ಪುರುಷಸೂಕ್ತಭಾಷ್ಯಮ್ ೮

 ಪುರುಷಸೂಕ್ತಭಾಷ್ಯಮ್ ೮


ಪುರುಷ ಏವೇದಂ ಸರ್ವಂ 

ಯದ್ಭೂತಂ ಯಚ್ಚ ಭವ್ಯಮ್ |

ಉತಾಮೃತತ್ವಸ್ಯೇಶಾನೋ

ಯದನ್ನೇನಾತಿರೋಹತಿ || ೨ ||


ಪರಮಪುರುಷನೆ ವಿಶ್ವವಾತನ

ಕರುಣದಿಂದಲೆ ಕಳೆದ ಮುಂದಿನ

ಸರುವ ವರ್ತಿಸುತಿರ್ಪವೆಲ್ಲವದಾತನದೆ ರೂಪ |

ವರದನೀಶನು ಮುಕ್ತಿಗಧಿಪನು

ಮರಣವಿರದಮೃತತ್ವನಾಥನು

ನಿರತ ವರ್ಧಿಸುತನ್ನಮಯದಿಂ ಮೀರಿ ಬಹುದಾರಿ ||



ಪ್ರತಿಪದಾರ್ಥ—


ಯದ್ ಭೂತಮ್— ಯಾವುದು / ಏನೆಲ್ಲ ಹಿಂದೆ ಇತ್ತೋ, ಯತ್ ಭವ್ಯಮ್— ಯಾವುದು / ಏನೆಲ್ಲ ಮುಂದೆ ಭವಿಷ್ಯತ್ ಕಾಲದಲ್ಲಿ ಇರುವುದೋ, ಚ— ಹಾಗೆಯೇ, ಇದಂ ಸರ್ವಮ್— ವರ್ತಮಾನಕಾಲದಲ್ಲಿ ತೋರುವ  ಇದೆಲ್ಲವೂ, ಪುರುಷಃ ಏವ— ಪರಮಪುರುಷನೇ ಆಗಿರುವನು; ಅವ್ಯಕ್ತವೂ ಸನಾತನವೂ ಅನಾದ್ಯನಂತವೂ ಆದ ಆತನ ಅಭಿವ್ಯಕ್ತಿಯೇ ಈ ತ್ರಿಕಾಲಗಳ ಸೃಷ್ಟಿ. ಉತ— ಅಥವಾ, ಯತ್, ಅನ್ನೇನ, ಅತಿರೋಹತಿ— ಯಾವ ಅವನು ಈ ಅನ್ನಮಯ ಪ್ರಪಂಚವನ್ನು ಮೀರಿ ಇರುವನು; ಅಮೃತತ್ವಸ್ಯ ಈಶಾನಃ— ಆತನು ಪರಮಪದವಾದ ಮೋಕ್ಷಕ್ಕೇ ಅಧಿಪತಿಯು. 


ತಾತ್ಪರ್ಯ—


ಮೊದಲ ಋಕ್ಕಿನಲ್ಲಿ ದೇಶದೃಷ್ಟಿಯಿಂದ ಪರಮಪುರುಷನ ವ್ಯಾಪ್ತಿಯನ್ನು ಹೇಳಿ, ಈ ಎರಡನೆಯದರಲ್ಲಿ ಕಾಲದೃಷ್ಟಿಯಲ್ಲಿ ಆತನ ವ್ಯಾಪ್ತಿಯನ್ನು ಹೇಳಿದೆ— ಯಾವ ಈ ಪ್ರವರ್ತಮಾನ / ನಡೆಯುತ್ತಿರುವ ಕಾಲದ ಕಾರ್ಯಗಳಿಂದ ಉಂಟಾದದ್ದೆಲ್ಲವೂ ಆ ಪುರುಷನೇ. ಯಾವುದು ಕಳೆದುಹೋದ / ಗತಿಸಿದ ಕಾರ್ಯಗಳಿಂದ ಉಂಟಾಗಿದೆಯೋ ಹಾಗೂ ಭಾವೀ / ಮುಂದಿನ ಕಾರ್ಯಗಳಿಂದ ಉಂಟಾಗಲಿದೆಯೋ, ಅದೆಲ್ಲವೂ ಆ ಪರಮಪುರುಷನೇ ಆಗಿರುವನು. ಅಂತೆಯೇ, ಇದೇ ಪುರುಷನು ಅಮೃತತ್ವವೆನಿಸಿದ ಮೋಕ್ಷಕ್ಕೆ ಈಶ್ವರನಾಗಿರುವನು. ಸಾಲೋಕ್ಯ ಸಾಮೀಪ್ಯ ಸಾರೂಪ್ಯ ಸಾಯುಜ್ಯ— ಎಂಬ ಚತುರ್ವಿಧವಾದ ಮೋಕ್ಷಪ್ರದನೂ ಆಗಿರುವನು. ಯಾವ ಇವನದೇ ಕಾರ್ಯದಿಂದುಂಟಾದ ಉಣ್ಣಲು ಯೋಗ್ಯವಾದ ಅನ್ನಾಹಾರದ್ರವ್ಯದಿಂದ, ಆತನು ತನ್ನ ಮೂಲವನ್ನು ಮೀರಿ ಬೆಳೆದು ಬೃಹತ್ ಸೃಷ್ಟಿರೂಪದಿಂದ ಬೆಳಗುತ್ತಾನೆ. 


ಭಾಗವತಪುರಾಣದಲ್ಲಿಯೂ ಭಗವಂತನ ಶರೀರದ ಕಾಲತ್ರಯಸಂಬಂಧತ್ವವು ಉಪವರ್ಣಿತವಾಗಿದೆ. 


" ವಿಶೇಷಸ್ತಸ್ಯ ದೇಹೋऽಯಂ

ಸ್ಥವಿಷ್ಠಶ್ಚ ಸ್ಥವೀಯಸಾಮ್ |

ಯತ್ರೇದಂ ದೃಶ್ಯತೇ ವಿಶ್ವಂ

ಭೂತಂ ಭವ್ಯಂ ಭವಚ್ಚ ಯತ್ ||"

(ಭಾಗವತಪುರಾಣ ೨.೧.೨೪)


ಆತನೀ ದೇಹವು ವಿಶೇಷ ಸ

ನಾತನವು ಪ್ರಾಚೀನತಮವದು

ಭೂತಜಾತಗಳೆಲ್ಲದರೊಳತ್ಯಂತ ಸುಸ್ಥಿರವು |

ಭೂತಕಾಲದ ಎಲ್ಲ ಸೃಷ್ಟಿಯು

ವರ್ತಮಾನದ ದೃಶ್ಯ ಭಾವೀ

ಜಾತವಾಗುವುದೆಲ್ಲ ತೋರುವುದಾ ಶರೀರದೊಳು ||


ಸಾಯಣಋಗ್ಭಾಷ್ಯದಿಂದ—


ಯತ್ ಇದಂ ವರ್ತಮಾನಂ ಜಗತ್, ತತ್ ಸರ್ವಂ ಪುರುಷ ಏವ | (ಯಾವ ಈ ನಡೆಯುತ್ತಿರುವ ವರ್ತಮಾನಕಾಲದ ಜಗತ್ತಿದೆಯೋ, ಅದೆಲ್ಲವೂ ಆ ಪರಮಪುರುಷ ಪರಮಾತ್ಮನೇ.) ಯತ್ ಚ ಭೂತಮ್ ಅತೀತಂ ಜಗತ್ ಯಚ್ಚ ಭವ್ಯಂ ಭವಿಷ್ಯತ್ ಜಗತ್ ತದ್ ಅಪಿ ಪುರುಷ ಏವ | (ಹಾಗೆಯೇ, ಯಾವುದು ಕಳೆದುಹೋದ ಭೂತಕಾಲದ ಜಗತ್ತಿತ್ತೋ, ಅಂತೆಯೇ ಯಾವ ಭವಿಷ್ಯಕಾಲದಲ್ಲಿ ತೋರಬಹುದಾದ ಜಗತ್ತಿರಬಹುದೋ ಅದೂ ಸಹ ಅವನೇ.) ಯಥಾ ಅಸ್ಮಿನ್ ಕಲ್ಪೇ ವರ್ತಮಾನಾಃ ಪ್ರಾಣಿದೇಹಾಃ ಸರ್ವೇ ಅಪಿ ವಿರಾಟ್-ಪುರುಷಸ್ಯ ಅವಯವಾಃ, ತಥಾ ಏವ ಅತೀತ-ಆಗಾಮಿನೋಃ ಅಪಿ ಕಲ್ಪಯೋಃ ದ್ರಷ್ಟವ್ಯಮ್ ಇತಿ ಅಭಿಪ್ರಾಯಃ | (ಹೇಗೆ ಈ ಬ್ರಹ್ಮಕಲ್ಪದಲ್ಲಿ ಇರುವ ಪ್ರಾಣವಂತರ ದೇಹಗಳೆಲ್ಲವೂ ಕೂಡ ವಿರಾಟ್ಪುರುಷನ ಅವಯವಗಳೋ, ಅಂತೆಯೇ ಕಳೆದ ಹಾಗೂ ಮುಂದೆ ಬರುವ ಕಲ್ಪಗಳಲ್ಲೂ ಹಾಗೇ ತಿಳಿಯಬೇಕೆಂಬ ಅಭಿಪ್ರಾಯವು.) ಉತ— ಅಪಿ ಚ ಅಮೃತತ್ವಸ್ಯ ದೇವತ್ವಸ್ಯ ಅಯಮ್ ಈಶಾನಃ ಸ್ವಾಮೀ | (ಹಾಗೆಯೇ, ಅಮೃತತ್ವಕ್ಕೆ / ದೇವತ್ವಕ್ಕೆ / ಮುಕ್ತಿಗೆ ಇವನೇ ಈಶ್ವರನು / ಸ್ವಾಮಿಯು / ಒಡೆಯನು.) ಯತ್ ಯಸ್ಮಾತ್ ಕಾರಣಾತ್ ಅನ್ನೇನ ಪ್ರಾಣಿನಾಂ ಭೋಗ್ಯೇನ ಅನ್ನೇನ ನಿಮಿತ್ತಭೂತೇನ ಅತಿರೋಹತಿ ಸ್ವಕೀಯಾಂ ಕಾರಣಾವಸ್ಥಾಮ್ ಅತಿಕ್ರಮ್ಯ ಪರಿದೃಶ್ಯಮಾನಾಂ ಜಗದವಸ್ಥಾಂ ಪ್ರಾಪ್ನೋತಿ (ಯಾವ ಕಾರಣದ ದೆಸೆಯಿಂದ ಪ್ರಾಣವಂತರ ಭೋಗ್ಯವಾದ ಅನ್ನಾಹಾರದಿಂದ,   ಕೇವಲ ನಿಮಿತ್ತಭೂತವಾಗಿರುವ ತನ್ನ ಸರ್ವಕಾರಣಾವಸ್ಥೆಯನ್ನು / ಪರಬ್ರಹ್ಮಾವಸ್ಥೆಯನ್ನು ಮೀರಿ / ತೊರೆದು, ಎಲ್ಲೆಲ್ಲೂ ತೋರುತ್ತಿರುವ ಜಗತ್ತಿನ ಅವಸ್ಥೆಯನ್ನು ಹೊಂದುತ್ತಾನೋ) ತಸ್ಮಾತ್ ಪ್ರಾಣಿನಾಂ ಕರ್ಮಫಲಭೋಗಾಯ ಜಗತ್-ಅವಸ್ಥಾ-ಸ್ವೀಕಾರಾತ್ ನ ಇದಂ ತಸ್ಯ ವಸ್ತುತ್ವಮ್ ಇತಿ ಅರ್ಥಃ (ಅದರಿಂದಾಗಿ, ಪ್ರಾಣವಂತರ ಕರ್ಮಫಲಭೋಗಕ್ಕಾಗಿ ಜಗತ್ತಿನ ಸ್ಥಿತಿಯನ್ನು ಸ್ವೀಕರಿಸಿರುವುದರಿಂದಾಗಿ, ಇದು / ಈ ಜಗತ್ತು ಆತನ ವಸ್ತುಸ್ಥಿತಿ / ಮೂಲರೂಪವಲ್ಲ ಎಂದರ್ಥ.)   || ೨ ||


ಸಾಯಣಕೃತ-ಶುಕ್ಲಯಜುರ್ವೇದಭಾಷ್ಯದಿಂದ—


ಪುರುಷ ಏವೇದಗ್ँ ಸರ್ವँಯ್ಯದ್ ಭೂತँಯ್ಯಚ್ಚ ಭಾವ್ಯಮ್ |

ಉತಾಮೃತತ್ವಸ್ಯೇಶಾನೋ ಯದನ್ನೇನಾತಿರೋಹತಿ || ೨ ||


(ಸಾಯಣಕೃತ-ಋಗ್ಭಾಷ್ಯದಂತೆಯೇ)


ಉವಟಕೃತ-ಶುಕ್ಲಯಜುರ್ವೇದಭಾಷ್ಯದಿಂದ—


ಸ ಏವ ಪುರುಷಃ ಪೂರ್ವ-ಪರ್ಯಾಯ-ವಿಶೇಷಿತಃ, ಏವ ಶಬ್ದೋ ನ ಅನ್ಯಃ | ( ಅದೇ ಪುರುಷನು, ಹಿಂದಿನ ಮಂತ್ರದಲ್ಲಿ "ಸಹಸ್ರಶೀರ್ಷಾ ಪುರುಷಃ | ಸಹಸ್ರಾಕ್ಷಸ್ಸಹಸ್ರಪಾತ್ |" ಎಂದು ವಿಶೇಷವಾಗಿ ವರ್ಣಿಸಲ್ಪಟ್ಟವನೇ ಹೊರತು ಬೇರೆಯಲ್ಲವೆಂಬುದರ ದ್ಯೋತಕ "ಏವ" ಶಬ್ದ.) ಇದಂ ವರ್ತಮಾನಕಂ ಸರ್ವಂ ಯತ್ ಚ ಭೂತಮ್ ಅತೀತಂ ಯತ್ ಚ ಭಾವ್ಯಂ ಭವಿಷ್ಯತ್, ತಸ್ಯ ಕಾಲ-ತ್ರಯಸ್ಯ ಈಶಾನಃ | (ಆತನೇ ಈ ವರ್ತಮಾನ, ಭೂತ ಹಾಗೂ ಭವಿಷ್ಯತ್ ಎಂಬ ಮೂರೂ ಕಾಲಗಳ ಎಲ್ಲದರ ಒಡೆಯನು.) ನ ಕೇವಲಂ ಕಾಲತ್ರಯಸ್ಯ ಈಶಾನಃ | (ಕೇವಲ ಈ ಕಾಲತ್ರಯದ ಅಧಿಪತಿ ಮಾತ್ರವಲ್ಲ.) ಉತ ಅಮೃತತ್ವಸ್ಯ ಅಪಿ, ಮೋಕ್ಷಸ್ಯ ಅಪಿ | (ಅಮೃತತ್ವಕ್ಕೂ ಒಡೆಯನು.) ಉತಶಬ್ದೋ ಅಪಿಶಬ್ದಾರ್ಥೇ | (ಉತ-ಶಬ್ದವು ಸಹ, ಕೂಡ ಎಂಬರ್ಥದ 'ಅಪಿ'ಶಬ್ದದ ಅರ್ಥದಲ್ಲಿದೆ.) ಕಸ್ಮಾತ್ ಕಾರಣಾತ್ | (ಯಾವ ಕಾರಣದಿಂದಾಗಿ?) ಯತ್ ಅನ್ನೇನ ಅಮೃತೇನ ಅತಿರೋಹತಿ ಅತಿರೋಧಂ ಕರೋತಿ | ಸರ್ವಸ್ಯ ಈಶ್ವರಃ, ಇತಿ (ಯಾವ ಆತನ ಅಮೃತಸ್ವರೂಪದಿಂದಾಗಿ ಎಲ್ಲರ ನಿಯಾಮಕನಾದ ಪರಮೇಶ್ವರನಾಗಿರುವನು ಎಂಬುದರಿಂದಾಗಿ.) || ೨ ||


ಮಹೀಧರಕೃತ-ಶುಕ್ಲಯಜುರ್ವೇದಭಾಷ್ಯದಿಂದ—


ಯತ್ ಇದಂ ವರ್ತಮಾನಂ ಜಗತ್, ತತ್ ಸರ್ವಂ ಪುರುಷಃ, ಏವ | ಯತ್, ಭೂತಮ್ ಅತೀತಂ ಜಗತ್, ಯತ್ ಚ ಭಾವ್ಯಂ ಭವಿಷ್ಯಂ ಜಗತ್ ತದ್ ಅಪಿ ಪುರುಷ ಏವ | 


ಯಥಾ ಅಸ್ಮಿನ್ ಕಲ್ಪೇ ವರ್ತಮಾನಾಃ…. ….ಪ್ರಾಣಿನಾಂ ಕರ್ಮಫಲಭೋಗಾಯ ಜಗದವಸ್ಥಾ-ಸ್ವೀಕಾರಾತ್, ನ ಇದಂ ತಸ್ಯ ವಸ್ತುತ್ವಮ್ ಇತಿ ಅರ್ಥಃ |

(—ಮೇಲಿನ ಸಾಯಣಭಾಷ್ಯದಂತೆಯೇ)


 ಯದ್ ವಾ, ಸರ್ವಂ ಪುರುಷಃ ಚೇತ್ ತರ್ಹಿ ಪರಿಣಾಮಿ ಇತಿ ಆಶಙ್ಕ್ಯ ಆಹ | (ಅಥ ವಾ, ಎಲ್ಲವೂ ಪುರುಷನೇ ಆದರೆ ಆತನು ಕಾರಮಸ್ವರೂಪನಲ್ಲವೆ? ಪರಿಣಾಮಸ್ವರೂಪನೆ? ಎಂದು ಸಂದೇಹಿಸಿ, ಹೇಳುತ್ತಾನೆ.) ಅಮೃತತ್ವಸ್ಯ ಅಮರಣಧರ್ಮಸ್ಯ ಈಶಾನಃ, ಮುಕ್ತೇಃ ಈಶಃ | (ಅಮೃತತ್ವದ, ಮರಣವಿಲ್ಲದಿರುವ ಗುಣಧರ್ಮದ ಒಡೆಯನು, ಮುಕ್ತಿಯ ಅಧಿಪತಿಯು.) ಯಃ, ಹಿ ಮೋಕ್ಷೇಶ್ವರಃ, ನ ಅಸೌ ಮ್ರಿಯತೇ, ಇತ್ಯರ್ಥಃ | (ಯಾವನಾದರೋ ಮೋಕ್ಷಾಧಿಪನೋ, ಆತನು ಮರಣಹೊಂದುವುದಿಲ್ಲವೆಂದರ್ಥ.) ಕಿಂ ಚ ಯತ್ ಜೀವಜಾತಮ್ ಅನ್ನೇನ ಅತಿರೋಹತಿ ಉತ್ಪದ್ಯತೇ ತಸ್ಯ ಸರ್ವಸ್ಯ ಚ ಈಶಾನಃ (ಹಾಗೆಯೇ, ಯಾವ ಜೀವಸಮೂಹವು ಅನ್ನಾಹಾರಾದಿಗಳಿಂದ ಉತ್ಪಾದಿಸಲ್ಪಡುತ್ತವೆಯೋ ಅವೆಲ್ಲದರ ಈಶ್ವರನು), ಬ್ರಹ್ಮಾದಿ-ಸ್ತಂಬಪರ್ಯನ್ತಃ ಭೂತಗ್ರಾಮಃ, ಉಕ್ತಃ, ತಸ್ಯ ಅನ್ನೇನ ಏವ ಸ್ಥಿತೇಃ "ಇತಃ ಪ್ರದಾನಾತ್ ಹಿ ದೇವಾಃ, ಉಪಜೀವನ್ತಿ" ಇತಿ ಶ್ರುತೇಃ (ಲೋಕಪಿತಾಮಹನೆನಿಸಿದ ಚತುರ್ಮುಖ ಬ್ರಹ್ಮನಿಂದ ಹಿಡಿದು ಬರಿಯ ಜಡವೆನಿಸಿದ ಕಲ್ಲುಗಂಬದ ವರೆಗಿನ ಚರಾಚರಸಮೂಹವು ಆ ಪರಮಾತ್ಮನ ಅನ್ನಪ್ರದಾನದಿಂದಲೇ ಜೀವಿಸುತ್ತಿವೆಯೆಂಬ ವೇದವಾಕ್ಯದ ಪ್ರಮಾಣದಿಂದಾಗಿ.)   || ೨ ||


ಸಾಯಣಕೃತ-ತೈತ್ತಿರೀಯಕೃಷ್ಣಯಜುರ್ವೇದಭಾಷ್ಯದಿಂದ—


ಪುರುಷ ಏವೇದँ ಸರ್ವಮ್ |

ಯದ್ಭೂತಂ ಯಚ್ಚ ಭವ್ಯಮ್ |

ಉತಾಮೃತತ್ವಸ್ಯೇಶಾನಃ |

ಯದನ್ನೇನಾತಿರೋಹತಿ || ೨ ||


(ಮೇಲಿನ ಸಾಯಣಋಗ್ಭಾಷ್ಯ, ಶುಕ್ಲಯಜುರ್ವೇದಭಾಷ್ಯಗಳಂತೆಯೇ ಇದೆ)



Comments

Popular posts from this blog

ಲಘುನ್ಯಾಸದ ಬೆಳಕಿನಲ್ಲಿ ಶಿವದರ್ಶನ ೧೩—ಲಘುನ್ಯಾಸಮನ್ತ್ರಾರ್ಥವಿಚಾರ ೮

ಲಘುನ್ಯಾಸದ ಬೆಳಕಿನಲ್ಲಿ ಶಿವದರ್ಶನ ೯—ಲಘುನ್ಯಾಸಮಂತ್ರಾರ್ಥವಿಚಾರ ೪

ತೈತ್ತಿರೀಯಕೃಷ್ಣಯಜುಸ್ಸಂಹಿತಾಭಾಷ್ಯಾರ್ಥಸಮುಚ್ಚಯಃ ೧.೧.೪