ರುದ್ರಭಾಷ್ಯಸಮುಚ್ಚಯಪೀಠಿಕಾ ೨

ರುದ್ರಭಾಷ್ಯಸಮುಚ್ಚಯಪೀಠಿಕಾ ೨

ವಿಷ್ಣುಸೂರಿಭಾಷ್ಯಮ್ (ಆಧ್ಯಾತ್ಮಿಕಮ್)

ಶಂಕರಶಾಸ್ತ್ರೀ-ಭಾರದ್ವಾಜ-ಮಾರುಲಕರ್-ವಿರಚಿತ-ಭೂಮಿಕಾ

"ಪಾಯಾದಪಾಯಾಜ್ಜಗದೀಶ್ವರೋ ನಃ"

"ಪಾಲಿಸಲಿ ಅಪಾಯದಿಂದ ಜಗದೀಶ್ವರನು ನಮ್ಮನ್ನು"

ದಧಾನಮೇಕಾದಶಧಾ ವಿಭಕ್ತ-
-ದೇಹಂ ವಿಶುದ್ಧಸ್ಫಟಿಕಪ್ರಕಾಶನಮ್ |
ತೇಜೋನಿಧಿಂ ಶೂಲಿನಮಿನ್ದುಮೌಲಿಂ
ವಿಚಿನ್ತಯೇತ್ ತತ್ರ ಸದೈವ ರುದ್ರಮ್ ||

ಹನ್ನೊಂದು ರೂಪಗಳಾಗಿ ವಿಭಾಗಿಸಿಕೊಂಡ ದೇಹವನ್ನು ಧರಿಸಿದ, ಶುಭ್ರವಾದ ಸ್ಫಟಿಕದಂತೆ ಕಂಗೊಳಿಸುವ, ತೇಜಸ್ಸಿನ ನಿಧಿಯಾದ, ತ್ರಿಶೂಲಧಾರಿಯಾದ, ಚಂದ್ರಮೌಳಿಯಾದ ರುದ್ರದೇವನನ್ನು ಚಿತ್ತದಲ್ಲಿ ಯಾವಾಗಲೂ ಧ್ಯಾನಿಸಬೇಕು.


ರುದ್ರಂ ಸಂಸಾರರುದ್ರಂ ಶೋಕಂ ದ್ರಾವಯತಿ ಇತಿ ರುದ್ರಃ ಚರಾಚರಗುರುಃ ಮಹೇಶ್ವರಃ ತತ್-ಸ್ತಾವಕೋ ಅಧ್ಯಾಯಃ, ಏಕಾರ್ಥಕ-ವಿಷಯ-ಸಮಾಪ್ತಿ-ದ್ಯೋತಕೋ ಭಾಗವಿಶೇಷಃ, ಇತಿ ವ್ಯುತ್ಪತ್ತೇಃ ಕೃಷ್ಣಯಜುರ್ವೇದೀಯ-ತೈತ್ತಿರೀಯ-ಸಂಹಿತಾಯಾಂ ಚತುರ್ಥಕಾಣ್ಡೇ ಪಞ್ಚಮಃ ಪ್ರಪಾಠಕಃ "ನಮಸ್ತೇ ರುದ್ರ ಮನ್ಯವೇ" ಇತಿ ಆರಭ್ಯ "ಜಮ್ಭೇ ದಧಾಮಿ" ಇತಿ ಏತದ್-ಅನ್ತಃ, ಏಕಾದಶ-ಅನುವಾಕಾತ್ಮಕೋ ರುದ್ರಾಧ್ಯಾಯಃ, ಇತಿ ಉಚ್ಯತೇ | 


ರುದ್ರವೆಂದರೆ ಸಂಸಾರರುದ್ರ ಅಥವಾ ಸಂಸಾರದುಃಖವನ್ನು ದ್ರವಿಸುವಂತೆ ಕರಗುವಂತೆ ಮಾಡುವವನೆಂಬುದರಿಂದ ರುದ್ರನು, ಚರ-ಅಚರ / ಸ್ಥಾವರಜಂಗಮಾತ್ಮಕವಾದ ಸಮಸ್ತ ಸೃಷ್ಟಿಗೇ ಗುರುವು / ತಂದೆಯು / ಜ್ಞಾನಪ್ರದನು / ಜನಕನು ಮಹೇಶ್ವರನು. ಅಂಥವನನ್ನು ಸ್ತುತಿಮಾಡುವ ವೇದದ ಅಧ್ಯಾಯಭಾಗವು, ಆ ಒಂದೇ ಪರತತ್ತ್ವವನ್ನೇ ಕೊಟ್ಟಕೊನೆಗೆ ಪರಮಾರ್ಥವನ್ನಾಗಿ ಉದ್ದೇಶಿಸಿ ನಾನಾರೀತಿಯಾಗಿ ವರ್ಣಿಸಿ ಸ್ತುತಿಸಿರುವ ಮಂತ್ರಭಾಗವಿಶೇಷ ಎಂಬ ಶಬ್ದವ್ಯುತ್ಪತ್ತಿಕ್ರಮದಿಂದ, ಕೃಷ್ಣಯಜುರ್ವೇದದ ತೈತ್ತಿರೀಯಸಂಹಿತೆಯ ೪ ನೇ ಕಾಂಡದ ೫ ನೇ ಪ್ರಪಾಠಕ / ಪ್ರಶ್ನವು "ನಮಸ್ತೇ ರುದ್ರ" ಎಂದಾರಂಭಿಸಿ, "ಜಂಭೇ ದಧಾಮಿ" ಎಂಬಲ್ಲಿವರೆಗಿನ ೧೧ ಅನುವಾಕಗಳಿಂದ ಕೂಡಿರುವುದು ರುದ್ರಾಧ್ಯಾಯವೆಂದು ಹೇಳಲ್ಪಡುತ್ತದೆ.


ನನು ಏವಂ ವೈದಿಕ-ಪ್ರಸಿದ್ಧಿ-ವಿರೋಧಃ | ವೈದಿಕಸಂಪ್ರದಾಯೇ, ನಮಕ-ಚಮಕ-ಸಂಜ್ಞಕ-ಪ್ರಪಾಠಕ-ದ್ವಯಂ ಮಿಲಿತ್ವಾ "ರುದ್ರಾಧ್ಯಾಯಃ" ಇತಿ ಹಿ ಪ್ರಸಿದ್ಧಮ್ | ಅತ ಏವ ಸ್ವತನ್ತ್ರೇ ರುದ್ರಾಧ್ಯಾಯಗ್ರನ್ಥೇ ಚಮಕನಿರೂಪಣಂ ಸಂಗಚ್ಛತೇ | ಅನ್ಯಥಾ ತದ್-ಅಸಂಗತಂ ಸ್ಯಾತ್ ಇತಿ ಚೇತ್ ಉಚ್ಯತೇ | ನಮಕಶಬ್ದೇನ ವ್ಯವಹ್ರಿಯಮಾಣಃ ಪಞ್ಚಮಪ್ರಪಾಠಕಃ, ಏವ ರುದ್ರಾಧ್ಯಾಯಃ | ನಿರುಕ್ತ-ಸಾಯಣಾಚಾರ್ಯೋಕ್ತಿ-ಪ್ರಾಮಾಣ್ಯಾತ್ | 


ಹೀಗೆ ಹೇಳಿರುವುದರಲ್ಲಿ ವೈದಿಕವಲಯದಲ್ಲಿ ಪ್ರಸಿದ್ಧವಾದ (ರುದ್ರ-ಚಮಕಾತ್ಮಕ ಮಂತ್ರಸಮೂಹಕ್ಕೆ ರುದ್ರವೆಂಬ ಹೆಸರೆಂಬ) ವಿಚಾರಕ್ಕೆ ವಿರೋಧವಿಲ್ಲ. ವೈದಿಕಸಂಪ್ರದಾಯದಲ್ಲಿ, ನಮಕ(ರುದ್ರ)-ಚಮಕ ಎಂಬ ಹೆಸರಿನ ೨ ಪ್ರಪಾಠಕಗಳೂ ಸೇರಿ "ರುದ್ರಾಧ್ಯಾಯ" ಎಂದೇ ಪ್ರಸಿದ್ಧವಾಗಿದೆ. ಹಾಗಾಗಿಯೇ ಸ್ವತಂತ್ರವಾದ (ಪ್ರತ್ಯೇಕವಾದ) ರುದ್ರಾಧ್ಯಾಯವೆಂಬ ಗ್ರಂಥದಲ್ಲಿ ಚಮಕದ ನಿರೂಪಣೆಯೂ (ನಮಕದ) ಜೊತೆಗೇ ಸಾಗುತ್ತದೆ. ಹಾಗಲ್ಲದೆ ಅದು ಅಸಂಗತ (ಅಯುಕ್ತ, ಅನುಚಿತ) ವಾಗುವುದು ಎಂದರೆ ಹೇಳಲಾಗುತ್ತದೆ— ನಮಕಶಬ್ದದಿಂದ ವ್ಯವಹರಿಸಲ್ಪಡುವ ೫ ನೆಯ ಪ್ರಪಾಠಕವೇ ರುದ್ರಾಧ್ಯಾಯವು. ಇದು ಯಾಸ್ಕರ ನಿರುಕ್ತ ಹಾಗೂ ಸಾಯಣರ ರುದ್ರಭಾಷ್ಯಗಳಲ್ಲಿನ ವಾಕ್ಯಗಳ ಪ್ರಾಮಾಣ್ಯದಿಂದ (ಸಿದ್ಧವಾಗುತ್ತದೆ).


ನಮಕ-ಅನ್ತರ್ಗತ-ಪ್ರತ್ಯೇಕ-ಅನುವಾಕ-ವ್ಯಾಖ್ಯಾನ-ಸಮಾಪ್ತಿ-ಪಟ್ಟಿಕಾಯಾಂ "ಪಞ್ಚಮ-ಪ್ರಪಾಠಕೇ ರುದ್ರಭಾಷ್ಯೇ ಪ್ರಥಮೋऽನುವಾಕಃ" ಇತಿ-ಏವಂ ರೀತ್ಯಾ ರುದ್ರಶಬ್ದ-ಉಲ್ಲೇಖ-ಸಹಕೃತಾತ್, ಚಮಕ-ಅನ್ತರ್ಗತ-ಪ್ರತ್ಯೇಕ-ಅನುವಾಕ-ವ್ಯಾಖ್ಯಾನ-ಸಮಾಪ್ತೌ "ಸಪ್ತಮ-ಪ್ರಪಾಠಕೇ ಚಮಕಭಾಷ್ಯೇ ಪ್ರಥಮೋऽನುವಾಕಃ" ಇತಿ-ಏವಂ ರೀತ್ಯಾ ರುದ್ರಶಬ್ದಮ್ ಅಪ್ರಯುಜ್ಯ ಏವ ಭೇದೇನ ನಿರ್ದೇಶಾತ್ ಚ || 


ಸಾಯಣಾಚಾರ್ಯರ ನಮಕದೊಳಗಣ ಪ್ರತಿಯೊಂದು ಅನುವಾಕದ ವ್ಯಾಖ್ಯಾನದ ಸಮಾಪ್ತಿವಾಕ್ಯದಲ್ಲಿ "ಐದನೆಯ ಪ್ರಪಾಠಕದಲ್ಲಿ, ರುದ್ರಭಾಷ್ಯದಲ್ಲಿ, ಮೊದಲನೆಯ ಅನುವಾಕವು" ಎಂಬೀರೀತಿಯಿಂದ ರುದ್ರಶಬ್ದದ ಉಲ್ಲೇಖವು ಜೊತೆಗೂಡಿರುವುದರಿಂದಲೂ, ಚಮಕದೊಳಗಿನ ಪ್ರತಿಯೊಂದು ಅನುವಾಕದ ವ್ಯಾಖ್ಯಾನದ ಮುಕ್ತಾಯದಲ್ಲಿ "ಏಳನೆಯ ಪ್ರಪಾಠಕದಲ್ಲಿ, ಚಮಕಭಾಷ್ಯದಲ್ಲಿ, ಮೊದಲನೆಯ ಅನುವಾಕವು" ಎಂಬಂತೆ ರುದ್ರಶಬ್ದವನ್ನು ಪ್ರಯೋಗಿಸದೆಯೇ ಇರುವುದರಿಂದಲೂ ನಮಕ-ಚಮಕಗಳ ಭೇದವನ್ನು / ಪ್ರತ್ಯೇಕತೆಯನ್ನು ನಿರ್ದೇಶಿಸಿದಂತಾಗುತ್ತದೆ. 


ಯದಿ ತು ಉಭಯಂ ನಮಕ-ಚಮಕಂ ಮಿಲಿತ್ವಾ ರುದ್ರಾಧ್ಯಾಯಶಬ್ದಾರ್ಥಃ ಸ್ಯಾತ್ ತದಾ ಚಮಕ-ಅನುವಾಕ-(ವ್ಯಾಖ್ಯಾನ)-ಸಮಾಪ್ತಿ-ಪಟ್ಟಿಕಾಯಾಮ್ ಅಪಿ "ರುದ್ರಭಾಷ್ಯೇ ಚಮಕಾಧ್ಯಾಯೇ ಪ್ರಥಮೋऽನುವಾಕಃ" ಇತಿ-ಏವಂ ರುದ್ರಶಬ್ದ-ಉಲ್ಲೇಖಃ ಅವಶ್ಯಂ ಕೃತಃ ಸ್ಯಾತ್ | ಯತಃ ಚ ಉಭಯತ್ರ ನಮಕೇ ಚಮಕೇ ಚ ಭೇದೇನ ಉಲ್ಲೇಖಂ ಕರೋತಿ ತಸ್ಮಾತ್ ಏವಂ ಜ್ಞಾಯತೇ ಯತ್ ನಮಕಸ್ಯ ಏವ ರುದ್ರಾಧ್ಯಾಯಃ, ಇತಿ ವ್ಯವಹಾರೋ, ನ ಚಮಕಸ್ಯ ಇತಿ | ಅತಃ, ಏವ "ಏಕಾದಶಗುಣಾನ್ ರುದ್ರಾನ್ ಜಪಿತ್ವಾ ರುದ್ರತಾಂ ವ್ರಜೇತ್" ಇತ್ಯಾದೌ ಬೃಹತ್-ಪರಾಶರ-ಆದ್ಯೈಃ ಚಮಕಂ ವಿನಾ ಏವ ರುದ್ರಾಧ್ಯಾಯಮಾತ್ರಸ್ಯ ಏಕಾದಶಧಾ ಆವೃತ್ತಿಃ ಉಕ್ತಾ ಸಙ್ಗಚ್ಛತೇ, ಇತಿ ಕೇಚಿತ್ ಆಹುಃ | ತತ್ ನ || 


ಒಂದು ವೇಳೆ ನಮಕ-ಚಮಕವೆರಡೂ ಸೇರಿ ರುದ್ರಾಧ್ಯಾಯಶಬ್ದದ ಅರ್ಥವೆಂದಾದರೆ, ಆವಾಗ ಚಮಕಪ್ರಶ್ನದ ಪ್ರತಿ ಅನುವಾಕದ ವ್ಯಾಖ್ಯಾನದ ಮುಕ್ತಾಯದಲ್ಲಿಯೂ "ರುದ್ರಭಾಷ್ಯದಲ್ಲಿ, ಚಮಕಾಧ್ಯಾಯದಲ್ಲಿ ಮೊದಲ ಅನುವಾಕವು" ಎಂಬುದಾಗಿ ರುದ್ರಶಬ್ದದ ಉಲ್ಲೇಖವು ಅವಶ್ಯವಾಗಿ ಇರಬೇಕಿತ್ತು. ಹಾಗೆಯೇ, ಈ ಎರಡೂ ಕಡೆಗಳಲ್ಲಿ ನಮಕವ್ಯಾಖ್ಯಾನದಲ್ಲಿ ಹಾಗೂ ಚಮಕವ್ಯಾಖ್ಯಾನದಲ್ಲಿ ವಿಭಿನ್ನವಾಗಿ ಉಲ್ಲೇಖವನ್ನು ಮಾಡಿರುವುದರಿಂದಾಗಿ ತಿಳಿದು ಬರುವುದೇನೆಂದರೆ ನಮಕಕ್ಕೇ ರುದ್ರಾಧ್ಯಾಯವೆಂಬ ವ್ಯವಹಾರ, ಚಮಕಕ್ಕಲ್ಲ ಎಂದು. ಆದ್ದರಿಂದಲೇ, "ಹನ್ನೊಂದು ಪಟ್ಟು ರುದ್ರರನ್ನು ಜಪಿಸಿ ರುದ್ರತ್ವವನ್ನು ಹೊಂದಬೇಕು" ಮುಂತಾದೆಡೆ ಬೃಹತ್-ಪರಾಶರಾದಿಗಳಿಂದ ಚಮಕವನ್ನು ಹೊರತುಪಡಿಸಿಯೇ ರುದ್ರಾಧ್ಯಾಯಮಾತ್ರದ ೧೧ ಬಾರಿಯ ಪುನರಾವೃತ್ತಿಯು ಹೇಳಲ್ಪಟ್ಟಿದೆಯೆಂಬುದು ಸರಿಹೋಗುತ್ತದೆ, ಎಂದು ಕೆಲವರು ಹೇಳುವರು. (ಆದರೆ) ಹಾಗಲ್ಲ.


ನಮಕ-ಚಮಕ-ಯುಗಲಮ್ ಏವ ಹಿ ರುದ್ರಾಧ್ಯಾಯಃ | ರುದ್ರಃ ತಾವಕತ್ವೇ ಸತಿ, ಏಕಾರ್ಥಕ-ವಿಷಯ-ಸಮಾಪ್ತಿ-ದ್ಯೋತಕಭಾಗವಿಶೇಷತ್ವಸ್ಯ ಉಭಯತ್ರ ಅಪಿ ಅವಿಶೇಷಾತ್ | ಯುಜ್ಯತೇ ಚ ಏತತ್ ||


ನಮಕ-ಚಮಕ ಯುಗ್ಮ (ಯುಗಲ, ಜೊತೆ, ಜೋಡಿ, ದ್ವಯ)ವೇ ರುದ್ರಾಧ್ಯಾಯವು. ರುದ್ರವು (ರುದ್ರಶಬ್ದಾರ್ಥವು) ಅಷ್ಟು (ನಮಕ-ಚಮಕ-ಯುಗ್ಮ) ಇರುವುದರಿಂದ, ಒಂದೇ ಅರ್ಥ ಕೊಡುವ ವಿಷಯ (ರುದ್ರ) ದ ಸಮಾಪ್ತಿಯ ಗುರುತಾಗಿ ಅದರ ಒಂದು ಭಾಗ (ನಮಕ ಅಥವಾ ಚಮಕ ಭಾಗ) ದ ವಿಶೇಷತ್ವಕ್ಕೆ (ಮಹತ್ತ್ವ ಕೊಟ್ಟದ್ದರಿಂದ), ಈ ನಮಕ-ಚಮಕಗಳೆರಡರ ವ್ಯಾಖ್ಯಾನಗಳಲ್ಲೂ ರುದ್ರಶಬ್ದವು ಅವಿಶೇಷ / ವಿಶೇಷವಲ್ಲದೆ ಸಾಮಾನ್ಯವಾದ್ದರಿಂದ, ಈ ರೀತಿಯ ಭಿನ್ನರೀತಿಯ ಸಮಾಪ್ತಿವಾಕ್ಯಗಳು (ಉಭಯಸಾಮಾನ್ಯಶಬ್ದವಾದ ರುದ್ರವೆಂಬುದನ್ನು ಬಿಟ್ಟು ಸಾಯಣಭಾಷ್ಯದಲ್ಲಿ) ಯೋಜಿಸಲ್ಪಟ್ಟಿರುವುದು ಯೋಗ್ಯವೇ ಆಗಿ ಸೇರಿಬರುತ್ತದೆ.


 ತಥಾ ಹಿ, ರುದ್ರಸ್ಯ ಜಪೇ ಹೋಮೇ ಅಭಿಷೇಕೇ ಚ ವಿನಿಯೋಗಃ ಶ್ರುತಿ-ಸ್ಮೃತಿ-ಆದೌ ದೃಶ್ಯತೇ, ಇತಿ ಅತಃ "ಪಞ್ಚಾಙ್ಗರುದ್ರಾಣಾಂ ಜಪ-ಹೋಮ-ಅರ್ಚನ-ವಿಧಿಂ ವ್ಯಾಖ್ಯಾಸ್ಯಾಮಃ" ಇತಿ ಬೌಧಾಯನ-ಆಪಸ್ತಂಬಾದ್ಯೈಃ ಪ್ರತಿಜ್ಞಾಯ ಜಪಾದಿಷು ರುದ್ರಸ್ಯ ವಿನಿಯೋಗಃ, ಏವಮ್ ಅಭಿಹಿತಃ | ಜಪ-ಹೋಮ-ಅರ್ಚನ-ವಿಷಯಕತ್ವೇನ ತ್ರಿವಿಧಃ ಅಪಿ ಅಯಂ ರುದ್ರಃ ಪ್ರತ್ಯೇಕಂ ಪಞ್ಚಧಾ ಭವತಿ | ರೂಪಂ, ರುದ್ರಃ, ರುದ್ರೀ, ಮಹಾರುದ್ರಃ, ಅತಿರುದ್ರಃ ಚ ಇತಿ | 


ಹಾಗಾಗಿಯೇ, ರುದ್ರಕ್ಕೆ ಜಪದಲ್ಲಿ ಹೋಮದಲ್ಲಿ ಹಾಗೂ ಅಭಿಷೇಕದಲ್ಲಿ ವಿನಿಯೋಗವು (ಬಳಕೆಯು, ಉಪಯೋಗವು, ಪ್ರಯೋಗವು) ವೇದ(ಶ್ರುತಿ)-ಧರ್ಮಶಾಸ್ತ್ರ(ಸ್ಮೃತಿ) ಮುಂತಾದವುಗಳಲ್ಲಿ ಕಂಡುಬರುವುದು, ಎಂಬುದರಿಂದ "೫ ಅಂಗಗಳ / ರೀತಿಯ ರುದ್ರರ ಜಪ-ಹೋಮ-ಅರ್ಚನೆಗಳ ವಿಧಿ-ವಿಧಾನವನ್ನು ವ್ಯಾಖ್ಯಾನಿಸುತ್ತೇವೆ" ಎಂದು ಬೌಧಾಯನ-ಆಪಸ್ತಂಬ ಮೊದಲಾದವರಿಂದ ಜ್ಞಾಪಿಸಲ್ಪಟ್ಟು, ಜಪಾದಿಗಳಲ್ಲಿ ರುದ್ರದ ವಿನಿಯೋಗವು ಹೀಗೆ ಮುಂದಿಡಲ್ಪಟ್ಟಿರುವುದು / ಪ್ರಸ್ತಾಪಿತವಾಗಿರುವುದು (ಅಭಿಹಿತಃ— ಅಭಿ ಅಭಿಮುಖೇ ಹಿತಃ ನಿಹಿತಃ). ಜಪ, ಹೋಮ, ಅರ್ಚನ ವಿಷಯರೂಪವಾಗಿ ೩ ವಿಧವಾದ ಈ ರುದ್ರಮಂತ್ರವು ಬೇರೆ ರೀತಿಯಲ್ಲಿ (ಪ್ರತ್ಯೇಕವಾಗಿ) ೫ ವಿಧವಾಗುತ್ತದೆ— ರೂಪಮ್, ರುದ್ರಃ (ರುದ್ರೈಕಾದಶಿನೀ), ರುದ್ರೀ (ಲಘುರುದ್ರಃ), ಮಹಾರುದ್ರಃ ಹಾಗೂ ಅತಿರುದ್ರಃ ಎಂಬುದಾಗಿ.


(೧) ತತ್ರ ನಮಕ-ಚಮಕ-ಮಾತ್ರಮ್ ಉಭಯಂ ರೂಪಮ್ | ರುದ್ರಾಧ್ಯಾಯ-ಸ್ವರೂಪಮ್ ಇತಿ ಅರ್ಥಃ | ನಮಕ-ಚಮಕ-ಯುಗಲಸ್ಯ ಕ್ರಮೇಣ ಪಠನಂ ಸಕೃತ್, ಆವರ್ತನಮ್ ಇತಿ ಯಾವತ್ | 
ತದುಕ್ತಮ್— "ನಮಸ್ತೇ ರುದ್ರಾಗ್ನಾವಿಷ್ಣೂ ಇತ್ಯಧ್ಯಾಯದ್ವಯೇನ ಚ | ಆವರ್ತನಮಿತಿ ಪ್ರೋಕ್ತಮ್" ಇತಿ ||


ಅಲ್ಲಿ (ಅದರಲ್ಲಿ), ಕೇವಲ ನಮಕ-ಚಮಕಗಳೆರಡು ಮಾತ್ರದ ಯುಗಳರೂಪವು ರೂಪಮ್ (ಎನಿಸಿದೆ). ರುದ್ರಾಧ್ಯಾಯದ ಸ್ವ-ರೂಪವೆಂದರ್ಥ. ನಮಕ-ಚಮಕವೆರಡರ ನಮಕದ ಬಳಿಕ ಚಮಕವೆಂಬ ಅನುಕ್ರಮವಾದ ಪಠನ, ಒಂದು ಬಾರಿಯ ಆವರ್ತನ ಎಂಬುದಾಗಿ. ಹೀಗೆ ಹೇಳಿದೆ— "ನಮಸ್ತೇ ರುದ್ರ ಹಾಗೂ ಅಗ್ನಾವಿಷ್ಣೂ ಎಂಬ ನಮಕಾಧ್ಯಾಯ ಹಾಗೂ ಚಮಕಾಧ್ಯಾಯಗಳೆರಡರಿಂದ ಒಂದು ಬಾರಿಯ ಪಠನ / ಆವರ್ತನವು (ರೂಪಮ್) ಎಂದು ಹೇಳಲ್ಪಟ್ಟಿದೆ" ಎಂಬುದಾಗಿ. (ರುದ್ರ-ಚಮಕಗಳ ಸಕೃದಾವರ್ತನ / ೧ ಬಾರಿಯ ಪಠನವೇ ೧ ರೂಪಮ್)


(೨) ಏಕಾದಶ-ನಮಕ-ಅನುವಾಕಾನ್ ಪಠಿತ್ವಾ ಚಮಕಾನುವಾಕಮ್ ಆದ್ಯಂ ಪಠೇತ್ | ಪುನಃ ತಾನ್ ಪಠಿತ್ವಾ ದ್ವಿತೀಯಂ ಚಮಕಾನುವಾಕಂ ಪಠೇತ್ | ಇತಿ ಏವಮ್ ಏಕಾದಶ-ಆವೃತ್ತ್ಯಾ ರುದ್ರಃ, ರುದ್ರೈಕಾದಶಿನೀ ಇತಿ ಚ ಉಚ್ಯತೇ | ತದುಕ್ತಮ್— "ಏಕಃ ಪಾಠೋ ನಮಸ್ತೇऽಸ್ಯ ಹ್ಯನುವಾಕಃ ಪರಸ್ಯ ಚ" ಇತಿ ||


ನಮಕದ ೧೧ ಅನುವಾಕಗಳನ್ನು ಪಠಿಸಿ, ಚಮಕದ ಮೊದಲ ಅನುವಾಕವನ್ನು ಪಠಿಸಬೇಕು. ಪುನಃ ನಮಕದ ಎಲ್ಲಾ ೧೧ ಅನುವಾಕಗಳನ್ನೂ ಪಠಿಸಿ, ಚಮಕದ ೨ನೆಯ ಅನುವಾಕವನ್ನು ಪಠಿಸಬೇಕು. ಈ ರೀತಿಯಾಗಿ ಪೂರ್ತಿ ನಮಕದ ೧೧ ಆವೃತ್ತಿಯಾದಾಗ (ಚಮಕವೂ ಒಂದೊಂದು ಅನುವಾಕದಂತೆ ಒಂದು ಬಾರಿ ಪೂರ್ತಿಯಾದಾಗ) "ರುದ್ರಃ / ಹಾಗೂ ರುದ್ರೈಕಾದಶಿನೀ" ಎಂದು ಹೇಳಲ್ಪಡುತ್ತದೆ. ಹೀಗೆ ಹೇಳಿದೆ— "ನಮಸ್ತೇ ಎಂಬ ನಮಕಾನುವಾಕದ ಒಂದು ಬಾರಿಯ ಪಠನ ಹಾಗೂ ಚಮಕವೆಂಬ ಇನ್ನೊಂದರ ಒಂದು ಅನುವಾಕದ ಪಠನ" ಎಂಬುದಾಗಿ. (ರುದ್ರದ ೧೧ ಹಾಗೂ ಚಮಕದ ೧ ಬಾರಿಯ ಪಠನವೇ ೧ ರುದ್ರಃ / ರುದ್ರೈಕಾದಶಿನೀ)


(೩) ತೈಃ ಏಕಾದಶರುದ್ರೈಃ, ರುದ್ರೀ, ಲಘುರುದ್ರಃ, ಇತಿ ಚ ಉಚ್ಯತೇ | ತದುಕ್ತಮ್— "ತೈರೇಕಾದಶಭೀ ರುದ್ರೈರ್ಲಘುರುದ್ರಃ ಪ್ರಕೀರ್ತಿತಃ" ಇತಿ ||


ಅಂತಹ (ಮೇಲೆ ಹೇಳಿದಂತಹ) ರುದ್ರಃ / ರುದ್ರೈಕಾದಶಿನೀಯನ್ನು ೧೧ ಬಾರಿ ಉಚ್ಚರಿಸಿದಾಗ ರುದ್ರೀ / ಲಘುರುದ್ರಃ ಎಂದೂ ಕರೆಯಲ್ಪಡುವುದು. ಹಾಗಾಗಿಯೇ ಹೇಳಿದೆ— "ಅಂತಹ ೧೧ ರುದ್ರಗಳಿಂದ ಲಘುರುದ್ರವೆನ್ನಲ್ಪಟ್ಟಿದೆ" ಎಂಬುದಾಗಿ. { ೧೧ ರುದ್ರಃ / ರುದ್ರೈಕಾದಶಿನೀ = (೧೧ ರುದ್ರ+ ೧ ಚಮಕ)× ೧೧ = ೧೨೧ ರುದ್ರ+ ೧೧ ಚಮಕ = ೧ ರುದ್ರೀ / ಲಘುರುದ್ರಃ }


(೪) ತೈಃ ಏಕಾದಶಭಿಃ ಮಹಾರುದ್ರಃ | ತದುಕ್ತಮ್— "ಏಕಾದಶಭಿರೇತೈಸ್ತು ಮಹಾರುದ್ರಃ ಪ್ರಕೀರ್ತಿತಃ" ಇತಿ || 


ಅಂತಹ ರುದ್ರೀ / ಲಘುರುದ್ರಗಳ ೧೧ ಬಾರಿಯ ಆವೃತ್ತಿಯು ಮಹಾರುದ್ರವು. ಹಾಗಾಗಿ ಹೇಳಿದೆ— "ಇವುಗಳ (ಲಘುರುದ್ರಗಳ) ೧೧ ಬಾರಿಯ ಪುನರಾವರ್ತನೆಯಿಂದ ಮಹಾರುದ್ರವೆಂದು ಕೀರ್ತಿತವಾಗಿದೆ" ಎಂದು. { ೧೧ ರುದ್ರೀ / ಲಘುರುದ್ರ = (೧೨೧ ರುದ್ರ + ೧೧ ಚಮಕ) × ೧೧ = ೧೩೩೧ ರುದ್ರ + ೧೨೧ ಚಮಕ = ೧ ಮಹಾರುದ್ರಃ }


(೫) ಏಕಾದಶಭಿಃ ಮಹಾರುದ್ರೈಃ ಅತಿರುದ್ರಃ | ತದುಕ್ತಮ್— "ಏಕಾದಶಮಹಾರುದ್ರೈರತಿರುದ್ರೋ ಬುಧೈಃ ಸ್ಮೃತಃ" ಇತಿ |


೧೧ ಮಹಾರುದ್ರಗಳಿಂದ ೧ ಅತಿರುದ್ರವು. ಹೀಗೆ ಹೇಳಿದೆ— "ಮಹಾರುದ್ರಗಳ ೧೧ ಬಾರಿಯ ಪುನರಾವೃತ್ತಿಯಿಂದ ಅತಿರುದ್ರವೆಂದು ವಿಬುಧರಿಂದ / ಬಲ್ಲವರಿಂದ ಸ್ಮರಿಸಲ್ಪಟ್ಟಿದೆ" ಎಂಬುದಾಗಿ. { ೧೧ ಮಹಾರುದ್ರಃ = (೧೩೩೧ ರುದ್ರ + ೧೨೧ ಚಮಕ) × ೧೧ = ೧೪,೬೪೧ ರುದ್ರ + ೧೩೩೧ ಚಮಕ = ೧ ಅತಿರುದ್ರ)

 ಅತ್ರ ಸರ್ವತ್ರ ಜಪಾದೌ ನಮಕ-ಚಮಕ-ಯುಗಲಸ್ಯ ವಿನಿಯೋಗಾಭಿಧಾನಾತ್ ತಾದೃಶ-ಅಧ್ಯಾಯ-ದ್ವಯಸ್ಯ ಏವ ರುದ್ರಶಬ್ದಾರ್ಥತ್ವಂ ನಿರ್ವಿವಾದಂ ಪ್ರತೀಯತೇ | ಯದಿ ತು ಪೂರ್ವಪಕ್ಷೀ-ಉಕ್ತರೀತ್ಯಾ ನಮಕಸ್ಯ ಏವ ರುದ್ರಶಬ್ದಾರ್ಥಂ ಸ್ಯಾತ್ ತದಾ ರುದ್ರವಿನಿಯೋಗಂ ಪ್ರಕೃತ್ಯ ನಮಕ-ಚಮಕ-ಅಧ್ಯಾಯ-ದ್ವಯಸ್ಯ ವಿನಿಯೋಗ-ಅಭಿಧಾನಂ ಬೌಧಾಯನ-ಆಪಸ್ತಮ್ಬಾದಿಭಿಃ ಕೃತಮ್ ಅತ್ಯನ್ತ-ಅನುಚಿತಂ ಸ್ಯಾತ್  | ತಸ್ಮಾತ್ ನಮಕ-ಚಮಕ-ಅಧ್ಯಾಯ-ದ್ವಯಸ್ಯ ಏವ ಮಿಲಿತಸ್ಯ ರುದ್ರಾಧ್ಯಾಯಃ, ಇತಿ ವ್ಯವಹಾರಃ ಸರ್ವಜನೀನಃ ಸಿದ್ಧ್ಯತಿ | ಅತ ಏವ ರುದ್ರಭಾಷ್ಯೇ ನಮಕವ್ಯಾಖ್ಯಾನವತ್ ಚಮಕವ್ಯಾಖ್ಯಾನಮ್ ಅಪಿ ನ ಅಸಙ್ಗತಮ್  |

ಇಲ್ಲಿ / ಈ ವಿಚಾರದಲ್ಲಿ ಎಲ್ಲೆಡೆಯೂ ಜಪಾದಿಗಳಲ್ಲಿ ನಮಕ-ಚಮಕವೆರಡರ ವಿನಿಯೋಗವೆಂದು ಹೇಳಿರುವುದರಿಂದ ಅಂತಹ ೨ ಅಧ್ಯಾಯಗಳಿಗೇ ರುದ್ರಶಬ್ದಾರ್ಥವೆಂಬುದು ವಿವಾದಾತೀತವೆಂದು ಹೇಳಲ್ಪಡುತ್ತದೆ. ಒಂದು ವೇಳೆ ಈ ಹಿಂದೆ ಹೇಳಿದಂತೆ ನಮಕಕ್ಕೇ ರುದ್ರಶಬ್ದವು ಪ್ರಯೋಗಿಸಲ್ಪಡುವುದಾದರೆ ಆ ಪಕ್ಷದಲ್ಲಿ ರುದ್ರದ ವಿನಿಯೋಗ / ಬಳಕೆಯನ್ನು ಹೇಳುವಲ್ಲಿ ನಮಕ-ಚಮಕಾಧ್ಯಾಯಗಳೆರಡರ ವಿನಿಯೋಗವೆಂದು ಬೌಧಾಯನ-ಆಪಸ್ತಂಬಾದಿಗಳಿಂದ ವಿಧಿಸಲ್ಪಟ್ಟದ್ದು ಅತ್ಯಂತ ಅನುಚಿತ / ಉಚಿತವಲ್ಲದ್ದು ಆಗುತ್ತಿತ್ತು. ಹಾಗಾದ್ದರಿಂದ ನಮಕ-ಚಮಕಾಧ್ಯಾಯಗಳೆರಡಕ್ಕೇ ಸೇರಿ ರುದ್ರಾಧ್ಯಾಯವು, ಎಂಬ ವ್ಯವಹಾರವು ಎಲ್ಲರ ಮನೆಮಾತಾಗಿ ಬಹುಮತದಿಂದ ಸಿದ್ಧವಾಗುತ್ತದೆ. ಹಾಗಾಗಿಯೇ ರುದ್ರಭಾಷ್ಯದಲ್ಲಿ ನಮಕವ್ಯಾಖ್ಯಾನದಂತೆ ಚಮಕವ್ಯಾಖ್ಯಾನವೂ ಸಹ ಅಸಂಗತ / ಅನುಚಿತವಲ್ಲ.


ನನು ಏವಂ ಚೇತ್ ನಮಕಸ್ಯ ಏವ ರುದ್ರಶಬ್ದಾರ್ಥತ್ವಂ ಸ್ವೀಕೃತ್ಯ, ಉಕ್ತಾಯಾಃ ಚಮಕಂ ವಿನಾ ಏವ ಏಕಾದಶಧಾ ರುದ್ರಾವೃತ್ತೈಃ ಕಾ ಗತಿಃ ಇತಿ ಚೇತ್ | ವಿಯತ್-ಉಪಸಂಹಾರ-ನ್ಯಾಯೇನ ತತ್ರಾಪಿ ಚಮಕಪ್ರಾಪ್ತೇಃ ದುರ್ವಾರತ್ವಾತ್ | ಛಾನ್ದೋಗ್ಯೇ "ತತ್ತೇಜಸೋऽಸೃಜತ" ಇತ್ಯಾದಿನಾ ತ್ರಯಾಣಾಮ್ ಏವ ತೇಜೋ-ಅಪ್-ಅನ್ನಾನಾಮ್ ಉತ್ಪತ್ತಿಃ ಶ್ರೂಯತೇ | ತೈತ್ತಿರೀಯಕೇ ತು "ತಸ್ಮಾದ್ವಾ ಏತಸ್ಮಾದಾತ್ಮನ ಆಕಾಶಃ ಸಂಭೂತಃ" ಇತ್ಯಾದಿನಾ ತೇಜೋಬನ್ನಾಪೇಕ್ಷಯಾ (ತೇಜೋ-ಅಪ್-ಅನ್ನ-ಅಪೇಕ್ಷಯಾ) ಅಧಿಕಯೋಃ ವಾಯ್ವಾಕಾಶಯೋಃ (ವಾಯು-ಆಕಾಶಯೋಃ) ಉತ್ಪತ್ತಿಃ ದೃಷ್ಟಾ | ತಥಾ ಚ ಆಕಾಶ-ತೇಜಸೋಃ ಉತ್ಪತ್ತಿ-ಪ್ರಾಥಮ್ಯೇ ವಿರೋಧಃ | ಕಿಮ್ ಆಕಾಶಃ ಪ್ರಥಮಮ್ ಉತ್ಪನ್ನಃ ತೇಜಃ ವಾ ಇತಿ | ಏತದ್-ವಿರೋಧ-ಪರಿಹಾರಾಯ ಛಾನ್ದೋಗ್ಯಶ್ರುತೌ ಆಕಾಶ-ವಾಯ್ವೋಃ ಉಪಸಂಹಾರಃ ಅಭಿಹಿತಃ ಶಾಂಕರಭಾಷ್ಯೇ ವಿಯತ್-ಅಧಿಕರಣೇ | ಆಕಾಶಂ ವಾಯುಂ ಚ ಸೃಷ್ಟ್ವಾ ತತ್ ತೇಜಃ ಅಸೃಜತ ಇತಿ | ಸಃ ಅಯಮ್ ಉಪಸಂಹಾರನ್ಯಾಯಃ | ತದ್ವತ್ ಅತ್ರಾಪಿ ತತ್-ತತ್-ನಮಕಪಾಠಾನ್ತೇ ಚಮಕ-ಆದ್ಯ-ಆದ್ಯ-ಅನುವಾಕಂ ಕ್ರಮೇಣ ಪ್ರಪಠ್ಯ ಇತಿ ಏವಂ ರೀತ್ಯಾ ರುದ್ರಾಣಾಂ ನಮಕಾನಾಮ್ ಏಕಾದಶಧಾ ಆವೃತ್ತಿಃ ಇತಿ ವ್ಯಾಖ್ಯೇಯಮ್ ಇತಿ ತಾತ್ಪರ್ಯಮ್ |


ಹೀಗಿದ್ದರೆ, ನಮಕಕ್ಕೇ ರುದ್ರಶಬ್ದದ ಅರ್ಥವನ್ನು ಸ್ವೀಕರಿಸಿ, ಹೇಳಲ್ಪಟ್ಟಿರುವ ಚಮಕವನ್ನು ಬಿಟ್ಟೇ ೧೧ ಬಾರಿಯ ರುದ್ರದ ಆವರ್ತನೆಯಿಂದ ಏನಾಗಬಹುದು, ಅಲ್ಲವೆ? ಹಾಗಾದರೆ, "ವಿಯದುಪಸಂಹಾರ-ನ್ಯಾಯ (ಆಕಾಶದಲ್ಲಿ ಉಪಸಂಹಾರ / ಮುಕ್ತಾಯ ಮಾಡುವಿಕೆ ಎಂಬ ನ್ಯಾಯ)" ದಂತೆ ಅಲ್ಲಿಯೂ / ಆ ಪಕ್ಷದಲ್ಲೂ ಚಮಕಾಧ್ಯಾಯದ ಸೇರ್ಪಡೆಯು ಔಚಿತ್ಯಪೂರ್ಣವೂ, ಅನಿವಾರ್ಯವೂ ಆಗುವುದು. ಛಾಂದೋಗ್ಯೋಪನಿಷತ್ ನಲ್ಲಿ "ಅದು ಆತ್ಮತೇಜಸ್ಸಿನ ದೆಸೆಯಿಂದ ಸೃಜಿಸಿತು" ಇತ್ಯಾದಿ ಶ್ರುತಿವಾಕ್ಯದಿಂದ ಅಗ್ನಿ, ಜಲ, ಅನ್ನಗಳೆಂಬ ಮೂರರ ಉತ್ಪತ್ತಿಯು ಮಾತ್ರ ಕೇಳಿಬರುತ್ತದೆ. ತೈತ್ತಿರೀಯೋಪನಿಷತ್ ನಲ್ಲಾದರೋ "ಆ ಪರಮಾತ್ಮ ಅಥವಾ ಈ ಆತ್ಮನ ದೆಸೆಯಿಂದ ಆಕಾಶವು ಉಂಟಾಯಿತು" ಇತ್ಯಾದಿ ಮಂತ್ರದಿಂದ ಅಗ್ನಿ, ಜಲ, ಅನ್ನಗಳ ಹೊರತಾಗಿ ಹೆಚ್ಚಿನದಾದ ವಾಯು-ಆಕಾಶಗಳ ಉತ್ಪತ್ತಿಯು ಕಾಣಲ್ಪಟ್ಟಿರುವುದು. ಹಾಗೆಯೇ, ಆಕಾಶ-ಅಗ್ನಿಗಳ ಉತ್ಪತ್ತಿಯಲ್ಲಿ ಪ್ರಥಮವಾವುದೆಂಬುದರಲ್ಲಿ ವಿರೋಧಾಭಾಸವಾಗುವುದು. ಆಕಾಶವು ಮೊದಲು ಹುಟ್ಟಿತೋ ಅಥವಾ ಅಗ್ನಿಯೋ ಎಂಬುದಾಗಿ. ಈ ವಿರೋಧದ ಪರಿಹಾರಕ್ಕೆ ಛಾಂದೋಗ್ಯೋಪನಿಷತ್ ನಲ್ಲಿ ಆಕಾಶ-ವಾಯುಗಳ ಉಪಸಂಹಾರ (ಉಪ— ಸಮೀಪ, ಸಮ್— ಸಮ್ಯಕ್, ಚೆನ್ನಾಗಿ, ಹಾರಃ— ಒಯ್ಯುವಿಕೆ, ಹರಣ, ಉಪಹರಣ. ಅಪಹರಣವೆಂದರೆ ದೂರ ಒಯ್ಯುವಿಕೆ. ಉಪಹರಣವೆಂದರೆ ಹತ್ತಿರಕ್ಕೆ ತರುವುದು) / ಅಧ್ಯಾಹಾರ / ಬಾಹ್ಯತಃ ಸ್ವೀಕಾರ / ಹೊರಗಿನಿಂದ ಪರಿಗ್ರಹಣ ಮಾಡಿರುವುದು ವಿಹಿತವಾಗಿದೆ ಶಾಂಕರಭಾಷ್ಯದ ವಿಯದಧಿಕರಣದಲ್ಲಿ. ಆಕಾಶವನ್ನು ಮತ್ತು ವಾಯುವನ್ನು ಸೃಷ್ಟಿಮಾಡಿ, ಆ ತೇಜಸ್ಸು / ಆತ್ಮಶಕ್ತಿಯು ಸೃಷ್ಟಿಕಾರ್ಯವನ್ನು ಮಾಡಿತು ಎಂದು. ಅಂತಹ ಇದುವೇ "ಉಪಸಂಹಾರ ನ್ಯಾಯವು". ಅದರಂತೆ ಇಲ್ಲಿಯೂ ಕೂಡ, ಆಯಾ / ಪ್ರತೀ ಬಾರಿಯ ನಮಕ ಪಠನದ ಕೊನೆಗೆ ಚಮಕದ ಮೊದಮೊದಲ ಒಂದೊಂದೇ ಅನುವಾಕವನ್ನು ಅನುಕ್ರಮವಾಗಿ ಪಠಿಸಿ, ಈ ರೀತಿಯಲ್ಲಿ ರುದ್ರಮಂತ್ರಗಳಾದ ನಮಕಾನುವಾಕಗಳ ೧೧ ಆವೃತ್ತಿಯೆಂದು ವ್ಯಾಖ್ಯಾನಿಸಬೇಕೆಂಬುದು ತಾತ್ಪರ್ಯವು.


ಅಥವಾ ಬೃಹತ್-ಪರಾಶರ-ಆದಿ-ಉಕ್ತಂ ಪ್ರಯೋಗಾನ್ತರಮ್ ಏವ ಇದಂ ನ ತು ಏಕಾದಶಿನೀ-ಸ್ವರೂಪಮ್ | ರುದ್ರೈಕಾದಶಿನೀ-ಮಹಾರುದ್ರಾದಿಪ್ರಕಾರಾಃ ಅತ್ರ ಅನುಕ್ತಾಃ ಇತಿ ಶಾನ್ತಿರತ್ನೇ (ಪೃಷ್ಠ.೭೭) ಸ್ಪಷ್ಟಮ್ |

ಅಥವಾ, ಬೃಹತ್-ಪರಾಶರ ಮೊದಲಾದವರಿಂದ ಪ್ರೋಕ್ತವಾದ ಪ್ರಯೋಗಾಂತರ / ಬೇರೊಂದು ವಿಧದ ಪ್ರಯೋಗವೇ ಇದೇ ಹೊರತು, ರುದ್ರೈಕಾದಶಿನೀಸ್ವರೂಪವಿದಲ್ಲ. ರುದ್ರೈಕಾದಶಿನೀ, ಮಹಾರುದ್ರ ಮುಂತಾದ ಪ್ರಕಾರಗಳು ಇಲ್ಲಿ ಹೇಳಿಲ್ಲ ಎಂದು ಶಾಂತಿರತ್ನದಲ್ಲಿ ಸ್ಪಷ್ಟಪಡಿಸಿದೆ.



ನನು ಏವಮ್ ಅಪಿ ಸಾಯಣಾಚಾರ್ಯೈಃ ಅನುವಾಕ-ವ್ಯಾಖ್ಯಾನ-ಸಮಾಪ್ತೌ ರುದ್ರೈಕದೇಶೇ ನಮಕೇ ರುದ್ರಭಾಷ್ಯಃ ಇತಿ ಏವಂ ರುದ್ರಶಬ್ದಪ್ರಯೋಗಃ ಕಥಂ ಕೃತಃ ಇತಿ ಚೇತ್ ತತ್ರ ಉಚ್ಯತೇ | ಸಮುದಾಯವೃತ್ತಾಃ ಶಬ್ದಾಃ ಅವಯವೇ ಅಪಿ ವರ್ತನ್ತೇ | ಯಥಾ ಪಟಕದೇಶೇ ದಗ್ಧೇ ಪಟೋ ದಗ್ಧಃ ಇತ್ಯೇವಂ ಸಮುದಾಯವೃತ್ತಸ್ಯ ಪಟಶಬ್ದಸ್ಯ ಅವಯವೇ ಅಪಿ ಪ್ರಯೋಗಃ | ಯಥಾ ವಾ ಗ್ರಾಮ-ಏಕದೇಶೇ ಪಲಾಯಿತೇ, ಗ್ರಾಮಃ ಪಲಾಯಿತಃ ಇತ್ಯೇವಂ ಗ್ರಾಮಶಬ್ದಸ್ಯ ಗ್ರಾಮೈಕದೇಶೇ ಪ್ರಯೋಗಃ ಲೋಕಪ್ರಸಿದ್ಧಃ, ತದ್ವತ್ ಅತ್ರಾಪಿ ನಮಕ-ಚಮಕ-ಯುಗಲಾತ್ಮಕ-ಸಮುದಾಯಾರ್ಥ-ಪ್ರತಿಪಾದಕಸ್ಯ ರುದ್ರಶಬ್ದಸ್ಯ ತದೇಕದೇಶೇ ನಮಕೇ ಗೌಣಃ ಪ್ರಯೋಗಃ ಇತಿ ಬೋಧ್ಯಮ್ | 


ಹೀಗಿದ್ದರೂ ಸಹ ಸಾಯಣಾಚಾರ್ಯರಿಂದ ನಮಕಾಧ್ಯಾಯದಲ್ಲಿ (ಪ್ರತಿ) ಅನುವಾಕ-ವ್ಯಾಖ್ಯಾನದ ಸಮಾಪ್ತಿಯಲ್ಲಿ, ರುದ್ರಭಾಷ್ಯವೆಂದು ರುದ್ರಶಬ್ದಪ್ರಯೋಗವು ಹೇಗೆ ಮಾಡಲ್ಪಟ್ಟಿತೆಂದರೆ ಅಲ್ಲಿ ಹೇಳಲ್ಪಡುತ್ತದೆ— ಸಮುದಾಯ / ಸಮೂಹದ ವಾಚಕವಾದ ಶಬ್ದಗಳು ತಮ್ಮ ಅಂಗಗಳಿಗೂ ಅನ್ವಯವಾಗುತ್ತವೆ. ಹೇಗೆ ಬಟ್ಟೆಯಂಗಡಿ ಹೊತ್ತಿದಾಗ ಬಟ್ಟೆ ಸುಟ್ಟಿತೆಂದು ಸಮುದಾಯಾರ್ಥಕವಾದ ಶಬ್ದಕ್ಕೆ ಸಮುದಾಯದ ಒಂದು ಅಂಗದಲ್ಲೂ ಪ್ರಯೋಗವಿದೆಯೋ, ಅಥವಾ ಗ್ರಾಮದ ಒಂದು ಪ್ರದೇಶಕ್ಕೆ ಪಲಾಯನಮಾಡಿದರೂ ಗ್ರಾಮಕ್ಕೆ ಪಲಾಯನಮಾಡಲ್ಪಟ್ಟಿತೆಂದು ಗ್ರಾಮಶಬ್ದಕ್ಕೆ ಗ್ರಾಮದ ಒಂದು ಪ್ರದೇಶ ಎಂಬುದರಲ್ಲೂ ಪ್ರಯೋಗವು ಲೋಕಪ್ರಸಿದ್ಧವೋ, ಅದರಂತೆಯೇ ಇಲ್ಲಿಯೂ ನಮಕ-ಚಮಕ ಯುಗಳಗಳ ಸಮುದಾಯದ ಅರ್ಥವನ್ನು ಪ್ರತಿಪಾದಿಸುವ ರುದ್ರಶಬ್ದಕ್ಕೆ ಆ ಸಮುದಾಯದ ಒಂದಂಗವಾದ ನಮಕದಲ್ಲೂ ಗೌಣವಾಗಿ (ಅಮುಖ್ಯವಾಗಿ) ಪ್ರಯೋಗವೆಂದು ತಿಳಿಯಬೇಕು.


ತಸ್ಯ ಅಸ್ಯ ರುದ್ರಾಧ್ಯಾಯಸ್ಯ ಕರ್ಮಕಾಣ್ಡೇ ಪಾಠಾತ್, 


"ಚಮಕಂ ನಮಕಂ ಚೈವ ಪೌರುಷಂ ಸೂಕ್ತಮೇವ ಚ |
ನಿತ್ಯಂ ತ್ರಯಂ ಪ್ರಯುಞ್ಜಾನೋ ಬ್ರಹ್ಮಲೋಕೇ ಮಹೀಯತೇ ||"


ಇತಿ ಸ್ಮೃತೇಃ ಚ ಕರ್ಮಸಾಧನತ್ವಮ್ ಅವಗಮ್ಯತೇ | ಜ್ಞಾನಹೇತುತ್ವಮ್ ಅಪಿ ಅಸ್ಯ ಕೈವಲ್ಯೋಪನಿಷದಿ ದೃಶ್ಯತೇ—


"ಅನೇನ ಜ್ಞಾನಮಾಪ್ನೋತಿ ಸಂಸಾರಾರ್ಣವನಾಶನಮ್ |
ತಸ್ಮಾದೇನಂ ವಿದಿತ್ವೈವ ಕೈವಲ್ಯಫಲಮಶ್ನುತೇ ||"


ಇತಿ ||


ಅಂತಹ ಈ ರುದ್ರಾಧ್ಯಾಯಕ್ಕೆ ಕರ್ಮಕಾಂಡದಲ್ಲಿ (ವೇದೋಕ್ತಕರ್ಮವಿಭಾಗದಲ್ಲಿ, ಸಂಹಿತೆಯಲ್ಲಿ) ಪಾಠವಿರುವುದರಿಂದ (ಪಠನ ವಿನಿಯೋಗವಿರುವುದರಿಂದ), 


"ನಮಕ ಹಾಗೂ ಚಮಕಗಳನ್ನೂ, ಪುರುಷಸೂಕ್ತವನ್ನೂ—  ಈ ಮೂರನ್ನು ನಿತ್ಯವೂ (ಪ್ರತಿದಿನವೂ) ಪ್ರಯೋಗಿಸುವವನು (ಬಳಸುವವನು, ಪಠಿಸುವವನು) ಬ್ರಹ್ಮಲೋಕದಲ್ಲಿ ನೆಲೆಯಾಗುವನು."


ಎಂಬ ಸ್ಮೃತಿವಾಕ್ಯದಿಂದಲೂ ಇದರ ಕರ್ಮಸಾಧನತ್ವವು (ವೇದೋಕ್ತಕರ್ಮದಲ್ಲಿ ಪ್ರಯೋಗವು) ತಿಳಿದುಬರುವುದು. (ಅಂತೆಯೇ) ಇದು (ರುದ್ರಾಧ್ಯಾಯವು) ಜ್ಞಾನಕ್ಕೆ ಸಾಧನವೂ ಆಗಿರುವುದೆಂದು ಕೈವಲ್ಯೋಪನಿಷತ್ತಿನಲ್ಲಿ ಕಂಡುಬರುತ್ತದೆ—


"ಇದರಿಂದ (ರುದ್ರಾಧ್ಯಾಯದಿಂದ) ಸಂಸಾರದುಃಖವೆಂಬ ಮಹಾಸಾಗರವನ್ನು ನಾಶಮಾಡುವಂತಹ ಜ್ಞಾನವನ್ನು ಹೊಂದುತ್ತಾನೆ. ಹಾಗಾಗಿ ಇದನ್ನು ಚೆನ್ನಾಗಿ ಮನನ ಮಾಡಿ ಸಾರ್ಥವಾಗಿ (ಅರ್ಥಸಹಿತವಾಗಿ) ತಿಳಿದುಕೊಂಡರೆ ಕೈವಲ್ಯ (ಮೋಕ್ಷ) ವೆಂಬ ಆತ್ಯಂತಿಕಫಲವನ್ನು ಹೊಂದುತ್ತಾನೆ."


ಯದ್ಯಪಿ ಅಯಂ ರುದ್ರಾಧ್ಯಾಯಃ ಕೇವಲಂ ಪಾಠಮಾತ್ರೇಣ ಏವ ಅಭೀಷ್ಟಫಲದಃ, ಭವತಿ, ತಥಾಪಿ —


"ಯದ್ಗೃಹೀತ (ಯದಧೀತ) ಮವಿಜ್ಞಾತಂ ನಿಗದೇನೈವ ಶಬ್ದ್ಯತೇ |
ಅನಗ್ನಾವಿವ ಶುಷ್ಕೈಧೋ ನ ತಜ್ಜ್ವಲತಿ ಕರ್ಹಿಚಿತ್ ||"


ಇತಿ ಯಾಸ್ಕ-ಉಕ್ತೇಃ ಅರ್ಥ-ಅನಭಿಜ್ಞಸ್ಯ ನಿನ್ದಿತತ್ವಾತ್, "ಯೋऽರ್ಥಜ್ಞ ಇತ್ಸಕಲಂ ಭದ್ರಮಶ್ನುತೇ ನಾಕಮೇತಿ ಜ್ಞಾನವಿಧೂತಪಾಪ್ಮಾ" ಇತಿ ಅರ್ಥಜ್ಞಸ್ಯ ಪಾಪದಾಹ-ಸ್ವರ್ಗಪ್ರಾಪ್ತಿ-ಆದಿ-ಸಕಲ-ಭದ್ರ-ಅವಾಪ್ತಿ-ಕಥನೇನ ಸ್ತುತತ್ವಾತ್ "ಯದೇವ ವಿದ್ಯಯಾ ಕರೋತಿ ತದೇವ ವೀರ್ಯವತ್ತರಂ ಭವತಿ" ಇತಿ ಛನ್ದೋಗೈಃ ಕೇವಲ-ಮನ್ತ್ರಪಾಠ-ಪೂರ್ವಕ-ಕರ್ಮಾನುಷ್ಠಾನ-ಅಪೇಕ್ಷಯಾ ಅರ್ಥಜ್ಞಾನಸಹಿತೇ ಕರ್ಮಾನುಷ್ಠಾನೇ ಫಲಾತಿಶಯ-ಅಭಿಧಾನಾತ್ ಚ ಅರ್ಥಜ್ಞಾನಂ ಸುತರಾಮ್ ಆವಶ್ಯಕಮ್ ಇತಿ ಆಲಯ್ಯ ಸಾಯಣಾಚಾರ್ಯೈಃ ಕೃಷ್ಣಯಜುರ್ವೇದೀಯ-ತೈತ್ತಿರೀಯಸಂಹಿತಾಯಾಂ ಭಾಷ್ಯಂ ವ್ಯರಚಿ | ತದನ್ತರ್ಗತಮ್ ಏವ ಇದಂ ರುದ್ರಾಧ್ಯಾಯಭಾಗಮ್ ಇತಿ ಪ್ರಾಕ್ ಉಕ್ತಮ್ ಏವ ||


ಈ ರುದ್ರಾಧ್ಯಾಯವು ಕೇವಲ ಪಠನಮಾತ್ರದಿಂದಲೇ ಅಭೀಷ್ಟಫಲಪ್ರದವಾಗುತ್ತದಾದರೂ—


"ಯಾವ ಮಂತ್ರವನ್ನು ಉಪದೇಶ ಪಡೆದು / ಪರಿಗ್ರಹಿಸಿ (ಅಧ್ಯಯನಮಾಡಿ / ಕಂಠಸ್ಥಗೊಳಿಸಿ / ಬಾಯಿಪಾಠ ಮಾಡಿ) ನಿಗದವಾಗಿ / ಸಸ್ವರ ವೇದಮಂತ್ರವಾಗಿ, ಶಬ್ದಪ್ರಮಾಣವಾಗಿ ಅಥವಾ ಕೇವಲ ಪಠನಮಾತ್ರ ಮಾಡಿ ಅದರ ಭಾವಾರ್ಥ / ತಾತ್ಪರ್ಯ / ಅಂತರಾರ್ಥವನ್ನು ತಿಳಿಯದಿದ್ದರೆ, ಶುಷ್ಕವಾದ (ಒಣಗಿದ) ಇಂಧನ / ಕಟ್ಟಿಗೆ / ಸೌದೆಯೂ ಸಹ ಅಗ್ನಿಯಿರದಿದ್ದರೆ ತನ್ನಷ್ಟಕ್ಕೆ ತಾನೇ ಹೇಗೆ ಎಂದಿಗೂ ಪ್ರಜ್ವಲಿಸಲಾರದೋ ಅಂತೆಯೇ ಅರ್ಥಜ್ಞಾನವಿಲ್ಲದ ವೇದಪಠನವು ಪೂರ್ಣವಾಗಿ ಫಲಿಸಲಾರದು"


ಎಂಬ ಯಾಸ್ಕಮಹರ್ಷಿಗಳ ಮಾತಿನಿಂದ ಅರ್ಥವರಿಯದವನ ನಿಂದನೆಯಿಂದಾಗಿಯೂ, "ಯಾವನು ಅರ್ಥವನ್ನರಿತವನೋ ಅವನು ಸಕಲ ಮಂಗಲವನ್ನೂ ಹೊಂದುತ್ತಾನೆ, ಸ್ವರ್ಗವನ್ನೂ ಹೊಂದುವನು, ಜ್ಞಾನದಿಂದ ಪಾಪಗಳನ್ನು ಕಳೆದುಕೊಳ್ಳುವನು" ಎಂಬುದಾಗಿ ಅರ್ಥವರಿತವನಿಗೆ ಪಾಪನಾಶ, ಸ್ವರ್ಗಪ್ರಾಪ್ತಿಯೇ ಮುಂತಾದ ಫಲಪ್ರಾಪ್ತಿಗಳ ಹೇಳಿಕೆಯಿಂದ ಸ್ತುತಿ / ಪ್ರಶಂಸೆ ಮಾಡಿದ್ದರಿಂದಲೂ, ಹಾಗೂ "ಯಾವುದನ್ನು ತಿಳುವಳಿಕೆಯಿದ್ದು ಮಾಡುತ್ತಾನೋ ಅದೇ ಹೆಚ್ಚು ಫಲವನ್ನೀಯುವಂಥದ್ದಾಗುವುದು" ಎಂದು ಛಾಂದೋಗ್ಯೋಪನಿಷದೃಷಿಗಳಿಂದ ಕೇವಲ ಮಂತ್ರಪಠನಪೂರ್ವಕವಾದ ಕರ್ಮಾನುಷ್ಠಾನದ ಹೊರತಾಗಿ ಅರ್ಥವನ್ನರಿತ ಕರ್ಮಾನುಷ್ಠಾನದಲ್ಲಿ ಅತಿಶಯಫಲಸಿದ್ಧಿಯೆಂಬ ಹೇಳಿಕೆಯಿಂದಲೂ, ಅರ್ಥಜ್ಞಾನವು ಖಂಡಿತವಾಗಿಯೂ ಅಗತ್ಯವೆಂದು ಮನಗಂಡು (ತೀರ್ಮಾನಿಸಿ), ಸಾಯಣಾಚಾರ್ಯರಿಂದ ಕೃಷ್ಣಯಜುರ್ವೇದೀಯ ತೈತ್ತಿರೀಯಸಂಹಿತೆಯಲ್ಲಿ ಭಾಷ್ಯವು ವಿರಚಿಸಲ್ಪಟ್ಟಿತು. (ಅಲ್ಲದೆ ಎಲ್ಲಾ ವೇದಗಳಿಗೂ ಭಾಷ್ಯವನ್ನು ಇವರು ಬರೆದಿರುವರು). ಅಂತಹ ತೈತ್ತಿರೀಯಾಂತರ್ಗತವಾದದ್ದೇ ಈ ರುದ್ರಾಧ್ಯಾಯಭಾಗವು ಎಂದು ಹಿಂದೆಯೇ ಹೇಳಿದೆಯಷ್ಟೆ?


ನನು ಯದಿ ಚತುರ್ವೇದಭಾಷ್ಯಕೃದ್ಭಿಃ ಸಾಯಣಾಚಾರ್ಯೈಃ, ರುದ್ರಾಧ್ಯಾಯೋಪರಿ ಭಾಷ್ಯಂ ಲಿಖಿತಂ ತರ್ಹಿ ಕಿಮರ್ಥಮ್ ಅಯಂ ವಿಷ್ಣುಸೂರೀಣಾಂ ಭಾಷ್ಯಪ್ರಣಯನ-ಪ್ರಯಾಸಃ, ಇತಿ ಚೇತ್ ಶೃಣು | ಸಾಯಣಾಚಾರ್ಯೈಃ ಕರ್ಮಪರತಯಾ ಅಯಂ ರುದ್ರಾಧ್ಯಾಯಃ, ವ್ಯಾಖ್ಯಾತಃ | ತದುಕ್ತಂ ತೈಃ ಏವ ತದ್-ಉಪೋದ್ಘಾತೇ—
"ಇಹ ಕರ್ಮಾಙ್ಗತಾ ಯಾದೃಗ್ ವರ್ಣಿತಾ ಬ್ರಾಹ್ಮಣೇನ ತಾಮ್ |
ಬೋದ್ಧುಂ ಶಬ್ದಾರ್ಥಮಾತ್ರಸ್ಯ ವಿವೃತಿಃ ಕ್ರಿಯತೇ ಸ್ಫುಟಾ ||"
ಇತಿ | ವಿಷ್ಣುಸೂರಿಭಿಃ ತು ಅಧ್ಯಾತ್ಮಪರತಯಾ ಅಯಂ ಲಾಪಿತಃ, ಇತಿ ಅಸ್ತಿ ವಿಶೇಷಃ, ಇತಿ ಕೃತ್ವಾ ಸಫಲಃ ಅಯಂ ಪ್ರಯಾಸಃ ||


ನಾಲ್ಕೂ ವೇದಗಳ ೫ ಸಂಹಿತೆಗಳಿಗೂ (ಋಗ್ವೇದ, ಕೃಷ್ಣಯಜುರ್ವೇದ, ಶುಕ್ಲಯಜುರ್ವೇದ, ಸಾಮವೇದ, ಅಥರ್ವವೇದ) ಭಾಷ್ಯವನ್ನು ಬರೆದ ಸಾಯಣಾಚಾರ್ಯರಿಂದ ರುದ್ರಾಧ್ಯಾಯದ ಮೇಲೆ ಭಾಷ್ಯವು ಬರೆಯಲ್ಪಟ್ಟಿರುವುದಾದರೂ, ಈ ವಿಷ್ಣುಸೂರಿಗಳ ಭಾಷ್ಯರಚನೆಯ ಕಷ್ಟವಾದರೂ ಯಾಕಾಗಿ ಎಂದರೆ ಕೇಳು. ಸಾಯಣಾಚಾರ್ಯರಿಂದ ವೇದೋಕ್ತಕರ್ಮಪರವಾಗಿ ಈ ರುದ್ರಾಧ್ಯಾಯವು ವ್ಯಾಖ್ಯಾನಿಸಲ್ಪಟ್ಟಿರುವುದು. ಅದು ಅವರಿಂದಲೇ ಅದರ (ಭಾಷ್ಯದ) ಪೀಠಿಕೆಯಲ್ಲಿ ಹೇಳಲ್ಪಟ್ಟಿದೆ— "ಇಲ್ಲಿ (ಕರ್ಮಪ್ರಧಾನವಾದ ಸಂಹಿತೆಯಲ್ಲಿ ಬರುವ ಈ ರುದ್ರಾಧ್ಯಾಯದಲ್ಲಿ ಹಾಗೂ ಅದರ ಭಾಷ್ಯದಲ್ಲಿ) ಬ್ರಾಹ್ಮಣಗ್ರಂಥದಲ್ಲಿ ಯಾವ ಕರ್ಮಗಳಿಗಾಗಿ ರುದ್ರಾಧ್ಯಾಯವು ಹೇಗೆ ವಿನಿಯೋಗವಿದೆಯೆಂದು ವರ್ಣಿಸಲ್ಪಟ್ಟಿದೆಯೋ ಆ ಕರ್ಮಾಂಗದ ವರ್ಣನೆಯ ಶಬ್ದಾರ್ಥಮಾತ್ರದ ವಿವೃತಿಯು (ವಿವರಣೆಯು) ಸ್ಪಷ್ಟವಾಗಿ ಮಾಡಲ್ಪಡುತ್ತದೆ" ಎಂಬುದಾಗಿ. ವಿಷ್ಣುಸೂರಿಗಳಿಂದಲಾದರೋ ಅಧ್ಯಾತ್ಮಪರವಾಗಿ ಹೇಳಲ್ಪಟ್ಟಿರುವುದು ಈ ಭಾಷ್ಯವು ಎಂಬುದು ವಿಶೇಷವಾಗಿರುವುದು; ಇದರಿಂದ ಈ ಪ್ರಯತ್ನವು ಫಲಪ್ರದವೂ, ಉಪಯುಕ್ತವೂ ಹೌದು.


ನನು ಅಧ್ಯಾತ್ಮಪರತಯಾ ವ್ಯಾಖ್ಯಾನೇ ಕಿಮ್ ಅಸ್ಮಿನ್ ರುದ್ರಾಧ್ಯಾಯೇ ನಿರುಪಾಧಿಕಃ ಸ್ತೂಯತೇ ಸೋಪಾಧಿಕಃ, ವಾ? ನ ಆದ್ಯಃ | "ಯತೋ ವಾಚೋ ನಿವರ್ತನ್ತೇ | ಅಪ್ರಾಪ್ಯ ಮನಸಾ ಸಹ" ಇತಿ ಶ್ರುತ್ಯಾ ನಿರುಪಾಧಿಕಸ್ಯ ವಾಙ್ಮನಸೋಃ ಅಗೋಚರತ್ವ-ಅಭಿಧಾನೇನ ಸ್ತುತಿ-ವಿಷಯತ್ವ-ಅತ್ಯನ್ತ-ಅಸಂಭವಾತ್ | ದ್ವಿತೀಯೇ ಅಪಿ ಕಿಂ ಜೀವಃ, ಈಶ್ವರಃ, ವಾ ಸ್ತೂಯತೇ? ನ ಆದ್ಯಃ | ಸ್ತೋತಾ ಹಿ ಖಲು ಜೀವಃ ಪ್ರಸಿದ್ಧಃ | ಯದಿ ಸ್ತವ್ಯಃ ಅಪಿ ಜೀವಃ ಸ್ಯಾತ್, ತರ್ಹಿ ಏಕಸ್ಯ ಏವ ವಿರುದ್ಧಕರ್ತೃತ್ವಕತ್ವ-ಧರ್ಮ-ಸಮವಾಯ-ಪ್ರಸಙ್ಗಾತ್ | ದ್ವಿತೀಯಪಕ್ಷೇ ಅಪಿ ಕಿಂ ತ್ರಿನೇತ್ರತ್ವ-ಶಶಿಶೇಖರತ್ವ-ವಿಶಿಷ್ಟ-ವ್ಯಕ್ತಿವಿಶೇಷಃ ಕೈಲಾಸವಾಸೀ ಶ್ರೀರುದ್ರಃ ಸ್ತೂಯತೇ, ಆಹೋಸ್ವಿತ್ (/ಅಥವಾ) ವಿಶುದ್ಧ-ಸತ್ತ್ವಪ್ರಧಾನ-ಮಾಯಾ-ಉಪಾಧಿಃ ಈಶ್ವರಃ? ನ ಆದ್ಯಃ | ಯಥಾಶ್ರುತೇ ತಥಾ ಪ್ರತೀಯಮಾನತ್ವೇ ಅಪಿ ಅಧ್ಯಾತ್ಮಪರತಯಾ ಪದಾನಾಂ ಯೋಜನೇ ತಥಾ ಅಪ್ರತೀತೇಃ | 


"ಏಕಂ ಸದ್ವಿಪ್ರಾ ಬಹುಧಾ ವದನ್ತ್ಯಗ್ನಿಂ ಯಮಂ ಮಾತರಿಶ್ವಾನಮಾಹುಃ |
ಏಕಂ ಸನ್ತಂ ಬಹುಧಾ ಕಲ್ಪಯನ್ತಿ" 


ಇತಿ-ಏವಮ್-ಆದಿ-ಶ್ರುತಿಷು ಮಾಯಾ-ಉಪಾಧೇಃ ಈಶ್ವರಸ್ಯ ಏವ ಸರ್ವ-ಸ್ತವ್ಯ-ಮೂರ್ಧಾಭಿಷಿಕ್ತತ್ವೇನ ಪ್ರತಿಪಾದನಾತ್ | ತಸ್ಮಾತ್ ಅಧ್ಯಾತ್ಮಪರತಯಾ ವ್ಯಾಖ್ಯಾನೇ ಸತಿ ವಿಷ್ಣುಸೂರಿಕೃತೇ ಅಸ್ಮಿನ್ ರುದ್ರಭಾಷ್ಯೇ ಮಾಯಾ-ಉಪಾಧಿಃ ಈಶ್ವರಃ, ಏವ ಸ್ತೂಯತೇ, ಇತಿ ಸಿದ್ಧ್ಯತಿ ||


ಅಧ್ಯಾತ್ಮಪರವಾದ ವ್ಯಾಖ್ಯಾನದಲ್ಲಿ ಈ ರುದ್ರಾಧ್ಯಾಯದಲ್ಲಿ (ನಾಮ, ರೂಪ, ಗುಣ, ಲಿಂಗ, ಧರ್ಮ, ಕರ್ಮಾದಿ) ಉಪಾಧಿ (ಚಿಹ್ನೆ, ಲಿಂಗ, ಗುರುತು, ಸಂಜ್ಞೆ)ರಹಿತನಾಗಿ ನಿರುಪಾಧಿಕನಾದವನು ಸ್ತುತಿಸಲ್ಪಡುವನೋ ಅಥವಾ ಅಂತಹ ಉಪಾಧಿಸಹಿತನಾದ ಸೋಪಾಧಿಕನೋ? ಮೊದಲಿನವನಲ್ಲ (ನಿರುಪಾಧಿಕನಲ್ಲ). "ನಮ್ಮ ಮಾತು, ಮನಸ್ಸಿನೊಂದಿಗೆ (ಯಾವುದನ್ನು) ಪ್ರಾಪ್ತಿಮಾಡಿಕೊಳ್ಳದೆ, ತಲುಪಲಾರದೆ (ವರ್ಣಿಸಲಾರದೆ ಅನಿರ್ವಚನೀಯವೂ ಅವರ್ಣನೀಯವೂ ಆದ, ಕಲ್ಪಿಸಲಾರದೆ ನಿರ್ವಿಕಲ್ಪವೂ, ಅನೂಹ್ಯವೂ, ಅಚಿಂತ್ಯವೂ ಆಗಿರುವ) ಯಾವ ಪರತತ್ತ್ವದಿಂದ ಹಿಂದಿರುಗುತ್ತದೋ" ಎಂಬ ವೇದವಚನದಿಂದ (ಶ್ರುತಿವಾಕ್ಯದಿಂದ) ನಿರುಪಾಧಿಕತತ್ತ್ವದ ವಾಕ್ಕು (ಮಾತು) ಮತ್ತು ಮನಸ್ಸುಗಳ ಅಗೋಚರತ್ವ (ನಿಲುಕದಿರುವಿಕೆ) ಎಂಬ ಹೇಳಿಕೆಯಿಂದ (ಅಂಥದ್ದರ) ಸ್ತುತಿಯೆಂಬ ವಿಚಾರವು ಅತ್ಯಂತ ಅಸಂಭವವು (ನಡೆಯದಾಗಿರುವುದು, ಘಟಿಸಲಾರದ್ದು). ಎರಡನೆಯದರಲ್ಲೂ (ಸೋಪಾಧಿಕನೆಂಬ ಪಕ್ಷದಲ್ಲೂ) ಸಹ ಜೀವನು ಸ್ತುತಿಸಲ್ಪಡುವನೋ ಅಥವಾ ಈಶ್ವರನೋ? ಮೊದಲಿನವನಲ್ಲ (ಜೀವನಲ್ಲ). ಸ್ತುತಿ ಮಾಡುವ ಸ್ತೋತೃವು ಜೀವನೆಂಬುದು ಸುಪ್ರಸಿದ್ಧವು. ಸ್ತುತಿಸಲ್ಪಡುವವನೂ ಜೀವನೇ ಆದರೆ, ಒಬ್ಬನಿಗೇ ವಿರುದ್ಧ-ಕರ್ತೃಕತ್ವ-ಧರ್ಮ-ಸಮುಚ್ಚಯ-ಪ್ರಸಂಗವೇರ್ಪಡುವುದು (ಅರ್ಥಾತ್ ಹೊಗಳುವವನು ತನ್ನನ್ನೇ ತಾನು ಹೊಗಳಿದಂತೆ ಆಗುವುದರಿಂದ ಆತ್ಮಸ್ತುತಿಯು ಧರ್ಮಕ್ಕೆ ವಿರುದ್ಧವಾಗುವುದು ಹಾಗೂ ಹೊಗಳುವವನೂ ತಾನೇ ಹೊಗಳಿಸಿಕೊಳ್ಳುವವನೂ ತಾನೇ ಆದಾಗ ಪರಸ್ಪರ ವಿರುದ್ಧವೂ ಭಿನ್ನವೂ ಆದ ಎರಡೂ ಕರ್ಮಗಳ ಕರ್ತೃವು ಒಬ್ಬನೇ ಆಗುವಂತಹ ವಿರೋಧಾಭಾಸವುಂಟಾಗುವುದು). ಎರಡನೇ ಪಕ್ಷದಲ್ಲೂ ಕೂಡ (ಸೋಪಾಧಿಕಪಕ್ಷದಲ್ಲಿ), ಮೂರು ಕಣ್ಣುಗಳು, ತಲೆಯಲ್ಲಿ ಚಂದ್ರ ಮುಂತಾದುವುಗಳಿಂದ ವಿಶಿಷ್ಟನಾದ ವ್ಯಕ್ತಿವಿಶೇಷನಾದ ಕೈಲಾಸದಲ್ಲಿ ವಾಸವಾಗಿರುವ ಶ್ರೀರುದ್ರನು (ಉಮಾಮಹೇಶ್ವರನು, ಪಾರ್ವತೀವಲ್ಲಭನು) ಸ್ತುತಿಸಲ್ಪಡುತ್ತಾನೋ ಅಥವಾ— ಕಲ್ಮಷರಹಿತನಾಗಿ ಅತ್ಯಂತ ಪರಿಶುದ್ಧನೂ (ನಿಷ್ಕಲ್ಮಷನೂ), ಸತ್ತ್ವಗುಣಪ್ರಧಾನನಾಗಿ ಪರಮಸಾತ್ತ್ವಿಕನೂ, ತನ್ನ ಮಾಯೆ / ಅವಿದ್ಯೆಯನ್ನೇ ಸ್ವತಃ ಆಶ್ರಯಿಸಿ ಬಳಸಿಕೊಂಡು (ಕಲಾವಿದನು ವೇಷಧರಿಸಿದಂತೆ) ಸಾಕಾರನಂತೆ ತೋರುವ ಪರಮೇಶ್ವರ ಪರಮಾತ್ಮನಾದ ಭಗವಂತನು ಸ್ತುತಿಸಲ್ಪಡುತ್ತಾನೋ? ಮೊದಲಿನವನಲ್ಲ (ಕೈಲಾಸವಾಸಿಯಾದ ಮುಕ್ಕಣ್ಣನಲ್ಲ). ಶ್ರುತಿವಾಕ್ಯವನ್ನು ಮೀರದಂತೆಯೇ (ಶ್ರುತಮ್ ಅನತಿಕ್ರಮ್ಯ— ಯಥಾಶ್ರುತಮ್, ತಸ್ಮಿನ್, ಯಥಾಶ್ರುತೇ) ವಿವರಿಸುತ್ತಿರುವುದಾದರೂ ಸಹ, ಅಧ್ಯಾತ್ಮಪರವಾಗಿ ಪದಗಳ ಜೋಡಣೆಯು ಅಷ್ಟು ಲೋಕಪ್ರಸಿದ್ಧವಲ್ಲ. 


"ಒಂದೇ ಅಸ್ತಿತ್ವವನ್ನು ವೇದವಿದರು ಬಹುವಿಧವಾಗಿ ಅಗ್ನಿ, ಯಮ, ವಾಯು ಮುಂತಾಗಿ ಹೇಳುವರು. ಇರುವ ಒಂದೇ ಪರತತ್ತ್ವವನ್ನು, (ಪರಬ್ರಹ್ಮವನ್ನು, ಬ್ರಹ್ಮವನ್ನು, ಆತ್ಮನನ್ನು, ಪರಮಾತ್ಮನನ್ನು, ಭಗವಂತನನ್ನು) ನಾನಾ ವಿಧವಾಗಿ ಪರಿಕಲ್ಪಿಸುತ್ತಾರೆ"


ಎಂದು ಮುಂತಾದ ಶ್ರುತಿಗಳಲ್ಲಿ, ಮಾಯಾಮಯಶರೀರನಾದ ಪರಮೇಶ್ವರ ಪರಮಾತ್ಮನಿಗೇ ಸಕಲರಿಂದ ಸ್ತುತಿಸಲ್ಪಡುವ ಶಿರೋಪ್ರಾಯತ್ವವೂ ಸರ್ವಪ್ರಧಾನತ್ವವೂ ಮುಕುಟಧಾರಕತ್ವವೂ ಹೇಳಿರುವುದರಿಂದ, ಅಧ್ಯಾತ್ಮಪರವಾದ ವ್ಯಾಖ್ಯಾನ ಮಾಡುವಾಗ, ವಿಷ್ಣುಸೂರಿಗಳಿಂದ ವಿರಚಿತವಾದ ಈ ರುದ್ರಭಾಷ್ಯದಲ್ಲಿ ಮಾಯಾಮಯತನುವನ್ನು ಧರಿಸಿ ಸಾಕಾರನಾಗಿ ತೋರುವ ಈಶ್ವರನೇ ಸ್ತುತಿಸಲ್ಪಡುತ್ತಾನೆಂಬುದು ಸಿದ್ಧವಾಗುತ್ತದೆ (ಸಾಧಿತವಾಗುತ್ತದೆ).


ನನು ಅಸ್ಯ ರುದ್ರಾಧ್ಯಾಯಸ್ಯ ಯಥಾಶ್ರುತಾರ್ಥಂ ಶಶಿಖಣ್ಡ-ಮಣ್ಡನತ್ವಾದಿ-ವಿಶಿಷ್ಟ-ಶಿವ-ಸ್ವರೂಪಃ, ತಾವಕತ್ವಂ ಪರಿತ್ಯಜ್ಯ ಅಧ್ಯಾತ್ಮಪರತಯಾ ವ್ಯಾಖ್ಯಾನೇ ಕಿಂ ಬೀಜಮ್ ಇತಿ ಚೇತ್, ಶೃಣು ಸಾವಧಾನತಯಾ | ಯಥಾಶ್ರುತೇ ಸ್ತೇನಾನಾಂ ಸ್ತಾಯೂನಾಮ್ ಆರಣ್ಯಾನಾಂ ಮುಷ್ಣತಾಂ ಕುಲುಞ್ಚಾನಾಂ ಪತಯೇ ನಮಃ, ಇತ್ಯಾದಿ-ಪದಾನಾಮ್ ಅರ್ಥ-ಆಲೋಚನೇ ಭಗವತಃ ಶ್ರೀಶಿವಸ್ಯ ಮಹತ್ತ್ವಭಙ್ಗಃ, ಸ್ವಾರಸ್ಯಭಙ್ಗಃ, ಉಪಾಸಕಾನಾಮ್ ಆನನ್ದಭಙ್ಗಃ ಚ ಸ್ಯಾತ್ | ತಥಾ— ಆಸೀನೇಭ್ಯಃ ಶಯಾನೇಭ್ಯಃ ತಿಷ್ಠದ್ಭ್ಯಃ, ಧಾವದ್ಭ್ಯಃ, ಇತ್ಯಾದೀನಾಂ ಸ್ವ-ಭಾವೋಕ್ತಿ-ಅನು-ಕಾರಮಾತ್ರತ್ವೇನ, ತಥಾ ತಕ್ಷಭ್ಯೋ ರಥಕಾರೇಭ್ಯಃ ಕುಲಾಲೇಭ್ಯಃ ಕರ್ಮಾರೇಭ್ಯಶ್ಚ ವೋ ನಮಃ, ಇತ್ಯಾದೀನಾಂ ತತ್-ತತ್-ಜಾತಿ-ಅನು-ವಾದೇನ ಸ್ತುತಿಃ ವಾ ನಿನ್ದಾ ವಾ ಇತಿ ಸಂಶಯಾಸ್ಪದತಾ ಏವ ಸ್ಯಾತ್ | ನ ಚ ಸರ್ವತಾದಾತ್ಮ್ಯ-ವರ್ಣನೇನ ರುದ್ರಸ್ಯ ಸ್ತೂಯಮಾನತ್ವಾತ್ ನ ದೋಷಃ, ಇತಿ ವಾಚ್ಯಮ್ | ಸರ್ವ-ತಾದಾತ್ಮ್ಯ-ವರ್ಣನೇ ಹಿ ಸಾಮಾನ್ಯವಚನಂ ಭವತಿ | "ಯಃ ಪೃಥಿವ್ಯಾಂ ತಿಷ್ಠನ್ ಪೃಥಿವ್ಯಾ ಆನ್ತರಃ" ಇತಿ ಸಾಮಾನ್ಯೇನ ಅಪಿ ತತ್-ಸಿದ್ಧೇಃ | ಯಥಾ ವೃಕ್ಷರೂಪಃ, ಇತಿ ಉಕ್ತೌ ಪುಷ್ಪ-ಫಲಾದಿ-ರೂಪತ್ವಮ್ ಅರ್ಥತಃ, ಏವ ಆಪನ್ನಂ ಭವತಿ | ಇಹ ತು ವೃಕ್ಷೇಭ್ಯೋ ಹರಿಕೇಶೇಭ್ಯಃ, ಇತಿ ಉಕ್ತ್ವಾ ಪುನಃ ಪರ್ಣ್ಯಾಯ ಪರ್ಣಶದ್ಯಾಯ, ಇತಿ ವಿಶಿಷ್ಯ ಪ್ರತಿಪಾದನಮ್ ಅನರ್ಥಕಮ್ ಇವ ಪ್ರತಿಭಾತಿ | ವೃಕ್ಷೇಭ್ಯೋ ಹರಿಕೇಶೇಭ್ಯಃ, ಇತ್ಯಸ್ಯ ವೃಕ್ಷರೂಪಃ ಅಯಂ ರುದ್ರಃ, ಇತಿ ತಾತ್ಪರ್ಯಮ್ | ಪರ್ಣ್ಯಾಯ ಪರ್ಣಶದ್ಯಾಯ, ಇತ್ಯಸ್ಯ ಚ ಪರ್ಣರೂಪಃ ಪರ್ಣಸಙ್ಘಾತರೂಪಃ ಅಯಂ ರುದ್ರಃ, ಇತಿ ಅರ್ಥಃ | ತಥಾ ಚ ವೃಕ್ಷರೂಪಃ ಅಯಂ ರುದ್ರಃ, ಇತಿ ಉಕ್ತೌ ಅರ್ಥತಃ, ಏವ ಪರ್ಣರೂಪಃ ಅಯಮ್ ಇತಿ ಉಕ್ತಂ ಭವತಿ ಇತಿ ಪರ್ಣ್ಯಾಯ ಇತ್ಯಾದಿ ಪುನರುಕ್ತಮ್ ಇವ ಪ್ರತೀಯತೇ, ಇತಿ ಯಾವತ್ ||


ಈ ರುದ್ರಾಧ್ಯಾಯದ ಹೊರನೋಟದಲ್ಲಿ (ಶಬ್ದಶ್ರವಣಮಾತ್ರದಿಂದ ಉಂಟಾಗುವ ನೇರವಾದ ಶಬ್ದಾರ್ಥಜ್ಞಾನದಂತೆ) ಚಂದ್ರನ ಕಲೆ (ಅಂಶ, ಖಂಡ, ತುಂಡು) ಇರುವಿಕೆಯೇ ಮುಂತಾದವುಗಳಿಂದ ವಿಶಿಷ್ಟವಾದ ಶಿವಸ್ವರೂಪವಿದ್ದರೂ, ಅಂಥದ್ದನ್ನು ಬಿಟ್ಟು (ಪರಿತ್ಯಜಿಸಿ) ಅಧ್ಯಾತ್ಮಪರವಾದ ವ್ಯಾಖ್ಯಾನದಲ್ಲಿ ಮೂಲಾಧಾರಬೀಜರೂಪವು (ಕಾರಣವು) ಏನು ಎಂದರೆ, ಗಮನವಿಟ್ಟು ಕೇಳು. (ರುದ್ರಾಧ್ಯಾಯದಲ್ಲಿ) ಕೇಳಿಬರುವಂತೆ ಸ್ತೇನಾನಾಂ (ಚೋರರ), ಸ್ತಾಯೂನಾಂ (ದರೋಡೆಕೋರರ), ಆರಣ್ಯಾನಾಂ (ಅರಣ್ಯವಾಸಿಗಳ), ಮುಷ್ಣತಾಂ (ಅಡಗಿಸುವವರ, ತುಂಡರಿಸುವವರ, ಕಣ್ಣುಕಟ್ಟುವವರ, ನಾಶಕೋರರ, ಕದ್ದೊಯ್ಯುವವರ, ಆಕ್ರಮಿಸುವವರ) ಕುಲುಂಚಾನಾಂ (ಕೂದಲು ಕೀಳುವವರ, ಭೂಮಿಯನ್ನಪಹರಿಸುವವರ, ಕುತ್ಸಿತಬುದ್ಧಿಯನ್ನು ಹರಣಮಾಡುವವರ) ಪತಯೇ ನಮಃ (ಅಧಿಪತಿಗೆ ನಮಸ್ಕಾರ), ಮುಂತಾದ ಪದಗಳ ಅರ್ಥಗಳನ್ನು ಆಲೋಚಿಸಿದಾಗ (ಚಿಂತಿಸಿದಾಗ), ಭಗವಂತನಾದ ಶ್ರೀಶಿವನ ಮಹತ್ತ್ವಕ್ಕೆ, ಸ್ವಾರಸ್ಯಕ್ಕೆ ಭಂಗವೂ (ಅಡ್ಡಿಯೂ) ಹಾಗೂ ಉಪಾಸಕರಿಗೆ / ಪೂಜಕರಿಗೆ ಆನಂದದ ಭಂಗವೂ (ಹಾನಿಯೂ) ಆಗಬಹುದು. ಹಾಗೆಯೇ— ಆಸೀನೇಭ್ಯಃ (ಆಸೀನರಾದವರಿಗೆ, ಕುಳಿತುಕೊಂಡಿರುವವರಿಗೆ), ಶಯಾನೇಭ್ಯಃ (ಮಲಗಿದವರಿಗೆ, ಶಯನಮಾಡಿದವರಿಗೆ), ತಿಷ್ಠದ್ಭ್ಯಃ (ನಿಂತಿರುವವರಿಗೆ), ಧಾವದ್ಭ್ಯಃ (ಧಾವಿಸುತ್ತಿರುವವರಿಗೆ, ಓಡುತ್ತಿರುವವರಿಗೆ) ಇತ್ಯಾದಿಗಳಿಗೆ ಸ್ವಭಾವವನ್ನು ಹೇಳುವ ಅನುಕರಣಾರ್ಥಮಾತ್ರವಿರುವುದರಿಂದ, ಹಾಗೆಯೇ, ತಕ್ಷಭ್ಯೋ (ಕೆತ್ತನೆಯವರಿಗೂ, ಶಿಲ್ಪಿಗಳಿಗೂ, ಹೊರಮೈಕೆತ್ತನೆಯ ಕುಶಲಕರ್ಮಿಗಳಿಗೆ, ಚರ್ಮದ ಕೆಲಸದವರಿಗೆ, ಚಮ್ಮಾರರಿಗೆ) ರಥಕಾರೇಭ್ಯಃ (ರಥವನ್ನು ನಿರ್ಮಿಸುವವರಿಗೆ, ರಥಕಾರರಿಗೆ, ವಾಹನಗಳ ರಚನಕಾರರಿಗೆ), ಕುಲಾಲೇಭ್ಯಃ (ಕುಂಬಾರರಿಗೆ, ಮಡಕೆಮಾಡುವವರಿಗೆ), ಕರ್ಮಾರೇಭ್ಯಶ್ಚ (ಹಾಗೂ ಕಮ್ಮಾರರಿಗೆ, ಕಬ್ಬಿಣದ ಕೆಲಸಗಾರರಿಗೆ, ಲೋಹಕಾರರಿಗೆ) ವೋ ನಮಃ (ವಃ, ಯುಷ್ಮಭ್ಯಃ— ನಿಮಗೆ, ಅಂತಹ ನಿಮಗೆ, ಅವರೆಲ್ಲರೊಳಗಿರುವ ರುದ್ರರಿಗೆ ನಮಸ್ಕಾರ)— ಇತ್ಯಾದಿಗಳಿಗೆ ಆಯಾ ಜಾತಿಯೆಂಬುದಾಗಿ ಅನುವಾದಮಾಡುವುದರಿಂದ ಹೊಗಳಿಕೆಯಾಗುವುದೋ ಅಥವಾ ತೆಗಳಿಕೆಯಾಗುವುದೋ ಎಂಬ ಸಂಶಯಕ್ಕೆಡೆಕೊಟ್ಟಂತಾಗಬಹುದು. ಎಲ್ಲರ ಅಂತರಾತ್ಮನೆಂಬುದಾಗಿ ವರ್ಣಿಸುವುದರಿಂದ ರುದ್ರನ ಸ್ತುತಿಯಾಗುವುದರಿಂದ ದೋಷವಿಲ್ಲ (ತಪ್ಪಿಲ್ಲ)ವೆಂದು ಹೇಳಬೇಕು. ಸಕಲರ ಅಂತರಾತ್ಮನೆಂಬ ವರ್ಣನೆಯಲ್ಲಿಯಾದರೋ ಸಾಮಾನ್ಯವಾಕ್ಯವು ಇರುತ್ತದೆ. "ಯಾವನು ಭೂಮಿಯಲ್ಲಿ ನಿಂತಿದ್ದು ಭೂಮಿಯ ಒಳಗೂ ವ್ಯಾಪಿಸಿರುವನೋ" ಎಂಬುದಾಗಿ ಸಾಮಾನ್ಯವಾಕ್ಯದಿಂದಲೂ ಸಹ ಅದರ (ಅಂತರಾತ್ಮತ್ವದ) ಸಿದ್ಧಿಯಾಗುವುದು. ಹೇಗೆ ವೃಕ್ಷರೂಪನು ಎಂದು ಹೇಳಿದಾಗ ಆ ಮರದ ಹೂವು-ಹಣ್ಣುಗಳೇ ಮೊದಲಾದ ರೂಪತ್ವವೂ ಅವನೇ ಎಂದು ಅರ್ಥವಾಗುವುದೋ ಹಾಗೆಯೇ ಬೇರೆ ಬೇರೆ ರೂಪವೂ ಅವನೆಂದಾಗ ಅದೆಲ್ಲದರ ಅಂತರ್ಗತನಾಗಿ ಅಂತರಾತ್ಮನಾಗಿರುವನೆಂಬ ತಾದಾತ್ಮ್ಯಭಾವವೂ ಸಿದ್ಧಿಸುವುದು. ಇಲ್ಲಿ (ರುದ್ರಾಧ್ಯಾಯದಲ್ಲಿ) ಯಾದರೋ " ವೃಕ್ಷೇಭ್ಯೋ (ಮರಗಳಿಗೆ) ಹರಿಕೇಶೇಭ್ಯಃ (ಪಿಂಗಲವರ್ಣದ ಕೇಶ / ಕೂದಲುಗಳುಳ್ಳವನಿಗೆ)" ಎಂದು ಹೇಳಿ ಮತ್ತೆ, "ಪರ್ಣ್ಯಾಯ (ಪರ್ಣ / ಎಲೆಗಳ ರೂಪದವನಿಗೆ) ಪರ್ಣಶದ್ಯಾಯ (ಪರ್ಣಾನಿ ಶದ್ಯನ್ತೇ ಶೀರ್ಯನ್ತೇ ಶಾತ್ಯನ್ತೇ ಯತ್ರ ತತ್ ಪರ್ಣಶದಃ; ಪರ್ಣಶದಃ ಯಸ್ಯ / ವೃಕ್ಷಸ್ಯ ಛಾಯಾಯಾಂ ವರ್ತತೇ ಸಃ ಪರ್ಣಶದ್ಯಃ; ತಸ್ಮೈ— ಮರದ ಎಲೆಗಳು ಬೀಳುವ ಮರದಡಿಯ ನೆರಳಿನ ಪ್ರದೇಶ ಪರ್ಣಶದ; ಯಾವುದರ ನೆರಳಿನಲ್ಲಿ ಪರ್ಣಶದವಿರುವುದೋ ಅಂತಹ ವೃಕ್ಷವು ಪರ್ಣಶದ್ಯವು; ಅಂತಹ ವೃಕ್ಷರೂಪಿಯಾದ ರುದ್ರನಿಗೆ)" ಎಂದು ವಿಶೇಷವಾಗಿ ಪ್ರತಿಪಾದಿಸುವಿಕೆಯು ಅನರ್ಥಕರವಾದಂತೆ ಭಾಸವಾಗುತ್ತದೆ.  "ವೃಕ್ಷೇಭ್ಯೋ ಹರಿಕೇಶೇಭ್ಯಃ" ಎಂಬುದಕ್ಕೆ ವೃಕ್ಷರೂಪನು ಈ ರುದ್ರನು ಎಂಬುದು ತಾತ್ಪರ್ಯವು. ಹಾಗೆಯೇ, "ಪರ್ಣ್ಯಾಯ ಪರ್ಣಶದ್ಯಾಯ" ಎಂಬುದಕ್ಕೆ ಪರ್ಣರೂಪಿಯು / ಪರ್ಣಸಮೂಹರೂಪಿಯು (ಎಲೆಗಳ / ಎಲೆಗಳ ಸಮೂಹದ ರೂಪನು) ಈ ರುದ್ರನು ಎಂದರ್ಥ. ಅಂತೆಯೇ, "ವೃಕ್ಷರೂಪನು ಈ ರುದ್ರನು" ಎಂಬ ಮಾತಿನಲ್ಲಿ ಅರ್ಥರೂಪವಾಗಿ (ಪರೋಕ್ಷವಾಗಿ) ಪರ್ಣರೂಪನೂ ಇವನು ಎಂದು ಹೇಳಿದಂತಾಗುವುದು ಎಂಬುದರಿಂದಾಗಿ "ಪರ್ಣ್ಯಾಯ" ಇತ್ಯಾದಿ ಪುನರುಕ್ತಿಯಂತೆ (ಮತ್ತೆ ಮತ್ತೆ ಹೇಳಿದಂತೆ, ಚರ್ವಿತ ಚರ್ವಣದಂತೆ) ತೋರುತ್ತದೆ ಎಂಬುದಾಗಿ.


ನಿರುಕ್ತಪದಾನಾಂ ವಿಷ್ಣುಸೂರಿಕೃತಃ ಅರ್ಥಃ ನಮಕೇ ಅಷ್ಟಮ-ನವಮ-ಅನುವಾಕಯೋಃ ದ್ರಷ್ಟವ್ಯಃ | ಅಪಿ ಚ, ಸ್ತುತಿಃ ಹಿ ದ್ವಿವಿಧಾ | ಯಥಾರ್ಥಾ ಅಯಥಾರ್ಥಾ ಚ ಇತಿ | ತತ್ರ ಸ್ತೋತವ್ಯೇ ಅರ್ಥೇ ವಿದ್ಯಮಾನಾನಾಮ್ ಏವ ಗುಣಾನಾಂ ವರ್ಣನಂ ಯಥಾರ್ಥಾ ಸ್ತುತಿಃ | ಯಥಾ — "ಯೋ ರುದ್ರೋ ಅಗ್ನೌ ಯೋ ಅಪ್ಸು ಯ ಓಷಧೀಷು ಯೋ ರುದ್ರೋ ವಿಶ್ವಾ ಭುವನಾವಿವೇಶ ತಸ್ಮೈ ರುದ್ರಾಯ ನಮೋ ಅಸ್ತು" ಇತ್ಯಾದಿಕಾ | ಅವಿದ್ಯಮಾನಾನಾಂ ಗುಣಾನಾಂ ವರ್ಣನಮ್ ಅಯಥಾರ್ಥಾ | ಯಥಾ— "ತ್ವಮಿನ್ದ್ರೋऽಸಿ ವರುಣೋऽಸಿ" ಇತ್ಯಾದಿರೂಪಾ | ನ ಚ ತಾವತ್ ನಿರವದ್ಯೇ ಪರಮೇಶ್ವರೇ ತಸ್ಕರತ್ವಾದಿ-ಧರ್ಮಾಃ ಸ್ತುತಿವಿಷಯತ್ವೇನ ಯುಜ್ಯನ್ತೇ | ಉಪಾಧಿಧರ್ಮಾಃ ತೇ ಯದಿ ಉಪಹಿತೇ ಅಪಿ ಪ್ರಯುಜ್ಯನ್ತೇ ತರ್ಹಿ, ಅಧ್ಯಾರೋಪಃ, ಏವ ಸ್ಯಾತ್ ನ ಸ್ತುತಿಃ | ಇಷ್ಟ-ಆಪತ್ತಿಃ ಏವ ಇತಿ ಚೇತ್, ಹನ್ತ! ತರ್ಹಿ ಅಧ್ಯಾರೋಪ-ಅಪವಾದ-ಪ್ರಕ್ರಿಯಯಾ ಅಧ್ಯಾತ್ಮಪರಃ, ಏವ ಅಯಂ ರುದ್ರಾಧ್ಯಾಯಃ, ಇತಿ ಆಪದ್ಯತೇ | ಕಿಂಚ, ಸಕಲಃ ಅಪಿ ವೇದಃ ಅಧ್ಯಾತ್ಮಪರಃ ಏವ ಇತಿ ಅದ್ವೈತಿನಾಂ ಸಿದ್ಧಾನ್ತಃ | ಸ್ಥೂಲದೃಶಃ ಕೇಚನ, ತಸ್ಯ ಕರ್ಮಪರತಾಂ ವರ್ಣಯನ್ತಿ ಇತಿ ಅನ್ಯತ್ ಏತತ್ | ತಸ್ಮಾತ್ ಅಧ್ಯಾತ್ಮಪರತಯಾ ಅಸ್ಯ ರುದ್ರಾಧ್ಯಾಯಸ್ಯ ವ್ಯಾಖ್ಯಾನಂ ನ ಅತೀವ ಅಸಂಗತಮ್ ||


ನಿರುಕ್ತಪದಗಳಿಗೆ ವಿಷ್ಣುಸೂರಿಗಳು (ಸೂರಿಃ— ಜ್ಞಾನೀ; "ಸೂತೇ ಸದ್ವಾಕ್ಯಾನಿ ಇತಿ ಸೂರಿಃ"— ಉತ್ತಮವಾದ, ವ್ಯಾಕರಣಬದ್ಧವಾದ, ಸುಂದರವಾದ ವಾಕ್ಯಗಳನ್ನು ಪ್ರಸವಿಸುತ್ತಾನೆ, ವಿರಚಿಸುತ್ತಾನೆ, ಗ್ರಥಿಸುತ್ತಾನಾದ್ದರಿಂದ ಅಂತಹ ಪಂಡಿತನೇ ಸೂರಿಯೆನಿಸುವನು. "ಪಣ್ಡಾ ಆತ್ಮಜ್ಞಾನಮ್ ಯಸ್ಯ ಸಃ ಪಣ್ಡಿತಃ"— ಆತ್ಮಜ್ಞಾನವು ಯಾವನಿಗಿದೆಯೋ ಅವನೇ ಪಂಡಿತನು ಎಂಬುದು ವೇದಾಂತಮತ. "ಪಣ್ಡಾ ವೇದೋಜ್ಜ್ವಲಾ ತತ್ತ್ವವಿಷಯಿಣೀ ವಾ ಬುದ್ಧಿಃ ಯಸ್ಯ ಸಃ ಪಣ್ಡಿತಃ"— ವೇದವಾಕ್ಯಗಳಿಂದ ಪ್ರಕಾಶಿಸುವ ತತ್ತ್ವವಿಷಯಕವಾದ ಬುದ್ಧಿಯು ಯಾವನದೋ ಅವನೇ ಪಂಡಿತನೆಂಬುದು ಇನ್ನೊಂದು ಮತ. ) ಮಾಡಿದ ಅರ್ಥವು ನಮಕದಲ್ಲಿ ೮ ನೆಯ ಹಾಗೂ ೯ ನೆಯ ಅನುವಾಕದಲ್ಲಿ ಕಾಣಲ್ಪಡಬೇಕು. ಹಾಗೆಯೇ, ಸ್ತುತಿ / ಪ್ರಶಂಸೆ / ಹೊಗಳಿಕೆಯು ೨ ವಿಧವಾದದ್ದು— ಯಥಾರ್ಥ (ಇದ್ದುದನ್ನು ಇದ್ದಷ್ಟೇ ಹೇಳುವುದು) ಹಾಗೂ ಅಯಥಾರ್ಥ (ಇಲ್ಲದಿರುವುದನ್ನೂ ಅತಿಶಯವಾಗಿ ಹೇಳುವುದು) ಎಂಬುದಾಗಿ. ಇಲ್ಲಿ ಸ್ತುತಿಮಾಡಲು ಯೋಗ್ಯವಾದ (ಸ್ತೋತವ್ಯ) ವಿಚಾರದಲ್ಲಿ / ವಸ್ತುವಿನಲ್ಲಿ / ವ್ಯಕ್ತಿಯಲ್ಲಿ ಇರುವಂತಹ ಗುಣಗಳ ವರ್ಣನೆಯೇ ಯಥಾರ್ಥವಾದ ಸ್ತುತಿಯು. ಹೇಗೆಂದರೆ— "ಯಾವ ರುದ್ರನು ಅಗ್ನಿಯಲ್ಲೂ, ಯಾವನು ನೀರಿನಲ್ಲೂ, ಯಾವನು ಓಷಧಿ (ಧಾನ್ಯಸಸ್ಯ) ಗಳಲ್ಲೂ, ಯಾವ ರುದ್ರನು ಸಮಸ್ತ ಲೋಕಗಳನ್ನೂ ಪ್ರವೇಶಿಸಿದನೋ, ಅಂತಹ ರುದ್ರನಿಗೆ ನಮಸ್ಕಾರವಿರಲಿ" ಇತ್ಯಾದಿ ರೂಪವಾದದ್ದು. (ಇನ್ನು), ಇಲ್ಲದಿರುವ ಗುಣಗಳ ವರ್ಣನೆಯು ಅಯಥಾರ್ಥವಾದ ಸ್ತುತಿಯು. ಹೇಗೆಂದರೆ— "ನೀನೇ ಇಂದ್ರನಾಗಿರುವಿ, ವರುಣನಾಗಿರುವಿ" ಇತ್ಯಾದಿಯಾದಂಥದ್ದು. ("ನಿರ್ಗತಂ ಭವದ್ಯಂ ದೋಷಃ ಅಜ್ಞಾನಂ ರಾಗದ್ವೇಷಾದಿ ವಾ ಯಸ್ಯ ಸಃ ನಿರವದ್ಯಃ"— ಭವ / ಸಂಸಾರದ ರಾಗದ್ವೇಷಾದಿ ಅಜ್ಞಾನಜನ್ಯ ದೋಷಗಳಿಂದ ರಹಿತನಾದವನೇ ನಿರವದ್ಯನು.) ಅಂತಹ ನಿರವದ್ಯನಾದ ಪರಮೇಶ್ವರನಲ್ಲಿ ಚೌರ್ಯಾದಿ (ಕಳ್ಳತನವೇ ಮುಂತಾದ) ಧರ್ಮಗಳು ಸ್ತುತಿವಿಷಯಕವಾಗಿ ಸರಿಹೊಂದುವುದಿಲ್ಲವಷ್ಟೆ? ನಾಮರೂಪಾದಿ ಉಪಾಧಿಗಳಿಂದಾದ ಅಂತಹ ಧರ್ಮಗಳು (ಗುಣಗಳು, ಸ್ವಭಾವಗಳು) ಒಂದುವೇಳೆ ಇದ್ದರೂ, ಅಥವಾ ಪ್ರಯೋಗಿಸಲ್ಪಟ್ಟರೂ / ಬಳಸಲ್ಪಟ್ಟರೂ, ಅವು ಅಧ್ಯಾರೋಪ ("ಅಧಿಕೃತ್ಯ ಆರೋಪಃ", "ವಸ್ತುನಿ ಅವಸ್ತುತ್ವ-ಆರೋಪಃ"— ಆತನ ಕುರಿತಾದ ಕೇವಲ ಆರೋಪಮಾತ್ರವೇ ಹೊರತು ಸತ್ಯವಲ್ಲ. ಇರುವಿಕೆಯಲ್ಲಿ ಇಲ್ಲದಿರುವಿಕೆಯೆಂಬ ಆರೋಪದಂತೆ, ಇಲ್ಲದಿರುವಿಕೆಯಲ್ಲಿ ಇದೆಯೆಂಬ ಆರೋಪದಂತೆ) ಮಾತ್ರವಾಗಬಹುದೇ ವಿನಾ ಸ್ತುತಿಯಲ್ಲ. ಇಷ್ಟಾರ್ಥಗಳನ್ನೇ ಬೇಡುವ ದೋಷದಿಂದ ಕೂಡಿದ್ದು ಈ ರುದ್ರಾಧ್ಯಾಯವು ಎಂದರೆ, ಅಯ್ಯೋ! ಹಾಗಾದರೆ, ಅಧ್ಯಾರೋಪ-ಅಪವಾದ ಪ್ರಕ್ರಿಯೆಯಿಂದ ಕೂಡಿ ಅಧ್ಯಾತ್ಮಪರವಾದುದೇ ಈ ರುದ್ರಾಧ್ಯಾಯವು ಎಂದಾಗುತ್ತದೆ. ಸಮಗ್ರದೃಷ್ಟಿಯಿಂದ, ಇಡಿಯ ವೇದವೂ ಅಧ್ಯಾತ್ಮಪರವೇ ಎಂಬುದು ಅದ್ವೈತಿಗಳ ಸಿದ್ಧಾಂತವು. ಕೇವಲ ಬಾಹ್ಯದೃಷ್ಟಿಯ, ಮೇಲ್ಮೈನೋಟದ, ಸೂಕ್ಷ್ಮವಲ್ಲದ ದೃಷ್ಟಿಯ ಕೆಲವರು, ಅದರ (ವೇದದ) ಕರ್ಮಪರತ್ವವನ್ನು ವರ್ಣಿಸುತ್ತಾರೆಂಬುದು ಬೇರೆಯಾದ ವಿಚಾರ. ಹಾಗಾಗಿ, ಅಧ್ಯಾತ್ಮಪರವಾಗಿ ಈ ರುದ್ರಾಧ್ಯಾಯದ ವ್ಯಾಖ್ಯಾನವು ಅಷ್ಟೇನೂ ಅನುಚಿತವಾದುದಲ್ಲ. 


ನನು ಏವ ಚೇತ್ ಬ್ರಾಹ್ಮಣಗ್ರನ್ಥೇ ಕಥಂ ರುದ್ರಾಧ್ಯಾಯಃ ಕರ್ಮಪರತ್ವೇನ ಉಕ್ತಃ? ಕಥಂ ಚ ಸಾಯಣಾಚಾರ್ಯೈಃ ಅಪಿ ಕರ್ಮಪರತ್ವೇನ ಅಸ್ಯ ವ್ಯಾಖ್ಯಾನಂ ಕೃತಮ್ ಇತಿ ಚೇತ್ | ಸಹಸಾ ಏವ ಅತಿಸೂಕ್ಷ್ಮಮ್ ಅಧ್ಯಾತ್ಮಪರತ್ವಂ ಬೋದ್ಧುಮ್ ಅಸಮರ್ಥಾನಾಂ ಸ್ಥೂಲದೃಶಾಂ ದೃಷ್ಟಿ-ಅನುಸಾರೇಣ ಏವ ತಥಾ ಉಕ್ತಂ ತಥಾ ವ್ಯಾಖ್ಯಾತಂ ಚ ಇತಿ ಅವೇಹಿ | ತದುಕ್ತಂ ಮಧುಸೂದನಸರಸ್ವತೀಭಿಃ ಸ್ವಕೃತೇ ಪ್ರಸ್ಥಾನಭೇದೇ— "ನ ಹಿ ತೇ ಮುನಯೋ ಭ್ರಾನ್ತಾಃ, ಸರ್ವಜ್ಞತ್ವಾತ್ ತೇಷಾಮ್ | ಕಿನ್ತು ಬಹಿರ್ವಿಷಯಪ್ರವಣಾಯಾಮ್ ಆಪಾತತಃ ಪುರುಷಾರ್ಥೇ ಪ್ರವೇಶೇ ನ ಸಂಭವತಿ ಇತಿ ನಾಸ್ತಿಕ್ಯವಾರಣಾಯ ತೈಃ ತಥಾ ತಥಾ ಭೇದಾಃ ಪ್ರದರ್ಶಿತಾಃ" ಇತಿ ಅಧ್ಯಾತ್ಮಪರತಯಾ ಇದಂ ವ್ಯಾಖ್ಯಾನಂ ಲಕ್ಷಣಾದಿ-ಉತ್ತಾನಾರ್ಥ-ತ್ಯಾಗ-ಕ್ಲಿಷ್ಟ-ಕಲ್ಪನಾದಿ-ಆಶ್ರಯೇಣ ಪದಾನಾಂ ಸಂಗತಿ-ಪ್ರದರ್ಶನೇ ಕ್ಲೇಶಾವಹತ್ವಾತ್ ನ ಅತೀವ-ಸುಗಮಮ್ ಇತಿ ಆಸ್ತಾಂ ತಾವತ್ | ಸಃ ಅಯಂ ವಿಷ್ಣುಸೂರಿಃ ಚತ್ವಾರಿಂಶತಃ ಸಂವತ್ಸರೇಭ್ಯಃ ಪ್ರಾಕ್ ಮಿರಜ್-ಅಭಿದಾಯಾಂ ಪಟ್ಟವರ್ಧನ-ರಾಜಧಾನ್ಯಾಂ ತಪಸ್ವಿನೋಃ ಮಾತಾಪಿತ್ರೋಃ ಈಶ್ವರಪ್ರಸಾದಾತ್ ಲಬ್ಧಜನ್ಮಾ ಅತಿಮೇಧಾವೀ ವೈದ್ಯ-ಉಪ-ಅಭಿಧಃ ಕಶ್ಚನ ಪಣ್ಡಿತಃ ಆಸೀತ್ ಇತಿ ಕರ್ಣೋಪಕರ್ಣಿಕಯಾ ಶ್ರೂಯತೇ | ಅಸ್ಯ ರುದ್ರಭಾಷ್ಯಸ್ಯ ಆದರ್ಶಭೂತಮ್ ಏಕಮ್ ಏವ ಪುಸ್ತಕಮ್ | ತತ್ ಚ ಹಸ್ತಲಿಖಿತಮ್ | ತಾದೃಶಮ್ ಅಪಿ ದ್ವಿತೀಯಂ ಪುಸ್ತಕಂ ಪ್ರಣೇತ್ರಾ ಲೇಖಕದ್ವಾರಾ ನ ಏವ ಸಂಪಾದಿತಮ್ ಇತಿ ಪರಿಶೋಧಾನ್ತೇ ಅವಗತಮ್ | ವಿಷಯಃ ಚ ಅಸ್ಯ ಅತಿಗಹನಃ ಅಧ್ಯಾತ್ಮಮ್ | ತದ್-ಅಪೂರ್ವಸ್ಯ ಅಸ್ಯ ಗ್ರನ್ಥಸ್ಯ ಸಂಶೋಧನಕರ್ಮಣಿ ಪ್ರವೃತ್ತಸ್ಯ ಮಮ ಸ್ಥಲೇ ಸ್ಥಲೇ ಯತ್ ಸ್ಖಲಿತಮ್ ಅಸ್ತಿ ತದ್ ಆವೇದನೇನ ಅನುಗೃಹ್ಣನ್ತು ಮಾಮ್ ಆನನ್ದಾಶ್ರಮ-ಗ್ರನ್ಥಾವಲೀ-ಗ್ರಾಹಕಾಃ ದಯಾಲವಃ ವಿದ್ವಾಂಸಃ, ಇತಿ ಶ್ರೀಸಚ್ಚಿದಾನನ್ದ-ಚರಣಯೋಃ ಸಂಪ್ರಾರ್ಥಯತೇ—


ಮಾರುಲಕರ-ಉಪ-ಆಹ್ವಃ ಶಂಕರಶಾಸ್ತ್ರೀ—ಭಾರದ್ವಾಜಃ ||


ಹಾಗಿದ್ದ ಪಕ್ಷದಲ್ಲಿ (ಅಧ್ಯಾತ್ಮಪರ ವ್ಯಾಖ್ಯಾನವು ಯೋಗ್ಯವಾದ ಪಕ್ಷದಲ್ಲಿ), ತೈತ್ತಿರೀಯಬ್ರಾಹ್ಮಣಗ್ರಂಥದಲ್ಲಿ ರುದ್ರಾಧ್ಯಾಯವು ಹೇಗೆ (ಯಾಕಾಗಿ) ಕರ್ಮಪರವಾಗಿ ಹೇಳಲ್ಪಟ್ಟಿದೆ? ಹಾಗೆಯೇ, ಸಾಯಣಾಚಾರ್ಯರಿಂದಲೂ ಸಹ ಕರ್ಮಪರವಾಗಿ ಇದರ ವ್ಯಾಖ್ಯಾನವು ಹೇಗೆ ಮಾಡಲ್ಪಟ್ಟಿತು ಎಂದರೆ— ಒಮ್ಮಿಂದೊಮ್ಮೆಲೇ ಅತಿಸೂಕ್ಷ್ಮವೂ (ಅತಿಗಹನವೂ, ಕ್ಲಿಷ್ಟವೂ, ಕಠಿನವೂ), ಅಧ್ಯಾತ್ಮಪರವಾದುದೂ ಆದ (ರುದ್ರಭಾಷ್ಯವನ್ನು) ಅರ್ಥಮಾಡಿಕೊಳ್ಳಲು ಅಸಮರ್ಥರಾದ ಸ್ಥೂಲದೃಷ್ಟಿಯುಳ್ಳವರ (ಸೂಕ್ಷ್ಮದೃಷ್ಟಿಯಿರದವರ) ದೃಷ್ಟಿಯ (ಯೋಚನಾಸಾಮರ್ಥ್ಯದ) ಅನುಸಾರವಾಗಿಯೇ ಹಾಗೆ (ಕರ್ಮಪರವಾಗಿ) ಹೇಳಿದೆ ಹಾಗೂ ಹಾಗೆ ವ್ಯಾಖ್ಯಾನಿಸಿದೆಯೆಂದು ತಿಳಿ (ತಿಳಿಯಬೇಕು). ಹಾಗಾಗಿ ಹೇಳಲ್ಪಟ್ಟಿದೆ ಮಧುಸೂದನಸರಸ್ವತಿಗಳಿಂದ ತಮ್ಮ ಕೃತಿಯಾದ ಪ್ರಸ್ಥಾನಭೇದದಲ್ಲಿ "ಆ ಮುನಿಗಳು (ಮಹರ್ಷಿಗಳು, ಭಾಷ್ಯಕಾರರು) ಭ್ರಾಂತರಲ್ಲ (ಭ್ರಮೆಗೊಳಗಾದವರಲ್ಲ), ಅವರು ಸರ್ವಜ್ಞರಾದುದರಿಂದ. ಆದರೆ, ಹೊರಗಿನ ವಿಷಯಗಳಲ್ಲಿ ಸದಾ ತೊಡಗಿರುವಾಗ ಆ ತಾತ್ಕಾಲಿಕವಾದ ಆತ್ಮಜ್ಞಾನದಿಂದ ಪತನವಾದ ಸ್ಥಿತಿಯಿಂದಾಗಿ (ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಚತುರ್ವಿಧವಾದ) ಪುರುಷಾರ್ಥಗಳಲ್ಲಿ ಪ್ರವೇಶವೇ ಆಗುವುದಿಲ್ಲ (ಸಂಭವಿಸುವುದಿಲ್ಲ) ವಾದ್ದರಿಂದ, ನಾಸ್ತಿಕತೆಯ ನಿವಾರಣೆಗಾಗಿ ಅವರಿಂದ (ಭಾಷ್ಯಕಾರರಿಂದ) ಆಯಾಯ ಭೇದಗಳು (ನಾನಾ ಕರ್ಮಪರವೇ ಮುಂತಾದ ವ್ಯತ್ಯಾಸಗಳು) ಪ್ರದರ್ಶಿತವಾಗಿವೆ" ಎಂಬುದಾಗಿ ಅಧ್ಯಾತ್ಮಪರವಾದ ವ್ಯಾಖ್ಯಾನವು ನಾಮ-ರೂಪಾದಿ ಲಕ್ಷಣವೇ ಮುಂತಾದ ಉಪಾಧಿಗಳನ್ನು ತೊರೆದು, ಆಧ್ಯಾತ್ಮಿಕವಾದ, ನಿರುಪಾಧಿಕವಾದ ಸಂಕೀರ್ಣ ಕಲ್ಪನೆಯೇ ಮುಂತಾದವುಗಳ ಆಧಾರದಿಂದ ಪದಗಳ ಸರಿಯಾದ ಗತಿ / ಅರ್ಥಗಳ ಪ್ರದರ್ಶನ / ತೋರ್ಪಡಿಸುವಿಕೆಯಲ್ಲಿ ಅತ್ಯಂತ ಕ್ಲೇಶಕರ (ಕಷ್ಟಕರ) ವಾಗಿರುವುದರಿಂದಾಗಿ ಅತೀವ ಸರಳವಲ್ಲದುದರಿಂದಲೂ ಆಗಿರಬಹುದು. ಅಂತಹ ಈ ವಿಷ್ಣುಸೂರಿಗಳು ೪೦ ವರ್ಷಗಳ ಹಿಂದೆ ಮೀರಜ್ ಎಂಬ ಪಟ್ಟವರ್ಧನರ ರಾಜಧಾನಿಯಲ್ಲಿ ತಪಸ್ವಿಗಳಾದ ಮಾತಾಪಿತೃಗಳಿಗೆ ಪರಮೇಶ್ವರನ ಅನುಗ್ರಹದಿಂದಾಗಿ ಜನ್ಮವನ್ನು ಪಡೆದ, ಅತ್ಯಂತ ಮೇಧಾಶಕ್ತಿಯುಳ್ಳವರಾದ, ವೈದ್ಯನೆಂಬ ಉಪನಾಮವನ್ನುಳ್ಳ, ಒಬ್ಬಾನೊಬ್ಬ ಪಂಡಿತರು (ಜ್ಞಾನಿಗಳು) ಇದ್ದರೆಂದು ಕಿವಿಯಿಂದ ಕಿವಿಗೆ ಕೇಳಿಬರುತ್ತದೆ. ಈ ರುದ್ರಭಾಷ್ಯಕ್ಕೆ ಅನುಸರಣೀಯವಾದ ಆಧಾರಪುಸ್ತಕ ಒಂದೇ ಒಂದು (ಲಭ್ಯವಿತ್ತು). ಅದೂ ಹಸ್ತಪ್ರತಿ (ಕೈಬರಹದ್ದು). ಅಂತಹ ಕೈಬರಹದ್ದೂ ಇನ್ನೊಂದು ಪ್ರತಿಯು ಪ್ರಸ್ತುತ ಗ್ರಂಥಕರ್ತನಿಗೆ / ಸಂಪಾದಕನಿಗೆ ದೊರಕಲಿಲ್ಲವೆಂದು ಹುಡುಕಾಟದ ಬಳಿಕ ತಿಳಿಯಿತು. ಇದರ ವಿಷಯವಾದರೋ ಅತಿರಹಸ್ಯವಾದ ಅಧ್ಯಾತ್ಮತತ್ತ್ವವು. ಅಷ್ಟು ಅಪರೂಪವಾದ ಈ ಗ್ರಂಥದ ಸಂಶೋಧನಕಾರ್ಯದಲ್ಲಿ ತೊಡಗಿದ ನನಗೆ ಅಲ್ಲಲ್ಲಿ ಏನು ತಪ್ಪಾಗಿದೆಯೋ (ಲೋಪವಾಗಿದೆಯೋ) ಅದನ್ನು ತಿಳಿಸುವ ಮೂಲಕ ನನ್ನನ್ನು ಅನುಗ್ರಹಿಸಬೇಕು ಆನಂದಾಶ್ರಮಗ್ರಂಥಾವಲಿಯ ಗ್ರಾಹಕರೂ, ದಯಾಳುಗಳೂ ಆದ ವಿದ್ವಾಂಸರು ಎಂದು ಶ್ರೀಸತ್-ಚಿತ್-ಆನಂದ-ಚರಣಗಳಲ್ಲಿ ಸಂಪ್ರಾರ್ಥಿಸುತ್ತಾನೆ—


ಮಾರುಲಕರ್ ಎಂಬ ಉಪನಾಮವುಳ್ಳ ಶಂಕರಶಾಸ್ತ್ರೀ, ಭಾರದ್ವಾಜಗೋತ್ರಜ.


ॐ तत्सद्ब्रह्मणे नमः ।
ಶ್ರೀವಿಷ್ಣುಸೂರಿಕೃತಾ ರುದ್ರಭಾಷ್ಯಭೂಮಿಕಾ


ॐ ಪ್ರಪಂಚ-ಉಪಶಮಂ (ಪಂಚತನ್ಮಾತ್ರೆಗಳ, ಪಂಚಭೂತಗಳ ಪಂಚೀಕರಣದಿಂದುಂಟಾದ ಪ್ರಪಂಚವನ್ನು ಉಪಶಮನ / ಶಾಂತ / ಲಯ ಗೊಳಿಸುವ),  ಶಿವಮ್ ಅದ್ವೈತಂ ಶಾನ್ತಂ ಚತುರ್ಥಂ ಮನ್ಯನ್ತೇ, (ಮಂಗಲಸ್ವರೂಪನಾದ ಶಿವನನ್ನು ಪಾರಮಾರ್ಥಿಕವಾಗಿ ಏಕಮೇವಾದ್ವೈತಸತ್ಯವೆನಿಸಿದ ಪರಬ್ರಹ್ಮನೆಂದೂ, ಪರಮಶಾಂತಸ್ವರೂಪಿಯೆಂದೂ, ಜಾಗ್ರತ್-ಸ್ವಪ್ನ-ಸುಷುಪ್ತಿಗಳೆಂಬ ಅವಸ್ಥಾತ್ರಯದಾಚೆಗಿನ ತುರೀಯ / ಚತುರ್ಥ / ನಾಲ್ಕನೆಯದಾದ ಯೋಗಸಮಾಧಿಯೆಂಬ ಆತ್ಮಧ್ಯಾನಮಯ ಅವಸ್ಥೆಯಲ್ಲೇ ನೆಲೆಯಾಗಿರುವವನೆಂದೂ, ಆದಿಯೋಗಿಯೆಂದೂ ತಿಳಿಯುತ್ತಾರೆ), ಇತಿ ಅತಃ, (ಎಂಬುದರಿಂದಾಗಿ,) ರುಜಂ, ಸಂಸಾರರೂಪಂ ರುಜಂ, ದ್ರಾವಯತಿ ಇತಿ ರುದ್ರಃ (ರೋಗವನ್ನು, ಸಂಸಾರರೂಪವಾದ / ಜನನ-ಮರಣ ರೂಪವಾದ ವೃದ್ಧಿ-ಕ್ಷಯರೂಪೀ ರೋಗವನ್ನು, ಕರಗಿಸಿ ಇಲ್ಲವಾಗಿಸಿ, ಆತ್ಮಜ್ಞಾನಮುಖೇನ ಮೋಕ್ಷಸ್ಥಿತಿಯನ್ನುಂಟುಮಾಡುತ್ತಾನೆ ಎಂಬ ಕಾರಣದಿಂದ ರುದ್ರನೆನಿಸಿರುವನು;)  ಆತ್ಮಾ ಶರೀರಿಣಾಂ ಶಾಸ್ತ್ರಯೋನಿತ್ವಾದಿ-ಲಿಙ್ಗೈಃ ಅವಸೀಯತೇ | (ಆತನೇ ಶರೀರಧಾರಿಗಳಾದ ಸಕಲ ಜೀವರ ಆತ್ಮನಾಗಿ, ವೇದಾದಿ ಸರ್ವಶಾಸ್ತ್ರಗಳ ಮೂಲಕಾರಣತ್ವಾದಿ ಚಿಹ್ನೆ / ಸಂಜ್ಞೆ / ಗುರುತು / ಲಾಂಛನ ಗಳಿಂದ ಶರೀರಗಳೊಳಗೆ ನೆಲೆಸಿರುವನು). ನಾರಾಯಣಾದಿಃ ಅಪಿ ಏವಮ್ ಇತಿ ಚೇತ್ ಬಾಢಮ್ ಅನು-ಮನ್ಯಾಮಹೇ | (ನಾರಾಯಣನೇ ಮುಂತಾದ ನಾಮರೂಪಗಳುಳ್ಳವನೂ ಕೂಡ ಹೀಗೆಯೇ / ಇವನೇ ಎಂದು ಹೇಳಿದರೆ ಹೌದೆಂದು ಅನುಮತಿಸುತ್ತೇವೆ). ಕಿಮ್ ಇತಿ ನಾಮವಿಶೇಷಃ ಆಗ್ರಹಃ ನಾಮ ಗೋತ್ರಮ್ ಇತಿ ಚ ಶ್ರುತಿಃ ನಿರ್ವಿಶೇಷಮ್ ಏವ ಪರಂ ಬ್ರಹ್ಮ ಕಾರಣತ್ವೇನ ಉಪದಿದೇಶ | (ಆತನ ವಿಶೇಷವಾದ ಹೆಸರೇನು? ಹೆಸರು ಹಾಗೂ ಕುಲ-ಗೋತ್ರಗಳು ಯಾವುವೆಂದು ಆಗ್ರಹಿಸಿದರೆ / ಪ್ರಶ್ನಿಸಿದರೆ,  ನಿರ್ವಿಶೇಷವಾದ, ಯಾವುದೇ ವಿಶೇಷತೆ, ನಾಮ, ರೂಪ, ಗುಣಾದಿ ಉಪಾಧಿಗಳಿಲ್ಲದ ಲೋಕದಲ್ಲಿ ಅತ್ಯಂತ ಶ್ರೇಷ್ಠತಮವೂ, ಸರ್ವೋತ್ಕೃಷ್ಟವೂ, ಬೃಹತ್ತೂ ವ್ಯಾಪಕವೂ ಆದ ಪರಬ್ರಹ್ಮವನ್ನೇ ಸರ್ವಮೂಲಕಾರಣವೆಂಬುದಾಗಿ ವೇದವು / ಶ್ರುತಿಯು ಉಪದೇಶಿಸಿರುತ್ತದೆ.) ಕ್ವಚಿತ್ ಉಪಾಸನಾದೌ ವೈಶ್ವಾನರ-ಇನ್ದ್ರ-ಆದಿ-ದೇವತಾ-ನಾನಾತ್ವಮ್, (ದೇವತೋಪಾಸನೆ / ಪೂಜೆ / ಯಜ್ಞ / ಆರಾಧನೆ ಮುಂತಾದುವುಗಳಲ್ಲಿ ಅಲ್ಲಲ್ಲಿ ವೈಶ್ವಾನರಾಗ್ನಿ, ಇಂದ್ರ ಮೊದಲಾದ ದೇವತೆಗಳ ವೈವಿಧ್ಯವು,) ಏಕಸ್ಯ (ಒಬ್ಬನದೇ) ಏಕಂ ಸನ್ತಂ ಬಹುಧಾ ಕಲ್ಪಯನ್ತಿ ಅಗ್ನಿಂ ಯಮಂ ಮಾತರಿಶ್ವಾನಮ್ ಆಹುಃ ಇತಿ ಏವಮ್-ಆದಿಭ್ಯಃ (ಇರುವ ಒಬ್ಬನನ್ನೇ ಬಹುವಿಧವಾಗಿ ಕಲ್ಪಿಸುತ್ತಾರೆ, ಅಗ್ನಿ-ಯಮ-ವಾಯು ಎಂದು ಮುಂತಾದ ವಾಕ್ಯಗಳಿಂದ.  "ಅಗ್ರೇ ನೀಯತೇ ಮೋಕ್ಷಂ ಪ್ರತಿ ಅನೇನ ಇತಿ ಅಗ್ನಿಃ"— ಮುಂದಕ್ಕೆ ಜೀವರು ಮೋಕ್ಷಜ್ಞಾನದೆಡೆಗೆ ಈತನಿಂದ ಕರೆದೊಯ್ಯಲ್ಪಡುತ್ತಾರೆಂಬುದರಿಂದ ಅಗ್ನಿಯು. "ಯಮ-ನಿಯಮಾದಿಧರ್ಮರೂಪೇಣ ನಿಯಮನಂ ನಿಯಂತ್ರಣಮ್ ಅನೇನ ಇತಿ ಯಮಃ"— ಯಮ-ನಿಯಮವೇ ಮುಂತಾದ ಧರ್ಮಸ್ವರೂಪನಾಗಿ ಲೋಕವನ್ನು ನಿಯಂತ್ರಿಸುವುದರಿಂದಾಗಿ ಯಮನು. "ಮಾತರಿ ಅಂತರಿಕ್ಷೇ ಶ್ವಯತಿ ಗಚ್ಛತಿ ವಾತಿ ವಾ ಇತಿ ಮಾತರಿಶ್ವಾ"— ಸಕಲ ಪಾಂಚಭೌತಿಕಸೃಷ್ಟಿಗೆ ಮಾತೃತುಲ್ಯವಾದ ಅಂತರಿಕ್ಷದಲ್ಲಿ / ಆಕಾಶದಲ್ಲಿ ಚಲಿಸುತ್ತದೆ / ಬೀಸುತ್ತದೆಂಬುದರಿಂದ ವಾಯುವು ಮಾತರಿಶ್ವನು ಎಂದು ಮುಂತಾದವುಗಳಿಂದ ನಾನಾತ್ವವು.)  ತತ್ರ ಚ ಸವಿತರಿ ಅಹೋರಾತ್ರೇ ಇವ ನಾಮರೂಪೇ ಅವಿದ್ಯಯಾ ಕಲ್ಪಿತೇ ನ ಪರಮಾರ್ಥಸತೀ (ಅಲ್ಲಿಯೂ, ಸವಿತೃದೇವನಾದ ಸೂರ್ಯನಲ್ಲಿ ಹಗಲು-ರಾತ್ರಿಗಳೆಂಬ ಹೆಸರು-ರೂಪಗಳು ಅಜ್ಞಾನದಿಂದ ಕಲ್ಪಿತವಾಗಿರುವುವೇ ಹೊರತು ಪರಮಾರ್ಥವಾಗಿ / ಯಥಾರ್ಥವಾಗಿ ಸೂರ್ಯನಲ್ಲಿ ಕತ್ತಲೆಂಬುದಿಲ್ಲ.) ತದ್-ವಿರುದ್ಧ-ಸ್ವಭಾವತ್ವಾತ್ (ಯಾಕೆಂದರೆ, ಬೆಳಕು-ಕತ್ತಲೆಗಳು ತದ್ವಿರುದ್ಧ ಸ್ವಭಾವದವು. ಬೆಳಕಿದ್ದಲ್ಲಿ ಕತ್ತಲೆಯಿರಲು ಸಾಧ್ಯವಿಲ್ಲ.) ಶುಕ್ತಿ-ರಜತಾದಿವತ್ ಸಾ ಇಯಮ್ ಅವಿದ್ಯಾ (ಕಪ್ಪೆಚಿಪ್ಪು-ಬೆಳ್ಳಿಲೋಹಗಳಂತೆ ಒಂದೇ ತೆರನಾಗಿ ಆಭಾಸವಾಗುವ ಇದೇ ಅವಿದ್ಯೆಯು / ಮಾಯೆಯು / ಅಜ್ಞಾನವು.) ಭ್ರಮ-ಆವರಣ-ವಿಕ್ಷೇಪ-ಆದಿ-ಉಪಾದಾನಭೂತಾ (ಇಂತಹ ಅವಿದ್ಯೆಯು ಭ್ರಮೆ, ಮುಚ್ಚುವಿಕೆ, ಒಂದು ಇನ್ನೊಂದಾಗಿ ತೋರುವಿಕೆಯೇ ಮೊದಲಾದ ಪರಿಚ್ಛೇದ / ಅವಯವ / ಅಂಗೋಪಾಂಗಗಳುಳ್ಳದ್ದು.) ನಿರವಯವಸ್ಯ ಅಪಿ ಅವಯವರೂಪಿಣೀ ನೈಸರ್ಗಿಕೀ ಶಕ್ತಿಃ ಅಗ್ನಿ-ಆದಿ-ಶಕ್ತಿವತ್ | (ಅವಯವರಹಿತನಾದ ಆತ್ಮನಿಗೂ ಸಹ ಅಗ್ನಿಯೇ ಮುಂತಾದ ಶಕ್ತಿಗಳಂತೆ, ಅವಯವದಂತಿರುವ ನೈಸರ್ಗಿಕವಾದ / ಸಹಜವಾದ ಶಕ್ತಿಯೇ ಈ ಮಾಯಾಶಕ್ತಿಯು / ಅವಿದ್ಯೆಯು.)  ಯಥಾ ಅಗ್ನ್ಯಾದಿಃ ಸ್ವ-ಗತ-ದಾಹಶಕ್ತಿಂ ನ ಪ್ರತ್ಯಭಿಜಾನಾತಿ | (ಹೇಗೆ ಅಗ್ನಿಯೇ ಮುಂತಾದುವುಗಳು ತಮ್ಮಲ್ಲಿರುವ ದಹನಶಕ್ತಿಯೇ ಮುಂತಾದವನ್ನು ಸ್ವತಃ ತಿಳಿಯುವುದಿಲ್ಲವೋ ಹಾಗೆಯೇ ಅಜ್ಞಾನವನ್ನು ಜೀವನು ಅಜ್ಞಾನವೆಂದು ತಿಳಿಯದೇ ನಿಜವೆಂದೇ ತಿಳಿಯುತ್ತಾನೆ. ಅಗ್ನಿಯು ತನ್ನ ಸಹಜವಾದ ಉರಿಯುವ ಶಕ್ತಿಯನ್ನು ಅರಿಯದಂತೆಯೇ ತಾನೂ ಸಹ ತನ್ನ ಸಹಜವಾದ ಆತ್ಮಸ್ವರೂಪವನ್ನೂ ಅರಿಯುತ್ತಿಲ್ಲ.) ವಿಪಕ್ಷೇ ಸ್ವಯಮ್ ಅಪಿ ದಾಹಮ್ ಆರ್ಚ್ಛೇತ್ ನ ಪುನಃ ಸಾ ಅಪಿ ತಂ ದಹತಿ | (ಅಗ್ನಿ-ಆತ್ಮರ ಸಾಮ್ಯವನ್ನು ಹೇಳಿದ ಬಳಿಕ, ವೈಷಮ್ಯವನ್ನು ನೋಡಿದರೆ / ವಿಪಕ್ಷದಲ್ಲಿ / ವಿರೋಧಪಕ್ಷದಲ್ಲಿ ನೋಡಿದಾಗ, ಅಗ್ನಿಯು ಇಂಧನವನ್ನು ದಹಿಸುವುದಲ್ಲದೇ ತಾನೇ ಉರಿಯುತ್ತದೆ. ಆದರೆ, ಅವಿದ್ಯೆಯು ಆತ್ಮನನ್ನು ಏನೂ ಮಾಡಲಾರದು.)  ತಥಾತ್ವಾತ್ ಏವಮ್ ಆತ್ಮಾ ನಿಃಸಾಮಾನ್ಯ-ಪರಾನನ್ದ-ಅನುಭೂತಿ-ಸ್ವರೂಪಃ ಸ್ವಾಭಾವಿಕೀಂ ಮಾಯಾಶಕ್ತಿಂ ನ ಅಭಿಜಾನಾತಿ | (ಹೀಗಿರುವುದರಿಂದಾಗಿ, ಇಂತಹ ಆತ್ಮನು ಅಸಾಮಾನ್ಯವಾದ ಪರಮಾನಂದದ ಅನುಭೂತಿಸ್ವರೂಪನಾಗಿದ್ದು, ತನ್ನ ಸ್ವಾಭಾವಿಕವಾದ ಮಾಯಾಶಕ್ತಿಯನ್ನು ತಿಳಿಯುವುದಿಲ್ಲ.) ಜ್ಞಾತೃತ್ವ-ಅಯೋಗಾತ್ | (ಯಾಕೆಂದರೆ, ತಿಳಿಯುವ ಕರ್ತೃತ್ವವೂ ಆತ್ಮನಿಗಿರುವುದಿಲ್ಲವಾದ್ದರಿಂದ / ಜ್ಞಾತೃತ್ವದ ಸಂಯೋಗ ಸಂಬಂಧವಿರದಿರುವುದರಿಂದಾಗಿ.)

 ಅಜ್ಞಾತತ್ವಮ್ ಅಸಿದ್ಧಂ ತತಃ, ಏವ ಜ್ಞಾನ-ಅಜ್ಞಾನ-ವಿಲಕ್ಷಣತ್ವೇ ಸತಿ ಜ್ಞಾನರೂಪತ್ವಾತ್ | ( ಅಜ್ಞಾತತ್ವವು / ತಿಳಿಯದಿರುವಿಕೆಯು ಸರ್ವಜ್ಞನಾದ ಆತ್ಮನಿಗೆ ಒಪ್ಪುವುದಿಲ್ಲ / ಅಸಂಗತವಾಗುವುದು. ಆದ್ದರಿಂದಲೇ, ಜ್ಞಾನ-ಅಜ್ಞಾನಗಳೆಂಬ ವಿಲಕ್ಷಣತೆಯ ವಿಚಾರದಲ್ಲಿ ಆತ್ಮನು ಜ್ಞಾನರೂಪನು.) ಸತಿ ತಸ್ಮಿನ್ ನ ಆನನ್ತ್ಯ-ಅನುಪಪತ್ತೇಃ | (ಹಾಗಿದ್ದ ಪಕ್ಷದಲ್ಲಿ, ಆತ್ಮನಿಗೆ ಅನಂತತೆಯ ಸಿದ್ಧಿಯಾಗದು.) ನ ಅಪಿ ಸಾ ಶುದ್ಧಂ ಪ್ರತಿಬಧ್ನಾತಿ | (ಅವಿದ್ಯೆಯು ನಿತ್ಯಶುದ್ಧನಾದ ಆತ್ಮನನ್ನು ಪ್ರತಿಬಂಧಿಸುವುದಿಲ್ಲ, ತಡೆಯಲು ಅಸಮರ್ಥ.) ಪ್ರತ್ಯುತ ಲೋಕೈಃ ಏವ ಅನುಭೂಯತೇ | (ಆದರೆ, ಅದಕ್ಕೆ ಬದಲಾಗಿ ಲೋಕದ ಜನರಿಂದಲೇ ಅವಿದ್ಯೆಯು ಅನುಭವಿಸಲ್ಪಡುತ್ತದೆ.) ಲೋಕಾಃ ಚ ಅಹಂಕಾರಾದಯಃ (ಜನರಾದರೋ ಅಹಂ-ಚಿತ್ತ-ಬುದ್ಧಿ-ಮನಸ್ಸೆಂಬ ಅಂತಃಕರಣಚತುಷ್ಟಯ, ಪಂಚಜ್ಞಾನ-ಪಂಚಕರ್ಮೇಂದ್ರಿಯಗಳು, ಪಂಚಪ್ರಾಣ-ಉಪಪ್ರಾಣಗಳು ಹಾಗೂ ಇವುಗಳಿಂದ ಕೂಡಿದ ಕಾರಣ-ಸೂಕ್ಷ್ಮ-ಸ್ಥೂಲದೇಹಗಳೇ ಆಗಿರುವರು.) ತೈಃ ಹಿ ಸಾಕ್ಷಿತ್ವ-ಭೋಕ್ತೃತ್ವಾದಯಃ ಪ್ರತ್ಯಗಾತ್ಮನಿ ಇವ ಪರಮಾತ್ಮನಿ ನಾಮರೂಪಾದಿಕಮ್ ಅಧ್ಯಸ್ಯತೇ | (ಅಂಥವರಿಂದಲಾದರೋ ಸರ್ವಸಾಕ್ಷಿತ್ವ ಹಾಗೂ ಸರ್ವವನ್ನೂ ಅನುಭವಿಸುವಿಕೆ ಮುಂತಾದುವುಗಳು ಪ್ರತ್ಯೇಕ ಪ್ರತ್ಯೇಕವಾಗಿರುವಂತಿರುವ ಆತ್ಮನಲ್ಲಿ / ಪ್ರತ್ಯಗಾತ್ಮನಲ್ಲಿ / ಜೀವಾತ್ಮನಲ್ಲಿ ಅಧಿಷ್ಠಾನವಾಗಿರುವಂತೆಯೇ ಪರಮಾತ್ಮನಲ್ಲಿ ನಾಮ-ರೂಪಾದಿಗಳು ಆರೋಪಿಸಲ್ಪಡುತ್ತವೆ.) ತೌ ಏತೌ ಪ್ರತ್ಯಗಾತ್ಮ-ಪರಮಾತ್ಮಾನೌ ನಾಮ-ಮಾತ್ರ-ಭೇದೌ ಮಲಿನಬುದ್ಧಿಭಿಃ ಪೃಥಗಪದಿಶ್ಯೇತೇ | (ಅಂತಹ ಈ ಪ್ರತ್ಯಗಾತ್ಮ-ಪರಮಾತ್ಮರೀರ್ವರು ಹೆಸರಿನಿಂದ ಮಾತ್ರ ಭೇದವುಳ್ಳವರಾದರೂ ಕಲುಷಿತಬುದ್ಧಿಯುಳ್ಳವರಿಂದ ಬೇರೆ ಬೇರೆ ಎಂದು ಪ್ರತ್ಯೇಕಿಸಿ ತೋರಿಸಲ್ಪಡುತ್ತವೆ.) ವಿಜಿಜ್ಞಾಪಯಿಷಿತಃ ಅಯಮ್ ಆತ್ಮಾ (ವಿಶೇಷವಾಗಿ ತಿಳಿಯಲ್ಪಡಬೇಕಾದ, ಜ್ಞಾಪಿಸಲ್ಪಡಬೇಕಾದ ಈ ಆತ್ಮನು) ವೇದಾನಾಮ್ ಅದ್ವಿತೀಯ-ಸ್ವರೂಪಃ (ವೇದಗಳ ಅದ್ವಿತೀಯ / ಮತ್ತೊಂದಿಲ್ಲದ ಏಕಮೇವ ಸತ್ಯಸ್ವರೂಪನು) ನ ಯತ್ರ ಬನ್ಧ-ಮೋಕ್ಷೌ ನಿತ್ಯ-ಮುಕ್ತಸ್ವಭಾವತ್ವಾತ್ (ಯಾವನಲ್ಲಿ ಭವಬಂಧನ-ಮುಕ್ತಿ /ಬಿಡುಗಡೆಗಳಿಲ್ಲ, ಆತನ ನಿತ್ಯವೂ ಮುಕ್ತನಾಗಿರುವ ಸ್ವಭಾವದಿಂದಾಗಿ) ತಥಾ ಅಪಿ ಲೋಕ-ಅಧ್ಯಾರೋಪ-ಅಪೋಹಾರ್ಥತಯಾ (ಹಾಗಾದರೂ, ಲೋಕದ ಜನಸಾಮಾನ್ಯವಾದ ತಪ್ಪಾದ ಆರೋಪ / ಅಪವಾದ / ತಪ್ಪಾದ ಊಹೆ, ಕಲ್ಪನೆಗಳ ದೂರೀಕರಣಾರ್ಥವಾಗಿ) ನ ಮಹಾವಾಕ್ಯಾರ್ಥ-ಉಪದೇಶ-ವೈಯರ್ಥ್ಯ-ಪ್ರಸಙ್ಗಃ | (ಉಪನಿಷತ್ತುಗಳ ಮಹಾವಾಕ್ಯಗಳ ಅರ್ಥರೂಪವಾದ ಈ ಆಧ್ಯಾತ್ಮಿಕಭಾಷ್ಯವೆಂಬ ಉಪ-ದೇಶವು / ಹತ್ತಿರ ಇಡುವಿಕೆಯು / ಪ್ರಸ್ತುತಿಯು ವ್ಯರ್ಥತೆಯ ಪ್ರಕರಣವಲ್ಲ.) ಸರ್ವಾಃ ಅಪಿ ಏವಂ ಶ್ರುತಯಃ ಅಧ್ಯಾರೋಪ-ಅಪೋಹಾರ್ಥಾಃ ಇತಿ ಅವಸೇಯಮ್ | (ಇಂತಹ ರುದ್ರಾಧ್ಯಾಯದಂತಹ ಎಲ್ಲ ಶ್ರುತಿಗಳೂ ಕೂಡ ಅಧ್ಯಾರೋಪದ / ಅವಿದ್ಯೆಯ / ದೇಹವೇ ನಾನೆಂಬ ಅಜ್ಞಾನಮಾಯೆಯ ನಿವಾರಣೆಗಾಗಿಯೇ ಎಂದು ಚರ್ಚೆಯ ಕೊನೆಗೆ ತೀರ್ಮಾನಿಸಬೇಕು.)  ಕಿಂಚ ನಿರ್ಘರ್ಮಕಃ ಆತ್ಮಾ ಕಥಂ ಜಗತ್-ಉಪಾದಾನಮ್ ಇತಿ ಅರ್ಥೇ ಸಂದಿಹಾನೈಃ (ಅಂತೆಯೇ, ಅನಿಕೇತನನಾದ / ನಿರ್ದಿಷ್ಟವಾದ ಘರ್ಮ ಅಥವಾ ಮನೆ ಅಥವಾ ಮಿತಿಯಿಲ್ಲದವನಾದ ಆತ್ಮನು ಹೇಗೆ ಇಡಿಯ ಜಗತ್ತಿಗೇ ಭೌತಿಕ ಕಾರಣ / ಉಪಾದಾನಕಾರಣ / ಮಡಕೆಗೆ ಮಣ್ಣಿದ್ದಂತೆ ಮೂಲವಸ್ತುವಾಗಬಹುದೆಂಬ ಬಗ್ಗೆ ಸಂದೇಹಿಸುವವರಿಂದ)   ತಸ್ಯ ವಿಚಿತ್ರ-ಶಕ್ತಿತ್ವ-ಅನಭಿಜ್ಞೈಃ ಲೋಕೈಃ (ಆತನ / ಆತ್ಮನ ವಿಚಿತ್ರವಾದ ಶಕ್ತಿಸಾಮರ್ಥ್ಯನ್ನು ಅರಿಯದ ಜನರಿಂದ) ಕಲ್ಪಿತಾ ಇಯಮ್ ಅವಿದ್ಯಾ ತಾನ್ ಏವ ಆವೃಣೋತಿ | (ಕಲ್ಪಿತವಾದ, ಊಹಿಸಲ್ಪಟ್ಟ ಈ ಅವಿದ್ಯಾಮಾಯೆಯು ಅಂಥವರನ್ನೇ ಆವರಿಸುವುದು.) ಮಾಯಾವೀ ಚ ಸಃ ದೇವಾತ್ಮಶಕ್ತಿಂ ಸ್ವಗುಣೈಃ ನಿಗೂಢಾಮ್ (ಮತ್ತು, ಮಾಯಾವಿಯಾದ ಆತನು / ಆತ್ಮನು ತನ್ನದಾದ ಅವಿನಾಶಿ-ಅಜ-ಅಜರ-ಅವ್ಯಕ್ತ-ನಿರಾಕಾರ-ತ್ರಿಗುಣಾತೀತ-ಅಮರಾದಿಗುಣಗಳಿಂದ ಸಕಲ ಚರಾಚರಗಳಲ್ಲಿ ಸ್ವಪ್ರಕಾಶದಿಂದ ದೇದೀಪ್ಯಮಾನವಾದ ಆತ್ಮಶಕ್ತಿಯನ್ನು ನಿಗೂಢವಾಗಿರಿಸಿರುವನು)  ಇತಿ ಏವಮ್-ಆದಿ-ಶ್ರುತಿ-ಶತೇಭ್ಯಃ (ಎಂದು ಮುಂತಾಗಿ ನೂರಾರು ವೇದವಾಕ್ಯಗಳಿಂದ ಸಿದ್ಧವಾಗಿರುವುದು.) ನೈಸರ್ಗಿಕತ್ವಂ ಚ ಪ್ರಕೃತೇಃ (ಪ್ರಕೃತಿಯ ನೈಸರ್ಗಿಕತ್ವವು / ಸ್ವಾಭಾವಿಕತ್ವವು) ನ ಸ್ವ-ಸಮವೇತತ್ವಮ್ ಅಪಿ ತು ಸ್ವ-ಅನಿವಾರ್ಯತ್ವಮ್ ಅನು-ಭೂಯತೇ (ಆತ್ಮನ ಜೊತೆಗಿರುವಿಕೆಯನ್ನಲ್ಲ, ಆದರೆ ಆತ್ಮನ ಅನಿವಾರ್ಯತೆಯನ್ನು ಅನುಭವಿಸುತ್ತದೆ / ಅನುಸರಿಸಿ ಇರುತ್ತದೆ.) ಚ ಸಾಕ್ಷಿಣಃ, ಜ್ಞಾನಸಾಧಕತ್ವಂ ನ ತು ಬಾಧಕತ್ವಮ್ | (ಮತ್ತು ದೇಹೇಂದ್ರಿಯಾದಿ ಪ್ರಕೃತಿಯು ಸಾಕ್ಷಿಯಾದ ಆತ್ಮನ ಜ್ಞಾನಸಾಧಕತ್ವವನ್ನು ಅನುಭವಿಸುತ್ತದೆಯೇ ಹೊರತು ಜ್ಞಾನಬಾಧಕತ್ವವನ್ನಲ್ಲ / ಜ್ಞಾನಕ್ಕೆ ಆತ್ಮನಿಂದ ಅಡ್ಡಿಯಲ್ಲ, ಬದಲಾಗಿ ಆತ್ಮನು ಜ್ಞಾನಸಾಧಕನು.) ಅಥವಾ ಸ್ವ-ಅಸ್ಪರ್ಶಿತ್ವೇ ಸತಿ ಸ್ವ-ನಿಯತ-ಪ್ರಕಾಶ್ಯತ್ವಂ ತ್ರಿಗುಣಾತ್ಮಿಕಾ ಚ ಇಯಂ ಪ್ರಕೃತಿಃ ನ ಸ್ವಂ ಬ್ರಹ್ಮ ಸ್ಪೃಶತಿ | (ಅಥವಾ ತನ್ನನ್ನು ನಿಯಂತ್ರಿಸುವ, ಪ್ರಕಾಶಿಸುವ ಆತ್ಮನ ಸಂಪರ್ಕವಾಗದಿದ್ದಲ್ಲಿ ತ್ರಿಗುಣಾತ್ಮಿಕೆಯಾದ ಈ ಪ್ರಕೃತಿಯು ತನ್ನದಾದ ಬ್ರಹ್ಮಾತ್ಮನನ್ನು ತಿಳಿಯಲಾರದು.) ಪ್ರಕಾಶ್ಯತೇ ಚ ತೇನ ಏವ | (ಆತನಿಂದಲೇ ಪ್ರಕಾಶಿಸುತ್ತದೆ.) ತತ್ರ ಇದಮ್ ಉಕ್ತಂ (ಈ ಸಂದರ್ಭದಲ್ಲಿ ಹೀಗೆ ಹೇಳಿದೆ) ಸ್ವರೂಪಸತೀ ಚ ಇಯಂ ಬ್ರಹ್ಮರೂಪತ್ವಾತ್ ನ ವ್ಯಭಿಚರತಿ ನ ವಾ ಗ್ಲಾಯತೇ ತೂಷ್ಣೀಕತ್ವಾತ್ ಇತಿ | (ತನ್ನದೇ ಆದ ಆಕಾರವು ಪ್ರಕೃತಿಗಿದ್ದರೂ ಸಹ, ಅದೂ ಮೂಲದಲ್ಲಿ ಬ್ರಹ್ಮದಿಂದಲೇ ಆದುದರಿಂದ ಬ್ರಹ್ಮವನ್ನು ಬಿಟ್ಟಗಲಲಾರದು, ಮೌನಶೀಲತೆಯಿಂದಾಗಿ ದುಃಖಿಸುವುದೂ ಇಲ್ಲ.)  ವಿಗತ-ಆವರಣ-ವಿಕ್ಷೇಪ-ದೋಷಾಯಾಃ ಸತ್ತ್ವ-ಮಾತ್ರ-ಶರೀರಾಯಾಃ ಪ್ರಕೃತೇಃ ಪ್ರತಿಬನ್ಧಕತ್ವ-ಅಯೋಗಾತ್ ವಿದೇಹ-ಅವಸ್ಥಾಯಾಮ್ ಅಪಿ ತತ್-ಸತ್ತ್ವೇ ನ ವಿರೋಧಃ, ಇತಿ ಆಶಯಃ | (ಆವರಣ-ವಿಕ್ಷೇಪದೋಷರಹಿತವಾಗಿ ಸತ್ತ್ವಮಾತ್ರಶರೀರವಾದ ಪ್ರಕೃತಿಗೆ ಅಡೆತಡೆಗಳ ಸಂಯೋಗವಿಲ್ಲದ್ದರಿಂದಾಗಿ, ದೇಹವಿಲ್ಲದ ಸ್ಥಿತಿಯಲ್ಲೂ ಪ್ರಕೃತಿಯ ಹಾಗೂ ಆತ್ಮನ ಇರುವಿಕೆಯಲ್ಲಿ ವಿರೋಧವಿಲ್ಲ / ಸಂದೇಹವಿಲ್ಲ ಎಂಬ ಅಭಿಪ್ರಾಯ.) ಪುನಃ ಆವರಣಾದಿ-ಅಭಾವಃ, ಏವ ತತ್-ನಾಶಃ, ಇತಿ ಏಕೇ | (ಹಾಗೆಯೇ, ಆವರಣಾದಿಗಳ ಅಭಾವವೇ / ಇಲ್ಲದಿರುವಿಕೆಯೇ ಅದರ ನಾಶವೆಂದು ಕೆಲವರ ಮತ.)  ಸ್ವರೂಪತಃ, ಏವ ಇತಿ ಅಪರೇ | (ತನ್ನ ನಿಜಸ್ವರೂಪನಾಶದಿಂದಲೇ ಅದರ ಪೂರ್ಣನಾಶವೆಂದು ಇತರರ ಮತ.)  ಇದಂ ತು ಬೋಧ್ಯಂ ಮಾಯಾ-ನಿಯನ್ತುಃ ನಿತ್ಯ-ಮುಕ್ತಸ್ಯ-ಅಪಿ ಪರಾತ್ಮನಃ, ಮಾಯಾವಿಜೃಂಭಿತ-ಆವರಣ-ಸಹ-ಕೃತ-ಅನ್ತಃಕರಣರೂಪ-ಉಪಾಧಿಃ ಏವ ಜೀವಭಾವೇ ಹೇತುಃ, (ಇದನ್ನಾದರೋ ತಿಳಿಯಬೇಕು— ಮಾಯೆಯ ನಿಯಂತ್ರಕನಾದ, ನಿತ್ಯಮುಕ್ತನೂ ಆದ ಪರಾತ್ಮನಿಗೆ, ಮಾಯೆಯಿಂದ ವಿಜೃಂಭಿತವಾದ ಆವರಣದೊಂದಿಗೆ ಅಂತಃಕರಣರೂಪಿಯಾದ ಉಪಾಧಿಯೇ / ಗುರುತೇ ಜೀವಭಾವಕ್ಕೆ ಕಾರಣವು.) ತತ್-ನಿರಾಸೇ ನ ಕಿಞ್ಚಿತ್ ಅಸಮಞ್ಜಸಂ ಸಂಸಾರಬೀಜ-ಅನನ್ತ್ಯಾತ್ ಚ | (ಆ ಜೀವಭಾವವು ಇಲ್ಲವಾಗಲು ಅಸಮಂಜಸವೇನಿಲ್ಲ / ತೊಂದರೆಯೇನಿಲ್ಲ. ಯಾಕೆಂದರೆ ಸಂಸಾರಬೀಜವು ಅನಂತಸ್ವಭಾವವುಳ್ಳದ್ದು, ಕೊನೆಯಿಲ್ಲದ್ದು, ಮತ್ತೆ ಮತ್ತೆ ಹುಟ್ಟುವಂಥದ್ದು.) ಸಾ ನಕ್ಷರನ್ತಿ ಇತ್ಯತಃ ಅಕ್ಷರಾತ್ ಪರತಃ ತು ಸಃ ಕೂಟಸ್ಥಃ, ಉಚ್ಯತೇ, ಇತಿ ಏವಮ್-ಆದಿ-ಶ್ರುತಿ-ಸ್ಮೃತಿಷು ಅಕ್ಷರ-ಇತಿ ಉಚ್ಯತೇ | (ಅಂತಹ ಪ್ರಕೃತಿಯಲ್ಲಿ, ನಾಶವಾಗುವುದಿಲ್ಲ ಎಂಬುದರಿಂದ ಅಕ್ಷರವೆನಿಸಿದ, ಪ್ರಕೃತಿಗೂ ಮೇಲಿನವನಾದ ಆತ್ಮನು, ಸಕಲ ಚರಾಚರಸಮೂಹಾಂತರ್ಗತನಾಗಿ ಕೂಟಸ್ಥನೆನಿಸಿರುವನು. ಕೂಟವೆಂದರೆ ಸಮೂಹ. ಈ ರೀತಿಯೇ ಮುಂತಾಗಿ ವೇದ-ಸ್ಮತಿಗಳಲ್ಲಿ ಅಕ್ಷರನೆಂದು ಕರೆಯಲ್ಪಡುತ್ತಾನೆ.)   ತಸ್ಯ ಚ ಪರಾತ್ಪರ-ಜ್ಯೋತಿಷಃ (ಅಂತಹ ಶ್ರೇಷ್ಠಾತಿಶ್ರೇಷ್ಠವಾದ ಪರಂಜ್ಯೋತಿಸ್ವರೂಪನಾದ ಆತ್ಮನಿಗೆ) ನಿರ್ವಿಕಲ್ಪತಯಾ ಸ್ವತಃ ಜ್ಞಾತೃತ್ವ-ಅಯೋಗಾತ್ ಚ (ವಿಕಲ್ಪ, ವಿಕಾರ ರಹಿತತ್ವದಿಂದಾಗಿ ಹಾಗೂ ಸ್ವತಃ ತಾನೇ ತಿಳಿಯುವವನೆಂಬ, ಮಾಡುವವನೆಂಬ ಭಾವವಿಲ್ಲದಿರುವುದರಿಂದಾಗಿ) ಮನೋ-ಬುದ್ಧಿ-ಅಹಂಕಾರ-ಚಿತ್ತ-ರೂಪ-ಅನ್ತಃಕರಣ-ವೃತ್ತಿ-ವಿಶೇಷ-ರೂಪ-ದೃಷ್ಟಿ-ವೈಚಿತ್ರ್ಯೇಣ ನಾನಾತ್ವಮ್ ಇವ ಪ್ರಬುದ್ಧ-ಮೂಢಭಾವಾದಿ-ಸರ್ವಮ್ ಉತ್ಪದ್ಯತೇ | (ಮನಸ್, ಬುದ್ಧಿ, ಅಹಂ-ಭಾವ, ಪೂರ್ವಸಂಸ್ಕಾರರೂಪೀ ಚಿತ್ತ — ಈ ನಾಲ್ಕು ರೂಪದಿಂದಿರುವ ಒಳ ಇಂದ್ರಿಯಗಳ / ಅಂತಃಕರಣಗಳ ವೃತ್ತಿ / ಪ್ರವೃತ್ತಿ / ಪ್ರವವರ್ತಿಸುವಿಕೆಯ ವಿಶೇಷತೆಯ ರೂಪವಾದ ದೃಷ್ಟಿವೈವಿಧ್ಯದಿಂದ ಆತ್ಮನಿಗೆ ನಾನಾತ್ವ / ಬಹುಮುಖತೆ / ವಿವಿಧತೆಯೋ ಎಂಬಂತೆ ಜ್ಞಾನ-ಅಜ್ಞಾನ ಭಾವಾದಿಗಳೆಲ್ಲ ಉಂಟಾಗುವುದು.)    ತತ್ರ ಉಕ್ತ-ದೃಷ್ಟೇಃ (ಅಲ್ಲಿ ಹೇಳಿದ ದೃಷ್ಟಿಯ) ಸರ್ವ-ಉನ್ಮೀಲನಂ ಜಾಗ್ರತ್, (ಪೂರ್ಣವಾದ ತೆರೆದಿರುವಿಕೆಯೇ ಎಚ್ಚರದ ಅವಸ್ಥೆ) ಅರ್ಧ-ಉನ್ಮೀಲನಂ ಸ್ವಪ್ನ-ಉನ್ಮೀಲನಂ ಸುಷುಪ್ತಿಃ (ಅರ್ಧ ತೆರೆದಿರುವಿಕೆಯೇ ಕನಸಿನ ಸ್ಥಿತಿ, ಮುಚ್ಚಿರುವಿಕೆಯೇ ಗಾಢನಿದ್ದೆಯ ಅವಸ್ಥೆ) ಇತಿ ಏವ ತ್ರಿಗುಣಾತ್ಮಕಾನಿ ತ್ರೀಣಿ ನೇತ್ರಾಣಿ ಯಸ್ಯ (ಈ ರೀತಿಯಾಗಿ ಮೂರು ಗುಣಗಳಿಂದ ಕೂಡಿದ ಮೂರು ಕಣ್ಣುಗಳು ಯಾವನದೋ) ಸಃ ಏಷಃ ಸರ್ವಃ ಅಪಿ ಜೀವಃ ತ್ರ್ಯಮ್ಬಕಃ ಏವ | (ಅಂತಹ ಈ ಎಲ್ಲವೂ ತಾನೇ ಆಗಿರುವ ಆತ್ಮನು / ಜೀವನು ತ್ರ್ಯಂಬಕ / ಮುಕ್ಕಣ್ಣನೇ ಹೌದು.)  ಭೂತಂ ಭವದ್-ಭವಿಷ್ಯದ್-ಗಿರಿ-ತೃಣ-ವೃಕ್ಷಾದಿಕಮ್ ಅಪಿ ಸರ್ವಂ ರುದ್ರಃ, ಏವ | (ಭೂತಕಾಲ, ವರ್ತಮಾನ, ಭವಿಷ್ಯತ್ಕಾಲ, ಪರ್ವತ, ಹುಲ್ಲು, ಮರ ಮುಂತಾದುವೆಲ್ಲವೂ ಕೂಡ ರುದ್ರನೇ.) ತಸ್ಯ ಸಾರ್ವಾತ್ಮ್ಯ-ಅಭಿಧಿತ್ಸಯಾ ಇಯಮ್ ಉಪನಿಷತ್ ಪ್ರವೃತ್ತಾ | (ಆತನ ಸರ್ವಾತ್ಮತ್ವವನ್ನು ಹೇಳುವ ಇಚ್ಛೆಯಿಂದಲೇ ಈ ರುದ್ರಾಧ್ಯಾಯವೆಂಬ ಉಪನಿಷತ್ತುಲ್ಯ ಸಂಹಿತಾಭಾಗವು ಪ್ರವೃತ್ತವಾಗಿದೆ / ತೊಡಗಿದೆ.) ತದತ್ರ (ಹಾಗಾಗಿ ಇಲ್ಲಿ) ನಿರವಧಿಕ-ದಯಾಂಬುಧಿಃ (ಕಾಲಾತೀತನಾದ ನಿತ್ಯದಯಾಸಮುದ್ರನಾದ) ವೇದಪುರುಷಃ (ವೇದಪುರುಷನು, ವೇದಸ್ವರೂಪನು, ವೇದರೂಪೀ ಶಬ್ದಬ್ರಹ್ಮನು) ಪ್ರಜ್ಞಾವತಃ, ಉಪಶಿಕ್ಷಯನ್ ಪರಮೇಶ್ವರಂ ಪ್ರಾರ್ಥಯತೇ || (ಪ್ರಜ್ಞಾವಂತರನ್ನು ಅತಿಸಮೀಪದಿಂದಲೇ, ಆಪ್ತತೆಯಿಂದ ಶಿಕ್ಷಣವನ್ನೀಯುತ್ತಾ, ಬೋಧಿಸುತ್ತಾ ಪರಮೇಶ್ವರ ಪರಮಾತ್ಮ ಭಗವಂತನನ್ನು ಪ್ರಾರ್ಥಿಸುತ್ತಾನೆ.)

Comments

  1. ಅಥ.. ಅಭಿಪ್ರಾಯಹ. ...ಮಾನಸೋಲ್ಲಾಸಾದಾಯಕಾ.. ಸತ್ಯ. ಸಮ್ಯಕ್ ಸಾಮ್ಯ ಸಹಿತ ಹ.... ಭಾಷ್ಯ ಭಾಷಾ
    ಧನ್ಯವಾದಗಳು

    ReplyDelete
  2. ಮಂಜುನಾಥ ಜೋ ಯಿ ಸ:

    ReplyDelete

Post a Comment

Popular posts from this blog

ಲಘುನ್ಯಾಸದ ಬೆಳಕಿನಲ್ಲಿ ಶಿವದರ್ಶನ ೧೩—ಲಘುನ್ಯಾಸಮನ್ತ್ರಾರ್ಥವಿಚಾರ ೮

ಲಘುನ್ಯಾಸದ ಬೆಳಕಿನಲ್ಲಿ ಶಿವದರ್ಶನ ೯—ಲಘುನ್ಯಾಸಮಂತ್ರಾರ್ಥವಿಚಾರ ೪

ತೈತ್ತಿರೀಯಕೃಷ್ಣಯಜುಸ್ಸಂಹಿತಾಭಾಷ್ಯಾರ್ಥಸಮುಚ್ಚಯಃ ೧.೧.೪