ರುದ್ರಭಾಷ್ಯಸಮುಚ್ಚಯಪೀಠಿಕಾ ೩

ರುದ್ರಭಾಷ್ಯಸಮುಚ್ಚಯಪೀಠಿಕಾ ೩

ಆರ್. ಯಲ್. ಕಶ್ಯಪರ ಅರವಿಂದವಿಚಾರಾಧಾರಿತ ಆಧ್ಯಾತ್ಮಿಕಭಾಷ್ಯದ ಭೂಮಿಕೆಯಿಂದ

ಶಿವ-ರುದ್ರ ನಮಕ ಸೂಕ್ತ 
(೧೩೩ ಯಜುಸ್ ಮಂತ್ರಗಳು, ೩೦ ಋಕ್ ಮಂತ್ರಗಳು ಮತ್ತು  ಋಗ್ವೇದದಲ್ಲೂ ಇರುವ ೭ ಋಕ್ ಮಂತ್ರಗಳು)

ಪ್ರಸಿದ್ಧವಾದ ಪುರುಷಸೂಕ್ತ ಹಾಗೂ ಗಾಯತ್ರೀಮಂತ್ರಗಳ ಬಳಿಕ ನಾಲ್ಕು ವೇದಗಳಲ್ಲೂ ಅತ್ಯಂತ ಪ್ರಸಿದ್ಧವಾಗಿರುವ ಭಾಗವೆಂದರೆ ಬಹುಶಃ ರುದ್ರಾಧ್ಯಾಯವೇ. ಕೆಲವರು ಇದನ್ನು ಪ್ರತಿನಿತ್ಯ ಪಠಿಸುತ್ತಾರೆ. ಬಹುಮಂದಿ ಕನಿಷ್ಠಪಕ್ಷ ವರ್ಷಕ್ಕೊಮ್ಮೆಯೋ, ಶಿವರಾತ್ರಿಯಂದೋ ಸಾಮೂಹಿಕ / ವೈಯಕ್ತಿಕವಾಗಿ ಪಠಿಸುತ್ತಾರೆ. ಸಪ್ತ(೭)ಕಾಂಡಾತ್ಮಕವಾದ ತೈತ್ತಿರೀಯಕೃಷ್ಣಯಜುಸ್ಸಂಹಿತೆಯ ೪ನೇ ಕಾಂಡದಲ್ಲಿ ಬರುವ ೧೧ ಅನುವಾಕಗಳಿಂದ ಕೂಡಿದ ಈ ರುದ್ರಪ್ರಶ್ನವನ್ನು ಶತರುದ್ರೀಯಹವನಕ್ಕೂ, ಪ್ರಸ್ತುತ ಹೆಚ್ಚಾಗಿ ಪ್ರಚಲಿತದಲ್ಲಿರುವ ರುದ್ರಾಭಿಷೇಕಕ್ಕೂ ವಿನಿಯೋಗಿಸುತ್ತಾರೆ. ಈ ರುದ್ರಾಭಿಷೇಕದಲ್ಲಿ ಮೊದಲು ಲಘುನ್ಯಾಸ / ಮಹಾನ್ಯಾಸ, ಬಳಿಕ ರುದ್ರಾಧ್ಯಾಯ ಹಾಗೂ ಸರ್ವೋ ವೈ ರುದ್ರ / ತ್ವರಿತ ರುದ್ರ ಮತ್ತು ಕೊನೆಗೆ ಚಮಕಪ್ರಶ್ನ (ತೈ.ಸಂ.ಕಾಂಡ ೪. ಪ್ರಪಾಠಕ ೭)— ಇವುಗಳನ್ನು ಪಠಿಸಲಾಗುತ್ತದೆ. 

{ ಲಘುನ್ಯಾಸಮಂತ್ರದ ವಿಸ್ತೃತವಾದ ವಿವರಣೆಯನ್ನು ಪ್ರಸ್ತುತ ಕೃತಿಯ ಲೇಖಕ-ಸಂಪಾದಕರಾದ ಡಾ || ಕೃಷ್ಣಮೂರ್ತಿಶಾಸ್ತ್ರೀ, ದಂಬೆ-ಪುಣಚ— ಇವರದೇ ಇನ್ನೊಂದು ಕೃತಿಯಾದ "ಲಘುನ್ಯಾಸಮಂತ್ರಾರ್ಥವಿಸ್ತಾರಃ" ದಲ್ಲಿ ನೋಡಬಹುದು. ಪ್ರಸ್ತುತ ಕೃತಿಯಾದ "ರುದ್ರಭಾಷ್ಯಸಮುಚ್ಚಯಃ" ದಲ್ಲಿ ರುದ್ರಾಧ್ಯಾಯದ ವಿವಿಧ ವ್ಯಾಖ್ಯಾನಗಳನ್ನು ನೋಡಬಹುದು. ಮುಂದೆ ಇದೇ ಲೇಖಕರಿಗೆ ಭಗವದನುಗ್ರಹಪೂರ್ವಕ ಅವಕಾಶ ದೊರೆತಲ್ಲಿ ತ್ವರಿತರುದ್ರ / "ಸರ್ವೋ ವೈ ರುದ್ರ" ಮಂತ್ರಾರ್ಥಮಂಜರೀ ಹಾಗೂ ಚಮಕಭಾಷ್ಯಸಮುಚ್ಚಯಃ— ಗಳನ್ನೂ ಪ್ರಕಟಿಸುವ ಯೋಜನೆಯಿದೆ. }

ಒಂದುನೂರು ವಿಧಗಳಲ್ಲಿ ಇದರಲ್ಲಿ ರುದ್ರನ ಸ್ತುತಿಯಿರುವುದರಿಂದಲೂ / ನೂರಿಪ್ಪತ್ತೊಂದು ಬಾರಿ ಇದನ್ನು ಪಠಿಸಿ ರುದ್ರನನ್ನು ಸ್ತುತಿಸುವುದರಿಂದಲೂ ಇದಕ್ಕೆ ಶತರುದ್ರೀಯಸೂಕ್ತವೆಂದೂ ಹೆಸರಿದೆ. ಪ್ರಸಿದ್ಧವಾದ ೬೦ ಉಪನಿಷತ್ತುಗಳಲ್ಲಿ ಇದನ್ನೂ ಒಂದೆಂದು ಪರಿಗಣಿಸಲಾಗಿದೆ. ಕೈವಲ್ಯೋಪನಿಷತ್ತಿನ (ದ್ವಿತೀಯಖಂಡದ) ೨೪ನೆಯ ಮಂತ್ರವು ಹೀಗೆ ಹೇಳಿದೆ—

"ಸಮಸ್ತಸಾಕ್ಷಿಂ ಸದಸದ್ವಿಹೀನಂ ಪ್ರಯಾತಿ ಶುದ್ಧಂ ಪರಮಾತ್ಮರೂಪಮ್ |"

ಸಮಸ್ತಕ್ಕೂ ಸಾಕ್ಷಿಯಾಗಿರುವ, ಸತ್-ಅಸತ್ ಎಂಬ ಭೇದವಿರದ, ಪರಮಾತ್ಮನ ವಿಶುದ್ಧರೂಪವನ್ನು ಹೊಂದುತ್ತಾನೆ.

 "ಯಃ ಶತರುದ್ರೀಯಮಧೀತೇ ಸೋऽಗ್ನಿಪೂತೋ ಭವತಿ ಸ ವಾಯುಪೂತೋ ಭವತಿ ಸ ಆತ್ಮಪೂತೋ ಭವತಿ ಸ ಸುರಾಪಾನಾತ್ಪೂತೋ ಭವತಿ ಸ ಬ್ರಹ್ಮಹತ್ಯಾತ್ಪೂತೋ ಭವತಿ ಸ ಸುವರ್ಣಸ್ತೇಯಾತ್ಪೂತೋ ಭವತಿ ಸ ಕೃತ್ಯಾಕೃತ್ಯಾತ್ಪೂತೋ ಭವತಿ ತಸ್ಮಾದವಿಮುಕ್ತಮಾಶ್ರಿತೋ ಭವತಿ ಅತ್ಯಾಶ್ರಮೀ ಸರ್ವದಾ ಸಕೃದ್ವಾ ಜಪೇತ್ || ಅನೇನ ಜ್ಞಾನಮಾಪ್ನೋತಿ ಸಂಸಾರಾರ್ಣವನಾಶನಮ್ | ತಸ್ಮಾದೇವಂ ವಿದಿತ್ವೈನಂ ಕೈವಲ್ಯಂ ಫಲಮಶ್ನುತೇ ಕೈವಲ್ಯಂ ಫಲಮಶ್ನುತ ಇತಿ ||"

(ಇದರ ಅರ್ಥವನ್ನು ಹಿಂದೆ ಭಟ್ಟಭಾಸ್ಕರಭಾಷ್ಯ ಪೀಠಿಕೆಯಲ್ಲಿ ಹೇಳಿದೆ)

ಜಾಬಾಲೋಪನಿಷತ್ತಿನ ಮಂತ್ರ ೩ರಲ್ಲಿ ಬ್ರಹ್ಮಚಾರಿಗಳ ಪ್ರಶ್ನೆಗೆ ಯೋಗಿ ಯಾಜ್ಞವಲ್ಕ್ಯರ ಉತ್ತರದಲ್ಲಿ ಹೇಳಿದ ರುದ್ರಜಪದಿಂದ ಅಮೃತತ್ತ್ವವೆಂಬ ವಿಚಾರವನ್ನು ಈ ಹಿಂದೆಯೇ ಸ್ಕಂದದೇವಭಾಷ್ಯಾದಿಗಳ ಪೀಠಿಕೆಯಲ್ಲಿ ಹೇಳಿದೆ. ಇನ್ನು ಅಥರ್ವಶಿರ / ಅಥರ್ವಶೀರ್ಷ ಉಪನಿಷತ್ತಿನಲ್ಲಂತೂ ರುದ್ರನ ಮಹಿಮೆಯನ್ನು ಬಹುವಾಗಿ ಪ್ರಶಂಸಿಸಲಾಗಿದೆ. ಹಾಗೆಯೇ, ಶತಪಥ ಬ್ರಾಹ್ಮಣ (೯.೧.೧.೨) ದಲ್ಲೂ ಸಮೃದ್ಧವಾದ ರುದ್ರಪ್ರಶಂಸೆಯಿದೆ. ಈ ರುದ್ರಾಧ್ಯಾಯದ ಹಲವು ಮಂತ್ರಗಳು ನೀಲರುದ್ರೋಪನಿಷತ್ತಿನಲ್ಲೂ ಕಂಡುಬರುತ್ತವೆ. 


ಇದರ ೧ನೆಯ ಅನುವಾಕ (೧೫ ಋಕ್), ೧೦ (೧೨ ಋಕ್ಕುಗಳಲ್ಲಿ ೭ ಋಗ್ವೇದದಲ್ಲೂ ಇವೆ) ಮತ್ತು ೧೧ ನೆಯ ಅನುವಾಕ (೧೦ ಋಕ್, ಕೊನೆಯ ೪ ಯಜುಸ್) ಗಳ  ೩೭ ಮಂತ್ರಗಳು ನಿರ್ದಿಷ್ಟ ಛಂದಸ್ಸುಗಳಲ್ಲಿರುವ ಪದ್ಯಾತ್ಮಕ ಋಕ್ ಮಂತ್ರಗಳಾಗಿವೆ. ಆದರೆ, ಅವುಗಳಲ್ಲಿ ೩೦ ಋಕ್ಕುಗಳು ಇಂದು ಲಭ್ಯವಿರುವ ಋಗ್ವೇದದಲ್ಲಿ ಕಂಡುಬರುವುದಿಲ್ಲ. ಹಾಗೆಯೇ, ಋಗ್ವೇದದಲ್ಲೂ ಬರುವ ಉಳಿದ ೭ ಋಕ್ಕುಗಳನ್ನು ಹೊರತುಪಡಿಸಿ, ಇತರ ಎಲ್ಲ ೧೩೩ ಮಂತ್ರಗಳೂ ಛಂದೋಬದ್ಧವಲ್ಲದ ಆದರೆ ತಾಳ-ಲಯಬದ್ಧವಾದ ನಿಗದ / ಯಜುರ್ಮಂತ್ರಗಳಾಗಿವೆ. 


ಚತುರ್ವೇದಗಳಿಗೆ ಹಿಂದಿಯಲ್ಲಿ ಸರಳವಾಗಿ "ಸುಬೋಧಭಾಷ್ಯ" ವಿರಚಿಸಿದ, ಪುಣೆಯ ಸ್ವಾಧ್ಯಾಯ ಮಂಡಲದ ಸಂಸ್ಥಾಪಕರಾದ ಪದ್ಮಭೂಷಣ ಪಂಡಿತ್ ಶ್ರೀಪಾದ ದಾಮೋದರ ಸಾತವಲೇಕರ್ ರವರ ಪ್ರಕಾರ, ಈ ರುದ್ರಾಧ್ಯಾಯದ ಋಷಿ ಅಗ್ನಿ. ಕೃಷ್ಣಯಜುರ್ವೇದದ ತೈತ್ತಿರೀಯಸಂಹಿತೆಗೆ "ಜ್ಞಾನಯಜ್ಞ" ವೆಂಬ ಭಾಷ್ಯವನ್ನು ಸಂಸ್ಕೃತದಲ್ಲಿ ವಿರಚಿಸಿದ ಭಟ್ಟ ಭಾಸ್ಕರ ಮಿಶ್ರರ ಪ್ರಕಾರ ಇದರ ಋಷಿ ಶಂಭು. ಇದರ ಬಹಳಷ್ಟು ಮಂತ್ರಗಳು ಶುಕ್ಲಯಜುರ್ವೇದದ ವಾಜಸನೇಯ ಮಾಧ್ಯಂದಿನ ಸಂಹಿತೆಯ ೧೬ನೆಯ ಅಧ್ಯಾಯದಲ್ಲೂ ಬರುತ್ತವೆ. ಸುಪ್ರಸಿದ್ಧವಾದ "ನಮಶ್ಶಿವಾಯ" (ನಮಸ್ಕಾರವು ಶಿವನಿಗೆ)ಎಂಬ ಪಂಚಾಕ್ಷರೀಮಂತ್ರವೂ ಈ ರುದ್ರಾಧ್ಯಾಯದಲ್ಲೇ ಬರುವುದು (ತೈ.ಸಂ.೪.೫.೮.೧೦). 


ಶಿವ-ಬ್ರಹ್ಮಾ-ವಿಷ್ಣು— ತ್ರಿಮೂರ್ತಿಗಳು


ಪುರಾಣಗಳಲ್ಲಿ ಮಾತ್ರ ವಿಷ್ಣು-ಶಿವರಿಗೆ ಉನ್ನತ ಸ್ಥಾನ; ಆದರೆ ವೇದಗಳಲ್ಲಿ ಇಂದ್ರಾಗ್ನಿ ಮುಂತಾದವರಿಗಿಂತ ಅನಂತರದ ಸ್ಥಾನವಿದೆ ಎಂಬ ಪಾಶ್ಚಾತ್ಯ ದೃಷ್ಟಿಕೋನವು ಸರಿಯಲ್ಲವೆಂಬುದು ಮಹರ್ಷಿ ಅರವಿಂದ(ಘೋಷ)ರ  "ದಿ ಸೀಕ್ರೆಟ್ ಆಫ್ ದಿ ವೇದಾಸ್ " ಎಂಬ ಕೃತಿಯಲ್ಲಿನ ಅಭಿಪ್ರಾಯವಾಗಿದೆ. 


ವೈದಿಕ ದೇವತೆಗಳ ಮಹತ್ತ್ವವನ್ನು ಆ ದೇವತೆಗಳ ಕಾರ್ಯಸಾಮರ್ಥ್ಯದಿಂದಲೂ, ಕಾರ್ಯಸ್ವರೂಪದಿಂದಲೂ ಅಳೆಯಬೇಕೇ ಹೊರತು ಅವರ ಕುರಿತಾಗಿರುವ ಮಂತ್ರ-ಸೂಕ್ತಾದಿಗಳ ಬಾಹುಳ್ಯದಿಂದಾಗಲೀ, ಸಂಖ್ಯೆಯಿಂದಾಗಲೀ, ಋಷಿಗಳ ಪ್ರಾರ್ಥನೆಯ ಭಾವತೀವ್ರತೆಯಿಂದಾಗಲೀ ಅಳೆಯತಕ್ಕದ್ದಲ್ಲ. 


ಉದಾ— ಅಗ್ನಿ-ಇಂದ್ರರ ಕುರಿತು ಬಹಳಷ್ಟು ಸೂಕ್ತಗಳಿದ್ದರೂ ಅವರು ವಿಷ್ಣು-ರುದ್ರರಿಗಿಂತ ದೊಡ್ಡವರೇನಲ್ಲ ("ತದ್ವಿಷ್ಣೋಃ ಪರಮಂ ಪದಂ ಸದಾ ಪಶ್ಯನ್ತಿ ಸೂರಯಃ"— ಸೂರಿಗಳು / ಜ್ಞಾನಿಗಳು ಆ ವಿಷ್ಣುವಿನ ಪರಮಪದವಾದ ಮೋಕ್ಷಧಾಮ ವೈಕುಂಠವನ್ನು ಯಾವಾಗಲೂ ಧ್ಯಾನದಲ್ಲಿ ಕಾಣುತ್ತಿರುತ್ತಾರೆ; "ಏಕ ಏವ ರುದ್ರೋ ನ ದ್ವಿತೀಯಾಯ ತಸ್ಥೇ"— ರುದ್ರನೋರ್ವನೇ ಪರಮಾತ್ಮನಾಗಿರುವನು, ಅವನಿಗೆರಡನೆಯವನೆಂದು ಯಾರೂ ಇಲ್ಲ ಎಂಬ ಶ್ರುತಿವಾಕ್ಯಗಳೇ ಇದಕ್ಕೆ ಪ್ರಮಾಣ); ಆದರೆ ಅವರ ಕಾರ್ಯಗಳು ತಾತ್ಕಾಲಿಕವಾಗಿ ಮಹತ್ತ್ವಪೂರ್ಣವೂ, ಸಕಾರಾತ್ಮಕವೂ, ಪ್ರಬಲವೂ ಆಗಿ ಸಾಧಕರನ್ನು ಪ್ರಚೋದಿಸಬಲ್ಲವುಗಳಾಗಿವೆ. ಹಾಗೆಂದು ಮಳೆಗರೆಯುವುದು (ಮನೋಭಿಮಾನಿ ಇಂದ್ರ), ಸುಡುವುದು (ಮಾರ್ಗದರ್ಶಕ ಅಗ್ನಿ) ಮುಂತಾದವು ಸೃಷ್ಟಿ (ಬ್ರಹ್ಮಾ), ಸ್ಥಿತಿ (ವಿಷ್ಣು), ಲಯ (ರುದ್ರ) ದಂತಹ ಅನಂತವೂ, ಅನಾದಿಯೂ, ನಿತ್ಯವೂ, ಶಾಶ್ವತವೂ ಆದ ಮಹತ್ಕಾರ್ಯಗಳಿಗಿಂತ ಮಿಗಿಲಲ್ಲವಷ್ಟೆ? ಆದರೆ, ಮಾನವನ ಬದುಕಿನಲ್ಲಿ ಆಯಾಕಾಲಕ್ಕೆ ತಾತ್ಕಾಲಿಕವಾಗಿ ಇಂದ್ರಾದಿಗಳ ಕಾರ್ಯಗಳು ಬಹು ಪ್ರಯೋಜನಕಾರಿಯಾಗಿವೆ. 


ರುದ್ರಸಂಭೂತರಾದ ಮರುತ್ತುಗಳು ಮಹಾಕಾರ್ಯಗಳನ್ನು ತಾತ್ಕಾಲಿಕವಾಗಿ ಎಸಗುವವರಾದರೂ, ಅವರ ಕುರಿತು ಬಹುಸಂಖ್ಯೆಯ ಸೂಕ್ತಗಳಿದ್ದರೂ, ಅವರು ತಮ್ಮ ತಂದೆಯಾದ ರುದ್ರನಿಗಿಂತಲೂ ದೈವಿಕತೆಯಲ್ಲಿ ಶ್ರೇಷ್ಠರಾಗಲಾರರು. ಆದರೆ, ವೇದದ ಮೂಲದೇವತೆಗಳಾದ ವಿಷ್ಣು-ರುದ್ರ-ಬ್ರಹ್ಮಣಸ್ಪತಿಗಳು (ಕಾಲಾಂತರದಲ್ಲಿ ಪುರಾಣದ ತ್ರಿಮೂರ್ತಿಗಳೆನಿಸಿದ ವಿಷ್ಣು-ಶಿವ-ಬ್ರಹ್ಮಾ) ವೇದಕಾರ್ಯಗಳಿಗೆ ಸೂಕ್ತ ವಾತಾವರಣವನ್ನು ನಿರ್ಮಿಸಿ, ತೆರೆಮರೆಯಲ್ಲಿ ಪರೋಕ್ಷವಾಗಿ ಸಕ್ರಿಯವಾಗಿದ್ದು, ದೈನಂದಿನ ಚಟುವಟಿಕೆಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳದೇ, ಸಹಾಯ ನೀಡುತ್ತಾರೆ.


ಬ್ರಹ್ಮಾ


ವೇದದ ಬ್ರಹ್ಮಣಸ್ಪತಿಯು ವಾಣಿಯಿಂದ (ಶಬ್ದಬ್ರಹ್ಮದಿಂದ, ವಾಕ್ಕಿನಿಂದ, ತನ್ನ ಪತ್ನಿಸ್ವರೂಪವಾದ ವಾಗ್ದೇವಿಯ ಶಕ್ತಿಯೊಂದಿಗೆ), ಸೃಷ್ಟಿಯನ್ನು ಸೃಜಿಸುವವನಾಗಿದ್ದಾನೆ. ಅವನು ಮಹಾಪ್ರಳಯಕಾಲದ ಅಂಧಕಾರದ ಅದೃಶ್ಯ ಅಚೇತನಸಾಗರದಿಂದ, ಬೆಳಕಿನಿಂದ ಕೂಡಿದ ದೃಶ್ಯಪ್ರಪಂಚಕ್ಕೆ ಮುನ್ನುಡಿಯುತ್ತಾನೆ ಮತ್ತು ಚರಾಚರಗಳಲ್ಲಿ ಊರ್ಧ್ವಗತಿಪ್ರಜ್ಞೆಯ ರೂಪುಗೊಳ್ಳುವಿಕೆಯನ್ನು, ತನ್ನ ವಿದ್ಯಾಧಿದೇವತೆಯಾದ ಶಾರದೆಯ ಶಕ್ತಿಯಿಂದ ಸದ್ವಿದ್ಯೆಯನ್ನು ಉಂಟುಮಾಡುವ ಮೂಲಕ ತ್ವರಿತಗೊಳಿಸುತ್ತಾನೆ. ಬ್ರಹ್ಮಣಸ್ಪತಿಯ ಈ ಚರಾಚರಗುರುತ್ವರೂಪೀ ಸೃಜನಶೀಲತೆಯಿಂದಾಗಿ ಕಾಲಾಂತರದ ಸೃಷ್ಟಿಕರ್ತ ಬ್ರಹ್ಮನ ಪರಿಕಲ್ಪನೆ ಮೂಡಿತು.


ಶಿವ-ರುದ್ರ


ಅಂತಹ ಬ್ರಹ್ಮಣಸ್ಪತಿಯ ಸೃಷ್ಟಿಯ ಊರ್ಧ್ವಗತಿಗೆ ರುದ್ರನು ಶಕ್ತಿಯನ್ನೊದಗಿಸುತ್ತಾನೆ. ವೇದದಲ್ಲಿ ಅವನು ಸ್ವರ್ಗದಲ್ಲೇ ಪ್ರಬಲನಾದವನೆನ್ನಲಾಗಿದೆ. ಆದರೆ ಆತನು ಭೂಮಿಯ ಮೇಲೆ ತನ್ನ ಕಾರ್ಯವನ್ನಾರಂಭಿಸುತ್ತಾನೆ. ನಮ್ಮ ಏಳ್ಗೆಯ ೫ ಸ್ತರಗಳಲ್ಲಿ ಅರ್ಪಣೆಗೆ ಚಾಲನೆಯನ್ನು ನೀಡುತ್ತಾನೆ. ಉಗ್ರಸ್ವರೂಪಿಯಾದ ಅವನು ಪ್ರಜ್ಞಾವಂತನ ಊರ್ಧ್ವಮುಖ ಉತ್ಕ್ರಮಣವನ್ನು ಮುನ್ನಡೆಸುತ್ತಾನೆ. ಆತನ ಶಕ್ತಿಯು ಎಲ್ಲ ದುಷ್ಟಶಕ್ತಿಗಳ ವಿರುದ್ಧ ಸೆಣಸಾಡುತ್ತದೆ, ಪಾತಕನನ್ನು ಮತ್ತು ಶತ್ರುವನ್ನು ಕೊಲ್ಲುತ್ತದೆ; ನ್ಯೂನತೆ-ಅಡ್ಡಿಗಳನ್ನು ಸದೆಬಡಿಯುವ ಅವನು ದೇವತೆಗಳಲ್ಲೆಲ್ಲಾ ಅತಿ ಭಯಂಕರನು; ವೈದಿಕ ಋಷಿಗಳಿಗೆ ನಿಜವಾದ ಭಯವಿರುವುದು ಅವನೊಬ್ಬನ ಬಗ್ಗೆ ಮಾತ್ರ. ರುದ್ರ-ಶಕ್ತಿಯ ಮಗನೇ ಭೂಮಿಯಲ್ಲಿ ಪುರಾಣಸ್ಕಂದನ ಪ್ರಥಮರೂಪವಾದ ಅಗ್ನಿಕುಮಾರನಾಗಿರುವನು. ಹಿಂಸೆಯಿಂದ ತಮ್ಮನ್ನು ತಾವು ಬೆಳಗಿಕೊಳ್ಳುವ ಅತಿ ಮಹತ್ವದ ಶಕ್ತಿಗಳಾದ ಮರುತ್ ದೇವತೆಗಳು ರುದ್ರನ ಮಕ್ಕಳು. 


ಅಗ್ನಿ ಮತ್ತು ಮರುತ್ ದೇವತೆಗಳು ರುದ್ರನ ಪ್ರಥಮ ಐಹಿಕ, ಅಂಧಕಾರ ಸೃಷ್ಟಿಯಿಂದ ಆಲೋಚನೆಯ ಸ್ವರ್ಗಗಳ, ತೇಜೋಮಯ ಲೋಕಗಳೆಡೆಗಿನ ಭೀಷಣ ಹೋರಾಟದ ನಾಯಕರಾಗಿದ್ದಾರೆ, ಸಾಧಕರಿಗೆ ಸಹಾಯಕ ಮಾರ್ಗದರ್ಶಕರಾಗಿದ್ದಾರೆ. ಅಂತರ್ಬಾಹ್ಯವಾದ ಸಕಲ ನ್ಯೂನತೆಗಳನ್ನು ತುಂಡರಿಸುವ ಉಗ್ರನೂ ಬಲಿಷ್ಠನೂ ಆದ ಈ ರುದ್ರನು ಒಂದು ಕರುಣಾಮಯರೂಪವನ್ನೂ ಹೊಂದಿದ್ದಾನೆ. ಅವನು ಸರ್ವೋತ್ಕೃಷ್ಟ ಧನ್ವನ್ತರಿಯಾಗಿದ್ದಾನೆ / ಪ್ರಥಮ ದೇವವೈದ್ಯನಾಗಿದ್ದಾನೆ ("ಪ್ರಥಮೋ ದೈವ್ಯೋ ಭಿಷಕ್"— ರುದ್ರಾಧ್ಯಾಯ). ವಿರೋಧಿಗಳನ್ನು ನಾಶಪಡಿಸುತ್ತಾನೆ. ಸಹಾಯಬೇಡಿದರೆ, ಆರಾಧಿಸಿದರೆ ಎಲ್ಲ ಗಾಯಗಳನ್ನೂ, ಕೆಡುಕುಗಳನ್ನೂ ಮತ್ತು ಯಾತನೆಗಳನ್ನೂ ("ರುಜಾನ್ ರೋಗಾನ್ ದ್ರಾವಯತೀತಿ ರುದ್ರಃ") ಉಪಶಮನಗೊಳಿಸುತ್ತಾನೆ. 


ಅವನ ವರವು ಹೋರಾಡುವ ಶಕ್ತಿಯನ್ನೂ, ಅಂತಿಮ ಶಾಂತಿ-ಆನಂದಗಳನ್ನೂ ಕೊಡುವಂಥದ್ದು. ಹೀಗೆ ವೇದದೇವತೆಯಾದ ರುದ್ರನು ನಾಶಕಾರಕನೂ, ಉಪಶಮನಕಾರಕನೂ, ಶಿವನಾಗಿ ಶುಭಕರನೂ, ಶಂಕರನೂ, ರುದ್ರನಾಗಿ ಭೀಮ ಭಯಂಕರನೂ, ಪರಮ ಸ್ವಾತಂತ್ರ್ಯ ಹಾಗೂ ಶಾಂತಿಯನ್ನು ಅನುಭವಿಸುವ ಆದಿಯೋಗಿಯೂ ಆಗಿರುವನು.


ವಿಷ್ಣು


ಬ್ರಹ್ಮಣಸ್ಪತಿಯ ವಾಕ್-ರಚನೆಗಳಿಗೂ, ರುದ್ರನ ಶಕ್ತಿಯ ಚಾಲನೆಗೂ ಅಗತ್ಯವಾದ ಸ್ಥಿರವಾದ ಮೂಲವಸ್ತುಗಳಿಂದ ಆಕಾಶ / ಅವಕಾಶ— ಊರ್ಧ್ವಲೋಕಗಳ ಅತ್ಯುನ್ನತ ಗುರಿಗಳನ್ನು ವಿಷ್ಣುವು ಒದಗಿಸುತ್ತಾನೆ. ವಿಷ್ಣುವಿನ ಅತ್ಯುನ್ನತ ಸ್ಥಾನವು ವೇದಪಯಣದ ಗುರಿಯಾಗಿದೆ. ವೇದದ ವಿಷ್ಣುವು ಸ್ಥಿತಿಕಾರಕ ಹಾಗೂ ಪ್ರೇಮದ ಅಧಿದೇವತೆಯಾದ ಪುರಾಣದ ನಾರಾಯಣನ ಸ್ವಾಭಾವಿಕ ಪೂರ್ವಗಾಮಿ ಹಾಗೂ ಉಗಮಸ್ಥಾನವಾಗಿದ್ದಾನೆ. 


ಅಹೋಬಲಭಟ್ಟರ 'ಕಲ್ಪಲತಾ'ನಾಮಕ ಪದ್ಯಾತ್ಮಕ ರುದ್ರಭಾಷ್ಯದ ಪೀಠಿಕಾ


ಚೇತೋಭೃಙ್ಗ ಮಹೇಶಪಾದಕಮಲಂ ಯದ್ವಿಷ್ಣುನೇತ್ರಾರ್ಚಿತಂ
ತತ್ತ್ವಂ ಮೌನಿಮನೋಮಧುವ್ರತವರಾವಾತಾಶ್ರಯಂ ಸಂಶ್ರಯಮ್ |
ತತ್ಪಾದಾಬ್ಜಮಗಣ್ಯಪುಣ್ಯವಿಭವಪ್ರಾಪ್ಯನ್ತತೋ ದುಸ್ತ್ಯಜಂ
ಮಾ ಮಾ ಸನ್ತ್ಯಜ ಮಾಮಕೋ ಯದಿ ತದಾ ತತ್ರೈವ ನಿತ್ಯಂ ವಸ || ೧ ||


(ಚೇತೋಭೃಙ್ಗ!) ಎಲೈ ನನ್ನ ಮನವೆಂಬ ದುಂಬಿಯೆ! ಮಧುಕರವೆ!! ಭೃಂಗವೆ!!! (ಯದ್ ವಿಷ್ಣುನೇತ್ರಾರ್ಚಿತಮ್) ಯಾವುದು ಸಾಕ್ಷಾತ್ ವಿಷ್ಣುವಿನ ನೇತ್ರಕಮಲಗಳಿಂದ ಅರ್ಚಿಸಲ್ಪಟ್ಟಿತೋ, (ಮೌನಿಮನೋಮಧುವ್ರತವರಾವಾತಾಶ್ರಯಂ ಸಂಶ್ರಯಮ್) ಯಾವುದು ಮುನಿಗಳ ಮನಸ್ಸೆಂಬ ಮಧುವ್ರತ / ದುಂಬಿಯಿಂದ ಚೆನ್ನಾಗಿ ಆಶ್ರಯಿಸಲ್ಪಟ್ಟಿರುವ ಉತ್ತಮವಾದ ಆಶ್ರಯಸ್ಥಾನವೋ, (ತತ್ ಪಾದಾಬ್ಜಮ್ ಅಗಣ್ಯ-ಪುಣ್ಯ-ವಿಭವ-ಪ್ರಾಪ್ಯಮ್) ಯಾವನ ಪಾದಕಮಲವು ಅನಂತಪುಣ್ಯಮಹಿಮೆಯಿಂದ ಮಾತ್ರ ಪ್ರಾಪ್ತವಾಗುವುದೋ, (ತತಃ, ದುಸ್ತ್ಯಜಮ್) ಯಾವುದನ್ನು ಒಮ್ಮೆ ಪಡೆದರೆ ಬಳಿಕ ತ್ಯಜಿಸಲು ಅಸಾಧ್ಯವೋ, (ತತ್ ಮಹೇಶಪಾದಕಮಲಂ ತ್ವಮ್ ಮಾ ಮಾ ಸಂ-ತ್ಯಜ) ಅಂತಹ ಮಹೇಶನ ದಿವ್ಯಪಾದಕಮಲವನ್ನು ಬಿಡಬೇಡ, ಎಂದೂ ಬಿಡಬೇಡ. (ಯದಿ ಮಾಮಕಃ, ತದಾ) ನೀನು ನನ್ನ ಮನಸ್ಸೇ ಹೌದಾದರೆ, (ತತ್ರ ಏವ ನಿತ್ಯಂ ವಸ) ಆ ಮಹೇಶಪಾದಪದ್ಮದಲ್ಲೇ ಸದಾ ಮಧುಪಾನ ಮಾಡುತ್ತಾ ನಿತ್ಯವೂ ವಾಸವಾಗಿರು.


ಸಂಸಾರ-ಸಾಗರ-ಸಮುತ್ತರಣ-ಪ್ರವೀಣಾಂ
ಶ್ರೀಮಾನಹೋಬಲ-ಮಹಾಕವಿರಾಜರಾಜಃ |
ಶ್ರೀರುದ್ರಭಾಷ್ಯತರುಮುಜ್ಜ್ವಲಪದ್ಯರೂಪಾಂ
ಚಕ್ರೇ ಸದಾಶಿವ-ಕೃಪಾ-ಸಮುಪಾತ್ತ-ವಿದ್ಯಃ || ೨ ||


(ಸಂಸಾರ-ಸಾಗರ-ಸಮುತ್ತರಣ-ಪ್ರವೀಣಾಮ್) ಸಂಸಾರವೆಂಬ ಘೋರಸಾಗರದಿಂದ ಮೇಲೆತ್ತುವುದರಲ್ಲಿ ಪ್ರಾವೀಣ್ಯವುಳ್ಳ, (ಉಜ್ಜ್ವಲಪದ್ಯರೂಪಾಮ್) ಉನ್ನತವಾಗಿ ಪ್ರಕಾಶಿಸುವ ಪಾದಗಳಿಂದ ಕೂಡಿ ಪದ್ಯವೆನಿಸಿದ ಸಾಹಿತ್ಯಪ್ರಕಾರವಾಗಿರುವ, (ಶ್ರೀರುದ್ರಭಾಷ್ಯತರುಮ್) ಅವಿದ್ಯಾಪರಿಹಾರಕವಾದ ವಿದ್ಯಾಸಂಪತ್ತೆಂಬ ಶ್ರೀ / ಸಿರಿಯನ್ನು ಹೊಂದಿರುವ ರುದ್ರಭಾಷ್ಯ / ರುದ್ರಮಂತ್ರಾರ್ಥವಿವರಣೆಯೆಂಬ ಬೇಡಿದ್ದನ್ನು, ಕಲ್ಪಿಸಿದ್ದನ್ನು, ಯೋಚಿಸಿದ್ದನ್ನು ಕೊಡಬಲ್ಲಂತಹ ಕಲ್ಪವೃಕ್ಷವನ್ನು, (ಸದಾಶಿವ-ಕೃಪಾ-ಸಮುಪಾತ್ತ-ವಿದ್ಯಃ) ಆ ಪರಬ್ರಹ್ಮಸ್ವರೂಪಿಯಾದ ಸದಾಶಿವನ ಕೃಪೆಯಿಂದ ಜ್ಞಾನಸಂಪನ್ನನಾದ, (ಶ್ರೀಮಾನಹೋಬಲ-ಮಹಾಕವಿರಾಜರಾಜಃ) ಜ್ಞಾನಶ್ರೀಯುತನಾದ ಅಹೋಬಲನೆಂಬ ಕವಿಶ್ರೇಷ್ಠರಲ್ಲಿ ಶ್ರೇಷ್ಠನಾದವನು (ಚಕ್ರೇ) ವಿರಚಿಸಿದನು. 


["ಭಾಷ್ಯತೇ ವಿವೃತತಯಾ ವರ್ಣ್ಯತೇ ಇತಿ ಭಾಷ್ಯಮ್"— ವಿವರವಾಗಿ ವರ್ಣಿಸುವಿಕೆಯೇ ಭಾಷ್ಯವು. "ಸೂತ್ರಾರ್ಥೋ ವರ್ಣ್ಯತೇ ಯತ್ರ ಪದೈಃ ಸೂತ್ರಾನುಸಾರಿಭಿಃ | ಸ್ವಪದಾನಿ ಚ ವರ್ಣ್ಯನ್ತೇ ಭಾಷ್ಯಂ ಭಾಷ್ಯವಿದೋ ವಿದುಃ ||"— ಯಾವುದರಲ್ಲಿ ಸೂತ್ರರೂಪದಲ್ಲಿರುವ ಸಂಕ್ಷಿಪ್ತವಾಗಿರುವ ವಿಚಾರದ ಅರ್ಥವು ಸೂತ್ರಕ್ಕೆ ಅನುಸಾರವಾದ ಪದಗಳಿಂದ  ವರ್ಣಿಸಲ್ಪಡುವುದೋ, ವರ್ಣನೆಯಲ್ಲಿ ತಾನು ಬಳಸಿದ ಪದಗಳನ್ನೂ ಎಲ್ಲಿ ವರ್ಣಿಸಲಾಗುವುದೋ / ವಿವರಿಸಲಾಗುವುದೋ, ಅಂತಹ ವಿವರಣೆಯನ್ನು ಭಾಷ್ಯವೆಂದು ಭಾಷ್ಯವಿದರು / ಭಾಷ್ಯದ ಕುರಿತು ಬಲ್ಲವರು ತಿಳಿಯುವರು.— ಭರತನ ಲಿಂಗಾದಿಸಂಗ್ರಹಟೀಕಾ. "ಸೂತ್ರೋಕ್ತವಾದ ಅರ್ಥದ ಪ್ರಪಂಚಕ / ಚರ್ಚೆಯೇ ಭಾಷ್ಯವು"— ಹೇಮಚಂದ್ರ. "ಕಥನೀಯಂ ಕಥ್ಯಂ, ವದನೀಯಂ ವದ್ಯಂ ಭಾಷಣೀಯಂ ವಾ ಭಾಷ್ಯಮ್"— ಹೇಳಬೇಕಾದದ್ದೇ ಭಾಷ್ಯವು. ಸೂತ್ರರೂಪೀ ವಿಚಾರದ ಅರ್ಥವನ್ನು ಹೇಗೆ ಯಥಾರ್ಥವಾಗಿ ಇದ್ದದ್ದನ್ನು ಇದ್ದಂತೆಯೇ ಹೇಳಬೇಕಿದೆಯೋ, ಹಾಗೆ ಹೇಳುವಿಕೆಯೇ ಭಾಷ್ಯವು.]


ಅಹೋಬಲಃ ಪೂಜಿತಕಾಲಕಾಲಃ
ಶ್ರೀಕಾಲಕಾಲಾರ್ಚಿತನೀತಕಾಲಃ |
ಶ್ರೀರುದ್ರಭಾಷ್ಯೋಜ್ಜ್ವಲಚಿತ್ತಮೂಲೋ
ಜಯತ್ಯಯಂ ಶಙ್ಕರದತ್ತಶೀಲಃ || ೩ ||


(ಪೂಜಿತಕಾಲಕಾಲಃ) ಕಾಲಕ್ಕೂ ಕಾಲನಾದ ಮಹಾಕಾಲ ಪರಶಿವನನ್ನು ಪೂಜಿಸಿದ, (ಶ್ರೀಕಾಲಕಾಲಾರ್ಚಿತ-ನೀತ-ಕಾಲಃ) ಶಕ್ತ್ಯಾತ್ಮಕ ಕಾಲಪುರುಷನಾದ ಪರಮೇಶ್ವರನ ಅರ್ಚನೆಯಲ್ಲೇ ಕಾಲಯಾಪನೆಮಾಡಿದ, (ಶಙ್ಕರದತ್ತಶೀಲಃ) ಆ ಭಗವಾನ್ ಶಂಕರನಲ್ಲೇ ತನ್ನ ಪ್ರವರ್ತನೆಯೆಲ್ಲವನ್ನೂ, ಕರ್ಮಗಳೆಲ್ಲವನ್ನೂ ಸಮರ್ಪಿಸಿದ ಚಾರಿತ್ರ್ಯವುಳ್ಳ, (ಶ್ರೀರುದ್ರಭಾಷ್ಯೋಜ್ಜ್ವಲಚಿತ್ತಮೂಲಃ) ಶ್ರೀರುದ್ರಮಂತ್ರದ ಭಾಷ್ಯ / ವಿವರಣೆಯಲ್ಲೇ ತನ್ನ ಪ್ರಜ್ವಲಿಸುತ್ತಿರುವ ಅಗ್ನಿಯಷ್ಟು ಹರಿತವಾದ ಮನಶ್ಶಕ್ತಿಯನ್ನು ದೃಢವಾಗಿರಿಸಿದ, (ಅಯಮ್ ಅಹೋಬಲಃ ಜಯತಿ) ಈ ಅಹೋಬಲಭಟ್ಟನು ಸದಾ ಜಯಶೀಲನಾಗಲಿ.


ಅಹೋಬಲೋ ಭಾಸ್ಕರವಂಶಭಾನುಃ
ಶ್ರೀರುದ್ರಮನ್ತ್ರಾರ್ಥವಿಚಾರದಕ್ಷಃ |
ಶ್ರೀರುದ್ರಭಾಷ್ಯಂ ತನುತೇ ನಿತಾನ್ತಂ
ಪ್ರಕಾಶಯನ್ ರುದ್ರಮಗಾಧಭಾವಮ್ || ೪ ||


(ಭಾಸ್ಕರವಂಶಭಾನುಃ) ಭಾಸ್ಕರನ ವಂಶದಲ್ಲೇ ಸೂರ್ಯನಂತೆ ಪ್ರಕಾಶಿಸುವ, (ಅಹೋಬಲಃ) ಅಹೋಬಲ ಭಟ್ಟರು, (ಶ್ರೀರುದ್ರಮನ್ತ್ರಾರ್ಥವಿಚಾರದಕ್ಷಃ) ಶ್ರೀರುದ್ರಮಂತ್ರದ ಅರ್ಥವಿಚಾರದಲ್ಲಿ ಸಮರ್ಥರಾಗಿದ್ದು, (ಅಗಾಧಭಾವಮ್ ರುದ್ರಂ ಪ್ರಕಾಶಯನ್) ಅತಿ ಅಗಾಧ / ಆಳವಾಗಿ ಎಲ್ಲದರೊಳಗೆ ಗುಪ್ತವಾಗಿರುವ ರುದ್ರನನ್ನು ಪ್ರಕಾಶಕ್ಕೆ ತರುತ್ತಾ, (ಶ್ರೀರುದ್ರಭಾಷ್ಯಂ) ಶ್ರೀರುದ್ರಭಾಷ್ಯವನ್ನು / ರುದ್ರಾಧ್ಯಾಯದ ವ್ಯಾಖ್ಯಾನ-ವಿವರಣೆಯನ್ನು, (ನಿತಾನ್ತಂ ತನುತೇ) ಅತಿಶಯವಾಗಿ ವಿಸ್ತರಿಸುತ್ತಾರೆ.


ಬ್ರಹ್ಮಾದ್ಯೈರಪಿ ರುದ್ರನಾಮಮಹಿಮಾ ನ ಜ್ಞಾಯತೇ ಸರ್ವಥಾ
ರುದ್ರಾರ್ಥೋ ಹಿ ಫಣೀನ್ದ್ರಪಾಣಿನಿಗುರುವ್ಯಾಸಾದಿಭಿಶ್ಚ ಧ್ರುವಮ್ |
ಕೈಸ್ತತ್ಪ್ರಾಪ್ತಮಥಾಪಿ ಶಙ್ಕರಕೃಪಾಸಂಪ್ರಾಪ್ತವಿದ್ಯಾಸ್ಯ ಮೇ
ನಾಶಕ್ಯಂ ಹಿ ತತಃ ಕರೋಮಿ ಶುಭದಂ ಶ್ರೀರುದ್ರಭಾಷ್ಯಂ ಮುದಾ || ೫ ||


(ರುದ್ರನಾಮಮಹಿಮಾ) ಭಗವಾನ್ ರುದ್ರನ ನಾಮದ ಮಹಿಮೆಯು, (ಬ್ರಹ್ಮಾದ್ಯೈಃ ಅಪಿ) ಚತುರ್ಮುಖಬ್ರಹ್ಮನೇ ಮೊದಲಾದವರಿಂದಲೂ, (ಸರ್ವಥಾ) ಖಂಡಿತವಾಗಿಯೂ ಪೂರ್ಣವಾಗಿ, (ನ ಜ್ಞಾಯತೇ) ತಿಳಿಯಲ್ಪಡುವುದಿಲ್ಲ. (ರುದ್ರಾರ್ಥಃ, ಹಿ) ರುದ್ರಾಧ್ಯಾಯ ಮಂತ್ರದ ಅರ್ಥವಾದರೋ, (ಫಣೀನ್ದ್ರ-ಪಾಣಿನಿ-ಗುರು-ವ್ಯಾಸಾದಿಭಿಃ ಚ) ನಾಗರಾಜನಾದ ಆದಿಶೇಷ ಅಥವಾ ಅವನ ಅವತಾರಿಯಾದ ವ್ಯಾಕರಣಮಹಾಭಾಷ್ಯಕರ್ತೃಗಳಾದ ಪತಂಜಲಿಮುನಿ, ಅಷ್ಟಾಧ್ಯಾಯೀವ್ಯಾಕರಣಸೂತ್ರಕಾರರಾದ ಪಾಣಿನಿಮಹರ್ಷಿ ಹಾಗೂ ಸಕಲರಿಗೂ ಮೂಲಗುರುಸ್ವರೂಪರಾದ ವೇದವ್ಯಾಸರು— ಇವರಿಂದಲೂ, (ಧ್ರುವಮ್) ಖಂಡಿತವಾಗಿಯೂ ಪೂರ್ಣವಾಗಿ ತಿಳಿಯಲ್ಪಟ್ಟಿರಲಾರದು. ಹೀಗಿರುವಾಗ, (ತತ್) ಅದು / ರುದ್ರಮಂತ್ರಾರ್ಥವು, (ಕೈಃ ಪ್ರಾಪ್ತಮ್) ಯಾರಿಂದ ತಾನೇ ಪ್ರಾಪ್ತವಾಗಿರಲು / ಪಡಕೊಂಡಿರಲು / ಪೂರ್ಣವಾಗಿ ತಿಳಿಯಲ್ಪಟ್ಟಿರಲು ಸಾಧ್ಯ? (ಅಥಾಪಿ) ಹಾಗಿದ್ದರೂ, (ಶಂಕರಕೃಪಾ-ಸಂಪ್ರಾಪ್ತ-ವಿದ್ಯಾ-ಅಸ್ಯ ಮೇ) ಆ ಭಗವಾನ್ ಶಂಕರನ ಕೃಪೆಯಿಂದ ಪ್ರಾಪ್ತವಿದ್ಯನಾದ / ವಿದ್ಯೆಯನ್ನು ಪಡೆದ ಈ ನನಗೆ, (ನ ಅಶಕ್ಯಮ್) ಅಸಾಧ್ಯವಲ್ಲ. (ತತಃ, ಹಿ) ಹಾಗಾದ್ದರಿಂದ, (ಶುಭದಂ ಶ್ರೀರುದ್ರಭಾಷ್ಯಮ್) ಸಕಲರಿಗೂ ಮಂಗಲವನ್ನುಂಟುಮಾಡುವ ಶ್ರೀರುದ್ರಮಂತ್ರದ ವ್ಯಾಖ್ಯಾನವನ್ನು, (ಮುದಾ ಕರೋಮಿ) ಆನಂದಿಂದ ವಿರಚಿಸುವೆನು.


ಶ್ರೀರುದ್ರಭಾಷ್ಯಂ ಕುರು ಪದ್ಯರೂಪಂ 
ವಿದ್ಯಾನವದ್ಯಾ ಯದಿ ತೇ ತದೇತಿ |
ಸಂಪ್ರೇರಿತಃ ಸಾಂಬಸದಾಶಿವೇನ
ಶ್ರೀರುದ್ರಭಾಷ್ಯಂ ವಿಶದಂ ಕರೋಮಿ || ೬ ||


(ಅನವದ್ಯಾ ವಿದ್ಯಾ ಯದಿ ತೇ ತದಾ) ಅವದ್ಯವಲ್ಲದ, ನಿಂದ್ಯವಲ್ಲದ, ದೋಷಪೂರ್ಣವಲ್ಲದ ಅನವದ್ಯವಾದ ವಿದ್ಯೆಯು ನಿನ್ನದಾದರೆ, (ಪದ್ಯರೂಪಂ ಶ್ರೀರುದ್ರಭಾಷ್ಯಂ ಕುರು ಇತಿ) ಪದ್ಯರೂಪವಾದ ಶ್ರೀರುದ್ರಭಾಷ್ಯವನ್ನು ಮಾಡು, ವಿರಚಿಸು ಎಂಬುದಾಗಿ, (ಸಾಂಬಸದಾಶಿವೇನ ಸಂಪ್ರೇರಿತಃ) ಆ ಪಾರ್ವತೀಸಹಿತನಾದ ಸದಾಶಿವನಿಂದ ಚೆನ್ನಾಗಿ / ಸಮ್ಯಕ್ ಪ್ರೇರಿತನಾಗಿ / ಪ್ರಚೋದಿಸಲ್ಪಟ್ಟು, (ಶ್ರೀರುದ್ರಭಾಷ್ಯಂ ವಿಶದಂ ಕರೋಮಿ) ಶ್ರೀರುದ್ರಮಂತ್ರವ್ಯಾಖ್ಯಾನವನ್ನು ಸ್ಪಷ್ಟವಾಗಿಯೂ, ನಿರ್ದೋಷವಾಗಿಯೂ ವಿವರಿಸಿ ವಿರಚಿಸುವೆನು.


ಶ್ರೀರುದ್ರಮನ್ತ್ರಾರ್ಥವಿಚಾರಮಾತ್ರ-
ಮನ್ತ್ರಾರ್ಥಬೋಧಾರ್ಥಮಹಂ ಕರೋಮಿ |
ಅಥೋ ಮಯಾ ಸಾ ಹ್ಯಧಿಕಾಧಿಕಂ ತಥಾ 
ನ ಗ್ರನ್ಥವಿಸ್ತಾರಭಯೇನ ಲಿಖ್ಯತೇ || ೭ ||


(ಶ್ರೀರುದ್ರಮನ್ತ್ರಾರ್ಥವಿಚಾರಮಾತ್ರ-
ಮನ್ತ್ರಾರ್ಥಬೋಧಾರ್ಥಮ್) ಶ್ರೀರುದ್ರಮಂತ್ರದ ಅರ್ಥಜ್ಞಾನಕ್ಕಾಗಿ ಅರ್ಥದ ವಿಚಾರವನ್ನು ಮಾತ್ರ, (ಅಹಂ ಕರೋಮಿ) ನಾನು ಮಾಡುತ್ತೇನೆ. ವಿನಿಯೋಗ, ಛಂದಸ್ಸು, ವ್ಯಾಕರಣಾದಿಗಳ ಕುರಿತು ಹೆಚ್ಚು ಹೇಳುವುದಿಲ್ಲ ಎಂದು ತಾತ್ಪರ್ಯ. (ಅಥೋ ತಥಾ) ಹಾಗಾಗಿ, (ಗ್ರಂಥವಿಸ್ತಾರಭಯೇನ ಹಿ) ಕೃತಿಯ ಅತಿವಿಸ್ತಾರದ ಭಯದಿಂದಲಾದರೋ, (ಅಧಿಕಾಧಿಕಮ್) ಹೆಚ್ಚು ಹೆಚ್ಚಾಗಿ, ಸುದೀರ್ಘವಾಗಿ, (ಸಾ) ಆ ರುದ್ರವ್ಯಾಖ್ಯೆಯು, (ಮಯಾ) ನನ್ನಿಂದ, (ನ ಲಿಖ್ಯತೇ) ಬರೆಯಲ್ಪಡುವುದಿಲ್ಲ. ಸಂಕ್ಷೇಪವಾಗಿ ಅರ್ಥ-ತಾತ್ಪರ್ಯವನ್ನು ಮಾತ್ರ ಬರೆಯುತ್ತೇನೆಂಬ ಭಾವವು.


ಬ್ರಹ್ಮಚಾರಿಣ ಇತ್ಯಾದಿ ಮಹೋಪನಿಷದಿ ಸ್ಫುಟಮ್ |
ಶ್ರೀಮದಾಚಾರ್ಯಮಹಿಮಾ ಪುರಾಣೇಷು ಶ್ರುತಿಷ್ವಪಿ || ೮ ||


(ಶ್ರೀಮದಾಚಾರ್ಯಮಹಿಮಾ) ಶ್ರೀಮದಾಚಾರ್ಯ ಶಂಕರರ ಅಥವಾ ಸದ್ಗುರುಗಳ ಮಹಿಮೆಯು, (ಮಹೋಪನಿಷದಿ ಶ್ರುತಿಷು) ಮಹೋಪನಿಷತ್ತೇ ಮೊದಲಾದ ಉಪನಿಷತ್ತು / ಶ್ರುತಿಗಳಲ್ಲಿಯೂ, (ಪುರಾಣೇಷು ಅಪಿ) ಪುರಾಣಾದಿಗಳಲ್ಲಿಯೂ, (ಬ್ರಹ್ಮಚಾರಿಣಃ, ಇತ್ಯಾದಿ) ಬ್ರಹ್ಮಚಾರಿಗಳಾದ ಗುರುಗಳು / ಇಂದ್ರಿಯಸುಖಾಪೇಕ್ಷೆಯಿಲ್ಲದೆ, ಬ್ರಹ್ಮವಸ್ತುವನ್ನೇ ಸದಾ ಚಿಂತಿಸುತ್ತಿರುವವರೇ ಸದ್ಗುರುಗಳು ಎಂದು ಮುಂತಾಗಿ, (ಸ್ಫುಟಮ್) ಸ್ಪಷ್ಟವಾಗಿ ಹೇಳಿದೆ / ಸ್ಪಷ್ಟಪಡಿಸಿದೆ.


ಶ್ರೀರುದ್ರಾಧ್ಯಾಯಮಧ್ಯಸ್ಥಮೇಕೈಕಮಪಿ ನಾಮ ಯತ್ |
ತದನನ್ತಮಹಾಪಾಪಮಹಾವನಹುತಾಶನಮ್ || ೯ ||

(ಶ್ರೀರುದ್ರಾಧ್ಯಾಯ-ಮಧ್ಯ-ಸ್ಥಮ್) ಶ್ರೀರುದ್ರಾಧ್ಯಾಯದೊಳಗಿನ, (ಯತ್) ಯಾವ, (ಏಕ-ಏಕಮ್ ಅಪಿ ನಾಮ) ಒಂದೊಂದೂ ಶಿವನಾಮವಿದೆಯೋ, (ತತ್) ಆ ಪ್ರತಿಯೊಂದೂ ಸಹ, (ಅನನ್ತ-ಮಹಾಪಾಪ-ಮಹಾವನ-ಹುತಾಶನಮ್) ಗೊಂಡಾರಣ್ಯದಂತಹ ಮಹಾಪಾಪಗಳ ಸಮೂಹವನ್ನೇ ಹುತಾಶನ / ಅಗ್ನಿ ಯಂತೆ ಸುಟ್ಟುಬಿಡುವುದು.

ನ ಜಾನೇ ಗಿರಿಜಾಜಾನೇ ರುದ್ರಾಧ್ಯಾಯಜಪಾತ್ಪರಮ್ |
ಯಜ್ಜಾಪಾದಬ್ಜಜಾದೀನಾಂ ಪದಂ ಪದತಲೀಕೃತಮ್ || ೧೦ ||

(ಗಿರಿಜಾ-ಜಾನೇ!) ಅಯ್ಯಾ ಗಿರಿಜಾಪತಿಯೇ!, (ರುದ್ರಾಧ್ಯಾಯ-ಜಪಾತ್) ರುದ್ರಾಧ್ಯಾಯದ ಜಪಕ್ಕಿಂತ,  (ಪರಮ್) ಶ್ರೇಷ್ಠವಾದದ್ದನ್ನು, (ನ ಜಾನೇ) ನಾನು ತಿಳಿಯೆನು (ಕಾಣೆನು). (ಯತ್ ಜಾಪಾತ್) ಯಾವ ಇದನ್ನು ಜಪಿಸಿದ್ದರಿಂದಾಗಿ, (ಅಪ್-ಜ-ಜ-ಆದೀನಾಮ್) ಅಬ್ಜಜ (ಅಪ್— ನೀರು, ಅಬ್ಜ— ನೀರಿನಲ್ಲಿ ಜನಿಸಿದ ತಾವರೆ, ಅಬ್ಜಜ— ತಾವರೆಯಲ್ಲಿ ಉದಿಸಿದ ಚತುರ್ಮುಖ ಬ್ರಹ್ಮಾ) / ನೀರಜಜಾತ / ಕಮಲಜ ಬ್ರಹ್ಮನೇ ಮುಂತಾದವರ, (ಪದಮ್) ಸ್ಥಾನವು, (ಪದತಲೀಕೃತಮ್) ನಮ್ಮ ಕಾಲಬುಡಕ್ಕೆ ಬಂದುಬಿಡುವುದು, ಅರ್ಥಾತ್ ಬ್ರಹ್ಮಾದಿಗಳೂ ರುದ್ರಾಧ್ಯಾಯಿಗಳನ್ನು ಗೌರವಿಸುವರು.

ಕಿಂ ಮನ್ತ್ರೈರಿತರೈಃ ಕಿಮಧ್ವರಶತೈರ್ಗೋಕೋಟಿದಾನೈಶ್ಚ ಕಿಮ್ 
ಕಿಂ ಚಾನ್ದ್ರಾಯಣಭೂಪ್ರದಕ್ಷಿಣತುಲಾಕೋಟಿಪ್ರದಾನೈರಪಿ |
ಕಿಂ ತೂದ್ಧೂಲಿತಕಾಯಕಾನ್ತಿಕಲಿತಃ ಶುದ್ಧಸ್ತ್ರಿಪುಣ್ಡ್ರಾಙ್ಕಿತೋ
ರುದ್ರಾಕ್ಷೈಶ್ಚ ಸಮಾವೃತಃ ಶಿವರತಃ ಶ್ರೀರುದ್ರಮಾವರ್ತಯೇತ್ || ೧೧ ||

(ಇತರೈಃ ಮನ್ತ್ರೈಃ ಕಿಮ್?) ಬೇರೆ ಮಂತ್ರಗಳಿಂದೇನು ಉಪಯೋಗ? (ಅಧ್ವರಶತೈಃ ಕಿಮ್?) ನೂರು ಯಾಗಗಳಿಂದೇನು ಫಲ? (ಚ) ಹಾಗೆಯೇ, (ಗೋ-ಕೋಟಿ-ದಾನೈಃ ಕಿಮ್?) ಕೋಟ್ಯಂತರ ಸಂಖ್ಯೆಯ ಗೋದಾನದಿಂದ ಏನು ಪ್ರಯೋಜನ? (ಚಾನ್ದ್ರಾಯಣ-ಭೂ-ಪ್ರದಕ್ಷಿಣ-ತುಲಾ-ಕೋಟಿ-ಪ್ರದಾನೈಃ ಅಪಿ ಕಿಮ್?) ಕೃಚ್ಛ್ರ-ಚಾಂದ್ರಾಯಣಾದಿ ನೂರಾರು ಕಠಿನವಾದ ವ್ರತಗಳು, ಭೂಮಿ-ಗುಡಿ-ಗೋಪುರ-ಮಂದಿರಾದಿ ಪ್ರದಕ್ಷಿಣೆಗಳು, ಕೋಟಿಗಟ್ಟಲೆ ತುಲಾಭಾರಾದಿ ದಾನಗಳು— ಇವೇ ಮುಂತಾದವುಗಳಿಂದ ಪ್ರಯೋಜನವೇನು? (ಉದ್ಧೂಲಿತ-ಕಾಯ-ಕಾನ್ತಿ-ಕಲಿತಃ) ಭಸ್ಮೋದ್ಧೂಲನ ಮಾಡಿದ / ವಿಭೂತಿಯನ್ನು ಹಚ್ಚಿಕೊಂಡ ದೇಹಕಾಂತಿಯಿಂದ ಕೂಡಿರುವಿಕೆ, (ಶುದ್ಧ-ತ್ರಿಪುಣ್ಡ್ರ-ಅಙ್ಕಿತಃ ತು ಕಿಮ್?) ಶುದ್ಧವಾದ ಭಸ್ಮದ ಮೂರು ಅಡ್ಡನಾಮಗಳ ಗುರುತಿರುವಿಕೆ— ಬರಿಯ ಇವುಗಳಿಂದೇನು ಫಲ? (ರುದ್ರಾಕ್ಷೈಃ ಸಮಾವೃತಃ ಚ) ರುದ್ರಾಕ್ಷಕಾಯಿಗಳಿಂದ ಚೆನ್ನಾಗಿ ಅಲಂಕೃತನಾಗಿ ಹಾಗೂ,  (ಶಿವರತಃ) ಸದಾ ಶಿವನಲ್ಲೇ ನೆಟ್ಟ ಮನಸ್ಸುಳ್ಳವನಾಗಿ, (ಶ್ರೀರುದ್ರಮ್ ಆವರ್ತಯೇತ್) ಶ್ರೀರುದ್ರಮಂತ್ರವನ್ನು ಪಠಿಸಬೇಕು. ಅದರಿಂದ ಸರ್ವೇಷ್ಟಾರ್ಥಗಳೂ ಸಿದ್ಧಿಸುವುವೆಂದು ತಾತ್ಪರ್ಯ.


ಸೃಷ್ಟಿ-ಪಾಲನ-ಸಂಹಾರಾऽನ್ಯೋಭವತ್ವಾದ್ಯುಪಾಧಿಮಾನ್ |
ಕರೋತಿ ಸ ಮಹಾರುದ್ರಂ ಶ್ರೀರುದ್ರಾಧ್ಯಾಯದೇವತಾ || ೧೨ ||


(ಶ್ರೀರುದ್ರಾಧ್ಯಾಯದೇವತಾ) ಶ್ರೀರುದ್ರಾಧ್ಯಾಯಮಂತ್ರಪ್ರತಿಪಾದ್ಯ ದೇವತೆಯಾದ, (ಸಃ) ಅವನು / ಪರಶಿವನು / ಪರಬ್ರಹ್ಮನು / ಪರಾತ್ಪರನು, (ಮಹಾರುದ್ರಮ್) ಮಹಾರುದ್ರನೂ, ಮಹಾವಿಷ್ಣುಸ್ವರೂಪಿಯೂ ಆದ ತನ್ನನ್ನು ಅಥವಾ ರುದ್ರೋಪಾಸಕನನ್ನು, ಸೃಷ್ಟಿ-ಪಾಲನ-ಸಂಹಾರ-ಅನ್ಯೋಭವತ್ವ-ಆದಿ-ಉಪಾಧಿಮಾನ್) ಸೃಷ್ಟಿಕರ್ತಾ-ಪಾಲಕ-ಸಂಹಾರಕ-ತಿರೋಭಾವಕ-ಅನುಗ್ರಹಕಾರಕ ಎಂಬ ಪಂಚಕೃತ್ಯಾದಿ ನಾನಾ ಉಪಾಧಿ / ಗುರುತು ಗಳನ್ನುಳ್ಳವನನ್ನಾಗಿ, (ಕರೋತಿ) ಮಾಡುತ್ತಾನೆ. ಅಥವಾ, ಪಂಚಕೃತ್ಯಾದಿ ಉಪಾಧಿಗಳುಳ್ಳ ಶ್ರೀರುದ್ರಾಧ್ಯಾಯಪ್ರತಿಪಾದ್ಯದೇವತೆಯಾದ ಪರಶಿವನು ಲೋಕದಲ್ಲಿ ಮಹಾಭಯಂಕರವಾದ ಸಂಸಾರರೂಪೀ ಭವಸಾಗರವನ್ನು ಉಂಟುಮಾಡಿ ಭವನೂ ಎನಿಸಿರುವನು.

ತಸ್ಯ ದೇವಾದಿದೇವಸ್ಯ ಶ್ರುತಿಪ್ರೋಕ್ತಂ ತನುದ್ವಯಮ್ |
ತಸ್ಯೈತೇತ್ಯಾದಿ ವೇದೇನ ಬೋಧಿತಂ ಖಲು ತದ್ದ್ವಯಮ್ || ೧೩ ||

(ಶ್ರುತಿಪ್ರೋಕ್ತಮ್) ವೇದೋಕ್ತವಾಗಿ / ಶ್ರುತಿಗಳಲ್ಲಿ ಹೇಳಿದಂತೆ, (ತಸ್ಯ ದೇವಾದಿದೇವಸ್ಯ) ಅಂತಹ ದೇವತೆಗಳೆಲ್ಲರ ಆದಿದೇವನಿಗೆ, (ತನುದ್ವಯಮ್) ಸಗುಣ-ನಿರ್ಗುಣವೆಂಬುದಾಗಿಯೂ, ಶಿವ-ಶಕ್ತಿಯೆಂಬುದಾಗಿಯೂ, ಪುರುಷ-ಪ್ರಕೃತಿಯೆಂಬುದಾಗಿಯೂ ಎರಡು ದೇಹ / ರೂಪಗಳಿವೆ. (ತದ್-ದ್ವಯಮ್) ಇವೆರಡೂ ರೂಪಗಳೂ, (ತಸ್ಯ ಇತ್ಯಾದಿ) ಆ ಮೂಲ ದೇವದೇವ, ಪರಬ್ರಹ್ಮ, ಪರಮಾತ್ಮಾ, ಪರಮೇಶ್ವರ, ನಾರಾಯಣ, ಪರಶಿವ, ಸದಾಶಿವ, ಭಗವಂತನದೇ ಎಂದು ಮುಂತಾಗಿ, (ವೇದೇನ ಬೋಧಿತಂ ಖಲು) ವೇದದಿಂದ ಬೋಧಿಸಲ್ಪಟ್ಟಿರುವುದಲ್ಲವೆ?

ತಥಾ ಚೋಕ್ತಂ ಶಿವರಹಸ್ಯೇ—

"ತಸ್ಯೈತೇ ತನುವೋರೇವ ಘೋರಾನ್ಯಾಘೋರರೂಪಿಣೀ |
ಶಿವಾನ್ಯಾ ಸಾ ಯತಃ ಸಾಕ್ಷಾತ್ ಶಿವದಾ ಶಿವರೂಪಿಣೀ || ೧೪ ||

ಹಾಗೆಯೇ ಹೇಳಿದೆ ಶಿವರಹಸ್ಯದಲ್ಲಿ—
"ಆತನ ಈ ಘೋರ-ಅಘೋರ(ಸೌಮ್ಯ)ರೂಪಗಳ ದೇಹ, ಮಂಗಲವಲ್ಲದಂತೆ ತೋರುವ ಘೋರರೂಪವೂ ಸಹ, ಕೊನೆಗೆ ಸಾಕ್ಷಾತ್ ಮಂಗಲಪ್ರದವೂ, ಮಂಗಲಸ್ವರೂಪವೂ ಆಗಿ ತೋರುವುದು.

ತಸ್ಯ ಸಂಹಾರಕಾಲೀನಾಃ ತನವಃ ಸನ್ತಿ ಕೋಟಿಶಃ |
ತಾಸ್ತು ಸಂಹಾರಕಾರಿಣ್ಯೋ ಘೋರಾಸ್ತಸ್ಮಾದ್ಭಯಪ್ರದಾಃ || ೧೫ ||"
ಇತಿ ||

ಆತನ ಸಂಹಾರಕಾಲದ ರೂಪಗಳು ಕೋಟ್ಯಂತರ ಇವೆ. ಅವು ಸಂಹಾರಕಾರಿಗಳಾದ್ದರಿಂದ ಘೋರವಾಗಿದ್ದು, ಅದರಿಂದಾಗಿ ಭಯವನ್ನುಂಟುಮಾಡುವುವುಗಳಾಗಿವೆ" ಎಂದಿದೆ ಶಿವರಹಸ್ಯದಲ್ಲಿ. 

ತಾಭ್ಯೋ ಭಯನಿವೃತ್ಯರ್ಥಂ ತತ್ಕ್ರೋಧಾದೀನ್ ತಥಾ ಶಿವಮ್ |
ನತ್ವಾ ಪ್ರಸಾದಯಿತ್ವಾದೌ ಪ್ರಥಮಾದನುರಾಗತಃ || ೧೬ ||

ಅಂತಹ ಘೋರರೂಪಗಳಿಂದಾದ ಭಯದ ನಿವಾರಣೆಗಾಗಿ, ಪ್ರಥಮಾನುವಾಕದ ಮಂತ್ರಗಳಿಂದಲೇ ಅನುರಾಗಪೂರ್ವಕವಾಗಿ, ಮೊದಲಿಗೆ ಆ ಶಿವನನ್ನೂ, ಆತನ ಕ್ರೋಧ / ಸಿಟ್ಟು ಮುಂತಾದುವುಗಳನ್ನೂ ನಮಸ್ಕರಿಸಿ, ಪ್ರಸನ್ನೀಕರಿಸಿ,

ಅನುವಾಕೈರ್ದ್ವಿತೀಯಾದ್ಯೈರ್ನವಮಾನ್ತೈರ್ಮಹೇಶಿತುಃ |
ಕರೋತಿ ವೈಶ್ವರೂಪೇಣ ಸ್ತುತಿಂ ಕೃತ್ವಾ ನಮಸ್ತಥಾ || ೧೭ ||

ದ್ವಿತೀಯಾನುವಾಕದಿಂದ ತೊಡಗಿ, ಒಂಬತ್ತನೆಯದರ ವರೆಗೆ, ಮಹೇಶನ / ಶಿವನ ವಿಶ್ವರೂಪಕ ಸ್ತುತಿಯನ್ನು ಮಾಡಿ, ಬಳಿಕ ನಮಸ್ಕಾರವನ್ನೂ ಮಾಡುತ್ತಾನೆ.

ದಶಮೇನಾನುವಾಕೇನ ತಥೈವೈಕಾದಶೇನ ಚ |
ಅಭಯಂ ಯಾಚತೇ ಸೋऽಯಂ ಮಹಾವಾಕ್ಯಾರ್ಥ ಏವ ಹಿ || ೧೮ ||

ಹತ್ತನೆಯ ಅನುವಾಕದಿಂದ ಹಾಗೂ ಹನ್ನೊಂದನೆಯ ಅನುವಾಕದ ಮೂಲಕವೂ, ಈ ರುದ್ರಮಂತ್ರದ್ರಷ್ಟಾರನು ಅಭಯವನ್ನು ಯಾಚಿಸುತ್ತಾನೆ. ಈ ರುದ್ರಾಧ್ಯಾಯವು ಒಟ್ಟಿನಲ್ಲಿ "ಅಯಮಾತ್ಮಾ ಬ್ರಹ್ಮ", "ಸರ್ವಂ ಖಲ್ವಿದಂ ಬ್ರಹ್ಮ", "ತತ್ತ್ವಮಸಿ", "ಅಹಂ ಬ್ರಹ್ಮಾಸ್ಮಿ" ಮುಂತಾದ ಉಪನಿಷತ್ತಿನ ಮಹಾವಾಕ್ಯಗಳ ತಾತ್ಪರ್ಯಾರ್ಥಸ್ವರೂಪವೇ ಆಗಿರುವುದು.

Comments

Popular posts from this blog

ಲಘುನ್ಯಾಸದ ಬೆಳಕಿನಲ್ಲಿ ಶಿವದರ್ಶನ ೧೩—ಲಘುನ್ಯಾಸಮನ್ತ್ರಾರ್ಥವಿಚಾರ ೮

ಲಘುನ್ಯಾಸದ ಬೆಳಕಿನಲ್ಲಿ ಶಿವದರ್ಶನ ೯—ಲಘುನ್ಯಾಸಮಂತ್ರಾರ್ಥವಿಚಾರ ೪

ತೈತ್ತಿರೀಯಕೃಷ್ಣಯಜುಸ್ಸಂಹಿತಾಭಾಷ್ಯಾರ್ಥಸಮುಚ್ಚಯಃ ೧.೧.೪