ತೈತ್ತಿರೀಯೋಪನಿಷತ್-ಸುರೇಶ್ವರವಾರ್ತಿಕ ೧
ತೈತ್ತಿರೀಯೋಪನಿಷತ್-ಸುರೇಶ್ವರವಾರ್ತಿಕ ೧
ಸತ್ಯಂ ಜ್ಞಾನಮನನ್ತಮೇಕಮಮಲಂ ಧ್ವಸ್ತಾಂಧಕಾರಂ ಪರಂ
ನಿರ್ದ್ವೈತಂ ಹೃದಿ ಪದ್ಮಮಧ್ಯನಿಲಯಂ ನಿಃಶೇಷಧೀಸಾಕ್ಷಿಣಮ್ |
ವೇದಾನ್ತೋಪನಿವಿಷ್ಟಬೋಧವಿಷಯಂ ಪ್ರತ್ಯಕ್ತಯಾ ಯೋಗಿನಾಂ
ಭಕ್ತ್ಯಾ ತಂ ಪ್ರಣಿಪತ್ಯ ವೇದಶಿರಸೋ ವಕ್ಷ್ಯಾಮಿ ಸದ್ವಾರ್ತಿಕಮ್ || ೧ ||
ಸತ್ಯ-ಜ್ಞಾನ-ಅನಂತನೂ, ಏಕನೂ, ಅಮಲ (ನಿರ್ಮಲ/ನಿಷ್ಕಲ್ಮಷ)ನೂ, ಅಜ್ಞಾನಾಂಧಕಾರವನ್ನು ಹೋಗಲಾಡಿಸುವವನೂ, ಪರ (ಶ್ರೇಷ್ಠ)ನೂ, ಎರಡಿಲ್ಲದ ಏಕಮೇವ ಅದ್ವೈತಸ್ವರೂಪನೂ, ಸಕಲಜೀವರ ಹೃದಯಕಮಲಮಧ್ಯವಾಸಿಯೂ, ಸರ್ವರ ಬುದ್ಧಿಯ ಪ್ರವೃತ್ತಿಗಳಿಗೂ (ಕರ್ಮಸಾಕ್ಷಿಯಾದ ಸೂರ್ಯನಂತೆ) ಸಾಕ್ಷಿರೂಪನಾದ, ವೇದಸಾರರೂಪವಾದ ವೇದಾಂತ / ಉಪನಿಷತ್ತುಗಳು ಬೋಧಿಸುವ ವಿಷಯಗಳಿಗೆ ಬಹುಸಾಮೀಪ್ಯನಾಗಿ, ಅವುಗಳಲ್ಲೇ ಅಂತರ್ಗತನೂ ಆಗಿರುವ, ಯೋಗಿಗಳ ಒಮ್ಮುಖವಾದ ಧ್ಯಾನಕ್ಕೆ ಗೋಚರನಾದ, ಆ ಪರಮಾತ್ಮನನ್ನು ಅತಿಭಕುತಿಯಿಂದ ನಮಸ್ಕರಿಸಿ, (ಕೃಷ್ಣಯಜುರ್) ವೇದಕ್ಕೆ ಶಿರೋಪ್ರಾಯವಾದ (ತೈತ್ತಿರೀಯ) ಉಪನಿಷತ್ತಿಗೆ ಉತ್ತಮವಾದ ವಾರ್ತಿಕವನ್ನು (ಸ್ಪಷ್ಟಾರ್ಥವನ್ನು) ಹೇಳುವೆನು.
ಯಸ್ಯೇದಂ ಸಕಲಾಮಲೇನ್ದುಕಿರಣಪ್ರಖ್ಯೈರ್ಯಶೋರಶ್ಮಿಭಿಃ
ವ್ಯಾಪ್ತಂ ಯಶ್ಚ ಕೃಪಾಲುತಾಪರವಶಶ್ಚಕ್ರೇ ಹಿತಂ ದುಃಖಿನಾಮ್ |
ಯದ್ವಾಣೀಕುಲಿಶಾವರುಗ್ಣಮತಯಃ ಪೇತುರ್ದಿಶಸ್ತಾರ್ಕಿಕಾಃ
ಭಕ್ತ್ಯಾ ಪೂಜ್ಯತಮಂ ಪ್ರಣಮ್ಯ ತಮಹಂ ತದ್ಭಾಷ್ಯನೀತೌ ಯತೇ || ೨ ||
ಯಾರ ಷೋಡಶಕಲಾಪರಿಪೂರ್ಣನಾದ ಪೌರ್ಣಮಿಯ ಚಂದಿರನ (ತಣ್ಗದಿರುಗಳು / ಶೀತಾಂಶುಗಳು /) ತಂಪಾದ ಕಿರಣಗಳಂತಹ ಕೀರ್ತಿಯ ರಶ್ಮಿಗಳಿಂದ, ಈ ಜಗವೆಲ್ಲವೂ ವ್ಯಾಪ್ತವಾಗಿರುವುದೋ, ಯಾರು ಸಂಸಾರಬಂಧನದಲ್ಲಿ ಸಿಲುಕಿದ ಆರ್ತರ ಬಗ್ಗೆ ಕೃಪಾಪರವಶರಾಗಿ, ಅಂಥವರ ಹಿತದೃಷ್ಟಿಯಿಂದ ಉಪನಿಷದ್ಭಾಷ್ಯಾದಿಗಳನ್ನು ರಚಿಸಿದರೋ, ಯಾರ ವಾದವೈಖರಿಯೆಂಬ / ಭಾಷ್ಯವಾಕ್ಯಗಳೆಂಬ ಕೊಡಲಿಯ ಹೊಡೆತಕ್ಕೊಳಗಾಗಿ ವಿತಂಡವಾದಿಗಳೂ, ತರ್ಕವಿದರೂ ಗಾಯಗೊಂಡ ಮತಿಯುಳ್ಳವರಾಗಿ ದಿಕ್ಕಾಪಾಲಾಗಿ ಚದುರಿ ಹೋದರೋ, ಅಂತಹ ಪೂಜ್ಯತಮರಾದ, ಯತಿವರರಾದ ಆದಿಶಂಕರರನ್ನು ನಮಿಸಿ, ನಾನು ಅವರು ಬರೆದ ಭಾಷ್ಯದ ಸಾರವನ್ನು ಹೊರತರಲು ಯತ್ನಿಸುವೆನು.
ತೈತ್ತಿರೀಯಕಸಾರಸ್ಯ ಮಯಾऽऽಚಾರ್ಯಪ್ರಸಾದತಃ |
ವಿಸ್ಪಷ್ಟಾರ್ಥರುಚೀನಾಂ ಹಿ ವ್ಯಾಖ್ಯೇऽಯಂ ಸಂಪ್ರಣೀಯತೇ || ೩ ||
ನನ್ನ ಆಚಾರ್ಯರ ಕೃಪೆಯಿಂದ, ಅವರು ಬರೆದ ತೈತ್ತಿರೀಯೋಪನಿಷದ್ ಭಾಷ್ಯಕ್ಕೆ, ಈ ವಾರ್ತಿಕರೂಪೀ ವ್ಯಾಖ್ಯೆಯು, ಸ್ಪಷ್ಟವಾದ ಅರ್ಥ(ವಿಶೇಷಾರ್ಥ + ಖಚಿತಾರ್ಥ)ವನ್ನರಿಯುವ ಆಸಕ್ತಿ-ಅಭಿರುಚಿಯುಳ್ಳವರಿಗಾಗಿಯೇ ನನ್ನಿಂದ ಚೆನ್ನಾಗಿ ವಿರಚಿಸಲ್ಪಡುತ್ತದೆ.
ದುರಿತಕ್ಷಯಹೇತೂನಿ ನಿತ್ಯಾನಿ ಬ್ರಾಹ್ಮಣೇ ಯಯುಃ |
ಕಾಮ್ಯಾನಿ ಚೇಹ ಕರ್ಮಾಣಿ ದೃಷ್ಟಾದೃಷ್ಟಫಲಾನಿ ತು || ೪ ||
ಸಂಧ್ಯಾವಂದನಾದಿ ನಿತ್ಯಕರ್ಮಗಳು ಪಾಪನಾಶಕ್ಕೆ ಕಾರಣವಾದವುಗಳು ಹಾಗೂ ಪುತ್ರಕಾಮೇಷ್ಟಿಯೇ ಮುಂತಾದ ವಾಂಛಿತ ಐಹಿಕ ಸಂಕಲ್ಪಸಹಿತವಾದ ಕಾಮ್ಯಕರ್ಮಗಳು, ಈಗಾಗಲೇ ಅನುಭವಿಸಿರುವ, ಪ್ರಸ್ತುತ ಅನುಭವಿಸುತ್ತಿರುವ (ದೃಷ್ಟ— ಕಂಡ) ಹಾಗೂ ಇನ್ನೂ ಅನುಭವಿಸದಿರುವ (ಅದೃಷ್ಟ— ಕಾಣದ) ಕರ್ಮಫಲಗಳನ್ನು ನೀಡುವವೆಂದು, ಆರಣ್ಯಕೋಪನಿಷತ್ತುಗಳಿಗೆ ಹಿಂದೆಯೇ ವೇದಗಳ ಬ್ರಾಹ್ಮಣಭಾಗದಲ್ಲಿ ಹೇಳಿರುತ್ತಾರೆ.
ವಿದ್ಯಾ ಪ್ರಸ್ತೂಯತೇऽಥೋರ್ಧ್ವಂ ಯಥಾಭೂತಾರ್ಥಬೋಧಿನೀ |
ಕರ್ಮೋಪಾದಾನಹೇತೂಂಸ್ತಾನ್ ಸೈವೋಚ್ಛೇತ್ತುಮಲಂ ಯತಃ || ೫ ||
ಇನ್ನು ಮೇಲೆ (ಅಥ ಊರ್ಧ್ವಂ), ಪರಮಾರ್ಥವನ್ನು ಯಥಾವತ್ತಾಗಿ ಬೋಧಿಸುವ (ಯಥಾಭೂತ ಅರ್ಥಬೋಧಿನೀ), ಬ್ರಹ್ಮವಿದ್ಯೆಯಾದ (ವಿದ್ಯಾ), ಉಪನಿಷತ್ತು ಪ್ರಸ್ತಾವಿಸಲ್ಪಡುತ್ತದೆ (ಪ್ರಸ್ತೂಯತೇ). ಯಾಕೆಂದರೆ (ಯತಃ), ಆ ಕರ್ಮಕ್ಕೆ ಕಾರಣವಾದವುಗಳನ್ನು (ತಾನ್ ಕರ್ಮೋಪಾದಾನಹೇತೂನ್), ನಾಶಮಾಡಲು (ಉಚ್ಛೇತ್ತುಮ್), ಆ ಬ್ರಹ್ಮವಿದ್ಯೆಯೇ ( ಸಾ ಏವ), ಸಾಕು / ಸಮರ್ಥವಾದುದು (ಅಲಮ್).
(ಮೀಮಾಂಸಾಕಾರರ ಪ್ರಕಾರ, ಕರ್ಮಗಳು ೩ ವಿಧ— ನಿತ್ಯ, ನೈಮಿತ್ತಿಕ ಮತ್ತು ಕಾಮ್ಯ. ಗ್ರಹಣ, ಸಂಕ್ರಮಣ, ಅಮಾವಾಸ್ಯಾದಿಗಳಲ್ಲಿ ಆಚರಿಸಬೇಕಾದುದು ನೈಮಿತ್ತಿಕ. ಉಳಿದವು ಹಿಂದೆಯೇ ಹೇಳಿದೆ.)
ಸ ಯಥಾಕಾಮ ಇತ್ಯೇವಂ ಯೋऽಕಾಮಶ್ಚೇತಿ ಸಾದರಮ್ |
ಕಾಮಾಕಾಮೈಕಹೇತೂ ನೋ ಬನ್ಧಮೋಕ್ಷೌ ಶ್ರುತಿರ್ಜಗೌ || ೬ ||
“ಅವನು ಏನನ್ನು ಬಯಸುವನೋ ಅದನ್ನು ಪಡೆಯುತ್ತಾನೆ; ಜೀವನದ ಲೌಕಿಕ ಬಯಕೆಗಳನ್ನು ಬಯಸಿದರೆ ಅದರ ಬಂಧನಕ್ಕೆ / ಮೋಹಕ್ಕೆ ಒಳಗಾಗುತ್ತಾನೆ” (“ಸಃ ಯಥಾಕಾಮಃ”) ಎಂದೂ, ಹಾಗೆಯೇ (ಏವಂ ಚ), “ಯಾವನು ಕಾಮನಾರಹಿತನಾಗಿರುವನೋ ಅವನು ಮೋಕ್ಷವನ್ನು ಹೊಂದುತ್ತಾನೆ / ಬಿಡುಗಡೆ ಹೊಂದುತ್ತಾನೆ” (“ಯಃ ಅಕಾಮಃ”) ಎಂಬುದಾಗಿ (ಇತಿ), ನಮಗೆ (ನಃ / ಅಸ್ಮಭ್ಯಂ), ಬಂಧನ-ಮೋಕ್ಷಗಳೆರಡೂ (ಬನ್ಧ-ಮೋಕ್ಷೌ), ಬಯಕೆ ಹಾಗೂ ಬಯಕೆಗಳಿಲ್ಲದಿರುವಿಕೆ— ಕೇವಲ ಇವುಗಳಿಂದಾಗಿಯೇ ಸಂಭವಿಸುತ್ತವೆ ಎಂದು (ಕಾಮ-ಅಕಾಮ-ಏಕಹೇತೂ ಇತಿ), ವೇದವು (ಶ್ರುತಿಃ), ಹೇಳಿದೆ (ಜಗೌ).
ಅಪವಿದ್ಧದ್ವಯೇ ತತ್ತ್ವೇ ಸರ್ವದೈವಾತ್ಮರೂಪಕೇ |
ವಿಪರ್ಯಯೋऽನಭಿಜ್ಞಾನಾತ್ ತತಃ ಕಾಮಃ ಕ್ರಿಯಾಸ್ತತಃ || ೭ ||
ಸದಾ (ವ್ಯಕ್ತಿಯ) ಆತ್ಮರೂಪವೇ ಆಗಿದ್ದು (ಸರ್ವದಾ ಏವ ಆತ್ಮರೂಪಕೇ), ಕಾಮ-ಅಕಾಮಗಳೆಂಬ ದ್ವಂದ್ವಗಳನ್ನು ಮೀರಿದ ಬ್ರಹ್ಮತತ್ತ್ವವು (ಅಪವಿದ್ಧ-ದ್ವಯೇ ತತ್ತ್ವೇ), ಅದನ್ನು ಯಥಾರ್ಥವಾಗಿ ಅರಿಯದೆ (ಅನಭಿಜ್ಞಾನಾತ್), ತಪ್ಪು ತಿಳುವಳಿಕೆಯುಂಟಾಗಿ (ವಿಪರ್ಯಯಃ), ಅನಂತರ ಬಯಕೆಯು ಹುಟ್ಟಿ (ತತಃ ಕಾಮಃ), ಅದರಿಂದ ಕ್ರಿಯೆಗಳು / ಕರ್ಮಗಳು ಸಂಭವಿಸುತ್ತವೆ (ತತಃ ಕ್ರಿಯಾಃ).
ಯದಜ್ಞಾನಾತ್ ಪ್ರವೃತ್ತಿರ್ಯಾ ತಜ್ಜ್ಞಾನಾತ್ ಸಾ ಕುತೋ ಭವೇತ್ |
ತಸ್ಮಾತ್ ಸರ್ವಪ್ರವೃತ್ತೀನಾಮಲಂ ವಿದ್ಯೋಪಶಾನ್ತಯೇ || ೮ ||
ಯಾವ ಆತ್ಮಬ್ರಹ್ಮದ ಯಥಾರ್ಥ ಜ್ಞಾನವಿಲ್ಲದಿರುವುದರಿಂದಾಗಿ (ಯದ್ ಅಜ್ಞಾನಾತ್), ಅದನ್ನು ಪಡೆಯಲು ಯಾವ ಕಾಮ-ಕರ್ಮಾದಿ ಪ್ರವೃತ್ತಿಯುಂಟಾಗುತ್ತದೆಯೋ, ಅಂತಹ ಪ್ರವೃತ್ತಿಯು (ಸಾ), ಆತ್ಮಜ್ಞಾನವಾದ ಮೇಲೆ (ತತ್ ಜ್ಞಾನಾತ್), ಹೇಗೆ ತಾನೇ ಉಂಟಾದೀತು? (ಕುತಃ ಭವೇತ್); ಅರ್ಥಾತ್, ತನ್ನಾತ್ಮದ ಬಗೆಗಿನ ಸರಿಯಾದ ತಿಳುವಳಿಕೆಯಿಂದ ಯಾವುದೇ ಬಯಕೆಗಳೂ ಬಾರದು, ತನ್ಮೂಲಕ ಯಾವುದೇ ಕರ್ಮವನ್ನು ಮಾಡಿದರೂ ಕಾಮನೆಯಿಲ್ಲದೆ / ಪ್ರತಿಫಲದ ಬಯಕೆಯಿಲ್ಲದೆ ಮಾಡುವುದರಿಂದ ಅದು ಪುಣ್ಯ-ಪಾಪಸಂಗ್ರಹದ ಬಂಧನವನ್ನುಂಟುಮಾಡಲಾರದು. ಆದ್ದರಿಂದ (ತಸ್ಮಾತ್), ಸಕಲಪ್ರವೃತ್ತಿಗಳ / ಎಲ್ಲ ಕಾಮನೆ ಹಾಗೂ ಕರ್ಮಗಳ (ಸರ್ವಪ್ರವೃತ್ತೀನಾಮ್), ನಿಲುಗಡೆಗೆ (ಉಪಶಾನ್ತಯೇ), ಬ್ರಹ್ಮವಿದ್ಯೆ / ಆತ್ಮಜ್ಞಾನವೇ (ವಿದ್ಯಾ), ಸಮರ್ಥವಾದುದು / ಅದೇ ಸಾಕು (ಅಲಮ್). ಅದರಿಂದಲೇ ಇವೆಲ್ಲವೂ ಶಾಂತವಾಗುವುವು / ಇಲ್ಲವಾಗುವುವು. ಉದಾ— ಮರುಭೂಮಿಯ ಮರೀಚಿಕೆಯನ್ನು ಜಲಾಶಯವೆಂದು ಬಗೆದು ಬಳಿಸಾರಿದಾಗ ಅದು ಕೇವಲ ಭ್ರಮೆ / ಮರೀಚಿಕೆ ಎಂದು ತಿಳಿದ ಮೇಲೆ ಅದರ ಪ್ರಾಪ್ತಿಗಾಗಿ ಪ್ರವರ್ತಿಸುವುದು ನಿಲ್ಲುವುದು. ಹೀಗೆಯೇ, ಆತ್ಮಾನಂದವೆಂಬ ದೊಡ್ಡಸುಖದ ಅನುಭವವಾದರೆ, ಬಳಿಕ ಸಣ್ಣಪುಟ್ಟ ಸುಖಕ್ಕಾಗಿ ಮಾಡುವ ಎಲ್ಲ ಪ್ರವೃತ್ತಿಗಳೂ ನಿಲ್ಲುತ್ತವೆ.
ಮೋಕ್ಷಾರ್ಥೀ ನ ಪ್ರವರ್ತೇತ ತತ್ರ ಕಾಮ್ಯನಿಷಿದ್ಧಯೋಃ |
ನಿತ್ಯನೈಮಿತ್ತಿಕೇ ಕುರ್ಯಾತ್ ಪ್ರತ್ಯವಾಯಜಿಹಾಸಯಾ || ೯ ||
ಇತಿ ಮೀಮಾಂಸಕಂಮನ್ಯೈಃ ಕರ್ಮೋಕ್ತಂ ಮೋಕ್ಷಸಾಧನಮ್ |
ಪ್ರತ್ಯಾಖ್ಯಾಯಾತ್ಮವಿಜ್ಞಾನಂ ತತ್ರ ನ್ಯಾಯೇನ ನಿರ್ಣಯಃ || ೧೦ ||
“ಮೋಕ್ಷವನ್ನು ಬಯಸುವವನು (ಮೋಕ್ಷಾರ್ಥೀ), ಕಾಮ್ಯ ಹಾಗೂ ನಿಷಿದ್ಧಕರ್ಮಗಳಲ್ಲಿ (ಕಾಮ್ಯ-ನಿಷಿದ್ಧಯೋಃ), ತೊಡಗಬಾರದು (ನ ಪ್ರವರ್ತೇತ). ಕರ್ಮಗಳಲ್ಲಿ (ತತ್ರ), ವಿಘ್ನಗಳನ್ನು ನಿವಾರಿಸುವುದಕ್ಕಾಗಿ (ಪ್ರತ್ಯವಾಯ-ಜಿಹಾಸಯಾ), ಸಂಧ್ಯಾವಂದನಾದಿ ನಿತ್ಯಕರ್ಮ ಹಾಗೂ ಹಬ್ಬ ಹರಿದಿನಾದಿ ನೈಮಿತ್ತಿಕಕರ್ಮಗಳನ್ನು (ನಿತ್ಯ-ನೈಮಿತ್ತಿಕೇ), ಆಚರಿಸಬೇಕು (ಕುರ್ಯಾತ್). ಹೀಗೆಂದು (ಇತಿ), ಮೀಮಾಂಸಕರು ತಾವೆಂಬ ಅಹಂಕಾರಿಗಳಿಂದ (ಮೀಮಾಂಸಕಂಮನ್ಯೈಃ), ಕರ್ಮವು (ಕರ್ಮ), ಮೋಕ್ಷಸಾಧನವೆಂದು (ಮೋಕ್ಷಸಾಧನಮ್), ಹೇಳಲ್ಪಟ್ಟಿರುವುದು (ಉಕ್ತಮ್). (ಪ್ರತ್ಯಾಖ್ಯಾಯ) ಈ ವಿಚಾರವನ್ನು ನಿರಾಕರಿಸಿ, (ಆತ್ಮವಿಜ್ಞಾನಮ್ ತತ್ರ) ಆತ್ಮಜ್ಞಾನವೇ ಅಂತಹ ಮೋಕ್ಷಕಾರಣವೆಂದು, (ನ್ಯಾಯೇನ ನಿರ್ಣಯಃ) ನ್ಯಾಯಪೂರ್ವಕವಾಗಿಯೇ ನಿರ್ಣಯಿಸಲಾಗಿದೆ.
Comments
Post a Comment