಷಿಯು ಮದುಚ್ಛಂದನೆಂಬ ಹೆಸರಿನವನು.) |
ವಿಶ್ವಾಮಿತ್ರಸ್ಯ ಪುತ್ರಃ (ವಿಶ್ವಾಮಿತ್ರನ ಮಗನು.) |
“ಆಗ್ನೇಯಂ ಪ್ರಥಮಂ ಸೂಕ್ತಂ ಮಧುಚ್ಛಂದಸಃ - ಆದಿತಃ”— ಶೌನಕಕೃತಾ ಬೃಹದ್ದೇವತಾ ೨. ೧೨೬ (ಶೌನಕಮಹರ್ಷಿ ವಿರಚಿತ ಬೃಹದ್ದೇವತಾ ಗ್ರಂಥದಲ್ಲಿ, “ಋಗ್ವೇದದಲ್ಲಿ ಅಗ್ನಿಸ್ತುತಿಪರವಾದ ಸೂಕ್ತವು ಒಂದನೆಯದು. ಆದಿಮವಾದ ಅದು ಮಧುಚ್ಛಂದ ಋಷಿಯ ದರ್ಶನ.)  
ಮದುಚ್ಛಂದಸಃ, ಋಷೇಃ ಆದೌ ಯತ್ ಸೂಕ್ತಮ್, ಋಗ್ವೇದಸ್ಯ ಪ್ರಥಮಂ, ತದ್ ಅಗ್ನಿದೈವತಮ್ (ಋಗ್ವೇದದ ಮೊದನೆಯದಾದ ಮಧುಚ್ಛಂದ ಋಷಿಯ ಸೂಕ್ತವು ಅಗ್ನಿಯನ್ನು ದೇವತೆಯಾಗಿ ಹೊಂದಿರುವಂಥದ್ದು.) ||

ಅಗ್ನಿಮ್ ಅಹಮ್ ಸ್ತೌಮಿ (ಅಗ್ನಿಯನ್ನು ನಾನು ಸ್ತುತಿಸುತ್ತೇನೆ.)  |
ಕೀದೃಶಮ್ (ಎಂಥವನನ್ನು / ಎಂತಹ ಅಗ್ನಿಯನ್ನು?) |
ಪುರೋಹಿತಮ್ (ಪುರೋಹಿತನಾದವನನ್ನು)—
ಶಾಂತಿಕ-ಪೌಷ್ಟಿಕೈಃ ಕರ್ಮಭಿಃ ಯಃ ರಾಜಾನಮ್ ಆಪದ್ಭ್ಯಃ ತ್ರಾಯತೇ ಸಃ ಪುರೋಹಿತಃ - ಇತಿ ಉಚ್ಯತೇ (ಗ್ರಹಶಾಂತಿ-ಋತುಶಾಂತಿಯೇ ಮುಂತಾದ ಅನಿಷ್ಟಶಮನಕರ ಶಾಂತಿಕರ್ಮಗಳಿಂದಲೂ, ಚಂಡಿಕಾಹವನ-ಗಾಯತ್ರೀಹೋಮ-ಗಣಪತಿಹವನ-ರುದ್ರಹೋಮ-ವಿಷ್ಣುಯಾಗ-ಕನಕಧಾರಾಯಾಗವೇ ಮುಂತಾದ ತುಷ್ಟಿ-ಪುಷ್ಟಿಪ್ರದ ಇಷ್ಟ-ಕಾಮ್ಯಕರ್ಮಗಳಿಂದಲೂ ಯಾವನು ರಾಜನನ್ನು ಆಪತ್ತುಗಳಿಂದ ರಕ್ಷಿಸುತ್ತಾನೋ ಅವನು ಪುರೋಹಿತನೆಂದು ಹೇಳಲ್ಪಡುತ್ತಾನೆ.),
ತತ್-ಸ್ಥಾನೀಯಮ್ (ಆ ಪುರೋಹಿತನ ಸ್ಥಾನದಲ್ಲಿರುವವನನ್ನು / ಮುಂದಿನ, ಪೂರ್ವದಿಕ್ಕಿನ ಭಾಗದಲ್ಲಿರುವವನನ್ನು) |
ಕಸ್ಯ? (ಯಾರ / ಯಾವುದರ ಪುರೋಹಿತನನ್ನು?)
‘ಯಜ್ಞಸ್ಯ’ ಯಜ್ಞ-ಅಧಿಕೃತಸ್ಯ (ಯಜ್ಞದ / ಯಜ್ಞದ ಕುರಿತಾದ ಪುರೋಹಿತನನ್ನು),
“ಯಜ್ಞೋ ವೈ ಯಜಮಾನಃ” (ಐತರೇಯ ಬ್ರಾಹ್ಮಣ ೧. ೨೮) ಇತಿ ಶ್ರುತೇಃ (ಯಜ್ಞವೇ ಯಜಮಾನನು / ಯಜಮಾನನೇ ಯಜ್ಞಸ್ವರೂಪನು ಎಂದು ಐತರೇಯ ಬ್ರಾಹ್ಮಣವೆಂಬ ಶ್ರುತಿಯ ಅಭಿಪ್ರಾಯ.) |
ಆಪದಾಮ್ ಅಪಹಂತಾರಮ್ ಇತಿ ಅರ್ಥಃ (ಯಜಮಾನನ ಆಪತ್ತು / ವಿಪತ್ತು / ತೊಂದರೆಗಳನ್ನು ಅಪಹರಿಸುವವನು / ಪರಿಹರಿಸುವವನು / ನಿವಾರಿಸುವವನು ಪುರೋಹಿತನು ಎಂದು ಅರ್ಥ.) |
‘ದೇವಮ್’ “ದೀವ್ಯತಿಃ ದಾನಾರ್ಥೇ ದೀಪ್ತಿ-ಅರ್ಥೇ ವಾ” (ದೇವಮ್— ಎಂಬುದು ದೀವ್ಯತಿ ಎಂಬ ಕ್ರಿಯಾಪದದ ದಾನ ಅಥವಾ ದೀಪ್ತಿ / ಬೆಳಕು ಎಂಬ ಅರ್ಥದಲ್ಲಿ ಬಳಸಲ್ಪಟ್ಟಿರುವುದು.) |
ದಾತಾರಂ ದೀಪ್ತಂ ವಾ (ದಾನಿಯನ್ನು / ಬೇಡಿದ್ದನ್ನು ಕೊಡುವವನನ್ನು ಅಥವಾ ದೀಪ / ಬೆಳಕಿನಂತೆ ಪ್ರಕಾಶಿಸುವವನನ್ನು.)|
ಅಥವಾ, ಪುರೋಹಿತಶಬ್ದಃ ಕ್ರಿಯಾಶಬ್ದಃ (ಅಥವಾ, ಪುರೋಹಿತಶಬ್ದವು ಕ್ರಿಯಾಪದವು.) |
ಪೂರ್ವಸ್ಯಾಂ ದಿಶಿ ನಿಹಿತಮ್ ಆಹವನೀಯಾತ್ಮನಾ ಸ್ಥಾಪಿತಮ್ (ಪೂರ್ವ ದಿಕ್ಕಿನಲ್ಲಿ ಆಹವನೀಯಾಗ್ನಿಯಾಗಿ ನಿಹಿತವಾದವನನ್ನು / ಸ್ಥಾಪಿತವಾದವನನ್ನು)  |
ಯಜ್ಞಸ್ಯ - ಇತಿ ಏತತ್ ತು (ಯಜ್ಞಸ್ಯ— ಎಂಬ ಈ ಪದವಾದರೋ),
ದೇವಮ್ ಇತಿ-ಅನೇನ ಸಂಪದ್ಯತೇ (ದೇವಮ್— ಎಂಬೀ ಶಬ್ದದೊಂದಿಗೆ  ಚೆನ್ನಾಗಿ ಸಂಯುಕ್ತವಾಗಿ ಪಠಿಸಲ್ಪಡುತ್ತದೆ.)|
ಯಜ್ಞಸ್ಯ ದಾತಾರಂ ದೀಪಯಿತಾರಂ ವಾ (ಯಜ್ಞವನ್ನು / ಯಜ್ಞದ ಫಲವನ್ನು ಕೊಡುವವನು /  ಯಜ್ಞವನ್ನು ಬೆಳಗಿಸುವವನು) |
ಯಜ್ಞಂ ಹಿ ದೇವೇಭ್ಯಃ, ಮನುಷ್ಯೇಭ್ಯಃ ಚ ಅಗ್ನಿಃ ದದಾತಿ, ತದಾಯತ್ತತ್ತ್ವಾತ್ (ಯಜ್ಞವನ್ನು ದೇವತೆಗಳಿಗೆ ಹಾಗೂ ಮನುಷ್ಯರಿಗೆ ಅಗ್ನಿಯು ಕೊಡುತ್ತಾನೆ; ಅಗ್ನಿಯಿಲ್ಲದೆ ಯಜ್ಞವಿಲ್ಲ, ಅಲ್ಲವೆ?; ಅವನಿಂದಾಗಿ ಯಜ್ಞ ಎಂಬ ಕಾರಣಕ್ಕಾಗಿ ಅಗ್ನಿಯು ಯಜ್ಞದಾತೃವು.) |
ದೀಪಯತಿ ಚ (ಹಾಗೂ ಯಜ್ಞವನ್ನು ಬೆಳಗಿಸುತ್ತಾನೆ.) |
ನ ಚ ಯಜ್ಞಸ್ಯ ದೇವಮ್ ಏವ ಕೇವಲಮ್ (ಕೇವಲ ಯಜ್ಞದ ದೇವನನ್ನು ಮಾತ್ರವಲ್ಲ),
ಕಿಂ ತರ್ಹಿ? (ಹಾಗಿದ್ದರೆ ಬೇರೇನು?)
ಋತ್ವಿಜಮ್  (ಋತ್ವಿಜನನ್ನೂ ಸಹ.) |
ಕತಮಮ್? (ಎಂತಹ ಋತ್ವಿಜನನ್ನು?)
ಹೋತಾರಮ್ (ಹೋತೃವೆನಿಸಿದವನನ್ನು),
“ಅಗ್ನಿರ್ವೈ ದೇವಾನಾಂ ಹೋತಾ” (ಐತರೇಯ ಬ್ರಾಹ್ಮಣ ೧. ೨೮) ಇತಿ ಶ್ರುತೇಃ (ಅಗ್ನಿಯು ದೇವರುಗಳ ಹೋತೃವು)|
ಅಗ್ನಿಃ ದೈವ್ಯಃ ಹೋತಾ (ಅಗ್ನಿಯು ಮಾನುಷ ಹೋತೃಗಳು ನೀಡಿದ ಹವಿಸ್ಸನ್ನು ದೇವತೆಗಳಿಗೆ ತಲುಪಿಸುವ ದೈವೀ ಹೋತೃವು.)|
ತದ್-ಅಧಿಕೃತಃ ತು ಮಾನುಷಃ, ಹೋತಾ ಹೋತ್ರಂ ಕರ್ಮ ಕರೋತಿ (ಅಗ್ನಿಗೆ ಮಾನುಷ ಹೋತೃವು ಹೋತೃ ಕಾರ್ಯವನ್ನು ಮಾಡುತ್ತಾನೆ.) |
ಅಥವಾ, ಋತ್ವಿಕ್-ಹೋತೃಶಬ್ದೌ ಅಪಿ ಕ್ರಿಯಾಶಬ್ದೌ ಏವ (ಅಥವಾ, ಋತ್ವಿಜ ಹಾಗೂ ಹೋತಾರ ಶಬ್ದಗಳೆರಡೂ ಕ್ರಿಯಾವಾಚಕಗಳೇ.) |
ಋತಾವೃತೌ (ಋತೌ + ಋತೌ)  ಯಷ್ಟಾರಂ ಋತ್ವಿಜಮ್ (ಋತು ಋತುಗಳಲ್ಲೂ ಕಾಲಕಾಲಕ್ಕೆ ಯಜ್ಞಮಾಡುವವನನ್ನು ಋತ್ವಿಜನೆನ್ನುವರು; ಅಂಥವನನ್ನು ಸ್ತುತಿಸಲಾಗಿದೆ.) |
ಯಃ ಯಃ ಯಾಗಕಾಲಃ ತತ್ರ ತತ್ರ ಯಷ್ಟಾರಮ್ ಇತಿ ಅರ್ಥಃ (ಯಾವುದು ಯಾವುದು ಯಾಗ ಮಾಡುವ ಸಮಯವೋ ಅಲ್ಲಲ್ಲೇ / ಆವಾಗಾವಾಗಲೇ ಯಜ್ಞ ಮಾಡುವವನು ಎಂದರ್ಥ.) |
ಹೋತಾರಮ್ ಆಹ್ವಾತಾರಮ್ (ಹೋತೃವನ್ನು / ಆಹ್ವಾನಿಸುವವನನ್ನು.) |
ಕಸ್ಯ? (ಯಾರ?)
ಸಾಂಸರ್ಗ್ಯಾತ್ (ಸಂಬಂಧಾತ್ / ಸಾಮರ್ಥ್ಯಾದ್) ದೇವಾನಾಮ್ (ಇತರ ದೇವತೆಗಳೊಂದಿಗಿನ ಅಗ್ನಿಯ ಸಂಬಂಧ / ಅವರಿಗೆ ಸಮನಾದ ಸಾಮರ್ಥ್ಯದಿಂದ / ಅವರನ್ನು ಆಹ್ವಾನಿಸುವ ಸಾಮರ್ಥ್ಯವು ಅಗ್ನಿಗಿರುವುದರಿಂದ.)  |
ರತ್ನಧಾತಮಮ್ (ರತ್ನದಾತೃವನ್ನು.) |
ರತ್ನಮ್ ಇತಿ ಧನ-ನಾಮ (ರತ್ನವೆಂದರೆ ಸಂಪತ್ಸೂಚಕ.) |
ದಧಾತಿಃ ದಾನಾರ್ಥಃ (ದಧಾತಿ ಪದವು ದಾನಸೂಚಕ.)|
ಧನಾನಾಮ್ ಅತಿಶಯೇನ ದಾತಾರಮ್ (ಧನ-ಕನಕಾದಿ ಸಂಪತ್ತನ್ನು ಬಹುವಾಗಿ ನೀಡುವವನಾದ ಅಗ್ನಿಯನ್ನು ಸ್ತುತಿಸುತ್ತೇನೆ.)  ||

ವೇಂಕಟಮಾಧವ-ಭಾಷ್ಯಮ್—

ಮಧುಚ್ಛಂದಾಃ - ವೈಶ್ವಾಮಿತ್ರಃ - ಋಷಿಃ | ಅಗ್ನಿಂ (ಅಗ್ನಿಯನ್ನು), ಸ್ತೌಮಿ (ಸ್ತುತಿಸುತ್ತೇನೆ), ಪುರೋ (ಮುಂಭಾಗದಲ್ಲಿ), ನಿಹಿತಮ್ (ಸ್ಥಿತನಾಗಿರುವವನನ್ನು), ಉತ್ತರವೇದ್ಯಾಃ, ಯಜ್ಞಸ್ಯ,(ಯಜ್ಞದ ಉತ್ತರವೇದಿಯಲ್ಲಿ / ಯಜ್ಞವೇದಿಯ ಪೂರ್ವಭಾಗದಲ್ಲಿ ಆಹವನೀಯಾಗ್ನಿಯಾಗಿ), ದ್ಯುಸ್ಥಾನೋ (ದೇವಲೋಕದಲ್ಲಿ ಅಗ್ನಿದೇವನಾಗಿ), ಸ್ವೇ ಸ್ವೇ ಕಾಲೇ ದೇವಾನಾಂ ಯಷ್ಟಾರಮ್ (ಆಯಾಯ ಕಾಲದಲ್ಲಿ ದೇವತೆಗಳಿಗೆ ಯಜ್ಞಮಾಡುವವನನ್ನು), ಹೋತಾರಂ (ಹ್ವಾತಾರಂ) ದೇವಾನಾಮ್ (ದೇವತೆಗಳನ್ನು ಆಹ್ವಾನಿಸುವ ದೈವೀ ಹೋತೃವನ್ನು), ರಮಣೀಯಾನಾಂ ಧನಾನಾಂ ದಾತೃತಮಮ್ (ವಿವಿಧ ಸುಖಕರ ಮನೋಹರ ಸಂಪತ್ತುಗಳ ಬಹುದೊಡ್ಡ ದಾನಿ / ದಾತಾರ / ಕೊಡುವವನನ್ನು) ||

ತಾತ್ಪರ್ಯ—

ಯಜ್ಞವೇದಿಯ ಮುಂಭಾಗದಲ್ಲಿ ಆಹವನೀಯವೆಂಬ ಯಜ್ಞಾಗ್ನಿರೂಪನಾಗಿ ಸ್ಥಿತನಾದ, ಸ್ವರ್ಗದಲ್ಲಿ ಅಗ್ನಿದೇವನಾಗಿ ನೆಲೆಸಿರುವ ಭಗವಂತನು, ಇಂದ್ರಾದಿ-ಈಶಾನಾಂತವಾದ ಅಷ್ಟದಿಕ್ಪಾಲಕರೇ ಮುಂತಾದ ದೇವತೆಗಳನ್ನು ವರ್ಷದ ಆಯಾ ಋತುಗಳಲ್ಲಿ ಯಜ್ಞಕ್ಕೆ ಆಹ್ವಾನಿಸುವವನಾಗಿ, ಯಜ್ಞಕಾರ್ಯಕ್ಕೆ ಮಾನವರಿಗೆ ಪ್ರೇರಕನಾಗಿ, ಆ ಯಜ್ಞದಲ್ಲೂ ವೇದೋಕ್ತ ವಿಧಿಯಂತೆ ಸಕಾಲದಲ್ಲಿ ತತ್ತದ್ದೇವತೆಗಳಿಗೆ (ಆಯಾ ದೇವತೆಗಳಿಗೆ) ಹವಿಸ್ಸನ್ನು ಕ್ರಮಾನುಗತಿಯಿಂದ ಸಮರ್ಪಿಸುವಂತೆ ಮಾಡುವ ದೈವೀ ಹೋತೃವಾಗಿ, ಹಾಗೂ, ಸಕಲ ಸಂಪತ್ತನ್ನು ನಮಗೆ ದಯಪಾಲಿಸುವವರಲ್ಲಿ ಶ್ರೇಷ್ಠನಾಗಿದ್ದು, ಅಂತಹ ಭಗವಂತನ ಅಗ್ನಿರೂಪವನ್ನು ಸ್ತುತಿಸುತ್ತೇನೆ.

ಮುದ್ಗಲ-ಭಾಷ್ಯಮ್—

……….ಋಗ್ವೇದಸ್ಯ ಆಶ್ವಲಾಯನೋ ಶಾಂಖಾಯನೀ ಶಾಕಲಾ ಭಾಷ್ಕಲಾ ಮಾಂಡೂಕಾ ಚ ಇತಿ ಪಂಚಶಾಖಾಃ ( ಋಗ್ವೇದಕ್ಕೆ ಆಶ್ವಲಾಯನ, ಶಾಂಖಾಯನೀ, ಶಾಕಲಾ, ಭಾಷ್ಕಲಾ ಮತ್ತು ಮಾಂಡೂಕಾ ಎಂದು ೫ ಶಾಖೆಗಳು.)  
ತತ್ರ ಶಾಕಲಸಂಹಿತಾಯಾಃ ದಶ ಮಂಡಲಾನಿ (ಅವುಗಳಲ್ಲಿ, ಶಾಕಲಸಂಹಿತೆಗೆ ೧೦ ಮಂಡಲಗಳು.) |
ತತ್ರ ಪ್ರಥಮೇ ಮಂಡಲೇ ಚತುರ್ವಿಂಶತಿಃ ಅನುವಾಕಾಃ (ಅದರಲ್ಲಿ ೧ನೇ ಮಂಡಲದಲ್ಲಿ ೨೪ ಅನುವಾಕಗಳು.) |
ತತ್ರ ಪ್ರಥಮಾನುವಾಕೇ ತ್ರೀಣಿ ಸೂಕ್ತಾನಿ (ಅಲ್ಲಿ ೧ನೇ ಅನುವಾಕದಲ್ಲಿ ೩ ಸೂಕ್ತಗಳಿವೆ.) |
ದೇವತಾ-ಚ್ಛಂದ-ಋಷೀಣಾಂ ಸಮ್ಯಗ್ಬೋಧಾಯ ಪ್ರಕಾಶಿತಾನಿ (ದೇವತೆ, ಛಂದಸ್ಸು, ಋಷಿಗಳನ್ನು ಚೆನ್ನಾಗಿ ತಿಳಿಯಲಿಕ್ಕಾಗಿ ಹೇಳಲಾಗಿದೆ.) |
ತತ್ರ “ಅಗ್ನಿಮೀಳೇ”- ಇತಿ ನವ-ಋಚಂ ಪ್ರಥಮಸೂಕ್ತಮ್ (ಅವುಗಳಲ್ಲಿ, “ಅಗ್ನಿಮೀಳೇ” ಎಂಬುದು ೯ ಋಕ್ಕುಗಳ ಮೊದಲ ಸೂಕ್ತ.) |
ವಿಶ್ವಾಮಿತ್ರಪುತ್ರೋ ಮಧುಚ್ಛಂದಾ ಋಷಿಃ | ಗಾಯತ್ರಮ್ | ಆಗ್ನೇಯಮ್ ||
(ವಿಶ್ವಾಮಿತ್ರಸುತನಾದ ಮಧುಚ್ಛಂದನೇ ಋಷಿಯು; ಗಾಯತ್ರೀಚ್ಛಂದಸ್ಸು; ಅಗ್ನಿ ದೇವತೆ.)

“ಅಗ್ನಿಮ್” ದೇವಮ್ ಈಳೇ ಸ್ತೌಮಿ (ಅಗ್ನಿದೇವನನ್ನು ಸ್ತುತಿಸುತ್ತೇನೆ.) |
ಕೀದೃಶಮ್ ಅಗ್ನಿಮ್? (ಎಂತಹ ಅಗ್ನಿಯನ್ನು?)
“ಯಜ್ಞಸ್ಯ ಪುರೋಹಿತಮ್” ಯಜ್ಞಸ್ಯ ಪೂರ್ವಭಾಗೇ ಆಹವನೀಯರೂಪೇಣ ಉಪಸ್ಥಿತಮ್ (ಯಜ್ಞದ ಪುರೋಹಿತನನ್ನು— ಯಜ್ಞದ ಪೂರ್ವಭಾಗದಲ್ಲಿ ಆಹವನೀಯಾಗ್ನಿರೂಪನಾಗಿ ಸಮೀಪದಲ್ಲೇ ಇರುವವನು / ಉಪಸ್ಥಿತನಾದವನು.)|
ಪುನಃ ಕೀದೃಶಮ್? (ಪುನಃ ಎಂಥವನು?)
ದೇವಮ್ ದಾನಾದಿ-ಗುಣ-ಯುಕ್ತಮ್ (ದೇವನನ್ನು— ದಾನ ಮುಂತಾದ ಗುಣ-ಸಹಿತನನ್ನು.) |
ಹೋತಾರಮ್ ಋತ್ವಿಜಮ್ (ಹೋತೃವೆಂಬ ಋತ್ವಿಜನನ್ನು) |
ದೇವಾನಾಂ ಯಜ್ಞೇಷು ಹೋತೃ-ನಾಮಕ-ಋತ್ವಿಕ್- ಅಗ್ನಿಃ ಏವ (ದೇವತಾಯಜ್ಞಗಳಲ್ಲಿ ಹೋತೃ / ಋಗ್ವೇದಜ್ಞ -ಅಧ್ವರ್ಯು / ಯಜುರ್ವೇದಜ್ಞ -ಉದ್ಗಾತೃ / ಸಾಮವೇದಾಧ್ಯಾಯಿ - ಬ್ರಹ್ಮ / ಅಥರ್ವವೇದಜ್ಞ— ಎಂಬ ನಾಲ್ವರು ಋತ್ವಿಜರಲ್ಲಿ ಹೋತೃವೆಂಬ ಋತ್ವಿಜನು ಅಗ್ನಿಯೇ.) |
ಪುನಃ ಕೀದೃಶಮ್? (ಪುನಃ ಎಂಥವನು?)
ರತ್ನಧಾತಮಮ್ ಯಾಗಫಲ-ಸ್ವರೂಪಾಣಾಂ ರತ್ನಾನಾಮ್ ಅತಿಶಯೇನ ಧಾರಯಿತಾರಮ್  (ರತ್ನಧಾರಕನನ್ನು— ಯಾಗದ ಫಲಸ್ವರೂಪವಾಗಿ ಯಜಮಾನನಿಗೆ ದೊರಕುವ ರತ್ನಾದಿ ಸಂಪತ್ತುಗಳನ್ನು ಹೇರಳವಾಗಿ ಧರಿಸಿಕೊಂಡಿರುವವನನ್ನು.) ||

ಸಾಯಣ-ಭಾಷ್ಯಮ್—

ಅಗ್ನಿ-ನಾಮಕಂ ದೇವಮ್ ಈಳೇ | ಸ್ತೌಮಿ   ( ಅಗ್ನಿ ಎಂಬ ಹೆಸರಿನ ದೇವನನ್ನು ಸ್ತುತಿಸುತ್ತೇನೆ.) |
“ಈಡ ಸ್ತುತೌ ” ಇತಿ ಧಾತುಃ (ಈಡ ಸ್ತುತೌ ಎಂಬ ಧಾತುಮೂಲವಾದದ್ದು ಈಳೇ ಎಂಬ ಕ್ರಿಯಾಪದ; ಸ್ತುತ್ಯರ್ಥಕ.) |
‘ಡ’ಕಾರಸ್ಯ ‘ಳ’ಕಾರೋ ಬಹ್ವೃಚ-ಅಧ್ಯೇತೃ-ಸಂಪ್ರದಾಯ-ಪ್ರಾಪ್ತಃ (ಡ-ಕಾರಕ್ಕೆ ಳ-ಕಾರವು ಬಹು ಋಚ (ಋಕ್) / ಋಗ್ವೇದ ಅಧ್ಯಾಯಿಗಳಿಗೆ ಪರಂಪರೆಯಿಂದ ಪ್ರಾಪ್ತವಾದದ್ದು / ಬಂದದ್ದು.) |
ತಥಾ ಚ ಪಠ್ಯತೇ (ಮತ್ತು ಹಾಗೆಯೇ ಪಠಿಸಲ್ಪಡುತ್ತದೆ)—
“ಅಚ್-ಮಧ್ಯಸ್ಥ-ಡಕಾರಸ್ಯ ಳಕಾರಂ ಬಹ್ವೃಚಾ ಜಗುಃ |
ಅಜ್ಮಧ್ಯಸ್ಥಢಕಾರಸ್ಯ ಳ್ಹಕಾರಂ ವೈ ಯಥಾಕ್ರಮಮ್ ||”
ಇತಿ |
(ಅಚ್ ವರ್ಣಗಳೆಂದರೆ ಸ್ವರಾಕ್ಷರಗಳು— ಅಇಉಣ್ | ಋಲೃಕ್ | ಏಓಙ್ | ಐಔಚ್ ||— ಇವು ಪಾಣಿನೀಯ ವ್ಯಾಕರಣದ ೧೪ ಮಾಹೇಶ್ವರ ಸೂತ್ರಗಳಲ್ಲಿ ಮೊದಲ ೪ ಸೂತ್ರಗಳು. ಅವುಗಳ ಕೊನೆಯ ವ್ಯಂಜನಗಳಿಗೆ ಇತ್ ವರ್ಣಗಳೆನ್ನುವರು. ಅವುಗಳು ಸೂತ್ರಪೂರ್ತಿಗಾಗಿ, ಸಂಜ್ಞೆಗಳಿಗಾಗಿ ಮಾತ್ರ; ಆದರೆ ವರ್ಣಗಳಾಗಿ ಲೆಕ್ಕಕ್ಕಿಲ್ಲ. ಆದ್ದರಿಂದ, ಈ ೪ ಸೂತ್ರಗಳಲ್ಲಿ ಮೊದಲನೆಯ ಸೂತ್ರದ ಮೊದಲ ವರ್ಣ “ಅ” ದಿಂದ ೪ ನೆಯ ಸೂತ್ರದ ಕೊನೆಯ ಇತ್ ವರ್ಣ “ಚ್” ವರೆಗಿನ ಅಕ್ಷರಗಳಿಗೆ “ಅಚ್” ಎಂಬ ಸಂಜ್ಞೆ. ಆದ್ದರಿಂದ, ಅಚ್ ಎಂದರೆ ಅ,ಇ,ಉ,(ಣ್ ಇಲ್ಲ; ಇತ್ ವರ್ಣ), ಋ,ಲೃ, (ಕ್ ಇತ್ ವರ್ಣ), ಏ,ಓ, (ಙ್ ಇಲ್ಲ), ಐ, ಔ, (ಚ್ ಇಲ್ಲ)— ಈ ವರ್ಣಗಳು, ಅರ್ಥಾತ್ ಸ್ವರಾಕ್ಷರಗಳು. ಅವುಗಳ ದೀರ್ಘರೂಪಗಳಾದ ಆ,ಈ,ಊ,ೠ,ಲೄ ಗಳೂ ಅಚ್ ವರ್ಣಗಳೇ. ಸಂಸ್ಕೃತದ ಲೃ ವರ್ಣ ಕನ್ನಡದಲ್ಲಿಲ್ಲ.  

ಈಗ ಮೇಲಿನ ಸೂತ್ರ-ಶ್ಲೋಕಾರ್ಥ— ಋಗ್ವೇದಿಗಳು, ಬಹು ಋಕ್ / ಋಚಗಳುಳ್ಳ ಬಹ್ವೃಚಸಂಹಿತೆ / ಋಗ್ವೇದ ಪರಂಪರೆಯ ಕ್ರಮದಂತೆ / ಪೂರ್ವ ಸಂಪ್ರದಾಯದಂತೆ ಅಚ್ ವರ್ಣಗಳ ಮಧ್ಯದಲ್ಲಿರುವ ಡ-ಕಾರಕ್ಕೆ ಳ-ಕಾರವನ್ನೂ, ಢ-ಕಾರಕ್ಕೆ ಳ್ಹ-ಕಾರವನ್ನೂ ಹೇಳುತ್ತಾರೆ.

“ಈಡೇ” ಎಂಬಲ್ಲಿ ಈ+ಡ್+ಏ— ಡ ಕಾರವು ಈ ಹಾಗೂ ಏ ಎಂಬ ಅಚ್ ವರ್ಣಗಳ ನಡುವೆ ಬಂದಿರುವುದರಿಂದ, ಋಗ್ವೇದೀಯವಾಗಿ ಳ ಕಾರವಾಗುತ್ತದೆ. ಹಾಗಾಗಿ, “ಈಡ ಸ್ತುತೌ” ಧಾತುವಿನ ಈಡೇ— ಸ್ತುತಿಸುತ್ತೇನೆ ಎಂಬುದು “ಈಳೇ” ಆಗಿದೆ.)

ಮಂತ್ರಸ್ಯ ಹೋತ್ರಾ ಪ್ರಯೋಜ್ಯತ್ವಾದ್ ‘ಅಹಂ ಹೋತಾ ಸ್ತೌಮಿ’ ಇತಿ ಲಭ್ಯತೇ ( ಹೋತೃವಿನಿಂದ ಈ ಮಂತ್ರದ ಪ್ರಯೋಗವಿರುವುದರಿಂದ ‘ಹೋತೃವಾದ ನಾನು ಸ್ತುತಿಸುತ್ತೇನೆ’ ಎಂಬ ಪ್ರಯೋಗವು ಲಭಿಸುತ್ತದೆ.) |
ಕೀದೃಶಮ್ ಅಗ್ನಿಮ್? ಯಜ್ಞಸ್ಯ ಪುರೋಹಿತಮ್ (ಎಂತಹ ಅಗ್ನಿಯನ್ನು? ಯಜ್ಞದ ಪುರೋಹಿತನನ್ನು) |
ಯಥಾ ರಾಜ್ಞಃ ಪುರೋಹಿತಃ ತದಭೀಷ್ಟಂ ಸಂಪಾದಯತಿ ತಥಾ ಅಗ್ನಿಃ ಅಪಿ ಯಜ್ಞಸ್ಯ ಅಪೇಕ್ಷಿತಂ ಹೋಮಂ ಸಂಪಾದಯತಿ (ಹೇಗೆ ರಾಜನ ಪುರೋಹಿತನು ರಾಜನ ಅಭೀಷ್ಟವನ್ನು ಸಂಪಾದಿಸುತ್ತಾನೋ ಹಾಗೆಯೇ ಅಗ್ನಿಯೂ ಸಹ ಯಜ್ಞಕ್ಕೆ ಅಪೇಕ್ಷಿತವಾದ ಹೋಮದ್ರವ್ಯ, ಯಜ್ಞನಿರ್ವಹಣೆಗೆ ಬೇಕಾದ ಧನಕನಕಾದಿ ಸಕಲ ಸುವಸ್ತುಗಳನ್ನು ಯಜಮಾನನಿಗೆ ಸಂಪಾದಿಸಿ ಕೊಡುತ್ತಾನೆ.) |
ಯದ್ವಾ (ಅಥವಾ)|
ಯಜ್ಞಸ್ಯ ಸಂಬಂಧಿನಿ ಪೂರ್ವಭಾಗೇ - ಆಹವನೀಯ-ರೂಪೇಣ ಅವಸ್ಥಿತಮ್ (ಪುರೋಹಿತನನ್ನು ಎಂದರೆ, ಯಜ್ಞಕ್ಕೆ ಸಂಬಂಧಿಸಿದ ಪೂರ್ವಭಾಗದಲ್ಲಿ ಆಹವನೀಯಾಗ್ನಿರೂಪದಿಂದ ಸಂಸ್ಥಾಪಿತನಾಗಿರುವವನನ್ನು.) |
ಪುನಃ ಕೀದೃಶಮ್? ದೇವಂ, ದಾನಾದಿ-ಗುಣಯುಕ್ತಮ್ (ಮತ್ತೆ ಎಂಥವನನ್ನು? ಬೇಡಿದ್ದನ್ನು ಕೊಡುವ ದಾನಾದಿ ಗುಣದಿಂದ ಕೂಡಿದ ದೇವನನ್ನು.) |
ಪುನಃ ಕೀದೃಶಮ್ | ಹೋತಾರಮ್ ಋತ್ವಿಜಮ್ (ಮತ್ತೂ ಎಂಥವನನ್ನು ಸ್ತುತಿಸುತ್ತೇನೆ? ಹೋತೃವೆಂಬ ಋತ್ವಿಜನನ್ನು.) |
ದೇವಾನಾಂ ಯಜ್ಞೇಷು ಹೋತೃ-ನಾಮಕಃ - ಋತ್ವಿಕ್ - ಅಗ್ನಿಃ ಏವ (ದೇವತೆಗಳ ಯಜ್ಞಗಳಲ್ಲಿ / ದೇವಯಜ್ಞಗಳಲ್ಲಿ ಹೋತೃವೆಂಬ ಋತ್ವಿಜನು ಅಗ್ನಿಯೇ.) |
ತಥಾ ಚ ಶ್ರೂಯತೇ— “ಅಗ್ನಿರ್ವೈ ದೇವಾನಾಂ ಹೋತಾ” (ಐತರೇಯ ಬ್ರಾಹ್ಮಣಮ್ ೩.೧೪) ಇತಿ (ಅದಕ್ಕಾಗಿಯೇ ಕೇಳಿಬರುತ್ತದೆ— “ಅಗ್ನಿಯೇ ದೇವತೆಗಳ ಹೋತೃವಷ್ಟೆ?” ಎಂಬುದಾಗಿ.)|
ಪುನರಪಿ ಕೀದೃಶಮ್? (ಪುನಃ ಎಂಥ ಅಗ್ನಿ?)
ರತ್ನಧಾತಮಮ್— ಯಾಗಫಲರೂಪಾಣಾಂ ರತ್ನಾನಾಮ್ ಅತಿಶಯೇನ (ಧಾ— ಧಾರಣ-ಪೋಷಣಯೋಃ ಧಾತುಃ) ಧಾರಯಿತಾರಂ ಪೋಷಯಿತಾರಂ ವಾ (ಯಾಗದ ಫಲರೂಪವಾಗಿ ಯಜಮಾನನಿಗೆ ಪ್ರಾಪ್ತವಾಗಲಿರುವ ರತ್ನಾದಿ ಅಮೂಲ್ಯ ಸಂಪತ್ತನ್ನು ಹೇರಳವಾಗಿ / ಸಾಕಷ್ಟು ಧರಿಸಿರುವ ಅಥವಾ ಯಜಮಾನನ ಸಂಪತ್ತನ್ನು ಪೋಷಿಸಿ, ವರ್ಧಿಸುವಂಥ ಅಗ್ನಿದೇವನನ್ನು ಸ್ತುತಿಸುತ್ತೇನೆ.)||

ಅತ್ರ ಅಗ್ನಿಶಬ್ದಸ್ಯ ಯಾಸ್ಕೋ ಬಹುಧಾ ನಿರ್ವಚನಂ ದರ್ಶಯತಿ (ಇಲ್ಲಿ ಅಗ್ನಿಶಬ್ದಕ್ಕೆ ಯಾಸ್ಕನು ಬಹುವಿಧವಾಗಿ ನಿರ್ವಚನವನ್ನು ತೋರಿಸುತ್ತಾನೆ.) |
ಅಥ ಅತಃ, ಅನುಕ್ರಮಿಷ್ಯಾಮಃ (ಈಗ ಹಾಗಾಗಿ ಅದನ್ನನುಸರಿಸಿ ಮುಂದಕ್ಕೆ ಕ್ರಮಿಸುತ್ತೇವೆ), ಅಗ್ನಿಃ ಪೃಥಿವೀಸ್ಥಾನಃ ( ಅಗ್ನಿಯು ಬೆಂಕಿಯಾಗಿ ಭೂಮಿಯಲ್ಲಿರುವುದು), ತಂ ಪ್ರಥಮಂ ವ್ಯಾಖ್ಯಾಸ್ಯಾಮಃ (ಅವನನ್ನು ಮೊದಲು ವ್ಯಾಖ್ಯಾನಿಸುತ್ತೇವೆ) , ಅಗ್ನಿಃ ಕಸ್ಮಾದ್ ಅಗ್ರಣೀಃ ಭವತಿ (ಅಗ್ನಿಯು ಯಾವುದರಿಂದಾಗಿ ಅಗ್ರಣಿ / ಮುಂದಾಳುವಾಗುತ್ತಾನೆ?),

ಅಗ್ರಂ ಯಜ್ಞೇಷು ಪ್ರಣೀಯತೇ ಅಂಗಂ ನಯತಿ ಸಂನಮಮಾನೋ ಅಕ್ನೋಪನೋ ಭವತಿ ಇತಿ ಸ್ಥೌಲಾಷ್ಠೀವಿಃ (ಯಜ್ಞಗಳಲ್ಲಿ ಮೊದಲು ತನ್ನ ಅವಯವಗಳನ್ನು ಜ್ವಾಲಾರೂಪದಿಂದ ಚೆನ್ನಾಗಿ ಪ್ರಜ್ವಲಿಸಿ ತೋರಿಸಿ,  ಇತರ ದೇವತೆಗಳನ್ನು ಕರೆತರುತ್ತಾನೆ ಹಾಗೂ ಯಜ್ಞಕ್ಕೆ ಹಾಕಿದ ಹವಿಸ್ಸು ಹಾಗೂ ಇಂಧನಗಳಿಗೆ ಸ್ನೇಹಪರನಾಗದೇ ಅವನ್ನೆಲ್ಲ ದಹಿಸುತ್ತಾನೆ ಎಂಬುದರಿಂದ ಅಗ್ನಿ—  ಎಂಬುದು ಸ್ಥೌಲಾಷ್ಠೀವಿ ಮಹರ್ಷಿಯ ಮತ.)  ;

ನ ಕ್ನೋಪಯತಿ ನ ಸ್ನೇಹಯತಿ ತ್ರಿಭ್ಯಃ, ಆಖ್ಯಾತೇಭ್ಯಃ ಜಾಯತೇ - ಇತಿ ಶಾಕಪೂಣಿಃ (ತನ್ನ ಸಂಪರ್ಕಕ್ಕೆ ಬರುವ ಹವಿಸ್ಸು, ಕಟ್ಟಿಗೆ ಇತ್ಯಾದಿ ಯಾವುದರೊಂದಿಗೂ ಸ್ನೇಹತೋರದೆ ಅವುಗಳನ್ನು ಉರಿಸುವ ಅಗ್ನಿಯು ಈ ಕೆಳಗೆ ಹೇಳಿದ ಮೂರರಿಂದ ಅಗ್ನಿಯೆನಿಸುತ್ತಾನೆ - ಎಂದು ಶಾಕಪೂಣಿಯ ಮತ.) ;

ಇತಾತ್ ಅಕ್ತಾತ್ ದಗ್ಧಾತ್ ವಾ ನೀತಾತ್ ಸಃ ಖಲು ಏತೇಃ ಅಕಾರಮ್ ಆದತ್ತೇ —

{(1) ಅಗ್ನಿಶಬ್ದವು ‘ಅ’ಕಾರವನ್ನು, (೧) ಇತಾತ್—  ಇಣ್ ಗತೌ ಎಂಬ ಗತಿ / ಚಲನಶೀಲಾರ್ಥಕವಾದ ಧಾತುವಿನಿಂದ ಅಥವಾ (೨) ಅಕ್ತಾತ್— ಅಕ ಕುಟಿಲಾಯಾಂ ಗತೌ ಎಂಬ ವಕ್ರಗಮನಶೀಲಾರ್ಥಕ ಧಾತುವಿನಿಂದ ಅಥವಾ (೩) ದಗ್ಧಾತ್— ದಹ ಭಸ್ಮೀಕರಣೇ ಎಂಬ ದಹಿಸಿ ಬೂದಿಮಾಡುವ ಎಂಬರ್ಥವೀಯುವ ಧಾತುವಿನಿಂದ ಅಥವಾ (೪) ನೀತಾತ್— ಣೀಞ್ ಪ್ರಾಪಣೇ ಎಂಬ ತಲುಪಿಸುವ, ಒಯ್ಯುವ ಎಂಬರ್ಥದ ಧಾತುವಿನಿಂದ ಪಡೆದುಕೊಳ್ಳುತ್ತದೆ. }

ಗಕಾರಮ್ ಅನಕ್ತೇಃ ವಾ ದಹತೇಃ ವಾ {(2) ‘ಗ’ಕಾರವನ್ನು ಅನಕ್ತಿ / ದಹತಿ ಎಂಬುದರಿಂದಲೂ,},  

ನೀಃ ಪರಃ ತಸ್ಯ ಏಷಾ ಭವತಿ {(3) ಈ ಎರಡು ಗುಣಗಳು ಇವನಿಗಿವೆ ಎಂಬುದರಿಂದ ‘ನಿ’ಯು ಪರವಾದುದರಿಂದಲೂ, ಹೀಗೆ ಮೂರರಿಂದ ನಿಷ್ಪನ್ನವಾದ “ಅಗ್ನಿ”ಶಬ್ದವು ಸಾರ್ಥಕವೂ ಅನ್ವರ್ಥಕವೂ ಆಗಿದೆ. }, ಅಗ್ನಿಮ್ ಈಳೇ (ನಿರುಕ್ತಮ್ ೭.೧೪) ಇತಿ  (ಅಂತಹ ಅಗ್ನಿಯನ್ನು ಸ್ತುತಿಸುತ್ತೇನೆ— ಎಂಬುದು ನಿರುಕ್ತಕಾರರಾದ ಯಾಸ್ಕರ ಮತ.)|

ಅಸ್ಯ ಅಯಮ್ ಅರ್ಥಃ (ಇದರರ್ಥ ಹೀಗಿದೆ)— ಸಾಮಾನ್ಯೇನ ಸರ್ವದೇವತಾನಾಂ ಲಕ್ಷಣಸ್ಯ ಅಭಿಹಿತತ್ವಾದ್ (ಸಕಲ ದೇವತೆಗಳ ಸಾಮಾನ್ಯ ಲಕ್ಷಣವನ್ನು ಮೊದಲು ಹೇಳಿ), ಅನಂತರಂ ಯತಃ ಪ್ರತಿಪದಂ ವಿಶೇಷೇಣ ವಕ್ತವ್ಯತ್ವಮ್ ಆಕಾಂಕ್ಷಿತಮ್ (ಅನಂತರ, ಪ್ರತಿಪದವನ್ನೂ ವಿಶೇಷವಾಗಿ ವಿವರಿಸಿ ಹೇಳಲು ಬಯಸಿ), ಅತಃ ಅನುಕ್ರಮೇಣ ವಕ್ಷ್ಯಾಮಃ (ಅದಕ್ಕಾಗಿ, ಕ್ರಮವನ್ನು ಅನುಸರಿಸಿ ಹೇಳುವೆವು.) |

ತತ್ರ, ಪೃಥಿವೀಲೋಕೇ ಸ್ಥಿತಃ ಅಗ್ನಿಃ ಪ್ರಥಮಂ ವ್ಯಾಖ್ಯಾಸ್ಯತೇ (ಅಲ್ಲಿ, ಭೂಲೋಕದಲ್ಲಿರುವ ಅಗ್ನಿಯು ಮೊದಲಿಗೆ ವ್ಯಾಖ್ಯಾನಿಸಲ್ಪಡುತ್ತಾನೆ.) |

ಕಸ್ಮಾತ್ ಪ್ರವೃತ್ತಿ-ನಿಮಿತ್ತಾದ್ ಅಗ್ನಿಶಬ್ದೇನ ದೇವತಾ ಅಭಿಧೀಯತೇ - ಇತಿ ಪ್ರಶ್ನಸ್ಯ ಅಗ್ರಣೀಃ - ಇತ್ಯಾದಿಕಮ್ ಉತ್ತರಮ್ (ಯಾವ ಪ್ರವೃತ್ತಿ / ನಡವಳಿಕೆಯ ಕಾರಣದಿಂದ ಅಗ್ನಿಶಬ್ದದಿಂದ ದೇವತೆಯು ಕರೆಯಲ್ಪಡುತ್ತಾನೆ - ಎಂಬ ಪ್ರಶ್ನೆಗೆ “ಅಗ್ರಣಿ / ಮುಂದಾಳು” ಇತ್ಯಾದಿಗಳು ಉತ್ತರವು.)  

ದೇವಸೇನಾಮ್ ಅಗ್ರೇ ಸ್ವಯಂ ನಯತಿ ಇತಿ ಅಗ್ರಣೀಃ (ದೇವಸೇನೆಯನ್ನು / ದೇವತೆಗಳ ಸೈನ್ಯವನ್ನು ಮುಂದಕ್ಕೆ ತಾನೇ ಒಯ್ಯುತ್ತಾನಾದ್ದರಿಂದ ಅಗ್ರಣಿಯು.) | ಏತದ್ ಏಕಮ್ ಅಗ್ನಿಶಬ್ದಸ್ಯ ಪ್ರವೃತ್ತಿನಿಮಿತ್ತಮ್ (ಇದೊಂದು ಅಗ್ನಿಶಬ್ದದ ಪ್ರವೃತ್ತಿಯ ಕಾರಣವು.) |

ತಥಾ ಚ ಬ್ರಾಹ್ಮಣಾಂತರಮ್ (ಹಾಗೆಯೇ, ಇನ್ನೊಂದು ಬ್ರಾಹ್ಮಣವು ಹೀಗೆ ಹೇಳಿದೆ—) |

ಅಗ್ನಿಃ ದೇವಾನಾಂ ಸೇನಾನೀಃ ಇತಿ (ಅಗ್ನಿಯು ದೇವತೆಗಳ ಸೇನಾನಿ / ಸೇನಾಧಿಪತಿ ಎಂಬುದಾಗಿ.)  

ಏತದೇವ ಅಭಿಪ್ರೇತ್ಯ ಬಹ್ವೃಚಾ ಮಂತ್ರಬ್ರಾಹ್ಮಣಮ್ ಆಮನಂತಿ (ಇದನ್ನೇ ಅಭಿಪ್ರಾಯಪಟ್ಟು ಋಗ್ವೇದಿಗಳು ಮಂತ್ರಬ್ರಾಹ್ಮಣವನ್ನು ಹೇಳುತ್ತಾರೆ—)  

ಅಗ್ನಿರ್ಮುಖಂ ಪ್ರಥಮೋ ದೇವತಾನಾಮ್ (ಐ.ಬ್ರಾ. ೧.೪) (ಅಗ್ನಿಯು ದೇವತೆಗಳಲ್ಲಿ ಮೊದಲಿಗನು; ದೇವತೆಗಳ ಮೊದಲ ಅಭಿವ್ಯಕ್ತಿಯು; ದೇವತೆಗಳ ಮೊದಲ ಮುಖ / ಬಾಯಿ / ರೂಪ. ದೇವತೆಗಳಿಗೆ ಹವಿಸ್ಸನ್ನು ಒದಗಿಸುವುದರಿಂದ ಅವರ ಬಾಯಿ / ಮುಖವೆನಿಸಿದ್ದಾನೆ.)  

ಅಗ್ನಿರ್ವೈ ದೇವಾನಾಮ್ ಅವಮಃ (ಐ.ಬ್ರಾ.೧.೧) (ಅಗ್ನಿಯೇ ದೇವತೆಗಳಲ್ಲಿ ಅತ್ಯಂತ ಕೆಳಮಟ್ಟದಲ್ಲಿರುವವ; ಮನುಷ್ಯಾದಿಗಳಿಗೆ ಮೊದಲು ಸಿಗುವ ದೇವತಾರೂಪ; ಅವೋಭವಃ ಅಧಸ್ತಾತ್ ಭವಃ — ಉದಾ— ಅವ-ರೋಹಣ = ಕೆಳಗಿಳಿಯುವುದು. ಅಥವಾ ಅವ ರಕ್ಷಣೇ ಅವತಿ— ರಕ್ಷಕ.) |

ತಥಾ ತೈತ್ತಿರೀಯಾಃ ಚ ಆಮನಂತಿ ( ಹಾಗೆಯೇ, ಕೃಷ್ಣಯಜುರ್ವೇದೀಯ ತೈತ್ತಿರೀಯಶಾಖಾನುಯಾಯಿಗಳು ಹೇಳುತ್ತಾರೆ— )|

ಅಗ್ನಿರಗ್ರೇ ಪ್ರಥಮೋ ದೇವತಾನಾಮ್ (ತೈ.ಬ್ರಾ.೨.೪.೩.೩) (ಅಗ್ನಿಯು ದೇವತೆಗಳಲ್ಲಿ ಪ್ರಥಮನು; ಮುಂದಿನವನು.)|

ಅಗ್ನಿರವಮೋ ದೇವತಾನಾಮ್ ಇತಿ ಚ ( ಅಗ್ನಿಯು ದೇವತೆಗಳ ರಕ್ಷಕನು)  

ವಾಜಸನೇಯಿನಃ ತು ಏವಮ್ ಆಮನಂತಿ (ವಾಜಸನೇಯೀಶಾಖೆಯ ಶುಕ್ಲಯಜುರ್ವೇದಿಗಳಾದರೋ ಹೀಗನ್ನುತ್ತಾರೆ— ) | ಸ ವಾ ಏಷೋऽಗ್ರೇ ದೇವತಾನಾಮ್ ಅಜಾಯತ ತಸ್ಮಾದ್ ಅಗ್ನಿಃ ನಾಮ ಇತಿ (ಇವನಾದರೋ ದೇವತೆಗಳಲ್ಲಿ ಮೊದಲು ಹುಟ್ಟಿದನು; ಅದರಿಂದಾಗಿ ಅಗ್ನಿಯೆಂದು ಹೆಸರು.) |

ಯಜ್ಞೇಷು ಅಗ್ನಿಹೋತ್ರೇಷ್ಟಿ-ಪಶು-ಸೋಮರೂಪೇಷು ಅಗ್ರಂ ಪೂರ್ವದಿಕ್-ವರ್ತಿ-ಆಹವನೀಯದೇಶಂ ಪ್ರತಿ ಗಾರ್ಹಪತ್ಯಾತ್ ಪ್ರಣೀಯತೇ / ಪ್ರ-ನೀಯತೇ -ಇತಿ ದ್ವಿತೀಯಂ ಪ್ರವೃತ್ತಿ-ನಿಮಿತ್ತಮ್ (ಅಗ್ನಿಹೋತ್ರ ಇಷ್ಟಿ, ಪಶುಯಜ್ಞ, ಸೋಮಯಜ್ಞಾದಿಗಳಲ್ಲಿ ಮುಂದೆ / ಪೂರ್ವದಿಕ್ಕಿನಲ್ಲಿರುವ ಆಹವನೀಯ ಸ್ಥಾನಕ್ಕೆ ಗೃಹಪತಿಯ / ಮನೆಯ ಯಜಮಾನನ ಸ್ಥಾನದಿಂದ / ಯಾಗಪ್ರದೇಶಕ್ಕಿಂತ ಪಶ್ಚಿಮದಿಕ್ಕಿನಲ್ಲಿರುವ ಮನೆಯೊಳಗಿಂದ ಗಾರ್ಹಪತ್ಯಾಗ್ನಿಯನ್ನು ತರಲಾಗುತ್ತದೆ ಎಂಬುದರಿಂದ, ಮನೆಯ “ಅಗ್”ರ ಭಾಗಕ್ಕೆ / ಮುಂಭಾಗಕ್ಕೆ ಕರೆತರಲ್ಪಡುವುದರಿಂದ / “ನೀ”ಯತೇ ಎಂಬುದರಿಂದ “ಅಗ್ನಿ”.— ಇದು ಅಗ್ನಿಯ ಹೆಸರಿಗೆ ನಿಮಿತ್ತ / ಕಾರಣವಾದ ಎರಡನೆಯ ಪ್ರವೃತ್ತಿಯು. ಸಾಮಾನ್ಯವಾಗಿ ಯಜ್ಞವು ಮನೆಯ ಮುಂದೆ ಪೂರ್ವಭಾಗದಲ್ಲಿ ನಡೆಸಲ್ಪಡುತ್ತದೆಯಲ್ಲವೆ? )   |

ಸಂ-ನಮಮಾನಃ ( ಚೆನ್ನಾಗಿ ನಮನೀಯತೆ / ವಿನಮ್ರತೆ ಉಳ್ಳವನಾಗಿ ಅಗ್ನಿಯು),

ಸಮ್ಯಕ್ ಸ್ವಯಮ್ ಏವ ಪ್ರಹ್ವೀ-ಭವತ್-ಅಂಗಂ ( ಚೆನ್ನಾಗಿ ತಾನೇ ಸ್ವತಃ ಬಾಗಿದ / ಸ್ವಂತ ಆಸಕ್ತಿಯಿಂದ ಕೂಡಿದ ಅಂಗೋಪಾಂಗಗಳಿಂದ),

ಸ್ವಕೀಯಂ ಶರೀರಂ ನಯತಿ (ತನ್ನದಾದ ಶರೀರವನ್ನು ಒಯ್ಯುತ್ತಾನೆ),

ಕಾಷ್ಠ-ದಾಹೇ ಹವಿಷ್ಪಾಕೇ (ಹವಿಸ್ ಪಾಕೇ; ಹವಿಃ ಪಾಕೇ) ಚ ಪ್ರೇರಯತಿ (ಕಟ್ಟಿಗೆ ಮುಂತಾದ ಯಜ್ಞಾರ್ಪಿತ ಇಂಧನಗಳನ್ನು ದಹಿಸುವುದರಲ್ಲಿ, ತನ್ಮೂಲಕ ಯಜ್ಞಕ್ಕೆ ಆಹುತಿ ಮಾಡಲ್ಪಟ್ಟ ಹವಿರ್ದ್ರವ್ಯಗಳನ್ನು ಪಾಕಮಾಡುವುದರಲ್ಲಿ / ಬೇಯಿಸುವುದರಲ್ಲಿ ಪ್ರೇರಕನಾಗುತ್ತಾನೆ / ಕಾರಣನಾಗುತ್ತಾನೆ),

ಇತಿ ತೃತೀಯಂ ಪ್ರವೃತ್ತಿ-ನಿಮಿತ್ತಮ್ (ಎಂಬುದರಿಂದಾಗಿ ಅಗ್ನಿಯೆನಿಸುತ್ತಾನೆ— ಇದು ಅಗ್ನಿಯೆಂಬ ಹೆಸರಿಗೆ ಅಗ್ನಿಯ ನಡವಳಿಕೆ / ಪ್ರವೃತ್ತಿಗಳಲ್ಲಿ ಮೂರನೇ ಕಾರಣ.)|

ಸ್ಥೂಲಾಷ್ಠೀವ-ನಾಮಕಸ್ಯ ಮಹರ್ಷೇಃ ಪುತ್ರಃ (ಸ್ಥೂಲಾಷ್ಠೀವನೆಂಬ ಹೆಸರಿನ ಮಹರ್ಷಿಯ ಮಗನಾದ ಸ್ಥೌಲಾಷ್ಠೀವಿಯೆಂಬ; — “ಸ್ಥೂಲಾಷ್ಠೀವಸ್ಯ ಅಪತ್ಯಂ ಪುಮಾನ್ ಸ್ಥೌಲಾಷ್ಠೀವಿಃ”— ಇದು ಕುಂತಿಯ ಮಗ ಕೌಂತೇಯ ಎಂದಂತೆ ಅಪತ್ಯಾರ್ಥಕ ತದ್ಧಿತ. ಅಪತ್ಯ= ಸಂತಾನ),

ನಿರುಕ್ತಕಾರಃ ಕಶ್ಚಿತ್ (ಒಬ್ಬಾನೊಬ್ಬ ನಿರುಕ್ತಕಾರನು),

ಅ-ಕ್ನೋಪನಃ - ಇತಿ ಅಗ್ನಿ-ಶಬ್ದಂ ನಿರ್ವಕ್ತಿ (ಅ-ಕ್ನೋಪನಃ ಎಂಬುದಾಗಿ ಅಗ್ನಿಶಬ್ದವನ್ನು ನಿರ್ವಚಿಸುತ್ತಾನೆ.) |

ತತ್ರ ನ ಕ್ನೋಪಯತಿ ಇತಿ ಉಕ್ತೇ ನ ಸ್ನೇಹಯತಿ (ಅಲ್ಲಿ, ನ ಕ್ನೋಪಯತಿ ಎಂದರೆ ಸ್ನೇಹ ಮಾಡುವುದಿಲ್ಲ),

ಕಿಂತು ಕಾಷ್ಠಾದಿಕಂ ರೂಕ್ಷಯತಿ ಇತಿ ಉಕ್ತಂ ಭವತಿ (ಆದರೆ, ಕಾಷ್ಠ / ಕಟ್ಟಿಗೆ ಮುಂತಾದವುಗಳನ್ನು ಕಠೋರತೆಯಿಂದ / ಸ್ನೇಹಪರತೆಯಿಲ್ಲದಂತೆ ದಹಿಸುತ್ತಾನೆ ಎಂದು ಹೇಳಿದಂತೆ ಆಗುತ್ತದೆ.)|

ಶಾಕಪೂಣಿ-ನಾಮಕಃ, ನಿರುಕ್ತಕಾರಃ ಧಾತುತ್ರಯಾತ್ ಅಗ್ನಿ-ಶಬ್ದ-ನಿಷ್ಪತ್ತಿಂ ಮನ್ಯತೇ (ಶಾಕಪೂಣಿಯೆಂಬ ಹೆಸರಿನ ನಿರುಕ್ತಕಾರನು ಮೂರು ಧಾತುಗಳಿಂದ ಅಗ್ನಿಶಬ್ದದ ನಿಷ್ಪತ್ತಿಯೆಂದು ತಿಳಿಯುತ್ತಾನೆ.) |

ಇತಃ, ಇಣ್ ಗತೌ ಇತಿ ಧಾತುಃ (ಇತಃ ಎಂಬ ಗತ್ಯರ್ಥಕವಾದ ಇಣ್ ಧಾತು.) |

ಅಕ್ತೋऽಞ್ಚೂ ವ್ಯಕ್ತಿಮ್ರಕ್ಷಣ-ಕಾಂತಿ-ಗತಿಷು ಇತಿ ಧಾತುಃ (ಅಕ್ತಃ / ಅಂಚಿತಃ ಎಂಬ ಅಭಿವ್ಯಕ್ತಿ / ಸ್ಪಷ್ಟತೆ-ಮ್ರಕ್ಷಣ/ಸ್ನೇಹನ/ಎಣ್ಣೆಯಂತೆ ಅಂಟುವಿಕೆ-ಕಾಂತಿ-ಗತ್ಯಾದಿ ಅರ್ಥಕೊಡುವ ಅಂಚೂ ಧಾತು.)  |

ದಗ್ಧೋ ದಹ ಭಸ್ಮೀಕರಣೇ ಇತಿ ಧಾತುಃ (ದಗ್ಧಃ ಎಂಬ ಭಸ್ಮಮಾಡುವ ಎಂಬರ್ಥ ಕೊಡುವ ದಹ ಧಾತು.)|

ನೀತೋ ಣೀಞ್ ಪ್ರಾಪಣೇ ಇತಿ ಧಾತುಃ (ನೀತಃ ಎಂಬ ತಲುಪಿಸುವ, ಪ್ರಾಪ್ತಿಮಾಡುವ, ಒಯ್ಯುವ ಎಂಬರ್ಥ ನೀಡುವ ಣೀಞ್ ಧಾತು.) |

ಅಗ್ನಿ-ಶಬ್ದಃ, ಹಿ ಅಕಾರ-ಗಕಾರ-ನಿಶಬ್ದಾನ್ ಅಪೇಕ್ಷಮಾಣಃ, ಏತಿ ಧಾತೋಃ ಉತ್ಪನ್ನಾತ್, ಅಯನ-ಶಬ್ದಾತ್, ಅಕಾರಮ್ ಆದತ್ತೇ (ಅಗ್ನಿಶಬ್ದವಾದರೋ ಅ ಹಾಗೂ ಗ ಎಂಬೆರಡಕ್ಷರಗಳನ್ನೂ, ನಿ ಎಂಬ ಶಬ್ದವನ್ನೂ ಅಪೇಕ್ಷಿಸುವುದಾಗಿರುತ್ತಾ, ಏತಿ ಧಾತುವಿನಿಂದ ಉತ್ಪನ್ನವಾದ ಅಯನ-ಶಬ್ದದಿಂದ ಅಕಾರವನ್ನು ಸ್ವೀಕರಿಸುತ್ತದೆ.)  |

ಅನಕ್ತಿ-ಧಾತುಗತಸ್ಯ ಕಕಾರಸ್ಯ ಗಕಾರಾದೇಶಂ ಕೃತ್ವಾ ತಮ್ ಆದತ್ತೇ (ಅನಕ್ತಿ ಧಾತುವಿನಲ್ಲಿನ ಕ-ಕಾರಕ್ಕೆ ಗ-ಕಾರ ಆದೇಶವನ್ನು ಮಾಡಿ ಅದನ್ನು ಪಡಕೊಳ್ಳುತ್ತದೆ.) |

ನೀಃ ಇತಿ ನಯತಿ ಧಾತುಃ (ನೀಃ ಎಂಬುದು ನಯತಿ ಎಂಬ ಕ್ರಿಯಾಪದದಿಂದ.) |

ಸ ಚ ಹ್ರಸ್ವೋ ಭೂತ್ವಾ ಪರೋ ಭವತಿ (ಅದು ಹ್ರಸ್ವವಾಗಿ ಅಗ-ಗಳಿಗೆ ಪರವಾಗುತ್ತದೆ / ಮುಂದೆ ಬರುತ್ತದೆ.)|

ತತೋ ಧಾತುತ್ರಯಂ ಮಿಲಿತ್ವಾ ಅಗ್ನಿ-ಶಬ್ದೋ ಭವತಿ (ಅನಂತರ ಮೂರು ಧಾತುಗಳು ಸೇರಿ ಅಗ್ನಿಶಬ್ದವು ಉಂಟಾಗುತ್ತದೆ.) |

ಯಜ್ಞಭೂಮಿಂ ಗತ್ವಾ ಸ್ವಕೀಯಮ್ ಅಂಗಂ ನಯತಿ ಕಾಷ್ಠದಾಹೇ ಹವಿಷ್ಪಾಕೇ ಚ ಪ್ರೇರಯತಿ ಇತಿ ಸಮುದಾಯಾರ್ಥಃ (ಯಜ್ಞಭೂಮಿಗೆ ಹೋಗಿ ತನ್ನ ದೇಹವನ್ನು ಅಲ್ಲಿಗೆ ಒಯ್ಯುತ್ತಾನೆ ಮತ್ತು ಕಟ್ಟಿಗೆಯನ್ನುರಿಸುವುದರಲ್ಲೂ ಹವಿಸ್ಸನ್ನು ಬೇಯಿಸುವುದರಲ್ಲೂ / ಪಚನಮಾಡುವುದರಲ್ಲೂ ಪ್ರೇರಕ / ಕಾರಕನೆಂಬುದು ಒಟ್ಟರ್ಥ.) |

ತಸ್ಯ ಅಗ್ನಿಶಬ್ದಾರ್ಥಸ್ಯ ದೇವತಾವಿಶೇಷಸ್ಯ ಪ್ರಾಧಾನ್ಯೇನ ಸ್ತುತಿಪ್ರದರ್ಶನಾಯ ಏಷಾ ‘ಅಗ್ನಿಮೀಳೇ’ ಇತಿ ಋಕ್ - ಭವತಿ ಇತಿ (ಯಜ್ಞದಲ್ಲಿ ಅಂತಹ ಅಗ್ನಿಶಬ್ದಾರ್ಥಕವಾದ ದೇವತಾವಿಶೇಷದ ಪ್ರಾಧಾನ್ಯದಿಂದ, ಅವನ ಸ್ತುತಿಯನ್ನು ತೋರಿಸಲು ಈ ‘ಅಗ್ನಿಮೀಳೇ’ ಎಂಬ ಋಕ್ಕು ಇದೆ ಎಂಬುದಾಗಿ.)  |

ತಾಮ್ ಏತಾಮ್ ಋಚಂ ಯಾಸ್ಕಃ - ಏವಂ ವ್ಯಾಖ್ಯಾತವಾನ್ (ಆ ಇಂತಹ ಋಕ್ಕನ್ನು ಯಾಸ್ಕನು ಹೀಗೆ ವ್ಯಾಖ್ಯಾನಿಸಿದನು.) |

ಅಗ್ನಿಮ್ ಈಳೇ - ಅಗ್ನಿಂ ಯಾಚಾಮಿ (ಅಗ್ನಿಯನ್ನು ಯಾಚಿಸುತ್ತೇನೆ), ಈಳಿಃ ಅಧ್ಯೇಷಣಾಕರ್ಮಾ ಪೂಜಾಕರ್ಮಾ ವಾ ಪುರೋಹಿತಃ, ವ್ಯಾಖ್ಯಾತಃ (ಈಳೇ— ಎಂಬುದರರ್ಥ ಬೇಡಿಕೊಳ್ಳುವುದು ಅಥವಾ ಪೂಜಿಸುವುದು. ಪೂಜಾಕರ್ಮ ಮಾಡುವವನು ಪುರೋಹಿತನೆಂದು ವ್ಯಾಖ್ಯಾನಿಸಲ್ಪಟ್ಟಿದೆ.),

ಯಜ್ಞಸ್ಯ ದೇವಃ, ದಾನಾತ್ ವಾ ದೀಪನಾತ್ ವಾ ದ್ಯೋತನಾತ್ ವಾ ದ್ಯುಸ್ಥಾನಃ ಭವತಿ ಇತಿ ವಾ ಯಃ ದೇವಃ ಸಾ ದೇವತಾ (ಯಜ್ಞದ ದೇವನು, ದಾನಶೀಲತೆಯಿಂದ, ಪ್ರದೀಪನ / ಉರಿಯುವಿಕೆಯಿಂದ, ದ್ಯುತಿ / ಬೆಳಕಿನರೂಪವಾದುದರಿಂದ / ಬೆಳಗುವಿಕೆಯಿಂದ, ಅಂತರಿಕ್ಷ / ಸ್ವರ್ಗ / ದೇವಲೋಕದಲ್ಲಿರುವಿಕೆಯಿಂದ ದೇವನೆನಿಸಿದವನು),

ಹೋತಾರಂ ಹ್ವಾತಾರಂ ಜುಹೋತೇಃ ಹೋತಾ ಇತಿ ಔರ್ಣನಾಭಃ (ಯಜ್ಞದ ಹೋತೃವನ್ನು, ದೇವತೆಗಳನ್ನು ಯಜ್ಞಕ್ಕೆ ಆಹ್ವಾನಿಸುವ ಹೋತೃವೆಂಬ ಋತ್ವಿಜನಂಥ ಕರ್ಮವನ್ನು ಮಾಡುವವನನ್ನು; ಯಜ್ಞಕ್ಕೆ ಹವಿಸ್ಸನ್ನು ಹೋಮಿಸುವವನು ಹೋತೃವೆಂದು ಔರ್ಣನಾಭನ ಮತ.)

ರತ್ನಧಾತಮಂ ರಮಣೀಯಾನಾಂ ಧನಾನಾಂ ದಾತೃತಮಮ್ (ನಿರುಕ್ತಮ್ ೭. ೧೫) ಇತಿ (ರತ್ನಧಾತಮಂ— ರಮಣೀಯವಾದ ರಮಿಸಲು / ಆನಂದಿಸಲು ಯೋಗ್ಯವಾದ ಧನ,ಕನಕ,ವಿದ್ಯೆ,ಜ್ಞಾನಾದಿ ಸಂಪತ್ತುಗಳನ್ನು ಕೊಡುವವರಲ್ಲಿ ಶ್ರೇಷ್ಠನಾದವನನ್ನು ಎಂದು.) |

ಅಸ್ಯ ಅಯಮ್ ಅರ್ಥಃ (ಇದಕ್ಕೆ ಈ ಅರ್ಥ.)|

ಈಡ್ ಇತಿ ಧಾತೋಃ ಸ್ತುತಿ-ಅರ್ಥತ್ವಂ ಪ್ರಸಿದ್ಧಮ್ (ಈಡ್ ಎಂಬ ಧಾತುವಿಗೆ ಸ್ತುತಿ / ಪ್ರಶಂಸೆ ಎಂಬರ್ಥವು ಪ್ರಸಿದ್ಧ.) |

ಧಾತೂನಾಮ್ ಅನೇಕಾರ್ಥತ್ವಮ್ ಇತಿ ನ್ಯಾಯಮ್ ಆಶ್ರಿತ್ಯ (ಕ್ರಿಯಾಪದಗಳ ಮೂಲಗಳಿಗೆ ಧಾತುಗಳೆಂದು ಹೆಸರು. ಅಂತಹ ಧಾತುಗಳಿಗೆ ಅನೇಕಾರ್ಥಗಳಿವೆ ಎಂಬ ನ್ಯಾಯವನ್ನು ಅವಲಂಬಿಸಿ / ಆಶ್ರಯಿಸಿ),

ಯಾಚ್ಞಾ-ಅಧ್ಯೇಷಣಾ-ಪೂಜಾ ಅಪಿ ಅತ್ರ ಉಚಿತತ್ವಾತ್ ತದರ್ಥತಯಾ ವ್ಯಾಖ್ಯಾತಾಃ (ಪ್ರಾರ್ಥನೆ / ಯಾಚನೆ, ಬೇಡಿಕೊಳ್ಳುವುದು / ತನ್ನಿಚ್ಛೆಯನ್ನು ನಿವೇದಿಸಿಕೊಳ್ಳುವುದು, ಪೂಜೆ - ಕೂಡ ಇಲ್ಲಿ ಸಮುಚಿತವಾಗಿರುವುದರಿಂದ / ಸೂಕ್ತ / ಯೋಗ್ಯ / ಸಾಂದರ್ಭಿಕವಾಗಿರುವುದರಿಂದ ಆಯಾ ಅರ್ಥಗಳಿಂದ ವ್ಯಾಖ್ಯಾನಿಸಲ್ಪಟ್ಟಿವೆ.)|

ಪುರೋಹಿತಶಬ್ದಃ, ದ್ವಿತೀಯೇ ಅಧ್ಯಾಯೇ (ನಿರುಕ್ತಮ್ ೨. ೧೨) ( ಪುರೋಹಿತ ಶಬ್ದವು ಯಾಸ್ಕ-ನಿರುಕ್ತದ ೨ನೇ ಅಧ್ಯಾಯ, ೧೨ನೇ ಶ್ಲೋಕದಲ್ಲಿದೆ.) |

“ಯದ್ ದೇವಾಪಿಃ ಶಂ ತನವೇ ಪುರೋಹಿತಃ”— ಇತಿ ಏತಾಮ್ ಋಚಮ್ ಉದಾಹೃತ್ಯ ಪುರಃ ಏನಂ ದಧಾತಿ ಇತಿ ವ್ಯಾಖ್ಯಾತಃ (“ಯಾವ ದೇವಾಪಿಯು ಶಂತನುವಿಗೆ ಪುರೋಹಿತನು” ಎಂಬರ್ಥದ ಈ ಋಕ್ಕನ್ನುದಾಹರಿಸಿ ಪಟ್ಟಣವು / ಜನತೆಯು ಇವನನ್ನು ದಕ್ಷಿಣೆ ಮುಂತಾದವನ್ನು ಕೊಟ್ಟು ಸತ್ಕರಿಸುತ್ತದೆ ಎಂದು ವ್ಯಾಖ್ಯಾನಿಸಲ್ಪಟ್ಟಿದೆ.) |

ತೈತ್ತಿರೀಯಾಃ ಚ ಪೌರೋಹಿತ್ಯೇ ಸ್ಪರ್ಧಮಾನಸ್ಯ ಪಶು-ಅನುಷ್ಠಾನಂ ವಿಧಾಯ ತತ್ಫಲತ್ವೇನ ಪುರಃ ಏನಂ ದಧತೇ - ಇತಿ ಆಮನಂತಿ  (ತೈತ್ತಿರೀಯಕೃಷ್ಣಯಜುರ್ವೇದಿಗಳಾದರೋ ಪೌರೋಹಿತ್ಯದಲ್ಲಿ ಸ್ಪರ್ಧೆ ಏರ್ಪಟ್ಟಾಗ, ಪಶುಸಂಬಂಧೀಯಾಗಾದ್ಯನುಷ್ಠಾನವನ್ನು ಮಾಡಿದಾಗ, ಅದರ ಫಲರೂಪವಾಗಿ ಸ್ಪರ್ಧೆಯನ್ನೇರ್ಪಡಿಸಿದ ಪುರಜನರು ಅವನಿಗೆ ದಕ್ಷಿಣೆ / ಪ್ರಶಸ್ತಿಗಳನ್ನು ನೀಡುತ್ತಾರೆ— ಎಂದು ಹೇಳುತ್ತಾರೆ.)|

ದೇವಶಬ್ದಃ, ದಾನ-ದೀಪನ-ದ್ಯೋತನಾನಾಮ್ ಅನ್ಯತಮಮ್ ಅರ್ಥಮ್ ಆಚಷ್ಟೇ (ದೇವ-ಶಬ್ದವು, ದಾನ-ಬೆಳಗುವಿಕೆ-ಪ್ರಕಾಶಿಸುವಿಕೆಗಳಲ್ಲಿ ಒಂದರ್ಥವನ್ನು ಹೊಂದುತ್ತದೆ.)|

ಯಜ್ಞಸ್ಯ ದಾತಾ, ದೀಪಯಿತಾ, ದ್ಯೋತಯಿತಾ ಅಯಮ್ ಅಗ್ನಿಃ ಇತಿ ಉಕ್ತಂ ಭವತಿ (ಯಜ್ಞದ ದಾತಾರನು, ಬೆಳಗುವವನು, ಪ್ರಕಾಶಕನು ಈ ಅಗ್ನಿಯು ಎಂದು ಹೇಳಿದಂತಾಗುತ್ತದೆ.)|

ದೀಪನ-ದ್ಯೋತನಯೋಃ ಏಕಾರ್ಥತ್ವೇ ಅಪಿ ಅಸ್ತಿ ಧಾತುಭೇದಃ (ದೀಪನ, ದ್ಯೋತನಗಳಿಗೆ ಒಂದೇ ಅರ್ಥವಿದ್ದರೂ, ಮೂಲಧಾತುವಿನಲ್ಲಿ ವ್ಯತ್ಯಾಸವಿದೆ.) |

ಯದ್ಯಪಿ ಅಗ್ನಿಃ ಪೃಥಿವೀಸ್ಥಾನಃ ತಥಾಪಿ ದೇವಾನ್ ಪ್ರತಿ ಹವಿರ್ವಹನಾತ್ ದ್ಯುಸ್ಥಾನಃ, ಭವತಿ (ಅಗ್ನಿಯು ಪೃಥ್ವಿಯಲ್ಲಿದ್ದರೂ ದೇವತೆಗಳಿಗೆ ಹವಿಸ್ಸನ್ನೊಯ್ಯುವುದರಿಂದ ದೇವಲೋಕದವನೂ ಆಗುತ್ತಾನೆ.) |

ದೇವಶಬ್ದ-ದೇವತಾಶಬ್ದಯೋಃ ಪರ್ಯಾಯತ್ವಾತ್, ಮಂತ್ರಪ್ರತಿಪಾದ್ಯಾ ಕಾಚಿತ್, ಅಗ್ನಿ-ವ್ಯತಿರಿಕ್ತಾ ದೇವತಾ ನ ಅನ್ವೇಷಣೀಯಾ (ದೇವ ಹಾಗೂ ದೇವತಾ ಶಬ್ದಗಳು ಪರಸ್ಪರ ಪರ್ಯಾಯವಾಗಿ ಬಳಸಬಹುದಾದವುಗಳಾದ್ದರಿಂದ, ಈ ಮಂತ್ರಪ್ರತಿಪಾದ್ಯವಾದ, ಅಗ್ನಿಯಲ್ಲದೆ ಬೇರಾವುದೋ ದೇವತೆಯನ್ನು ಹುಡುಕಬೇಕಾಗಿಲ್ಲ.) |

ಹೋತೃಶಬ್ದಸ್ಯ ಹ್ವಯತಿ-ಧಾತೋಃ ಉತ್ಪನ್ನತ್ವೇನ ದೇವಾನಾಮ್ ಆಹ್ವಾತಾರಮ್ ಇತಿ (ಹೋತೃಶಬ್ದದ ಹ್ವಯತಿ-ಧಾತುಜನ್ಯತೆಯಿಂದ / ಅದು ಹ್ವಯತಿಧಾತುವಿನಿಂದ ಹುಟ್ಟಿದ್ದರಿಂದ ಅದರರ್ಥ ದೇವತೆಗಳ ಆಹ್ವಾನಮಾಡುವವನೆಂದು.)|

ಔರ್ಣವಾಭ-ನಾಮಕಃ ತು ಮುನಿಃ ಜುಹೋತಿ ಧಾತೋಃ ಉತ್ಪನ್ನಃ ಹೋತೃಶಬ್ದಃ - ಇತಿ ಮನ್ಯತೇ (ಔರ್ಣವಾಭನೆಂಬ ಮುನಿಯಾದರೋ ಜುಹೋತಿ ಧಾತುನಿಷ್ಪನ್ನವಾದುದು ಹೋತೃಶಬ್ದ ಎಂದು ತಿಳಿಯುತ್ತಾನೆ.) | ಅಗ್ನೇಃ ಚ ಹೋತೃತ್ವಂ ಹೋಮ-ಅಧಿಕರಣತ್ವೇನ ದ್ರಷ್ಟವ್ಯಮ್ (ಅಗ್ನಿಯ ಹೋತೃತ್ವವಾದರೋ ಹೋಮದ ಮೂಲಾಶ್ರಯವು ಅಗ್ನಿ ಎಂಬ ನೆಲೆಯಲ್ಲಿ ಕಾಣಬೇಕು.) |

ರತ್ನಶಬ್ದಃ ದ್ವಿತೀಯ-ಅಧ್ಯಾಯೇ ಮಘಮ್ ಇತ್ಯಾದಿಷು ಅಷ್ಟಾವಿಂಶತೌ ಧನ-ನಾಮಸು ಪಠಿತಃ (ರತ್ನಶಬ್ದವಾದರೋ ನಿರುಕ್ತಿಯ ೨ನೇ ಅಧ್ಯಾಯದಲ್ಲಿ ಮಘ ಮುಂತಾದ ೨೮ ಸಂಪತ್ತುಗಳ# ಹೆಸರುಗಳಲ್ಲಿ ಹೇಳಲ್ಪಟ್ಟಿದೆ.) |

ರಮಣೀಯತ್ವಾತ್ ರತ್ನತ್ವಮ್ (ರಮಣೀಯತೆಯಿಂದಾಗಿ ರತ್ನತ್ವವು.)|

ದಧಾತಿ-ಧಾತುಃ ಅತ್ರ ದಾನಾರ್ಥ-ವಾಚಿ ಇತಿ (ದಧಾತಿಯ ಧಾತುವು ಇಲ್ಲಿ ದಾನಾರ್ಥವನ್ನು ಹೇಳುವುದು ಎಂದು.) |

ತತ್ ಇದಂ ನಿರುಕ್ತಕಾರಸ್ಯ ಯಾಸ್ಕಸ್ಯ ಮಂತ್ರ-ವ್ಯಾಖ್ಯಾನಮ್ (ಇದು ನಿರುಕ್ತಕಾರ ಯಾಸ್ಕನ ಈ ಮಂತ್ರದ ವ್ಯಾಖ್ಯಾನ.) |

ಅಥ ವ್ಯಾಕರಣ-ಪ್ರಕ್ರಿಯಾ ಉಚ್ಯತೇ (ಅನಂತರ, ವ್ಯಾಕರಣಪ್ರಕ್ರಿಯೆಯು ಹೇಳಲ್ಪಡುತ್ತದೆ.) |

……….ಅಂಗತಿ ಸ್ವರ್ಗೇ ಗಚ್ಛತಿ ಹವಿಃ ನೇತುಮ್ ಇತಿ ಅಗ್ನಿಃ (ಸ್ವರ್ಗಕ್ಕೆ ಹೋಗುತ್ತಾನೆ ಹವಿಸ್ಸನ್ನೊಯ್ಯಲು ಎಂಬುದಾಗಿ ಅಗ್ನಿಯು.)|

………ಋತ್ವಿಕ್-ಶಬ್ದಃ -  ಋತೌ ಯಜತಿ ಇತಿ ವಿಗ್ರಹೇ ಸತಿ (ಋತ್ವಿಕ್ ಶಬ್ದವು ಋತುವಿನಲ್ಲಿ / ಸೂಕ್ತಕಾಲದಲ್ಲಿ / ಸುಮುಹೂರ್ತದಲ್ಲಿ / ಕಾಲಕಾಲಕ್ಕೆ / ಆಯಾಯ ಋತುವಿನಲ್ಲಿ ಆಯಾಯ ಯಜ್ಞವನ್ನು ಮಾಡುವವನೆಂಬ ವಿಗ್ರಹವಾಕ್ಯವು)……

ತಥಾ ಚ ಆಮ್ನಾಯತೇ ರತ್ನಂ ಧಾತಾ ಇತಿ (ಅಂತೆಯೇ ಹೇಳಲ್ಪಡುತ್ತದೆ— ರತ್ನವನ್ನು ಕೊಡುವವ / ಧರಿಸುವವ ಎಂದು.)| ರತ್ನಾನಿ ದಧಾತಿ ಇತಿ ವಿಗ್ರಹಃ (ರತ್ನಗಳನ್ನು ಕೊಡುತ್ತಾನೆ / ಧರಿಸುತ್ತಾನೆ ಎಂದು ಸಮಾಸದ ವಿಗ್ರಹವು.) | ………

ವೇದಾವತಾರೇ, ಆದ್ಯಾಯಾಃ, ಋಚಃ, ಅರ್ಥಃ ಚ ಪ್ರಪಂಚಿತಃ (ವೇದದ ಅವತರಣಿಕೆಯಲ್ಲಿ ಮೊದಲ ಋಕ್ಕಿನ ಅರ್ಥವಾದರೋ ಪ್ರಕೃಷ್ಟವಾಗಿ ಚರ್ಚಿತವಾಯಿತು.) |

ವಿಜ್ಞಾತಂ ವೇದ-ಗಾಂಭೀರ್ಯಮ್, ಅಥ ಸಂಕ್ಷಿಪ್ಯ ವರ್ಣ್ಯತೇ (ವೇದದ ಅರ್ಥ ಗಾಂಭೀರ್ಯವು, ಶಬ್ದಗಂಭೀರತೆಯು, ಭಾವಗಹನತೆಯು, ತತ್ತ್ವರಹಸ್ಯವು ಈ ವಿಸ್ತಾರವಾದ ವಿವರಣೆಯಿಂದ ತಿಳಿಯಿತು. ಇನ್ನು ಸಂಕ್ಷೇಪವಾಗಿ ವರ್ಣಿಸಲ್ಪಡುತ್ತದೆ.) ||

#ಮಘಮ್ (ಯಾಚಕರಿಗೆ ನೀಡುವ ದಾನದ ಹಣ), ರೇಕ್ಣಃ(ಸಾಯುವವನ ಉಳಿಕೆ ಧನ), ರಿಕ್ಥಮ್ (ಸೇವಕರಿಗೆ ಕೊಡುವ ಹಣ), ವೇದಃ (ಜ್ಞಾನಧನ), ವರಿವಃ (ಗೌರವಾಧಿಕ್ಯಕ್ಕೆ ಕಾರಣವಾದ ಬಹುಧನ), ಶ್ವಾತ್ರಮ್ (ಬೇಗ ಹೋಗುವ ಚಂಚಲ ಧನ), ರತ್ನಮ್ (ರಮಣೀಯ, ಆನಂದಿಸಬಹುದಾದ ಧನ), ರಯಿಃ (ಪುಣ್ಯದಿಂದ ಪ್ರಾಪ್ತವಾದ, ಕೀರ್ತಿನೀಡುವ, ಬೇಡಿದವರಿಗೆ ನೀಡುವ ಧನ), ಕ್ಷತ್ರಮ್ (ಪೂರ್ವಜನ್ಮಸುಕೃತಲಭ್ಯ, ಸ್ಥಿರ, ಉಪಭೋಗಸಾಧನ, ದಾರಿದ್ರ್ಯನಿವಾರಕ, ಪಾಪದಿಂದ ರಕ್ಷಿಸುವ ಧನ), ಭಗಃ (ಭೋಗಾಪೇಕ್ಷಿಗಳು ಸೇವಿಸುವ ಧನ; ಈ ಹಣಬಲದಿಂದ ಇತರರಿಂದ ಸೇವಿಸಲ್ಪಡುವರು), ಮೀವ್ವಹುಮ್ (ದಾನಿಗಳಿಂದ ಬೇಡಿದವರಿಗೆ ಕೊಡಲ್ಪಡುವ ಧನ), ಗಯಃ (ಹೋತೃಗಳಿಂದ ಸ್ತುತಿಸಲ್ಪಡುವ ಧನ), ದ್ಯುಮ್ನಮ್ (ಪ್ರಕಾಶವುಳ್ಳ, ಎಲ್ಲರಿಂದಲೂ ಹೊಂದಲ್ಪಡುವಂಥ ಹಣ), ಇಂದ್ರಿಯಮ್ (ಇಂದ್ರ / ಆತ್ಮನಿಂದ ಸೃಷ್ಟವಾದ ಪರಮೈಶ್ವರ್ಯ / ಆತ್ಮಜ್ಞಾನ), ವಸುಃ (ಬಡತನ ನಾಶಮಾಡುವಂಥ), ರಾಯಃ (ಅರ್ಥಿಗಳಿಗೆ ದಾನಮಾಡುವ, ಪೂರ್ವಸುಕೃತಲಭ್ಯ ಧನ), ರಾಧಃ (ಧರ್ಮಾದಿ ಪುರುಷಾರ್ಥ ಸಾಧಕ, ದಾರಿದ್ರ್ಯಹರ), ಭೋಜನಮ್ (ಇದರಿಂದ ವಿಷಯಾನುಭವ, ರಕ್ಷಣೆ), ತನಾ (ಧರ್ಮಾರ್ಥಕಾಮಗಳೆಂಬ ತ್ರಿವರ್ಗಸಾಧನಗಳನ್ನು ವಿಸ್ತರಿಸುವ ಧನ), ನೃಮ್ಣಮ್ (ಇತರರನ್ನು ಬಗ್ಗಿಸುವಂತೆ ಮಾಡುವ ಧನ), ಬಂಧುಃ (ಬಂಧುವಿನಂತೆ ಹಿತಕರ, ಸೇವಕರು ಮುಂತಾದವರು ಇದಕ್ಕೆ ಕಟ್ಟುಬೀಳುತ್ತಾರೆ / ದಾಕ್ಷಿಣ್ಯ ಬಂಧನಕ್ಕೊಳಗಾಗುತ್ತಾರೆ), ಮೇಧಾ (ಧನವಂತರ ಬುದ್ಧಿಯಲ್ಲಿ ಸಂಪಾದಿಸಬೇಕು, ರಕ್ಷಿಸಬೇಕು, ಕೊಡಬೇಕು ಎಂದು ಧರಿಸಲ್ಪಡುವ), ಯಶಃ (ಅನ್ನಗಳಲ್ಲೊಂದು), ಬ್ರಹ್ಮ (ಅನ್ನಗಳಲ್ಲೊಂದು, ಧರ್ಮಾಭಿವೃದ್ಧಿಕರ, ಭೋಗಾಭಿವರ್ಧಕ), ದ್ರವಿಣಮ್ (ಬಲಗಳಲ್ಲೊಂದು, ಪೂರ್ವಸುಕೃತಜನ್ಯ, ಬೇಡಿದವರಿಗೆ ಕೊಡುವ), ಶ್ರವಃ (ಅನ್ನಗಳಲ್ಲೊಂದು, ಕೀರ್ತಿ, ಪ್ರಸಿದ್ಧಿ), ವ್ರತಮ್ (ಮೇಘನಾಮಗಳಲ್ಲೊಂದು, ದಾರಿದ್ರ್ಯವನ್ನು ಮುಚ್ಚುವ, ತೆರಿಗೆಗೆ ಸಿಗದ), ವೃತಮ್ (ಎಲ್ಲರಿಂದಲೂ ಸೇವಿಸಲ್ಪಡುವುದು) -- ಇವು 28 ಧನನಾಮಗಳು. ಯಾಸ್ಕನಿರುಕ್ತ ಅಧ್ಯಾಯ 3.

ಮಧ್ವಭಾಷ್ಯಂ ಬನ್ನಂಜೆ-ಗೋವಿಂದಾಚಾರ್ಯವ್ಯಾಖ್ಯಾಸಂವಲಿತಮ್—

ॐ ॥ ನಾರಾಯಣಂ ನಿಖಿಲ-ಪೂರ್ಣ-ಗುಣಾರ್ಣಮು-ಚ್ಚ (/ಚ್ಚೈಃ)
ಸೂರ್ಯಾಮಿತ-ದ್ಯುತಿಮಶೇಷ-ನಿರಸ್ತದೋಷಮ್ |
ಸರ್ವೇಶ್ವರಂ ಹರಿಮಜೇಶ-ನತಂ(/ನುತಂ) ಪ್ರಣಮ್ಯ
ವಕ್ಷ್ಯಾಮ್ಯೃಗರ್ಥಮತಿತುಷ್ಟಿಕರಂ ತದಸ್ಯ || ೧ ||

ನಿಖಿಲ (ಸರ್ವ, ಅಶೇಷ, ನಿರ್ಜಿತ ಖಿಲಃ, ಉಳಿಕೆಯಿಲ್ಲದ) ಪರಿಪೂರ್ಣ ಗುಣಯುಕ್ತನಾದ, ಅಕಾರ ವರ್ಣರೂಪಿಯಾದ / ಅ-ಕ್ಷರನಾದ (ನ ಕ್ಷರತೀತಿ ಅಕ್ಷರಃ, ನಾಶವಿಲ್ಲದ), ಕಿಂಚಿತ್ತೂ ದೋಷವಿರದ, ಸೂರ್ಯನಾಗಿ ಆಕಾಶದಲ್ಲಿ ಉಚ್ಚಸ್ಥಾನದಲ್ಲಿ ವ್ಯಕ್ತನಾಗಿ ಗೋಚರಿಸುವ, ಮಿತಿಯಿಲ್ಲದ ಜ್ಯೋತಿಸ್ವರೂಪಿಯಾದ, ಸರ್ವರ ಈಶ್ವರ / ಒಡೆಯನಾದ (ಅಖಿಲಾಂಡಕೋಟಿ ಬ್ರಹ್ಮಾಂಡನಾಯಕನಾದ), ಅಜ / ಬ್ರಹ್ಮಾ,  ಈಶ / ಶಿವರಿಂದ ಸ್ತುತಿಸಲ್ಪಟ್ಟು, ನಮಸ್ಕರಿಸಲ್ಪಟ್ಟ, ಸಕಲದುರಿತಪರಿಹಾರಕನಾಗಿ ಹರಿಯೆನಿಸಿದ ಪ್ರಣವರೂಪೀ ನಾರಾಯಣನನ್ನು ಪ್ರಣಾಮ ಮಾಡಿ / ನಮಿಸಿ, ಆತನಿಗತಿಪ್ರಿಯವಾದ ಋಕ್ಸಂಹಿತೆಯ ಅರ್ಥವನ್ನು ಹೇಳುವೆನು.

ಓಮಶೇಷಗುಣಾಧಾರ ಇತಿ ನಾರಾಯಣೋऽಪ್ಯಸೌ |
ಪೂರ್ಣೋ ಭೂತಿವರೋऽನಂತ-ಸುಖೋ ಯದ್ ವ್ಯಾಹೃತೀರಿತಃ || ೨ ||

ಓಮ್— ಎಂದರೆ ಅಶೇಷವಾದ (ಎಲ್ಲ / ಶೇಷ, ಉಳಿಕೆ ಇಲ್ಲದ) ಗುಣಗಳಿಗೆ ಆಧಾರನು, ಆಶ್ರಯನು ಎಂದು. ಭೂಃ—  ಎಂದರೆ ‘ಭೂ’ಮ, ಬೃಹತ್ತಾದ, ಎಲ್ಲವನ್ನೊಳಗೊಳ್ಳುವ ಪೂರ್ಣಸ್ವರೂಪೀ ಪರಬ್ರಹ್ಮ / ನಾರಾಯಣ. ಭುವಃ— ‘ಭೂ’ತಿ / ಐಶ್ವರ್ಯವನ್ನು ಬೇಡಿದವರಿಗೆ ‘ವ’ರವಾಗಿ ನೀಡುವವನು. ಸುವಃ / ಸ್ವಃ— ಅನಂತವಾದ, ಅಂತ್ಯವಿಲ್ಲದ, ಚಿರಂತನ ಸುಖವೆನಿಸಿದ ಮೋಕ್ಷವನ್ನು ನೀಡುವವನು. ಇದು ವಿಶ್ವಾಮಿತ್ರದೃಷ್ಟವಾದ ಸವಿತೃಗಾಯತ್ರೀಮಂತ್ರದ ವ್ಯಾಹೃತಿಗಳ ಅರ್ಥವೆಂದು ಹೇಳಲ್ಪಟ್ಟಿದೆ.

ಗುಣೈಸ್ತತಃ ಪ್ರಸವಿತಾ ವರಣೀಯೋ ಗುಣೋನ್ನತೇಃ |
ಭಾರತಿ-ಜ್ಞಾನರೂಪತ್ವಾದ್ ಭರ್ಗೋ ಧ್ಯೇಯೋऽಖಿಲೈರ್ಜನೈಃ |
ಪ್ರೇರಕೋऽಶೇಷಬುದ್ಧೀನಾಂ - ಸ ಗಾಯತ್ರ್ಯರ್ಥ ಈರಿತಃ (/ಗಾಯತ್ರ್ಯರ್ಥ ಇತೀರಿತಃ) || ೩ ||

ತತ್ / ತದ್— ವಾಚ್ಯನಾದ ಪರಬ್ರಹ್ಮನ ಗುಣ / ಗುಣಕ / ವೃದ್ಧಿ / ವಿಸ್ತಾರಗಳಿಂದ (ತತಃ ಗುಣೈಃ), ಲೋಕವನ್ನು ಪ್ರಸವಿಸಿದವನು ಸವಿತೃವು (ಪ್ರಸವಿತಾ). ಆತನ ಅತ್ಯುನ್ನತವಾದ ಗುಣಗಳಿಂದಾಗಿ (ಗುಣೋನ್ನತೇಃ) ಆತನು ವರಣೀಯನು (ವೃಞ್ ವರಣೇ, ಸಂಭಕ್ತೌ, ಆವರಣೇ ಧಾತುಃ— ಪೂಜನಾರ್ಥಕ, ಚೆನ್ನಾಗಿ ಭಜಿಸುವ, ನಮ್ಮನ್ನೆಲ್ಲ ಆವರಿಸಿರುವ), ಪೂಜನೀಯನು, ಭಕ್ತರು, ಆರ್ತರು ಅವನನ್ನಾಶ್ರಯಿಸಿ  ವರ ಬೇಡಲು ಯೋಗ್ಯನು. ಇದು “ತತ್ಸವಿತುರ್ವರೇಣಿಯಂ / ವರೇಣ್ಯಂ”— ಎಂಬ ಭಾಗದ ಅರ್ಥ.

ಭಾರತಿ / ಸರಸ್ವತಿಯೆಂಬ ಜ್ಞಾನರೂಪವೂ ಅವನೇ ಆಗಿದ್ದು, ಇದರಿಂದಾಗಿ (ಭಾರತೀಜ್ಞಾನರೂಪತ್ವಾದ್), ಆತನು ಭರ್ಗನೆನಿಸಿದ್ದಾನೆ (ಭರ್ಗಃ) / ಸಕಲ ಜನರಿಂದ ಧ್ಯಾನಿಸಲ್ಪಡತಕ್ಕವನಾಗಿದ್ದಾನೆ (ಅಖಿಲೈಃ ಜನೈಃ ಧ್ಯೇಯಃ). ಇದು “ಭರ್ಗೋ ದೇವಸ್ಯ ಧೀಮಹಿ”— ಎಂಬುದರರ್ಥ.

ಸಕಲರ ಬುದ್ಧಿಗಳ ಪ್ರೇರಕನು ಪರಮಾತ್ಮನು (ಅಶೇಷಬುದ್ಧೀನಾಂ ಪ್ರೇರಕಃ). ಇದು ಗಾಯತ್ರಿಯ ೩ನೇ ಪಾದವಾದ “ಧಿಯೋ ಯೋ ನಃ ಪ್ರಚೋದಯಾತ್”—ಎಂಬುದರ ಭಾವಾರ್ಥ.

ಇದು ವೇದಸಾರವೂ, ವೇದಮೂಲವೂ, ವೇದಮಾತೆಯೂ ಎನಿಸಿದ ಗಾಯತ್ರೀಮಂತ್ರದ ಅರ್ಥ ಎನ್ನಲ್ಪಟ್ಟಿದೆ (ಸಃ, ಗಾಯತ್ರೀ-ಅರ್ಥಃ, ಈರಿತಃ). ಇದು ಗಾಯತ್ರಿಯ ಅರ್ಥ ಎಂದು ಹೇಳಲ್ಪಟ್ಟಿದೆ (ಗಾಯತ್ರೀ-ಅರ್ಥಃ, ಇತಿ ಈರಿತಃ).

ಹೀಗೆ ಮಧ್ವಾಚಾರ್ಯರು ಋಗ್ಭಾಷ್ಯಾರಂಭದಲ್ಲೇ ಗಾಯತ್ರಿಯ ವ್ಯಾಖ್ಯೆಯನ್ನು ಮಾಡಿ, ಗಾಯತ್ರಿಯು ಸರ್ವಸಿದ್ಧಿಪ್ರದವು, ವೇದಾರ್ಥಪ್ರದವು ಎಂದು ಗಾಯತ್ರೀಜಪ / ಸಂಧ್ಯಾವಂದನೆ / ಗಾಯತ್ರ್ಯುಪಾಸನೆಯು ವೇದ ಹಾಗೂ ಬ್ರಾಹ್ಮಣ್ಯದ ಬೇರು ಎಂಬುದಾಗಿ ತೋರಿಸಿಕೊಟ್ಟಿದ್ದಾರೆ. ಬೇರೇನನ್ನೂ ಮಾಡದಿದ್ದರೂ ಕೊನೇ ಪಕ್ಷ ೧೨ ಗಾಯತ್ರೀಜಪವಾದರೂ ಮಾಡಬೇಕೆಂಬ ಹಿರಿಯರ ಮಾತು ಬಹುಶಃ ಇದಕ್ಕಾಗಿಯೇ ಬಂದಿರಬೇಕು.

ಸ ಪೂರ್ಣತ್ವಾತ್ ಪುಮಾನ್ ನಾಮ ಪೌರುಷೇ ಸೂಕ್ತ ಈರಿತಃ |
ಸ ಏವಾಖಿಲವೇದಾರ್ಥಃ ಸರ್ವಶಾಸ್ತ್ರಾರ್ಥ ಏವ ಚ || ೪ ||

ಅವನು (ನಾರಾಯಣನು) (ಸಃ) ಪರಿಪೂರ್ಣತೆಯಿಂದಾಗಿ (ಪೂರ್ಣತ್ವಾತ್) “ಪುಮಾನ್ / ಪುರುಷ” ಎಂದು (ಪುಮಾನ್ ನಾಮ)  ಪುರುಷಸೂಕ್ತದಲ್ಲಿ (ಪೌರುಷೇ ಸೂಕ್ತೇ) ಸ್ತುತಿಸಲ್ಪಟ್ಟಿರುವನು (ಈರಿತಃ). ಅವನೇ ಸಕಲವೇದಗಳ ಅರ್ಥಸ್ವರೂಪನೂ (ಸಃ, ಏವ ಅಖಿಲ / ನ ಖಿಲಃ / ವೇದಾರ್ಥಃ)ಹಾಗೂ (ಚ) ಎಲ್ಲಾ ಶಾಸ್ತ್ರಗಳ ತಾತ್ಪರ್ಯನೂ (ಸರ್ವಶಾಸ್ತ್ರಾರ್ಥಃ ಏವ) ಆಗಿರುವನು.

ಹೀಗೆ ಅ,ಉ,ಮ—ಗಳೆಂಬ ಮೂರುಮಾತ್ರೆಗಳೇ ೩ ಪಾದಗಳಾಗುಳ್ಳ ದೈವೀಗಾಯತ್ರೀಚ್ಛಂದಸ್ಸಿನಲ್ಲಿರುವ, ಆದಿನಾದವಾದ ಪ್ರಣವಾಕ್ಷರವೆನಿಸಿದ ಓಂಕಾರದಿಂದ, ೮ ಅಕ್ಷರಗಳ ಮೂರುಪಾದಗಳ ಒಟ್ಟು ೨೪ ಅಕ್ಷರಗಳ ಆರ್ಷೀಗಾಯತ್ರೀಚ್ಛಂದಸ್ಸಿನಲ್ಲಿರುವ ಸವಿತೃಗಾಯತ್ರಿಯು ಉದಯಿಸಿ, ಅದರಿಂದ ತರುವಾಯ ೩ ವೇದಗಳ ಪ್ರತಿಪಾದ್ಯನೂ ಸಾರಸರ್ವಸ್ವವೂ ಆದ ಪರಮಪುರುಷೋತ್ತಮನನ್ನು ವರ್ಣಿಸುವ, ಸಕಲ ಸೃಷ್ಟಿಚರಿತ್ರೆಯನ್ನು ಸಂಕ್ಷಿಪ್ತವಾಗಿ ಹೇಳುವ ಪುರುಷಸೂಕ್ತವು ಪ್ರಾದುರ್ಭಾವಗೊಂಡು, ತದುಪರಿ ಋಗ್ಯಜುಸ್ಸಾಮಗಳೆಂಬ ೩ ವಿಧದ ಮಂತ್ರಾತ್ಮಕವಾಗಿದ್ದು ತ್ರಯೀ ಎನಿಸಿದ ೪ ವೇದಗಳ ಅವತಾರವಾಗಿ, ೪ ಮುಖದ ಬ್ರಹ್ಮನುದಿಸಿ, ತತ್-ಪಶ್ಚಾತ್ (ಅನಂತರ) ಸದ್ಯೋಜಾತ-ವಾಮದೇವ-ಅಘೋರ-ಈಶಾನ-ತತ್ಪುರುಷಗಳೆಂಬ ೫ ಮುಖಗಳ ಶಿವನು ಅವತರಿಸಿ, ಆಕಾಶ-ವಾಯು-ಅಗ್ನಿ-ಆಪಃ / ಜಲ -ಪೃಥಿವೀ— ಎಂಬ ೫ ಮಹಾಭೂತಗಳುಂಟಾಗಿ, ಶಿಕ್ಷಾ-ವ್ಯಾಕರಣ-ಛಂದಸ್-ನಿರುಕ್ತ-ಜ್ಯೋತಿಷ-ಕಲ್ಪಗಳೆಂಬ ೬ ವೇದಾಂಗಗಳಿತ್ಯಾದಿಯಾಗಿ  ಜ್ಞಾನವಿಸ್ತಾರವೂ, ಸೃಷ್ಟಿವಿಸ್ತಾರವೂ ಆಯಿತೆಂದು ಹೇಳಬಹುದು.

ಸ ಏವಾಖಿಲಶಬ್ದಾರ್ಥ (/ಸ ಏವ ಸರ್ವಶಬ್ದಾರ್ಥ) ಇತ್ಯಾಹೋಪನಿಷತ್ ಪರಾ |
ತಾ ವಾ ಏತಾ ಋಚ ಇತಿ ವಿಶೇಷೇಣಾಪ್ಯೃಗರ್ಥತಾಮ್ || ೫ ||

ಅವನೇ ಎಲ್ಲ ಶಬ್ದಗಳ ಅರ್ಥವೂ ಆಗಿರುವನೆಂದು ವೇದಸಾರವಾದ ವೇದಾಂತವೂ, ಪರಾವಿದ್ಯೆಯೂ ಎನಿಸಿದ ಉಪನಿಷತ್ತುಗಳು ಹೇಳುತ್ತವೆ. ಅಂತಹ ಶ್ರೇಷ್ಠವಾದ ಋಕ್ಕುಗಳಿವು ಎಂಬುದರಿಂದಾಗಿಯೂ, ವಿಶೇಷವಾಗಿ ಋಕ್ಕುಗಳ ಅರ್ಥಪ್ರತಿಪಾದ್ಯನೂ ನಾರಾಯಣನೆಂಬುದಾಗಿಯೂ ಹೇಳಿದೆ.

ಯೋ ದೇವಾನಾಮಿತಿ ಶ್ರುತ್ಯಾ ದೇವನಾಮ್ನಾಂ ವಿಶೇಷತಃ |
ಸ್ಪಷ್ಟತ್ವಾತ್ ತದ್ಗತತ್ವೇನ ತತ್ರಾऽಹಾಗ್ರೇऽಗ್ನಿನಾಮಕಮ್ || ೬ ||

“ಯೋ ದೇವಾನಾಮ್” ಎಂಬ ಶ್ರುತ್ಯುಕ್ತಿಯಿಂದ (ವೇದೋಕ್ತಿಯಿಂದ) ಆ ಶ್ರುತಿಯಲ್ಲಿರುವ ದೇವನಾಮಗಳಲ್ಲಿ ಯಾವ ವಿಶೇಷನಾಮವೆಂಬ ಸ್ಪಷ್ಟತೆಗಾಗಿ ಅದೇ ಶ್ರುತಿಯಲ್ಲಿ (ಋಗ್ವೇದಸಂಹಿತೆಯಲ್ಲಿ) ಮೊದಲಿಗೆ ಅಗ್ನಿನಾಮಕನಾದ ಭಗವತ್ಸ್ವರೂಪವನ್ನು ಹೇಳಿದೆ.

“ಯೋ ದೇವಾನಾಂ ನಾಮಧಾ ಏಕ ಏವ” ಇತಿ (ಋಗ್ವೇದೀಯ) ದಶಮಮಂಡಲೇ ವಿಶ್ವಕರ್ಮಸೂಕ್ತಮ್ | “ಅಜಸ್ಯ ನಾಭೌ” ಇತಿ ಲಿಂಗೇನ ತಸ್ಯ ನಾರಾಯಣಪರತ್ವಂ ಹಿ (ಮಾಧ್ವೇ ಋಗ್ಭಾಷ್ಯೇ) ಭಾಷ್ಯೇ ಸ್ಥಿತಮ್ | “ವಿಶ್ವಕರ್ಮಾ ಮನುಸ್ತ್ವಷ್ಟಾ” ಇತಿ ಚ ಸಹಸ್ರನಾಮಸು |

“ಯೋ ದೇವಾನಾಂ ನಾಮಧಾ ಏಕ ಏವ” ಎಂಬುದು ಋಗ್ವೇದಸಂಹಿತೆಯ ೧೦ನೇ ಮಂಡಲದಲ್ಲಿನ ವಿಶ್ವಕರ್ಮಸೂಕ್ತಕ್ಕೆ ಸಂಬಂಧಿಸಿದ್ದು. “ಅಜಸ್ಯ ನಾಭೌ” (ತನ್ನ ನಾಭೀಕಮಲದಲ್ಲಿ ಅಜ / ಬ್ರಹ್ಮನ ರೂಪವನ್ನು ಧರಿಸಿ) ಎಂಬ ಗುರುತಿನಿಂದ ಮಂತ್ರದ ನಾರಾಯಣಪರತೆಯು ಮಧ್ವಾಚಾರ್ಯಕೃತ ಋಗ್ಭಾಷ್ಯದಲ್ಲಿ ಇದೆ. ಅಂತೆಯೇ, “ವಿಶ್ವಕರ್ಮಾ ಮನುಃ ತ್ವಷ್ಟಾ” ಎಂಬುದಾಗಿ ವಿಷ್ಣುಸಹಸ್ರನಾಮಸ್ತೋತ್ರದ ಸಾವಿರನಾಮಗಳಲ್ಲಿ ಇದೆ.

[ಅಗ್ನಿಮ್ - ನವ, ಮಧುಚ್ಛಂದಾಃ, ಗಾಯತ್ರೀ, ಅಗ್ನಿಃ, ಷಡ್ಜ-ಸ್ವರಃ]

[ಅಗ್ನಿಮೀಳೇ— ಯಿಂದ ತೊಡಗಿ ೯ ಋಕ್ಕುಗಳಿರುವ (ಋಚ್ಯಂತೇ ಸ್ತೂಯಂತೇ ದೇವಾ ಅನಯಾ ಇತಿ ಋಕ್— ಇದರಿಂದ ದೇವತೆಗಳು ಸ್ತುತಿಸಲ್ಪಡುತ್ತಾರೆ ಎಂದು ಋಕ್ ಎನ್ನಲಾಗಿದೆ.) ನವರ್ಚಸೂಕ್ತಕ್ಕೆ (ನವ-೯, ಋಚ-ಋಕ್ ಪದದ ಬಹುವಚನ ಋಚಃ, ಋಕ್ಕುಗಳು; ಸು+ಉಕ್ತ— ಸೂಕ್ತ, ಒಳ್ಳೆಯ ಉಕ್ತಿಗಳು / ಹೇಳಿಕೆಗಳು, ಸು-ಭಾಷಿತಗಳು) ಮದುಚ್ಛಂದನು ಋಷಿಯು / ಇದನ್ನು ತಪೋಮುಖೇನ ಸಾಕ್ಷಾತ್ಕರಿಸಿಕೊಂಡವನು (ಋಷಿರ್ದರ್ಶನಾತ್ - ಮಂತ್ರದರ್ಶನ ಮಾಡಿಕೊಂಡ ದಾರ್ಶನಿಕನೇ ಋಷಿಯು. ಋಷತಿ ಪ್ರಾಪ್ನೋತಿ ಸರ್ವಾನ್ ಮಂತ್ರಾನ್ ಜ್ಞಾನೇನ ಪಶ್ಯತಿ ಸಂಸಾರಪಾರಂ ವಾ ಇತಿ - ಸಕಲ ಮಂತ್ರಗಳನ್ನು ಪ್ರಾಪ್ತಿಮಾಡಿಕೊಳ್ಳುತ್ತಾನೆ ಅಥವಾ ಸಂಸಾರಸಾಗರದ ದಡವನ್ನು / ಮೋಕ್ಷವನ್ನು / ಸಂಸಾರಬಂಧನದಿಂದ ಬಿಡುಗಡೆಯನ್ನು ತನ್ನ ಜ್ಞಾನದೃಷ್ಟಿ-ಬಲಗಳಿಂದ ಕಾಣುತ್ತಾನಾದ್ದರಿಂದ ಋಷಿಯು. ಋಷ್ ಗತೌ ಧಾತುಃ.  ಜ್ಞಾನ-ಸಂಸಾರಯೋಃ ಪಾರಗಂತಾ— ಜ್ಞಾನದ ಹಾಗೂ ಸಂಸಾರದ ಎಲ್ಲೆ / ಮಿತಿ / ಕೊನೆಯನ್ನು ಹೊಂದಿದವನು. ಶಾಸ್ತ್ರಕರ್ತೃಗಳಾದ ಆಚಾರ್ಯರು. “ವಿದ್ಯಾ-ವಿದಗ್ಧ-ಮತಯೋ ಋಷಯಃ ಪ್ರಸಿದ್ಧಾಃ”— ಸದ್ವಿದ್ಯೆಯಿಂದ ಮತಿ / ಮನಸ್ಸನ್ನು / ಇಚ್ಛೆ -ಕಾಮನೆಗಳನ್ನು ದಗ್ಧ / ಭಸ್ಮಗೊಳಿಸಿ ಇಲ್ಲವಾಗಿಸಿಕೊಂಡವರು. ಸತ್ಯವನ್ನೇ ನುಡಿಯುವವರು. ಶಾಪವನ್ನೇ ಅಸ್ತ್ರವಾಗುಳ್ಳವರು. ಋಷಿಗಳಲ್ಲಿ ೭ ವಿಧ— ೧) ವ್ಯಾಸಾದಿ ಮಹರ್ಷಿಗಳು, ೨) ಭೇಲಾದಿ ಪರಮರ್ಷಿಗಳು, ೩) ಕಣ್ವ-ನಾರದಾದಿ ದೇವರ್ಷಿಗಳು, ೪) ವಶಿಷ್ಟಾದಿ ಬ್ರಹ್ಮರ್ಷಿಗಳು, ೫) ಸುಶ್ರುತಾದಿ ಶ್ರುತರ್ಷಿಗಳು, ೬) ಋತಪರ್ಣಾದಿ ರಾಜರ್ಷಯಃ, ೭) ಜೈಮಿನ್ಯಾದಿ ಕಾಂಡರ್ಷಿಗಳು (—ತ್ರಿಕಾಂಡಶೇಷವೆಂಬ ಗ್ರಂಥೋದ್ಧೃತ).

ಹಾಗೆಯೇ ರತ್ನಕೋಷದಂತೆ—
“ಸಪ್ತ ಬ್ರಹ್ಮರ್ಷಿ-ದೇವರ್ಷಿ-ಮಹರ್ಷಿ-ಪರಮರ್ಷಯಃ |
ಕಾಂಡರ್ಷಿಶ್ಚ ಶ್ರುತರ್ಷಿಶ್ಚ ರಾಜರ್ಷಿಶ್ಚ ಕ್ರಮಾವರಾಃ ||”
ಅಂತೆಯೇ, ಪ್ರತಿ ಮನ್ವಂತರದಲ್ಲೂ ಭಿನ್ನ ಭಿನ್ನ ಸಪ್ತರ್ಷಿಗಳಿರುವರು.

ಹಾಗೆಯೇ, ಈ ಅಗ್ನಿಮೀಳೇ ಮಂತ್ರದ ಛಂದಸ್ಸು ಗಾಯತ್ರೀ. ಈ ಮಂತ್ರಪ್ರತಿಪಾದ್ಯ ದೇವತೆಯು ಅಗ್ನಿಯು. ಈ ಮಂತ್ರೋಚ್ಚಾರಣೆಯನ್ನು ಮಾಡಬೇಕಾದ ಸ್ವರವು ಷಡ್ಜ / ಸರಿಗಮಾದಿ ಸಪ್ತಸ್ವರಗಳಲ್ಲಿ ಮೊದಲನೆಯದಾದ ‘ಸ’.


ತತ್ರ ತಾವತ್ ಅಯಂ ಋಷಿ-ಆದಿ-ಕ್ರಮಃ — ಅತ್ರ ( ಶ್ರುತಿಪ್ರಸ್ಥಾನೇ ಮಾಧ್ವೇ ಋಕ್ಸಂಹಿತಾಭಾಷ್ಯೇ ಗೋವಿಂದಾಚಾರ್ಯವ್ಯಾಖ್ಯಾಸಂವಲಿತೇ) ವ್ಯಾಖ್ಯಾತಾನಾಂ ಚತ್ವಾರಿಂಶತ್-ಸೂಕ್ತಾನಾಮ್ ಅಪಿ ಭಗವಾನ್ ಪುರುಷೋತ್ತಮಃ, ಮುಖ್ಯಃ, ಋಷಿಃ |

ಅಲ್ಲಿ ಮೊದಲಿಗೆ ಈ ಋಷ್ಯಾದಿಗಳ ಕ್ರಮವಿಧಾನವು— ಇಲ್ಲಿ (ಶ್ರುತಿಪ್ರಸ್ಥಾನದಲ್ಲಿ, ಬನ್ನಂಜೆ ಗೋವಿಂದಾಚಾರ್ಯರ ವ್ಯಾಖ್ಯಾಸಮೇತವಾದ ಮಧ್ವಾಚಾರ್ಯಕೃತ ಋಗ್ಭಾಷ್ಯದಲ್ಲಿ), ಮಧ್ವರಿಂದ ವ್ಯಾಖ್ಯಾತವಾದ / ವ್ಯಾಖ್ಯಾನಿಸಲ್ಪಟ್ಟ ೪೦ ಸೂಕ್ತಗಳಿಗೂ ಸಹ ಭಗವಾನ್ ಪುರುಷೋತ್ತಮನು (ಮಹಾವಿಷ್ಣು / ಶ್ರೀಮನ್ನಾರಾಯಣ / ಲಕ್ಷ್ಮೀರಮಣ) ಪ್ರಧಾನವಾದ ಋಷಿಯು. ಏಕೆಂದರೆ, ಸಕಲ ವೇದಗಳೂ ಸೃಷ್ಟಿಯ ಆರಂಭದಲ್ಲಿ, ಮೊತ್ತಮೊದಲಿಗೆ ವೇದಪುರುಷನಾದ ಅವನಿಂದಲೇ ಬ್ರಹ್ಮಾದಿಗಳಿಗೆ ಉಪದಿಷ್ಟವಾಯಿತಷ್ಟೆ? ಹೀಗಾಗಿ ಅವುಗಳನ್ನು ಮೊದಲು ಕಂಡವನು ಪರಮಪುರುಷ ಶ್ರೀಹರಿಯೇ ಆಗಿರುವನು.

ತದ್-ಅನಂತರಂ ದ್ವಿತೀಯಃ, ಬ್ರಹ್ಮಾ ಋಷಿಃ | ಏತೌ ಚ ಸರ್ವವಿದ್ಯಾನಾಂ ಸಮಾನೌ ಋಷೀ |

ಅದರ ಬಳಿಕ ಸೃಷ್ಟಿಕರ್ತನಾದ ಚತುರ್ಮುಖ ಬ್ರಹ್ಮನೇ ೨ನೇ ಋಷಿಯು / ದ್ರಷ್ಟಾರನು. ಹೀಗೆ, ಹರಿ-ಬ್ರಹ್ಮರಿಬ್ಬರೂ ಸರ್ವವಿದ್ಯೆಗಳಿಗೂ ಸಮಾನವಾಗಿ, ಕ್ರಮವಾಗಿ ೧ನೇ ಹಾಗೂ ೨ನೇ ಹಂತದ ಋಷಿಗಳಾಗಿರುವರು.

ತತಃ ಸರ್ವವೇದಾನಾಂ ಗರುಡಃ ತೃತೀಯಃ, ಋಷಿಃ | ಅತಃ, ಏವ “ಛಂದೋಮಯೇನ ಗರುಡೇನ” ಇತಿ ಭಾಗವತಮ್ |

ಅನಂತರ, ಸರ್ವವೇದಗಳಿಗೂ ಗರುಡನು ೩ನೇ ಹಂತದ ಋಷಿಯು. ಆದ್ದರಿಂದಲೇ, “ಛಂದೋಮಯನಾದ / ವೇದಮಯನಾದ ಗರುಡನಿಂದ” ಎಂದು ಭಾಗವತವು ಹೇಳಿದೆ. ಹೀಗೆ, ವಿನತೆ-ಕಶ್ಯಪ(/ತಾರ್ಕ್ಷ) ಸುತನಾಗಿ ವೈನತೇಯ-ಕಾಶ್ಯಪಿ( / ತಾರ್ಕ್ಷ್ಯ)ಯೆನಿಸಿ, ಹರಿವಾಹನನಾದ ಗರುಡನು ವೇದಾಭಿಮಾನೀ ದೇವತೆಯು.

ತತಃ ಸಮಸ್ತಸ್ಯ ಋಗ್ವೇದಸ್ಯ ಶಕ್ರಃ, ಋಷಿಃ | ಏತಾವತ್ ಸರ್ವಾಸಾಂ ಋಚಾಂ ಸಮಾನಮ್ |

ತರುವಾಯ, ೪ನೇ ಹಂತದಲ್ಲಿ ಸಮಸ್ತ ಋಗ್ವೇದಕ್ಕೆ ಶತಕ್ರತುವಾಗಿ (೧೦೦ ಅಶ್ವಮೇಧಯಾಗ ಮಾಡಿ) ಶಕ್ರನೆನಿಸಿದ ದೇವೇಂದ್ರನು ಋಷಿಯು. ಇಲ್ಲಿಯವರೆಗೆ, ಸರ್ವ ಋಕ್ಕುಗಳಿಗೂ ಈ ನಾಲ್ವರೂ ಅನುಕ್ರಮದಂತೆ ಸಮಾನ ಋಷಿಗಳು.

ತತಃ “ಅಗ್ನಿಮೀಳೇ” ಇತ್ಯಾರಭ್ಯ “ಉತ ವಾ ಸಂತಿ ಭೂಯಸೀಃ” (೧.೧೧.೮) ಇತ್ಯಂತಮ್ ಏಕಾದಶಾನಾಂ ಸೂಕ್ತಾನಾಂ ದಶಾಧಿಕಶತಸ್ಯಾಪಿ ಮಂತ್ರಾಣಾಂ ವೈಶ್ವಾಮಿತ್ರೋ ಮಧುಚ್ಛಂದಾ ಋಷಿಃ |

ಇನ್ನು, “ಅಗ್ನಿಮೀಳೇ” ಎಂದು ತೊಡಗಿ “ಉತ ವಾ ಸಂತಿ ಭೂಯಸೀಃ” (೧.೧೧.೮) ಎಂಬಲ್ಲಿವರೆಗಿನ ೧೧ ಸೂಕ್ತಗಳ ನೂರಹತ್ತೂ ಮಂತ್ರಗಳಿಗೆ ವಿಶ್ವಾಮಿತ್ರಪುತ್ರನಾದ ಮಧುಚ್ಛಂದನು ಋಷಿಯು.

ಅಯಂ ವಿಶ್ವಾಮಿತ್ರತನಯೇಷ್ವೇಕಪಂಚಾಶಃ ಪ್ರಮುಖಶ್ಚೇತಿ ವದಂತಿ | ಅನುಕ್ರಮಣಿಕಾಯಾಂ ತು ಮಧುಚ್ಛಂದಸಃ ಪುತ್ರೇ ಜೇತಾ ನಾಮೈಕಾದಶಸ್ಯ ಸೂಕ್ತಸ್ಯರ್ಷಿರಿತ್ಯುಕ್ತಮ್ | ಭಾಷ್ಯವಿರೋಧಾತ್ ತತ್ರ ಮೂಲಂ ಚಿಂತ್ಯಮ್ ||

ಇವನು ವಿಶ್ವಾಮಿತ್ರ ಮಹರ್ಷಿಗಳ ಮಕ್ಕಳಲ್ಲಿ ೫೧ನೆಯವನು ಹಾಗೂ ಪ್ರಸಿದ್ಧನೆಂದು ಹೇಳುತ್ತಾರೆ. ಶೌನಕಕೃತ ಸರ್ವಾನುಕ್ರಮಣಿಕೆಯಲ್ಲಿಯಾದರೋ ಮಧುಚ್ಛಂದನ ಪುತ್ರರಲ್ಲಿ ಜೇತಾ ಎಂಬ ಹೆಸರಿನವನು ೧೧ನೇ ಸೂಕ್ತದ ಋಷಿಯೆಂದು ಉಕ್ತವಾಗಿದೆ / ಹೇಳಲ್ಪಟ್ಟಿದೆ. ಮಾಧ್ವಭಾಷ್ಯದ ಅಭಿಪ್ರಾಯಕ್ಕಿದು ವಿರುದ್ಧವಾದುದರಿಂದ, ಮೊದಲು ಹೇಳಿದ್ದೆ ಸರಿಯೆಂದು ಚಿಂತಿಸಬೇಕು / ಭಾವಿಸಬೇಕು / ತಿಳಿಯಬೇಕು. (ಮಧುಚ್ಛಂದನೇ ೧೧ನೆಯದಕ್ಕೂ ಋಷಿಯೆಂದು ತಿಳಿಯಬೇಕು.)

ತತ್ರ ತಾವದಾ ನವಮಸೂಕ್ತಾಂತಂ ನವತೇರ್ಮಂತ್ರಾಣಾಂ ಗಾಯತ್ರೀಚ್ಛಂದಃ |

ಅಲ್ಲಿ / ಅದರಲ್ಲಿ, ಈ ಮೊದಲ ಋಕ್ಕಿನಿಂದ ೯ನೆಯ ಸೂಕ್ತದ ಅಂತ್ಯದ ತನಕ ಇರುವ ೯೦ ಮಂತ್ರಗಳಿಗೆ ಗಾಯತ್ರಿಯೇ ಛಂದಸ್ಸು (ತ್ರಿಪದಾ ಗಾಯತ್ರೀ— ೮×೩ = ೨೪, ೮ ಅಕ್ಷರಗಳ ೩ ಪಾದದ ಛಂದಸ್ಸು ವೇದದಲ್ಲಿ; “ಗಯಾನ್ ಪ್ರಾಣಾನ್ ತ್ರಾಯತೇ ಇತಿ ಗಾಯತ್ರೀ”— ಗಯವೆಂದರೆ ಪ್ರಾಣ. ಜೀವರ ಪಂಚಪ್ರಾಣಗಳನ್ನು ದೇಹದಲ್ಲೇ ಸುರಕ್ಷಿತವಾಗಿಡುವುದೇ ಗಾಯತ್ರಿ. “ಗಾಯಂತಂ ತ್ರಾಯತೇ”— ಇದನ್ನು ಪಠಿಸುವವನನ್ನು, ಗಾಯನ ಮಾಡುವವನನ್ನು ರಕ್ಷಿಸುತ್ತದೆ. “ಗೀಯತೇ ಅನೇನ ಪರಮಾತ್ಮಾ”—ಪರಮಾತ್ಮನು ಕೀರ್ತಿಸಲ್ಪಡುತ್ತಾನೆ ಇದರಿಂದ. ಇದು ಲೌಕಿಕದಲ್ಲಿ ೬×೪ = ೨೪, ೬ ಅಕ್ಷರಗಳ ೪ ಪಾದಗಳ ಛಂದಸ್ಸು. ಇದರ ಪಾದಗಳಲ್ಲಿ ಲಘು-ಗುರು ಮಾತ್ರಾಭೇದದಿಂದ ೬೪ ವಿಧಗಳು. ಅವುಗಳಲ್ಲಿ ಹಲವು ವಿಧಗಳಿಗೆ ವಿಶೇಷವಾದ ಹೆಸರುಗಳಿಲ್ಲದಿದ್ದರೂ, ತನುಮಧ್ಯಾ, ಶಶಿವದನಾ, ವಸುಮತಿ ಮುಂತಾಗಿ ಕೆಲವಾರು ಭೇದಗಳ ಹೆಸರುಗಳಿವೆ. ಋಗ್ವೇದದ ಬಹುಶಃ ಸರ್ವ ಗಾಯತ್ರೀಚ್ಛಂದೋಬದ್ಧ ಋಕ್ಕುಗಳೂ ಅಗ್ನಿಪರವಾದುದರಿಂದ ಗಾಯತ್ರೀಚ್ಛಂದದ ದೇವತೆ ಅಗ್ನಿಯು. )

ಲಕ್ಷ್ಮೀ-ಸರಸ್ವತೀ-ಭಾರತ್ಯಃ ಗರುಡಃ ಸ್ವಾಹಾ ಚೇತಿ ಪಂಚ ಗಾಯತ್ರೀದೇವತಾಃ | ಅತ್ರ ವಿನಾ ಗರುಡಮನ್ಯಾ ಆಪ್ರೀದೇವತಾ ಅಪಿ | ಛಂದಃಪ್ರಭೇದಾಸ್ತು ತತ್ರ ತತ್ರೈವ ವಿವಿಚ್ಯಂತೇ ||

ಲಕ್ಷ್ಮೀ, ಸರಸ್ವತೀ, ಭಾರತೀ, ಗರುಡ ಮತ್ತು ಸ್ವಾಹಾ - ಎಂಬುದಾಗಿ ಐವರು ಗಾಯತ್ರೀದೇವತೆಯರು. ಇಲ್ಲಿ, ಗರುಡನನ್ನು ಹೊರತುಪಡಿಸಿ ಆಪ್ರೀದೇವತೆಯೆಂಬ ಪದ್ಧತಿಯೂ ಇದೆ. ಛಂದಸ್ಸಿನ ಪ್ರಭೇದಗಳಾದರೋ ಅಲ್ಲಲ್ಲೇ (ಆಯಾಯ ಮಂತ್ರಗಳ ವ್ಯಾಖ್ಯಾನದ ಸಂದರ್ಭದಲ್ಲಿ) ವಿವರಿಸಲ್ಪಡುವುದು.

ಅಥ ದೇವತಾ | ತತ್ರ ತಾವದಗ್ನ್ಯಂತರ್ಗತೋ ನಾರಾಯಣಃ ಪ್ರಥಮಸೂಕ್ತಸ್ಯ ವರ್ಗದ್ವಯಾತ್ಮಕಸ್ಯ ನವರ್ಚಸ್ಯ ಪ್ರಧಾನದೇವತಾ | “ಏಕೈವ ವಾ ಮಹಾನಾತ್ಮಾ ದೇವತಾ” ಇತ್ಯನುಕ್ರಮಣಿಕಾ ಚಾತ್ರ ಸಂವದತೇ | ಅಗ್ನಿಶ್ಚಾವಾಂತರದೇವತಾ | ನಾರಾಯಣಪ್ರೀತ್ಯರ್ಥೇ ವಿನಿಯೋಗ ಇತಿ ಚ ಸಮಾನಂ ಸರ್ವತ್ರ ||

ಇನ್ನು, ದೇವತೆಯ ಕುರಿತು. ಅಲ್ಲಿ, ಅಗ್ನಿಯ ಅಂತರ್ಗತನಾದ (ಒಳಗಿರುವ) ನಾರಾಯಣನು ಪ್ರಥಮಸೂಕ್ತದ ೨ ವರ್ಗಗಳಿರುವ ನವರ್ಚದ (೯ ಋಕ್ಕುಗಳ)    ಪ್ರಧಾನ ದೇವತೆಯು. “ಮಹಾತ್ಮನೂ, ಪರಮಾತ್ಮನೂ ಆದ ಒಬ್ಬನೇ ದೇವತೆಯು”-- ಎಂದು ಶೌನಕರ ಸರ್ವಾನುಕ್ರಮಣಿಕೆಯೂ ಈ ಬಗ್ಗೆ ಸೂಕ್ತವಾಗಿಯೇ ಹೇಳುತ್ತದೆ. ಅಗ್ನಿಯು ಅವಾಂತರ (ಪ್ರಾಸಂಗಿಕ, ಸಾಂದರ್ಭಿಕ, ಅಂಗ) ದೇವತೆ. ನಾರಾಯಣನ ಪ್ರೀತ್ಯರ್ಥವಾಗಿ ವಿನಿಯೋಗ / ಪ್ರಯೋಗ / ಬಳಕೆ -- ಎಂಬುದು ಎಲ್ಲೆಡೆ, ಎಲ್ಲಾ ಮಂತ್ರಗಳಿಗೂ, ಸರ್ವವೇದಮಂತ್ರಪ್ರತಿಪಾದ್ಯನಾದುದರಿಂದ, ಸಮಾನವು.

ಗಾನಸ್ವರಶ್ಚ ಆನವಮಸೂಕ್ತಾಂತಮೃತೇ ಪಂಚಮಸೂಕ್ತಸ್ಯ ದ್ವಿತೀಯಾಯಾ ಋಚಃ ಷಡ್ಜಃ | ಪಂಚಮೇ ದ್ವಿತೀಯಾಯಾಶ್ಚ ಋಷಭಃ ಸ್ವರ ಇತ್ಯಾದಿ ತತ್ರ ತತ್ರೈವ ಸ್ಪಷ್ಟಮ್ |

ಗಾನಸ್ವರವು / ಉಚ್ಚಾರಣಾ ಶ್ರುತಿಯು, ೫ನೇ ಸೂಕ್ತದ ೨ನೇ ಋಕ್ಕನ್ನು ಹೊರತುಪಡಿಸಿ, ೧ರಿಂದ ೯ನೇ ಸೂಕ್ತದ ವರೆಗೆ ಷಡ್ಜವು (ಸಪ್ತಸ್ವರಗಳಲ್ಲಿ ಮೊದಲನೆಯ “ಸ”). ೫ನೇ ಸೂಕ್ತದ ೨ನೇ ಋಕ್ಕಿಗೆ ಋಷಭಸ್ವರವು. (೨ನೆಯದಾದ “ರಿ”)--ಇತ್ಯಾದಿಯಾಗಿ ಆಯಾ ಮಂತ್ರವಿವರಣೆಯಲ್ಲೇ ಸ್ಪಷ್ಟಪಡಿಸಲಾಗಿದೆ.


(ತತ್ರ ಆಹ ಅಗ್ರೇ ಅಗ್ನಿ-ನಾಮಕಮ್ ||)

(ಅಲ್ಲಿ, ಹೇಳಿದೆ ಮೊದಲಿಗೆ ಅಗ್ನಿ ಎಂಬ ಹೆಸರಿನ ದೇವತೆಯನ್ನು.)

ಅಗ್ರಣೀತ್ವಂ ಯದಗ್ನಿತ್ವಮಿತ್ಯಗ್ರೇ ನಾಮ ತದ್ಭವೇತ್ |
ಏವಮೇವಾऽಹ ಭಗವಾನ್ನಿರುಕ್ತಿಂ ಬಾದರಾಯಣಃ || ೭ ||

“ಅಗ್ರಣೀರ್ಗ್ರಾಮಣೀಃ ಶ್ರೀಮಾನ್” ಇತಿ ವಿಷ್ಣುಸಹಸ್ರನಾಮಸು ||

ಅಗ್ನಿತ್ವವು / ಅಗ್ನಿತತ್ತ್ವವು ಅಗ್ರಣೀತ್ವ / ನಾಯಕತ್ವ / ಮುಂದಾಳತ್ವವುಳ್ಳದ್ದೆಂಬ ಅರ್ಥವುಳ್ಳದ್ದಾದ್ದರಿಂದಾಗಿ ಅಗ್ನಿಯ ಹೆಸರು ಮೊದಲಿಗೇ ಇರಬೇಕು. ಭಗವಾನ್ ಬಾದರಾಯಣರು ಅಗ್ನಿಶಬ್ದಕ್ಕೆ ಹೀಗೆಯೇ ನಿರುಕ್ತಿ (ನಿರ್ವಚನ, ನಿಷ್ಪತ್ತಿ, ವ್ಯುತ್ಪತ್ತಿ)ಯನ್ನು ಹೇಳಿರುವರು. “ಅಗ್ರಣೀಃ ಗ್ರಾಮಣೀಃ ಶ್ರೀಮಾನ್” ಎಂಬುದಾಗಿ ವ್ಯಾಸಭಾರತದಲ್ಲಿರುವ ವಿಷ್ಣುವಿನ ಸಹಸ್ರನಾಮಗಳಲ್ಲಿದೆ. ಹಾಗಾಗಿ, ಆತನೂ ವಿಷ್ಣುವಿನ ಒಂದು ರೂಪವೇ ಅಥವಾ ಅಗ್ನಿಯೂ ವಿಷ್ಣುವಿನಂತೆ ನಾಯಕತ್ವಗುಣವುಳ್ಳವನೆಂದು ತಿಳಿಯುವುದು.

“ಯಥೈವಾಗ್ನ್ಯಾದಯಃ ಶಬ್ದಾಃ ಪ್ರವರ್ತಂತೇ ಜನಾರ್ದನೇ |
ತಥಾ ನಿರುಕ್ತಿಂ ವಕ್ಷ್ಯಾಮೋ ಜ್ಞಾನೀನಾಂ ಜ್ಞಾನಸಿದ್ಧಯೇ” ||೮ ||

ಹೇಗೆ ಅಗ್ನಿಯೇ ಮುಂತಾದ ಶಬ್ದಗಳು ಜನಾರ್ದನ / ವಿಷ್ಣುವಿನಲ್ಲೇ ಪ್ರವರ್ತಿಸುತ್ತವೆಯೋ / ವಿಷ್ಣುವನ್ನೇ ವರ್ಣಿಸುತ್ತವೆಯೋ, ಅಂತೆಯೇ  (ಪ್ರತೀ ಮಂತ್ರದ ಅರ್ಥವೂ ವಿಷ್ಣುತಾತ್ಪರ್ಯವಾಗುವಂತೆ) ಜ್ಞಾನಿಗಳ ಪೂರ್ಣಜ್ಞಾನಸಿದ್ಧಿಗಾಗಿ ವೇದದಲ್ಲಿನ ಶಬ್ದಗಳಿಗೆ ನಿರ್ವಚನವನ್ನು ಹೇಳುವೆವು.

ನಿಷ್ಪತ್ತಿರ್ವೃದ್ಧಿಶ್ಚ ಸಿದ್ಧಿಃ | ಅಜ್ಞಾನಿನಾಂ ಜ್ಞಾನನಿಷ್ಪತ್ತಯೇ | ಜ್ಞಾನಿನಾಂ ಚ ಜ್ಞಾನವೃದ್ಧಯೇ ||

ಜ್ಞಾನಸಿದ್ಧಿಯೆಂದರೆ ಹೊಸದಾಗಿ ಜ್ಞಾನವು ಉಂಟಾಗುವಿಕೆ ಮತ್ತು ಇರುವ ಜ್ಞಾನವು ವೃದ್ಧಿಯಾಗುವಿಕೆ / ಹೆಚ್ಚಾಗುವಿಕೆ. ಅಜ್ಞಾನಿಗಳಿಗೆ ಜ್ಞಾನ ಉಂಟಾಗಲು ಹಾಗೂ ಜ್ಞಾನಿಗಳ ಜ್ಞಾನವರ್ಧನೆಗಾಗಿ ನಿರ್ವಚಿಸುವೆವು.

ಇತಿ ತೇನಾಗ್ನಿಶಬ್ದೋऽಯಮಗ್ರ ಏವಾಭಿಪೂಜ್ಯತಾಮ್ |
ಅಗ್ರ್ಯತ್ವಮಗ್ರನೇತೃತ್ವಮತ್ತಿಮಙ್ಗಾಗನೇತೃತಾಮ್ || ೯ ||

ಅಗ್ರ್ಯತ್ವ (ಮುಂದಾಳುತನ), ಅಗ್ರ-ನೇತೃತ್ವ, (ಅತ್ತಿ =) ಹವಿಸ್ಸನ್ನು ತಿನ್ನುತ್ತಾನೆ, ತನ್ನ ಅಂಗ / ಶರೀರವನ್ನು (ಅಙ್ಗ / ಅಂಗ), ವಕ್ರಗತಿಯಲ್ಲಿ (ಅಗ) ಮುಂದೊಯ್ಯುವ ನೇತೃತ್ವಗುಣವುಳ್ಳವ (ನೇತೃತಾಮ್)— ಹೀಗೆ, ಇದರಿಂದಾಗಿ ಅಗ್ನಿಶಬ್ದವಿದು ಮೊದಲೇ (ಅಗ್ರೇ- ಏವ) ಮುಂದಾಗಿ (ಅಭಿ— ಅಭಿಮುಖೇನ) ಪೂಜಿಸಲ್ಪಡಬೇಕು (ಪೂಜ್ಯತಾಮ್).

ಆಹ ತಂ ಸ್ತೌಮ್ಯಶೇಷಸ್ಯ ಪೂರ್ವಮೇವ ಹಿತಂ ಪ್ರಭುಮ್ |
ಋತ್ವಿಙ್ನಿಯಾಮಕತ್ವೇನ ಯಜ್ಞಾನಾಮೃತ್ವಿಜಂ ಸದಾ || ೧೦ ||

ಇಲ್ಲಿ ಹೇಳಿದ್ದಾನೆ (ಆಹ)— ಅವನನ್ನು (ತಂ), ಸ್ತುತಿಸುತ್ತೇನೆ (ಸ್ತೌಮಿ). ಯಾವಾಗ? ಮೊದಲೇ , ಆರಂಭದಲ್ಲೇ(ಪೂರ್ವಮ್ ಏವ). ಎಂಥವನನ್ನು? ಯಾವಾಗಲೂ (ಸದಾ), ನಮಗೆ ಹಿತವನ್ನೇ / ಒಳ್ಳೆಯದನ್ನೇ, ಕೆಲವೊಮ್ಮೆ ಸುಖಕರವಲ್ಲದ ದುಃಖಜನ್ಯವಾದುದಾದರೂ ನಮ್ಮ ಹಿತಕಾಯುವಂಥದ್ದನ್ನೇ ಉಂಟುಮಾಡುವ, ಸಮಸ್ತ ಯಜ್ಞಗಳ (ಅಶೇಷಸ್ಯ ಯಜ್ಞಾನಾಂ), ನಿಯಾಮಕನಾಗಿ ಋತ್ವಿಕ್ ಎನಿಸಿದ (ನಿಯಾಮಕತ್ವೇನ ಋತ್ವಿಕ್), ಅಗ್ನಿ-ನಾರಾಯಣನೆಂಬ ಋತ್ವಿಜನನ್ನು (ಋತ್ವಿಜಂ) ಹಾಗೂ ಒಡೆಯನನ್ನು (ಪ್ರಭುಂ).

“ಈಳ ಸ್ತುತೌ” ಇತಿ ಧಾತುಃ | ಯದ್ಯಪಿ ಈಡೇತಿ ಧಾತುಃ ಪಠ್ಯತೇ | ‘ಈಡೇ’ ಇತ್ಯೇವ ಚ ರೂಪಮ್ | ತಥಾಪಿ ‘ಡ’ಕಾರಸ್ಯ ‘ಳ’ಕಾರಃ ಬಹ್ವೃಚಸಂಪ್ರದಾಯಪ್ರಾಪ್ತಃ | ತಥಾಹ್ಯಾಹುಃ— “ಅಜ್ಮಧ್ಯಸ್ಥಡಕಾರಸ್ಯ ಳಕಾರಂ ಬಹ್ವೃಚಾ ಜಗುಃ” ಇತಿ | ಉತ್ತರತ್ರಾಜಭಾವಾತ್ “ಈಡ್ಯ” ಇತ್ಯತ್ರ ನ ಳಕಾರಃ ||

ಈಡೇ ಎಂದೂ ಈ ಧಾತು ಪಠಿಸಲ್ಪಡುವುದಾದರೂ “ಈಳ ಸ್ತುತೌ” ಎಂಬ ಧಾತುವು ಈಳೇ ಎಂಬ ಕ್ರಿಯಾಪದದ್ದು. “ಈಡೇ” ಎಂದೂ ಕೂಡ ರೂಪ / ಪ್ರಯೋಗವಿದೆ. ಹಾಗಾದರೂ, ಡಕಾರಕ್ಕೆ ಳಕಾರವು ಬಹ್ವೃಚರಿಗೆ / ಋಗ್ವೇದಿಗಳಿಗೆ  ಪೂರ್ವಸಂಪ್ರದಾಯದಿಂದ ಪ್ರಾಪ್ತವಾದದ್ದು. ಹಾಗಾಗಿಯೇ ಹೇಳುವರು— “ಅಚ್ ವರ್ಣಗಳ / ಸ್ವರಾಕ್ಷರಗಳ ಮಧ್ಯದಲ್ಲಿರುವ ಡಕಾರಕ್ಕೆ ಳಕಾರವನ್ನು ಬಹ್ವೃಚರು ಹೇಳುತ್ತಾರೆ” ಎಂದು. ಮುಂದಿನ ಮಂತ್ರವಾದ “ಅಗ್ನಿಃ ಪೂರ್ವೇಭಿರ್ಋಷಿಭಿರೀಡ್ಯೋ ನೂತನೈರುತ” ಎಂಬಲ್ಲಿ, “ಋಷಿಭಿಃ ಈಡ್ಯಃ ನೂತನೈಃ ಉತ”— ಇಲ್ಲಿ ಈಡ್ಯಃ—  ಎಂಬುದರ ಡಕಾರದ ಮೊದಲು ಈ ಎಂಬ ಸ್ವರಾಕ್ಷರ / ಅಚ್ ವರ್ಣವಿದೆ. ಆದರೆ, ಈ + ಡ್ + ಯಃ— ಇಲ್ಲಿ ಡಕಾರದ ಬಳಿಕ ಯಕಾರವೆಂಬ ವ್ಯಂಜನವಿರುವುದರಿಂದ / ಸ್ವರಾಕ್ಷರವಲ್ಲದಿದ್ದುದರಿಂದ ಡಕಾರವು ಅಚ್ ಮಧ್ಯಸ್ಥವಾಗಲಿಲ್ಲ. ಹಾಗಾಗಿ ಡಕಾರಕ್ಕೆ ಳಕಾರಾದೇಶವಾಗಲಿಲ್ಲ.

ದ್ಯೋತನಾದ್ವಿಜಯಾತ್ಕಾಂತ್ಯಾ ಸ್ತುತ್ಯಾ ವ್ಯವಹೃತೇರಪಿ |
ಗತ್ಯಾ ರತ್ಯಾ ಚ ದೇವಾಖ್ಯಂ ಹೋತೃಸಂಸ್ಥಂ ವಿಶೇಷತಃ || ೧೧ ||

ದ್ಯುತಿ / ಬೆಳಕಿನ ಗುಣವಾದ ದ್ಯೋತನ / ಬೆಳಗುವಿಕೆ, ಸತ್ಯ-ಧರ್ಮಾದಿಗಳ ವಿಜಯದ ಇಚ್ಛೆ, ಕಾಂತಿ / ಪ್ರಕಾಶಮಾನ, ಸ್ತುತಿ / ಹೊಗಳಿಕೆ / ಪ್ರಶಂಸೆ, ನ್ಯಾಯತೀರ್ಮಾನ-ಪುಣ್ಯಪಾಪಕರ್ಮಫಲಪ್ರದಾನಾದಿ ವ್ಯವಹಾರ, ಕಾಲದ / ಲೋಕದ ಗತಿ / ಗಮನಶೀಲತೆ, ರತಿ / ರಮ್ ಕ್ರೀಡಾಯಾಮ್ ಧಾತುವಿನಂತೆ ಆಟ— ಇವು ಹೋತೃಸ್ಥಾನದಲ್ಲಿರುವ ದೇವನಾದ ಅಗ್ನಿಯ ದೇವತಾಗುಣವಿಶೇಷಗಳು.

ದಿವು ಜಿಗೀಷಾಯಾಮ್, ಇಚ್ಛಾಯಾಮ್, ಪಣೌ, ದ್ಯುತೌ, ಕ್ರೀಡಾಯಾಮ್, ಗತೌ ಚೇತಿ ವೋಪದೇವಃ | ವಿಜಯಾದಿತಿ ಜಿಗೀಷಾ | ಕಾಂತ್ಯೇತೀಚ್ಛಾ | ಸ್ತುತ್ಯಾ ವ್ಯವಹೃತೇರಿತಿ ಪಣಿಃ | ಪಣ ವ್ಯವಹೃತೌ ಸ್ತುತೌ ಚೇತಿ ಧಾತುಪಾಠಃ | ದ್ಯೋತನಾದಿತಿ ದ್ಯುತಿಃ | ಗತ್ಯೇತಿ ಗತಿಃ | ರತ್ಯೇತಿ ಕ್ರೀಡೇತಿ ಸರ್ವಾರ್ಥಸಂಗ್ರಹ ಇಹ ಕೃತೋ ಭವತಿ ||

ದೇವ-ಶಬ್ದವು ದಿವು ಜಿಗೀಷಾಯಾಮ್ (ಜೇತುಮ್ ಇಚ್ಛಾ ಜಿಗೀಷಾ, ತಸ್ಮಿನ್)— ಗೆಲ್ಲುವ ಇಚ್ಛೆ, ಇಚ್ಛೆ / ಬಯಕೆ, ಪಣವಾಗಿಡು / ಶಪಥ / ಧನ / ಜೂಜಿನ ಪಣ / ವ್ಯವಹಾರ / ಬಾಡಿಗೆ / ವೇತನ / ಮನೆ / ಮಾರಾಟಗಾರ / ಶುದ್ಧಿಕಾರಕ (distiller), ದ್ಯುತಿ / ಬೆಳಕು, ಕ್ರೀಡೆ, ಗತಿ— ಎಂಬರ್ಥ ಕೊಡುವುದೆಂದಿದ್ದಾನೆ ಬೋಪದೇವನು. ಹೀಗೆ ಎಲ್ಲ ಅರ್ಥಗಳ ಸಂಗ್ರಹವು ಇಲ್ಲಿ ಮಾಡಲ್ಪಡುತ್ತದೆ.

ಅಗ್ನಿಸಂಸ್ಥೇನ ರೂಪೇಣ ಯತೋऽಗ್ನಿರ್ಹೋತೃದೇವತಾ |
ಇಂದ್ರಿಯಾಗ್ನಿಷು ಚಾರ್ಥಾನಾಂ ಯದ್ಧೋತಾ ಹೋತೃನಾಮಕಃ |
ರತಿಧಾರಕೋತ್ತಮತ್ವಾತ್ ಸ ರತ್ನಧಾತಮ ಈರಿತಃ || ೧೨ ||

ಬೆಂಕಿಯೊಳಗಿನ ರೂಪದಿಂದಾಗಿ ಅಗ್ನಿಯು ಹೋತೃದೇವತೆಯು. ಪಂಚ ಜ್ಞಾನೇಂದ್ರಿಯಗಳಾದ ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮಗಳಿಗೆ ಸಂಬಂಧಿತ ಇಂದ್ರಿಯವಿಷಯಗಳಾದ ದೃಶ್ಯ, ಶ್ರಾವ್ಯ, ಆಘ್ರಾಣಯೋಗ್ಯ, ರುಚಿ / ರಸ, ಸ್ಪೃಶ್ಯ ವಸ್ತುಗಳನ್ನು ಅಥವಾ ಇಂದ್ರಿಯಾರ್ಥಗಳನ್ನು / ಇಂದ್ರಿಯಗಳಿಗಾಗಿರುವವುಗಳನ್ನು ಯಾವನು ಹೋಮಿಸುವನೋ / ಪ್ರದಾನಮಾಡುವನೋ ಅವನೇ ಹೋತೃವು. ರತಿ / ಆನಂದವನ್ನು ಧರಿಸಿದವರಲ್ಲಿ / ಹೊಂದಿರುವವರಲ್ಲಿ ಉತ್ತಮನಾದುದರಿಂದ ಅವನು (ಅಗ್ನಿಯು) ರತ್ನಧಾತಮನೆಂದು ಕರೆಯಲ್ಪಟ್ಟಿರುವನು.

“ಅಗ್ನಿರ್ವೈ ದೇವಾನಾಂ ಹೋತಾ” ಇತಿ ಹಿ ಶ್ರೂಯತೇ | ವೇದನಿಘಂಟುಕಾರಸ್ತು “ರತ್ನಂ ರಯಿಃ” (೨.೧೦.೭) ಇತಿ ರತ್ನಪದಂ ಧನನಾಮಸು ಪಠತಿ | ತತ್ತು ರಮಯತೀತಿ ಣ್ಯರ್ಥವಿವಕ್ಷಯಾ (ರಮ್ಯಮ್) | ಅತ್ರ ತು ರಮಣಂ ರತ್ನಮಿತಿ ಭಾವಾರ್ಥೇ | ತೇನ ಮಹಾರ್ಥಲಾಭಃ | ಅರ್ಥಾಂತರೇ ತು ಅಗ್ನಿನಾ ರಯಿಮಶ್ನವದಿತಿ ಪುನರುಕ್ತಂ ಭವತೀತಿ ||

“ಅಗ್ನಿಯು ದೇವತೆಗಳ ಹೋತೃವು” ಎಂದಿದೆ ಶ್ರುತಿ. ವೇದದ ನಿಘಂಟುಕಾರ / ನಿರುಕ್ತಕಾರ ಯಾಸ್ಕನಾದರೋ “ರತ್ನವು ಐಶ್ವರ್ಯ” ಎಂದು ರತ್ನಶಬ್ದವು ಧನಸಂಪತ್ತಿನ ಹೆಸರುಗಳಲ್ಲಿ ಒಂದೆಂದು ಹೇಳಿದ್ದಾನೆ. ಅದಾದರೋ, ರಮಿಸುತ್ತದೆಂಬ ವಿವಕ್ಷೆ (ಹೇಳುವ ಇಚ್ಛೆ) ಯಿಂದ ಹೇಳಿದೆ (ರಮ್ಯವಾದುದು, ಆನಂದದಾಯಕ). ಇಲ್ಲಿಯಾದರೋ ರತ್ನವೆಂದರೆ ರಮಮಾಣವಾದದ್ದು / ರಮಿಸುವಂಥದ್ದು ಎಂಬುದು ಭಾವಾರ್ಥ. ಇದರಿಂದ ವಿಶಾಲಾರ್ಥವು ಲಭಿಸುವುದು. ಇನ್ನೊಂದು ಅರ್ಥದಲ್ಲಾದರೋ, ಅಗ್ನಿಯಿಂದ ರಯಿ / ಐಶ್ವರ್ಯವನ್ನು ಹೊಂದಿದರು / ಹೊಂದುವರು ಎಂದು ಪುನರುಕ್ತಿಯಾಗುವುದೆಂಬುದು / ಮತ್ತೆ ಹೇಳಿದಂತಾಗುವುದು ಎಂಬುದು.

ರಾಘವೇಂದ್ರಭಾಷ್ಯ (ಮನ್ತ್ರಾರ್ಥಮಞ್ಜರೀ)


ತತ್ರ-ಆದ್ಯಂ ನವ-ಋಚಂ, ವರ್ಗ-ದ್ವಯಾತ್ಮಕಮ್, ಆಗ್ನೇಯಂ ಸೂಕ್ತಂ, ಗಾಯತ್ರೀಚ್ಛನ್ದಸ್ಕಮ್ ಅಗ್ನಿದೇವತಾಕಂ, ತದನ್ತರ್ಗತ-ತನ್ನಾಮಕ-ವಿಷ್ಣುದೇವತಾಕಂ ಚ ||


ಅಲ್ಲಿ (ಋಗ್ವೇದ ಸಂಹಿತೆಯಲ್ಲಿ), ೨ ವರ್ಗಗಳಿಂದ ಕೂಡಿದ ಮೊದಲಿನ ನವರ್ಚಗಳ (೯ ಋಕ್ಕುಗಳಿರುವ) ಆಗ್ನೇಯಸೂಕ್ತವು ಗಾಯತ್ರೀಚ್ಛಂದಸ್ಸಿನಲ್ಲಿರುವುದು ಹಾಗೂ ಅಗ್ನಿದೇವತೆ ಮತ್ತು ಅವನೊಳಗಿನ ಅಗ್ನಿನಾಮಕನಾದ ವಿಷ್ಣುದೇವನ ಕುರಿತಾದದ್ದು.

ವೇದಸ್ಯ ಮೂಲವೇದ-ಉಪವೇದ-ಅವಾನ್ತರವೇದರೂಪೇಣ ತ್ರೈವಿಧ್ಯಾತ್ ಮೂಲವೇದೇ ಋಚಾಂ ಯಃ ಕ್ರಮಃ, ತತ್ರ ಋಚಃ ಅನನ್ತರಿತಾಃ ಕೃತ್ವಾ ಯಾವತ್ಪಠಿತಂ ತಾವದ್ ಉಪವೇದೇ ಸೂಕ್ತಮ್ ಉಚ್ಯತೇ |

ವೇದಕ್ಕೆ ಮೂಲವೇದ, ಉಪವೇದ, ಅವಾಂತರವೇದವೆಂಬುದಾಗಿ ೩ ವಿಧದ ರೂಪಗಳಿರುವುದರಿಂದಾಗಿ, ಮೂಲವೇದದಲ್ಲಿ ಋಕ್ಕುಗಳಿಗೆ ಯಾವ ಕ್ರಮವಿರುವುದೋ, ಅಲ್ಲಿ ಋಕ್ಕುಗಳು ಅಂತರವಿರದಂತೆ ಸೇರಿಸಿ ಎಲ್ಲಿಯವರೆಗೆ ಪಠಿಸಲ್ಪಡುವುದೋ ಅಲ್ಲಿಯವರೆಗಿನ ಭಾಗವನ್ನು ಉಪವೇದದಲ್ಲಿ ಸೂಕ್ತವೆನ್ನಲಾಗಿದೆ.

ಉಪವೇದಗತ-ಸೂಕ್ತಾನ್ತರ್ಗತ-ಋಕ್ಪ್ರಬನ್ಧಃ, ಅವಾನ್ತರವೇದೇ ಸೂಕ್ತಮಿತಿ ಜ್ಞೇಯಮ್, “ಸೂಕ್ತಂ ತ್ವನಾರತಂ ಪ್ರೋಕ್ತಮ್” (ಋಗ್ಭಾಷ್ಯಮ್) ಇತಿ ಉಕ್ತೇಃ | ವರ್ಗ ಇತಿ ತು ಸಾಂಕೇತಿಕಂ ನಾಮ ||

“ಸೂಕ್ತವಾದರೋ ಅನವರತ / ಸತತ / ಎಡೆಬಿಡದ ಋಕ್ಸಮೂಹವೆನ್ನಲ್ಪಟ್ಟಿರುವುದು” ಎಂಬ ಮಾಧ್ವಋಗ್ಭಾಷ್ಯವಚನದಿಂದ, ಉಪವೇದದಲ್ಲಿನ ಸೂಕ್ತದೊಳಗಿನ ಋಕ್-ಪ್ರಬಂಧವು ಅವಾಂತರವೇದದಲ್ಲಿ ಸೂಕ್ತವೆಂದರಿಯಬೇಕು. ವರ್ಗವೆಂಬುದಾದರೋ ಸಾಂಕೇತಿಕವಾದ ಹೆಸರು.

ತತ್ರ ಅಗ್ನಿಸೂಕ್ತಸ್ಯ ಪ್ರಾಥಮ್ಯೇ ಬೀಜಂ ತು ― “ಅಗ್ರಣೀತ್ವಂ ಯದಗ್ನಿತ್ವಮಿತ್ಯಗ್ರೇ ನಾಮ ತದ್ಭವೇತ್” ಇತಿ ಭಾಷ್ಯೋಕ್ತದಿಶಾ ಅಗ್ರಶಬ್ದಾತ್ ಸಪ್ತಮೀಸಮರ್ಥಾತ್ “ಅಭಿಪೂಜ್ಯಃ” ಇತಿ ಅರ್ಥೇ “ತದ್ಧಿತಾಃ” ಇತಿ ಸೂತ್ರೇಣ ನಿಪ್ರತ್ಯಯೇ ರಶಬ್ದಲೋಪೇ ಸಿದ್ಧಸ್ಯ ಅಗ್ನಿಶಬ್ದಸ್ಯ ಪ್ರಥಮಪೂಜ್ಯತಾ-ಅಭಿಧಾಯಿತ್ವಂ ಧ್ಯೇಯಮ್ ||

ಅದರಲ್ಲಿ (ಋಕ್ಸಂಹಿತೆಯಲ್ಲಿ), ಅಗ್ನಿಸೂಕ್ತದ ಆರಂಭದಲ್ಲಿ / ಮೊದಲಲ್ಲಿ ಮೂಲ / ಬೀಜ ವಾದರೋ— “ಅಗ್ನಿಗೆ ಪ್ರಥಮದಲ್ಲೇ ಋಗ್ವೇದದಲ್ಲಿ ಅಗ್ನಿಸೂಕ್ತದ ಮೂಲಕ ಯಾವ ನಾಯಕತ್ವ / ಮುಂದಾಳತ್ವ / ಅಗ್ರಣೀತ್ವವಿದೆಯೋ / ಪ್ರಾಥಮ್ಯವಿದೆಯೋ, ಇದರಿಂದಾಗಿಯೇ ಮುಂದೆಲ್ಲ ಅಗ್ನಿಯೆಂಬ ಹೆಸರೇ ಬರುವುದು; ಬೇರೆ ಅಲ್ಲ” ಎಂಬ ಮಾಧ್ವಭಾಷ್ಯದ ದಿಕ್ಸೂಚಿಯಂತೆ (ಅಗ್ರೇ ನಿಹಿತಃ— ಮುಂದೆ ಯಜ್ಞರೂಪದಲ್ಲಿ ಇಡಲ್ಪಡುವವನು, ಅಗ್ರೇ ನಯತಿ ಹವಿಃ ಸ್ವರ್ಗಂ ಪ್ರತಿ— ಯಜ್ಞದಲ್ಲಿ ಹವಿಸ್ಸನ್ನು ಸ್ವರ್ಗದೆಡೆಗೆ ಮುಂದಕ್ಕೆ ಕೊಂಡೊಯ್ಯುವವನು, ಅಗ್ರೇ ನಯತಿ ಅಸ್ಮಾನ್ ಮೋಕ್ಷಂ ಪ್ರತಿ— ನಮ್ಮನ್ನು ಮೋಕ್ಷದೆಡೆಗೆ ಮುಂದಕ್ಕೊಯ್ಯುವವನು, ಅಗ್ರ-ನೀಃ ಇತಿ ಅಗ್ನಿಃ— ಅಗ್ರಣೀ, ಮುಂದಾಳು ಎಂಬುದರಿಂದ ಪರಮಾತ್ಮನು ಅಗ್ನಿಯೆನಿಸಿರುವನು) ಸಪ್ತಮ್ಯಂತವಾದ ಅಗ್ರಶಬ್ದ (ಅಗ್ರೇ)ವು “ಅಭಿಮುಖವಾಗಿ / ಎದುರೇ / ಸಮ್ಮುಖದಲ್ಲೇ ಪೂಜಿತನಾದವನು” ಎಂಬರ್ಥದಲ್ಲಿ “ತತ್ ಹಿತಾಃ” ಎಂಬ ಸೂತ್ರದಿಂದ ಅಗ್ರಶಬ್ದಕ್ಕೆ ನಿಪ್ರತ್ಯಯವು ಬಂದು, ರಶಬ್ದವು ಲೋಪವಾಗಿ ಸಿದ್ಧವಾದ ಅಗ್ನಿಶಬ್ದಕ್ಕೆ ಪ್ರಥಮಪೂಜ್ಯತೆಯೆಂಬರ್ಥವಾಚಕವಾದ ಅಭಿಧಾನ / ಹೆಸರು ಎಂದು ಚಿಂತಿಸಬೇಕು (ಧ್ಯೈ ಚಿನ್ತಾಯಾಮ್) / ಗಮನಿಸಬೇಕು.

ಋಷಿಃ ತು ― “ಅಗ್ನಿಮೀಳೇ―” (1.1.1) ಇತಿ ಆರಭ್ಯ “ಅಗ್ನಿಂ ದೂತಮ್―” (12.1.111) ಇತ್ಯತಃ ಪ್ರಾಕ್ತನಸ್ಯ ದಶೋತ್ತರ-ಋಕ್-ಶತಸ್ಯ ಮಧುಚ್ಛನ್ದಾಃ - ಏವ ಜ್ಞೇಯಃ || ವಿನಿಯೋಗೋ ವಿಷ್ಣುಪ್ರೀತಿದ್ವಾರಾ ಮೋಕ್ಷೇ | ಅವಾನ್ತರವಿನಿಯೋಗಃ ಕರ್ಮಣಿ || “ಅಗ್ನಿಮೀಳೇ―” (1.1.1) ಇತ್ಯಾರಭ್ಯ “ಗಾಯನ್ತಿ ತ್ವಾ―” (10.1.91) ಇತ್ಯತಃ ಪ್ರಾಕ್-ಸೂಕ್ತನವಕಂ ಗಾಯತ್ರೀಚ್ಛನ್ದಸ್ಕಮ್ | ಗಾಯತ್ರೀಚ್ಛನ್ದಸಃ ಅಭಿಮಾನಿ-ದೇವತಾಃ ತು ― ಶ್ರೀಃ, ಬ್ರಹ್ಮಾಣೀ, ಭಾರತೀ, ಗರುಡಃ, ಸ್ವಾಹಾ ಇತಿ ಪಞ್ಚ ||

ಋಷಿಯಾದರೋ— “ಅಗ್ನಿಮೀಳೇ—” (೧.೧.೧) ಎಂಬಲ್ಲಿಂದ ತೊಡಗಿ / ಆರಂಭಿಸಿ, “ಅಗ್ನಿಂ ದೂತಮ್—” (೧೨.೧.೧೧೧) ಎಂಬುದಕ್ಕಿಂತ ಹಿಂದಿನ ೧೧೦ ಋಕ್ಕುಗಳಿಗೆ— “ಮಧುಚ್ಛನ್ದ” ನೆಂದೇ ತಿಳಿಯಬೇಕು. ವಿನಿಯೋಗ / ಉಪಯೋಗ ವು ವಿಷ್ಣುಪ್ರಸನ್ನೀಕರಣದ ಮೂಲಕ ಮೋಕ್ಷದಲ್ಲಿ / ಮೋಕ್ಷಕ್ಕಾಗಿ. ಅಮುಖ್ಯ / ಗೌಣ / ಉಪ ವಿನಿಯೋಗವು ಬಾಹ್ಯಕರ್ಮದಲ್ಲಿ / ಲೌಕಿಕಫಲಗಳಿಗಾಗಿ. “ಅಗ್ನಿಮೀಳೇ—” (೧.೧.೧) ಎಂಬಲ್ಲಿಂದ ತೊಡಗಿ / ಆರಂಭಿಸಿ, “ಗಾಯನ್ತಿ ತ್ವಾ—” (೧೦.೧.೯೧) ಎಂಬುದಕ್ಕಿಂತ ಹಿಂದಿನ ೯ ಸೂಕ್ತಗಳು “ಗಾಯತ್ರೀಚ್ಛಂದಸ್ಸಿನಲ್ಲಿವೆ”. ಗಾಯತ್ರೀಚ್ಛಂದಸ್ಸಿನ ಅಭಿಮಾನಿ ದೇವತೆಗಳಾದರೋ— ಶ್ರೀ / ವಿಷ್ಣುಪತ್ನಿಯಾದ ಲಕ್ಷ್ಮೀ, ಬ್ರಹ್ಮಾಣೀ / ಬ್ರಹ್ಮನ ಪತ್ನಿಯಾದ ಸರಸ್ವತೀ, ವಾಯುಪತ್ನಿಯಾದ ಭಾರತೀ, ವಿಷ್ಣುವಾಹನನಾದ ವೇದಾಭಿಮಾನಿ ವೈನತೇಯ ಗರುಡ, ಅಗ್ನಿಪತ್ನಿಯಾದ ಸ್ವಾಹಾ (“ಶ್ರಿಯಮಿಚ್ಛೇತ್ ಹುತಾಶನಾತ್”— ಸಿರಿ-ಸಂಪತ್ತನ್ನು, ಹೋಮಿಸಿದ್ದನ್ನುಣ್ಣುವುದರಿಂದಾಗಿ ಹುತ-ಅಶನ ನೆನಿಸಿದ ಅಗ್ನಿಯಿಂದ, ಇಚ್ಛಿಸಬೇಕು / ಬೇಡಬೇಕು)— ಎಂಬುದಾಗಿ ಐವರು.

ಓ೩ಮ್ || ಅಗ್ನಿಮೀಳೇ ಪುರೋಹಿತಂ ಯಜ್ಞಸ್ಯ ದೇವಮೃತ್ವಿಜಮ್ || ಹೋತಾರಂ ರತ್ನಧಾತಮಮ್ || ೧ ||

ಪದಪಾಠಃ ―
ಅಗ್ನಿಮ್ | ಈಳೇ | ಪುರಃऽಹಿತಮ್ | ಯಜ್ಞಸ್ಯ | ದೇವಮ್ | ಋತ್ವಿಜಮ್ || ಹೋತಾರಮ್ | ರತ್ನऽಧಾತಮಮ್ || ೧ ||

(ನಾನಿಲ್ಲಿ ವ್ಯಾಕರಣಪ್ರಕ್ರಿಯಾವಿಸ್ತಾರಗಳನ್ನು ಪ್ರಾಯಶಃ ಹೇಳದೆಯೇ ಸಾರರೂಪವಾಗಿಯೇ, ಮಂತ್ರಾರ್ಥಮಂಜರಿಯಲ್ಲಿ ರಾಘವೇಂದ್ರಸ್ವಾಮಿಗಳಿಂದ ಪ್ರತಿಪಾದಿತವಾದ ಅರ್ಥಗಳನ್ನು ಹೇಳುತ್ತೇನೆ.)

“ಅಗ್ನಿಮ್” ಅಗ್ರೇ ಭವಂ, ಸರ್ವೋತ್ತಮಂ, ಸರ್ವಪೂಜ್ಯೇಭ್ಯಃ ಪ್ರಥಮಪೂಜ್ಯಂ, ಪ್ರಥಮಪ್ರವರ್ತಕಂ (“ಅಗ್ನಿನಾಗ್ನಿಃ ಸಮಿಧ್ಯತೇ”-- ಋ.ಸಂ.೧೨.೬.೧೧೬) ವಾ ಅಗ್ನಿನಿಯಂತೃತ್ವಾತ್ ತದಧೀನತ್ವನ್ಯಾಯೇನ ಚ ಅಗ್ನಿನಾಮಕಂ ವಿಷ್ಣುಂ ತದ್-ಅಧಿಷ್ಠಾನಂ ಪ್ರಸಿದ್ಧ-ಅಗ್ನಿಂ ವಾ “ಈಳೇ” ಸ್ತೌಮಿ, “ಈಡ ಸ್ತುತೌ” ಋಕ್ಷು ಡಸ್ಯ ಳಃ ಪ್ರಾಯೇಣ |

ಅಗ್ನಿಯನ್ನು, ಅಗ್ರಭಾಗದಲ್ಲಿ / ಮುಂದಿನಲ್ಲಿ ಇರುವವನನ್ನು, ಸರ್ವೋತ್ತಮನಾಗಿ ಅಗ್ರಗಣ್ಯನಾದವನನ್ನು ಎಲ್ಲ ಪೂಜ್ಯರಿಗಿಂತಲೂ ಮೊದಲು ಋಗ್ವೇದದಲ್ಲಿ ಪೂಜಿತನಾದವವನ್ನು, ಅಥವಾ ಸಕಲ ಕರ್ಮಗಳ ಆದ್ಯಪ್ರೇರಕ / ಆದ್ಯಪ್ರವರ್ತಕ / ಮೊದಲ ಪ್ರಚೋದಕ ನನ್ನು (“ಅಗ್ನಿಯಿಂದ ಅಗ್ನಿಯು ಉರಿಸಲ್ಪಡುವುದು” ಎಂದಿದೆ ಋಕ್ಸಂಹಿತಾ ಮಂಡಲ ೧೨, ಸೂಕ್ತ ೬, ಮಂತ್ರ ೧೧೬ರಲ್ಲಿ) ಹಾಗೂ ಯಾವನು ಅಗ್ನಿಯ ನಿಯಂತ್ರಕನಾಗಿರುವನೋ ಅದರಿಂದಾಗಿ ಮತ್ತು “ತದಧೀನತ್ವನ್ಯಾಯದಿಂದ” ಅಗ್ನಿಯು ಯಾವನ ಅಧೀನನೋ ಅಂತಹ ಅಗ್ನಿಯೆಂಬ ಹೆಸರಿನ ವಿಷ್ಣುವನ್ನು ಅಥವಾ, ಆ ವಿಷ್ಣುವಿನ ಅಧಿಷ್ಠಾನ (ಅಧಿ- ಆಧರಿಸಿ, ಸ್ಥಾನ— ನೆಲೆಸಿರುವ)ನಾಗಿರುವ ಲೋಕಪ್ರಸಿದ್ಧವಾದ ಬೆಂಕಿಯನ್ನೋ, ಸ್ತುತಿಸುತ್ತೇನೆ. “ಈಡ ಸ್ತುತೌ” ಎಂಬ ಸ್ತುತ್ಯರ್ಥಕವಾದ ಈಡ್ ಧಾತುಜನ್ಯವಾದದ್ದು “ಈಳೇ / ಈಡೇ”. ಬಹುವಾಗಿ / ಬಹುಶಃ / ಪ್ರಾಯಶಃ ಋಕ್ಕುಗಳಲ್ಲಿ (ಋಗ್ವೇದದಲ್ಲಿ) “ಡ”ಕಾರಕ್ಕೆ “ಳ” ಕಾರವು ಬಳಕೆಯಾಗಿದೆ.

“ಪುರೋಹಿತಮ್” ಅನಾದಿತಃ ಸರ್ವಪ್ರಾಣಿನಾಮ್ ಅನುಕೂಲಂ “ಯಜ್ಞಸ್ಯ ಋತ್ವಿಜಮ್” ಯಜ್ಞಾನಾಂ ಜ್ಯೋತಿಷ್ಟೋಮಾದೀನಾಂ ಕರ್ತೃತಯಾ ಋತ್ವಿಕ್-ನಾಮಕೇಷು ಅಧ್ವರ್ಯು-ಹೋತೃ-ಉದ್ಗಾತೃ-ಪ್ರಭೃತಿಷು ನಿಯಾಮಕತಯಾ ಸ್ಥಿತತಯಾ ‘ತದಧೀನತ್ವಾತ್ ತದರ್ಥವತ್’ ಇತ್ಯುಕ್ತನ್ಯಾಯೇನ ಋತ್ವಿಕ್-ನಾಮಕಂ, “ಹೋತಾರಮ್” ಹೋತೃನಿಯಾಮಕತಯಾ ವಿಶಿಷ್ಯ ತತ್ರ ಸಾನ್ನಿಧ್ಯಾತ್ ತದಧೀನತ್ವನ್ಯಾಯೇನ ಏವ ಹೋತೃನಾಮಕಂ ಋತ್ವಿಜಂ ಹೋತಾರಮ್ | ಕುರುಪಾಣ್ಡವನ್ಯಾಯೇನ ಸಾಮಾನ್ಯ-ವಿಶೇಷಭಾವಾದ್ ಅಪುನರುಕ್ತಿಃ |

“ಪುರೋಹಿತನನ್ನು”, ಅನಾದಿಕಾಲದಿಂದಲೂ / ಮೊದಲರಿಯದಂದಿನಿಂದಲೂ / ಆದಿ ಗೊತ್ತಿರದ ಬಹುಹಿಂದಿನಿಂದಲೂ ಸಕಲ ಪ್ರಾಣವಂತರ ಅನುಕೂಲನಾದ / ಸಹಕಾರಿಯಾದ ವನನ್ನು, “ಯಜ್ಞದ ಋತ್ವಿಜನನ್ನು” ಜ್ಯೋತಿಷ್ಟೋಮಾದಿ ಯಜ್ಞಗಳ ಕರ್ತೃತ್ವ / ಮಾಡುವಿಕೆ / ಅನುಷ್ಠಾನಿಸುವಿಕೆ ಯಿಂದ ಋತ್ವಿಜರೆನಿಸಿದ ಅಧ್ವರ್ಯು-ಹೋತೃ-ಉದ್ಗಾತೃ (-ಬ್ರಹ್ಮ) ಮುಂತಾದವರಲ್ಲಿ ನಿಯಾಮಕನಾಗಿ ಸ್ಥಿತನಾಗಿರುವುದರಿಂದ, “ಆತನ ಅಧೀನತ್ವದಿಂದಾಗಿ ಆತನೇ ಎಂಬರ್ಥದಂತೆ” ಎಂಬ ನ್ಯಾಯದಂತೆ ಋತ್ವಿಕ್-ಎಂಬ “ಹೋತಾರನನ್ನು / ಹೋತೃವನ್ನು”, ಹೋತೃವಿನ ನಿಯಾಮಕನಾಗಿ / ನಿಯಂತ್ರಕನಾಗಿ ವಿಶೇಷವಾಗಿ ಆತನೊಳಗಿನ ಸಾನ್ನಿಧ್ಯದಿಂದಾಗಿ, “ಆತನ ಅಧೀನತ್ವ” ನ್ಯಾಯದಿಂದಲೇ ಹೋತೃವೆಂಬ ಋತ್ವಿಜನನ್ನು / ಹೋತೃವನ್ನು. ಕುರುಪಾಂಡವನ್ಯಾಯದಿಂದ ಕುರುವಂಶವು ಪಾಂಡವ-ಕೌರವರೀರ್ವರಿಗೂ ಸಾಮಾನ್ಯಲಕ್ಷಣವಾದರೆ, ಪಾಂಡವ ಎಂಬುದು ಪಾಂಡುಸುತರಿಗೆ ಮಾತ್ರ ಅನ್ವಯಿಸುವ ವಿಶೇಷ ಹೆಸರಾಗಿರುವಂತೆಯೇ, ಮೂಲ ಕುರುವಂಶದ ಅಧೀನವೇ / ಸಂತಾನವೇ ಪಾಂಡುವಂಶವಾಗಿದ್ದು, ಸಾಮಾನ್ಯ-ವಿಶೇಷಭಾವದಿಂದ ಎಂದು ಹೇಳುವುದಕ್ಕಾಗಿ “ತದಧೀನತ್ವನ್ಯಾಯವನ್ನು” ಪುನಃ ಹೇಳಿದೆಯೇ ಹೊರತು ಮತ್ತೆ ಮತ್ತೆ ಹೇಳಿದ್ದನ್ನೇ ಪುನರುಕ್ತಿ (ಪುನಃ ಉಕ್ತಿ) ಯಾಗಿ ಹೇಳಿದ್ದಲ್ಲ.

“ರತ್ನಧಾತಮಮ್” ರಮೇಃ ಧಾತೋಃ ಮಕಾರಲೋಪೇ ರತ್ನ ಇತಿ ರೂಪತ್ವಾತ್ ರತ್ನಂ ಸುಖಂ ಧತ್ತೇ ಇತಿ ರತ್ನಧಾಃ, ಅತಿಶಯೇನ ರತ್ನಧಾಃ, ತಂ ರತ್ನಧಾತಮಮ್ | “ದೇವಮ್” ಸ್ತುತ್ಯರ್ಥಾತ್ ದೀವ್ಯತೇಃ ನಿಷ್ಪನ್ನತ್ವಾತ್ ಸ್ತುತ್ಯಮ್ | ಅತ್ರ ಉಕ್ತಗುಣಾನಾಂ ನಿರವಧಿಕತ್ವಂ ವಿಷ್ಣೌ, ತದಧಿಷ್ಠಾನೇ ಅಗ್ನೌ ತು ಯಥಾಯೋಗ್ಯಮ್ ||

“ರಮ್ ಕ್ರೀಡಾಯಾಮ್” ಧಾತುವಿನ ‘ಮ’ಕಾರವು ಲೋಪವಾಗಿ ‘ರತ್ನ’ ಎಂಬ ರೂಪತ್ವದಿಂದಾಗಿ ರತ್ನವು ಸುಖವನ್ನುಂಟುಮಾಡುತ್ತದೆಂಬುದರಿಂದ “ರತ್ನಧಾಃ”, ಅತಿಶಯಸುಖ / ಪರಮಸುಖ / ಪಾರಮಾರ್ಥಿಕಸುಖ / ಮೋಕ್ಷ / ಬ್ರಹ್ಮಾನಂದ / ಆತ್ಮಾನಂದ ವನ್ನು ಉಂಟುಮಾಡುವುದರಿಂದ “ರತ್ನಧಾ-ತಮ”, ಅವನನ್ನು “ರತ್ನಧಾತಮಮ್”. ಇನ್ನು, “ದೇವಮ್” ಎಂಬುದು ಸ್ತುತಿ ಎಂಬರ್ಥಕವಾದ “ದಿವು ಸ್ತುತೌ” ಎಂಬ ಧಾತುವಿನ ಸ್ತುತಿಸಲ್ಪಡುತ್ತಾನೆ / ದೀವ್ಯತೇ ಎಂಬ ನಿಷ್ಪನ್ನತ್ವದಿಂದ / ವ್ಯುತ್ಪತ್ತಿಯಿಂದ / ನಿಷ್ಪತ್ತಿಯಿಂದ “ಸ್ತುತ್ಯನಾದವನನ್ನು” (ಸ್ತೋತುಂ ಯೋಗ್ಯಂ ಸ್ತುತ್ಯಮ್— ಪ್ರಶಂಸಾರ್ಹನಾದವನನ್ನು, ಸ್ತುತ್ಯರ್ಹನಾದವನನ್ನು) ಎಂಬ ಅರ್ಥವನ್ನುಂಟುಮಾಡುತ್ತದೆ. ಇಲ್ಲಿ ಹೇಳಿದ ಗುಣಗಳ ನಿರವಧಿಕತ್ವ / ಅವಧಿಗಳವಡದ ಕಾಲಾತೀತತೆ / ಶಾಶ್ವತತೆ / ನಿತ್ಯತೆಯು (ಈ ಗುಣಗಳ ಸದಾ ಇರುವಿಕೆಯು) ವಿಷ್ಣುವಿನಲ್ಲಿ ಹಾಗೂ ಅಗ್ನಿಯ ಯೋಗ್ಯತೆಯನ್ನು ಮೀರದಂತೆ (ಯೋಗ್ಯತಾಮ್ ಅನತಿಕ್ರಮ್ಯ— ಯಥಾಯೋಗ್ಯಮ್) ಸಾವಧಿಕತ್ವ / ತಾತ್ಕಾಲಿಕತೆ / ಸಾಂದರ್ಭಿಕತೆ ವಿಷ್ಣುವನ್ನೇ ಮೂಲಾಧಾರವಾಗಿ ಹೊಂದಿರುವ ಅಗ್ನಿಯಲ್ಲಿ ತೋರಿಬರುವುದು. ಅಂದರೆ, ಅಗ್ರಣೀತ್ವ, ಪುರೋಹಿತತ್ವ, ಯಜ್ಞೇಶ್ವರತ್ವ, ದೇವತ್ವ, ಋತ್ವಿಜತ್ವ, ಹೋತೃತ್ವ, ರತ್ನಧಾತಮತ್ವ— ಈ ಗುಣಗಳು ವಿಷ್ಣುವಿನಲ್ಲಿ ಸದಾ ಪೂರ್ಣಗುಣ-ಪ್ರಮಾಣಗಳಲ್ಲಿ ಇದ್ದರೆ, ಆತನನ್ನೇ ಆಶ್ರಯಿಸಿ ಇರುವ (ಅಧಿಷ್ಠಾನ >> ಅಧಿ— ಆಶ್ರಯಿಸಿ, ಸ್ಥಾನ— ಇರುವ) ಅಗ್ನಿಯಲ್ಲಿ ಯಜ್ಞಕಾಲದಲ್ಲೇ ಮುಂತಾಗಿ ತಾತ್ಕಾಲಿಕವಾಗಿ ಆಂಶಿಕಗುಣ-ಪ್ರಮಾಣಗಳಲ್ಲಿ ಇರುವುವು.

ಅತ್ರ ವಿಶೇಷಣಾನಾಂ ಕೃತ್ಯಮ್ ― ಅಗ್ನಿನಾಮ್ನಃ ಅಸ್ಯ ಸ್ತುತ್ಯತ್ವ-ಉಪಪಾದನಮ್ ಏವ, ಋಚಾಂ ಕರ್ಮಾಙ್ಗತ್ವೇನ ಋತ್ವಿಕ್-ವಾಕ್ಯತಯಾ ಆತ್ಮನಿಯಾಮಕಸ್ಯ ಸರ್ವದಾ ಹಿತರೂಪಸ್ಯ ಋಗ್ವೇದಿನಃ ಹೋತೃತ್ವ-ಅಪೇಕ್ಷಿತಯಾ ಹೋತೃಸ್ಥಿತಸ್ಯ ಸುಖಾದಿ-ಅರ್ಥಿನಃ ಪೂರ್ಣಸುಖರೂಪಸ್ಯ ಧನಾಢ್ಯಸ್ಯ ದೇವಶಬ್ದೋಕ್ತಗುಣಾಢ್ಯಸ್ಯ ಚ ಸ್ತುತೇಃ ಕಾರ್ಯತ್ವಾತ್ ತಸ್ಯ ಸ್ತುತಿಃ ಯುಕ್ತಾ ಇತಿ ||

ಇಲ್ಲಿ ವಿಶೇಷಣಗಳ ಕಾರ್ಯ— “ಅಗ್ನಿ” ಎಂಬ ಹೆಸರು ಪರಮಾತ್ಮನ ಅಗ್ರಣೀತ್ವ ಹಾಗೂ ಸ್ತುತ್ಯತ್ವದ / ಪ್ರಶಂಸನೀಯತೆಯ ಪ್ರತಿಪಾದನೆಯೇ ಆಗಿದೆ. ಋಚೆಗಳ / ಋಕ್ಕುಗಳ ವೇದೋಕ್ತಕರ್ಮಾಂಗವಿನಿಯೋಗತ್ವದಿಂದಾಗಿ “ಋತ್ವಿಕ್” ಎಂಬುದರಿಂದ ಆತ್ಮನಿಯಾಮಕನಾದ, ಸದಾ ಹಿತಕಾರಕನಾದ, ಸುಖಾದಿಗಳನ್ನು ಬಯಸುವ ಋಗ್ವೇದಿಯ ಹೋತೃತ್ವಮಾತ್ರವಲ್ಲದೆ ಹೋತೃವಿನೊಳಗೆ ಸ್ಥಿತನಾದ ಪೂರ್ಣಸುಖರೂಪನೂ ಧನಾಢ್ಯನೂ / ಸಂಪತ್ತಿನ ನಿಧಿ ಯೂ “ದೇವ” ಶಬ್ದವಾಚ್ಯವಾದ ದೈವೀಗುಣಗಳಿಂದ ಆಢ್ಯನಾದ ಭಗವಂತನ ಸ್ತುತಿ / ಪ್ರಶಂಸೆ ಯ ಕಾರ್ಯತ್ವದಿಂದ / ಮಾಡುವಿಕೆಯಿಂದ, ಆತನ ಸ್ತುತಿಯು ಯುಕ್ತವೇ / ಯೋಗ್ಯವೇ ಆಗಿರುವುದು ಎಂದು.

ಅತ್ರ ಸರ್ವಾಪೇಕ್ಷಿತ-ಸುಖಪ್ರದ-ಉಪಾಸನ-ವಿಷಯ-ನಿರತಿಶಯಸುಖಸ್ವರೂಪತ್ವಮಹಾಗುಣಪ್ರತಿಪಾದಕತ್ವಾತ್ ಅಸ್ಯ ಮನ್ತ್ರಸ್ಯ ಆದಿತ್ವಂ ಧ್ಯೇಯಮ್ ||

ಇಲ್ಲಿ ಸಕಲರಿಂದ ಅಪೇಕ್ಷಿತವಾದ ಸುಖವನ್ನೀಯುವ ಉಪಾಸನೆಗೆ ವಿಷಯನಾದ, ನಿರತಿಶಯವಾದ / ಪ್ರಭೂತವಾದ / ಅತಿಶಯವಾದ ಸುಖ / ಮುಕ್ತಿ ಸ್ವರೂಪವೆಂಬ ದೊಡ್ಡ ಗುಣವನ್ನು ಪ್ರತಿಪಾದಿಸುವುದರಿಂದ ಈ ಮಂತ್ರಕ್ಕೆ ಋಗ್ವೇದಾರಂಭಸ್ಥಾನವೆಂದು ತಿಳಿಯಬೇಕು / ಚಿಂತಿಸಬೇಕು (ಧ್ಯೇಯಮ್— ಧ್ಯೈ ಚಿನ್ತಾಯಾಮ್).

ಅಧ್ಯಾತ್ಮಪರತ್ವೇ ತು ಅಯಮ್ ಅರ್ಥಃ ― ಪುರೋಹಿತಮ್, ಅನಾದಿತಃ ಸರ್ವಾನುಕೂಲಮ್ | ಯಜ್ಞಸ್ಯ, ಜ್ಞಾನಯಜ್ಞಸ್ಯ | ಋತ್ವಿಜಮ್, ಋತ್ವಿಗ್-ಭೂತ-ಇನ್ದ್ರಿಯಾಭಿಮಾನಿ-ನಿಯಾಮಕತಯಾ ತತ್ರ ಸ್ಥಿತತ್ವೇನ ಋತ್ವಿಕ್- ನಾಮಕಮ್ | ಹೋತಾರಮ್,
ಇನ್ದ್ರಿಯಾಖ್ಯ-ಅಗ್ನಿಷು ವಿಷಯಲಕ್ಷಣ-ಹವಿಷಾಂ ಹೋತಾರಮ್, ‘ಹು ದಾನ-ಅದನಯೋಃ’ ಇತ್ಯುಕ್ತೇಃ ದಾತಾರಮ್, ವಿಷಯಭೋಗಪ್ರದಮ್ ಇತಿ ಯಾವತ್ | ಅಗ್ನಿಮ್, ಅಙ್ಗಂ ಶರೀರಂ ನಯತಿ ಪ್ರೇರಯತಿ ಇತಿ ಅಙ್ಗಶಬ್ದ-ಉಪಪದಾತ್ ನಯತೇಃ ಡಿಪ್ರತ್ಯಯಃ, ಉಪಪದ-ಅನುಸ್ವಾರ-ಅಕಾರಲೋಪೇ ಅಗ್ನಿಃ ಇತಿ ರೂಪಸಿದ್ಧೇಃ ಸರ್ವಶರೀರಪ್ರವರ್ತಕಮ್ | ಈಳೇ, (ಈಡೇ / ಸ್ತೌಮಿ) ಇತಿ || ಅತ್ರ ಅಧ್ಯಾತ್ಮಂ ಸರ್ವತ್ರ ಮೋಕ್ಷಸಾಧಕಃ ಯಃ ಕಶ್ಚಿತ್ ಸಾತ್ತ್ವಿಕಃ ಏವ ಯಜಮಾನಃ ಜ್ಞೇಯಃ || ಅತ್ರ ಅಪಿ ವಿಶೇಷಣಾನಾಂ ಕೃತ್ಯಂ ತು― ಜ್ಞಾನಾರ್ಥಿನಃ ಸರ್ವೇನ್ದ್ರಿಯಪ್ರೇರಕಸ್ಯ ಯಥೋಚಿತಭೋಗಪ್ರದಸ್ಯ ಚ ಸ್ತುತ್ಯತಾ ಯುಕ್ತಾ ಇತಿ ಸ್ತುತ್ಯತ್ವ-ಉಪಪಾದನಮ್ ಏವ ಇತಿ |

ಅಧ್ಯಾತ್ಮಪರವಾಗಿಯಾದರೋ ಈ ಅರ್ಥವು— ಪುರೋಹಿತಮ್, ಅನಾದಿಕಾಲದಿಂದಲೂ ಸರ್ವರಿಗೂ ಅನುಕೂಲನಾದವನನ್ನು, ಸಹಕಾರಿಯಾದವನನ್ನು; ಯಜ್ಞಸ್ಯ, ಜ್ಞಾನಯಜ್ಞದ; ಋತ್ವಿಜಮ್, ಋತ್ವಿಜನಾದ, ಪಂಚಭೂತಗಳ-ಪಂಚೇಂದ್ರಿಯಗಳ-ಪಂಚಪ್ರಾಣಗಳ ಅಭಿಮಾನಿಯೂ ನಿಯಾಮಕನೂ / ನಿಯಂತ್ರಕನೂ ಆಗಿ ಋತ್ವಿಜನೊಳಗೂ ಸ್ಥಿತನಾಗಿರುವುದರಿಂದ ಋತ್ವಿಕ್ ನಾಮಕನಾದವನನ್ನು; ಹೋತಾರಮ್, ಶ್ರೋತ್ರಾದಿ-ಇಂದ್ರಿಯಶಕ್ತಿಗಳೆಂಬ ಅಗ್ನಿಗಳಲ್ಲಿ ಶಬ್ದಾದಿವಿಷಯಗಳೆಂಬ ಹವಿಸ್ಸುಗಳನ್ನು ಹೋಮಿಸುವ ಹೋತಾರನನ್ನು / ಹೋತೃವನ್ನು; “ಹು ದಾನ-ಭಕ್ಷಣ” ಎಂಬುದರಿಂದ ದಾತಾರನಾದವನನ್ನು / ದಾತೃವನ್ನು; ಅಥವಾ ವಿಷಯಭೋಗಗಳನ್ನೀಯುವವನನ್ನು; ಅಗ್ನಿಮ್, “ಅಂಗವನ್ನು, ಶರೀರವನ್ನು ಕರೆದೊಯ್ಯುತ್ತಾನೆ / ಪ್ರೇರಿಸುತ್ತಾನೆ” ಎಂಬ “ಅಂಗ”ಶಬ್ದದ ಪ್ರಯೋಗದಿಂದ, “ನಯತಿ”ಗೆ ಡಿ-ಪ್ರತ್ಯಯ ಬಂದು, ಉಪಪದವಾದ “ಅಂಗ”ದ ಅನುಸ್ವಾರ (ಂ) ಹಾಗೂ ಗಕಾರದ ಅಕಾರಲೋಪವಾಗಿ “ಅಗ್ನಿ” ಎಂಬ ರೂಪವು ಸಿದ್ಧವಾಗಿ, ಸರ್ವರ ಶರೀರಗಳ ಪ್ರವರ್ತಕ / ಚಾಲಕ ನನ್ನು; ಈಳೇ, (ಸ್ತುತಿಸುತ್ತೇನೆ) ಎಂಬುದಾಗಿ. ಇಲ್ಲಿ ಅಧ್ಯಾತ್ಮತತ್ತ್ವವಾದರೋ, ಎಲ್ಲೆಡೆಯಲ್ಲೂ ಮೋಕ್ಷವನ್ನೇ ಸಾಧಿಸುತ್ತಿರುವ / ಯಾವುದೇ ಬಂಧಮೋಹಗಳಿಲ್ಲದ ಯಾವಾನೊಬ್ಬ ಪರಮಸಾತ್ತ್ವಿಕನೇ ಯಜಮಾನನೆಂದು ತಿಳಿಯಬೇಕು. ಇಲ್ಲಿ ಕೂಡ ವಿಶೇಷಣಗಳ ಕಾರ್ಯವಾದರೋ— ಜ್ಞಾನಾರ್ಥಿಯಾದವನಿಗೆ / ಜ್ಞಾನಾಕಾಂಕ್ಷಿಯಾದವನಿಗೆ ಸರ್ವ ಇಂದ್ರಿಯಗಳ ಪ್ರೇರಕನ ಹಾಗೂ ಯಥಾಯೋಗ್ಯವಾದ ಧರ್ಮಯುಕ್ತ ಭೋಗವನ್ನೀಯುವವನ ಸ್ತುತಿಮಾಡುವಿಕೆಯು ಯುಕ್ತವಾದುದು / ಯೋಗ್ಯವಾದುದು / ಉಚಿತವಾದುದು ಎಂದು ಪ್ರಶಂಸನೀಯತೆಯ ಪ್ರತಿಪಾದನೆಯೇ ಆಗಿರುವುದೆಂಬುದಾಗಿದೆ.

ದಯಾನಂದ-ಭಾಷ್ಯಮ್—

ಅಥ ಆದಿಮಸ್ಯ ನವರ್ಚಸ್ಯ ಸೂಕ್ತಸ್ಯ ಮಧುಚ್ಛಂದಾ ಋಷಿಃ | ಅಗ್ನಿರ್ದೇವತಾ | ಗಾಯತ್ರೀ ಛಂದಃ | ಷಡ್ಜಃ ಸ್ವರಃ ||

ಆರಂಭದಲ್ಲಿ, ಋಕ್ಸಂಹಿತೆಯ ಮೊದಲಿನ ೯ ಋಕ್ಕುಗಳಿರುವ ನವರ್ಚಸೂಕ್ತಕ್ಕೆ ಮಧುಚ್ಛಂದನೇ ಋಷಿಯು. ಅಗ್ನಿಯೇ ದೇವತೆಯು. ಗಾಯತ್ರೀ ಛಂದಸ್ಸು. ಷಡ್ಜ (ಸ) ಉಚ್ಚಾರಣಾ ಸ್ವರವು.

ತತ್ರ ಆದ್ಯೇ ಮಂತ್ರೇ ಅಗ್ನಿಶಬ್ದೇನ ಈಶ್ವರೇಣ ಆತ್ಮ-ಭೌತಿಕೌ ಅರ್ಥೌ ಉಪದಿಶ್ಯೇತೇ |

ಅದರಲ್ಲಿ ಮೊದಲ ಮಂತ್ರದಲ್ಲಿ ಅಗ್ನಿಯೆಂಬ ಶಬ್ದದಿಂದ, ಪರಮೇಶ್ವರ ಪರಮಾತ್ಮನಿಂದ ತನ್ನ ಪರವಾದ ಹಾಗೂ ಭೌತಿಕ / ಲೌಕಿಕ ಪರವಾದ ಅರ್ಥಗಳೆರಡೂ ಉಪದೇಶಿಸಲ್ಪಡುತ್ತವೆ.

ಪದ-ಅರ್ಥಃ—

(ಅಗ್ನಿಮ್) ಪರಮೇಶ್ವರಂ ಭೌತಿಕಂ ವಾ— “ಇಂದ್ರಂ ಮಿತ್ರಂ ವರುಣಮಗ್ನಿಮಾಹುರಥೋ ದಿವ್ಯಃ ಸ ಸುಪರ್ಣೋ ಗರುತ್ಮಾನ್ | ಏಕಂ ಸದ್ವಿಪ್ರಾ ಬಹುಧಾ ವದಂತ್ಯಗ್ನಿಂ ಯಮಂ ಮಾತರಿಶ್ವಾನಮಾಹುಃ |”— (ಋಗ್ವೇದ— ೧. ೧೬೪. ೪೬) ||

ಪರಮೇಶ್ವರನನ್ನು ಅಥವಾ ಭೌತಿಕವಾಗಿ ತೋರುವ ಅಗ್ನಿಯನ್ನು— ಎಂದರ್ಥ. ಉದಾ—  “ಇಂದ್ರ, ಮಿತ್ರ / ಸೂರ್ಯ, ವರುಣ, ಅಗ್ನಿ, ದಿವ್ಯವಾದ ಆ ಸುಂದರ ರೆಕ್ಕೆ-ಪುಕ್ಕಗಳಿರುವ ವಿಷ್ಣುವಾಹನನಾದ ವೇದಾಭಿಮಾನಿ ದೇವತೆಯಾದ ಗರುತ್ಮಂತ / ಗರುಡ— ಇವರನ್ನೆಲ್ಲ ಸಮುಚ್ಚಯಾರ್ಥ / ಒಟ್ಟರ್ಥದಲ್ಲಿ (—ಅಥೋ), ಹೀಗೆ ಅಗ್ನಿ, ಯಮ, ಮಾತರಿಶ್ವಾ / ವಾಯುವನ್ನೂ, ಒಂದೇ ಪರಮಸತ್ಯವನ್ನು (ಏಕಂ ಸತ್), ವೇದವಿದರು, ವಿದ್ವಾಂಸರು (ವಿಪ್ರಾಃ— ವೇದಾಧ್ಯಯನತೋ ವಿಪ್ರಃ), ಬಹುವಿಧವಾದ ನಾಮ-ರೂಪ-ಗುಣಾದಿಗಳಿಂದ ವರ್ಣಿಸುತ್ತಾರೆ (ವದಂತಿ), ಹೇಳುತ್ತಾರೆ (ಆಹುಃ).

ಅನೇನ ಏಕಸ್ಯ ಸತಃ ಪರಬ್ರಹ್ಮಣಃ, ಇಂದ್ರಾದೀನಿ ಬಹುಧಾ ನಾಮಾನಿ ಸಂತಿ ಇತಿ ವೇದಿತವ್ಯಮ್ |

ಇದರಿಂದ, ಒಂದೇ ಸತ್ತೆ / ಇರುವಿಕೆ / ಅಸ್ತಿತ್ವ / ಸತ್ಯವಾದ ಪರಬ್ರಹ್ಮನಿಗೆ, ಇಂದ್ರನೇ ಮುಂತಾದ ಬಹುವಿಧ ಹೆಸರುಗಳು ಇವೆ ಎಂದು ತಿಳಿಯಬೇಕು.

“ತದೇವಾಗ್ನಿಸ್ತದಾದಿತ್ಯಸ್ತದ್ವಾಯುಸ್ತದು ಚಂದ್ರಮಾಃ | ತದೇವ ಶುಕ್ರಂ ತದ್ಬ್ರಹ್ಮ ತಾ ಆಪಃ ಸ ಪ್ರಜಾಪತಿಃ |”— (ಯಜುರ್ವೇದ— ೩೨. ೧) ||

ಅದೇ ಅಗ್ನಿಯು; ಅದುವೇ ಆದಿತ್ಯ / ಸೂರ್ಯನು; ಅದೇ ವಾಯುವು; ಅದೇ ಶಿವನು (ತದ್ + ಉ— “ಅಕಾರೋ ವಿಷ್ಣುರುದ್ದಿಷ್ಟ ಉಕಾರಸ್ತು ಮಹೇಶ್ವರಃ | ಮಕಾರಸ್ತು ಸ್ಮೃತೋ ಬ್ರಹ್ಮಾ ಪ್ರಣವಸ್ತು ತ್ರಯಾತ್ಮಕಃ ||”— ಅಕಾರವು ವಿಷ್ಣುವಾಚ್ಯ, ಉಕಾರವು ಮಹೇಶ್ವರ / ಶಿವವಾಚ್ಯ ಹಾಗೂ ಮಕಾರವು ಬ್ರಹ್ಮಾ— ಈ ಮೂವರೂ ಸೇರಿ ಓಂಕಾರ / ಪ್ರಣವ); ಅದೇ ಚಂದ್ರಮನು; ಅದುವೇ ಶುಕ್ರ / ಬೀಜ / ರೇತಸ್ಸು; ಅದೇ ಆಪಸ್ / ಜಲ / ನೀರು; ಅವನೇ ಪ್ರಜಾಪತಿಯು.

ಯತ್ ಸಚ್ಚಿದಾನಂದಾದಿ-ಲಕ್ಷಣಂ ಬ್ರಹ್ಮ ತದೇವ ಅತ್ರ ತದೇವ ಅಗ್ನಿ-ಆದಿ-ನಾಮ-ವಾಚ್ಯಮ್ ಇತಿ ಬೋಧ್ಯಮ್ | “ಬ್ರಹ್ಮ ಹ್ಯಗ್ನಿಃ |”— (ಶತಪಥ ಬ್ರಾಹ್ಮಣ ೧. ೪. ೨. ೧೧) || “ಆತ್ಮಾ ವಾ ಅಗ್ನಿಃ |”— (ಶತಪಥ ಬ್ರಾಹ್ಮಣ ೧. ೨. ೩. ೨) || ಅತ್ರ ಅಗ್ನಿಃ ಬ್ರಹ್ಮಾತ್ಮನಃ ವಾಚಕಃ ಅಸ್ತಿ | “ಅಯಂ ವಾ ಅಗ್ನಿಃ ಪ್ರಜಾಃ ಚ ಪ್ರಜಾಪತಿಃ ಚ | (ಶ.ಬ್ರಾ. ೯. ೧. ೨. ೪೨) || ಅತ್ರ ಪ್ರಜಾಶಬ್ದೇನ ಭೌತಿಕಃ ಪ್ರಜಾಪತಿಶಬ್ದೇನ ಈಶ್ವರಃ ಚ ಅಗ್ನಿಃ ಗ್ರಾಹ್ಯಃ |

ಯಾವುದು ಸತ್-ಚಿತ್-ಆನಂದವೇ ಮುಂತಾದ ಲಕ್ಷಣಗಳಿರುವ ಬ್ರಹ್ಮವೋ, ಅದೇ ಇಲ್ಲಿ ಅಗ್ನಿ ಮುಂತಾದ ಹೆಸರಿನಿಂದ ಹೇಳಲ್ಪಟ್ಟಿದೆ ಎಂದು ತಿಳಿಯಬೇಕು. ಶತಪಥ ಬ್ರಾಹ್ಮಣದಲ್ಲಿ “ಬ್ರಹ್ಮವೇ ಅಗ್ನಿಯು / ಅಗ್ನಿಯೇ ಬ್ರಹ್ಮವು”, “ಆತ್ಮವೇ ಅಗ್ನಿಯು”, “ಈ ಅಗ್ನಿಯೇ ಪ್ರಜೆಗಳೂ ಹಾಗೂ ಪ್ರಜಾಪತಿಯೂ ಹೌದು”— ಎಂದು ಮುಂತಾಗಿ ಹೇಳಿದೆ. ಇಲ್ಲಿ ಅಗ್ನಿಯು ಬ್ರಹ್ಮಾತ್ಮನ ವಾಚಕ (ಸೂಚಕ)ವಾಗಿದೆ. ಇಲ್ಲಿ ಪ್ರಜಾಶಬ್ದದಿಂದ ಭೌತಿಕ ಪ್ರತ್ಯಕ್ಷ ಅಗ್ನಿಯೂ, ಹಾಗೂ ಪ್ರಜಾಪತಿಶಬ್ದದಿಂದ ಪರಮೇಶ್ವರನಾದ ಭಗವಂತನೂ ತಿಳಿಯಲ್ಪಡಬೇಕು / ಗ್ರಹಿಸಲ್ಪಡಬೇಕು.

“ಅಗ್ನಿರ್ವೈ ದೇವಾನಾಂ ವ್ರತಪತಿಃ | ಏತದ್ಧ ವೈ ದೇವಾ ವ್ರತಂ ಚರಂತಿ ಯತ್ಸತ್ಯಮ್ |” (ಶ.ಬ್ರಾ. ೧. ೧. ೧. ೨. ೫) || ಸತ್ಯಾಚಾರನಿಯಮಪಾಲನಂ ವ್ರತಂ ತತ್ಪತಿಃ ಈಶ್ವರಃ | “ತ್ರಿಭಿಃ ಪವಿತ್ರೈರಪುಪೋದ್ಧ್ಯರ್ಕಂ ಹೃದಾ ಮತಿಂ ಜ್ಯೋತಿರನು ಪ್ರಜಾನನ್ | ವರ್ಷಿಷ್ಠಂ ರತ್ನಮಕೃತ ಸ್ವಧಾಭಿರಾದಿದ್ದ್ಯಾವಾ ಪೃಥಿವೀ ಪರ್ಯಪಶ್ಯತ್ |”—(ಋಗ್ವೇದ ೩. ೨೬. ೮) || ಅತ್ರ ಅಗ್ನಿಶಬ್ದಸ್ಯ ಅನುವೃತ್ತೇಃ ಪ್ರಜಾನನ್ ಇತಿ ಜ್ಞಾನವತ್ತ್ವಾತ್ ಪರ್ಯ್ಯಪಶ್ಯತ್- ಇತಿ ಸರ್ವಜ್ಞತ್ವಾದ್ ಈಶ್ವರೋ ಗ್ರಾಹ್ಯಃ ||

ಶತಪಥ ಬ್ರಾಹ್ಮಣವು ಹೀಗನ್ನುತ್ತದೆ— “ಅಗ್ನಿಯೇ ದೇವತೆಗಳ ವ್ರತಪತಿಯು. ಇವನಿಂದಾಗಿಯೇ ದೇವತೆಗಳು ಯಾವ ಸತ್ಯದ ವ್ರತವನ್ನಾಚರಿಸುತ್ತಾರೆ”. ಸತ್ಯಾಚಾರನಿಯಪಾಲನೆಯೇ ವ್ರತವು, ಅಂತಹ ವ್ರತದ ಪತಿಯು / ಒಡೆಯನು ಈಶ್ವರನು. ಮೇಲೆ ಉಲ್ಲೇಖಿಸಿದ “ತ್ರಿಭಿಃ ಪವಿತ್ರೈಃ…” ಎಂಬ ಋಙ್ಮಂತ್ರದಲ್ಲಿ, ಅಗ್ನಿಶಬ್ದಕ್ಕೆ ಚಾರಿತ್ರ್ಯ, ನಡವಳಿಕೆ, ಸತ್ಯ, ಸದಾಚಾರ,  ನಿಯಮಾದಿಗಳನ್ನು ತಿಳಿದು— ಎಂಬುದರಿಂದಲೂ, ಜ್ಞಾನವಿರುವುದರಿಂದ ಆ ಜ್ಞಾನದೃಷ್ಟಿಯಿಂದ ಸುತ್ತಲೂ ನೋಡಿದನು— ಎಂಬುದರಿಂದಲೂ, ಅಗ್ನಿಯ ಸರ್ವಜ್ಞತ್ವವು ಪ್ರತಿಪಾದಿಸಲ್ಪಟ್ಟಿರುವುದರಿಂದಾಗಿ ಆತನು ಈಶ್ವರನೇ / ಅಗ್ನಿಶಬ್ದವು ಈಶ್ವರವಾಚ್ಯವೆಂದೇ ಪರಿಗ್ರಹಿಸಲ್ಪಡಬೇಕು.

ಯಾಸ್ಕಮುನಿಃ ಅತ್ರ ಉಭಯಾರ್ಥಕರಣಾಯ ಅಗ್ನಿಶಬ್ದಪುರಃಸರಮ್ ಏತತ್ ಮಂತ್ರಮ್ ಏವಂ ವ್ಯಾಚಷ್ಟೇ— “ಅಗ್ನಿಃ ಕಸ್ಮಾತ್ ಅಗ್ರಣೀಃ ಭವತಿ ಅಗ್ರಂ ಯಜ್ಞೇಷು ಪ್ರಣೀಯತೇ ಅಂಗಂ ನಯತಿ ಸಂನಮಮಾನಃ ಅಕ್ನಾಪನಃ ಭವತಿ ಇತಿ ಸ್ಥೌಲಷ್ಠೀವಿಃ, ನ ಕ್ನೋಪಯತಿ ನ ಸ್ನೇಹಯತಿ ತ್ರಿಭ್ಯಃ ಆಖ್ಯಾತೇಭ್ಯಃ ಜಾಯತೇ - ಇತಿ ಶಾಕಪೂಣಿಃ, ಇತಾತ್ ಅಕ್ತಾತ್ ದಗ್ಧಾತ್ ವಾ ನೀತಾತ್ ಸಃ ಖಲು ಏತೈಃ ಅಕಾರಮ್ ಆದತ್ತೇ ಗಕಾರಮ್ ಅನಕ್ತೇಃ ವಾ ದಹತೇಃ ವಾ ನೀಃ ಪರಃ ತಸ್ಯ ಏಷಾ ಭವತಿ ಇತಿ — ಅಗ್ನಿಮೀಳೇ ಅಗ್ನಿಂ ಯಾಚಾಮಿ ಈಳೇಃ ಅಧ್ಯೇಷಣಾಕರ್ಮ ಪೂಜಾಕರ್ಮ ವಾ ದೇವೋ ದಾನಾತ್ ವಾ ದೀಪನಾತ್ ವಾ ದ್ಯೋತನಾತ್ ವಾ ದ್ಯುಸ್ಥಾನಃ ಭವತಿ ಇತಿ ವಾ ಯೋ ದೇವಃ ಸಾ ದೇವತಾ | ಹೋತಾರಂ ಹ್ವಾತಾರಂ ಜುಹೋತೇಃ ಹೋತಾಃ ಇತಿ ಔರ್ಣವಾಭಃ ರತ್ನಧಾತಮಂ ರಮಣೀಯಾನಾಂ ಧನಾನಾಂ ದಾತೃತಮಮ್ ||” (ನಿರುಕ್ತ ೭. ೧೪-೧೫)

ಯಾಸ್ಕಮುನಿಯು ಇಲ್ಲಿ ಉಭಯ(ಎರಡು) ಅರ್ಥವನ್ನು ಮಾಡಲು ಅಗ್ನಿಶಬ್ದವನ್ನು ಮುಂದಿಟ್ಟುಕೊಂಡು ಈ “ಅಗ್ನಿಮೀಳೇ” ಎಂಬ ಮಂತ್ರವನ್ನು ಹೀಗೆ ವ್ಯಾಖ್ಯಾನಿಸುತ್ತಾನೆ / ನಿರ್ವಚಿಸುತ್ತಾರೆ— ……..(ಯಾಸ್ಕ ನಿರುಕ್ತಿಯನ್ನು ಈಗಾಗಲೇ ಸಾಯಣಭಾಷ್ಯದಲ್ಲಿ ವಿಸ್ತೃತವಾಗಿ ಚರ್ಚಿಸಿರುವುದರಿಂದ ಇಲ್ಲಿ ದಯಾನಂದಭಾಷ್ಯದಲ್ಲಿ ನಾನು ಪುನಃ ವಿವೇಚಿಸುವುದಿಲ್ಲ.)

ಅಗ್ರಣೀಃ ಸರ್ವೋತ್ತಮಃ ಸರ್ವೇಷು ಯಜ್ಞೇಷು ಪೂರ್ವಮ್ ಈಶ್ವರಸ್ಯ ಏವ ಪ್ರತಿಪಾದನಾತ್ ತಸ್ಯ ಅತ್ರ ಗ್ರಹಣಮ್ | ದಗ್ಧಾತ್ ಇತಿ ವಿಶೇಷಣಾತ್ ಭೌತಿಕಸ್ಯ ಅಪಿ ಚ ||

ಅಗ್ರಣೀ, ಸರ್ವರಲ್ಲೂ ಉತ್ತಮನು, ಎಲ್ಲಾ ಯಜ್ಞಗಳಲ್ಲೂ ಮೊದಲು ಈಶ್ವರ / ಭಗವಂತನದೇ ಪ್ರತಿಪಾದನೆಯಿರುವುದರಿಂದ ಅದನ್ನೇ ಇಲ್ಲಿ ಸ್ವೀಕರಿಸಲಾಗಿದೆ. ದಗ್ಧಾತ್ ಎಂಬ ವಿಶೇಷಣವನ್ನು ಯಾಸ್ಕರೆಂದಿರುವುದರಿಂದ ದಹನಶೀಲವಾದ ಭೌತಿಕ / ಪ್ರತ್ಯಕ್ಷಗೋಚರವಾದ ಅಗ್ನಿಯನ್ನೂ ಸಹ ಹೇಳಲಾಗಿದೆ. ಹೀಗೆ ೨ ರೀತಿಯಲ್ಲಿ ತಿಳಿಯಬೇಕು.

ಪ್ರಶಾಸಿತಾರಂ ಸರ್ವೇಷಾಮ್ ಅಣೀಯಾಂಸಮ್ ಅಣೋಃ ಅಪಿ |
ರುಕ್ಮ-ಆಭಂ ಸ್ವಪ್ನ-ಧೀ-ಗಮ್ಯಂ ವಿದ್ಯಾತ್ ತಂ ಪುರುಷಂ ಪರಮ್ ||
ಏತಮ್ ಏಕೇ ವದಂತಿ ಅಗ್ನಿಂ ಮನುಂ ಅನ್ಯೇ ಪ್ರಜಾಪತಿಮ್ |
ಇಂದ್ರಮ್ ಏಕೇ ಅಪರೇ ಪ್ರಾಣಮ್ ಅಪರೇ ಬ್ರಹ್ಮ ಶಾಶ್ವತಮ್ ||
(ಮನುಸ್ಮೃತಿ ೧೨. ೧೨೨ - ೧೨೩)
ಅತ್ರ ಅಪಿ ಅಗ್ನಿ-ಆದೀನಿ ಪರಮೇಶ್ವರಸ್ಯ ನಾಮಾನಿ ಸಂತಿ ಇತಿ |

ಎಲ್ಲರನ್ನೂ ಆಳುವ, ಎಲ್ಲರಿಗೂ ತನ್ನ ಪ್ರಶಾಸನವನ್ನು, ನೀತಿನಿಯಮ, ಕಾನೂನು,ಶಾಸನ,ಕಟ್ಟಳೆಗಳನ್ನು ವಿಧಿಸುವ (ಸರ್ವೇಷಾಂ ಪ್ರಶಾಸಿತಾರಂ), ಸೂಕ್ಷ್ಮಾತಿಸೂಕ್ಷ್ಮವಾದ ಅಣುವಿಗಿಂತಲೂ ಸೂಕ್ಷ್ಮತಮವಾದ ಅಣುಸ್ವರೂಪನೂ ಆದ (ಅಣೋಃ ಅಪಿ ಅಣೀಯಾಂಸಮ್), ಹೊಂಬಣ್ಣದಿಂದ ಶೋಭಿಸುವ (ರುಕ್ಮ-ಆಭಂ), ಕನಸಿನಲ್ಲಿ ಬುದ್ಧಿಗೋಚರನಾದ / ಕಾಣಿಸುವ, ಅಥವಾ ಆತನು ಬುದ್ಧಿಗೆ ನಿಲುಕುವ ಮಾತು ಕೇವಲ ಕನಸು ಮಾತ್ರ, ನನಸಾಗದು ಎಂಬಂತಹ ಬುದ್ಧ್ಯತೀತನಾದವನೆಂದು (ಸ್ವಪ್ನ-ಧೀ-ಗಮ್ಯಂ), ಆ ಪರಮಪುರುಷನನ್ನು (ತಂ ಪರಂ ಪುರುಷಂ), ತಿಳಿಯಬೇಕು (ವಿದ್ಯಾತ್).

ಇವನನ್ನು (ಏತಮ್), ಕೆಲವರು (ಏಕೇ),ಅಗ್ನಿಯೆಂದೂ (ಅಗ್ನಿಂ), ಮನುವೆಂದೂ(ಮನುಂ), ಅನ್ಯರು (ಅನ್ಯೇ), ಪ್ರಜಾಪತಿಯೆಂದೂ (ಪ್ರಜಾಪತಿಂ), ಮತ್ತೆ ಕೆಲವರು (ಏಕೇ), ಇಂದ್ರನೆಂಬುದಾಗಿ (ಇಂದ್ರಂ), ಇತರರು (ಅಪರೇ), ಪ್ರಾಣರೂಪನೆಂದೂ (ಪ್ರಾಣಂ), ಇನ್ನು ಕೆಲವರು (ಅಪರೇ), ಶಾಶ್ವತಸ್ವರೂಪವಾದ ಪರಬ್ರಹ್ಮವೆಂತಲೂ (ಶಾಶ್ವತಂ ಬ್ರಹ್ಮ), ಹೇಳುತ್ತಾರೆ (ವದಂತಿ). ಇದು ಮನುಸ್ಮೃತಿಯ ಹೇಳಿಕೆ. ಇಲ್ಲಿ ಕೂಡ ಅಗ್ನಿ ಮುಂತಾದುವು ಪರಮೇಶ್ವರನ ನಾಮಗಳೇ ಆಗಿವೆ ಎಂಬುದಾಗಿ ಹೇಳಿದೆ.



“ಈಳೇ ಅಗ್ನಿಂ ವಿಪಶ್ಚಿತಂ ಗಿರಾ ಯಜ್ಞಸ್ಯ ಸಾಧನಮ್ | ಶ್ರುಷ್ಟೀವಾನಂ ಧಿತಾವಾನಮ್ ||”— (ಋಗ್ವೇದ ೩. ೨೭. ೨) ವಿಪಶ್ಚಿತಮ್ ಈಳೇ ಇತಿ ವಿಶೇಷಣಾತ್ ಅಗ್ನಿಶಬ್ದೇನ ಅತ್ರ ಈಶ್ವರಃ ಗೃಹ್ಯತೇ, ಅನಂತವಿದ್ಯಾವತ್ತ್ವಾತ್ ಚೇತನಸ್ವರೂಪವತ್ವಾತ್ ಚ ||

“ ಯಜ್ಞದ ಸಾಧನವಾದ ಸರ್ವಜ್ಞನಾದ ಅಗ್ನಿಯನ್ನು ಸ್ತುತಿಸುತ್ತೇನೆ….” ಎಂದಿರುವ ಋಗ್ವೇದವು ಸರ್ವಜ್ಞನೆಂದು, ಅನಂತವಾದ ವಿದ್ಯೆಯುಳ್ಳವನೆಂದು, ಚೇತನಸ್ವರೂಪಿಯೆಂದು ಪರಮೇಶ್ವರನನ್ನೇ ಅಗ್ನಿನಾಮದಿಂದ ಸಂಬೋಧಿಸಿದೆ.

ಅಥ ಕೇವಲಂ ಭೌತಿಕ-ಅರ್ಥ-ಗ್ರಹಣಾಯ ಪ್ರಮಾಣಾನಿ— “ಯತ್ ಅಶ್ವಂ ತಂ ಪುರಸ್ತಾತ್ ಅದಶ್ರಯನ್ ತಸ್ಯ ಅಭಯೇನ ಆಷ್ಟ್ರೇ ನಿವಾತೇ ಅಗ್ನಿಃ ಅಜಾಯತ, ತಸ್ಮಾತ್ ಯತ್ರ ಅಗ್ನಿಂ ಮಂಥಿಷ್ಯನ್ ಸ್ಯಾತ್ ತತ್ ಅಶ್ವಮ್ ಆನೇತಃ ವೈ ಬ್ರೂಯಾತ್ | ಸಃ ಪೂರ್ವೇಣ ಉಪತಿಷ್ಠತೇ ವಜ್ರಮ್ ಏವ ಏತತ್ ಉತ್-ಶ್ರಯಂತಿ ತಸ್ಯ ಅಭಯೇನಾಷ್ಟ್ರೇ ನಿವಾತೇ ಅಗ್ನಿಃ ಜಾಯತೇ ||”—(ಶತಪಥ ಬ್ರಾಹ್ಮಣ ೨. ೧. ೪. ೧೬)

ಇನ್ನು ಕೇವಲ ಭೌತಿಕ / ಲೌಕಿಕವಾದ ಅರ್ಥವನ್ನು ಗ್ರಹಿಸಲು ಪ್ರಮಾಣಗಳು— “ವೇಗಚಲನೆಯಿಂದ ಹವಿಸ್ಸನ್ನು ಶೀಘ್ರವಾಗಿ ದೇವತೆಗಳಿಗೆ ತಲುಪಿಸುವುದರಿಂದ ಅಶ್ವವೆನಿಸಿದ ಯಾವ ದೈವೀ / ಅಲೌಕಿಕ ಅಗ್ನಿಯಿರುವನೋ (ಅಶ್ನಾತಿ ಸರ್ವಮ್ ಇತಿ ಅಶ್ವಃ— ಸರ್ವಭಕ್ಷಕಃ) ಅವನನ್ನು ಮೊದಲು ಆಶ್ರಯಿಸಿ, ಅವನ ಅಭಯಪ್ರದಾನದಿಂದ ಆಕಾಶದ (ಆಷ್ಟ್ರೇ), ಆಶ್ರಯದಲ್ಲಿ / ಗಾಳಿಯೂ ಆಡದಂತಹ ಅಭೇದ್ಯ ಕವಚದಲ್ಲಿ  (ನಿವಾತೇ),ಲೌಕಿಕ ಅಗ್ನಿಯು ಜನಿಸಿದನು. ಹೀಗಾಗಿ, ಎಲ್ಲಿ ಅಗ್ನಿಯ ಉತ್ಪತ್ತಿಗಾಗಿ ಅರಣಿಮಂಥನವು (ಅಗ್ನಿಮಂಥನಕ್ಕಾಗಿ ಬಳಸುವ ೨ ವಿಶೇಷ ಮರದ ತುಂಡುಗಳ / ಅರಣಿಯ ಘರ್ಷಣೆಯಿಂದ ಅಗ್ನಿಯ ಉತ್ಪತ್ತಿ— ಋಚ್ಛತಿ ಪ್ರಾಪಯತ್ಯಗ್ನಿಮ್ ಇತ್ಯರಣಿಃ) ನಡೆಯುವುದೋ, ಆ ಅಗ್ನಿಯು ಅಶ್ವವೆಂದೂ, ಅಶ್ವದಿಂದ / ದೈವೀ ಅಗ್ನಿಯಿಂದ ಆನೀತವಾದದ್ದು / ತರಲ್ಪಟ್ಟದ್ದು ಎಂದು ಹೇಳಬೇಕು. ಅವನು ಪೂರ್ವದಿಕ್ಕಿನಲ್ಲಿ / ಮೊದಲೇ ಅರಣಿಯ ಕಾಷ್ಠದಲ್ಲಿ ಅಂತರ್ಗತನಾಗಿ ನೆಲೆಸಿರುತ್ತಾನೆ. ವಜ್ರವನ್ನು ಹೇಗೆ ಭೂತಳದ ಗಣಿಯಿಂದ ಮೇಲಕ್ಕೆ ಪರಿಶೋಧಿಸುವರೋ, ಅಂತೆಯೇ ಆ ಅಲೌಕಿಕ, ಅವ್ಯಕ್ತಾಗ್ನಿಯ ಅಭಯದಿಂದ (ಅಭಯ = ಪರಮಾತ್ಮಾ / ಆತ್ಮನಿಷ್ಠನು) ಅರಣಿಕಾಷ್ಠಗಳ ನಡುವಿನ ಗಾಳಿಯಾಡದ ಅವಕಾಶದಲ್ಲಿ ದೃಗ್ಗೋಚರ ಲೌಕಿಕಾಗ್ನಿ / ಬೆಂಕಿಯು ಹುಟ್ಟುವುದು.”— ಎಂದಿದೆ ಶತಪಥ ಬ್ರಾಹ್ಮಣ.


“ವೃಷಃ ಅಗ್ನಿಃ | ಅಶ್ವಃ ವಾ ಏಷಃ ಭೂತ್ವಾ ದೇವೇಭ್ಯಃ ಯಜ್ಞಂ ವಹತಿ ||”— (ಶ.ಬ್ರಾ. ೧. ೩. ೩. ೨೯-೩೦) ವೃಷವತ್ ಯಾನಾನಾಂ ವೋಢೃತ್ವಾತ್ ವೃಷಃ ಅಗ್ನಿಃ | ತಥಾ ಅಯಮ್ ಅಗ್ನಿಃ ಆಶು ಗಮಯಿತೃತ್ವೇನ ಅಶ್ವಃ ಭೂತ್ವಾ ಕಲಾಯಂತ್ರೈಃ ಪ್ರೇರಿತಃ ಸನ್ ದೇವೇಭ್ಯಃ ವಿದ್ವದ್ಭ್ಯಃ ಶಿಲ್ಪವಿದ್ಯಾವಿದ್ಭ್ಯಃ ಮನುಷ್ಯೇಭ್ಯಃ ವಿಮಾನಾದಿ-ಯಾನಸಾಧನ-ಸಂಗತಂ ಯಾನಂ ವಹತಿ ಪ್ರಾಪಯತಿ ಇತಿ |

“ ಅಗ್ನಿಯು ವೃಷಭರೂಪಿಯು / ಎತ್ತಿನಂತೆ. ಇವನು ಅಶ್ವ / ಕುದುರೆಯಾಗಿ / ಕುದುರೆಯಂತೆ ದೇವತೆಗಳಿಗೆ ಯಜ್ಞವನ್ನು / ಯಜ್ಞಾರ್ಪಿತ ಹವಿಸ್ಸನ್ನು ರಥಮುಖೇನವೋ ಎಂಬಂತೆ ಒಯ್ಯುತ್ತಾನೆ” ಎಂದಿದೆ ಶುಕ್ಲಯಜುರ್ವೇದದ ಶತಪಥ ಬ್ರಾಹ್ಮಣ. ಎತ್ತಿನ ಗಾಡಿಗಳನ್ನು ಎತ್ತುಗಳೊಯ್ಯುವಂತೆ ಹವಿಸ್ಸನ್ನು ಅಗ್ನಿಯು ಒಯ್ಯುವುದರಿಂದ ವೃಷಭವೇ ಅಗ್ನಿಯು / ಅಗ್ನಿಯೇ ವೃಷಭವು. ಹಾಗೆಯೇ, ಈ ಅಗ್ನಿಯು (ಆಶು ಗಮಯಿತಾ ಇತಿ ಅಶ್ವಃ— ಬೇಗನೆ ತಲುಪಿಸುವಂಥದ್ದು ಅಶ್ವವು) ಶೀಘ್ರವಾಗಿ ಹವಿಸ್ಸನ್ನೊಯ್ಯುವುದರಿಂದ ಅಶ್ವವೆನಿಸಿ, ವಿವಿಧಾಕೃತಿಯ ಯಂತ್ರಗಳಿಂದ ಪ್ರೇರಿತನಾಗಿ, ದೇವತೆಗಳಿಗೆ, ವಿದ್ವಾಂಸರಿಗೆ / ಜ್ಞಾನಿಗಳಿಗೆ / ಋಷಿಗಳಿಗೆ, ಶಿಲ್ಪವಿದ್ಯಾವಿದರಿಗೆ, ಮನುಷ್ಯರಿಗೆ ವಿಮಾನ ಮತ್ತಿತರ ಪ್ರಯಾಣಸಾಧನವಾಗಿ ಜೊತೆಗೆ ಒಯ್ಯುವ ವಾಹನವನ್ನು ಇಂಧನದ ಶಕ್ತಿಯ ಪ್ರವಾಹರೂಪೀ ಅಗ್ನಿಯಾಗಿ (spark etc) ಒಯ್ಯುತ್ತಾನೆ / ತಲುಪಿಸುತ್ತಾನೆ ಎಂದು.

“ತೂರ್ಣಿಃ ಹವ್ಯವಾಟ್ ಇತಿ ||”—(ಶ.ಬ್ರಾ. ೧. ೩. ೪. ೧೨) ಅಯಮ್ ಅಗ್ನಿಃ ಹವ್ಯಾನಾಂ ಯಾನಾನಾಂ ಪ್ರಾಪಕತ್ವೇನ ಶೀಘ್ರತಯಾ ಗಮಕತ್ವಾತ್ ಹವ್ಯವಾಟ್ ತೂರ್ಣಿಃ ಚ ಇತಿ | “ಅಗ್ನಿಃ ವೈ ಯೋನಿಃ ಯಜ್ಞಸ್ಯ ||”—(ಶ.ಬ್ರಾ. ೧. ೪. ೩. ೧೧) ಇತ್ಯಾದಿ-ಅನೇಕ-ಪ್ರಮಾಣೈಃ ಅಶ್ವನಾಮ್ನಾ ಭೌತಿಕಃ ಅಗ್ನಿಃ ವಾ ಅತ್ರ ಗೃಹ್ಯತೇ, ಆಶು-ಗಮನ-ಹೇತುತ್ವಾತ್ ಅಶ್ವಃ ಅಗ್ನಿಃ ವಿಜ್ಞೇಯಃ |

“ ತೂರ್ಣಿಃ ತ್ವರಮಾಣಃ”— ತ್ವರಿತವಾಗಿ ಗಮಿಸುವವನು ತೂರ್ಣಿಯೆಂಬುದು ಸಾಯಣಭಾಷ್ಯೋಕ್ತಿ. ಹವ್ಯವಾಟ್ ಎಂದರೆ ಹವಿಸ್ಸನ್ನು ಸಾಗಿಸುವವನು, ಹವ್ಯವಾಹನ, ಅಗ್ನಿ. ಈ ಅಗ್ನಿಯು ಹವ್ಯಗಳೆಂಬ ಯಾನಗಳನ್ನು ದೇವತೆಗಳಿಗೆ ತಲುಪಿಸುವುದರಿಂದ, ಶೀಘ್ರವಾಗಿ ಗಮನ (ಗತಿ, ಚಲನೆ, ಹೋಗುವಿಕೆ, ಗಮಿಸುವಿಕೆ) ಮಾಡುವುದರಿಂದ ಹವ್ಯವಾಟ್ ಹಾಗೂ ತೂರ್ಣಿಯೆಂಬುದಾಗಿ ಶತಪಥ ಬ್ರಾಹ್ಮಣದಲ್ಲಿದೆ. “ಅಗ್ನಿಯೇ ಯಜ್ಞದ ಉಗಮಸ್ಥಾನ / ಯೋನಿ / ಮೂಲ” ಎಂದಿದೆ ಶತಪಥ ಬ್ರಾಹ್ಮಣ. ಇಂತಹ ಅನೇಕ ಪ್ರಮಾಣಗಳಿಂದ ಅಶ್ವನೆಂಬ ಭೌತಿಕ / ಲೌಕಿಕ ಅಗ್ನಿಯು ಇಲ್ಲಿ ಸ್ವೀಕಾರ್ಯ. ಆಶು(ತ್ವರಿತ) ಗಮನದ ಕಾರಣದಿಂದ ಅಶ್ವವು ಅಗ್ನಿ (ಉದಾ— ಅಶ್ವಶಕ್ತಿ— Horse Power, 5HP motor ಇತ್ಯಾದಿ)ಯೆಂದು ತಿಳಿಯಬೇಕು.

“ವೃಷಃ ಅಗ್ನಿಃ ಸಮಿಧ್ಯತೇ ಅಶ್ವಃ ನ ದೇವವಾಹನಃ | ತಂ ಹವಿಷ್ಮಂತಃ, ಈಳತೇ” (ಋಗ್ವೇದ ೩. ೨೭. ೨೪) || ಯದಾ ಶಿಲ್ಪಿಭಿಃ ಅಯಮ್ ಅಗ್ನಿಃ ಯಂತ್ರಕಲಾಭಿಃ ಯಾನೇಷು ಪ್ರದೀಪ್ಯತೇ ತದಾ ದೇವವಾಹನಃ ದೇವಾನ್ ಯಾನಸ್ಥಾನ್ ವಿದುಷಃ ಶೀಘ್ರಂ ದೇಶಾಂತರೇ ಅಶ್ವಃ ಇವ ವೃಷಃ ಇವ ಪ್ರಾಪಯತಿ, ತೇ ಹವಿಷ್ಮಂತಃ ಮನುಷ್ಯಾಃ ವೇಗಾದಿ-ಗುಣವಂತಮ್ ಅಶ್ವಮ್ ಅಗ್ನಿಮ್ ಈಡತೇ ಕಾರ್ಯಾರ್ಥಮ್ ಅಧೀಚ್ಛಂತಿ ಇತಿ ವೇದ್ಯಮ್ ||

“ವೃಷಭನೆಂಬ, ಅಶ್ವನೆಂಬ ಅಗ್ನಿಯು ಯಜ್ಞದ ಸಮಿಧೆ / ಸಮಿತ್ತುಗಳಿಂದ (ಗರಿಕೆ, ಅತ್ತಿ ಮುಂತಾದ), ಹೋಮಿಸಲ್ಪಡುತ್ತಾನೆ. ಇಲ್ಲಿ ದೇವತೆಗಳಿಗೆ ಹವ್ಯವಾಹನನಾಗಿ ಮಾತ್ರವಲ್ಲ. ತಮ್ಮ ವಾಹನ-ಯಂತ್ರಾದಿಗಳ ಸುಗಮತೆಗಾಗಿ ಘೃತಾದಿ ಹವಿಃಪದಾರ್ಥಗಳುಳ್ಳ ಮಾನವರು ಅಗ್ನಿಯನ್ನು ಸ್ತುತಿಸುತ್ತಾರೆ” ಎಂದಿದೆ ಋಗ್ವೇದ. ಯಾವಾಗ ತಂತ್ರಜ್ಞ (ಇಂಜಿನಿಯರ್)ರಿಂದ (ಶಿಲ್ಪಿಭಿಃ), ಈ ಭೌತಿಕ ಅಗ್ನಿಯು (ಅಯಮ್ ಅಗ್ನಿಃ), ಯಂತ್ರದ ಕೀಲಿಗಳಿಂದ (ಯಂತ್ರಕಲಾಭಿಃ), ವಾಹನಗಳಲ್ಲಿ (ಯಾನೇಷು), ಪ್ರದೀಪ್ತನಾಗುತ್ತಾನೋ / ಸಕ್ರಿಯನಾಗುವನೋ (ಪ್ರದೀಪ್ಯತೇ), ಆವಾಗ (ತದಾ), ದೇವವಾಹನನಾದ ದೈವೀ ಅಗ್ನಿಯು(ದೇವವಾಹನಃ),  ವಾಹನದಲ್ಲಿರುವ (ಯಾನಸ್ಥಾನ್), ವಿವಿಧ ದೇವತಾಶಕ್ತಿಗಳನ್ನು / ಜ್ಞಾನಿಗಳನ್ನು (ದೇವಾನ್ ವಿದುಷಃ), ಬೇಗನೆ (ಶೀಘ್ರಂ), ಬೇರೆ ಪ್ರದೇಶಕ್ಕೆ (ದೇಶಾಂತರೇ), ಕುದುರೆಯಂತೆ (ಅಶ್ವಃ - ಇವ), ಎತ್ತಿನಂತೆ (ವೃಷಃ -ಇವ), ತಲುಪಿಸುತ್ತಾನೆ (ಪ್ರಾಪಯತಿ). ಅಂತಹ ಹವಿಸ್ಸನ್ನು ಸಂಗ್ರಹಿಸಿದ ಮನುಷ್ಯರು (ತೇ ಹವಿಷ್ಮಂತಃ ಮನುಷ್ಯಾಃ), ವೇಗ ಮುಂತಾದ ಗುಣಗಳುಳ್ಳ ಅಶ್ವನಾಮಕ ಅಗ್ನಿಯನ್ನು ಸ್ತುತಿಸುತ್ತಾರೆ, ತಮ್ಮ ಕಾರ್ಯಸಾಧನೆಗಾಗಿ ಪ್ರಾರ್ಥಿಸುತ್ತಾರೆ / ಯಾಚಿಸುತ್ತಾರೆ ಎಂದು ತಿಳಿಯಬೇಕು.

(ಈಳೇ)— ಸ್ತುತಿಸುತ್ತೇನೆ—  ಸ್ತುವೇ ಯಾಚೇ ಅಧೀಚ್ಛಾಮಿ ಪ್ರೇರಯಾಮಿ ವಾ— ಸ್ತುತಿಸುತ್ತೇನೆ / ಯಾಚಿಸುತ್ತೇನೆ / ಪ್ರಾರ್ಥಿಸುತ್ತೇನೆ / ಬೇಡುತ್ತೇನೆ / ಪ್ರೇರಣೆ ನೀಡುತ್ತೇನೆ;

(ಪುರೋಹಿತಮ್)— ಪುರೋಹಿತನನ್ನು— ಪುರಸ್ತಾತ್ ಸರ್ವಂ ಜಗತ್ ದಧಾತಿ ಛೇದನ-ಧಾರಣಾ-ಕರ್ಷಣಾದಿ-ಗುಣಾನ್ ಚ ಅಪಿ ತಮ್ | “ಪುರೋಹಿತಃ ಪುರಃ, ಏನಂ ದಧತಿ”— ಹೋತ್ರಾಯ ವೃತಃ ಕೃಪಾಯಮಾಣಃ ಅನ್ವಧ್ಯಾಯತ್ (ನಿರುಕ್ತ ೨. ೧೨) ||— ಹಿಂದೆಯೇ / ಪೂರ್ವದಲ್ಲೇ ಸಕಲ ಜಗವನ್ನು ಛೇದಿಸುವ, ಆಧರಿಸುವ, ಆಕರ್ಷಿಸುವ / ಲಯಗೊಳಿಸುವ ಗುಣವುಳ್ಳವನನ್ನು. “ಪುರೋಹಿತನು ಪೂರ್ವದಲ್ಲೇ ಈ ಜಗವನ್ನು ಆಧರಿಸುತ್ತಾನೆ”— ಹೋತೃವಾಗಿ ವರಿಸಲ್ಪಟ್ಟು / ಪರಿಗ್ರಹಿಸಲ್ಪಟ್ಟು, ಕೃಪೆಯುಳ್ಳವನಾಗಿ ಲೋಕವನ್ನು ಆಧರಿಸಿದನು ಎಂದಿದೆ ನಿರುಕ್ತ.

(ಯಜ್ಞಸ್ಯ)  ಇಜ್ಯತೇ ಅಸೌ ಯಜ್ಞಃ, ತಸ್ಯ ಮಹಿಮ್ನಃ ಕರ್ಮಣಃ ವಿದುಷಾಂ ಸತ್ಕಾರಸ್ಯ ಸಂಗತಸ್ಯ ಸತ್ಸಂಗತ್ಯಾ ಉತ್ಪನ್ನಸ್ಯ ವಿದ್ಯಾ-ಆದಿ-ದಾನಸ್ಯ ಶಿಲ್ಪಕ್ರಿಯೋತ್ಪಾದ್ಯಸ್ಯ ವಾ | “ಯಜ್ಞಾಃ ಕಸ್ಮಾತ್ ಪ್ರಖ್ಯಾತಂ ಯಜತಿ ಕರ್ಮ ಇತಿ ನೈರುಕ್ತಾಃ ಯಾಂಚಃ ಭವತಿ ಇತಿ ವಾ ಯಜುಃ ಉನ್ನಃ ಭವತಿ ಇತಿ ವಾ ಬಹುಕೃಷ್ಣಾಜಿನಃ ಇತಿ ಔಪಮನ್ಯವಃ ಯಜೂಂಷಿ ಏನಂ ನಯಂತಿ ಇತಿ ವಾ” (ನಿರುಕ್ತ ೩. ೧೯) ||

ಯಜ್ಞದ— “ಇಜ್ಯತೇ ಹವಿರ್ದೀಯತೇ ಅತ್ರ ಇತಿ ಯಜ್ಞಃ”— ಹವಿಸ್ಸು ಇಲ್ಲಿ / ಇದರಲ್ಲಿ ನೀಡಲ್ಪಡುತ್ತದೆ ಎಂಬುದರಿಂದ ಯಜ್ಞವೆನಿಸಿದೆ. ಈ ಯಜ್ಞವು (ಅಸೌ ಯಜ್ಞಃ), ಹವಿಸ್ಸನ್ನು ದೇವತೆಗಳಿಗೆ ನೀಡುತ್ತದೆ (ಇಜ್ಯತೇ). ಅಂತಹ ಯಜ್ಞದ / ಅದರ (ತಸ್ಯ), ಮಹಿಮೆಯ (ಮಹಿಮ್ನಃ), ಯಜ್ಞಕರ್ಮದ (ಕರ್ಮಣಃ), ಅದನ್ನು ನಡೆಸುವ ವಿದ್ವಾಂಸರ / ಜ್ಞಾನಿಗಳ / ಋತ್ವಿಜರ ಸತ್ಕಾರದಿಂದ ಕೂಡಿದ ಸತ್ಸಂಗದಿಂದ ಉತ್ಪನ್ನವಾದ ವಿದ್ಯೆಯೇ ಮೊದಲಾದ ದಾನದ ಅಥವಾ ಶಿಲ್ಪಕ್ರಿಯೆ / ತಂತ್ರಜ್ಞತೆಯ ಸಂಶೋಧನೆಯ—  ಎಂದರ್ಥ. “ಯಜ್ಞಗಳು ಯಾವುದರಿಂದಾಗಿ ಪ್ರಖ್ಯಾತವಾದವು? ಯಜನ / ದೇವತಾಹವಿರ್ದಾನ ಕರ್ಮದಿಂದ ಎಂದು ನಿರುಕ್ತಿಕಾರರೂ, ದೇವನನ್ನು ಬೇಡುವಿಕೆ / ಯಾಚಿಸುವಿಕೆ / ಪ್ರಾರ್ಥಿಸುವಿಕೆ ಎಂಬುದರಿಂದ ಯಜನದ ಔನ್ನತ್ಯವಿದೆ ಎಂದು ಅಥವಾ ಬಹುಕೃಷ್ಣಾಜಿನಗಳ ಬಳಕೆಯಿಂದ ಎಂದು ಉಪಮನ್ಯುವಂಶೋದ್ಭವರಾದ ಔಪಮನ್ಯುಗಳೂ, ಅಥವಾ ಯಜುರ್ಮಂತ್ರಗಳು ಈ ಯಜ್ಞವನ್ನು ಮುಂದೆ ಕೊಂಡೊಯ್ಯುತ್ತವೆ / ನಡೆಸುತ್ತವೆ ಎಂಬುದರಿಂದಲೋ ಎಂದು ಅಭಿಪ್ರಾಯ ಪಡುತ್ತಾರೆ.


Comments

Popular posts from this blog

ಲಘುನ್ಯಾಸದ ಬೆಳಕಿನಲ್ಲಿ ಶಿವದರ್ಶನ ೧೩—ಲಘುನ್ಯಾಸಮನ್ತ್ರಾರ್ಥವಿಚಾರ ೮

ಲಘುನ್ಯಾಸದ ಬೆಳಕಿನಲ್ಲಿ ಶಿವದರ್ಶನ ೯—ಲಘುನ್ಯಾಸಮಂತ್ರಾರ್ಥವಿಚಾರ ೪

ತೈತ್ತಿರೀಯಕೃಷ್ಣಯಜುಸ್ಸಂಹಿತಾಭಾಷ್ಯಾರ್ಥಸಮುಚ್ಚಯಃ ೧.೧.೪