ಪುರುಷಸೂಕ್ತಭಾಷ್ಯಮ್ ೫
ಪುರುಷಸೂಕ್ತಭಾಷ್ಯಮ್ ೫
ರಂಗರಾಮಾನುಜಭಾಷ್ಯ—
(ಅವತಾರಿಕಾ)
ಅತಸೀಗುಚ್ಛಸಚ್ಛಾಯಮ್
ಅಞ್ಚಿತೋರಃಸ್ಥಲಂ ಶ್ರಿಯಾ |
ಅಞ್ಜನಾಚಲಶೃಙ್ಗಾರಮ್
ಅಞ್ಜಲಿರ್ಮಮ ಗಾಹತಾಮ್ ||
ಅಗಸೆಗುಚ್ಛದ ಸೊಂಪು ನೆರಳಿನ
ಜಗದ ಮೂಲಾಶ್ರಯನ, ಎದೆಯಲಿ
ಸೊಗದಿ ಸಿರಿಯಿಂ ನಿತ್ಯವೂ ಸೇವಿಪನ ಕೇಶವನ |
ಮಿಗೆ ಸೊಬಗಿನಲಿ ಅಂಜನಾಚಲ
ನಗಕೆ ವರಸಿಂಗಾರವಾದನ
ಖಗದಿ ಚರಿಪನ ಸೇವಿಸಲಿ ಮಮ ಕರಗಳನುಚಣವು ||
ಅಗಸೆಗುಚ್ಛದ ಸೊಂಪಾದ ನೆರಳಿನಂತೆ ಸರ್ವಾಶ್ರಯನಾದ, ಶ್ರೀದೇವಿ / ಲಕ್ಷ್ಮೀದೇವಿ ಯಿಂದ ಉಪಚರಿಸಲ್ಪಡುವ ವಕ್ಷಸ್ಥಳವುಳ್ಳ, ಅಂಜನಾಚಲವೆಂಬ ಗಿರಿಗೆ ಅಲಂಕಾರಪ್ರಾಯನಾದ ಮಹಾವಿಷ್ಣುವನ್ನು ನನ್ನ ಅಂಜಲಿಗಳು (ನಮಿಸುತ್ತಿರುವ ಹಸ್ತಗಳು) ತಲುಪಿ, ಆತನಲ್ಲೇ ಮುಳುಗಿ, ಮಾಡುವುದೆಲ್ಲವೂ ಆತನ ಸೇವೆಯೇ ಆಗಿ, ತನ್ಮಯವಾಗಲಿ.
ಯತಃ ಪ್ರಪಞ್ಚಸಮ್ಭೂತಿ-
-ವಿಭೂತಿ-ಪರಿಭೂತಯಃ |
ಪುರುಷಾಯ ನಮಸ್ತಸ್ಮೈ
ಪರಸ್ಮೈ ವಿಸ್ಮಯಾತ್ಮನೇ ||
ಯಾವ ವಿಸ್ಮಯದಿಂದ ಜಗವಿದು
ಭಾವನಾತ್ಮಕವಾಗಿ ಜನಿಸಿತೊ
ಕಾವ ಸಂಹರಿಪಂಥ ಪರತತ್ತ್ವವದು ಯಾವುದದು |
ದೇವ ಪರಮಾತ್ಮನ ವಿಭೂತಿಯ
ದಾವ ಪರಶಕ್ತಿಯ ವಿಲಾಸವ
ದಾ ವರಪ್ರದ ಮೂಲಪುರುಷಗೆ ಕೋಟಿನಮನಗಳು ||
ಯಾವನಿಂದಾಗಿಯೇ ಈ ಪ್ರಪಂಚದ ಸೃಷ್ಟಿ-ಸ್ಥಿತಿ-ಲಯಗಳಾಗುತ್ತವೆಯೋ, ಅಂತಹ ಅದ್ಭುತ ವಿಸ್ಮಯಕಾರಿಯಾದ ಪರಮಪುರುಷನಿಗೆ ನಮಸ್ಕಾರ.
ತಂ ಪ್ರಣಮ್ಯಾದಿಪುರುಷಂ
ಜಗತಾಮಾದಿಕಾರಣಮ್ |
ದುರ್ಜ್ಞಾನಂ ಪೌರುಷಂ ಸೂಕ್ತಂ
ವ್ಯಾಕರೋಮಿ ಯಥಾಮತಿ ||
ಯಾರನ್ನು ಪೂರ್ಣವಾಗಿ ತಿಳಿಯಲು ದುಸ್ಸಾಧ್ಯವೋ ಅಂತಹ, ಜಗತ್ತಿಗೆ ಆದಿಕಾರಣನಾದ ಮೂಲಪುರುಷನನ್ನು ಪ್ರಣಾಮಮಾಡಿ, ನನ್ನ ಮತಿಗೆ ತಿಳಿಯುವಷ್ಟು, ಪುರುಷಸೂಕ್ತವನ್ನು ವ್ಯಾಖ್ಯಾನಿಸುತ್ತೇನೆ.
ಶ್ರೀಪಾದ್ಮೇ ಪುರಾಣೇ— (ಪದ್ಮಪುರಾಣದಲ್ಲಿ)
ಇದಂ ಪುರುಷಸೂಕ್ತಂ ಹಿ ಸರ್ವವೇದೇಷು ಪಠ್ಯತೇ |
ಅತಃ ಶ್ರುತಿಭ್ಯಃ ಸರ್ವಾಭ್ಯೋ ಬಲವತ್ ಸಮುದೀರಿತಮ್ ||
ಈ ಪುರುಷಸೂಕ್ತವಾದರೋ ಎಲ್ಲಾ ವೇದಗಳಲ್ಲೂ ಪಠಿಸಲ್ಪಡುವುದು. ಆದ್ದರಿಂದ, ಎಲ್ಲ ಮಂತ್ರಗಳಿಗಿಂತಲೂ ಅತ್ಯಂತ ಅಧಿಕ ಪ್ರಭಾವವುಳ್ಳದ್ದೆಂದು ಹೇಳಲ್ಪಟ್ಟಿದೆ.
ಇದಂ ಪುರುಷಸೂಕ್ತಂ ಹಿ ಯಜುಷ್ಯಷ್ಟಾದಶರ್ಚಕಮ್ |
ಋಗ್ವೇದೇ ಷೋಡಶಾರ್ಚಂ ಸ್ಯಾತ್ ಪಞ್ಚ ವಾಜಸನೇಯಕೇ ||
ಈ ಪುರುಷಸೂಕ್ತವಾದರೋ ತೈತ್ತಿರೀಯಕೃಷ್ಣಯಜುರ್ವೇದದ ಆರಣ್ಯಕದಲ್ಲಿ ೧೮ ಋಕ್ಕುಗಳುಳ್ಳದ್ದೂ, ಋಗ್ವೇದಸಂಹಿತೆಯಲ್ಲಿ ೧೬ ಋಕ್ಕುಗಳುಳ್ಳದ್ದೂ, ವಾಜಸನೇಯಿ-ಶುಕ್ಲಯಜುರ್ವೇದದಲ್ಲಿ ೫ ಋಕ್ಕುಗಳುಳ್ಳದ್ದೂ ಆಗಿರುವುದು.
ಸಾಮವೇದೇ ತು ಸಪ್ತರ್ಚಂ ತಥೈವಾಥರ್ವಣೇऽಪಿ ಚ |
ವೇದೇಷು ಯಾಜುಷಂ ವೇದಮವಲಮ್ಬ್ಯ ವದಾಮ್ಯಹಮ್ |
ಮದರ್ವಾಚೀನತಾಂ ಪ್ರೇಕ್ಷ್ಯ ನೋಪೇಕ್ಷನ್ತಾಂ ಮನೀಷಿಣಃ ||
ಸಾಮವೇದದಲ್ಲಾದರೋ ೭ ಋಚೆಗಳುಳ್ಳದ್ದೂ, ಹಾಗೆಯೇ ಅಥರ್ವವೇದದಲ್ಲಾದರೋ ೧೬ ಋಚೆಗಳುಳ್ಳದ್ದೂ ಆಗಿರುವುದು. ವೇದಗಳಲ್ಲಿ ತೈತ್ತಿರೀಯಕೃಷ್ಣಯಜುರ್ವೇದವನ್ನವಲಂಬಿಸಿ ಪುರುಷಸೂಕ್ಯವ್ಯಾಖ್ಯಾನವನ್ನು ಹೇಳುತ್ತೇನೆ. ಮನೀಷಿಗಳು (ಜ್ಞಾನಿಗಳು, ವಿದ್ವಾಂಸರು) ನಾನು ಪ್ರಾಚೀನನಲ್ಲವೆಂದು ನನ್ನ ಅರ್ವಾಚೀನತೆಯನ್ನು ಮನಗಂಡು ಉಪೇಕ್ಷಿಸಬೇಡಿ / ನಿರ್ಲಕ್ಷಿಸಬೇಡಿ.
ಶ್ರುತಿಷು ಪ್ರಬಲಾ ಮನ್ತ್ರಾಸ್ತೇಷ್ವಪ್ಯಧ್ಯಾತ್ಮವಾದಿನಃ |
ತತ್ರಾಪಿ ಪೌರುಷಂ ಸೂಕ್ತಂ ನ ತಸ್ಮಾತ್ ವಿದ್ಯತೇ ಪರಮ್ ||
ಶ್ರವಣಪೂರ್ವಕವಾಗಿ ಬಂದ ಶ್ರುತಿಗಳಲ್ಲಿ ಸಸ್ವರವಾದ ಮಂತ್ರಗಳೇ ಹೆಚ್ಚು ಪ್ರಬಲವಾದವುಗಳು; ಅವುಗಳಲ್ಲೂ ಅಧ್ಯಾತ್ಮಪರವಾದವು ಮತ್ತೂ ಶ್ರೇಷ್ಠ; ಅದರಲ್ಲೂ ಪುರುಷಸೂಕ್ತವು ಶ್ರೇಷ್ಠಾತಿಶ್ರೇಷ್ಠವಾದುದು. ಅದಕ್ಕಿಂತಲೂ ಶ್ರೇಷ್ಠವಾದುದು ಇನ್ನೊಂದಿಲ್ಲ.
ಭಗವಾನ್ ಶೌನಕಃ—
ಅಸ್ಯ ಪುರುಷಸೂಕ್ತಸ್ಯ ಋಷಿರ್ನಾರಾಯಣಃ ಸ್ಮೃತಃ |
ಛನ್ದ ಆನುಷ್ಟುಭಂ ಸೂಕ್ತಂ ತಿಸ್ರೋऽನ್ತ್ಯಾಸ್ತ್ರಿಷ್ಟುಭೋ ಮತಾಃ ||
ಈ ಪುರುಷಸೂಕ್ತಕ್ಕೆ ನಾರಾಯಣನು ಋಷಿಯೆಂದು ಸ್ಮರಿಸಲ್ಪಟ್ಟಿರುವನು. ಕೊನೆಯ ೩ ಋಙ್ಮಂತ್ರಗಳು ತ್ರಿಷ್ಟುಪ್ ಛಂದಸ್ಸಿನವಾದರೆ, ಉಳಿದಂತೆ ಪೂರ್ಣ ಸೂಕ್ತವು ಅನುಷ್ಟುಪ್ ಛಂದಸ್ಸಿನಲ್ಲಿದೆಯೆನ್ನಲಾಗಿದೆ.
ಪರಮವ್ಯೋಮವಾಸೀ ಚ ಪುರುಷೋ ದೇವತಾऽಭವತ್ |
ಪ್ರಥಮಾಂ ವಿನ್ಯಸೇತ್ ವಾಮೇ ದ್ವಿತೀಯಾಂ ದಕ್ಷಿಣೇ ಕರೇ ||
ಹಾಗೆಯೇ, ಪರಮೋನ್ನತಲೋಕವಾಸಿಯಾದ ಪುರುಷನು ದೇವತೆಯೆನಿಸಿದನು. ಮೊದಲ ಋಕ್ಕನ್ನು ಎಡಹಸ್ತದಲ್ಲೂ, ೨ನೆಯದನ್ನು ಬಲಹಸ್ತದಲ್ಲೂ ಅಂಗನ್ಯಾಸಮಾಡಬೇಕು.
ತೃತೀಯಾಂ ವಾಮಪದೇ ಚ ಚತುರ್ಥೀಂ ದಕ್ಷಿಣೇ ತಥಾ |
ಪಞ್ಚಮೀಂ ವಾಮಜಾನೌ ತು ಷಷ್ಟೀಂ ದಕ್ಷಿಣಕೇ ತಥಾ ||
೩ನೆಯ ಋಕ್ಕನ್ನು ಎಡಪಾದದಲ್ಲೂ, ೪ನೆಯದನ್ನು ಬಲಪಾದದಲ್ಲೂ, ೫ನೆಯದನ್ನು ಎಡಮೊಣಕಾಲಿನಲ್ಲೂ, ೬ನೆಯದನ್ನು ಬಲಮೊಣಗಂಟಿನಲ್ಲೂ ನ್ಯಾಸಮಾಡಬೇಕು.
ಸಪ್ತಮೀಂ ವಾಮಕಟ್ಯಾಂ ತು ಅಷ್ಟಮೀಂ ದಕ್ಷಿಣೇ ತಥಾ |
ನವಮೀಂ ನಾಭಿದೇಶೇ ತು ದಶಮೀಂ ಹೃದಯೇ ತಥಾ ||
೭-೮ನೆಯ ಋಕ್ಕುಗಳನ್ನು ಕ್ರಮವಾಗಿ ಎಡ-ಬಲ ಕಟಿ / ಸೊಂಟ ದಲ್ಲೂ, ೯ನೆಯದನ್ನು ನಾಭಿ / ಹೊಕ್ಕುಳಿ ನಲ್ಲೂ, ೧೦ನೆಯದನ್ನು ಹೃದಯದಲ್ಲೂ ನ್ಯಾಸವಾಗಿಸಬೇಕು.
ಏಕಾದಶೀಂ ಕಣ್ಠದೇಶೇ ದ್ವಾದಶೀಂ ವಾಮಬಾಹುಕೇ |
ತ್ರಯೋದಶೀಂ ದಕ್ಷಿಣೇ ತು ಆಸ್ಯದೇಶೇ ಚತುರ್ದಶೀಮ್ ||
೧೧ನೆಯ ಋಕ್ಕನ್ನು ಕಂಠ / ಕುತ್ತಿಗೆ / ಗಂಟಲಿನಲ್ಲೂ, ೧೨-೧೩ರನ್ನು ಕ್ರಮವಾಗಿ ಎಡ-ಬಲದ ಬಾಹು / ಭುಜ ಗಳಲ್ಲೂ, ೧೪ನೆಯದನ್ನು ಬಾಯಿ / ಮುಖ / ಆಸ್ಯ ಭಾಗದಲ್ಲೂ ನ್ಯಾಸವಾಗಿಡಬೇಕು.
ಅಕ್ಷ್ಣೋಃ ಪಞ್ಚದಶೀಂ ನ್ಯಸ್ಯ ಷೋಡಶೀಂ ಮೂರ್ಧ್ನಿ ವಿನ್ಯಸೇತ್ |
ಏವಂ ನ್ಯಾಸವಿಧಿಂ ಕೃತ್ವಾ ಪಞ್ಚಾಙ್ಗಾನಿ ಸಮಾಲಭೇತ್ ||
೧೫ನೆಯದನ್ನು ಕಣ್ಣುಗಳಲ್ಲೂ, ಋಗ್ವೇದೀಯ ಪುರುಷಸೂಕ್ತದಲ್ಲಿ ಕೊನೆಯದಾದ ೧೬ನೆಯ ಋಕ್ಕನ್ನು ನೆತ್ತಿಯ ಭಾಗದಲ್ಲೂ— ಈ ರೀತಿಯಾಗಿ ಅಂಗನ್ಯಾಸಮಾಡಬೇಕು. ಹೀಗೆ ನ್ಯಾಸವಿಧಿಯನ್ನಾಚರಿಸಿ, ಪಂಚೇಂದ್ರಿಯಗಳನ್ನು ನಿಯಂತ್ರಣಕ್ಕೆ ಪಡೆದು ಏಕಾಗ್ರಚಿತ್ತಬುದ್ಧಿಗಳಿಂದ ಪರಮಪುರುಷನನ್ನು ಆರಾಧಿಸಬೇಕು.
(ಋಗ್ವಿಧಾನಮ್ ೫೧೬-೫೨೦)
ಪ್ರಾಯಶ್ಚಿತ್ತೇ ಜಪೇ ಚೈವ ವಿಷ್ಣೋರಾರಾಧನೇ ತಥಾ |
ಮೋಕ್ಷೇ ವಶ್ಯೇऽಗ್ನ್ಯುಪಸ್ಥಾನೇ ಸುಪುತ್ರಪ್ರಾಪಣೇऽಪಿ ಚ ||
ಪ್ರಾಯಶ್ಚಿತ್ತಕರ್ಮಗಳಲ್ಲಿ, ಜಪಕರ್ಮದಲ್ಲಿ, ವಿಷ್ಣುಪೂಜೆಯಲ್ಲಿ, ಅಂತೆಯೇ, ವಶ್ಯಕರ್ಮದಲ್ಲಿ, ಯಜ್ಞಾಗ್ನಿಯ ಉಪಸ್ಥಾನದಲ್ಲಿ (ಸಮೀಪ ತಂದಿಡುವಿಕೆಯಲ್ಲಿ / ಹತ್ತಿರ ಇರುವಾಗ / ಅಗ್ನಿ-ಉಪಸ್ಥಾನವಿಧಿಯಲ್ಲಿ), ಸತ್ಸಂತತಿ / ಸತ್ಪುತ್ರಪ್ರಾಪ್ತಿಗಾಗಿ, ಮೋಕ್ಷಪ್ರಾಪ್ತಿಗಾಗಿ,
ಸರ್ವಕಾಮಫಲಾವಾಪ್ತೌ ಆರೋಗ್ಯೇ ಮೃತ್ಯುನಾಶನೇ |
ಏತೇಷ್ವರ್ಥೇಷ್ವಿದಂ ಸೂಕ್ತಂ ಮುನಯೋ ವಿನಿಯುಞ್ಜತೇ ||
ಆರೋಗ್ಯಪ್ರಾಪ್ತಿಗೆ, ಅಪಮೃತ್ಯು / ಅಕಾಲಮೃತ್ಯುನಿವಾರಣೆಗೆ— ಹೀಗೆ ಸರ್ವ ಇಷ್ಟಾರ್ಥಪ್ರಾಪ್ತಿಗಾಗಿ— ಹೀಗೆ ಈ ಉದ್ದೇಶಗಳಿಗಾಗಿ ಈ ಪುರುಷಸೂಕ್ತದ ವಿನಿಯೋಗವಿದೆ ಎಂದಿರುವರು ಪ್ರಾಚೀನ ಋಷಿಮುನಿಗಳು.
ಪ್ರಾಯಶ್ಚಿತ್ತೇ ತಾವತ್ ವಾಧೂಲಃ—
ಯತ್ರಯತ್ರ ಕರ್ಮಭ್ರೇಷೋ ಯಜುರ್ಭ್ರೇಷೋ ವಾ, ತತ್ರತತ್ರ ಪುರುಷಂ ಧ್ಯಾಯೇತ್ | ಪುರುಷಸೂಕ್ತಮ್ ಉಚ್ಚರೇತ್ | ಪೂರ್ಣತ್ವಾತ್ ಪುರುಷಃ, ಇತಿ ವಿಜ್ಞಾಯತೇ ||
ವಾಧೂಲಸ್ಮೃತಿಯ ಪ್ರಾಯಶ್ಚಿತ್ತಕಾಂಡದಲ್ಲಿ— ಎಲ್ಲೆಲ್ಲಿ ಕರ್ಮಭ್ರಷ್ಟತೆಯೂ, ಯಜ್ಞಧರ್ಮಭ್ರಷ್ಟತೆಯೂ ಆಗಿರುವುದೋ, ಅಲ್ಲಲ್ಲಿ ಪ್ರಾಯಶ್ಚಿತ್ತರೂಪವಾಗಿ ಪುರುಷನನ್ನು ಧ್ಯಾನಿಸಬೇಕು. ಪುರುಷಸೂಕ್ತವನ್ನು ಪಠಿಸಬೇಕು. ಪೂರ್ಣತ್ವದಿಂದ ಪುರುಷನೆಂದು ತಿಳಿಯುತ್ತದೆ.
ಯಮಸ್ಮೃತೌ—
ಬ್ರಹ್ಮಯಜ್ಞೇ ಜಪೇತ್ ಸೂಕ್ತಂ ಪೌರುಷಂ ಚಿನ್ತಯನ್ ಹರಿಮ್ |
ಸ ಸರ್ವಾನ್ ಜಪತೇ ವೇದಾನ್ ಸಾಙ್ಗೋಪಾಙ್ಗಾನ್ ದ್ವಿಜೋತ್ತಮ ||
ಹೇ ದ್ವಿಜಶ್ರೇಷ್ಠನೆ! ಬ್ರಹ್ಮಯಜ್ಞದಲ್ಲಿ (ಸಂಧ್ಯಾವಂದನೆ, ಜಪ-ತಪ, ಸ್ವಾಧ್ಯಾಯಾದಿಗಳಲ್ಲಿ) ಶ್ರೀಹರಿಯನ್ನೇ ಧ್ಯಾನಿಸುತ್ತಾ ಪುರುಷಸೂಕ್ತವನ್ನು ಜಪಿಸಬೇಕು. ಹೀಗೆ ಮಾಡಿದವನು ಅಂಗೋಪಾಂಗಸಹಿತ ಸಕಲ ವೇದಗಳನ್ನೂ ಜಪಿಸಿದಂತೆಯೇ ಆಗುವುದು.
ಸಕೃಜ್ಜಪ್ತ್ವಾಸ್ಯವಾಮೀಯಂ ಶಿವಸಙ್ಕಲ್ಪಮೇವ ಚ |
ಜಪ್ತ್ವಾ ತು ಪೌರುಷಂ ಸೂಕ್ತಂ ಮುಚ್ಯತೇ ಗುರುತಲ್ಪಗಃ ||
ಅಸ್ಯವಾಮೀಯವನು ಒಮ್ಮೆಯೆ
ಶಸ್ತ ಶಿವಸಂಕಲ್ಪವನು ಮಿಗೆ
ನ್ಯಸ್ತ ಪೌರುಷಸೂಕ್ತವನು ಸಹ ಭಕ್ತಿನಿಷ್ಠೆಯಲಿ |
ಅಸ್ತ ಉದಯದ ಸಂಧ್ಯೆಯಲಿ ತಾ
ನಸ್ತವಾಗದ ಗತಿಯ ಪಡೆಯಲು
ಶಸ್ತರೀತಿಯನುಷ್ಠಿಸಲು ಗುರುತಲ್ಪದೋಷಹರ ||
ಋಗ್ವೇದದ ಅಸ್ಯವಾಮೀಯಸೂಕ್ತವನ್ನೂ, ಶುಕ್ಲಯಜುರ್ವೇದದ ಶಿವಸಂಕಲ್ಪಸೂಕ್ತವನ್ನೂ, ತೈತ್ತಿರೀಯಕೃಷ್ಣಯಜುರ್ವೇದೀಯ ಪುರುಷಸೂಕ್ತವನ್ನೂ ಒಂದು ಬಾರಿ ಜಪಿಸಿದರೂ ತಿಳಿಯದೆಯೇ ಮಾಡಿದ ಗುರುದ್ರೋಹದಂತಹ ಮಹಾಪಾಪದಿಂದಲೂ ಮುಕ್ತನಾಗುತ್ತಾನೆ.
ವಿಷ್ಣುಸ್ಮೃತೌ—
ಸ್ನಾತಃ ಪವಿತ್ರಪಾಣಿಃ ಯಥಾಶಕ್ತಿ ಜಪೇತ್ ವಿಶೇಷತಃ ಸಾವಿತ್ರೀಂ ಪುರುಷಸೂಕ್ತಂ ಚ | ನ ಏತಾಭ್ಯಾಂ ಸದೃಶಮ್ ಅಸ್ತಿ ಇತಿ ||
ಸ್ನಾನಮಾಡಿ ಪವಿತ್ರವನ್ನು ಧರಿಸಿ, ವಿಶೇಷವಾಗಿ (ಮುಖ್ಯವಾಗಿ) ಸವಿತೃಗಾಯತ್ರಿಯನ್ನೂ, ಪುರುಷಸೂಕ್ತವನ್ನೂ ಯಥಾಶಕ್ತಿ ಜಪಿಸಬೇಕು. ಇವುಗಳಿಗೆ ಸಮನಾದುದಿಲ್ಲ ಎಂಬುದಾಗಿ.
ಋಗ್ವಿಧಾನೇ ಶೌನಕೋ ವದತಿ—
ಪುರುಷಸ್ಯ ಹರೇಃ ಸೂಕ್ತಂ ಸರ್ವಪಾಪಪ್ರಣಾನಶನಮ್ |
ವಕ್ಷ್ಯೇ ಪುರುಷಸೂಕ್ತಸ್ಯ ವಿಧಾನಂ ಚಾರ್ಚನಂ ಪ್ರತಿ ||
ಶ್ರೀಹರಿಪ್ರತಿಪಾದ್ಯವಾದ ಪುರುಷಸೂಕ್ತವು ಸರ್ವಪಾಪವಿನಾಶಕರವು. ಪುರುಷಸೂಕ್ತಮುಖೇನ ಅರ್ಚನಾವಿಧಾನವನ್ನು ಹೇಳುವೆನು.
ಆದ್ಯಯಾऽऽವಾಹಯೇದ್ದೇವಮೃಚಾ ತು ಪುರುಷೋತ್ತಮಮ್ |
ದ್ವಿತೀಯಯಾऽऽಸನಂ ದದ್ಯಾತ್ ಪಾದ್ಯಂ ಚಾಪಿ ತೃತೀಯಯಾ ||
ಮೊದಲ ಋಕ್ಕಿನಿಂದ ದೇವದೇವನಾದ ಪುರುಷೋತ್ತಮನನ್ನು ಆವಾಹಿಸಬೇಕು. ೨ನೆಯದರಿಂದ ಆಸನವನ್ನೂ, ೩ನೆಯದರಿಂದ ಪಾದ್ಯವನ್ನೂ ಸಮರ್ಪಿಸಬೇಕು.
ಚತುರ್ಥ್ಯಾರ್ಘ್ಯಂ ಪ್ರದಾತವ್ಯಂ ಪಞ್ಚಮ್ಯಾऽऽಚಮನೀಯಕಮ್ |
ಷಷ್ಠ್ಯಾ ಸ್ನಾನಂ ಪ್ರಕುರ್ವೀತ ಸಪ್ತಮ್ಯಾ ವಸ್ತ್ರಮೇವ ಚ ||
೪ನೆಯದರಿಂದ ಅರ್ಘ್ಯವನ್ನೂ, ೫ನೆಯದರಿಂದ ಆಚಮನೀಯಕವನ್ನೂ, ೬ನೆಯದರಿಂದ ಸ್ನಾನವನ್ನೂ, ೭ನೆಯದರಿಂದ ವಸ್ತ್ರವನ್ನೂ ಸಮರ್ಪಿಸಬೇಕು.
ಯಜ್ಞೋಪವೀತಮಷ್ಟಮ್ಯಾ ನವಮ್ಯಾ ಗನ್ಧಮೇವ ಚ |
ದಶಮ್ಯಾ ಪುಷ್ಪದಾನಂ ಸ್ಯಾದೇಕಾದಶ್ಯಾ ತು ಧೂಪಕಮ್ ||
೮ನೆಯದರಿಂದ ಯಜ್ಞೋಪವೀತವನ್ನೂ, ೯ನೆಯದರಿಂದ ಗಂಧಾಕ್ಷತೆಯನ್ನೂ, ೧೦ನೆಯದರಿಂದ ಪುಷ್ಪವನ್ನೂ, ೧೧ನೆಯದರಿಂದ ಧೂಪವನ್ನೂ ಸಮರ್ಪಿಸಬೇಕು.
ದ್ವಾದಶ್ಯಾ ದೀಪದಾನಂ ಸ್ಯಾತ್ ತ್ರಯೋದಶ್ಯಾ ಹವಿಸ್ತಥಾ |
ಚತುರ್ದಶ್ಯಾಞ್ಜಲಿಂ ಕುರ್ಯಾತ್ ಪಞ್ಚದಶ್ಯಾ ಪ್ರದಕ್ಷಿಣಮ್ ||
೧೨ನೆಯದರಿಂದ ದೀಪದರ್ಶನವನ್ನೂ, ೧೩ನೆಯದರಿಂದ ಹವಿಸ್ಸಮರ್ಪಣೆ / ನೈವೇದ್ಯಸಮರ್ಪಣೆಯನ್ನೂ, ೧೪ನೆಯದರಿಂದ ಪ್ರಾಂಜಲನಮಸ್ಕಾರವನ್ನೂ, ೧೫ನೆಯದರಿಂದ ಪ್ರದಕ್ಷಿಣೆಯನ್ನೂ ಮಾಡಬೇಕು.
ಷೋಡಶ್ಯೋದ್ವಾಸನಂ ಕುರ್ಯಾದೇವಮಾರಾಧಯೇದ್ಧರಿಮ್ |
ಸ್ನಾನೇ ವಸ್ತ್ರೇ ನಿವೇದ್ಯೇ ಚ ದದ್ಯಾದಾಚಮನೀಯಕಮ್ ||
೧೬ನೆಯ ಋಕ್ಕಿನಿಂದ ಉದ್ವಾಸನೆ / ವಿಸರ್ಜನೆ ಯನ್ನು ಮಾಡಿ, ಈ ರೀತಿಯಾಗಿ ಶ್ರೀಹರಿಯನ್ನು ಆರಾಧಿಸಬೇಕು. ಹೀಗೆ, ಸ್ನಾನ-ವಸ್ತ್ರ-ನೈವೇದ್ಯ-ಆಚಮನ,
ದದ್ಯಾತ್ ಪುರುಷಸೂಕ್ತೇನ ಯಃ ಪುಷ್ಪಾಣ್ಯಪ ಏವ ವಾ |
ಅರ್ಚಿತಂ ಸ್ಯಾಜ್ಜಗದಿದಂ ತೇನ ಸರ್ವಂ ಚರಾಚರಮ್ ||
(ಋಗ್ವಿಧಾನಮ್ ೫೨೧-೫೨೬)
ಪುಷ್ಪ-ಜಲ-ಗಂಧಾದಿ ಷೋಡಶೋಪಚಾರಪೂಜೆಯನ್ನು ವಿಶ್ವಾತ್ಮನಾದ ಶ್ರೀಹರಿಗೆ ಪುರುಷಸೂಕ್ತದ ಷೋಡಶ ಋಚೆಗಳಿಂದ ಮಾಡಿದರೆ, ಆ ಹರಿಯಂತರ್ಗತವಾದ ಈ ಸಮಸ್ತ ವಿಶ್ವವನ್ನೂ, ಅದರ ಸಕಲ ಚರಾಚರಗಳನ್ನೂ ಅರ್ಚಿಸಿದಂತೆಯೇ ಆಗುತ್ತದೆ.
ಮೋಕ್ಷೇ ಯೋಗವಾಸಿಷ್ಠೇ—
ಸಂಸಾರಾನ್ಮೋಕ್ಷಮಿಚ್ಛನ್ ಯಃ ಸನ್ತ್ಯಜೇದೇಷಣಾತ್ರಯಮ್ |
ನಿಸ್ಪೃಹಃ ಸರ್ವಕಾಮೇಭ್ಯಃ ಸಮಲೋಷ್ಟಾಶ್ಮಕಾಞ್ಚನಃ ||
ಜನನಮರಣ ವಿಮುಕ್ತಿ ಬಯಸುತ
ವಿಮನನಾಗಿಯೆ ಬಯಕೆಯಿಂದಲಿ
ಹನನಗೈಯುತ ಪುತ್ರವಿತ್ತಾದ್ಯೇಷಣಾತ್ರಯವ |
ಮನನಮಾಡುತ ಸ್ಪೃಹೆಯ ಬಿಡುತಲಿ
ಸದನಮೋಹವ ತೊರೆದು ಮೃತ್ತಿಕೆ
ಕಾಂಚನೋಪಲವೊಂದೆ ಎನ್ನುವ ಭಾವ ತಾಳುತಲಿ ||
ಯಾವನು ಈ ಜನನಮರಣಗಳಿಂದ ಕೂಡಿದ ಸಂಸಾರಚಕ್ರದಿಂದ ಬಿಡುಗಡೆಯನ್ನು ಬಯಸುತ್ತಾನೋ ಅವನು ಪುತ್ರೈಷಣ (ಪುತ್ರಕಾಮ), ವಿತ್ತೈಷಣ (ಧನಕಾಮ), ಲೋಕೈಷಣ (ಲೌಕಿಕೋನ್ನತಿಕಾಮ) / ದಾರೈಷಣ (ಪತ್ನೀಕಾಮ)— ಗಳೆಂಬ ಏಷಣಾತ್ರಯವನ್ನು (೩ ಬಗೆಯ ಕಾಮನೆಗಳನ್ನು) ತ್ಯಜಿಸಬೇಕು; ಯಾವುದೇ ಇಚ್ಛೆಗಳಿಲ್ಲದೆ ನಿಸ್ಪೃಹನಾಗಬೇಕು; ಮಣ್ಣಿನ ಹೆಂಟೆಯೂ, ಕಲ್ಲೂ, ಕಾಂಚನ / ಚಿನ್ನವೂ ಒಂದೇ ಎಂಬ ಸಮದರ್ಶಿತ್ವವುಳ್ಳವನಾಗಬೇಕು.
ಗುರೋಃ ಪಾದೌ ತು ಸಂಗೃಹ್ಯ
ಸ್ವಾಚಮ್ಯ ಪ್ರಯತೋ ಭವೇತ್ |
ನಮಶ್ಚ ಪಾವನಂ ಕೃತ್ವಾ
ಸನ್ತ್ಯಜೇದೇಷಣಾತ್ರಯಮ್ ||
ಗುರುಚರಣವನು ಪಿಡಿದು ಭಕ್ತಿಲಿ
ಉರುತರದಿ ಆಚಮಿಸಿ, ನಿಯಮಿಸಿ
ಕರಣಗಳ, ಮುಗಿದನ್ನಶುದ್ಧಿಯನಾಚರಿಸಿ ಮುದದಿ |
ವರಸುತರು ಬೇಕೆಂಬ ಬಯಕೆಯ
ವರಸತಿಯ, ಲೋಕೋನ್ನತಿಯ ಮಿಗೆ
ಸಿರಿಯ ಬಯಕೆಯ ತೊರೆಯಬೇಕು ನಿಜಾರ್ಥ ಪಡೆಯಲಿಕೆ ||
ಸದ್ಗುರುವಿನ ಪಾದದ್ವಯವನ್ನು ನಮಿಸಿ (ಕಾಲುಹಿಡಿದು / ಪಾದಸ್ಪರ್ಶಮಾಡಿ, ಶರಣುಹೊಂದಿ, ಆಶ್ರಯಿಸಿ), ಸರಿಯಾಗಿ ಆಚಮನಮಾಡಿ, ಚಿತ್ತೇಂದ್ರಿಯಗಳನ್ನು ಬಿಗಿಹಿಡಿದು, ( ನಮಸ್— ಅನ್ನ) ನಮ್ಮ ಅನ್ನಾದಿ ಸಕಲ ಸಂಪಾದನೆಯನ್ನು ಪವಿತ್ರೀಕರಿಸಿ ಅರ್ಥಾತ್ ಸನ್ಮಾರ್ಗದಲ್ಲೇ ಸಂಪಾದಿಸಿ, ಪುತ್ರ-ದಾರಾ / ಲೋಕ-ವಿತ್ತಕಾಮಗಳನ್ನು ಸಂಪೂರ್ಣವಾಗಿ ತ್ಯಜಿಸಬೇಕು.
ತತೋ ಗಚ್ಛನ್ ಹರೇರ್ವೇಶ್ಮ
ಪಾವನಂ ಸುಮನೋಹರಮ್ |
ತತೋ ಮನೋಗತಾನ್ ಕಾಮಾನ್
ಸರ್ವಾನ್ ತ್ಯಕ್ತ್ವಾ ಪ್ರಸನ್ನಧೀಃ ||
ಬಳಿಕ ಮನದೊಳಗಿರುವ ಬಯಕೆಗ
ಳಳಿಸಿ ಸಕಲವ ಸುಪ್ರಸನ್ನದಿ
ಕುಳಿತು ಧ್ಯಾನಿಸಿ ಪಾವನಾತ್ಮಕನಾದ ಶ್ರೀಹರಿಯ |
ನಳಿನನೇತ್ರನ ಪರಮಸುಂದರ
ವಳಿವಿರದ ವೈಕುಂಠಧಾಮಕೆ
ಅಳಿಯದಂತಹ ಪರಮಪದವಿಗೆ ನಡೆಯಬಹುದಿಂತು ||
ಬಳಿಕ ಮನೋಗತವಾದ ಸರ್ವಕಾಮನೆಗಳನ್ನೂ ತ್ಯಜಿಸಿ, ಪ್ರಸನ್ನಾಂತಃಕರಣನಾಗಿ (ಪ್ರಸನ್ನ ಮನ-ಚಿತ್ತ-ಬುದ್ಧಿ-ಅಹಂಯುಕ್ತನಾಗಿ), ತರುವಾಯ ಸಮನೋಹರವೂ, ಪಾವನವೂ ಆದ ಶ್ರೀಹರಿಯ (ವೇಶ್ಮ— ಮನೆ) ಪರಮಧಾಮವಾದ ವೈಕುಂಠ / ಮುಕ್ತಿಧಾಮವನ್ನು ಹೊಂದಬೇಕು.
ಅನಿಕೇತಃ ಸ್ಥಿರಮತಿಃ
ಆದಿದೇವೇ ಜನಾರ್ದನೇ |
ಯೇನ-ಕೇನ-ಚಿದಾಚ್ಛನ್ನೋ
ಯೇನ ಕೇನಚಿದಾಶಿತಃ ||
(೬.೧೨೨.೧)
ಮನೆಯ ಮೋಹವ ತೊರೆದು ಸುಸ್ಥಿರ
ಮನವ ಮಾಡಿಯೆ ದೇವಚರಣದಿ
ಮನನ ಕೀರ್ತನ ಭಜನ ನವವಿಧ ಭಕುತಿಯಾಚರಿಸೆ |
ಏನು ದೊರೆಯಿತೊ ಅದುವೆ ಕಂಬಳಿ
ಯೇನು ದೊರೆಯಿತೊ ಅದುವೆ ಉಂಬಳಿ
ಮಾನ ಭೋಜನವೆಂದು ನಿಸ್ಪೃಹೆಯಿಂದ ತನ್ಮಯದಿ ||
ತನ್ನ ಸ್ವಗೃಹವನ್ನು ತೊರೆದು ( / ಮಾನಸಿಕವಾಗಿ ಮನೆಯ ಮೋಹವ ಬಿಟ್ಟು), ಆದಿದೇವನಾದ ದುಷ್ಟಜನರನ್ನು ಅರ್ದನ (ಸಂಹಾರ) ಮಾಡುವ ಜನಾರ್ದನನಲ್ಲೇ ಸ್ಥಿರಬುದ್ಧಿಯುಳ್ಳವನಾಗಿ, ಸಿಕ್ಕ ಸಿಕ್ಕದ್ದನ್ನೇ ಹೊದ್ದು, ಬಯಸದೇ ಪ್ರಾಪ್ತವಾದದ್ದನ್ನೇ ಭುಜಿಸಿ, (ಯಾವುದೇ ಅಪೇಕ್ಷೆಗಳಿಲ್ಲದವನಾಗಿ)
ಮೇಘಚ್ಛನ್ನ ಇವಾದಿತ್ಯೋ
ಭಸ್ಮಚ್ಛನ್ನ ಇವಾನಲಃ |
ಆತ್ಮಾನಂ ಗೂಹಮಾನಸ್ತು
ಸರ್ವಭೂತದಯಾನ್ವಿತಃ ||
ಮೋಡಮುಸುಕಿದ ಸೂರ್ಯನಂತೆ, ಬೂದಿಮುಚ್ಚಿದ ಕೆಂಡದಂತೆ, ಪ್ರಚಾರವನ್ನು ಬಯಸದೆ ಎಲೆಮರೆಯ ಕಾಯಿಯಂತೆ ನಿಸ್ಸಂಗನಾಗಿ, ಎಲ್ಲ ಚರಾಚರಗಳ ಮೇಲೆ ದಯಾನ್ವಿತನಾಗಿ,
ನಿರ್ಮಮೋ ನಿರಹಙ್ಕಾರಃ
ಸಮದುಃಖಸುಖಃ ಕ್ಷಮೀ |
ಏಕಾನ್ತೀ ಯತಚಿತ್ತಾತ್ಮಾ
ತ್ಯಕ್ತಸರ್ವಪರಿಗ್ರಹಃ ||
ನಾನು ನನ್ನನು ನನ್ನ ದೆಸೆಯಿಂ
ನನಗೆ ನನ್ನಿಂದೆನುವ ಭಾವವ
ನನ್ನ ನನ್ನಲ್ಲೆನುವುದನುದಿನ ತೊರೆದು ಬಾಳಿನಲಿ |
ಸಾನುರಾಗವ ಬಿಟ್ಟು ಸಮತೆಯ
ಮಾನ ದುಮ್ಮಾನಗಳ ವಿಷಯದಿ
ಆನಿಕೊಳುತ ಕ್ಷಮೆಯ ಹೊಂದುತ ನಿತ್ಯ ನಿರ್ಮಲದಿ ||
ಮತ್ತೆ ಏಕಾಂತವನೆ ನೆಚ್ಚುತ
ಚಿತ್ತ ಕರಣಂಗಳನು ಬಿಗಿಹಿಡಿ
ದೆತ್ತು ಬದುಕನು ಮರ್ತ್ಯದಿಂ ಅಮರತ್ವದೆಡೆಗಾಗಿ |
ಸತ್ತು ಪೋಗಲು ವಿತ್ತಭೂಮಿಯ
ನೆತ್ತಲೂ ಕೊಂಡೊಯ್ಯಲಾಗದು
ಸತ್ಯವಿದನರಿತಂದೆ ಸಂಗ್ರಹಬುದ್ಧಿಯನು ಕಳೆದು ||
ತನ್ನದು, ತನ್ನವರು ಮುಂತಾದ ಮಮಕಾರಗಳಿಲ್ಲದೆ ನಿರ್ಮಮನಾಗಿ, ನಾನೆಂಬ ಭಾವವನ್ನು ತೊರೆದು ನಿರಹಂಭಾವನಾಗಿ, ಸುಖದುಃಖಗಳನ್ನು ಸಮನಾಗಿ ಕಂಡು, ಪರರ ತಪ್ಪುಗಳ ಬಗ್ಗೆ ಕ್ಷಮಾಭಾವವುಳ್ಳವನಾಗಿ, ದಿನದ ಹೆಚ್ಚುಕಾಲ ಜನರಿಂದ ದೂರವಾಗಿ ಏಕಾಂತದಲ್ಲಿದ್ದು, ತನ್ನ ಮನಸ್ಸು-ಇಂದ್ರಿಯಗಳನ್ನು ನಿಯಂತ್ರಿಸಿದವನಾಗಿ, ಎಲ್ಲರೀತಿಯ ಸಂಗ್ರಹಬುದ್ಧಿಯನ್ನು ತ್ಯಜಿಸಿದವನಾಗಿ,
ಧ್ಯಾಯೇನ್ನಾರಾಯಣಂ ದೇವಂ
ಹೃದಯಾಮ್ಭೋಜಮಧ್ಯಗಮ್ |
ದಿಗ್ದೇಶಕಾಲಾವಸ್ಥಾದ್ಯೈಃ
ಅನವಚ್ಛೇದ್ಯವೈಭವಮ್ |
ಸರ್ವದಾ ಪೌರುಷಂ ಸೂಕ್ತಂ
ಮನಸೈವ ಜಪೇಚ್ಛುಚಿಃ ||
ದೇಶಕಾಲಾವಸ್ಥೆ ದಿಕ್ಕುಗ
ಳೀಶನವುಗಳಿಗಳವಡದ ಹೃ
ದ್ದೇಶದಲಿ ನಾರಾಯಣನ ನೆನೆ ಶುದ್ಧಮಾನಸದಿಂ |
ವೀಶವಾಹನಖಂಡವೈಭವ
ದೇಶಕಾಲಾದಿಗಳ ಸೃಜನೆಯ
ನಾಶರಹಿತಾಚ್ಯುನ ಪೌರುಷಸೂಕ್ತಜಪದಿಂದ ||
ಯಾವುದೇ ದಿಕ್ಕು-ದೇಶ-ಕಾಲ-ಅವಸ್ಥೆ ಮುಂತಾದವುಗಳಿಂದ ಕಸಿಯಲಾಗದ ಅಖಂಡ (ಅನವಚ್ಛೇದ್ಯ, ಅವಿಚ್ಛಿನ್ನ)ವೈಭವಯುತನೂ, ನಮ್ಮ ಹೃದಯಕಮಲಮಧ್ಯಗತನೂ ಆದ ದೇವದೇವನಾದ ಶ್ರೀಮನ್ ಆದಿನಾರಾಯಣನನ್ನು ಯಾವಾಗಲೂ ಪುರುಷಸೂಕ್ತವನ್ನು ಶುಚಿಯಾದ ಮನಸ್ಸಿನಿಂದಲೇ ಜಪಿಸುತ್ತಾ ಧ್ಯಾನಿಸಬೇಕು.
ಯಃ ಪೌರುಷಸ್ಯ ಸೂಕ್ತಸ್ಯ
ಜಾನಾತ್ಯರ್ಥಂ ಯಥಾ ತಥಾ |
ಸ ಜನ್ಮನೀಹ ಮುಕ್ತಸ್ಸ್ಯಾತ್
ಪುರಾಣೇಷು ಚ ದರ್ಶನಾತ್ |
ವಿಷ್ಣುಃ ಪುರುಷಸೂಕ್ತಾರ್ಥಃ
ಪುರುಷೋऽಧ್ಯವಸೀಯತೇ ||
ಯಾವನು ಪುರುಷಸೂಕ್ತದ ಅರ್ಥವನ್ನು ಯಥಾವತ್ತಾಗಿ ತಿಳಿಯುತ್ತಾನೋ, ಅವನು ಈ ಜನ್ಮದಲ್ಲೇ ಮುಕ್ತನಾಗುವನೆಂಬುದನ್ನು ಪುರಾಣಾದಿಗಳ ದೃಷ್ಟಾಂತಗಳಿಂದ ತಿಳಿಯಬಹುದು. ವಿಷ್ಣುವೇ ಪುರುಷಸೂಕ್ತದಿಂದ ಸಾಧಿಸಬಹುದಾದ ಅಂತಿಮ ಅರ್ಥವು / ಪುರುಷಾರ್ಥವು. ಆತನು ಪರಮಪುರುಷೋತ್ತಮನಾದ ವಿಷ್ಣುಸಾಯುಜ್ಯವನ್ನು ಹೊಂದಿ ವಿಷ್ಣುವನ್ನಾಶ್ರಯಿಸಿ ಆ ಪರಮಪದದಲ್ಲೇ ವಾಸವಾಗಿರುವನು.
ಸರ್ವಂ ವಶಂ ಮಮ ಭವೇತ್
ಇತಿ ಸಂಚಿನ್ತಯನ್ ಮುನಿಃ |
ಜಪೇತ್ತು ಪೌರುಷಂ ಸೂಕ್ತಂ
ಪ್ರಣಿಪತ್ಯ ಜನಾರ್ದನಮ್ ||
ನನಗೆ ಎಲ್ಲವೂ ವಶವಾಗಬೇಕೆಂದು ಚೆನ್ನಾಗಿ ಚಿಂತಿಸುತ್ತಾ ಮುನಿವ್ರತಧಾರಿಯಾಗಿ (ಮೌನದಿಂದ), ಜನಾರ್ದನನನ್ನು ನಮಸ್ಕರಿಸಿ, ಪುರುಷಸೂಕ್ತವನ್ನು ಜಪಿಸಿದರೆ,
ಯದ್ವಶೇ ವರ್ತತೇ ಕೃತ್ನ್ನಂ
ಚರಾಚರಮಿದಂ ಜಗತ್ |
ವಶೇ ಭವತಿ ತಸ್ಯೇದಂ
ಜಗತ್ಸರ್ವಂ ಮುನೇರಪಿ || ಇತಿ |
ಯಾವ ವಿಷ್ಣುವಿನ ವಶದಲ್ಲೇ ಈ ಸಮಸ್ತ ಚರಾಚರಾತ್ಮಕವಾದ ಜಗತ್ತು ನೆಲೆಸಿರುವುದೋ, ಆ ಮುನಿಗೂ ಇದೆಲ್ಲವೂ ಅಂತೆಯೇ ವಶೀಭೂತವಾಗುವುದು ಎಂಬುದಾಗಿದೆ.
ಆಪಸ್ತಮ್ಬಃ—
"ಸಹಸ್ರಶೀರ್ಷಾ ಪುರುಷ ಇತಿ ಉಪಹಿತಾಂ ಪುರುಷೇಣ ನಾರಾಯಣೇನ ಯಜಮಾನ ಉಪತಿಷ್ಠತೇ |" ಉಪಹಿತಾಮ್— ಇಷ್ಟಕಾಭಿಃ ಕೃತ-ಉಪಧಾನಮ್ ಇತಿ ಅರ್ಥಃ ||
"ಸಹಸ್ರಶೀರ್ಷಾ ಪುರುಷಃ— ಎಂದು (ಪಠಿಸುತ್ತಾ) ಬಳಿಯಿರುವ ಯಜ್ಞಪುರುಷನಾದ ಅಗ್ನಿನಾರಾಯಣನೊಂದಿಗೆ ಯಜಮಾನನು ಬಳಿ ನಿಲ್ಲುತ್ತಾನೆ (ಅಥವಾ ಅಂತರ್ಯಾಮಿಯಾದ ನಾರಾಯಣನಿಂದಾಗಿ ಯಜಮಾನನು ಉದ್ಧಾರವಾಗಿ ಮೇಲೆ ಬರುತ್ತಾನೆ)." ಇಲ್ಲಿ ಉಪಹಿತಾಮ್ ಎಂದರೆ, ಇಟ್ಟಿಗೆಗಳಿಂದ ಮಾಡುವ ಪುರುಷಮೇಧವೆಂಬ ವ್ರತವೆಂದರ್ಥ. (ಉಪಧಾನಮ್— ವ್ರತಮ್ ಎಂದಿರುವನು ಹೇಮಚಂದ್ರನು.— ಶಬ್ದಕಲ್ಪದ್ರುಮ ಕೋಷ; ಉಪಹಿತ ಎಂದರೆ ಸಮೀಪಸ್ಥಾಪಿತ— ವಾಚಸ್ಪತ್ಯಮ್ ಕೋಷ)
ವಾಧೂಲಸೂತ್ರೇ —
ನಾರಾಯಣದೃಷ್ಟೇನ ಪುರುಷದೈವತೇನ ಉಪಹಿತಾಂ ಚಿತಿಮ್ ಉಪತಿಷ್ಠಮಾನಃ, ಇಹ ಜನ್ಮನಿ ಪುರುಷೋ ಭವೇತ್ ಇತಿ ||
ನಾರಾಯಣ ಋಷಿಯಿಂದ ಕಾಣಲ್ಪಟ್ಟ ಪುರುಷನೆಂಬ ದೇವತೆಯಿಂದ ಬಳಿಸಾರಲ್ಪಟ್ಟ ಚಿತಿ / ಚಯನ / ಅಗ್ನಿಚಯನ / ಅಗ್ನಿಸಂಸ್ಕಾರ / ಯಜ್ಞಾಗ್ನಿಯ ಬಳಿ ನಿಂತಿರುವವನು ಈ ಜನ್ಮದಲ್ಲೇ ಪರಮಪುರುಷನಾಗುವನು (ಬ್ರಹ್ಮವಿದನೂ, ಬ್ರಹ್ಮವೂ ತಾನೇ ಆಗುವನು— ಬ್ರಹ್ಮೈಕ್ಯ ಸ್ಥಿತಿಯನ್ನು ಪಡೆಯುವನು; ಮೋಕ್ಷಹೊಂದುವನು).
ಆಯುಷ್ಮತ್-ಪುತ್ರಾವಾಪ್ತೌ ಋಗ್ವಿಧಾನೇ—
ಪುತ್ರೇಚ್ಛುರ್ಬ್ರಾಹ್ಮಣಃ ಶುದ್ಧಃ
ಸುಪ್ರಸನ್ನಮನಾ ಭವೇತ್ |
ಪೌರುಷೇಣ ಚ ಸೂಕ್ತೇನ
ಜುಹುಯಾದಾಜ್ಯಮನ್ವಹಮ್ ||
ಮಕ್ಕಳನ್ನು ಇಚ್ಛಿಸುವ ಬ್ರಾಹ್ಮಣನು ಶುಚಿರ್ಭೂತನಾಗಿ, ಪ್ರಸನ್ನಚಿತ್ತನಾಗಿ (ಶಾಂತಮನಸ್ಕನಾಗಿ), ಪುರುಷಸೂಕ್ತದಿಂದ ಪ್ರತಿದಿನವೂ ಆಜ್ಯ (ತುಪ್ಪ, ಘೃತ, ಹವಿಸ್ಸು) ವನ್ನು ಹೋಮಿಸಬೇಕು.
ಪಾಯಸಾನ್ನಂ ಚರುಂ ಕೃತ್ವಾ
ತೇನೈವ ಜುಹುಯಾಚ್ಛುಚಿಃ|
ಹುತಶಿಷ್ಟಂ ಚರುಂ ಶುದ್ಧಮ್
ಅಶ್ನೀಯಾತಾಂ ಚ ದಮ್ಪತೀ ||
ಪಾಯಸಾನ್ನವನ್ನು (ಅಕ್ಕಿಯ ಪಾಯಸವನ್ನು) ಚರುವನ್ನಾಗಿ ಮಾಡಿ ಶುಚಿರ್ಬೂತನಾಗಿ ಅದರಿಂದಲೇ ಹೋಮಮಾಡಬೇಕು. ಹೋಮಿಸಿ ಉಳಿದ ಪರಿಶುದ್ಧವಾದ ಚರುವನ್ನು ಯಜಮಾನದಂಪತಿಗಳು ಸೇವಿಸಬೇಕು.
ಏವಂ ತ್ರಿಂಶದ್ದಿನಾದೂರ್ಧ್ವಂ
ಗರ್ಭೋ ಭವತಿ ಸುಸ್ಮಿತಃ |
ಸರ್ವಲಕ್ಷಣಸಂಪನ್ನಃ
ಪುತ್ರೋ ಭವತಿ ಪಾವನಃ || ಇತಿ |
ಈ ರೀತಿಯಲ್ಲಿ ದಿನವೂ ಆಚರಿಸಿದರೆ, ೩೦ ದಿನಗಳ ಬಳಿಕ ಆರೋಗ್ಯಪೂರ್ಣವಾದ ಗರ್ಭವು ಅರಳುತ್ತದೆ. ಪಾವನಾತ್ಮಕನಾದ, ಸರ್ವಲಕ್ಷಣಸಂಪನ್ನನಾದ ಪುತ್ರನು ಉಂಟಾಗುತ್ತಾನೆ.
ಶ್ರೀಶಾಸ್ತ್ರೇ—
ಸರ್ವಕಾಮ-ಅವಾಪ್ತ್ಯಾದಿಷು ಪುರುಷಸೂಕ್ತಸಮಾರಾಧನೇನ ಅಚಿರಾತ್ ಸರ್ವಾನ್ ಕಾಮಾನ್ ಅವಾಪ್ನೋತಿ ||
ಎಲ್ಲ ಕಾಮನೆಗಳ ಪ್ರಾಪ್ತಿಯಲ್ಲಿ ವಿನಿಯೋಗಿಸಿದರೆ, ಪುರುಷಸೂಕ್ತಪೂರ್ವಕ ಸೂಕ್ತವಾದ ಆರಾಧನೆಯಿಂದ ಬಹುಬೇಗನೆ ಎಲ್ಲ ಕಾಮನೆಗಳನ್ನೂ ಪಡೆಯುತ್ತಾನೆ.
(ಪುರುಷಸೂಕ್ತಾವತರಣಮ್)
ಏವಂ ಛನ್ದಾಂಸ್ಯೃಷೀನ್ ದೇವಂ
ವಿನಿಯೋಗಂ ತಥಾ ಫಲಮ್ |
ಉಕ್ತ್ವಾ ತು ಪೌರುಷಂ ಸೂಕ್ತಮ್
ಅವತಾರಯಿತುಂ ಯತೇ ||
ಹೀಗೆ, ಛಂದಸ್ಸುಗಳನ್ನೂ, ದೇವತೆಯನ್ನೂ, ವಿನಿಯೋಗವನ್ನೂ, ಋಷಿಯನ್ನೂ, ಫಲವನ್ನೂ ಹೇಳಿ, ಪುರುಷಸೂಕ್ತಾರ್ಥವನ್ನು ಹೊರತರಲು ಯತ್ನಿಸುತ್ತೇನೆ; ಪುರುಷಸೂಕ್ತವು ಹೇಗೆ ಅವತರಣವಾಯಿತೆಂಬುದರ ಹಿನ್ನೆಲೆಯನ್ನೂ ಹೇಳಲು ಪ್ರಯತ್ನಿಸುತ್ತೇನೆ.
ಶ್ರೀಶಾಸ್ತ್ರೇ—
ಪುರುಷಸೂಕ್ತಸಂಹಿತಾಯಾಂ ಭಗವಾನ್ ಸನತ್ಕುಮಾರೋ ನಾರದಮುನಯೇ ಭಗವದ್-ಜ್ಞಾನಮ್ ಉಪದಿಶನ್ ಪುರುಷಸೂಕ್ತಮ್ ಅವತಾರಯಾಮಾಸ | ತತ್ರ ನಾರದಃ ಪರಿಪಪ್ರಚ್ಛ, ಸರ್ವವ್ಯಾಪಿನಃ ಪುರುಷಸ್ಯ ಕಿಮರ್ಥಂ ಶರೀರಪರಿಗ್ರಹ ಇತಿ |
ಪುರುಷಸೂಕ್ತಸಂಹಿತೆಯಲ್ಲಿ ಭಗವಾನ್ ಸನತ್ಕುಮಾರನು (ಬ್ರಹ್ಮಮಾನಸಪುತ್ರನಾಗಿ ಅವತರಿಸಿದ ಶ್ರೀಹರಿಯ ಕೌಮಾರಾವತಾರ) ದೇವರ್ಷಿಯಾದ ನಾರದಮುನಿಗೆ ಭಗವಂತನ ಕುರಿತಾದ ಜ್ಞಾನವನ್ನು ಉಪದೇಶಿಸುತ್ತಾ ಪುರುಷಸೂಕ್ತವನ್ನು ಅವತರಿಸುವಂತೆ ಮಾಡಿದನು (ಅವ— ಕೆಳಕ್ಕೆ, ಭೂಮಿಗೆ, ತರಣ— ಇಳಿದು ಬರುವಿಕೆ). ಆ ಸಂದರ್ಭದಲ್ಲಿ ನಾರದನು ಪ್ರಶ್ನಿಸಿದನು, "ಸರ್ವವ್ಯಾಪಿಯಾದ ಪರಮಪುರುಷನಿಗೆ ಯಾಕೆ ಶರೀರಸ್ವೀಕಾರ" ಎಂದು.
ತತ್ರ ಆಹ ಸನತ್ಕುಮಾರಃ—
"ಪುರಾ ನಾರಾಯಣೋ ದೇವಃ
ಕೃಪಯಾ ಪರಯಾನ್ವಿತಃ |
ದೇವತಿರ್ಯಙ್ಮನುಷ್ಯಾದೀನ್
ವೀಕ್ಷ್ಯ ಸಂಸಾರಮಧ್ಯಗಾನ್ ||
ಆ ಸಮಯದಲ್ಲಿ ಹೇಳಿದನು ಸನತ್ಕುಮಾರನು—
ಹಿಂದೆ ದೇವನಾದ ನಾರಾಯಣನು ಜನನಮರಣವೆಂಬ ಸಂಸಾರಚಕ್ರದ ಮಧ್ಯೆ ತೊಡರಿಕೊಂಡಿರುವ (ಸಿಲುಕಿಕೊಂಡಿರುವ) ದೇವತಾ-ಪಶು-ಮನುಷ್ಯಾದಿ ನಾನಾ ಜೀವರನ್ನು ನೋಡಿ ಪರಮಕೃಪೆಯಿಂದ ಕೂಡಿದವನಾಗಿ,
ಏವಂ ಸಂಚಿನ್ತಯಾಮಾಸ
ಸಂಸ್ಮರನ್ ವೈಭವಂ ಸ್ವಕಮ್ |
ಸ್ವತಃ ಪ್ರಮಾಣವಾಕ್ಯಾನಿ
ದುರ್ವಿಜ್ಞಾನಂ ವದನ್ತಿ ಮಾಮ್ ||
ತನ್ನದಾದ ವೈಭವವನ್ನು (ವಿಭವ, ಮಹಿಮೆ) ಸ್ಮರಿಸಿಕೊಂಡು ಹೀಗೆ ಚಿಂತಿಸತೊಡಗಿದನು— "ನನ್ನಿಂದಲೇ ಸರ್ವಮೂಲಪ್ರಮಾಣವಾಕ್ಯಗಳಾದ ವೇದಗಳು / ಶ್ರುತಿಗಳು ಉಂಟಾದರೂ, ನನ್ನನ್ನೇ 'ತಿಳಿಯಲು ದುಸ್ಸಾಧ್ಯವಾದವನೆಂದು' (ಕಷ್ಟಸಾಧ್ಯವಾದವನೆಂದು) ಹೇಳುತ್ತವೆ.
"ಅಣೋರಣೀಯಾನ್ ಮಹತೋ
ಮಹೀಯಾನ್", ನಿರ್ಗುಣೋ ಗುಣೀ |
ದಿಗ್ದೇಶಕಾಲಾವಸ್ಥಾದ್ಯೈಃ
ಅನವಚ್ಛೇದ್ಯವೈಭವಃ ||
"ನಾನು ಅಣುವಿಗಿಂತಲೂ ಸೂಕ್ಷ್ಮನು, ಮಹತ್ತಿಗಿಂತಲೂ ದೊಡ್ಡವನು", ನಿರ್ಗುಣನಾಗಿಯೂ, ಸರ್ವಗುಣಭರಿತನಾಗಿಯೂ, ಎಲ್ಲ ದಿಕ್ಕು(ದಶದಿಶೆಗಳು)-ಪ್ರದೇಶ(ಸಮಸ್ತ ಬ್ರಹ್ಮಾಂಡ)-ಕಾಲ(ಭೂತ-ವರ್ತಮಾನ-ಭವಿಷ್ಯ)-ಅವಸ್ಥೆ(ಜಾಗ್ರತ್-ಸ್ವಪ್ನ-ಸುಷುಪ್ತಿ-ತುರೀಯ)ಗಳಲ್ಲೂ ಅಖಂಡಿತವಾದ ಮಹಿಮೆಯುಳ್ಳವನೂ,
ವೃದ್ಧಿಕ್ಷಯವಿಹೀನಶ್ಚ
ಸತ್ಯಕಾಮೋ ನಿರಞ್ಜನಃ |
ವಿನೇನ್ದ್ರಿಯೇಣ ಸರ್ವಜ್ಞೋ
ವಿನಾ ಪಾದೇನ ಸರ್ವಗಃ ||
ಬೆಳವಣಿಗೆ-ವಿನಾಶಗಳಿಲ್ಲದವನೂ, ಸತ್ಯವನ್ನೇ ಸದಾ ಬಯಸುವವನೂ, ಅಂಜನ / ಕಾಡಿಗೆಯಂತಹ ಬಣ್ಣದ ಅಜ್ಞಾನದ ಕಾರ್ಗತ್ತಲಿಲ್ಲದೆ ಪೌರ್ಣಮಿಯಂತೆ ಜ್ಞಾನಜ್ಯೋತಿಪರಿಪೂರ್ಣನಾಗಿ ಪ್ರಕಾಶಿಸುವ ನಿರಂಜನನೂ, ಯಾವ ಜ್ಞಾನೇಂದ್ರಿಯಗಳ ಸಹಾಯದ ಅಗತ್ಯವೂ ಇಲ್ಲದೆ ಎಲ್ಲಬಲ್ಲವನೂ, ಪಾದಾದಿ ಯಾವುದೇ ಕರ್ಮೇಂದ್ರಿಯಗಳಿಲ್ಲದೆಯೂ ಎಲ್ಲೆಡೆಯೂ ಗಮಿಸುವುದೇ ಮುಂತಾದ ಕರ್ಮಗಳನ್ನು ಮಾಡಬಲ್ಲವನೂ,
ಅ-ನಾಸೋऽನುಭವನ್ ಗನ್ಧಾನ್
ಸ್ಪೃಶನ್ ಸರ್ವಮಪಾಣಿಕಃ |
ಶೃಣ್ವನ್ ಶ್ರುತಿಂ ವಿನಾ ಶಬ್ದಮ್
ಅಜಿಹ್ವೋ ಲೇಲಿಹನ್ ರಸಮ್ ||
ಮೂಗಿಲ್ಲದೆ ವಾಸನೆಯನ್ನು ಅರಿಯಬಲ್ಲವನೂ, ಕರಗಳಿಲ್ಲದೆಯೂ ಎಲ್ಲದರ ಸ್ಪರ್ಶಜ್ಞಾನವಿರುವವನೂ, ಶ್ರುತಿ / ಕಿವಿ ಇಲ್ಲದೆಯೂ ಶಬ್ದವನ್ನು ಕೇಳುತ್ತಲೂ, ನಾಲಗೆಯಿರದೆಯೂ ರಸಗ್ರಾಹಿಯಾದವನೂ (ರುಚಿಯರಿಯಬಲ್ಲವನೂ),
ಸಾಧನೇನ ವಿನಾ ಸಾಧ್ಯಂ
ಸರ್ವಂ ಸಂಸಾಧಯೇऽನ್ವಹಮ್ |
ತಸ್ಮಾತ್ ಸರ್ವಪ್ರಮಾಣೈಸ್ತು
ಸುದುರ್ಜ್ಞಾನತರೋऽನ್ವಹಮ್ ||
ಯಾವುದೇ ಸಾಧನ-ಸಲಕರಣೆಗಳಿಲ್ಲದೆಯೇ ಸಾಧಿಸಬಲ್ಲವನೂ, ಪ್ರತಿದಿನವೂ ಎಲ್ಲವನ್ನೂ ಸಾಧಿಸುತ್ತೇನೆ. ಹೀಗಾಗಿ, ಎಲ್ಲ ಪ್ರಮಾಣಗಳಿಂದಲೂ ಸರ್ವದಾ ಅರಿಯಲು ಕಷ್ಟಸಾಧ್ಯನು ನಾನಾಗಿರುವೆನು.
ಮಮ ರೂಪಮವಿಜ್ಞಾಯ
ಲೋಕೇ ಮೋಕ್ಷೋ ನ ಸಿದ್ಧ್ಯತಿ |
ತಸ್ಮಾತ್ ಸಂಸಾರಚಕ್ರೇऽಸ್ಮಿನ್
ಭ್ರಾಮ್ಯನ್ತೇ ತೇ ಸುದುಸ್ತರೇ ||
ನನ್ನ ಈ ನಿಜಸ್ವರೂಪವನ್ನು ತಿಳಿಯದೆ ಇಹಲೋಕದಲ್ಲಿ ಮೋಕ್ಷಸಿದ್ಧಿಯಾಗಲಾರದು. ಹೀಗಾಗಿಯೇ ಅವರೆಲ್ಲ ದಾಟಲು ಬಹು ಕಠಿನವಾದ (ಸು- ದುಸ್- ತರ— ತರಣಕ್ಕೆ ಬಹು ದುಸ್ಸಾಧ್ಯವಾದ) ಈ ಜನನಮರಣರೂಪೀ ಸಂಸಾರಚಕ್ರದಲ್ಲಿ ಪರಿಭ್ರಮಿಸುತ್ತಾರೆ (ಸುತ್ತುತ್ತಾರೆ).
ಉದ್ಧರೇಯಮಿಮಾನ್ ಸರ್ವಾನ್
ಯಾತಾಯಾತಶತಾಕುಲಾನ್ |
ಇತಿ ಸಂಚಿನ್ತ್ಯ ಮನಸಾ
ಸ್ವಚ್ಛನ್ದೋಪಾತ್ತವಿಗ್ರಹಮ್ ||
"ಸಂಸಾರದಲ್ಲಿ ನೂರಾರು ಬಾರಿ ಬಂದು ಹೋಗುತ್ತಲಿರುವ ವ್ಯಾಕುಲಗಳಿಂದ ಕೂಡಿದ ಇವರೆಲ್ಲರನ್ನೂ ಉದ್ಧರಿಸುವೆನು" ಎಂದು ಮನಸ್ಸಿನಲ್ಲೇ ಚೆನ್ನಾಗಿ ಯೋಚಿಸಿ, ತನ್ನದೇ ಆದ ಪ್ರಾಕೃತಮಾಯೆಯ ಆವರಣವನ್ನು (ಸ್ವ- ಛಂದ— ಛದಿ ಆಚ್ಛಾದನೇ— ಹೊದಿಕೆ) ಬಳಸಿ ಮೂರ್ತರೂಪವನ್ನಾಂತು,
ಹಿತ್ವೌಪನಿಷದಂ ರೂಪಂ
ಪ್ರಮಾಣಾನಾಮಗೋಚರಮ್ |
ಸರ್ವೇಷಾಂ ಸ್ತುತಿಭಿರ್ಯೋಜ್ಯಂ
ದೃಷ್ಟಮಾತ್ರೇಣ ಮೋಕ್ಷದಮ್ ||
ಪ್ರಮಾಣಗಳಿಗೆ ಅಗೋಚರವಾದ ಉಪನಿಷತ್ಪ್ರತಿಪಾದ್ಯ ನಿರ್ಗುಣ-ನಿರಾಕಾರತೆಯನ್ನು ತೊರೆದು, ಎಲ್ಲರಿಗೂ ಆತನ ಸ್ತುತಿಗಳಿಂದ ಆತನಲ್ಲೇ ಚಿತ್ತೈಕಾಗ್ರತೆಯನ್ನು ಹೊಂದಲು ಸಾಧ್ಯವಾದ, ದರ್ಶನಮಾತ್ರದಿಂದಲೇ ಮೋಕ್ಷದಾಯಕವಾದ,
ಸರ್ವಕಲ್ಯಾಣಸಂಪೂರ್ಣಂ
ಗುಣರಾಶಿಸಮಾಶ್ರಯಮ್ |
ಸಹಸ್ರಾವಯವೋಪೇತಮ್
ಆದದೇ ರೂಪಮದ್ಭುತಮ್ ||" ಇತಿ |
ಎಲ್ಲ ಕಲ್ಯಾಣ / ಮಂಗಳಗಳ ನಿಧಿಯಾದ, ಸಕಲಗುಣೋಪೇತವಾದ, ಸಾವಿರಾರು (ಅಸಂಖ್ಯ, ಅನಂತ, ಅಗಣಿತ) ಅಂಗೋಪಾಂಗಗಳಿಂದ ಕೂಡಿದ ಅದ್ಭುತವಾದ ವಿರಾಡ್ರೂಪವನ್ನು (ವಿರಾಟ್ಪುರುಷಾಕೃತಿಯನ್ನು) ತನಗೆ ತಾನೇ ಕೊಟ್ಟನು (ರೂಪತಾಳಿದನು / ಅವತರಿಸಿದನು).
ಬ್ರಹ್ಮಾಣ್ಡಪುರಾಣೇ ಕ್ಷೀರಾಬ್ಧಿವರ್ಣನೇ—
ಉಕ್ತಂ ಚ - "ನ ತೇ ರೂಪಮ್…" ಇತ್ಯಾದಿ |
ಸಹಸ್ರಕನ್ಧರಂ ಚಾರುಂ
ತುಙ್ಗೋರಸ್ಥಲಮುನ್ನತಮ್ |
ಸಹಸ್ರಬಾಹುಸಂಯುಕ್ತಮ್
ಇನ್ದಿರಾವರಮನ್ದಿರಮ್ || ಇತಿ |
ಬ್ರಹ್ಮಾಂಡಪುರಾಣದಲ್ಲಿ ಕ್ಷೀರಸಾಗರವನ್ನು ವರ್ಣಿಸುವಲ್ಲಿ ಹೇಳಿದೆ— "ನಿನಗೆ ರೂಪವಿಲ್ಲ…" ಇತ್ಯಾದಿ.
ಸಾವಿರಾರು (ಅಗಣಿತ, ಅಮಿತ) ಕೊರಳುಗಳಿರುವ (ಕಂ ಶೀರ್ಷಂ ಧರತಿ ಇತಿ ಕನ್ಧರಃ— ತಲೆಯನ್ನು ಧರಿಸುತ್ತದಾದ್ದರಿಂದ ಕುತ್ತಿಗೆಯು ಕಂಧರವೆನಿಸಿದೆ) ಸುಂದರಮೂರುತಿಯಾದ, ಸಾವಿರಾರು (ಅನಂತ, ಅಸಂಖ್ಯ) ತೋಳುಗಳುಳ್ಳ, ಇಂದಿರೆ (ಇಂದು / ಚಂದಿರನಂತೆ ಕಾಂತಿಯುತವಾದ) / ಮಹಾಲಕ್ಷ್ಮೀದೇವಿಯ ಶ್ರೇಷ್ಠವಾದ ಮಂದಿರ / ವಾಸಸ್ಥಾನವೆನಿಸಿದ ಉನ್ನತವಾದ (ಉತ್ತುಂಗವಾದ, ಎತ್ತರವಾದ) ಉರಸ್ಥಲ / ವಕ್ಷಸ್ಥಲ / ಎದೆ ಯನ್ನು ಹೊಂದಿರುವವನು ಮಹಾವಿಷ್ಣು— ಎಂದು ಮುಂತಾಗಿ ವರ್ಣಿತವಾಗಿದೆ.
ಶ್ರೀಭೂಮೀ ಯಸ್ಯ ದೇವ್ಯೌ ಸಕಲಮುನಿವರಾಃ ಕಿಙ್ಕರಾ ರಕ್ಷ್ಯಮಣ್ಡಂ
ಸೃಷ್ಟ್ಯಾದ್ಯಾಃ ಶಿಲ್ಪಲೀಲಾಃ ಕಮಲಜವಿಬುಧಾಃ ಪುತ್ರಪೌತ್ರಾದಯೋऽಪಿ |
ವೈಕುಣ್ಠಂ ನಾಮ ಧಾಮ ಸ್ತುತಿಕೃದುಪನಿಷಚ್ಛಾಸನಂ ಶಾಸ್ತ್ರವರ್ಗಃ
ಸೋऽಯಂ ವೈಕುಣ್ಠನಾಥಃ ಶ್ರಿಯಮತಿಶಯೀನೀಂ ವೈಷ್ಣವೀಂ ನೋ ದದಾತು ||
ಶ್ರೀ (ಲಕ್ಷ್ಮೀ, ಸಿರಿದೇವಿ)-ಭೂದೇವಿಯರು ಯಾರ ದೇವಿಯರೋ (ಪತ್ನಿಯರೋ), ಎಲ್ಲ ಮುನಿಶ್ರೇಷ್ಠರುಗಳು ಯಾವನ ಕಿಂಕರರೋ (ಸೇವಕರೋ), ಯಾವನು ಈ ಸಮಸ್ತ ಬ್ರಹ್ಮಾಂಡದ ರಕ್ಷಕನೋ (ಸ್ಥಿತಿ / ಪಾಲನಾಕರ್ತನೋ), ಸಮಸ್ತಸೃಷ್ಟಿಯೇ ಮೊದವುಗಳು ಯಾವನ ಶಿಲ್ಪಕಲಾನೈಪುಣ್ಯದ ಲೀಲಾಜಾಲವೋ, ಅಂತೆಯೇ ಪದ್ಮಾಸನನಾದ ಚತುರ್ಮುಖಬ್ರಹ್ಮನೂ, ದೇವತೆಗಳೂ (ವಿಶೇಷೇಣ ಬುಧ್ಯತೇ ಇತಿ— ವಿಬುಧಃ— ವಿಶೇಷವಾದ ತಿಳುವಳಿಕೆಯುಳ್ಳವರು) ಯಾರ ಮಗ-ಮೊಮ್ಮಗಪ್ರಾಯರೋ, ವೈಕುಂಠವೆಂಬ ಪರಮಧಾಮವು (ಮೋಕ್ಷಸ್ಥಾನವು) ಯಾವನ ನಿವಾಸಸ್ಥಳವೋ, ವೇದಸಾರರೂಪವಾಗಿ ವೇದಾಂತವೆನಿಸಿದ ಉಪನಿಷತ್ತುಗಳು ಯಾವನನ್ನು ಸ್ತುತಿಗೈಯುತ್ತಿರುವವೋ, (ಶಿಕ್ಷಾ, ವ್ಯಾಕರಣ, ಛಂದಸ್, ಜ್ಯೌತಿಷ, ನಿರುಕ್ತ, ಕಲ್ಪಗಳೆಂಬ)ವೇದದ ಷಡಂಗಗಳು, ಮನ್ವಾದಿಸ್ಮೃತಿ (ಧರ್ಮಶಾಸ್ತ್ರ)-ಉಪಸ್ಮೃತಿಗಳೇ ಮೊದಲಾದ ಶಾಸ್ತ್ರಸಮೂಹವು ಯಾವನವೇ ಶಾಸನಗಳೋ, ಅಂತಹ ಈ ವೈಕುಂಠಸ್ವಾಮಿಯಾದ ಶ್ರೀಮನ್ನಾದಿನಾರಾಯಣನು (ಮಹಾವಿಷ್ಣುವು) ವಿಶ್ವವ್ಯಾಪಕವಾದ (ವೈಷ್ಣವೀ) (ಬ್ರಹ್ಮಜ್ಞಾನ, ಲೌಕಿಕಸಂಪತ್ತೇ ಮೊದಲಾದ) ಅತಿಶಯವಾದ ಸಿರಿಸಂಪದವನ್ನು ನಮಗೆ ದಯಪಾಲಿಸಲಿ.
ಸಹಸ್ರಶೀರ್ಷಾ ಪುರುಷಃ— ಸಹಸ್ರಶಬ್ದಃ ಅನನ್ತವಚನಃ | ಸಹಸ್ರಾಣಿ ಶಿರಾಂಸಿ, ಸಹಸ್ರಾಣಿ ಅಕ್ಷೀಣಿ, ಸಹಸ್ರಂ ಪಾದಾಃ ಯಸ್ಯ (ಸಃ) ಸಹಸ್ರಶೀರ್ಷಾ ಸಹಸ್ರಾಕ್ಷಃ ಸಹಸ್ರಪಾತ್ ಉಕ್ತಃ | "ಶೀರ್ಷನ್ ಛನ್ದಸಿ" ಇತಿ (ಪಾ.ಸೂ.೬.೧.೬೦) ಶಿರಸ್-ಶಬ್ದಸ್ಯ ಶೀರ್ಷನ್-ಆದೇಶಃ | ಗೀಯತೇ ಹಿ "ಅನನ್ತಬಾಹೂದರವಕ್ತ್ರನೇತ್ರಮ್" ಇತಿ (ಭಗವದ್ಗೀತಾ ೧೧.೧೬) |
ಸಹಸ್ರಶೀರ್ಷಾ ಪುರುಷಃ— ಸಹಸ್ರಶಬ್ದವು ಅನಂತವನ್ನು ಸೂಚಿಸುವಂಥದ್ದು. ಸಾವಿರಾರು / ಅನಂತವಾದ (ಅಂತ್ಯವಿಲ್ಲದ, ಲೆಕ್ಕವಿಲ್ಲದಷ್ಟು) ಶಿರಗಳು, ಕಣ್ಣುಗಳು, ಪಾದಗಳು ಯಾವನವೋ ಅವನೇ (ಅಂತಹ ಪರಮಪುರುಷನೇ) ಸಹಸ್ರಶೀರ್ಷಾ ಸಹಸ್ರಾಕ್ಷಃ ಸಹಸ್ರಪಾತ್ ಎನ್ನಲ್ಪಟ್ಟಿರುವನು. ಪಾಣಿನಿಯ ಸೂತ್ರದಂತೆ ಶಿರಸ್ ಶಬ್ದಕ್ಕೆ ವೇದದಲ್ಲಿ ಶೀರ್ಷನ್ ಆದೇಶವಾಗಿದೆ. ಭಗವದ್ಗೀತೆಯ ವಿಶ್ವರೂಪದರ್ಶನವೆಂಬ ೧೧ನೆಯ ಅಧ್ಯಾಯದಲ್ಲೂ "ಅನಂತವಾದ ಬಾಹುಗಳು, ಉದರಗಳು (ಹೊಟ್ಟೆಗಳು), ಮುಖ / ಬಾಯಿ (ವಕ್ತ್ರ)ಗಳು, ಕಣ್ಣುಗಳಿರುವವ" ನೆಂದು ವರ್ಣಿಸಲಾಗಿದೆ.
ಪಾದಶಬ್ದಃ, ಉಪಲಕ್ಷಣಾರ್ಥಃ |
"ಸರ್ವತಃ ಪಾಣಿಪಾದಂ ತತ್
ಸರ್ವತೋऽಕ್ಷಿಶಿರೋಮುಖಮ್ |
ಸರ್ವತಃ ಶ್ರುತಿಮಲ್ಲೋಕೇ
ಸರ್ವಮಾವೃತ್ಯ ತಿಷ್ಠತಿ ||
(ಭಗವದ್ಗೀತಾ ೧೩.೧೩) ಇತಿ |
ಪಾದಶಬ್ದವು ಉಪಲಕ್ಷಣಾರ್ಥವುಳ್ಳದ್ದು. (ಮುಖ್ಯವಾದ ಪಾದ / ಚರಣ ಎಂಬರ್ಥಮಾತ್ರವಲ್ಲದೆ ಇನ್ನೂ ಬೇರೆಯ ಉಪ-ಅರ್ಥಗಳನ್ನೂ ಸೂಚಿಸುವಂಥದ್ದು).
"ಎಲ್ಲೆಡೆಯು ಕೈಕಾಲುಗಳ ಅದು
ಎಲ್ಲೆಡೆಯಲಿಹ ಕಣ್ಣುತಲೆಮೊಗ
ಎಲ್ಲೆಡೆಯು ಕಿವಿಗಳಿಹವೆಲ್ಲವನಾವರಿಪ ತತ್ತ್ವ |"
ಎಂದಿದೆ ಭಗವದ್ಗೀತೆ.
ಮನ್ತ್ರಾನ್ತರಂ ಚ ಭವತಿ— "ವಿಶ್ವತಶ್ಚಕ್ಷರುತ ವಿಶ್ವತೋಮುಖೋ ವಿಶ್ವತೋಹಸ್ತ ಉತ ವಿಶ್ವತಸ್ಪಾತ್" (ಮಹಾನಾರಾಯಣೋಪನಿಷತ್ ೨.೩) ಇತಿ |
ಹಾಗೆಯೇ ಮಹಾನಾರಾಯಣೋಪನಿಷತ್ತಿನಲ್ಲಿ ಇನ್ನೊಂದು ಮಂತ್ರವಿದೆ— "ಸರ್ವತ್ರ ನಯನಗಳು ಸರ್ವತ್ರ ಮುಖಗಳಿಹ | ಸರ್ವತ್ರ ಕರಗಳಿಹ ಸರ್ವತಃಪಾದ ||" ಎಂಬುದಾಗಿ.
ಪಾದಾದಯೋ ಭಗವತಃ, ಏವ ಸಙ್ಕಲ್ಪ-ವಿಕಲ್ಪ-ಕಲ್ಪಿತ-ಅಪ್ರಾಕೃತ-ತೇಜೋಮಯ-ದೇಹಗತಾಃ, ಉಚ್ಯನ್ತೇ | ಯದ್ವಾ, ತ್ರೈಲೋಕ್ಯಶರೀರತ್ವಾತ್ ಅಸ್ಯ ಸುರ-ನರ-ತಿರ್ಯಕ್-ಗತಾಃ ಪಾದಾದಯಃ ತದೀಯಾಃ, ಇತಿ ಉಪಚರ್ಯನ್ತೇ | ಯದ್ವಾ, ಪಾದಾದಿಕಾರ್ಯ-ಗಮನ-ದರ್ಶನ-ವಚನಾದಿಲಕ್ಷಣಾರ್ಥಃ | ತೇನ ಸಹಸ್ರಪಾತ್-ತ್ವೇನ ಸರ್ವಗತತ್ವಂ, ಸಹಸ್ರಾಕ್ಷತ್ವೇನ ಸರ್ವದರ್ಶಿತ್ವಂ, ಸಹಸ್ರಶೀರ್ಷತ್ವೇನ ಸರ್ವ-ಆಧಾರತ್ವಂ (ಸರ್ವಜ್ಞತ್ವಂ ವಾ)ಚ, ಸರ್ವಲೋಕಾಭಿಷಿಕ್ತತ್ವಂ ಚ ಸರ್ವಮುಖಪ್ರದಾನತ್ವಂ ಚ ಸರ್ವರಕ್ಷಣಪ್ರತಿಶ್ರವಣತ್ವಂ ಚ ಸರ್ವರಕ್ಷಾ-ಅಪೇಕ್ಷಾ-ಶ್ರವಣತ್ವಂ ಚ, ಕೇಶಾದಿ-ಪಾದಾನ್ತ-ಉಕ್ತತ್ವಾತ್ ಸರ್ವ-ಅವಯವತ್ವೇ ಅಪಿ ಸಹಸ್ರತ್ವಂ ಚ ಉಕ್ತಮ್ | ಅಕ್ಷ-ಉಪಲಕ್ಷಣೇನ ಪಞ್ಚೇನ್ದ್ರಿಯತ್ವ-ಉಕ್ತಂ ಸಿದ್ಧಮ್ |
ಪಾದ ಮೊದಲಾದವುಗಳು ಭಗವಂತನವೇ ಸಂಕಲ್ಪ-ವಿಕಲ್ಪಗಳಿಂದ ಕಲ್ಪಿತವಾದ, ಪಂಚಭೂತಾತ್ಮಕವಲ್ಲದ (ಅಪ್ರಾಕೃತ— ಪ್ರಕೃತಿದತ್ತವಲ್ಲದ), ವಿಶೇಷವಾದ ಭಗವತ್ತೇಜೋಮಯವಾದ ದೇಹದಲ್ಲಿರುವವುಗಳೆಂದು ಹೇಳಲ್ಪಡುತ್ತವೆ. ಅಥವಾ, ಮೂರುಲೋಕಗಳೇ ಈತನ ಶರೀರವಾಗಿರುವುದರಿಂದಾಗಿ, ದೇವತಾ-ಮನುಷ್ಯ-ಪಶುಗಳೇ ಮುಂತಾದವುಗಳಲ್ಲಿರುವ ಪಾದಾದಿಗಳು ಇವನವೇ ಎಂಬುದಾಗಿ ಹೇಳಲ್ಪಡುತ್ತದೆ. ಅಥವಾ— ಸರ್ವತ್ರ ಪಾದಾದಿ ಅಂಗಗಳು ಮಾಡಬಹುದಾದ ಗಮನ / ಸಂಚಾರ, ದರ್ಶನ / ನೋಡುವಿಕೆ, ವಚನ / ಮಾತಾಡುವಿಕೆ ಮುಂತಾದ ಲಕ್ಷಣಗಳನ್ನು ಸೂಚಿಸುವಂಥದ್ದು. ಇದರಿಂದ ಸಹಸ್ರಪಾದತ್ವದಿಂದ ಸರ್ವಗತತ್ವವೂ (ಎಲ್ಲೆಡೆ ಇರುವಿಕೆಯೂ), ಸಹಸ್ರಾಕ್ಷತ್ವದಿಂದ ಸರ್ವದರ್ಶಿತ್ವವೂ (ಎಲ್ಲವನ್ನೂ ನೋಡುವಿಕೆಯೂ), ಸಹಸ್ರಶೀರ್ಷತ್ವದಿಂದ ಸರ್ವಾಧಾರತ್ವವೂ (ಎಲ್ಲಕ್ಕೂ ಮೂಲಾಧಾರವಾಗಿರುವಿಕೆಯೂ, ಸರ್ವಜ್ಞತ್ವವೂ / ಎಲ್ಲವನ್ನೂ ತಿಳಿದಿರುವಿಕೆಯೂ) ಎಲ್ಲ ಲೋಕಗಳ ಪಟ್ಟಾಭಿಷಿಕ್ತ ದೊರೆತನವೂ, ಎಲ್ಲರಿಗೂ ಬಾಯಿಯನ್ನು / ಮಾತನಾಡುವ ಶಕ್ತಿಯನ್ನು ಕೊಟ್ಟವನೂ / ಕೊಡುತ್ತಿರುವವನೂ / ಕೊಡಲಿರುವವನೂ, ಎಲ್ಲರೂ ಸುರಕ್ಷಿತರಾಗಿರುವರೆಂಬ ವಾರ್ತೆಯನ್ನು ಕೇಳುವಿಕೆಯೂ, ಎಲ್ಲರ ರಕ್ಷಣಾಪೇಕ್ಷೆಯ ಬೇಡಿಕೆಗಳನ್ನೂ ಕೇಳುವಿಕೆಯೂ, ತಲೆಗೂದಲಿನಿಂದ ಹಿಡಿದು ಪಾದದವರೆಗಿನ ಎಲ್ಲ ಅಂಗಗಳಲ್ಲೂ ಸಹಸ್ರತ್ವವು ಸೂಚ್ಯವಾಗುತ್ತದೆ. ಸಹಸ್ರಾಕ್ಷನೆಂಬಲ್ಲಿ ಅಕ್ಷಿಯ ಉಪಲಕ್ಷಣವಾಗಿ ಎಲ್ಲರ ಪಂಚಜ್ಞಾನೇಂದ್ರಿಯತ್ವವೂ (ಅವುಗಳ ಒಡೆತನದಿಂದಾಗಿ ಹೃಷೀಕ-ಈಶತ್ವವೂ / ಹೃಷೀಕೇಶತ್ವವೂ) ಸಿದ್ಧವಾಗುತ್ತದೆ.
ತಥಾ ಚ ಶ್ರುತಿಃ—
"ಅಪಾಣಿಪಾದೋ ಜವನೋ ಗೃಹೀತಾ
ಪಶ್ಯತ್ಯಚಕ್ಷುಃ ಸ ಶೃಣೋತ್ಯಕರ್ಣಃ"
(ಶ್ವೇತಾಶ್ವತರ-ಉಪನಿಷತ್ ೩.೧೯) ಇತಿ |
"ಗಾಮಾವಿಶ್ಯ ಚ ಭೂತಾನಿ
ಧಾರಯಾಮ್ಯಹಮೋಜಸಾ |"
(ಭಗವದ್ಗೀತಾ) ಇತ್ಯಾದಿ ಚ | ಯದ್ವಾ, ಸರ್ವಾಧಿಕತ್ವಂ ಸರ್ವಜ್ಞತ್ವಂ ಸರ್ವಶಕ್ತಿತ್ವಂ ಚ ಸಿದ್ಧಮ್ |
ಹಾಗೆಯೇ ಶ್ವೇತಾಶ್ವತರೋಪನಿಷತ್ತಿನಲ್ಲಿ ಹೀಗಿದೆ—
"ಕೈಕಾಲು ಇಲ್ಲದೆಯೆ ನಡೆದು ಹಿಡಿಯುವನು
ನೋಡುವನು ಕೇಳುವನು ಕಣ್ಣುಕಿವಿಯಿರದೆ"
ಎಂದು.
ಅಂತೆಯೇ ಭಗವದ್ಗೀತೆಯ ೧೫ನೇ ಅಧ್ಯಾಯದ ೧೩ನೇ ಶ್ಲೋಕದಲ್ಲಿ ಹೀಗಿದೆ—
"ಭೂಮಿಯನು ಒಳಸೇರಿ ಈ ಚರಾಚರವನ್ನು
ನನ್ನ ಓಜದ ಬಲದಿ ಧರಿಸಿರುವೆನೆಲ್ಲ |"
ಇತ್ಯಾದಿ ಪ್ರಮಾಣವಾಕ್ಯಗಳು. ಹೀಗಾಗಿ, ಎಲ್ಲಕ್ಕಿಂತ ಹೆಚ್ಚುತನ, ಎಲ್ಲ ತಿಳಿದಿರುವಿಕೆ ಹಾಗೂ ಎಲ್ಲಾ ಶಕ್ತಿಯಿಂದ ಕೂಡಿರುವಿಕೆಯು ಸಿದ್ಧವಾಗುತ್ತದೆ.
ಪುರಾಣತ್ವಾತ್ ಪುರುಷಃ | ತಥಾ ಚ ಶ್ರೂಯತೇ— "ಅನ್ತರತಃ ಕೂರ್ಮಂ ಭೂತಗ್ಂ ಸರ್ಪನ್ತಂ ತಮಬ್ರವೀತ್ | ಮಮ ವೈ ತ್ವಙ್-ಮಾಂಸಾ ಸಮಭೂತ್ | ನೇತ್ಯಬ್ರವೀತ್"— (ಪುನಶ್ಚ ಭಗವಾನ್ ಕೂರ್ಮರೂಪಃ ಪ್ರತ್ಯಾಹ |)— "ಪೂರ್ವಮೇವಾಹಮ್ ಇಹಾಸಮ್ ಇತಿ | ತತ್ ಪುರುಷಸ್ಯ ಪುರುಷತ್ವಮ್ | ಸ ಸಹಸ್ರಶೀರ್ಷಾ ಪುರುಷಃ | ಸಹಸ್ರಾಕ್ಷಃ ಸಹಸ್ರಪಾದ್ ಭೂತ್ವೋದತಿಷ್ಠತ್" (ತೈತ್ತಿರೀಯ-ಆರಣ್ಯಕಮ್ ೧.೨೩.೯೩) ಇತಿ |
ಬಹು ಪುರಾತನನಾಗಿರುವುದರಿಂದಲೂ, ಪುರಾಣಾದಿ ಸಕಲ ಪ್ರಾಚೀನಸಾಹಿತ್ಯಗಳಲ್ಲಿ ಪ್ರತಿಪಾದ್ಯನಾಗಿರುವುದರಿಂದಲೂ ಪುರುಷನೆನಿಸುತ್ತಾನೆ. ಹಾಗೆಯೇ ತೈತ್ತಿರೀಯಾರಣ್ಯಕದಲ್ಲಿ ಹೇಳಿದೆ— "ಸಕಲ ಚರಾಚರಗಳೊಳಗೆ ಸಂಚರಿಸುತ್ತಿರುವ ಆ ಮಾಯಾಪ್ರಕೃತಿಯನ್ನಾಶ್ರಯಿಸಿ ಕೂರ್ಮರೂಪ ತಾಳಿದ ಆದಿಕೂರ್ಮನನ್ನು ಕುರಿತು ಹೇಳಿದನು— ನನ್ನ ತ್ವಚೆ, ಮಾಂಸಗಳು ಸೃಷ್ಟಿಯಾದವೇ ಎಂದರೆ ಅಲ್ಲವೆಂದನು. (ಪುನಃ ಭಗವಾನ್ ಕೂರ್ಮರೂಪನು ಮಾರ್ನುಡಿದನು.)— ಹಿಂದೆಯೇ / ಪೂರ್ವದಲ್ಲೇ ನಾನಿಲ್ಲಿದ್ದೆನು. ಹಾಗಾಗಿಯೇ ಪುರುಷನಿಗೆ (ಪುರಾ ಏವ ಪುರಿ ದೇಹೇ ಶೇತೇ ಇತಿ ಪುರುಷಃ) ಪುರುಷನೆಂಬ ಹೆಸರು. ಅವನೇ ಸಾಸಿರತಲೆಗಳ ಪುರುಷನು. ಸಾಸಿರಕಣ್ಣುಗಳ ಸಾಸಿರಪಾದಗಳ ರೂಪತಾಳಿ ಸೃಷ್ಟಿರೂಪನಾದನು" ಎಂದು.
ಯದ್ವಾ, ಪೂರ್ಣತ್ವಾತ್ ಪುರುಷಃ | "ತೇನೇದಂ ಪೂರ್ಣಂ ಪುರುಷೇಣ ಸರ್ವಮ್" ಇತಿ ಶ್ರುತೇಃ (ಮಹಾನಾರಾಯಣೋಪನಿಷತ್ ೧೦) | ಯದ್ವಾ, ಶರೀರಾಖ್ಯೇ ಪುರಿ ಶಯನಾತ್ ಪುರುಷಃ | ಶಕಾರಸ್ಯ ಷಕಾರಾದೇಶಃ |
ಅಥವಾ, ಪೂರ್ಣತೆಯಿಂದ ಪುರುಷನು. ಮಹಾನಾರಾಯಣೋಪನಿಷತ್ತಿನಲ್ಲಿ "ಆ ಪುರುಷನಿಂದ ಇದೆಲ್ಲವೂ / ಸೃಷ್ಟಿಯೆಲ್ಲವೂ ಪೂರ್ಣವಾಗಿದೆ / ತುಂಬಿಕೊಂಡಿದೆ / ವ್ಯಾಪಿಸಲ್ಪಟ್ಟಿದೆ" ಎನ್ನಲಾಗಿದೆ. ಅಥವಾ, ಶರೀರವೆಂಬ ಪುರದಲ್ಲಿ ಶಯನಿಸಿರುವುದರಿಂದಾಗಿ ಪುರುಷನು. (ಶಯನದ) ಶಕಾರಕ್ಕೆ ಷಕಾರದ ಆದೇಶವಾಗಿದೆ.
ಶ್ರೀವಿಷ್ಣುಸ್ಮೃತೌ—
ಪುರಮಾಕ್ರಮ್ಯ ಸಕಲಂ
ಶೇತೇ ಯಸ್ಮಾನ್ಮಹಾಪ್ರಭುಃ |
ತಸ್ಮಾತ್ಪುರುಷ ಇತ್ಯೇಷಃ
ಪ್ರೋಚ್ಯತೇ ತತ್ತ್ವಚಿನ್ತಕೈಃ || ಇತಿ |
ಎಲ್ಲ ದೇಹಗಳಾಕ್ರಮಿಸುತಲಿ
ಎಲ್ಲರೊಳಗಿವ ಶಯನಿಸುತಿಹನು
ಎಲ್ಲರ ಪ್ರಭುವೀತನೆಂಬುದರಿಂದೆ ಪುರುಷಾಖ್ಯ |
ಎಂದು ವಿಷ್ಣುಸ್ಮೃತಿಯಲ್ಲಿ ಹೇಳಿದೆ.
ಯದ್ವಾ, ಪುರುಶಬ್ದೋ ಬಹುಪರಃ | "ವನ ಷಣ ಸಂಭಕ್ತೌ" (ಧಾತುಪಾಠೇ ೪೬೪) | ಬಹೂನಾಂ ಬಹುಭಿರ್ವಾ ಭಜನಾತ್ ಪುರುಷಃ |
ಅಥವಾ, ಪುರು ಎಂದರೆ ಬಹು ಎಂಬ ಭಾವ. "ವನ ಸಂಭಕ್ತೌ" ಹಾಗೂ "ಷಣ ಸಂಭಕ್ತೌ" ಧಾತುಜನ್ಯವಾಗಿ ಷಃ ಬಂದಿದೆ. ಬಹುಮಂದಿಯಾದ ಲೋಕದ ಸಕಲರಿಗೆ ಎಲ್ಲ ಸಂಪತ್ತನ್ನೂ ಚೆನ್ನಾಗಿ ಹಂಚಿಕೊಡುವವನು / ವಿಭಾಗಿಸಿ ಕೊಡುವವನು ಅಥವಾ ಬಹುಜನರಿಂದ ಸೇವೆಗೊಳ್ಳಲ್ಪಡುವನು (ಭಜ ಸೇವಾಯಾಮ್) ಎಂಬುದರಿಂದಾಗಿ ಪುರುಷನು.
ಯದ್ವಾ, "ಷಣು ದಾನೇ" (ಧಾ.ಪಾ.೧೪೬೫) | ಏತದ್ಗುಣೋಪೇತೋ ಭಗವಾನ್ ವಾಸುದೇವಃ ; ನ ಅನ್ಯಃ, ಇತ್ಯರ್ಥಃ |
ಅಥವಾ, ದಾನಾರ್ಥದ ಷಣು ಧಾತುಜನ್ಯವಾಗಿ, ಈ (ದಾನ) ಗುಣದಿಂದ ಕೂಡಿರುವ, ಎಲ್ಲರಿಗೂ ಬೇಡಿದ್ದನ್ನು ಮೋಕ್ಷದವರೆಗೆ ಎಲ್ಲವನ್ನೂ ಕೊಡಲು ಸಮರ್ಥನಾದ ಭಗವಾನ್ ವಾಸುದೇವನೇ ಪುರುಷನೇ ಹೊರತು ಬೇರಾರೂ ಅಲ್ಲ ಎಂದರ್ಥ.
ಪಾದ್ಮೇ ಪುರಾಣೇ—
ಭಗವಾನಿತಿ ಶಬ್ದೋऽಯಂ
ತಥಾ ಪುರುಷ ಇತ್ಯಪಿ |
ನಿರುಪಾಧೀ ಚ ವರ್ತೇತೇ
ವಾಸುದೇವೇ ಸನಾತನೇ ||
ಹೆಸರು ಭಗವಾನೆಂಬುದವನಿಗೆ
ವಾಸುದೇವಗೆ ಪುರುಷನೆನ್ನುತ
ವಸುಧೆಯೊಳಗಿದು ನಿತ್ಯಸತ್ತ್ವಗೆ ಸಾರ್ಥಕವು ದಿಟವು |
ಭಗವಾನ್ ಎಂಬೀ ಶಬ್ದವೂ, ಹಾಗೆಯೇ ಪುರುಷ ಎಂಬುದೂ, ಸನಾತನನಾದ (ನಿತ್ಯನಾದ) ವಾಸುದೇವನಲ್ಲೇ ನಿರುಪಾಧಿಕವಾಗಿ (ಕಪಟವಾಗಿ / ಬರಿಯ ಉಪಚಾರಕ್ಕಾಗಿ / ಶಿಷ್ಟಾಚಾರಕ್ಕೆ ಮಾತ್ರವಲ್ಲದೆ ಯಥಾರ್ಥವಾಗಿ, ಅನ್ವರ್ಥಕವಾಗಿ, ಸಾರ್ಥಕವಾಗಿ) ನೆಲೆಸಿವೆ / ಅನ್ವರ್ಥಕವಾಗಿವೆ.
ಸರ್ವಲೋಕಪ್ರತೀತ್ಯಾ ಚ
ಪುರುಷಃ ಪ್ರೋಚ್ಯತೇ ಹರಿಃ |
ತಂ ವಿನಾ ಪುಣ್ಡರೀಕಾಕ್ಷಂ
ನಾನ್ಯಃ ಪುರುಷಶಬ್ದಭಾಕ್ || ಇತಿ |
ಪ್ರತೀತಿ ಎಂದರೆ ಪ್ರಸಿದ್ಧಿ, ಜ್ಞಾನ, ಆದರ, ಹರ್ಷ ಎಂದರ್ಥ. ಸರ್ವಲೋಕದಲ್ಲಿ ಪ್ರಸಿದ್ಧನಾದ್ದರಿಂದಲೂ, ಸರ್ವಲೋಕಜ್ಞಾನವುಳ್ಳ ಸರ್ವಜ್ಞನಾದ್ದರಿಂದಲೂ, ಸರ್ವಲೋಕವನ್ನೂ ಆದರ / ಪ್ರೀತಿಯಿಂದ ಕಾಣುವುದರಿಂದ, ಸರ್ವಲೋಕಾನಂದಕಾರಕನಾದ್ದರಿಂದ ಶ್ರೀಹರಿಯು ಪುರುಷನೆಂದು ಕರೆಯಲ್ಪಡುತ್ತಾನೆ. ಆ ಪುಂಡರೀಕಾಕ್ಷ (ತಾವರೆಕಂಗಳವ, ಕಮಲನೇತ್ರ) ನನ್ನು ಬಿಟ್ಟು ಅನ್ಯರಾರೂ ಪುರುಷಶಬ್ದಕ್ಕೆ ಭಾಜನರಲ್ಲ / ಯೋಗ್ಯರಲ್ಲ ಎಂಬುದಾಗಿ.
ಬ್ರಹ್ಮಾದ್ಯಾ ದೇವತಾಃ ಸರ್ವಾಃ
ಯಕ್ಷತುಂಬುರುಕಿನ್ನರಾಃ |
ತೇ ಸರ್ವೇ ಪುರುಷಾಂಶತ್ವಾತ್
ಉಚ್ಯನ್ತೇ ಪುರುಷಾ ಇತಿ ||
ಬ್ರಹ್ಮನೇ ಮೊದಲಾದ ಎಲ್ಲ ದೇವತೆಗಳೂ, ಯಕ್ಷರೂ, ತುಂಬುರರೂ, ಕಿನ್ನರರೂ— ಇವರೆಲ್ಲರೂ ಪರಮಪುರುಷನ ಅಂಶದಿಂದಲೇ ಉಂಟಾಗಿರುವುದರಿಂದ ಪುರುಷರೆನಿಸುವರು.
ಶ್ರೀಮದ್-ಉತ್ತರರಾಮಾಯಣೇ ಅಗಸ್ತ್ಯವಚನಮ್—
ಅಸೌ ರಾಮೋ ಮಹಾಬಾಹುಃ
ಅತಿಮಾನುಷಚೇಷ್ಟಯಾ |
ತೇಜೋಮಹತ್ತಯಾ ವಾऽಪಿ
ಸಂಸ್ಮಾರಯತಿ ಪೂರುಷಮ್ || ಇತಿ |
ಉತ್ತರರಾಮಾಯಣದಲ್ಲಿ ಅಗಸ್ತ್ಯರ ಮಾತು— ಈ ಮಹಾಬಾಹುವಾದ (ನೀಳವಾದ ತೋಳುಗಳುಳ್ಳ ಮಹಾಪರಾಕ್ರಮಿಯಾದ) ರಾಮನು ತನ್ನ ಮಾನುಷಾತೀತವಾದ ಲೀಲೆಗಳಿಂದಲೂ, ತನ್ನ ಮಹಾತೇಜಸ್ಸಿನಿಂದಲೂ ಆ ಪರಮಪುರುಷನನ್ನೇ ನೆನಪಿಸುತ್ತಾನೆ ಎಂದು.
ಶ್ರೀಹರಿವಂಶೇ—
ಗೋವರ್ಧನಾದಿಧರಣಾತ್
ನಾಥ! ನನ್ದಸುತೋऽಪಿ ಸನ್ |
ಪುರುಷಸ್ಯಾಂಶಸಂಭೂತಂ
ತ್ವಾಂ ವಯಂ ನಿರಣೈಷ್ಮ ಹಿ ||
ಕೇವಲ ಮನುಷ್ಯನಾದ ನಂದನ ಸುತನಾದರೂ ಗೋವರ್ಧನಗಿರಿಯನ್ನೆತ್ತಿದ್ದೇ ಮೊದಲಾದ ಅತಿಮಾನುಷಲೀಲೆಗಳಿಂದ, ಹೇ ಜಗನ್ನಾಥನೇ! ಲಕ್ಷ್ಮೀನಾಥನೇ!! ರುಕ್ಮಿಣೀನಾಥನೆ!!! ನಿನ್ನನ್ನು ಆ ಪರಮಪುರುಷನಾದ ಶ್ರೀಮನ್ನಾರಾಯಣನ ಅವತಾರವೆಂದೇ ನಾವು ನಿರ್ಣಯಿಸುತ್ತೇವೆ.
ಸ್ಕನ್ದಪುರಾಣೇ—
ಯಥಾ ಭಾಸ್ಕರಶಬ್ದೋऽಯಮ್
ಆದಿತ್ಯೇ ಪ್ರತಿತಿಷ್ಠತಿ |
ಯಥಾ ಚಾಗ್ನೌ ಬೃಹದ್ಭಾನುಃ
ಯಥಾ ವಾಯೌ ಸದಾಗತಿಃ ||
ಯಥಾ ಪುರುಷಶಬ್ದೋऽಯಂ
ವಾಸುದೇವೇऽವತಿಷ್ಠತೇ |
ತಥಾ ಶಙ್ಕರಶಬ್ದೋऽಯಂ
ಮಹಾದೇವೇ ವ್ಯವಸ್ಥಿತಃ || ಇತಿ |
ಹೇಗೆ ಈ ಭಾಸ್ಕರ ಎಂಬ ಶಬ್ದವು ಆದಿತ್ಯನಿಗೆ ಸಲ್ಲುತ್ತದೋ, ಹೇಗೆ ಬೃಹದ್ಭಾನುಪದವು ಅಗ್ನಿಯಲ್ಲಿ ನೆಲೆಸಿರುವುದೋ, ಸದಾ ಸಂಚಾರಶೀಲತೆಯು ವಾಯುವಿನಲ್ಲಿ ಎಂತು ಪ್ರತಿಷ್ಠಿತವೋ, ಹೇಗೆ ಪುರುಷಶಬ್ದವು ವಾಸುದೇವನಿಗೇ ಸಲ್ಲುತ್ತದೋ, ಅಂತೆಯೇ ಶಂಕರ ಎಂಬ ಶಬ್ದವು ಮಹಾದೇವನಿಗೇ ಸಲ್ಲುವುದು.
ಶ್ರೀವಿಷ್ಣುಪುರಾಣೇ(೧.೮.೩೫)—
ದೇವತಿರ್ಯಙ್ಮನುಷ್ಯೇಷು
ಪುನ್ನಾಮಾ ಭಗವಾನ್ ಹರಿಃ |
ಶ್ರೀನಾಮ್ನೀ ಲಕ್ಷ್ಮೀರ್ಮೈತ್ರೇಯ!
ನಾನಯೋರ್ವಿದ್ಯತೇ ಪರಮ್ || ಇತಿ |
ದೇವತೆಗಳು- ತಿರ್ಯಗ್ಜಂತುಗಳು / ಪಶುಗಳು - ಮನುಷ್ಯರು— ಇವರಲ್ಲಿ ಪುಂ / ಪುರುಷ ನೆಂಬ ನಾಮಕನು ಭಗವಾನ ಶ್ರೀಹರಿಯೇ ಆಗಿರುವನು. ಎಲೈ ಮೈತ್ರೇಯನೆ! ಶ್ರೀ ನಾಮಕಳೇ ಲಕ್ಷ್ಮೀದೇವಿಯು. ಇವರಿಬ್ಬರಿಗಿಂತ ಶ್ರೇಷ್ಠತತ್ತ್ವವಾವುದೂ ಇಲ್ಲ.
ಶ್ರೀನಾರಸಿಂಹೇ—
ಸ ಏವ ವಾಸುದೇವೋऽಯಂ
ಪುರುಷಃ ಪ್ರೋಚ್ಯತೇ ಬುಧೈಃ |
ಪ್ರಕೃತಿಸ್ಪರ್ಶರಾಹಿತ್ಯಾತ್
ಸ್ವಾತನ್ತ್ರ್ಯಾದ್ ವೈಷ್ಣವಾದಪಿ ||
ಪ್ರಕೃತಿಯ ಮಾಯಾವಲಯದೊಳಗೆ ಸಿಲುಕದ್ದರಿಂದಲೂ, ಸ್ವತಂತ್ರನಾದ್ದರಿಂದಲೂ, ವಿಶ್ವವ್ಯಾಪಿಯಾದ್ದರಿಂದಲೂ, ಆ ಸರ್ವಭೂತನಿವಾಸಿಯಾದ ವಾಸುದೇವನೇ ಈ ಪುರುಷನೆನಿಸಿರುವನು.
ವೈಷ್ಣವೇ ಪುರಾಣೇ—
ಸ ಏವ ವಾಸುದೇವೋऽಯಂ
ಸಾಕ್ಷಾತ್ ಪುರುಷ ಉಚ್ಯತೇ |
ಸ್ತ್ರೀಪ್ರಾಯಮಿತರತ್ ಸರ್ವಂ
ಜಗದ್ಬ್ರಹ್ಮಪುರಸ್ಸರಮ್ || ಇತಿ |
ವಿಷ್ಣುಪುರಾಣದಲ್ಲಿ— ಚತುರ್ಮುಖಬ್ರಹ್ಮನೇ ಮೊದಲ್ಗೊಂಡ ಇಡೀ ಜಗತ್ತೆಲ್ಲವೂ, ವಾಸುದೇವನ ಹೊರತಾದ ಎಲ್ಲವೂ ಸ್ತ್ರೀತುಲ್ಯವಾದುವು. ಆ ವಾಸುದೇವನೋರ್ವನೇ ಸಾಕ್ಷಾತ್ ಪುರುಷನೆಂದು ಕರೆಯಲ್ಪಟ್ಟಿರುವನು.
ಅರ್ವಾಚೀನಾಃ ಕವಯಃ ಅಪಿ—
"ಸಂಹೃತ್ಯ ಲೋಕಾನ್ ಪುರುಷೋऽಧಿಶೇತೇ
ಶ್ರೀವತ್ಸಲಕ್ಷ್ಮಾ ಪುರುಷಶ್ಚ ಸಾಕ್ಷಾತ್ |"
ಆಧುನಿಕ ಕವಿಗಳ ಮಾತಿನಲ್ಲಿಯಾದರೋ—
ಲೋಕಗಳನ್ನೆಲ್ಲ ಮಹಾಪ್ರಳಯಕಾಲದಲ್ಲಿ ಸಂಹರಿಸುವ, ಪ್ರಳಯಜಲದಲ್ಲಿ ಪವಡಿಸುವ, ಶ್ರೀವತ್ಸಲಾಂಛನವನ್ನು ಎದೆಯಲ್ಲಿ ಧರಿಸಿದ ಪರಮಪುರುಷ ಶ್ರೀಮನ್ನಾರಾಯಣನೇ ಸಾಕ್ಷಾತ್ ಪುರುಷನು.
"ತಮಸಃ ಪರಮಂ ತಮವ್ಯಯಂ
ಪುರುಷಂ ಯೋಗಸಮಾಧಿನಾ ರಘುಃ |"
ಸೂರ್ಯವಂಶದ ರಘುಮಹಾರಾಜನು ಯೋಗಸಮಾಧಿಯ ಮೂಲಕ ಕತ್ತಲೆಯಿಂದಾಚೆಗಿನ, ಎಂದೂ ನಾಶವಾಗದ, ಆ ಪರಮಪುರುಷನನ್ನು (ದರ್ಶನಮಾಡಿದನು).
"ಹರಿರ್ಯಥೈಕಃ ಪುರುಷೋತ್ತಮಸ್ತತಃ?" ಇತಿ |
ಇತ್ಯಾದಿಭಿಃ ವಚನೈಃ ಪುರುಷೋ ವಾಸುದೇವ ಇತಿ ಸಿದ್ಧಮ್ | ಯೋऽಯಂ ನಾರಾಯಣಃ ಸಹಸ್ರಾಕ್ಷಃ, ಸ ಏವ ಸಹಸ್ರಪಾತ್ |
ಆದ್ದರಿಂದ, ಹರಿಯೊಬ್ಬನೇ ಪುರುಷೋತ್ತಮನು ಎಂದು ಎಂಬಿತ್ಯಾದಿ ವಚನಗಳಿಂದ ಪುರುಷನು ವಾಸುದೇವನೆಂಬುದು ಸಿದ್ಧವಾಯಿತು (ಸಾಧಿಸಲ್ಪಟ್ಟಿತು). ಯಾವ ಈ ಪುರುಷನಿರುವನೋ ಆ ನಾರಾಯಣನೇ ಸಹಸ್ರಾಕ್ಷನೂ, ಸಹಸ್ರಪಾದನೂ ಆಗಿರುವನು.
ಸ ಭೂಮಿಂ ವಿಶ್ವತೋ ವೃತ್ತ್ವಾ—
ಏವಂ-ಭೂತಃ ಸಃ ಭೂಮಿಂ ಭೂಮ್ಯಾದಿಲೋಕಜಾತಂ ವಿಶ್ವತಃ ಸರ್ವತೋ ವೃತ್ತ್ವಾ ವ್ಯಾಪ್ಯ, ಯದ್ವಾ ಭೂಮಿಂ ಜಗತ್ಕಾರಣಂ ಪ್ರಕೃತಿಂ ವಿಶ್ವತಃ ಕಾರ್ಯವರ್ಗೈಃ ಸಹ ವೃತ್ತ್ವಾ ಅತ್ಯತಿಷ್ಠದ್ದಶಾಙ್ಗುಲಮ್ | ಯಥಾ ಆಹ, "ಅಣೋರಣೀಯಾನ್ ಮಹತೋ ಮಹೀಯಾನ್" ಇತಿ | (ಮಹಾನಾರಾಯಣ-ಉಪನಿಷತ್ ೧೦.೨೦) |
ಅವನು ಭೂಮಿಯನ್ನು (ಬ್ರಹ್ಮಾಂಡವನ್ನು) ಎಲ್ಲೆಡೆಯಿಂದ ಆವರಿಸಿ—
ಹೀಗಿರುವ ಅವನು ಭೂಮಿಯನ್ನು ಭೂಮಿಯೇ ಮೊದಲಾದ ಲೋಕಗಳಾಗಿರುವವುಗಳನ್ನು ಎಲ್ಲೆಡೆಯಿಂದ ಆವರಿಸಿ ವ್ಯಾಪಿಸಿ, ಅಥವಾ ಭೂಮಿಯನ್ನು ಜಗತ್ಕಾರಣವಾದ ಪ್ರಕೃತಿಯನ್ನು ಎಲ್ಲದರೊಂದಿಗೆ ತನ್ನೆಲ್ಲ ವಿಧದ ಲೀಲಾಜಾಲಗಳೊಂದಿಗೆ ಆವರಿಸಿ ಹತ್ತಂಗುಲಗಳಷ್ಟು ಆಚೆಗೆ ಮೀರಿನಿಂತನು. ಹೇಗೆಂದು ಹೇಳುತ್ತಾನೆ, "ಅಣುವಿಗಿಂತಣುವಾಗಿ ಮಹತಿಗಿಂ ಮಹದಾಗಿ" ಅತೀ ಸೂಕ್ಷಕಣಕ್ಕಿಂತಲೂ ಸೂಕ್ಷ್ಮತಮವಾಗಿ, ಅತೀ ದೊಡ್ಡದಕ್ಕಿಂತಲೂ ಬೃಹತ್ತಮವಾಗಿ ಎಂದು.
"ಅಣುತ್ವೇನ ಮಹತ್ತ್ವೇನ
ದ್ವಿಧಾ ತಿಷ್ಠತಿ ಕೇಶವಃ |
ತತ್ರ ಪೌರುಷಸೂಕ್ತೇನ
ಮಹತ್ತ್ವಮುಪವರ್ಣಿತಮ್ ||"
ಇತಿ |
ಅಣುವಾಗಿ ಮಹದಾಗಿ
ದ್ವಿವಿಧದೊಳ್ ಕೇಶವನು |
ಇರುವನೆಂಬುದ ಪುರುಷ
ಸೂಕ್ತ ಬಣ್ಣಿಪುದು ||
ಎಂದು.
ತಸ್ಮಾತ್ ಸ ಭೂತಾನಿ ವ್ಯಾಪ್ಯ ತತೋ ಅಧಿಕೋ ಭವತಿ ಇತಿ ಅರ್ಥಃ | ಏತದ್ ಉಕ್ತಂ ಭವತಿ, ಯಃ ಅಯಂ ಸಹಸ್ರಶೀರ್ಷಾ ಪುರುಷಃ, ಸ ಪುರುಷಃ ಭೂಮ್ಯಾದಿಲೋಕಜಾತಂ ವ್ಯಾಪ್ಯ ತಸ್ಮಾತ್ ಲೋಕಜಾತಾತ್ ದಶಾಙ್ಗುಲಮ್ ಅತ್ಯತಿಷ್ಠತ್ |
ಹೀಗಾಗಿ, ಆತನು ಸಕಲ ಚರಾಚರಗಳನ್ನು ವ್ಯಾಪಿಸಿ, ಅದಕ್ಕಿಂತಲೂ ಅತೀತವಾಗಿ ಇರುತ್ತಾನೆಂದರ್ಥ. ಹೀಗೆ ಹೇಳಿದಂತಾಗುತ್ತದೆ— ಯಾವ ಈ ಸಾಸಿರತಲೆಗಳ (ಅನಂತಶಿರಗಳ) ಪುರುಷನಿರುವನೋ, ಆ ಪುರುಷನು ಭೂಮಿಯೇ ಮೊದಲಾಗಿ ಉಂಟಾಗಿರುವ ಸಮಸ್ತ ಲೋಕಗಳನ್ನೂ ವ್ಯಾಪಿಸಿ, ಆ ಲೋಕಗಳಿಗಿಂತ ಹತ್ತಂಗುಲದಷ್ಟು ಆಚೆಗೂ ಮೀರಿರುವನು.
ಅಥ ದಶಾಙ್ಗುಲಶಬ್ದಸ್ಯ ಅರ್ಥಃ, ಉಚ್ಯತೇ | ಅತ್ರ ದಶಾಙ್ಗುಲಶಬ್ದೇನ ನ ದಶಾಙ್ಗುಲವಚನಮ್; ಅಪರಿಚ್ಛಿನ್ನಸ್ಯ ಪುರುಷಸ್ಯ ಪರಿಚ್ಛೇದಪ್ರಸಙ್ಗಾತ್ | ತರ್ಹಿ ಕೋऽರ್ಥಃ? ಉಚ್ಯತೇ |
ಬಳಿಕ, ದಶಾಂಗುಲದ ಅರ್ಥವು ಹೇಳಲ್ಪಡುತ್ತದೆ. ಇಲ್ಲಿ ದಶಾಂಗುಲ ಶಬ್ದದಿಂದ ಹತ್ತಂಗುಲವೆಂಬ ಮಾತಲ್ಲ / ಭಾವವಲ್ಲ; ಪರಿಚ್ಛೇದರಹಿತನಾಗಿ ಅಖಂಡವಾಗಿ ಸರ್ವತ್ರವ್ಯಾಪಕನಾಗಿ ವಿಷ್ಣುವೆನಿಸಿದ (ವ್ಯಾಪನಾದ್ ವಿಷ್ಣುಃ ರಮಣಾದ್ ರಾಮಃ) (ಖಂಡ— ತುಂಡು, ಛಿದ್ರ. ಅದಿಲ್ಲದವನು) ಪುರುಷನನ್ನು ತುಂಡುಮಾಡಿದಂತೆ / ಮಿತಿಗೊಳಪಡಿಸಿದಂತೆ. ಅಳತೆಗಳವಡದ ಅಸೀಮನ ಅಳತೆಮಾಡಿ ಸೀಮಾರೇಖೆ ಹಾಕಿದಂತೆ ಆಗುವುದಿಲ್ಲವೆ? ಹಾಗಿದ್ದರೆ ಇದರರ್ಥವೇನು? ಹೀಗೆ ಹೇಳಿದೆ—
"ದಶದಶಾನ್ ಅತ್ಯನ್ತಯೋಃ" ಇತಿ ಏತಸ್ಮಿನ್ ಅಚ್ ಪ್ರತ್ಯಯಃ, ಅತಿಕೋಟಿಯೋಜನಯೋಃ ಇತಿ |....| ತಸ್ಮಾತ್ ಅನನ್ತಯೋಜನಮ್ ಇದಮ್ ಅತೀತ್ಯ ಅತಿಷ್ಠತ್ ಇತ್ಯುಕ್ತಂ ಭವತಿ |
"ಹತ್ತುಹತ್ತುಗಳನ್ನು ಅಂತಕ್ಕೆ ಅತೀತವಾಗಿರುವ ಅನಂತದಲ್ಲಿ (ಪ್ರಯೋಗಿಸಲಾಗುವುದು)" ಎಂಬ ನಿಯಮದಂತೆ ಅಚ್ (ಸ್ವರ) ಪ್ರತ್ಯಯ ಬಂದು, ಕೋಟ್ಯಂತರ ಯೋಜನಗಳನ್ನೂ ಮೀರಿದ ಎಂಬರ್ಥ ಕೊಟ್ಟಿದೆ…. ಹೀಗಾಗಿ, ಈ ವಿಶ್ವದಾಚೆಗೆ ಅಂತ್ಯವಿರದಷ್ಟು ಯೋಜನಗಳವರೆಗೂ ಈ ಪುರುಷತತ್ತ್ವವು ವ್ಯಾಪಿಸಿ ನಿಂತಿತು ಎಂದು ಹೇಳಿದಂತಾಗುತ್ತದೆ.
ಪಾದ್ಮಪುರಾಣೇ ಭುವನಕೋಶ-ಅಧ್ಯಾಯೇ—
ಭೂಮೇಶ್ಚ ಬ್ರಹ್ಮಕೋಶಸ್ಯಾ-
-ಪ್ಯನ್ತರಾಳಂ ಕಿಯದ್ವದ |
ಯೋಜನಾನಾಮ್ ಅನನ್ತತ್ವಾತ್
ದಶಾಙ್ಗುಳಮಿದಂ ವಿದುಃ ||
ಇತಿ |
ಭೂಮಿಯ ಹಾಗೂ ಬ್ರಹ್ಮಕೋಶ (ಬ್ರಹ್ಮ-ಅಂಡ) ದ ಅಂತರಾಳವು ಎಷ್ಟೆಂದು ಹೇಳಲಿ? ಅನಂತಯೋಜನವಿರುವುದರಿಂದಾಗಿ ದಶಾಂಗುಲವೆಂದು ತಿಳಿಯುವರು / ಹೇಳುವರು (ನೂರಾರು ಎಂಬಂತೆ ಹತ್ತಾರು ಎಂದಿರುವುದು ಅನಂತತೆಯ ಸೂಚಕ) ಎಂಬುದಾಗಿ.
ಸಾತ್ತ್ವತಸಂಹಿತಾಯಾಂ ಪುರುಷಸೂಕ್ತಾರ್ಥೇ—
ಸಹಸ್ರಶಬ್ದೋ ಅನನ್ತವಚನಃ | ಪುರುಷಶಬ್ದೋ ವಾಸುದೇವಪರಃ | ಭೂಮಿಶಬ್ದೇನ ಭೂಮ್ಯಾದಯೋ ಲೋಕಾಃ, ಉಚ್ಯನ್ತೇ | ದಶಾಙ್ಗುಳಶಬ್ದೋ ಅನನ್ತಯೋಜನಮ್ ಆಹ ಇತಿ |
ಸಹಸ್ರಶಬ್ದವು ಅನಂತವಾಚ್ಯವು. ಪುರುಷಶಬ್ದವು ವಾಸುದೇವಪರವಾದದ್ದು. ಭೂಮಿಶಬ್ದದಿಂದ ಭೂಮಿಯೇ ಮುಂತಾದ ಸಮಸ್ತಲೋಕಗಳೂ ಸೂಚಿತವಾಗಿವೆ. ದಶಾಂಗುಲಶಬ್ದವು ಕೊನೆಯಿರದಷ್ಟು (ಲೆಕ್ಕವಿಲ್ಲದಷ್ಟು) ಯೋಜನವೆನ್ನುತ್ತದೆ ಎಂದು.
ಯದ್ವಾ, ಅಙ್ಗುಳಶಬ್ದೋ ಗುಣಪರಃ | ದಶಗುಣವಸ್ತು-ಅನ್ತರಭೂತಾನಿ ಅತೀತ್ಯ ಅತಿಷ್ಠತ್ | ಕಿಂ ತದ್ ಇತಿ | ಪೃಥಿವ್ಯಾ ದಶೋತ್ತರಾಃ, ಆಪಃ | ಅದ್ಭ್ಯೋ ದಶೋತ್ತರೋ ವಹ್ನಿಃ, ವಹ್ನೇಃ ದಶೋತ್ತರೋ ವಾಯುಃ, ವಾಯೋಃ ದಶೋತ್ತರಂ ವ್ಯೋಮ, ವ್ಯೋಮ್ನಃ ದಶೋತ್ತರೋ ಅಹಙ್ಕಾರಃ, ಅಹಙ್ಕಾರಾದ್ ದಶೋತ್ತರೋ ಮಹಾನ್, ಮಹತಃ ದಶೋತ್ತರಮ್ ಅವ್ಯಕ್ತಮ್ | ಸಮಸ್ತಮ್ ಇಹ ವಸ್ತು ಅತೀತ್ಯ ಅತಿಷ್ಠತ್ ಇತ್ಯರ್ಥಃ |
ಅಥವಾ, ಅಂಗುಲಶಬ್ದವು ಗುಣಕವಾಚಕ. ಹತ್ತುಗುಣಾಂಕಗಳಷ್ಟು ಅಂತರ ಮೀರಿ ನಿಂತಿದೆ. ಹೇಗದು ಎಂದರೆ, ಪೃಥಿವಿಗಿಂತ ೧೦ ಪಟ್ಟು ಅಧಿಕಗುಣವುಳ್ಳದ್ದು ಆಪತತ್ತ್ವ / ಜಲತತ್ತ್ವ. ಜಲಕ್ಕಿಂತ ೧೦ ಪಟ್ಟು ಮೇಲ್ಮಟ್ಟದ್ದು ಅಗ್ನಿ, ಅಗ್ನಿಗಿಂತ ವಾಯುವು ೧೦ ಪಟ್ಟು ಮೇಲ್ಮಟ್ಟದ್ದು, ವಾಯುವಿಗಿಂತ ೧೦ ಪಟ್ಟು ಅಧಿಕಗುಣವುಳ್ಳದ್ದು ವ್ಯೋಮ / ಆಕಾಶತತ್ತ್ವ, ಆಕಾಶಕ್ಕಿಂತ ೧೦ ಪಟ್ಟು ಹೆಚ್ಚಿನದು ಅಹಂಕಾರ, ಅಹಂಕಾರಕ್ಕಿಂತ ದಶಗುಣಾಧಿಕ್ಯವುಳ್ಳದ್ದು ಮಹತ್ತತ್ತ್ವ, ಮಹತ್ತಿಗಿಂತ ದಶಾಧಿಕವಾದದ್ದು ಅವ್ಯಕ್ತತತ್ತ್ವವು. ಇವೆಲ್ಲಕ್ಕಿಂತಲೂ ಅತೀತವಾದದ್ದು, ಅವ್ಯಕ್ತಕ್ಕಿಂತಲೂ ಆಚೆಗಿನದು ಪರತತ್ತ್ವ / ಪುರುಷತತ್ತ್ವವು ಎಂದರ್ಥ.
ಕೇಚಿತ್ ಏವಂ ವ್ಯಾಚಕ್ಷತೇ— ದಶಾಙ್ಗುಳಶಬ್ದೋ ಹೃದಯಾಕಾಶವಾಚಕಃ | ಭೂಮ್ಯಾದಿಲೋಕಾನ್ ವ್ಯಾಪ್ಯ ಹೃದಯಾಕಾಶಮ್ ಅತ್ಯತಿಷ್ಠತ್ | ದಶಾಙ್ಗುಳಪರಿಮಾಣಹೃದಯಾಕಾಶಮ್ ಅಣೋರಣೀಯ-ಆಕಾರೇಣ ಅನ್ತರಾತ್ಮತಯಾ ಅತ್ಯತಿಷ್ಠತ್ | ಧಕಾರಸ್ಯ ಸ್ಥಾನೇ ತಕಾರಃ ಛಾನ್ದಸಃ, ಇತಿ ಅಧ್ಯರ್ಥೋ ಅಯಮ್ ಅತಿಶಬ್ದಃ, ಇತಿ - ತತ್ ನ ಯುಕ್ತಮ್ | ಶ್ರೂಯಮಾಣಸ್ಯ ಅತಿಶಬ್ದಸ್ಯ ಮುಖ್ಯಾರ್ಥಸಂಭವೇ ಸತಿ ಅಧ್ಯರ್ಥವಚನಸ್ಯ ಅಯುಕ್ತತ್ವಾತ್ |
ಕೆಲವರು ಹೀಗನ್ನುತ್ತಾರೆ— ದಶಾಂಗುಲವೆನ್ನುವುದು ಹೃದಯಾಕಾಶವಾಚಕವು. ಭೂಮಿಯೇ ಮೊದಲಾದ ಲೋಕಗಳನ್ನೆಲ್ಲ ವ್ಯಾಪಿಸಿ, ಹೃದಯಾಕಾಶವನ್ನೂ ಮೀರಿರುವುದು. ದಶಾಂಗುಲಪರಿಮಾಣವುಳ್ಳ ಹೃದಯಾಕಾಶವು ಅಣುವಿಗಿಂತ ಸೂಕ್ಷ್ಮವಾದ ಆಕಾರದಿಂದ ಅಂತರಾತ್ಮನಾಗಿ ಇರುವುದು. ಧಕಾರದ ಸ್ಥಾನದಲ್ಲಿ ತಕಾರವು ವೈದಿಕಪ್ರಯೋಗ, ಎಂಬುದರಿಂದ ಅಧಿ ಎಂಬರ್ಥದಲ್ಲಿ ಈ ಅತಿಶಬ್ದವು ಎಂಬುದು ಯುಕ್ತವಲ್ಲ. ಶ್ರುತಿಯ ಅತಿಶಬ್ದಕ್ಕೇ ಮುಖ್ಯಾರ್ಥವು ಸರಿಹೊಂದುವುದರಿಂದ ಅಧಿ ಎಂಬರ್ಥವು ಸರಿಹೊಂದದು.
ವಿಶ್ವತಃ— ಇತಿ ಹೃದಯಸ್ಯಾಪಿ ಕಬಲೀಕೃತತ್ವಾತ್ ಚ | "ಅಣುತ್ವೇನ ಮಹತ್ತ್ವೇನ" ಇತ್ಯಾದಿನಾ, "ದಹರಾದಿಮವಾಕ್ಯೇನ ತಸ್ಯ ಅಣುತ್ವಂ ಪ್ರದರ್ಶಿತಮ್" ಇತಿ ಯೋಗವಾಸಿಷ್ಠೇ ಸ್ಪಷ್ಟವಚನಾತ್ ಚ | ದಹರಶಬ್ದಃ ಸೂಕ್ಷ್ಮಪರ್ಯಾಯಃ |
ವಿಶ್ವತಃ— ಎಂಬುದು ಹೃದಯವನ್ನೂ ಆಕ್ರಮಿಸಿಕೊಂಡಿರುವುದರಿಂದಾಗಿ (ಕಬಳಿಸಿರುವುದರಿಂದಾಗಿ, ಕವಳ / ಕಬಲ— ಗ್ರಾಸ, ಆಹಾರ). "ಅಣುವಾಗಿಯೂ, ದೊಡ್ಡದಾಗಿಯೂ" ಇತ್ಯಾದಿ ವಚನಗಳಿಂದ, "ದಹರ (ಸೂಕ್ಷ್ಮ) ವೇ ಮೊದಲಾದ ವಾಕ್ಯದಿಂದ ಆತನ ಅಣುತ್ವವು ಪ್ರದರ್ಶಿತವಾಗಿದೆ" ಎಂದು ಯೋಗವಾಸಿಷ್ಠದಲ್ಲಿ ಸ್ಪಷ್ಟವಾಗಿ ಹೇಳಿದೆ. ದಹರಶಬ್ದವು ಸೂಕ್ಷ್ಮಕ್ಕೆ ಪರ್ಯಾಯಶಬ್ದವು.
ನನು ಏವಂ ಹಿ ಪೂರ್ವಮ್ ಉಕ್ತಮ್, ಅಯಂ ಪುರುಷ ಇತಿ | ಸರ್ವದೇಶ-ಸರ್ವಕಾಲ-ಅಪರಿಚ್ಛಿನ್ನ-ವಿಧಂ ವೇಷಂ ವಿಹಾಯ ಸರ್ವೇಷಾಂ ದರ್ಶನ-ಸ್ತುತಿ-ಸಮಾರಾಧನಾದಿ-ಅರ್ಹಂ ಪರಿಚ್ಛಿನ್ನಂ ಕಞ್ಚನ ವೇಷಮ್ ಆದತ್ತೇ- ಇತಿ | ಪ್ರತ್ಯುತ ಅನ್ಯಥಾ ವದತಿ— ಅಸ್ಯ ಪರಿಚ್ಛಿನ್ನೋ ಅಪಿ ಅಯಂ ವೇಷಃ ಪ್ರಾಪ್ತಃ ಪೂರ್ವವತ್ ಅಪರಿಚ್ಛಿನ್ನ ಇತಿ, ಕಥಂ ಪರಿಚ್ಛಿನ್ನತ್ವೇನ ಸ್ತೂಯತೇ- ಇತಿ | ಅಸ್ಯ ಚೋದ್ಯಸ್ಯ ಪರಿಹಾರಃ ಪಾದ್ಮೇ ಅಭಿಹಿತಃ | ಸ ಉಚ್ಯತೇ—
ಹೀಗೆ, ಇವನೇ ಪುರುಷನೆಂದು ಹಿಂದೆಯೇ ಹೇಳಿದೆಯಷ್ಟೆ? ಎಲ್ಲ ದೇಶ-ಕಾಲಗಳಲ್ಲೂ ಬದಲಾಗದಂತಹ ರೂಪವನ್ನು ತೊರೆದು, ಎಲ್ಲರಿಗೂ ನೋಡಲು, ಸ್ತುತಿಸಲು, ಚೆನ್ನಾಗಿ ಆರಾಧಿಸಲು ಮುಂತಾದವುಗಳಿಗೆ ಯೋಗ್ಯವಾಗುವಂತಹ ಸಾಂತವಾದ ಯಾವುದೋ ರೂಪವನ್ನು ಸ್ವೀಕರಿಸುತ್ತಾನೆ ಎಂದು. ಇದಕ್ಕೆ ಬದಲಾಗಿ ಬೇರೊಂದು ರೀತಿಯಲ್ಲಿ ಹೇಳುತ್ತಾನೆ— ಇವನ ಈ ರೂಪವು ಸಾಂತವಾದರೂ ಮೊದಲಿನಂತೆಯೇ ಅನಂತವೂ ಹೌದು ಎಂದಾಗಿರುವಾಗ, ಸಾಂತವೆಂದು ಹೇಗೆ ಸ್ತುತಿಸಲ್ಪಡುವುದು ಎಂಬುದಾಗಿ. ಈ ರಹಸ್ಯಕ್ಕೆ / ಒಗಟಿಗೆ / ಚೋದ್ಯಕ್ಕೆ ಪರಿಹಾರವು ಪದ್ಮಪುರಾಣದಲ್ಲಿದೆ. ಅದು ಹೇಳುತ್ತದೆ—
ಆದತ್ತೇ ಯಾದೃಶಂ ರೂಪಂ
ಜಗತ್ ತ್ರಾತುಂ ಪರಃ ಪುಮಾನ್ |
ಸ ತಾದೃಶೇನ ರೂಪೇಣ
ದುರ್ಜ್ಞಾನೋ ಜಾಯತೇ ಹರಿಃ ||
ಜಗತ್ತನ್ನು ರಕ್ಷಿಸಲು ಪರಮಪುರುಷನಾದ ಶ್ರೀಹರಿಯು ಎಂತಹ ರೂಪವನ್ನು ಪರಿಗ್ರಹಿಸುತ್ತಾನೆ, ಎಂತಹ ರೂಪದಿಂದ ಜನಿಸುತ್ತಾನೆಂಬುದನ್ನೂ ಅರಿಯಲು ಕಷ್ಟಸಾಧ್ಯವು.
ತಥಾಪ್ಯಮೂರ್ತಃ ಪುರುಷಃ
ಸ್ತೋತ್ರಯೋಗ್ಯೋ ನ ಜಾಯತೇ |
ತತ್ರತ್ಯೋऽಪ್ಯಞ್ಜಸಾ ನೄಣಾಂ
ನಿರ್ವಾಣಾಯ ಚ ಕಲ್ಪತೇ ||
ಹಾಗಿದ್ದರೂ, ಅಮೂರ್ತನಾದ (ಆಕಾರ / ರೂಪ / ಮೂರ್ತಿ ಇಲ್ಲದ) ಪುರುಷನು ಸ್ತೋತ್ರಮಾಡಲು ನಿಲುಕದಿದ್ದರೂ, ಹಾಗಿರುವ ಅವನೂ ಸಹ ಅವನ ಬಗೆಗಿನ ಅರಿವು ಸರಿಯಾಗಿ ಆದ ನರರಿಗೆ ನಿರ್ವಾಣ / ಮೋಕ್ಷವನ್ನು ಬಹುಬೇಗನೆ ಕಲ್ಪಿಸುತ್ತಾನೆ.
ಶ್ರೀಮಾತ್ಸ್ಯೇ ಅಗಸ್ತ್ಯವಚನಮ್—
ತಸ್ಯಾವನಿಗತಸ್ಯೇಹ
ಪ್ರತ್ಯಕ್ಷಸ್ಯಾಪಿ ತೇ ವಪುಃ |
ನ ಜ್ಞಾಯತೇ ಚ ತತ್ತ್ವೇನ
ಪರಂ ರೂಪಂ ಕುತಸ್ತವ ||
ಆ ಪರಮಪುರುಷನಾದ ನಿನ್ನ ಭೂಮಿಯ ಮೇಲಿನ ಪ್ರತ್ಯಕ್ಷವಾದ ಅವತಾರೀದೇಹವನ್ನೇ ತತ್ತ್ವತಃ ತಿಳಿಯದಿರುವಾಗ ನಿನ್ನ ಆ ಪರತತ್ತ್ವಸ್ವರೂಪವನ್ನರಿಯುವ ಮಾತಾದರೂ ಎಲ್ಲಿಂದ?
ಮೀನಾತ್ಮಾ ಯಾದೃಶೋऽಸಿ ತ್ವಂ
ತಾದೃಶಸ್ತ್ವಮಸಿ ಪ್ರಭೋ |
ವಯಂ ತ್ವಾಮೀದೃಶ ಇತಿ
ವೇದಿತುಂ ನೋತ್ಸಹಾಮಹೇ ||
ಮೀನಿನ ರೂಪತಾಳಿ ಹೇಗೆ ನೀನು ಅವತರಿಸಿದೆಯೋ ಹಾಗೆಯೇ ಇನ್ನು ಯಾವ್ಯಾವ ರೂಪದಲ್ಲಿ ನೀನು ಬರುವೆ ಎಂಬುದನ್ನು ತಿಳಿಯಲು ನಾವು ಸಮರ್ಥರಲ್ಲ.
ಶ್ರೀಮದುತ್ತರರಾಮಾಯಣೇ (೧.೨೯.೧೩) ಅಗಸ್ತ್ಯವಚನಮ್—
ಶರೀರೇ ತವ ಪಶ್ಯಾಮಿ
ಜಗತ್ಸರ್ವಂ ರಘೂದ್ವಹ |
ತೇಜಸಾ ಚ ಸುದುರ್ದರ್ಶೋ
ಮಧ್ಯಾಹ್ನ ಇವ ಭಾಸ್ಕರಃ ||
ಇತಿ |
ಹೇ ರಘುಕುಲೋತ್ತಮನಾದ ಭಗವಾನ್ ಶ್ರೀರಾಮಚಂದ್ರನೇ! ನಿನ್ನ ಶರೀರದಲ್ಲಿ ನಾನು ಇಡಿಯ ಜಗವನ್ನೇ ಕಾಣುತ್ತೇನೆ. ಹಾಗೆಯೇ, ನಿನ್ನ ತೇಜೋರಾಶಿಯ ಪ್ರಖರತೆಯಿಂದಾಗಿ, ಮಧ್ಯಾಹ್ನದಲ್ಲಿ ನಡುನೆತ್ತಿಯ ಮೇಲಿನ ಸೂರ್ಯನನ್ನು ಹೇಗೆ ನೋಡಲಸಾಧ್ಯವೋ ಹಾಗೆಯೇ ನೀನೂ ಸಹ ಕಾಣುತ್ತಿದ್ದೀಯೆ.
ಅಸ್ಯ ಪರಿಗ್ರಹೋ ನ ಕಾರ್ಯ ಇತ್ಯರ್ಥಃ | ಅಶರೀರೋ ಅಪಿ ಸನ್ ಸರ್ವಂ ಕರೋತ್ಯೇವ | ಇನ್ದ್ರಿಯಪರಿಗ್ರಹೋ ನ ಕಾರ್ಯ ಇತ್ಯರ್ಥಃ | ಅನಿನ್ದ್ರಿಯೋ ಅಪಿ ಸನ್ ತತ್ತದ್ ಇನ್ದ್ರಿಯಕಾರ್ಯಂ ಕರೋತ್ಯೇವ | "ಅಪಾಣಿಪಾದೋ ಜವನೋ ಗೃಹೀತಾ" (ಶ್ವೇತಾಶ್ವತರೋಪನಿಷತ್ ೩.೧೯) "ಅನ್ಧೋ ಮಣಿಮ್ ಅವಿನ್ದತ್, ತಮ್ ಅನಙ್ಗುಲಿಃ ಆವಯತ್ | ಅಗ್ರೀವಃ ಪ್ರತ್ಯಮುಞ್ಚತ್" ಇತ್ಯಾದಿ || ೧ ||
ಈ ಪರಮಪುರುಷನಿಗೆ ಶರೀರವನ್ನು ಪರಿಗ್ರಹಿಸಬೇಕೆಂದೇನೂ ಅನಿವಾರ್ಯತೆಯಿಲ್ಲ ಎಂದರ್ಥ. ಅಶರೀರನಾಗಿಯೇ ಎಲ್ಲವನ್ನೂ ಮಾಡಿಯೇ ಮಾಡುತ್ತಾನೆ. ನೇತ್ರಾದಿ ಇಂದ್ರಿಯಗಳನ್ನು ಸ್ವೀಕರಿಸಬೇಕೆಂದೂ ಇಲ್ಲ ಎಂದರ್ಥ. ಇಂದ್ರಿಯರಹಿತನಾಗಿಯೂ ಆಯಾಯ ಇಂದ್ರಿಯಗಳ ಕಾರ್ಯಗಳನ್ನು ಮಾಡಿಯೇ ಮಾಡುತ್ತಾನೆ. ಶ್ವೇತಾಶ್ವತರ ಉಪನಿಷತ್ತಿನಂತೆ "ಕೈಕಾಲುಗಳಿರದೆ ನಡೆಯಬಲ್ಲನು ಹಿಡಿಯಬಲ್ಲನು", "ಕಣ್ಣಿಲ್ಲದೆಯೇ ಮಣಿಯನ್ನು (ರತ್ನವನ್ನು) ನೋಡಿ ಆರಿಸಿ ಪಡೆದನು, ಅದನ್ನು ಬೆರಳಿಲ್ಲದೆಯೇ ಧರಿಸಿದನು. ಕುತ್ತಿಗೆಯಿಲ್ಲದೆಯೇ (ಹಾರಾದಿಗಳನ್ನು) ಧರಿಸಿದನು" ಇತ್ಯಾದಿ.
ಸಾಯಣ-ಸಾಮವೇದಭಾಷ್ಯೇ— (ಋಗ್ವೇದಭಾಷ್ಯವತ್ ಏವ)
(ಸಾಮವೇದದ ಪುರುಷಸೂಕ್ತದ ಮೊದಲ ಮಂತ್ರದ ಭಾಷ್ಯವು ಸಾಯಣರಿಂದ ಋಗ್ಬಾಷ್ಯದಂತೆಯೇ ಬರೆಯಲ್ಪಟ್ಟಿರುವುದು. ಹಾಗಾಗಿ ಮತ್ತೆ ಬರೆಯುವುದಿಲ್ಲ. ಹಿಂದೆ ಬರೆದ ಋಗ್ಭಾಷ್ಯವನ್ನು ನೋಡಬಹುದು.)
Comments
Post a Comment