ತೈತ್ತಿರೀಯಕೃಷ್ಣಯಜುಸ್ಸಂಹಿತಾಭಾಷ್ಯಾರ್ಥಸಮುಚ್ಚಯಃ ೧.೧.೩


ತೈ.ಕೃ.ಯಜುರ್ವೇದಭಾಷ್ಯ -೩
(ಅಷ್ಟಕ1.ಪ್ರಪಾಠಕ1.ಅನುವಾಕ3.)

ಸಾಯಣಭಾಷ್ಯ

ಮೊದಲೆರಡು ಅನುವಾಕಗಳಲ್ಲಿ ಅಮಾವಾಸ್ಯೆಯ ದಿನ ಹಗಲು ಏನು ಮಾಡಬೇಕೆಂದು ಹೇಳಿದೆ. ಮೂರನೆಯ ಅನುವಾಕದಲ್ಲಿ ಆ ದಿನ ರಾತ್ರಿ ಮಾಡಬೇಕಾದ ದೋಹವು (ಹಾಲು ಕರೆಯುವಿಕೆಯು) ಹೇಳಲ್ಪಡುತ್ತದೆ.
ದೋಹನಾರ್ಥಾಃ ಮಂತ್ರಾಃ
1ಶುಂಧಧ್ವಂ ದೈವ್ಯಾಯ ಕರ್ಮಣೇ ದೇವಯಜ್ಯಾಯೈ 2ಮಾತರಿಶ್ವನೋ ಘರ್ಮೋऽಸಿ ದ್ಯೌರಸಿ ಪೃಥಿವ್ಯಸಿ ವಿಶ್ವಧಾಯಾ ಅಸಿ ಪರಮೇಣ ಧಾಮ್ನಾ ದೃಗ್ಂಹಸ್ವ ಮಾ ಹ್ವಾ3ರ್ವಸೂನಾಂ ಪವಿತ್ರಮಸಿ ಶತಧಾರಂ ವಸೂನಾಂ ಪವಿತ್ರಮಸಿ ಸಹಸ್ರಧಾರಗ್ಂ 4ಹುತಃ ಸ್ತೋಕೋ ಹುತೋ ದ್ರಪ್ಸೋऽಗ್ನಯೇ ಬೃಹತೇ ನಾಕಾಯ ಸ್ವಾಹಾ ದ್ಯಾವಾ ಪೃಥಿವೀಭ್ಯಾಗ್ಂ 5ಸಾ ವಿಶ್ವಾಯುಃ ಸಾ ವಿಶ್ವವ್ಯಚಾಃ ಸಾ ವಿಶ್ವಕರ್ಮಾ 6ಸಂಪೃಚ್ಯಧ್ವಮೃತಾವರೀರೂರ್ಮಿಣೀರ್ಮಧುಮತ್ತಮಾ ಮಂದ್ರಾ ಧನಸ್ಯ ಸಾತಯೇ 7ಸೋಮೇನ ತ್ವಾऽऽತನಚ್ಮೀಂದ್ರಾಯ ದಧಿ 8ವಿಷ್ಣೋ ಹವ್ಯಗ್ಂ ರಕ್ಷಸ್ವ ||

ಅನ್ವಯಾರ್ಥಃ —

(ದೇವಯಜ್ಯಾಯೈ ದೈವ್ಯಾಯ ಕರ್ಮಣೇ) ದೇವತಾಯಜ್ಞವೆಂಬ ದೈವೀಕ್ರಿಯಾವಿಶೇಷಕ್ಕಾಗಿ / ಯಜ್ಞದಂತೆ ಪವಿತ್ರವಾದ ಕರ್ಮಗಳನ್ನು ಮಾಡುವುದಕ್ಕೋಸ್ಕರ, (ಶುಂಧಧ್ವಮ್) ಹೇ ದೋಹನ (ಹಾಲುಕರೆಯುವುದೇ ಮುಂತಾದ ಯಜ್ಞಸಂಬಂಧಿ) ಪಾತ್ರೆಗಳೇ! / ಹೇ ಸ್ಥೂಲ-ಸೂಕ್ಷ್ಮ-ಕಾರಣಶರೀರಗಳೇ! ನೀವು ಶುದ್ಧಿಹೊಂದಿರಿ / ಸ್ವಚ್ಛವಾಗಿರಿ / ಪವಿತ್ರಿತವಾಗಿರಿ. (ಮಾತರಿಶ್ವನಃ ಘರ್ಮಃ ಅಸಿ) ಹೇ ದೋಹನಕುಂಭವೇ (ಹಾಲುಕರೆಯುವ ಪಾತ್ರೆಯೇ)! ನೀನು (ಮಾತರಿಶ್ವನಃ) ವಾಯುದೇವನ (ಮಾತರಿ ಅಂತರಿಕ್ಷೇ ಶ್ವಯತಿ ವರ್ಧತೇ ಗಚ್ಛತಿ ವಾ ಇತಿ ಮಾತರಿಶ್ವಾ— ಅಂತರಿಕ್ಷದಲ್ಲಿ ವರ್ಧಿಸುತ್ತಾನೆ / ಚಲಿಸುತ್ತಾನೆಂಬುದರಿಂದಾಗಿ ವಾಯುವು ಮಾತರಿಶ್ವಾ ಎನ್ನಲ್ಪಡುವನು) (ಘರ್ಮಃ) ಸಂಚಾರಸ್ಥಾನ / ಕ್ರೀಡಾಸ್ಥಳ / ವಿಹಾರಧಾಮ (= ಅಂತರಿಕ್ಷ / ಘಟಾಕಾಶ) (ಅಸಿ) ಆಗಿದ್ದಿ. / ಹೇ ಪಾಂಚಭೌತಿಕವೂ, ಸಕಲದೇವತಾಸಾನ್ನಿಧ್ಯವೂ, ಪರಮಾತ್ಮನಿವಾಸವೂ ಆಗಿರುವ ಶರೀರವೇ! ನೀನು ಪ್ರಾಣವಾಯುವಿನ ಬೆವರಹನಿಗಳಿಂದ ಕೂಡಿರುವೆ / ಅವನ ಸಂಚಾರಸ್ಥಾನವಾಗಿರುವೆ / ಅವನ ಪ್ರಕಾಶದಿಂದ ಕೂಡಿರುವೆ, ಅವನಿಂದಾಗಿ ಜೀವಕಳೆಯಿಂದಿರುವೆ. (ದ್ಯೌಃ ಅಸಿ) ದ್ಯುತಿಯಿಂದ ಪ್ರಕಾಶಮಾನವಾದ ದೇವಲೋಕವೂ ಆಗಿರುವೆ. ಏಕೆಂದರೆ, ದೇವತೆಗಳು ಪೋಷಿಸಿದಂತೆ ನೀನೂ ನಮ್ಮ ಪೋಷಕವಾದ ಅಮೃತತುಲ್ಯವಾದ ಗೋಕ್ಷೀರವನ್ನು ಹಿಡಿದಿಡುವುದರಿಂದ ತತ್ಸಮಾನನಾಗಿರುವಿ. / ಪಿಂಡಾಂಡವಾಗಿರುವ ಶರೀರವೇ! ನೀನು ಬ್ರಹ್ಮಾಂಡದಂತೆಯೇ ಅಂತರಿಕ್ಷಾವಕಾಶವನ್ನು ಹೊಂದಿರುವೆ. (ಪೃಥಿವೀ ಅಸಿ) ನೀನು ಪೃಥ್ವೀತತ್ತ್ವಕ್ಕೆ ಸಂಬಂಧಿಸಿದ ಮಣ್ಣು, ಮರ, ಲೋಹಾದಿಗಳಿಂದ ನಿರ್ಮಿತವಾಗಿರುವುದರಿಂದ ಭೂತುಲ್ಯನೂ ಆಗಿರುವಿ. / ಭೂಜೀವಿಗಳಿಗೆ ಭೂಮಿಯೇ ಆಧಾರವಾದಂತೆ, ಪಿಂಡಾಂಡ ಶರೀರವಾದ ನೀನು ಪೃಥಿವೀತತ್ತ್ವಜಾತ ಚರ್ಮ-ಮಾಂಸಾದಿಗಳಿಂದ ಕೂಡಿದ್ದು ಸೂಕ್ಷ್ಮಶರೀರ-ಜೀವಾತ್ಮಗಳಿಗೆ ಆಧಾರವಾಗಿರುವಿ. (ಪರಮೇಣ ಧಾಮ್ನಾ ವಿಶ್ವಧಾಯಾ ಅಸಿ) ಪರಮಧಾಮವಾದ ಊರ್ಧ್ವಲೋಕದಿಂದ ಸುರಿಯುವ ಮಳೆಯು ಧಾನ್ಯಾದಿಗಳಿಂದ ನಮಗೆ ಪುಷ್ಟಿ ನೀಡುವಂತೆ, ದೋಹನಪಾತ್ರೆಯು ದುಗ್ಧವನ್ನು ಸಂಗ್ರಹಿಸಿ, ಹಾಲಿನ ಮೂಲಕ ನಮಗೆ ಪುಷ್ಟಿ ಕೊಡುವುದರಿಂದ ನೀನು ಮಳೆಯಂತೆ ಇಳೆಯನ್ನು ಆಧರಿಸುವವನಾಗಿದ್ದಿ. ಅಥವಾ ವೃಷ್ಟಿಕಾರಕ ಮಹಾಕಾಶದಂತೆಯೇ ಘಟಾಕಾಶವೂ ಹಾಲಿನ ಸಂಗ್ರಹದಿಂದ ನಮಗೆ ಪುಷ್ಟಿಕಾರಕ. / ನೀನು ಭಗವಂತನ ಪರಮಧಾಮದಿಂದ ಬಂದಿರುವುದರಿಂದ ಭಗವಂತನ ಧಾರಣಾಶಕ್ತಿಯ ಒಂದಂಶ ನಿನ್ನಲ್ಲೂ ಇದೆ. (ದೃಂಹಸ್ವ, ಮಾ ಹ್ವಾಃ) ಆದ್ದರಿಂದ ನೀನು ದೃಢವಾಗಿರು, ಒಡೆದು ಹೋಗದಿರು. / ಹೇ ಶರೀರವೇ!  ನೀನು ಚೆನ್ನಾಗಿ ಸುದೃಢವಾಗಿ ಬೆಳೆ, ಗಟ್ಟಿಮುಟ್ಟಾಗಿರು. ನೀನು ಬೇಗನೇ ಶಿಥಿಲವಾಗದಿರು. ತನ್ಮೂಲಕ ಜೀವಾತ್ಮನನ್ನು ನೂರಾರು ವರ್ಷಗಳ ಕಾಲ ನಿನ್ನಲ್ಲೇ ಧರಿಸಿ ನನಗೆ ದೀರ್ಘಾಯುವನ್ನುಂಟುಮಾಡು. (ಶತಧಾರಂ ವಸೂನಾಂ ಪವಿತ್ರಮ್ ಅಸಿ) ಎಲೈ ದರ್ಭೆಯಿಂದ ಮಾಡಿದ ಶಾಖಾಪವಿತ್ರವೆ! ನೀನು ಗೋವಿನ ಕೆಚ್ಚಲಿನಿಂದ ನೂರಾರು ಧಾರೆಗಳಾಗಿ, ವಿವಿಧೋಪಯೋಗಿಯಾಗಿ ಹರಿದು ಬರುವ, ಜೀವಿಗಳಿಗೆ ವಾಸಹೇತುವೂ ಪ್ರಾಣಪೋಷಕವೂ ಆದ ಹಾಲಿನಂತಹ ಸಂಪತ್ತಿನ ಪರಿಶುದ್ಧಿಕಾರಕವಾಗಿರುವಿ / ಪವಿತ್ರಕಾರಕನಾಗಿದ್ದಿ. / ಹೇ ಶರೀರವೆ! ಚತುರ್ವಿಧ ಪುರುಷಾರ್ಥಸಾಧನೆಗೆ ಅಗತ್ಯವಾದ, ಏನನ್ನೇ ಆದರೂ ಸಾಧಿಸಬೇಕಾದರೆ ಅವಶ್ಯವಾದ, ಪುಣ್ಯಕರ್ಮಗಳನ್ನೂ ನಿಷ್ಕಾಮಕರ್ಮವನ್ನೂ ತಪಸ್ಸನ್ನೂ ಕೊನೆಗೆ ಬ್ರಹ್ಮಾತ್ಮಜ್ಞಾನ ಹಾಗೂ ಜೀವನ್ಮುಕ್ತಿಯನ್ನೂ ಸಾಧಿಸಲು ಅತ್ಯಗತ್ಯವಾದ, ಸಕಲಸಂಪತ್ತುಗಳಲ್ಲೂ ಶ್ರೇಷ್ಠವಾದ ಈ ದೇವದತ್ತವಾದ ಶರೀರವು ಅತ್ಯಂತ ಪವಿತ್ರವಾದುದು.  (ಸಹಸ್ರಧಾರಂ ವಸೂನಾಂ ಪವಿತ್ರಮ್ ಅಸಿ) ಅಂತೆಯೇ ನೀನು ಸಾವಿರಾರು ಧಾರೆಗಳಾಗಿ ಸುರಿಯುವ ಪ್ರಾಣರಕ್ಷಕರೂಪೀ ದನದ ಹಾಲಿನ ಶುದ್ಧಿಕಾರಕವಾಗಿರುವಿ. / ಅಲ್ಲದೆ, ಪ್ರತ್ಯಗಾತ್ಮ ಅಥವಾ ಜೀವಾತ್ಮ ನಾಮಕ ಪರಮಾತ್ಮನನ್ನೇ ತನ್ನೊಳಗೆ ಧರಿಸಿರುವುದರಿಂದಲೂ, ಸಾವಿರಾರು ವಿವಿಧ ಕಾರಣಗಳಿಂದಲೂ, ಸಾವಿರಾರು ವಿವಿಧ ಸಂಪತ್ತುಗಳಿಗಿಂತಲೂ ದೇಹಸಂಪತ್ತು ಪಾವನತಮವಾದುದು. (ಹಾಲು ಕರೆಯುವಾಗ ಹೊರಚೆಲ್ಲಿದ) (ಸ್ತೋಕಃ) ಹಾಲಿನ ಸಣ್ಣ ಹನಿ ಮತ್ತು / ದೈವೀ ಆನಂದವಾದ ಸೋಮದ ಅಥವಾ ಲೌಕಿಕಾನಂದದ ಕಿರುಹನಿ ಮತ್ತು (ದ್ರಪ್ಸಃ) ದಪ್ಪ ಹನಿಗಳು / ಧಾರಾಪ್ರವಾಹವು / ಬ್ರಹ್ಮಾನಂದವು (ಹಾಳಾಗಿ ಹೋಯಿತೆಂಬ ಲೋಭ-ಮೋಹಗಳಿಲ್ಲದೆ), (ಬೃಹತೇ) ಪ್ರವೃದ್ಧವಾಗಿರುವ, ಬೃಹದಾಕಾರವುಳ್ಳ, ಜಾಜ್ವಾಲ್ಯಮಾನನಾಗಿ ಧಗಧಗಿಸುತ್ತಾ ನಾಕಸ್ಪರ್ಶಿಯಾದಂತೆ ಬೆಳಗುವ, / ಬೃಹದ್ರೂಪವಾದ ಬ್ರಹ್ಮಾಂಡವಾಗಿ ತೋರುವ ಪರಬ್ರಹ್ಮನಿಗೆ (ನಾಕಾಯ ಅಗ್ನಯೇ ಸ್ವಾಹಾ ಹುತಃ) ಸ್ವರ್ಗನಿವಾಸಿಯಾದ ನಾಕನೆಂಬ ಹೆಸರಿನ ಪ್ರೌಢಾಗ್ನಿಗೆ ಸ್ವಾಹಾಕಾರಪೂರ್ವಕ ದೇವತೆಗಳಿಗಾಗಿ ತ್ಯಾಗವೆಂಬ ದೃಷ್ಟಿಯಿಂದ ಸಮರ್ಪಿತವಾಗಿವೆ / ಆಗಲಿ. ಸಾರ್ಥಕವಾಗಲಿ. ಹೀಗೆ ಸ್ವಯಂ ವಾಗ್ದೇವಿ ಸರಸ್ವತಿಯೇ / ಚೆಲ್ಲಿದ ಹನಿಯೇ ಹೇಳಿದಳು (ಸ್ವ-ಆಹ). ಅಥವಾ ಸುಖಸೂಚಕ ಸ್ವರ್ಗಲೋಕಕ್ಕೂ, ಪರಮಸುಖವೆನಿಸಿದ ಮುಕ್ತಿಗಾಗಿಯೂ ಸಮರ್ಪಿತವಾಗಿವೆ. ಪರಮಾತ್ಮನ ವ್ಯಕ್ತಮಾಧ್ಯಮವಾದ ಯಜ್ಞಾಗ್ನಿಗೂ ಸಮರ್ಪಿತವಾಗಿವೆ. ಅಗ್ನಿದೇವನಿಗಿದೋ ಗೌರವಾದರಪೂರ್ವಕ ಸ್ವಾಗತ / ಆಹ್ವಾನ (ಸುಷ್ಠು ಆಹೂಯಂತೇ ದೇವಾ ಅನೇನ ಇತಿ ಸ್ವಾಹಾ).  (ದ್ಯಾವಾ-ಪೃಥಿವೀಭ್ಯಾಂ ಹುತಃ) ಹಾಗೆಯೇ, ದೋಹನಾದಿಕರ್ಮಗಳ ಆಧಾರವಾಗಿರುವ ಅಂತರಿಕ್ಷ-ಭೂಮಿಗಳೆರಡಕ್ಕೂ ಸಮರ್ಪಿತವಾಗಿವೆ / ಆಗಲಿ. / ಹಾಗೆಯೇ ದೇವಲೋಕಕ್ಕೂ ಭೂಲೋಕಕ್ಕೂ ಬರಲು ಭಗವಂತನಿಗೆ ಸುಸ್ವಾಗತ.  (ಸಾ ವಿಶ್ವಾಯುಃ) ಅಂತಹ ಅಮೃತಾಯಮಾನ ಕ್ಷೀರವನ್ನೀಯುವಂತಹ ಪ್ರಥಮಕರುವಿನ / ಪ್ರಥಮವಾಗಿ ಹಾಲ್ಗರೆಯಲ್ಪಡುವ ಗೋವು ವಿಶ್ವದೆಲ್ಲೆಡೆ / ಪೃಥಿವಿಯ ಎಲ್ಲೆಡೆ ಚಲಿಸುವಂಥದ್ದೂ, ವಿಶ್ವದ ಆಯುಸ್ಸನ್ನು ನಿರ್ಧರಿಸುವಂಥದ್ದೂ, ವಿಶ್ವದ ಆಯುಸ್ಸಿರುವವರೆಗೂ ಜೀವಿಸುವಂಥದ್ದೂ ಆಗಿರುವುದು. ಅಂತಹ ಗೋಸಂತತಿಯೂ ಅನಂತ ಆಯುಷ್ಯವನ್ನು ಹೊಂದಲಿ; ಚಿರಂಜೀವಿಯಾಗಲಿ. ಅಥವಾ ದೇವಲೋಕ ಭೂಲೋಕಗಳು ಚೈತನ್ಯ, ಪ್ರೇರಣೆ, ಮಳೆ, ಬೆಳೆ, ಔಷಧಿಗಳನ್ನೀಯುವ ಮೂಲಕ ವಿಶ್ವಕ್ಕೇ ದೀರ್ಘಾಯುವನ್ನೀಯುವಂಥವು. (ಸಾ ವಿಶ್ವವ್ಯಚಾಃ) ಆಕೆಯು / ಎರಡನೆಯ ಗೋವು / ಎರಡನೆಯ ಕರುವಿನ ಗೋವು ವಿಶ್ವದೆಲ್ಲೆಡೆ ಈಗಾಗಲೇ ಸಂಚರಿಸಿ, ಸರ್ವತ್ರ ಅಂತರಿಕ್ಷದಂತೆ ವ್ಯಾಪಿಸಿರುವವಳೂ ಹೌದು. ಅಥವಾ ದ್ಯಾವಾಪೃಥಿವಿಯ ಕೀರ್ತಿ-ಪ್ರಭಾವಗಳು ಸರ್ವತ್ರ ಹಬ್ಬಿವೆ. (ಸಾ ವಿಶ್ವಕರ್ಮಾ) ಅಂತಹ ಗೋಮಾತೆಯು ಸ್ವರ್ಗದ ದೇವತೆಗಳಂತೆ ವಿಶ್ವವನ್ನೇ ಮುನ್ನಡೆಸುವವಳು. ಇವಳ ಕರ್ಮಗಳಿಂದಲೇ ದವಸಧಾನ್ಯಾದಿ ಸಮಸ್ತವೂ ಬೆಳೆಯುವುವು. ಅವಳೇ ಎಲ್ಲವನ್ನೂ ಮಾಡುವವಳು. ಆದ್ದರಿಂದ ಈ ಮೂರನೆಯ ಗೋವು ಸ್ವರ್ಗತುಲ್ಯವು. ಅಥವಾ ದೇವಲೋಕವು ಜಗದ ಆಗುಹೋಗುಗಳನ್ನು ನಿಯಂತ್ರಿಸುವುದರಿಂದಾಗಿ, ಭೂಲೋಕವು ಭಗವದವತಾರಾದಿ ಸಾಧುಸಜ್ಜನರಿಂದ ಸಕಲರ ಉದ್ಧಾರಕಾರಣವಾಗಿರುವುದರಿಂದಾಗಿ ವಿಶ್ವಕರ್ಮಾ ಎನಿಸಿವೆ. (ಋತಾವರೀಃ) ಸತ್ಯವಾಗಿ ನಿಶ್ಚಯವಾಗಿಯೂ ತೊಳೆಯುವ ಬೆರೆಯುವ ಹರಿಯುವ ಸಾಮರ್ಥ್ಯವುಳ್ಳವುಗಳಲ್ಲಿ ಶ್ರೇಷ್ಠವಾದ ಹಾಗೂ ಪರಮ ಋತದ ಅತೀ ಅವರ / ಕೆಳಗಿನ, ಇಂದ್ರಿಯಗೋಚರವಾದ ಮಟ್ಟದಲ್ಲಿರುವ ಋತ-ಸತ್ಯ-ಸೃಷ್ಟಿಕರ್ಮರೂಪೀ ಯಜ್ಞಯುಕ್ತವೂ ಋತಸಂಪದಯುತವೂ ಆದ ಎಲೈ ನೀರ ಹನಿಗಳೇ! ನೀವು, ಅಥವಾ ಹೇ ಶರೀರ-ಜೀವಿ-ಮಾನವರೇ! ನೀವು ದೈವೀ / ಬ್ರಹ್ಮ ಆನಂದವೆಂಬ ಪರಮಸತ್ಯದೊಡನೆ ಐಕ್ಯವನ್ನು, ತಾದಾತ್ಮ್ಯವನ್ನು ಹೊಂದಿರಿ (ಸಂಪೃಚ್ಯಧ್ವಮ್).  (ಊರ್ಮಿಣೀಃ) ತರಂಗ / ಅಲೆ / ತೆರೆಗಳಿಂದ ಕೂಡಿಕೊಂಡು, (ಮಧುಮತ್ತಮಾ) ಜೇನಿನಂತೆ ಅತ್ಯಂತ ಸಿಹಿಯಾಗಿದ್ದು, (ಮಂದ್ರಾ) ಮನಸ್ಸು ದ್ರವಿಸುವಷ್ಟು / ತೃಪ್ತಿಯಾಗುವಷ್ಟು, ಹರ್ಷಕಾರಕವಾದ, (ಧನಸ್ಯ ಸಾತಯೇ) ಸಂಪತ್ತಿನ ಪ್ರಾಪ್ತಿಗಾಗಿ ದೇವಯಜ್ಞವನ್ನು ನಡೆಸಿ ಅವರ ಅನುಗ್ರಹವನ್ನು ಪಡೆಯಬೇಕು. ಯಜ್ಞಕ್ಕೆ  ಅವಶ್ಯವಾದ ತುಪ್ಪಕ್ಕಾಗಿ ಗೋಕ್ಷೀರವು ಹೆಚ್ಚಿನ ಪ್ರಮಾಣದಲ್ಲಿ ಬೇಕು. ಅದಕ್ಕಾಗಿ ಎಲೈ ನೀರಹನಿಗಳೇ! ನೀವು ಗೋವುಗಳು ತಿಂದ ವಿವಿಧ ವನಸ್ಪತಿಗಳ ರಸದೊಡನೆ, (ಸಂಪೃಚ್ಯಧ್ವಮ್) ಬೆರೆಯಿರಿ. (ಮುಕ್ತಿಯ ಆನಂದವು ಮಧುರತಮವಾದ ಅಲೆಗಳ ರೂಪದಲ್ಲಿರುವುದು. ಅಂತಹ ಶ್ರೇಷ್ಠವಾದ ಸಂಪತ್ತನ್ನು ಹೊಂದಲು ಜ್ಞಾನಭಕ್ತಿವೈರಾಗ್ಯಕರ್ಮಯೋಗಾದಿಗಳ ಮೂಲಕ ಅದರೊಂದಿಗೆ ತನ್ಮಯತೆಯನ್ನು ಹೊಂದಿ.) ತನ್ಮೂಲಕ ಅಧಿಕಾಧಿಕ ಹಾಲುಂಟುಮಾಡಿರಿ. ಎಲೈ ಆಕಳ ಹಾಲೇ!   (ಸೋಮೇನ) ಸೋಮರಸದಿಂದ, (ತ್ವಾ ಆತನಚ್ಮಿ) ನಿನ್ನನ್ನು ಹೆಪ್ಪುಗಟ್ಟಿಸುತ್ತೇನೆ. (ದಧಿ ಇಂದ್ರಾಯ) ಹಾಗೆ ಉಂಟಾದ ಅಮಾವಾಸ್ಯೆಯ ದಿನದ ಮೊಸರು (ಇದನ್ನು ಕಡೆಯಬಾರದೆಂದು ಸಂಪ್ರದಾಯವಿದೆ) ಇಂದ್ರನಿಗೆ ಅತಿಪ್ರಿಯವಾದ ಹವಿಸ್ಸಾಗಿ ಹೋಮಿಸಲ್ಪಡುತ್ತದೆ. (ವಿಷ್ಣೋ!) ಅಯ್ಯಾ ವಿಷ್ಣುವೇ! ಸರ್ವರಕ್ಷಕನೇ!! (ಹವ್ಯಂ ರಕ್ಷಸ್ವ) ಈ ಯಜ್ಞಹವಿಸ್ಸನ್ನು ರಕ್ಷಿಸು. ಯಜ್ಞತುಲ್ಯ ಶ್ರೇಷ್ಠ ಕರ್ಮಗಳನ್ನೂ ರಕ್ಷಿಸು.



1ಶುಂಧಧ್ವಂ ದೈವ್ಯಾಯ ಕರ್ಮಣೇ ದೇವಯಜ್ಯಾಯೈ -
ದೇವಯಜ್ಯಾಯೈ ( ದೇವತಾಯಜ್ಞವೆಂಬ ), ದೈವ್ಯಾಯ ಕರ್ಮಣೇ ( ದೈವೀಕ್ರಿಯಾವಿಶೇಷಕ್ಕೆ ), ಶುಂಧಧ್ವಮ್ ( ಹೇ ದೋಹನ / ಹಾಲು ಕರೆಯುವುದೇ ಮುಂತಾದ ಯಜ್ಞಸಂಬಂಧಿ ಪಾತ್ರೆಗಳೇ ! ನೀವು ಶುದ್ಧಿಹೊಂದಿರಿ / ಸ್ವಚ್ಛವಾಗಿರಿ / ಪವಿತ್ರಿತವಾಗಿರಿ. )
2ಮಾತರಿಶ್ವನೋ ಘರ್ಮೋऽಸಿ ದ್ಯೌರಸಿ ಪೃಥಿವ್ಯಸಿ ವಿಶ್ವಧಾಯಾ ಅಸಿ ಪರಮೇಣ ಧಾಮ್ನಾ ದೃಗ್ಂಹಸ್ವ ಮಾ ಹ್ವಾಃ -
ಮಾತರಿಶ್ವನಃ { ಹೇ ದೋಹನಕುಂಭವೇ (ಹಾಲು ಕರೆವ ಪಾತ್ರೆಯೇ)! ನೀನು ವಾಯುದೇವನ ( ಮಾತರಿ ಅಂತರಿಕ್ಷೇ ಶ್ವಯತಿ ವರ್ದ್ಧತೇ ಇತಿ ಮಾತರಿಶ್ವಾ | ಅಂತರಿಕ್ಷದಲ್ಲಿ ವರ್ಧಿಸುತ್ತಾನೆಂಬುದರಿಂದಾಗಿ ವಾಯುವು ಮಾತರಿಶ್ವಾ ಎಂದು ಕರೆಯಲ್ಪಡುತ್ತಾನೆ. ) },
ಘರ್ಮಃ ( ಸಂಚಾರಸ್ಥಾನ/ ಕ್ರೀಡಾಸ್ಥಳ= ಅಂತರಿಕ್ಷ/ಘಟಾಕಾಶ ), ಅಸಿ (ಆಗಿದ್ದಿ. )
ದ್ಯೌಃ ( ದ್ಯುತಿಯಿಂದ ಪ್ರಕಾಶಮಾನವಾದ ದೇವಲೋಕವೂ ), ಅಸಿ ( ಆಗಿರುವೆ; ಏಕೆಂದರೆ ದೇವತೆಗಳು ಪೋಷಿಸಿದಂತೆ ನೀನೂ ನಮ್ಮ ಪೋಷಕವಾದ ಅಮೃತತುಲ್ಯವಾದ ಗೋಕ್ಷೀರವನ್ನು ಹಿಡಿದಿಡುವುದರಿಂದ ತತ್ಸಮಾನವಾಗಿರುವೆ.),
ಪೃಥಿವೀ ( ನೀನು ಮೃಣ್ಮಯವಾಗಿರುವುದರಿಂದ / ಮಣ್ಣಿನಿಂದ ಮಾಡಲ್ಪಟ್ಟಿರುವುದರಿಂದ / ಪೃಥ್ವಿತತ್ತ್ವಕ್ಕೆ ಸಂಬಂಧಿಸಿದ ಲೋಹ/ ಮರದಿಂದ ನಿರ್ಮಿತವಾದುದರಿಂದ, ಭೂಲೋಕವೂ ) ಅಸಿ (ಆಗಿದ್ದಿ.),
ಪರಮೇಣ ಧಾಮ್ನಾ  ವಿಶ್ವಧಾಯಾ ಅಸಿ ( ಪರಮಧಾಮವಾದ ಊರ್ಧ್ವಲೋಕದಿಂದ ಸುರಿಯುವ ವೃಷ್ಟಿಯು ಧಾನ್ಯಾದಿಗಳಿಂದ ನಮಗೆ ಪುಷ್ಟಿ ನೀಡುವಂತೆ ದೋಹನಪಾತ್ರೆಯು ದುಗ್ಧವನ್ನು ಸಂಗ್ರಹಿಸಿ, ಹಾಲಿನ ಮೂಲಕ ನಮಗೆ ಪುಷ್ಟಿ ಕೊಡುವುದರಿಂದ ನೀನು ಮಳೆಯ ಸ್ವರೂಪವೂ ಆಗಿದ್ದಿ.)
ದೃಂಹಸ್ವ ( ಆದ್ದರಿಂದ ನೀನು ದೃಢವಾಗಿರು), ಮಾ ಹ್ವಾಃ ( ಒಡೆದು ಹೋಗದಿರು.).
3ವಸೂನಾಂ ಪವಿತ್ರಮಸಿ ಶತಧಾರಂ ವಸೂನಾಂ ಪವಿತ್ರಮಸಿ ಸಹಸ್ರಧಾರಗ್ಂ -
ಪದವಿಭಾಗಃ- ವಸೂನಾಂ ಪವಿತ್ರಮ್ ಅಸಿ ಶತಧಾರಂ ವಸೂನಾಂ ಪವಿತ್ರಮ್ ಅಸಿ ಸಹಸ್ರಧಾರಮ್ |
ತೈತ್ತಿರೀಯಕೃಷ್ಣಯಜುರ್ವೇದದಲ್ಲಿ ಶ,ಷ,ಸ,ಹ- ಗಳ ಹಿಂದೆ ಇರುವ ಅನುಸ್ವಾರಕ್ಕೆ ಗ್ಂ- ಆದೇಶವಾಗುತ್ತದೆ.
ಅನ್ವಯಾರ್ಥಃ- (ಭೋಃ ಶಾಖಾಪವಿತ್ರ, ತ್ವಮ್) ಶತಧಾರಂ ವಸೂನಾಮ್ - (ಎಲೈ ಶಾಖಾಪವಿತ್ರವೇ, ನೀನು) ಗೋವಿನ ಕೆಚ್ಚಲಿನಿಂದ ನೂರಾರು ಧಾರೆಗಳಾಗಿ ಹರಿದು ಬರುವ ಜೀವಿಗಳಿಗೆ ಪ್ರಾಣಪೋಷಕವಾದ ಹಾಲಿನ / ಹಾಲನ್ನು,
ಪವಿತ್ರಮ್ ಅಸಿ - ಪರಿಶುದ್ಧಿಕಾರಕವಾಗಿರುವೆ / ಪವಿತ್ರಗೊಳಿಸುವವನಾಗಿದ್ದಿ.
(ಏವಮ್ ಏವ, ತ್ವಮ್) ಸಹಸ್ರಧಾರಂ ವಸೂನಾಂ ಪವಿತ್ರಮ್ ಅಸಿ - (ಅಂತೆಯೇ, ನೀನು) ಸಾವಿರಾರು ಧಾರೆಗಳಾಗಿ ಸುರಿಯುವ ಪ್ರಾಣರಕ್ಷಕರೂಪಿ ದನದ ಹಾಲಿನ ಪರಿಶುದ್ಧಿಕಾರಕವಾಗಿರುವೆ.
(ಶಾಖಾಪವಿತ್ರವೆಂದರೇನೆಂದು ಹೀಗೆ ಹೇಳಿದೆ - ತ್ರಿವೃತ್-ದರ್ಭಮಯಂ ಪವಿತ್ರಂ ಕೃತ್ವಾ ವಸೂನಾಂ ಪವಿತ್ರಮಸಿ ಇತಿ ಶಾಖಾಯಾಂ ಶಿಥಿಲಮ್ ಅವಸೃಜತಿ ಮೂಲೇ ಮೂಲಾನಿ ಅಗ್ರೇ ಅಗ್ರಾಣಿ ನ ಗ್ರಂಥಿಂ ಕರೋತಿ - ಎಂಬುದಾಗಿ. ಪ್ರಾಣಾ ವೈ ವಸವಃ - ಎಂದು ತೈ.ಬ್ರಾ. ಹೇಳಿದೆ. ವಸುಗಳೆಂದರೆ ಪ್ರಾಣಗಳೆಂದರ್ಥ.)
4ಹುತಃ ಸ್ತೋಕೋ ಹುತೋ ದ್ರಪ್ಸೋऽಗ್ನಯೇ ಬೃಹತೇ ನಾಕಾಯ ಸ್ವಾಹಾ ದ್ಯಾವಾ ಪೃಥಿವೀಭ್ಯಾಗ್ಂ -
ಅನ್ವಯಾರ್ಥಃ- (ಹಾಲಿನ) ಸ್ತೋಕಃ - ಸಣ್ಣ ಹನಿ, ದ್ರಪ್ಸಃ (ಚ) - (ಮತ್ತು) ದಪ್ಪ ಹನಿ (ಗಳು), ಬೃಹತೇ - ಪ್ರವೃದ್ಧವಾಗಿರುವ, ಬೃಹದಾಕಾರವುಳ್ಳ / ಜಾಜ್ವಾಲ್ಯಮಾನನಾಗಿ ಧಗಧಗಿಸುತ್ತಾ ಬೃಹಜ್ಜ್ವಾಲಾವೃತವಾಗಿ ಸ್ವರ್ಗ/ನಭಸ್ಪರ್ಶಿಯಾದಂತೆ ಬೆಳಗುವ, ನಾಕಾಯ ಅಗ್ನಯೇ ಸ್ವಾಹಾ (ಇತಿ) ಹುತಃ - ನಾಕವೆಂಬ ಹೆಸರಿನ ಅಗ್ನಿಗೆ / ಸ್ವರ್ಗನಿವಾಸಿಯಾದ ನಾಕನೆಂಬ ಪ್ರೌಢಾಗ್ನಿಗೆ ಸ್ವಾಹಾಕಾರಪೂರ್ವಕ (ದೇವತೆಗಳಿಗಾಗಿ ತ್ಯಾಗವೆಂಬ ದೃಷ್ಟಿಯಿಂದ) ಸಮರ್ಪಿತವಾಗಿವೆ / ಆಗಲಿ. ದ್ಯಾವಾಪೃಥಿವೀಭ್ಯಾಂ (ಚ) ಹುತಃ - (ಹಾಗೂ ದೋಹನಾದಿಕರ್ಮಗಳ ಆಧಾರವಾಗಿರುವ) ಅನ್ತರಿಕ್ಷ-ಭೂಮಿಗಳೆರಡಕ್ಕೂ ಸಮರ್ಪಿತವಾಗಿವೆ / ಆಗಲಿ.
ಬೌಧಾಯನರ ಪ್ರಕಾರ ಹಾಲಿನ ಬಿಂದುಗಳ ಸಮರ್ಪಣೆ / ನಿವೇದನೆ (ನೈವೇದ್ಯ). ಕರೆಯುವ ಪಾತ್ರೆಯ ಒಳಗಿನ / ಹೊರಚೆಲ್ಲಿದ ಎಂಬ ವಿಭಾಗವಿಲ್ಲದೆ, ಎಲ್ಲವನ್ನು.
ಆಪಸ್ತಂಬರು, ಕರೆಯುವಾಗ ಪಾತ್ರೆಯಿಂದ ಹೊರಚೆಲ್ಲಿದ ಹಾಲಿನ ಹನಿಗಳನ್ನು ಉಲ್ಲೇಖಿಸಿದ್ದಾರೆ. ಇವನ್ನು ವ್ಯರ್ಥವಾಯಿತೆಂದು ತಿಳಿಯಬಾರದು. ನಾಕಾಗ್ನಿ, ದ್ಯಾವಾಪೃಥಿವಿಗಳಿಗೆ ಸಮರ್ಪಿತವಾಯಿತೆಂದರಿಯಬೇಕು.

ಅಲ್ಪೋ ಬಿಂದುಃ ಸ್ತೋಕಃ ಪ್ರೌಢೋ ಬಿಂದುಃ ದ್ರಪ್ಸಃ । ತದ್ ಉಭಯಂ ನಾಕನಾಮ್ನೇ ಸ್ವರ್ಗವಾಸಿನೇ ಪ್ರೌಢಾಯ ಅಗ್ನಯೇ ಹುತಮ್ ಅಸ್ತು । ತಥಾ ದ್ಯಾವಾಪೃಥಿವೀಭ್ಯಾಮ್ ಅಪಿ ಸ್ವಾಹಾ ಹುತಮ್ ಅಸ್ತು ।  ಹವಿಷಃ ಅಗ್ನೌ ಪ್ರಕ್ಷಿಪ್ತತ್ವಂ ಹುತತ್ವಮ್ । ಹುತಃ ಸ್ತೋಕೋ ಹುತೋ ದ್ರಪ್ಸಃ - ಇತ್ಯಾಹ ಪ್ರತಿಷ್ಠಿತ್ಯೈ । ಹವಿಷಃ ಅಸ್ಕಂದಾಯ (ಹವಿರ್ನಾಶದೋಷಃ ನಾಸ್ತಿ ಇತಿ)। ದೇವತೋದ್ದೇಶಪೂರ್ವಕತ್ಯಾಗವಾಚಕಃ ಸ್ವಾಹಾಶಬ್ದಃ । ಸ್ವಾಹಾಕಾರಂ ಚ ವಷಟ್ಕಾರಂ ಚ  ವಾಗ್ಧೇನೋಃ ದ್ವೌ ಸ್ತನೌ ಯೌ ದೇವಾಃ ಉಪಜೀವಂತಿ (ಸ್ವಾಹಾಕಾರ-ವಷಟ್ಕಾರಗಳು ಮಾತೆಂಬ ಆಕಳಿನ / ವೇದವೆಂಬ ಕಾಮಧೇನುವಿನ 2 ಮೊಲೆಗಳಿದ್ದಂತೆ. ಯಾವ ಇವುಗಳನ್ನು ದೇವತೆಗಳು ಆಶ್ರಯಿಸಿದ್ದಾರೆ ಹವಿಸ್ಸಿನ ರೂಪದ ತಮ್ಮ ಆಹಾರಕ್ಕಾಗಿ.) । ದಿವಿ ನಾಕೋ ನಾಮ ಅಗ್ನಿಃ (ದೇವಲೋಕದಲ್ಲಿ ನಾಕನೆಂಬ ಅಗ್ನಿಯಿರುವನು.)। ತಸ್ಯ ವಿಪ್ರುಷೋ ಭಾಗಧೇಯಮ್ (ನಾಕಾಗ್ನಿಗೆ ವಿಪ್ರುಷನೆಂಬ ಪಾಲುದಾರನಿರುವನು.)। ನಾಕಮ್ ಏವ ಅಗ್ನಿಂ ಭಾಗಧೇಯೇನ ಸಮರ್ಧಯತಿ (ನಾಕಾಗ್ನಿಯನ್ನು ಪಾಲುದಾರನೊಂದಿಗೆ ತೃಪ್ತಿಪಡಿಸಲಾಗುತ್ತದೆ.) । ನಾಕಸ್ಯ ಭಾಗಃ ಕಥಂ ದ್ಯಾವಾಪೃಥಿವೀಭ್ಯಾಂ ದತ್ತಃ - ಇತಿ ಆಶಙ್ಕ್ಯ ನ ತಯೋಃ ನಾಕವದ್ ಭೋಕ್ತೃತ್ವಂ ಕಿಂತು ಸ್ಥಿತ್ಯಾಧಾರತ್ವೇನ ಪಾಲಕತ್ವಮಿತ್ಯಾಹ (ದ್ಯಾವಾಪೃಥಿವಿಗಳಿಗರ್ಪಣೆ ಅವು ಆಧಾರಭೂತಗಳೆಂಬ ನೆಲೆಯಲ್ಲೇ ಹೊರತು ಹವಿಸ್ಸುಣ್ಣುವವರೆಂದಲ್ಲ.)।
ವರ್ಷಧಾರಾಭಿಃ ಆಗತಾನಾಂ ಅಪಾಂ ರಸಃ ದರ್ಭಃ (ಮಳೆನೀರಿಂದ ಭೂಮಿಯಲ್ಲುಂಟಾದ ನೀರೊರತೆಯ ಸಾರಭೂತವಾದದ್ದು ದರ್ಭೆ.) । ಗೋಭಿಃ ಭಕ್ಷಿತಾನಾಂ ಓಷಧೀನಾಂ ರಸಃ ಕ್ಷೀರಮ್ (ಗೋವುಗಳಿಂದ ತಿನ್ನಲ್ಪಟ್ಟ ಓಷಧಿ-ವನಸ್ಪತಿಗಳ ರಸಸಾರವೇ ಗೋಕ್ಷೀರವು.) । ತದುಭಯಮ್ ಅತ್ರ ಸಂಸೃಷ್ಟಂ ಭವತಿ ಏವ (ಇವೆರಡೂ ಇಲ್ಲಿ ಸೃಷ್ಟಿಯಾಗಿ ಮಿಲಿತವಾಗಿವೆ. ದರ್ಭಮಯಶಾಖಾಪವಿತ್ರ+ದನದ ಹಾಲು ಇವೆರಡೂ ದೋಹನಪಾತ್ರೆಯೊಳಗಿರುವುದರಿಂದ.)।
5ಸಾ ವಿಶ್ವಾಯುಃ ಸಾ ವಿಶ್ವವ್ಯಚಾಃ ಸಾ ವಿಶ್ವಕರ್ಮಾ -
ಆಯವಃ ಗನ್ತ್ರ್ಯಃ / ಗಮನಶೀಲಾಃ (ಆಯುಃ, ಆಯೂ, ಆಯವಃ |ಗನ್ತ್ರೀ, ಗನ್ತ್ರ್ಯೌ, ಗನ್ತ್ರ್ಯಃ | ಗತಿಶೀಲ / ಚಲನಶೀಲ / ಸದಾ ಚಲಿಸುವ ಗುಣವುಳ್ಳವುಗಳು ಆಯುಗಳು.) | ವಿಶ್ವಂ ಕೃತ್ಸ್ನಮ್ ಆಯುಃ ಯಸ್ಯಾಃ ಸಾ ವಿಶ್ವಾಯುಃ (ವಿಶ್ವದೆಲ್ಲೆಡೆ ನಡೆದಾಡುವ ಗುಣವು ಯಾವಳದ್ದೋ ಅಂತಹ ಗೋವು ವಿಶ್ವಾಯುವೆಂದು ಕರೆಯಲ್ಪಟ್ಟಿರುವುದು. ಇಡಿಯ ವಿಶ್ವದ ಆಯುಸ್ಸು ಎಷ್ಟೋ ಅಲ್ಲಿಯವರೆಗೂ ಜೀವಿಸುವಂಥದ್ದು ಗೋವು. ಗೋಸಂತತಿ ಅಳಿದರೆ ವಿಶ್ವವೂ ನಶಿಸುವುದು, ಗೋವಿಲ್ಲದೆ ವಿಶ್ವವುಳಿಯದು ಎಂಬ ಧ್ವನಿಯೂ ಇಲ್ಲಿದೆ. ) | ವಿಶ್ವಸ್ಯ ವ್ಯಚಃ ವ್ಯಾಪ್ತಿಃ ಯಸ್ಯಾಃ ಸಾ ವಿಶ್ವವ್ಯಚಾಃ (ವಿಶ್ವದೆಲ್ಲೆಡೆ ವ್ಯಾಪಿಸಿರುವಂಥವಳಾವಳೋ ಅವಳೇ ವಿಶ್ವವ್ಯಚಾಃ ಎನ್ನಲ್ಪಟ್ಟ ಗೋವು.) | ವಿಶ್ವಾನಿ ಕರ್ಮಾಣಿ ಯಸ್ಯಾಃ ಸಾ ವಿಶ್ವಕರ್ಮಾ (ಈ ವಿಶ್ವಗಳು ಯಾವಳ ಕರ್ಮಗಳೋ / ಯಾವಳಿಂದ ನಡೆಯುತ್ತಿರುವವೋ ಅಂತಹ ಗೋವೇ ವಿಶ್ವಕರ್ಮಾ ಎನ್ನಲ್ಪಟ್ಟಿದೆ.) | ಪೃಥಿವೀ-ಅನ್ತರಿಕ್ಷ-ದ್ಯುಲೋಕಾಭಿಮಾನಿದೇವತಾನಾಂ ಕ್ರಮೇಣ ಉಕ್ತಗುಣೋಪೇತತ್ವಾತ್ ತದ್ ಅಭೇದೇನ ಗಾವಃ ಸ್ತೂಯಂತೇ (ಪೃಥ್ವಿ-ಅಂತರಿಕ್ಷ-ದ್ಯುಲೋಕಗಳ ಅಭಿಮಾನಿದೇವತೆಗಳ ಅನುಕ್ರಮವಾಗಿ ಮೇಲೆ ಹೇಳಲ್ಪಟ್ಟ ಗುಣಯುಕ್ತತ್ವದಿಂದಾಗಿ, ಅವುಗಳಿಗಿಂತ ಗೋವುಗಳು ಭಿನ್ನವಲ್ಲವೆಂದು ಸ್ತುತಿಸಲ್ಪಟ್ಟಿವೆ.) | ಕಿಂ ಚ, ಬಹುಕ್ಷೀರಪ್ರದಾನೇನ ಸಂತುಷ್ಟಃ ವಿಶ್ವಾಯುಷ್ಟ್ವಾದಿಕಮ್ ಆಶೀರ್ವಾದಂ ಪ್ರಯುಙ್ಕ್ತೇ ಇತಿ ಅಭಿಪ್ರಾಯಾನ್ತರಮ್ ಆಹ (ಹಾಗೆಯೇ, ಸಾಕಷ್ಟು ಹಾಲನ್ನಿತ್ತುದರಿಂದ ಸಂತೋಷಗೊಂಡು, ‘ವಿಶ್ವಾಯುಸ್ತ್ವವು ನಿನಗೆ ಪ್ರಾಪ್ತಿಯಾಗಲಿ’ ಎಂಬಿತ್ಯಾದಿಯಾಗಿ ಆಶೀರ್ವಾದವನ್ನು ಗೋವನ್ನುದ್ದೇಶಿಸಿ ಹೇಳಲಾಗಿದೆಯೆಂಬ ಇನ್ನೊಂದು ಆಭಿಪ್ರಾಯವನ್ನು ಹೇಳುತ್ತಾನೆ.) | ಯಥಾ ಲೋಕೇ ಪ್ರಭೂತಂ ಧನಂ ದತ್ತವತೇ ರಾಜ್ಞೇ ‘ಚಿರಂ ಜೀವ ’ ಇತಿ ಆಶೀರ್ವಾದಂ ಪುರೋಧಾಃ ಕರೋತಿ | ಏವಮ್ ಏವ ಏತೇನ ಮಂತ್ರೇಣ ಗಾಃ ಸ್ತೌತಿ (ಹೇಗೆ ಲೋಕದಲ್ಲಿ ಹೇರಳ ಸಂಪತ್ತನ್ನಿತ್ತ ರಾಜನಿಗೆ ‘ಚಿರಂಜೀವಿಯಾಗು / ಚಿರಕಾಲ ಬಾಳು’ ಎಂಬ ಆಶೀರ್ವಾದವನ್ನು ರಾಜಪುರೋಹಿತನು ಮಾಡುತ್ತಾನೆಯೋ ಅದೇ ರೀತಿ ಈ ಮಂತ್ರದಿಂದ ಗೋವುಗಳನ್ನು ಸ್ತುತಿ ಮಾಡುತ್ತಾನೆ.) ||

6ಸಂಪೃಚ್ಯಧ್ವಮೃತಾವರೀರೂರ್ಮಿಣೀರ್ಮಧುಮತ್ತಮಾ ಮಂದ್ರಾ ಧನಸ್ಯ ಸಾತಯೇ -
ಋತಶಬ್ದೇನ ಸತ್ಯವಾಚಿನಾ ಜಲೇ ಅವಶ್ಯಂಭಾವಿ-ಕ್ಷಾಲನ-ಸಾಮರ್ಥ್ಯಮ್ ಉಪಲಕ್ಷ್ಯತೇ (ಸತ್ಯಾರ್ಥಕವಾದ ಋತ-ಶಬ್ದದಿಂದ ಜಲದಲ್ಲಿ ಅವಶ್ಯವಾಗಿಯೂ / ಖಂಡಿತವಾಗಿಯೂ ಇದೆಯೆಂದು ಭಾವಿಸಲಾದ ತೊಳೆಯುವ / ಪ್ರಕ್ಷಾಲನೆ ಮಾಡುವ ಸಾಮರ್ಥ್ಯವನ್ನು ಉದ್ದೇಶಿಸಲಾಗಿದೆ.) | (ಋತಾವರೀ ಎಂದರೆ ಋತಾ+ವರೀ = ಗತಿಶೀಲವಾದವುಗಳಲ್ಲಿ , ಹರಿಯುವ ಗುಣವಿರುವ/ ದ್ರವಪದಾರ್ಥಗಳಲ್ಲಿ ಶ್ರೇಷ್ಠವಾದುದು ನೀರು.)ಹೇ   ಸಾಮರ್ಥ್ಯವತ್ಯಃ ಆಪಃ, ಯೂಯಂ ಕುಂಭೀಗತೇನ ಕ್ಷೀರೇಣ ಸಂಪೃಕ್ತಾಃ ಭವತ  (ಎಲೈ ಸಾಮರ್ಥ್ಯವುಳ್ಳ ನೀರಿನ ಹನಿಗಳೇ, ನೀವು ಹಾಲು ಕರೆಯುವ ಪಾತ್ರೆಯಲ್ಲಿನ ಹಾಲಿನೊಂದಿಗೆ ಬೆರೆತವುಗಳಾಗಿ.) | ಕೀದೃಶ್ಯಃ ಯೂಯಮ್ (ನೀವು ಎಂಥವರು?) ? ಊರ್ಮಿಮತ್ತ್ವೇನ (ತರಂಗ/ ಅಲೆಗಳಿಂದ ಕೂಡಿದ) ಅತ್ಯಂತಮಾಧುರ್ಯೇಣ (ಅತ್ಯಂತ ಸಿಹಿಗುಣದಿಂದ) ಹರ್ಷಹೇತುತ್ವೇನ ಚ (ಮತ್ತು ಆನಂದಕ್ಕೆ ಕಾರಣವಾಗಿರುವುದರಿಂದ) ಕ್ಷೀರಸದೃಶ್ಯಃ (ಹಾಲಿಗೆ ಸರಿಸಮನಾಗಿದ್ದೀರಿ.) । ಕಿಮರ್ಥಃ ಸಂಪರ್ಕಃ, (ಬೆರೆಯುವಿಕೆ ಏಕೆ?) ಸಾನ್ನಾಯ್ಯಲಕ್ಷಣಧನಲಾಭಾರ್ಥಃ (ಪೌಷ್ಟಿಕವಾದ ಪರಮಾನ್ನ / ದೇವಯಜ್ಞಾರ್ಥ ಶ್ರೇಷ್ಠವಾದ ಹವಿಷ್ಯಾನ್ನದ ಲಭ್ಯತೆಗಾಗಿ.) । ಸಾಮರ್ಥ್ಯ-ಊರ್ಮಿ- ಮಾಧುರ್ಯಗುಣೋಪನ್ಯಾಸಾದ್ ಅತ್ರ ರಸಸಂಪರ್ಕಃ ವಿವಕ್ಷಿತಃ (ಪ್ರಕ್ಷಾಲನ ಸಾಮರ್ಥ್ಯ, ಅಲೆಗಳಾಗಿ ಹರಿಯುವಿಕೆ ಹಾಗೂ ಮಧುರ ಸವಿರುಚಿಗಳ ಸಂಗಮದಿಂದಾಗಿ ಇಲ್ಲಿ ಜಲ-ಓಷಧಿರಸಗಳ ಮಿಶ್ರಣವು ವಿವಕ್ಷಿತವಾಗಿದೆ. ವಕ್ತುಮ್ ಇಚ್ಛಾ ವಿವಕ್ಷಾ - ಹೇಳಲು ಇಚ್ಛೆ ವಿವಕ್ಷೆ.) “ಅಪಾಂ ಚ ಔಷಧೀನಾಂ ಚ ರಸಗ್ಂ ಸಗ್ಂ ಸೃಜತಿ (ಗೋಕ್ಷೀರವು ನೀರು ಹಾಗೂ ದನಗಳು ಮೇದ ವಿವಿಧ ವನಸ್ಪತಿಗಳ ರಸದ ಸಂಯುಕ್ತ. ಗೋವು ಇದನ್ನು ಸಂಸೃಜಿಸುತ್ತದೆ.)।  ತಸ್ಮಾದ್ ಅಪಾಂ ಚ ಔಷಧೀನಾಂ ಚ ರಸಮ್ ಉಪಜೀವಾಮಃ ।”( ಹೀಗೆ ಇದು ಅತ್ಯಂತ ಶ್ರೇಷ್ಠವಾಗಿರುವುದರಿಂದಾಗಿ ಇದನ್ನು ನಾವು ಆಶ್ರಯಿಸುತ್ತೇವೆ.)ಇತಿ ಬ್ರಾಹ್ಮಣಮ್ (ಎಂಬುದು ತೈತ್ತಿರೀಯ ಬ್ರಾಹ್ಮಣದ ನಿರ್ವಚನ.)।

ಛಂದೋಗಾಃ ತು ಉಭಯ-ಉಪಜೀವನಮ್ ವಿಶದೀಕೃತ್ಯ ಆಮನಂತಿ (ಛಾಂದೋಗ್ಯೋಪನಿಷದಧ್ಯಾಯಿಗಳಾದರೋ ಅನ್ನ-ಜಲಗಳೆರಡರ ಆಶ್ರಯಿಸುವಿಕೆಯನ್ನು ಸ್ಪಷ್ಟವಾಗಿ ನಿರ್ವಚಿಸುತ್ತಾರೆ) - “ಅನ್ನಮ್ ಅಶಿತಂ ತ್ರೇಧಾ ವಿಧೀಯತೇ, (ಉಣ್ಣುವ ಅನ್ನ / ಘನಾಹಾರವು ೩ ವಿಧವೆಂದು ವಿಧಿಸಲಾಗಿದೆ), ತಸ್ಯ ಯಃ ಸ್ಥವಿಷ್ಠಃ ಧಾತುಃ ತತ್ ಪುರೀಷಂ ಭವತಿ, (ಅದರಲ್ಲಿ ಯಾವುದು ಅತೀ ದೊಡ್ಡ ಕಣವೋ / ಹೆಚ್ಚಿನ ಭಾಗವೋ ಅದು ಮಲವಾಗುತ್ತದೆ), ಯಃ ಮಧ್ಯಮಃ ತತ್ ಮಾಂಸಂ, ( ಯಾವುದು ಮಧ್ಯಮಗಾತ್ರ/ ಪ್ರಮಾಣದ್ದೋ ಅದು ಮಾಂಸವಾಗುತ್ತದೆ), ಯಃ ಅಣಿಷ್ಠಃ ತತ್ ಮನಃ (ಯಾವುದು ಅತೀ ಸೂಕ್ಷ್ಮವೋ ಅದು / ಅತಿ ಸ್ವಲ್ಪ ಪ್ರಮಾಣವು ಮನೋವೃತ್ತಿಗೆ ಕಾರಣವಾಗುವುದು. ಆದ್ದರಿಂದ ಆಹಾರವನ್ನು ಮಿತವಾಗಿ ಸೇವಿಸಿದರೆ ಅಲ್ಪ ಮಲ, ಅಲ್ಪ ಮಾಂಸ, ಸ್ವಲ್ಪವೇ ಪ್ರಮಾಣದ ಚಿತ್ತವೃತ್ತಿಗಳುಂಟಾಗಿ ಸಾತ್ವಿಕಾರೋಗ್ಯ ಉಂಟಾಗುತ್ತದೆ.)। ಆಪಃ ಪೀತಾಃ ತ್ರೇಧಾ ವಿಧೀಯಂತೇ, (ಕುಡಿದ ನೀರು ೩ ಬಗೆ), ತಾಸಾಂ ಯಃ ಸ್ಠವಿಷ್ಠಃ ಧಾತುಃ ತತ್ ಮೂತ್ರಂ ಭವತಿ, ಯಃ ಮಧ್ಯಮಃ ತತ್ ಲೋಹಿತಮ್, ಯಃ ಅಣಿಷ್ಠಃ ತತ್ ಪ್ರಾಣಃ।” (ಅದರಲ್ಲಿ ದೊಡ್ಡ ಘಟಕವು ಮೂತ್ರವೂ, ಮಧ್ಯಮಗಾತ್ರದ್ದು ರಕ್ತವೂ, ಸೂಕ್ಷ್ಮಭಾಗವು ಪ್ರಾಣಶಕ್ತಿಯಾಗಿಯೂ ಪರಿವರ್ತಿತವಾಗುತ್ತದೆ.) ಇತಿ ಛಾನ್ದೋಗ್ಯೋಪನಿಷದಿ । (ಎಂದು ಛಾಂದೋಗ್ಯ ಉಪನಿಷತ್ತಿನಲ್ಲಿದೆ.) “ಮನ್ದ್ರಾ ಧನಸ್ಯ ಸಾತಯೇ - ಇತಿ ಆಹ । ಪುಷ್ಟಿಮ್ ಏವ ಯಜಮಾನೇ ದಧಾತಿ ।” ಇತಿ ಬ್ರಾಹ್ಮಣಮ್ ॥ (ಇದು ಯಜ್ಞಮಾಡುವವನಿಗೆ ಪುಷ್ಟಿ ನೀಡುತ್ತದೆ ಎಂದು ತೈ.ಬ್ರಾ. ಹೇಳಿದೆ. ಮಂದ್ಯತೇ ಬುದ್ಧ್ಯತೇ ಅನೇನ ಇತಿ ಮಂದ್ರಃ । ಇದರ ಗಂಭೀರ ಝಣ ಝಣ ನಾದದಿಂದಲೇ ತಿಳಿಯುವಷ್ಟು ಪ್ರಮಾಣದಲ್ಲಿ ಪ್ರಭೂತವಾದ, ಹೇರಳವಾದ ಸುವರ್ಣರೂಪ್ಯಕಗಳು (ವೇದಕಾಲದ ಧನ) / ಚಿನ್ನದ ನಾಣ್ಯಗಳ ‘ಸಾತಯೇ’ - ದಯಪಾಲಿಸುವಿಕೆಗಾಗಿ (ದೇವನಿಂದ), ನಾವು ದೇವಪ್ರಸಾದ ಸಿದ್ಧಿಗಾಗಿ ನಡೆಸುವ ಯಜ್ಞಕ್ಕೆ ಬೇಕಾದ ಘೃತಕ್ಕಾಗಿ ಆಪ-ಓಷಧಿಮಿಶ್ರಣ(ಗೋಕ್ಷೀರ)ವನ್ನು ಆಶ್ರಯಿಸಬೇಕಾಗಿದೆ.)

7ಸೋಮೇನ ತ್ವಾऽऽತನಚ್ಮೀಂದ್ರಾಯ ದಧಿ -
ಪದವಿಭಾಗಃ- ಸೋಮೇನ ತ್ವಾ ಆತನಚ್ಮಿ ಇಂದ್ರಾಯ ದಧಿ |
ಅನ್ವಯಾರ್ಥಃ-
(ಹೇ ಕ್ಷೀರ), ದಧಿ (ರೂಪೇಣ) ಸೋಮೇನ ತ್ವಾ (ತ್ವಾಮ್) ಆತನಚ್ಮಿ | [ತೇನ ಆತಞ್ಚನೇನ (ಆತಂಚನೇನ) ನಿಷ್ಪನ್ನಂ ದಧಿ] ಇಂದ್ರಾಯ [ಹೋಷ್ಯತೇ] |  ಕಲ್ಪೇ ತು- “ಹೇ ಸಾನ್ನಾಯ್ಯ, ವಿಷ್ಣವೇ ತ್ವಾ (ತ್ವಾಮ್) ಅಪಿದಧಾಮಿ ಇತಿ ಅಧ್ಯಾಹಾರ್ಯಃ’’ ಇತಿ |

ಎಲೈ ಆಕಳ ಹಾಲೇ! ಮೊಸರಿನಂತಹ ಸೋಮರಸದಿಂದ ನಿನ್ನನ್ನು ಹೆಪ್ಪುಗಟ್ಟಿಸುವೆ. ಅಂತಹ ಹೆಪ್ಪಿನಿಂದ ಉತ್ಪನ್ನವಾದ ಮೊಸರು ಇಂದ್ರನಿಗೆ (ಹವಿಸ್ಸಾಗಿ) ಹೋಮಿಸಲ್ಪಡುತ್ತದೆ. ಕಲ್ಪಸೂತ್ರದಲ್ಲಾದರೋ- “ಎಲೈ ಸೋಮರಸದಿಂದ ಹೆಪ್ಪುಗಟ್ಟಿಸಲ್ಪಟ್ಟಿರುವ ಗೋಕ್ಷೀರದಧಿಯೇ! ಯಜ್ಞರೂಪೀ ವಿಷ್ಣುವಿಗಾಗಿ ನಿನ್ನನ್ನು ಮುಚ್ಚಿಡುವೆ ಎಂದು ಅಧ್ಯಾಹಾರ ಮಾಡಬೇಕು” ಎಂದು (ಇದೆ). ಅಧ್ಯಾಹಾರವೆಂದರೆ ಸೂಕ್ತ ತಾತ್ಪರ್ಯ/ ಭಾವಾರ್ಥಕ್ಕಾಗಿ, ವಾಕ್ಯಾರ್ಥದ ಪೂರ್ಣತ್ವದ ಸಾಧನೆಗಾಗಿ ಮೂಲಪಠ್ಯ/ಪದ್ಯದಲ್ಲಿಲ್ಲದ ಕೆಲವು ಪದಗಳನ್ನು ನಾವೇ ಸೇರಿಸಿಕೊಳ್ಳುವುದು. ಅಧಿ(ಅರ್ಥವನ್ನಾಶ್ರಯಿಸಿ)+ಆಹಾರ(ಬೇಕಾದ ಪದಗಳನ್ನು ಸಂಗ್ರಹಿಸುವಿಕೆ; ಅಪಹಾರ- ಕೊಂಡೊಯ್ಯುವುದು, ಆಹಾರ- ತರುವುದು).
ವಿವರಣಮ್-
ತತ್ರ ಹಿ (ಅಲ್ಲಾದರೋ), ಆತಞ್ಚನದ್ರವ್ಯವಿಶೇಷೈಃ ದೇವತಾವಿಶೇಷಾಣಾಂ ಪ್ರೀತಿಂ ಬ್ರುವತೀ ಶ್ರುತಿಃ (ವಿವಿಧ ವಿಶೇಷ ತರ್ಪಣ ಪದಾರ್ಥಗಳು ದೇವತಾವಿಶೇಷಗಳಿಗೆ ಪ್ರಿಯವೆಂದು ಹೇಳುತ್ತಾ ವೇದವು), ದಧ್ನಃ ಇಂದ್ರಪ್ರಿಯತ್ವಂ ದರ್ಶಯತಿ (ದಧಿ/ ಮೊಸರಿನ ಇಂದ್ರಪ್ರಿಯತೆಯನ್ನು ಪ್ರದರ್ಶಿಸುತ್ತದೆ) -“ಯತ್ ಪೂತೀಕೈಃ ವಾ (ಯಾವ ಪಾಲಕ್ ಸೊಪ್ಪುಗಳಿಂದಲೋ), ಪರ್ಣವಲ್ಕೈಃ ವಾ ( ಪಲಾಶದ ಎಲೆಗಳಿಂದಲೋ),ಆತಞ್ಚ್ಯಾತ್ (ತೃಪ್ತಿಪಡಿಸಿದರೆ), ಸೌಮ್ಯಮ್ (ಸೋಮನೆಂಬ ದೇವತೆಗೆ ಪ್ರಿಯ), ತದ್ ಯತ್ ಕಲೈಃ ರಾಕ್ಷಸಮ್ (ಯಾವುದು ಸಾಲವೃಕ್ಷ / ಮತ್ತಿಮರ / ಅರ್ಜುನವೃಕ್ಷದ ಪತ್ರಗಳಿಂದಾದ ಚೂರ್ಣವು, ರಾಕ್ಷಸರಿಗೆ ಪ್ರಿಯ), ತದ್ ಯತ್ ತಣ್ಡುಲೈಃ ವೈಶ್ವದೇವಮ್ (ಅಕ್ಕಿಯಿಂದ ಮಾಡಿದ್ದು ವಿಶ್ವೇದೇವತೆಗಳಿಗೆ ಇಷ್ಟ), ತದ್ ಯದ್ ಆತಞ್ಚನೇನ ಮಾನುಷಮ್ (ಮಜ್ಜಿಗೆಯಿಂದ ತಿಂದ ಆಹಾರವು ಚೆನ್ನಾಗಿ ಜೀರ್ಣವಾಗುವುದರಿಂದ ಅದು ಮನುಷ್ಯರಿಗೆ ಪ್ರಿಯ), ತದ್ ಯದ್ ದಧ್ನಾ ತತ್ ಸೇನ್ದ್ರಮ್(ಸ+ಇನ್ದ್ರಮ್) (ಮೊಸರಿನಿಂದ ಇಂದ್ರನು ತೃಪ್ತನಾಗುತ್ತಾನೆ), ತದ್ ದಧ್ನಾ ಆತನಕ್ತಿ ಸೇನ್ದ್ರತ್ವಾಯ” (ಆದ್ದರಿಂದ ಇಂದ್ರತುಷ್ಟಿ, ಇಂದ್ರತ್ವಪ್ರಾಪ್ತಿಗಾಗಿ ಮೊಸರಿನಿಂದ ಇಂದ್ರನನ್ನು ತೃಪ್ತಿಗೊಳಿಸುತ್ತಾನೆ) ಇತಿ (ಎಂಬುದಾಗಿ.)। “ಸೋಮಮ್ ಏವ ಏನತ್ (ಏತತ್) ಕರೋತಿ” ಇತಿ ಬ್ರಾಹ್ಮಣಮ್ (ಸೋಮರಸವನ್ನೇ ಇದಕ್ಕಾಗಿ ಹಾಲನ್ನು ಹೆಪ್ಪುಗಟ್ಟಿಸಲು ಬಳಸುತ್ತಾನೆ.) । ಸಾನ್ನಾಯ್ಯಸ್ಯ ಸೋಮೀಕರಣಮ್ ಕಿಮರ್ಥಮ್? (ದೇವತಾಪ್ರೀತ್ಯರ್ಥವಾದ ಹವಿಸ್ಸಿಗೆ ಸೋಮರಸದ ಬೆರಕೆಯೇಕೆ ಮಾಡಲಾಗುತ್ತದೆ?) ಅಗ್ನಿಷ್ಟೋಮಮ್ ಅನುಷ್ಠಾಯ (ಅಗ್ನಿಷ್ಟೋಮವನ್ನು ಅನುಷ್ಠಾನಿಸಿ / ಮಾಡಿ), ಸಂವತ್ಸರಮ್ ಅತಿವಾಹ್ಯ (1 ವರ್ಷದ ಕಾಲಮೀರಿ), ಯಃ ಸೋಮಯಾಗಂ ನ ಕರೋತಿ (ಯಾವನು ಸೋಮಯಾಗವನ್ನು ಮಾಡುವುದಿಲ್ಲವೋ), ತೇನ ಅವಶ್ಯಮ್ (ಅವನಿಂದ ಅವಶ್ಯವಾಗಿ), ಅಸೌ (ಇದು / ಸೋಮೀಕರಣ), ಕರ್ತವ್ಯಃ (ಮಾಡಲ್ಪಡಬೇಕು.)। “ವಸನ್ತೇ ವಸನ್ತೇ ಜ್ಯೋತಿಷಾ ಯಜೇತ” ಇತಿ ತದ್ ವಿಧಾನಾತ್ (ಪ್ರತಿ ವಸಂತಋತುವಿನಲ್ಲಿ ಅಗ್ನಿಯನ್ನು ಬಳಸಿ ಯಜ್ಞಮಾಡಬೇಕು- ಎಂಬ ಕಾರಣಕ್ಕಾಗಿ. “ಜ್ಯೋತಿಸ್” ಎಂದರೆ ಅಗ್ನಿಷ್ಟೋಮದ ಒಂದು ಸಂಸ್ಥಾಭೇದ.)। ಯದಿ ದ್ರವ್ಯ-ಅಭಾವ-ಆದಿ-ನಿಮಿತ್ತೇನ ನ ಪ್ರತಿಪದ್ಯೇತ ತದಾ (ಒಂದುವೇಳೆ ವಸ್ತುಗಳ ಕೊರತೆ ಇತ್ಯಾದಿ ಕಾರಣಗಳಿಂದ ಸೋಮಯಾಗವನ್ನು 1 ವರ್ಷದೊಳಗೆ ಮಾಡಲಾಗದಿದ್ದರೆ ಆವಾಗ), ತದ್-ಭಾವನಯಾ ಸೋಮೀಕೃತಂ ಸಾಂನಾಯ್ಯಂ ಪಿಬತಃ (ಮಾಡಿದ್ದೇನೆಂಬ ಭಾವನೆಯಿಂದ ಸೋಮೀಕೃತವಾದ ಗೋಕ್ಷೀರದಧಿಯನ್ನು ಕುಡಿಯುವವನಿಗೆ), ತದ್ ವೈಕಲ್ಯಂ ಪರಿಹ್ರಿಯತೇ (ಆ ಊನವು / ಕೊರತೆಯು / ವಿಕಲತೆಯು / ವಿಷಮತೆಯು ಪರಿಹರಿಸಲ್ಪಡುತ್ತದೆ.) ।

ಅಸ್ತಿ ಹಿ ಅನುಷ್ಠಾತುಮ್ ಅಶಕ್ತಸ್ಯ ಸರ್ವತ್ರ ಭಾವನಯಾ ತತ್-ಪೂರ್ತಿಃ (ಮಾಡಲು ಅಶಕ್ತನಾದವನಿಗೆ ಮಾಡಿದಂತೆ ಭಾವಿಸುವುದರಿಂದ-ಮಾನಸಪೂಜೆಯಂತೆ-ಕಾರ್ಯದ ಪೂರ್ತಿಯಾಗುವುದೆಂದು ಎಲ್ಲೆಡೆ ರೂಢಿಯಲ್ಲಿದೆಯಲ್ಲವೇ?)। ಅತಃ ಏವ (ಆದ್ದರಿಂದಲೇ), ಬೃಹದಾರಣ್ಯಕೇ ಸೃಷ್ಟಿಪ್ರಕರಣೇ (ಬೃಹದಾರಣ್ಯಕದಲ್ಲಿ, ಸೃಷ್ಟಿಪ್ರಕರಣದಲ್ಲಿ), ಬ್ರಹ್ಮಚಾರಿಣಃ ಗಾರ್ಹಸ್ಥ್ಯಧರ್ಮಂ ವಾಞ್ಛತಃ (ಗೃಹಸ್ಥಧರ್ಮವನ್ನು ಬಯಸಿದ / ಬಯಸುವ ಬ್ರಹ್ಮಚಾರಿಗೆ), ತದ್ ಅಸಂಭವೇ ಸತಿ (ಅದು ನೆರವೇರದಿದ್ದಾಗ), ಉಪಾಸನಯಾ ತತ್-ಪೂರ್ತಿಃ ಆಮ್ನಾಯತೇ (ಉಪಾಸನೆಯಿಂದ ಅದರ ಪೂರ್ತಿಯಾಗುತ್ತದೆಂದು / ಅದರ ಫಲವೇ ಸಿಗುವುದೆಂದು ಆಮ್ನಾಯ / ಶ್ರುತಿ / ವೇದವು ಹೇಳುತ್ತದೆ)- “ಏಕಾಕೀ ಕಾಮಯತೇ ಜಾಯಾ ಮೇ ಸ್ಯಾತ್ (“ಏಕಾಂಗಿಯು ಬಯಸುತ್ತಾನೆ- ಪತ್ನಿಯು ನನಗೆ ಇರಬೇಕು),ಅಥ ಪ್ರಜಾಯೇಯ (ತರುವಾಯ ಮಕ್ಕಳಾಗಬೇಕು),ಅಥ ವಿತ್ತಂ ಮೇ ಸ್ಯಾತ್ (ಅನಂತರ ಸಂಪತ್ತು ನನಗೆ ಇರಬೇಕು),ಅಥ ಕರ್ಮ ಕುರ್ವೀಯ (ಅಲ್ಲದೆ, ವೇದೋಕ್ತರೀತ್ಯಾ ಧರ್ಮಕರ್ಮಾದಿಗಳನ್ನು ಮಾಡುವೆನು),ಇತಿ ಸಃ ಯಾವತ್ ಅಪಿ ಏತೇಷಾಮ್ ಏಕೈಕಂ ನ ಪ್ರಾಪ್ನೋತಿ ಅಕೃತ್ಸ್ನಃ ಏವ ತಾವತ್ (ಎಂದು ಅವನು ಎಲ್ಲಿಯವರೆಗೆ ಇವೆಲ್ಲವನ್ನಲ್ಲದಿದ್ದರೂ, ಇವುಗಳಲ್ಲಿ ಒಂದೊಂದನ್ನಾದರೂ ಪಡೆಯುವುದಿಲ್ಲವೋ, ಆವಾಗ), ಮನ್ಯತೇ ತಸ್ಯ ಅಕೃತ್ಸ್ನತಾ (ಅವನ ಅಸಮಗ್ರತೆಯನ್ನು / ಅಪರಿಪೂರ್ಣತೆಯನ್ನು ಮನಗಂಡು), ಮನ ಏವ ಅಸ್ಯ ಆತ್ಮಾ (ಮನಸ್ಸೇ ಅವನ ಆತ್ಮಾ), ವಾಕ್ ಜಾಯಾ (ವಾಕ್ಕೇ/ ಮಾತೇ ಪತ್ನಿಯು),ಪ್ರಾಣಃ ಪ್ರಜಾಃ (ಪ್ರಾಣವೇ ಸಂತಾನ), ಚಕ್ಷುಃ ಮಾನುಷಂ ವಿತ್ತಂ (ಕಣ್ಣೇ ಮಾನುಷ / ಲೌಕಿಕವಾದ ಧನ),ಚಕ್ಷುಷಾ ಹಿ ತತ್ ವಿನ್ದತೇ ಶ್ರೋತ್ರಂ (ಕಣ್ಣಿನಿಂದಲೇ ಆ ದೈವೀಶ್ರೋತ್ರ / ಕಿವಿಯನ್ನು ಹೊಂದುತ್ತಾನೆ), ದೈವಗ್ಂ ಶ್ರೋತ್ರೇಣ ಹಿ ತತ್ ಶೃಣೋತಿ (ದೈವೀಶ್ರೋತ್ರದಿಂದಲೇ ಆ ವಾಕ್ಕನ್ನು ಕೇಳುತ್ತಾನೆ),ಆತ್ಮ ಏವ ಅಸ್ಯ ಕರ್ಮ (ಆತ್ಮವೇ ಅವನ ಕರ್ಮಾನುಸಾರ ಪಡೆದ ದೇಹ), ಆತ್ಮನಾ ಹಿ ಕರ್ಮ ಕರೋತಿ ” ಇತಿ (ಆತ್ಮನಿಂದಲೇ / ತನ್ನಿಂದಲೇ / ತಾನೇ ಕರ್ಮವನ್ನು ಮಾಡುತ್ತಾನೆ” ಎಂಬುದಾಗಿ) (ಬೃಹದಾರಣ್ಯಕ-1-4-17).। ಆತ್ಮಾ ದೇಹಃ | ವೇದಗಮ್ಯಂ ಮನ್ತ್ರಾದಿಕಂ ದೈವಂ ವಿತ್ತಮ್ (ಆತ್ಮವೇ ದೇಹ. ವೇದಗಮ್ಯವಾದ ಮಂತ್ರಾದಿಗಳು ದೈವೀಸಂಪತ್ತು) | ಅತಃ ಸೋಮಭಾವನಯಾ ವೈಕಲ್ಯಪರಿಹಾರಃ ಯುಜ್ಯತೇ (ಆದ್ದರಿಂದ, ಸೋಮಭಾವನೆಯಿಂದ ವೈಕಲ್ಯದ / ಅಪರಿಪೂರ್ಣತ್ವದ ಪರಿಹಾರವಾಗುತ್ತದೆಯೆಂಬುದು ಯೋಗ್ಯವೇ ಆಗಿದೆ.) |

ಕುಮ್ಭ್ಯಾಃ ಪಿಧಾನಾಯ ಪಾತ್ರವಿಶೇಷಂ ವಿಧತ್ತೇ (ಹಾಲಿಡುವ ಪಾತ್ರೆಯನ್ನು ಮುಚ್ಚಲು ವಿಶೇಷಪಾತ್ರೆಯನ್ನು ವಿಧಿಸುತ್ತಾನೆ)- “ನ ಮೃನ್ಮಯೇನ ಅಪಿದಧ್ಯಾತ್ (-“ಮಣ್ಣಿನ ಪಾತ್ರೆಯಿಂದ ಮುಚ್ಚಬಾರದು) | ಯತ್ ಮೃತ್-ಮಯೇನ ಅಪಿದಧ್ಯಾತ್ | ಪಿತೃದೇವತ್ಯಗ್ಂ ಸ್ಯಾತ್ (ಯಾವುದು ಮೃನ್ಮಯವಾದ ಪಾತ್ರೆಯಿಂದ ಮುಚ್ಚಲ್ಪಡುವುದೋ ಅದು ಪಿತೃದೇವತೆಗಳಿಗೆ ಸಲ್ಲುತ್ತದೆ.)| ಅಯಸ್ಪಾತ್ರೇಣ ವಾ ದಾರುಪಾತ್ರೇಣ ವಾ ಅಪಿದಧಾತಿ [(ಆದ್ದರಿಂದ) ಕಬ್ಬಿಣ / ಮರದ ಪಾತ್ರೆಯಿಂದ ಮುಚ್ಚುತ್ತಾನೆ.] | ತದ್ ಹಿ ಸದೇವಮ್  |” ಇತಿ (ತೈ.ಬ್ರಾ.) (ಯಾಕೆಂದರೆ, ಅದೇ ದೇವತೆಗಳಿಗೆ ಸಲ್ಲುವುದು” ಎಂದಿದೆ ತೈ.ಬ್ರಾಹ್ಮಣ.) | ತತ್ರ ಏವಮ್ ಆಮ್ನಾಯತೇ - “ಅಮೃನ್ಮಯಂ ದೇವಪಾತ್ರಂ ಯಜ್ಞಸ್ಯ ಆಯುಷಿ ಪ್ರಯುಜ್ಯತಾಮ್ ” ಇತಿ (“ಮಣ್ಣಿನದಲ್ಲದ ದೇವಪಾತ್ರೆಯನ್ನು ಯಜ್ಞವು ಪೂರ್ಣವಾಗಿ ಪರಿಸಮಾಪ್ತಿಯಾಗಲು ಉಪಯೋಗಿಸಬೇಕು” ಎಂದಿದೆ ಶ್ರುತಿ / ಆಮ್ನಾಯ.)|

ಪಿಧಾನಪಾತ್ರಸ್ಯ ಸೋದಕತ್ವಂ (ಸ-ಉದಕತ್ವಂ) ವಿಧತ್ತೇ (ಮುಚ್ಚಳದ ಉದಕ (ನೀರು) ಸಹಿತವಾಗಿರುವಿಕೆಯನ್ನು ವಿಧಿಸುತ್ತಾನೆ) - “ಉದನ್ವದ್ ಭವತಿ (-“(ಮುಚ್ಚಳವು) ಉದಕಸಹಿತವಾಗಿರುತ್ತದೆ) | ಆಪೋ ವೈ ರಕ್ಷೋಘ್ನೀಃ (ನೀರು, ಸೃಷ್ಟಿಯ ವಿರುದ್ಧಶಕ್ತಿಗಳಾದ ರಾಕ್ಷಸಾದಿಗಳ ನಾಶಕರವಾದುದು.) | ರಕ್ಷಸಾಮ್ ಅಪಹತ್ಯೈ |” ಇತಿ (ತೈ.ಬ್ರಾ.)(ರಕ್ಷಸ್ಸುಗಳ ದೂರೀಕರಣಕ್ಕಾಗಿ / ನಾಶಕ್ಕಾಗಿ” ಎಂದಿದೆ ತೈ.ಬ್ರಾಹ್ಮಣ. ) | ಸ್ವ-ಅಭಿಮಾನಿದೇವತಾ-ಮುಖೇನ ಅಪಾಂ ರಕ್ಷೋಘ್ನತ್ವಮ್ (ನೀರಿಗೆ ರಕ್ಷೋಘ್ನತ್ವದ ಸಿದ್ಧಿಯು ತನ್ನ ಅಭಿಮಾನಿದೇವತೆಯಾದ ವರುಣನಿಂದಾಗಿ.) |

ಪಿಧಾನಾಯ ಮನ್ತ್ರಮ್ ಉತ್ಪಾದ್ಯ ವ್ಯಾಚಷ್ಟೇ (ಮುಚ್ಚುವುದಕ್ಕಾಗಿ ಮಂತ್ರವನ್ನು ಸೃಜಿಸಿ ಹೇಳುತ್ತಾನೆ) - “ಅದಸ್ತಮ್ (ಅಕ್ಷಯಮ್) ಅಸಿ ವಿಷ್ಣವೇ ತ್ವಾ ಇತಿ ಆಹ (ನೀನು ಕ್ಷಯಿಸಿಹೋಗದಿರುವುದಾಗಿದ್ದಿ. ನಿನ್ನನ್ನು ಯಜ್ಞರೂಪೀ ವಿಷ್ಣುವಿಗೆ ಸಮರ್ಪಿಸುತ್ತೇನೆಂದು ಹೇಳುತ್ತಾನೆ.) | ಯಜ್ಞೋ ವೈ ವಿಷ್ಣುಃ (ಯಜ್ಞವೇ ವಿಷ್ಣುವು.) | ಯಜ್ಞಾಯ ಏವ ಏನತ್ ಅದಸ್ತಂ ಕರೋತಿ (ಯಜ್ಞಕ್ಕಾಗಿಯೇ ಇದನ್ನು / ಸೋಮೀಕೃತ ಗೋಕ್ಷೀರದಧಿಯನ್ನು ಕ್ಷಯಿಸದಂತೆ ಕಾಪಿಡಲಾಗುತ್ತದೆ.)|” ಇತಿ (ತೈ.ಬ್ರಾ.) | (ಕ್ಷಯಿಸದಿರುವಿಕೆ / ಕಡಿಮೆಯಾಗದಿರುವಿಕೆ / ಮುಗಿದುಹೋಗದಿರುವಿಕೆ / ಆರಿಹೋಗದಿರುವಿಕೆ / ಆವಿಯಾಗದಿರುವಿಕೆಗಾಗಿ ಸೋದಕ, ಅಮೃನ್ಮಯ ಪಿಧಾನದಿಂದ ಮುಚ್ಚಲಾಗುವುದು. ಯಜ್ಞಾರ್ಥವಾಗಿ ಅತ್ಯವಶ್ಯವಾಗಿರುವುದರಿಂದ, ಗೋಕ್ಷೀರವು ಕ್ಷಯಿಸಿಹೋಗಬಾರದು ಎಂಬುದಕ್ಕಾಗಿ.)


8ವಿಷ್ಣೋ ಹವ್ಯಗ್ಂ ರಕ್ಷಸ್ವ -

ಕಲ್ಪಃ-“ಅಥ ಏತದ್ ಉಪರಿ ಇವ ನಿದಧಾತಿ ಯತ್ರ ಗುಪ್ತಂ ಮನ್ಯತೇ ವಿಷ್ಣೋ ಹವ್ಯಗುಂ ರಕ್ಷಸ್ವ ಇತಿ” ಇತಿ ||

ಕಲ್ಪವು-“ಅನಂತರ (ಹಾಲಿನ ಪಾತ್ರೆಯನ್ನು ಮುಚ್ಚಿದ ನಂತರ), ಎಲ್ಲಿ ಸುರಕ್ಷಿತವೆಂದು ತೋರುವುದೋ ಅಂತಹ ಎತ್ತರದ ಸ್ಥಳದಲ್ಲಿ, ಈ ಮಂತ್ರದಿಂದ ಆ ಹಾಲನ್ನು ಇಡಲಾಗುತ್ತದೆ” ಎಂದು ಹೇಳಿದೆ.

ಅತ್ರ ರಕ್ಷಣಾರ್ಥಮ್ ಏವ (ಇಲ್ಲಿ ರಕ್ಷಣೆಗೋಸ್ಕರವೇ) ವಿಷ್ಣುಸಮ್ಬೋಧನಂ, ನ ತು ಇನ್ದ್ರವದ್ ಹವಿಃಸ್ವೀಕಾರಾಯ ಇತಿ ಅಮುಮ್ (ವಿಷ್ಣುವಿನ ಸಂಬೋಧನೆಯೇ ಹೊರತು, ಇಂದ್ರನಂತೆ ಹವಿಸ್ಸಿನ ಸ್ವೀಕಾರಕ್ಕಾಗಿ ಅಲ್ಲವೆಂಬೀ), ಅಭಿಪ್ರಾಯಂ ವಿಶದಯತಿ (ಅಭಿಪ್ರಾಯವನ್ನು ತೈ.ಬ್ರಾ.ದಲ್ಲಿ ವಿಶದಪಡಿಸುತ್ತಾನೆ)-“ವಿಷ್ಣೋ ಹವ್ಯಗುಂ ರಕ್ಷಸ್ವ ಇತಿ ಆಹ ಗುಪ್ತ್ಯೈ”(ತೈ.ಬ್ರಾ.) ಇತಿ (ಹೇ ವಿಷ್ಣುವೇ, ಈ ಹವ್ಯವನ್ನು ರಕ್ಷಿಸು ಎಂದು ಹೇಳುತ್ತಾನೆ ರಕ್ಷಣೆಗಾಗಿ ಎಂದು.)|ಶಾಖಾಬರ್ಹಿಷೋಃ ಇವ ಸಾನ್ನಾಯ್ಯೇ ಅಪಿ ವಿಧತ್ತೇ (ದರ್ಭಾಶಾಖೆಗಳಂತೆ ಸೋಮೀಕೃತ ಗೋಕ್ಷೀರದಧಿಯ ಬಗ್ಗೆಯೂ ವಿಧಿಸುತ್ತಾನೆ)-“ಅನಧಃ ಸಾದಯತಿ (ಮೇಲಿಡುತ್ತಾನೆ. ನ ಅಧಃ ಅನಧಃ- ಕೆಳಗೆ ಅಲ್ಲ.)|ಗರ್ಭಾಣಾಂ ಧೃತ್ಯಾ ಅಪ್ರಪಾದಾಯ (ಗರ್ಭಗಳ ಸುರಕ್ಷಿತ ಹಿಡಿದಿಡುವಿಕೆಗೆ, ಬಿದ್ದು ಹೋಗದಂತೆ / ಗರ್ಭಪಾತವಾಗದಂತೆ ಮಾಡಲು.)|ತಸ್ಮಾದ್ ಗರ್ಭಾಃ ಪ್ರಜಾನಾಮ್ ಅಪ್ರಪಾದುಕಾಃ (ಇದರಿಂದಾಗಿ ಗರ್ಭಗಳು ಸ್ರಾವವಾಗದೆ ಸಂತತಿಗಳಾಗಿ ಸುರಕ್ಷಿತವಾಗಿ ಬೆಳೆಯುತ್ತವೆ.) |ಉಪರಿ ಇವ ನಿದಧಾತಿ (ಹಾಲಿನ ಪಾತ್ರೆಯನ್ನು ಸ್ವಲ್ಪ ಮೇಲಿಡುತ್ತಾನೆ.) |ಉಪರಿ ಇವ  ಹಿ ಸುವರ್ಗಃ ಲೋಕಃ (ಮೇಲೆ ಸ್ವರ್ಗಲೋಕವಿದೆ / ಉತ್ತಮ ಜನತೆಯ ಸ್ಥಾನವು ಉನ್ನತವಾದುದು.)|ಸುವರ್ಗಸ್ಯ ಲೋಕಸ್ಯ ಸಮಷ್ಟ್ಯೈ”(ತೈ.ಬ್ರಾ.) ಇತಿ (ಆದ್ದರಿಂದ, ಉತ್ತಮರ ಲೋಕವೇ ಇಡಿಯಾಗಿ ಎಲ್ಲೆಡೆ ಹಬ್ಬಲು, ಎಲ್ಲರೂ ಒಳ್ಳೆಯವರಾಗಲೆಂದು ಸಾಂಕೇತಿಕವಾಗಿ ಹಾಲಿನ ಪಾತ್ರೆಯನ್ನೂ ಮೇಲಿಡಲಾಗುತ್ತದೆ ಎಂಬುದಾಗಿ.) ||
ಅತ್ರ ವಿನಿಯೋಗಸಂಗ್ರಹಃ –
ಶುಂಧ ಸಾನ್ನಾಯ್ಯಪಾತ್ರಾಣಿ ಪ್ರೋಕ್ಷ್ಯ ಮಾತೇತಿ ಕುಂಭಿಕಾಮ್ |
ಸಂಸ್ಥಾಪ್ಯಾಗ್ನೌ ವಸೂ ಶಾಖಾಪವಿತ್ರಂ ತತ್ರ ನಿಕ್ಷಿಪೇತ್ ||1||
ಹುತಬಿಂದೂನ್ ಸೇತಿ ಗಾಶ್ಚ ದುಗ್ಧಾಸ್ತಿಸ್ರೋsಭಿಮಂತ್ರಯೇತ್ |
ಸಂಪೃ ಸಂಕ್ಷಾಲನಂ ಕ್ಷಿಪ್ತ್ವಾ ಸೋಮೇ ದಧ್ನಾssತನಕ್ತಿ ಹಿ |
ವಿಷ್ಣೋsನಧೋ ದಧಾತ್ಯಸ್ಮಿಂಸ್ತೃತೀಯೇ ದಶ ವರ್ಣಿತಾಃ ||2||

ಇಲ್ಲಿಗೆ ಶ್ರೀಮತ್ಸಾಯಣಾಚಾರ್ಯವಿರಚಿತ ಮಾಧವೀಯ ವೇದಾರ್ಥಪ್ರಕಾಶದಲ್ಲಿ, ಕೃಷ್ಣಯಜುರ್ವೇದೀಯ ತೈತ್ತಿರೀಯಸಂಹಿತಾಭಾಷ್ಯದಲ್ಲಿ, ಪ್ರಥಮಕಾಂಡದ ಪ್ರಥಮ ಪ್ರಪಾಠಕದಲ್ಲಿ, ಮೂರನೆಯ ಅನುವಾಕದ, ದಂಬೆ ಕೃಷ್ಣಮೂರ್ತಿಶಾಸ್ತ್ರಿಕೃತ ಕನ್ನಡಾನುವಾದವು ಮುಗಿಯಿತು.

ಭಟ್ಟಭಾಸ್ಕರಭಾಷ್ಯ

೧. ಶುಂಧಧ್ವಂ ದೈವ್ಯಾಯ ಕರ್ಮಣೇ ದೇವಯಜ್ಯಾಯೈ -
ಸಾನ್ನಾಯ್ಯಪಾತ್ರಾಣಿ ಪ್ರೋಕ್ಷತಿ - ಶುನ್ಧಧ್ವಮ್ ಇತಿ || ಶುನ್ಧ ಶುದ್ಧೌ ಶೌಚಕರ್ಮಣಿ ವಾ | ದೇವಾನಾಮ್ ಇದಂ ದೈವ್ಯಮ್ | ಯಞ್- ಪ್ರತ್ಯಯಃ ಪ್ರಾಕ್-ದೀವ್ಯತೀಯಃ | ಹೇ ಪಾತ್ರಾಣಿ!  ದೇವಯಜ್ಯಾತ್ಮನೇ ದೈವ್ಯಾಯ ಕರ್ಮಣೇ ಶುಂಧಧ್ವಂ, ಶುದ್ಧಾನಿ ಭವತ, ಸ್ವಯಮ್ ಏವ ಆತ್ಮಾನಂ ಶೋಧಯತ ಇತಿ ವಾ | ಪ್ರಾಧಾನ್ಯಖ್ಯಾಪನಾರ್ಥಾ ದೇವಶಬ್ದಾವೃತ್ತಿಃ, ಸಾಕಲ್ಯಾರ್ಥಾ ವಾ ಯಥಾ - “ನಿಧೀ(ಗಣಾ)ನಾಂ ತ್ವಾ ನಿಧಿ(ಗಣ)ಪತಿಂ ಹವಾಮಹೇ” ಇತಿ ||
ಸೋಮೀಕೃತಗೋಕ್ಷೀರದಧಿಪಾತ್ರೆಗಳನ್ನು (ಶುದ್ಧಜಲದಿಂದ) ಪ್ರೋಕ್ಷಿಸುತ್ತಾನೆ / ಸಿಂಪಡಿಸುತ್ತಾನೆ - ಶುಂಧಧ್ವಮ್ ಇತ್ಯಾದಿ ಮಂತ್ರಗಳಿಂದ. ಶುಂಧ ಎಂದರೆ ಶುದ್ಧಿ / ಶೌಚ / ಶುಚಿಗೊಳಿಸುವಿಕೆ. ದೇವತೆಗಳಿಗೆ ಸಂಬಂಧಿಸಿದ್ದು ಇದು ಎಂಬುದರಿಂದಾಗಿ ದೈವ್ಯವು. ‘ದೈವ್ಯ’ ಎಂಬಲ್ಲಿನ ಯಞ್ ಪ್ರತ್ಯಯವು ಆರಂಭದಲ್ಲೇ ತಾನೇ ತಾನಾಗಿ ಇತರ ಸಹಾಯವಿಲ್ಲದೆಯೇ ಬೆಳಗುವಂಥದ್ದು ಎಂಬರ್ಥ ಕೊಡುವಂಥದ್ದು. ಎಲೈ ಪಾತ್ರೆಗಳೇ! ದೇವತೋಪಾಸಕಯಜ್ಞಾರ್ಥವಾದ ದೈವಕರ್ಮಕ್ಕಾಗಿ ಶುದ್ಧಿಹೊಂದಿರಿ, ಸ್ವತಃ ತಾವೇ ಸ್ವಚ್ಛವಾಗಿರಿ. ದೇವಶಬ್ದದ ಪುನರಾವೃತ್ತಿಯು ಅದರ ಪ್ರಾಮುಖ್ಯತೆಯನ್ನು ಹೇಳಲು / ಸಮಗ್ರತೆಯನ್ನು ಸೂಚಿಸಲು. ಹೇಗೆಂದರೆ- ನಿಧಿ(ಗಣ)ಗಳ ನಿಧಿ(ಗಣ)ಪತಿಯಾದ ನಿನ್ನನ್ನು ಹವಿಃಪೂರ್ವಕವಾದ ಯಜ್ಞಮುಖೇನ ಉಪಾಸಿಸುತ್ತೇವೆ ಎಂಬಲ್ಲಿ ನಿಧಿ(ಗಣ)ಶಬ್ದದ ಪುನರಾವರ್ತನೆಯಾದಂತೆ.
೨. ಮಾತರಿಶ್ವನೋ ಘರ್ಮೋsಸಿ -
ಅಂಗಾರಾನ್ ನಿರೂಹತಿ - ಮಾತರಿಶ್ವನಃ ಇತಿ || ಮಾತರಿ ಸರ್ವಸ್ಯ ಪರಿಚ್ಛೇದಕೇ ಅನ್ತರಿಕ್ಷೇ ಶೇತೇ - ಇತಿ ಮಾತರಿಶ್ವಾ | ವಾಯುಃ ಉಚ್ಯತೇ | ತಸ್ಯ ಯಃ ಘರ್ಮಃ ಸಃ ಏವ ತ್ವಮ್ ಅಸಿ ಇತಿ ಪಾರ್ಥಿವೋಗ್ನಿಃ ಸ್ತೂಯತೇ | ಯದ್ವಾ, ಘರಣಾಧಿಕರಣಂ ಘರ್ಮಃ | ಘೃಕ್ಷರಣದೀಪ್ತ್ಯೋಃ | ಕ್ಷರಣಂ ಸಂಚಲನಮ್ | ವಾಯೋಃ ಅಪಿ ಸಂಚಲನ-ಆಧಾರಭೂತಃ ಅನ್ತರಿಕ್ಷಮ್ ಏವ ತ್ವಮ್ ಅಸಿ ಇತಿ ಕುಂಭ್ಯಾಧಾರಃ ಅಂಗಾರಃ ಸ್ತೂಯತೇ ಧಾರಣ-ಸಾಮರ್ಥ್ಯ-ಖ್ಯಾಪನಾರ್ಥಮ್ | “ಅನ್ತರಿಕ್ಷಂ ವೈ ಮಾತರಿಶ್ವನೋ ಘರ್ಮಃ | ಏಷಾಂ ಲೋಕಾನಾಂ ವಿಧೃತ್ಯೈ” ಇತ್ಯಾದಿ ಬ್ರಾಹ್ಮಣಮ್ ||
ಹೊತ್ತಿದ ಕಟ್ಟಿಗೆಗಳನ್ನು (ಕೆಂಡವನ್ನು) ಸರಿಪಡಿಸಿ, ಇನ್ನಷ್ಟು ಚೆನ್ನಾಗಿ ಉರಿಯಲು ಅದನ್ನು ಗಾಳಿಯಿಂದ ಊದುತ್ತಾನೆ - ಈ ಮಂತ್ರದಿಂದ. ಎಲ್ಲವನ್ನೂ ಛೇದಿಸಿ ಒಳಹೊಗುವ ಮಾತೃ / ಮೂಲಸ್ವರೂಪವಾದ ಅಂತರಿಕ್ಷದಲ್ಲಿ (ಅಂತರಿಕ್ಷವು ಎಲ್ಲೆಡೆಯೂ ವ್ಯಾಪಿಸಿರುವುದಷ್ಟೆ?) ವಿಶ್ರಮಿಸುವುದರಿಂದ ಮಾತರಿಶ್ವಾ ಎನ್ನಲಾಗಿದೆ ವಾಯುವಿಗೆ. ಅವನ (ವಾಯುವಿನ) ವಿಶ್ರಾಂತಿಸ್ಥಾನ ಯಾವುದಿದೆಯೋ ಅದೇ ನೀನಾಗಿದ್ದಿ ಎಂದು ಪೃಥಿವಿಯಲ್ಲಿ ಉದ್ಭವಿಸಿದ / ಗೋಚರಿಸುವ ಯಜ್ಞಕುಂಡಸ್ಥ ಅಗ್ನಿಯು ಸ್ತುತಿಸಲ್ಪಡುತ್ತಾನೆ. ಅಥವಾ- ಘರಣವರ್ಗಕ್ಕೆ ಸೇರಿದ್ದು ಘರ್ಮ. ಘರಣವೆಂದರೆ ಘೃ-ಕ್ಷರಣ-ದೀಪ್ತ್ಯೋಃ ಎಂಬ ಧಾತುವಿನಿಂದ ನಿಷ್ಪನ್ನವಾದ ಪದ. ದೀಪ್ತಿ ಎಂದರೆ ಹೊಳೆಯುವಿಕೆ, ಬೆಳಕು, ಪ್ರಕಾಶ ಇತ್ಯಾದಿ. ಕ್ಷರಣವೆಂದರೆ ಸಂಚಲನ, ಸಂಚಾರ. ವಾಯುವಿಗೂ ಸಂಚಲನಕ್ಕೆ ಆಧಾರವಾಗಿರುವ ಅಂತರಿಕ್ಷವೇ ನೀನಾಗಿದ್ದಿ ಎಂದು ಮಣ್ಣಿನ ಮಡಿಕೆಯನ್ನು ಮಾಡಲು ಆಧಾರಭೂತವಾದ ಅಂಗಾರ (ಬೆಂಕಿಯ ಕೆಂಡ, ಅಗ್ನಿ) ವು ಪ್ರಶಂಸಿಸಲ್ಪಡುತ್ತದೆ - ಅಗ್ನಿಯ ಸಹಕಾರದಿಂದಲೇ ತಯಾರಾದ ಮಡಿಕೆಯ, ತನ್ನೊಳಗೆ ಪದಾರ್ಥಗಳನ್ನು ತುಂಬಿಕೊಳ್ಳುವ ಧಾರಣಸಾಮರ್ಥ್ಯದ ಪ್ರಶಂಸೆಗಾಗಿ. ಹೀಗೆ ತಯಾರಾದ ಮಡಿಕೆಯೊಳಗೆ ಘಟಾಕಾಶವೆಂಬ ಅಂತರಿಕ್ಷ / ಅವಕಾಶವು ವಾಯುಸಂಚಾರಕ್ಕೆ ಅವಕಾಶ ಮಾಡಿಕೊಡುವುದರಿಂದ. ಅಥವಾ - ಕೆಂಡವು ಗಾಳಿ, ನೀರನ್ನು ಸೆಳೆದುಕೊಳ್ಳುವ (adsorption by charcoal) ಶಕ್ತಿ ಹೊಂದಿರುವುದರಿಂದ, ಅದರಲ್ಲೂ ಅವಕಾಶವಿದೆ. “ಅಂತರಿಕ್ಷವು ವಾಯುವಿನ ಆವಾಸ / ಸಂಚಾರಸ್ಥಾನ. ಅಂತಹ ವಾಯುವು ಅಂತರಿಕ್ಷದಲ್ಲಿ ಸಂಚರಿಸುತ್ತಿರುವುದು ಈ ಲೋಕದ ಜನರನ್ನು ಪ್ರಾಣಸಹಿತರಾಗಿ ಇರುವಂತೆ, ಶ್ವಾಸಧಾರಣೆ ಮಾಡಿಕೊಂಡು ಜೀವಿಸುವಂತೆ ಮಾಡಲು” ಇತ್ಯಾದಿಯಾಗಿ ತೈ.ಬ್ರಾಹ್ಮಣವು ಹೇಳುತ್ತದೆ.
೩. ದ್ಯೌರಸಿ ಪೃಥಿವ್ಯಸಿ ವಿಶ್ವಧಾಯಾ ಅಸಿ ಪರಮೇಣ ಧಾಮ್ನಾ ದೃಗ್ಂಹಸ್ವ ಮಾ ಹ್ವಾಃ -
ಸಾನ್ನಾಯ್ಯತಪನೀಮ್ ಅಧಿಶ್ರಿಯತಿ— ‘ದ್ಯೌಃ ಅಸಿ’ ಇತಿ || ದ್ಯುಪ್ರಭೃತೀನಾಂ ಕಾರ್ಯಭೂತಾ ಸ್ಥಾಲೀ ಕಾರಣಾತ್ಮನಾ ಸ್ತೂಯತೇ | ‘ದಿವಃ ಚ ಹ್ಯೇಷಾ ಪೃಥಿವ್ಯಾಃ ಚ ಸಂಭೃತಾ’ ಇತಿ ಬ್ರಾಹ್ಮಣಮ್ | ಲೋಕಾಧಿಕಾರಾದ್ ವಿಶ್ವಧಾಯಾ ಇತಿ ಅನ್ತರಿಕ್ಷಮ್ ಉಚ್ಯತೇ | ‘ವೃಷ್ಟಿಃ ವೈ ವಿಶ್ವಧಾಯಾಃ’ ಇತಿ ದರ್ಶನಾತ್ | ವಿಶ್ವಸ್ಯ ಧಾಯಃ ಧಾರಣಂ ಯಸ್ಯಾಃ ಇತಿ ಬಹುವ್ರೀಹಿಃ, ವಿಶ್ವಂ ಧೀಯತೇ ಅನಯಾ ಇತಿ | ಸಾ ತ್ವಮ್ ಈದೃಶೇನ ಪರಮೇಣ ಪ್ರಕೃಷ್ಟೇನ ಧಾಮ್ನಾ ಧಾರಣಶಕ್ತ್ಯಾ ದೃಂಹಸ್ವ ವರ್ಧಸ್ವ ದೃಢಾ ಭವ | ಮಾ ಹ್ವಾಃ ಮಾ ಕುಟಿಲಾ ಭೂಃ ಇತಿ ||
‘ತಪ್ಯತೇ ಪಾಪಮ್ ಅನಯಾ ಇತಿ ತಪನೀ | ತಾಮ್ ತಪನೀಮ್’— ಇದರಿಂದ ಪಾಪವು ಸುಟ್ಟುಹೋಗುವುದು ಎಂಬುದರಿಂದ ತಪನೀ ಎಂಬ ಪದಪ್ರಯೋಗವಿದೆ. ಸಾನ್ನಾಯ್ಯ / ಸೋಮೀಕೃತ ಗೋಕ್ಷೀರದಧಿಯೆಂಬ ಹವ್ಯಾನ್ನವು ದುರಿತಕ್ಷಯಕಾರಕ. ಅಂತೆಯೇ, ತಪನೀಯನ್ನು ತಪಲೆ, ತೋಫು, ಪಾತ್ರೆ ಎಂದೂ ಅರ್ಥೈಸಬಹುದು. ಸಾನ್ನಾಯ್ಯಪಾತ್ರೆಯನ್ನು ಅಧಿಕವಾಗಿ ಪ್ರಶಂಸಿಸುತ್ತಾನೆ / ಅಧಿಕೃತ್ಯ ಶ್ರಿಯತಿ— ಅದನ್ನು ಕುರಿತು ಸ್ತುತಿಸುತ್ತಾನೆ ಈ ಮಂತ್ರದ ಮೂಲಕ. ದ್ಯು / ದೇವತಾ-ಕಾರ್ಯಕ್ಕೆ ಕಾರಣೀಭೂತವಾಗಿರುವ ಹವಿಃಪಾತ್ರೆಯು ಅದಕ್ಕಾಗಿಯೇ ಸ್ತುತಿಸಲ್ಪಡುತ್ತದೆ. ‘ದೇವಲೋಕಕ್ಕೂ ಭೂಲೋಕಕ್ಕೂ ಉಪಯೋಗಿಯಾಗಿರುವ ಯಜ್ಞದ, ಸಾನ್ನಾಯ್ಯವನ್ನು ತನ್ನಲ್ಲಿ ತುಂಬಿಕೊಂಡಿರುವಂಥದ್ದು’ ಎಂದಿದೆ ತೈ.ಬ್ರಾಹ್ಮಣ. ಲೋಕಕ್ಕೆ ಆಧಾರವಾಗಿರುವುದರಿಂದ ಅಂತರಿಕ್ಷವು ವಿಶ್ವಧಾಯಾ ಎನ್ನಲ್ಪಡುತ್ತದೆ. ಭೂಲೋಕ ಮೊದಲ್ಗೊಂಡು ಸಕಲ ಲೋಕಗಳೂ ಅಂತರಿಕ್ಷದಲ್ಲೇ ನೆಲೆಸಿರುವುವಲ್ಲವೇ? ‘ವೃಷ್ಟಿ / ಮಳೆಯು ಅಂತರಿಕ್ಷದಿಂದಲೇ ಅಲ್ಲವೇ?’ ಎಂಬ ತೈ.ಬ್ರಾಹ್ಮಣದ ವಾಕ್ಯವೇ ಇದಕ್ಕೆ ದೃಷ್ಟಾಂತ. ಇಡಿಯ ವಿಶ್ವವನ್ನು ಧಾರಣೆ ಮಾಡುವವಳು / ಇವಳಿಂದ ವಿಶ್ವವು ಧರಿಸಲ್ಪಟ್ಟಿದೆ / ಇವಳನ್ನೇ ಆಧರಿಸಿ ಜಗತ್ತು ನಿಂತಿದೆ ಎಂಬುದರಿಂದಾಗಿ ವಿಶ್ವಧಾಯಾ ಎಂದಿದೆ. (ಬಹುವ್ರೀಹಿ ಸಮಾಸ) . ‘ಅಂತಹ ಹಾಲಿನ ಪಾತ್ರೆಯಾದ ನೀನು ಇಂತಹ (ಪ್ರ ಕೃಷ್ಟ) ಚೆನ್ನಾಗಿ ನಿರ್ಮಿಸಿದ ಧಾರಣಶಕ್ತಿಯಿಂದ / ದೃಢತೆಯಿಂದ ಯಜ್ಞದ ಹವಿಸ್ಸನ್ನು ಸಂರಕ್ಷಿಸು. ಒಡೆದು ಹೋಗದಿರು / ಬಿರುಕು ಬಿಡದಿರು’ ಎಂಬುದಾಗಿ.
೪. ವಸೂನಾಂ ಪವಿತ್ರಮಸಿ ಶತಧಾರಂ ವಸೂನಾಂ ಪವಿತ್ರಮಸಿ ಸಹಸ್ರಧಾರಗ್ಂ -
ಉಖಾಯಾಂ (ಹಾಲಿನಪಾತ್ರೆಯಲ್ಲಿ), ಶಾಖಾಪವಿತ್ರಂ (ಶಾಖಾಪವಿತ್ರವನ್ನು ತುದಿ ಪೂರ್ವಕ್ಕೆ ಮಾಡಿ), ನಿದಧಾತಿ (ಇಡುತ್ತಾನೆ)— ವಸೂನಾಮಿತಿ (ವಸೂನಾಮ್….ಎಂಬ ಮಂತ್ರದಿಂದ) ||
ಪ್ರಾಣಿನಾಂ ವಾಸಹೇತುತ್ವಾತ್ (ಪ್ರಾಣಿಗಳ ಬದುಕಿಗೆ ಆಧಾರ ಕಾರಣವಾಗಿರುವುದರಿಂದ),
ಪಯಃಪ್ರಭೃತೀನಿ ಧನಾನಿ (ಹಾಲು ಮುಂತಾದ ಸಂಪತ್ತುಗಳು), ವಸುಶಬ್ದೇನ ಉಚ್ಯನ್ತೇ (ವಸು— ಎಂಬ ಪದದಿಂದ ಹೇಳಲ್ಪಡುತ್ತದೆ.),
ಪ್ರಾಣಾಃ ಚ, “ಪ್ರಾಣಾ ವೈ ವಸವಃ” ಇತಿ ದರ್ಶನಾತ್ (ತೈ.ಬ್ರಾ.) (“ಪ್ರಾಣಗಳು ವಸುಗಳಷ್ಟೇ? / ವಸುಗಳೇ” ಎಂದು ತೈ.ಬ್ರಾಹ್ಮಣವು ತೋರಿಸುವ ಕಾರಣದಿಂದ.) |
ತೇ ಅಪಿ ಹಿ ವಾಸಹೇತವಃ (ಅವುಗಳೂ ಸಹ ವಾಸಕ್ಕೆ / ಜೀವನಕ್ಕೆ ಕಾರಣಭೂತವಾದವುಗಳಲ್ಲವೇ?) |
(ದರ್ಭೆಯ ಶಾಖಾಪವಿತ್ರವೇ! ನೀನು) ಪಯಃಪ್ರಭೃತೀನಾಂ ವಸೂನಾಂ (ಹಾಲು ಮುಂತಾದ ವಸುಗಳ)
ಶತಧಾರಮ್  ಅನೇಕಪ್ರಕಾರಂ (ನೂರಾರು /ಅನೇಕ ವಿಧವಾದ ಉಪಯೋಗಗಳಿಂದ / ಬಹುತೆರನಾದ ಕಾರಣಗಳಿಂದಾಗಿ) ಪಾವನಮ್ ಅಸಿ (ಪವಿತ್ರಗೊಳಿಸುವುದಾಗಿರುವೆ.) | ಪ್ರಾಣಾತ್ಮನಾಂ ವಸೂನಾಂ ಸಹಸ್ರಧಾರಂ ಪೂರ್ವಸ್ಮಾತ್ ಅಪಿ ಬಹುಪ್ರಕಾರಂ ಪಾವನಮ್ ಅಸಿ ಯಾಗಸಾಧನದ್ವಾರೇಣ || (ಯಾಗಕರ್ಮಕ್ಕೆ ಸಾಧನದ್ರವ್ಯವಾಗಿರುವ ಮೂಲಕ ಪ್ರಾಣಾತ್ಮಸ್ವರೂಪಗಳಾದ ಗೋಕ್ಷೀರಾದಿ ವಿವಿಧ ಹವ್ಯದ್ರವ್ಯಗಳು ಪೂರ್ವದಲ್ಲೇ / ಮೊದಲೇ ಪವಿತ್ರವಾಗಿದ್ದರೂ, ಅದಕ್ಕಿಂತಲೂ ಹೆಚ್ಚುರೀತಿಯಲ್ಲಿ ದರ್ಭಮಯ ಶಾಖಾಪವಿತ್ರವಾದ ನೀನು ಅವುಗಳ ಪಾವನ / ಶುದ್ಧಿ-ಕಾರಕವಾಗಿರುವಿ.)
೫. ಹುತಃ ಸ್ತೋಕೋ ಹುತೋ ದ್ರಪ್ಸೋऽಗ್ನಯೇ ಬೃಹತೇ ನಾಕಾಯ ಸ್ವಾಹಾ ದ್ಯಾವಾ ಪೃಥಿವೀಭ್ಯಾಗ್ಂ -
ಸ್ತೋಕಾನ್  (ಗೋಕ್ಷೀರದ ಕಿರು ತುಂತುರು ಹನಿಗಳನ್ನು / ಹನಿಗಳು ಹಾಲು ಕರೆವ ಪಾತ್ರೆಯಿಂದ ಹೊರಕ್ಕೆ ಚೆಲ್ಲುವುದನ್ನು), ಅನುಮನ್ತ್ರಯತೇ (ಅನುಸರಿಸಿ ಈ ಮಂತ್ರವನ್ನು ಪಠಿಸಲಾಗುತ್ತದೆ.)— ಹುತಃ - ಇತಿ || ಅಲ್ಪಃ ಬಿನ್ದುಃ ಸ್ತೋಕಃ (ಕಿರು ಹನಿಯು ಸ್ತೋಕ), ಮಹಾನ್ ಬಿನ್ದುಃ ದ್ರಪ್ಸಃ (ಗುರು / ದೊಡ್ಡ ಹನಿ ದ್ರಪ್ಸ) | ದೋಹನಕಾಲೇ ಅಮಹಾನ್ ಬಿನ್ದುಃ ಪಾತ್ರಾದ್ ಬಹಿಃ ನಿಪತಿತಃ ಸ್ತೋಕಃ (ಹಾಲು ಕರೆಯುವ ಕಾಲದಲ್ಲಿ ಪಾತ್ರೆಯಿಂದ ಹೊರಕ್ಕೆ ಬಿದ್ದ ದೊಡ್ಡದಲ್ಲದ ಬಿಂದುವು ಸ್ತೋಕವು)  , ಸಃ ಹುತಃ ಅಸ್ತು (ಅದು ಹುತವಾಗಲಿ / ಹೋಮಿಸಲ್ಪಡಲಿ), ದೇವತೋದ್ದೇಶೇನ ಪರಿತ್ಯಕ್ತಃ ಅಸ್ತು (ದೇವತೆಗಳಿಗಾಗಿ / ಆ ಉದ್ದೇಶಕ್ಕಾಗಿ ಪರಿತ್ಯಜಿಸಲ್ಪಡಲಿ. ಅದರಲ್ಲಿ ಲೋಭ-ಮೋಹಗಳು ಬೇಡ. ದೇವತೋದ್ದೇಶಕ್ಕದು ಸಮರ್ಪಿತವಾಗಲಿ ಎಂಬ ಭಾವವಿರಲಿ.) | ದ್ರಪ್ಸಃ ಅಪಿ ಹಿ ಹುತಃ ಅಸ್ತು (ಅಂತೆಯೇ, ದಪ್ಪ ಹನಿಗಳೂ ದೇವರಿಗರ್ಪಿತವಾಗಲಿ.) | ಕಸ್ಮೈ (ಯಾರಿಗೆ / ಯಾವ ದೇವರಿಗೆ) ? ಅಗ್ನಯೇ ಬೃಹತೇ ನಾಕಾಯ (ಬೃಹದಾಕಾರದ / ಬೃಹತ್ ಮಹಿಮಾಯುತ ನಾಕನೆಂಬ ಅಗ್ನಿಗೆ), ನಾಕನಾಮ್ನೇ (ನಾಕನೆಂಬ ನಾಮ / ಹೆಸರುಳ್ಳ ಅಗ್ನಿಗೆ) | ಕಂ ಸುಖಂ (ಕಂ =ಸುಖ), ತದ್ ಅಸ್ಯ ನಾಸ್ತಿ ಇತಿ ಅಕಃ (ಅದು / ಸುಖವು ಇವನಿಗಿಲ್ಲ ಎಂಬುದರಿಂದ ಅಕಃ ಎನ್ನಲ್ಪಡುತ್ತಾನೆ.), ತಸ್ಮಾದ್ ಅನ್ಯಃ ನಾಕಃ (ನ+ಅಕಃ) (ಆದರೆ, ಅಕಃ / ಸುಖರಹಿತನಿಗಿಂತ ಬೇರೆಯಾದವನು / ಅನ್ಯನು / ಸುಖವಾಗಿರುವವನು ನಾಕಃ ಎನಿಸಲ್ಪಡುವನು.)| ‘ದಿವಿ ನಾಕೋ ನಾಮಾಗ್ನಿಃ(ದಿವಿ ನಾಕಃ ನಾಮ ಅಗ್ನಿಃ)’ ಇತ್ಯಾದಿ ಬ್ರಾಹ್ಮಣಮ್ (‘ದೇವಲೋಕದಲ್ಲಿ ನಾಕನೆಂಬ ಹೆಸರಿನ ಅಗ್ನಿಯಿರುವನು’ ಇತ್ಯಾದಿಯಾಗಿ ತೈ.ಬ್ರಾಹ್ಮಣದಲ್ಲಿದೆ.) | ಏವಂ ಹುತಃ ಅಸ್ತು -ಇತಿ ಸಙ್ಕಲ್ಪೇನ ಹವಿಷಃ ಸ್ಕನ್ನತಾ ಕ್ರಿಯತೇ (ಹೀಗೆ ಹೋಮಿಸಲ್ಪಡಲಿ - ಎಂಬ ಸಂಕಲ್ಪದಿಂದ ಹವಿಸ್ಸಿನ ಚ್ಯುತವಾಗುವಿಕೆ / ಶುಷ್ಕವಾಗುವಿಕೆ / ಹೊರಚೆಲ್ಲುವಿಕೆಯ ಸಾರ್ಥಕತೆಯನ್ನು / ವ್ಯರ್ಥವಾಗದಿರುವಿಕೆಯನ್ನು ಸಮರ್ಥಿಸಲಾಗಿದೆ.)  | ಕಃ ಪುನಃ ಇತ್ಥಂ ವದತಿ ಇತಿ ಆಹ (ಯಾರು ಹೀಗೆ ಹೇಳುತ್ತಾನೆ ಎಂದು ಪುನಃ ಹೇಳುತ್ತಾನೆ) , ಸ್ವಾಹಾ ಸ್ವಯಮೇವ ಸರಸ್ವತೀ , ಆಹ ಬ್ರೂತೇ (ಸ್ವಯಂ ಸರಸ್ವತಿಯೇ ಹೇಳುತ್ತಾಳೆ.) | ‘ಸ್ವೈವ ತೇ ವಾಗಿತ್ಯಬ್ರವೀತ್(ಸ್ವ-ಏವ ತೇ ವಾಗ್ ಇತಿ ಅಬ್ರವೀತ್)’ ಇತ್ಯಾದಿ ಬ್ರಾಹ್ಮಣಮ್  (ಹೀಗೆ ನಿನ್ನ ವಾಕ್ಕೇ /  ವಾಗ್ದೇವಿಯೇ ಹೇಳಿದಳು— ಇತ್ಯಾದಿ ತೈತ್ತಿರೀಯಬ್ರಾಹ್ಮಣವಚನ.) | ಸ್ವಯಮ್ ಏವ ಆಹ ಇತ್ಯಸ್ಯ ಅರ್ಥಸ್ಯ ದ್ಯೋತಕಃ ಅಯಂ ನಿಪಾತಃ ( ಈ ಹಾಲ ಹನಿಯ ಪತನವೇ ಸ್ವಯಂ ಹೇಳುತ್ತದೆ ಎಂಬರ್ಥದ ದ್ಯೋತಕವೇ “ಸ್ವಾಹಾ”- ಪ್ರಯೋಗ.) | ‘ಆಹ ಸ್ವ’-ಇತ್ಯಸ್ಯ ಪ್ರತಿಲೋಮಪಾಠೇ ‘ಸ್ವಾಹಾ’ - ಇತಿ ಭವತಿ (ಆಹ— ಹೇಳಿದಳು, ಸ್ವ— ಸ್ವತಃ ತಾನೇ,— ಎಂಬುದರ ತಿರುಗುಮುರುಗಾದ ಹೇಳುವಿಕೆಯೇ ಸ್ವ+ಆಹ— ಸ್ವಾಹಾ - ಎಂದಾಗುವುದು.) | ನ ಕೇವಲಂ ನಾಕಾಯ ಏವ, ಅಪಿ ತು ದ್ಯಾವಾಪೃಥಿವೀಭ್ಯಾಮ್ ಅಪಿ ಹುತಃ ಅಸ್ತು ಇತಿ (ಕೇವಲ ನಾಕಾಗ್ನಿಗೆ ಮಾತ್ರವಲ್ಲ; ದ್ಯಾವಾ— ಅಂತರಿಕ್ಷ / ದ್ಯುಲೋಕ, ಪೃಥಿವಿ / ಭೂಲೋಕ— ಇವೆರಡಕ್ಕೂ ಹುತವಾಗಲಿ / ಹೋಮಿತವಾಗಲಿ / ಹೋಮಿಸಲ್ಪಡಲಿ.) ||
೬. ಸಾ ವಿಶ್ವಾಯುಃ—
ಪ್ರಥಮಾಂ ದುಗ್ಧಾಂ ಗಾಮ್ ಅಭಿಮನ್ತ್ರಯತೇ— ಸಾ ವಿಶ್ವಾಯುಃ - ಇತಿ ||

ಮೊದಲು ಹಾಲುಕರೆದ ಗೋವನ್ನು ಕುರಿತು “ಸಾ ವಿಶ್ವಾಯುಃ”— ಎಂದು ಅಭಿಮಂತ್ರಿಸುತ್ತಾನೆ / ಸಂಬೋಧಿಸುತ್ತಾನೆ.

ಯಾ ಪ್ರಥಮಂ ದುಗ್ಧಾ ಗೌಃ, ಸಾ ವಿಶ್ವಾಯುಃ ನಾಮ, ವಿಶ್ವಮ್ ಆಯುಃ ಜೀವನಂ ಯಸ್ಯಾಮ್ ಇತಿ ಪೃಥಿವೀ ಅಭಿಧೀಯತೇ | ತದಾತ್ಮನಾ ಚ ಗೌಃ ಸ್ತೂಯತೇ | “ಇಯಂ ವೈ ವಿಶ್ವಾಯುಃ”— ಇತ್ಯಾದಿ ಬ್ರಾಹ್ಮಣಮ್ ||

ಯಾವಳು ಗೋವುಗಳ ಮಧ್ಯೆ ಪ್ರಪ್ರಥಮವಾಗಿ ಹಾಲ್ಗರೆಯಲ್ಪಡುವಳೋ ಅಥವಾ ಮೊದಲ ಕರುವಿನ ಗೋವೋ, ಅವಳು / ಆ ಆಕಳು “ವಿಶ್ವಾಯುಃ”— ಎಂಬ ಹೆಸರಿನವಳಾಗುತ್ತಾಳೆ. ವಿಶ್ವದ ಉಳಿವು ಯಾವಳಲ್ಲಿ ಅಂತರ್ಗತವಾಗಿದೆಯೋ / ವಿಶ್ವವು ಯಾವಳಲ್ಲಿ ಜೀವಿಸುತ್ತಿದೆಯೋ ಅಂತಹ ಈ ಪೃಥ್ವಿಯು ವಿಶ್ವಾಯುವೆಂದು ಕರೆಯಲ್ಪಡುತ್ತದೆ. ಆ ಪೃಥ್ವಿಯ ಆತ್ಮಸ್ವರೂಪಭೂತವಾಗಿರುವುದರಿಂದ ಗೋಮಾತೆಯು “ವಿಶ್ವಾಯುಃ” ಎಂದು ಸ್ತುತಿಸಲ್ಪಡುವುದು. “ಇವಳೇ ವಿಶ್ವಾಯುವು”— ಇತ್ಯಾದಿಯಾಗಿ ತೈತ್ತಿರೀಯ ಬ್ರಾಹ್ಮಣ(೩.೨.೩) (ಗ್ರಂಥ)ವು ಹೇಳುತ್ತದೆ. (ಪ್ರಥಮ ಕರುವಿನ ಗೋವು ಸುದೀರ್ಘಾವಧಿಯ ವರೆಗೆ  ಆರೋಗ್ಯವಾಗಿ ಬದುಕಿ, ಹಾಲ್ಗರೆಯುತ್ತಿರಲೆಂಬ ಆಶಯವೂ / ಧ್ವನಿಯೂ “ವಿಶ್ವಾಯುಃ” ಎಂಬಲ್ಲಿದೆ.)

೭. ಸಾ ವಿಶ್ವವ್ಯಚಾಃ—
ದ್ವಿತೀಯಾಮ್ ಅಭಿಮನ್ತ್ರಯತೇ— ಸಾ ವಿಶ್ವವ್ಯಚಾಃ - ಇತಿ ||

ಎರಡನೆಯ (ಗೋವನ್ನು) ವಳನ್ನು ಕುರಿತು ಈ ಮಂತ್ರದಿಂದ ಅಭಿಮಂತ್ರಿಸುತ್ತಾನೆ.

ವಿಶ್ವಂ ವ್ಯಚತಿ ವ್ಯಾಪ್ನೋತಿ ಇತಿ ವಿಶ್ವವ್ಯಚಾಃ | ಅನ್ತರಿಕ್ಷಂ ವಿಶ್ವವ್ಯಚಾಃ ||

(ಇಡೀ) ವಿಶ್ವವನ್ನು ವ್ಯಾಪಿಸುವುದು ಎಂಬುದರಿಂದ ‘ವಿಶ್ವವ್ಯಚಾಃ’ ಎನ್ನಲ್ಪಟ್ಟಿದೆ (ಗೋವು). ಅಂತರಿಕ್ಷವೆಂದೂ ಅರ್ಥವಿದೆ. (ಗೋವು ಅಂತರಿಕ್ಷದಂತೆ ಸರ್ವತ್ರ ಸಂಚರಿಸಿ, ವ್ಯಾಪಿಸಿರುವುದರಿಂದ ಅವಳನ್ನು ಅಂತರಿಕ್ಷಕ್ಕೆ ಹೋಲಿಸಿ ಸ್ತುತಿಸಲಾಗಿದೆ. ಆದ್ದರಿಂದ ೨ನೆಯ ಗೋವಿಗೆ ವಿಶ್ವವ್ಯಚಾಃ ಎಂದು ಸಂಬೋಧಿಸಿ, ಹೆಸರಿಸಿ, ಅಭಿಮಂತ್ರಿಸಲಾಗಿದೆ. ಅಥವಾ, ೨ನೆಯ ಕರುವಿನ ಗೋವು ಈಗಾಗಲೇ ಸರ್ವತ್ರ ಸಂಚರಿಸಿರಬಹುದಾಗಿದ್ದುದರಿಂದಲೂ ಈ ತುಲನೆ ಅನ್ವರ್ಥಕವೂ ಆದೀತು.)

೮. ಸಾ ವಿಶ್ವಕರ್ಮಾ—
ತೃತೀಯಾಮ್ ಅನುಮನ್ತ್ರಯತೇ— ಸಾ ವಿಶ್ವಕರ್ಮಾ - ಇತಿ ||

೩ನೆಯ (ಗೋವನ್ನು)ವಳನ್ನು ಈ ಮಂತ್ರದಿಂದ ಅನುಕ್ರಮವಾಗಿ ಮಂತ್ರಿಸಲಾಗುತ್ತದೆ.

ವಿಶ್ವಾನಿ ಕರ್ಮಾಣಿ ಕರ್ಮಫಲಾನಿ ಯಸ್ಯಾಂ ಸಾ ವಿಶ್ವಕರ್ಮಾ ದ್ಯುಲೋಕಃ ||

ವಿಶ್ವದ ಸಮಗ್ರ ಕರ್ಮಗಳೂ, ಕರ್ಮಫಲಗಳೂ ಯಾವಳಲ್ಲಿ ನೆಲೆಸಿವೆಯೋ,(ಯಾವಳನ್ನು ಆಧರಿಸಿವೆಯೋ), ಅವಳು “ವಿಶ್ವಕರ್ಮಾ”. ದ್ಯುಲೋಕ / ದೇವಲೋಕ / ಸ್ವರ್ಗವನ್ನಾಶ್ರಯಿಸಿಯೇ ಸಮಸ್ತ ವಿಶ್ವದ ಆಗುಹೋಗುಗಳು ನಡೆಯುವುದರಿಂದಲೂ, ಗೋವು ಅದಕ್ಕೆ ತುಲ್ಯವಾಗಿರುವುದರಿಂದಲೂ ಗೋವನ್ನು ಸ್ವರ್ಗತುಲ್ಯವೆಂದೂ, ವಿಶ್ವಕರ್ಮಾ ಎಂದೂ ಸ್ತುತಿಸಲಾಗಿದೆ / ಸಂಬೋಧಿಸಲಾಗಿದೆ.

೯. ಸಂಪೃಚ್ಯಧ್ವಮೃತಾವರೀರೂರ್ಮಿಣೀರ್ಮಧುಮತ್ತಮಾ ಮನ್ದ್ರಾ ಧನಸ್ಯ ಸಾತಯೇ—

ಪದ-ವಿಭಾಗಃ—

ಸಂ ಪೃಚ್ಯಧ್ವಮ್ ಋತಾವರೀಃ ಊರ್ಮಿಣೀಃ ಮಧುಮತ್ತಮಾಃ ಮನ್ದ್ರಾಃ ಧನಸ್ಯ ಸಾತಯೇ ||

ವಿನಿಯೋಗಃ—

ಗೋ-ದೋಹನ-ಸಂಕ್ಷಾಳನೀಯಾ ಅಪಃ ಪಯಸಿ ಆನಯತಿ— ಸಂಪೃಚ್ಯಧ್ವಮ್ ಇತಿ ಗಾಯತ್ರ್ಯಾ ||

ಗಾಯತ್ರೀಚ್ಛಂದಸ್ಸಿನಲ್ಲಿರುವ (೮ ಅಕ್ಷರದ ೩ಪಾದಗಳ ಒಟ್ಟು ೨೪ ಅಕ್ಷರಗಳ ಛಂದಸ್ಸು ಗಾಯತ್ರೀ) ಈ ಮಂತ್ರವನ್ನು ಪಠಿಸುತ್ತಾ ಗೋವಿನ ಹಾಲ್ಗರೆಯುವ ಆರಂಭದಲ್ಲಿ ಕ್ಷಾಲನ (ತೊಳೆಯುವ, ಕೊಳೆ ಕಳೆಯುವ) ಸಾಮರ್ಥ್ಯವಿರುವ ಜಲವನ್ನು ಹಾಲಿನೊಂದಿಗೆ ಬೆರೆಸಲಾಗುತ್ತದೆ.

ವಿವರಣಮ್—

ಹೇ ಋತಾವರೀಃ !— ಎಲೈ ಋತಾವರಿಯಾದವುಗಳೇ !, ಅರ್ಥಾತ್—

ಋತೇನ— ಋತಜ್ಞಾನದಿಂದ, ಸ್ಥಿರ/ಶಾಶ್ವತ/ಬದಲಾಗದ ತತ್ತ್ವದಿಂದ, ಪರಬ್ರಹ್ಮ / ಕಾರಣಬ್ರಹ್ಮದಿಂದ,

ಸತ್ಯೇನ— ತಾತ್ಕಾಲಿಕವಾಗಿರುವ/ ತೋರುವ/ ಅನುಭವವೇದ್ಯವಾದ ಜ್ಞಾನದಿಂದ, ಪ್ರಜಾಪತಿಬ್ರಹ್ಮ / ಕಾರ್ಯಬ್ರಹ್ಮದಿಂದ,

ಯಜ್ಞೇನ ವಾ— ಸೃಷ್ಟಿಯೆಂಬ / ಕರ್ಮವೆಂಬ ಯಜ್ಞದಿಂದ,

ತದ್-ವತ್ಯಃ— ಕೂಡಿದವುಗಳಾದ,

ಋತಸಮ್ಪಾದಿಕಾಃ - ಆಪಃ !— ಋತಸಂಪದಯುಕ್ತವಾದ ಜಲಕಣಗಳೇ ! ,

ಯೂಯಂ ಪಯಸಾ ಸಮ್ಪೃಚ್ಯಧ್ವಂ— ನೀವು ಹಾಲಿನೊಂದಿಗೆ ಸಂಪರ್ಕಹೊಂದಿರಿ / ಬೆರೆಯಿರಿ;

ಸಮ್ಪೃಕ್ತಾಃ ಭವತ |— ಮಿಶ್ರಿತವಾದವುಗಳಾಗಿ.

ಊರ್ಮಿಮತ್ತ್ವಾದಿಗುಣಯುಕ್ತಾಃ ಸತ್ಯಃ— ಅಲೆ / ತರಂಗಯುಕ್ತತೆಯೇ ಮುಂತಾದ ಗುಣಗಳಿಂದ ಕೂಡಿದವುಗಳಾಗಿ ,

ಸಮ್ಪೃಚ್ಯಧ್ವಮ್ |— (ಹಾಲಿನೊಂದಿಗೆ) ಬೆರೆಯಿರಿ.

ಏತೇಷಾಮ್— ಇವುಗಳ,

ಆಮನ್ತ್ರಿತತ್ವ-ಅಭಾವಾದ್— ಆಮಂತ್ರಣ / ಸಂಬೋಧನೆಯು ಇಲ್ಲದಿರುವುದರಿಂದ,

ಯಥಾಯಥಂ ಸ್ವರಾಃ - ಭವನ್ತಿ |—  (ಋತಾವರೀಃ, ಊರ್ಮಿಣೀಃ, ಮಧುಮತ್ತಮಾಃ ಇತ್ಯಾದಿಯಾಗಿ ಪ್ರಥಮಾವಿಭಕ್ತಿಯಲ್ಲಿ)ಇದ್ದಂತೆಯೇ ಶಬ್ದರೂಪಗಳು ಆಗುತ್ತವೆ. (ಸಂಬೋಧನೆಯಾದರೆ, ಹೇ ಎಂಬ ಪದಪ್ರಯೋಗವಿರುತ್ತಿತ್ತು.)

ಪಯಃಸಮ್ಪರ್ಕೇಣ ವಾ ಹಿ— ಹಾಲಿನ ಸಂಪರ್ಕದಿಂದಲಾದರೋ,

ಏತೇ— ಈ,

ಗುಣಾಃ - ಗುಣಗಳು,

ಅಪಾಮ್— ನೀರಿನ ಹನಿಗಳಿಗೆ,

ಉಪಜಾಯನ್ತೇ |— ಉಂಟಾಗುತ್ತವೆ.

ಮಹದ್ಭಿಃ ಊರ್ಮಿಭಿಃ— ದೊಡ್ಡ ಊರ್ಮಿ / ಅಲೆಗಳಿಂದ,

ತದ್ವತ್ಯಃ— ಕೂಡಿದವುಗಳು,

ಊರ್ಮಿಣ್ಯಃ |— ಊರ್ಮಿಣಿಗಳು.

ಮಧುಮತ್-ತಮಾಃ ಮಧುರತಮಾಃ |— ಅತ್ಯಂತ ಸಿಹಿಯಾದವುಗಳು.

ಮನ್ದ್ರಾಃ ಮಾದಯಿತ್ರ್ಯಃ |— ಹರ್ಷಕಾರಕವಾದವುಗಳು.

ಮದಿ ಸ್ತುತಿ-ಮೋದ-ಮದ-ಸ್ವಪ್ನ-ಕಾನ್ತಿ-ಗತಿಷು |— ಮಂದ್ರಾಃ - ಶಬ್ದದ ಮೂಲ “ಮದಿ” ಧಾತುವು ಪ್ರಶಂಸೆ, ಆನಂದ, ಮದ, ಕನಸು, ಕಾಂತಿ, ಗಮನ ಇತ್ಯಾದಿ ಅರ್ಥಗಳಲ್ಲಿ ಬಳಸಲ್ಪಡುವುದು.

ಕಿಮರ್ಥಂ ಸಮ್ಪೃಚ್ಯತ ಇತಿ ಆಹ— ಧನಸ್ಯ ಇತಿ |— ಯಾಕೆ (ಹಾಲಿನೊಂದಿಗೆ ನೀರು) ಸೇರಬೇಕೆಂದು ಹೇಳುತ್ತಾನೆ— ಸಂಪತ್ತಿಗಾಗಿ ಎಂದು.

ಧನಸ್ಯ ಸಾನ್ನಾಯ್ಯ-ಲಕ್ಷಣಸ್ಯ |— ಸೋಮರಸ ಮಿಶ್ರಿತ ಗೋಕ್ಷೀರ / ಸಾನ್ನಾಯ್ಯವೆಂಬ ಲಕ್ಷಣವಿರುವ ಧನಸಂಪಾದನೆಗಾಗಿ (ಬೆರೆಯಬೇಕು).
ಸಾತಯೇ ಲಾಭಾಯ |— ಅದರ ಲಭಿಸುವಿಕೆ / ಪ್ರಾಪ್ತಿಗಾಗಿ.

ಯುಷ್ಮತ್-ಸಮ್ಪರ್ಕೇ ಹಿ ತತ್-ಸಿದ್ಧಿಃ ಇತಿ ಭಾವಃ ||— ನಿಮ್ಮ (=ನೀರು-ಹಾಲುಗಳ) ಸಂಪರ್ಕದಿಂದ ಸಾನ್ನಾಯ್ಯವೆಂಬ ಯಜ್ಞಹವಿಸ್ಸು ಸಿದ್ಧಿಯಾಗುತ್ತದೆ ಎಂಬುದಿದರ ಭಾವ.

೧೦. ಸೋಮೇನ ತ್ವಾऽऽತನಚ್ಮೀಂದ್ರಾಯ ದಧಿ—

ದಧ್ನಾ ತನಕ್ತಿ— ಸೋಮೇನ ಇತಿ ||

ಸೋಮೇನ...ಎಂಬ ಈ ಮಂತ್ರದಿಂದ, ಗೋಕ್ಷೀರ-ಕುಶೋದಕ (ದರ್ಭೆಯ ಶಾಖಾಪವಿತ್ರದ ಸಂಪರ್ಕಹೊಂದಿದ ನೀರು - ಕುಶೋದಕ) ಸಂಮಿಶ್ರವನ್ನು ಸೋಮರಸದೊಂದಿಗೆ ಬೆರೆಸಿ ಹೆಪ್ಪುಗಟ್ಟಿಸಿ  ಇಂದ್ರನಿಗೋಸ್ಕರ, ಇಂದ್ರನಿಗತಿಪ್ರಿಯವಾದ ಹವಿರ್ದ್ರವ್ಯವಾದ ದಧಿ (ಮೊಸರು)ರೂಪೀ ಸಾನ್ನಾಯ್ಯವನ್ನು ತಯಾರಿಸುತ್ತಾನೆ ಯಜ್ಞದ ಸಂದರ್ಭದಲ್ಲಿ— ಎಂಬುದೀ ಮಂತ್ರದ ವಿನಿಯೋಗ / ಬಳಕೆ.

ಸೋಮಸದೃಶೇನ ದಧ್ನಾ ತ್ವಾ ತ್ವಾಮ್ ಆತನಚ್ಮಿ ಘನೀಕರೋಮಿ ( ಸೋಮಕ್ಕೆ ಸಮನಾದ ಮೊಸರಿನಿಂದ ನಿನ್ನನ್ನು ಹೆಪ್ಪುಗಟ್ಟಿಸುತ್ತೇನೆ.) | ಯದ್ವಾ ಸೋಮೇನ ಸದೃಶತ್ವಾತ್ ಸಾನ್ನಾಯ್ಯಮ್ ಏವ ಸೋಮಃ (ಅಥವಾ, ಗೋಕ್ಷೀರದಧಿಯೆಂಬ ಹವಿಸ್ಸು / ಸಾನ್ನಾಯ್ಯವು ಸೋಮರಸತುಲ್ಯವಾದುದರಿಂದ ಅದೇ ಸೋಮ.)| “ಸೋಮಃ ಖಲು ವೈ ಸಾನ್ನಾಯ್ಯಮ್ (ತೈ.ಬ್ರಾಹ್ಮಣ ೩.೨.೩)” ಇತಿ ಚ ಶ್ರೂಯತೇ (ಮತ್ತು “ಸೋಮವೇ ಹವಿಸ್ಸು / ಸಾನ್ನಾಯ್ಯರೂಪೀ ಹವಿಸ್ಸೇ ಸೋಮವಷ್ಟೆ?” ಎಂದಿದೆ ತೈತ್ತಿರೀಯ ಬ್ರಾಹ್ಮಣ.) | ತತ್ ಕರೋಮಿ ಇತಿ ತನಚ್ಮಿ (ಅದನ್ನು ಮಾಡುವೆ / ಹೆಪ್ಪುಗಟ್ಟಿಸುವೆ ಎಂಬುದಕ್ಕಾಗಿ ‘ತನಚ್ಮಿ’ ಎನ್ನಲಾಗಿದೆ.) | ತಞ್ಚೂ ಸಙ್ಕೋಚನೇ (ಸಂಕೋಚನಾರ್ಥಕವಾದ ‘ತಞ್ಚೂ’ ಎಂಬುದು ‘ತನಚ್ಮಿ’ ಎಂಬ ಕ್ರಿಯಾಪದದ ಮೂಲಧಾತು.)| ಕಿಮರ್ಥಮ್ ಇತಿ ಆಹ (ಯಾಕೆ ಹೆಪ್ಪುಗಟ್ಟಿಸುವೆನೆಂದು ಹೇಳುತ್ತಾನೆ)— ಇನ್ದ್ರಾಯ ಯಥಾ ತ್ವಂ ದಧಿ ಭವಸಿ ತಥಾ ತದರ್ಥಮ್ ಆತನಚ್ಮಿ (ಇಂದ್ರನಿಗಾಗಿ ಹೇಗೆ ನೀನು ಮೊಸರಾಗುವೆಯೋ ಹಾಗೆ ಮಾಡುವುದಕ್ಕಾಗಿ ಹೆಪ್ಪುಗಟ್ಟಿಸುವೆ.) | “ಐನ್ದ್ರಂ ದಧ್ಯಮಾವಾಸ್ಯಾಯಾಮ್ (ತೈ.ಸಂಹಿತಾ ೨.೫.೪)” ಇತಿ ಐನ್ದ್ರತ್ವಂ ದಧ್ನಃ (“ಅಮಾವಾಸ್ಯೆಯ ಮೊಸರು ಇಂದ್ರನಿಗೆ ಸಲ್ಲಬೇಕಾದದ್ದು” ಎಂಬ ತೈತ್ತಿರೀಯಸಂಹಿತೆಯ ಮಂತ್ರವು ಇಂತಹ ದಧಿಯು ಇಂದ್ರನ ಹವಿರ್ಭಾಗವೆಂಬುದಕ್ಕೆ ಆಧಾರ. ಬಹುಶಃ ಇದಕ್ಕಾಗಿಯೇ ಇರಬೇಕು ಅಮಾವಾಸ್ಯೆಯ ದಿನ ಮೊಸರು ಕಡೆದು ಬೆಣ್ಣೆ ತೆಗೆಯಬಾರದೆಂಬ ಸಂಪ್ರದಾಯ ಹಿಂದಿನಿಂದಲೇ ಇದೆ.) ||

೧೧. ವಿಷ್ಣೋ ಹವ್ಯಗ್ಂ ರಕ್ಷಸ್ವ—

ಉಪರಿ ನಿದಧಾತಿ— ವಿಷ್ಣೋ - ಇತಿ ||

     ಈ ಮಂತ್ರದಿಂದ ಗೋಕ್ಷೀರದಧಿಪಾತ್ರೆಯನ್ನು ಮೇಲೆ / ಎತ್ತರದಲ್ಲಿಡುತ್ತಾನೆ.

ಹೇ ವಿಷ್ಣೋ! ಸರ್ವಸ್ಯ ರಕ್ಷಕ! ಇದಂ ದುಗ್ಧಲಕ್ಷಣಂ ಹವ್ಯಂ ರಕ್ಷಸ್ವ | ಹವಮ್ ಅರ್ಹತಿ ಇತಿ ಹವ್ಯಂ, ಹೋಮಾರ್ಹಮ್ ||

    ಎಲೈ ವಿಷ್ಣುವೇ! ಸಕಲಲೋಕರಕ್ಷಕನೇ! ಈ ಹಾಲಿನಿಂದುತ್ಪನ್ನವಾದ ಹವಿಸ್ಸನ್ನು ರಕ್ಷಿಸು. ಹವನಕ್ಕೆ ಯೋಗ್ಯವಾದದ್ದು ಹವ್ಯ; ಹೋಮಿಸಲು ಅರ್ಹವಾದದ್ದು.

ಇತಿ ತೃತೀಯೋನುವಾಕಃ ||

ಇಲ್ಲಿಗೆ ಭಟ್ಟಭಾಸ್ಕರಕೃತ ತೈತ್ತಿರೀಯಸಂಹಿತಾಭಾಷ್ಯದ ಮೊದಲ ಪ್ರಪಾಠಕದ ಮೊದಲ ಪ್ರಶ್ನದ ಮೂರನೆಯ ಅನುವಾಕದ, ದಂಬೆಕೃಷ್ಣಮೂರ್ತಿಶಾಸ್ತ್ರಿಕೃತ ಕನ್ನಡಾನುವಾದವು ಸಂಪೂರ್ಣವು.

ಆಧ್ಯಾತ್ಮಿಕಭಾಷ್ಯ(ತೈ.ಸಂ.೧.೧.೩)

ಆನಂದವನ್ನು ಪ್ರಕಟಿಸುವಂತೆ ಯಜ್ಞವನ್ನು ಪ್ರಾರ್ಥಿಸುವುದು

    (೯ ಯಜುಸ್ಸುಗಳು / ಗದ್ಯ - ೧,೨,೩,೪,೫,೬,೭,೯ ಮತ್ತು ೧೦;  ೧ ಋಕ್ /ಪದ್ಯ— ೮ನೆಯ ಮಂತ್ರ- ಗಾಯತ್ರೀಚ್ಛನ್ದಸ್ಸಿನಲ್ಲಿದೆ.)

೧. ಶುಂಧಧ್ವಂ ದೈವ್ಯಾಯ ಕರ್ಮಣೇ ದೇವಯಜ್ಯಾಯೈ—

     ಹೇ ಪಂಚಕರ್ಮೇಂದ್ರಿಯಗಳು(ಮಾತು,ಕೈ,ಪಾದ,ಗುದ,ಗುಹ್ಯ),ಪಂಚಜ್ಞಾನೇಂದ್ರಿಯಗಳು(ಕಣ್ಣು,ಕಿವಿ,ಮೂಗು,ನಾಲಿಗೆ,ಚರ್ಮ),ಹಾಗೂ ಅಂತಃಕರಣಚತುಷ್ಟಯಗಳನ್ನು(ಮನ,ಚಿತ್ತ,ಬುದ್ಧಿ,ಅಹಂಕಾರ) ಹೊಂದಿರುವ ನಮ್ಮ ಶರೀರಗಳೇ(ಅನುಕ್ರಮವಾಗಿ ಸ್ಥೂಲ,ಸೂಕ್ಷ್ಮ,ಕಾರಣಶರೀರಗಳು)! ದೇವತೆಗಳನ್ನುದ್ದೇಶಿಸಿ ಮಾಡುವ ಶ್ರೇಷ್ಠತಮವಾದ ಕರ್ಮವಾದ ದೇವಯಜ್ಞಕ್ಕೋಸ್ಕರ / ಯಜ್ಞದಂತೆ ಪವಿತ್ರವಾದ ಕರ್ಮಗಳನ್ನು ಮಾಡುವುದಕ್ಕೋಸ್ಕರ, ಅಪವಿತ್ರ ಕರ್ಮಗಳು ನಮ್ಮಿಂದ ಆಗದಂತೆ, ನೀವು ಶುದ್ಧಿಹೊಂದಿರಿ.

೨. ಮಾತರಿಶ್ವನೋ ಘರ್ಮೋऽಸಿ ದ್ಯೌರಸಿ ಪೃಥಿವ್ಯಸಿ ವಿಶ್ವಧಾಯಾ ಅಸಿ ಪರಮೇಣ ಧಾಮ್ನಾ ದೃಗ್ಂಹಸ್ವ ಮಾಹ್ವಾಃ—

     ಎಲೈ ಪಂಚಭೂತಾತ್ಮಕವಾದ, ಸಕಲದೇವತಾಸಾನ್ನಿಧ್ಯವಾದ, ಪರಮಾತ್ಮನ ನಿವಾಸವೂ ಆಗಿರುವ ಶರೀರವೇ! ನೀನು, (ಮಾತರಿಶ್ವನಃ) ಪ್ರಾಣವಾಯುವಿನ, (ಘರ್ಮಃ ಅಸಿ) ಬೆವರಹನಿ (H2O / ತೇವಾಂಶ)ಗಳಿಂದ ಕೂಡಿರುವೆ / ಅವನ ಸಂಚಾರಸ್ಥಾನವಾಗಿರುವೆ / ಅವನ ಪ್ರಕಾಶದಿಂದ ಕೂಡಿರುವೆ, ಅವನಿಂದಾಗಿ ಜೀವಕಳೆಯಿಂದಿರುವೆ; “ಬ್ರಹ್ಮಾಂಡದಂತೆ ಪಿಂಡಾಡ” ಎಂಬ ತತ್ತ್ವದಂತೆ ನೀನು, (ದ್ಯೌಃ ಅಸಿ) ದ್ಯುಲೋಕ / ಅಂತರಿಕ್ಷ / ಗ್ರಹ-ನಕ್ಷತ್ರಾದಿಗಳ ಬೆಳಕಿನಿಂದ ಕೂಡಿರುವ ಲೋಕವಾಗಿರುವೆ / ನಿನ್ನೊಳಗೂ ಅಂತರಿಕ್ಷದಂತೆ ಅವಕಾಶವಿದೆ, ವಿದ್ಯುತ್ಕಾಂತೀಯತರಂಗಗಳಿವೆ;  ನೀನು (ಶರೀರವು) (ಪೃಥಿವೀ ಅಸಿ) ಪೃಥಿವಿಯೂ ಹೌದು / ಪೃಥಿವೀತತ್ತ್ವಜಾತ ಚರ್ಮ,ಮಾಂಸಾದಿಗಳಿಂದ ಕೂಡಿರುವೆ / ಭೂಮಿಯ ಮೇಲಿನ ಜೀವಿಗಳಿಗೆ ಭೂಮಿಯೇ ಆಧಾರವಾಗಿರುವಂತೆ, ಇಂದ್ರಿಯಸಹಿತವಾದ ಸೂಕ್ಷ್ಮಶರೀರಕ್ಕೆ ಹಾಗೂ ಜೀವಾತ್ಮಕ್ಕೆ ನೀನು ಪೃಥಿವಿಯಂತೇ ಆಧಾರಭೂತವಾಗಿರುವೆ / ನೆಲೆ / ಆವಾಸಸ್ಥಾನವಾಗಿರುವೆ; (ಪರಮೇಣ ಧಾಮ್ನಾ ವಿಶ್ವಧಾಯಾ ಅಸಿ) ಹೇ ಶರೀರವೇ! ನೀನು ಪರಮಧಾಮವಾದ ಭಗವಂತನ ಮೂಲಸ್ಥಾನದಿಂದ ಬಂದಿರುವುದರಿಂದ (ಸೃಷ್ಟಿಯೆಲ್ಲವೂ ಭಗವಂತನಿಂದಲೇ ಆಗಿದೆಯಷ್ಟೆ?) ಆ ಭಗವಂತನ ಗುಣಗಳಲ್ಲೊಂದಾದ ವಿಶ್ವಧಾರಣಾಶಕ್ತಿಯ ಒಂದಂಶ ನಿನ್ನಲ್ಲೂ ಇದೆ. (ದೃಂಹಸ್ವ) ನೀನು ಚೆನ್ನಾಗಿ ಸುದೃಢವಾಗಿ ವರ್ಧಿಸು, ಗಟ್ಟಿಮುಟ್ಟಾಗಿರು. (ಮಾ ಹ್ವಾಃ) ಹೇ ಶರೀರವೇ! ನೀನು ಬೇಗನೇ ಜೀರ್ಣ / ಶಿಥಿಲವಾಗದಿರು. ತನ್ಮೂಲಕ ಜೀವಾತ್ಮನನ್ನು ದೀರ್ಘಕಾಲ, ನೂರಾರು ವರ್ಷಗಳ ಕಾಲ ನಿನ್ನಲ್ಲೇ ಧರಿಸಿಕೋ. ನನಗೆ ದೀರ್ಘಾಯುವನ್ನುಂಟುಮಾಡು.

೩. ವಸೂನಾಂ ಪವಿತ್ರಮಸಿ ಶತಧಾರಂ ವಸೂನಾಂ ಪವಿತ್ರಮಸಿ ಸಹಸ್ರಧಾರಗ್ಂ—

     ಹೇ ಶರೀರವೇ! ಸಕಲ ಸಂಪತ್ತುಗಳಲ್ಲಿ, ದೇವದತ್ತವಾದ, ಚತುರ್ವಿಧಪುರುಷಾರ್ಥಸಾಧನೆಗೆ ಅಗತ್ಯವಾದ, ಏನನ್ನೇ ಆದರೂ ಸಾಧಿಸಬೇಕಾದರೆ ಅವಶ್ಯವಾದ, ಪುಣ್ಯಕರ್ಮಗಳನ್ನೂ, ನಿಷ್ಕಾಮಕರ್ಮವನ್ನೂ, ತಪವನ್ನೂ— ಹೀಗೆ ನೂರಾರು ಶ್ರೇಷ್ಠಕಾರ್ಯಗಳನ್ನಾಚರಿಸಲು ಅತ್ಯವಶ್ಯವಾದುದರಿಂದ  ಆರೋಗ್ಯಪೂರ್ಣವಾಗಿರುವ ನೀನು (ಶರೀರವು) ಅತ್ಯಂತ ಪವಿತ್ರ (ಶತಧಾರಂ ವಸೂನಾಂ ಪವಿತ್ರಮ್ ಅಸಿ). ಅಷ್ಟೇ ಅಲ್ಲದೆ, ಪರಮಾತ್ಮನ ಒಂದಂಶವಾದ ಜೀವಾತ್ಮನನ್ನು ತನ್ನೊಳಗೆ ಧರಿಸಿರುವುದರಿಂದಲೂ, ಸಾವಿರಾರು ವಿವಿಧ ಕಾರಣಗಳಿಂದಲೂ, ಸಾವಿರಾರು ರೂಪದ ವಿವಿಧ ಸಂಪತ್ತುಗಳಿಗಿಂತಲೂ ದೇಹಸಂಪತ್ತು  ಪಾವನತಮವಾದುದು (ಸಹಸ್ರಧಾರಂ ವಸೂನಾಂ ಪವಿತ್ರಮ್ ಅಸಿ).

೪. ಹುತಃ ಸ್ತೋಕೋ ಹುತೋ ದ್ರಪ್ಸೋऽಗ್ನಯೇ ಬೃಹತೇ ನಾಕಾಯ ಸ್ವಾಹಾ ದ್ಯಾವಾಪೃಥಿವೀಭ್ಯಾಗ್ಂ—

        ಈಗ ಪವಿತ್ರೀಕೃತ ಪಂಚಕರ್ಮೇಂದ್ರಿಯಗಳು ಮತ್ತು ಪಂಚಜ್ಞಾನೇಂದ್ರಿಯಗಳು ಹಾಗೂ ಅಂತಃಕರಣಚತುಷ್ಟಯಗಳಿಂದ ಕೂಡಿದ ಈ ಶರೀರದ ಮೂಲಕ ದೈವೀ ಆನಂದವಾದ ಸೋಮದ ಕಿರುಹನಿ (ಸ್ತೋಕಃ) ಹಾಗೂ ದಪ್ಪಹನಿ / ತುಂತುರು / ತೊರೆ / ಧಾರೆ / ಪ್ರವಾಹವು (ದ್ರಪ್ಸಃ)— ಅರ್ಥಾತ್ ದೈವೀ ಆನಂದದ ಪ್ರವಾಹಸೂಚಕ ಸೋಮಲತೆಯ ರಸ ಅಥವಾ ಸಾಕ್ಷಾತ್ ಧ್ಯಾನವೇದ್ಯವಾದ ಬ್ರಹ್ಮಾನಂದ (ದೊಡ್ಡ ಹನಿ) ಹಾಗೂ ಭಗವದ್ದತ್ತವಾದ ಲೌಕಿಕಾನಂದದಾಯಕವಾದ ಹವಿಸ್ಸು (ಕಿರು ಆನಂದ)— ಇವೆರಡನ್ನೂ ದಯಪಾಲಿಸಿದ ಭಗವಂತನಿಗೇ ಪುನಃ ಇವು ಸಮರ್ಪಿತವಾಗಿವೆ . ಬೃಹದಾಕಾರದ ಜಗತ್ತಾಗಿ ರೂಪಾಂತರಗೊಂಡಿರುವ ಪರಬ್ರಹ್ಮ ಭಗವಂತನಿಗೆ ಸಮರ್ಪಿತವಾಗಿವೆ (ಬೃಹತೇ ಹುತಃ). ಸುಖಸೂಚಕ ಸ್ವರ್ಗಲೋಕಕ್ಕೂ ಸಮರ್ಪಿತವಾಗಿವೆ (ನಾಕಾಯ ಹುತಃ). ಬೃಹತ್ / ಪರಮ / ಚರಮ / ಬ್ರಹ್ಮಾನಂದವೆನಿಸಿದ ಆತ್ಯಂತಿಕ ಸುಖದ / ನಾಶರಹಿತ ಶಾಶ್ವತಸುಖದ ಸ್ಥಿತಿಯಾದ ಮುಕ್ತಿಗಾಗಿಯೂ ಸಮರ್ಪಿತವಾಗಿವೆ (ಬೃಹತೇ ನಾಕಾಯ ಹುತಃ). ಪರಮಾತ್ಮನ ವ್ಯಕ್ತಮಾಧ್ಯಮವಾದ “ಯಜ್ಞೋ ವೈ ಶ್ರೇಷ್ಠತಮಂ ಕರ್ಮ” ಎಂದು ಶ್ರುತಿಗಳೇ ಹೊಗಳಿದ ಯಜ್ಞಾಗ್ನಿಗೂ ಸಮರ್ಪಿತವಾಗಿವೆ (ಅಗ್ನಯೇ ಹುತಃ) . ಲೌಕಿಕವಾಗಿ ಕಾಣಿಸುವ ಪಂಚಭೂತಗಳಲ್ಲೊಂದಾದ, ಯಜ್ಞಕುಂಡದಲ್ಲಿರುವ ಯಜ್ಞಾಗ್ನಿಯ ಮೂಲಕ ನಮ್ಮ ಲೌಕಿಕ-ಅಲೌಕಿಕ ಆನಂದಾದಿ ಸಂಪತ್ತುಗಳು ಅಲೌಕಿಕ ನಾಕ / ಸ್ವರ್ಗದಲ್ಲಿರುವ (ನಾಕಾಯ) ಬೃಹತ್ ಸ್ವರೂಪದ (ಬೃಹತೇ) ಅಗ್ನಿದೇವನಿಗೆ (ಅಗ್ನಯೇ) ದತ್ತವಾಗಿವೆ / ಕೊಡಲ್ಪಟ್ಟಿವೆ / ಅರ್ಪಿಸಲ್ಪಟ್ಟಿವೆ (ಹುತಃ). ಅವನಿಗೆ ಇದೋ ಗೌರವಾದರಪೂರ್ವಕ ಸ್ವಾಗತ / ಆಹ್ವಾನ (ಸ್ವಾಹಾ— ಸುಷ್ಠು ಆಹೂಯಂತೇ ದೇವಾ ಅನೇನ ಇತಿ— ದೇವತೆಗಳು ಚೆನ್ನಾಗಿ ಆಹ್ವಾನಿಸಲ್ಪಡುತ್ತಾರೆ ಈ ಪದದಿಂದ ಎಂಬುದರಿಂದಾಗಿ “ಸ್ವಾಹಾ”).
     ದ್ಯಾವಾ / ದ್ಯುಲೋಕ / ಸ್ವರ್ಗ / ದೇವತೆಗಳ ಲೋಕಕ್ಕೂ, ಭೂಲೋಕಕ್ಕೂ ಭಗವಂತನಿಗೆ ಸುಸ್ವಾಗತ (ದ್ಯಾವಾ-ಪೃಥಿವೀಭ್ಯಾಗ್ಂ ಸ್ವಾಹಾ).

೫. ಸಾ ವಿಶ್ವಾಯುಃ—

     ಅವಳು ( ದ್ಯಾವಾಪೃಥಿವಿಯು) ವಿಶ್ವದ—  ಆಯುಸ್ಸು, ಪ್ರಾಣ, ಔಷಧ, ಆಹಾರ, ಚೈತನ್ಯಶಕ್ತಿ, ಆಯುಸ್ಸಿನ / ಉಳಿವಿನ ದೀರ್ಘತ್ವಕ್ಕೆ / ದೀರ್ಘಾಯುಷ್ಯಕ್ಕೆ ಕಾರಣ, ವೈದ್ಯೆ, ಆರೋಗ್ಯ, ಗತಿಶೀಲವಾದುದು.
     ಸ್ವರ್ಗ / ದ್ಯಾವಾಲೋಕವು ಜಗತ್ತಿನ ಆಗುಹೋಗುಗಳನ್ನು ನಿಯಂತ್ರಿಸುವುದರಿಂದ, ವಿಶ್ವದ ಸಕಲರ ಪ್ರಾಣರೂಪೀ ಚೈತನ್ಯವೂ, ತನ್ಮೂಲಕ ಆಯುಷ್ಯವೂ ದೇವಲೋಕವೇ ಆಗಿದೆ. ಅಂತೆಯೇ, ಜಗಕ್ಕೆ ಮಳೆ-ಬೆಳೆಗಳನ್ನು ಅನುಗ್ರಹಿಸಿ ಆಹಾರವನ್ನೂ, ತನ್ಮೂಲಕ ಜೀವಿಗಳಿಗೆ ಬದುಕುವ ಚೈತನ್ಯವನ್ನೂ, ದೇವವೈದ್ಯರುಗಳಾದ ಅಶ್ವಿನೀದೇವತೆಗಳ ಅನುಗ್ರಹದಿಂದ ಔಷಧಿರೂಪೀ ವನಸ್ಪತಿಗಳ ಮೂಲಕ ದೀರ್ಘಾಯುಷ್ಯವನ್ನೂ, ಆರೋಗ್ಯವನ್ನೂ, ಸದಾ ಜೀವಿಗಳಿಗೆ ಗಮನಶೀಲತೆಯನ್ನೂ ದಯಪಾಲಿಸುವುದು ಸ್ವರ್ಗದ ದೇವತೆಗಳ ಅನುಗ್ರಹ. ಆದ್ದರಿಂದ ದೇವಲೋಕವು ವಿಶ್ವಾಯುವು.
      ಇನ್ನು ಪೃಥಿವಿಯಂತೂ ಸಕಲ ಜೀವರ ಆಧಾರಭೂತವಾಗಿದ್ದು, ಜೀವಿಗಳ ಅನ್ನಾಹಾರೌಷಧಾದಿ ಸಕಲಾವಶ್ಯತೆಗಳನ್ನು ಪೂರೈಸಿ, ಅವುಗಳನ್ನು ಸದಾ ಚೈತನ್ಯಶೀಲರನ್ನಾಗಿಡುವ ಕ್ಷಮಾಶೀಲತೆಯುಳ್ಳದ್ದಾದ್ದರಿಂದ ಪೃಥಿವಿಯೂ ಕೂಡ ವಿಶ್ವಕ್ಕೆ ದೀರ್ಘಾಯುವನ್ನೀವ ಪ್ರಕೃತಿಮಾತೆ / ಭೂದೇವಿ ಸ್ವರೂಪಳು.

೬. ಸಾ ವಿಶ್ವವ್ಯಚಾಃ—

     ಅವಳು (ದ್ಯಾವಾಪೃಥಿವಿಯು) ವಿಶ್ವದೆಲ್ಲೆಡೆ ವಿಸ್ತಾರವಾಗಿ ಹಬ್ಬಿರುವವಳು / ಸರ್ವವ್ಯಾಪಿ.
      ದೇವಲೋಕದ ಪ್ರಭಾವವು ವಿಶ್ವದೆಲ್ಲೆಡೆ ಹಬ್ಬಿದೆ. ಭೂಮಿಯ ಪ್ರಭಾವವೂ ವಿಶ್ವದ ಸಕಲರ ಮೇಲೂ ಆಗುವುದು. ಹೀಗೆ, ಇವೆರಡರ ಕೀರ್ತಿಯೂ ಜಗದಗಲ ವ್ಯಾಪ್ತವಾಗಿದೆ.

೭. ಸಾ ವಿಶ್ವಕರ್ಮಾ—

       ಅವಳು (ದ್ಯಾವಾಪೃಥಿವಿಯು) ವಿಶ್ವ-ಕರ್ಮಿಯೂ ಆಗಿದ್ದಾಳೆ.
     ದೇವಲೋಕವು ವಿಶ್ವದ ಆಗುಹೋಗುಗಳ ಕರ್ಮವನ್ನು ನಿಯಂತ್ರಿಸುವುದರಿಂದ ವಿಶ್ವಕರ್ಮಾ ಎನಿಸಿರುವುದು. ಪೃಥ್ವಿಯು ಋಷಿಮುನಿಗಳ, ಸಾಧುಸಂತರ, ಭಗವದವತಾರಸ್ವರೂಪರ, ಪುಣ್ಯಕ್ಷೇತ್ರಾದಿಗಳ ನೆಲೆವೀಡಾಗಿದ್ದು, ಇದರಿಂದಾಗಿಯೇ ಸಕಲರ ಉದ್ಧಾರವಾಗುವುದರಿಂದ ಭೂಮಿಯೂ ವಿಶ್ವಕರ್ಮಿಣಿ.

೮. ಸಂ ಪೃಚ್ಯಧ್ವಮೃತಾವರೀರೂರ್ಮಿಣೀರ್ಮಧುಮತ್ತಮಾ ಮಂದ್ರಾ ಧನಸ್ಯ ಸಾತಯೇ—

ಪದವಿಭಾಗಃ— ಸಂ ಪೃಚ್ಯಧ್ವಮ್ ಋತಾವರೀಃ ಊರ್ಮಿಣೀಃ ಮಧುಮತ್-ತಮಾಃ ಮಂದ್ರಾ ಧನಸ್ಯ ಸಾತಯೇ

ವಿವರಣೆ— ಎಲೈ ಶರೀರಗಳೇ! ಎಲೈ ಶರೀರಿಗಳಾದ ಜೀವಿಗಳೇ! ಎಲೈ ಮಾನವರೇ! ನೀವು ದೈವೀ ಆನಂದವೆಂಬ (ಬ್ರಹ್ಮಾನಂದ / ಪರಮಾನಂದ / ಶಾಶ್ವತಾನಂದ) ಪರಮಸತ್ಯದೊಡನೆ (ಋತಾವರೀಃ) ಸಂಪೃಕ್ತತೆಯನ್ನು / ಏಕತೆಯನ್ನು ಹೊಂದಿರಿ (ಸಂಪೃಚ್ಯಧ್ವಮ್). ಆ ಮುಕ್ತಿಸ್ವರೂಪೀ ಆನಂದವು / ಜೀವನ್ಮುಕ್ತತೆಯ ಆನಂದವು ಮಧುರತಮವಾದ (ಮಧುಮತ್ತಮಾ) ಅಲೆಗಳ ರೂಪದಲ್ಲಿ (ಊರ್ಮಿಣೀಃ) ಇರುವುದು. ಆಧ್ಯಾತ್ಮಿಕ ಆನಂದವೆಂಬ ಸಂಪತ್ತನ್ನು ಸಂಪಾದಿಸುವುದಕ್ಕೋಸ್ಕರ, ಎಲೈ ಶರೀರಧಾರಿಗಳಾದ ಜೀವರುಗಳೇ! ನೀವುಗಳು ಪರಮ ಸತ್ಯವಾದ ಭಗವತ್-ತತ್ತ್ವದೊಡನೆ ಮಾನಸಿಕವಾಗಿ ಧ್ಯಾನ / ಭಕ್ತಿ / ನಾಮ ಸಂಕೀರ್ತನೆ / ಯಜ್ಞ / ಉಪಾಸನೆ / ಪ್ರಾರ್ಥನೆ / ಭಜನೆ / ಕರ್ಮಯೋಗ ಮುಂತಾದವುಗಳ ಮೂಲಕ ಐಕ್ಯವನ್ನು ಹೊಂದಿರಿ.

೯. ಸೋಮೇನ ತ್ವಾऽऽತನಚ್ಮೀಂದ್ರಾಯ ದಧಿ—

ಪದವಿಭಾಗ— ಸೋಮೇನ ತ್ವಾ (ತ್ವಾಮ್) ಆತನಚ್ಮಿ ಇಂದ್ರಾಯ ದಧಿ
ವಿವರಣೆ— ಇಂದ್ರನ ಪ್ರೀತ್ಯರ್ಥವಾಗಿ / ಪ್ರಸನ್ನತೆಗಾಗಿ ನಾನು (ಇಂದ್ರಾಯ) ನಿನ್ನನ್ನು (ತ್ವಾ) (ದ್ಯಾವಾಪೃಥಿವಿಯನ್ನು) ದೈವೀ ಆನಂದವಾದ ಸೋಮನೊಂದಿಗೆ (ಸೋಮೇನ)— ಬೆಣ್ಣೆ, ತುಪ್ಪದಂಥ ರುಚಿಕರ ಪದಾರ್ಥವನ್ನು ಪಡೆಯಲು ಹಾಲನ್ನು ಹೆಪ್ಪುಗಟ್ಟಿಸಿ ಮೊಸರು ಮಾಡುವಂತೆ— ಬೆರೆಸಿ ಹೆಪ್ಪುಗಟ್ಟಿಸುವೆನು (ಆತನಚ್ಮಿ). ದ್ಯಾವಾಪೃಥಿವಿಗಳಲ್ಲಿ ಸೋಮನೆಂಬ ದೈವೀ ಆನಂದವು ಎಲ್ಲೆಡೆ ಪಸರಿಸಿದಾಗ, ಸಕಲ ಜೀವರೂ ದೈವೀ ಆನಂದವನ್ನು ಅನುಭವಿಸಿದಾಗ, ವಿಶ್ವದ ಸಮಷ್ಟಿ ಪ್ರಜ್ಞೆ / ದೈವೀ ಮನಸ್ತತ್ತ್ವದ ಅಧಿದೇವತೆಯಾದ ಇಂದ್ರನು ಸಂತುಷ್ಟನಾಗುವನು. ಆಗ, ಇಂದ್ರನು ಸಕಲ ದೇವತಾಗಣಗಳೊಂದಿಗೆ ಸೇರಿ ದ್ಯಾವಾಪೃಥಿವಿಯನ್ನು ಆಧರಿಸುವನು (ದಧಿ); ದೈವೀ ಆನಂದದ ಪ್ರಜ್ಞೆಯನ್ನೂ ವಿಶ್ವದಲ್ಲಿ ಎತ್ತಿ ಹಿಡಿದು ಸ್ಥಿರವಾಗಿಸುವನು. ಅದಕ್ಕಾಗಿಯೇ ನಾನು ಜಗದಗಲ ಸುಖ-ಶಾಂತಿ ಹಬ್ಬಲೆಂದೇ ಸೋಮರೂಪೀ ದೈವೀ ಆನಂದವನ್ನು ಎಲ್ಲರಿಗೂ ಹಬ್ಬಿಸುವೆನು; “ಲೋಕಾಃ ಸಮಸ್ತಾಃ ಸುಖಿನೋ ಭವಂತು” ಎಂಬ ದೈವೀ ಸಂಕಲ್ಪ ಹಾಗೂ ವಿಶ್ವಕಲ್ಯಾಣದ ಪ್ರಾರ್ಥನೆಯು ಇಂದ್ರನ ಹಾಗೂ ತನ್ಮೂಲಕ ಲೋಕದ ಸುಖ-ಸಂತೋಷಗಳಿಗೆ ಕಾರಣವಾಗುವುದು.

೧೦. ವಿಷ್ಣೋ ಹವ್ಯಗ್ಂ ರಕ್ಷಸ್ವ—

ಓ ವಿಷ್ಣುವೇ! ಹವಿಸ್ಸನ್ನು ರಕ್ಷಿಸು. ಇಲ್ಲಿ “ಯಜ್ಞೋ ವೈ ವಿಷ್ಣುಃ” (ತೈ.ಸಂ. ೧.೭.೪.೯)— ಯಜ್ಞವೇ ವಿಷ್ಣುವೂ, ವಿಷ್ಣುವೇ ಯಜ್ಞವೂ ಆಗಿರುವುದರಿಂದ, ಎಲೈ ಯಜ್ಞವೇ! ನೀನು ಯಜ್ಞಕ್ಕೆ ಬೇಕಾದ ಹವಿಸ್ಸುಗಳಾದ ನಮ್ಮ ಸಕಲ ಸಂಪತ್ತುಗಳನ್ನು ಕಾಪಾಡು— ಎಂದು ಯಜ್ಞರೂಪೀ ವಿಷ್ಣುವನ್ನೇ ಪ್ರಾರ್ಥಿಸಲಾಗಿದೆ. ಇಲ್ಲಿ ಹವಿಸ್ಸು— ಲೌಕಿಕಸಂಪತ್ತು ಹಾಗೂ ಆಧ್ಯಾತ್ಮಿಕ ಸಂಪತ್ತು, ಲೌಕಿಕ ಸುಖ, ಪಾರಲೌಕಿಕ ಸುಖ, ಪ್ರೇಯಸ್ಸು, ಶ್ರೇಯಸ್ಸು, ಲೌಕಿಕ ಸಂತೋಷ, ದೈವಿಕ ಆನಂದ / ಆತ್ಮಾನಂದ / ಪರಮಾನಂದ / ಜೀವನ್ಮುಕ್ತ ಸ್ಥಿತಿ— ಇವೆಲ್ಲವೂ ಆಗಿದೆ. ಇವೆಲ್ಲವನ್ನೂ ರಕ್ಷಿಸು ಎಂಬುದಾಗಿ, ತನ್ಮೂಲಕ ಆನಂದವನ್ನು ಜಗದಗಲ ಪ್ರಕಟಿಸಿ ವಿಶ್ವಕಲ್ಯಾಣವನ್ನು ಉಂಟುಮಾಡುವಂತೆ ಬಹಿರ್ಯಜ್ಞವನ್ನು ಅಥವಾ ಸಕಲರ ಅಂತರ್ಯಾಮಿಯೂ ಜಗದ್ವ್ಯಾಪಿಯೂ ಆದ ಪರಮಾತ್ಮನನ್ನು ಪ್ರಾರ್ಥಿಸಲಾಗಿದೆ.



     

       

Comments

Popular posts from this blog

ಲಘುನ್ಯಾಸದ ಬೆಳಕಿನಲ್ಲಿ ಶಿವದರ್ಶನ ೧೩—ಲಘುನ್ಯಾಸಮನ್ತ್ರಾರ್ಥವಿಚಾರ ೮

ಲಘುನ್ಯಾಸದ ಬೆಳಕಿನಲ್ಲಿ ಶಿವದರ್ಶನ ೯—ಲಘುನ್ಯಾಸಮಂತ್ರಾರ್ಥವಿಚಾರ ೪

ತೈತ್ತಿರೀಯಕೃಷ್ಣಯಜುಸ್ಸಂಹಿತಾಭಾಷ್ಯಾರ್ಥಸಮುಚ್ಚಯಃ ೧.೧.೪