ಪುರುಷಸೂಕ್ತಭಾಷ್ಯಮ್ ೪
ಮಹೀಧರ-ಶುಕ್ಲಯಜುರ್ವೇದಭಾಷ್ಯದಿಂದ—
ರಮಾಕಾನ್ತಂ ಗಿರಂ ನತ್ವಾ
ಹೇರಮ್ಬಂ ಶಿವಮಮ್ಬಿಕಾಮ್ |
ಏಕತ್ರಿಂಶೋऽಧುನಾಧ್ಯಾಯೇ
ವೇದದೀಪೋ ವಿತನ್ಯತೇ ||
ಲಕ್ಷ್ಮೀಪತಿಯಾದ ನಾರಾಯಣನನ್ನೂ, ವಾಗ್ದೇವಿಯಾದ ಸರಸ್ವತಿಯನ್ನೂ, ಗಣಪತಿಯನ್ನೂ, ಶಿವನನ್ನೂ, ಪಾರ್ವತಿಯನ್ನೂ ನಮಿಸಿ, ಈಗ ಶುಕ್ಲಯಜುಸ್ಸಂಹಿತೆಯ ೩೧ನೆಯ ಅಧ್ಯಾಯದಲ್ಲಿ ವೇದದೀಪವೆಂಬ ಭಾಷ್ಯವು ವಿಸ್ತರಿಸಲ್ಪಡುತ್ತದೆ.
“ನಿಯುಕ್ತಾನ್ ಬ್ರಹ್ಮಾ ಅಭಿಷ್ಟೌತಿ ಹೋತೃವತ್ ಅನುವಾಕೇನ ಸಹಸ್ರಶೀರ್ಷಾ ಇತಿ” (ಕಾತ್ಯಾಯನ-ಶ್ರೌತಸೂತ್ರ ೨೧.೧.೧೧) | ಅಸ್ಯ ಅರ್ಥಃ— ನಿಯುಕ್ತಾನ್ ಬ್ರಾಹ್ಮಣಮ್-ಇತ್ಯಾದಿ-ಪಶೂನ್ ಸಹಸ್ರಶೀರ್ಷಾ ಇತಿ ಅನುವಾಕೇನ ಷೋಡಶ-ಋಚೇನ ಬ್ರಹ್ಮಾ ಸ್ತೌತಿ ಹೋತೃವತ್ ಇತಿ ತ್ರಿಃ ಪ್ರಥಮಾಂ ತ್ರಿಃ ಉತ್ತಮಾಮ್ ಇತ್ಯಾದಿ-ಉಕ್ತಪ್ರಕಾರೇಣ ಇತಿ ಅರ್ಥಃ | " ತ್ರೈಧಾತವ್ಯನ್ತೇ ಸಮಾರೋಹ್ಯಾತ್ಮನ್ನಗ್ನೀ ಸೂರ್ಯಮುಪಸ್ಥಾಯಾದ್ಭ್ಯಃ ಸಂಭೃತ ಇತ್ಯನುವಾಕೇನ ಅನಪೇಕ್ಷಮಾಣೋ ಅರಣ್ಯಂ ಗತ್ವಾ ನ ಪ್ರತ್ಯವೇಯಾದ್ ಗ್ರಾಮೇ ವಾ ವಿವತ್ಸನ್ ಅರಣ್ಯೋಃ" (ಕಾತ್ಯಾಯನ-ಶ್ರೌತಸೂತ್ರೇ ೨೧.೧. ೧೭,೧೮) |
"ನಿಯೋಜಿತರಾದ ಋತ್ವಿಜರನ್ನು / ಯಜ್ಞಪಶುಗಳನ್ನು ಬ್ರಹ್ಮತ್ವವಹಿಸಿದವನು, ಸಹಸ್ರಶೀರ್ಷಾ ಎಂಬ ಅನುವಾಕ(ವೇದಗಳ ಒಂದು ಭಾಗ)ದಿಂದ ಹೋತೃವೆಂಬ ಋಗ್ವೇದಿ ಋತ್ವಿಜನಂತೆ ಬಹುವಾಗಿ ಸಮ್ಮಖದಲ್ಲೇ ಸ್ತುತಿಸುತ್ತಾನೆ" ಎಂದಿದೆ ಕಾತ್ಯಾಯನ ಶ್ರೌತಸೂತ್ರ. ಇದರರ್ಥ— ನಿಯುಕ್ತರಾದ ಬ್ರಾಹ್ಮಣಾದಿ ಯಜ್ಞಪಶುಗಳನ್ನು ೧೬ ಋಚೆಗಳ ಸಹಸ್ರಶೀರ್ಷವೆಂಬ ಅನುವಾಕದಿಂದ ಮೊದಲ ೩ ಋಕ್-ಮಂತ್ರಗಳಿಂದ ಮೊದಲ ಪಶುವನ್ನೂ, ಬೇರೆ ೩ ಮಂತ್ರಗಳಿಂದ ಕೊನೆಯ ಪಶುವನ್ನೂ ಮುಂತಾಗಿ ಹೇಳಲ್ಪಟ್ಟ ಕ್ರಮದಿಂದ, ಬ್ರಹ್ಮಸ್ಥಾನೀಯನು ಹೋತೃವು ದೇವತೆಗಳನ್ನು ಸ್ತುತಿಸುವಂತೆ ಸ್ತುತಿಸುತ್ತಾನೆ. "ತ್ರೈಧಾತವೀ-ಯ ಕೊನೆಯಲ್ಲಿ, ತನ್ನಲ್ಲೇ ಗೃಹ್ಯಾಗ್ನಿಯನ್ನು ಸಮಾವೇಶಗೊಳಿಸಿ, ಸೂರ್ಯನ ಮುಂದೆ ನಿಂತು ಅದ್ಭ್ಯಃ ಸಂಭೃತಃ ಎಂಬ ಅನುವಾಕದಿಂದ ಗೃಹಸ್ಥಾಶ್ರದ ಬಗೆಗಿನ ಅಪೇಕ್ಷಗಳಿಂದ ರಹಿತನಾಗಿ ಅರಣ್ಯಕ್ಕೆ ಹೋಗಿ ತಿರುಗಿ ಊರಿಗೆ ಬರಬಾರದು ಅಥವಾ ಊರಲ್ಲೇ ವಾಸಿಸುತ್ತಾ ಆರಣ್ಯಕಯಜ್ಞಗಳನ್ನಾಚರಿಸಬೇಕು" ಎನ್ನುತ್ತದೆ ಕಾತ್ಯಾಯನ ಶ್ರೌತಸೂತ್ರ.
ತ್ರೈಧಾತವೀ ಉದವಸಾನೀಯ-ಇಷ್ಟಿಃ, ತದನ್ತೇ ಅಯಂ ತೇ ಯೋನಿಃ ಇತಿ ಅಗ್ನೀ ಆತ್ಮನಿ ಸಮಾರೋಹ್ಯ ತದುಷ್ಮಾಣಮ್ ಆಸ್ಯೇ ಪ್ರವೇಶ್ಯ ಅದ್ಭ್ಯಃ ಸಂಭೃತ ಇತಿ ಷಡೃಚೇನ ಅನುವಾಕೇನ ಸೂರ್ಯಮ್ ಉಪಸ್ಥಾಯ ಪಶ್ಚಾದ್ ಅಪಶ್ಯನ್ ವನಂ ಗತ್ವಾ ಗ್ರಾಮಂ ನ ಆಗಚ್ಛೇತ್ | ವಾನಪ್ರಸ್ಥೋ ಭವೇತ್ ಇತಿ ಅರ್ಥಃ | ಯದ್ ವಾ ಗ್ರಾಮೇ ವಸ್ತುಮ್ ಇಚ್ಛನ್ ಅರಣ್ಯೋಃ ಅಗ್ನೀ ಸಮಾರೋಪ್ಯ ಅರ್ಕೋಪಸ್ಥಾನಾನನ್ತರಂ ಗ್ರಾಮೇ ಗತ್ವಾ ಯಜ್ಞಾನ್ ಕುರ್ಯಾತ್ ಇತಿ ಸೂತ್ರಾರ್ಥಃ |
ತ್ರೈಧಾತವೀ ಎಂಬುದು ಗೃಹಸ್ಥಾಶ್ರಮದ ಕೊನೆಗೆ ಮನೆಯಲ್ಲಿ ಮಾಡುವ ಉದವಸಾನೀಯ ಇಷ್ಟಿಯು. (ಉದವಸಿತವೆಂದರೆ ಗೃಹ, ಮನೆ. ಇಷ್ಟಿಯೆಂದರೆ ಯಾಗ / ಇಷ್ಟಸಿದ್ಧಿಗಾಗಿ ಮಾಡುವ ಯಾಗ ). ಅದರ ಕೊನೆಯಲ್ಲಿ "ಅಯಂ ತೇ ಯೋನಿಃ"— "ಇದೇ ನಿನ್ನ ಮೂಲ" ಎಂದು ಯಾಗಾಗ್ನಿಯನ್ನು ತನ್ನಲ್ಲೇ ಆರೋಪಿಸಿ, ಅದರ ಶಾಖವನ್ನು ಮುಖದಲ್ಲಿ ಸೇರಿಸಿ, "ಅದ್ಭ್ಯಃ ಸಂಭೃತಃ" ಎಂಬ ೬ ಋಚೆಗಳ ಅನುವಾಕ / ಮಂತ್ರಭಾಗ ದಿಂದ ಸೂರ್ನ ಮುಂದೆ ನಿಂತು / ಸೂರ್ಯೋಪಸ್ಥಾನ ಮಾಡಿ, ಬಳಿಕ ಹಿಂದೆ ನೋಡದೇ ಕಾಡಿಗೆ ಹೋಗಿ ಊರಿಗೆ ಮರಳಬಾರದು. (ತೈತ್ತಿರೀಯ ಆರಣ್ಯಕಭಾಗದ ಪುರುಷಸೂಕ್ತಮಂತ್ರವು ಯಥಾರ್ಥವಾಗಿ ಆರಣ್ಯಕ ವಾನಪ್ರಸ್ಥಾಶ್ರಮಕ್ಕೆ ಅನುಷ್ಠೇಯವಾದದ್ದೂ ಹೌದು). ಗೃಹಸ್ಥಾಶ್ರಮವನ್ನು ತೊರೆದು ವಾನಪ್ರಸ್ಥನಾಗಬೇಕೆಂದರ್ಥ. ಅಥವಾ, ಗ್ರಾಮದಲ್ಲೇ ವಾಸಿಸಬಯಸಿ, ಅರಣಿಯ / ಆರಣ್ಯಕದ ಅಗ್ನಿಯನ್ನು ಸಮಾರೋಪಿಸಿ, ಸೂರ್ಯೋಪಸ್ಥಾನದ ಬಳಿಕ, ಊರಿಗೇ ಹಿಂತಿರುಗಿ ಯಜ್ಞಗಳನ್ನು ಮಾಡಬೇಕೆಂಬುದು ಈ ಸೂತ್ರದ ಅರ್ಥ.
ಅಥ ಮನ್ತ್ರಾರ್ಥಃ | (ಪುರುಷಃ— ) ನಾರಾಯಣಪುರುಷದೃಷ್ಟಾ ಜಗದ್ಬೀಜಪುರುಷದೇವತ್ಯಾಃ ಷೋಡಷ-ಋಚಃ, ಪಞ್ಚದಶ-ಅನುಷ್ಟುಭಃ ಷೋಡಶೀ ತ್ರಿಷ್ಟುಪ್ | ಬ್ರಹ್ಮಣೇ ಬ್ರಾಹ್ಮಣಮ್ ಇತ್ಯಾದ್ಯಾಃ ಪುರುಷಮೇಧರೂಪಸ್ಯ ಪರಮಾತ್ಮನಃ ಅವಯವಾಃ ಪೂರ್ವ-ಅಧ್ಯಾಯಾನ್ತೇ ಪ್ರೋಕ್ತಾಃ, ತೇಷಾಮ್ ಅವಯವೀ ಪುರುಷಃ ಅತ್ರ ಸ್ತೂಯತೇ | ಅವ್ಯಕ್ತ-ಮಹತ್-ಆದಿ-ವಿಲಕ್ಷಣಃ ಚೇತನಃ ಯಃ ಪುರುಷಃ "ಪುರುಷಾತ್ ನ ಪರಂ ಕಿಞ್ಚಿತ್" (ಕಠೋಪನಿಷತ್ ೩.೧೧) ಇತ್ಯಾದಿ-ಶ್ರುತಿಷು ಪ್ರಸಿದ್ಧಃ ಸರ್ವಪ್ರಾಣಿಸಮಷ್ಟಿರೂಪೋ ಬ್ರಹ್ಮಾಣ್ಡದೇಹೋ ವಿರಾಜಾಖ್ಯೋ ಅಸ್ತಿ |
ವಿನಿಯೋಗ ವಿಧಿಯ ಬಳಿಕ, ಇನ್ನು ಮಂತ್ರದ ಅರ್ಥ— ನಾರಾಯಣಾವತಾರಿಯಾದ ಪುರುಷನಿಂದ ದೃಷ್ಟವಾದ (ಕಾಣಲ್ಪಟ್ಟ), ಜಗತ್ತಿನ ಬೀಜರೂಪವಾದ ಪುರುಷದೇವತಾಪ್ರತಿಪಾದ್ಯವಾದ (ಪುರುಷಸೂಕ್ತವು, ಋಗ್ವೇದ ಹಾಗೂ ಶುಕ್ಲಯಜುರ್ವೇದಗಳಲ್ಲಿ) ೧೬ ಋಚೆಗಳುಳ್ಳದ್ದೂ, ಅವುಗಳಲ್ಲಿ ಮೊದಲ ೧೫ ಅನುಷ್ಟುಪ್ ಹಾಗೂ ೧೬ನೆಯದು ತ್ರಿಷ್ಟುಪ್ ಛಂದಸ್ಸಿನ ಋಕ್ಕೂ ಆಗಿರುವುದು. ಪರಬ್ರಹ್ಮನಿಗೆ, ಪುರುಷಮೇಧರೂಪನಿಗೆ, ಬ್ರಾಹ್ಮಣಾದಿ ಚತುರ್ವರ್ಣರೂಪವೇ ಮುಂತಾದವು ವಿವಿಧ ಅವಯವಗಳೆಂದು ಹಿಂದಿನ ಅಧ್ಯಾಯದ ಕೊನೆಗೆ ಹೇಳಲ್ಪಟ್ಟಿದ್ದು, ಇಂತಹ ಅಂಗೋಪಾಂಗಗಳುಳ್ಳ ವಿರಾಟ್ಪುರುಷನು ಇಲ್ಲಿ ಸ್ತುತಿಸಲ್ಪಡುತ್ತಾನೆ. ಅವ್ಯಕ-ಮಹತ್ ತತ್ತ್ವ ಮುಂತಾದವುಗಳಿಗಿಂತ ವಿಭಿನ್ನ ಗುಣಲಕ್ಷಣನಾದ ಚೈತನ್ಯಸ್ವರೂಪಿಯಾದ ಯಾವ ಪುರುಷನು "ಪರಮಪುರುಷನಿಗಿಂತ ಶ್ರೇಷ್ಠವಾದದ್ದಾವುದೂ ಇಲ್ಲ" (ಕಠೋಪನಿಷತ್) ಇತ್ಯಾದಿ ಶ್ರುತಿಗಳಲ್ಲಿ / ಉಪನಿಷತ್ತುಗಳಲ್ಲೂ ಪ್ರಸಿದ್ಧನಾದ, ಸಕಲಪ್ರಾಣವಂತರ ಸಮಷ್ಟಿರೂಪನೂ, ಬ್ರಹ್ಮಾಂಡವೇ ದೇಹವಾಗುಳ್ಳವನೂ, ವಿರಾಜನೆಂಬ ಹೆಸರಿನ ವಿರಾಟ್ಪುರುಷನೂ (ವಿಶ್ವರೂಪಿಯೂ) ಆಗಿರುವನು.
ಕೀದೃಶಃ? ಸಹಸ್ರಶೀರ್ಷಾ— ಸಹಸ್ರಶಬ್ದೋ ಬಹುತ್ವವಾಚೀ | ಸಂಖ್ಯಾವಾಚಕತ್ವೇ ಸಹಸ್ರಾಕ್ಷಃ— ಇತಿ ವಿರೋಧಃ ಸ್ಯಾತ್ ನೇತ್ರಸಹಸ್ರದ್ವಯೇನ ಚ ಭಾವ್ಯಮ್ | ತತಃ ಸಹಸ್ರಮ್ ಅಸಂಖ್ಯಾನಿ ಶೀರ್ಷಾಣಿ ಶಿರಾಂಸಿ ಯಸ್ಯ ಸಃ "ಶೀರ್ಷಶ್ಛನ್ದಸಿ" (ಪಾಣಿನೀಯಸೂತ್ರೇ ೬.೧.೬೦) ಇತಿ ಶಿರಃಶಬ್ದಸ್ಯ ಶೀರ್ಷನ್ ಆದೇಶಃ | ಶಿರೋಗ್ರಹಣಂ ಸರ್ವ-ಅವಯವ-ಉಪಲಕ್ಷಣಮ್ | ಯಾನಿ ಸರ್ವಪ್ರಾಣಿನಾಂ ಶಿರಾಂಸಿ ತಾನಿ ಸರ್ವಾಣಿ ತದ್ದೇಹಾನ್ತಃಪಾತಿತ್ವಾತ್ ತಸ್ಯ ಏವ ಇತಿ ಸಹಸ್ರಶೀರ್ಷತ್ವಮ್ | ಏವಮ್ ಅಗ್ರೇ ಅಪಿ | ಸಹಸ್ರಾಕ್ಷಃ ಸಹಸ್ರಮ್ ಅಕ್ಷೀಣಿ ಯಸ್ಯ ಸಃ | ಅಕ್ಷಿಗ್ರಹಣಂ ಸರ್ವಜ್ಞಾನೇನ್ದ್ರಿಯ-ಉಪಲಕ್ಷಕಮ್ | ಸಹಸ್ರಪಾತ್ ಸಹಸ್ರಂ ಪಾದಾಃ ಯಸ್ಯ "ಸಂಖ್ಯಾಸು ಪೂರ್ವಸ್ಯ" (ಪಾಣಿನೀಯಸೂತ್ರೇ ೫.೪.೧೪೦) ಇತಿ ಪಾದಸ್ಯ ಅನ್ತ್ಯಲೋಪಃ | ಪಾದಗ್ರಹಣಂ ಕರ್ಮೇನ್ದ್ರಿಯೋಪಲಕ್ಷಣಮ್ |
ಆ ವಿರಾಟ್ಪುರುಷನು ಎಂಥವನು / ಹೇಗಿರುವನು? ಸಹಸ್ರಶೀರ್ಷಾ— ಸಹಸ್ರಶಬ್ದವು ಬಹುತ್ವ / ಅನೇಕತೆ ಯನ್ನು ಹೇಳುವಂಥದ್ದು. ಯಾಕೆಂದರೆ, ಸಂಖ್ಯಾವಾಕವಾಗಿರುವುದಾದರೆ, ಸಹಸ್ರಾಕ್ಷಃ— ಎಂಬುದು —ಸಾವಿರತಲೆಯ ಆತನಿಗೆ ಸಾವಿರಕಣ್ಣುಗಳು ಎಂಬುದು— ಸರಿಹೊಂದದು, ೨೦೦೦ ಕಣ್ಣುಗಳೆಂದು ಭಾವಿಸಬೇಕಾಗುತ್ತದೆ. ಹೀಗಾಗಿ, ಸಹಸ್ರ ಅರ್ಥಾತ್ ಅಸಂಖ್ಯ ಶೀರ್ಷಗಳು / ಶಿರಗಳು / ತಲೆಗಳು ಯಾವನಿಗೋ ಅವನು ಸಹಸ್ರಶೀರ್ಷನು. "ವೇದದಲ್ಲಿ ಶೀರ್ಷಸ್ / ಶೀರ್ಷಃ" ಎಂಬ ಪಾಣಿನಿಯ ಸೂತ್ರದಂತೆ ಶಿರಃ ಶಬ್ದಕ್ಕೆ ಶೀರ್ಷನ್ ಆದೇಶವಾಗುತ್ತದೆ. ಶಿರಶಬ್ದದ ಪರಿಗ್ರಹವು / ಸ್ವೀಕಾರವು ಸಕಲ ಅಂಗಗಳ ಸೂಚಕ / ಉಪಲಕ್ಷಣ. ಯಾವುವು ಎಲ್ಲ ಪ್ರಾಣವಂತರ ಶಿರಗಳೋ ಅವೆಲ್ಲವೂ— ಆ ಎಲ್ಲ ದೇಹಗಳೊಳಗಿರುವುದರಿಂದಾಗಿ— ಆ ಪುರುಷನವೇ ಎಂಬುದಾಗಿ ಆತನಿಗೆ ಸಹಸ್ರಶೀರ್ಷತ್ವವು. ಹೀಗೆಯೇ, ಮುಂದೆಯೂ ಕೂಡ ತಿಳಿಯಬೇಕು. (ಅಂದರೆ, ಬಾಹು, ಉದರ, ಮುಖ, ಬೆನ್ನು, ಎದೆ, ಹೃದಯ ಮುಂತಾದ ಶರೀರದ ಉಳಿದ ಎಲ್ಲ ಅವಯವಗಳನ್ನೂ ಹೀಗೆಯೇ ಅಸಂಖ್ಯವೆಂದೂ, ಸಕಲ ಜೀವರ ಅವಯವಗಳೂ ತದಂತರ್ಗತಪುರುಷನ ಅವಯವಗಳೆಂದೂ ತಿಳಿಯಬೇಕು.) ಸಹಸ್ರಾಕ್ಷಃ— ಸಹಸ್ರ ಅಕ್ಷಿಗಳು / ಕಣ್ಣುಗಳು ಯಾವನಿಗೋ ಅವನು. ಅಕ್ಷಿಶಬ್ದದ ಪರಿಗ್ರಹವು / ಸ್ವೀಕಾರವು ಎಲ್ಲ ಜ್ಞಾನೇಂದ್ರಿಯಗಳ (ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮ) ಸೂಚಕ / ಉಪಲಕ್ಷಕ / ಅವುಗಳನ್ನು ಲಕ್ಷ್ಯವಾಗಿರಿಸಿಕೊಂಡದ್ದು. ಸಹಸ್ರಪಾತ್— ಸಹಸ್ರ / ಸಾವಿರ ಪಾದಗಳು ಯಾವನವೋ ಅವನು. "ಸಂಖ್ಯೆಗಳಲ್ಲಿ ಮೊದಲಭಾಗವು" ಎಂಬ ಪಾಣಿನಿಯ ಸೂತ್ರದಿಂದ ಪಾದಶಬ್ದದ ಅಂತ್ಯವು / ಕೊನೆಯ ಭಾಗವು ಲೋಪವಾಗಿ "ಪಾತ್" ಎಂದಷ್ಟೇ ಉಳಿಯಿತು. ಪಾದಶಬ್ದದ ಸ್ವೀಕಾರವು ಎಲ್ಲ ಕರ್ಮೇಂದ್ರಿಯಗಳ (ವಾಕ್, ಪಾಣಿ, ಪಾದ, ಪಾಯು, ಉಪಸ್ಥ) ದ್ಯೋತಕ.
ಸಃ ಪುರುಷೋ ಭೂಮಿಂ ಬ್ರಹ್ಮಾಣ್ಡಲೋಕರೂಪಾಂ ಸರ್ವತಃ ತಿರ್ಯಕ್-ಊರ್ಧ್ವಮ್-ಅಧಃ ಚ ಸ್ಪೃತ್ವಾ ವ್ಯಾಪ್ಯ | ಸ್ಪೃಣೋತಿಃ ವ್ಯಾಪ್ತಿಕರ್ಮಾ | ಯದ್ವಾ ಭೂಮಿಶಬ್ದೋ ಭೂತೋಪಲಕ್ಷಕಃ | ಪಞ್ಚಭೂತಾನಿ ವ್ಯಾಪ್ಯ ದಶಾಙ್ಗುಲಪರಿಮಿತಂ ದೇಶಮ್ ಅತ್ಯತಿಷ್ಠತ್ ಅತಿಕ್ರಮ್ಯ ಅವಸ್ಥಿತಃ | ದಶಾಙ್ಗುಲಮ್ ಇತಿ ಉಪಲಕ್ಷಣಮ್ | ಬ್ರಹ್ಮಾಣ್ಡಾತ್ ಬಹಿಃ ಅಪಿ ಸರ್ವತೋ ವ್ಯಾಪ್ಯ ಅವಸ್ಥಿತಃ, ಇತಿ ಅರ್ಥಃ | ಯದ್ವಾ, ನಾಭೇಃ ಸಕಾಶಾತ್ ದಶಾಙ್ಗುಲಮ್ ಅತಿಕ್ರಮ್ಯ ಹೃದಿ ಸ್ಥಿತಃ | ನಾಭಿತಃ, ಇತಿ ಕುತಃ ಲಭ್ಯತೇ "ಕತಮ ಆತ್ಮಾ" (ಬೃಹದಾರಣ್ಯಕ-ಉಪನಿಷತ್ ೬.೩.೭) ಇತಿ ಉಪಕ್ರಮ್ಯ "ಸೋऽಯಂ ವಿಜ್ಞಾನಮಯಃ ಪ್ರಾಣೇಷು ಹೃದಿ-ಅನ್ತರ್ಜ್ಯೋತಿಃ" (ಬೃ.ಉ.೬.೩.೭) ಇತಿ ಶ್ರುತೇಃ ವಿಜ್ಞಾನಾತ್ಮನಃ ಹೃದಿ ಅವಸ್ಥಾನಂ ಕರ್ಮಫಲೋಪಭೋಗಾಯ ಅನ್ತರ್ಯಾಮಿಣಃ ನಿಯನ್ತೃತ್ವೇನ |
ಸಃ— ಆ ಪುರುಷನು, ಭೂಮಿಂ— ಬ್ರಹ್ಮಾಂಡಲೋಕರೂಪವಾದ / ಸಮಸ್ತಸೃಷ್ಟಿಯೆಂಬ ಭೂಮಿಯನ್ನು, ಸರ್ವತಃ— ಅಡ್ಡಡ್ಡ-ಉದ್ದುದ್ದವಾಗಿ ಸಮತಲನೇರದಲ್ಲೂ (horizontally), ಮೇಲಕ್ಕೂ, ಕೆಳಕ್ಕೂ, (vertically), ಅಡ್ಡಾದಿಡ್ಡಿಯಾಗಿಯೂ (transversely), ಓರೆಕೋರೆಯಾಗಿಯೂ (obliquely)— ಹೀಗೆ ಒಂದು ಅಣುರೇಣವನ್ನೂ ಬಿಡದೆ ಕಣಕಣಗಳಲ್ಲೂ, ಸ್ಥಳಾವಕಾಶಗಳೆಲ್ಲದರಲ್ಲೂ ಸರ್ವತ್ರ, ಸ್ಪೃತ್ವಾ— ವ್ಯಾಪಿಸಿ, (ಸ್ಪೃ ಪ್ರೀತಿಪಾಲನಯೋಃ ಪ್ರೀತಿಚಲನಯೋಃ ವಾ; ಚಲನಂ ಜೀವನಮ್ ಇತಿ—) ಜೀವಪ್ರೀತಿಪಾಲನಾಭಾವದಿಂದ, ಸಮಸ್ತಸೃಷ್ಟಿಯನ್ನು ಸಲಹಬೇಕೆಂಬ ಮಮಕಾರದಿಂದ ಎಲ್ಲದರಲ್ಲೂ ಜೀವಚೈತನ್ಯದ ಸೆಲೆಯಾಗಿದ್ದು— ಎಂದರ್ಥ. "ಸ್ಪೃಣೋತಿ" ಯು ವ್ಯಾಪನಶೀಲ ಅಥವಾ ವ್ಯಾಪಿಸುವ ಕರ್ಮವಾಚ್ಯವು.
ಅಥವಾ, ಭೂಮಿಶಬ್ದವು ಪಂಚಭೂತವಾಚಕವು. ಪೃಥ್ವೀ, ಅಪ್, ತೇಜ, ವಾಯು, ಆಕಾಶಗಳೆಂಬ ಪಂಚಭೂತಗಳನ್ನು ವ್ಯಾಪಿಸಿ ಪುರುಷನು, ದಶಾಙ್ಗುಲಮ್— ಹತ್ತು ಅಂಗುಲಗಳಷ್ಟು ಪ್ರದೇಶದಲ್ಲಿ ಇವುಗಳ ಹೊರಕ್ಕೂ ಅತಿಕ್ರಮಿಸಿ ಅವಸ್ಥಿತನಾಗಿರುವನು. ದಶಾಂಗುಲವೆಂಬುದು ಸೂಚ್ಯಾರ್ಥಕ. ಬ್ರಹ್ಮಾಂಡದಿಂದ ಹೊರಕ್ಕೂ ಎಲ್ಲೆಡೆ ಅನಂತವಾಗಿ ವ್ಯಾಪಿಸಿರುವನೆಂದರ್ಥ. ಅಥವಾ, ನಾಭಿ / ಹೊಕ್ಕುಳ ದಿಂದ ಹತ್ತಂಗುಲದಷ್ಟು ಮೇಲಕ್ಕೆ ಕ್ರಮಿಸಿ ಹೃದಯಸ್ಥಾನದಲ್ಲಿ / ಹೃದ್ದೇಶದಲ್ಲಿ ಸ್ಥಿತನಾಗಿರುವನು. "ನಾಭಿಯಿಂದ ಮೇಲಿರುವನು" ಎಂದು ಎಲ್ಲಿಂದ ಪ್ರಮಾಣವು ಲಭಿಸುತ್ತದೆ ಎಂದರೆ, ಬೃಹದಾರಣ್ಯಕೋಪನಿಷತ್ತಿನಲ್ಲಿ "ಆತ್ಮನೆಷ್ಟರವವನು? / ಎಂಥವನು?" ಎಂದು ಹೇಳತೊಡಗಿ, "ಅವನಾದರೋ ವಿಜ್ಞಾನಮಯನಾಗಿ, ಸರ್ವಪ್ರಾಣವಂತರಲ್ಲಿ ಹೃದಯದಲ್ಲಿ ಅಂತರ್ಜ್ಯೋತಿ / ಒಳಬೆಳಕಾಗಿರುವನು"— ಎಂಬ ಶ್ರುತಿಪ್ರಮಾಣದಿಂದ, ವಿಜ್ಞಾನಾತ್ಮನ ಸರ್ವಹೃದಯವಾಸವು ಈ ಅಂತರ್ಯಾಮಿಯ ನಿಯಂತ್ರಣದಲ್ಲಿ ಜೀವರ ಕರ್ಮಫಲಭೋಗಕ್ಕಾಗಿ.
ತದುಕ್ತಮ್—
ಹಾಗಾಗಿಯೇ ಹೇಳಿದೆ— (ತಸ್ಮಾತ್ ಉಕ್ತಮ್)
"ದ್ವಾ ಸುಪರ್ಣಾ ಸಯುಜಾ ಸಖಾಯಾ
ಸಮಾನಂ ವೃಕ್ಷಂ ಪರಿಷಸ್ವಜಾತೇ |
ತಯೋರನ್ಯಃ ಪಿಪ್ಪಲಂ ಸ್ವಾದ್ವತ್ತಿ
ಅನಶ್ನನ್ ಅನ್ಯೋ ಅಭಿಚಾಕಶೀತಿ ||
(ಮುಣ್ಡಕೋಪನಿಷತ್ ೩.೧.೧)
ಇತಿ |
ಎರಡು ಸುಂದರರೆಕ್ಕೆಗಳ ಹಕ್ಕಿಜೋಡಿಯು ಸಖರು
ಒಂದೇ ಮರವನ್ನು ಆಶ್ರಯಿಸಿ ಇಹರು |
ಅವುಗಳಲ್ಲೊಂದು ಹಣ್ಣನು ಉಣ್ಣುತಿಹುದು
ಉಣ್ಣದೆಯೆ ಇನ್ನೊಂದು ಬರಿದೆ ಬೆಳಗುವುದು ( / ನೋಡುವುದು) ||
ಜೀವಾತ್ಮ ಪರಮಾತ್ಮ ಜೋಡಿಹಕ್ಕಿಗಳು
ಜೀವದೇಹವನಾಂತು ನೆಲೆಸುತ್ತಲಿಹರು |
ಜೀವ ತಾ ಕರ್ಮಫಲವನ್ನುಣ್ಣುತಿಹುದು
ದೇವನೋ ಉಣ್ಣದೆಯೆ ಉಣ್ಣಿಸುತಲಿಹನು ||
ಎಂಬುದಾಗಿ.
ಸ ಪುರುಷೋ ಅತ್ರ ದೇವತಾ | ತಥಾ ಚ ಶ್ರುತಿಃ "ಇಮೇ ವೈ ಲೋಕಾಃ ಪೂರಯಮ್ ಏವ ಪುರುಷಃ ಯಃ ಅಯಂ ಪವತೇ ಸಃ ಅಸ್ಯಾಂ ಪುರಿ ಶೇತೇ ತಸ್ಮಾತ್ ಪುರುಷಃ" (ಶತಪಥಬ್ರಾಹ್ಮಣೇ ೧೩.೬.೨.೧) ಇತಿ || ೧ ||
ಅಂತಹ ಪರಮಾತ್ಮನೂ, ದೇವನೂ ಆದ ಪುರುಷನೇ ಇಲ್ಲಿ (ಈ ಪುರುಷಸೂಕ್ತದಲ್ಲಿ) ಪ್ರತಿಪಾದ್ಯನಾದ ದೇವತೆಯು. ಹಾಗೆಯೇ ವೇದವಾಕ್ಯವಿದೆ— "ಈ ಎಲ್ಲಾ ಲೋಕಗಳು "ಪೂಃ" ಎನ್ನಲ್ಪಟ್ಟಿವೆ. ಇವನೇ ಪುರುಷನು ಯಾವ ಇವನು ಬೀಸುತ್ತಾ, ಹರಡುತ್ತಾ, ಪಾವನಗೊಳಿಸುತ್ತಾನೆಯೋ ಅಂಥವನು ಈ ಬ್ರಹ್ಮಾಂಡದಲ್ಲೂ, ಪಿಂಡಾಂಡ (ದೇಹ) ದಲ್ಲೂ ನೆಲೆಸಿರುತ್ತಾನೆ ಎಂಬುದರಿಂದ ಪುರುಷನು" ಎಂದಿದೆ ಶತಪಥಬ್ರಾಹ್ಮಣ.
ಸಾಯಣ-ಕೃಷ್ಣಯಜುರ್ವೇದೀಯಭಾಷ್ಯದಿಂದ—
ಅಥ ನಾರಾಯಣನಾಮ್ನಾ ಪುರುಷಸೂಕ್ತನಾಮ್ನಾ ಚ ವ್ಯವಹ್ರಿಯಮಾಣಃ ಅನುವಾಕಃ ಉಚ್ಯತೇ | ತಸ್ಯ ವಿನಿಯೋಗಂ ಮಹಾಗ್ನೌ ಆಪಸ್ತಮ್ಬಃ, ಆಹ | ಪುರಸ್ತಾತ್ ಪ್ರತೀಚೀಂ ಪುರುಷಾಕೃತಿಂ ಚಿನೋತಿ ಪುರುಷಶಿರೋ ಭವತಿ, ಸಹಸ್ರಶೀರ್ಷಾ ಪುರುಷಃ, ಇತಿ ಉಪಹಿತಾಂ ಪುರುಷೇಣ ನಾರಾಯಣೇನ ಯಜಮಾನಃ, ಉಪತಿಷ್ಠೇತ ಇತಿ | ಬ್ರಹ್ಮಮೇಧೇ ಅಪಿ ಪ್ರೇತದಾಹ-ಉಪಸ್ಥಾನೇ ವಿನಿಯೋಗಂ ಭರದ್ವಾಜಃ, ಆಹ— ನಾರಾಯಣಾಭ್ಯಾಮ್ ಉಪಸ್ಥಾನಮ್ ಇತಿ | ಅಯಂ ಚ ಉತ್ತರಃ ಚ ಇತಿ ಉಭೌ ಅನುವಾಕೌ ನಾರಾಯಣಮನ್ತ್ರಜ್ಞೌ ನಾರಾಯಣಾಖ್ಯೇನ ಕೇನಚಿತ್ ಋಷಿಣಾ ದೃಷ್ಟತ್ವಾತ್, ಜಗತ್ಕಾರಣಸ್ಯ ನಾರಾಯಣಾಖ್ಯಸ್ಯ ಪುರುಷಸ್ಯ ಪ್ರತಿಪಾದಕತ್ವಾತ್ | ತತ್ರ ಅಸ್ಮಿನ್ ದ್ವಾದಶೇ ಅನುವಾಕೇ ಪ್ರಥಮಾಮ್ ಋಚಾಮ್ ಆಹ— "ಸಹಸ್ರಶೀರ್ಷಾ ಪುರುಷಃ | ಸಹಸ್ರಾಕ್ಷಃ ಸಹಸ್ರಪಾತ್ | ಸ ಭೂಮಿಂ ವಿಶ್ವತೋ ವೃತ್ವಾ | ಅತ್ಯತಿಷ್ಠದ್ದಶಾಙ್ಗುಲಮ್ ||" ಇತಿ | (ಇತಃ ಪ್ರಭೃತಿ ಪೂರ್ವೋಕ್ತಸಾಯಣಋಗ್ಭಾಷ್ಯವತ್)
ಬಳಿಕ, ನಾರಾಯಣವೆಂಬ ಹೆಸರಿನಿಂದ ಹಾಗೂ ಪುರುಷಸೂಕ್ತವೆಂಬ ನಾಮದಿಂದ ವ್ಯವಹರಿಸಲ್ಪಡುವ ಅನುವಾಕವು ಹೇಳಲ್ಪಡುತ್ತದೆ. ಆಪಸ್ತಂಬರು ಅದರ ವಿನಿಯೋಗವು ಮಹಾಗ್ನಿಯಲ್ಲಿ ಎಂದರು. ಪೂರ್ವದಿಂದ / ಮುಂದಿನಿಂದ ಪಶ್ಚಿಮದೆಡೆಗೆ ಪುರುಷಾಕೃತಿಯನ್ನು (ಯಜ್ಞಪಶುವಾಗಿ) ಆಯ್ದುಕೊಳ್ಳುತ್ತಾನೆ, (ತನ್ಮೂಲಕ) ಪುರುಷನನ್ನೇ ತನ್ನ ಶಿರಸ್ಸಾಗುಳ್ಳವನಾಗುತ್ತಾನೆ, ಸಹಸ್ರಶೀರ್ಷಾ ಪುರುಷಃ, ಎಂಬ ಈ ಋಕ್ಕಿನಿಂದ ತ್ರಿಕರಣಪೂರ್ವಕವಾಗಿ ಪರಮಪುರುಷನಾದ ನಾರಾಯಣನ ಸನಿಹ ಯಜಮಾನನು ಸ್ಥಿತನಾಗಬೇಕು (ತನ್ಮಯನಾಗಬೇಕು, ತಲ್ಲೀನನಾಗಬೇಕು) ಎಂದು. ಬ್ರಹ್ಮಮೇಧದಲ್ಲೂ ಪ್ರೇತದಾಹದ (?ಶವದಹನದ ಚಿತಾಗ್ನಿಯ) ಸನಿಹ ನಿಲ್ಲುವಾಗಲೂ ವಿನಿಯೋಗವಿದೆಯೆಂದು ಭರದ್ವಾಜನು ಹೇಳಿರುವನು— ನಾರಾಯಣದ್ವಯದೊಂದಿಗೆ (ಪುರುಷಸೂಕ್ತ / ನಾರಾಯಣಾನುವಾಕ ಹಾಗೂ ಉತ್ತರನಾರಾಯಣಾನುವಾಕಗಳೊಂದಿಗೆ) ನೆಲೆಸುವಿಕೆ (ಮೃತನಿಗೆ ವೈಕುಂಠಪ್ರಾಪ್ತಿಗಾಗಿ)ಎಂದು. ಈ ಪುರುಷಸೂಕ್ತವೂ, ಮುಂದಿನ ಉತ್ತರನಾರಾಯಣವೂ— ಇವೆರಡು (ಉಭಯ) ಅನುವಾಕಗಳೂ ನಾರಾಯಣಮಂತ್ರಗಳೆಂದು ಜ್ಞಾತವಾದವೂ, ನಾರಾಯಣನೆಂಬ ಯಾವಾನೊಬ್ಬ ಋಷಿಯಿಂದ ದೃಷ್ಟವಾದ ದೆಸೆಯಿಂದಾಗಿ ಹಾಗೂ ಜಗತ್ಕಾರಣನಾದ ನಾರಾಯಣನೆಂಬ ಪರಮಪುರುಷನ ಪ್ರತಿಪಾದಕತ್ವದಿಂದಾಗಿ. ಅಲ್ಲಿ, ಈ ೧೨ನೆಯ ಅನುವಾಕದಲ್ಲಿ, ಮೊದಲನೆಯ ಋಚೆಯನ್ನು ಹೇಳುತ್ತಾನೆ— "ಸಹಸ್ರಶೀರ್ಷಾ ಪುರುಷಃ | ಸಹಸ್ರಾಕ್ಷಃ ಸಹಸ್ರಪಾತ್ | ಸ ಭೂಮಿಂ ವಿಶ್ವತೋ ವೃತ್ವಾ | ಅತ್ಯತಿಷ್ಠದ್ದಶಾಙ್ಗುಲಮ್ ||" ಎಂದು. (ಇಲ್ಲಿಂದ ಮುಂದೆ, ಹಿಂದೆ ಹೇಳಿದ ಸಾಯಣಋಗ್ಭಾಷ್ಯದಲ್ಲಿದ್ದಂತೆಯೇ)
ಭಟ್ಟಭಾಸ್ಕರ-ಕೃಷ್ಣಯಜುರ್ವೇದಭಾಷ್ಯದಿಂದ —
ಅಥ ಪುರುಷಾನುವಾಕಃ - ಸಹಸ್ರಶೀರ್ಷ-ಇತ್ಯಾದಿ || ಆನುಷ್ಟುಭಃ ಸರ್ವಃ ಅನುವಾಕಃ ವಿಶೇಷೋ ವಕ್ಷ್ಯತೇ | ಅಗ್ನೌ ಪುರುಷಾಕೃತೌ ಚೀಯಮಾನಾಯಾಂ ಪುರುಷಶಿರಃ ಉಪಹಿತಸ್ಯ ಶಿರಃ ಕೃತ್ವಾ ಪುರುಷಾಕೃತಿಮ್ ಉಪಹಿತಾಂ ಪುರುಷೇಣ ನಾರಾಯಣೇನ ಯಜಮಾನಃ, ಉಪತಿಷ್ಠತೇ | ಪುರುಷಮೇಧೇ ಚ "ಪಶೂನ್ ಉಪಾಕೃತಾನ್ ದಕ್ಷಿಣತಃ ಅವಸ್ಥಾಪ್ಯ ಬ್ರಹ್ಮಾ ಸಹಸ್ರಶೀರ್ಷಾ ಪುರುಷಃ - ಇತಿ ಪುರುಷೇಣ ನಾರಾಯಣೇನ ಪರಾಚಾ ಅನುಶಂಸತಿ | ಅಥ ನಾರಾಯಣಾಭ್ಯಾಮ್ ಉಪಸ್ಥಾನಮ್" ಇತ್ಯಾದಿಷು ವಿನಿಯೋಗಃ | ಅಯಮ್ ಉತ್ತರಃ ಚ ಅನುವಾಕೌ ನಾರಾಯಣಾಖ್ಯೌ, ನಾರಾಯಣಾಖ್ಯೇನ ಋಷಿಣಾ ದೃಷ್ಟೌ | ಆಭ್ಯಾಂ ಚ ಪುರುಷಾಖ್ಯೋ ನಾರಾಯಣಃ ಪ್ರತಿಪಾದ್ಯತೇ |
ಇನ್ನು ಪುರುಷಾನುವಾಕವು— ಸಹಸ್ರಶೀರ್ಷ— ಇತ್ಯಾದಿಯಾಗಿ. ಅನುಷ್ಟುಪ್ ಛಂದಸ್ಸಿನದು ಇಡೀ ಅನುವಾಕವು, ವಿಶೇಷತೆಯಿರುವುದನ್ನು (ವ್ಯತ್ಯಾಸವಿರುವುದನ್ನು ಸಾಂದರ್ಭಿಕವಾಗಿ) ಮುಂದೆ ಹೇಳಲಾಗುವುದು. ಅಗ್ನಿಯು / ಯಜ್ಞಾಗ್ನಿಯು ಪುರುಷಾಕೃತಿಯಲ್ಲಿ ಸಂಸ್ಕರಿಸಲ್ಪಡುತ್ತಿರಲಾಗಿ / ಸಿದ್ಧಪಡಿಸಲ್ಪಡುತ್ತಿರುವಾಗ, ಪುರುಷಶಿರವನ್ನು ಸಮೀಪದಲ್ಲಿ ನಿಹಿತವಾಗಿರುವ / ಉಪಸ್ಥಿತವಾಗಿರುವ / ಉಪಹಿತವಾಗಿರುವ ಪುರುಷಮೇಧದ ಪಶುವಿನ ಶಿರವನ್ನಾಗಿ ಮಾಡಿ / ಕಲ್ಪಿಸಿ, ಹೀಗೆ ಬಳಿಯಿರುವ ಪರಮಪುರುಷನಾದ ಶ್ರೀಮನ್ನಾರಾಯಣನೊಂದಿಗೆ ಯಜ್ಞಕರ್ತೃವಾದ ಯಜಮಾನನು ನೆಲೆನಿಲ್ಲುತ್ತಾನೆ. ಹಾಗೆಯೇ, ಪುರುಷಮೇಧದಲ್ಲಿ "ಬಳಿತರಲ್ಪಟ್ಟ ಯಜ್ಞಪಶುಗಳಾದ ಪುರುಷರನ್ನು ಬಲಭಾಗದಲ್ಲಿ / ದಕ್ಷಿಣದಿಕ್ಕಿನಲ್ಲಿ ಕೆಳಗೆ ಕುಳ್ಳಿರಿಸಿ, ಬ್ರಹ್ಮಸ್ಥಾನೀಯನು ಸಹಸ್ರಶೀರ್ಷಾ ಪುರುಷಃ - ಎಂದು ಪುರುಷಸೂಕ್ತ ಹಾಗೂ ಉತ್ತರನಾರಾಯಣಾನುವಾಕಗಳಿಂದ ಮುಕ್ತವಾಗಿ (ಬಹಿರಂಗದಲ್ಲಿ; ಪ್ರತ್ಯಕ್— ಅಂತರ್ಮುಖ, ಪರಾಕ್— ಬಹಿರ್ಮುಖ; ಪರಾಚಾ— ತೃತೀಯಾವಿಭಕ್ತಿ) ಋಚೆಗಳ ಅನುಸಾರ ಪರಮಪುರುಷಸ್ವರೂಪನ್ನು ಪ್ರಶಂಸಿಸುತ್ತಾನೆ. ಬಳಿಕ ನಾರಾಯಣ-ಉತ್ತರನಾರಾಯಣ ಮಂತ್ರಗಳಿಂದ ಉಪಸ್ಥಾನವು (ಯಜ್ಞಾಗ್ನಿಯ ಬಳಿ ಇರುವಿಕೆ, ಉಪ— ಸಮೀಪ, ಸ್ಥಾನ— ನೆಲೆ)"— ಇತ್ಯಾದಿಗಳಲ್ಲಿ ಈ ಮಂತ್ರಗಳ ವಿನಿಯೋಗವು. ಇದೂ, ಅನಂತರದ ಉತ್ತರನಾರಾಯಣವೂ— ನಾರಾಯಣಮಂತ್ರನಾಮಕವಾದವೂ, ನಾರಾಯಣ ಋಷಿಯಿಂದ ಕಾಣಲ್ಪಟ್ಟವೂ ಆಗಿವೆ. ಇವೆರಡರಿಂದಲೂ ಪುರುಷನಾಮಕ ನಾರಾಯಣನು ಪ್ರತಿಪಾದಿಸಲ್ಪಡುತ್ತಾನೆ.
ಉಕ್ತಂ ಚ — ಆತ್ಮನಿ ಪುರುಷಾವಸ್ಥೇ ಪ್ರಪಂಚಪ್ರವಿಷ್ಟಃ ಪುರುಷಃ, ಉತ್ತೀರ್ಣಃ ಪರಮಾತ್ಮಾ ಇತಿ | ಪುರುಷಸೂಕ್ತಮ್ ಇತಿ ಚ ಏನಂ ಬಹ್ವೃಚಾಃ, ಆಹುಃ | ಅಥ "ಸಹಸ್ರಶೀರ್ಷಂ ದೇವಮ್" ಇತಿ ಅಪರೋ ನಾರಾಯಣಾನುವಾಕೋ ಭವಿಷ್ಯತಿ, ಯತ್ರ ಪರಮಾತ್ಮಾ ಪ್ರಣವಾಖ್ಯೋ ನಾರಾಯಣಃ ಪ್ರತಿಪಾದ್ಯತೇ | ತಸ್ಯ ಅಗ್ನಿ-ಆದಿ-ಶ್ರೌತಪುರುಷವತ್ ಕರ್ಮಸಮ್ಬನ್ಧ-ಅಭಾವಾತ್ ಇಹ ಆಮ್ನಾನಮ್ | ಅತ್ರ ಪುರುಷಾಖ್ಯ-ಅಪೇಕ್ಷಿತ-ಆವರಣಸ್ಥಾನೀಯಂ ದೇಹವಿಶೇಷಂ ಮಹಾಪುರುಷಸ್ಯ ನಿರೂಪಯತಿ— ಸಹಸ್ರಶೀರ್ಷಾ ಅನೇಕಶಿರಸ್ಕಃ | "ಶೀರ್ಷಶ್ಛನ್ದಸಿ" (ಪಾ.ಸೂ.೬.೧.೬೦) ಇತಿ ಶೀರ್ಷನ್-ಭಾವಃ | ಪುರಿ ಶೇತೇ ಇತಿ ಪುರುಷಃ | ಪೃಷೋದರಾದಿಃ | ಸಹಸ್ರಾಕ್ಷಃ, ಅನೇಕದೃಷ್ಟಿಃ | ….| ……| ಸಹಸ್ರಪಾತ್ ಅನೇಕಚರಣಃ | "ಸಙ್ಖ್ಯಾಸುಪೂರ್ವಸ್ಯ" (ಪಾ.ಸೂ.೫.೪.೧೪೦) ಇತಿ ಪಾದಶಬ್ದಸ್ಯ ಪಾತ್-ಭಾವಃ | ಸರ್ವತ್ರ ಶಿರಃಪ್ರಭೃತಿಕಾರ್ಯಸದ್ಭಾವಾತ್ ಶಿರಃ ಪ್ರಭೃತೀನಾಮ್ ಅನೇಕತ್ವಮ್ | ಯದ್ವಾ— "ಪುರುಷ ಏವೇದಂ ಸರ್ವಮ್" ಇತಿ ತಸ್ಯ ವಿಶ್ವಾತ್ಮತ್ವಾತ್ ಅಸ್ಮದಾದಿಸಮ್ಬನ್ಧಿನಃ ಶಿರಃಪ್ರಭೃತಯೋ ಅವಯವಾಃ ತಸ್ಯ ಏವ ಅವಯವಾಃ, ಇತಿ ತೇಷಾಮ್ ಅನೇಕತ್ವ-ಉಪಪತ್ತಿಃ |
ಹೀಗೆ ಹೇಳಿದೆ— ತಾನಾಗಿ ಪುರುಷಾವಸ್ಥೆಯಲ್ಲಿ ಪ್ರಪಂಚವನ್ನು ಪ್ರವೇಶಿಸಿದ ಪರಮಪುರುಷನು, ಸಾಕ್ಷಾತ್ ನಿತ್ಯಮುಕ್ತನಾದ / ಮುಕ್ತಿಪದನಾದ ಪರಮಾತ್ಮನೇ ಎಂಬುದಾಗಿ. ಈ ಸೂಕ್ತವನ್ನು ಪುರುಷಸೂಕ್ತವೆಂದು ಬಹ್ವೃಚಸಂಪ್ರದಾಯಸ್ಥರು ಹೇಳುವರು (ಬಹು ಋಚೆಗಳಿರುವ ಋಗ್ವೇದಸಂಹಿತೆಗೆ ಬಹ್ವೃಚಸಂಹಿತೆಯೆನ್ನುವರು. ಹೀಗಾಗಿ ಬಹ್ವೃಚರೆಂದರೆ ಋಗ್ವೇದಿಗಳು). ಬಳಿಕ, "ಸಹಸ್ರಶೀರ್ಷಂ ದೇವಮ್" ಎಂಬ ಇನ್ನೊಂದು ನಾರಾಯಣಾನುವಾಕವೂ ಮುಂದೆ ಬರುವುದು. ಇದರಲ್ಲಿ (ಯತ್ರ— ಎಲ್ಲಿ), ಪ್ರಣವನಾಮಕ ನಾರಾಯಣನು ಪ್ರತಿಪಾದಿಸಲ್ಪಡುತ್ತಾನೆ. ಆತನಿಗೆ ಅಗ್ನಿಯೆ ಮುಂತಾದ ಶ್ರುತ್ಯುಕ್ತ (ಶ್ರೌತ, ವೇದೋಕ್ತ) ದೈವೀಪುರುಷರಂತೆ ಕರ್ಮಸಂಬಂಧ ಇಲ್ಲದಿರುವುದರಿಂದ ಇಲ್ಲಿ ನಾರಾಯಣನನ್ನೇ ಪುರುಷನೆನ್ನಲಾಗಿದೆ. ಇಲ್ಲಿ, ಸಾಮಾನ್ಯ ಪುರುಷನೆಂಬವನಿಗೆ ನಿರೀಕ್ಷಿತವಾದ (ಅಪೇಕ್ಷಿತವಾದ, ಲೌಕಿಕವಾಗಿ ಬೇಕಾದ) ಆವರಣರೂಪವಾದ ದೇಹವಿಶೇಷವನ್ನು ಮಹಾಪುರುಷನಿಗೆ ಹೇಗಿರುವುದೆಂಬುದಾಗಿ ನಿರೂಪಿಸುತ್ತಾನೆ— ಸಹಸ್ರಶೀರ್ಷಾ— ಅನೇಕ ಶಿರಸ್ಸುಳ್ಳವನು. "ಶೀರ್ಷಸ್ ವೇದದಲ್ಲಿ" ಎಂಬ ಪಾಣಿನಿಸೂತ್ರದಂತೆ ಶೀರ್ಷಗಳುಳ್ಳವನೆಂಬ ಭಾವ "ಶೀರ್ಷಾ" (ಮಹಾಕರ್ಮಾ— ಮಹಾನ್ ಕರ್ಮಗೈಯಬಲ್ಲವನು ಎಂಬಂತೆ, ಸಹಸ್ರಶೀರ್ಷಾ— ಅನಂತ ಶಿರಗಳುಳ್ಳವನು). ದೇಹವೆಂಬ / ವಿಶ್ವವೆಂಬ ಪುರದಲ್ಲಿ ನಿವಾಸಿಸುತ್ತಾನೆ, ಶಯನಿಸುತ್ತಾನಾದ್ದರಿಂದ ಪುರುಷನು. ಅಂತೆಯೇ ಪೃಷೋದರ (ಹೆಪ್ಪುಗಟ್ಟಿಸಿದ ಹಾಲಿಗೆ ತುಪ್ಪ ಬೆರೆಸಿದ ಹವಿಃಪದಾರ್ಥ) ಮೊದಲಾದವು ಪುರುಷದೇವತೆಗೆ ಪ್ರಿಯ. ಸಹಸ್ರಾಕ್ಷಃ— ಅನೇಕ / ಅನಂತ / ಅಸಂಖ್ಯ ವಿಭಿನ್ನ ದೃಷ್ಟಿಗಳುಳ್ಳವನು. ……...ಸಹಸ್ರಪಾತ್— ಅನಂತ ಚರಣಗಳುಳ್ಳವನು. "ಸಂಖ್ಯೆಗಳಲ್ಲಿ ಹಿಂದಿನದಕ್ಕೆ" ಎಂಬ ಪಾಣಿನಿಸೂತ್ರದನ್ವಯ ಪಾದಶಬ್ದಕ್ಕೆ ಪಾತ್— ರೂಪವು. (ದಕಾರದ ಪೂರ್ವರೂಪ ತಕಾರ). ಎಲ್ಲೆಡೆ ತಲೆಯೇ ಮುಂತಾಗಿರುವ ಪರಮಪುರುಷನ ಸಾರ್ವತ್ರಿಕ, ಸಾರ್ವದೇಶಿಕ, ಸಾರ್ವಕಾಲಿಕ ಕಾರ್ಯವೈಖರಿಯಿರುವ ದೆಸೆಯಿಂದಾಗಿ ತಲೆಯೇ ಮುಂತಾದ ಸರ್ವಾಂಗಗಳಿಗೂ ಅನೇಕತೆ, ಅಸಂಖ್ಯತ್ವ, ಅನಂತತೆ. ಅಥವಾ— "ಪುರುಷನೇ ಇದೆಲ್ಲವೂ" ಎಂಬಂತೆ ಆತನ ವಿಶ್ವಾತ್ಮತ್ವದಿಂದಾಗಿ ಜೀವರಾದ ನಮ್ಮೆಲ್ಲರಿಗೆ ಸಂಬಂಧಿಸಿದ ತಲೆಯೇ ಮುಂತಾದ ಸರ್ವಾಂಗಗಳೂ ಆತನವೇ ಅವಯವಗಳೆಂಬುದರಿಂದಾಗಿಯೂ ಆ ಅವಯವಗಳಿಗೆ ಅನೇಕತ್ವವು ಪ್ರಾಪ್ತವಾಗುವುದು / ಸಿದ್ಧಿಸುವುದು.
ಸಃ ಪುರುಷಃ ಭೂಮಿಂ ಭೂಮ್ಯಾದೀನ್ ವಿಕಾರಾನ್ ವಿಶ್ವತಃ ಸರ್ವತಃ ವೃತ್ವಾ ವ್ಯಾಪ್ಯ ಮೃತ್ ಇವ ಘಟಾದೀನ್ ಸ್ವ-ಅಭೇದೇನ ಛಾದಯಿತ್ವಾ ಅತ್ಯತಿಷ್ಠತ್ ಅತೀತ್ಯ ತಿಷ್ಠತಿ ಅತಿಕ್ರಮ್ಯ ವಿಕಾರಾವಸ್ಥಾಂ ಸ್ವೇನ ಏವ ರೂಪೇಣ ತಿಷ್ಠತಿ ದಶಾಙ್ಗುಲಂ ದಶಾಙ್ಗುಲಿಪ್ರಮಾಣ-ಅವಚ್ಛಿನ್ನಮ್ | ದಶ ಅಙ್ಗುಲಯಃ ಪ್ರಮಾಣಮ್ ಅಸ್ಯ ಇತಿ …..| ಅತ್ರ ಸಾಮರ್ಥ್ಯಾತ್ ಹೃದಯಾಕಾಶಪರಿಗ್ರಹಃ | ಹೃದಯಾಕಾಶಸ್ಯ ಏವ ದಶಾಙ್ಗುಲಮ್ ಇತಿ ಆಖ್ಯಾ ಇತಿ ಕೇಚಿತ್ | ಹೃದಯಂ ದಹರಂ ಗಗನಂ ಪುರುಷಃ, ಇತಿ ಪರ್ಯಾಯಃ | ಯದ್ವಾ— ಸರ್ಗಪ್ರಕರಣಮ್ ಇದಮ್, ಅತಃ ವಿಕಾರಜಾತಂ ಭೂಮ್ಯಾದಿಕಂ ಸರ್ವಂ ವೃತ್ವಾ ಪದೇನ ಏವ ಘನಮ್ ಆವೃತ್ಯ ದಶಾಙ್ಗುಲಮ್ ಅತಿತಿಷ್ಠತಿ, ದಶಾಙ್ಗುಲಾತ್ ಅಧಃ, ಅಧಿಷ್ಠಾನಂ ನ ಕರೋತಿ, ಅತ ಏವ ಭೂಮೇಃ ದಶಾಙ್ಗುಲಾತ್ ಅಧಃ ಅಙ್ಕುರಾದೇಃ ಅನುತ್ಪತ್ತಿಃ | ಸರ್ವಗತತ್ವೇ ಅಪಿ ಪುರುಷಸ್ಯ ಸಿಸೃಕ್ಷಾ ಉಪಧಾನಮೂಲಕಾರಣಾತ್ಮಕತ್ವಾತ್ ಸರ್ವಕಾರ್ಯದೇಶವ್ಯಾಪ್ತ್ಯಾ ಏವ ಸ್ವಪ್ರಯೋಜನ-ಸಮ್ಪಾದನಾತ್ ತತ್ ಏವ ತಸ್ಯ ಸರ್ವಗತತ್ವಮ್ ಇತಿ ದಶಾಙ್ಗುಲಾತ್ ಪರತಃ ನ ವ್ಯಾಪ್ನೋತಿ ಪ್ರಯೋಜನ-ಅಭಾವಾತ್ ಇತಿ ಕೇಚಿತ್ || ೧ ||
ಸಃ— ಅವನು (ಆ ಪುರುಷನು), ಭೂಮಿಂ— ಭೂಮಿಯೇ ಮುಂತಾದ ಸೃಷ್ಟಿವೈಚಿತ್ರ್ಯಗಳನ್ನು, ವಿಶ್ವತಃ— ಎಲ್ಲೆಡೆಯಿಂದ, ವೃತ್ವಾ— ಆವರಿಸಿ, ವ್ಯಾಪಿಸಿ, ಮಣ್ಣು ಮಡಕೆಯೇ ಮುಂತಾದ ಮಣ್ಣಿನ ಪಾತ್ರೆಗಳನ್ನು ಮಣ್ಣು ಅಭಿನ್ನವಾಗಿ ಆವರಿಸಿರುವಂತೆಯೇ ಸೃಷ್ಟಿಯನ್ನೆಲ್ಲ ಆಚ್ಛಾದಿಸಿ / ಮುಚ್ಚಿ / ಆವರಿಸಿ, ಅತ್ಯತಿಷ್ಠತ್— ಈ ಸೃಷ್ಟಿಯೆಂಬ ತನ್ನದೇ ವಿಕಾರವನ್ನು ಅತಿಕ್ರಮಿಸಿ / ಮೀರಿ, ಸೃಷ್ಟಿಗೆ ಅತೀತನಾಗಿ, ತನ್ನದೇ ಸ್ವಯಂ ಅವಿಕಾರಿಯಾದ ಮೂಲರೂಪದಿಂದ ಸ್ಥಿತನಾಗಿರುವನು, ದಶಾಙ್ಗುಲಮ್— ಹತ್ತು ಬೆರಳುಗಳಷ್ಟು ಆಚೆಗೆ ಅವಚ್ಛಿನ್ನವಾಗಿ / ನಿರಂತರವಾಗಿ / ಎಡೆಬಿಡದೆ ಪರಿಪೂರ್ಣವಾಗಿ ತುಂಬಿಕೊಂಡಿರುವನು. "(ಸೃಷ್ಟಿಯಾಚೆಗೂ) ಹತ್ತು ಅಂಗುಲಿಗಳ / ಬೆರಳುಗಳ ಪ್ರಮಾಣದ ಅಳತೆಯು ಇವನದು ಎಂದು".... ಇಲ್ಲಿ ಆತನ ಸಾಮರ್ಥ್ಯದ ದೆಸೆಯಿಂದಾಗಿ ಹೃದಯಾಕಾಶವೆಂಬರ್ಥವೂ ಪರಿಗೃಹೀತವಾಗುವುದು / ಸ್ವೀಕೃತವಾಗುವುದು. ಹೃದಯಾಕಾಶಕ್ಕೇ ದಶಾಂಗುಲವೆಂಬ ಹೆಸರೆಂದು ಕೆಲವರು. ಹೃದಯಾಕಾಶ, ದಹರಾಕಾಶ, ಗಗನ, ಪುರುಷ— ಎಂದು ಪರ್ಯಾಯಪದಗಳು. ಅಥವಾ— ಸೃಷ್ಟಿಪ್ರಕರಣದ ದ್ಯೋತಕವಿದು. ಹೀಗಾಗಿ, ಪರಮಾತ್ಮನ ವಿಕಾರದಿಂದಲೇ ಹುಟ್ಟಿದ ಭೂಮಿಯೇ ಮೊದಲಾದ ಎಲ್ಲವನ್ನೂ ತನ್ನ ಪಾದದಿಂದಲೇ (ಕಾಲುಭಾಗ / ಒಂದಂಶದಿಂದಲೇ) ಸ್ವ-ದಾರ್ಢ್ಯದಿಂದ / ಸು-ದೃಢತೆಯಿಂದ ದೃಢವಾಗಿಯೂ ವಿಸ್ತೃತವಾಗಿಯೂ ಆವರಿಸಿ (ಘನಃ— ದಾರ್ಢ್ಯಮ್, ವಿಸ್ತಾರಃ), ಹತ್ತಂಗುಲ ಹೊರಗವಚದಲ್ಲಿ ಮಾತ್ರ ನಿಲ್ಲುತ್ತಾನೆ. ನೆಲದ ಹತ್ತಂಗುಲಕ್ಕಿಂತ ಆಳದಲ್ಲಿ ಇರುವುದಿಲ್ಲ. ಹೀಗಾಗಿಯೇ, ಭೂಮಿಯೊಳಗೆ ಹತ್ತಂಗುಲಕ್ಕಿಂತಲೂ ಅಡಿಯಲ್ಲಿ, ಬೀಜವು ಮೊಳಕೆಯೊಡೆಯುವುದಿಲ್ಲ, ಅರ್ಥಾತ್ ಸೃಷ್ಟಿಶಕ್ತಿಯಿರುವುದಿಲ್ಲ. ಪುರುಷನಿಗೆ ಸರ್ವಗತತ್ವವು / ಸರ್ವವ್ಯಾಪಕತ್ವವು ಇದ್ದಾಗ್ಯೂ, ಸೃಷ್ಟಿಮಾಡುವ ಇಚ್ಛೆಯ (ಸ್ರಷ್ಟುಮ್ ಇಚ್ಛಾ— ಸಿಸೃಕ್ಷಾ) ವ್ರತ ಹಾಗೂ (ಉಪಧಾನಮ್), ಸರ್ವಮೂಲಕಾರಣಾತ್ಮಕತ್ವದಿಂದಾಗಿ, ಎಲ್ಲ ಕಾರ್ಯವಾಗಬೇಕಾದ ಪ್ರದೇಶಗಳ ವ್ಯಾಪಿಸುವಿಕೆಯಿಂದಲೇ ತನ್ನ ಸೃಷ್ಟ್ಯಾದಿಕಾರ್ಯಗಳಿಗೆ ಪ್ರಯೋಜನವಾಗುವುದರಿಂದಾಗಿ, ಅಂಥಲ್ಲಿ ಮಾತ್ರ ವ್ಯಾಪಿಸಿರುವುದೂ ಆತನ ಸರ್ವಗತತ್ವವೇ ಆಗಿರುವುದೆಂದೂ, ಯಾವುದೇ ಪ್ರಯೋಜನವಿಲ್ಲದಿರುವುದರಿಂದ ಸೃಷ್ಟಿಯ ಹತ್ತಂಗುಲ ಆಚೆಯ ಪ್ರದೇಶದಲ್ಲಿ ವ್ಯಾಪಿಸುವುದಿಲ್ಲ ಎಂದೂ ಕೆಲವರ ಮತ.
Comments
Post a Comment