ಲಘುನ್ಯಾಸದ ಬೆಳಕಿನಲ್ಲಿ ಶಿವದರ್ಶನ ೧—ಪ್ರಸ್ತಾವನಾ
ಶ್ರೀಭಗವತ್ತತ್ತ್ವರತ್ನಾಕರಃ ಭಾಗ ೧
ಲಘುನ್ಯಾಸಮನ್ತ್ರಾರ್ಥವಿಸ್ತಾರಃ
ಶೋಧನೆ, ಸಂಪಾದನೆ, ಸಂಗ್ರಹಣೆ ಮತ್ತು ಸಂರಚನೆ—
ಡಾ || ಕೃಷ್ಣಮೂರ್ತಿ ಶಾಸ್ತ್ರೀ, ದಂಬೆ, ಪುಣಚ
ಲೇಖಕನ ಪ್ರಸ್ತಾವನೆ
ಶ್ರೀಭಗವಂತನ ಕೃಪೆ ಹಾಗೂ ಪ್ರೇರಣೆಗಳಿಂದ “ಶ್ರೀಭಗವತ್ತತ್ತ್ವರತ್ನಾಕರಃ” (ಶ್ರೀಭಗವತ್-ತತ್-ತ್ವ-ರತ್ನ-ಆಕರಃ) ಎಂಬ ಈ ಕೃತಿಸಂಗ್ರಹವನ್ನು ಭಗವಂತನಿಗೇ ಅರ್ಪಿಸಿ, ಭಗವಂತನದೇ ಒಂದು ರೂಪವಾದ ನಿಮ್ಮ ಕರಕಮಲಗಳಲ್ಲಿಡುತ್ತಿದ್ದೇನೆ. ಇದು ಸಕಲ ಸಿರಿಸಂಪದಗಳೊಡೆಯನಾದ (ಶ್ರೀ) ಪರಮಾತ್ಮನ (ಭಗವತ್) ಬಗೆಗಿನ ವಿಚಾರ-ಲೀಲೆಗಳ ಸಾರ ಹಾಗೂ ಭಗವಂತನೇ ಅನುಗ್ರಹಿಸಿದ ಜ್ಞಾನದಿಂದ ಪ್ರಾಜ್ಞರು ನಮಗೆ ನೀಡಿರುವ ಸನಾತನ ಸದ್ವಿಚಾರಗಳ (ತತ್ತ್ವರತ್ನ) ಸಂಗ್ರಹ (ಆಕರಃ). ಈ ಕೃತಿಯಲ್ಲಿ ಸನಾತನ ಭಾರತೀಯ ಸಂಸ್ಕೃತಿ-ಪರಂಪರೆಗಳ ಆಧಾರಸ್ತಂಭಗಳಾದ ವೇದೋಪನಿಷತ್ತುಗಳು, ವೇದದ ಷಡಂಗಗಳು, ಸ್ಮೃತಿ-ಉಪಸ್ಮೃತಿಗಳು, ದರ್ಶನಗಳು, ಆಗಮ-ತಂತ್ರಶಾಸ್ತ್ರಗಳು, ಹದಿನೆಂಟು ಪುರಾಣಗಳು, ಉಪಪುರಾಣಗಳು, ರಾಮಾಯಣ-ಮಹಾಭಾರತ-ಗುರುಚರಿತ್ರೆ ಮುಂತಾದ ಇತಿಹಾಸಗ್ರಂಥಗಳು, ದ್ವೈತ-ಅದ್ವೈತಾದಿಸಿದ್ಧಾಂತಗಳು, ಗುರು-ದೇವತಾಸ್ತೋತ್ರಗಳು, ನೀತಿ-ಸದಾಚಾರಾದಿ ಸುಭಾಷಿತಗಳು— ಇತ್ಯಾದಿಗಳ ಸಾರಸರ್ವಸ್ವವು ಅನುಕ್ರಮವಾಗಿ,
(೮)ವೈದಿಕಸಂಹಿತಾ,
(೭)ವೇದಾಂಗಸಂಹಿತಾ, (೫)ಸ್ಮೃತಿಸಂಹಿತಾ, (೯)ದರ್ಶನಸಂಹಿತಾ, (೬)ತನ್ತ್ರಾಗಮಸಂಹಿತಾ, (೪)ಪುರಾಣಸಂಹಿತಾ, (೩)ಇತಿಹಾಸಸಂಹಿತಾ, (೧೦)ಸಿದ್ಧಾಂತಸಂಹಿತಾ, (೧)ಸ್ತೋತ್ರಸಂಹಿತಾ ಹಾಗೂ
(೨)ಸುಭಾಷಿತಸಂಹಿತಾ ಎಂಬ ವಿಭಾಗಗಳಲ್ಲಿ, ಅವುಗಳೊಳಗಿನ ವಿವಿಧ ಕಾಂಡಗಳಲ್ಲಿ ಉಲ್ಲೇಖಿಸಲ್ಪಟ್ಟಿರುವುದು. ಅಲ್ಲದೆ, (೧೧)ಸಂಕೀರ್ಣಸಂಹಿತಾಭಾಗದಲ್ಲಿ ಇತರ ಆಧ್ಯಾತ್ಮಿಕ, ಧಾರ್ಮಿಕ ಕೃತಿಗಳನ್ನು ನೀಡಲಾಗಿದೆ.
ನಮ್ಮೆಲ್ಲರ ಬಯಕೆಯು ಎಂದಿಗೂ ಬತ್ತದ ಸುಖ. ಅಲ್ಲವೇ? ಇದನ್ನೇ ಹಿಂದಿನವರು “ಮೋಕ್ಷ” ಎಂದರು. ಕುಟುಂಬವ್ಯವಸ್ಥೆಯಲ್ಲಿರಲಿ, ಸಂನ್ಯಾಸಿಯಾಗಿರಲಿ, ಸಕಲ ಮೋಹ-ಬಂಧನಗಳಿಗೆ ಮನಸ್ಸನ್ನು ಕೊಡದೆ, ಯಾವುದೇ ಅಪೇಕ್ಷೆಯಿಲ್ಲದೆ, ಏನಾದರೂ, ವಿಚಲಿತರಾಗದೆ ಸ್ಥಿರಬುದ್ಧಿಯಿಂದ ಕರ್ತವ್ಯಕರ್ಮಗಳ ನಿರ್ವಹಣೆಯೇ ಜೀವನ್ಮುಕ್ತತೆ. ಇದೇ ಇಹದಲ್ಲಿ ಮೋಕ್ಷ. ಇದಾದರೆ ಮಾತ್ರ ಪರದಲ್ಲೂ (ಮರಣಾನಂತರವೂ) ಪುನರ್ಜನ್ಮವಿರದ ಮೋಕ್ಷಕ್ಕೆ ಭಾಜನರಾಗುವರು ಅಥವಾ ಹುಟ್ಟಿದರೂ ಜೀವನ್ಮುಕ್ತರಾಗಿ ಲೋಕೋದ್ಧಾರಕರಾಗುವರು. ಇದರ ಮಾರ್ಗಗಳಾವುವು ಎಂಬುದನ್ನು (೧೨)ಮೋಕ್ಷೋಪಾಯಸಂಹಿತಾ ಎಂಬ ಕೊನೆಯ ಭಾಗದಲ್ಲಿ ವಿಸ್ತರಿಸಲಾಗಿದೆ.
ಈ ಭಗವತ್ತತ್ತ್ವರತ್ನಾಕರಃ ಕೃತಿಯ ಮೊದಲಭಾಗವಾಗಿ, ವೈದಿಕಸಂಹಿತಾಂತರ್ಗತ ತೈತ್ತಿರೀಯಕೃಷ್ಣಯಜುರ್ವೇದಕಾಂಡದಲ್ಲಿ ಪ್ರಸ್ತುತ “ಲಘುನ್ಯಾಸಮನ್ತ್ರಾರ್ಥವಿಸ್ತಾರಃ” ಎಂಬ ಪ್ರಥಮಕೃತಿಪುಷ್ಪವನ್ನು ತಮ್ಮ ಕೈಗಳಲ್ಲಿಡುತ್ತಿದ್ದೇವೆ. ಇದನ್ನು ಆಮೂಲಾಗ್ರವಾಗಿ ಪರಿಶೀಲಿಸಿ, ಸೂಕ್ತ ಸಲಹೆ-ಸೂಚನೆಗಳನ್ನಿತ್ತು, ಸುಂದರ ಮುನ್ನುಡಿಯನ್ನೂ ಅನುಗ್ರಹಿಸಿ ಆಶೀರ್ವದಿಸಿದ ಗುರುಹಿರಿಯರೂ, ನಿವೃತ್ತ ಸಂಸ್ಕೃತ ಉಪನ್ಯಾಸಕರೂ, ಕೃಷ್ಣಯಜುರ್ವೇದದ ಸಲಕ್ಷಣ ಘನಾಂತ ವಿದ್ವಾಂಸರೂ ಆದ ಶ್ರೀಮಾನ್ ಬಳ್ಳಾರಿ ಗೋವಿಂದ ಭಟ್ಟರಿಗೆ ನಾನು ಚಿರಋಣಿ.
ಇದರಲ್ಲಿ ಕೆಲವು ನನ್ನ ಮೂಲಕ ಭಗವಂತ ರಚನೆ ಮಾಡಿಸಿದವುಗಳೂ, ಹಲವು ಪೂರ್ವಸೂರಿಗಳ ಕೃತಿಗಳಿಂದ ಆಯ್ದುಕೊಂಡಿರುವವುಗಳೂ ಇವೆ. ಇದನ್ನು ಆದರದಿಂದ ಸ್ವೀಕರಿಸಿ, ತಪ್ಪುಗಳನ್ನು ನನಗೆ ತಿಳಿಸಿ, ಒಪ್ಪುಗಳಿಂದ ಪರಮಾನಂದ ಹೊಂದಿದರೆ ನನ್ನೀ ಪರಿಶ್ರಮವೂ, ಭಗವದ್ದತ್ತವಾದ ಈ ಸುಕೃತವೆನಿಸಿರುವ ಮಾನವ ಜನುಮವೂ ಸಾರ್ಥಕವಾಗುವುದು. ನಿಮ್ಮ ಸಲಹೆ-ಸೂಚನೆಗಳಿಗೆ ಸದಾ ಸ್ವಾಗತ.
ಇಂತೀ ಸಜ್ಜನ ವಿದ್ವಜ್ಜನ ವಿಧೇಯ,
ಡಾ || ಕೃಷ್ಣಮೂರ್ತಿಶಾಸ್ತ್ರೀ,
ಎಂ.ಬಿ.ಬಿ.ಎಸ್., ಸಂಸ್ಕೃತಕೋವಿದ,
ದಂಬೆ ಮನೆ,
ಅಂಚೆ ಪುಣಚ,
ಬಂಟ್ವಾಳ ತಾ ||,
ವಯಾ ವಿಟ್ಲ,
ದ.ಕ. ಜಿಲ್ಲೆ,
ಪಿನ್ - 574 243,
ಫೋನ್:- +91 9972716812
ಇ-ಮೈಲ್: krishnamoorthydr77@gmail.com
ಕೃತಜ್ಞತೆಗಳು ಹಾಗೂ ಸಮರ್ಪಣೆ
ಇದರ ರಚನೆಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಪ್ರೇರಕರೂ, ಸಹಾಯಕರೂ, ಪ್ರೋತ್ಸಾಹಕರೂ, ಪರಿಷ್ಕಾರಕರೂ, ಮುದ್ರಕರೂ, ಪ್ರಕಾಶಕರೂ, ವಾಚಕರೂ ಆದ ನನ್ನ ಹೆತ್ತವರು, ಧರ್ಮಪತ್ನಿ ಹಾಗೂ ಕುಟುಂಬವರ್ಗ, ಸಹೋದ್ಯೋಗಿಗಳು, ಬಂಧುಗಳು, ಸ್ನೇಹಿತರು, ಗುರುಹಿರಿಯರು, ಜಗದ್ಗುರುಗಳು, ಸಮಸ್ತ ಹಿತಾಕಾಂಕ್ಷಿಗಳು, ಪ್ರಕಾಶಕರು, ಮುದ್ರಕರು, ಉದಾರ ದಾನಿಗಳು, ಪರಿಷ್ಕರಣ-ವಿದ್ವನ್ಮಂಡಲಿ ಹಾಗೂ ಪ್ರಕೃತಿ-ಪರಮಾತ್ಮ ― ಇವರಿಗೆ ತುಂಬುಹೃದಯದ ಕೃತಜ್ಞತೆಗಳು ಹಾಗೂ ಈ ಕೃತಿಯನ್ನು ಇವರೆಲ್ಲರಿಗೆ ಸಮರ್ಪಿಸುತ್ತಿದ್ದೇನೆ.
ಮುನ್ನುಡಿ
ಗುರವೇ ಸರ್ವಲೋಕಾನಾಂ
ಭಿಷಜೇ ಭವರೋಗಿಣಾಮ್ |
ನಿಧಯೇ ಸರ್ವವಿದ್ಯಾನಾಂ
ದಕ್ಷಿಣಾಮೂರ್ತಯೇ ನಮಃ ||
ವೃತ್ತಿಯಲ್ಲಿ ವೈದ್ಯರು, ಪ್ರವೃತ್ತಿಯಲ್ಲಿ ಗ್ರಂಥಗಳನ್ನು ಅಧ್ಯಯನ ಮಾಡಿ ತನಗಾದ ಅನುಭವಗಳನ್ನು ಲೇಖನಿಯ ಮೂಲಕ ಅನೇಕಗ್ರಂಥಗಳನ್ನು ರಚಿಸಿ ಸಮಾಜಕ್ಕೆ ನೀಡಿದ, ನೀಡುತ್ತಲಿರುವ ಸಾಹಸಿಗಳು ಡಾ || ಕೃಷ್ಣಮೂರ್ತಿ ಶಾಸ್ತ್ರೀ, ದಂಬೆ ಅವರು. ಅವರ ಲೇಖನಗಳನ್ನು fb/WhatsApp ಮೂಲಕ ನೋಡಿದಾಗ ನನ್ನ ವಿಮರ್ಶೆಗಳೂ ಹೊರಬಿದ್ದವು. ಮುಖತಃ ಪರಿಚಯ ಕಾಯರ ಡಾ || ಉದಯಕುಮಾರ್ ಕಾಣಿಯೂರು ― ಇವರ ಮೂಲಕ ಪುತ್ತೂರಿನಲ್ಲಿ ಸುಭದ್ರಾಕಲ್ಯಾಣಮಂಡಪದಲ್ಲಾಯಿತು. “ಲಘುನ್ಯಾಸಮನ್ತ್ರಾರ್ಥವಿಸ್ತಾರಃ” ಎಂಬ ಕೃತಿಗೊಂದು ಮುನ್ನುಡಿ ಬರೆದು ಕೊಡಬೇಕೆಂದು ಕೇಳಿದರು. ಕೃತಿರಚನೆಯಷ್ಟು ಕಷ್ಟಕರವಲ್ಲವೆಂದು ಒಪ್ಪಿದೆ. “ಭೂಮಿಸ್ತೋಯಂ ಖನ್ಯಮಾನಾ ದದಾತಿ” ― ಭೂಮಿಯನ್ನು ಆಳವಾಗಿ ಅಗೆದರೆ ಅಮೃತಪ್ರಾಯ ನೀರು ಸಿಗುವಂತೆ ಇವರ ಒಂದು ಕೃತಿಯನ್ನು ಕೈಲಾದಷ್ಟು ನೋಡಿದೆ. ಈಗ ಅವರ ಕೃತಿಗಳು ಒಂದಾದಮೇಲೊಂದರಂತೆ ಬೆಳಕಿಗೆ ಬರುತ್ತಿವೆ.
ನ್ಯಾಸವೆಂದರೆ ಒಂದೆಡೆ ಜೋಪಾನವಾಗಿಡುವಿಕೆ. ಲೌಕಿಕವಾಗಿ ಸಂಸ್ಕೃತನಾಟಕವೊಂದರಲ್ಲಿ ವಸಂತಸೇನೆ ತನ್ನ ಬೆಲೆಬಾಳುವ ಆಭರಣಗಳನ್ನು ಕಲಶವೊಂದರಲ್ಲಿಟ್ಟು ರಕ್ಷಣೆಗಾಗಿ ಚಾರುದತ್ತನ ಬಳಿ ನ್ಯಾಸ ವಾಗಿಡುತ್ತಾಳೆ. ಅಲೌಕಿಕ ವೈದಿಕಕರ್ಮಗಳಲ್ಲಿ ಮಂತ್ರಗಳನ್ನೂ, ಮಂತ್ರಾಧಿದೇವತೆಗಳನ್ನೂ ಭೌತಿಕವಾಗಿ ದೇಹದ ಅಂಗಾಂಗಳಲ್ಲಿ ನೆಲೆಗೊಳಿಸಿ “ದೇಹೋ ದೇವಾಲಯಃ…” ಎಂಬಂತೆ ಸಾಮಾನ್ಯವಾದ ಅಂಗಗಳಲ್ಲಿ ಅಲೌಕಿಕ ಶಕ್ತಿತುಂಬುವ ಪ್ರಕ್ರಿಯೆಯೇ ನ್ಯಾಸವು. ಅಂಗನ್ಯಾಸ, ಕರನ್ಯಾಸಗಳು ಸರ್ವಸಾಮಾನ್ಯ ಪರಿಚಿತನ್ಯಾಸಗಳು. “ನ ಅರುದ್ರೋ ರುದ್ರಮರ್ಚಯೇತ್” ಎಂಬ ನುಡಿಯಂತೆ ಶಿವಪೂಜೆ / ಜಪಹೋಮಾರ್ಚನಾಭಿಷೇಕಗಳಲ್ಲಿ ಪೂಜ್ಯ-ಪೂಜಕರ ಅವಿನಾಭಾವಸಂಬಂಧಕ್ಕೆ ಈ ನ್ಯಾಸವಿಧಿಯು ಸಹಕಾರಿಯಾಗುತ್ತದೆ. ರಾವಣೋಕ್ತ ಮಹಾನ್ಯಾಸ, ಬೋಧಾಯನೋಕ್ತ ಮಹಾನ್ಯಾಸಗಳು ಬೇರೆಬೇರೆ ಪ್ರಾಂತ್ಯಗಳಲ್ಲಿ ಆಚರಣೆಯಲ್ಲಿದ್ದರೂ ನಮ್ಮ ಪ್ರಾಂತ್ಯದಲ್ಲಿ ಬೋಧಾಯನೋಕ್ತ ಲಘುನ್ಯಾಸವನ್ನು ಆಚರಿಸುತ್ತೇವೆ. “ಮಹಾನ್ನ್ಯಾಸ” ಎಂಬ ಹೆಸರು ಕೇಳಿದಾಗಲೇ ತಿಳಿಯುವಂತೆ, ಅದನ್ನು ಪಠಿಸಲು ೧ ಘಂಟೆಯ ಕಾಲಕ್ಕಿಂತ ಹೆಚ್ಚು ಸಮಯ ಬೇಕಾಗಬಹುದು. ಅದಕ್ಕಾಗಿ “ಲಘುನ್ಯಾಸ” ವನ್ನು ಬೋಧಿಸಿದರು. ಜನಸಾಮಾನ್ಯರಿಗೂ ಅರ್ಥೈಸಲು ಈ ಭಾಷ್ಯವನ್ನು ಕನ್ನಡದಲ್ಲಿ ಬೆಳಕಿಗೆ ತಂದಿದ್ದಾರೆ ಡಾ || ಕೃಷ್ಣಮೂರ್ತಿ ಶಾಸ್ತ್ರಿಗಳು.
ಎಷ್ಟು ಓದಿದರೂ ಅನುಭವ ಹೆಚ್ಚಿದಂತೆಯೇ ಸಂದೇಹಗಳೂ ಹೆಚ್ಚುತ್ತವೆ. “ಸಕಲಸ್ಯ ರುದ್ರಾಧ್ಯಾಯಸ್ಯ ಶ್ರೀರುದ್ರೋ ದೇವತಾ ಏಕಾ ಗಾಯತ್ರೀ ಛಂದಃ...” ಎಂಬಲ್ಲಿ ತಿಳಿಸಿದ ಛಂದಸ್ಸುಗಳು ನಮಕದ ಮಂತ್ರಗಳಿಗೆ ಹೊಂದುವುದಿಲ್ಲ. ರುದ್ರಾಧ್ಯಾಯದ ಒಂದನೆಯ ಅನುವಾಕವಾದ ಮೇಲೆ “ನಮಸ್ತೇ ಅಸ್ತು ಭಗವನ್.....ದೇವಾಯ ನಮಃ” ― ಈ ಮಂತ್ರ ಎಲ್ಲಿಂದ ಬಂತೋ ತಿಳಿಯದು. ಪಾಠಭೇದವಿದ್ದರೂ ಬಳಕೆಯಲ್ಲಿದೆ. ಅದೇ ರುದ್ರಪ್ರಶ್ನದ ೧೧ ನೆಯ ಅನುವಾಕದಲ್ಲಿ “ಯೇ ವನಾನ್ಯುಪಸರ್ಪಂತಿ ತೇಭ್ಯೋ ವೃಷ್ಟಿರುದಾ ಚ ತೇ, ಯೇ ಗ್ರಾಮ್ಯಾನುಪಸರ್ಪಂತಿ ತೇಭ್ಯೋ ವ್ಯುಷ್ಟಿಮುಪಾಸತೇ |” ಎಂಬ ಪರಿಶಿಷ್ಟ ಮಂತ್ರ (ಕರ್ಣಾಟಕದ ಕರಾವಳಿಪ್ರದೇಶದಲ್ಲಿ ಮಾತ್ರ ಬಳಕೆಯಲ್ಲಿರುವ ಈ ಮಂತ್ರವು ವಾಲಖಿಲ್ಯಶಾಖೆಯದೆಂಬ ಅಭಿಪ್ರಾಯವಿದೆ), ನಮಕ (ರುದ್ರಾಧ್ಯಾಯ)ವಾದ ಮೇಲೆ ಮಹಾನಾರಾಯಣೋಪನಿಷತ್ತಿನಲ್ಲಿರುವ “ಸರ್ವೋ ವೈ ರುದ್ರಃ...”, “ಯೋ ರುದ್ರೋ ಅಗ್ನೌ…”(ತೈ. ಸಂಹಿತಾ ಕಾಂಡ ೫ ರಲ್ಲಿದೆ) “ಪ್ರಾಣಾನಾಂ ಗ್ರಂಥಿರಸಿ...ಆಪ್ಯಾಯಸ್ವ” ― ಎಂಬವು ಕೆಲವೆಡೆ ಮಾತ್ರ ಪ್ರಯೋಗದಲ್ಲಿರುವ ಮಂತ್ರಗಳು. ಹೀಗೆ ಕೆಲವು ವಿಷಯಗಳು ಅವ್ಯಕ್ತ, ಅಸ್ಪಷ್ಟ, ವಿಮರ್ಶಾರ್ಹಗಳಾಗಿವೆ. ಡಾ || ಕೃಷ್ಣಮೂರ್ತಿ ಶಾಸ್ತ್ರಿಗಳ ಶ್ರಮ ಸಾರ್ಥಕವಾಗಲೆಂದು ಸದ್ಗುರು ಸರ್ವಶಕ್ತನನ್ನು ಪ್ರಾರ್ಥಿಸಿ ಹರಸುತ್ತೇವೆ.
ಇತಿ,
ವೇದಮೂರ್ತಿ || ಮುಗುಳಿ ಗೋವಿಂದ ಭಟ್,
ಬಳ್ಳಾರಿ ನಿವಾಸಿ,
ಘನಪಾಠೀ ಹಾಗೂ ನಿವೃತ್ತ ಸಂಸ್ಕೃತ-ಉಪನ್ಯಾಸಕರು.
Comments
Post a Comment