ರುದ್ರಭಾಷ್ಯಸಮುಚ್ಚಯಪೀಠಿಕಾ ೧
ಶ್ರೀಭಗವತ್ತತ್ತ್ವರತ್ನಾಕರ ಭಾಗ ೩
ರುದ್ರಭಾಷ್ಯಸಮುಚ್ಚಯಃ ೧
ಪೀಠಿಕಾ
(ಏಕವಿಂಶತ್ಯಕ್ಷರಾ ವೃತ್ತಿಃ— ಪ್ರಕೃತಿಶ್ಛನ್ದೋಜಾತಂ ಸ್ರಗ್ಧರಾವೃತ್ತಮ್— "ಮ್ರಭ್ನೈರ್ಯಾನಾಂ ತ್ರಯೇಣ ತ್ರಿಮುನಿಯತಿಯುತಾ ಸ್ರಗ್ಧರಾ ಕೀರ್ತಿತೇಯಮ್")
ವನ್ದೇ ಶ್ರೀರುದ್ರಸೂನುಂ ಗಜಮುಖಮಮಲಂ
ಸರ್ವವಿಘ್ನಾಪಹತ್ಯೈ
ವನ್ದೇ ವಾಣೀಮಜಾಂ ತಾಂ ಸಕಲಜನನುತಾಂ
ಸರ್ವವಿದ್ಯಾಪ್ರಸಿದ್ಧ್ಯೈ |
ವನ್ದೇ ಚಾಚಾರ್ಯವೃನ್ದಂ ಜನನಮರಣವಿ-
-ಚ್ಛೇದದಕ್ಷಂ ಕೃಪಾಯೈ
ವನ್ದೇ ಮನ್ದಾರಗೌರಂ ಹರಿಯುತಗಿರಿಶಂ
ರುದ್ರಮನ್ತ್ರಾರ್ಥಸಿದ್ಧ್ಯೈ ||
(ಸರ್ವವಿಘ್ನಾಪಹತ್ಯೈ) ಸರ್ವವಿಘ್ನಾಪಹಾರಕ್ಕಾಗಿ, (ಅಮಲಮ್) ಅಮಲನೂ, (ಶ್ರೀರುದ್ರಸೂನುಮ್) ಶಿವ-ಶಕ್ತಿಯರ ಸುತನೂ ಆದ, (ಗಜಮುಖಮ್) ಗಜಮುಖ ಗಣಪತಿಯನ್ನು, (ವನ್ದೇ) ವಂದಿಸುತ್ತೇನೆ. (ಸಕಲಜನನುತಾಮ್) ಸಕಲಜನರಿಂದ ನುತಿಗೈಯಲ್ಪಡುವವಳೂ, (ಅಜಾಂ ತಾಮ್) ಅಜನ ಪತ್ನಿಯಾಗಿರುವವಳಾದ, (ವಾಣೀಮ್) ವಾಣಿಯನ್ನು, (ಸರ್ವವಿದ್ಯಾಪ್ರಸಿದ್ಧ್ಯೈ) ಸರ್ವವಿದ್ಯೆಗಳ ಪ್ರಕೃಷ್ಟವಾದ ಸಿದ್ಧಿಗಾಗಿ, (ವನ್ದೇ) ವಂದಿಸುತ್ತೇನೆ. (ಚ) ಹಾಗೆಯೇ, (ಜನನ-ಮರಣ-ವಿಚ್ಛೇದ-ದಕ್ಷಮ್) ಜನನ-ಮರಣವೆಂಬ ಸಂಸಾರಚಕ್ರದಿಂದ ವಿಚ್ಛೇದ / ಬಿಡುಗಡೆ / ಮುಕ್ತಿಯನ್ನು ಉಂಟುಮಾಡಲು ಸಮರ್ಥವಾದ, (ಆಚಾರ್ಯವೃನ್ದಮ್) ಆಚಾರ್ಯಪರಂಪರೆಗಳ ಸಮೂಹವನ್ನು, (ಕೃಪಾಯೈ ವನ್ದೇ) ಗುರುಕೃಪಾರ್ಥವಾಗಿ ವಂದಿಸುತ್ತೇನೆ. (ಮನ್ದಾರಗೌರಮ್) ಮಂದಾರಪುಷ್ಪದಂತಹ ಗೌರವರ್ಣದಿಂದ ಶೋಭಿತನಾದ, (ಹರಿಯುತ-ಗಿರಿಶಮ್) ಶ್ರೀಹರಿಯಿಂದೊಡಗೂಡಿದ ಕೈಲಾಸಗಿರಿವಾಸಿಯಾದ ಪರಶಿವನನ್ನು, (ರುದ್ರಮನ್ತ್ರಾರ್ಥಸಿದ್ಧ್ಯೈ) "ಶ್ರೀರುದ್ರಾಧ್ಯಾಯ" ಮಂತ್ರಗಳ ಯಥಾರ್ಥ-ನಾನಾರ್ಥ-ಭಾವಾರ್ಥ-ಸಾರ-ವಿಸ್ತಾರಗಳ ಸಿದ್ಧಿಗಾಗಿ, (ವನ್ದೇ) ವಂದಿಸುತ್ತೇನೆ.
"ವಿದ್ಯಾಸು ಶ್ರುತಿರುತ್ಕೃಷ್ಟಾ ತತ್ರೈಕಾದಶಿನೀ ಸ್ಮೃತಾ" ಎಂಬ ಮಾತಿನಂತೆ, ಸಕಲ ವಿದ್ಯೆಗಳಲ್ಲೂ ಶ್ರುತಿ / ವೇದವು ಉತ್ಕೃಷ್ಟವಾಗಿದ್ದು, ಅಲ್ಲಿಯೂ ೧೧ ಅಧ್ಯಾಯಗಳ ರುದ್ರಪ್ರಶ್ನವು ಅತ್ಯಂತ ಶ್ರೇಷ್ಠವಾಗಿರುವುದು. ಜಗದೀಶ್ವರನೂ, ವಿಶ್ವನಾಥನೂ, ಲೋಕಗುರುವೂ ("ಈಶಾನಃ ಸರ್ವವಿದ್ಯಾನಾಮೀಶ್ವರಃ ಸರ್ವಭೂತಾನಾಂ...") ಆಗಿರುವ ಪರಮೇಶ್ವರನ ವಿಶ್ವತೋಮುಖತೆಯ, ವಿಶ್ವರೂಪತ್ವದ, ಸರ್ವಾಂತರ್ಯಾಮಿತ್ವದ ವಿರಾಡ್ರೂಪ ದರ್ಶನವು ಈ ರುದ್ರಾಧ್ಯಾಯದಿಂದ ನಮಗಾಗುತ್ತದೆ. ಸದಾಶಿವನ ಅನೇಕ ನಾಮ / ಉಪಾಧಿ, ರೂಪ, ಗುಣ, ಲೀಲೆ— ಮುಂತಾದವುಗಳ ಪರಿಚಯವೂ ಈ ಶತರುದ್ರೀಯ / ರುದ್ರೈಕಾದಶಿನೀ ಮಂತ್ರಗಳಿಂದ ನಮಗಾಗುವುದು. ಇದರ ಮೊದಲ ಅನುವಾಕವನ್ನು ರುದ್ರ ಪ್ರಶಾಂತೀಕರಣ ಸೂಕ್ತ ವೆಂದೂ ಕರೆಯಲಾಗಿದೆ (—ಮಹರ್ಷಿ ಅರವಿಂದರು). ಶತಪಥ ಬ್ರಾಹ್ಮಣವು (೯.೧.೧.೨) ಇದನ್ನು ಪುಷ್ಟೀಕರಿಸುವಂತೆ ಶಾಂತರುದ್ರೀಯ ಎಂದು ಕರೆದಿದೆ. ಈ ರುದ್ರಾಧ್ಯಾಯವು ನಮಃಕಾರಪರಿಪ್ಲುತವಾಗಿರುವುದರಿಂದ ನಮಕಾಧ್ಯಾಯ ಎಂದೂ ಕರೆಯಲ್ಪಟ್ಟಿದೆ.
ಇಲ್ಲಿ ಹೆಚ್ಚು ಪ್ರಚಲಿತದಲ್ಲಿ ಬಳಕೆಯಲ್ಲಿರುವ ಕೃಷ್ಣಯಜುರ್ವೇದೀಯ ತೈತ್ತಿರೀಯಸಂಹಿತೆಯ (೪.೫. ೧—೧೧)ಚತುರ್ಥಕಾಂಡದ ಪಂಚಮ ಪ್ರಶ್ನ / ಪ್ರಪಾಠಕ ದಲ್ಲಿ ಬರುವ ಏಕಾದಶಾನುವಾಕಗಳ ರುದ್ರಮಂತ್ರಗಳನ್ನು ಅಧ್ಯಯನಕ್ಕೆ ಆಯ್ದುಕೊಂಡಿದ್ದು, ಈ ರುದ್ರಮಂತ್ರವು ವೇದದ ಇತರ ಸಂಹಿತೆಗಳಲ್ಲೂ ಸ್ವರೂಪಭೇದದಿಂದ ಕಂಡುಬರುತ್ತದೆ.
ಈಗಾಗಲೇ ಇದೇ ಲೇಖಕರ "ಶ್ರೀಭಗವತ್ತತ್ತ್ವರತ್ನಾಕರಃ ಭಾಗ ೨ ಲಘುನ್ಯಾಸಭಾಷ್ಯ" ಎಂಬ ರುದ್ರಪೀಠಿಕಾರೂಪದ ಕೃತಿಯಲ್ಲಿ ರುದ್ರಾಧ್ಯಾಯಮಾಹಾತ್ಮ್ಯ ಎಂಬ ಅಧ್ಯಾಯದಲ್ಲಿ ರುದ್ರಪ್ರಶ್ನದ ಮಹಿಮಾತಿಶಯವನ್ನೂ, ಅದರ ಫಲಶ್ರುತಿಯನ್ನೂ ವಿಸ್ತಾರವಾಗಿ ಹೇಳಲಾಗಿದೆ. ಹೀಗಾಗಿ, ಇಲ್ಲಿ ಮತ್ತೊಮ್ಮೆ ಹೆಚ್ಚು ಹೇಳದೆ, ರುದ್ರಮಂತ್ರಗಳ ನಾನಾಮುಖಗಳ ಅರ್ಥವಿಸ್ತಾರದ ಜಿಜ್ಞಾಸೆಯಿಂದ, ಲೇಖಕರಿಗೆ ಲಭ್ಯವಾದ ವಿವಿಧ ರುದ್ರವ್ಯಾಖ್ಯಾನಗಳ ಮೂಲಸಹಿತ ಕನ್ನಡಾನುವಾದವನ್ನೂ, ಸ್ವಚಿಂತನೆಯನ್ನೂ ಸೇರಿಸಿ, ಆ ಉಮಾಮಹೇಶ್ವರನ ಸೇವಾರೂಪವಾಗಿ ಈ ಮೂಲಕ ಜಿಜ್ಞಾಸುಗಳಿಗೆ ತೃಪ್ತಿಯಾಗುವಂತೆ, ವಿದ್ವಾಂಸರ ಆಶೀರ್ವಾದವನ್ನೂ ಬೇಡುತ್ತಾ ಉಪಕ್ರಮಿಸಲಾಗುತ್ತದೆ.
ಇಲ್ಲಿ ಸ್ವೀಕರಿಸಿರುವ ವಿವಿಧ ರುದ್ರಮಂತ್ರವ್ಯಾಖ್ಯಾನಗಳು—
೧) ಡಾ | ಶ್ಯಾಮ ಭಟ್ಟ, ಶ್ರೀ ಮಹಾದೇವ ಕ್ಲಿನಿಕ್, ಕುಂಬಳೆ, ಕೇರಳ— ಇವರ ವೇದ ಮಂತ್ರ ಗೀತಾಂಜಲಿ
೨) ಪ್ರೊ | ಕೃಷ್ಣದಾಸ ಅನಂತ ಭಟ್ಟ, ಎಂ.ಎ. (ಹಿಂದೀ, ಕನ್ನಡ, ಸಂಸ್ಕೃತ), ಸಿದ್ಧಾಪುರ, ಉತ್ತರ ಕನ್ನಡ, ಕರ್ಣಾಟಕ— ಇವರ ಸಂಪಾದಕತ್ವದಲ್ಲಿ, ಶ್ರೀ ಸತ್ಯಸಾಯಿ ಲೋಕಸೇವಾ ಪ್ರಕಾಶನ, ಅಳಿಕೆ, ಸತ್ಯಸಾಯಿ ವಿಹಾರ— ೫೭೪ ೨೩೫, ಬಂಟ್ವಾಳ ತಾಲೂಕು, ದ.ಕ.ಜಿಲ್ಲೆ, ಕರ್ಣಾಟಕ— ಇವರಿಂದ ಪ್ರಕಾಶಿತವಾದ ಸಾರ್ಥಕ ನಿತ್ಯೋಪಯುಕ್ತ ಸೂಕ್ತಗಳು— ಪ್ರಥಮ ಭಾಗ
೩) ಯರ್ಮುಂಜ ರಾಮಕೃಷ್ಣ ಜೋಯಿಸ— ಇವರ ಶ್ರೀ ರುದ್ರಭಾಷ್ಯಮ್ (ಕನ್ನಡ ಅರ್ಥಸಹಿತ)
೪) ಡಾ | ಕೃಷ್ಣಮೂರ್ತಿ ನಿಟಿಲಾಪುರ— ಇವರ ಸಂಪಾದಕತ್ವದಲ್ಲಿ, ಕೂಟಬಂಧು ಟ್ರಸ್ಟ್, ಜೋಡುಮಾರ್ಗ— ಇವರಿಂದ ಪ್ರಕಾಶಿತವಾದ ಮಂತ್ರವಾಹಿನೀ (ಅರ್ಥ ಸಹಿತ)
೫) ಸಾಯಣಭಾಷ್ಯ
೬) ಭಟ್ಟಭಾಸ್ಕರಭಾಷ್ಯ
೭) ಸ್ಕಂದದೇವಭಾಷ್ಯ (ಶಿವರಹಸ್ಯಾಂತರ್ಗತ ಶ್ಲೋಕರೂಪೀಭಾಷ್ಯ) ಹಾಗೂ ತಿರುಮಲ ತಿರುಪತಿ ದೇವಸ್ಥಾನಮ್ಸ್ (TTD) ರಿಂದ ಪ್ರಕಾಶಿತವಾದ ದಿ | ಕೆ.ಪಿ.ನಾರಾಯಣಶಾಸ್ತ್ರಿಗಳಿಂದ ಪರಿಷ್ಕೃತವಾದ, ಶ್ರೀ ಟಿ.ಕೆ.ರಾಮಚಂದ್ರ ಅಯ್ಯರ್ ರಿಂದ ವಿರಚಿಸಲ್ಪಟ್ಟ ಆಂಗ್ಲಾನುವಾದ (English translation)
೮) ವಿಷ್ಣುಸೂರಿಭಾಷ್ಯ (ಆಧ್ಯಾತ್ಮಿಕ / ಅದ್ವೈತ)
೯) ಆರ್.ಎಲ್.ಕಶ್ಯಪ್— ಇವರ ಅರವಿಂದವಿಚಾರಧಾರೀಯ ಆಂಗ್ಲಾನುವಾದದ ವಿಶಾಲಾಕ್ಷಿ ಸತ್ಯನ್— ಇವರ ಕನ್ನಡಾನುವಾದ (SAKSHI Publication, ಆಧ್ಯಾತ್ಮಿಕಭಾಷ್ಯ)
೧೦) ಅಹೋಬಲ ಭಟ್ಟರ ಕಲ್ಪಲತಾ (ಪದ್ಯಾತ್ಮಕ ಶ್ರೀರುದ್ರಭಾಷ್ಯ)
೧೧) ಅಭಿನವಶಂಕರಭಾಷ್ಯ (ಅದ್ವೈತ)
೧೨) ಬನ್ನಂಜೆಭಾಷ್ಯ
೧೩) ಹೆಚ್.ಎಸ್.ಲಕ್ಷ್ಮೀನರಸಿಂಹಮೂರ್ತಿಭಾಷ್ಯ (ಅಧ್ಯಾತ್ಮ ಪ್ರಕಾಶ ಕಾರ್ಯಾಲಯ, ಹೊಳೆನರಸೀಪುರ)
೧೪) The Rudram Part 1 and Part 2— Translation, Grammatical, and Etymological Notes by Sri Narsing Rao
೧೫) शुक्लयजुर्वेदीय-रुद्राष्टाध्यायी—संस्कृत-हिन्दीव्याख्या—श्री-पण्डित-ज्वालाप्रसादमिश्र—श्रीवेङ्कटेश्वर (स्टीम्) प्रकाशनम् , मुम्बयी
ಶಿವ ತುರೀಯತೆ ನೆನೆದು ಮನದಲಿ
ಈಶನ್ಯಾಸದಿ ಮೈಯ ತಳೆದು |
ಅರ್ಥ ಭಾವನೆ ಸವಿಯನುಣ್ಣುತ
ರುದ್ರಗೀತೆಯ ಪಠಿಸು ದಿನವು ||
(—ಡಾ | ಶ್ಯಾಮ ಭಟ್ಟ, ಕುಂಬಳೆ)
ಪರಶಿವನ ಅವಸ್ಥಾತ್ರಯಾತೀತತೆಯನ್ನು (ಜಾಗ್ರತ್, ಸ್ವಪ್ನ, ಸುಷುಪ್ತಿ— ಜೀವನ ೩ ಅವಸ್ಥೆಗಳು) / ತುರೀಯಸ್ಥಿತಿಯನ್ನು ಮನನ ಮಾಡುತ್ತಾ, ಆ ಈಶ್ವರನ ಸೇವಾಭಾವದಲ್ಲೇ ಸಕಲ ಕರ್ತವ್ಯಗಳನ್ನು ಬದುಕಿರುವಷ್ಟು ದಿನವೂ ಆಚರಿಸಿ ನಮ್ಮ ಶರೀರವನ್ನು ಹಾಗೂ ಆಯುಷ್ಯವನ್ನು ಸವೆಸಿ, ರುದ್ರಮಂತ್ರದ ಅಂಗನ್ಯಾಸ, ಕರನ್ಯಾಸ, ಲಘುನ್ಯಾಸ, ಮಹಾನ್ಯಾಸಾದಿ ರುದ್ರಪೀಠಿಕೆಯಲ್ಲಿ ಹೇಳಿದಂತೆ ತನ್ನ ತನುವಿನಲ್ಲೂ, ಅದರ ಅಂಗೋಪಾಂಗಗಳಲ್ಲೂ ಆಯಾ ದೇವತಾಸ್ವರೂಪಗಳನ್ನು ನ್ಯಾಸಮಾಡಿ / ಪರಿಕಲ್ಪಿಸಿ, ಅರ್ಥ-ಭಾವ-ತಾತ್ಪರ್ಯ-ವಿಸ್ತಾರಾದಿಗಳ ಸವಿಯನ್ನು ಅನುಭವಿಸುತ್ತಾ, ಅನುದಿನವೂ ಈ ರುದ್ರಗೀತೆಯನ್ನು / ರುದ್ರಮಂತ್ರವನ್ನು ಪಠಿಸು.
ಸಾಯಣಾಚಾರ್ಯಕೃತಃ, ಉಪೋದ್ಘಾತಃ
ಯಸ್ಯ ನಿಶ್ವಸಿತಂ ವೇದಾ
ಯೋ ದೇವೇಭ್ಯೋऽಖಿಲಂ ಜಗತ್ |
ನಿರ್ಮಮೇ ತಮಹಂ ವನ್ದೇ
ವಿದ್ಯಾತೀರ್ಥಮಹೇಶ್ವರಮ್ || ೧ ||
(ವೇದಾಃ) ಸಮಸ್ತವೇದಗಳೂ, (ಯಸ್ಯ ನಿಶ್ವಸಿತಂ) ಯಾವನ ನಿಶ್ವಾಸರೂಪವಾಗಿವೆಯೋ (ಯಾವನು ಉಸಿರನ್ನು ಹೊರಬಿಟ್ಟಾಗ ಸಕಲ ವೇದಗಳೂ ವ್ಯಕ್ತವಾದವೋ), (ಯಃ) ಯಾವನು, (ದೇವೇಭ್ಯಃ) ಚತುರ್ಮುಖರಾದ ನವಬ್ರಹ್ಮರು, ದಕ್ಷಾದಿ ಪ್ರಜಾಪತಿಗಳು, ಕಶ್ಯಪಾದಿ ಸಪ್ತರ್ಷಿಗಳು, ಸ್ವಾಯಂಭುವಾದಿ ಚತುರ್ದಶಮನುಗಳು, ಇಂದ್ರಾದಿ ದೇವತೆಗಳೇ ಮುಂತಾದವರ ಮೂಲಕ, (ಅಖಿಲಂ ಜಗತ್) ಇಡಿಯ ಜಗತ್ತನ್ನು, (ನಿರ್ಮಮೇ) ನಿರ್ಮಿಸಿದನೋ, (ತಮ್)ಅಂತಹ, (ವಿದ್ಯಾತೀರ್ಥ-ಮಹೇಶ್ವರಮ್) ಸಕಲವಿದ್ಯೆಗಳಿಗಧಿಪತಿಯಾದ ಮಹೇಶ್ವರನನ್ನು / ಪರಶಿವನನ್ನು ಹಾಗೂ ವಿದ್ಯಾತೀರ್ಥಗುರುವರ್ಯರನ್ನು (ಸಾಯಣರ ಗುರುಗಳು), (ಅಹಂ ವನ್ದೇ) ನಾನು ವಂದಿಸುತ್ತೇನೆ.
ಇಷ್ಟಕಾಚಿತಯಃ ಸರ್ವಾ-
-ಶ್ಚತುರ್ಥೇ ಹಿ ಸಮಾಪಿತಾಃ |
ರುದ್ರಾಧ್ಯಾಯೇ ಪಞ್ಚಮೇ ತು
ಚಿತ್ಯಗ್ನೌ ಹೋಮ ಉಚ್ಯತೇ || ೨ ||
(ಚತುರ್ಥೇ ಹಿ) ತೈತ್ತಿರೀಯ ಕೃಷ್ಣಯಜುರ್ವೇದದ ಚತುರ್ಥಕಾಂಡದ ಚತುರ್ಥ ಪ್ರಪಾಠಕದಲ್ಲಿಯಾದರೋ, (ಇಷ್ಟಕಾಚಿತಯಃ ಸರ್ವಾಃ) ಇಷ್ಟಕಾಚಿತಿಗಳೆಲ್ಲ, (ಸಮಾಪಿತಾಃ) ಸಮಾಪ್ತವಾದವು. (ಪಂಚಮೇ ರುದ್ರಾಧ್ಯಾಯೇ ತು) ಐದನೆಯ ಪ್ರಪಾಠಕವಾದ ಈ ರುದ್ರಾಧ್ಯಾಯದಲ್ಲಿಯಾದರೋ, (ಚಿತ್ಯಗ್ನೌ ಹೋಮಃ) ಚಿತ್ಯಗ್ನಿಯಲ್ಲಿ ಹೋಮದ ಬಗ್ಗೆ, (ಉಚ್ಯತೇ) ಹೇಳಲಾಗುತ್ತದೆ.
ಕರ್ಮಪ್ರಕರಣೇ ಪಾಠಾತ್
ಕರ್ಮಾಙ್ಗತ್ವಮಪೀಷ್ಯತೇ |
ಜ್ಞಾನಹೇತುತ್ವಮಪ್ಯಸ್ಯ
ತಥೋಪನಿಷದೀರಿತಮ್ || ೩ ||
(ಕರ್ಮಪ್ರಕರಣೇ ಪಾಠಾತ್) ಈ ರುದ್ರಪ್ರಶ್ನವು ವೇದೋಕ್ತಕರ್ಮವಾದ ಶತರುದ್ರೀಯಹವನವೆಂಬ ಪ್ರಕರಣದಲ್ಲಿ ಬರುವುದರಿಂದಾಗಿ / ಪಠಿಸಲ್ಪಡುವುದರಿಂದಾಗಿ, (ಕರ್ಮಾಂಗತ್ವಮ್ ಅಪಿ ಇಷ್ಯತೇ) ಕರ್ಮಾಂಗತ್ವವನ್ನೂ / ಕರ್ಮಭಾಗತ್ವವನ್ನೂ ಹೊಂದುತ್ತದೆ. (ತಥಾ) ಅಂತೆಯೇ, (ಅಸ್ಯ ಜ್ಞಾನಹೇತುತ್ವಮ್ ಅಪಿ) ಇದು ಜ್ಞಾನಕ್ಕೆ ಕಾರಣವಾಗಿರುವುದರಿಂದ, (ಉಪನಿಷದ್ ಈರಿತಮ್) ಉಪನಿಷತ್ತೆಂದೂ ಕರೆಯಲ್ಪಟ್ಟಿರುವುದು.
ಕಿಂ ಜಪ್ಯೇನಾಮೃತತ್ವಂ ನೋ
ಬ್ರೂಹೀತ್ಯುಕ್ತೋ ಮುನಿರ್ಜಗೌ |
ಶತರುದ್ರೀಯಕೇಣೇತಿ
ಜಾಬಾಲಾ ಆಮನನ್ತಿ ಹಿ || ೪ ||
(ನಃ) "ನಮಗೆ, (ಕಿಂ ಜಪ್ಯೇನ) ಯಾವುದನ್ನು ಜಪಿಸಿದರೆ, (ಅಮೃತತ್ವಮ್) ಅಮೃತತ್ವ / ಮೋಕ್ಷ-ಸಿದ್ಧಿಯಾಗುವುದೆಂದು, (ಬ್ರೂಹಿ) ಹೇಳು" (ಇತಿ ಉಕ್ತಃ) ಎಂದು ಪ್ರಶ್ನಿಸಲ್ಪಟ್ಟ, (ಮುನಿಃ) ಯಾಜ್ಞವಲ್ಕ್ಯಮುನಿಯು, (ಶತರುದ್ರೀಯಕೇಣ) "ಶತರುದ್ರೀಯಕವಾದ ಮಂತ್ರದಿಂದ", (ಇತಿ ಜಗೌ) ಎಂದುತ್ತರಿಸುತ್ತಾನೆ. (ಜಾಬಾಲಾಃ, ಹಿ ಆಮನನ್ತಿ) ಈ ಮಾತನ್ನಾದರೋ ಜಾಬಾಲೋಪನಿಷತ್ತು ಹೇಳುತ್ತದೆ.
ಸ್ಮೃತ್ಯಾಗಮಪುರಾಣೇಷು
ರುದ್ರಾಧ್ಯಾಯಪ್ರಶಂಸನಮ್ |
ಬಹ್ವಸ್ತಿ ತದ್ವಿಸ್ತರೇಣ
ರುದ್ರಕಲ್ಪೇऽಭಿಧಾಸ್ಯತೇ || ೫ ||
(ಸ್ಮೃತಿ-ಆಗಮ-ಪುರಾಣೇಷು) ಸ್ಮೃತಿಗಳಲ್ಲೂ, ಆಗಮಗಳಲ್ಲೂ, ಪುರಾಣಗಳಲ್ಲೂ, (ರುದ್ರಾಧ್ಯಾಯಪ್ರಶಂಸನಂ ಬಹು ಅಸ್ತಿ) ರುದ್ರಾಧ್ಯಾಯದ ಪ್ರಶಂಸೆಯು ಬಹಳಷ್ಟಿದೆ. (ತದ್) ಅದು ಮುಂದೆ, (ರುದ್ರಕಲ್ಪೇ) ರುದ್ರಕಲ್ಪದಲ್ಲಿ, (ವಿಸ್ತರೇಣ ಅಭಿಧಾಸ್ಯತೇ) ವಿಸ್ತಾರವಾಗಿ ಹೇಳಲ್ಪಡುವುದು.
ಇಹ ಕರ್ಮಾಙ್ಗತಾ ಯಾದೃಗ್
ವರ್ಣಿತಾ ಬ್ರಾಹ್ಮಣೇನ ತಾಮ್ |
ಬೋದ್ಧುಂ ಶಬ್ದಾರ್ಥಮಾತ್ರಸ್ಯ
ವಿವೃತಿಃ ಕ್ರಿಯತೇ ಸ್ಫುಟಾ || ೬ ||
(ಇಹ) ಇಲ್ಲಿ, (ಬ್ರಾಹ್ಮಣೇನ) ತೈತ್ತಿರೀಯಬ್ರಾಹ್ಮಣದಿಂದ, (ಕರ್ಮಾಂಗತಾ) ರುದ್ರಪ್ರಶ್ನದ ಕರ್ಮಾಂಗತ್ವವು (ಯಾದೃಗ್ ವರ್ಣಿತಾ) ಎಷ್ಟು ವರ್ಣಿತವಾಗಿದೆಯೋ, (ತಾಮ್) ಅಷ್ಟನ್ನು, (ಬೋದ್ಧುಮ್) ಬೋಧಿಸಲು / ತಿಳಿಸಲು, (ಶಬ್ದಾರ್ಥಮಾತ್ರಸ್ಯ) ಕೇವಲ ಶಬ್ದಾರ್ಥದ, (ಸ್ಫುಟಾ) ಸ್ಪಷ್ಟವಾದ, (ವಿವೃತಿಃ ಕ್ರಿಯತೇ) ವಿವೃತಿ / ವಿವರಣೆಯು ಮಾಡಲ್ಪಡುತ್ತದೆ.
ಕಲ್ಪಃ — "ಶತರುದ್ರೀಯಂ— ಶತರುದ್ರೀಯಹವನವನ್ನು,
ಜುಹೋತಿ— ಹೋಮಿಸುತ್ತಾನೆ,
ಜರ್ತಿಲ-ಯವಾಗ್ವಾ ವಾ— ವನ್ಯ ಎಳ್ಳು (ಹುಚ್ಚೆಳ್ಳು, ಕಾಡೆಳ್ಳು) ಹಾಗೂ ಅಕ್ಕಿ / ಬಾರ್ಲಿಗಳನ್ನು ಬೇಯಿಸಿ ತಯಾರಿಸಿದ ಗಂಜಿಯ ರೂಪದ ಹವಿಸ್ಸಿನಿಂದಲೋ,
ಗವೀಧುಕ-ಯವಾಗ್ವಾ ವಾ— ಮಂಜೊಟ್ಟಿ / ಅಶ್ರುಬೀಜ ಹಾಗೂ ಅಕ್ಕಿ / ಬಾರ್ಲಿಗಳನ್ನು ಬೇಯಿಸಿ ತಯಾರಿಸಿದ ಗಂಜಿಯಂತಹ ಹವಿಸ್ಸಿನಿಂದಲೋ,
ಜರ್ತಿಲೈಃ— ವನತಿಲಗಳಿಂದಲೋ,
ಗವೀಧುಕ-ಸಕ್ತುಭಿಃ— ಮಂಜೊಟ್ಟಿ / ಅಶ್ರುಬೀಜ ಹಾಗೂ ಬಾರ್ಲಿಯ ಅನ್ನದಿಂದಲೋ,
ಕುಶ-ಯವ-ಸರ್ಪಿಷಾ— ದರ್ಭೆ / ನೀರು-ಬಾರ್ಲಿ-ತುಪ್ಪಗಳಿಂದಲೋ,
ಅಜಾಕ್ಷೀರೇಣ ಮೃಗೀಕ್ಷೀರೇಣ ವಾ— ಹೆಣ್ಣು ಆಡಿನ ಹಾಲಿನಿಂದಲೋ, ಹೆಣ್ಣು ಜಿಂಕೆಯ ಹಾಲಿನಿಂದಲೋ,
ಅರ್ಕಪರ್ಣೇನ— ಎಕ್ಕದ ಎಲೆಯ ಮೂಲಕ,
ಉದಙ್-ತಿಷ್ಠನ್ |—
ಉತ್ತರಾಭಿಮುಖವಾಗಿದ್ದು (ಹೋಮಿಸುತ್ತಾನೆ ಎಂದು ಮೇಲೆಯೇ ಹೇಳಿದೆ "ಜುಹೋತಿ" ಎಂಬಲ್ಲಿ).
ಉತ್ತರಸ್ಯ ಪಕ್ಷಸಃ— ಪೂರ್ವಭಾಗದ ವಿರುದ್ಧಭಾಗವೇ ಉತ್ತರಭಾಗ. ಪೂರ್ವ ಎಂದರೆ ಎಲೆಯ ಬುಡ, ತೊಟ್ಟಿರುವ ಭಾಗ. ಉತ್ತರವೆಂದರೆ ತುದಿ. ಅಂತಹ ಎಕ್ಕದೆಲೆಯ ತುದಿಯಿಂದ,
ಉತ್ತರ-ಅಪರಸ್ಯಾಂ ಸ್ರಕ್ತ್ಯಾಂ ವಿಕರ್ಣ್ಯಾಮ್ — ಉತ್ತರವಲ್ಲದ ಅರ್ಥಾತ್ ಪೂರ್ವ / ಎಲೆಯ ಬುಡದ / ತೊಟ್ಟಿನ ಭಾಗದ ಮೂಲೆಯಲ್ಲಿಗೆ ಮಡಿಚಿದ,
ಸ್ವಯಮ್ ಆತೃಣ್ಣಾಯಾಮ್ — ಎಲೆಯು ತಾನೇ ಸ್ವಯಂ ಬೇರೆ ಆಯುಧ / ಕಡ್ಡಿಗಳ ಸಹಾಯವಿಲ್ಲದೆಯೇ ರಂಧ್ರಮಾಡಲ್ಪಟ್ಟಿರಬೇಕು.
ಅನುಪರಿಚಾರಂ ವಾ | —
ಹಾಗೆಯೇ, ಎಲೆಯ ಹೊಟ್ಟೆಯ ಭಾಗದ / ಮೇಲ್ಮೈಯ ಮೇಲಕ್ಕೆ ಮಡಿಚಬಾರದು. ("ಉಪರಿ ಚಾರಂ ನ ಇತಿ ಅನುಪರಿಚಾರಮ್"). ಎಲೆಯನ್ನು ಅಡಿಭಾಗದಿಂದ ಮಡಿಚಬೇಕು. ಅಂತಹ ಅರ್ಕಪರ್ಣದಿಂದ ಆಹುತಿಯನ್ನು ಮಾಡಬೇಕು.
ನಮಸ್ತೇ ರುದ್ರ ಮನ್ಯವ ಇತಿ ಏತಾನ್ ಅನುವಾಕಾನ್ ತ್ರೈಧಂ ವಿಭಜ್ಯ—
"ನಮಸ್ತೇ ರುದ್ರ ಮನ್ಯವ…" ಎಂಬ ಈ ೧೧ ಅನುವಾಕಗಳನ್ನು ಮೂರಾಗಿ ವಿಭಜಿಸಿ,
ಅಪಿ ವಾ ಪ್ರಥಮಾತ್ ಉಪಕ್ರಮ್ಯ ನಮಸ್ತಕ್ಷಭ್ಯ ಇತಿ ಜಾನುದಘ್ನೇ ಧಾರಯಮಾಣೋ—
ಹಾಗೆಯೇ, "ನಮಸ್ತೇ ರುದ್ರ ಮನ್ಯವ" ಎಂಬ ೧ ನೆಯ ಅನುವಾಕದಿಂದಾರಂಭಿಸಿ ೪ ನೆಯ ಅನುವಾಕದ "ನಮಸ್ತಕ್ಷಭ್ಯಃ" ಎಂಬ ಮಂತ್ರೋಚ್ಚಾರದವರೆಗೆ ಹವಿಸ್ಸನ್ನು ಮೊಣಕಾಲಿನ ಮಟ್ಟದಲ್ಲಿ ಹಿಡಿದುಕೊಂಡು (ಧರಿಸಿದವನಾಗಿ) ಹೋಮಿಸಿ,
ರಥಕಾರೇಭ್ಯ ಇತ್ಯುಪಕ್ರಮ್ಯ ನಮಃ ಸ್ವಾಯುಧಾಯ ಚೇತಿ ನಾಭಿದಘ್ನೇ—
೪ನೆಯ ಅನುವಾಕದ "ರಥಕಾರೇಭ್ಯಃ" ಎಂಬಲ್ಲಿಂದ ತೊಡಗಿ, ೭ನೆಯ ಅನುವಾಕದ "ನಮಃ ಸ್ವಾಯುಧಾಯ ಚ" ಎಂಬಲ್ಲಿ ವರೆಗೆ ನಾಭಿಯ ಮಟ್ಟದಲ್ಲಿ ಹಿಡಿದುಕೊಂಡು ಹೋಮಿಸಿ,
ಶೇಷೇಣ ಪ್ರಾಗವತಾನೇಭ್ಯಃ, ಆಸ್ಯದಘ್ನೇ ಹುತ್ವಾ ಸಹಸ್ರಾಣಿ ಸಹಸ್ರಶ ಇತಿ ದಶಾವತಾನಾನ್ ಹುತ್ವಾ, ಅನ್ವಾರೋಹಾನ್ ಜುಹೋತಿ |
ಉಳಿದ ಹವಿಸ್ಸನ್ನು ಮುಂದಕ್ಕೆ ಬಾಗಿ ಮುಖದ ಎದುರಿಗೆ ಹಿಡಿದು (೭ನೆಯ ಅನುವಾಕದ "ಸುಧನ್ವನೇ ಚ" ಎಂಬಲ್ಲಿಂದ ತೊಡಗಿ ೧೦ನೆಯ ಅನುವಾಕದ "ಪರಾಚೀನಾ ಮುಖಾ ಕೃಧಿ" ಎಂಬಲ್ಲಿವರೆಗೆ ಪಠಿಸುತ್ತಾ) ಹೋಮಿಸಿ, ೧೧ನೆಯ ಅನುವಾಕದ "ಸಹಸ್ರಾಣಿ ಸಹಸ್ರಶಃ" ಎಂಬಲ್ಲಿಂದ "ಧನ್ವಾನಿ ತನ್ಮಸಿ" ಎಂಬಲ್ಲಿಯವರೆಗೆ ಅಧೋಮುಖವಾಗಿ ಪಠಿಸಿ ಹೋಮಿಸಿ, ಬಳಿಕ ಊರ್ಧ್ವಮುಖವಾಗಿ ಹೋಮಿಸುತ್ತಾನೆ.
ನಮೋ ರುದ್ರೇಭ್ಯೋ ಯೇ ಪೃಥಿವ್ಯಾಮಿತಿ ಜಾನುದಘ್ನೇ ಧಾರಯಮಾಣೋ ನಮೋ ರುದ್ರೇಭ್ಯೋ ಯೇऽನ್ತರಿಕ್ಷ ಇತಿ ನಾಭಿದಘ್ನೇ ನಮೋ ರುದ್ರೇಭ್ಯೋ ಯೇ ದಿವೀತ್ಯಾಸ್ಯದಘ್ನೇ ಹುತ್ವಾ ಏತಾನ್ ಏವ ಯಜಮಾನಂ ವಾಚಯಿತ್ವಾ ಏತಾನೇವ ವಿಪರೀತಾನ್ ಪ್ರತ್ಯವರೋಹಾನ್ ಹುತ್ವಾ ಆಸಞ್ಚರೇ ಪಶೂನಾಮ್ ಅರ್ಕಪರ್ಣಮ್ ಉದಸ್ಯತಿ ಯಂ ದ್ವಿಷ್ಯಾತ್ ತಸ್ಯ ಸಞ್ಚರೇ" (ಆಪಸ್ತಂಬಶ್ರೌತಸೂತ್ರಮ್ ೧೭.೧೧.೩-೬), ಇತಿ ||
" ನಮೋ ರುದ್ರೇಭ್ಯೋ ಯೇ ಪೃಥಿವ್ಯಾಮ್" ಎಂಬುದಾಗಿ ಮೊಣಕಾಲಿನ ಮಟ್ಟದಲ್ಲಿ ಹವಿಸ್ಸನ್ನು ಹಿಡಿದು, "ನಮೋ ರುದ್ರೇಭ್ಯೋ ಯೇऽನ್ತರಿಕ್ಷ.." ಎಂಬುದಾಗಿ ನಾಭಿಯ ಮಟ್ಟದಲ್ಲಿ ಹವಿಸ್ಸನ್ನು ಹಿಡಿದು, "ನಮೋ ರುದ್ರೇಭ್ಯೋ ಯೇ ದಿವಿ" ಎಂದು ಉಚ್ಚರಿಸುತ್ತಾ ಮುಖದ ನೇರಕ್ಕೆ ಹವಿಸ್ಸನ್ನು ಹೋಮಿಸಿ, ಇವುಗಳನ್ನೇ ಯಜಮಾನನಿಂದಲೂ ಹೇಳಿಸಿ, ಇವುಗಳನ್ನೇ ವಿರುದ್ಧವಾಗಿ / ಹಿಂದುಮುಂದಾಗಿ ಹೇಳಿ ಹೋಮಿಸಿ, ಪಶುಗಳ ಸಂಚಾರವಿರುವಲ್ಲಿ ಎಕ್ಕದ ಎಲೆಯನ್ನು ಎಸೆಯುತ್ತಾನೆ. ಯಾವನನ್ನು ದ್ವೇಷಿಸುವನೋ ಅವನ ಮರಣ / ನಾಶಕ್ಕಾಗಿ ಇದನ್ನು ಮಾಡುತ್ತಾನೆ ಎಂಬುದಾಗಿ ಆಪಸ್ತಂಬರು ತಮ್ಮ ಶ್ರೌತಸೂತ್ರದಲ್ಲಿ ಹೇಳಿದ್ದಾರೆ.
ಭಟ್ಟಭಾಸ್ಕರಕೃತ ಉಪೋದ್ಘಾತಃ
ಶ್ರೀಗಣೇಶಾಯ ನಮಃ || ಓಂ ಅತಃ ಪರಮ್ ಅಗ್ನಿಕಾಣ್ಡಮ್ ಏವ ಅಗ್ನ್ಯಾರ್ಷೇಯಮ್ | ತತ್ರ ಚರಮಾಯಾಮ್ ಇಷ್ಟಿಕಾಯಾಂ ಶತರುದ್ರೀಯಂ ಜುಹೋತಿ— 'ನಮಸ್ತೇ ರುದ್ರ ಮನ್ಯವೇ' ಇತಿ |
ಶ್ರೀಮನ್ಮಹಾಗಣಪತಿದೇವರಿಗೆ ನಮಸ್ಕಾರಗಳು. ಓಂ ಎಂಬುದು ಆರಂಭಸೂಚಕ. ಇನ್ನು ಮುಂದೆ ಅಗ್ನಿಯೇ ಋಷಿಯಾಗುಳ್ಳ ಅಗ್ನಿಕಾಂಡವು. (ತೈತ್ತಿರೀಯಕೃಷ್ಣಯಜುರ್ವೇದಸಂಹಿತೆಯು ಸಪ್ತಕಾಂಡಾತ್ಮಕವಾದುದೂ, ೪೪ ಪ್ರಪಾಠಕಯುತವೂ ೬೩೧ ಅನುವಾಕಗಳಿಂದ ಕೂಡಿರುವುದೂ ಆಗಿದೆ. ೭ ಕಾಂಡಗಳು— ಪ್ರಜಾಪತಿ ಋಷಿಯ ಪ್ರಾಜಾಪತ್ಯಕಾಂಡ, ಸೋಮ ಋಷಿಯ ಸೌಮ್ಯಕಾಂಡ, ಅಗ್ನಿ ಋಷಿಯ ಆಗ್ನೇಯಕಾಂಡ, ವಿಶ್ವೇದೇವ ಋಷಿಯ ವೈಶ್ವದೇವಕಾಂಡ, ಸ್ವಯಂಭೂ ಋಷಿಯ ಸ್ವಾಯಂಭುವಕಾಂಡ ಹಾಗೂ ಅರುಣ ಋಷಿಯ ಆರುಣಕಾಂಡ. ತೈತ್ತಿರೀಯಶಾಖೆಗೆ ೨ ಪಾಠಭೇದಗಳಿವೆ— ಸಾರಸ್ವತ ಹಾಗೂ ಆರ್ಷೇಯ. ಸಾರಸ್ವತಪಾಠದಲ್ಲಿ ಸಂಹಿತೆ, ಬ್ರಾಹ್ಮಣ, ಆರಣ್ಯಕಗಳು ಪ್ರತ್ಯೇಕವಾಗಿವೆ. ಆರ್ಷೇಯಪಾಠದಲ್ಲಿ ಇವೆಲ್ಲಾ ಒಟ್ಟಿಗೇ ಇವೆ. ಬೌಧಾಯನಗೃಹ್ಯಸೂತ್ರ ೩.೩ ರ ಪ್ರಕಾರ ಈ ಪಾಠವು ೫ ಭಾಗಗಳಿಂದ ಕೂಡಿದೆ— ಪ್ರಾಜಾಪತ್ಯ, ಸೌಮ್ಯ, ಆಗ್ನೇಯ, ವೈಶ್ವದೇವ ಹಾಗೂ ಸ್ವಾಯಂಭುವ.) ಅದರಲ್ಲಿ ಕೊನೆಯ ಇಟ್ಟಿಗೆಯ ಮೇಲೆ / ಕೊನೆಯ ಇಷ್ಟಿಯಲ್ಲಿ ಶತರುದ್ರೀಯಹೋಮವನ್ನು ಮಾಡಲಾಗುತ್ತದೆ "ನಮಸ್ತೇ ರುದ್ರ ಮನ್ಯವೇ" ಎಂಬುದಾಗಿ.
"ರುದ್ರೋ ವಾ ಏಷ ಯದಗ್ನಿಃ ಸ ಏತರ್ಹಿ ಜಾತಃ" (ತೈ.ಸಂ. ೫.೪.೩) ಇತ್ಯಾದಿ ಬ್ರಾಹ್ಮಣಮ್, "ರುದ್ರೋ ವಾ ಏಷ ಯದಗ್ನಿಃ ತಸ್ಯ ಏತೇ ತನುವೌ" (ತೈ.ಸಂ. ೫.೭.೩) ಇತ್ಯಾದಿ ಚ | "ಅಜಾಕ್ಷೀರೇಣ ಜುಹೋತಿ" (ತೈ.ಸಂ. ೫.೪.೩); "ಯದ್ ಗ್ರಾಮ್ಯಾಣಾಂ ಪಶೂನಾಂ ಪಯಸಾ ಜುಹುಯಾತ್" (ತೈ.ಸಂ. ೫.೪.೩) ಇತ್ಯಾದಿ ಬ್ರಾಹ್ಮಣಮ್ | "ಅರ್ಕಪರ್ಣೇನ ಜುಹೋತಿ" (ತೈ.ಸಂ. ೫.೪.೩) ಇತಿ, "ಅಙ್ಗಿರಸಃ ಸುವರ್ಗಂ ಲೋಕಂ ಯನ್ತೋऽಜಾಯಾಂ" (ತೈ.ಸಂ. ೫.೪.೩) ಇತ್ಯಾದಿ ಬ್ರಾಹ್ಮಣಮ್ ||
"ಈ ಅಗ್ನಿಯೇ ಅಥವಾ ಅಗ್ನಿಸಂಭವನೇ ರುದ್ರನು" (ತೈತ್ತಿರೀಯಸಂಹಿತಾ ೫.೪.೩) ಇತ್ಯಾದಿ ಬ್ರಾಹ್ಮಣವಾಕ್ಯಗಳು ಹಾಗೂ "ಈ ಅಗ್ನಿಯೇ ರುದ್ರನು; ಇವುಗಳೇ / ಅಗ್ನ್ಯಾದಿಗಳೇ ಈತನ ಅಷ್ಟಮೂರ್ತಿಸ್ವರೂಪಾಂಶಗಳು / ಈತನ ವಿವಿಧ ರೂಪಗಳು" (ತೈ.ಸಂ.೫.೭.೩) ಇತ್ಯಾದಿ. "ಹೆಣ್ಣು ಆಡಿನ ಹಾಲಿನಿಂದ ಹೋಮಿಸುತ್ತಾನೆ" (ತೈ.ಸಂ.೫.೪.೩), "ಯಾವ ಊರಹಸುಗಳಿವೆಯೋ, ಅವುಗಳ ಹಾಲಿನಿಂದ ಹೋಮಿಸಬೇಕು"(ತೈ.ಸಂ.೫.೪.೩) ಇತ್ಯಾದಿ ಬ್ರಾಹ್ಮಣವಾಕ್ಯಗಳಿವೆ. "ಎಕ್ಕದೆಲೆಯಿಂದ ಹೋಮಿಸುತ್ತಾನೆ" (ತೈ.ಸಂ.೫.೪.೩) ಎಂದೂ, "ಅಂಗಿರಸನು ಅಜಾಕ್ಷೀರವನ್ನು ಶತರುದ್ರೀಯಹವನದಲ್ಲಿ ಹೋಮಿಸಿ ಉತ್ತಮ ಲೋಕವನ್ನು ಪಡೆದನು" (ತೈ.ಸಂ.೫.೪.೩) ಇತ್ಯಾದಿ ಬ್ರಾಹ್ಮಣವಾಕ್ಯಗಳಿವೆ.
ತತ್ರ ಅಯಂ ಬೌಧಾಯನ(ಶ್ರೌತ)ಸೂತ್ರಪ್ರಯೋಗಃ — "ಉದಙ್ಮುಖಃ ತಿಷ್ಠನ್ ಮುಖದಘ್ನೇ ಧಾರಯನ್…. ನಮಸ್ತೇ ರುದ್ರ ಮನ್ಯವ ಇತಿ (ಪ್ರತಿಪದ್ಯ) ಆನ್ತಮ್ (ಏಕಮ್) ಅನುವಾಕಂ (ತತ್) ನಿಗದ್ಯ ದ್ವಿತೀಯಂ ತೃತೀಯಂ, ಚತುರ್ಥಸ್ಯ ಯತ್ರ ಅಭಿಜಾನಾತಿ ನಮಃ ಕ್ಷತ್ತೃಭ್ಯ ಇತಿ ತತಸ್ಸ್ವಾಹಾಕರೋತಿ | ತತಃ ಪ್ರಾಙಾವೃತ್ಯ ನಾಭಿದಘ್ನೇ ಧಾರಯನ್ ಸಂಗ್ರಹೀತೃಭ್ಯಶ್ಚ ವ ಇತಿ ಪ್ರತಿಪದ್ಯ ಅವಶಿಷ್ಟಮನುವಾಕಸ್ಯ ನಿಗದ್ಯ ಪಞ್ಚಮಂ ಷಷ್ಠಂ, ಸಪ್ತಮಸ್ಯ ಚ ಯತ್ರಾಭಿಜಾನಾತಿ ನಮೋ ವರ್ಷ್ಯಾಯ ಚೇತಿ ತತಸ್ಸ್ವಾಹಾಕರೋತಿ |
ಅಲ್ಲಿ ಈ ಬೌಧಾಯನಸೂತ್ರದ ಪ್ರಯೋಗವಿದೆ— "ಉತ್ತರದಿಕ್ಕಿಗೆ ಮುಖಮಾಡಿ ನಿಂತು, ಮುಖದ ಮಟ್ಟದಲ್ಲಿ ಹವಿಸ್ಸನ್ನು ಹಿಡಿದು….."ನಮಸ್ತೇ ರುದ್ರ ಮನ್ಯವ..." ಎಂದು (ಆರಂಭಿಸಿ) (ಒಂದು) ಅನುವಾಕದ ಕೊನೆಯವರೆಗೆ ಪಠಿಸಿ, ೨ನೆಯ, ೩ನೆಯ ಅನುವಾಕಗಳನ್ನೂ, ೪ನೆಯದರಲ್ಲಿ "ನಮಃ ಕ್ಷತ್ತೃಭ್ಯಃ" ಎಂಬಲ್ಲಿವರೆಗೆ ಹೇಳಿ ಸ್ವಾಹಾಕಾರವನ್ನು ಮಾಡುತ್ತಾನೆ. ಬಳಿಕ ಪೂರ್ವಕ್ಕೆ ತಿರುಗಿ ನಾಭಿಯ ಮಟ್ಟದಲ್ಲಿ ಹವಿಸ್ಸನ್ನು ಧರಿಸಿ, "ಸಂಗ್ರಹೀತೃಭ್ಯಶ್ಚ ವೋ ನಮೋ ನಮಃ…" ಎಂದು ಆರಂಭಿಸಿ ಆ ಅನುವಾಕದ ಕೊನೆಯ ವರೆಗೆ ಹೇಳಿ, ೫ನೆಯ, ೬ನೆಯ ಅನುವಾಕಗಳು ಹಾಗೂ ೭ನೆಯದರಲ್ಲಿ "ನಮೋ ವರ್ಷ್ಯಾಯ ಚ" ಎಂಬಲ್ಲಿಯವರೆಗೆ ಪಠಿಸಿ, ಬಳಿಕ ಸ್ವಾಹಾಕಾರ ಮಾಡುತ್ತಾನೆ.
ತತೋ ದಕ್ಷಿಣಾವೃತ್ಯ ಜಾನುದಘ್ನೇ ಧಾರಯನ್ ಅವರ್ಷ್ಯಾಯ ಚ ಇತಿ ಪ್ರತಿಪದ್ಯಾವಶಿಷ್ಟಮನುವಾಕಸ್ಯ ನಿಗದ್ಯ ಅಷ್ಟಮಂ ನವಮಂ ದಶಮಂ ಚ, ಏಕಾದಶಸ್ಯ ಚ ಯತ್ರಾಭಿಜಾನಾತಿ ಯ ಏತಾವನ್ತಶ್ಚ ಇತಿ ತತಃ ಸ್ವಾಹಾಕರೋತಿ" (ಬೌ.ಶ್ರೌ.ಸೂ. ೧೦.೪೮) | "ತ್ರೇಧಾ ವಿಭಕ್ತಂ ಜುಹೋತಿ" (ತೈ.ಸಂ. ೫.೪.೩) ಇತ್ಯಾದಿ ಬ್ರಾಹ್ಮಣಮ್, "ಇಯತ್ಯಗ್ರೇ ಜುಹೋತಿ" (ತೈ.ಸಂ. ೫.೪.೩) ಇತ್ಯಾದಿ ಚ | ತತ್ರ ಏಕಃ ತ್ರಿಭಾಗಃ ಷಣ್ಣವತಿ (ಷಟ್-ನವತಿ) ಮನ್ತ್ರಾಃ | "ತತಃ ಪ್ರತ್ಯಙ್ ಆವೃತ್ಯ ಗುಲ್ಫದಘ್ನೇ ಧಾರಯನ್ ನಮೋ ರುದ್ರೇಭ್ಯೋ ಯೇ ಪೃಥಿವ್ಯಾಮ್ ಇತಿ ಹುತ್ವಾ ಏತದ್ ಯಜಮಾನಂ ವಾಚಯತಿ" (ಬೌ.ಶ್ರೌ.ಸೂ. ೧೦.೪೮) | "ತಿಸ್ರ ಉತ್ತರಾ ಆಹುತೀ ಜುಹೋತಿ" (ತೈ.ಸಂ. ೫.೪.೩) ಇತ್ಯಾದಿ ಬ್ರಾಹ್ಮಣಮ್, "ಏತಾ ವೈ ದೇವತಾಃ ಸುವರ್ಗ್ಯಾ ಯಾ ಉತ್ತಮಾಃ" (ತೈ.ಸಂ. ೫.೪.೩) ಇತ್ಯಾದಿ ಚ | "ನಾಭಿದಘ್ನೇ ಧಾರಯನ್ ನಮೋ ರುದ್ರೇಭ್ಯೋ ಯೇऽನ್ತರಿಕ್ಷ ಇತಿ ಹುತ್ವಾ ಏತದ್ಯಜಮಾನಂ ವಾಚಯತಿ | ಗ್ರೀವದಘ್ನೇ ಧಾರಯನ್ ಯೇ ದಿವಿ ಇತಿ ಹುತ್ವಾ ಯಜಮಾನಂ ವಾಚಯತಿ" (ಬೌ.ಶ್ರೌ.ಸೂ. ೧೦.೪೮) ||
ಬಳಿಕ, ದಕ್ಷಿಣಕ್ಕೆ / ಬಲಕ್ಕೆ ತಿರುಗಿ ಮೊಣಕಾಲಿನ ಮಟ್ಟದಲ್ಲಿ ಹವಿಸ್ಸನ್ನು ಹಿಡಿದು, ೭ನೆಯ ಅನುವಾಕದ "ಅವರ್ಷ್ಯಾಯ ಚ" ಎಂಬಲ್ಲಿಂದ ಆರಂಭಿಸಿ ಆ ಅನುವಾಕದ ಉಳಿದ ಮಂತ್ರಗಳನ್ನು ಪಠಿಸಿ, ೮ನೆಯ, ೯ನೆಯ, ೧೦ನೆಯ ಅನುವಾಕಪೂರ್ತಿ ಹಾಗೂ ೧೧ನೆಯ ಅನುವಾಕದಲ್ಲಿ "ಯ ಏತಾವನ್ತಶ್ಚ" ಎಂಬಲ್ಲಿಯವರೆಗೆ ಹೇಳಿ ಬಳಿಕ ಸ್ವಾಹಾಕಾರ ಮಾಡುತ್ತಾನೆ ಎನ್ನುತ್ತದೆ ಬೌಧಾಯನ ಶ್ರೌತಸೂತ್ರ (೧೦.೪೮). "ಮೂರಾಗಿ ವಿಭಾಗಿಸಿ ಹೋಮಿಸುತ್ತಾನೆ" (ತೈತ್ತಿರೀಯಸಂಹಿತಾ ೫.೪.೩) ಇತ್ಯಾದಿ ಬ್ರಾಹ್ಮಣವಾಕ್ಯಗಳು ಹಾಗೂ "ಇಲ್ಲಿಂದ ಮುಂದೆ ಹೋಮಿಸುತ್ತಾನೆ" (ತೈ.ಸಂ.೫.೪.೩) ಇತ್ಯಾದಿ. ಅಲ್ಲಿ ಮೂರನೆಯ ಒಂದು ಭಾಗವೆಂದರೆ ೯೬ ಮಂತ್ರಗಳು. "ಬಳಿಕ ಪಶ್ಚಿಮಕ್ಕೆ ತಿರುಗಿ, ಗುಲ್ಫ / ಕಾಲಿನ ಮಣಿಕಟ್ಟಿನ ಮಟ್ಟದಲ್ಲಿ ಬಾಗಿ ಹವಿಸ್ಸನ್ನು ಹಿಡಿದು 'ನಮೋ ರುದ್ರೇಭ್ಯೋ ಯೇ ಪೃಥಿವ್ಯಾಮ್ ' ಎಂದು ಹೋಮಿಸಿ ಈ ಯಜಮಾನನನ್ನು ಹೇಳಿಸುತ್ತಾನೆ" (ಬೌಧಾಯನ ಶ್ರೌತಸೂತ್ರ ೧೦.೪೮). "ಮೂರು ಉತ್ತರ (ಪೂರ್ವದ ಬಳಿಕ ಉತ್ತರ; ದೇವರಪೂಜೆಯಲ್ಲಿ ಕೊನೆಗೆ ಪ್ರಸನ್ನಪೂಜೆ ಇದ್ದಂತೆ) ಆಹುತಿಗಳನ್ನು ಹೋಮಿಸುತ್ತಾನೆ" (ತೈ.ಸಂ.೫.೪.೩) ಇತ್ಯಾದಿ ಬ್ರಾಹ್ಮಣವಾಕ್ಯವು ಹಾಗೂ "ಈ ದೇವತೆಗಳು ನಿಶ್ಚಯವಾಗಿಯೂ ಉತ್ತಮರೂ ಸ್ವರ್ಗವಾಸಿಗಳೂ ಆಗಿರುವರು" (ತೈ.ಸಂ.೫.೪.೩) ಇತ್ಯಾದಿ ವಾಕ್ಯಗಳಿವೆ. "ನಾಭಿಯ / ಹೊಕ್ಕುಳದ ಮಟ್ಟದಲ್ಲಿ ಹವಿಸ್ಸನ್ನು ಹಿಡಿದು 'ನಮೋ ರುದ್ರೇಭ್ಯೋ ಯೇऽನ್ತರಿಕ್ಷೇ" ಎಂದು ಹೋಮಿಸಿ ಈ ಯಜ್ಞಕರ್ತೃವನ್ನು / ಯಜಮಾನನನ್ನು (ಯಜಮಾನನಿಂದ ಮಂತ್ರವನ್ನು) ಹೇಳಿಸುತ್ತಾನೆ" (ಬೌ.ಶ್ರೌ.ಸೂ.೧೦.೪೮).
ಅಸ್ಯ ರುದ್ರಾಧ್ಯಾಯಸ್ಯ ಋಷಿಃ ಭಗವಾನ್ ಏವ ಅಗ್ನಿಃ ಕಾಣ್ಡರ್ಷಿಃ, ಛನ್ದೋ ಮಹಾವಿರಾಟ್, ದೇವತಾ ಅಪಿ ಚ ಶಂಭುಃ | ಪ್ರತಿಮನ್ತ್ರಮ್ ಋಷ್ಯಾದಯೋ ವ್ಯಾಖ್ಯಾವಸರೇ ವಕ್ಷ್ಯನ್ತೇ ||
ಈ ರುದ್ರಪ್ರಪಾಠಕ / ರುದ್ರಾಧ್ಯಾಯ / ರುದ್ರಪ್ರಶ್ನಕ್ಕೆ ಭಗವಂತನೇ ಮೂಲ ಋಷಿಯು. ಋಷಿರ್ದರ್ಶನಾತ್ ಎಂಬಂತೆ ಈ ಸಮಸ್ತವೇದಗಳು ಆ ವೇದಾತ್ಮನಾದ ಪರಮಾತ್ಮನಿಂದಲೇ ಸೃಷ್ಟಿಯಾದುದರಿಂದ ಆತನೇ ಮೊದಲ ಋಷಿಯು. ಬಳಿಕ ತಪೋದ್ವಾರಾ ಅಗ್ನಿದೇವನು ತೈತ್ತಿರೀಯಕೃಷ್ಣಯಜುರ್ವೇದದ ಈ ಚತುರ್ಥಕಾಂಡವನ್ನು ದರ್ಶನಮಾಡಿದ್ದರಿಂದ ಆತನು ಕಾಂಡ-ಋಷಿಯು. ಮಹಾವಿರಾಟ್ ಎಂಬುದು ಇದರ ಛಂದಸ್ಸು. ಈ ಮಂತ್ರದ ದೇವತೆಯು ಶಂಭುವೇ. ಪ್ರತಿಯೊಂದು ಮಂತ್ರದ ಭಾಷ್ಯದಲ್ಲೂ / ವ್ಯಾಖ್ಯಾನದ ಸಂದರ್ಭದಲ್ಲಿಯೂ ಆಯಾ ಮಂತ್ರದ ಋಷಿ-ಛಂದೋ-ದೇವತಾ ವಿಚಾರಗಳು ಹೇಳಲ್ಪಡುತ್ತವೆ.
ವಿಶೇಷ ಟಿಪ್ಪಣಿ—
ಸಾಮಾನ್ಯವಾಗಿ ವೈದಿಕ ಛಂದಸ್ಸುಗಳಲ್ಲಿ ೭ ವಿಧ— ಗಾಯತ್ರೀ, ಉಷ್ಣಿಕ್, ಅನುಷ್ಟುಪ್, ಬೃಹತೀ, ಪಂಕ್ತಿ, ತ್ರಿಷ್ಟುಪ್ ಮತ್ತು ಜಗತೀ. ಇವು ಸೂರ್ಯನಾರಾಯಣನ ಸಪ್ತಾಶ್ವಗಳಂತೆ. "ಏಕೋ ಅಶ್ವೋ ವಹತಿ ಸಪ್ತನಾಮಾ". ಇವುಗಳಲ್ಲಿ ೧ ಅಕ್ಷರ ಕಮ್ಮಿ ಇರುವ ಪಾದವು ನಿಚೃತ್, ೨ ಅಕ್ಷರಗಳು ಕಡಿಮೆ ಇದ್ದರೆ ವಿರಾಟ್, ೧ ಅಕ್ಷರ ಹೆಚ್ಚಿದ್ದರೆ ಭುರಿಕ್ ಹಾಗೂ ೨ ಅಕ್ಷರಗಳು ಅಧಿಕವಾಗಿದ್ದರೆ ಸ್ವರಾಟ್ ಎಂಬ ಪ್ರಭೇದಗಳು ಆಯಾ ಛಂದಸ್ಸುಗಳಿಗೆ ಬರುತ್ತವೆ. ಇದಲ್ಲದೆ ಈ ಏಳೂ ಛಂದಸ್ಸುಗಳೂ ಮತ್ತೆ ೮ ಬಗೆಯಾಗಿವೆ— ಆರ್ಷೀ, ದೈವೀ, ಆಸುರೀ, ಪ್ರಾಜಾಪತ್ಯಾ, ಯಾಜುಷೀ, ಸಾಮ್ನೀ, ಆರ್ಚೀ ಮತ್ತು ಬ್ರಾಹ್ಮೀ ಎಂಬುದಾಗಿ.
ಅಲ್ಲದೆ 'ಛಂದೋಮಂಜರೀ ' ಯಲ್ಲಿ ಹೀಗೆ ಹೇಳಿದೆ—
"ಆರಭ್ಯೈಕಾಕ್ಷರಾತ್ ಪಾದಾದೇಕೈಕಾಕ್ಷರವರ್ದ್ಧಿತೈಃ |
ಪಾದೈರುಕ್ತಾದಿಸಂಜ್ಞಂ ಸ್ಯಾಚ್ಛನ್ದಃ ಷಡ್ವಿಂಶತಿಂ ಗತಮ್ ||
ಉಕ್ತಾತ್ಯುಕ್ತಾ ತಥಾ ಮಧ್ಯಾ ಪ್ರತಿಷ್ಠಾನ್ಯಾ ಸುಪೂರ್ವಿಕಾ |
ಗಾಯತ್ರ್ಯುಷ್ಣಿಗನುಷ್ಟುಪ್ ಚ ಬೃಹತೀ ಪಂಕ್ತಿರೇವ ಚ ||
ತ್ರಿಷ್ಟುಪ್ ಚ ಜಗತೀ ಚೈವ ತಥಾತಿಜಗತೀ ಮತಾ |
ಶಕ್ವರೀ ಸಾತಿಪೂರ್ವಾ ಸ್ಯಾದಷ್ಟ್ಯತ್ಯಷ್ಟೀ ತಥಾ ಸ್ಮೃತೇ ||
ಧೃತಿಶ್ಚಾತಿಧೃತಿಶ್ಚೈವ ಕೃತಿಃ ಪ್ರಕೃತಿರಾಕೃತಿಃ |
ವಿಕೃತಿಃ ಸಂಸ್ಕೃತಿಶ್ಚೈವ ತಥಾತಿಕೃತಿರುತ್ಕೃತಿಃ ||"
ಒಂದಕ್ಷರದ ಪಾದದಿಂದಾರಂಭಿಸಿ ಒಂದೊಂದೇ ಅಕ್ಷರವನ್ನು ಹೆಚ್ಚಿಸಿದಂತಹ ಪಾದಗಳುಳ್ಳ ಉಕ್ಥಾ ಮೊದಲಾದ ಹೆಸರಿನ ೨೬ ಬಗೆಯ ಛಂದಸ್ಸುಗಳಿವೆ. ೧ ಅಕ್ಷರಪಾದದಿಂದ ೨೬ ಅಕ್ಷರಗಳ ಪಾದದ ವರೆಗೆ ಅನುಕ್ರಮವಾಗಿ ೫ ಅನಾದಿಷ್ಟಚ್ಛಂದಸ್ಸುಗಳಾದ ಉಕ್ತಾ, ಅತ್ಯುಕ್ತಾ, ಮಧ್ಯಾ, ಪ್ರತಿಷ್ಠಾ, ಸುಪ್ರತಿಷ್ಠಾ, ೭ ಬೃಹಚ್ಛಂದಸ್ಸುಗಳಾದ ಗಾಯತ್ರೀ, ಉಷ್ಣಿಕ್, ಅನುಷ್ಟುಪ್, ಬೃಹತೀ, ಪಂಕ್ತಿ, ತ್ರಿಷ್ಟುಪ್, ಜಗತೀ, ೭ ಅತಿಚ್ಛಂದಸ್ಸುಗಳಾದ ಅತಿಜಗತೀ, ಶಕ್ವರೀ, ಅತಿಶಕ್ವರೀ, ಅಷ್ಟಿ, ಅತ್ಯಷ್ಟಿ, ಧೃತಿ, ಅತಿಧೃತಿ, ೭ ಕೃತಿಚ್ಛಂದಸ್ಸುಗಳಾದ ಕೃತಿ, ಪ್ರಕೃತಿ, ಆಕೃತಿ, ವಿಕೃತಿ, ಸಂಸ್ಕೃತಿ, ಅತಿಕೃತಿ ಹಾಗೂ ಉತ್ಕೃತಿ. ೨೭ ಅಕ್ಷರಗಳ ದಂಡಕ. ಇದಲ್ಲದೆ ಇದಕ್ಕಿಂತ ಹೆಚ್ಚು ಅಕ್ಷರಗಳಿರುವ ಛಂದಸ್ಸುಗಳಿಗೆ ಪ್ರಚಿತಿಚ್ಛಂದಸ್ಸು ಎನ್ನುವರು. ಇದು ವಿವಿಧ ಛಂದಸ್ಸುಗಳ ಸಮುಚ್ಚಯರೂಪವೆಂದೂ ಹೇಳಲಾಗಿದೆ.
'ಛಂದಃಪರಿಮಲಃ' ಎಂಬ ಗ್ರಂಥದಲ್ಲಿ ಹೀಗಿದೆ—
ಉಕ್ತಾತ್ಯುಕ್ತಾ ತಥಾ ಮಧ್ಯಾ ಪ್ರತಿಷ್ಠಾ ಸುಪ್ರತಿಷ್ಠಿಕಾ |
ಗಾಯತ್ರ್ಯುಷ್ಣಿಗನುಷ್ಟುಪ್ ಚ ಬೃಹತೀಪಂಕ್ತಿತ್ರಿಷ್ಟುಭಃ ||
ಜಗತೀ ಚಾತಿಜಗತೀ ಶಕ್ವರೀ ಚಾತಿಶಕ್ವರೀ |
ಅಷ್ಟ್ಯತ್ಯಷ್ಟೀ ಧೃತಿಃ ಸಾತಿಃ ಕೃತಿಃ ಪ್ರಕೃತಿರಾಕೃತಿಃ ||
ವಿಕೃತಿಃ ಸಂಕೃತಿಶ್ಚಾತಿಕೃತಿರುತ್ಕೃತಿದಣ್ಡಕಾಃ |
ಏತಾನಿ ವರ್ಣಚ್ಛನ್ದಾಂಸಿ ತದ್ಭೇದಾನಾಂ ತು ವೃತ್ತತಾ ||
ಏವಮೇವ ಣಢಾದೀನಾಂ ಮಾತ್ರಾಚ್ಛನ್ದಸ್ತ್ವಮಿಷ್ಯತೇ |
ತದವಾನ್ತರಭೇದಾನಾಂ ಜಾತಿತ್ವಮಿತಿ ಸಿದ್ಧ್ಯತಿ ||
"ಛನ್ದಸಾಂ ಚೈವ ಸಾಲೋಕ್ಯಂ ಛನ್ದೋಜ್ಞಾನಾದವಾಪ್ನುಯಾತ್"
ವೇದಮಂತ್ರಗಳ ಛಂದಸ್ಸುಗಳ ಸರಿಯಾದ ತಿಳುವಳಿಕೆಯಿಂದ ಸಾಲೋಕ್ಯಮುಕ್ತಿಯು ಸಿದ್ಧಿಸುವುದು ಎಂಬುದು ಈ ಛಂದಃಶಾಸ್ತ್ರಜ್ಞಾನದ ಹೆಗ್ಗಳಿಕೆ ಹಾಗೂ ಮಾಹಾತ್ಮ್ಯವಾಗಿರುವುದು.
ಆದರೆ ಯಾಜ್ಞಿಕರ ಮತದಂತೆ ಅತಿಜಗತೀ ಮುಂತಾದುವು ಜಗತೀ ಯಲ್ಲೂ, ಉಕ್ತಾದಿಗಳು ಗಾಯತ್ರೀ ಯಲ್ಲೂ ಅಂತರ್ಗತವಾಗುವುದರಿಂದ ಛಂದಸ್ಸುಗಳ ಸಂಖ್ಯೆ ಏಳೇ ಆಗಿರುವುದು. ವೇದದಲ್ಲಿ ಮುಖ್ಯವಾಗಿ ಏಳು ಛಂದಸ್ಸುಗಳು ಹಾಗೂ ಅವುಗಳ ಉಪಭೇದಗಳಿವೆ. ಅಂತಹ ಉಪಭೇದಗಳಲ್ಲೊಂದು ಈ ರುದ್ರಪ್ರಶ್ನದ ಮಹಾವಿರಾಟ್ ಛಂದಸ್ಸು. ರುದ್ರಾಧ್ಯಾಯದಲ್ಲಿ ಬರುವ ವಿವಿಧ ಛಂದಸ್ಸುಗಳ ಸಮುಚ್ಚಯರೂಪವಾದ ಪ್ರಚಿತಿಚ್ಛಂದಸ್ಸಿನ ಒಂದು ಭೇದವೂ ಈ ಮಹಾವಿರಾಟ್ ಛಂದಸ್ಸೆಂದೂ ಹೇಳಬಹುದು.
ಏಷ ಯಜ್ಞಸಂಯುಕ್ತಃ ಕಲ್ಪಃ, ಅಥವಾ ಶ್ರುತಿ-ಸ್ಮೃತಿ-ಇತಿಹಾಸ-ಪುರಾಣೇಷು ಪ್ರಸಿದ್ಧಾಃ ಪ್ರಯೋಗಾಃ ಮೋಕ್ಷ-ಆರೋಗ್ಯ-ಆಯುಷ್ಯ-ಸ್ವರ್ಗ-ಮಲಕ್ಷಯ-ವಿತ್ತಾದಿ-ಫಲಾಃ ಬಹವೋ ವಿದ್ಯನ್ತೇ, ತೇಷು ಚ ಕಾಂಶ್ಚಿತ್ ಬ್ರೂಮಃ | ಪ್ರತಿಮನ್ತ್ರಂ ಚ ಪ್ರಯೋಗವಿಶೇಷಾಃ ಪುರಸ್ತಾದ್ವಕ್ಷ್ಯನ್ತೇ ||
ಇದು ಶತರುದ್ರೀಯಹವನಕ್ಕಾಗಿ ಬಳಕೆಯಾಗುವ ಮಂತ್ರಭಾಗವು, ಅಥವಾ ಶ್ರುತಿ / ವೇದ, ಸ್ಮೃತಿ / ಧರ್ಮಶಾಸ್ತ್ರಗಳು, ರಾಮಾಯಣ-ಮಹಾಭಾರತ-ಗುರುಚರಿತ್ರೆ-ಶಿವರಹಸ್ಯವೇ ಮೊದಲಾದ ಇತಿಹಾಸಗ್ರಂಥಗಳು, ಅಷ್ಟಾದಶ ಪುರಾಣ-ಉಪಪುರಾಣ-ಔಪಪುರಾಣಾದಿಗಳಲ್ಲಿ ಮೋಕ್ಷ, ಆರೋಗ್ಯ, ಆಯುಷ್ಯ, ಸ್ವರ್ಗ, ಪಾಪನಾಶ, ಸಂಪತ್ತೇ ಮೊದಲಾದ ಫಲಗಳನ್ನೀಯುವ ಪ್ರಸಿದ್ಧವಾದ ಬಹಳಷ್ಟು ಪ್ರಯೋಗಗಳಿವೆ, ಹಾಗೂ ಅವುಗಳಲ್ಲಿ ಕೆಲವನ್ನು ಹೇಳುತ್ತೇವೆ. ಈ ಶತರುದ್ರೀಯದ ಪ್ರತಿಯೊಂದು ಮಂತ್ರದ ವಿಶೇಷ ಪ್ರಯೋಗಗಳು ಮುಂದೆ ಅಲ್ಲಲ್ಲೇ ಹೇಳಲ್ಪಡುತ್ತವೆ.
ತತ್ರ ಜಾಬಾಲೋಪನಿಷದಿ— "ಅಥ ಹ ಏನಂ ಬ್ರಹ್ಮಚಾರಿಣ ಊಚುಃ | ಕಿಂ ಜಾಪ್ಯೇನ ಏವ ಅಮೃತತ್ವಂ ಬ್ರೂಹಿ ಇತಿ ಸ ಹ ಉವಾಚ ಯಾಜ್ಞವಲ್ಕ್ಯಃ ಶತರುದ್ರೀಯೇಣ ಇತಿ ಏತಾನಿ ಹ ವಾ ಅಮೃತನಾಮಧೇಯಾನಿ ಏತೈಃ ಹ ವಾ ಅಮೃತೋ ಭವತಿ" (ಜಾಬಾಲೋಪನಿಷತ್ ೩) ಇತಿ ||
ಅವುಗಳಲ್ಲೊಂದಾದ ಜಾಬಾಲ ಉಪನಿಷತ್ತಿನಲ್ಲಿ "ಬಳಿಕ ಇವನನ್ನು ಕುರಿತು ಬ್ರಹ್ಮಚಾರಿಗಳು ಹೇಳಿದರು— 'ಏನನ್ನು ಜಪಿಸಿದರೆ ಅ-ಮೃತತ್ವ / ಮರಣವಿಲ್ಲದ ಮೋಕ್ಷಸ್ಥಿತಿಯುಂಟಾಗುವುದು ಎಂದು ಹೇಳು' ಎಂದು. ಆ ಯಾಜ್ಞವಲ್ಕ್ಯನು ಹೇಳಿದನು— 'ಶತರುದ್ರೀಯಜಪದಿಂದ ಎಂದು.' ಅಥವಾ ಇವುಗಳು (ಶತರುದ್ರೀಯದಲ್ಲಿರುವವುಗಳು) ಅಮೃತಸ್ವರೂಪನಾದ ಪರಮಾತ್ಮನ ನಾಮಧೇಯಗಳು / ಪವಿತ್ರವಾದ ಹೆಸರುಗಳು. ಇವುಗಳ ಜಪದಿಂದ ಜಪಕನು ಅಮೃತಸ್ವರೂಪನೇ ಆಗುವನು" ಎಂಬುದಾಗಿ ಹೇಳಿದೆ.
ಕೈವಲ್ಯೋಪನಿಷದಿ— " ಯಃ ಶತರುದ್ರೀಯಮ್ ಅಧೀತೇ ಸೋऽಗ್ನಿಪೂತೋ ಭವತಿ ಸುರಾಪಾನಾತ್ ಪೂತೋ ಭವತಿ ಬ್ರಹ್ಮಹತ್ಯಾತ್ ಪೂತೋ ಭವತಿ ಕೃತ್ಯಾಕೃತ್ಯಾತ್ ಪೂತೋ ಭವತಿ ತಸ್ಮಾದ್ ಅವಿಮುಕ್ತಮ್ ಆಶ್ರಿತೋ ಭವತಿ | ಅತ್ಯಾಶ್ರಮೀ ಸರ್ವದಾ ಸಕೃತ್ ವಾ ಜಪೇತ್ |
ಕೈವಲ್ಯ ಉಪನಿಷತ್ತಿನಲ್ಲಿ— "ಯಾವನು ಶತರುದ್ರೀಯಮಂತ್ರವನ್ನು ಅಧ್ಯಯನ ಮಾಡುತ್ತಾನೋ ಅವನು ಅಗ್ನಿಯಷ್ಟೇ ಪವಿತ್ರನಾಗುತ್ತಾನೆ / ಪಾವಕನಿಂದ ಶುದ್ಧಿಗೊಂಡಂತೆ ಪಾವನನಾಗುತ್ತಾನೆ; ಬ್ರಹ್ಮಹತ್ಯಾದೋಷದಿಂದ ಮುಕ್ತನಾಗುತ್ತಾನೆ; ಕೃತಕೃತ್ಯತೆಯಿಂದ (ಮಾಡಬೇಕಾದದ್ದನ್ನು ಮಾಡಿದ್ದರಿಂದಾಗುವ ಧನ್ಯತೆ-ಪುಣ್ಯಗಳಿಂದ) ಪವಿತ್ರನಾಗುತ್ತಾನೆ; ಅದರಿಂದ ವಿಮುಕ್ತರಲ್ಲದ ಅಜ್ಞಾನಿಗಳಾದ ಶಿಷ್ಯರಿಂದ ಜ್ಞಾನಕ್ಕಾಗಿ ಆಶ್ರಯಿಸಲ್ಪಡುವ ಗುರುತುಲ್ಯನಾಗುತ್ತಾನೆ. ಬ್ರಹ್ಮಚರ್ಯ-ಗಾರ್ಹಸ್ಥ್ಯ-ವಾನಪ್ರಸ್ಥ-ಸಂನ್ಯಾಸವೆಂಬ ಸಕಲಾಶ್ರಮಗಳನ್ನೂ ಮೀರಿ ಅತ್ಯಾಶ್ರಮಿಯೆನಿಸಿದ ಆಶ್ರಮಾತೀತನೂ ಅವಧೂತನೂ ಆದವನೂ ಯಾವಾಗಲೂ ಅಥವಾ ದಿನಕ್ಕೊಮ್ಮೆಯಾದರೂ ಜಪಿಸಬೇಕು.
ಅನೇನ ಜ್ಞಾನಮ್ ಆಪ್ನೋತಿ ಸಂಸಾರಾರ್ಣವನಾಶನಮ್ | ತಸ್ಮಾದೇವಂ ವಿದಿತ್ವಾ ಏನಂ ಕೈವಲ್ಯಂ ಫಲಮಶ್ನುತೇ
ಕೈವಲ್ಯಂ ಫಲಮ್ ಅಶ್ನುತೇ " (ಕೈ.ಉ.೨.೧) ಇತಿ ||
ಇದರಿಂದ ಸಂಸಾರಸಾಗರವನ್ನು ನಾಶಮಾಡುವಂತಹ ಜ್ಞಾನವನ್ನು ಹೊಂದುತ್ತಾನೆ. ಹಾಗಾದ್ದರಿಂದ, ಈ ರುದ್ರಮಂತ್ರವನ್ನೂ, ಅದರ ಮಹಿಮೆಯನ್ನೂ ಈ ರೀತಿಯಾಗಿ ತಿಳಿದು ಕೈವಲ್ಯ / ಕೇವಲತ್ವ / ನಿರ್ವಾಣ / ಮೋಕ್ಷ / ಮುಕ್ತಿ ಎಂಬ ಫಲವನ್ನು ಹೊಂದುತ್ತಾನೆ" ಎನ್ನಲಾಗಿದೆ.
ಶಾತಾತಪೋ ಅಪಿ ಆಹ—
ಸ್ತೇಯಂ ಕೃತ್ವಾ ಗುರುದಾರಾನ್ ಚ ಗತ್ವಾ
ಮದ್ಯಂ ಪೀತ್ವಾ ಬ್ರಹ್ಮಹತ್ಯಾಂ ಚ ಕೃತ್ವಾ |
ಭಸ್ಮಚ್ಛನ್ನೋ ಭಸ್ಮಶಯ್ಯಾಶಯಾನೋ
ರುದ್ರಾಧ್ಯಾಯೀ ಮುಚ್ಯತೇ ಸರ್ವಪಾಪೈಃ ||
ಇತಿ ||
ಶಾತಾತಪ-ಸ್ಮೃತಿಕಾರರೂ ಹೇಳಿರುವರು—
ಕಳ್ಳತನವನ್ನು ಮಾಡಿ, ಗುರುಪತ್ನೀಗಮನ ಮಾಡಿ, ಮದ್ಯಪಾನ ಮಾಡಿ, ಬ್ರಹ್ಮಹತ್ಯೆಯನ್ನು ಮಾಡಿದಂಥವನೂ ಕೂಡ ಭಸ್ಮಧಾರಣೆ ಮಾಡಿ, ಭಸ್ಮವನ್ನೇ ಶಯ್ಯೆಯನ್ನಾಗಿ ಮಾಡಿ ಅದರ ಮೇಲೆ ಮಲಗುವಂತಹ ರುದ್ರಾಧ್ಯಾಯಿಯು ಸಕಲಪಾಪವಿಮುಕ್ತನಾಗುವನು ಎಂಬುದಾಗಿ. ಇದರರ್ಥ, ಅಂತಹ ಮಹಾಪಾಪಗಳನ್ನು ಆಕಸ್ಮಿಕವಾಗಿ ಮಾಡಿದ್ದರೂ ರುದ್ರಪಾಠಕ್ಕೆ ಅವೆಲ್ಲವನ್ನೂ ನಾಶಮಾಡುವಷ್ಟು ಶಕ್ತಿ-ಪ್ರಭಾವ-ಮಹಿಮೆಗಳಿವೆಯೆಂಬುದು. ಹಾಗೆಂದು ಸದಾ ಇಂತಹ ಪಾಪಗಳನ್ನು ಮಾಡುತ್ತಾ ರುದ್ರಪಠನ ಮಾಡಬೇಕೆಂಬರ್ಥವಲ್ಲ. ಅದರಿಂದ ಪಾಪನಿವೃತ್ತಿಯೂ ಆಗದು. ಆದರೆ, ಒಂದೊಮ್ಮೆ ಅಂತಹ ಪಾಪ ಮಾಡಿದ್ದ ಪಕ್ಷದಲ್ಲಿ ಪರಿಹಾರವಾಗುವುದೆಂಬುದು ಇದರ ಅಂತರಾರ್ಥ. ಮೂರ್ಖನು ಮಾಡಿದ ತಪ್ಪನ್ನೇ ಪುನರಾವರ್ತಿಸುವನು. ಆದರೆ, ಬುದ್ಧಿವಂತನು ಒಮ್ಮೆ ಮಾಡಿದ ತಪ್ಪನ್ನು ಪುನಃ ಮಾಡುವುದಿಲ್ಲ.
ಆಹ ಯಾಜ್ಞವಲ್ಕ್ಯಃ—
ಸುರಾಪಃ ಸ್ವರ್ಣಹಾರೀ ಚ ರುದ್ರಜಾಪೀ ಜಲೇ ಸ್ಥಿತಃ |
ಸಹಸ್ರಶೀರ್ಷಜಾಪೀ ತು ಮುಚ್ಯತೇ ಗುರುತಲ್ಪಗಾಃ ||
ಯಾಜ್ಞವಲ್ಕ್ಯಸ್ಮೃತಿಯಲ್ಲಿ ಹೇಳಿದೆ—
ಸುರೆಯನ್ನು ಪಾನಮಾಡಿದವನು, ಚಿನ್ನವನ್ನು ಅಪಹರಿಸಿದವನು ಮತ್ತು ಗುರುಪತ್ನೀಸಂಸರ್ಗವನ್ನು ಮಾಡಿದವನೂ ನೀರಿನಲ್ಲಿ ನಿಂತು ರುದ್ರವನ್ನು ಅಥವಾ "ಸಹಸ್ರಶೀರ್ಷಾ ಪುರುಷಃ" ಎಂದು ಆರಂಭವಾಗುವ ಪುರುಷಸೂಕ್ತವನ್ನು ಜಪಿಸಿದರೆ ಪಾಪಮುಕ್ತನಾಗುತ್ತಾನೆ.
ಶುಕ್ರಿಯಾರಣ್ಯಕಜಪೋ ಗಾಯತ್ರ್ಯಾಶ್ಚ ವಿಶೇಷತಃ |
ಸರ್ವಪಾಪಹರಾ ಹ್ಯೇತೇ ರುದ್ರೈಕಾದಶಿನೀ ತಥಾ ||
(ಯಾಜ್ಞವಲ್ಕ್ಯಸ್ಮೃತಿ— ಪ್ರಾಯಶ್ಚಿತ್ತಕಾಂಡ— ೩೦೩-೩೦೮)
"ವಿಶ್ವಾನಿ ದೇವ ಸವಿತರ್ದುರಿತಾನಿ…" ಮುಂತಾಗಿರುವ ಶುಕ್ಲಯಜುರ್ವೇದೀಯ ವಾಜಸನೇಯಿಸಂಹಿತೆಯ ಆರಣ್ಯಕಮಂತ್ರಗಳ ಜಪ ಹಾಗೂ ವಿಶೇಷವಾಗಿ ಗಾಯತ್ರೀಮಂತ್ರಜಪ, ಅಂತೆಯೇ ರುದ್ರಾಧ್ಯಾಯಜಪ— ಇವು ವಿಶೇಷವಾಗಿ ಸರ್ವಪಾಪಹರವಾಗಿವೆ.
ವೇದಮೇಕಗುಣಂ ಜಪ್ತ್ವಾ ತದಹ್ನೈವ ವಿಶುದ್ಧ್ಯತಿ |
ರುದ್ರೈಕಾದಶಿನೀಂ ಜಪ್ತ್ವಾ ತತ್ಕ್ಷಣಾದೇವ ಶುದ್ಧ್ಯತಿ ||
ಇತಿ ||
ವೇದವನ್ನು ಒಂದು ಬಾರಿ ಜಪಿಸಿದರೆ ಆ ದಿನದ ಹಗಲು ಹೊತ್ತಿನಲ್ಲೇ (ರಾತ್ರಿಗೆ ಮೊದಲೇ) ಶುದ್ಧಿಹೊಂದುತ್ತಾನೆ. ರುದ್ರೈಕಾದಶಿನೀಯನ್ನು ಜಪಿಸಿದರೆ ಆ ಕ್ಷಣದಲ್ಲೇ ಶುದ್ಧಿಯನ್ನೈದುವನು.
ಆಹ ಶಙ್ಖಃ— "ಸುವರ್ಣಸ್ತೇನೋ ರುದ್ರಾಧ್ಯಾಯೀ ಮುಚ್ಯತೇ" ಇತಿ ||
ಶಂಖಸ್ಮೃತಿಯಲ್ಲಿ ಹೇಳಿದೆ— "ಚಿನ್ನವನ್ನು ಕದ್ದವನು ರುದ್ರವನ್ನು ಅಧ್ಯಯನ ಮಾಡಿದರೆ ಆ ಪಾಪವಿಮುಕ್ತನಾಗುತ್ತಾನೆ" ಎಂದು.
ಆಹತುಃ ಅತ್ರಿ-ಅಙ್ಗಿರಸೌ—
ಏಕಾದಶಗುಣಾನ್ ವಾऽಪಿ ರುದ್ರಾನಾವೃತ್ಯ ಧರ್ಮವಿತ್ |
ಮಹಾಪಾಪೈರಪಿ ಸ್ಪೃಷ್ಟೋ ಮುಚ್ಯತೇ ನಾತ್ರ ಸಂಶಯಃ ||
ಇತಿ ||
ಅತ್ರಿ-ಆಂಗಿರಸರು ಹೇಳಿರುವರು— "ಧರ್ಮವಿದನು (ಧರ್ಮವನ್ನರಿತವನು) ರುದ್ರವನ್ನು ೧೧ ಆವೃತ್ತಿ ಜಪಿಸಿದರೆ, ಮಹಾಪಾಪಗಳ ಸಂಪರ್ಕದಿಂದಲೂ ಮುಕ್ತನಾಗುವನು ಎಂಬಲ್ಲಿ ಸಂಶಯವಿಲ್ಲ" ಎಂದು.
ವಾಯುಪ್ರೋಕ್ತಪುರಾಣೇ—
ಯಶ್ಚ ರುದ್ರಾನ್ ಜಪೇನ್ನಿತ್ಯಂ ಧ್ಯಾಯಮಾನೋ ಮಹೇಶ್ವರಮ್ |
ಯಶ್ಚ ಸಾಗರಪರ್ಯನ್ತಾಂ ಸಶೈಲವನಕಾನನಾಮ್ ||
ವಾಯುದೇವನು ಹೇಳಿದ ಪುರಾಣದಲ್ಲಿ ಹೀಗಿದೆ— "ಯಾವನು ನಿತ್ಯವೂ ಮಹೇಶ್ವರನನ್ನು ಧ್ಯಾನಿಸುತ್ತಾ ರುದ್ರಮಂತ್ರಗಳನ್ನು ಜಪಿಸುತ್ತಾನೋ (ಅಂಥವನಿಗೆಂಥ ಫಲ ಸಿಗುವುದೆಂದು ಹೇಳಲಾಗಿದೆ); ಯಾವನು ಸಾಗರದ ವರೆಗಿನ ಗಿರಿಸಮೂಹ-ವನಗಳಿಂದ ಕೂಡಿದ,
ಸರ್ವರತ್ನಗುಣೋಪೇತಾಂ ಸವೃಕ್ಷಜಲಶೋಭಿತಾಮ್ |
ವಿಪ್ರಾಯ ದದ್ಯಾತ್ ವಸುಧಾಂ ಚಾಮೀಕರತರೂಜ್ಜ್ವಲಾಮ್ ||
ಸಕಲ ರತ್ನಾದಿ ಸಂಪದ್ಭರಿತವಾದ, ಗಿಡ-ಮರಗಳು ಹಾಗೂ ಜಲಮೂಲಗಳಿಂದ ಸುಶೋಭಿತವಾದ, ಮತ್ತು ಸುವರ್ಣ / ಚಿನ್ನ -ವೃಕ್ಷಾದಿ ಸಂಪದ್ಭರಿತವಾದ ವಸುಧೆ / ಭೂಮಿ ಯನ್ನು (ವಸು— ಐಶ್ವರ್ಯ, ಸಂಪತ್ತು. ಅದನ್ನು ಧರಿಸಿರುವವಳು ವಸುಧಾ) ವೇದಾಧ್ಯಯನಸಂಪನ್ನನಾದ ವಿಪ್ರನಿಗೆ ದಾನಮಾಡುವನೋ,
ತಸ್ಮಾದಪ್ಯಧಿಕಂ ತಸ್ಯ ಸಕೃದ್ರುದ್ರಜಪಾತ್ ಭವೇತ್ ||
ಅಂತಹ ಭೂದಾನಕ್ಕಿಂತಲೂ ಅಧಿಕವಾದ ಫಲವು ಒಂದು ಬಾರಿಯ ರುದ್ರಜಪದಿಂದ ಉಂಟಾಗುವುದು.
ಮಮಭಾವಂ ಸಮುತ್ಸೃಜ್ಯ ಯಸ್ತು ರುದ್ರಾನ್ ಜಪೇತ್ ಸದಾ |
ಸ ತೇನೈವ ಚ ದೇಹೇನ ರುದ್ರಃ ಸಂಜಾಯತೇ ಧ್ರುವಮ್ ||
ನಾನು, ನನ್ನದೆಂಬ ಮಮಕಾರವನ್ನು ತೊರೆದು ಯಾವನಾದರೋ ಯಾವಾಗಲೂ ರುದ್ರಮಂತ್ರಗಳನ್ನು ಜಪಿಸುತ್ತಾನೋ, ಅಂಥವನು ಖಂಡಿತವಾಗಿಯೂ ಅದೇ ದೇಹದಿಂದಲೇ / ಜನ್ಮದಿಂದಲೇ (ಅಥವಾ ಆ ಜನ್ಮವೇ ಕೊನೆ. ಬಳಿಕ)ರುದ್ರತ್ವವನ್ನು ಹೊಂದುವನು.
ಜಪೇನಾನೇನ ವಿಪ್ರೇನ್ದ್ರಾ ನೃಪಾಶ್ಚಾನ್ಯೇ ದ್ವಿಜಾತಯಃ |
ಹಿತ್ವೈವಂ ಸಕಲಂ ಪಾಪಂ ಗತಾಃ ಶಿವಪುರಂ ಪುರಾ |
ಅಹಂ ಚ ಪರಮೇಶಸ್ಯ ಸಾಮೀಪ್ಯಂ ಲಬ್ಧವಾಂಸ್ತಥಾ ||
ಇತಿ ||
ಹಿಂದೆ ವಿಪ್ರೋತ್ತಮರೂ (ಬ್ರಾಹ್ಮಣರೂ), ರಾಜರೂ (ಕ್ಷತ್ರಿಯರೂ) ಹಾಗೂ ಇತರ ದ್ವಿಜರು (ವೈಶ್ಯರು) ಈ ರೀತಿಯಾಗಿ ತಮ್ಮೆಲ್ಲಾ ಪಾಪಗಳನ್ನೂ ಕಳೆದುಕೊಂಡವರಾಗಿ ಶಿವನ ಸಾನ್ನಿಧ್ಯವನ್ನು ಹೊಂದಿದರು. ಹಾಗೆಯೇ ನಾನೂ ಸಹ ಪರಮೇಶ್ವರನ ಸಾಮೀಪ್ಯವನ್ನು ಪಡೆದೆನು" ಎಂಬುದಾಗಿ.
ತಥಾ ಅನ್ಯತ್ರ—
ಚಮಕಂ ನಮಕಂ ಚೈವ ಪೌರುಷಂ ಸೂಕ್ತಮೇವ ಚ |
ನಿತ್ಯಂ ತ್ರಯಂ ಪ್ರಯುಞ್ಜಾನೋ ಬ್ರಹ್ಮಲೋಕೇ ಮಹೀಯತೇ ||
ಹಾಗೆಯೇ ಬೇರೆಡೆ— "ನಮಕ (ರುದ್ರಪ್ರಶ್ನ), ಚಮಕಪ್ರಶ್ನ ಹಾಗೂ ಪುರುಷಸೂಕ್ತ— ಈ ಮೂರನ್ನು ನಿತ್ಯವೂ ಪಠಿಸುವವನು ಬ್ರಹ್ಮಲೋಕದಲ್ಲಿ ನೆಲೆಯಾಗುವನು".
ತಥಾ—
ಚಮಕಂ ನಮಕಂ ಹೋತೄನ್ ಪುರುಷಸೂಕ್ತಂ ಜಪೇತ್ಸದಾ |
ಪ್ರವಿಶೇತ್ ಸ ಮಹಾದೇವಂ ಗೃಹಂ ಗೃಹಪತಿರ್ಯಥಾ ||
ಅಂತೆಯೇ, ಹೋಮಕ್ಕೆ ಪ್ರಯೋಗಿಸಲು ಯೋಗ್ಯವಾದ ನಮಕ-ಚಮಕ-ಪುರುಷಸೂಕ್ತಗಳನ್ನು ಯಾವಾಗಲೂ ಜಪಿಸುವವನು ಮನೆಯ ಯಜಮಾನನು ಹೇಗೆ ತನ್ನದೇ ಮನೆಯನ್ನು ಸುಕರವಾಗಿ ಪ್ರವೇಶಿಸಬಲ್ಲನೋ ಅಂತೆಯೇ ಮಹಾದೇವನನ್ನೇ ಸುಲಲಿತವಾಗಿ ಪ್ರವೇಶಿಸಿ ಶಿವೈಕ್ಯನಾಗುವನು.
ತಥಾ—
ಭಸ್ಮದಿಗ್ಧಶರೀರಸ್ತು ಭಸ್ಮಶಾಯೀ ಜಿತೇನ್ದ್ರಿಯಃ |
ಸತತಂ ರುದ್ರಜಾಪ್ಯೋऽಸೌ ಪರಾಂ ಮುಕ್ತಿಮವಾಪ್ಸ್ಯತಿ ||
ರೋಗವಾನ್ ಪಾಪವಾಂಶ್ಚೈವ ರುದ್ರಾನ್ ಜಪ್ತ್ವಾ ಜಲೇ ಸ್ಥಿತಃ |
ರೋಗಾತ್ ಪಾಪಾತ್ ವಿನಿರ್ಮುಕ್ತೋ ಮಹತೀಂ ಶ್ರಿಯಮಶ್ನುತೇ ||
ಅಂತೆಯೇ— "ಭಸ್ಮಲೇಪಿತವಾದ ಶರೀರವುಳ್ಳವನೂ, ಭಸ್ಮವನ್ನೇ ತನ್ನ ಶಯನವನ್ನಾಗಿಸಿಕೊಂಡವನೂ, ಇಂದ್ರಿಯಗಳನ್ನು ಗೆದ್ದವನೂ ಎಡೆಬಿಡದೆ ರುದ್ರವನ್ನು ಜಪಿಸುವವನಾದರೆ ಪರಮಮುಕ್ತಿಯನ್ನು ಪಡೆಯುವನು. ರೋಗಿಯೂ, ಪಾಪಿಯೂ ಆದವನು ನೀರಿನಲ್ಲಿ ನಿಂತು ರುದ್ರಮಂತ್ರಗಳನ್ನು ಜಪಿಸಿದರೆ ರೋಗ-ಪಾಪಗಳನ್ನು ಕಳೆದುಕೊಂಡು ಮಹದೈಶ್ವರ್ಯವನ್ನು ಹೊಂದುತ್ತಾನೆ.
ಆಹ ಶಙ್ಖಃ— "ರಹಸಿ ಕೃತಾನಾಂ ಮಹಾಪಾತಕಾನಾಮಪಿ ಶತರುದ್ರೀಯಂ ಪ್ರಾಯಶ್ಚಿತ್ತಮ್" ಇತಿ ||
ಶಂಖಸ್ಮೃತಿಯಲ್ಲಿ ಹೇಳಿದೆ— "ಗುಟ್ಟಿನಲ್ಲಿ ಮಾಡಿದ ಮಹಾಪಾಪಗಳಿಗೂ ಶತರುದ್ರೀಯವು ಪ್ರಾಯಶ್ಚಿತ್ತವು" ಎಂದು.
ಆಹ ಆಪಸ್ತಮ್ಬಃ— "ಯಸ್ಯ ರುದ್ರಃ ಪ್ರಜಾಂ ಪಶೂನ್ ವಾ ಅಭಿಮನ್ಯೇತ ಉದಙ್ ಪರೇತ್ಯ ರುದ್ರಾನ್ ಜಪನ್ ಚರೇತ್ ಇತಿ ಅಯಜ್ಞಸಂಯುಕ್ತಃ ಕಲ್ಪಃ" (ಆಪಸ್ತಮ್ಬಶ್ರೌತಸೂತ್ರ ೧೭.೧೧.೬) ಇತಿ ||
ಆಪಸ್ತಂಬರು ತಮ್ಮ ಸ್ಮೃತಿಯಲ್ಲಿ ಹೇಳಿರುವರು— "ಯಾವನು ರುದ್ರಮಂತ್ರಗಳನ್ನು ಜಪಿಸುತ್ತಾ ಉತ್ತರದಿಕ್ಕಿಗೆ ಮುಖಮಾಡಿ ಸಂಚರಿಸುತ್ತಾನೋ ಆತನ ಸಂತಾನವನ್ನೂ, ಪಶುಗಳನ್ನೂ ರುದ್ರನು ನೋಡಿಕೊಳ್ಳುತ್ತಾನೆ, ಕಾಪಾಡುತ್ತಾನೆ ಎಂಬುದು ಶತರುದ್ರೀಯಹವನದ ಹೊರತಾದ ಪ್ರಯೋಗದ ಪರಿಕಲ್ಪನೆ" ಎಂಬುದಾಗಿ.
ಈಶಾನಯಜ್ಞೇ ಚ— "ಅತ್ರ ರುದ್ರಾನ್ ಜಪೇತ್ ಪ್ರಥಮೋತ್ತಮೌ ವಾ ಇತಿ" | ಅಯಂ ಚ ಬ್ರಹ್ಮವಿದ್ಯಾರೂಪತ್ವಾತ್ ಉಪನಿಷನ್ಮನ್ತ್ರರಾಶಿಃ ಪ್ರಶ್ನಃ | ಅತ ಏವ ರಹಸ್ಯಪ್ರಕರಣೇ ಆಮ್ನಾಯತೇ | ಬ್ರಾಹ್ಮಣವಿನಿಯೋಗಾನುರೋಧೇನ ತು ಅತ್ರ ವ್ಯಾಚಕ್ಷ್ಮಹೇ |
ಹಾಗೆಯೇ ಈಶಾನಯಜ್ಞದಲ್ಲಿ— "ಇಲ್ಲಿ ರುದ್ರರನ್ನು ಜಪಿಸಬೇಕು ಪ್ರಥಮ ಅಥವಾ ಉತ್ತಮ ದೇವತೆ ಎಂಬುದಾಗಿ". ಇದು (ರುದ್ರಾಧ್ಯಾಯವು) ಬ್ರಹ್ಮವಿದ್ಯೆಯ ಸ್ವರೂಪದ್ದಾಗಿ, ಉಪನಿಷತ್ತಿನ ಮಂತ್ರರಾಶಿಯಂತಹುದೇ ಪ್ರಶ್ನ / ಅಧ್ಯಾಯವಾಗಿದೆ. ಹಾಗಾಗಿಯೇ ಇದನ್ನು ರಹಸ್ಯಪ್ರಕರಣದಲ್ಲಿ ಹೇಳಿದೆ. ಆದರೂ, ಇದರ ವಿನಿಯೋಗವನ್ನು ಬ್ರಾಹ್ಮಣಭಾಗವು ಹೇಳಿರುವುದರಿಂದ, ಇಲ್ಲಿಯೂ ಅದರ ವಿನಿಯೋಗವನ್ನು ಹೇಳುತ್ತೇವೆ.
ಏಕಶತಮ್ ಅಧ್ವರ್ಯುಶಾಖಾಃ, ತಾಸು ಸರ್ವಾಸು ಚ ಇಯಂ ರುದ್ರೋಪನಿಷತ್ ಆಮ್ನಾಯತೇ | ಶತಂ ರುದ್ರಾಃ ದೇವತಾಃ ಅಸ್ಯ ಇತಿ ಶತರುದ್ರೀಯಮುಚ್ಯತೇ | … | ಅನಯಾ ಚ ರುದ್ರೋಪನಿಷದಾ ಬ್ರಹ್ಮವಿದ್ಯಾ ಪ್ರತಿಪಾದ್ಯತೇ | ಬ್ರಹ್ಮಣಃ ಚ ತ್ರೀಣಿ ರೂಪಾಣಿ ಸನ್ತಿ | ಏಕಂ ಕಾರ್ಯರೂಪಂ ಸರ್ವ-ಉಪಾದಾನತಯಾ ಸರ್ವಾತ್ಮಕಮ್ | ಇತರತ್ ಪುರುಷಾಖ್ಯಂ ಸೃಷ್ಟಿಸ್ಥಿತಿಸಂಹಾರನಿಮಿತ್ತಮ್ | ದ್ವಯಮ್ ಅಪಿ ಅವಿದ್ಯಾತ್ಮಕಮ್ | ಅನ್ಯತ್ ಪರಂ ರೂಪಂ ನಿರ್ಗುಣಂ ನಿರಞ್ಜನಂ ಸತ್ಯಜ್ಞಾನಾನನ್ದಲಕ್ಷಣಂ ತದ್ ಏತದ್ ಋಷಿಣಾ ಅಪಿ ಉಕ್ತಮ್ "ವಿಶ್ವಂ ಭೂತಂ ಭುವನಂ ಚಿತ್ರಂ ಬಹುಧಾ ಜಾತಂ ಜಾಯಮಾನಂ ಚ ಯತ್ | ಸರ್ವೋ ಹ್ಯೇಷ (ಹಿ ಏಷಃ) ರುದ್ರಃ" (ತೈ.ಆರಣ್ಯಕ ೧೦.೧೬) ಇತಿ | "ಯೋ ದೇವಾನಾಂ ಪ್ರಥಮಂ ಪುರಸ್ತಾತ್ ವಿಶ್ವಾಧಿಕೋ ರುದ್ರೋ ಮಹರ್ಷಿಃ" (ತೈ.ಆ. ೧೦.೧೦) ಇತಿ ಚ | "ನಿಷ್ಕಲಂ ನಿಷ್ಕ್ರಿಯಂ ಶಾನ್ತಂ ನಿರವದ್ಯಂ ನಿರಞ್ಜನಮ್ " (ಶ್ವೇತಾಶ್ವತರೋಪನಿಷತ್ ೬.೧೯); "ನ ತಸ್ಯ ಕಾರ್ಯಂ ಕರಣಂ ಚ…" (ಶ್ವೇ.ಉ. ೬.೮) ಇತಿ ಚ |
ಅಧ್ವರ್ಯುವೇದವೆನಿಸಿದ ಯಜುರ್ವೇದಕ್ಕೆ ೧೦೧ ಶಾಖೆಗಳು; ಅವೆಲ್ಲವುಗಳಲ್ಲೂ ಈ ರುದ್ರೋಪನಿಷತ್ ಹೇಳಲ್ಪಟ್ಟಿದೆ. ನೂರು ರುದ್ರರೇ ದೇವತೆಗಳು ಈ ಮಂತ್ರಭಾಗಕ್ಕೆಂಬುದರಿಂದಾಗಿ ಶತರುದ್ರೀಯವೆನಿಸಿದೆ….ಈ ರುದ್ರೋಪನಿಷತ್ತಿನಿಂದ ಬ್ರಹ್ಮವಿದ್ಯೆಯು ಪ್ರತಿಪಾದಿತವಾಗಿದೆ. ಹಾಗೆಯೇ, ಬ್ರಹ್ಮಕ್ಕೆ ಮೂರು ರೂಪಗಳಿವೆ— (೧) ಕಾರ್ಯಬ್ರಹ್ಮ— ಎಲ್ಲಕ್ಕೂ ಮೂಲವಾಗಿರುವುದರಿಂದ ಎಲ್ಲರೊಳಗಿರುವಂಥದ್ದು. (೨) ಇನ್ನೊಂದು ಪರಮಪುರುಷನಾಮಕವಾಗಿ, ಸೃಷ್ಟಿ-ಸ್ಥಿತಿ-ಸಂಹಾರನಿಮಿತ್ತವಾಗಿರುವುದು. ಇವೆರಡೂ ರೂಪಗಳೂ ಅವಿದ್ಯಾತ್ಮಕವಾದುವು. (೩) ಇನ್ನೊಂದು ಶ್ರೇಷ್ಠರೂಪವು ನಿರ್ಗುಣವೂ (ಸತ್ತ್ವ-ರಜ-ತಮಗಳೆಂಬ ತ್ರಿಗುಣಗಳಿಂದ ಅತೀತವೂ), ನಿರಂಜನವೂ (ಅಂಜನ— ಕಾಡಿಗೆ, ಕಪ್ಪು. ನಿರಂಜನವೆಂದರೆ ಅಂಧಕಾರರಹಿತವಾಗಿ ಪೌರ್ಣಮಿಯಂತೆ ಬೆಳಗುವಂಥದ್ದು), ಸತ್ಯ - ಜ್ಞಾನ - ಆನಂದ ಲಕ್ಷಣವುಳ್ಳದ್ದು. ಅದರ ಬಗ್ಗೆ ವೇದ-ಋಷಿಯಿಂದಲೂ ಹೀಗೆ ಹೇಳಲ್ಪಟ್ಟಿದೆ— "ಎಲ್ಲ ಚರಾಚರಗಳೂ, ಭುವನಗಳೂ / ಲೋಕಗಳೂ— ಹೀಗೆ ಚಿತ್ರವಿಚಿತ್ರವಾಗಿ, ಸೃಷ್ಟಿವೈವಿಧ್ಯವಾಗಿ ಬಹುವಿಧವಾಗಿ ಜನಿಸಿದ್ದೂ, ಜನಿಸಲಿರುವುದೂ ಯಾವ್ಯಾವುದಿದೆಯೋ, ಅದೆಲ್ಲವೂ ಈ ರುದ್ರನೇ" (ತೈತ್ತಿರೀಯ ಆರಣ್ಯಕ ೧೦|೧೬) ಎಂಬುದಾಗಿ. ಹಾಗೆಯೇ, "ಯಾವನು ದೇವರುಗಳಲ್ಲಿ ಪ್ರಪ್ರಥಮನೂ, ಬಹುಮೊದಲಿನವನೂ, ಬಹು ಮುಂದಿನವನೂ, ಸಮಗ್ರ ವಿಶ್ವಕ್ಕಿಂತಲೂ ಅಧಿಕನೂ ಆದವನಿರುವನೋ ಆತನೇ ಸಮಸ್ತ ಸೃಷ್ಟಿಯನ್ನೇ ತನ್ನ ಸಂಕಲ್ಪದಲ್ಲೇ ಸೃಷ್ಟಿಗೂ ಮೊದಲೇ ದರ್ಶನ ಮಾಡಿ ಮೊದಲ ಮಹಾನ್ ಋಷಿಯೆನಿಸಿದ ರುದ್ರನು" (ತೈತ್ತಿರೀಯಾರಣ್ಯಕ ೧೦|೧೦) ಎಂದು. ಅಲ್ಲದೆ, "ನಿಷ್ಕಲನೂ / ಕಲೆ ಅಥವಾ ಅಂಶರಹಿತನಾದ ಪರಿಪೂರ್ಣ ಅಖಂಡನೂ / ನಿರಾಕಾರನೂ, ನಿಷ್ಕ್ರಿಯನೂ / ಸ್ಥಾಣುವೂ / ಜಡನೂ / ಬದಲಾವಣೆಯಿಲ್ಲದೆ ನಿಶ್ಚಲನೂ, ಕೇವಲ ಪ್ರಕೃತಿ / ಶಕ್ತಿ / ಮಾಯೆಯ ಪ್ರವರ್ತನಮಾತ್ರದಿಂದ ಪರಿವರ್ತನೀಯವೂ, ನಶ್ವರವೂ ಆದ ಸೃಷ್ಟಿಗೆ ಕಾರಣನೂ, ಪ್ರಶಾಂತರೂಪಿಯೂ / ಚಿತ್ತಚಾಂಚಲ್ಯರಹಿತನಾಗಿ ಮನಃಪ್ರಶಮನವುಳ್ಳವನೂ / ಉದ್ವೇಗರಹಿತನೂ, ನಿರವದ್ಯನೂ / ಅವದ್ಯನಲ್ಲದವನೂ (ಅ-ವದ್ಯವೆಂದರೆ ವದ್ಯವಲ್ಲದ್ದು. ವದ್ಯವೆಂದರೆ ಹೇಳಲು ಯೋಗ್ಯ, ವಕ್ತುಂ ಯೋಗ್ಯಮ್. ಹೀಗಾಗಿ ಅವದ್ಯವೆಂದರೆ ಹೇಳಬಾರದ್ದು, ನಿಂದೆ, ತೆಗಳಿಕೆ) / ನಿಂದನೆಗೆ ಅರ್ಹನಲ್ಲದವನೂ / ತೆಗಳಿಕೆಗೆ ಯೋಗ್ಯನಲ್ಲದವನೂ, ನಿರಂಜನಸ್ವರೂಪಿಯೂ / ಪರಂಜ್ಯೋತಿಸ್ವರೂಪಿಯೂ / ಅಜ್ಞಾನಾಂಧಕಾರರಹಿತನೂ / ಜ್ಞಾನಜ್ಯೋತಿಸ್ವರೂಪನೂ ಆಗಿರುವವನು" (ಶ್ವೇತಾಶ್ವತರ ಉಪನಿಷತ್ ೬|೧೯); "ಆತನಿಗೆ ಕಾರ್ಯ / ಮಾಡಬೇಕೆಂಬ ಕರ್ತವ್ಯವಾವುದೂ ಇಲ್ಲ; ಕರಣ / ಇಂದ್ರಿಯ / ಉಪಕರಣ / ಸಾಧನ-ಸಲಕರಣೆಗಳ ಅವಶ್ಯಕತೆಯೂ ಆತನಿಗಿಲ್ಲ. ಕೇವಲ ಆತನ ಸಂಕಲ್ಪಮಾತ್ರದಿಂದ ಸರ್ವವೂ ಘಟಿಸುವುದು" (ಶ್ವೇತಾಶ್ವತರ ಉಪನಿಷತ್ ೬|೮) ಎಂಬುದಾಗಿ.
ಉಕ್ತಂ ಚ—
"ಸಂಸಾರೀ ಚಿದ್-ಅಚಿದ್-ಭೋಗ್ಯಃ ಕ್ವಚಿತ್ ಕ್ವಚಿದ್ ಅನಾವಿಲಃ |
ಜಯತಿ ಅನಾದಿನಿಧನೋ ಮಹಾದೇವೋ ಮಹಾರ್ಣವೇ"
ಇತಿ |
ಹಾಗೂ ಹೇಳಿದೆ— " ಎಲ್ಲ ಚರಾಚರಾಂತರ್ಗತನಾಗಿ ಸಂಸಾರವೆಂಬ ಮಹಾಸಾಗರದಲ್ಲಿ ಸಂಸಾರಿಯಾಗಿದ್ದು, ವಿದ್ಯೆ-ಅವಿದ್ಯೆಗಳೆಲ್ಲವನ್ನೂ ಅಷ್ಟೋ ಇಷ್ಟೋ ಭೋಗಿಸಿದರೂ ಅವುಗಳ ಲೇಪವಿರದಂತೆ ನಿರ್ಮಲನಾಗಿ (ಅನಾವಿಲಃ— ನ ಆವಿಲಃ ಮಲಃ ವಾ ಅಸ್ಯ ಇತಿ— ಕಲ್ಮಷರಹಿತನು) ಜನ್ಮ / ಜನನ / ಆದಿಯೂ, ನಿಧನ / ಮರಣ / ಅಂತ್ಯವೂ ಇರದೆ ಅನಾದಿ-ನಿಧನನೆನಿಸಿದ ದೇವದೇವನಾಗಿ ಮಹಾದೇವನೆನಿಸಿದ ಪರಶಿವನು ಸದಾ ಜಯಶೀಲನಾಗುವನು" ಎಂದು.
ಅಪರಂ ಚ—
"ಮೂರ್ತ್ಯಷ್ಟಕಮಧಿಷ್ಠಾಯ ಬಿಭರ್ತೀದಂ ಚರಾಚರಮ್ | ಆತ್ಮತ್ರಯಮಧಿಷ್ಠಾಯ ಸೃಷ್ಟ್ಯಾದಿ ಪ್ರಕರೋತಿ ಸಃ " (ಇತಿ) |
ಅಲ್ಲದೆ ಬೇರೆಡೆ— "ಪಂಚಮಹಾಭೂತಗಳು, ಸೂರ್ಯ, ಚಂದ್ರ, ಆತ್ಮಾ / ಯಜಮಾನ— ಎಂಬೀ ಅಷ್ಟಮೂರ್ತಿ ಸ್ವರೂಪನಾದ ಭಗವಂತನು / ಮಹಾದೇವನು / ಸದಾಶಿವನು ಈ ಸೃಷ್ಟಿಯ ಸಕಲ ಚರಾಚರಗಳನ್ನೂ ತನ್ನಲ್ಲಿ ಭರಣ / ಧಾರಣ ಮಾಡಿಕೊಂಡಿರುವನು. ಆತನೇ ಚತುರ್ಮುಖ ಬ್ರಹ್ಮಾ, ಮಹಾವಿಷ್ಣು ಹಾಗೂ ರುದ್ರ— ಎಂಬೀ ಮೂರು ರೂಪಗಳನ್ನು ಆಶ್ರಯಿಸಿಕೊಂಡು ಕ್ರಮವಾಗಿ ಸೃಷ್ಟಿ-ಸ್ಥಿತಿ-ಲಯಗಳನ್ನು ಪ್ರಕೃಷ್ಟವಾಗಿ / ಚೆನ್ನಾಗಿ ನಿರ್ವಹಿಸುತ್ತಾನೆ" (ಎಂಬುದಾಗಿ ಹೇಳಿದೆ).
ತತ್ರ ಯೋ ಅಸೌ ಸಂಹಾರಕರ್ತಾ ತಂ ಸರ್ವದಾ ದೇವೋ ಅಧಿತಿಷ್ಠತಿ | ಕಾರ್ಯಕಾಲೇ ತು ಅನ್ಯಾ | ಸಾ ಚ ದೇವಸ್ಯ ಘೋರಾ ತನೂಃ, ಅನ್ಯಾ ಶಿವಾ | ಯಥಾ ಉಕ್ತಮ್— "ರುದ್ರೋ ವಾ ಏಷ ಯದಗ್ನಿಃ ತಸ್ಯ ಏತೇ ತನುವೌ ಘೋರಾ ಅನ್ಯಾ, ಶಿವಾ ಅನ್ಯಾ ಯತ್-ಶತರುದ್ರೀಯಂ ಜುಹೋತಿ ಯ ಏವ ಅಸ್ಯ ಘೋರಾ ತನೂಃ ತಾಂ ತೇನ ಶಮಯತಿ" (ತೈ.ಸಂ. ೫.೭.೩) ಇತ್ಯಾದಿ ಚ |
ಅಲ್ಲಿ (ತ್ರಿಮೂರ್ತಿಗಳಲ್ಲಿ) ಯಾವ ಈ ಸಂಹಾರಕರ್ತನಾದ ರುದ್ರನಿರುವನೋ ಆತನನ್ನು ಯಾವಾಗಲೂ ದೇವದೇವನು (ಪರಮಾತ್ಮನು / ಸದಾಶಿವನು) ಆಶ್ರಯಿಸಿ ನೆಲೆಸಿರುತ್ತಾನೆ. ಆಯಾ ಸೃಷ್ಟಿ, ಸ್ಥಿತ್ಯಾದಿ ಕಾರ್ಯಗಳ ಸಂದರ್ಭದಲ್ಲಿ ಮಾತ್ರ ಚತುರ್ಮುಖ, ವಿಷ್ಣುವೇ ಮುಂತಾದ ರೂಪದಲ್ಲಿರುತ್ತಾನೆ. ಅಂತಹ ರುದ್ರನಲ್ಲಿರುವುದಾದರೋ ಆ ಪರಮಾತ್ಮನ ಘೋರವಾದ / ಸಂಹಾರಕಾರಿ / ಪ್ರಲಯಕಾರಿ ಸ್ವರೂಪವು / ತನುವು, ಉಳಿದವುಗಳೆಲ್ಲ ಶಿವ / ಶಾಂತ / ಮಂಗಲ ಸ್ವರೂಪಗಳು. ಅಂತೆಯೇ, ಹೀಗೆ ಹೇಳಿದೆ— "ರುದ್ರನು ಯಾವ ಈ ಪ್ರತ್ಯಕ್ಷವಾದ ಅಗ್ನಿಯಿರುವನೋ ಅವನೇ. ಆತನ ಇಂತಹ ಅಗ್ನಿಸ್ವರೂಪಗಳು ಘೋರವಾದುವು. ಅಲ್ಲದೆ ಇತರ ಶಾಂತಸ್ವರೂಪಗಳೂ ಇವೆ. ಯಾವ ಶತರುದ್ರೀಯಮಂತ್ರಗಳಿಂದ ರುದ್ರನನ್ನು ಉದ್ದೇಶಿಸಿ ಹೋಮಿಸಲಾಗುತ್ತದೋ ಅದರಿಂದ, ಯಾವ ಈತನ ಘೋರರೂಪವಿದೆಯೋ ಅದನ್ನು ಪ್ರಶಮನಗೊಳಿಸಿ, ಪ್ರಶಾಂತಗೊಳಿಸಲಾಗುತ್ತದೆ (ಹೀಗಾಗಿ ಶತರುದ್ರೀಯಕ್ಕೆ ರುದ್ರಪ್ರಶಾಂತೀಕರಣಸೂಕ್ತವೆಂದೂ ಹೆಸರು) (ತೈತ್ತಿರೀಯಸಂಹಿತಾ ೫|೭|೩) ಇತ್ಯಾದಿ.
ಶಕ್ತಿಃ ಸರ್ವದಾ ತಸ್ಯ ಸಹಕಾರಿಣೀ | ತಸ್ಯ ಸಂಹಾರಕರ್ತೃ-ಪ್ರಭೃತಯೋ ದೇವಸ್ಯ ಘೋರಾಃ ತನವಃ | ತಾಭ್ಯೋ ಭಯಾದಿನಿವೃತ್ತ್ಯರ್ಥಂ ಪ್ರಥಮೇನ ಅನುವಾಕೇನ ತಾದೃಶಂ ದೇವಂ, ತಸ್ಯ ಸಂಹಾರಕಾರಿಣೀಂ ಚ ತನುಂ "ನಮಃ" ಇತ್ಯಾದಿಭಿಃ ನಮಸ್ಕೃತ್ಯ ಪ್ರಸಾದಯತಿ | ಯಥೋಕ್ತಮ್— "ಯೈವಾಸ್ಯ ಘೋರಾ ತನೂಸ್ತಾಂ ತೇನ ಶಮಯತಿ ಯದ್ ವಸೋರ್ಧಾರಾಂ ಜುಹೋತಿ ಯೈವಾಸ್ಯ ಶಿವಾ ತನೂಸ್ತಾಂ ತೇನ ಪ್ರೀಣಾತಿ" (ತೈ.ಸಂ.೫.೭.೩) ಇತಿ |
ಶಕ್ತಿಯು / ದೇವಿಯು / ಪಾರ್ವತಿಯು ಆತನ (ಶಿವನ) ಸಹಕಾರಿಣಿಯು. ಸಂಹಾರಕರ್ತೃ (ರುದ್ರ) ಮುಂತಾದವು ಆ ದೇವನ ಘೋರರೂಪಗಳು. ಅಂತಹ ಘೋರರೂಪಗಳಿಂದ ಭಯವೇ ಮುಂತಾದವುಗಳ ನಿವೃತ್ತಿಗಾಗಿ (ಪರಿಹಾರಕ್ಕಾಗಿ) ರುದ್ರಪ್ರಶ್ನದ ಪ್ರಥಮ ಅನುವಾಕದಿಂದ ಅಂತಹ ದೇವನನ್ನು ಹಾಗೂ ಆತನ ಸಂಹಾರಕಾರಿಯಾದ ರೂಪವನ್ನು "ನಮಃ" ಇತ್ಯಾದಿಗಳಿಂದ ನಮಸ್ಕರಿಸಿ ಪ್ರಸನ್ನಗೊಳಿಸುತ್ತಾನೆ. ಹೀಗೆ ಹೇಳಿದೆ— "ಯಾವುದು ಇವನ ಘೋರ / ರೌದ್ರರೂಪವೋ ಅದನ್ನು ಈ ರುದ್ರಚಮಕಪೂರ್ವಕ ವಸೋರ್ಧಾರಾಮುಖೇನ ಹೋಮಿಸಿ ಪ್ರಶಾಂತಗೊಳಿಸಿದ ಬಳಿಕ, ಯಾವುದು ಈತನ ಶಾಂತ / ಶಿವ / ಮಂಗಲಸ್ವರೂಪವಾಗುವುದೋ ಅದನ್ನೂ ಪ್ರಸನ್ನೀಕರಿಸುತ್ತಾನೆ" (ತೈತ್ತಿರೀಯಸಂಹಿತೆ ೫|೭|೩) ಎಂಬುದಾಗಿ.
ತತಃ ತಾಮ್ ಉಪಸಂಹಾರ್ಯ ದ್ವಿತೀಯಪ್ರಭೃತಿಭಿಃ ಅಷ್ಟಾಭಿಃ ಅನುವಾಕೈಃ ದೇವಸ್ಯ ವೈಶ್ವರೂಪ್ಯೇಣ ಸ್ತುತಿನಮಸ್ಕಾರೌ ಕರೋತಿ | ಏವಂ ಹಿ ದೇವಃ ಸುತರಾಂ ಪ್ರಸೀದತಿ ಇತಿ ತತೋ ದಶಮ-ಏಕಾದಶಾಭ್ಯಾಮ್ ಅಭಯಂ ಯಾಚತೇ ಇತಿ ಮಹಾವಾಕ್ಯಾರ್ಥಃ ||
ಬಳಿಕ, ಪ್ರಥಮಾನುವಾಕವನ್ನು ಉಪಸಂಹಾರಮಾಡಿ, ೨ನೆಯ ಅನುವಾಕದಿಂದ ತೊಡಗಿ ೮ ಅನುವಾಕಗಳಿಂದ ದೇವನ ವಿಶ್ವರೂಪದ (ಸರ್ವರೂಪತ್ವದ) ಸ್ತುತಿ-ನಮಸ್ಕಾರಗಳನ್ನು ಮಾಡುತ್ತಾನೆ. ಹೀಗೆ ದೇವನು ಖಂಡಿತವಾಗಿಯೂ ಪ್ರಸನ್ನನಾಗುವನೆಂದು (ಒಲಿಯುವನೆಂದು) ತಿಳಿದು, ಅನಂತರ ೧೦ನೆಯ ಹಾಗೂ ೧೧ನೆಯ ಅನುವಾಕಗಳಿಂದ ಆತನ ಅಭಯವನ್ನು ಯಾಚಿಸುತ್ತಾನೆ ಎಂಬುದು ಈ ರುದ್ರೋಪನಿಷತ್ತೆಂಬ ಮಹಾವಾಕ್ಯದ ಅರ್ಥವು.
ಕೇಚಿತ್ ಆಹುಃ— ಪ್ರಥಮೇನ ಅನುವಾಕೇನ ಕ್ರುದ್ಧಂ ದೇವಂ ಪ್ರಸಾದ್ಯ ತತಃ ಅಷ್ಟಾಭಿಃ ಅನುವಾಕೈಃ ಕಿಮ್ ಅಧಿಷ್ಠಾನಮ್ ಅಧಿಷ್ಠಾಯ ದೇವಃ ತಿಷ್ಠತಿ ಇತಿ ಅಜಾನನ್ ಸರ್ವಂ ಚರಾಚರಂ ತದ್-ಅಧಿಷ್ಠಾನ-ಶಙ್ಕಯಾ ನಮಸ್ಕೃತ್ಯ ಆನ್ತ್ಯಾಭ್ಯಾಮ್ ಅಭಯಂ ಪ್ರಾರ್ಥಯತೇ | ದೇವೋ ಹಿ ಪರಮ-ಸ್ವಾತನ್ತ್ರ್ಯಭೂಮಿಃ | ಕಿಂಚಿತ್ ಕಿಂಚಿತ್ ಅಧಿಷ್ಠಾಯ ಜಗತಃ ನಿಗ್ರಹ-ಅನುಗ್ರಹೌ ಕರೋತಿ |
ಕೆಲವರು ಹೇಳುತ್ತಾರೆ— ಮೊದಲ ಅನುವಾಕದಿಂದ ಕ್ರೋಧದಿಂದ ಕೂಡಿದ ದೇವನನ್ನು ಪ್ರಸನ್ನೀಕರಿಸಿ, ಅನಂತರದ ೮ ಅನುವಾಕಗಳಿಂದ ಯಾವ ಯಾವ ರೂಪಗಳನ್ನು ಆಶ್ರಯಿಸಿ ದೇವನು ಸಾನ್ನಿಧ್ಯ ವಹಿಸಿದ್ದಾನೆ ಎಂದರಿತು ಎಲ್ಲ ಚರಾಚರವೂ ಆತನ ನಿವಾಸಸ್ಥಾನಗಳೆಂಬ ಭಾವದಿಂದ ನಮಸ್ಕರಿಸಿ, ಕೊನೆಯ ೧೦, ೧೧ನೆಯ ಅನುವಾಕಗಳೆರಡರಿಂದ ಅಭಯವನ್ನು ಪ್ರಾರ್ಥಿಸಲಾಗಿದೆ. ದೇವನಾದರೋ ಅತ್ಯಂತವಾಗಿ ಸರ್ವತಂತ್ರ-ಸ್ವ-ತಂತ್ರನು (ಯಾರ ತಂತ್ರಕ್ಕೂ / ಅಂಕೆಗೂ ಒಳಪಡದೆ ಎಲ್ಲದಕ್ಕಿಂತಲೂ ಬೇರೆಯಾದ ತನ್ನದೇ ತಂತ್ರಕ್ಕೆ / ಅಧಿಕಾರಕ್ಕೆ ಒಳಪಟ್ಟವನು). ಆತನು (ಹೀಗಿದ್ದುಕೊಂಡೇ) ಅಣು-ರೇಣು (ಧೂಳಿನ ಕಣ)-ತೃಣ (ಹುಲ್ಲುಕಡ್ಡಿ)-ಕಾಷ್ಠಾದಿ (ಕಟ್ಟಿಗೆ / ಸೌದೆಯೇ ಮೊದಲಾದ) ಸೃಷ್ಟಿಯಲ್ಲಿ ಏನೇನಿದೆಯೋ ಅದೆಲ್ಲದರೊಳಗೂ ಇದ್ದು ಜಗತ್ತಿನ ನಿಗ್ರಹ (ದುಷ್ಟನಿಗ್ರಹ, ಸಂಹಾರ, ಲಯ)- ಅನುಗ್ರಹ (ಸೃಷ್ಟಿ, ಸ್ಥಿತಿ, ಮುಕ್ತಿ, ಕೃಪೆ) ಗಳೆರಡನ್ನೂ ಮಾಡುತ್ತಾನೆ.
ತಥಾ ಹಿ— ಯಕ್ಷರೂಪೇಣ ಆವಿರ್ಭೂಯ ದೇವಾನ್ ವ್ಯಾಮೋಹಯಾಮಾಸ | ವಿಟವೇಷಧಾರೀ ಸಪತ್ನೀಕಾನ್ ಋಷೀನ್ ವ್ರತಾದ್ ಭ್ರೇಷಯಾಮಾಸ | ಕಿರಾತವೇಷಾಲಂಕೃತಃ ಪಾಂಡುಸುತೇನ ಸಹ ಚಿಕ್ರೀಡ | ಭೈರವಬೀಜ-ವಪುಷಾ ಕಥಂಚಿತ್ ವೇಷಧಾರಿಣ್ಯಾ ದೇವ್ಯಾ ಸಹ ಗಜಾನನಂ ಜನಯಾಮಾಸ | ಐನ್ದ್ರರೂಪೇಣ ಕಂಚಿದ್ ಭೃತ್ಯಂ ತಪಸಃ ಚ್ಯಾವಯಿತುಮ್ ಇಯೇಷ | ಅರ್ಭಕರೂಪೇಣ ದೇವ್ಯಾ ಉತ್ಸಂಗಮ್ ಅಧಿಶಿಶ್ಯೇ | ಔಲೂಕೇನ ವಪುಷಾ ಕಸ್ಮೈಚಿತ್ ಋಷಯೇ ಜ್ಞಾನಮ್ ಉಪದಿದೇಶ | ಉನ್ಮತ್ತವೇಷಭೂಷಿತೋ ದೇವೋತ್ತಮಾಯ ಆತ್ಮಪ್ರಜನನಮ್ ಅಲಂಕೃತಂ ಜಗತ್ಕಾರಣತ್ವೇನ ದರ್ಶಯಾಮಾಸ | ಸಾಪರಾಧಮ್ ಆತ್ಮಾನಂ ಮಾರಯಿತುಕಾಮಂ ಕಂಚಿದ್ ಭೃತ್ಯಂ ನಿವಾರಯಿತುಂ ವಸ್ತ್ರನಿರ್ಣೇಜಮಾಶ್ಮನಃ ಪ್ರಾದುರ್ಬಭೂವ | ಭೂ-ವಿವರಾದ್ ಭ್ರಷ್ಟಂ ಹವಿಃ ಕಸ್ಯಚಿತ್ ತತ್ರೈವ ಕೃತಸನ್ನಿಧಾನೋ ಬುಭುಜೇ | ಏವಂ ಸ್ವ-ಅಭಿಮತ-ವಿವಿಧ-ವೇಷ-ವಿಗ್ರಹ-ಪರಿಗ್ರಹೇಣ ಕ್ರೀಡತೋ ದೇವದೇವಸ್ಯ ಲೀಲಾಯಿತಮ್ ಇದಂ ವಿಶ್ವಂ ವರ್ತತೇ | ಅತೋ ವೈಶ್ವರೂಪೇಣ ಸ್ತುತ್ವಾ ನಮಸ್ಕರೋತಿ |
ಹಾಗಾಗಿ— ಯಕ್ಷರೂಪದಿಂದ ಆವಿರ್ಭವಿಸಿ ಇಂದ್ರಾದಿದೇವತೆಗಳನ್ನು ವ್ಯಾಮೋಹಕ್ಕೊಳಪಡಿಸಿದನು. ವಿಟ (ವೇಶ್ಯಾಗೃಹಕ್ಕೆ ಕರೆಯುವ ಪುರುಷ)ನ ವೇಷವನ್ನು ಧರಿಸಿ, ಸಪತ್ನೀಕರಾದ ಋಷಿಗಳನ್ನು ವ್ರತದಿಂದ ಭ್ರಷ್ಟರನ್ನಾಗಿಸಿದ. ಪಾಂಡುಸುತರಾಗಿ ಪಂಚಪಾಂಡವರೆನಿಸಿದವರಲ್ಲಿ ಮಧ್ಯಮನಾದ ಅರ್ಜುನನ ತೀರ್ಥಯಾತ್ರೆಯ ಸಂದರ್ಭದಲ್ಲಿ, ಕಿರಾತ / ಬೇಡನ ವೇಷಧರಿಸಿದ ದೇವನು, ಅರ್ಜುನನೊಡನೆ ಹೋರಾಡಿದನು. ಭೈರವಬೀಜರೂಪಿನಿಂದ ಹೇಗೋ / ಯಾವುದೋ ವೇಷಧರಿಸಿದ ದೇವಿಯೊಂದಿಗೆ ಗಜಾನನನನ್ನು ಹುಟ್ಟಿಸಿದನು (ಜನಿಸುವಂತೆ ಮಾಡಿದನು). ಇಂದ್ರಪುತ್ರನಾದ ಜಯಂತನ ರೂಪದಿಂದ (ಇಂದ್ರನದಾದ ರೂಪದಿಂದ, ಇಂದ್ರಜನ್ಯವಾದ, ಇಂದ್ರನಿಗೆ ಸಂಬಂಧಿಸಿದ ರೂಪದಿಂದ, ಮೇನಕೆಯ ರೂಪದಿಂದ) ಯಾವನೋ ಸೇವಕನನ್ನು (ವಿಶ್ವಾಮಿತ್ರನನ್ನು) ತಪಸ್ಸಿನಿಂದ ವಿಚಲಿತಗೊಳಿಸಲು ಇಚ್ಛಿಸಿದನು (ಯತ್ನಿಸಿದನು). ಶಿಶುವಿನ ರೂಪದಿಂದ ದೇವಿಯ ಅಂಕವನ್ನು / ತೊಡೆಯನ್ನು ಆಶ್ರಯಿಸಿ ಶಯನಿಸಿದನು / ಮಲಗಿ ನಿದ್ರಿಸಿದನು. ಗೂಬೆಯ ರೂಪಿನಿಂದ ಯಾವಾನೊಬ್ಬ ಋಷಿಗೆ ಜ್ಞಾನವನ್ನು ಉಪದೇಶಿಸಿದನು. ಉನ್ಮತ್ತವೇಷಭೂಷಿತನಾಗಿ ದೇವೋತ್ತಮನಾದ ಶ್ರೀಹರಿಗೆ (ಹಾಗೂ ಬ್ರಹ್ಮನಿಗೆ) ತನ್ನ (ಜ್ಯೋತಿರ್)ಲಿಂಗವು ಜಗತ್ಕಾರಣಕ್ಕೆ ಸಮರ್ಥವಾಗಿರುವುದನ್ನು (ಸ್ಥಾಣು) ಪ್ರದರ್ಶಿಸಿದನು. ಅಪರಾಧಿಯಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಬಯಸಿದ ಒಬ್ಬಾನೊಬ್ಬ ಭೃತ್ಯನನ್ನು (?ಪುತ್ರಹತ್ಯೆಯಿಂದ ಶೋಕಾಕುಲನಾದ ವಸಿಷ್ಠನನ್ನು) ತಡೆಯಲು ಪರಿಶುದ್ಧವಾದ (ನಿರ್ಣೇಜಮ್) ಉಯ್ಯಾಲೆವಸ್ತ್ರರೂಪನಾಗಿ ಬೆಟ್ಟದ ಶಿಲೆಯಿಂದ (ಆಶ್ಮನಃ) ಪ್ರಾದುರ್ಭವಿಸಿದನು (ಬೆಟ್ಟದಿಂದ ಹಾರಿದ ವಸಿಷ್ಠನನ್ನು ತನ್ಮೂಲಕ ರಕ್ಷಿಸಿದನು). ಭೂಮಿಯ ರಂಧ್ರದಿಂದಾಗಿ ಭ್ರಷ್ಟವಾಗಿದ್ದ (ವ್ಯರ್ಥವಾಗಿದ್ದ) ಯಾವುದೋ ಹವಿಸ್ಸನ್ನು ಅಲ್ಲೇ ಸಾನ್ನಿಧ್ಯವಹಿಸಿ ಭುಂಜಿಸಿದನು. ಹೀಗೆ, ತನ್ನಿಷ್ಟದಂತೆ ವಿವಿಧ ವೇಷ-ಆಕಾರಗಳ ಸ್ವೀಕಾರದಿಂದ ಕ್ರೀಡಿಸುತ್ತಿರುವ ದೇವದೇವನ ಲೀಲಾಭೂಮಿಯೇ ಈ ವಿಶ್ವವಾಗಿರುವುದು. ಆದ್ದರಿಂದ ವಿಶ್ವರೂಪವನ್ನು (ನಾನಾ ರೂಪಗಳನ್ನು) ಸ್ತುತಿಸಿ ನಮಸ್ಕರಿಸಲಾಗುತ್ತದೆ.
ಯಥೋಕ್ತಮ್—
ಚರಿತಾನಿ ವಿಚಿತ್ರಾಣಿ ಗುಹ್ಯಾನಿ ಗಹನಾನಿ ಚ |
ಬ್ರಹ್ಮಾದೀನಾಂ ಚ ಸರ್ವೇಷಾಂ ದುರ್ವಿಜ್ಞೇಯೋऽಸಿ ಶಙ್ಕರ ||
ಇತಿ ||
ಹೀಗೆ ಹೇಳಲ್ಪಟ್ಟಿದೆ— "ಅಯ್ಯಾ ಮಂಗಲಸ್ವರೂಪಿಯಾದ ಭಗವಂತನೇ! ನಿನ್ನ ಚರಿತೆಗಳು ಅತ್ಯಂತ ವಿಚಿತ್ರವೂ, ಗುಹ್ಯವೂ (ನಿಗೂಢವೂ, ರಹಸ್ಯವೂ), ಹಾಗೂ ಗಹನವೂ (ಅರ್ಥೈಸಲು ಕಷ್ಟಸಾಧ್ಯವೂ) ಆಗಿವೆ. ಬ್ರಹ್ಮಾದಿ ಸಕಲದೇವತೆಗಳಿಗೂ ನೀನು ಅರಿತುಕೊಳ್ಳಲು ಬಹು ದುಸ್ಸಾಧ್ಯನಾಗಿರುವೆ — ಎಂಬುದಾಗಿ.
ಸ್ಕನ್ದದೇವಕೃತಭಾಷ್ಯಸ್ಯ ಕೆ.ಪಿ.ನಾರಾಯಣಶಾಸ್ತ್ರಿಕೃತಃ ಉಪೋದ್ಘಾತಃ
|| ಶ್ರೀಶಿವಶ್ಶರಣಮ್ ||
ಶ್ರೀರುದ್ರಪ್ರಶ್ನಃ
ಈ ಸ್ಕಂದದೇವಕೃತ ರುದ್ರಭಾಷ್ಯವು "ಶಿವರಹಸ್ಯಮ್" ಎಂಬ ಮಹಾಭಾರತದಷ್ಟು ಬೃಹತ್ತಾದ ಗ್ರಂಥದಿಂದ ಉದ್ಧೃತವಾಗಿದೆ. ಕಾಶೀನಿವಾಸಿಗಳಾಗಿದ್ದ ಕುವೇಲಿಮಠಾಭಿಜನರಾದ ಕೆ.ಪಿ.ನಾರಾಯಣಶಾಸ್ತ್ರಿಗಳು ಬರೆದ ಅದರ ಪೀಠಿಕಾಭಾಗವನ್ನೀಗ ನೋಡೋಣ.
ಸರ್ವವೇದೋತ್ತಮತ್ವಮ್ (ಎಲ್ಲ ವೇದಮಂತ್ರಗಳಲ್ಲಿ ಶ್ರೇಷ್ಠವಾದದ್ದು)—
ಇಹ ಖಲು (ಇಲ್ಲಿಯಾದರೋ),
"ಅಙ್ಗಾನಿ ವೇದಾಶ್ಚತ್ವಾರೋ ಮೀಮಾಂಸಾ ನ್ಯಾಯವಿಸ್ತರಃ |
ಪುರಾಣಂ ಧರ್ಮಶಾಸ್ತ್ರಂ ಚ ವಿದ್ಯಾ ಹ್ಯೇತಾಶ್ಚತುರ್ದಶ ||"
ವೇದದ ೬ ಅಂಗಗಳು (ಶಿಕ್ಷಾ, ವ್ಯಾಕರಣ, ಛಂದಸ್ಸು, ಜ್ಯೋತಿಷ, ನಿರುಕ್ತ, ಕಲ್ಪ), ೪ ವೇದಗಳು, ಪೂರ್ವೋತ್ತರಮೀಮಾಂಸಾಶಾಸ್ತ್ರಗಳು, ನ್ಯಾಯ-ವೈಶೇಷಿಕಾದಿ ದರ್ಶನಗಳು, ಪುರಾಣಗಳು ಮತ್ತು ಧರ್ಮಶಾಸ್ತ್ರ / ಸ್ಮೃತಿಗಳು —
ಇತಿ ಪ್ರಸಿದ್ಧಾನಿ ಚತುರ್ದಶ ವಿದ್ಯಾಸ್ಥಾನಾನಿ (ಇವೇ ೧೪ ಪ್ರಸಿದ್ಧವಾದ ವಿದ್ಯಾಸ್ಥಾನಗಳು.)
| ತೇಷಾಂ ಮಧ್ಯೇ ವೇದಾಃ, ಏವ ಉತ್ಕೃಷ್ಟಾಃ (ಅವುಗಳ ನಡುವೆ ವೇದಗಳೇ ಶ್ರೇಷ್ಠವಾದವುಗಳು.)| ತಥಾ ಹಿ (ಅದಕ್ಕಾಗಿಯೇ)—
"ವಿದ್ಯಾಸು ಶ್ರುತಿರುತ್ಕೃಷ್ಟಾ ರುದ್ರೈಕಾದಶಿನೀ ಶ್ರುತೌ |
ತತ್ರ ಪಂಚಾಕ್ಷರೀ ತಸ್ಯಾಂ ಶಿವ ಇತ್ಯಕ್ಷರದ್ವಯಮ್ ||"
"ಸಕಲವಿದ್ಯೆಗಳಲ್ಲಿ ಶ್ರವಣಮಾತ್ರದಿಂದ ಗುರು-ಶಿಷ್ಯ ಪರಂಪರೆಯ ಮೂಲಕ ಬಂದಿರುವುದರಿಂದ ಶ್ರುತಿಯೆನಿಸಿದ ವೇದವೇ ಉತ್ಕೃಷ್ಟವಾದದ್ದು. ಅಂತಹ ಶ್ರುತಿಯಲ್ಲೂ ೧೧ ಅನುವಾಕಗಳ ರುದ್ರೈಕಾದಶಿನೀ ಶ್ರೇಷ್ಠ. ಅಲ್ಲಿಯೂ "ನಮಃ ಶಿವಾಯ" ಎಂಬ ಪಂಚಾಕ್ಷರಿಯು ಮತ್ತೂ ಶ್ರೇಷ್ಠ. ಅದರಲ್ಲೂ "ಶಿವ" ಎಂಬೆರಡು ಅಕ್ಷರಗಳಂತೂ ಅತುಲ ಮಹಿಮಾನ್ವಿತವಾದುವು."
ಇತಿ ಸರ್ವವೇದೋತ್ತಮತ್ವಂ ಚ ರುದ್ರೈಕಾದಶಿನೀವಾಚ್ಯ-ರುದ್ರಪ್ರಶ್ನಸ್ಯ ಪ್ರಸಿದ್ಧಮ್ (ಎಂಬುದಾಗಿ ರುದ್ರ-ಏಕಾದಶಿನೀ ಎನ್ನಲ್ಪಡುವ ರುದ್ರಪ್ರಶ್ನದ ಸರ್ವವೇದೋತ್ತಮತ್ವವಾದರೋ ಪ್ರಸಿದ್ಧವಾದುದು.)|
ತತ್ರ ಚ ನಿಮಿತ್ತಮ್ (ಅದಕ್ಕೆ ಇತರ ಕಾರಣಗಳಾದರೋ)— ಜಾಬಾಲೋಪನಿಷದಿ ಯಾಜ್ಞವಲ್ಕ್ಯಂ ಪ್ರತಿ ಬ್ರಹ್ಮಚಾರಿಣಾಂ ಪ್ರಶ್ನೇ, "ಕಿಂ ಜಾಪ್ಯೇನ ಅಮೃತತ್ವಂ ಬ್ರೂಹಿ" ಇತಿ, "ಶತರುದ್ರೀಯೇಣ" ಇತಿ, ಯಾಜ್ಞವಲ್ಕ್ಯ-ಉತ್ತರಮ್; ತತ್ರ ಚ ಕಥಂ ಶತರುದ್ರೀಯಸ್ಯ ಅಮೃತತ್ವ-ಹೇತುತ್ವಮ್ ಇತಿ ಆಶಂಕಾಯಾಂ ಯಾಜ್ಞವಲ್ಕ್ಯ ಉವಾಚ— "ಏತಾನಿ ಹ ವಾ ಅಮೃತಸ್ಯ ನಾಮಾನಿ, ಏತೈಃ ಹ ವಾ ಅಮೃತೋ ಭವತಿ" ಇತಿ |
ಜಾಬಾಲೋಪನಿಷತ್ತಿನಲ್ಲಿ ಯಾಜ್ಞವಲ್ಕ್ಯನನ್ನು ಕುರಿತು ಬ್ರಹ್ಮಚಾರಿಗಳ ಪ್ರಶ್ನೆಯಲ್ಲಿ, "ಯಾವುದನ್ನು ಜಪಿಸಿದರೆ ಅಮೃತತ್ವವೆಂದು ಹೇಳು" ಎಂದಾಗ, "ಶತರುದ್ರೀಯದಿಂದ" ಎಂದು ಯಾಜ್ಞವಲ್ಕ್ಯನ ಉತ್ತರ; ಅದರಲ್ಲೂ ಹೇಗೆ ಶತರುದ್ರೀಯಕ್ಕೆ ಅಮೃತತ್ವಕಾರಕಶಕ್ತಿಯೆಂಬ ಸಂದೇಹಕ್ಕುತ್ತರವಾಗಿ ಯಾಜ್ಞವಲ್ಕ್ಯರು ಹೇಳುತ್ತಾರೆ, "ಇವು ನಿಶ್ಚಯವಾಗಿಯೂ ಅಮೃತಸ್ವರೂಪಿಯ ಹೆಸರುಗಳು, ಇವುಗಳಿಂದ ನಿಸ್ಸಂದೇಹವಾಗಿಯೂ ಅ-ಮೃತನಾಗುತ್ತಾನೆ / ಜನ್ಮ-ಮರಣಾತೀತನಾಗುತ್ತಾನೆ" ಎಂದು.
ಅಸ್ಯ ಚ ಆಶಯಃ ಕೂರ್ಮಪುರಾಣೇ ಸ್ಪಷ್ಟೀಕೃತಃ | ತತ್ರ ಹಿ ಇದಂ ಪಠ್ಯತೇ—
ಇದೇ ಆಶಯವು ಕೂರ್ಮಪುರಾಣದಲ್ಲಿ ಸ್ಪಷ್ಟಪಡಿಸಲ್ಪಟ್ಟಿದೆ. ಅಲ್ಲಿ ಹೀಗೆ ಹೇಳಿದೆ—
"ತದಾ ಪ್ರಾಹ ಮಹಾದೇವೋ ರಾಜಾನಂ ಪ್ರೀತಮಾನಸಃ |
ಇಮಾನಿ ಮೇ ರಹಸ್ಯಾನಿ ನಾಮಾನಿ ಶ್ರುಣು ಚಾನಘ ||
ಆಗ ಪ್ರಸನ್ನಚಿತ್ತನಾದ ಮಹಾದೇವನು ರಾಜನನ್ನು ಕುರಿತು ಹೀಗೆ ಹೇಳಿದನು— "ಅಯ್ಯಾ ಅನಘನೆ (ಅಘ / ಪಾಪ ರಹಿತನೆ!) ಇವು ನನ್ನ ರಹಸ್ಯವಾದ ಹೆಸರುಗಳೆಂಬುದನ್ನು ಕೇಳು."
ಸರ್ವವೇದೇಷು ಗೀತಾನಿ ಸಂಸಾರಶಮನಾನಿ ಚ |
ನಮಸ್ಕುರುಷ್ವ ಸತತಮೇಭಿರ್ನಾಮಪದೈಃ ಶುಚಿಃ ||
"ಇದು ಎಲ್ಲ ವೇದಗಳಲ್ಲೂ ಕೀರ್ತಿತವಾದುದೂ, ಸಂಸಾರವನ್ನು ಶಾಂತಗೊಳಿಸುವುದೂ ಆಗಿರುವುದು. ಈ ನಾಮಪದಗಳಿಂದ ಶುಚಿರ್ಭೂತನಾಗಿ ಸತತವೂ ನಮಸ್ಕರಿಸು."
ಅಧ್ಯಾಯಂ ಶತರುದ್ರೀಯಂ ಯಜುಷಾಂ ಸಾರಮುತ್ತಮಮ್ |
ಜಪಸ್ವಾನನ್ಯಚೇತಸ್ಕೋ ಮಯ್ಯೇವಾಸಕ್ತಮಾನಸಃ ||
ಯಜುಸ್ಸುಗಳಲ್ಲಿ (ಶುಕ್ಲ-ಕೃಷ್ಣಯಜುರ್ವೇದಗಳಲ್ಲಿ) ಅತ್ಯಂತ ಸಾರವತ್ತಾದ ಈ ಶತರುದ್ರೀಯವೆಂಬ ಅಧ್ಯಾಯವನ್ನು, ನನ್ನಲ್ಲೇ ಆಸಕ್ತವಾದ ಮನಸ್ಸಿನಿಂದಲೂ, ಬೇರೆಡೆಗೆ ಹೋಗದ ನಿಶ್ಚಲಬುದ್ಧಿಯಿಂದಲೂ ಜಪಿಸು."
ಬ್ರಹ್ಮಚಾರೀ ಮಿತಾಹಾರೋ ಭಸ್ಮನಿಷ್ಠಃ ಸಮಾಹಿತಃ |
ಜಪೇದಾಮರಣಾದ್ರುದ್ರಂ ಸ ಯಾತಿ ಪರಮಾಂ ಗತಿಮ್ ||"
ಇತಿ ||
ಅಖಂಡ ಬ್ರಹ್ಮಚಾರಿಯಾಗಿಯೂ (ಜೀವನದ ಪ್ರಥಮ ಹಾಗೂ ಗೃಹಸ್ಥಾಶ್ರಮದ ಹಿಂದಿನ ಆಶ್ರಮವೇ ಬ್ರಹ್ಮಚರ್ಯ; ಏಕಪತ್ನೀವ್ರತವೂ ಬ್ರಹ್ಮಚರ್ಯವೇ; ಬ್ರಹ್ಮವಸ್ತುವಿನಲ್ಲೇ / ಪರಮಾತ್ಮನಲ್ಲೇ ನಿರಂತರ ಚಿತ್ತವಿಡುವುದೂ ಬ್ರಹ್ಮಚರ್ಯವೇ), ಮಿತವಾದ ಕೇವಲ ಶರೀರಧಾರಣೆಗೆ ತಕ್ಕಷ್ಟೇ ಆಹಾರವನ್ನು ಸ್ವೀಕರಿಸುವವನಾಗಿಯೂ, ಭಸ್ಮಧಾರಣಾದಿಗಳಿಂದ ಭಸ್ಮದ ಮಹಿಮೆಯನ್ನರಿತು ನಿಷ್ಠೆಯಿಂದ, ಇಂದ್ರಿಯ-ಮನಸ್ಸು-ಬುದ್ಧಿಗಳನ್ನು ನಿಗ್ರಹಿಸಿ, ಮರಣಪರ್ಯಂತ ಯಾವನು ರುದ್ರವನ್ನು ಜಪಿಸುವನೋ ಅಂಥವನು ಪರಮಶ್ರೇಷ್ಠ ಗತಿಯನ್ನೈದುವನು" ಎಂಬುದಾಗಿ.
ಸಂಸಾರಶಮನಮ್ (ಸಂಸಾರದುಃಖವನ್ನು ಶಮನಮಾಡುವಂಥದ್ದು)—
"ನಮಸ್ಕುರುಷ್ವ ಸತತಮ್ ಏಭಿಃ ನಾಮಪದೈಃ" ಇತಿ ಅಸ್ಯ ಕೇವಲ ನಾಮಾನಿ ಏವ ಸಂಸಾರಮೋಚಕಾನಿ, ತೈಃ ನಮಸ್ಕಾರಃ ಅಪಿ ಚೇತ್ ಕಿಮು ವಕ್ತವ್ಯಂ, ಸಂಸಾರದುಃಖಮ್ ಉನ್ಮೂಲಯನ್ತಿ ಇತಿ ಅಭಿಪ್ರಾಯಃ | ಅನೇನ "ಏತೈರ್ಹ ವಾ ಅಮೃತೋ ಭವತಿ" ಇತಿ ಯಾಜ್ಞವಲ್ಕ್ಯವಚನಂ ವ್ಯಾಖ್ಯಾತಮ್ | "ಇಮಾನಿ ಮೇ ನಾಮಾನಿ" ಇತಿ ಅನೇನ ಚ "ಏತಾನಿ ಹ ವಾ ಅಮೃತಸ್ಯ ನಾಮಾನಿ" ಇತಿ ವಾಕ್ಯಾರ್ಥೋ ವಿವೃತಃ | ತಥಾ ಚ, ಜಪಮಾತ್ರೇಣ ಮೋಕ್ಷಫಲಕೇ ರುದ್ರಾಧ್ಯಾಯೇ ಸತಿ ಅಪಿ ಅಶ್ರದ್ಧಾದೋಷೇಣ ಏವ ಲೋಕಃ ಸಂಸಾರೇ ಮಜ್ಜತಿ ಇತಿ ಅಹೋ ಪಾಪಮಹಿಮಾ ಇತಿ ಭಾವಃ ||
ಮೇಲೆ ಹೇಳಿದ ಕೂರ್ಮಪುರಾಣದ "ಸತತವೂ ನಮಸ್ಕರಿಸು ಈ ನಾಮಪದಗಳಿಂದ" ಎಂಬುದರಿಂದ, ಈತನ ಕೇವಲ ನಾಮ / ಹೆಸರುಗಳೇ ಸಂಸಾರಮೋಚಕಗಳು, ಅವುಗಳೊಂದಿಗೆ ನಮಸ್ಕಾರವೂ ಸೇರಿದರೆ ಏನು ಹೇಳಲಿ? ಸಂಸಾರದುಃಖವನ್ನು ಬೇರುಸಹಿತ ನಾಶಮಾಡುತ್ತವೆಂದರ್ಥ (ಉತ್— ಮೇಲಕ್ಕೆ, ಮೂಲ— ಬೇರು. ಬೇರನ್ನೆತ್ತಿ ಕಿತ್ತುಬಿಡುವಿಕೆಯೇ ಉನ್ಮೂಲನ). ಇದರಿಂದ, "ಇವುಗಳಿಂದ ಅಮೃತನಾಗುತ್ತಾನೆ" ಎಂಬ ಯಾಜ್ಞವಲ್ಕ್ಯರ ಮಾತು ವ್ಯಾಖ್ಯಾನಿಸಲ್ಪಟ್ಟಂತಾಯಿತು. ಹಾಗೆಯೇ, ಕೂರ್ಮಪುರಾಣದ ಮೇಲೆ ಹೇಳಿದ "ಇವು ನನ್ನ ನಾಮಗಳು" ಎಂಬುದರಿಂದ "ಇವು ಅಮೃತಸ್ವರೂಪನ ನಾಮಗಳು" ಎಂಬ ವಾಕ್ಯಾರ್ಥವು ವಿವರಿಸಲ್ಪಟ್ಟಿತು. ಅಂತೆಯೇ, ಜಪಮಾತ್ರದಿಂದ ಮೋಕ್ಷಫಲಪ್ರದವಾದುದು ರುದ್ರಾಧ್ಯಾಯವೆಂದಾದರೂ ಸಹ, ಅದರಲ್ಲಿ ಶ್ರದ್ಧೆಯನ್ನಿಡದ ದೋಷದಿಂದಾಗಿಯೇ ಲೋಕವು / ಜನತೆಯು / ಪ್ರಜಾವರ್ಗವು ಸಂಸಾರದಲ್ಲಿ (ಜನನ-ಮರಣ-ಚಕ್ರದಲ್ಲಿ) ಮುಳುಗೇಳುತ್ತಿದೆ ಎಂಬುದಾದರೋ ಅಬ್ಬಾ! ಪಾಪದ ಮಹಿಮೆಯೇ ಸರಿ!! ಎಂಬ ಭಾವವು.
ನಿಖಿಲಪಾಪಪ್ರಾಯಶ್ಚಿತ್ತತ್ವಮ್ (ಎಲ್ಲ ಪಾಪಗಳ ಪ್ರಾಯಶ್ಚಿತ್ತಕರವು)—
ಬ್ರಹ್ಮೋತ್ತರಖಣ್ಡೇ ಪ್ರಪಂಚಿತಃ—
"ಏಷ ಏವ ಪರೋ ಮನ್ತ್ರ ಏಷ ವಃ ಪರಮಂ ತಪಃ |
ರುದ್ರಾಧ್ಯಾಯಜಪಃ ಪುಂಸಾಂ ಪರಂ ಕೈವಲ್ಯಸಾಧನಮ್ ||
ಯೇ ಮಹಾಪಾತಕೈರ್ಯುಕ್ತಾ ಉಪಪಾತಕಿನಶ್ಚ ಯೇ |
ರುದ್ರಾಧ್ಯಾಯಜಪಾತ್ ಸದ್ಯಸ್ತೇऽತಿ ಯಾನ್ತಿ ಪರಾಂ ಗತಿಮ್ ||"
ಬ್ರಹ್ಮಪುರಾಣದ ಉತ್ತರಖಂಡದಲ್ಲಿ ವಿವರಿಸಲ್ಪಟ್ಟಿದೆ—
"ಇದೇ ಪರಮಮಂತ್ರವು; ಇದೇ ನಿಮಗೆ ಪರಮತಪಸ್ಸು; ರುದ್ರಾಧ್ಯಾಯದ ಜಪವು / ಪಠನವು ಮನುಷ್ಯರಿಗೆ ಪರಮಕೈವಲ್ಯಪ್ರಾಪ್ತಿಯ ಸಾಧನವು. ಯಾರು ಬ್ರಹ್ಮಹತ್ಯೆ, ಸುರಾಪಾನ, ಸುವರ್ಣಸ್ತೇಯ, ಗುರುಪತ್ನೀಗಮನ ಹಾಗೂ ಇವುಗಳನ್ನು ಮಾಡುವವರ ಸಂಸರ್ಗ— ಇಂತಹ ಪಂಚಮಹಾಪಾತಕಗಳಿಂದ ಪತಿತರಾಗಿರುವವರೂ, ಯಾರು ಉಪಪಾತಕಗಳಿಂದ ಪತಿತರೋ ಅಂಥವರೂ ರುದ್ರಾಧ್ಯಾಯಜಪದಿಂದ ಬೇಗನೆ ಪಾಪಮುಕ್ತರಾಗಿ ಪರಗತಿಯನ್ನು ಹೊಂದುವರು.
ಟಿಪ್ಪಣಿ—
ಉಪಪಾತಕಗಳು ೪೯—
ಗೋಹತ್ಯೆ, (ಅಯಾಜ್ಯ ಯಜನ)ಮಾಡಬಾರದ ಯಜ್ಞಮಾಡುವಿಕೆ, ಪರದಾರಗಮನ (ಪರಪತ್ನಿಗಮನ), ಆತ್ಮವಿಕ್ರಯ (ತನ್ನನ್ನೇ ತಾನು ಮಾರಿಕೊಳ್ಳುವುದು), ಗುರುತ್ಯಾಗ, ಮಾತೃತ್ಯಾಗ, ಪಿತೃತ್ಯಾಗ (ಅಥವಾ ಗುರು-ಮಾತೃ-ಪಿತೃ ಶುಶ್ರೂಷಾತ್ಯಾಗ), ಸ್ವಾಧ್ಯಾಯತ್ಯಾಗ (ಬ್ರಹ್ಮಯಜ್ಞತ್ಯಾಗ, ಅಧೀತ-ವೇದ-ವಿಸ್ಮರಣ), ಅಗ್ನಿತ್ಯಾಗ (ಸ್ಮಾರ್ತಾಗ್ನಿಹೋತ್ರತ್ಯಾಗ), ಸುತತ್ಯಾಗ (ಸುತನಿಗೆ ಸೂಕ್ತಸಂಸ್ಕಾರಗಳನ್ನು ನೀಡದಿರುವಿಕೆ), ಪರಿವಿತ್ತಿತಾ (ಸಣ್ಣ ಮಗನಿಗೆ ದೊಡ್ಡವನಿಗಿಂತ ಮೊದಲೇ ಮದುವೆ ಮಾಡುವುದು), ಪರಿವೇದನಮ್(ದೊಡ್ಡಮಗನ ಮದುವೆಗೆ ಮುಂಚೆ ಸಣ್ಣವನಿಗೆ ಮದುವೆ ಮಾಡಿದರೆ ದೊಡ್ಡವನಿಗಾಗುವ ವೇದನೆ), ಅಂತಹ ಮದುವೆಗೆ ಮಾಡುವ ಕನ್ಯಾದಾನ, ಅಂಥವರು ಮಾಡುವ ಯಾಜನ (ತನ್ನ ಮದುವೆಗೆ ತಾನೇ ಯಜ್ಞಮಾಡಿಸುವಿಕೆ / ಪೌರೋಹಿತ್ಯ), ಕನ್ಯಾದೂಷಣ (ಕನ್ಯೆಯ ಲೈಂಗಿಕಶೋಷಣೆ), ವಾರ್ದ್ಧುಷ್ಯಮ್ (ನಿಷಿದ್ಧವಾದವುಗಳ ವೃದ್ಧಿಯಿಂದ ಜೀವನ), ವ್ರತಲೋಪ (ಬ್ರಹ್ಮಚಾರಿಯ ಮೈಥುನ), ತಡಾಗವಿಕ್ರಯ (ಕೆರೆ, ಸರೋವರಗಳ ಮಾರಾಟ), ಆರಾಮ / ಉಪವನ ವಿಕ್ರಯ, ದಾರ / ಪತ್ನಿ ವಿಕ್ರಯ, ಅಪತ್ಯ / ಸಂತಾನ ವಿಕ್ರಯ, ವ್ರಾತ್ಯತಾ (ಸಕಾಲದಲ್ಲಿ ಉಪನಯನಸಂಸ್ಕಾರವಾಗದಿರುವಿಕೆ), ಬಾಂಧವತ್ಯಾಗ, ಭೃತಾಧ್ಯಾಪನಮ್ (ನಿಯಮಿತ ವೇತನವನ್ನು ಪಡೆದು ಪಾಠಮಾಡುವಿಕೆ; ಶಿಷ್ಯನು ಶಿಕ್ಷಣಾಂತ್ಯದಲ್ಲಿ ನೀಡಿದ ಯಥಾಶಕ್ತಿ ಗುರುದಕ್ಷಿಣೆಯನ್ನು ಮಾತ್ರ ಸ್ವೀಕರಿಸಬೇಕೆಂಬರ್ಥ, ಅಲ್ಲಿಯವರೆಗೆ ಶಿಷ್ಯನು ಸಂಗ್ರಹಿಸಿದ ಭಿಕ್ಷೆಯನ್ನಷ್ಟೇ ಸ್ವೀಕರಿಸಬೇಕು), ಭೃತಾಧ್ಯಯನಮ್ (ಆರಂಭದಲ್ಲೇ ಅಧಿಕ ಶುಲ್ಕ / ವೇತನ ತೆತ್ತು ಮಾಡುವ ಅಧ್ಯಯನ), ಅಪಣ್ಯವಿಕ್ರಯ (ಮಾರಬಾರದ ತಿಲ / ಎಳ್ಳು, ಲಾಕ್ಷಾ / ಅರಗು / ಮೇಣ, ಗೋರಸ / ಗವ್ಯ ಕ್ಷೀರ, ಮಜ್ಜಿಗೆ, ಮೊಸರು ಇತ್ಯಾದಿಗಳ ಮಾರಾಟ ಬ್ರಾಹ್ಮಣನಿಂದ), ಸರ್ವಾಕರೇಷ್ವಧೀಕಾರಃ (ರಾಜನಿಗೆ ಸೇರಬೇಕಾದ ಚಿನ್ನ ಮುಂತಾದ ಗಣಿ / ಮೂಲ ಆಕರಸ್ಥಾನಗಳ ಮೇಲೆ ಅಧಿಕಾರ ಸ್ಥಾಪನೆ), ಮಹಾಯಂತ್ರಪ್ರವರ್ತನಮ್ (ದೊಡ್ಡ ದೊಡ್ಡ ಜಲವಿದ್ಯುತ್, ತೈಲಸಂಸ್ಕಾರ, ಯುದ್ಧಸಾಮಗ್ರಿನಿರ್ಮಾಣಾದಿ ಯಂತ್ರಗಳನ್ನು ನಡೆಸುವ ಉದ್ಯಮಾಧಿಪತಿತ್ವ), ಓಷಧಿಹಿಂಸನಮ್ (ಧಾನ್ಯಾದಿಗಳನ್ನು ಬೇಕಾಬಿಟ್ಟಿ ನಾಶಮಾಡುವಿಕೆ), ಸ್ತ್ರ್ಯಾಜೀವಃ (ಸ್ತ್ರೀ-ಆಜೀವಃ— ಪತ್ನಿಯೇ ಮುಂತಾದ ಸ್ತ್ರೀಯರನ್ನು ವೇಶ್ಯಾವಾಟಿಕೆಗೆ ತಳ್ಳಿ ಅದರಿಂದ ಜೀವಿಸುವಿಕೆ), ಅಭಿಚಾರಕರ್ಮ (ಶ್ಯೇನಾದಿ ಯಜ್ಞಗಳಿಂದ ಅನಪರಾಧಿಯ ಮಾರಣ), ಮೂಲಕರ್ಮ (ಮಂತ್ರೌಷಧಾದಿಗಳಿಂದ ವಶೀಕರಣ), ಸೌದೆಗಾಗಿ ಹಸಿ (ಒಣಗದ, ಜೀವಂತವಾದ)ಮರಗಳನ್ನು ಕಡಿಯುವಿಕೆ, ತನಗಾಗಿಯೇ ಮಾಡುವ ಕ್ರಿಯೆಗಳು (ನೀರೋಗಿಯು ದೇವ-ಪಿತೃಕಾರ್ಯ ಮುಂತಾದವನ್ನುದ್ದೇಶಿಸದೆ ಸುಮ್ಮನೆ ತನಗಾಗಿ ಔತಣದಡುಗೆ ಇತ್ಯಾದಿ ಮಾಡಿಸುವಿಕೆ), ನಿಂದಿತಾನ್ನಸ್ಯ ಭಕ್ಷಣಮ್ {ಬೆಳ್ಳುಳ್ಳಿ ಮುಂತಾದವುಗಳನ್ನು ಕನಿಷ್ಠ ಒಂದು ಬಾರಿಯಾದರೂ ಬಯಸದೇ ಸೇವಿಸುವುದು ಅಥವಾ ಜ್ಯೋತಿಷಿ-ದೇವಲ (ದೇವಪೂಜಾದಿಗಳಿಂದಲೇ ಜೀವಿಸುವವ)- ತಸ್ಕರ / ಕಳ್ಳ— ಮುಂತಾದವರು ನೀಡಿದ ಊಟಮಾಡುವುದು}, ಅನಾಹಿತಾಗ್ನಿತಾ (ಸಮರ್ಥನಾದರೂ ಶ್ರೌತ-ಸ್ಮಾರ್ತ ಅಗ್ನಿಗಳನ್ನು ಪರಿಗ್ರಹಿಸದಿರುವುದು), ಸ್ತೇಯ (ಚಿನ್ನವಲ್ಲದೆ ಇತರ ವಸ್ತುಗಳ ಅಪಹರಣ; ಚಿನ್ನದ ಕಳ್ಳತನ ಮಹಾಪಾಪಗಳಲ್ಲಿ ಬರುತ್ತದೆ), ದೇವ-ಋಷಿ-ಪಿತೃಗಳ ಋಣವನ್ನು ತೀರಿಸದಿರುವುದು, ಅಸತ್ಯಶಾಸ್ತ್ರಗಳ ಕಡೆ ಮನಮಾಡುವುದು (ಶ್ರುತಿ, ಸ್ಮೃತಿ ವಿರುದ್ಧವಾದ ಪಾಷಂಡ / ನಾಸ್ತಿಕಶಾಸ್ತ್ರಗಳ ಅಭ್ಯಾಸ), ಕೌಶೀಲವ್ಯಕ್ರಿಯಾ (ಕುಶೀಲವರೆಂದರೆ ಕೆಟ್ಟ ಶೀಲದವರು, ನಿತ್ಯ ನಟ-ನರ್ತಕಾದಿಗಳು), ಧಾನ್ಯಸ್ತೇಯ, ಪಶುಸ್ತೇಯ (ಸ್ತೇಯ— ಕದಿಯುವಿಕೆ), ಕುಪ್ಯಸ್ತೇಯ (ಚಿನ್ನಬೆಳ್ಳಿಯಲ್ಲದ ಇತರ ತಾಮ್ರಾದಿ ಲೋಹನಿರ್ಮಿತ ನಾಣ್ಯಾದಿ ಸಂಪತ್ತಿನ ಕಳ್ಳತನ), ಮದ್ಯಪಾನಮಾಡುವ ಸ್ತ್ರೀಯ ಸೇವೆ, ಸ್ತ್ರೀವಧೆ, ಶೂದ್ರವಧೆ, ವೈಶ್ಯವಧೆ, ಕ್ಷತ್ರಿಯವಧೆ ಹಾಗೂ ನಾಸ್ತಿಕ್ಯ (ಆಧಾರ— ಮನುಸ್ಮೃತಿವಚನ ಹಾಗೂ ಶೂಲಪಾಣಿವಚನ)
ಇತ್ಥಂ ರುದ್ರಾಧ್ಯಾಯಸ್ಯ ನಿಖಿಲ-ಪಾಪ-ಪ್ರಾಯಶ್ಚಿತ್ತತ್ವಂ ಶ್ರುತಿ-ಸ್ಮೃತಿ-ಪುರಾಣ-ಪ್ರಸಿದ್ಧಮ್ |
ಹೀಗೆ ರುದ್ರಾಧ್ಯಾಯಕ್ಕೆ ಸರ್ವಪಾಪಪ್ರಾಯಶ್ಚಿತ್ತಶಕ್ತಿಯಿರುವುದು ವೇದ-ಧರ್ಮಶಾಸ್ತ್ರ-ಪುರಾಣಪ್ರಸಿದ್ಧವಾದುದು.
ಅತ್ರಿಣಾ ಅಪಿ ಉಕ್ತಮ್—
"ಏಕಾದಶಗುಣಾನ್ ವಾऽಪಿ ರುದ್ರಾನಾವೃತ್ಯ ಧರ್ಮವಿತ್ |
ಮಹಾಪಾಪೈರಪಿ ಸ್ಪೃಷ್ಟೋ ಮುಚ್ಯತೇ ನಾತ್ರ ಸಂಶಯಃ ||"
ಅನಸೂಯಾಪತಿ ಹಾಗೂ ಚಂದ್ರ-ದತ್ತಾತ್ರೇಯ-ದೂರ್ವಾಸಪಿತರೂ ಆದ ಅತ್ರಿಮಹರ್ಷಿಗಳಿಂದಲೂ ಹೇಳಲ್ಪಟ್ಟಿದೆ—
"ಧರ್ಮವಿದನು ೧೧ ಬಾರಿ ರುದ್ರಾಧ್ಯಾಯವನ್ನು ಪಠಿಸಿದರೆ ಮಹಾಪಾಪಗಳಿಂದ ಸ್ಪರ್ಶಿತನಾದರೂ ಅವುಗಳಿಂದ ಬಿಡುಗಡೆಹೊಂದುವುದರಲ್ಲಿ ಸಂಶಯವಿಲ್ಲ".
ಕರ್ಮಕಾಣ್ಡೋತ್ತಮತ್ವಮ್ (ಕರ್ಮಕಾಂಡದಲ್ಲೇ ಶ್ರೇಷ್ಠವಾದದ್ದು)—
"ಶತರುದ್ರಾನ್ ಜಪೇದ್ಯಸ್ತು ಧ್ಯಾಯಮಾನೋ ಮಹೇಶ್ವರಮ್ |
ಯಶ್ಚ ಸಾಗರಪರ್ಯನ್ತಾಂ ಸಶೈಲವನಕಾನನಾಮ್ ||
ದದ್ಯಾತ್ ಕಾಂಚನಸಂಯುಕ್ತಾಂ ಭೂಮಿಮೋಷಧಿಸಂಯುತಾಮ್ |
ತಸ್ಮಾದಪ್ಯಧಿಕಂ ತಸ್ಯ ಸಕೃದ್ರುದ್ರಜಪಾದ್ಭವೇತ್ ||"
" ಯಾರು ಗಿರಿ-ವನ-ಧಾನ್ಯಾದಿಗಳಿಂದ ಕೂಡಿರುವ ಸುವರ್ಣಮಯವೂ ಸಾಗರಪರ್ಯಂತವೂ ಆದ ಭೂಮಿಯನ್ನು ದಾನಮಾಡುವನೋ ಅಂತಹ ಭೂದಾನದ ಫಲಕ್ಕಿಂತಲೂ ಹೆಚ್ಚಿನ ಫಲವು, ಕೇವಲ ಒಂದು ಬಾರಿ ಮಹೇಶ್ವರನನ್ನು ಧ್ಯಾನಿಸುತ್ತಾ ಯಾವನು ಶತರುದ್ರಮಂತ್ರಗಳನ್ನು ಜಪಿಸುವನೋ ಅಂಥವನಿಗೆ ಸಿದ್ಧಿಸುವುದು"
ಇತ್ಯಾದಿ-ಶಿವಪುರಾಣ-ವಚನೈಃ ಚ ಕರ್ಮಕಾಣ್ಡ-ಪ್ರತಿಪಾದಿತ-ಸಕಲಕರ್ಮಫಲಾತಿಶಾಯಿ-ಫಲನಿಷ್ಪಾದಕತ್ವಾತ್ ತದಪೇಕ್ಷಯಾ ಅಪಿ ಮಹತ್ತ್ವಂ ಸಿದ್ಧಮ್ | ಅತ ಏವ ಅಗ್ನಿಹೋತ್ರ-ದರ್ಶಪೂರ್ಣಮಾಸ-ಚಾತುರ್ಮಾಸ್ಯ-ಪಶುಬನ್ಧ-ಜ್ಯೋತಿಷ್ಟೋಮಾದಿ-ಕರ್ಮಣಾಮ್ ಅಪಿ ಫಲತಃ ಶ್ರೀರುದ್ರಾನ್ತರ್ಭಾವಮ್ ಅಭಿಪ್ರೇತ್ಯ ಶ್ರೀರುದ್ರಲಘುನ್ಯಾಸೇ ತೇಷಾಂ ತದಙ್ಗಕೋಟಿನಿವೇಶಃ ||
ಎಂಬಿತ್ಯಾದಿ ಶಿವಪುರಾಣದ ಹೇಳಿಕೆಗಳಿಂದಲಾದರೋ, ವೇದದ ಕರ್ಮಕಾಂಡದಲ್ಲಿ ಪ್ರತಿಪಾದಿತವಾದ ಸಕಲ ಕರ್ಮಗಳ ಫಲಗಳಿಗಿಂತಲೂ ಅತಿಶಯವಾದ ಫಲವು ನಿಷ್ಪನ್ನವಾಗುವುದರಿಂದಾಗಿ (ಸಿದ್ಧಿಸುವುದರಿಂದಾಗಿ) ಅವೆಲ್ಲವುಗಳಿಗಿಂತ ರುದ್ರಾಧ್ಯಾಯಕ್ಕೆ ಹೆಚ್ಚಿನ ಮಹತ್ತ್ವವು ಸಿದ್ಧವಾಯಿತು. ಹೀಗಾಗಿಯೇ, ಅಗ್ನಿಹೋತ್ರ-ದರ್ಶಪೂರ್ಣಮಾಸ-ಚಾತುರ್ಮಾಸ್ಯ-ನಿರೂಢಪಶುಬಂಧ-ಜ್ಯೋತಿಷ್ಟೋಮಾದಿ ಶ್ರುತ್ಯುಕ್ತ ಮಹಾಕರ್ಮಗಳಿಗಿಂತಲೂ ಫಲದ ದೃಷ್ಟಿಯಿಂದ ಅವೆಲ್ಲವುಗಳ ಫಲವೂ ಶ್ರೀರುದ್ರಾಧ್ಯಾಯಾನುಷ್ಠಾನದ ಫಲದಲ್ಲೇ ಅಂತರ್ಗತವಾಗುವುದೆಂದು ಅಭಿಪ್ರಾಯಪಟ್ಟು, ಶ್ರೀರುದ್ರ-ಲಘುನ್ಯಾಸಗಳಲ್ಲಿ ಆ ಎಲ್ಲ ಕರ್ಮಗಳಿಗಿಂತ ಕೋಟಿಪಾಲು ಅಧಿಕವಾದ ಫಲವು ಸನ್ನಿಹಿತವಾಗಿರುವುದು.
ಜ್ಞಾನಕಾಣ್ಡೋತ್ತಮತ್ವಮ್ (ಜ್ಞಾನಕಾಂಡದಲ್ಲೂ ಶ್ರೇಷ್ಠವಾದದ್ದು)—
ಕೈವಲ್ಯೋಪನಿಷದ್ವಚನಮ್ ಇದಮ್— "ಅತ್ಯಾಶ್ರಮೀ ಸರ್ವದಾ ಸಕೃದ್ವಾ ಜಪೇತ್ | ಅನೇನ ಜ್ಞಾನಮಾಪ್ನೋತಿ ಸಂಸಾರಾರ್ಣವನಾಶನಮ್ ||" ಇತಿ | ಪ್ರತಿದಿನಂ ಸಕೃದ್ ರುದ್ರಜಪಾತ್ ಶಿವಪ್ರಸಾದೇನ ಜ್ಞಾನೋತ್ಪತ್ತಿಃ ಭವೇತ್ ಇತಿ ಭಾವಃ ||
ಕೈವಲ್ಯ ಉಪನಿಷತ್ತಿನ ಮಾತಿದು— "ಸಕಲ ಆಶ್ರಮಗಳಿಗಿಂತಲೂ ಅತೀತನಾದವನು ಯಾವಾಗಲೂ ಅಥವಾ ಒಮ್ಮೆಯಾದರೂ ಜಪಿಸತಕ್ಕದ್ದು. ಇದರಿಂದ ಸಂಸಾರಸಾಗರವನ್ನು ನಾಶಮಾಡುವಂತಹ ಜ್ಞಾನವನ್ನು ಹೊಂದುತ್ತಾನೆ" ಎಂದು. ಪ್ರತಿದಿನವೂ ಒಂದು ಬಾರಿಯಾದರೂ ರುದ್ರಮಂತ್ರಜಪದಿಂದ ಶಿವನ ಕೃಪೆಯುಂಟಾಗಿ ಜ್ಞಾನಸಿದ್ಧಿಯಾಗುವುದೆಂಬ ಭಾವವು.
ಕಲ್ಯಾಣಂ ದದತಂ ಕಟಾಕ್ಷಕಲಯಾ ಭಕ್ತಾಯ ಹತ್ವಾ ರಿಪೂನ್
ಕಲ್ಯಾಣಾಚಲಕಾರ್ಮುಕಸ್ಯ ತನಯಂ ಕಾರುಣ್ಯಪಾಥೋನಿಧಿಮ್ |
ಕಲ್ಯಾಣಾಕೃತಿಮವ್ಯಯಂ ಗಿರಿಸುತಾಪ್ರೇಮಾಸ್ಪದಂ ಪಾವನಂ
ಕಲ್ಯಾಣಾಯ ಭಜೇऽನುಜಂ ಗಣಪತೇಃ ಶ್ರೀದೇವಸೇನಾಪತಿಮ್ ||
(ರಿಪೂನ್) ಶತ್ರುಗಳನ್ನು, (ಹತ್ವಾ) ಕೊಂದು, (ಭಕ್ತಾಯ) ತನ್ನ ನಿಜಭಕ್ತನಿಗೆ, (ಕಟಾಕ್ಷಕಲಯಾ) ತನ್ನ ಕೃಪಾಕಟಾಕ್ಷದ ಒಂದಂಶದಿಂದ, (ಕಲ್ಯಾಣಂ ದದತಮ್) ಮಂಗಲವನ್ನುಂಟುಮಾಡುತ್ತಿರುವ, ಕಲ್ಯಾಣವನ್ನೇ ಕೊಡುತ್ತಿರುವ, (ಕಲ್ಯಾಣ-ಅಚಲ-ಕಾರ್ಮುಕಸ್ಯ ತನಯಮ್— ಕರ್ಮಣೇ ಪ್ರಭವತಿ ಇತಿ ಕರ್ಮಕ್ಷಮೇ ಕಾರ್ಮುಕತ್ವಮ್— ಕರ್ಮಮಾಡಲು ಸಮರ್ಥನು ಕಾರ್ಮುಕನು, ಧನುಸ್ಸೆಂಬ ಅರ್ಥವೂ ಇದೆ) ಶುಭಗಳ ಪರ್ವತವನ್ನೇ ಉಂಟುಮಾಡಲು ಸಮರ್ಥನಾದ ಪರಶಿವನ ಮಗನಾದ, (ಕಾರುಣ್ಯ-ಪಾಥೋನಿಧಿಮ್— ಪಾಥಃ - ಪಾತಿ ರಕ್ಷತಿ ಜೀವಾನ್ ಇತಿ, ಜೀವರನ್ನು ಪಾಲಿಸಿ ರಕ್ಷಿಸುವ ಜೀವಜಲ, ಸೂರ್ಯ, ಅಗ್ನಿ ಇತ್ಯಾದಿ; ಪಾಥೋನಿಧಿ— ಜಲಧಿ, ವಾರಿಧಿ, ಸಾಗರ) ಕರುಣಾವಾರಿಧಿಯಾದ, (ಕಲ್ಯಾಣಾಕೃತಿಮ್) ಮಂಗಲಸ್ವರೂಪನಾದ, (ಅ-ವ್ಯಯಮ್) ನಾಶರಹಿತನಾದ, (ಗಿರಿಸುತಾ-ಪ್ರೇಮಾಸ್ಪದಮ್) ಗಿರಿಸುತೆಯಾದ ಗಿರಿಜೆಯ ಪುತ್ರಪ್ರೇಮಕ್ಕೆ ಆಸ್ಪದನಾದ / ಅವಕಾಶನಾದ, (ಪಾವನಮ್) ಪರಮಪವಿತ್ರನಾದ, (ಗಣಪತೇಃ ಅನುಜಮ್) ಮಹಾಗಣಪತಿಯನ್ನು ಅನುಸರಿಸಿ ಜನಿಸಿ ಆತನ ಅನುಜ / ತಮ್ಮನೆನಿಸಿದ, (ಶ್ರೀದೇವಸೇನಾಪತಿಮ್) ಶ್ರೀವಲ್ಲೀರಮಣನೂ ದೇವಸೇನಾನಿಯೂ ಆದ ಕುಮಾರಸುಬ್ರಹ್ಮಣ್ಯನನ್ನು, (ಕಲ್ಯಾಣಾಯ) ಮಂಗಳಪ್ರಾಪ್ತಿಗಾಗಿ, (ಭಜೇ) ಭಜಿಸುತ್ತೇನೆ / ಸೇವಿಸುತ್ತೇನೆ / ಪೂಜಿಸುತ್ತೇನೆ.
ಕ್ಷೋಣೀ ಯಸ್ಯ ರಥೋ ರಥಾಙ್ಗಯುಗಲಂ ಚನ್ದ್ರಾರ್ಕಬಿಮ್ಬದ್ವಯಂ
ಕೋದಣ್ಡಃ ಕನಕಾಚಲೋ ಹರಿರಭೂದ್ಬಾಣೋ ವಿಧಿಃ ಸಾರಥಿಃ |
ತೂಣೀರೋ ಜಲಧಿರ್ಹಯಾಃ ಶ್ರುತಿಚಯೋ ಮೌರ್ವೀ ಭುಜಙ್ಗಾಧಿಪ-
-ಸ್ತಸ್ಮಿನ್ಮೇ ರಮತಾಂ ಸುಖೇನ ಹೃದಯಂ ಸಾಮ್ಬೇ ಪರಬ್ರಹ್ಮಣಿ ||
(ಕ್ಷೋಣೀ ಯಸ್ಯ ರಥಃ) ಭೂಮಿಯೇ ಯಾವನ ರಥವಾಗಿದೆಯೋ, (ಚನ್ದ್ರ-ಅರ್ಕ-ಬಿಮ್ಬ-ದ್ವಯಂ ರಥ-ಅಙ್ಗ-ಯುಗಲಮ್) ಚಂದ್ರ-ಸೂರ್ಯರೀರ್ವರು ಯಾವನ ರಥದ ಚಕ್ರಗಳೆಂಬ ಎರಡು ಪ್ರಧಾನ ಅಂಗಗಳಾಗಿವೆಯೋ, (ಕನಕಾಚಲಃ ಕೋದಣ್ಡಃ) ಕನಕಾಚಲ / ಸುಮೇರುಪರ್ವತವನ್ನೇ ಯಾವನು ತನ್ನ ಕೋದಂಡಧನುವನ್ನಾಗಿಸಿರುವನೋ (ಕೌಃ ಶಬ್ದಾಯಮಾನಃ ದಣ್ಡಃ ಕೋದಣ್ಡಃ— ಕೌಃ ಎಂಬ ಧನುಷ್ಠೇಂಕಾರಧ್ವನಿಯನ್ನುಂಟುಮಾಡುವ ದಂಡವೇ ಕೋದಂಡ), (ಹರಿಃ ಬಾಣಃ, ವಿಧಿಃ ಸಾರಥಿಃ ಅಭೂತ್) ಶ್ರೀಹರಿಯೇ ಯಾವನ ಬಾಣವೋ, ಚತುರ್ಮುಖಬ್ರಹ್ಮನೇ ಯಾವನ ಸಾರಥಿಯಾದನೋ, (ಜಲಧಿಃ ತೂಣೀರಃ) ಅಗಾಧವೂ ಅಕ್ಷಯವೂ ಎಂದೂ ಬತ್ತದಿರುವ ಜಲರಾಶಿಯಾದ ಸಾಗರವೇ ಯಾವನ ಬತ್ತಳಿಕೆ / ಶರಧಿಯಾಗಿರುವುದೋ, (ಶ್ರುತಿಚಯಃ ಹಯಾಃ) ವೇದಮಂತ್ರಸಮೂಹಗಳೇ ಯಾವನ ರಥದ ಕುದುರೆಗಳೋ, (ಭುಜಙ್ಗಾಧಿಪಃ ಮೌರ್ವೀ) ಸರ್ಪರಾಜನಾದ ವಾಸುಕಿಯೇ / ಆದಿಶೇಷನೇ ಯಾವನ ಧನುಸ್ಸಿನ ಹಗ್ಗವಾದನೋ, (ತಸ್ಮಿನ್ ಸಾಮ್ಬೇ ಪರಬ್ರಹ್ಮಣಿ) ಅಂತಹ ಅಂಬಾಸಮೇತನಾದ, ಪರಾಶಕ್ತಿಸಹಿತನಾದ ಪರಬ್ರಹ್ಮನಲ್ಲೇ, (ಮೇ ಹೃದಯಂ) ನನ್ನ ಹೃದಯವು / ಮನಸ್ಸು, (ಸುಖೇನ ರಮತಾಮ್) ಪರಮಾನಂದದಿಂದ, ಸುಲಲಿತವಾಗಿ, ಅನಾಯಾಸವಾಗಿ, ಸುಖದಿಂದ ಸದಾ ರಮಿಸಲಿ / ಕ್ರೀಡಿಸಲಿ / ತನ್ಮಯವಾಗಲಿ / ಸಂಲಗ್ನವಾಗಲಿ / ನೆಲೆಸಿರಲಿ.
"ಯೋऽರ್ಥಜ್ಞ ಇತ್ ಸಕಲಂ ಭದ್ರಮಶ್ನುತೇ ಸ ನಾಕಮೇತಿ ಜ್ಞಾನವಿಧೂತಪಾಪ್ಮಾ " ಇತ್ಯಾದಿ-ಪ್ರಮಾಣವಚನೈಃ ಮನ್ತ್ರಾರ್ಥಜ್ಞಾನಸ್ಯ ಅವಶ್ಯಸಂಪಾದನೀಯತಾ ಪ್ರಕಟೀಕೃತಾ |
"ಯಾವನು ಮಂತ್ರಗಳ ಅರ್ಥವನ್ನು ತಿಳಿಯುತ್ತಾನೋ ಅವನು ಎಲ್ಲ ಮಂಗಲವನ್ನೂ ಹೊಂದುತ್ತಾನೆ, ಸ್ವರ್ಗವನ್ನೂ ಹೊಂದುತ್ತಾನೆ, ಜ್ಞಾನದಿಂದ ಪಾಪರಹಿತನಾಗುತ್ತಾನೆ" ಇತ್ಯಾದಿ (ಮುಂತಾದ) ಪ್ರಮಾಣವಾಕ್ಯಗಳಿಂದ ಮಂತ್ರಾರ್ಥಜ್ಞಾನವು ಅಗತ್ಯವಾಗಿ ಸಂಪಾದಿಸಲ್ಪಡಬೇಕೆಂಬುದು ಪ್ರಕಟಿತವಾಗಿದೆ.
(ಅತ ಏವ) ಹೀಗಾಗಿಯೇ, (ಶ್ರೀರುದ್ರಮನ್ತ್ರಾಣಾಂ) ಶ್ರೀರುದ್ರಮಂತ್ರಗಳ, (ಸರಲತಯಾ ಪೂರ್ಣತಃ ಚ ಅರ್ಥ-ಅವಗಮಾರ್ಥಂ) ಸರಳವಾದ ಹಾಗೂ ಪರಿಪೂರ್ಣವಾದ / ಸಮಗ್ರವಾದ ಅರ್ಥವನ್ನು ತಿಳಿದುಕೊಳ್ಳಲು, (ಶ್ರೀಸ್ಕಾನ್ದದೇವೋಕ್ತಂ ಪದ್ಯಾತ್ಮಕಂ ಹೃದಯಙ್ಗಮಂ ಭಾಷ್ಯಂ ಸಂಪಾದಿತಮ್ ಅಸ್ಮಾಭಿಃ) ನಮ್ಮಿಂದ ಶ್ರೀಸ್ಕಂದದೇವಪ್ರೋಕ್ತವಾದ ಶ್ಲೋಕರೂಪದ ಮನೋಹರವಾದ ರುದ್ರಭಾಷ್ಯವು ಸಂಪಾದಿತವಾಗಿ, (ಇದಾನೀಂ ಪ್ರಕಾಶಪದವೀಂ ಯಾತಿ ಲೋಕೋಪಕಾರಾರ್ಥಮ್ |) ಇದೀಗ ಲೋಕೋಪಕಾರಕ್ಕಾಗಿ ಪ್ರಕಾಶನಭಾಗ್ಯವನ್ನು ಹೊಂದುತ್ತಿದೆ. (ಭಾಷ್ಯಮ್ ಇದಂ) ಸ್ಕಂದದೇವೋಕ್ತವಾದ ಈ ರುದ್ರಭಾಷ್ಯವು, (ಸಹಸ್ರ-ಅಧ್ಯಾಯ-ಯುತಸ್ಯ ಲಕ್ಷ-ಸಂಹಿತಾತ್ಮಕಸ್ಯ ದ್ವಾದಶ-ಅಂಶಾತ್ಮಕಸ್ಯ ಹರ-ಗೌರೀ-ಸಂವಾದರೂಪಸ್ಯ ಶಿವರಹಸ್ಯ-ನಾಮಕಸ್ಯ ಮಹಾ-ಇತಿಹಾಸಸ್ಯ) ಒಂದುಸಾವಿರ ಅಧ್ಯಾಯಗಳುಳ್ಳ, ಒಂದುಲಕ್ಷ ಶ್ಲೋಕಗಳ, ೧೨ ಅಂಶ / ವಿಭಾಗ / ಖಂಡಗಳಿರುವ, ಶಿವ-ಪಾರ್ವತಿಯರ ಸಂಭಾಷಣೆಯ ರೂಪದಲ್ಲಿರುವ, ಶಿವರಹಸ್ಯ ಎಂಬ ಹೆಸರಿನ ಬೃಹತ್ ಇತಿಹಾಸಗ್ರಂಥದ, (ದ್ವಾದಶೇ ಅಂಶೇ) ೧೨ನೆಯ ಅಂಶದಲ್ಲಿ, (ಷಡ್ವಿಂಶ-ಅಧ್ಯಾಯಾತ್ ತ್ರಯಸ್ತ್ರಿಂಶ-ಅಧ್ಯಾಯ-ಪರ್ಯನ್ತಮ್ ಅಷ್ಟಾಧ್ಯಾಯೀರೂಪೇಣ) ೨೬ನೆಯ ಅಧ್ಯಾಯದಿಂದ ೩೩ನೆಯ ಅಧ್ಯಾಯದ ವರೆಗಿನ ೮ ಅಧ್ಯಾಯಗಳ ಸ್ವರೂಪದಿಂದ, (ದೃಶ್ಯತೇ |) ತೋರಿಬರುವುದು. (ತಥಾ ಹಿ—) ಅಂತೆಯೇ—
ಜೈಗೀಷವ್ಯೋ ಮುನಿಃ ಪೂರ್ವಮ್ ಊರ್ಧ್ವರೇತಾ ಮಹಾತಪಾಃ |
ಶಙ್ಕರಾಜ್ಞಾಪ್ರಭಾವೇಣ ಸ್ಕನ್ದಾದ್ ಯತ್ ಪ್ರಾಪ್ತವಾನ್ ಶುಭಮ್ ||
ಹಿಂದೆ ಊರ್ಧ್ವರೇತಸ್ಕನಾದ (ರೇತಸ್ಸನ್ನು ನಿರೋಧಿಸಿ ಕುಂಡಲಿನಿಯನ್ನು ಆರೋಹಿಸಿದ) ಮಹಾತಪಸ್ವಿಯಾದ ಜೈಗೀಷವ್ಯನೆಂಬ ಮುನಿಯು, ಭಗವಾನ್ ಶಂಕರನ ಆಜ್ಞೆಯ ಪ್ರಭಾವದಿಂದ, ಸ್ಕಂದದೇವ / ಸುಬ್ರಹ್ಮಣ್ಯನಿಂದ ಯಾವ ಶುಭಕರವಾದ ಶಿವರಹಸ್ಯವನ್ನು ಪ್ರಾಪ್ತಿಮಾಡಿಕೊಂಡನೋ,
ಪುಣ್ಯಂ ಶಿವರಹಸ್ಯಾಖ್ಯಮ್ ಇತಿಹಾಸೋತ್ತಮೋತ್ತಮಮ್ |
ತ್ರಿಣೇತ್ರಾಪಾರಚರಿತಂ ದ್ವಾದಶಾಂಶಸಮನ್ವಿತಮ್ |
ಶಿವರತ್ನಮಹಾಕೋಶಂ ತದ್ದೇವ್ಯಾ ಹೃದಯಙ್ಗಮಮ್ ||
ಅಂತಹ ಶಿವರಹಸ್ಯವು ಬಹುಪುಣ್ಯತಮವೂ, ಇತಿಹಾಸಗಳಲ್ಲಿ ಬಹು ಉತ್ತಮವಾದುದೂ, ತ್ರಿಣೇತ್ರನ ಅ-ಪಾರವಾದ (ಅ-ಸೀಮವಾದ, ಅನಂತವಾದ) ಚರಿತೆಯನ್ನೊಳಗೊಂಡಿರುವುದೂ, ೧೨ ಅಂಶಗಳಿಂದ (ಭಾಗ / ಖಂಡ / ಸ್ಕಂಧ) ಗಳಿಂದ ಕೂಡಿದ್ದೂ, ಶಿವತತ್ತ್ವಪರಿಪ್ಲುತವಾದ ರತ್ನಗಳ ತವನಿಧಿಯೂ, ಆ ಪರಮೇಶ್ವರಿಗೆ ಅತ್ಯಂತ ಆಪ್ಯಾಯಮಾನವಾದುದೂ ಆಗಿರುವುದು.
ಸ್ಕನ್ದಾಯಾಚಷ್ಟ ಸಾ ದೇವೀ ಪ್ರೀತ್ಯಾ ತೇನ ಪ್ರದರ್ಶಿತಮ್ |
ಜೈಗೀಷವ್ಯಾಯ ತತ್ ಪ್ರಾದಾತ್ ಸ್ಕನ್ದಃ ಸ್ಕನ್ದಿತತಾರಕಃ ||
ಅಂತಹ ಶಿವರಹಸ್ಯವನ್ನು ಆ ಗೌರೀದೇವಿಯು ಪ್ರೀತಿಯಿಂದ ತನ್ನ ಸುತನಾದ ಸ್ಕಂದನಿಗೆ ಹೇಳಿದಳು. ತಾರಕಾಸುರನನ್ನು ಸಂಹರಿಸಿದಂತಹ ಸ್ಕಂದನು ಜೈಗೀಷವ್ಯಮುನಿಗೆ ಅದನ್ನು ಅನುಗ್ರಹಿಸಿದನು.
ತತಃ ಪರಂ ಲೋಕಾನುಗ್ರಹ-ಪರಾಯಣಸ್ಯ ಚನ್ದ್ರಶೇಖರಸ್ಯ ಆಜ್ಞಯಾ ಜೈಗೀಷವ್ಯಃ ಸೂತಾದಿಮುನಿಭ್ಯಃ ಉಪದಿದೇಶ ಇತಿ ಪ್ರಸಿದ್ಧಃ ||
ಆ ಬಳಿಕ, ಲೋಕಾನುಗ್ರಹಪರಾಯಣನಾದ (ಲೋಕವನ್ನು ಅನುಗ್ರಹಿಸುವುದರಲ್ಲೇ ಸದಾ ನಿರತನಾದ) ಚಂದ್ರಶೇಖರನ / ಪರಶಿವನ ಆಜ್ಞೆಯಂತೆ ಜೈಗೀಷವ್ಯಮುನಿಯು ಸೂತಾದಿ ಮುನಿಗಳಿಗೆ ಉಪದೇಶಿಸಿದನು ಎಂದು ಪ್ರಸಿದ್ಧವಾಗಿದೆ.
(ಯದ್ಯಪಿ ವಿದ್ಯಾರಣ್ಯ-ಭಟ್ಟಭಾಸ್ಕರ-ಅಭಿನವಶಙ್ಕರಾದಿಭಿಃ ಮಹಾತ್ಮಭಿಃ ವಿರಚಿತಾ ರುದ್ರಭಾಷ್ಯಗ್ರನ್ಥಾ ಬಹುಲಮ್ ಉಪಲಭ್ಯನ್ತೇ ತಥಾಪಿ) ವಿದ್ಯಾರಣ್ಯ (ಸಾಯಣ)-ಭಟ್ಟಭಾಸ್ಕರ-ಅಭಿನವಶಂಕರಾದಿ ಮಹಾತ್ಮರಿಂದ ವಿರಚಿತವಾದ ಬಹಳಷ್ಟು ರುದ್ರಭಾಷ್ಯಗ್ರಂಥಗಳು ಉಪಲಬ್ಧವಾಗಿದ್ದರೂ ಸಹ, (ಪ್ರಕೃತಭಾಷ್ಯಸ್ಯ ಪದ್ಯರೂಪತಾ, ಸುನ್ದರತರ-ಪದವಿನ್ಯಾಸ-ಸರಲ-ಸರಸ-ಗುಣಾಲಙ್ಕಾರಾದಿ-ವಿಶಿಷ್ಟತಾ) ಪ್ರಸ್ತುತ ಸ್ಕಂದದೇವಭಾಷ್ಯದ ಪದ್ಯಸ್ವರೂಪ, ಸಂದರವಾದ ಪದಗಳ ಸಂರಚನೆ-ಜೋಡಣೆ, ಸರಳವೂ, ನವರಸಯುತವೂ ಆದ ಗುಣಗಳಿಂದಲೂ ಅಲಂಕಾರಗಳಿಂದಲೂ ಕೂಡಿರುವ ವಿಶಿಷ್ಟತೆ, (ಸಾತಿಶಯ-ಸುಖ-ನಿರತಿಶಯ-ಮೋಕ್ಷ-ಸಾಮ್ರಾಜ್ಯರೂಪ-ಸಕಲಜನ-ಅಭಿಲಷಿತ-ಸಮ್ಪಾದಕತಾ ಚ) ಹಾಗೂ ಅತಿಶಯವಾದ ಲೌಕಿಕಸುಖಭೋಗ, ಯಾವುದಕ್ಕಿಂತ ಅತಿಶಯವಾದದ್ದಿಲ್ಲವೋ ಅಂತಹ ನಿರತಿಶಯ ಮೋಕ್ಷಾನಂದ— ಇವುಗಳ ಸಾಮ್ರಾಜ್ಯರೂಪವಾದ ಎಲ್ಲ ಜನರಿಂದ ಬಯಸಲ್ಪಡುವ ಇಷ್ಟಾರ್ಥಗಳ ಸಂಪಾದಕತ್ವಗಳು, (ಸ್ಪಷ್ಟಂ ವಾಚಕ-ಮಹಾಶಯಾನಾಮ್ |) ಇದನ್ನಧ್ಯಯನ ಮಾಡಿದ ಮಹಾನುಭಾವರಿಗೆ ಲಭ್ಯವಾಗುವುದು ಸುಸ್ಪಷ್ಟ / ಸುನಿಶ್ಚಿತ. (ಅಪರಂ ಚ, ರುದ್ರಾರ್ಥ-ವಚಾಂಸಿ ಏವ ಉಗ್ರಂ ತಪಃ) ಅದಲ್ಲದೆ, ರುದ್ರಮಂತ್ರಗಳ ಅರ್ಥೋಕ್ತಿಗಳೇ ಉಗ್ರವಾದ ತಪಸ್ಸಿನ ಫಲ.
(ತಥಾ ಹಿ ಸ್ಥಾಲೀ-ಪುಲಾಕ-ನ್ಯಾಯೇನ ಉದಾಹ್ರಿಯನ್ತೇ—)
ಅದಕ್ಕಾಗಿಯೇ "ಸ್ಥಾಲೀ-ಪುಲಾಕ ನ್ಯಾಯ" ದಿಂದ ಉದಾಹರಿಸಲ್ಪಡುತ್ತವೆ (ಸ್ಥಾಲೀ— ಅಡಿಗೆಯ / ಅನ್ನದ ಪಾತ್ರೆ. ಪುಲಾಕ— ಬೆಂದ ಅನ್ನ, ಸಸಿಯಿಂದ ಬೇರ್ಪಡಿಸಿದ ಭತ್ತ, ಜೊಳ್ಳಾದ ಧಾನ್ಯ. ಅನ್ನದ ಪಾತ್ರೆಯಲ್ಲಿನ ಅನ್ನದ ಕೆಲವೇ ಕೆಲವು ಅಗುಳುಗಳನ್ನು ನೋಡಿದರೂ ಸಮಗ್ರ ಅನ್ನವು ಬೆಂದಿದೆಯೆಂದು ಹೇಗೆ ತಿಳಿಯುವುದೋ ಹಾಗೆಯೇ ಕೆಲವೇ ದೃಷ್ಟಾಂತಗಳಿಂದ ಪೂರ್ಣ ರುದ್ರಮಂತ್ರಸ್ವರೂಪವು ತಿಳಿಯುವುದು).
("ಅಸೌ ಯಸ್ತಾಮ್ರಃ", "ಅದೃಶನ್ನುದಹಾರ್ಯಃ" ಇತ್ಯಾದಿಷು ಭಾಷ್ಯಶ್ಲೋಕಾಃ ಸಹೃದಯಾಹ್ಲಾದಕೈಃ ಅಲಂಕಾರೈಃ ಭರಿತಾಃ |) "ಅಸೌ ಯಸ್ತಾಮ್ರಃ", "ಅದೃಶನ್ನುದಹಾರ್ಯಃ" ಇತ್ಯಾದಿಗಳಲ್ಲಿ ಭಾಷ್ಯಶ್ಲೋಕಗಳು ಸಹೃದಯರಿಗೆ / ಒಳ್ಳೆಯ ಮನಸ್ಸಿನವರಿಗೆ, ಆಹ್ಲಾದಕವಾದ / ಮನೋಲ್ಲಾಸಕರವಾದ, ಅಲಂಕಾರಗಳಿಂದ ತುಂಬಿವೆ. ('ರುದ್ರಃ', 'ಭವಃ', 'ಸೋಮಃ', 'ಶಿವಃ', 'ಕಿರಿಕಾಃ' ಇತ್ಯಾದೀನಾಂ ನಾಮ್ನಾಂ ವಿವಿಧಾಃ ಅರ್ಥಾಃ ಮನೋಹರಯಾ ರೀತ್ಯಾ ಪ್ರಪಞ್ಚಿತಾಃ |) 'ರುದ್ರಃ', 'ಭವಃ', 'ಸೋಮಃ', 'ಶಿವಃ', 'ಕಿರಿಕಾಃ' ಇತ್ಯಾದಿ ಹೆಸರುಗಳ ವಿವಿಧ / ನಾನಾ ಬಗೆಯ ಅರ್ಥಗಳು ಮನಸೂರೆಗಳ್ಳುವಂತೆ ವಿವರಿಸಲ್ಪಟ್ಟಿವೆ. ('ಅಹನ್ತ್ಯಾಯ' ಇತ್ಯಸ್ಯ 'ಅಹನ್ತವ್ಯಾಯ' ಇತಿ ಅರ್ಥಾನ್ತರಾತ್ ಪ್ರಾಕ್ "ಭೂತಂ ಭಾವಿ ಚ ವರ್ತಮಾನಮಹಮಿತ್ಯಾಕಾರಿಕಾ ಯಾ ಪರಾ ಹನ್ತಾ ತತ್ರ ಭವಾಯ" ಇತಿ ವಿವರಣಮ್, "ತ್ಯಕ್ತವ್ಯೋ ಮಮಕಾರಃ ತ್ಯಕ್ತುಂ ಯದಿ ಶಕ್ಯತೇ ನ ಅಸೌ |) 'ಅಹನ್ತ್ಯಾಯ' ಎಂಬುದರ 'ಅಹನ್ತವ್ಯಾಯ' ಎಂಬ ಬೇರೊಂದು ಅರ್ಥಕ್ಕಿಂತಲೂ ಮೊದಲು, "ಭೂತ / ಗತ / ಕಳೆದುಹೋದ, ಭಾವಿ / ಮುಂದೆ ಬರಲಿರುವ ಹಾಗೂ ಈಗ ಪ್ರವರ್ತಮಾನದಲ್ಲಿರುವ / ಚಾಲ್ತಿಯಲ್ಲಿರುವ / ನಡೆಯುತ್ತಿರುವ ಎಲ್ಲವೂ ನಾನೆಂಬ ಯಾವ ಶ್ರೇಷ್ಠವಾದ ಹೇಳಿಕೆಯಿದೆಯೋ ಅದು ಸಂಹಾರಕರ್ತನಾದ ಭವನಿಗೇ ಸಂಬಂಧಿಸಿದ್ದು" ಎಂಬ ವಿವರಣೆ, "ನನ್ನದೆಂಬುದು ಬಿಡಲ್ಪಡಬೇಕು ಒಂದುವೇಳೆ ಸಾಧ್ಯವಾದರೆ; ಆದರೆ ಇವನನ್ನು / ಪರಮಾತ್ಮನ ಸ್ಮರಣೆಯನ್ನು ಬಿಡಬಾರದು; ("ಕರ್ತವ್ಯೋ ಮಮಕಾರಃ ಕಿನ್ತು ಸ ಸರ್ವತ್ರ ಕರ್ತವ್ಯಃ ||", "ಅಹಮೇವೇದಂ ಸರ್ವಮ್" ಇತ್ಯಾದಿವತ್ ಯಾ ಶ್ರೇಷ್ಠಾ ಅಹನ್ತಾ ತತ್ರಭವೋ ಭಗವಾನ್ ಇತಿ ಭಾವಃ ಪ್ರಕಟೀಕೃತಃ |) "ಮಮಕಾರವನ್ನು ಬಿಡಲಸಾಧ್ಯವಾದರೆ, ಸೃಷ್ಟಿಯ ಎಲ್ಲದರಲ್ಲಿಯೂ ಮಮಕಾರವನ್ನು ತಾಳಬೇಕು", "ನಾನೇ ಇದೆಲ್ಲವೂ" ಮುಂತಾದೆಡೆ ಯಾವ ಸರ್ವಶ್ರೇಷ್ಠತೆಯ ಅಹಂತೆ / ಮಮ-ತೆ ಇದೆಯೋ ಅಲ್ಲೆಲ್ಲ ಇರುವವನು ಭಗವಂತನೇ ಎಂಬ ಭಾವವು ಪ್ರಕಟಿತವಾಗಿದೆ. ("ಧಾವತೇ" ಇತ್ಯತ್ರ "ಧಾವು ಗತಿ-ಶುದ್ಧ್ಯೋಃ" ಇತಿ ಧಾತೋಃ ಶತ್ರನ್ತಶಬ್ದಸ್ಯ "ಭಕ್ತಂ ಶೋಧಯತಿ" ಇತಿ ಪರಿಶುದ್ಧಿರೂಪಾರ್ಥಮ್ ಉಕ್ತ್ವಾ, "ವತ್ಸಂ ಗೌಃ ಇವ ಚ ಅನುಧಾವತಿ ಪರಿತ್ರಾತುಂ ಸ್ವ-ಭಕ್ತಂ ಜನಮ್" ಇತಿ ಅನುಧಾವನ-ಅರ್ಥಃ ಅಪಿ ಉಕ್ತಃ |) "ಧಾವತೇ / ಓಡುವವನಿಗೆ" ಎಂಬಲ್ಲಿ "ಧಾವು ಗತಿ-ಶುದ್ಧ್ಯೋಃ / ಧಾವು ಹೋಗುವಿಕೆ-ಶುದ್ಧಿಗಳಿಗೆ" ಎಂಬ ಧಾತುವಿನ ಶತೃ (ಅತ್) ಪ್ರತ್ಯಯಾನ್ತ ಶಬ್ದದ "ಭಕ್ತನನ್ನು ಶುದ್ಧೀಕರಿಸುತ್ತಾನೆ" ಎಂದು ಪರಿಶುದ್ಧಿರೂಪದ ಅರ್ಥವನ್ನು ಹೇಳಿ, "ಹಾಗೂ ಕರುವನ್ನು ಹಿಂಬಾಲಿಸುತ್ತಾ ಓಡುವ ಗೋವಿನಂತೆ, ತನ್ನ ಭಕ್ತಜನರನ್ನು ಸಂರಕ್ಷಿಸಲು ಅವರನ್ನನುಸರಿಸುತ್ತಾನೆ" ಎಂದು ಅನುಸರಿಸಿ ಹೋಗುವಿಕೆಯೆಂಬ ಅರ್ಥವೂ ಹೇಳಲ್ಪಟ್ಟಿದೆ. (ಏವಂ "ಅಶ್ವೇಭ್ಯಃ" ಇತ್ಯತ್ರ "ಯೇಷಾಂ ಶ್ವಸ್ತನ-ವಿತ್ತಮಾತ್ರಮ್ ಅಪಿ ನ ಏವ ಅಸ್ತಿ ಇಹ ತೇಭ್ಯಃ" ಇತಿ ದೀನದಯಾಸಾಗರಸ್ಯ ಆಶುತೋಷಸ್ಯ ಭಗವತೋ ಲೋಕಾತಿಶಯ-ಮಹಿಮಶಾಲಿತಾಮ್ ಆವೇದಯತಿ ||) ಹಾಗೆಯೇ, "ಅಶ್ವೇಭ್ಯಃ / ಅಶ್ವಗಳಿಗೆ" ಎಂಬಲ್ಲಿ "ಯಾರ ನಿನ್ನೆಗಳ ಸಂಪತ್ತೂ ಕೂಡ ಇವತ್ತಿಗೆ ಉಳಿಯಲಾರದೋ ಅಂತಹ ನಶ್ವರ ಜೀವರ ರೂಪದಲ್ಲಿಯೂ ತೋರುವ ಅವರಿಗೆ / ರುದ್ರರಿಗೆ" ಎಂದು ದೀನದಯಾಸಾಗರನಾದ, ಬಹುಬೇಗನೆ ಒಲಿಯುವ ಆಶುತೋಷನಾದ ಭಗವಂತನ ಲೋಕೋತ್ತರವಾದ ಮಹಿಮಾತಿಶಯವನ್ನು ತಿಳಿಯಪಡಿಸುತ್ತಾನೆ.
(ಪ್ರಕೃತಗ್ರನ್ಥಃ ತು ನ ಕೇವಲಂ ಭಾಷ್ಯಮ್ ಅಪಿ ಸ್ತವರಾಜಃ |) ಈ ಸ್ಕಂದದೇವಪ್ರೋಕ್ತ ರುದ್ರಭಾಷ್ಯಗ್ರಂಥವಾದರೋ ಕೇವಲ ಭಾಷ್ಯಮಾತ್ರವಲ್ಲ; ಉತ್ತಮವಾದ ಸ್ತೋತ್ರರತ್ನವೂ ಹೌದು. (ತಥಾ ಹಿ ಆರಮ್ಭೇ, ಏವ ಉಕ್ತಂ ಭಗವತಾ ಸ್ಕನ್ದೇನ—
"ತಂ ಮತ್ತಃ ಸಂಸ್ತವಂ ಪುಣ್ಯಂ ಶೃಣು ಸರ್ವಾರ್ಥದಾಯಕಮ್ | ಯೇನ ಸ್ತವೇನ ಸ್ತುವತಾ ದೇವೋ ಮುಕ್ತಿಂ ಪ್ರಯಚ್ಛತಿ "
ಇತಿ |)
ಹಾಗಾಗಿಯೇ, ಆರಂಭದಲ್ಲೇ ಭಗವಾನ್ ಸ್ಕಂದನಿಂಗೃದ ಹೀಗೆ ಹೇಳಲ್ಪಟ್ಟಿದೆ—
"ಯಾವ ಸ್ತವ / ಸ್ತೋತ್ರ / ಸ್ತುತಿ / ಹೊಗಳಿಕೆ / ಪ್ರಶಂಸೆಯಿಂದ ಸ್ತುತಿಮಾಡುವವನಿಗೆ ದೇವದೇವನು ಮುಕ್ತಿಯನ್ನೀಯುವನೋ, ಅಂತಹ ಎಲ್ಲ ಇಷ್ಟಾರ್ಥಗಳನ್ನೂ ನೀಡುವ ಪುಣ್ಯಕರವೂ ಆದ ಉತ್ತಮವಾದ ಈ ಸ್ತವವನ್ನು ನನ್ನಿಂದ ಕೇಳುವವನಾಗು" ಎಂಬುದಾಗಿ.
(ಏವಮ್ ಏವ ಇದಂ ಭಾಷ್ಯಂ ಸರ್ವತ್ರ ಅತಿರಮಣೀಯಂ ಕಸ್ಯ ವಾ ಸಚೇತಸೋ ನ ಆನನ್ದಪರವಶತಾಂ ಸಮ್ಪಾದಯೇತ್?) ಹಾಗೆಯೇ, ಮೊದಲಿಂದ ಕೊನೆಯವರೆಗೆ ಆದ್ಯಂತಪರ್ಯಂತವಾಗಿ ಅತಿ ರಮಣೀಯವಾದ ಈ ಭಾಷ್ಯವು ಯಾವ ಸಹೃದಯನಿಗೆ ತಾನೇ ಆನಂದಪರವಶತೆಯನ್ನುಂಟುಮಾಡದು? (ತಸ್ಮಾದ್ ಬಹುಜನೋಪಕಾರಾರ್ಥಂ ಭಾಷ್ಯಸ್ಯ ಅಸ್ಯ ಆಙ್ಗ್ಲೇಯಭಾಷಾಟೀಕಾಸಮೇತಂ ಪ್ರಕಾಶನಾಯ ಮುಮ್ಬಾಪುರೀಸ್ಥಿತಾಯಾ "ಅಮೃತವಾಣೀಪ್ರಚಾರಿಣೀಸಭಾ"ಯಾಃ ಪ್ರಯತ್ನಃ ಪರಮ್ ಅಭಿನನ್ದನೀಯಃ ಏವ |) ಹಾಗಾಗಿ, ಬಹುಮಂದಿಯ ಉಪಕಾರಕ್ಕಾಗಿ ಈ ಭಾಷ್ಯದ ಆಂಗ್ಲ (ಇಂಗ್ಲಿಷ್) ಭಾಷಾ ಟೀಕಾ / ಟಿಪ್ಪಣಿ ಸಹಿತವಾದ ಪ್ರಕಾಶನಕ್ಕಾಗಿ, ಮುಂಬಾಪುರಿಯಲ್ಲಿನ / ಮುಂಬೈಯಲ್ಲಿನ "ಅಮೃತವಾಣೀ-ಪ್ರಚಾರಿಣೀ-ಸಭಾ" ದ ಪ್ರಯತ್ನವು ಅತ್ಯಂತ ಅಭಿನಂದನೀಯವೇ ಸರಿ. (ಯತಃ—) ಯಾಕೆಂದರೆ—
"ಸದಾಶಿವಸಮೋ ದೇವೋ ನಾಸ್ತಿ ಲೋಕತ್ರಯೇऽಪಿ ಚ |
ತಥಾ ಶಿವರಹಸ್ಯೇನ ತುಲ್ಯಮನ್ಯನ್ನ ವಿದ್ಯತೇ ||"
"ಮೂರು ಲೋಕದಲ್ಲಿಯೂ ಸದಾಶಿವನಿಗೆ ಸಮನಾದ ದೇವನಿಲ್ಲ. ಅಂತೆಯೇ, ಶಿವರಹಸ್ಯಕ್ಕೆ ಸಮನಾದ ಮಹಾಗ್ರಂಥವೂ ಬೇರಿಲ್ಲ".
|| ಅಥ ಶ್ರೀಸ್ಕನ್ದದೇವೋಕ್ತಂ, ಶ್ರೀಶಿವರಹಸ್ಯೇತಿಹಾಸಾನ್ತರ್ಗತಂ ಶ್ರೀರುದ್ರಭಾಷ್ಯಮ್ ||
|| ಅದಾಗಿ ಶ್ರೀಸ್ಕಂದದೇವನಿಂದ ಹೇಳಲ್ಪಟ್ಟ, ಶ್ರೀಶಿವರಹಸ್ಯವೆಂಬ ಇತಿಹಾಸಗ್ರಂಥದೊಳಗಣ ಶ್ರೀರುದ್ರಭಾಷ್ಯವು (ಶ್ರೀರುದ್ರಮಂತ್ರಾರ್ಥವು) ||
ಶಿವರಹಸ್ಯೇ ದ್ವಾದಶಾಂಶೇ ಷಡ್ವಿಂಶೋऽಧ್ಯಾಯಃ
ಶಿವರಹಸ್ಯದಲ್ಲಿ ೧೨ನೆಯ ಅಂಶದಲ್ಲಿ ೨೬ನೆಯ ಅಧ್ಯಾಯವು
ಶ್ರೀಸ್ಕನ್ದ ಉವಾಚ—
ಸ್ತೌಮಿ ದೇವಂ ಸದಾ ಭಕ್ತ್ಯಾ, ಸಾಂಬಂ ರುದ್ರಾರ್ಥಪದ್ಯಕೈಃ |
ಕೃತಾಞ್ಜಲಿರಹಂ ವನ್ದೇ, ಭಕ್ತ್ಯಾ ಯುಕ್ತಸ್ತಥಾ ದ್ವಿಜ || ೧ ||
ಶ್ರೀಸ್ಕಂದದೇವನು ಹೇಳಿದನು—
(ದ್ವಿಜ) ಅಯ್ಯಾ ದ್ವಿಜೋತ್ತಮನೆ!, (ಸಾಂಬಂ ದೇವಮ್— ಅಂಬಯಾ ಸಹಿತಂ ಸಾಂಬಮ್) ಸಾಂಬಸದಾಶಿವದೇವನನ್ನು (ಅಂಬಾ ಸಮೇತನಾದ, ಪಾರ್ವತೀಸಹಿತನಾದ ಉಮಾಮಹೇಶ್ವರದೇವನನ್ನು), (ರುದ್ರಾರ್ಥಪದ್ಯಕೈಃ) ರುದ್ರಮಂತ್ರಗಳ ಅರ್ಥರೂಪವಾದ ಪದ್ಯ / ಶ್ಲೋಕಗಳಿಂದ, (ಸದಾ) ಯಾವಾಗಲೂ, (ಭಕ್ತ್ಯಾ) ಭಕ್ತಿಯಿಂದ, (ಸ್ತೌಮಿ) ಸ್ತುತಿಸುತ್ತೇನೆ. (ತಥಾ) ಅಂತೆಯೇ, (ಅಹಮ್) ನಾನು, (ಭಕ್ತ್ಯಾ ಯುಕ್ತಃ) ಭಕ್ತಿಯಿಂದ ಕೂಡಿದವನಾಗಿ, (ಕೃತ-ಅಞ್ಜಲಿಃ) ಅಂಜಲಿಬದ್ಧನಾಗಿ / ಕೈಮುಗಿದು, (ವನ್ದೇ) ವಂದಿಸುತ್ತೇನೆ.
|| ಇದು ಪೀಠಿಕಾ-ಮಂಗಲಾಚರಣವು ||
ತಂ ಮತ್ತಃ ಸಂಸ್ತವಂ ಪುಣ್ಯಂ, ಶೃಣು ಸರ್ವಾರ್ಥದಾಯಕಮ್ |
ಯೇನ ಸ್ತವೇನ ಸ್ತುವತಾಂ, ದೇವೋ ಮುಕ್ತಿಂ ಪ್ರಯಚ್ಛತಿ || ೨ ||
ರುದ್ರಮನ್ತ್ರಾರ್ಥಬೋಧಾಢ್ಯಂ, ಭಕ್ತಿದಾರ್ಢ್ಯಪ್ರವರ್ಧಕಮ್ |
ಸಹೈಭಿಃ ಶೃಣು ವಿಪ್ರೇನ್ದ್ರ, ಜೈಗೀಷವ್ಯ ಮಹಾಮತೇ || ೩ ||
(ಮಹಾಮತೇ) ಅಯ್ಯಾ ಮಹಾಪ್ರಾಜ್ಞನೂ, (ವಿಪ್ರೇನ್ದ್ರ) ವಿಪ್ರಶ್ರೇಷ್ಠನೂ ಆದ, (ಜೈಗೀಷವ್ಯ) ಜೈಗೀಷವ್ಯಮುನಿಯೆ!, (ರುದ್ರ-ಮನ್ತ್ರ-ಅರ್ಥ-ಬೋಧ-ಆಢ್ಯಮ್) ರುದ್ರಮಂತ್ರದ ಅರ್ಥವನ್ನು ಬೋಧಿಸುವುದರಲ್ಲಿ ಶ್ರೇಷ್ಠವಾದ, (ಭಕ್ತಿ-ದಾರ್ಢ್ಯ-ಪ್ರವರ್ಧಕಮ್) ಭಕ್ತಿಯ ದೃಢತೆಯನ್ನು ಹೆಚ್ಚಿಸುವ, (ಯೇನ ಸ್ತವೇನ)ಯಾವ ಸ್ತವ / ಸ್ತೋತ್ರದಿಂದ ಪ್ರಸನ್ನನಾಗಿ, (ದೇವೋ / ದೇವಃ) ಮಹಾದೇವನು, (ಸ್ತುವತಾಮ್) ಸ್ತುತಿಸುವವರಿಗೆ, (ಮುಕ್ತಿಂ ಪ್ರಯಚ್ಛತಿ) ಮುಕ್ತಿಯನ್ನು ಅನುಗ್ರಹಿಸುವನೋ, (ತಂ ಪುಣ್ಯಮ್) ಅಂತಹ ಪುಣ್ಯತಮವೂ, (ಸರ್ವ-ಅರ್ಥ-ದಾಯಕಮ್) ಎಲ್ಲ ಅಭೀಷ್ಟಗಳನ್ನೂ ಕೊಡುವುದೂ ಆದ, (ಸಹ-ಏಭಿಃ) — ಈ ಎಲ್ಲ ಗುಣಗಳಿಂದ ಕೂಡಿದ, (ಸಂ-ಸ್ತವಮ್) ಸುಂದರವಾದ ಈ ಸ್ತವರಾಜವನ್ನು, (ಮತ್-ತಃ) ನನ್ನಿಂದ, (ಶೃಣು) ಶ್ರವಣಮಾಡು / ಕೇಳು.
|| ಇದು ಅನುಬಂಧವು ||
ಪೂರ್ಣಾನನ್ದಚಿದಾತ್ಮಕೋऽಪ್ಯಪಹೃತಃ ಸ್ವಾವಿದ್ಯಯಾ ಹೃದ್ಯಯಾ
ತಲ್ಲೀಲಾದಿ-ವಿಲಾಸ-ಮೋಹಿತ-ಮನಾ ವಿಸ್ಮೃತ್ಯ ರೂಪಂ ನಿಜಮ್ |
ಜೀವತ್ವಂ ಸಮುಪೇತ್ಯ ನಿತ್ಯಮನಪಾಯಿನ್ಯಾ ತಯಾ ಪ್ರೇರಿತೋ
ಯಃ ಶಶ್ವನ್ನೃವದಶ್ವವಚ್ಚ ಗಜವದ್ ಗೋವಚ್ಚ ನಾನಾವಿಧಾನ್ || ೪ ||
ವೇಷಾನಾಕಲಯನ್ ವಿಧಾಯ ಬಹುಧಾ ಕರ್ಮಾಣಿ ತತ್ಸಾಧನಾ-
ನ್ಯತ್ಯನ್ತೋನ್ನತನೀಚಮಾರ್ಗಗಮನಃ ಶ್ರಾನ್ತಃ ಪುರೇಷ್ವಾವಸನ್ |
ಕಾಮಿನ್ಯಾ ಕಮನೀಯಯಾತಿಕಮನಃ ಸ್ವಾವಿದ್ಯಯಾ ಸಂಸರನ್
ಪುಣ್ಯಾಪುಣ್ಯವಶಾಚ್ಚಿರೇಣ ಪರಮಾಂ ವಿದ್ಯಾಂ ಪ್ರಿಯಾಮಾಪ ಚ || ೫ ||
ಸತ್ಯನೂ (ಸತ್) ನಿತ್ಯನೂ ಪರಿಪೂರ್ಣನೂ ಆದ ಆನಂದ-ಜ್ಞಾನ (ಚಿತ್)ಸ್ವರೂಪವಾದ ಸಚ್ಚಿದಾನಂದನೇ ಆಗಿದ್ದರೂ, ತನ್ನದಾದ ಮನೋಹಾರಿಯಾದ ಅವಿದ್ಯೆಯಿಂದ, ಅಂತಹ ಅವಿದ್ಯೆಯ ಲೀಲಾ-ವಿಲಾಸಗಳಿಂದ ಮೋಹಿತವಾದ ಮನಸ್ಸಿನಿಂದ ಕೂಡಿ, ತನ್ನ ನಿಜಸ್ವರೂಪಜ್ಞಾನವನ್ನು ಮರೆತು, ಜೀವತ್ವವನ್ನು ಹೊಂದಿ, ಸದಾ ತನ್ನ ಅನಪಾಯಿನಿಯಾದ / ತನ್ನಿಂದ ಬೇರ್ಪಡಿಸಲಾಗದ ಅವಿದ್ಯಾಮಾಯೆಯಿಂದ ಪ್ರೇರಿತನಾಗಿ, ಶಾಶ್ವತನಾದ ಯಾವ ಆತ್ಮನು ನರನಂತೆ, ಅಶ್ವದಂತೆ ಹಾಗೂ ಗಜದಂತೆ, ಅಂತೆಯೇ ಗೋವಿನಂತೆ ನಾನಾ ವಿಧವಾದ ವೇಷಗಳನ್ನು ಧರಿಸಿ, ಆಯಾ ಜೀವರ ಸಾಧನಾಮಾರ್ಗಗಳಾದ ಬಹುವಿಧದ ಕರ್ಮಗಳನ್ನಾಚರಿಸುತ್ತಾ, ಅತ್ಯಂತ ಉಚ್ಚ ಹಾಗೂ ಅತಿ ನೀಚ ಮಾರ್ಗಗಳಲ್ಲಿ ಸಂಚರಿಸುತ್ತಾ ಬಳಲಿ, ವಿವಿಧ ಪುರ / ದೇಹಗಳಲ್ಲಿ ವಾಸಿಸಿ / ಮಲಗಿ, ಕಾಮಿನಿ / ಸ್ತ್ರೀಯ ಸೌಂದರ್ಯವೆಂಬ ಪಥದ ಯಾತ್ರಿಕನಂತಿರುವ ಮನಸ್ಸುಳ್ಳವನಾಗಿ, ತನ್ನದಾದ ಅವಿದ್ಯೆಯಿಂದ ಸಂಸಾರದಲ್ಲಿ ಸಿಲುಕಿ, ತನ್ನ ಪುಣ್ಯ-ಪಾಪಗಳ ಕಾರಣದಿಂದ, ತನಗೆ ಪ್ರಿಯವಾದ ವಿದ್ಯೆ / ಆತ್ಮಜ್ಞಾನವೆಂಬ ತನ್ನ ಮೂಲ / ನಿಜ ಸ್ವರೂಪದ ಅರಿವನ್ನು ಕೊಟ್ಟಕೊನೆಗೆ ಬಹುದೀರ್ಘಕಾಲದ ಬಳಿಕ / ಅನೇಕ ಜನ್ಮಗಳ ಬಳಿಕ ಪಡೆಯುತ್ತಾನೆ.
|| ಇದು ಪರಮಾತ್ಮ-ಜೀವಾತ್ಮರ ಸ್ವರೂಪ ಹಾಗೂ ಮೋಕ್ಷದ ಪಥಸ್ವರೂಪವು ||
ಶ್ರೀರುದ್ರಾಯ ನಮಃ ಸಮಸ್ತಜಗದುತ್ಪತ್ತಿಸ್ಥಿತಿಧ್ವಂಸಿತ-
ಕ್ರೀಡೇಚ್ಛಾಸಮುಪಾತ್ತದಿವ್ಯವಪುಷೇ ಧಾತುರ್ವಿಧಾತುರ್ಹರೇಃ |
ರಕ್ಷಿತ್ರೇ ನಿತರಾಂ ಹರಸ್ಯ ಚ ಪರಾಹನ್ತಾಕೃತೇ ಸ್ವಾತ್ಮನೋ
ಭರ್ತ್ರೇ ಭಕ್ತಜನಸ್ಯ ವಾಞ್ಛಿತಸಮಸ್ತಾಭೀಷ್ಟದಾತ್ರೇ ಸದಾ || ೬ ||
(ಸ್ವಾತ್ಮನೋ ಭರ್ತ್ರೇ) ನನ್ನ ಒಡೆಯನಾದ, (ಭಕ್ತಜನಸ್ಯ ವಾಞ್ಛಿತ-ಸಮಸ್ತ-ಅಭೀಷ್ಟ-ದಾತ್ರೇ) ತನ್ನ ನಿಜಭಕ್ತನ ಸಮಸ್ತ ವಾಂಛಿತಾರ್ಥಗಳನ್ನು ಕೊಡುವವನಾದ, (ಸಮಸ್ತಜಗತ್-ಉತ್ಪತ್ತಿ-ಸ್ಥಿತಿ-ಧ್ವಂಸಿತ-ಕ್ರೀಡೇಚ್ಛಾ-ಸಮ್-ಉಪಾತ್ತ-ದಿವ್ಯ-ವಪುಷೇ) ಇಡೀ ಜಗತ್ತಿನ / ಸೃಷ್ಟಿಯ ಉಂಟುಮಾಡುವಿಕೆ, ಪಾಲನೆ, ಸಂಹಾರಗಳನ್ನು ತನ್ನ ಕ್ರೀಡೆಯೆಂಬಂತೆ ನಡೆಸುವ ದಿವ್ಯಲೀಲಾದೇಹನಾದ, (ವಿಧಾತುಃ ಧಾತುಃ) ಅದಕ್ಕಾಗಿ ವಿಶೇಷವಾಗಿ ಸೃಷ್ಟಿಮಾಡುವ ಸೃಷ್ಟಿಕರ್ತ ಚತುರ್ಮುಖ ಬ್ರಹ್ಮನಾಗಿ ರೂಪತಾಳಿದ, (ರಕ್ಷಿತ್ರೇ ಹರೇಃ ಚ) ಪಾಲಿಸುವವನಾಗಿ ಶ್ರೀಹರಿಯಾದ ಹಾಗೂ (ನಿತರಾಂ ಪರಾ-ಹನ್ತಾ-ಕೃತೇ ಹರಸ್ಯ) ಸದಾ ನಿರಂತರವೂ ಸೃಷ್ಟಿಯ ಸಕಲವನ್ನೂ ಕಾಲಕಾಲಕ್ಕೆ ಸಂಹರಿಸುತ್ತಿರುವ ಹರನಾದ, (ಶ್ರೀರುದ್ರಾಯ ನಮಃ) ಸಾಂಬಶಿವನಿಗೆ ನಮಸ್ಕಾರವು.
|| ಇತಿ ಪರಮೇಶ್ವರನಿಗೆ ಪ್ರಣಾಮಗಳು ||
ಏಕಸ್ಸನ್ನಪಿ ಕಾರ್ಯಕಾರಣಚಿದಾಕಾರೈಸ್ತ್ರಿಭಿರ್ಯೋऽಷ್ಟಧಾ
ತ್ರೇಧಾ ಕೇವಲಮೇಕಧಾ ಚ ನಿಖಿಲಂ ವಿಶ್ವಂ ಚರಂ ಚಾಚರಮ್ |
ಸ್ವಾನ್ತಸ್ಸ್ವೇನ ಬಿಭರ್ತಿ ತಸ್ಯ ಕುರುತೇ ಜನ್ಮಾದಿಸದ್ಭಾಸಯ-
-ತ್ಯನ್ತರ್ವ್ಯಾಪ್ಯ ಬಹಿಶ್ಚ ದೇವ ಭವತೇ ಸಾಮ್ಬಾಯ ತುಭ್ಯಂ ನಮಃ || ೭ ||
ಒಬ್ಬನೇ ಇರುವವನಾದರೂ, ಬ್ರಹ್ಮಾ-ವಿಷ್ಣು-ಮಹೇಶ್ವರರೆಂಬ ಅನುಕ್ರಮವಾಗಿ ಮೂರು ಕಾರ್ಯ-ಕಾರಣ-ಚಿದಾಕಾರ (ಜ್ಞಾನಸ್ವರೂಪ) ಗಳಿಂದಲೂ, ಅಥವಾ ಸತ್ತ್ವ-ರಜ-ತಮಗಳೆಂಬ ತ್ರಿಗುಣಗಳಿಂದಲೂ, ಅಥವಾ ಸತ್-ಚಿತ್-ಆನಂದಸ್ವರೂಪಗಳಿಂದಲೂ,
"ಜಲಂ ವಹ್ನಿಸ್ತಥಾ ಯಷ್ಟಾ (ಆತ್ಮಾ) ಸೂರ್ಯಾಚನ್ದ್ರಮಸೌ ತಥಾ |
ಆಕಾಶಂ ವಾಯುರವನೀ ಮೂರ್ತಯೋऽಷ್ಟೌ ಪಿನಾಕಿನಃ ||"
ಎಂಬಂತೆ ಅಷ್ಟಮೂರ್ತಿಸ್ವರೂಪಗಳಿಂದಲೂ, ಸೃಷ್ಟಿ-ಸ್ಥಿತಿ-ಲಯಕರ್ತೃಗಳೆಂಬ ಮೂರು ರೂಪಗಳಿಂದಲೂ, ಹಾಗೂ ಕೇವಲ ಏಕಮೇವವಾದ ಪರಬ್ರಹ್ಮ / ಪರಾಶಕ್ತಿ ಸ್ವರೂಪನಾಗಿಯೂ, ನಿಖಿಲ ವಿಶ್ವವನ್ನೂ, ಸಮಸ್ತ ಚರಾಚರಗಳನ್ನೂ ತನ್ನೊಳಗೇ ತನ್ನಿಂದಲೇ ಭರಿಸಿ ಧರಿಸಿ ತುಂಬಿಕೊಳ್ಳುತ್ತಾನೆ. ಹಾಗೆಯೇ, ಇವೆಲ್ಲದರ ಸೃಷ್ಟಿ-ಸ್ಥಿತಿ-ಸಂಹಾರ(ತಿರೋಧಾನ)-ನಿಗ್ರಹ-ಅನುಗ್ರಹಗಳೆಂಬ ಪಂಚಕೃತ್ಯಗಳನ್ನು ನಡೆಸುತ್ತಾ, ಈ ವಿಶ್ವವು ನಿಜವೆಂಬ ಭಾಸವನ್ನುಂಟುಮಾಡುತ್ತಾ, ಇವೆಲ್ಲದರ ಒಳಹೊರಗೆ ವ್ಯಾಪಿಸಿ ಜಗತ್ತನ್ನೆಲ್ಲ ಬೆಳಗುತ್ತಿರುವ ಯಾವ ಶಕ್ತಿಸಮೇತನಾದ ಪರಮೇಶ್ವರ ಪರಮಾತ್ಮ ಭಗವಂತನಿರುವನೋ ಅಂತಹ ದೇವದೇವನಾದ ನಿನಗೆ ನಮಸ್ಕಾರಗಳು.
ದುರ್ವಿಜ್ಞೇಯತರಶ್ಚತುರ್ಮುಖಮುಖಾನಾಮಪ್ಯನೇಕಾಕೃತಿಃ
ಸರ್ವೇಶಃ ಸ್ವಯಮೇವಮಾದಿಚರಿತೈರ್ಯಃ ಸರ್ವತಃ ಸರ್ವದಾ |
ಸರ್ವಂ ವಿಶ್ವಮವನ್ ಶಿವಃ ಸ್ಫುಟತಯಾ ಸರ್ವಾತ್ಮನಾ ದೃಶ್ಯತೇ
ವ್ಯಕ್ತಾವ್ಯಕ್ತತರಾಯ ತೇ ಭವ ನಮಸ್ತಸ್ಮೈ ಚ ವಿಶ್ವಾತ್ಮನೇ || ೮ ||
ಚತುರ್ಮುಖ ಬ್ರಹ್ಮನ ನಾಲ್ಕು ಮುಖಗಳಿಂದಲೂ ತಿಳಿಯಲು ಬಹಳ ಕಠಿನತರವಾಗುವಷ್ಟು ಅನೇಕ ರೂಪಗಳುಳ್ಳವನೂ, ತಾನೇ ಸರ್ವರ / ಎಲ್ಲರ ಈಶ / ಅಧಿಪತಿಯೂ ಎಂದು ಮುಂತಾಗಿ ಯಾವಾಗಲೂ ಇಡೀ ವಿಶ್ವವನ್ನು ರಕ್ಷಿಸುತ್ತಾ, ಶಿವನು ಸರ್ವಾಂತರಾತ್ಮನಾಗಿ ತೋರುತ್ತಾನೆ. ಅಂತಹ ತದ್ ವಾಚ್ಯನೂ, ವ್ಯಕ್ತ-ಅವ್ಯಕ್ತ (ಇಂದ್ರಿಯಗೋಚರ ಹಾಗೂ ಇಂದ್ರಿಯಾತೀತ) ಸ್ವರೂಪನೂ, ವಿಶ್ವಾತ್ಮನೂ ಆದ ಭವನೇ! ನಿನಗೆ ನಮಸ್ಕಾರವು.
ಉಗ್ರಂ ತ್ವಾಂ ನಮಸಾ ಪ್ರಸಾದ್ಯ ಜಗತಾಂ (ಸ)ನ್ನಿಗ್ರಹಾನುಗ್ರಹ-
-ವ್ಯಗ್ರಸ್ಯೋಗ್ರತಮಾಸ್ತಥಾ ಶಿವತಮಾ ಘೋರಾ ಅಘೋರಾಸ್ತನೂಃ |
ದೇವ ಸ್ತೌಮಿ ನಮಸ್ಕರೋಮ್ಯಭಯಮಪ್ಯದ್ಯೈವ ಯಾಚೇ ವಿಭೋ
ತ್ವತ್ತಃ ಕಃ ಶರಣಾರ್ಥಿನಾಂ ಶರಣದಃ ಶ್ರೀರುದ್ರ ಶಮ್ಭೋ ಪ್ರಭೋ || ೯ ||
ಅಯ್ಯಾ ರುದ್ರದೇವನೆ! ಉಜ್ಜ್ವಲವಾಗಿ ಬೆಳಗುವುದರಿಂದ ಉಗ್ರನೆನಿಸಿದ ನಿನ್ನನ್ನು ನಮಸ್ಕಾರದಿಂದ ಪ್ರಸನ್ನೀಕರಿಸಿ, ಜಗತ್ತಿನ ನಿಗ್ರಹ-ಅನುಗ್ರಹಗಳಲ್ಲೇ ತೊಡಗಿರುವ ಉಗ್ರತಮ / ಘೋರರೂಪ ಹಾಗೂ ಶಿವತಮ / ಅಘೋರ ಮಂಗಲಸ್ವರೂಪಗಳೆರಡನ್ನೂ ಸ್ತುತಿಸುತ್ತೇನೆ, ನಮಸ್ಕರಿಸುತ್ತೇನೆ. ಅಯ್ಯಾ ವಿಭುವೇ! ದೇವನೇ!! ಈದಿನವೇ ನಿನ್ನಲ್ಲಿ ಅಭಯವನ್ನು ಯಾಚಿಸುತ್ತೇನೆ. ಹೇ ಸಾಂಬಶಿವನೆ! ಶಂಭೋ!! ಪ್ರಭೋ!!! ಶರಣಾರ್ಥಿಗಳಿಗೆ, ಉತ್ತಮವಾದ ಆಶ್ರಯವನ್ನು ಬಯಸಿರುವವರಿಗೆ, ನಿನಗಿಂತ ಉತ್ತಮವಾದ ಆಶ್ರಯವನ್ನೀಯಬಲ್ಲವರು ಯಾರು ತಾನೇ ಇದ್ದಾರು?
Comments
Post a Comment