ಲಘುನ್ಯಾಸದ ಬೆಳಕಿನಲ್ಲಿ ಶಿವದರ್ಶನ ೧೧—ಲಘುನ್ಯಾಸಮಂತ್ರಾರ್ಥವಿಚಾರ ೬

 

ಲಘುನ್ಯಾಸಭಾಷ್ಯಮ್ ೬


೫೬) ರುದ್ರಾಭಿಷೇಕಕ್ಕೆ ಮೊದಲು ಮಾಡುವ ಸಿದ್ಧತೆಯೇನು?

ಅಥಾತೋ ರುದ್ರಸ್ನಾನಾರ್ಚನಾಭಿಷೇಕವಿಧಿಂ ವ್ಯಾಖ್ಯಾಸ್ಯಾಮಃ ||


ಇನ್ನುಮುಂದೆ, ರುದ್ರ / ಶಿವನ ಸ್ನಾನ / ಅಭಿಷೇಕಪೂರ್ವಕವಾದ ಅರ್ಚನೆ (ಅರ್ಚ ಪೂಜಾಯಾಂ ಧಾತುಃ) / ಪೂಜೆಯ ವಿಧಿಯನ್ನು ವ್ಯಾಖ್ಯಾನಿಸುವೆವು. 


ಆದಿತ (ಉದಿತ) ಏವ ತೀರ್ಥೇ ಸ್ನಾತ್ವೋದೇತ್ಯ ಶುಚಿಃ ಪ್ರಯತೋ ಬ್ರಹ್ಮಚಾರೀ ಶುಕ್ಲವಾಸಾಸ್ತಸ್ಯ (ಈಶಾನಸ್ಯ) ಪ್ರತಿಕೃತಿಂ ಕೃತ್ವಾ, ತಸ್ಯ ದಕ್ಷಿಣಾಪ್ರತ್ಯಗ್ದೇಶೇ ತನ್ಮುಖಂ ಸ್ಥಿತ್ವಾऽऽತ್ಮನಿ ದೇವತಾಃ ಸ್ಥಾಪಯೇತ್ ||


(ಆದಿತಃ / ಉದಿತಃ ಏವ) ಮೊದಲಲ್ಲೇ / ಸೂರ್ಯೋದಯವಾದಾಗಲೇ, (ತೀರ್ಥೇ ಸ್ನಾತ್ವಾ ಉತ್ + ಏತ್ಯ) ಹರಿಯುವ ನೀರಿನಲ್ಲಿ (ನದೀ-ತೊರೆಗಳಲ್ಲಿ) ಮಿಂದೆದ್ದು / ಸ್ನಾನ ಮಾಡಿ ಅದರಿಂದ ಮೇಲೆ ಬಂದು, (ಶುಚಿಃ) ಶುಚಿರ್ಭೂತನಾಗಿ, ಬಹಿರಂಗ ಶುದ್ಧಿಯನ್ನು ಹೊಂದಿ, (ಪ್ರಯತಃ) ಬಳಿಕ, ಇಂದ್ರಿಯಗಳನ್ನೂ, ಮನಸ್ಸನ್ನೂ ಚೆನ್ನಾಗಿ (ಪ್ರ) ಬಿಗಿಹಿಡಿದವನಾಗಿ (ಯತಃ) ಅಂತರಂಗಶುದ್ಧಿಯನ್ನೂ ಹೊಂದಿ, (ಬ್ರಹ್ಮಚಾರೀ) ಬ್ರಹ್ಮಚಾರೀವ್ರತದಲ್ಲಿದ್ದು / ಪರಬ್ರಹ್ಮತತ್ತ್ವವನ್ನು ತಿಳಿಯುವ ಸಾಧನೆಯನ್ನು ನಿತ್ಯವ್ರತಾನುಷ್ಠಾನದಂತೆ ಆಚರಿಸುವುದರಿಂದ ಬ್ರಹ್ಮಚಾರಿಯೆನಿಸಿದವನಾಗಿ, (ಶುಕ್ಲವಾಸಾಃ) ಶ್ವೇತವಸನ / ಶುಭ್ರವಾದ ಅಚ್ಚ ಬಿಳಿಯ ಬಣ್ಣದ ಬಟ್ಟೆಯನ್ನುಟ್ಟವನಾಗಿ, (ತಸ್ಯ / ಈಶಾನಸ್ಯ) ಪರಮೇಶ್ವರನ / ಶಿವನ, (ಪ್ರತಿಕೃತಿಂ ಕೃತ್ವಾ)  ಪ್ರತೀಕ (ಶಿವಲಿಂಗ)ರೂಪಿ ಪ್ರತಿಮೆಯನ್ನು ಮಾಡಿ , (ತಸ್ಯ ದಕ್ಷಿಣಾಪ್ರತ್ಯಕ್- ದೇಶೇ) ಅದರ ದಕ್ಷಿಣ ಹಾಗೂ ಪಶ್ಚಿಮಕ್ಕೆ / ಅವುಗಳ ನಡುವಿನ ನೈರುತ್ಯದಿಕ್ಕಿನಲ್ಲಿ, (ತನ್ಮುಖಂ ಸ್ಥಿತ್ವಾ) ಅದರತ್ತ / ಅವನೆಡೆಗೆ ಮುಖಮಾಡಿ / ಪೂರ್ವಕ್ಕೆ / ಉತ್ತರಕ್ಕೆ / ಪೂರ್ವೋತ್ತರವೆನಿಸಿದ ಈಶಾನ್ಯದಿಕ್ಕಿಗೆ ಎದುರಾಗಿ ಕುಳಿತು, (ಆತ್ಮನಿ ದೇವತಾಃ ಸ್ಥಾಪಯೇತ್) ತನ್ನಲ್ಲೇ / ತನ್ನ ದೇಹದಲ್ಲೇ / ದೇಹದ ಅಂಗಪ್ರತ್ಯಂಗಗಳಲ್ಲೂ / ಅಂಗಾಂಗಗಳಲ್ಲೂ / ಅಂಗೋಪಾಂಗಗಳಲ್ಲೂ ಆಯಾಯ ದೇವತೆಗಳನ್ನು  ಪ್ರತಿಷ್ಠಾಪಿಸಿದಂತೆ ಕಲ್ಪಿಸಬೇಕು.


೫೭) ನಮ್ಮ ಯಾವ ಯಾವ ಅಂಗಗಳಲ್ಲಿ ಯಾವ ಯಾವ ದೈವೀರೂಪವನ್ನು (ದೇಹಾಭಿಮಾನಿ ದೇವತೆಗಳನ್ನು) ಕಲ್ಪಿಸಬೇಕು? ಅವುಗಳಿಗೆ ವೈಜ್ಞಾನಿಕ ಅರ್ಥವಿದೆಯೇ?


ಓಮ್ || ಪ್ರಜನನೇ ಬ್ರಹ್ಮಾ ತಿಷ್ಠತು | ಪಾದಯೋರ್ವಿಷ್ಣುಸ್ತಿಷ್ಠತು | ಹಸ್ತಯೋರ್ಹರಸ್ತಿಷ್ಠತು | ಬಾಹ್ವೋರಿಂದ್ರಸ್ತಿಷ್ಠತು | ಜಠರೇऽಗ್ನಿಸ್ತಿಷ್ಠತು | ಉದರೇ ಪೃಥಿವೀ ತಿಷ್ಠತು | ಹೃದಯೇ ಶಿವಸ್ತಿಷ್ಠತು | ಕಂಠೇ ವಸವಸ್ತಿಷ್ಠಂತು | 


(ನಮ್ಮ) ಪ್ರ-ಜನನೇಂದ್ರಿಯದಲ್ಲಿ (ಸೃಷ್ಟಿಕರ್ತ) ಬ್ರಹ್ಮನು ನೆಲೆಸಲಿ. (ಬಲಿಯ ದಾನವ ಬೇಡಿ, ಕ್ಷೋಣಿಯ ತ್ರಿಪಾದಗೈದು, ತ್ರಿವಿಕ್ರಮನೆನಿಸಿದ) ವಿಷ್ಣುವು ಎರಡು ಪಾದಗಳಲ್ಲಿ ನೆಲೆಸಲಿ. (ನಮ್ಮ ಕೈಗಳಿಂದ ಸತ್ಕರ್ಮಗಳನ್ನೇ ಮಾಡಿಸಲು) ಎರಡೂ ಹಸ್ತ / ಕರ / ಅಂಗೈಗಳಲ್ಲಿ ಹರನು ನೆಲೆಸಲಿ. (ಯಜ್ಞ-ಧರ್ಮ-ಕರ್ಮಾನುಷ್ಠಾನಕ್ಕೆ ಬೇಕಾದ ಬಾಹುಬಲ-ಸಾಮರ್ಥ್ಯಗಳನ್ನು ನೀಡುತ್ತಾ) ಎರಡು ಬಾಹು / ತೋಳುಗಳಲ್ಲಿ ದೇವೇಂದ್ರನು ಇರಲಿ. ಜಠರದಲ್ಲಿ (ತಿಂದ ಆಹಾರವನ್ನು ಸರಿಯಾಗಿ ಪಚನಗೊಳಿಸಲು ಜಾಠರಾಗ್ನಿ / ಜಠರಾಗ್ನಿಯ ರೂಪದಲ್ಲಿ) ಅಗ್ನಿದೇವನು ನೆಲೆಸಲಿ. ಹೊಟ್ಟೆಯಲ್ಲಿ / ಉದರಭಾಗದಲ್ಲಿ (ಸಕಲ ಜೀವರಿಗೆ ನಿಲ್ಲಲು, ಬದುಕಲು ಭೂಮಿಯು ಭದ್ರನೆಲೆಯಾಗಿರುವಂತೆಯೇ, ನಮ್ಮ ದೇಹಪೋಷಣೆ, ಸ್ಥಿರತೆಗಳಿಗೆ ಆಧಾರಭೂತವಾಗಿ) ಪೃಥಿವೀತತ್ತ್ವ / ಭೂದೇವಿಯು ನೆಲೆನಿಲ್ಲಲಿ. ಹೃದಯದಲ್ಲಿ (ಸಕಲರಿಗೂ ಶುಭವನ್ನೇ ಆಶಿಸುವ, ಉಂಟುಮಾಡುವ, ಶುಭಮಯರೂಪನೇ ಆದ) ಶಿವನು (ಶಿವ = ಶುಭ, ಮಂಗಳ) ನೆಲೆಯಾಗಿರಲಿ. ಕಂಠ / ಕೊರಳು / ಕುತ್ತಿಗೆ ಯಲ್ಲಿ (ಮುತ್ತಿನಂಥ ಮಾತುಗಳನ್ನಾಡಿಸಲು, ಮಧುರವಾದ ಸ್ವರಸಂಪದವನ್ನೀಯಲು, ಶ್ರೇಷ್ಠವೂ, ಶರೀರನಿಯಂತ್ರಕವೂ, ಪ್ರಧಾನಭಾಗವೂ, ಜೀವಾಧಾರವೂ ಆದ ಶಿರವನ್ನು ಸುರಕ್ಷಿತವಾಗಿ ಎತ್ತಿಹಿಡಿಯಲು  ಸಕಲ ಸಂಪದ್ರೂಪರಾದ ಅಷ್ಟ / ೮) ವಸುಗಳೆಂಬ ದೇವತೆಗಳು ಸ್ಥಿರವಾಗಿರಲಿ. 


ವಕ್ತ್ರೇ ಸರಸ್ವತೀ ತಿಷ್ಠತು | ನಾಸಿಕಯೋರ್ವಾಯುಸ್ತಿಷ್ಠತು | ನಯನಯೋಶ್ಚಂದ್ರಾದಿತ್ಯೌ ತಿಷ್ಠೇತಾಮ್ | ಕರ್ಣಯೋರಶ್ವಿನೌ ತಿಷ್ಠೇತಾಮ್ | ಲಲಾಟೇ ರುದ್ರಾಸ್ತಿಷ್ಠಂತು | ಮೂರ್ಧ್ನ್ಯಾದಿತ್ಯಾಸ್ತಿಷ್ಠಂತು | ಶಿರಸಿ ಮಹಾದೇವಸ್ತಿಷ್ಠತು | ಶಿಖಾಯಾಂ ವಾಮದೇವಸ್ತಿಷ್ಠತು ( / ವಾಸುದೇವಸ್ತಿಷ್ಠತು) | 


ಮುಖದಲ್ಲಿ (‘ವಿದ್ಯೆಯುಳ್ಳವನ ಮುಖವು ಮುದ್ದಬರುವಂತಿಕ್ಕು’ ಎಂದು ಸರ್ವಜ್ಞನೆಂದಂತೆ, ಸದ್ವಿದ್ಯೆಯನ್ನು ಅನುಗ್ರಹಿಸಿ ಮುಖದ ಲಕ್ಷಣವನ್ನು ತೇಜೋಭರಿತವಾಗಿ ನೂರ್ಮಡಿಗೊಳಿಸಿ ಬ್ರಹ್ಮನ ರಾಣಿಯೂ, ವಿದ್ಯಾಧಿದೇವತೆಯೂ ಆದ ಶಾರದೆಯು /)ಸರಸ್ವತಿಯು ವಿರಾಜಮಾನವಾಗಲಿ. ಅಥವಾ, ವಾಗ್ದೇವಿಯೆನಿಸಿದ ಶಾರದಾಂಬೆಯು ಬಾಯಲ್ಲಿ ನೆಲೆಸಿ ಮಾತಿನಲ್ಲಿ ತಪ್ಪುಗಳಾಗದಂತೆ ವಾಕ್-ಶುದ್ಧಿಯನ್ನೀಯಲಿ. ನಾಸಿಕ / ಮೂಗಿನ ಹೊಳ್ಳೆಗಳಲ್ಲಿ ಪ್ರಾಣವಾಯುವು ಸದಾ ನೆಲೆನಿಂತು, ನಮಗೆ ಉಸಿರಾಗಿ ನಮ್ಮನ್ನು ರಕ್ಷಿಸಲಿ. ಕಣ್ಣು / ನಯನ / ನೇತ್ರ / ಚಕ್ಷುಗಳಲ್ಲಿ ಎಡಗಣ್ಣಿನಲ್ಲಿ ಸಜ್ಜನರನ್ನು ಸ್ನೇಹಪೂರಿತ ಹಾಗೂ ದೀನರನ್ನು ದಯಾಮಯ ದೃಷ್ಟಿಯಿಂದ ಕಾಣಲು ಸೌಮ್ಯಭಾವಯುತ, ಶೀತಲ ಕಿರಣಯುಕ್ತ ಚಂದ್ರನೂ, ಬಲಗಣ್ಣಿನಲ್ಲಿ ದುಷ್ಟನಾಶಕರ, ಕ್ರಿಮಿಹರ ತೀಕ್ಷ್ಣ ಕಿರಣಗಳ ಸೂರ್ಯ / ಆದಿತ್ಯನೂ, ಹೀಗೆ ಇವೆರಡೂ ಭಾವಗಳಿರುವಂತೆ, ಚಂದ್ರಸೂರ್ಯರು ನೆಲೆಯಾಗಲಿ. ಕರ್ಣ / ಕಿವಿಗಳಲ್ಲಿ (ಪೂರ್ವಾಪರಕಾಲಜ್ಞಾನವನ್ನು ತಿಳಿಯಬಲ್ಲ, ದೇವವೈದ್ಯರುಗಳಾದ) ಅಶ್ವಿನೀದೇವತೆಗಳು ನೆಲೆನಿಲ್ಲಲಿ (ನೆಲೆನಿಂತು ನಮಗೆ ರೋಗಚಿಕಿತ್ಸೆಯನ್ನೂ, ರೋಗತಡೆಯನ್ನೂ, ತ್ರಿಕಾಲಜ್ಞಾನವನ್ನೂ, ಸಮಗ್ರ ಶ್ರುತಿಸಾರವನ್ನೂ ಅನುಗ್ರಹಿಸಲಿ.). ಲಲಾಟ / ಹಣೆಯಲ್ಲಿ ಏಕಾದಶರುದ್ರರು ನೆಲೆಯಾಗಿ ನಮ್ಮ ಮಸ್ತಕವನ್ನು ಶತ್ರುಗಳಿಂದ ರಕ್ಷಿಸಲಿ. ತಲೆಯ ನೆತ್ತಿಯಲ್ಲಿ / ಮೂರ್ಧಾಭಾಗದಲ್ಲಿ ಸಮಗ್ರಜ್ಞಾನಜ್ಯೋತಿಸ್ವರೂಪರಾದ ದ್ವಾದಶಾದಿತ್ಯರು ನೆಲೆಸಿ, ನಮಗೆ ಆತ್ಮಜ್ಞಾನ / ಬ್ರಹ್ಮಜ್ಞಾನ / ಪಾರಮಾರ್ಥಿಕಜ್ಞಾನ ಹಾಗೂ ಲೌಕಿಕ / ವ್ಯಾವಹಾರಿಕ ಜ್ಞಾನವನ್ನೂ, ನಮ್ಮ ಧೀಪ್ರಚೋದನೆಯನ್ನೂ ಉಂಟುಮಾಡಲಿ. ಶರೀರದ ಉನ್ನತ ಭಾಗವಾದ ಶಿರದಲ್ಲಿ, ದೇವತೆಗಳಲ್ಲಿ ದೊಡ್ಡವನೆನಿಸಿದ ಮಹಾ-ದೇವನು ನೆಲೆಸಲಿ. ಶ್ರುತಿಯ ಸ್ವಾಧ್ಯಾಯಾದಿಗಳ ಪ್ರತೀಕವಾದ ಶಿಖಾ / ಜುಟ್ಟಿನ ಭಾಗದಲ್ಲಿ ಮಂತ್ರದೃಷ್ಟಾರನಾದ ವಾಮದೇವ ಋಷಿರೂಪನಾದ ಶಿವನು ನೆಲೆಸಲಿ. (ಅಥವಾ, ಭಗವಂತನಾದ, ಸಕಲ ಚರಾಚರಗಳಲ್ಲೂ ವಾಸವಾಗಿರುವ ವಾಸುದೇವನು ಶಿರದ ಪ್ರಧಾನಭಾಗವೂ, ಉಸಿರಾಟ ಹಾಗೂ ಹೃದಯ ನಿಯಂತ್ರಕ ಕೇಂದ್ರಗಳೂ ಇರುವ ಮೆದುಳಿನಭಾಗದ ಹೊರಮೈಯಾದ ಶಿಖೆ / ಜುಟ್ಟಿರುವ ಸ್ಥಳದಲ್ಲಿದ್ದು ನಮ್ಮನ್ನು ಕಾಪಾಡಲಿ.)


ಪೃಷ್ಠೇ ಪಿನಾಕೀ ತಿಷ್ಠತು | ಪುರತಃ ಶೂಲೀ (ಶೂಲಿನೀ) ತಿಷ್ಠತು | ಪಾರ್ಶ್ವಯೋಃ ಶಿವಾಶಂಕರೌ ತಿಷ್ಠೇತಾಮ್ | ಸರ್ವತೋ ವಾಯುಸ್ತಿಷ್ಠತು | ತತೋ ಬಹಿಃ ಸರ್ವತೋऽಗ್ನಿರ್ಜ್ವಾಲಾಮಾಲಾ-ಪರಿವೃತಸ್ತಿಷ್ಠತು | ಸರ್ವೇಷ್ವಂಗೇಷು ( /ಸರ್ವಾಂಗೇಷು) ಸರ್ವಾ ದೇವತಾ ಯಥಾ ಯಥಾ ಸ್ಥಾನಾನಿ ತಿಷ್ಠಂತು ||

ಮಾಂ ರಕ್ಷಂತು | ಯಜಮಾನಂ ರಕ್ಷಂತು ||


ಬೆನ್ನಿನ ಹಿಂಭಾಗದಲ್ಲಿ ಪಿನಾಕವೆಂಬ ಧನುಸ್ಸನ್ನು ಹಿಡಿದ ಭಗವಾನ್ ರುದ್ರನು ನೆಲೆಸಿ, ನಮ್ಮನ್ನು ಹಿಂಭಾಗದಿಂದ ನಮಗರಿವಿಲ್ಲದೇ ಬರುವ ಉಪಟಳಗಳಿಂದ ರಕ್ಷಿಸಲಿ. ನಮ್ಮ ಮುಂಭಾಗದಲ್ಲಿ ಶೂಲಾಯುಧಧಾರಿಯಾದ ರುದ್ರನು (ರುದ್ರಾಣಿಯು) ನಿಂತಿದ್ದು, ರುದ್ರಾಭಿಷೇಕಪೂರ್ವಕ ಅರ್ಚನೆ ಮಾಡುತ್ತಿರುವ ನಮ್ಮನ್ನು ರಕ್ಷಿಸಲಿ. ನಮ್ಮ ಎಡಬಲಮಗ್ಗುಲುಗಳಲ್ಲಿ ಶಿವೆಯೂ ಶಂಕರನೂ ನಿಂತು ರಕ್ಷಿಸಲಿ. ನಮ್ಮ ಸುತ್ತಮುತ್ತ ಎಲ್ಲೆಡೆಯಲ್ಲೂ ವಾಯುದೇವನು ಇದ್ದು, ವಾಯುಸಂಚಾರವು ಚೆನ್ನಾಗಿದ್ದು, ನಮಗೆ ತಂಪಾದ ಮಂದಮಾರುತ (ಬಿರುಗಾಳಿ ಅಲ್ಲ) ಹಾಗೂ ಶುದ್ಧವಾದ ಉಸಿರಾಟವಾಯುವಿನ ವಾತಾವರಣ ಸಿಗಲಿ. ಅದಕ್ಕಿಂತ ಹೊರವಲಯದಲ್ಲಿ, ಜಾಜ್ವಾಲ್ಯಮಾನವಾಗಿ ಉರಿಯುತ್ತಿರುವ ಅಗ್ನಿಕವಚವು ನಮ್ಮನ್ನು ಸುತ್ತಲೂ ರಕ್ಷಿಸಲಿ. ಹೀಗೆ, ನಮ್ಮ ದೇಹದ ಎಲ್ಲಾ ಅಂಗಗಳಲ್ಲೂ ಸಕಲ ದೇವತೆಗಳೂ, ತಮ್ಮ ತಮ್ಮ ನಿಗದಿತ ಸ್ಥಾನಗಳಲ್ಲಿ ನೆಲೆಸಿದ್ದು, ನಮ್ಮನ್ನು ಕಾಪಾಡಲಿ. ನನ್ನನ್ನು (ಪುರೋಹಿತನನ್ನು) ರಕ್ಷಿಸಲಿ. ಮನೆಯ ಯಜಮಾನನ್ನು, ರುದ್ರಾರ್ಚನೆ ಮಾಡಿಸುತ್ತಿರುವ ಕರ್ತೃವನ್ನು ರಕ್ಷಿಸಲಿ.


೫೮) ಅಗ್ನಿಯು ನಮ್ಮ ಮಾತಿನಲ್ಲಿ ನೆಲೆಸಲಿ ಎಂಬುದರ ಅಂತರಾರ್ಥವೇನು?

ಓಂ ಅಗ್ನಿರ್ಮೇ ವಾಚಿ ಶ್ರಿತಃ | ವಾಗ್ಘೃದಯೇ | ಹೃದಯಂ ಮಯಿ | ಅಹಮಮೃತೇ | ಅಮೃತಂ ಬ್ರಹ್ಮಣಿ || ೧ ||


(ಮೇ— ಮಮ) ನನ್ನ, (ವಾಚಿ) ಮಾತಿನಲ್ಲಿ, (ಅಗ್ನಿಃ) ಅಗ್ನಿದೇವನು / ಮೆದುಳಿನಿಂದ ಬರುವ ವಿದ್ಯುತ್ಕಾಂತೀಯ ತರಂಗಗಳ ರೂಪವಾದ ಪ್ರೇರಕ ಸಂದೇಶಗಳು(action potentials generated from the motor cortex of the brain) ಎಂಬ ಅಗ್ನಿ / ವಿದ್ಯುತ್ ರೂಪವು, (ಶ್ರಿತಃ) ನೆಲೆಸಿದೆ. ನನ್ನ ಮಾತು ಅಗ್ನಿದೇವನನ್ನು ಆಶ್ರಯಿಸಿದೆ. ಅಗ್ನಿಯಿಲ್ಲದೆ ಮೆದುಳಿನ ಸಂದೇಶಗಳಿಲ್ಲ. ಅದಿಲ್ಲದೆ ಮಾತೂ ಇರದು. (ವಾಕ್) ಅಂತಹ ನನ್ನ ವೈಖರೀರೂಪವಾದ, ಬಹಿರಂಗದಲ್ಲಿ ಶ್ರಾವ್ಯವಾದ (ಕೇಳಿಸುವ) ಮಾತು, (ಹೃದಯೇ) ನನ್ನ ಹೃದಯ / ಮನಸ್ಸಿನಲ್ಲಿ ಮೊದಲು ಪರಾ-ಪಶ್ಯಂತೀ-ಮಧ್ಯಮಾ ರೂಪವಾಗಿ ಅಶ್ರಾವ್ಯರೂಪದಲ್ಲಿ (ಕೇಳಿಸದ) ಅನುಕ್ರಮವಾಗಿ ಯೋಚನಾತರಂಗಗಳ ರೂಪದಲ್ಲಿ ಅಂತರಂಗದಲ್ಲಿ ಉತ್ಪತ್ತಿಯಾಗಿ, ಬಳಿಕ ಬಹಿರ್ಮುಖವಾಗುತ್ತದೆ. (ಹೃದಯಂ) ವಾಕ್ಕು / ಮಾತಿನ ಮೂಲವಾದ ನನ್ನ ಹೃದಯ / ಮನಸ್ಸು, (ಮಯಿ) ನನ್ನಲ್ಲೇ, ನನ್ನ ಬುದ್ಧಿಯ ಹಿಡಿತದಲ್ಲೇ ಇದೆ. (ಅಹಮ್) ನಾನು, (ಅಮೃತೇ) ಎಂದೆಂದಿಗೂ ಮೃತವಾಗದ, ಮರಣವಿಲ್ಲದ ಆತ್ಮರೂಪಿಯಾಗಿರುವೆ ಎಂಬ ಭಾವದಲ್ಲೇ / ಆತ್ಮಭಾವದಲ್ಲೇ (ದೇಹಭಾವವಲ್ಲ) ನೆಲೆಸಿರುವೆ ಅಥವಾ ಸದಾ, ಸರ್ವಕಾರ್ಯಗಳಲ್ಲೂ ಆತ್ಮ / ಪರಮಾತ್ಮ / ಬ್ರಹ್ಮಧ್ಯಾನದಲ್ಲೇ ಇರುವೆ. (ಅಮೃತಂ) ಹೀಗಾಗಿ, ಅಮೃತತ್ವವೆಂದರೆ (ಬ್ರಹ್ಮಣಿ) ಬ್ರಹ್ಮದಲ್ಲೇ ಇರುವಿಕೆಯು. ತಾನು ಬರಿಯ ಸ್ತ್ರೀಪುರುಷರಿಂದಾದ ಶೋಣಿತ-ಶುಕ್ಲಸಂಯೋಗಜನಿತವಾದ ಪಂಚಭೂತಾತ್ಮಕ ಶರೀರವಲ್ಲ; ಪರಬ್ರಹ್ಮತತ್ತ್ವವೇ ತಾನೆಂಬ ಅರಿವಿನಿಂದಿರುತ್ತಾ ಕರ್ತವ್ಯಕರ್ಮಗಳನ್ನು ನಿಷ್ಕಾಮಭಾವದಿಂದಾಚರಿಸುವಿಕೆಯೇ ಆ ಪರಬ್ರಹ್ಮವೆಂಬ ಅಮೃತತ್ತ್ವದಲ್ಲಿ ನೆಲೆಯಾಗಿರುವಿಕೆ / ಸಂಸಾರಬಂಧಮೋಕ್ಷ / ಜೀವನ್ಮುಕ್ತತೆಯು.


೫೯) ವಾಯುದೇವನು ನಮ್ಮ ಪ್ರಾಣದಲ್ಲಿರುವನೆಂದರೇನು?

 ವಾಯುರ್ಮೇ ಪ್ರಾಣೇ ಶ್ರಿತಃ | ಪ್ರಾಣೋ ಹೃದಯೇ | ಹೃದಯಂ ಮಯಿ | ಅಹಮಮೃತೇ | ಅಮೃತಂ ಬ್ರಹ್ಮಣಿ || ೨ ||


(ಮೇ— ಮಮ) ನನ್ನ, (ಪ್ರಾಣೇ) ಪ್ರಾಣದಲ್ಲಿ / ಉಸಿರಿನಲ್ಲಿ, (ವಾಯುಃ) ವಾಯುದೇವನು / ಗಾಳಿಯು, (ಶ್ರಿತಃ) ನೆಲೆಸಿರುವನು. ನನ್ನ ಪ್ರಾಣವು ವಾಯುದೇವನನ್ನು ಆಶ್ರಯಿಸಿದೆ. ವಾಯುವಿಲ್ಲದೆ ಉಸಿರಿಲ್ಲ; ಉಸಿರಿಲ್ಲದೆ ಪ್ರಾಣವಿರದು. (ಪ್ರಾಣಃ) ಅಂತಹ ಪ್ರಾಣವು, (ಹೃದಯೇ) ನನ್ನ ಹೃದಯದಲ್ಲಿ ನೆಲೆಸಿದೆ. ಪ್ರಾಣವಿಲ್ಲದೆ ಹೃದಯವು / ಮನಸ್ಸು ಕೆಲಸ ಮಾಡದು. (ಹೃದಯಂ) ಅಂತಹ ನನ್ನ ಹೃದಯವು / ಮನಸ್ಸು, (ಮಯಿ) ನನ್ನೊಳಗೇ ಇದೆ. ನನ್ನ ಹಿಡಿತದಲ್ಲೇ ಇದೆ. (ಅಹಮ್) ನಾನು, (ಅಮೃತೇ) ಅಮೃತತ್ತ್ವವಾದ ಆತ್ಮಸ್ವರೂಪದಲ್ಲೇ ನೆಲೆಸಿರುವೆ; ಆತ್ಮವೇ ಆಗಿರುವೆಯೇ ಹೊರತು ಶರೀರವಲ್ಲ; ಶರೀರದಲ್ಲಿರುವ ಶರೀರಿಯು. (ಅಮೃತಂ) ಆ ಅಮೃತತ್ತ್ವವೆನಿಸಿದ, ಅಜರ-ಅಮರವಾದ, ಅವಿನಾಶಿಯಾದ ಆತ್ಮವಾದ ನಾನು, (ಬ್ರಹ್ಮಣಿ) ಪರಬ್ರಹ್ಮವೆನಿಸಿದ ಪರಮಾತ್ಮನಲ್ಲೇ ಇರುವೆ. ಜಗತ್ತೆಲ್ಲವೂ ಅವನೇ ಆಗಿರುವಾಗ, ದೇಹವೂ ಅವನೇ. ಅದರೊಳಗಿನ ಆತ್ಮವಾದ ನಾನು ಅವನಲ್ಲೇ ನೆಲೆಸಿರುವೆ. ಹೀಗಾಗಿ ಆತ್ಮವು ಪರಮಾತ್ಮನಲ್ಲಿ ನೆಲೆಸಿದ್ದು, ಒಂದು ದೃಷ್ಟಿಯಲ್ಲಿ ಪರಮಾತ್ಮನಿಗಿಂತ ಅಭಿನ್ನವಾಗಿರುವುದು. ಹೇಗೆ ಜಲರಾಶಿಯಲ್ಲಿನ ನೀರಿನ ಒಂದು ಬಿಂದೂ, ನೀರೂ ಒಂದೇ ಆಗಿದೆಯೋ ಹಾಗೆಯೇ, ಪರಮಾತ್ಮನೆಂಬ ಸಿಂಧುವಿನಲ್ಲಿ ನೆಲೆನಿಂತ ಬಿಂದುವಾದ ಆತ್ಮವೂ ಪರಮಾತ್ಮನಿಗಿಂತ ಬೇರೆಯಲ್ಲ.


೬೦) ಸೂರ್ಯನು ನಮ್ಮ ಕಣ್ಣುಗಳಲ್ಲಿರುವನು ಎಂಬುದರ ರಹಸ್ಯವೇನು?

 ಸೂರ್ಯೋ ಮೇ ಚಕ್ಷುಷಿ ಶ್ರಿತಃ | ಚಕ್ಷುರ್ಹೃದಯೇ | ಹೃದಯಂ ಮಯಿ | ಅಹಮಮೃತೇ | ಅಮೃತಂ ಬ್ರಹ್ಮಣಿ || ೩ ||


(ಸೂರ್ಯಃ) ಸೂರ್ಯನು, ( ಮೇ) ನನ್ನ, (ಚಕ್ಷುಷಿ) ಕಣ್ಣಿನಲ್ಲಿ / ಚಕ್ಷುರಿಂದ್ರಿಯದಲ್ಲಿ, (ಶ್ರಿತಃ) ನೆಲೆಸಿರುವನು. ಸೂರ್ಯನ ಬೆಳಕು ಒಂದು ವಸ್ತುವಿನ ಮೇಲೆ ಬಿದ್ದು, ಪ್ರತಿಫಲಿಸಿ, ನಮ್ಮ ಕಣ್ಣ ಮೇಲೆ ಬಿದ್ದರೆ ಮಾತ್ರ ಆ ವಸ್ತುವು ಗೋಚರಿಸುವುದು. ಆದ್ದರಿಂದ, ಸದಾ ಸೂರ್ಯನ ಶಕ್ತಿಯು ನನ್ನ ಕಣ್ಣನ್ನು ಪ್ರೇರಿಸಿ, ಲೋಕವನ್ನು ನೋಡುವಂತೆ ಶಕ್ತಿ ಕೊಡಲಿ. (ಚಕ್ಷುಃ) ಅಂತಹ ನನ್ನ ಕಣ್ಣಿನ ದೃಷ್ಟಿಶಕ್ತಿಯು, (ಹೃದಯೇ) ಹೃದಯದಲ್ಲಿ / ಮನಸ್ಸಿನಲ್ಲಿ ನೆಲೆಸಿದೆ. ನಾವು ನೋಡುತ್ತಲೇ ಇದ್ದರೂ, ಮನಸ್ಸು ಆ ಕಡೆಗೆ ಗಮನವಿಡದಿದ್ದರೆ ಏನನ್ನೂ ಕಾಣಲಾರೆವು. ಹಾಗಾಗಿ ಚಕ್ಷುರಿಂದ್ರಿಯದ ಶಕ್ತಿಯು ಮನಸ್ಸನ್ನೇ ಆಶ್ರಯಿಸಿದೆ. (ಹೃದಯಂ) ಅಂತಹ ಹೃದಯ / ಮನಸ್ಸು, (ಮಯಿ) ನನ್ನೊಳಗೇ ಇದೆ; ನನ್ನ ನಿಯಂತ್ರಣದಲ್ಲೇ ಇದೆ. (ಅಹಮ್) ನಾನು, (ಅಮೃತೇ) ಅಮೃತತ್ವದಲ್ಲೇ ಇರುವೆ. (ಅಮೃತಂ) ಅಮೃತತ್ವವು, (ಬ್ರಹ್ಮಣಿ) ಪರಬ್ರಹ್ಮ ಪರಮಾತ್ಮನಲ್ಲೇ ಇರುವುದು.

೬೧) ನಮ್ಮ ಮನಸ್ಸಿನ ಅಭಿಮಾನಿ ದೇವತೆಯು ಯಾರು? ಹೇಗೆ?

 ಚಂದ್ರಮಾ ಮೇ ಮನಸಿ ಶ್ರಿತಃ | ಮನೋ ಹೃದಯೇ | ಹೃದಯಂ ಮಯಿ | ಅಹಮಮೃತೇ | ಅಮೃತಂ ಬ್ರಹ್ಮಣಿ || ೪ ||


(ಚಂದ್ರಮಾ) ಚಂದ್ರಮನು / ಚಂದಿರನು, (ಮೇ) ನನ್ನ, (ಮನಸಿ) ಮನಸ್ಸಿನಲ್ಲಿ, (ಶ್ರಿತಃ) ನೆಲೆಸಿರುವನು. ನನ್ನ ಮನಸ್ಸಿನ ಶಕ್ತಿಯಾಗಿ ಚಂದ್ರನಿರುವನು. ಹೀಗಾಗಿಯೇ, ಮನೋವ್ಯಾಧಿಗ್ರಸ್ತರ ಸ್ಥಿತಿಯು ಅಮಾವಾಸ್ಯೆ-ಪೌರ್ಣಮಿಗಳಂದು ತುಂಬ ಏರುಪೇರಾಗುತ್ತದೆ.  (ಮನಃ) ಮನಸ್ಸು, (ಹೃದಯೇ) ಹೃದಯದಲ್ಲಿ ನೆಲೆಸಿದೆ. ಹೃದಯವಿರದೆ ಮನಸ್ಸು ಕೆಲಸಮಾಡದು. (ಹೃದಯಂ) ಹೃದಯವು, (ಮಯಿ) ನನ್ನೊಳಗಿದೆ; ನನ್ನ ದೇಹದೊಳಗಿದೆ. (ಅಹಮ್ ಅಮೃತೇ) ನಾನು ಆತ್ಮರೂಪವಾಗಿ ಅಮೃತತ್ವದಲ್ಲಿ ನೆಲೆಸಿರುವೆ. (ಅಮೃತಂ ಬ್ರಹ್ಮಣಿ) ಅಮೃತತ್ವವು ಪರಬ್ರಹ್ಮದಲ್ಲಿ ನೆಲೆಸಿರುವುದು.

೬೨) ದಿಕ್ಕುಗಳ ಸೂಚಕ ಅಂಗಗಳು ಯಾವುವು?

 ದಿಶೋ ಮೇ ಶ್ರೋತ್ರೇ ಶ್ರಿತಾಃ | ಶ್ರೋತ್ರಗ್ಂ ಹೃದಯೇ | ಹೃದಯಂ ಮಯಿ | ಅಹಮಮೃತೇ | ಅಮೃತಂ ಬ್ರಹ್ಮಣಿ || ೫ ||


(ದಿಶಃ) ದಿಕ್ಕುಗಳು, (ಮೇ) ನನ್ನ, (ಶ್ರೋತ್ರೇ) ಶ್ರೋತ್ರೇಂದ್ರಿಯ / ಕಿವಿಯಲ್ಲಿ, (ಶ್ರಿತಾಃ) ನೆಲೆಸಿವೆ. ಸಕಲ ದಿಕ್ಕುಗಳಿಂದ ಬರುವ ಶಬ್ದದ ಅಲೆಗಳು ಕಿವಿಗಳಿಂದ ಸ್ವೀಕರಿಸಲ್ಪಡುತ್ತವೆ. (ಶ್ರೋತ್ರಂ) ಶ್ರೋತ್ರೇಂದ್ರಿಯಶಕ್ತಿಯು, (ಹೃದಯೇ) ಹೃದಯ / ಮನಸ್ಸಿನಲ್ಲಿರುವುದು. ಮನಸ್ಸಿಲ್ಲದಿದ್ದರೆ ಯಾವ ಶಬ್ದವೂ ಕೇಳಿಸದು. ಹೃದಯವಿರದಿದ್ದರೆ ಕಿವಿಗಳು ಕೆಲಸಮಾಡಲಾರವು. (ಹೃದಯಂ) ಹೃದಯವು / ಮನಸ್ಸು, (ಮಯಿ) ನನ್ನಲ್ಲೇ ಇದೆ; ನನ್ನ ಬುದ್ಧಿಯ ಹಿಡಿತದಲ್ಲಿದೆ. (ಅಹಮಮೃತೇ) ನಾನು ಅಮೃತತ್ವದಲ್ಲಿರುವೆ. (ಅಮೃತಂ ಬ್ರಹ್ಮಣಿ) ಅಮೃತತ್ವವು ಬ್ರಹ್ಮನಲ್ಲಿ ನೆಲೆಸಿದೆ.

೬೩) ವೀರ್ಯದಲ್ಲಿರುವ ತತ್ತ್ವ ಯಾವುದು?

 ಆಪೋ ಮೇ ರೇತಸಿ ಶ್ರಿತಾಃ | ರೇತೋ ಹೃದಯೇ | ಹೃದಯಂ ಮಯಿ | ಅಹಮಮೃತೇ | ಅಮೃತಂ ಬ್ರಹ್ಮಣಿ || ೬ ||


(ಆಪಃ) ಜಲರಾಶಿ / ನೀರಿನ ಹನಿಗಳು, (ಮೇ) ನನ್ನ, (ರೇತಸಿ) ರೇತಸ್ಸಿನಲ್ಲಿ / ಶುಕ್ಲಧಾತುವಿನಲ್ಲಿ / ವೀರ್ಯದಲ್ಲಿ / ಶುಕ್ರಧಾತುವಿನಲ್ಲಿ, (ಶ್ರಿತಾಃ) ನೆಲೆಸಿವೆ. ವೀರ್ಯವು ಫಲವತ್ತಾಗಬೇಕಿದ್ದರೆ ಅದರಲ್ಲಿ ವೀರ್ಯಚಲನೆಗೆ ಹಾಗೂ ಪೋಷಣೆಗೆ ಸಾಕಷ್ಟು ಜಲಾಂಶವೂ ಬೇಕು. ಹಾಗಾಗಿ, ರೇತಸ್ಸಿನಲ್ಲಿ ನೀರಹನಿಗಳು ನೆಲೆಸಿವೆ ಎನ್ನಲಾಗಿದೆ. (ರೇತಃ) ರೇತಸ್ಸು, (ಹೃದಯೇ) ಹೃದಯದಲ್ಲಿ / ಮನಸ್ಸಿನಲ್ಲಿದೆ. ಹೃದಯವು ಸಕ್ರಿಯವಾಗಿದ್ದರೆ ಮಾತ್ರ ರೇತಃಸ್ಖಲನವಾಗಬಲ್ಲದು. ಮನಸ್ಸು ಶಾಂತವಾಗಿ, ಒತ್ತಡರಹಿತವಾಗಿ, ಸಂಭೋಗಾಸಕ್ತವಾಗಿದ್ದರೆ ಮಾತ್ರ ರೇತಃಸ್ಖಲನವಾಗಬಲ್ಲದು. (ಹೃದಯಂ) ಹೃದಯವು / ಮನಸ್ಸು, (ಮಯಿ) ನನ್ನಲ್ಲೇ / ನನ್ನ ನಿಯಂತ್ರಣದಲ್ಲೇ ಇದೆ. (ಅಹಮಮೃತೇ) ನಾನೂ ಅಮೃತ-ತತ್ತ್ವವಾಗಿದ್ದೇನೆ / ಅಮೃತ-ತತ್ತ್ವದಲ್ಲೇ ಇದ್ದೇನೆ. (ಅಮೃತಂ ಬ್ರಹ್ಮಣಿ) ಅಮೃತ-ತತ್ತ್ವವು ಬ್ರಹ್ಮದಲ್ಲಿದೆ.


೬೪) ಶರೀರದಲ್ಲಿ ಪೃಥ್ವೀತತ್ತ್ವದ ಸ್ಥಾನವೆಲ್ಲೆಲ್ಲಿದೆ?

  ಪೃಥಿವೀ ಮೇ ಶರೀರೇ ಶ್ರಿತಾ | ಶರೀರಗ್ಂ ಹೃದಯೇ | ಹೃದಯಂ ಮಯಿ | ಅಹಮಮೃತೇ | ಅಮೃತಂ ಬ್ರಹ್ಮಣಿ || ೭ ||


(ಪೃಥಿವೀ) ಈ ಪೃಥ್ವಿಯು / ಭೂಮಿಯು / ಪೃಥ್ವೀತತ್ತ್ವವು, (ಮೇ) ನನ್ನ, (ಶರೀರೇ ಶ್ರಿತಾ) ಶರೀರದಲ್ಲಿದೆ. ಶರೀರದ ಮೂಳೆ, ಮಾಂಸ, ಉಗುರು, ನಾಡಿ, ತ್ವಚೆ / ಚರ್ಮ— ಈ ೫ ಪೃಥ್ವೀತತ್ತ್ವಜನ್ಯವಾದವುಗಳು. (“ಅಸ್ಥಿ-ಮಾಂಸ-ನಖಾಶ್ಚೈವ ನಾಡೀ ತ್ವಕ್ ಚೇತಿ ಪಞ್ಚಮಃ | ಪೃಥ್ವೀ ಪಞ್ಚಗುಣಾಃ ಪ್ರೋಕ್ತಾ ಬ್ರಹ್ಮಜ್ಞಾನೇನ ಭಾಷಿತಮ್ ||”) (ಶರೀರಂ) ಈ ಶರೀರವು, (ಹೃದಯೇ) ಹೃದಯಮೂಲವಾದುದು / ಮನೋಮೂಲವಾದುದು. ಯಾಕೆಂದರೆ, ನಮ್ಮ ಮರಣಕಾಲದಲ್ಲಿ ಯಾವ ಶರೀರದ ಬಗ್ಗೆ ಚಿಂತನೆ ನಮಗಿರುವುದೋ, ಮುಂದಿನ ಜನ್ಮದಲ್ಲಿ ನಮಗೆ ಅದೇ ಶರೀರವು ಬರುವುದು. ಹಾಗಾಗಿ “ಮನದಂತೆ ತನು”. ಹಾಗೆಯೇ, ಶರೀರದ ಅಸ್ತಿತ್ವವು ಹೃದಯದ ಸಕ್ರಿಯತೆಯಲ್ಲಿದೆ. ಹೃದಯಸ್ತಂಭನವಾದ ಬಳಿಕ ಶರೀರವು ಕೊಳೆಯಲಾರಂಭಿಸಿ, ಪಂಚಭೂತಗಳಲ್ಲಿ ಲೀನವಾಗುವ ಪ್ರಕ್ರಿಯೆಯು ಆರಂಭವಾಗುತ್ತದೆ. ಹೀಗಾಗಿಯೇ, ಶರೀರವು ಹೃದಯ ಹಾಗೂ ಮನಸ್ಸುಗಳನ್ನಾಧರಿಸಿದೆ. (ಹೃದಯಂ) ಹೃದಯವು / ಮನವು, (ಮಯಿ) ನನ್ನಲ್ಲಿದೆ / ನನ್ನ ಹಿಡಿತದಲ್ಲಿದೆ. (ಅಹಮಮೃತೇ) ನಾನು ಅಮೃತತ್ವವಾದ ಆತ್ಮಸ್ವರೂಪದಲ್ಲಿ ನೆಲೆಯಾಗಿರುವೆನು. (ಅಮೃತಂ ಬ್ರಹ್ಮಣಿ) ಅಂತಹ ಅಮೃತಸ್ವರೂಪವಾದ ಆತ್ಮವಾಗಿರುವ ನಾನು ಪರಬ್ರಹ್ಮದಲ್ಲಿ ನೆಲೆಸಿರುವೆನು.

೬೫) ನಮ್ಮ ನರನಾಡಿಗಳಲ್ಲಿರುವ ತತ್ತ್ವಗಳು ಯಾವುವು? ಅವುಗಳ ವೈವಿಧ್ಯವೇನು?

ಓಷಧಿವನಸ್ಪತಯೋ ಮೇ ಲೋಮಸು ಶ್ರಿತಾಃ | ಲೋಮಾನಿ ಹೃದಯೇ | ಹೃದಯಂ ಮಯಿ | ಅಹಮಮೃತೇ | ಅಮೃತಂ ಬ್ರಹ್ಮಣಿ || ೮ ||


(ಓಷಧಿ-ವನಸ್ಪತಯಃ) ಬೇಯಿಸಿ ಬಳಸುವಂತಹ ಬಾಳೆಕಾಯಿ-ಧಾನ್ಯಾದಿಗಳು ಓಷಧಿಗಳು (“ಓಷಃ ಪಾಕೋ ಧೀಯತೇ ಅತ್ರ ಇತಿ ಓಷಧಿಃ”— ಪಾಕವೆಂದರೆ ನೀರಿನಲ್ಲಿ ಬೇಯಿಸಿದ್ದು. “ಫಲಪಾಕಾನ್ತಾ ಓಷಧಯಃ”— ಸುಶ್ರುತಸಂಹಿತಾ. “ಓಷಧ್ಯಃ ಫಲಪಾಕಾನ್ತಾ ಬಹುಪುಷ್ಪಫಲೋಪಗಾಃ”— ಮನುಸ್ಮೃತಿಃ— ತುಂಬ ಪುಷ್ಪ-ಫಲಗಳನ್ನು ಬಿಡುವವುಗಳು. “ಓಷಮ್ ಪಕ್ವಮ್ ಆಹುತಿದ್ರವ್ಯಂ ಧಯ ಪಿಬ ಇತ್ಯಗ್ನೌ ಪ್ರಕ್ಷಿಪ್ತಾತ್ ತಸ್ಮಾತ್ ಓಷಧಯಃ ಪೃಥಿವ್ಯಾಂ ಸಮಭವನ್ ”— ಶತಪಥಬ್ರಾಹ್ಮಣಭಾಷ್ಯಮ್— ಬೇಯಿಸಿದ ಧಾನ್ಯದ ಚರು / ಆಹುತಿದ್ರವ್ಯವನ್ನು / ಓಷವನ್ನು ಧಯ / ಕುಡಿ ಎಂದು ಅಗ್ನಿಗೆ ಹಾಕಿದ್ದರಿಂದ ಪೃಥ್ವಿಯಲ್ಲಿ ಓಷಧಿಗಳೆಂದು ಕರೆಯಲ್ಪಟ್ಟವು ಹಾಗೂ ಅಂತಹ ಯಜ್ಞಮುಖೇನ ಪ್ರಸನ್ನರಾದ ದೇವತೆಗಳ ಕೃಪೆಯಿಂದ ಓಷಧಿಗಳು ಬೆಳೆದವು. ಚರಕಸಂಹಿತೆಯ ಪ್ರಕಾರ, ಓಷಧಿಗಳೆಂದರೆ ವಿವಿಧ ಔಷಧೀಯಸಸ್ಯಗಳು. ಅವುಗಳ ಯಥಾಯೋಗ್ಯ ಪ್ರಕಾರ-ಪ್ರಮಾಣಾದಿಗಳ ಯೋಗ / ಬೆರಕೆಯು ಸೂಕ್ತವಾದ ಔಷಧಿಯಾಗುವುದು.). ಇವುಗಳು ಅನ್ನ, ಚಪಾತಿ ಮುಂತಾಗಿ ದಿನನಿತ್ಯದ ಆಹಾರದ ಮುಖ್ಯಭಾಗವಾಗಿಯೂ, ಯಜ್ಞ-ಯಾಗಗಳಲ್ಲಿ ಚರುವೆಂಬ ಹವಿಸ್ಸಾಗಿಯೂ ಬಳಸಲ್ಪಡುತ್ತವೆ.


ಹೂವು ಬಿಡದೇ ಫಲಿಸುವ ಅಶ್ವತ್ಥ, ಅತ್ತಿ ಮುಂತಾದ ಗಿಡ-ಮರಗಳು ವನಸ್ಪತಿಗಳು {“ಅಪುಷ್ಪಾಃ ಫಲವನ್ತೋ ಯೇ ತೇ ವನಸ್ಪತಯಃ ಸ್ಮೃತಾಃ”— ಮನುಸ್ಮೃತಿಃ | “ಅಪುಷ್ಪಾಃ ಫಲವನ್ತೋ ವನಸ್ಪತಯಃ”— ಸುಶ್ರುತಸಂಹಿತಾ. ಇದರ ಪ್ರಕಾರ ಸ್ಥಾವರಗಳು ಚತುರ್ವಿಧವಾಗಿವೆ— ವನಸ್ಪತಿ, ವೃಕ್ಷ (ಫಲ-ಪುಷ್ಪ ಸಹಿತ), ವೀರುಧ (ಬಳ್ಳಿ) ಹಾಗೂ ಓಷಧಿಗಳು. ಭಾಗವತದಲ್ಲಿ ಸ್ಥಾವರಗಳ ೬ ಭೇದಗಳಿವೆ. ಅಪುಷ್ಪೀ ವನಸ್ಪತಿಗಳು, ಬೇಯಿಸಿ ತಿನ್ನಬಹುದಾದ ಧಾನ್ಯಾದಿಗಳು / ಓಷಧಿಗಳು, ಮರಗಳನ್ನಾಶ್ರಯಿಸಿ ಮೇಲೇರುವ ಬಳ್ಳಿ / ಲತೆಗಳು, ತ್ವಕ್ಸಾರಗಳಾದ (ತ್ವಚೆಯೇ / ಹೊರಭಾಗವೇ ಸಾರವಾಗಿರುವ / ಗಟ್ಟಿಯಾಗಿರುವ, ಒಳಗೆ ಟೊಳ್ಳಾದ) ಬಿದಿರು ಮುಂತಾದವು, ಮೇಲೇರಲು ಮರವನ್ನು ಬಯಸದ ಗಟ್ಟಿಯಾದ ಬಳ್ಳಿಜಾತಿಯ ವೀರುಧಗಳು ಮತ್ತು ಪುಷ್ಪದಿಂದ ಫಲವನ್ನೀಯುವ ದ್ರುಮ / ವೃಕ್ಷಗಳು.). ಇವುಗಳ ಶ್ರೇಷ್ಠತೆ ಹಾಗೂ ಔಷಧೀಯಗುಣಗಳಿಂದಾಗಿ ಹೋಮ-ಹವನಾದಿಗಳಲ್ಲಿ ಸಮಿತ್ತುಗಳಾಗಿ ಬಳಸಲ್ಪಡುತ್ತವೆ.


(ಮೇ) ನನ್ನ, (ಲೋಮಸು) ರೋಮ / ಕೂದಲು / ಕೇಶಾದಿಗಳಲ್ಲಿ, (ಶ್ರಿತಾಃ) ನೆಲೆಸಿವೆ. ಓಷಧಿ-ವನಸ್ಪತಿಗಳು ನನ್ನ ದೇಹದ ಪ್ರತಿಯೊಂದು ರೋಮ ರೋಮಗಳಲ್ಲೂ ನೆಲೆಸಿ ಶರೀರವನ್ನು ರೋಗಗಳಿಂದ ರಕ್ಷಿಸುತ್ತಿವೆ. (ಲೋಮಾನಿ ಹೃದಯೇ) ಈ ರೋಮಗಳೂ ಸಹ ಹೃದಯ / ಮನಸ್ಸನ್ನು ಆಶ್ರಯಿಸಿವೆ. ಹೃದಯದ ರಕ್ತಪರಿಚಲನೆಯಿರದಿದ್ದರೆ ಇವುಗಳ ಬುಡದಲ್ಲಿರುವ ರೋಮಕೂಪಗಳು ಬದುಕಲಾರವು. ಮೃತಶರೀರದ ರೋಮಗಳು ಕ್ರಮೇಣ ಬಿದ್ದು ಹೋಗುತ್ತವೆ. ಅಂತೆಯೇ, ಮನಸ್ಸಿರದಿದ್ದರೆ ಕೇಶಮುಂಡನ ಮಾಡಿದಂತೆ ಮನುಷ್ಯನು ಕೂದಲನ್ನು ಬೇಡವಾದಾಗ ತೆಗೆಯುವನು. ಹೀಗಾಗಿ ರೋಮಗಳ ಬೆಳವಣಿಗೆಯು ನಮ್ಮ ಮನಸ್ಸಿನ ಇಚ್ಛೆಯನ್ನೂ ಅವಲಂಬಿಸಿದೆ. (ಹೃದಯಂ ಮಯಿ) ಅಂತಹ ಮಾನವ ಹೃದಯ / ಮನಸ್ಸು ನನ್ನೊಳಗೇ / ನನ್ನಿಚ್ಛೆಯಂತೇ ಇದೆ. ನನಗೆ ಉದ್ವೇಗವಾದಾಗ ಹೃದಯಬಡಿತ ಹೆಚ್ಚುತ್ತದೆ. ಮನಸ್ಸೂ ಕೆಡುತ್ತದೆ. (ಅಹಮಮೃತೇ) ನಾನು ಅಮೃತತ್ವವೇ ಆಗಿರುವೆ. (ಅಮೃತಂ ಬ್ರಹ್ಮಣಿ) ಅಮೃತತ್ವವೆಂದರೆ ಬ್ರಹ್ಮವೇ ಆಗಿದೆ. ಪರಬ್ರಹ್ಮತತ್ತ್ವವೇ / ಆತ್ಮತತ್ತ್ವವೇ ಆಗಿದೆ.

೬೬) ನಮ್ಮ ಶರೀರದಲ್ಲಿ ಇಂದ್ರನ ಸ್ಥಾನವೆಲ್ಲಿ?

  ಇಂದ್ರೋ ಮೇ ಬಲೇ ಶ್ರಿತಃ | ಬಲಗ್ಂ ಹೃದಯೇ | ಹೃದಯಂ ಮಯಿ | ಅಹಮಮೃತೇ | ಅಮೃತಂ ಬ್ರಹ್ಮಣಿ || ೯ ||


(ಇಂದ್ರಃ) ದೇವತೆಗಳ ಅಧಿಪತಿಯಾದ, ಇಂದ್ರಿಯಗಳ ಅಧಿಪತಿಯಾಗಿ ಮನಸ್ತತ್ತ್ವಾಭಿಮಾನಿಯಾದ, ಪರಮೈಶ್ವರ್ಯವಾದ ಸ್ವರ್ಗಾಧಿಪತ್ಯವನ್ನೂ ಬ್ರಹ್ಮಜ್ಞಾನವನ್ನೂ ಪಡೆದ (ಇಂದ ಪರಮೈಶ್ವರ್ಯೇ ಧಾತುಃ) ಇಂದ್ರನು ಎಂದರ್ಥ. (ಮೇ) ನನ್ನ, (ಬಲೇ) ಬಲದಲ್ಲಿ, ಶಕ್ತಿಯಲ್ಲಿ, ಪರಾಕ್ರಮದಲ್ಲಿ, ಬಾಹುಗಳಲ್ಲಿ, ತೋಳುಗಳಲ್ಲಿ, ತೋಳ್ಬಲದಲ್ಲಿ ಅಭಿಮಾನಿಯಾಗಿಯೂ, (ಶ್ರಿತಃ) ನೆಲೆಸಿರುವನು. ರಕ್ಕಸರನ್ನು ನಾಶಮಾಡಿ  ಸ್ವರ್ಗವನ್ನು ರಕ್ಷಿಸಿದಂತೆ, ಅಧರ್ಮವನ್ನು ನಾಶಮಾಡಿ ಧರ್ಮರಕ್ಷಣೆ ಮಾಡಲು, ಧರ್ಮಕರ್ಮಗಳನ್ನಾಚರಿಸಲು ಬೇಕಾದ ಬಲವನ್ನು ಇಂದ್ರನು ದಯಪಾಲಿಸುತ್ತಾನೆಂದರ್ಥ. (ಬಲಂ) ಆ ತೋಳ್ಬಲವು, (ಹೃದಯೇ) ಹೃದಯ / ಮನಸ್ಸಿನಲ್ಲಿ ನೆಲೆಯಾಗಿದೆ. ಯಾಕೆಂದರೆ, ಹೃದಯದ ರಕ್ತಪರಿಚಲನಾಕಾರ್ಯದಿಂದ ಬಾಹುಗಳೂ ಜೀವಂತವಾಗಿವೆ, ಬಾಹುಗಳಲ್ಲಿ ಬಲವೂ ತುಂಬುವುದು. ಅಂತೆಯೇ, ಮನಸ್ಸು ದುಗುಡ, ದುಮ್ಮಾನಾದಿಗಳಿಂದ ಕೂಡಿ, ಪೂರಕವಾಗಿರದಿದ್ದರೆ, ತೋಳು ಬಲಿಷ್ಠವಾಗಿ ಕಂಡರೂ, ದುರ್ಬಲ ಮನಃಶಕ್ತಿಯಿಂದಾಗಿ ಏನನ್ನೂ ಮಾಡಲಾರದು. (ಹೃದಯಂ ಮಯಿ) ಅಂತಹ ಹೃದಯ / ಮನಸ್ಸು ನನ್ನಲ್ಲಿದೆ. ಅದು ನನ್ನ ಹಿಡಿತದಲ್ಲಿದೆ. ಆತ್ಮನ ನಿಯಂತ್ರಣದಲ್ಲಿದೆ. (ಅಹಮಮೃತೇ) ನಾನು / ಆತ್ಮನು ಅಮೃತನು / ಸಾಯದವನು. (ಅಮೃತಂ ಬ್ರಹ್ಮಣಿ) ಈ ಅಮೃತತ್ತ್ವವೇ ಪರಬ್ರಹ್ಮವು.



ವಿಶೇಷ ಟಿಪ್ಪಣಿ—

೬೭) ಅನಂತವಾದ ಕಾಲದ ಲೆಕ್ಕಾಚಾರವು ಹೇಗೆ?


ನವಬ್ರಹ್ಮರಲ್ಲಿ ಪ್ರವರ್ತಮಾನವಾಗಿರುವ ಈಗಿನ ಚತುರ್ಮುಖ ಬ್ರಹ್ಮನ ಪೂರ್ಣಾಯುಷ್ಯವಾದ ೧೦೦ ಬ್ರಾಹ್ಮವರ್ಷಗಳಲ್ಲಿ ಪ್ರಸ್ತುತ ೫೧ನೇ ವರ್ಷದ ಮೊದಲನೆಯದಾದ ಶ್ವೇತವಾರಾಹ ಕಲ್ಪ (ಕಲ್ಪ = ಬ್ರಹ್ಮನ ದಿನ)ದ ಹಗಲಿನ ಮಧ್ಯಾಹ್ನ ೧೨ ಗಂಟೆ ಕಳೆದಿದೆ, ಅರ್ಥಾತ್ ಕಲ್ಪದ ಹಗಲಿನ ೧೪ ಮನ್ವನ್ತರಗಳಲ್ಲಿ ಮಧ್ಯದ ೭ನೆಯದಾದ ವೈವಸ್ವತ ಮನ್ವನ್ತರವು ನಡೆಯುತ್ತಿದ್ದು, ಅದರಲ್ಲೂ ೨೮ನೆಯ ಚತುರ್ಯುಗದ ಅಂತಿಮಭಾಗವಾದ ೨೮ನೆಯ ಕಲಿಯುಗದಲ್ಲಿ ಇದೀಗ ೫,೧೨೦ನೇ ಮಾನವವರ್ಷವು ನಡೆಯುತ್ತಿದೆ. ಪುರನ್ದರನೆಂಬವನು ಈ ಮನ್ವನ್ತರದ ಇಂದ್ರನು. ಬಲಿಯು ಮುಂದಿನ ಮನ್ವನ್ತರದ ಇಂದ್ರನು. ಹೀಗೆ, ಇಂದ್ರ ಎಂಬುದೊಂದು ಪಟ್ಟ / ಪದವಿ. ಅದರ ಅವಧಿ ೧ ಮನ್ವನ್ತರ. ಇವನು ದೇವತೆಗಳೊಡೆಯನಾಗಿ, ಇಡಿಯ ಸೃಷ್ಟಿಯನ್ನು ತ್ರಿಮೂರ್ತಿಗಳ ಹಾಗೂ ಆದಿಮಾಯೆಯ ಆಜ್ಞಾನುಸಾರ, ಧರ್ಮದಿಂದ ಆಳುತ್ತಾನೆ. ಅಂತಹ ಇಂದ್ರನನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ.


 ೧ ಬ್ರಾಹ್ಮವರ್ಷ = ೩೬೦ ಬ್ರಾಹ್ಮದಿವಸಗಳು; 

೧ ಬ್ರಾಹ್ಮದಿವಸ / ಕಲ್ಪ = ೧ ಬ್ರಾಹ್ಮ ಹಗಲು + ೧ ಬ್ರಾಹ್ಮ ರಾತ್ರಿ;

೧ ಬ್ರಾಹ್ಮ ಹಗಲು (ಸೃಷ್ಟಿಕಾಲ) = ೧ ಬ್ರಾಹ್ಮ ರಾತ್ರಿ (ಪ್ರಳಯಕಾಲ) = ೧೪ ಮನ್ವನ್ತರಗಳು ( /೧೦೦೦ ಚತುರ್ಯುಗಗಳು + ಯುಗಸಂಧಿಕಾಲಗಳು + ಮನ್ವಂತರಸಂಧಿಕಾಲಗಳು);

೧ ಮನ್ವನ್ತರ = ೭೧ ಚತುರ್ಯುಗ / ಮಹಾಯುಗ / ದೇವಯುಗಗಳು + ಯುಗಸಂಧಿಗಳು = ದೇವಾಯುರ್ಮಾನ = ಮನು-ಆಯುರ್ಮಾನ = ಸಪ್ತರ್ಷಿ-ಆಯುರ್ಮಾನ;

೧ ಚತುರ್ಯುಗ / ಮಹಾಯುಗ = ೧ ದೇವಯುಗ = ೧ ಕಲಿಯುಗ + ೧ ದ್ವಾಪರಯುಗ + ೧ ತ್ರೇತಾಯುಗ + ೧ ಕೃತ / ಸತ್ಯಯುಗ = ೪೩,೨೦,೦೦೦ ಮಾನವವರ್ಷಗಳು = ೧೦ ಕಲಿಯುಗಾವಧಿ = ೧೨,೦೦೦ ದೇವವರ್ಷಗಳು ;

೧ ಕಲಿಯುಗ = ೪,೩೨,೦೦೦ ಮಾನವವರ್ಷಗಳು / ೧,೨೦೦ ದೇವವರ್ಷಗಳು;

೧ ದ್ವಾಪರಯುಗ = ೨ ಕಲಿಯುಗಾವಧಿ = ೮,೬೪,೦೦೦ ಮಾನವವರ್ಷಗಳು = ೨,೪೦೦ ದೇವವರ್ಷಗಳು;

೧ ತ್ರೇತಾಯುಗ = ೩ ಕಲಿಯುಗಾವಧಿ = ೧೨,೯೬,೦೦೦ ಮಾನವವರ್ಷಗಳು = ೩,೬೦೦ ದೇವವರ್ಷಗಳು;

೧ ಕೃತಯುಗ = ೪ ಕಲಿಯುಗಾವಧಿ = ೧೭,೨೮,೦೦೦ ಮಾನವವರ್ಷಗಳು = ೪,೮೦೦ ದೇವವರ್ಷಗಳು;

೧ ಮಾನವವರ್ಷ = ೧೨ ಮಾನವಮಾಸಗಳು = ೨ ಮಾನವ ಅಯನಗಳು = ೩೬೦ ಮಾನವದಿನಗಳು = ೧ ದೇವದಿನ;

೩೬೦ ದೇವದಿನಗಳು = ೧ ದೇವವರ್ಷ = ೩೬೦ ಮಾನವವರ್ಷಗಳು; 

೧೨,೦೦೦ ದೇವವರ್ಷಗಳು = ೧ ದೇವಯುಗ = ೧ ಮಹಾಯುಗ = ೧ ಮಾನವಚತುರ್ಯುಗ; 

೧೦೦ ಮಾನವವರ್ಷ = ಸರಾಸರಿ ಮಾನವ ಆಯುರ್ಮಾನ;

೧ ಮಾನವ ಉತ್ತರಾಯಣ = ೬ ಮಾನವಮಾಸಗಳು = ೧ ದೇವ ಹಗಲು;

೧ ಮಾನವ ದಕ್ಷಿಣಾಯನ = ೬ ಮಾನವಮಾಸಗಳು = ೧ ದೇವರಾತ್ರಿ.



೬೮) ಮಳೆಯು ತಲೆಯಲ್ಲಿದೆ ಎಂಬುದರ ಯೋಗಶಾಸ್ತ್ರೀಯ ಅರ್ಥವೇನು?

  ಪರ್ಜನ್ಯೋ ಮೇ ಮೂರ್ಧ್ನಿ ಶ್ರಿತಃ | ಮೂರ್ಧಾ ಹೃದಯೇ | ಹೃದಯಂ ಮಯಿ | ಅಹಮಮೃತೇ | ಅಮೃತಂ ಬ್ರಹ್ಮಣಿ || ೧೦ ||


(ಪರ್ಜನ್ಯಃ) ಮಳೆಯು / ಮಳೆಮೋಡವು / ಮಳೆಯ ದೇವತೆಯು / ಇಂದ್ರನು / ಮೇಘಗರ್ಜನೆಯು / ಸೂರ್ಯನು / ವಿಷ್ಣುವು / ದ್ವಾದಶಾದಿತ್ಯರಲ್ಲೊಬ್ಬನು / ದೇವಗಂಧರ್ವನು / ಪರ್ಜನ್ಯನೆಂಬ ಹಲವು ಮನ್ವಂತರಗಳಲ್ಲಿ ಬರುವ ಋಷಿಯು / ಹಿರಣ್ಯರೋಮನ ತಂದೆಯಾದ ಪರ್ಜನ್ಯನೆಂಬ ಪ್ರಜಾಪತಿ / ಒಬ್ಬ ಮೌನೇಯ ಗಂಧರ್ವ / ಫಾಲ್ಗುಣ ಮಾಸದಲ್ಲಿ ಸೂರ್ಯನ ಹೆಸರು / ಪರಿವಾಹನೆಂಬ ವಾಯುವಿನ ನಿಯಂತ್ರಣದಲ್ಲಿರುವ, ದೇವಗಂಗೆಯನ್ನು ಹೊತ್ತೊಯ್ಯುವ ಮೇಘಜಾತಿ / ತಪದಿಂದ ದೇವಲೋಕವನ್ನು ಪಡೆದ, ರೈವತ ಮನ್ವಂತರದ ಒಬ್ಬ ಪರಿವಾಹ ಹಾಗೂ ಋಷಿ;

(ಮೇ) ನನ್ನ, (ಮೂರ್ಧ್ನಿ) ಮಸ್ತಕ / ಶಿರದಲ್ಲಿ (ಶ್ರಿತಃ) ಆಶ್ರಿತವಾಗಿದೆ. ಯೋಗಕುಂಡಲಿನಿಯ ಷಟ್ಚಕ್ರಗಳನ್ನು ಭೇದಿಸಿದ ನಂತರ, ಏಳನೆಯದಾದ ಸಹಸ್ರಾರ ಚಕ್ರವನ್ನು ಭೇದಿಸಿದರೆ ಯೋಗಸಮಾಧಿ ಎನ್ನುವರು. ಪತಂಜಲಿಯ ಅಷ್ಟಾಂಗಯೋಗದ ೮ನೆಯ ಅಂಗವಾದ ಈ ಸಮಾಧಿಸ್ಥಿತಿಯಲ್ಲಿ, ಜ್ಞಾನವರ್ಷ / ಪ್ರಜ್ಞಾನದ ಮಳೆಯೇ ಸುರಿಯುತ್ತದೆ. ಅದಕ್ಕಾಗಿ ಬಹುಶಃ ಶಿರದಲ್ಲಿ ಪರ್ಜನ್ಯವಿದೆ ಎನ್ನಲಾಗಿದೆ. ಹೇಗೆ ಮಳೆಯು ಭೂಮಿಯ ಸಕಲ ಚೇತನರನ್ನೂ ಲವಲವಿಕೆಯಿಂದ ಪುಟಿದೇಳುವಂತೆ ಜೀವಜಲವನ್ನೀಯುತ್ತದೋ, ಹಾಗೆಯೇ ಜಾಗೃತಗೊಂಡ ಬುದ್ಧಿ-ಮನಸ್ಸು-ಪ್ರಜ್ಞೆಗಳು ಜೀವನನ್ನು ಪುನರುಜ್ಜೀವನಗೊಳಿಸುತ್ತವೆ / ಅಮೃತತ್ತ್ವವನ್ನೀಯುತ್ತವೆ. (ಮೂರ್ಧಾ ಹೃದಯೇ) ಶಿರವು ಹೃದಯ / ಮನಸ್ಸಿನಲ್ಲಿದೆ. ಅಂದರೆ, ಹೃದಯದಿಂದ ರಕ್ತಮುಖೇನ ಪೂರೈಸಲ್ಪಟ್ಟ ಪೋಷಕಾಂಶಗಳಿಂದ ಹಾಗೂ ಆಮ್ಲಜನಕಾದಿಗಳಿಂದಲೇ ಶಿರ ಹಾಗೂ ಶಿರದೊಳಗಿನ ಮಸ್ತಿಷ್ಕಾದಿಗಳು ಕಾರ್ಯಾಚರಿಸಬಲ್ಲವು. ಆದ್ದರಿಂದ ಶಿರದ ಅಸ್ತಿತ್ವಕ್ಕೆ ಹೃದಯವೇ ಆಧಾರ. ಅಂತೆಯೇ, ಮನಸ್ಸು ಸರಿಯಿಲ್ಲದಿದ್ದರೆ, ಜಾಗೃತವಾಗಿರದಿದ್ದರೆ ತಲೆಯನ್ನೂ ಕಳೆದುಕೊಳ್ಳಬೇಕಾಗಬಹುದು ಕೆಲವು ಅಪಾಯಕರ ಸನ್ನಿವೇಶಗಳಲ್ಲಿ. ಹಾಗಾಗಿ, ಮನಸ್ಸೂ ಸಹ ತಲೆಯ ಉಳಿವಿಗೆ ಆಧಾರ. (ಹೃದಯಂ ಮಯಿ) ಅಂತಹ ಹೃದಯ / ಮನಸ್ಸು ನನ್ನಲ್ಲಿ, ನನ್ನ / ಆತ್ಮನ ಹಿಡಿತದಲ್ಲಿದೆ. (ಅಹಮಮೃತೇ) ನಾನು ಅಮೃತದಲ್ಲಿರುವೆ. ನಾನು ಮರಣವಿಲ್ಲದ ಚೈತನ್ಯರೂಪನು, ಆತ್ಮರೂಪನು.  (ಅಮೃತಂ ಬ್ರಹ್ಮಣಿ) ಅಮರವಾದ ಆತ್ಮವು ಬ್ರಹ್ಮದಲ್ಲಿ ನೆಲೆಸಿದೆ. ಬ್ರಹ್ಮದಂತೆ ಅ-ವಿನಾಶಿಯಾಗಿದೆ.

೬೯) ನಮ್ಮ ದೇಹದಲ್ಲಿ ಈಶಾನನ ಸ್ಥಾನವೆಲ್ಲಿದೆ? ಮನ್ಯುವೆಂದರೇನು?

  ಈಶಾನೋ ಮೇ ಮನ್ಯೌ ಶ್ರಿತಃ | ಮನ್ಯುರ್ಹೃದಯೇ | ಹೃದಯಂ ಮಯಿ | ಅಹಮಮೃತೇ | ಅಮೃತಂ ಬ್ರಹ್ಮಣಿ || ೧೧ ||


(ಈಶಾನಃ) ಪವಿತ್ರವೂ, ವಾಸ್ತುರೀತ್ಯಾ ದೈವೀದಿಕ್ಕೂ ಆದ ಈಶಾನ್ಯದಿಕ್ಕಿನ ಅಧಿಪತಿಯೆನಿಸಿದ, ಶಿವನ ಪಂಚ ಕಲ್ಪಾವತಾರಗಳಲ್ಲೊಂದಾದ, ಏಕಾದಶರುದ್ರರೂಪಗಳಲ್ಲೊಂದಾದ, ಶಿವನ ಅಷ್ಟಮೂರ್ತಿಗಳಲ್ಲೊಂದಾದ ಸೂರ್ಯರೂಪಿಯಾದ, ಸಕಲ ಚರಾಚರಗಳ ಈಶ್ವರನಾದ, ಸಕಲೈಶ್ವರ್ಯಮೂಲನಾದ ಪರಮೇಶ್ವರನು, (ಮೇ) ನನ್ನ, (ಮನ್ಯೌ) ಕ್ರೋಧ / ಕೋಪ / ಶೋಕ / ದೈನ್ಯ / ಯಜ್ಞ (ಉದಾ— ಇಂದ್ರನು ಶತಮನ್ಯುವು) / ಅಹಂಕಾರದಲ್ಲಿ, (ಶ್ರಿತಃ) ನೆಲೆಸಿರುವನು. ಅಂದರೆ, ಈಶಾನನು ನನ್ನ ಕೋಪದಲ್ಲಿದ್ದು, ಕೋಪದ ಸದುದ್ದೇಶವನ್ನು ಈಡೇರಿಸಿ, ಕೋಪವನ್ನು ಶಮನಮಾಡಲಿ. ಶೋಕದಲ್ಲಿದ್ದು ಶೋಕನಿವಾರಕನಾಗಲಿ. ದೈನ್ಯತೆಯಲ್ಲಿ ಸಹಾಯನಾಗಲಿ. ಯಜ್ಞದಂಥ ಪವಿತ್ರಕರ್ಮಗಳಲ್ಲೆಲ್ಲ ಸಾಕ್ಷಿಯಾಗಿದ್ದು ಮುನ್ನಡೆಸಲಿ. ಅಹಂ-ಕಾರದ ಅಭಿಮಾನಿದೇವತೆಯಾಗಿ, ನನ್ನ ಅಹಂ / ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಲಿ. (ಮನ್ಯುಃ) ಅಂತಹ ಕೋಪ-ಶೋಕ-ದೈನ್ಯ-ಯಜ್ಞ-ಅಹಂಕಾರಾದಿಗಳು, (ಹೃದಯೇ) ನನ್ನ ಹೃದಯ / ಮನಸ್ಸಿನಲ್ಲಿ ನೆಲೆಸಿವೆ. ಹೃದಯದ ಸಕ್ರಿಯತೆಯಿಂದ ಮೆದುಳು ಸಕ್ರಿಯವಾಗಿರುವುದರಿಂದ, ಮನಸ್ಸಿನಲ್ಲಿ ಕ್ರೋಧ, ಶೋಕ, ದೈನ್ಯ, ಯಜ್ಞ / ಪವಿತ್ರ ಹಾಗೂ ನಾನೆಂಬ ಸ್ವ-ಅಭಿಮಾನ / ಅಹಂಕಾರಾದಿ ಭಾವಗಳು ಬರಲು ಸಾಧ್ಯ. ಆದ್ದರಿಂದ ಇವೆಲ್ಲ ಭಾವಗಳಿಗೂ ಮನಸ್ಸೇ ಮೂಲ ಹಾಗೂ ಮನಸ್ಸಿನ ಸಕ್ರಿಯತೆಗೆ ಹೃದಯಬಡಿತವೇ ಮೂಲ. (ಹೃದಯಂ ಮಯಿ) ಆ ಹೃದಯವು / ಮನಸ್ಸು ನನ್ನಲ್ಲಿ, ನನ್ನ / ಆತ್ಮನ ಹಿಡಿತದಲ್ಲಿದೆ. (ಅಹಮಮೃತೇ) ಅಂತಹ ನಾನು ಆತ್ಮರೂಪಿಯಾಗಿದ್ದು ಅಮೃತತ್ವದಲ್ಲಿರುವೆನು. (ಅಮೃತಂ ಬ್ರಹ್ಮಣಿ) ಅಂತಹ ಅಮೃತತ್ವವೇ ಪರಬ್ರಹ್ಮವೆನ್ನಲ್ಪಡುವ ಜಗದಾದಿ ದೇವದೇವ ಪರಮ ತತ್ತ್ವ / ಶಕ್ತಿ / ಮೂಲವು.


೭೦) ಆತ್ಮವೆಂದರೇನು? ನಮ್ಮ ಶರೀರದಲ್ಲಿ ಆತ್ಮವೆಲ್ಲಿದೆ? ಅದಕ್ಕೂ ಹೃದಯಕ್ಕೂ, ಮನಸ್ಸಿಗೂ ಸಂಬಂಧವೇನು?

  ಆತ್ಮಾ ಮ ಆತ್ಮನಿ ಶ್ರಿತಃ | ಆತ್ಮಾ ಹೃದಯೇ | ಹೃದಯಂ ಮಯಿ | ಅಹಮಮೃತೇ | ಅಮೃತಂ ಬ್ರಹ್ಮಣಿ || ೧೨ ||


(ಆತ್ಮಾ) ಆತ್ಮವು / ಜೀವಾತ್ಮನು / ಪರಮಾತ್ಮನು / ಆತ್ಮತತ್ತ್ವವು, (ಮೇ) ನನ್ನ, (ಆತ್ಮನಿ ಶ್ರಿತಃ) ಆತ್ಮದಲ್ಲಿ / ದೇಹದಲ್ಲಿ ನೆಲೆಸಿದೆ / ನೆಲೆಸಿರುವನು. “ಅತ ಸಾತತ್ಯ ಗಮನೇ” ಧಾತುವಿನಿಂದ ಆತ್ಮ ಶಬ್ದವು ನಿಷ್ಪನ್ನವಾಗಿದೆ. ದೇಹದ ಕಣ ಕಣದಲ್ಲೂ, ಸತತವೂ ಗಮನಶೀಲ / ಚಲನಶೀಲವಾಗಿ ಅದನ್ನು ಜೀವಂತವಾಗಿಡುವಂಥದ್ದೇ ಆತ್ಮಚೈತನ್ಯವೆಂಬ ವಿದ್ಯುತ್ಕಾಂತೀಯ ಶಕ್ತಿ. ವಿ-ಶೇಷವಾದ ದ್ಯುತಿ / ಬೆಳಕು / ಪ್ರಭಾವಲಯ ಹಾಗೂ ಕಾಂತೀಯ / ಆಕರ್ಷಕ ಶಕ್ತಿಯುಳ್ಳದ್ದು. ದೇಹವನ್ನು, ಹೃದಯಾದಿ ಅಂಗೋಪಾಂಗಗಳನ್ನು ಎಡೆಬಿಡದೆ ಕ್ರಿಯಾನ್ವಿತವಾಗಿ ಇಡುವಂಥ ಪ್ರೇರಕ ಶಕ್ತಿ. ಜೀವೇಂದ್ರಿಯಾದಿಗಳನ್ನು ದಿನೇ ದಿನೇ ಶೀರ್ಯಮಾಣ / ಜೀರ್ಣಗೊಳ್ಳುವ / ಕ್ಷಯಿಸುವ ಶರೀರದಲ್ಲಿ ಶರೀರದ ಸಾಮರ್ಥ್ಯವು ಸಂಪೂರ್ಣ ಶಿಥಿಲವಾಗಿ ಅನರ್ಹವೆನಿಸುವವರೆಗೆ ಹಿಡಿದಿಡುವ ಚಾಲಕ, ಪ್ರೇರಕ, ಮೂಲಚೈತನ್ಯ. “ಅತತಿ ಸಂತತಭಾವೇನ ಜಾಗ್ರತ್-ಸ್ವಪ್ನ-ಸುಷುಪ್ತಿ-ತುರೀಯಾವಸ್ಥಾಸು ಅನುವರ್ತತೇ” --ನಿರಂತರವಾಗಿ (ಅಂತರವಿಲ್ಲದೆ, ಎಡೆ ಬಿಡದೆ) ಎಚ್ಚರ, ಕನಸು, ಗಾಢನಿದ್ದೆ ಹಾಗೂ ಸಮಾಧಿಸ್ಥಿತಿಗಳೆಂಬ ಸಕಲ ಅವಸ್ಥೆಗಳಲ್ಲೂ ದೇಹೇಂದ್ರಿಯಗಳೊಂದಿಗೆ ಪ್ರವರ್ತಿಸುತ್ತಾ, ಪ್ರೇರಿಸುತ್ತಾ ಇರುವುದೇ ಆತ್ಮಾ. (ಆತ್ಮಾ ಹೃದಯೇ) ಅಂತಹ ಆತ್ಮವೂ ಹೃದಯ / ಮನಸ್ಸಿನಲ್ಲಿದೆ / ಅದನ್ನು ಅವಲಂಬಿಸಿದೆ. ಹೃದಯವು ನಿಂತರೆ, ಆತ್ಮವು ಹರಿದ ಬಟ್ಟೆಯನ್ನು ಬಿಟ್ಟು ಹೊಸಬಟ್ಟೆ ತೊಡುವಂತೆ, ಆ ದೇಹ ಬಿಟ್ಟು ಬೇರೆ ಗರ್ಭವನ್ನು ಸೇರಿಕೊಳ್ಳುತ್ತದೆ. ಇನ್ನು, ಮನಸ್ಸು ಜೀವ ಬೇಡವೆಂದು ಜುಗುಪ್ಸೆಯಿಂದ ಆತ್ಮಹತ್ಯೆಗೆ ತೊಡಗಿದರೆ ಕೂಡ, ಆತ್ಮವು ದೇಹವನ್ನು ತೊರೆಯುತ್ತದೆ. ಹಾಗಾಗಿ, ಶರೀರದಲ್ಲಿ ಆತ್ಮದ ಇರುವಿಕೆಯು ಹೃದಯ, ಮನಸ್ಸುಗಳೆರಡನ್ನೂ ಆಧರಿಸಿದೆ. (ಹೃದಯಂ ಮಯಿ) ಅಂತಹ ಹೃದಯ / ಮನಸ್ಸು ನನ್ನಲ್ಲಿದೆ. (ಅಹಮಮೃತೇ) ನಾನು ಅಮೃತಸ್ವರೂಪಿಯಾದ ಆತ್ಮವೇ ಆಗಿದ್ದೇನೆಂಬ ಭಾವದಲ್ಲಿ ನನ್ನ ಬುದ್ಧಿಯು ನೆಲೆಯಾಗಿದೆ. (ಅಮೃತಂ ಬ್ರಹ್ಮಣಿ) ಅಂತಹ ಅಮೃತವೆನಿಸಿದ ಆತ್ಮವೇ ಬ್ರಹ್ಮದೊಳಗಿದ್ದು, ಬ್ರಹ್ಮವೇ ಆಗಿದೆ.


೭೧) ನಾವು ಸಜೀವರಾಗಿರುವಲ್ಲಿ ಆತ್ಮದ ಪಾತ್ರವೇನು?

  ಪುನರ್ಮ ಆತ್ಮಾ ಪುನರಾಯುರಾಗಾತ್ | ಪುನಃ ಪ್ರಾಣಃ ಪುನರಾಕೂತಮಾಗಾತ್ | ವೈಶ್ವಾನರೋ ರಶ್ಮಿಭಿರ್ವೃಧಾನಃ | ಅನ್ತಸ್ತಿಷ್ಠತ್ವಮೃತಸ್ಯ ಗೋಪಾಃ ||


(ಪುನಃ ಮೇ ಆತ್ಮಾ ಪುನಃ ಆಯುಃ ಆಗಾತ್) ನನಗೆ / ನನ್ನ ದೇಹಕ್ಕೆ, ಆತ್ಮವು ಪುನಃ ಪುನಃ ಆಯುಷ್ಯವನ್ನು / ದೀರ್ಘಾಯುವನ್ನು ಕೊಡಲಿ. ನನ್ನ ಆತ್ಮವು ದೀರ್ಘಾವಧಿಯ ವರೆಗೆ ಶರೀರದಲ್ಲಿರಲಿ. (ಪುನಃ ಪ್ರಾಣಃ ಪುನಃ ಆಕೂತಮ್ ಆಗಾತ್) ಅಂತೆಯೇ, ಪುನಃ ಪ್ರಾಣವು ಶರೀರವನ್ನು ಬಹುಕಾಲದವರೆಗೆ ಹೊಂದಿ ಜೀವಂತವಾಗಿಡಲಿ ಎಂದು ನನ್ನ ಇಚ್ಛೆ / ಆಶಯ (ಆಕೂತಮ್)ವಾಗಿದೆ. (ವೈಶ್ವಾನರಃ ರಶ್ಮಿಭಿಃ ವಾ ವೃಧಾನಃ) ವೈಶ್ವಾನರಾಗ್ನಿಯು ತನ್ನ ಕಿರಣಗಳಿಂದ ಶರೀರವನ್ನು ಬೆಚ್ಚಗಿಟ್ಟು ರಕ್ಷಿಸಲಿ / ಧರಿಸಲಿ. (ಅಂತಃ ತಿಷ್ಠತು ಅಮೃತಸ್ಯ ಗೋಪಾಃ) ಅಮೃತತ್ವಕ್ಕೆ ರಕ್ಷಕವಾದ, ಶರೀರವು ಮೃತವಾಗದಂತೆ ಮಾಡುವ ಆತ್ಮವು ಶರೀರದೊಳಗೇ ಇರಲಿ. 

೭೨) ಪರಮಾತ್ಮಾರಾಧನೆಯ ಹಂತಗಳಾವುವು?

ಇತಿ ಯಥಾಲಿಂಗಮಂಗಾನಿ ಸಂಮೃಜ್ಯ ಅಥೈನಂ ಗಂಧಾಕ್ಷತಪತ್ರಪುಷ್ಪಧೂಪದೀಪನೈವೇದ್ಯತಾಂಬೂಲೈರಭ್ಯರ್ಚ್ಯ ಆತ್ಮಾನಂ ಪ್ರತ್ಯಾರಾಧಯೇತ್ || 


ಹೀಗೆಂದು, ಯಥಾವಿಧಿ ಶಿವಲಿಂಗವನ್ನೂ, ಅದರ ಪೀಠಾದಿಗಳನ್ನೂ, ಸಂಪುಟದಲ್ಲಿ ಜೊತೆಗಿರುವ ಇತರ ದೇವತಾ ಪ್ರತೀಕಗಳನ್ನೂ ಚೆನ್ನಾಗಿ ತೊಳೆದು (ಸಂ ಮೃಜ್ಯ—  ಮಾರ್ಜನ ಮಾಡಿ), ತರುವಾಯ (ಅಥ) , ಅದನ್ನು / ಅವನನ್ನು (ಏನಂ), ಗಂಧ-ಅಕ್ಷತೆ-ಪತ್ರ / ಎಲೆ-ಪುಷ್ಪ-ಧೂಪ / ಅಗರಬತ್ತಿ ಹೊಗೆ-ದೀಪ / ಆರತಿ-ನೈವೇದ್ಯ-ತಾಂಬೂಲಗಳಿಂದ ಚೆನ್ನಾಗಿ ಅರ್ಚಿಸಿ, ಆತ್ಮನನ್ನು / ಪರಮಾತ್ಮನನ್ನು ಕುರಿತು ಆರಾಧಿಸಬೇಕು.

೭೩) ಶಿವಧ್ಯಾನದ ಪರಿಯೇನು?

ಅಥಾತ್ಮಾನಂ ಶಿವಾತ್ಮಾನಂ ಶ್ರೀರುದ್ರರೂಪಂ ಧ್ಯಾಯೇತ್ |

ಅಥಾತ್ಮಾನಂ ಶಿವಾತ್ಮಾನಂ ಪಞ್ಚಾಸ್ಯಂ ಚಿನ್ತಯೇದ್ಬುಧಃ || ೧ ||


(ಅಥ-ಆತ್ಮಾನಂ) ಮಂಗಳಾತ್ಮಕನನ್ನು, (ಶಿವಾತ್ಮಾನಂ) ಶುಭಪ್ರದಾತ್ಮನನ್ನು, (ಶ್ರೀರುದ್ರರೂಪಂ) ಸಕಲೈಶ್ವರ್ಯಯುತನಾದ ರುದ್ರರೂಪನನ್ನು, (ಧ್ಯಾಯೇತ್) ಧ್ಯಾನಿಸಬೇಕು. (ಅಥ-ಆತ್ಮಾನಂ) ಅನಂತರ, ತನ್ನೊಳಗಿನ ಆತ್ಮನನ್ನು, (ಶಿವಾತ್ಮಾನಂ) ಕಲ್ಯಾಣಾತ್ಮಕನನ್ನು, ಶಿವಾತ್ಮನೆಂದೇ ತಿಳಿದು “ಅಹಂ ಬ್ರಹ್ಮಾಸ್ಮಿ”, “ತತ್ ತ್ವಮ್ ಅಸಿ”, “ಅಯಮ್ ಆತ್ಮಾ ಬ್ರಹ್ಮ” ಎಂಬಿತ್ಯಾದಿ ಶ್ರುತಿವಚನಗಳಂತೆ, (ಪಂಚಾಸ್ಯಂ) ಸದ್ಯೋಜಾತ, ವಾಮದೇವ, ಅಘೋರ, ಈಶಾನ, ತತ್ಪುರುಷವೆಂಬ ೫ ಮುಖಗಳುಳ್ಳ ಸದಾಶಿವನನ್ನು / ಪಂಚೇಂದ್ರಿಯಗಳೆಂಬ ೫ ವಿಧದ ಹೊರಮುಖವಾದ ಬಾಗಿಲುಗಳುಳ್ಳ ದೇಹದೊಳಗಿನ ಅನ್ತರ್ಯಾಮಿಯಾದ ಆತ್ಮನನ್ನು, (ಬುಧಃ ಚಿನ್ತಯೇತ್) ಜ್ಞಾನಿಯಾದವನು ಚಿಂತಿಸಬೇಕು, ಧ್ಯಾನಿಸಬೇಕು.


ತ್ರಿಲೋಚನಂ ಚತುರ್ಬಾಹುಂ ಸರ್ವಾಭರಣಭೂಷಿತಮ್ |

ನೀಲಗ್ರೀವಂ ಶಶಾಙ್ಕಾಙ್ಕಂ ಶುದ್ಧಸ್ಫಟಿಕಸನ್ನಿಭಮ್ || ೨ ||


ಸೂರ್ಯ-ಚಂದ್ರ-ಅಗ್ನಿಗಳೆಂಬ ಸ್ಥಿತಿ-ಸೃಷ್ಟಿ-ಲಯಗಳ ಪ್ರತೀಕವಾದ ಸತ್ತ್ವ-ರಜ-ತಮೋಗುಣಮಯವಾದ ಅನುಕ್ರಮವಾಗಿ ಬಲ-ಎಡ-ಹಣೆಗಳಲ್ಲಿ ಮೂರು ಲೋಚನ / ಕಣ್ಣುಗಳಿರುವವನಾಗಿ ತ್ರಿಲೋಚನ / ಮುಕ್ಕಣ್ಣ (ಮೂರು ಕಣ್ಣುಗಳಿರುವವನು) / ತ್ರಿನೇತ್ರ / ತ್ರಿನಯನನೆನಿಸಿದ, ಋಗ್ಯಜುಸ್ಸಾಮಾಥರ್ವಗಳೆಂಬ ನಾಲ್ಕು ವೇದಸಂಹಿತೆಗಳ, ಆಯುರ್ವೇದ (ವೈದ್ಯಶಾಸ್ತ್ರ)-ಧನುರ್ವೇದ (ಯುದ್ಧವಿದ್ಯೆ)-ಗಾಂಧರ್ವವೇದ (ಸಂಗೀತ)-ಸ್ಥಾಪತ್ಯವೇದ(ವಾಸ್ತುಶಿಲ್ಪ) ಗಳೆಂಬ ೪ ಉಪವೇದಗಳ, ಧರ್ಮಾರ್ಥಕಾಮಮೋಕ್ಷಗಳೆಂಬ ೪ ವಿಧದ ಪುರುಷಾರ್ಥಗಳ, ಬ್ರಾಹ್ಮ-ಕ್ಷಾತ್ರ-ವೈಶ್ಯ-ಶೂದ್ರವೆಂಬ ೪ ಗುಣ-ಕರ್ಮಾಧಾರಿತ ವರ್ಣಗಳ ಪ್ರತೀಕವಾದ ೪ ಬಾಹುಗಳುಳ್ಳ, ಸಕಲ ಆಭರಣಗಳಿಂದ ಭೂಷಿತ / ಅಲಂಕೃತನಾದ, ದೇವಾಸುರರ ಸಮುದ್ರಮಥನದಲ್ಲುದಿಸಿದ ಹಾಲಾಹಲ / ಕಾಲಕೂಟವೆಂಬ ಭಯಾನಕ ವಿಷವನ್ನುಂಡು ನೀಲವರ್ಣದ ಕಂಠವುಳ್ಳವನಾಗಿ ನೀಲಗ್ರೀವನೆನಿಸಿದ, ಮೊಲದ ಆಕೃತಿಯಂತೆ ತೋರುವ ಗುರುತುಳ್ಳ ಚಂದ್ರನನ್ನು ಶಿರದಲ್ಲಿ ಧರಿಸಿ ಶಶಾಂಕಾಂಕ / ಚಂದ್ರಮೌಳೀಶ್ವರನೆನಿಸಿದ (ಶಶ=ಮೊಲ, ಶಶಾಂಕ—ಚಂದ್ರ, ಶಶಾಂಕದ ಅಂಕ / ಗುರುತು ಉಳ್ಳ ಶಿವನೇ ಶಶಾಂಕಾಂಕನು), ಪರಿಶುದ್ಧವಾದ ನಿಷ್ಕಳಂಕವಾದ ಸ್ಫಟಿಕದಂತೆ ಶುಭ್ರವಾಗಿ ಶೋಭಿಸುವ ಮೈಬಣ್ಣವುಳ್ಳ ಸದಾಶಿವನನ್ನು ವಂದಿಸುತ್ತೇವೆ.


ನಾಗಯಜ್ಞೋಪವೀತಂ ಚ ವ್ಯಾಘ್ರಚರ್ಮೋತ್ತರೀಯಕಮ್ |

ಕಮಣ್ಡಲುಧರಂ ದೇವಮಕ್ಷಮಾಲಾಧರಂ ವಿಭುಮ್ || ೩ ||


ನಾಗ (“ನಗೇ ಭವಃ”-- ಪರ್ವತದಲ್ಲಿರುವ; “ದಹತಿ ಅಸ್ಮಾತ್ ವಿಷಾಗ್ನಿನಾ ಇತಿ”-- ತನ್ನ ಘೋರ ವಿಷವೆಂಬ ಅಗ್ನಿಯಿಂದ ದಹಿಸಬಲ್ಲದ್ದು ನಾಗ) ನನ್ನೇ ಯಜ್ಞೋಪವೀತ / ಜನಿವಾರವನ್ನಾಗಿ ಮಾಡಿಕೊಂಡ, ವ್ಯಾಘ್ರಚರ್ಮ / ಹುಲಿತೊಗಲನ್ನೇ ಉತ್ತರೀಯವಾಗಿ ಮೈಗೆ ಹೊದ್ದುಕೊಂಡ / ಧರಿಸಿರುವ, ಕಮಂಡಲುವನ್ನು ಕರದಲ್ಲಿ ಪಿಡಿದ ಹಾಗೂ ಅಕ್ಷಮಾಲೆ / ಜಪಸರವನ್ನು ಧರಿಸಿದ ಜಗತ್ಪ್ರಭುವಾದ ಪರಶಿವನನ್ನು (ಅರ್ಚಿಸುತ್ತೇವೆ.)


ವರದಾಭಯಹಸ್ತಂ ಚ ನಮಜ್ಜನವರಪ್ರದಮ್ |

ವೃಷಪೃಷ್ಠಸಮಾರೂಢಮುಮಾದೇಹಾರ್ಧಧಾರಿಣಮ್ || ೪ ||


ವರವನ್ನು ನೀಡುವಂಥ ಅಭಯಪ್ರದ ಮುದ್ರೆಯುಳ್ಳ ಹಸ್ತವುಳ್ಳವನೂ (“ವರಂ ದದಾತಿ ಇತಿ ವರದಃ”), ನಮಸ್ಕರಿಸುತ್ತಿರುವ ಜನರಿಗೆ ವರಪ್ರದಾಯಕನೂ (ನಮತ್+ಜನ+ವರ+ಪ್ರದಮ್), ವೃಷಭದ / ನಂದಿಯ / ಎತ್ತಿನ / ಹೋರಿಯ ಬೆನ್ನೇರಿ ಕುಳಿತು ವೃಷಭವಾಹನನೆನಿಸಿದವನೂ (ಸಮ್ ಆರೂಢಮ್— ಚೆನ್ನಾಗಿ ಆರೂಢನಾದ / ಏರಿದ), ಹಾಗೂ ತನ್ನ ದೇಹದ ವಾಮಾರ್ಧಭಾಗದಲ್ಲಿ (ಎಡಗಡೆಯ ಅರ್ಧ) ತನ್ನ ಪತ್ನಿಯಾದ ಉಮೆಯನ್ನು ಧರಿಸಿ ಉಮಾಮಹೇಶ್ವರ / ಅರ್ಧನಾರೀಶ್ವರನೆನಿಸಿದ (ಪರಮೇಶ್ವರನನ್ನು ಪೂಜಿಸುತ್ತೇವೆ.) 

(ಉ— ಸಂಬೋಧನೆ, ಮಾ— ಬೇಡ ಎಂಬ ನಿಷೇಧಾರ್ಥಕ ಪದ. ಕೇವಲ ಪರ್ಣ / ಎಲೆಗಳನ್ನೇ ತಿನ್ನುತ್ತಾ ಶಿವನನ್ನು ವರಿಸಲೋಸುಗ ಕಠಿಣ ತಪಗೈಯುತ್ತಿದ್ದ ಪರ್ವತರಾಜ / ಗಿರಿರಾಜನಾದ ಹಿಮವಂತನ ಏಕಪರ್ಣಾ, ಏಕಪಾಟಲಾ, ಪಾರ್ವತಿಯೆಂಬ ಮೂವರು ಪುತ್ರಿಯರಲ್ಲಿ ಹಿರಿಯವಳಾದ ಪಾರ್ವತಿ / ಹೈಮವತಿ / ಗಿರಿಜೆಯನ್ನು “ಉ”— ಎಲೌ ಎಂದು ಸಂಬೋಧಿಸಿ ಕರೆದ ಆಕೆಯ ತಾಯಿ ಮೇನೆಯು “ಮಾ”— ಬೇಡ, ಕಷ್ಟಸಾಧ್ಯವಾದ ತಪದಿಂದ ದೇಹವನ್ನು ಕೃಶಪಡಿಸಬೇಡ ಎಂದು ಪುನಃ ಪುನಃ ಹೇಳಿದ್ದರಿಂದ “ಉಮಾ” ಎಂಬ ಹೆಸರು ಆಕೆಗೆ ಬಂತು.)


ದುರ್ದನ್ತಂ ಕಪಿಲ ( / ಪಿಙ್ಗಲ)ಜಟಂ ಶಿಖಾಮುದ್ಯೋತಧಾರಿಣಮ್ |

ಅಮೃತೇನಾಪ್ಲುತಂ ಹೃಷ್ಟಂ ದಿವ್ಯಭೋಗಸಮನ್ವಿತಮ್ || ೫ ||


ದುಷ್ಕರವಾಗಿ ಇಂದ್ರಿಯಗಳನ್ನು ಬಿಗಿಹಿಡಿದು ತಪೋಮಗ್ನನಾದ / ಪಿನಾಕವೆಂಬ ಧನುಸ್ಸನ್ನು ಧರಿಸಿ ಅಪ್ರತಿಮ ಬಿಲ್ಗಾರನಾದ / ತೀಕ್ಷ್ಣವಾದ ಬಾಣವನ್ನು ಹೊಂದಿರುವ (ದುರ್ದನ್ತಂ), ಕಂದು / ಕೆಂಚು ಬಣ್ಣದ ಜಟೆಯನ್ನು ಶಿರದಲ್ಲಿ ಹೊಂದಿರುವ (ಕಪಿಲ / ಪಿಂಗಲಜಟಂ), ಮೇಲಕ್ಕೆ ಕಟ್ಟಿದ ಜುಟ್ಟನ್ನು ಧರಿಸಿರುವ (ಶಿಖಾಮ್ -ಉತ್- ಯೋತ -ಧಾರಿಣಮ್), ಅಮೃತದಿಂದ ಪರಿಪ್ಲುತವಾದ / ಸಮೃದ್ಧವಾದ, ಸದಾ ಆನಂದಮಯನಾದ / ಹರ್ಷಚಿತ್ತನಾದ, ದಿವ್ಯವಾದ ಭೋಗ / ಸುಖಗಳಿಂದ ಸಮನ್ವಿತನಾದ / ಕೂಡಿದ (ಭಗವಾನ್ ರುದ್ರದೇವನನ್ನು ಅರ್ಚಿಸುತ್ತೇವೆ.)


ದಿಗ್ದೇವತಾಸಮಾಯುಕ್ತಂ ಸುರಾಸುರನಮಸ್ಕೃತಮ್ |

ನಿತ್ಯಂ ಚ ಶಾಶ್ವತಂ ಶುದ್ಧಂ ಧ್ರುವಮಕ್ಷರಮವ್ಯಯಮ್ || ೬ ||


ಅಷ್ಟದಿಕ್ಕಿನ ಅಧಿಪತಿ ದೇವತೆಗಳಾದ ಇಂದ್ರ (ಪೂರ್ವ), ಅಗ್ನಿ (ಆಗ್ನೇಯ), ಯಮ (ದಕ್ಷಿಣ), ನಿರುತಿ (ನೈರುತ್ಯ), ವರುಣ (ಪಶ್ಚಿಮ), ವಾಯು (ವಾಯವ್ಯ), ಕುಬೇರ (ಉತ್ತರ)— ಇವರೊಂದಿಗೊಡಗೂಡಿ ತಾನೇ ಈಶಾನಮೂರ್ತಿಯಾಗಿ (ಈಶಾನ್ಯ), ಸುರ-ಅಸುರ / ದೇವ-ದಾನವರಿಂದ ನಮಿಸಲ್ಪಟ್ಟ, ನಿತ್ಯನೂ, ಶಾಶ್ವತನೂ, ಪರಿಶುದ್ಧನೂ / ಪರಮಪವಿತ್ರನೂ, ಧ್ರುವ / ಸ್ಥಿರನೂ (“ಧ್ರುವತಿ ಸ್ಥಿರೀಭವತೀತಿ ಧ್ರುವಃ”-- ಸ್ಥಿರವಾಗಿರುತ್ತಾನೆಂಬುದರಿಂದ ಧ್ರುವನು), ಅಕ್ಷರನೂ (ನ ಕ್ಷರತೀತಿ— ನಾಶಹೊಂದದವನೂ), ಅವ್ಯಯನೂ (ವ್ಯಯವಾಗಿ ಮುಗಿದುಹೋಗದವನೂ, ಕ್ಷಯಿಸಿಹೋಗದವನೂ) ಆದ (ಪರಮಶಿವನನ್ನು ಧ್ಯಾನಿಸಬೇಕು.)

೭೪) ಸುರ, ಅಸುರ ಶಬ್ದಗಳ ವಿವಿಧ ಅರ್ಥಗಳೇನು? ಇದರ ಹಿನ್ನೆಲೆಯೇನು?

ಟಿಪ್ಪಣಿ—  “ಸುಷ್ಠು ರಾತಿ ದದಾತಿ ಅಭೀಷ್ಟಮ್ ಇತಿ ಸುರಃ”— ಬೇಡಿದವರಿಗೆ ಅಭೀಷ್ಟಗಳನ್ನು ಧಾರಾಳವಾಗಿ / ಉದಾರವಾಗಿ ನೀಡುವವನು ಸುರನು. “ಸುರತಿ ಶೋಭತೇ ಇತಿ ವಾ”— ಅಥವಾ ದೇದೀಪ್ಯಮಾನವಾಗಿ ಸ್ವಯಂ ಪ್ರಕಾಶಿಸಿ ಶೋಭಿಸುವವನು ಸುರನು. “ಸುರ ದೀಪ್ತೌ ಐಶ್ವರ್ಯೇ ವಾ”— ದೀಪ್ತಿ ಅಥವಾ ಈಶ್ವರತ್ವ / ಒಡೆತನ ಎಂಬರ್ಥದ ಸುರ ಧಾತು. “ಸುನೋತಿ ಇತಿ ಸುರಃ”— ಸುರಾಪಾನ / ಸೋಮಪಾನ ಮಾಡಿದವನೇ ಸುರನು. ಷುಞ್ ಅಭಿಷವೇ ಧಾತು. “ಅಭಿಷವಃ ಸ್ನಪನ-ಪೀಡನ-ಸ್ನಾನ-ಸುರಾಸಂಧಾನಾದಿಃ”— ಅಭಿಷವಪದಕ್ಕೆ ಯಜ್ಞ-ಸ್ನಾನ/ಸ್ನಪನ,ದುಷ್ಟಮರ್ದನ,  ಸೋಮಲತಾ-ರಸ (ಸುರಾ/ಮದ್ಯ)ಪಾನ, ಇತ್ಯಾದಿ ಅರ್ಥಗಳಿವೆ. ಕಶ್ಯಪ-ಅದಿತಿ ಪುತ್ರರಾದ ಆದಿತ್ಯರೇ ಮುಂತಾದವರು ಸುರರು, ಅಮೃತಪಾನ ಮಾಡಿ ಅಮರರಾದವರು. 

“ಅಸ್ಯತಿ ದೇವಾನ್ ಕ್ಷಿಪತಿ ಇತಿ ಅಸುರಃ”— ದೇವತೆಗಳನ್ನು ಹೊಡೆದೋಡಿಸುವವನು ಅಸುರನು. “ನ ಸುರಃ ವಿರೋಧೇ ನಞ್-ತತ್ಪುರುಷಃ”— ಸುರನಲ್ಲದವನು, ಸುರವಿರೋಧಿ ಎಂಬುದಾಗಿ ವಿರೋಧಾರ್ಥದಲ್ಲಿ ನಞ್-ತತ್ಪುರುಷ ಸಮಾಸ. “ನಾಸ್ತಿ ಸುರಾ ಯಸ್ಯ ಸಃ”— ಸುರೆ / ಸೋಮರಸಯುಕ್ತ ಯಜ್ಞಹವಿಸ್ಸು ಯಾರಿಗೆ ಇಲ್ಲವೋ ಅಂಥವನು ಅಸುರ. "ಅಸೂಯಾರತಃ ಅಸುರಃ" ಅಸೂಯೆಯಲ್ಲೇ ತೊಡಗಿರುವವನು, ನಿರತನಾದವನು ಅಸುರನು. "ಅಸುಷು ರತಃ, ನ ಆತ್ಮರತಃ" ಅಸುರನು ತನ್ನ ಪ್ರಾಣರಕ್ಷಣೆ, ಶರೀರವರ್ಧನೆ ಮುಂತಾದ ಐಹಿಕತೆಯಲ್ಲೇ ನಿರತನಾಗಿದ್ದು, ಆತ್ಮನಲ್ಲಿ ರತಿ / ಆನಂದ ವನ್ನು ಹೊಂದದ ಅಜ್ಞಾನಿ, ಆತ್ಮಜ್ಞಾನರಹಿತನು. ಸೂರ್ಯನ ಪರವಾಗಿ, “ಅಸತಿ ದೀಪ್ಯತೇ ಇತಿ ಅಸುರಃ”— ಬೆಳಗುವ, ಪ್ರಕಾಶಿಸುವ ಸೂರ್ಯನಿಗೂ ಅಸುರನೆನ್ನಲಾಗಿದೆಯೆಂಬುದು ಇಲ್ಲಿ ಅಪ್ರಸ್ತುತ. ಕಶ್ಯಪ-ದಿತಿಗೆ ಜನಿಸಿದ ದೈತ್ಯರು ಹಾಗೂ ದನುವಿಗೆ ಜನಿಸಿದ ದಾನವರು ಮುಂತಾದ ಆಸುರೀಪ್ರವೃತ್ತಿಯ ದುಷ್ಟರನ್ನು ಇಲ್ಲಿ ಅಸುರರೆನ್ನಲಾಗಿದೆ. 


“ಸುರಾ-ಪ್ರತಿಗ್ರಹಾದ್ದೇವಾಃ ಸುರಾ ಇತ್ಯಭಿವಿಶ್ರುತಾಃ |

ಅಪ್ರತಿಗ್ರಹಣಾತ್ ತಸ್ಯ ದೈತೇಯಾಶ್ಚಾಸುರಾಃ ಸ್ಮೃತಾಃ || ಇತಿ ರಾಮಾಯಣೇ”— 


ಶ್ರೀಮದ್ರಾಮಾಯಣದ ಪ್ರಕಾರ, ಸುರೆ / ಸೋಮರಸದ ಪ್ರತಿಗ್ರಹ / ಸ್ವೀಕಾರದಿಂದಾಗಿ ದೇವತೆಗಳು ಸುರರೆಂದು ಪ್ರಸಿದ್ಧರಾಗಿರುವರು. ದೈತ್ಯರು ಸೋಮರಸ / ಸುರೆಯನ್ನು ಸ್ವೀಕರಿಸದಿದ್ದುದರಿಂದ ಅಸುರರೆನಿಸಿದರು. ಸುರಾ ಎಂದರೆ ಕೆಲವೆಡೆ ಕಲಿಯ ತಾಯಿ ಸ್ತುತೆಯೆಂದೂ, ಇತರ ಕಡೆ ‘ಮದ’ ನ ಮಗನಾದ ಕಲಿಯ ಪತ್ನಿಯೆಂದೂ, ಸಮುದ್ರಮಥನಸಂಭೂತೆಯಾದ ವಾರುಣೀ /ಮದಿರಾದೇವಿಯೆಂದೂ ಅರ್ಥಗಳಿವೆ. 

೭೫) ಶಿವಧ್ಯಾನಮಾಡಿ ಹೇಗೆ ಆತನ ಆರಾಧನೆಯನ್ನು ಮಾಡಬೇಕು?

ಸರ್ವವ್ಯಾಪಿನಮೀಶಾನಂ ರುದ್ರಂ ವೈ ವಿಶ್ವರೂಪಿಣಮ್ |

ಏವಂ ಧ್ಯಾತ್ವಾ ದ್ವಿಜಃ ಸಮ್ಯಕ್ತತೋ ಯಜನಮಾರಭೇತ್ || ೭ ||


ಜಗತ್ತಿನೆಲ್ಲೆಡೆ ವ್ಯಾಪಿಸಿ (“ವಿಶ್ವಂ ವ್ಯಾಪ್ನೋತಿ ಪ್ರವಿಶತಿ ಚ ಇತಿ ವಿಷ್ಣುಃ”— ವಿಶ್ವವನ್ನೇ ವ್ಯಾಪಿಸುತ್ತಾನೆ ಹಾಗೂ ಅದನ್ನು, ಅದರ ಸಕಲ ಚರಾಚರಗಳನ್ನೂ ಪ್ರವೇಶಿಸುತ್ತಾನೆಂಬುದರಿಂದ ವಿಷ್ಣುವು.) ವಿಷ್ಣುರೂಪಿಯಾದ (ಸರ್ವ-ವ್ಯಾಪಿನಮ್), ಸರ್ವವಿದ್ಯಾಧಿಪತಿಯಾಗಿ ಪರಮಗುರುವೆನಿಸಿದ ಈಶಾನ್ಯದಿಕ್ಕಿನ ಅಧಿಪತಿಯಾಗಿ ಈಶಾನನೆನಿಸಿದ (ಈಶಾನಮ್) (“ಈಶಾನಃ ಸರ್ವವಿದ್ಯಾನಾಮ್”— ಶ್ರುತಿ), ರೋದಿಸುವವರ ದುಃಖಹರಣಮಾಡಿ ರಕ್ಷಿಸಿ, ದುಷ್ಟಸಂಹಾರ ಮಾಡುವ ಕ್ರೋಧಾಗ್ನಿಮೂರ್ತಿಯಾಗಿ  ರುದ್ರನೆನಿಸಿದ (ರುದ್ರಂ), ಸೃಷ್ಟಿಕಾಲದಲ್ಲಿ ತಾನೇ ಸಮಗ್ರ ವಿಶ್ವವಾಗಿ ಮೂರ್ತಿವೆತ್ತು / ಆಕಾರ ತಾಳಿ ವಿಶ್ವರೂಪಿಯೆನಿಸಿದ (ವೈ ವಿಶ್ವರೂಪಿಣಮ್), ಹರನು— ಎಂಬುದಾಗಿ (ಏವಂ), ಭಗವಾನ್ ಉಮಾಮಹೇಶ್ವರ / ಶಂಕರ / ಸಾಂಬಶಿವನನ್ನು  ಚೆನ್ನಾಗಿ ಧ್ಯಾನಿಸಿ (ಸಮ್ಯಕ್ ಧ್ಯಾತ್ವಾ), ದ್ವಿಜನು (ದ್ವಿಜಃ), ತರುವಾಯ (ತತಃ), ಶತರುದ್ರೀಯ ಯಾಗ / ರುದ್ರಾಭಿಷೇಕಪೂರ್ವಕ ಶಿವಪೂಜೆಯನ್ನು (ಯಜನಮ್), ಆರಂಭಿಸಬೇಕು (ಆರಭೇತ್).


ಆರಾಧಿತೋ ಮನುಷ್ಯೈಸ್ತ್ವಂ ಸಿದ್ಧೈರ್ದೇವಾऽಸುರಾದಿಭಿಃ |

ಆರಾಧಯಾಮಿ ಭಕ್ತ್ಯಾ ತ್ವಾ|ऽನುಗೃಹಾಣ ಮಹೇಶ್ವರ ||


(ಹೇ) ಮಹೇಶ್ವರ! (ಅಯ್ಯಾ ಪರಶಿವನೇ!), ತ್ವಮ್ (ನೀನು), ಮನುಷ್ಯೈಃ ಸಿದ್ಧೈಃ ದೇವ-ಅಸುರಾದಿಭಿಃ (ಮನುಷ್ಯರಿಂದ, ಸಿದ್ಧರಿಂದ, ದೇವತೆಗಳಿಂದ ಹಾಗೂ ದೈತ್ಯ-ದಾನವಾದಿ ಸಮಸ್ತ ಜೀವರಿಂದ), ಆರಾಧಿತಃ (ಆರಾಧಿಸಲ್ಪಟ್ಟಿರುವೆ, ಪೂಜಿಸಲ್ಪಟ್ಟಿರುವೆ.)| ತ್ವಾ / ತ್ವಾಮ್ (ನಿನ್ನನ್ನು), ಭಕ್ತ್ಯಾ (ಭಕ್ತಿಯಿಂದ), ಆರಾಧಯಾಮಿ (ಆರಾಧಿಸುತ್ತೇನೆ.) | ಅನುಗೃಹಾಣ (ಅನುಗ್ರಹಿಸು ದೇವ!) ||

೭೬) ರುದ್ರರನ್ನು ಆಮಂತ್ರಿಸುವ ವಿಧಾನವು ಹೇಗೆ?

ಓಂ ಆ ತ್ವಾವಹಂ ತು ಹರಯಃ ಸಚೇತಸಃ ಶ್ವೇತೈರಶ್ವೈಃ ಸಹಕೇತುಮದ್ಭಿಃ | ವಾತಾಜಿತೈರ್ಬಲವದ್ಭಿರ್ಮನೋಜವೈರಾಯಾಹಿ ಶೀಘ್ರಂ ಮಮ ಹವ್ಯಾಯ ಶರ್ವೋಮ್ ||

(ಸೌತ್ರಮಂತ್ರಃ— ಸೂತ್ರಕಾರೋಕ್ತಮಂತ್ರ)

ಪದಚ್ಛೇದಃ— ಆ ತ್ವಾ ವಹನ್ತು ಹರಯಃ ಸ-ಚೇತಸಃ ಶ್ವೇತೈಃ ಅಶ್ವೈಃ ಸಹ ಕೇತು-ಮತ್-ಭಿಃ | ವಾತ-ಅಜಿತೈಃ ಬಲವತ್-ಭಿಃ ಮನೋ-ಜವೈಃ ಆ-ಯಾಹಿ ಶೀಘ್ರಂ ಮಮ ಹವ್ಯಾಯ ಶರ್ವ ಓಮ್ ||

ಅನ್ವಯಾರ್ಥಃ— (ಹೇ) ಶರ್ವ! (ಅಯ್ಯಾ ಶಿವನೇ!), ತ್ವಾ (— ತ್ವಾಮ್— ನಿನ್ನನ್ನು), ಓಮ್ (ಸ್ವಾಗತಿಸುತ್ತೇನೆ.), ಸಚೇತಸಃ (ಪ್ರಾಣವಂತರಾದ, ಚೈತನ್ಯಯುಕ್ತರಾದ, ಪ್ರಜ್ಞಾಸಹಿತರಾದ, ಜ್ಞಾನಿಗಳ ಸಮೇತರಾದ), ಹರಯಃ (ರುದ್ರಗಣಗಳು / ಏಕಾದಶರುದ್ರರು / ಶತರುದ್ರರು / ಸುಜ್ಞಾನಿಗಳು / ನಮ್ಮ ಪಾಪಹರಣ ಮಾಡಬಲ್ಲವರು), ಕೇತುಮದ್ಭಿಃ (ನಾನಾ ಚಿಹ್ನೆ-ಅಲಂಕಾರಗಳಿಂದ ಕೂಡಿದ / ಪ್ರಜ್ಞಾನಯುಕ್ತ), ವಾತಾಜಿತೈಃ (ವಾಯುವಿನಿಂದ ಗೆಲ್ಲಲಾಗದಷ್ಟು ವೇಗವುಳ್ಳ / ವಾಯುವೇಗವನ್ನು ಮೀರಿದ ವೇಗವುಳ್ಳ), ಮನೋಜವೈಃ (ಮನೋವೇಗವುಳ್ಳ), ಬಲವದ್ಭಿಃ (ಬಲಶಾಲಿಗಳಾದ), ಶ್ವೇತೈಃ ಅಶ್ವೈಃ ಸಹ (ಅಚ್ಚ ಬಿಳಿಯ ಬಣ್ಣದ, ಕುದುರೆಗಳೊಡಗೂಡಿ / ಕುದುರೆಗಳನ್ನೇರಿ), ಶೀಘ್ರಂ (ತ್ವರಿತಗತಿಯಿಂದ / ವೇಗವಾಗಿ / ಬಹುಬೇಗನೆ), ಮಮ ಹವ್ಯಾಯ (ನನ್ನ ಶತರುದ್ರೀಯ ಹೋಮಕ್ಕೆ), ಆವಹನ್ತು (ನಿನ್ನನ್ನು / ಶಿವನನ್ನು ಕರೆತರಲಿ.), ಆಯಾಹಿ (ಹೇ ಪರಶಿವನೇ! ನೀನು ಬೇಗನೆ ಬಾ / ಆಗಮಿಸು.)

ತಾತ್ಪರ್ಯಮ್— ಹೇ ಸದಾಶಿವನೇ! ಜ್ಞಾನಿಗಳೂ, ವಿಶೇಷ ಚೈತನ್ಯದಿಂದ ಕೂಡಿದವರೂ ಆದ ಶಿವಗಣಗಳು, ನಾನಾಲಂಕೃತ ವಾಯುವೇಗವನ್ನು ಮೀರಿದ ಮನೋವೇಗವುಳ್ಳ ಬಲಿಷ್ಠ ಶ್ವೇತಹಯಾರೂಢರಾಗಿ ಬೇಗನೆ ನಾನು ಕೈಗೊಂಡಿರುವ ಶತರುದ್ರೀಯಹವನಕ್ಕೆ ನಿನ್ನನ್ನು ಕರೆದುಕೊಂಡು ಬರಲಿ. ನೀನು ಶೀಘ್ರವಾಗಿ ಆಗಮಿಸು. ನಿನಗೆ ಸುಸ್ವಾಗತ ಹೇ ಉಮಾಪತಿಯೇ! 


(ಅಥವಾ— ಶರ್ವನೆ, ನಿನ್ನನ್ನು ಪ್ರಜ್ಞೆಯುಳ್ಳ ಕುದುರೆಗಳು ಹೊತ್ತುತರಲಿ. ಗಾಳಿಯ ವೇಗವನ್ನು ಗೆದ್ದ, ಮನೋವೇಗವುಳ್ಳ, ಬಲವುಳ್ಳ ಹಾಗೂ ಪತಾಕೆಯುಳ್ಳ ಬಿಳಿಕುದುರೆಗಳಿಂದ ನನ್ನ ಈ ಪೂಜಾಕಾರ್ಯಕ್ಕೆ ಬೇಗನೆ ಆಗಮಿಸು.— ಡಾ. ಕೃಷ್ಣಮೂರ್ತಿ ನಿಟಿಲಾಪುರ “ಮಂತ್ರವಾಹಿನೀ”)

೭೭) ಪರಮೇಶ್ವರನ ಶ್ರೇಷ್ಠತ್ವದ ಪ್ರಮಾಣ ಯಾವುದು?

ಈಶಾನಃ ಸರ್ವವಿದ್ಯಾನಾಮೀಶ್ವರಃ ಸರ್ವಭೂತಾನಾಂ ಬ್ರಹ್ಮಾಧಿಪತಿರ್ಬ್ರಹ್ಮಣೋऽಧಿಪತಿರ್ಬ್ರಹ್ಮಾ ಶಿವೋ ಮೇ ಅಸ್ತು ಸದಾಶಿವೋಮ್ ||

(ತೈತ್ತಿರೀಯೋಪನಿಷತ್ ೪-೨೧)

ಪದಚ್ಛೇದಃ— ಈಶಾನಃ ಸರ್ವ-ವಿದ್ಯಾನಾಮ್ ಈಶ್ವರಃ ಸರ್ವಭೂತಾನಾಂ ಬ್ರಹ್ಮ-ಅಧಿಪತಿಃ ಬ್ರಹ್ಮಣಃ ಅಧಿಪತಿಃ ಬ್ರಹ್ಮಾ ಶಿವಃ ಮೇ ಅಸ್ತು ಸದಾಶಿವ ಓಮ್ ||

ಅನ್ವಯಾರ್ಥಃ— (ಹೇ) ಸದಾಶಿವ! (ಅಯ್ಯಾ ಸದಾಶಿವನೇ!), ಸರ್ವವಿದ್ಯಾನಾಮ್ ಈಶಾನಃ (ಎಲ್ಲ ವಿದ್ಯೆ-ಜ್ಞಾನಗಳಿಗೆ ಒಡೆಯನಾಗಿ, ಒಡೆತನ, ಹಿರಿತನ, ಮಾಹೇಶ್ವರಸೂತ್ರಗಳೆಂಬ ವಾಕ್ಕಿನ ವ್ಯಾಕರಣಮೂಲತ್ವ, ಶಕ್ತಿಯೆನಿಸಿದ ಪಾರ್ವತಿಯ ಪತಿತ್ವಗಳೆಂಬ ಗುಣಲಕ್ಷಣಗಳನ್ನು ಹೊಂದಿ ಹಾಗೂ ಈಶಾನದಿಕ್ಪತಿಯಾಗಿ ಈಶಾನನೆನಿಸಿದ)(“ತಾತ್-ಶೀಲ್ಯ-ವಯೋ-ವಚನ-ಶಕ್ತಿಷು”— ಹೆಸರಿನ ಅನ್ವರ್ಥಕವಾದ ಗುಣವಾದ ಈಶ್ವರತ್ವ, ಸರ್ವಾಧಿಕ ವಯೋಮಾನದ ಜ್ಯೇಷ್ಠತನ, ಭಾಷಾಮೂಲತ್ವ, ಶಕ್ತಿದೇವಿಯ ಪತಿಯ ಸ್ಥಾನ), ಸರ್ವಭೂತಾನಾಮ್ ಈಶ್ವರಃ (ಸಕಲ ಚರಾಚರಗಳ ಅಧಿಪತಿಯಾಗಿ ಈಶ್ವರನೆನಿಸಿದ), ಬ್ರಹ್ಮಾಧಿಪತಿಃ (ನಾಯಕರ ಅಧಿನಾಯಕನಾದ, ಮಹಾನಾಯಕನಾದ, ವೇದಾಧಿಪನಾದ, ಪರಬ್ರಹ್ಮನೆಂಬ  ಮೂಲನಾಯಕನಾದ), ಬ್ರಹ್ಮಣಃ ಅಧಿಪತಿಃ (ಸೃಷ್ಟಿಕರ್ತನಾದ “ಬೃಂಹತಿ ಪ್ರಜಾಃ ಯಃ”— ಪ್ರಜಾಸೃಷ್ಟಿಯನ್ನು ಬೃಹದಾಕಾರವಾಗಿ ವರ್ಧಿಸುವ ಚತುರ್ಮುಖ ಬ್ರಹ್ಮನಿಗೂ ಅಧಿಪತಿಯೆನಿಸಿದ), ಬ್ರಹ್ಮಾ (ತಾನೇ ಬ್ರಹ್ಮನ ರೂಪ ತಾಳಿ ಸೃಷ್ಟಿಕರ್ತನೆನಿಸಿದ ಭಗವಂತನು), ಮೇ (—ಮಹ್ಯಮ್— ನನಗೆ), ಶಿವಃ ಅಸ್ತು (ಯಾವಾಗಲೂ ಶುಭಕರ / ಮಂಗಳಪ್ರದನಾಗಲಿ.), ಓಮ್ (ಅಂತಹ ಶಿವನಾದ ನಿನಗೆ ಮತ್ತೊಮ್ಮೆ ಹಾರ್ದಿಕ ಸುಸ್ವಾಗತ.) ||

ತಾತ್ಪರ್ಯಮ್— ಹೇ ಸದಾ ಮಂಗಲದಾತನಾದ ಪರಶಿವನೇ! ಲೋಕಕ್ಕೆ ಸಕಲ ವಿದ್ಯೆಗಳ ಗುರುವಾದ ಈಶಾನಮೂರ್ತಿಯಾಗಿ, ಲೋಕದಲ್ಲಿರುವ ಎಲ್ಲದಕ್ಕೂ ಈಶ್ವರನಾಗಿ, ಈಶ್ವರರ ಈಶ್ವರ ಪರಮೇಶ್ವರನಾಗಿ, ಬ್ರಹ್ಮನಿಗೂ ಒಡೆಯನಾಗಿ, ಬ್ರಹ್ಮನೂ ತಾನೇ ಆಗಿ, ನನಗೆ ನೀನು ಶಿವಕರನಾಗು / ಶುಭವನ್ನುಂಟುಮಾಡು. ನಿನಗೆ ಮಗದೊಮ್ಮೆ ಭಕ್ತಿಪೂರ್ವಕ ಸುಸ್ವಾಗತ ಹೇ ಸದಾಶಿವನೇ!


(ಎಲ್ಲ ವಿದ್ಯೆಗಳ ಒಡೆಯನಾದ, ಎಲ್ಲ ಜೀವಿಗಳ ಸ್ವಾಮಿಯಾದ, ಬ್ರಹ್ಮಜ್ಞರ ನಾಯಕನಾದ, ವೇದಾಧಿಪತಿ ಹಾಗೂ ಸ್ವಯಂ ಬ್ರಹ್ಮನಾದ ಶಿವನು ನನಗೆ ಯಾವಾಗಲೂ ಮಂಗಲಕರನಾಗಲಿ.)

೭೮) ರುದ್ರಾವಾಹನಾ ಮಂತ್ರ, ವಿಧಿ ಯಾವುದು?

ಈಶಾನಮಾವಾಹಯಾಮಿ ||


ಅಂತಹ ಈಶಾನಮೂರ್ತಿಯನ್ನು (ಈಶಾನಮ್), ಆವಾಹಿಸುತ್ತೇನೆ / ಆಮಂತ್ರಿಸುತ್ತೇನೆ (ಆವಾಹಯಾಮಿ). "ಆಹ್ವಾನಂ ನಿಮನ್ತ್ರಣಮ್ ಆವಾಹನಮ್ "— ಆಹ್ವಾನಿಸುವಿಕೆ, ಆಮಂತ್ರಣ, ಕರೆಯುವಿಕೆಯೇ ಆವಾಹನವು. "ಆ ಸಮೀಪಂ ವಾಹನಂ ವಹತಿ ನಯತಿ ವಾ ಇತಿ ಆವಾಹನಮ್"— ಹತ್ತಿರಕ್ಕೆ ಕರೆತರುವುದೇ ಆವಾಹನವು.


ಸ್ವಾಮಿನ್ ಸರ್ವಜಗನ್ನಾಥ ಯಾವತ್ಪೂಜಾವಸಾನಕಮ್ |

ತಾವತ್ ತ್ವಂ ಪ್ರೀತಿಭಾವೇನ ಲಿಙ್ಗೇऽಸ್ಮಿನ್ ಸನ್ನಿಧಿಂ ಕುರು ||


ಸ್ವಾಮಿನ್ ಸರ್ವಜಗತ್-ನಾಥ (ಹೇ ಸ್ವಾಮಿಯೆ! ಅಖಿಲಲೋಕಗಳೊಡೆಯನೆ!), ಪೂಜಾ-ಅವಸಾನಕಂ ಯಾವತ್ ತಾವತ್ (ಪೂಜೆಯು ಯಾವಾಗ ಮುಗಿಯುವುದೋ ಅಲ್ಲಿಯವರೆಗೆ), ತ್ವಮ್ (ನೀನು), ಪ್ರೀತಿಭಾವೇನ (ನಮ್ಮ ಮೇಲೆ ಪ್ರೀತಿಯನ್ನಿಟ್ಟು), ಅಸ್ಮಿನ್ ಲಿಙ್ಗೇ (ಈ ಶಿವಲಿಂಗದಲ್ಲಿ), ಸನ್ನಿಧಿಂ ಕುರು (ನೆಲೆಸು, ಸಾನ್ನಿಧ್ಯ ವಹಿಸು).


ಸ್ಥಿರೋ ಭವ | ವರದೋ ಭವ | ಸುಪ್ರಸನ್ನೋ ಭವ | ಸುಪ್ರತಿಷ್ಠಿತೋ ಭವ ||


ಸ್ಥಿರವಾಗಿರು. ವರನೀಡುವವನಾಗು. ಪ್ರಸನ್ನನಾಗು ಅಥವಾ ನಮ್ಮ ಮೇಲೆ ಪ್ರಸನ್ನತೆಯಿಂದ / ಸಂತೋಷದಿಂದ ಅನುಗ್ರಹ ಮಾಡು. ಈ ಶಿವಲಿಂಗದಲ್ಲೂ, ಸದಾ ನಮ್ಮ ಹೃದಯಮಂದಿರದಲ್ಲೂ, ಮನಸ್ಸಿನಲ್ಲೂ, ಸ್ಮರಣೆಯಲ್ಲೂ ಚೆನ್ನಾಗಿ ಪ್ರತಿಷ್ಠಿತನಾಗು / ನೆಲೆನಿಲ್ಲು. 

೭೯) ಪರಶಿವನ ಉಪಚಾರಗಳ ಕ್ರಮವೇನು? ಅವುಗಳ ಅರ್ಥವೇನು?

ಸದ್ಯೋಜಾತಂ ಪ್ರಪದ್ಯಾಮಿ | ಆಸನಂ ಸಮರ್ಪಯಾಮಿ ||


ಬೇಗನೆ ಒಲಿದು ಬರುವ (“ಸದ್ಯಃ ತತ್ಕ್ಷಣಾತ್ ಜಾತಃ”, “ಸದ್ಯೋ ಜಾಯತೇ”) ಆಶುತೋಷನಾದ (ಬೇಗನೆ ತೋಷಗೊಳ್ಳುವ) ಹರನನ್ನು ಶರಣು ಹೊಂದುತ್ತೇನೆ. ಬಂದಂತಹ ಶಿವನಿಗೆ ಕುಳಿತುಕೊಳ್ಳಲು ಉತ್ತಮವಾದ ಆಸನವನ್ನು ಸಮರ್ಪಿಸುತ್ತೇನೆ. "ಆಸ್ಯತೇ ಉಪವಿಶ್ಯತೇ ಅಸ್ಮಿನ್ ಇತಿ ಆಸನಮ್ "— ಇದರಲ್ಲಿ ಕುಳಿತುಕೊಳ್ಳಲಾಗುತ್ತದೆ ಎಂಬುದರಿಂದ ಆಸನವು.


ಸದ್ಯೋಜಾತಾಯ ವೈ ನಮೋ ನಮಃ | ಪಾದ್ಯಂ ಸಮರ್ಪಯಾಮಿ ||


ಆತನು ಭಕ್ತರ ಮೊರೆಗೆ ಖಂಡಿತವಾಗಿಯೂ (ವೈ— ನಿಶ್ಚಯಾರ್ಥಕ) ಶೀಘ್ರವಾಗಿ ಓಗೊಡುವವನು. ಅಂತಹ ಸದ್ಯೋಜಾತನಿಗೆ ನಮನವು, ನಮಸ್ಕಾರವು. ಬಂದಂತಹ ಶಿವನಿಗೆ ಕಾಲು / ಪಾದಗಳನ್ನು ತೊಳೆಯಲು ನೀರನ್ನು / ಪಾದ್ಯವನ್ನು ಸಮರ್ಪಣೆ ಮಾಡುತ್ತೇನೆ. "ಪಾದಾರ್ಥಮ್ ಉದಕಮ್ ಇತಿ ಪಾದ್ಯಮ್ "— ಪಾದಪ್ರಕ್ಷಾಲನಕ್ಕೆ / ಕಾಲ್ತೊಳೆಯಲು ನೀರು ಪಾದ್ಯವು. 


ಭವೇ ಭವೇ ನಾತಿಭವೇ ಭವಸ್ವ ಮಾಮ್ | ಅರ್ಘ್ಯಂ ಸಮರ್ಪಯಾಮಿ ||


ಜನುಮ ಜನುಮದಲ್ಲೂ (ಭವೇ ಭವೇ), ನನ್ನನ್ನು (ಮಾಮ್), ಅತಿಯಾದ ಭವಸಾಗರದ / ಸಂಸಾರದ / ಲೌಕಿಕ ಮೋಹದಲ್ಲಿ ಸಿಲುಕಿಸಬೇಡ (ಅತಿಭವೇ ನ ಭವಸ್ವ). ನಿನ್ನ ಪೂಜ್ಯವಾದ ಪವಿತ್ರಕರಕಮಲಗಳಿಗೆ ಅರ್ಘ್ಯಜಲವನ್ನು ಸಮರ್ಪಿಸುತ್ತೇನೆ /  ಹಸ್ತಗಳಿಗೆ ನೀರು ಹಾಕಿ ಪೂಜಿಸುತ್ತೇನೆ (“ಅರ್ಹ್ಯತೇ ಪೂಜ್ಯತೇ ಇತಿ ಅರ್ಘ್ಯಮ್”, “ಅರ್ಘಾಯ ಅರ್ಹಾಯ ಪೂಜಾರ್ಥಂ ದೇಯಂ ಜಲಮ್”— ಅರ್ಹನಿಗೆ, ಪೂಜ್ಯನಿಗೆ ಪೂಜಾಭಾಗವಾಗಿ ಕೊಡಲ್ಪಡುವ ನೀರು. “ಅರ್ಘಂ ಮೂಲ್ಯಮ್ ಅಧಿಕಮ್ ಅರ್ಹತಿ ಯತ್”— ಅಧಿಕ ಬೆಲೆಯುಳ್ಳ. “ಅನರ್ಘ್ಯಂ ಪ್ರತಿ ದೀಯಮಾನಮ್”— ಅಮೌಲ್ಯ / ಬೆಲೆಕಟ್ಟಲಾಗದಂಥ ದೇವ / ಗುರು / ತತ್-ಸಮಾನರಿಗೆ ಮಾತ್ರ ನೀಡಲ್ಪಡುವಂಥದ್ದು ಅರ್ಘ್ಯವು.)


ಭವೋದ್ಭವಾಯ ನಮಃ | ಆಚಮನೀಯಂ ಸಮರ್ಪಯಾಮಿ ||


ಭವ / ಸೃಷ್ಟಿಯಲ್ಲಿ ಸದ್ಯೋಜಾತ-ವಾಮದೇವ-ಅಘೋರ-ಈಶಾನ-ತತ್ಪುರುಷನೆಂಬ ೫ ಕಲ್ಪಾವತಾರಗಳಾಗಿ ಉದ್ಭವಿಸಿದವನೂ (ಆಧಾರ- ಶಿವಪುರಾಣ), ರುದ್ರ-ಭವ-ಶರ್ವ-ಪಶುಪತಿ-ಈಶಾನ-ಬ್ರಹ್ಮ-ಉಗ್ರ-ಮಹಾದೇವ / ಭವ-ಶರ್ವ-ಈಶಾನ-ಪಶುಪತಿ-ರುದ್ರ-ಉಗ್ರ-ಭೀಮ-ಮಹಾದೇವ / (“ಜಲಂ ವಹ್ನಿಸ್ತಥಾ ಯಷ್ಟಾ / ಚಾತ್ಮಾ ಸೂರ್ಯಚಂದ್ರಮಸೌ ತಥಾ | ಆಕಾಶಂ ವಾಯುರವನೀ ಮೂರ್ತಯೋऽಷ್ಟೌ ಪಿನಾಕಿನಃ ||”) ಜಲ-ಅಗ್ನಿ-ಆಕಾಶ-ವಾಯು-ಭೂಮಿಯೆಂಬ ಪಂಚಭೂತಗಳು-ಯಷ್ಟಾ / ಯಜ್ಞಮಾಡುವವ / ಯಜಮಾನ / ಆತ್ಮಾ -ಸೂರ್ಯ-ಚಂದ್ರ ಎಂಬ ಅಷ್ಟಮೂರ್ತಿಯಾಗಿ ಉದ್ಭವಿಸಿದವನೂ  (ಭವೇ ಅವತಾರರೂಪೇಣ ಉದ್ಭವಃ), ಭವ / ಸೃಷ್ಟಿಯೂ ಹಾಗೂ ಉತ್-ಭವ / ಸೃಷ್ಟಿಗಿಂತ ಮೇಲಿನ, ಶ್ರೇಷ್ಠನಾದ ಸೃಷ್ಟಿಕರ್ತನೂ, ಸಂಸಾರರೂಪನೂ ಹಾಗೂ ಮೋಕ್ಷಸ್ವರೂಪನೂ ಆದ ಪರಮೇಶ್ವರನಿಗೆ ನಮಸ್ಕಾರ. ನಿನಗೆ ಆಚಮನೀಯವನ್ನು / ಕುಡಿಯಲು ಅಂಗೈನಲ್ಲಿ ೧ ಉದ್ದಿನಕಾಳು ಮುಳುಗುವಷ್ಟು ನೀರನ್ನು ವೈದಿಕಾಚಾರದಂತೆ ಸಮರ್ಪಿಸುತ್ತೇನೆ. (“ಮಾಷಮಗ್ನಜಲಂ ಪಿಬೇತ್” ಎಂಬುದು ಆಚಮನದ ಲಕ್ಷಣ.) "ಚಮ ಅದನೇ" ಎಂಬ ಆಹಾರ್ಯ, ಭಕ್ಷ್ಯ, ಪೇಯ ಎಂಬರ್ಥದ ಧಾತುಜನ್ಯವಾದದ್ದು ಆಚಮನೀಯಮ್ ಎಂಬುದು.


ವಾಮದೇವಾಯ ನಮಃ | ಸ್ನಾನಂ ಸಮರ್ಪಯಾಮಿ ||


ವಾಮದೇವಮೂರ್ತಿಯಾದ ಪರಶಿವನಿಗೆ ನಮನವು. “ವಾಮ”ವೆಂದರೆ ಹರ, ಮನೋಹರ, ದುರ್ಗಾ, ವಾಸ್ತೂಕ = ಗುಣಭರಿತ (“ವಸನ್ತಿ ಗುಣಾಃ ಅತ್ರ ಇತಿ”) ಇತ್ಯಾದಿ ಅರ್ಥಗಳಿವೆ. ಹಾಗಾಗಿ ವಾಮದೇವನೆಂದರೆ (“ವಾಮಃ ಏವ ದೇವಃ”— ಹರನೇ ಈ ದೇವನು) ಹರ, ಮನೋಹರನಾದ ದೇವ, ದುರ್ಗಾರಮಣ, ಸಕಲಗುಣಭರಿತ ಇತ್ಯಾದಿ ಅರ್ಥಗಳು ಗೋಚರಿಸುತ್ತವೆ. ವಾಮದೇವನೆಂಬ ಮಂತ್ರದ್ರಷ್ಟಾರನಾದ ಮಹರ್ಷಿಯೂ ಇದ್ದನು. ರುದ್ರನ ಪಂಚಮುಖಗಳಲ್ಲೊಂದು (ಪಶ್ಚಿಮಕ್ಕೆ ಸದ್ಯೋಜಾತ, ಉತ್ತರಕ್ಕೆ ವಾಮದೇವ, ದಕ್ಷಿಣಕ್ಕೆ ಅಘೋರ, ಪೂರ್ವಕ್ಕೆ ತತ್ಪುರುಷ ಹಾಗೂ ಊರ್ಧ್ವದಿಕ್ಕಿಗೆ / ಮೇಲಕ್ಕೆ ಈಶಾನ— ಇವು ಶಿವನ ಪಂಚಮುಖಗಳ ಸ್ಥಾನಗಳು) ಹಾಗೂ ಪಂಚಕಲ್ಪಾವತಾರಗಳಲ್ಲಿ ಒಬ್ಬ ಈ ವಾಮದೇವ. ಅಂತಹ ವಾಮದೇವರುದ್ರನಿಗೆ ರುದ್ರಾಭಿಷೇಕ ಮಾಡುವ ಪೂರ್ವದಲ್ಲಿ ವಿವಿಧೋಪಚಾರಪೂಜೆಯ (ಧ್ಯಾನ-ಆವಾಹನ-ಆಸನ-ಪಾದ್ಯ-ಅರ್ಘ್ಯ-ಆಚಮನೀಯ-ಸ್ನಾನ-ವಸ್ತ್ರ-ಉಪವೀತ-ಆಭರಣ-ಗಂಧ-ಅಕ್ಷತಾ-ಪುಷ್ಪ-ಧೂಪ-ದೀಪ-ನೈವೇದ್ಯ-ತಾಂಬೂಲ-ಮಂಗಲನೀರಾಜನ-ಮಂತ್ರಪುಷ್ಪ-ಪ್ರದಕ್ಷಿಣನಮಸ್ಕಾರಗಳೆಂಬ ಉಪಚಾರಗಳ ಪೂಜೆ) ಅಂಗವಾಗಿ ಸ್ನಾನಕ್ಕೆ ಜಲವನ್ನು ಸಮರ್ಪಿಸುತ್ತೇನೆ. 


ಸ್ನಾನವು ಸಪ್ತವಿಧವಾದುದು— ಮಾನ್ತ್ರಮ್ (ಮಂತ್ರಪೂರ್ವಕ), ಭೌಮಮ್ (ಭೂಸಂಬಂಧಿ ಮೃತ್ತಿಕಾದಿಪೂರ್ವಕ), ಆಗ್ನೇಯಮ್ (ಸೂರ್ಯನ ಬಿಸಿಲಿನ ಸೌರಸ್ನಾನಾದಿ ಅಗ್ನಿಪೂರ್ವಕ), ವಾಯವ್ಯಮ್ (ಗಾಳಿಗೆ ಮೈಯೊಡ್ಡುವುದೇ ಮುಂತಾದ), ದಿವ್ಯಮ್ (ಬೆಳಕಿನ ಸ್ನಾನ, ದೇವತಾಸ್ನಾನಾದಿ), ವಾರುಣಮ್ (ಜಲ, ಸಮುದ್ರ, ನದೀ, ತೀರ್ಥಾದಿಸ್ನಾನ) ಹಾಗೂ ಮಾನಸಮ್ (ಮನಸ್ಸಿನಲ್ಲೇ ಸ್ನಾನವಿಧಿಯನ್ನು ಕಲ್ಪಿಸುವಿಕೆ). 


ಜ್ಯೇಷ್ಠಾಯ ನಮಃ | ವಸ್ತ್ರಂ ಸಮರ್ಪಯಾಮಿ ||


ಎಲ್ಲರಿಗಿಂತ ಹಿರಿಯನಾದ ರುದ್ರದೇವನಿಗೆ ನಮನವು. ಸ್ನಾನಾನಂತರ ಉಡಲು ಶುಭ್ರವಾದ ವಸ್ತ್ರವನ್ನು ಸಮರ್ಪಿಸುತ್ತೇನೆ. "ವಸ್ಯತೇ ಆಚ್ಛಾದ್ಯತೇ ಅನೇನ ಇತಿ ವಸ್ತ್ರಮ್"— ಮುಚ್ಚಲ್ಪಡುತ್ತದೆ, ಆಚ್ಛಾದಿಸಲ್ಪಡುತ್ತದೆ ಇದರಿಂದ ಎಂಬುದರಿಂದ ಹತ್ತಿಯೇ ಮೊದಲಾದವುಗಳಿಂದ ತಯಾರಿಸಿದ ಬಟ್ಟೆಯೇ ವಸ್ತ್ರವೆನಿಸಿದೆ.


ಶ್ರೇಷ್ಠಾಯ ನಮಃ | ಉಪವೀತಂ ಸಮರ್ಪಯಾಮಿ ||


ಶ್ರೇಷ್ಠನಾದ ರುದ್ರದೇವನಿಗೆ ನಮಸ್ಕಾರ. ಉಪವೀತ / ಯಜ್ಞೋಪವೀತ / ಜನಿವಾರವನ್ನು ಸಮರ್ಪಿಸುತ್ತೇನೆ. ಅಂಕುಶದಂತೆ ಸಮೀಪದಲ್ಲಿದ್ದು ನಮ್ಮನ್ನು ಆತ್ಮವಿದ್ಯೆಯಲ್ಲಿ ಪಳಗಿಸುವಂಥದ್ದೇ ಉಪವೀತವು. (ಉಪ— ಸಮೀಪ, ವೀತಮ್— ಅಂಕುಶ, ಪಳಗಿಸಿದ, ಶಾಂತಗೊಳಿಸಿದ.)


ರುದ್ರಾಯ ನಮಃ | ಆಭರಣಂ ಸಮರ್ಪಯಾಮಿ ||


ರೋದಿಸುವವರ ದುಃಖಹರನೂ, ಶತ್ರುಗಳನ್ನು ರೋದಿಸುವಂತೆ ಮಾಡುವ ಕ್ರೋಧಾಗ್ನಿಮೂರ್ತಿಯೂ ಆಗಿ ರುದ್ರನೆನಿಸಿದ ಭಗವಾನ್ ಶಂಭುವಿಗೆ ನಮಸ್ಕಾರ. ಆಭರಣವನ್ನು ಸಮರ್ಪಿಸುತ್ತೇನೆ. " ಆಭ್ರಿಯತೇ ಅನೇನ ಇತಿ ಆಭರಣಮ್" ಸುಂದರವಾಗಿ ಭರಿಸಲ್ಪಡುತ್ತದೆ, ಧರಿಸಲ್ಪಡುತ್ತದೆ, ತುಂಬಲ್ಪಡುತ್ತದೆ ಎಂಬುದರಿಂದ ಆಭರಣವೆನಿಸಿದೆ.


ಕಾಲಾಯ ನಮಃ | ಗನ್ಧಂ ಸಮರ್ಪಯಾಮಿ ||


ಕಾಲಸ್ವರೂಪಿಯಾದ, ಜಗದ ಸಕಲಕ್ಕೂ ಅದರದರ ನಿಗದಿತ ಅಂತ್ಯಕಾಲ ಬಂದಾಗ ಸಂಹಾರಮಾಡುವವನೂ, ಯಮರೂಪಿಯೂ, ಸೃಷ್ಟಿ-ಲಯವೆಂಬ ಕಾಲಚಕ್ರದ ನಿಯಾಮಕನೂ ಆದ ಪರಮೇಶ್ವರನಿಗೆ ನಮಸ್ಕಾರವು. ಗಂಧಾದಿ ಪರಿಮಳದ್ರವ್ಯಗಳನ್ನು ಸಮರ್ಪಿಸುತ್ತೇನೆ. "ಕಲಯತಿ ಆಯುಃ, ಕಲ್ ಸಂಖ್ಯಾನೇ ಧಾತುಃ" ಆಯುಷ್ಯವನ್ನು ಲೆಕ್ಕಮಾಡುವುದೇ ಕಾಲವು. "ಕಾಲಯತಿ ಸರ್ವಾಣಿ ಭೂತಾನಿ, ಕಲ್ ಪ್ರೇರಣೇ ಧಾತುಃ" ಎಲ್ಲ ಜೀವರನ್ನೂ ಕಾಲಕ್ಕೆ ತಕ್ಕಂತೆ ಪ್ರೇರಿಸುವುದೇ ಕಾಲವು.


ಕಲ-ವಿ-ಕರಣಾಯ ನಮಃ | ಅಕ್ಷತಾನ್ ಸಮರ್ಪಯಾಮಿ ||


ಲೆಕ್ಕವಿರದಂತೆ ಮಾಡುವವ / ಮಹಾಪ್ರಲಯಕಾರಕ (ಪ್ರಲಯದಲ್ಲಿ ಯಾವುದೇ ಗಣನೆ / ಕಾಲದ ಪರಿವೆಯ / ಹಗಲು ರಾತ್ರಿಗಳ ಗೋಚರವಿರುವುದಿಲ್ಲ) ನಿಗೆ ನಮಸ್ಕಾರವು. (ಅಥವಾ, ಕಲೆಯನ್ನು ವಿಶೇಷವಾಗಿ ಉಂಟುಮಾಡುವನಿಗೆ ನಮಸ್ಕಾರ.) ಅಕ್ಷತೆಗಳನ್ನು / ಅಕ್ಕಿಕಾಳುಗಳನ್ನು ಸಮರ್ಪಿಸುತ್ತೇನೆ. "ನ ಕ್ಷತಾಃ ಇತಿ ಅಕ್ಷತಾಃ" ತುಂಡಲ್ಲದ ಇಡಿಯಾದ ಅಕ್ಕಿಕಾಳುಗಳೇ ಅಕ್ಷತೆಗಳು.


ಬಲ-ವಿ-ಕರಣಾಯ ನಮಃ | ಪುಷ್ಪಾಣಿ ಸಮರ್ಪಯಾಮಿ ||


ಶತ್ರುಗಳನ್ನು ಬಲಹೀನರನ್ನಾಗಿ, ಬಲ ವಿರಹಿತರನ್ನಾಗಿ (ಅಥವಾ, ನಮಗೆ ವಿಶೇಷವಾದ ಬಲವನ್ನುಂಟು) ಮಾಡುವವನಿಗೆ ನಮಸ್ಕಾರ.  ಹೂವುಗಳನ್ನು ಸಮರ್ಪಿಸುತ್ತೇನೆ. "ಪುಷ್ಪ್ಯತಿ ವಿಕಸತಿ ಯತ್ ಇತಿ ಪುಷ್ಪಮ್, ಪುಷ್ಪ ಫುಲ್ಲನೇ ಧಾತುಃ" ಅರಳುತ್ತದೆ, ವಿಕಸಿಸುತ್ತದೆ ಯಾವುದೋ ಅದೇ ಪುಷ್ಪವು. 


ಬಲಾಯ ನಮಃ | ಧೂಪಮಾಘ್ರಾಪಯಾಮಿ ||


ಮಹಾಬಲೇಶ್ವರನಿಗೆ, ಸಕಲ ಜೀವರಿಗೆ ಬಲವನ್ನೀಯುವವನಿಗೆ, ಧರ್ಮಸೈನ್ಯರೂಪನಿಗೆ, ದೇವಸೈನ್ಯಸ್ವರೂಪನಿಗೆ ನಮಸ್ಕಾರವು. ನಿನಗೆ ಪರಿಮಳಯುಕ್ತ ಧೂಮ ಅಥವಾ ಹೊಗೆ / ಧೂಪವೆಂಬ ಮರದ ಹುಡಿಯನ್ನುರಿಸಿ ಬರುವ ಪರಿಮಳಯುಕ್ತ ಹೊಗೆ / ಧೂಮ ಅಥವಾ ಹೊಗೆಗಳಲ್ಲಿ ಶ್ರೇಷ್ಠವಾದ ಪರಿಮಳದಿಂದ ಕೂಡಿ ಧೂಮಗಳ ಪತಿಯೆನಿಸಿದ ಧೂಪ / ಅಗರಬತ್ತಿಯ ಧೂಪವನ್ನು ಆಘ್ರಾಣಿಸಲು ಸಮರ್ಪಿಸುತ್ತೇನೆ. "ಬಲತೇ ವಿಪಕ್ಷಾನ್ ಹನ್ತಿ ಇತಿ ಬಲಮ್" ಶತ್ರುಪಕ್ಷವನ್ನು ಸದೆಬಡಿಯಬಲ್ಲ ಸೈನ್ಯಸದೃಶನಾದ್ದರಿಂದ ಬಲಸ್ವರೂಪನು. "ಧೂಪಯತಿ ಸ್ವಗನ್ಧೇನ ಪ್ರೀಣಯಿತ್ವಾ ದೀಪ್ಯತಿ ಇತಿ ಧೂಪಃ" ಹೊಗೆಬಿಡುತ್ತದೆ, ತನ್ನ ಸುವಾಸನೆಯಿಂದ ಸಂತೋಷವನ್ನುಂಟುಮಾಡಿ ಬೆಳಗುತ್ತದೆಂಬುದರಿಂದಾಗಿ ಧೂಪವು. 


ಬಲಪ್ರಮಥನಾಯ ನಮಃ | ದೀಪಂ ದರ್ಶಯಾಮಿ ||


ಶತ್ರುಗಳ ಬಲ / ಸೈನ್ಯ ವನ್ನು ನಾಶಮಾಡುವ / ದುಷ್ಟಶಕ್ತಿಯನ್ನು ಕುಗ್ಗಿಸಬಲ್ಲ ಮಹಾಬಲನಿಗೆ ನಮನ. ದೀಪವನ್ನು ಬೆಳಗಿ ತೋರುತ್ತೇನೆ. "ದೀಪ್ಯತೇ ದೀಪಯತಿ ವಾ ಸ್ವಂ ಪರಂ ಚ ಇತಿ ದೀಪಃ" ತಾನೇ ತನ್ನನ್ನು ಬೆಳಗುತ್ತದೆ ಅಥವಾ ಪರರನ್ನು ಬೆಳಗಿಸುತ್ತದೆ ಎಂಬುದರಿಂದಾಗಿ ದೀಪವು. 


ಸರ್ವಭೂತದಮನಾಯ ನಮಃ | ನೈವೇದ್ಯಂ ಸಮರ್ಪಯಾಮಿ ||


ಸಕಲ ಚರಾಚರಗಳನ್ನೂ ನಿಯಂತ್ರಿಸುವವನಿಗೆ, ಅವುಗಳ ಆಯುಷ್ಯಾಂತ್ಯದಲ್ಲಿ ಸಂಹರಿಸುವವನಿಗೆ ನಮಸ್ಕಾರವು. ನೈವೇದ್ಯ (ನಿವೇದನೆಗೆ ಯೋಗ್ಯವಾದದ್ದು / “ನಿವೇದನೀಯಂ ದ್ರವ್ಯಂ ತು ನೈವೇದ್ಯಮಿತಿ ಕಥ್ಯತೇ”— ದೇವರಿಗೆ ನಿವೇದಿಸಲು ಯೋಗ್ಯವಾದ ಪದಾರ್ಥವನ್ನು ನೈವೇದ್ಯವೆನ್ನುತ್ತಾರೆ.)ವನ್ನು / ಆಹಾರವನ್ನು ಸಮರ್ಪಣೆ ಮಾಡುತ್ತೇನೆ.


ಮನೋನ್ಮನಾಯ ನಮಃ | ತಾಂಬೂಲಂ ಸಮರ್ಪಯಾಮಿ ||


ನಮ್ಮ ಮನಸ್ಸನ್ನು ಪರಿಶುದ್ಧಗೊಳಿಸಿ ಮೇಲ್ಮಟ್ಟಕ್ಕೇರಿಸಬಲ್ಲವನಿಗೆ (ಉತ್ತಮ / ಶ್ರೇಷ್ಠ / ಮೇಲ್ಮಟ್ಟದ ಮನಸ್ಸುಳ್ಳವನಿಗೆ) ನಮಸ್ಕಾರ. (ಮನ-ಉತ್-ಮನ— ಮನೋನ್ಮನ— ಉತ್ ಅಂದರೆ ಮೇಲೆ, ಮೇಲಕ್ಕೆ. ಉದಾ— ಉತ್ತಮ— ಮೇಲ್ಮಟ್ಟದ, ಶ್ರೇಷ್ಠ.) ತಾಂಬೂಲವನ್ನು (ವೀಳ್ಯದೆಲೆಯನ್ನು / ನಾಗವಲ್ಲೀದಲವನ್ನು / ನಾಗವಲ್ಲಿಯೆಂಬ ಬಳ್ಳಿಯ ಎಲೆಯನ್ನು ಅಡಿಕೆಯೊಂದಿಗೆ) ಸಮರ್ಪಿಸುತ್ತೇನೆ. 


ಹಿರಣ್ಯಗರ್ಭಾಯ ನಮಃ | ಮಂಗಳ-ನೀರಾಜನ-ದೀಪಂ ದರ್ಶಯಾಮಿ ||


ಸಮಸ್ತ ಜೀವರ ಸೂಕ್ಷ್ಮಶರೀರಗಳ ಸಮೂಹವನ್ನೊಳಗೊಂಡ ಸೃಷ್ಟ್ಯಾದಿಯ ಚಿನ್ನದ ಬಣ್ಣದ ಮೊಟ್ಟೆಯಾಕಾರದ ಕಾಯಗರ್ಭದಿಂದ ಹುಟ್ಟಿದ ಚತುರ್ಮುಖಬ್ರಹ್ಮರೂಪಿಯೂ ಯಾವನ ಒಂದಂಶವೋ ಅಂತಹ ಪರಮೇಶ್ವರನಿಗೆ (ತನ್ನೊಳಗೆ ಬಂಗಾರವನ್ನು ಹೊಂದಿರುವವನಿಗೆ)  ನಮಸ್ಕಾರ. ನಿನಗೆ ಮಂಗಳಾರತಿಯನ್ನು ಎತ್ತುತ್ತೇನೆ / ತೋರಿಸುತ್ತೇನೆ. "ನಿತರಾಂ ರಾಜನಂ ನೀರಾಜನಮ್, ರಾಜ ದೀಪ್ತೌ ಧಾತುಃ" ಚೆನ್ನಾಗಿ ರಾರಾಜಿಸುವ, ಬೆಳಗುವಂಥದ್ದೇ ನೀರಾಜನವು. 

೮೦) ವೇದೋಕ್ತವಾಗಿ ಭಗವಂತನ ವಿಶ್ವರೂಪದ ವರ್ಣನೆ

 ಓಂ ವಿಶ್ವತಶ್ಚಕ್ಷುರುತ ವಿಶ್ವತೋಮುಖೋ ವಿಶ್ವತೋಹಸ್ತ ಉತ ವಿಶ್ವತಸ್ಪಾತ್ | ಸಂ ಬಾಹುಭ್ಯಾಂ ನಮತಿ ಸಂ ಪತತ್ರೈರ್ದ್ಯಾವಾಪೃಥಿವೀ ಜನಯನ್ದೇವ ಏಕಃ ||

(ತೈತ್ತಿರೀಯಸಂಹಿತಾ ೪-೬-೨-೧೦, ತೈ.ಉಪನಿಷತ್ ೪-೧)

ಪದಚ್ಛೇದಃ— ವಿಶ್ವತಃ-ಚಕ್ಷುಃ ಉತ ವಿಶ್ವತಃ-ಮುಖಃ ವಿಶ್ವತಃ-ಹಸ್ತಃ ಉತ ವಿಶ್ವತಃ-ಪಾತ್ | ಸಂ ಬಾಹುಭ್ಯಾಂ ನಮತಿ ಸಂ ಪತತ್ರೈಃ ದ್ಯಾವಾಪೃಥಿವೀ ಜನಯನ್-ದೇವಃ ಏಕಃ ||

ಅನ್ವಯಾರ್ಥಃ— ವಿಶ್ವತಃ-ಚಕ್ಷುಃ (ವಿಶ್ವವಿಡೀ / ಎಲ್ಲೆಡೆ ಕಣ್ಣುಗಳುಳ್ಳ), ಉತ (ಅಥವಾ / ಮತ್ತು), ವಿಶ್ವತಃ-ಮುಖಃ (ಜಗತ್ತೇ ಮುಖ / ಬಾಯಿಯಾಗಿರುವ ಅಥವಾ ಎಲ್ಲೆಡೆ ಮುಖವುಳ್ಳ), ವಿಶ್ವತಃ-ಹಸ್ತಃ (ವಿಶ್ವವಿಡೀ ವ್ಯಾಪಿಸಿದ / ಎಲ್ಲೆಡೆ ಕೈಗಳುಳ್ಳ), ಉತ (ಅಥವಾ / ಮತ್ತು), ವಿಶ್ವತಃ-ಪಾತ್ (ಜಗದಗಲ ಹಬ್ಬಿರುವ / ಎಲ್ಲೆಡೆ ಪಾದವುಳ್ಳ), ಏಕಃ ದೇವಃ (ಒಬ್ಬನೇ ಒಬ್ಬ ಪರಮಾತ್ಮನು), ದ್ಯಾವಾಪೃಥಿವೀ ಜನಯನ್ (ಭೂಮ್ಯಾಕಾಶಗಳಿಂದ ಕೂಡಿದ ವಿಶ್ವವನ್ನು ಸೃಜಿಸಿ), ಪತತ್ರೈಃ (ಜಗವು ಪತನವಾಗದಂತೆ / ಕುಸಿಯದಂತೆ ರಕ್ಷಿಸುವಂತಹ), ಬಾಹುಭ್ಯಾಂ (ತನ್ನೆರಡು ಬಾಹುಗಳಿಂದ),  ಸಂನಮತಿ (ಸಮಗ್ರ ವಿಶ್ವವನ್ನು ಸರಿಪಡಿಸಿ, ವಿವಿಧ ಭಾಗಗಳನ್ನು / ಲೋಕಗಳನ್ನು ಸೂಕ್ತರೀತಿಯಲ್ಲಿ ಆಯಾಯ ಆಯಕಟ್ಟಿನ ಜಾಗಗಳಲ್ಲೇ ಇರುವಂತೆ ಯಥಾಸ್ಥಿತಿಯನ್ನು ಕಾಪಿಡುತ್ತಾನೆ. “ಸಂನಮನಮ್ ಋಜುಕರಣಮ್”— ಸಂನಮನವೆಂದರೆ ಸರಿಪಡಿಸುವಿಕೆ.)

ತಾತ್ಪರ್ಯಮ್— ಒಬ್ಬನೇ ಒಬ್ಬ ದೇವನು ಜಗವನ್ನು ಸೃಷ್ಟಿಸಿ, ಜಗದಗಲ ವ್ಯಾಪಿಸಿ, ಜಗದ ಕಣ್ಣಾಗಿ ಜೀವರಿಗೆ ದೃಷ್ಟಿಶಕ್ತಿ ನೀಡಿ, ಮುಖವಾಗಿ ಜೀವರಿಗೆ ಪ್ರತ್ಯೇಕ ಗುರುತನ್ನು ನೀಡಿ, ಬಾಯಿಯಾಗಿ ಜೀವರ ದೇಹಕ್ಕೆ ಅನ್ನವುಣ್ಣಿಸಿ, ಕೈಯಾಗಿ ದುಡಿಯುವ ಶಕ್ತಿಯನ್ನಿತ್ತು, ಪಾದವಾಗಿ ನಡೆದಾಡುವ ಸಾಮರ್ಥ್ಯವಿತ್ತು, ವಿವಿಧ ಲೋಕಗಳನ್ನು ಸೃಜಿಸಿ, ಅವುಗಳು ಪತನವಾಗದೇ ಸ್ಥಿರವಾಗಿ ತಮ್ಮ ತಮ್ಮ ಸ್ಥಾನಗಳಲ್ಲೇ ಇರುವಂತೆ ತನ್ನ ಬಾಹುಗಳಿಂದ ಆಧರಿಸಿ ವಿಶ್ವವನ್ನು ರಕ್ಷಿಸುತ್ತಾನೆ.


ಯೋ ವೇದಾದೌ ಸ್ವರಃ ಪ್ರೋಕ್ತೋ ವೇದಾನ್ತೇ ಚ ಪ್ರತಿಷ್ಠಿತಃ | ತಸ್ಯ ಪ್ರಕೃತಿಲೀನಸ್ಯ ಯಃ ಪರಸ್ಸ ಮಹೇಶ್ವರಃ ||

(ತೈ.ಉಪನಿಷತ್ ೪-೧೨)

ವೇದದ ಆದಿಯಲ್ಲಿ ( ವೇದ-ಆದೌ), ಯಾವ ಸ್ವರ / ನಾದವು ಹೇಳಲ್ಪಟ್ಟಿದೆಯೋ (ಯಃ ಸ್ವರಃ ಪ್ರೋಕ್ತಃ), ಮತ್ತು (ಚ), ವೇದದ ಅಂತ್ಯದಲ್ಲಿ / ವೇದಾಂತವೆನಿಸಿದ ಉಪನಿಷತ್ತಿನಲ್ಲಿ (ವೇದಾನ್ತೇ), ಸರ್ವಶ್ರೇಷ್ಠವೂ, ಸರ್ವಮೂಲವೂ ಎಂದು ಪ್ರತಿಷ್ಠಾಪಿತವಾಗಿದೆಯೋ , ಅಂತಹ ಪ್ರಕೃತಿಯಲ್ಲಿ ಸದಾ ಲೀನವಾಗಿ ಸಕಲ ಶಬ್ದಗಳೊಳಗೆ ಆದಿಶ್ರುತಿಯಾಗಿ ಬೆರೆತುಹೋಗಿರುವ ಪ್ರಣವ / ಓಂಕಾರಕ್ಕಿಂತಲೂ ಶ್ರೇಷ್ಠನೂ, ಅದಕ್ಕೂ ಮೂಲಕಾರಣನೂ ಯಾವನೋ (ತಸ್ಯ ಪ್ರಕೃತಿಲೀನಸ್ಯ ಪರಃ ಯಃ), ಅವನೇ ಮಹೇಶ್ವರನು / ಪರಮೇಶ್ವರನು / ಭಗವಂತನು / ಸರ್ವಜಗದಾಧಿಪತಿಯು / ಪರಮಾತ್ಮನು / ಶ್ರೀಮನ್ನಾರಾಯಣನು / ಪರಶಿವನು / ಸದಾಶಿವನು / ಪರಬ್ರಹ್ಮನು / ಆದಿಶಕ್ತಿಯು (ಸಃ ಮಹೇಶ್ವರಃ).


ತತ್ಪುರುಷಾಯ ನಮಃ | ವೇದೋಕ್ತಮಂತ್ರಪುಷ್ಪಂ ಸಮರ್ಪಯಾಮಿ ||


ಆ “ತತ್ ತ್ವಮ್ ಅಸಿ” ಎಂಬ ಉಪನಿಷದ್ವಾಕ್ಯದಲ್ಲಿರುವ ತತ್-ವಾಚ್ಯನಾದ ಪರಮಪುರುಷನಿಗೆ ಪ್ರಣಾಮಗಳು. ತತ್ಪುರುಷನೆಂಬ ಶಿವನ ಕಲ್ಪಾವತಾರಕ್ಕೆ ನಮನಗಳು. ಶಿವನ ೫ ಮುಖಗಳಲ್ಲೊಂದಾದ ತತ್ಪುರುಷಮೂರ್ತಿಗೆ ನಮಸ್ಕಾರಗಳು. “ಪೃ ಪಾಲನ ಪೂರಣಯೋಃ” ಧಾತುವಿನಿಂದ ಪುರುಷ ಶಬ್ದದ ನಿಷ್ಪತ್ತಿ. ಆದ್ದರಿಂದ ಪುರುಷನೆಂದರೆ ಜಗವನ್ನು ಪಾಲಿಸುವವನು, ಜಗವನ್ನೆಲ್ಲ ತುಂಬಿ ಇರುವವನು. “ಪುರೇ ದೇಹೇ ಶೇತಿ ಇತಿ ಪುರುಷಃ” - ದೇಹದಲ್ಲಿ ಚೈತನ್ಯರೂಪವಾಗಿ ನೆಲೆಸಿರುವವನೇ ಪುರುಷ. ಅಂತಹ ಕಾರಣಪುರುಷನಿಗೆ ಶರಣು ಶರಣು. ವೇದದಲ್ಲಿ ಉಕ್ತವಾದ ಮಂತ್ರಗಳೆಂಬ ಕುಸುಮಗಳನ್ನು / ಮಂತ್ರಪುಷ್ಪವನ್ನು ನಿನಗೆ ಸಮರ್ಪಿಸುತ್ತೇನೆ.


ಈಶಾನಾಯ ನಮಃ | ಪ್ರದಕ್ಷಿಣ-ನಮಸ್ಕಾರಾದಿ-ಸರ್ವೋಪಚಾರಪೂಜಾಃ ಸಮರ್ಪಯಾಮಿ ||


ಈಶಾನ್ಯದಿಕ್ಕಿನ ಅಧಿಪತಿಯೆನಿಸಿದವನೂ, ಸರ್ವವಿದ್ಯೆಗಳನ್ನೂ ಧರಿಸಿ ಲೋಕಕ್ಕೆ ಗುರುಸ್ಥಾನದಲ್ಲಿದ್ದು ದಕ್ಷಿಣಾಮೂರ್ತಿರೂಪದ ಯುವಗುರುವಾಗಿ ಅನೇಕ ವೃದ್ಧಶಿಷ್ಯರಿಗೂ ಸುಜ್ಞಾನವನ್ನು ಬೋಧಿಸಿದವನೂ (“ವೃದ್ಧಾಃ ಶಿಷ್ಯಾಃ ಗುರುರ್ಯುವಾ”), ಶಿವನ ಪಂಚ-ಕಲ್ಪಾವತಾರಗಳಲ್ಲೊಂದಾದ ಹಾಗೂ ಪಂಚವದನಗಳಲ್ಲೊಂದಾದ ಈಶಾನನಿಗೆ ನಮನವು. ಅಂತಹ ಜಗದೀಶನಿಗೆ ಪ್ರದಕ್ಷಿಣ (ಸುತ್ತು ಬಂದು / “ವಾಮತೋ ದಕ್ಷಿಣಮ್” ಎಂಬಂತೆ ಎಡದಿಂದ ಬಲಕ್ಕೆ ನಿಂತಲ್ಲೇ ೩ ಬಾರಿ ಸುತ್ತು ಹಾಕಿ) ನಮಸ್ಕಾರವೇ ಮುಂತಾದ ಸಕಲ ಉಪಚಾರ / ಸತ್ಕಾರ / ಸೇವೆಗಳೆಂಬ ಪೂಜೆಗಳನ್ನು ಸಮರ್ಪಣೆ ಮಾಡುತ್ತೇನೆ.

೮೧) ಶಿವಪ್ರೀತಿಕರವಾದ ೮ ಹೂವುಗಳಾವುವು?

ಅಥಾಸ್ಯಾಷ್ಟಭಿರ್ಮನ್ತ್ರೈರಷ್ಟೌ ಪುಷ್ಪಾಣಿ ದದಾತಿ |


ಅಥ— ಅನಂತರ / ಇನ್ನುಮೇಲೆ / ಇದಾದ ಬಳಿಕ,

ಅಸ್ಯ— ಇವನ / ಶಿವನ / ಇವನಿಗೆ / ಶಿವನಿಗೆ,

ಅಷ್ಟಭಿಃ ಮನ್ತ್ರೈಃ— ಎಂಟು ಮಂತ್ರಗಳಿಂದ,

ಅಷ್ಟೌ ಪುಷ್ಪಾಣಿ ದದಾತಿ— ಎಂಟು ಬಗೆಯ ವಿವಿಧ ಹೂವುಗಳನ್ನು (ಪೂಜಕನು) ನೀಡುತ್ತಾನೆ / ಕೊಡುತ್ತಾನೆ / ಸಮರ್ಪಿಸುತ್ತಾನೆ.


ಅರ್ಕ-ಚಂಪಕ-ಪುನ್ನಾಗ-ನನ್ದ್ಯಾವರ್ತಾನಿ ಪಾಟಲೀ |

ಬೃಹತೀಕರವೀರಾಣಿ ದ್ರೋಣಪುಷ್ಪಾಣಿ ಚಾರ್ಚಯೇತ್ ||


ಎಕ್ಕ (ಅರ್ಕ), ಸಂಪಿಗೆ (ಚಂಪಕ), ಸುರಹೊನ್ನೆ (ಪುನ್ನಾಗ), ನಂದಿಬಟ್ಟಲು / ಐದೆಸಳಿನ ಮಂಜೆಟಿ (ನಂದ್ಯಾವರ್ತ), ಕಲಾದ್ರಿ / ಪಾದರಿ (ಪಾಟಲೀ), ಕಿರುಗುಳ್ಳ / ಹೆಗ್ಗುಳ್ಳ / ಗುಳ್ಳ / ಕಾಟುಕಾಯಿ / ಕುದನೆ (ಬೃಹತೀ), ಕರವೀರ ಮತ್ತು ತುಂಬೆ (ದ್ರೋಣ)— ಅನುಕ್ರಮವಾಗಿ ಈ ಪುಷ್ಪಗಳಿಂದ ಅರ್ಚಿಸಬೇಕು. (ಇವು ಶಿವನಿಗತಿಪ್ರಿಯವಾದ ಹೂವುಗಳು.)

೮೨) ಶಿವನ ೮ ಮುಖ್ಯ ನಾಮರೂಪಗಳು ಯಾವುವು? ಅವುಗಳ ಅರ್ಚನಾವಿಧಾನವೇನು? ಅವುಗಳ ಗೂಢಾರ್ಥಗಳೇನು?

ಓಂ ಭವಾಯ ದೇವಾಯ ನಮಃ | ಅರ್ಕಪುಷ್ಪಂ ಸಮರ್ಪಯಾಮಿ ||


ಭವ-ನಾಮಕನಾದ ಪರಶಿವನಿಗೆ ನಮಸ್ಕಾರ. ಎಕ್ಕದ ಹೂವನ್ನು ಸಮರ್ಪಿಸುತ್ತೇನೆ. “ಭೂಯತೇ ಅನೇನ ಇತಿ ಭವತಿ ಅಸ್ಮಾದಿತಿ ವಾ ಭವಃ”— ಇವನಿಂದ ಉಂಟಾಗಲ್ಪಡುತ್ತದೆ ಎಂಬುದರಿಂದ ಭವಃ. ಭವವೆಂದರೆ ಜನ್ಮ / ಸೃಷ್ಟಿ. “ಭೂ ಅಪಾದಾನೇ” ಎಂಬ ಧಾತು. “ತಮ್ ಅಬ್ರವೀತ್ ಭವಃ ಅಸಿ ಇತಿ | ತದ್ ಯದ್ ಅಸ್ಯ ತತ್ ನಾಮ ಅಕರೋತ್ ಪಾರ್ಜನ್ಯಂ ತದ್-ರೂಪಮ್ ಅಭವತ್ ಪರ್ಜನ್ಯಃ ವೈ ಭವಃ ಪರ್ಜನ್ಯಾತ್ ಹಿ ಇದಂ ಸರ್ವಂ ಭವತಿ ಸಃ, ಅಬ್ರವೀತ್ ಜ್ಯಾಯಾನ್ ವಾ ಅತಃ, ಅಸ್ಮಿ ಧೇಹಿ ಏವ ಮೇ ನಾಮ ಇತಿ ||” (ಶತಪಥ ಬ್ರಾಹ್ಮಣ ೬.೧.೩.೧೫)— ಭವನೆಂಬ ಹೆಸರು ಯಾವನಿಗಾಯಿತೋ ಅವನ ರೂಪವು ಪಾರ್ಜನ್ಯ / ಮಳೆಯಿಂದ ಜನ್ಯವಾದ, ಹುಟ್ಟಿದ ಜಲ ವಾಯಿತು. ಭವನು ಜಲಮೂರ್ತಿಯು. ಆದ್ದರಿಂದಲೇ ಶಿವನ ಅಷ್ಟಮೂರ್ತಿಗಳಲ್ಲಿ ಜಲರೂಪದಿಂದ ಭವನೆಂಬ ನಾಮದಿಂದ ಅವನಿಗೆ ಅರ್ಚನೆ / ಪೂಜೆ.  “ಭವಾಯ ಜಲಮೂರ್ತಯೇ ನಮಃ”— ಎಂಬುದಾಗಿ ಪಾರ್ಥಿವಶಿವಲಿಂಗಪೂಜಾ ಪ್ರಯೋಗದಲ್ಲಿದೆ.


 ಪರ್ಜನ್ಯದ ಇತರ ಅರ್ಥಗಳು — ಇಂದ್ರ / ಮಳೆಮೋಡ / ಮಳೆಯ ದೇವತೆ / ಇಂದ್ರ / ಸೂರ್ಯ / ವಿಷ್ಣು / ದ್ವಾದಶಾದಿತ್ಯರಲ್ಲೊಬ್ಬ / ಒಬ್ಬ ಮೌನೇಯ ಗಂಧರ್ವ (ಮುನಿ-ಗಂಧರ್ವರಿಗೆ ಜನಿಸಿದವ) / ಫಾಲ್ಗುಣ ಮಾಸದಲ್ಲಿ ಸೂರ್ಯನ ಹೆಸರು ಪರ್ಜನ್ಯ. “ಭವತಿ ಪ್ರಭವತಿ ಅನೇನ ಇತಿ”— ಕ್ಷೇಮ ಎಂದರ್ಥ. “ಭವತಿ ಉತ್ಪದ್ಯತೇ ಅಸ್ಮಿನ್ ಇತಿ”— ಭೂ ಆಧಾರೇ ಧಾತುಜನ್ಯ ಸಂಸಾರವೆಂಬ ಅರ್ಥಕ. ಸತ್ತೆ / ಅಸ್ತಿತ್ವ / ಸೃಷ್ಟಿ / ಉತ್ಪತ್ತಿ / ಪ್ರಾಪ್ತಿ ಎಂಬರ್ಥಗಳಿವೆ. 

ಸಮಸ್ತ ಸೃಷ್ಟಿಯಲ್ಲಿ (ಭವದಲ್ಲಿ), ಜಗತ್-ಪ್ರಸವಕ್ಕೆ / ಸೃಷ್ಟಿಗೆ ಕಾರಣನಾದ ಪರಮಾತ್ಮನ ಏಕಮೇವ ಪ್ರತ್ಯಕ್ಷಗೋಚರವಾದ ಬೆಳಗುವ (ದೇವ=ಬೆಳಗುವ) ರೂಪವಾಗಿರುವವನೇ ಪ್ರ-ಸವಿತೃರೂಪೀ ಅರ್ಕ / ಸೂರ್ಯನು. “ಅರ್ಚ ತಾಪೇ ಸ್ತುತೌ” ಎಂಬ ತಾಪವುಳ್ಳ, ಉಷ್ಣ / ಬಿಸಿಯಾದ ಅಥವಾ ಸ್ತುತಿಸಲ್ಪಡುವ ಎಂಬರ್ಥದ ಧಾತುವಿನಿಂದ ಅರ್ಕ ಶಬ್ದದ ನಿಷ್ಪತ್ತಿ. ಭವದಲ್ಲಿ ಬೆಳಗುವ ಭವತಾರಕನಾದ ಅರ್ಕರೂಪೀ ದೇವನಿಗೆ, ಅರ್ಕಪುಷ್ಪವನ್ನೇ ಅರ್ಪಿಸಿ ಭವದಿಂದ ಪಾರಾಗೋಣ; ಪುನರ್ಭವವನ್ನು / ಪುನರಪಿ ಜನನವನ್ನು ಪಡೆಯದಿರೋಣ; ಪಡೆದರೂ ಸಂಸಾರಬಂಧನದಿಂದ ಗೃಹಸ್ಥರಾದರೂ ಮಾನಸಿಕವಾಗಿ ಮುಕ್ತರಾಗೋಣ; ಬ್ರಹ್ಮಚರ್ಯವ್ರತಸ್ಥರಾದರೆ ದೈಹಿಕವಾಗಿ ಮುಕ್ತರಾಗೋಣ; ಸಂನ್ಯಾಸಾಶ್ರಮಿಗಳಾದರೆ ಮನೋದೈಹಿಕವಾಗಿಯೂ, ಮಾತಿನಲ್ಲೂ ಮುಕ್ತರಾಗೋಣ. ಜೀವನ್ಮುಕ್ತರಾಗಿ ಪುನೀತರಾಗಿ, ಜಗದ ಜನರ ಜಂಜಡಗಳನ್ನು ಪರಿಹರಿಸಿ, ಅವರಿಗೆ ಸೂಕ್ತ ಮಾರ್ಗದರ್ಶನ ಮಾಡಿ, ಜಗದ ಸರ್ವರ ಉದ್ಧಾರದಲ್ಲೇ ಸುಖ ಕಾಣುತ್ತಾ, ಆತ್ಮಾರಾಮರಾಗೋಣ. ಅದಕ್ಕಾಗಿ ಪುನಃ ಪುನಃ ಜನ್ಮತಾಳೋಣ. “ಉದ್ಧರೇದಾತ್ಮನಾऽऽತ್ಮಾನಮ್”— ತನ್ನಿಂದಲೇ ತಾನು ಉದ್ಧರಿಸಲ್ಪಡಬೇಕೇ ಹೊರತು, ತನಗೆ ತನಗಿಂತ ಶ್ರೇಷ್ಠರಾದ ಮಿತ್ರರಿಲ್ಲ; ಶತ್ರುಗಳೂ ಇಲ್ಲ. ತಾನೇ ತನ್ನ ಅಭ್ಯುದಯಕ್ಕೆ ಶತ್ರುವಾಗದೇ, ಭಗವದನುಗ್ರಹದಿಂದಲೂ, ನಿಶ್ಚಯಾತ್ಮಕ ಸುದೃಢ ನಿತ್ಯ ಸರ್ವದಾ ಸ್ಥಿರ ಬುದ್ಧಿಯಿಂದಲೂ ಇದಕ್ಕಾಗಿ ಸದಾ ಪ್ರಯತ್ನನಿರತರಾಗಿರೋಣ. ಪ್ರತಿಕ್ಷಣವೂ ಜಾಗೃತರಾಗಿ ನಮ್ಮನ್ನು ನಾವು ಸಾಕ್ಷೀಭಾವದಿಂದ ವೀಕ್ಷಿಸೋಣ; ನಮ್ಮ ಚಿತ್ತವೃತ್ತಿಗಳನ್ನು ಗಮನಿಸೋಣ, ಇಂದ್ರಿಯಗಳ ಗತಿಯನ್ನವಲೋಕಿಸೋಣ, ಕರ್ಮೇಂದ್ರಿಯಗಳ ಚಟುವಟಿಕೆಗಳ ಬಗ್ಗೆ ಸದಾ ನಿಗಾ ಇಡೋಣ. ಪರಮಾತ್ಮನನ್ನು ಇದಕ್ಕಾಗಿ ಬೇಡೋಣ— “ಆತ್ಮನೋ ಮೋಕ್ಷಾರ್ಥಂ ಜಗದ್ಧಿತಾಯ ಚ”— ತನ್ನ ಬಿಡುಗಡೆಗಾಗಿ ಹಾಗೂ ಜಗದ ಹಿತಕ್ಕಾಗಿ ಹುಟ್ಟೋಣ, ಜೀವಿಸೋಣ, ಅಮರರಾಗೋಣ. ಸದಾ ಈ ಚಿಂತನೆಯಲ್ಲೇ ಇದ್ದು, ಪ್ರವರ್ತಿಸೋಣ.


ಓಂ ಶರ್ವಾಯ ದೇವಾಯ ನಮಃ | ಚಂಪಕಪುಷ್ಪಂ ಸಮರ್ಪಯಾಮಿ ||


ಪರಮೇಶ್ವರನ ಅಷ್ಟಮೂರ್ತಿಗಳಲ್ಲೊಂದಾದ, ಏಕಾದಶರುದ್ರರಲ್ಲೊಬ್ಬನಾದ ಶರ್ವನೆಂಬ ದಿವ್ಯರೂಪಕ್ಕೆ ನಮನ. ಪ್ರಾಣ-ಅಪಾನ-ವ್ಯಾನ-ಉದಾನ-ಸಮಾನ ಎಂಬ ಪಂಚಪ್ರಾಣಗಳು, ನಾಗ-ಕೂರ್ಮ-ಕೃಕಲ-ದೇವದತ್ತ-ಧನಂಜಯ ಎಂಬ ಪಂಚ ಉಪಪ್ರಾಣಗಳು ಹಾಗೂ ಆತ್ಮಾ— ಇವು ಸೇರಿ ಒಟ್ಟು ೧೧— ಇವರೇ ಏಕಾದಶರುದ್ರರು ಎನ್ನಲಾಗಿದೆ. (“ಪ್ರಾಣಾ ವೈ ರುದ್ರಾಃ”— ಜೈಮಿನೀಯ ಉಪನಿಷದ್ ಬ್ರಾಹ್ಮಣ ೪.೨.೬; “ಕತಮೇ ರುದ್ರಾಃ ಇತಿ | ದಶ ಇಮೇ ಪುರುಷೇ ಪ್ರಾಣಾಃ, ಆತ್ಮಾ ಏಕಾದಶಃ |”— ಶತಪಥ ಬ್ರಾಹ್ಮಣ ೧೧.೬.೩.೭) “ಶೃಣಾತಿ ಸಂಹರತಿ ಸರ್ವಾಃ ಪ್ರಜಾಃ ಪ್ರಲಯೇ ಸಂಹಾರಯತಿ ವಾ ಭಕ್ತಾನಾಂ ಪಾಪಾನಿ”— ಪ್ರಳಯಕಾಲದಲ್ಲಿ ಸರ್ವರನ್ನೂ ಸಂಹಾರಮಾಡುವವನು ಅಥವಾ ಭಕ್ತರ ಪಾಪಗಳನ್ನು ನಾಶಮಾಡುವವನು, ಪರಶಿವನು. “ಶೃಣಾತಿ ಸ್ವಶರೀರಭೂತಾನಾಮ್ ಅಶುಭಂ ಹಿನಸ್ತಿ”; “ಸ್ವಶರೀರ-ಜಗತ್-ದುಃಖಂ ಶರ್ವಃ ಸಃ ಸ್ಯಾತ್ ಶೃಣಾತಿ ಯಃ”— ಇತಿ ನಿರುಕ್ತಿಃ— ಜಗತ್ತೇ ತನ್ನ ಶರೀರವಾಗಿರುವ ಯಾವನು ಆ ಜಗವೆಂಬ ತನ್ನ ಶರೀರದಲ್ಲಿರುವ ಸಕಲರ ದುಃಖ-ಕಷ್ಟವನ್ನು ಇಲ್ಲವಾಗಿಸುವನೋ ಅವನೇ ವಿಷ್ಣುಸಹಸ್ರನಾಮದಲ್ಲಿ “ಸರ್ವಃ ಶರ್ವಃ ಶಿವಃ ಸ್ಥಾಣುಃ ಭೂತಾದಿಃ ನಿಧಿಃ ಅವ್ಯಯಃ” ಎಂದು ಸ್ತುತಿಸಲ್ಪಟ್ಟ ಶರ್ವನಾಮಕನಾದ ಮಹಾವಿಷ್ಣುವು / ಶ್ರೀಮನ್ನಾರಾಯಣನು. “ಶೃ ಹಿಂಸಾಯಾಮ್” ಧಾತುಜನ್ಯವಾದದ್ದು ಶರ್ವಶಬ್ದ. 

ಅಂತಹ ಶರ್ವನೆಂಬ ನಾಮಕ / ಹೆಸರಿನವನಾದ ದೇವದೇವನಿಗೆ ಸಂಪಿಗೆಹೂವನ್ನು (ಭಕ್ತಿಪೂರ್ವಕವಾಗಿ) ಸಮರ್ಪಿಸುತ್ತೇನೆ. ಅದರ ಕಡುಕಂಪು / ಬಹುವಾದ ಪರಿಮಳವು ಸಜ್ಜನರ ದುಃಖವೆಂಬ ದುರ್ವಾಸನೆಯನ್ನು ಹೋಗಲಾಡಿಸಲಿ. “ಚಂಪಯತಿ ಸದ್ಗಂಧಾದಿಕಂ ಗಚ್ಛತಿ ಇತಿ”— ಒಳ್ಳೆಯ ಗಂಧ / ಪರಿಮಳ / ಸುಗಂಧ / ಸುವಾಸನೆಯನ್ನು ಬೀರುತ್ತದೆ / ಹೊಂದುತ್ತದೆ ಎಂಬುದರಿಂದ ಚಂಪಕವೆಂಬ ಹೆಸರು. “ಚಪಿ ಗತ್ಯಾಮ್” ಎಂಬ ಧಾತು. 


ಓಮ್ ಈಶಾನಾಯ ದೇವಾಯ ನಮಃ | ಪುನ್ನಾಗಪುಷ್ಪಂ ಸಮರ್ಪಯಾಮಿ ||


ದೇವದೇವನಾದ ಪರಶಿವನ ಈಶಾನಮೂರ್ತಿಗೆ ನಮಸ್ಕಾರ. ಈಶಾನ್ಯದಿಕ್ಪಾಲಕನೂ, ಶಿವನ ಪಂಚಕಲ್ಪಾವತಾರಗಳಲ್ಲೊಂದೂ, ಶಿವನ ಅಷ್ಟಮೂರ್ತಿಗಳಲ್ಲೊಬ್ಬನೂ, ಏಕಾದಶರುದ್ರರಲ್ಲೊಬ್ಬನೂ, ಸರ್ವವಿದ್ಯಾಧಿಪತಿಯೂ, ಶಿವನ ಪಂಚಮುಖಗಳಲ್ಲೊಂದೂ ಆದುದು ಈಶಾನನು. ಪುನ್ನಾಗ / ಸುರಹೊನ್ನೆಯ ಹೂವನ್ನು ಸಮರ್ಪಣೆ ಮಾಡುತ್ತೇನೆ. ಸುರರಲ್ಲಿ ಶ್ರೇಷ್ಠನಾದ ಈಶಾನನಿಗೆ ಪುಷ್ಪಗಳಲ್ಲಿ ಶ್ರೇಷ್ಠವಾದ ಸುರಹೊನ್ನೆಯನ್ನು ಅರ್ಪಿಸುತ್ತಿದ್ದೇನೆ. ನಾಗಾಭರಣನಾದ ಪರಶಿವನನ್ನು ನಾಗಶ್ರೇಷ್ಠವೆಂಬರ್ಥ ಕೊಡುವ ಪುಂ-ನಾಗ (ನಾಗ ಪುಂಗವ) ಪುಷ್ಪದಿಂದ ಅರ್ಚಿಸುತ್ತಿದ್ದೇನೆ.


ಓಂ ಪಶುಪತಯೇ ದೇವಾಯ ನಮಃ | ನನ್ದ್ಯಾವರ್ತಪುಷ್ಪಂ ಸಮರ್ಪಯಾಮಿ ||


ಪರಶಿವನ ಎಂಟು ಮೂರ್ತಿಗಳಲ್ಲೊಂದೆನಿಸಿದ ಜಗದ ಸಕಲ ಪ್ರಾಣವಂತರ ಅಧಿಪತಿಯೆನಿಸಿದ ಪಶುಪತಿಗೆ (“ಪಶೂನಾಂ ಪತಯೇ ನಮಃ..”— ತೈತ್ತಿರೀಯಕೃಷ್ಣಯಜುರ್ವೇದಸಂಹಿತೆಯ ಚತುರ್ಥಕಾಂಡದಲ್ಲಿ ಬರುವ ೧೧ ಅನುವಾಕಗಳ ರುದ್ರಪ್ರಶ್ನೋಕ್ತ) ನಮಸ್ಕಾರ. ನಂದಿಬಟ್ಟಲು ಹೂವನ್ನು ಸಮರ್ಪಿಸುತ್ತೇನೆ. 

      “ ಅವಿಶೇಷೇಣ ಸರ್ವಂ ಪಶ್ಯತಿ ಇತಿ ಪಶುಃ”— ಎಲ್ಲವನ್ನೂ ಅವುಗಳ ಗುಣವಿಶೇಷಗಳನ್ನರಿಯದೆ ಒಂದೇ ತೆರನಾಗಿ ನೋಡುವುದೇ ಪಶುವು. ವಿವೇಚನಾಶಕ್ತಿಯಿಲ್ಲದ್ದು. “ದೃಶಿರ್ ಪ್ರೇಕ್ಷಣೇ” ಧಾತುವು. ಪಶುಗಳಲ್ಲಿ ಗ್ರಾಮ್ಯ ಹಾಗೂ ಆರಣ್ಯ ಎಂದು ೨ ವಿಧಗಳಲ್ಲಿ ಒಟ್ಟು ೧೪ ಪ್ರಭೇದಗಳಿವೆ. “ಗೌಃ ಅವಿಃ ಅಜಃ ಅಶ್ವಃ ಅಶ್ವತರಃ ಗರ್ದಭಃ ಮನುಷ್ಯಃ ಚ ಇತಿ ಸಪ್ತ ಗ್ರಾಮ್ಯಾಃ ಪಶವಃ ||”— ಗೌಃ/ಗೋವು,  ಅವಿಃ/ಕುರಿ, ಅಜಃ /ಆಡು / ಮೇಕೆ / ಛಾಗ, ಅಶ್ವ / ಕುದುರೆ, ಅಶ್ವತರ / ಹೇಸರಗತ್ತೆ,  ಗರ್ದಭ / ಕತ್ತೆ,  ಮನುಷ್ಯ— ಇವು ೭ ಗ್ರಾಮ್ಯ / ಗ್ರಾಮದಲ್ಲಿ ವಾಸಿಸುವ / ಊರಿನಲ್ಲಿ ವಾಸಿಸುವ ಪಶುಗಳು. “ವಿದ್ಯಾ ವಿಹೀನಃ ಪಶುಃ”— ಎಂಬುದರಿಂದ ಅಂತಹ ಮನುಷ್ಯರೂ ಪಶುತುಲ್ಯರು. ಅಥವಾ, ಸಕಲ ಪ್ರಾಣವಂತರನ್ನೇ ಪಶುಗಳೆಂದು ತಿಳಿದರೆ, ಸೃಷ್ಟಿಯ ಪ್ರಾಣವಂತರಲ್ಲಿ ಊರಿನಲ್ಲಿ ಬದುಕುವವು ಇವಿಷ್ಟು ಜೀವರು. ಇನ್ನು, “ಮಹಿಷ-ವಾನರ-ಋಕ್ಷ-ಸರೀಸೃಪ-ರುರು-ಪೃಷತ-ಮೃಗಾಃ ಚ ಇತಿ ಸಪ್ತ ಆರಣ್ಯಾಃ ಪಶವಃ ||”— ಎಮ್ಮೆ/ಕೋಣ, ವಾನರ/ಕಪಿ/ಮಂಗ, ಋಕ್ಷ / ಭಲ್ಲೂಕ / ಕರಡಿ, ಸರೀಸೃಪ / ಹಲ್ಲಿ-ಹಾವು ಮುಂತಾದ ಸರಿಯುತ್ತಾ ಚಲಿಸುವವು, ರುರು / ಗವಯ / ಶರಭ / ಚಮರ / ಏಣ / ಕೃಷ್ಣಸಾರವೆಂಬ ಒಂದು ಜಾತಿಯ ಜಿಂಕೆ / ನಾಯಿ / ಬೆಕ್ಕು, ಪೃಷತ / ಬೇರೊಂದು ಜಾತಿಯ ಜಿಂಕೆ, ಮೃಗ / ಹರಿಣ / ಜಿಂಕೆ— ಇವು ೭ ಅರಣ್ಯದಲ್ಲಿರುವ ಪಶುಗಳು.

         ಪಶು ಎಂದರೆ ಶಿವನ ಪ್ರಮಥಗಣಗಳೆಂದೂ ಅರ್ಥವಿದ್ದು, ಅವುಗಳ ಅಧಿಪತಿಯಾದ ಶಿವನೇ ಪಶುಪತಿಯು. ಪಶು ಎಂಬುದು ದೇವ ಎಂಬರ್ಥ ಕೊಟ್ಟಾಗ, ದೇವತೆಗಳ ಅಧಿಪತಿಯು ಪಶುಪತಿ. ಪಶು=ಯಜ್ಞ, ಯಜ್ಞಪುರುಷನೇ ಪಶುಪತಿ. “ಪಶೂನಾಂ ಜೀವಾನಾಂ ಪತಿಃ”— ಸಕಲ ಜೀವರ ಅಧಿಪತಿ. ವರಾಹಪುರಾಣದ ಪ್ರಕಾರ— “ಅಯಂ ಚ ಸರ್ವವಿದ್ಯಾನಾಂ ಪತಿಃ ಆದ್ಯಃ ಸನಾತನಃ |... ಅಹಂ ವೈ ಪತಿತಃ ಯೇನ ಪಶುಮಧ್ಯೇ (/ಜೀವಮಧ್ಯೇ) ವ್ಯವಸ್ಥಿತಃ |... ಅತಃ ಪಶುಪತಿಃ ನಾಮ ತ್ವಂ ಲೋಕೇ ಖ್ಯಾತಿಮ್ ಏಧ್ಯಸಿ |”— ಇವನೇ ಸರ್ವವಿದ್ಯಾಧಿಪತಿಯೂ, ಮೊದಲಿನವನೂ / ಶ್ರೇಷ್ಠನೂ, ಸನಾತನನೂ ಆಗಿರುವನು. ಸೃಷ್ಟಿಕಾಲದಲ್ಲಿ ತಾನೇ ಸ್ವಯಂ ಪಶುಗಳ / ಜೀವಿಗಳ ಅಂತರಾತ್ಮನಾಗಿ ಹೃದ್ದೇಶದಲ್ಲಿ ವ್ಯವಸ್ಥಿತವಾಗಿ ನೆಲೆಸುವನು. ಆದ್ದರಿಂದಲೇ, ಪಶುಪತಿಯೆಂದು ಲೋಕದಲ್ಲಿ ಪ್ರಸಿದ್ಧಿಪಡೆದನು. 

          ಪರಬ್ರಹ್ಮವೆಂಬ ಮೂಲವಸ್ತುವು “ಏಕೋऽಹಂ ಬಹು ಸ್ಯಾಮ್”— ಒಬ್ಬನೇ ಇರುವೆನು. ಒಂಟಿತನದ ಬೇಸರಕಳೆಯಲೋ ಎಂಬಂತೆ ಬಹುವಾಗುವೆನು ಎಂದಿದೆ ಶ್ರುತಿ. ಹೀಗೆ ಅವ್ಯಕ್ತವಾಗಿದ್ದ ಪರಬ್ರಹ್ಮವು ಮೊದಲಿಗೆ ವಿರಾಡ್ರೂಪವನ್ನು ತಾಳಿ ವಿರಾಜಮಾನವಾಗಿ ಬೆಳಗುವ ವಿರಾಟ್ಪುರುಷನೆಂಬ ಅನಂತಸೂರ್ಯಪ್ರಭಾಯುತವಾದ ಜ್ಯೋತಿಸ್ವರೂಪಿಯಾಯಿತು. ಅದರ ಕೇವಲ ಕಾಲಂಶದಿಂದಲೇ ಈ ಸಮಸ್ತ ಲೋಕಗಳೂ, ಚರಾಚರಗಳೂ ಉಂಟಾದವು. ಇನ್ನುಳಿದ ಮೂರು ಪಾದಗಳು / ಮುಕ್ಕಾಲಂಶವೂ ಅಮೃತತ್ತ್ವವೆನಿಸಿದ ದಿವ್ಯತೆಯಲ್ಲಿ ನೆಲೆಸಿರುವುದು. ಹಾಗಿದ್ದರೂ, ಇದೂ / ಈ ಸೃಷ್ಟಿಯೂ ಪೂರ್ಣ, ಅದೂ / ಪರಬ್ರಹ್ಮವೂ ಪೂರ್ಣವೇ ಹೊರತು ಗಣಿತದ ಲೆಕ್ಕಾಚಾರದಂತೆ ಕುಂಠಿತಗೊಳ್ಳುವುದಿಲ್ಲ. ಹೇಗೆ ಮೂಲದೀಪದಿಂದ ಅನೇಕ ದೀಪಗಳು ಪ್ರಜ್ವಲಿತವಾದಾಗ ಮೂಲದ ಬೆಳಕೂ, ನಂತರದ ದೀಪಗಳ ಬೆಳಕೂ ಒಂದೇ ತೆರನಾಗಿರುವುದೋ, ಅಂತೆಯೇ ಮೂಲ ಅವ್ಯಾಕೃತ ಪರಬ್ರಹ್ಮವೂ, ಸೃಷ್ಟಿಬಳಿಕದ ವ್ಯಾಕೃತ ಪ್ರಪಂಚವೂ ಅಭಿನ್ನವೆಂದು ತಿಳಿದ ಜ್ಞಾನಿಯು ಮುಕ್ತನು ಹಾಗೂ ಪರಬ್ರಹ್ಮವೇ ಆಗುವನು ಎಂಬುದು ಶಂಕರರ ಅದ್ವೈತಮತ. ವಿಶ್ವವು ಮೂಲದಿಂದ ಒಡಮೂಡಿದ, ಮೂಲದಂತೆಯೇ ಇರುವ, ಆದರೆ ಅದಕ್ಕಿಂತ ಕಡಿಮೆಗುಣದ ವಸ್ತುವಾಗಿದ್ದರೂ, ಸಕಲ ಜೀವರೂ ಭಗವದನುಗ್ರಹ ಹಾಗೂ ಸ್ವಪ್ರಯತ್ನದಿಂದ ಪರಬ್ರಹ್ಮದಲ್ಲೇ ಐಕ್ಯವಾಗಿ ಅಭಿನ್ನವಾಗಬಹುದು ಎಂಬುದು ರಾಮಾನುಜರ ವಿಶಿಷ್ಟಾದ್ವೈತಮತ. ಮೂಲಬ್ರಹ್ಮವು ಬಿಂಬವೂ, ಜೀವನು ಅದರ ಪ್ರತಿಬಿಂಬಮಾತ್ರವೂ, ಸೃಷ್ಟಿಯು ಪಂಚಭೇದಯುಕ್ತವೂ, ಪರಮಾತ್ಮನಿಗಿಂತ ಕೆಳಮಟ್ಟದ್ದೂ ಆಗಿದ್ದು, ಇಲ್ಲಿ ನಿತ್ಯಮುಕ್ತರೂ, ನಿತ್ಯಸಂಸಾರಿಗಳೂ, ನಿತ್ಯನಾರಕಿಗಳೂ ಎಂಬ ೩ ವಿಧದ ಜೀವರಿರುವರೆಂದೂ, ಜೀವನು ಬ್ರಹ್ಮನಿಗಿಂತ ನಿತ್ಯ ಭಿನ್ನನೆಂದೂ, ಎಂದೂ ಜೀವಬ್ರಹ್ಮೈಕ್ಯವು ಸಂಭವಿಸದೆಂದೂ ಮಧ್ವರ ದ್ವೈತಸಿದ್ಧಾಂತ. 

           ಇಂತಹ ಜೀವಾತ್ಮನೇ (=ಕಾರಣಶರೀರ) ತನ್ನ ಪೂರ್ವಕರ್ಮಾರ್ಜಿತವಾಗಿ ಸಂಸಾರಪಾಶ / ಭವಪಾಶದಿಂದ ಬದ್ಧನಾಗಿ, ಪಂಚಭೂತಾತ್ಮಕವಾದ ಸ್ಥೂಲಶರೀರದೊಳಗೆ ಪಂಚಕರ್ಮೇಂದ್ರಿಯಗಳು, ಪಂಚಜ್ಞಾನೇಂದ್ರಿಯಗಳು, ಪಂಚಪ್ರಾಣಗಳು, ಮನಸ್ಸು ಮತ್ತು ಬುದ್ಧಿಗಳೆಂಬ ೧೭ ತತ್ತ್ವಗಳಿಂದಾದ ಸೂಕ್ಷ್ಮಶರೀರದಿಂದ ಕೂಡಿ ಹುಟ್ಟುವುದರಿಂದಾಗಿ ಪಶುವು. ಪರಮಪುರುಷನೇ ಅನ್ನವುಣ್ಣುವ ಸಾಶನ (ಸ-ಅಶನ) ಜೀವರ ಹಾಗೂ ಅನ್ನವುಣ್ಣದ ಕಲ್ಲು, ಮಣ್ಣು ಮುಂತಾದ ಅನಶನ (ಅನ್-ಅಶನ) ವಸ್ತುಗಳ ಸೃಷ್ಟಿಮಾಡಿ, ಅವುಗಳೊಳಗೆ ಅಂತರ್ಯಾಮಿಯಾಗಿ ನೆಲೆಸಿ, ಅವುಗಳನ್ನು ಸಚೇತನಗೊಳಿಸುತ್ತಿರುವುದರಿಂದ ಅವೆಲ್ಲದರ ಅಧಿಪತಿಯಾಗಿ ಪಶುಪತಿಯೆನಿದ್ದಾನೆ. ಸಕಲದೇವತಾಶ್ರಯಸ್ಥಾನವೆನಿಸಿದ ಗೋವಿನ ಪುರುಷರೂಪವೇ ನಂದೀ. ಅಂತಹ ನಂದಿಯ ಪುನರಾವರ್ತನೆಯೇ, ಅರ್ಥಾತ್ ದೇವತಾಸ್ಮರಣೆಯ ಪುನರಾವೃತ್ತಿಯೇ ಜಪವೆನಿಸುತ್ತದೆ. ತಪವೆನಿಸುತ್ತದೆ. ಅಂತಹ ನಂದಿಗಳ ಆವೃತ್ತಿಯನ್ನು / ಗೋಕುಲವನ್ನು / ದೇವನಾಮಜಪವನ್ನು ನೆನಪಿಸುವ ನಂದ್ಯಾವರ್ತ / ನಂದೀಬಟ್ಟಲು ಎಂಬ ಸುಮವನ್ನು ನಂದೀವಾಹನನಾದ ರುದ್ರ  ಪರಮಾತ್ಮನ ಚರಣಾರವಿಂದಗಳಿಗೆ ಸಮರ್ಪಿಸುತ್ತೇನೆ.


ಓಂ ರುದ್ರಾಯ ದೇವಾಯ ನಮಃ | ಪಾಟಲೀಪುಷ್ಪಂ ಸಮರ್ಪಯಾಮಿ ||


ರುದ್ರನಾಮಕನಾದ ದೇವನಿಗೆ ನಮನ. ಪಾಟಲೀ / ಕಲಾದ್ರಿ / ಪಾದರಿಯೆಂಬ ಹೂವನ್ನು ಸಮರ್ಪಿಸುತ್ತೇನೆ. 

 

೧) “ರುದಾನ್ ಆರ್ತಾನ್ ತ್ರಾಯತೇ ಇತಿ ರುದ್ರಃ”— ರುದಿರ್ / ರುದ್ ಅಶ್ರುವಿಮೋಚನೇ ಧಾತುಃ, ತ್ರೈಙ್ / ತ್ರೈ ಪಾಲನೇ ಧಾತುಃ  ಚ | ರೋದಿಸುವ ಆರ್ತರನ್ನು ರಕ್ಷಿಸುತ್ತಾನಾದ್ದರಿಂದ ರುದ್ರನು.

೨) “ರುಜಂ ರೋಗಂ ದ್ರಾವಯತಿ ಶಮಯತಿ ಇತಿ ರುದ್ರಃ”— ರುಜ್ ಹಿಂಸಾಯಾಮ್ ಧಾತುಃ, ದ್ರು ಗತೌ ಧಾತುಃ ಚ | ರೋಗ-ರುಜಿನಗಳನ್ನು ಉಪಶಮನಗೊಳಿಸುವ ಮೊತ್ತಮೊದಲ ದೈವೀ ವೈದ್ಯನು (“ಪ್ರಥಮೋ ದೈವ್ಯೋ ಭಿಷಕ್”— ತೈತ್ತಿರೀಯ ರುದ್ರಪ್ರಶ್ನ) ರುದ್ರನು.

೩) “ಪ್ರಲಯೇ ರೌದ್ರರಸಯುಕ್ತಃ ಕೋಪ / ಕ್ರೋಧಭಾವಯುಕ್ತಃ ರುದ್ರಃ”— ಪ್ರಲಯಕಾಲದಲ್ಲಿ / ದುಷ್ಟಸಂಹಾರಕಾಲದಲ್ಲಿ ರೌದ್ರರಸದಿಂದ ಕೂಡಿದವನು / ಕೋಪದಿಂದ ಕೂಡಿದವನು / ಕ್ರೋಧಭಾವದಿಂದ ಯುಕ್ತನಾದವನು ರುದ್ರನು. (ಶೃಂಗಾರ-ಹಾಸ್ಯ-ಕರುಣ-ರೌದ್ರ-ವೀರ-ಭಯಾನಕಾಃ | ಭೀಭತ್ಸ-ಅದ್ಭುತ-ಶಾನ್ತಾಃ ಚ ನವ ನಾಟ್ಯೇ ರಸಾಃ ಸ್ಮೃತಾಃ ||— ಇವು ನವರಸಗಳು. ರತಿಃ ಹಾಸಃ ಚ ಶೋಕಃ ಚ ಕ್ರೋಧ-ಉತ್ಸಾಹಃ ಭಯಂ ತಥಾ | ಜುಗುಪ್ಸಾ-ವಿಸ್ಮಯ-ಶಮಾಃ ನವ ಭಾವಾಃ ಪ್ರಕೀರ್ತಿತಾಃ ||— ಇವು ನವರಸಗಳಿಗೆ ಅನುಕ್ರಮವಾದ ನವಭಾವಗಳು.— ಭರತಮುನಿಯ ನಾಟ್ಯಶಾಸ್ತ್ರ)

೪) “ದುಷ್ಟಾನ್ ರೋದಯತಿ ನಾಶಯತಿ ವಾ ಇತಿ ರುದ್ರಃ”— ದುಷ್ಟರನ್ನು ಅಳಿಸುತ್ತಾನೆ / ನಾಶಮಾಡುತ್ತಾನೆ ರುದ್ರನು.

೫) “ಸತಾಂ ಕಷ್ಟಂ ದೃಷ್ಟ್ವಾ ರೋದಿತಿ ಇತಿ ರುದ್ರಃ”— ಸಜ್ಜನರ ಕಷ್ಟವನ್ನು ಕಂಡು ದುಃಖದಿಂದ ರೋದಿಸುವವನು ರುದ್ರನು.

೬) “ಜನನಕಾಲೇ ರುದಿತಾನ್ ಸರ್ವಾನ್ ಮರಣಕಾಲೇ ಸಂಹಾರಕಾಲೇ ವಾ ಅಶ್ರುಭಿಃ ಮೋಚಯತಿ ದುಃಖಂ ಪರಿಹರತಿ ಇತಿ ವಾ ರುದ್ರಃ”— ಹುಟ್ಟುವಾಗ ಅಳುವ ಎಲ್ಲರನ್ನು ಸಾಯುವಕಾಲದಲ್ಲಿ ಭವ / ಸಂಸಾರದ ದುಃಖದ ಕಣ್ಣೀರಿನಿಂದ ವಿಮೋಚನೆಗೊಳಿಸುವವನು ರುದ್ರನು.

೭) “ರುತೇನ ಮೇಘಗಂಭೀರಧ್ವನಿನಾ ರಪತಿ ವದತಿ ಇತಿ ರುದ್ರಃ”— ಮೇಘಗಂಭೀರಧ್ವನಿಯಿಂದ ಅಬ್ಬರಿಸುವವನು ರುದ್ರನು.

೮) “ರೋದಃ ದಿವಂ ಸ್ವರ್ಗಂ ವಾ ರಕ್ಷತಿ ಇತಿ ರುದ್ರಃ”— ರೋದಸ್ ಎಂದರೆ ಸ್ವರ್ಗ. ಅದನ್ನು ರಕ್ಷಿಸುವವನು ರುದ್ರನು.

೯) “ರೋದಃ ಭೂಮಿಂ ವಾ ರಕ್ಷತಿ ಇತಿ ರುದ್ರಃ”— ರೋದಸ್ ಎಂದರೆ ಭೂಮಿ. ಅದರ ರಕ್ಷಕನು ರುದ್ರನು.

೧೦) “ರೋದಸೀ ದ್ಯಾವಾಭೂಮ್ಯೋಃ ರಕ್ಷಕಃ ರುದ್ರಃ”— ರೋದಸ್ ಶಬ್ದರೂಪವು ರೋದಃ, ರೋದಸೀ, ರೋದಾಂಸಿ (ಪ್ರ.ವಿಭಕ್ತಿ ಹಾಗೂ ದ್ವಿ.ವಿ.) ಎಂದಾಗುತ್ತದೆ. ರೋದಸೀ ಎಂಬುದರ ಅರ್ಥ ದ್ಯಾವಾಪೃಥಿವೀ / ಸ್ವರ್ಗಭೂಮಿಗಳು. ಅವುಗಳ ರಕ್ಷಕ ರುದ್ರ.

೧೧) “ರೌತಿ ಶತ್ರುಸಂಹಾರೇ ರೌದ್ರಗಂಭೀರಸ್ವರೇಣ ಇತಿ ವಾ ರುದ್ರಃ”— ಶತ್ರುಸಂಹಾರಕಾಲದಲ್ಲಿ ರುದ್ರಗಂಭೀರಧ್ವನಿಯಿಂದ ಬೊಬ್ಬಿರಿಯುವವನು ರುದ್ರನು.

೧೨) “ರೌತಿ ಹನ್ತಿ ವಾ ದುಷ್ಟಾನ್ ಇತಿ ರುದ್ರಃ”— ದುಷ್ಟರನ್ನು ಕೊಲ್ಲುವವನು ರುದ್ರನು.

೧೩) “ರೌತಿ ಹನ್ತಿ ಸರ್ವಾನ್ ಪ್ರಲಯೇ, ದ್ರಾವಯತಿ ಪ್ರಲಯಜಲೇ ವಾ ಇತಿ ರುದ್ರಃ”— ಪ್ರಲಯಕಾಲದಲ್ಲಿ ಪ್ರಲಯಮಹಾಜಲದಲ್ಲಿ ಸಮಸ್ತರನ್ನೂ ಸಂಹರಿಸಿ ಕರಗಿಸಿ ವಿಲೀನಗೊಳಿಸುವವನು ರುದ್ರನು.

೧೪) “ರವತೇ ಗಚ್ಛತಿ ರಣರಂಗೇ ದ್ರಾವಯತಿ ಶತ್ರೂನ್ ಚ ಇತಿ ರುದ್ರಃ”— ರು ಗತೌ ವಧೇ ಧಾತುಃ | ರಣರಂಗದಲ್ಲಿ ಹೋಗಿ ಶತ್ರುಗಳನ್ನು ಇಲ್ಲವಾಗಿಸುವವನು / ವಧಿಸುವವನು ರುದ್ರನು.

೧೫) “ರಾವಯತಿ ಶೋಷಯತಿ ರೇಷಯತಿ (ರೇಷಣಂ = ಹಿಂಸಾ) ವಾ ಶತ್ರುಸಮುದ್ರಮ್ ಇತಿ ರುದ್ರಃ”— ಶತ್ರುಗಳೆಂಬ ಮಹಾಸಮುದ್ರವನ್ನು ಒಣಗಿಸುವವನು / ಹಿಂಸಿಸುವವನು ರುದ್ರನು.

೧೬) “ರುದಂ ಸಂಸಾರದುಃಖಂ ದ್ರಾವಯತಿ ನಾಶಯತಿ ವಾ ಇತಿ ರುದ್ರಃ”— ಸಂಸಾರದುಃಖವನ್ನು ಕರಗಿಸಿ ನಾಶಮಾಡುವವನು ರುದ್ರನು.

೧೭) “ರುತಿಂ ಶಬ್ದಂ ವೇದರೂಪಂ ರಾತಿ ದದಾತಿ ಇತಿ ರುದ್ರಃ”— ವೇದರೂಪವಾದ ಶಬ್ದಬ್ರಹ್ಮವನ್ನು ಅನುಗ್ರಹಿಸುವವನು ರುದ್ರನು.

೧೮) “ರುತ್ ರೋಧಿಕಾ ಮೋಹಿಕಾ ಬಂಧಿಕಾ ಶಕ್ತಿಃ ತದ್ವಾನ್ / ಯಸ್ಮಿನ್ ಸಃ, ರುದ್ರಃ”— ವೈರಿಗಳನ್ನು ಅವರೋಧಿಸುವ / ನಿರೋಧಿಸುವ / ತಡೆಯುವ ಶಕ್ತಿ, ಮೋಹನಗೊಳಿಸುವ ವಶೀಕರಣ / ಮಾಯಾಶಕ್ತಿ, ಬಂಧಿಸುವ ಶಕ್ತಿಗಳಿರುವವನು ರುದ್ರನು.

೧೯) “ರುತ್ಯಾ ವೇದರೂಪಯಾ ಧರ್ಮಾದೀನ್ ಅವಲೋಕಯತಿ ಪ್ರಾಪಯತಿ ಇತಿ ವಾ ರುದ್ರಃ”— ವೇದರೂಪೀ ನಾದಬ್ರಹ್ಮದ ಮೂಲಕ ಧರ್ಮಾದಿಗಳನ್ನು ನಮಗೆ ಕಾಣಿಸುವವನು / ಪ್ರಾಪ್ತಿಮಾಡಿಸುವವನು ರುದ್ರನು.

೨೦) “ರುತ್ಯಾ ಪ್ರಣವರೂಪಯಾ ಸ್ವಾತ್ಮಾನಂ ಪ್ರಾಪಯತಿ ಇತಿ ರುದ್ರಃ”— ಪ್ರಣವರೂಪಿ / ಓಂಕಾರರೂಪಿಯಾದ ನಾದದಿಂದ ತನ್ನನ್ನು / ಪರಮಾತ್ಮನನ್ನು ನಮಗೆ ಪ್ರಾಪ್ತಿಮಾಡಿಸುವವನು ರುದ್ರನು…...

    ಹೀಗೆ ಅನಂತವಾಗಿದೆ ರುದ್ರನ ಮಹಿಮೆ. ಅಂತಹ ರುದ್ರದೇವನಿಗೆ ಶ್ವೇತರಕ್ತವರ್ಣದ / ತಿಳಿಗೆಂಪು ಬಣ್ಣದ / ನಸುಗೆಂಪು ಗುಲಾಬಿ ಬಣ್ಣದ / pink / ಪಾಟಲವರ್ಣದ ಪಾಟಲೀ / ಪಾದರಿ / ಕಲಾದ್ರಿಪುಷ್ಪವನ್ನು ರುದ್ರನ ಕ್ರೋಧಯುಕ್ತವಾದ ನಸುಗೆಂಪುಬಣ್ಣದ ಮುಖ / ಕಣ್ಣುಗಳ ದ್ಯೋತಕವಾಗಿ ಸಮರ್ಪಿಸುತ್ತೇನೆ.


ಓಮ್ ಉಗ್ರಾಯ ದೇವಾಯ ನಮಃ | ಬೃಹತೀಪುಷ್ಪಂ ಸಮರ್ಪಯಾಮಿ ||


ಉಗ್ರನೆಂಬ ಹೆಸರಿನ ಪರಶಿವನ ಅಷ್ಟಮೂರ್ತಿಗಳಲ್ಲೊಬ್ಬನಾದ ದೇವನಿಗೆ ನಮಸ್ಕಾರವು. ಬೃಹತೀ ಎಂದು ಸಂಸ್ಕೃತದಲ್ಲಿ ಕರೆಯಲ್ಪಡುವ ಗುಳ್ಳ / ಕಿರುಗುಳ್ಳ / ಹೆಗ್ಗುಳ್ಳ / ಕಾಟುಕಾಯಿ / ಕುದನೆ ಎನ್ನಲಾದ ಬದನೆಯಂತೆಯೇ ಆದರೆ, ತುಂಬ ಸಣ್ಣದಾದ ಕಾಯಿಗಳನ್ನು ಬಿಡುವ ಗಿಡದ ಹೂವನ್ನು ಸಮರ್ಪಿಸುತ್ತೇನೆ.

        ಉಗ್ರನೆಂದರೆ ವಾಯುಮೂರ್ತಿ / ವಾಯುರೂಪಿಯಾದ ಮಹಾದೇವ ರುದ್ರನು (— ತಿಥಿತತ್ತ್ವಗ್ರಂಥದಲ್ಲಿದೆ); ಕ್ರೂರರೂಪಿಯು; “ ವಾಯುರ್ವಾ ಉಗ್ರಃ”— (ಶತಪಥಬ್ರಾಹ್ಮಣೇ) ವಾಯುವೇ ಉಗ್ರನು; ಅಗ್ರಗಣ್ಯ / ಮುಂದಾಳು; ಉತ್ಕೃಷ್ಟನಾದವನು (ಯಜುರ್ವೇದೇ— “ಉಗ್ರಂ ಶರ್ಮ ಮಹಿಶ್ರವಃ”); ದೀರ್ಘವಾದ / ಉದ್ದನೆಯ ಕಾಯವುಳ್ಳವನು; ಎಲ್ಲ ಉದ್ಯಮ / ಕಾರ್ಯಗಳಲ್ಲೂ ತೊಡಗುವವನು (“ಉಗ್ರಾಸೋ ವೃಷಣ ಉಗ್ರವಾಹವಃ”— ಋಗ್ವೇದೇ; “ಉಗ್ರಾಸಃ ಉದ್ಗೂರ್ಣಾ ಸರ್ವಕಾರ್ಯೇಷು ಉದ್ಯತಾಃ”— ತದ್ಭಾಷ್ಯೇ). ಉಚ ಸಮವಾಯೇ ಧಾತು. ಉಚ್ಯತಿ ಕ್ರುಧಾ ಸಂಬಧ್ಯತೇ— ಕ್ರೋಧದೊಂದಿಗೆ ಸಂಬಂಧವಿರುವವನು. ರೌದ್ರನು, ಉತ್ಕಟನು; ಶಾಪವೀಯುವಂತಿರುವವನು; ಕೋಪಿಷ್ಠನು; ತೀಕ್ಷ್ಣ / ಭಯಾನಕ / ಕೋಪವನ್ನು ತುಂಬಿಕೊಂಡಿರುವವನು (ಉಚ್— ತುಂಬಿಡು); ಶಕ್ತಿಶಾಲಿ, ಮಹಾಬಲ, ಉಚ್ಚಮಟ್ಟದವನು, ಆದರ್ಶ, ಸರ್ವಸಮರ್ಥ, ಉದ್ಯಮಿ;  ಪೂರ್ವಫಾಲ್ಗುಣೀ-ಪೂರ್ವಾಷಾಢ-ಪೂರ್ವಾಭಾದ್ರಪದಾ-ಮಘಾ-ಭರಣೀ— ಈ ಪಂಚನಕ್ಷತ್ರಸಮೂಹಕ್ಕೂ ಉಗ್ರ ಎಂದು ಹೆಸರು; ವಚ / ಬಜೆ, ಯವಾನೀ, ಧನ್ಯಾಕ ಸಸ್ಯಗಳಿಗೂ ಈ ಹೆಸರಿದೆ; ವತ್ಸನಾಭವೆಂಬ ಮಹಾವಿಷಕ್ಕೂ ಉಗ್ರ ಎನ್ನಲಾಗಿದೆ (Aconitum Ferox ನ ಬೇರು); ಉಜ್ ಧಾತುವಿನಿಂದ ಓಜಸ್ಸುಳ್ಳವ, ವಜ್ ಧಾತುವಿನಿಂದ ವಾಜ / ಅಶ್ವ / ಅನ್ನ ಹಾಗೂ “ವಾ” ಧಾತುವಿನಿಂದ ವಾತ / ವಾಯು ಇತ್ಯಾದಿ.

         ಭೂತ ಹಾಗೂ ಸರೂಪಾ ದಂಪತಿಗಳ ಮಗನಾದ ಒಬ್ಬ ರುದ್ರನೇ ಉಗ್ರನು; ಅಮಿತಾಭ ದೇವ; ಮೂರನೇ ಗಣದ ಮರುತ್; ಯಾತುಧಾನನ ಮಗ; ವಜ್ರಹಾ ಎಂಬವನ ತಂದೆ; ಯಜ್ಞದ ಕರ್ತೃವಾದ ಯಜಮಾನನ ಪ್ರಧಾನ ದೇವತೆ, ಈತನ ಪತ್ನಿ ದೀಕ್ಷಾ ಹಾಗೂ ಮಗ ಸಂತಾನ; ೧೧ನೆಯ ದ್ವಾಪರಯುಗದಲ್ಲಿ, ಗಂಗಾದ್ವಾರದಲ್ಲಿ,  ಭಗವಂತನ ಒಂದು ಅವತಾರ, ಇವನಿಗೆ ನಾಲ್ವರು ಪುತ್ರರು; ಒಬ್ಬ ರಾಕ್ಷಸ; ಕಂಸಪಿತ ಉಗ್ರಸೇನ; ಶೂರಪದ್ಮಾಸುರನ ಸೇನಾಧಿಪತಿ; ಧೃತರಾಷ್ಟ್ರನ ಒಬ್ಬ ಮಗ, ಭೀಮಸೇನ ಇವನನ್ನು ಕೊಂದ; ಒಬ್ಬ ಯಾದವ ರಾಜ; ಕವಿಯೆಂಬ ಪ್ರಜಾಪತಿಯ ಸುತ (ಮಹಾಭಾರತ ಅನುಶಾಸನಪರ್ವ ಅ.೮೫, ಶ್ಲೋ.೧೩೩);

        ವೈದಿಕವಾಗಿ, ಶಿಸ್ತಿನ ನಿಯಾಮಕ, ಆಧಿಕಾರಿಕ ಶಕ್ತಿ; ಉಚೀ ಸಂಘರ್ಷೇ ಎಂಬರ್ಥದ ಉಚ್ ಧಾತುಜನ್ಯವಾದ ಉಗ್ರ ಪದ ಸಂಘರ್ಷಭಾವವುಳ್ಳವನೆಂಬ ಅರ್ಥ ಕೊಡುತ್ತದೆ. ಸಂಹಾರಕಾರಕನೆಂದು ಸೂಚಿಸುತ್ತದೆ.

(ಮೇಲಿನ ಅರ್ಥಗಳಲ್ಲಿ ಶಿವಪರವಾದ, ದೇವಪರವಾದ ಅರ್ಥಗಳನ್ನು ಮಾತ್ರ ಈ ಲಘುನ್ಯಾಸಮಂತ್ರಾರ್ಥದ ಸಂದರ್ಭದಲ್ಲಿ ಪರಿಗ್ರಹಿಸಬೇಕು. ಇತರ ಅರ್ಥಗಳು “ಉಗ್ರ” ಶಬ್ದದ ವಿಭಿನ್ನ ವಿವರಣೆಗಳಾಗಿದ್ದು, ಕೇವಲ ಕುತೂಹಲ ಹಾಗೂ ಮಾಹಿತಿಗಾಗಿ ನೀಡಲಾಗಿದೆ.)


          ಇನ್ನು “ಬೃಹತೀ” ಶಬ್ದದ ವಿವಿಧ ಅರ್ಥಗಳನ್ನು ನೋಡೋಣ. 


“ ಕ್ರೋಷ್ಟುವಿನ್ನಾ ಸಿಂಹಪುಚ್ಛೀ ಕಲಶಿಃ ಧಾವನಿಃ ಗುಹಾ |

ನಿದಿಗ್ಧಿಕಾ ಸ್ಪೃಶೀ ವ್ಯಾಘ್ರೀ ಬೃಹತೀ ಕಣ್ಟಕಾರಿಕಾ ||

ಬೃಹತೀ ಕ್ಷುದ್ರವಾರ್ತಾಕೀ ಛನ್ದೋಭೇದೇ ಮಹತ್ಯಪಿ |

ವಾಸಿತಾ ಸ್ತ್ರೀ ಕರಿಣ್ಯೋಶ್ಚ ವಾರ್ತಾ ವೃತ್ತೌ ಜನಶ್ರುತೌ ||”

(—ಅಮರಕೋಷೇ)


ಕ್ರೋಷ್ಟುವಿನ್ನಾ, ಸಿಂಹಪುಚ್ಛೀ, ಕಲಶಿಃ, ಧಾವನಿಃ, ಗುಹಾ, ನಿದಿಗ್ಧಿಕಾ, ಸ್ಪೃಶೀ, ವ್ಯಾಘ್ರೀ, ಬೃಹತೀ, ಕಣ್ಟಕಾರಿಕಾ, ಕ್ಷುದ್ರವಾರ್ತಾಕೀ, ಪ್ರಚೋದನೀ, ಕುಲೀ, ಕ್ಷುದ್ರಾ, ದುಃಸ್ಪರ್ಶಾ, ರಾಷ್ಟ್ರಿಕಾ ಇತ್ಯಾದಿ ಸಂಸ್ಕೃತ ಹೆಸರುಗಳುಳ್ಳ ಕಾಟುಕಾಯಿ / ಕುದನೆ / ಸಂಚಯನ-ಗುಳ್ಳ / ಕಿರುಗುಳ್ಳ / ಹೆಗ್ಗುಳ್ಳ ಎಂಬ ಮುಳ್ಳುಗಳಿರುವ ಗುಳ್ಳ ಜಾತಿಯ ಬದನೆಯಂಥ ಸಣ್ಣ ಸಣ್ಣ ಕಾಯಿಗಳನ್ನೀಯುವ ಗಿಡದ ಹೂವನ್ನು ಇಲ್ಲಿ ಹೇಳಲಾಗಿದೆ. ಇದರ ಕಾಯಿಯನ್ನು ಮೃತರ ದಹನಮಾಡಿದಲ್ಲಿ ಅಸ್ಥಿಸಂಚಯನ ಮಾಡುವ ವೇಳೆ ಕರ್ತೃಗಳು ಕೈಯ ಮಣಿಕಟ್ಟಿನ ಭಾಗಕ್ಕೆ ಕಟ್ಟಿಕೊಂಡು, ಎಲ್ಲಾ ಮೂಳೆಗಳನ್ನು ಸಂಗ್ರಹಿಸುವ ಸಂಪ್ರದಾಯವಿದೆ. 

    ಬೃಹತೀ ಶಬ್ದದ ಇತರ ಅರ್ಥಗಳು— ಮಹತೀ / ದೊಡ್ಡದು; ಛಂದಸ್ಸುಗಳಲ್ಲಿ ಒಂದು ವಿಧದ ಹೆಸರು ಬೃಹತೀ. ಇದರಲ್ಲಿ ಒಟ್ಟು ೩೬ ಅಕ್ಷರಗಳಿರುತ್ತವೆ. ಇದೊಂದು ವೈದಿಕ ಛಂದಸ್ಸು. ಬೃಹತೀ ಶಬ್ದವು ಕೇವಲ ೩೬ ಎಂಬ ಸಂಖ್ಯಾಸೂಚಕವೂ ಹೌದು. ಯಜ್ಞವೇದಿಯ ಸುತ್ತ ಇಡುವ ೬೦ ಶುಲ್ಬ / ಇಟ್ಟಿಗೆಗಳ ಒಂದು ವಿಶಿಷ್ಟ ರೀತಿಯ ಸಂಯೋಜನೆ (ಬೌಧಾಯನೀಯ ಶುಲ್ಬಸೂತ್ರ ೬. ೫-೧೨) ; ಎದೆ ಹಾಗೂ ಬೆನ್ನುಮೂಳೆಯ ನಡುವಿನ ಭಾಗ; ದ್ಯಾವಾಪೃಥಿವೀ; ನಾರದರ ವೀಣೆ; ಯೋಗೇಶ್ವರನ ತಾಯಿ; ಸೂರ್ಯರಥದ ಗಾಯತ್ರೀ-ಬೃಹತೀ-ಉಷ್ಣಿಕ್-ಜಗತೀ-ತ್ರಿಷ್ಟುಪ್-ಅನುಷ್ಟುಪ್-ಪಙ್ಕ್ತಿ / ಪಂಕ್ತಿ ಎಂಬ ಸಪ್ತ ವೈದಿಕ ಛಂದೋರೂಪೀ ಸಪ್ತಾಶ್ವಗಳಲ್ಲಿ ಒಂದು (ವಿಷ್ಣುಪುರಾಣ); ಧ್ರುವನ ಮೊಮ್ಮಗನಾದ ರಿಪುವೆಂಬವನ ಪತ್ನಿ; ರಿಪು-ಬೃಹತೀಯರ ಮಗ ಚಾಕ್ಷುಷ ಮನು. ಹೀಗಾಗಿ ಚಾಕ್ಷುಷಮನುವಿನ ತಾಯಿ (ವಿಷ್ಣುಪುರಾಣ); ಬೃಹದುಕ್ಥ-ಶೈನೇಯರ ಮಗಳು; ಪುರುವಿನ ಪತ್ನಿ; ಇವಳಿಗೆ ೩ ಪುತ್ರರು ಹಾಗೂ ಶ್ವೇತಾ ಎಂಬೊಬ್ಬ ಮಗಳಿದ್ದಳು.

      ಮುಳ್ಳುಗಳಿದ್ದು ಸ್ಪರ್ಶಿಸಲು ದುಸ್ಸಾಧ್ಯವಾದುದರಿಂದ ದುಃಸ್ಪರ್ಶಾ ಎನಿಸಿದ, ಮಹತ್ತಮವಾದ ಎಂಬರ್ಥವುಳ್ಳ, ಧೈರ್ಯವುಳ್ಳವರಿಗೆ ಮಾತ್ರ ದಕ್ಕುವುದರಿಂದ ಸಿಂಹಪುಚ್ಛೀ / ವ್ಯಾಘ್ರೀ ಎನಿಸಿದ, ಸಕಲ ಕಂಟಕಗಳಿಗೆ ಅರಿಯಾಗಿ / ಶತ್ರುವಾಗಿ ಕಂಟಕಾರಿಕಾ ಎನಿಸಿದ, ನಮ್ಮ ಧೀಃಪ್ರಚೋದನೆಯಾಗಲು ಬೇಕಾದ ಭಗವದನುಗ್ರಹ ಪಡೆಯಲು ಸಹಕಾರಿಯಾಗಿ ಪ್ರಚೋದನೀ ಎನಿಸಿದ, ರಾಷ್ಟ್ರದ ಸಮಷ್ಟಿಹಿತಪೂರಕವಾದ ರುದ್ರಕೃಪೆಯನ್ನೊದಗಿಸಬಲ್ಲದ್ದಾಗಿ ರಾಷ್ಟ್ರಿಕಾ ಎನಿಸಿದ ಬೃಹತೀ / ಕುದನೆಯ ಹೂವನ್ನು ದುಷ್ಟರಿಗೆ ದುಃಸ್ಪರ್ಶನಾದ, ಶ್ರೇಷ್ಠತಮನಾದ, ವ್ಯಾಘ್ರಾಜಿನವನ್ನು ಉತ್ತರೀಯವಾಗಿ ಮಾಡಿಕೊಂಡ ಹಾಗೂ ಸಿಂಹವನ್ನೇ ವಾಹನವಾಗಿ ಮಾಡಿಕೊಂಡ ಗಿರಿಜೆಯನ್ನು ಪತ್ನಿಯನ್ನಾಗಿ ಹೊಂದಿರುವ ಧೀರತಮನಾದ, ದುಷ್ಟದಮನನಾದ, ಧೀಃಪ್ರಚೋದಕ ಭರ್ಗನೆನಿಸಿದ, ಸಮಸ್ತ ಲೋಕಹಿತ ಕಾಯುವ ಗೋವುಗಳನ್ನು ತನ್ನ ಆಯುಧದಿಂದ (“ರುದ್ರಸ್ಯ ಹೇತಿಃ ಪರಿ ವೋ ವೃಣಕ್ತು”— ತೈ.ಸಂ.) ರಕ್ಷಿಸಿ ಲೋಕಹಿತಕಾರಕನಾಗಿ ಲೋಕಭಕ್ಷಕರಿಗೆ ಉಗ್ರಮೂರ್ತಿಯಾದ, ಲೋಕನಾಶಕ ಹಾಲಾಹಲವೆಂಬ ಸಮುದ್ರಮಥನೋದ್ಭೂತ ಮಹಾವಿಷವನ್ನು ಸೇವಿಸಿ ಲೋಕವನ್ನು ರಕ್ಷಿಸಿ ನಂಜುಂಡ / ವಿಷಕಂಠ / ನೀಲಗ್ರೀವ / ಶ್ರೀಕಂಠನೆನಿಸಿದ, ಸಜ್ಜನರ ಪ್ರಾಣವಾಯುವಾಗಿ ಲೋಕದಲ್ಲಿ ಅಗ್ರಗಣ್ಯನೆನಿಸಿದ “ಉಗ್ರ” ನೆಂಬ ನಾಮವಿಭೂಷಿತನಾದ ಭಗವಾನ್ ರುದ್ರದೇವನಿಗೆ ಸಮರ್ಪಿಸುತ್ತೇನೆ.   

    

ಓಂ ಭೀಮಾಯ ದೇವಾಯ ನಮಃ | ಕರವೀರಪುಷ್ಪಂ ಸಮರ್ಪಯಾಮಿ ||


ಮಹಾದೇವನ ಭೀಮಮೂರ್ತಿಗೆ, ಭೀಮರೂಪಕ್ಕೆ ನಮೋ ನಮಃ. ಕರವೀರವೆಂಬ ಪುಷ್ಪಪ್ರಭೇದವನ್ನು / ಹೂವನ್ನು ಸಮರ್ಪಿಸುತ್ತೇನೆ.

“ಬಿಭೇತಿ ಅಸ್ಮಾತ್ ಇತಿ ಭೀಮಃ”— ಹೆದರುತ್ತಾನೆ ಇವನಿಂದಾಗಿ ಎಂಬುದರಿಂದ ಭೀಮನೆಂಬ ಹೆಸರು ರುದ್ರನಿಗೆ. “ಭೀ ಅಪಾದಾನೇ” ಧಾತು. ಶಿವನ ಭೀಮಕಾಯಕ್ಕೆ, ಭೀಕರಾಕೃತಿಗೆ, ಭೀಮಬಲಕ್ಕೆ, ದೊಡ್ಡದೇಹಕ್ಕೆ, ಭೀತಿಜನಕವಾದ ರುಂಡಮಾಲೆ, ಸರ್ಪಾಭರಣ, ಮೂರನೆಯ ಹಣೆಗಣ್ಣು— ಇತ್ಯಾದಿಗಳಿಂದ ಕೂಡಿದ ಕ್ರೋಧಭಾವಯುಕ್ತವಾದ ಮುಖಕ್ಕೆ ನೋಡಿದವರೆಲ್ಲ ಭಯಭೀತಿಗೊಳ್ಳುವರು. ಹೀಗಾಗಿ ಅವನು ರುದ್ರ-ಭಯಂಕರನು, ಕಾಲಭೈರವನು, ಅತಿದಾರುಣನು, ಬಲು ಭೀಷಣನು, ಭೀಷ್ಮನು, ಘೋರನು, ಭಯಾನಕನು, ಪ್ರತಿಭಯನು. 

ಮಾರ್ಕಂಡೇಯಪುರಾಣದಲ್ಲಿ  ಹೀಗಿದೆ—

“ಭವಂ ಸರ್ವಂ (/ಶರ್ವಂ) ತಥೇಶಾನಂ ತಥಾ ಪಶುಪತಿಂ ಪ್ರಭುಮ್ |

ಭೀಮಮುಗ್ರಂ ಮಹಾದೇವಮುವಾಚ ಸ ಪಿತಾಮಹಃ ||”

ಭವ, ಸರ್ವ / ಶರ್ವ, ಹಾಗೆಯೇ ಈಶಾನ, ಅಂತೆಯೇ ಪ್ರಭುವಾದ ಪಶುಪತಿ, ಭೀಮ, ಉಗ್ರ, ಮಹಾದೇವನೆನಿಸಿದವನನ್ನು ಕುರಿತು ಆ ಪಿತಾಮಹ ಬ್ರಹ್ಮನು ಹೇಳಿದನು. ಹೀಗೆ ಇವು ೮ ರುದ್ರನ ಅಷ್ಟಮೂರ್ತಿಗಳೆಂದು ಸುಪ್ರಸಿದ್ಧವಾಗಿವೆ. ಭೀಮ ಎಂಬುದು ಅವುಗಳಲ್ಲೊಂದು. “ಅತುಲಃ ಶರಭೋ ಭೀಮಃ ಸಮಯಜ್ಞೋ ಹವಿರ್ಹರಿಃ”, “ಭೀಮೋ ಭೀಮಪರಾಕ್ರಮಃ”— ಎಂಬಲ್ಲಿ ‘ಭೀಮ’ ವಿಷ್ಣುವಿನ ಸಹಸ್ರನಾಮಗಳಲ್ಲೊಂದು. ತುಲನಾತೀತನು, ಶರಭದಂತೆ ಬಹುಪರಾಕ್ರಮಶಾಲಿ. ಮಧ್ಯಮಪಾಂಡವನಾದ ವಾಯುಪುತ್ರನೂ ಭೀಮನೇ. (“ತಸ್ಮಾತ್ ಜಜ್ಞೇ ಮಹಾಬಾಹುಃ ಭೀಮೋ ಭೀಮಪರಾಕ್ರಮಃ”— ಮಹಾಭಾರತ ೧. ೧೨೩. ೧೩). ಮಹಾದೇವನ ೮ ಮೂರ್ತಿಗಳಲ್ಲಿ ಭೀಮನು ಆಕಾಶಮೂರ್ತಿಯು. “ಭೀಮಾಯ ಆಕಾಶಮೂರ್ತಯೇ ನಮಃ”— ತಿಥ್ಯಾದಿತತ್ತ್ವದಲ್ಲಿ ಶಿವಪೂಜಾಪ್ರಯೋಗ. ಒಬ್ಬ ದೇವಗಂಧರ್ವ (“ಭೀಮಃ ಚಿತ್ರರಥಶ್ಚೈವ ವಿಖ್ಯಾತಃ ಸರ್ವವಿದ್ ವಶೀ”— ಮ.ಭಾ.೧.೬೩.೪೩). ಪುರುವಂಶದ ಈಲಿನನ ಮಗ. ಪರಮೇಶ್ವರನು (“ಭೀಷಾಸ್ಮಾದ್ವಾತಃ ಪವತೇ ಭೀಷೋದೇತಿ ಸೂರ್ಯಃ” ಇತ್ಯಾದಿ ವೇದವಾಕ್ಯಗಳಿಂದ ಇವನಿಂದಾಗಿ ಹೆದರಿ ವಾಯುವೂ / ಗಾಳಿಯೂ ಬೀಸುತ್ತದೆ, ಸೂರ್ಯನೂ ಉದಯಿಸುತ್ತಾನೆ…). ಆಂಗಿರಸ-ವಹ್ನಿಗಳಲ್ಲೊಬ್ಬ. ದಾನವರಲ್ಲೊಬ್ಬ. ಅಮಾವಸುವಂಶದ ಅರಸರಲ್ಲೊಬ್ಬ. ಯಾದವಕುಲದವನೊಬ್ಬ. ದಮಯಂತಿಯ ತಂದೆ, ವಿದರ್ಭಾಧಿಪತಿ. ೧೮ ಅಕ್ಷರಗಳ ಅಷ್ಟಾದಶಾಕ್ಷರಮಂತ್ರವೂ ಭೀಮವೆನಿಸಿದೆ—

“ಆದೌ ಮಧ್ಯೇ ತಥಾ ಚಾನ್ತೇ ಚತುರಸ್ರಯುತೋ ಮನುಃ |

ಜ್ಞಾತವ್ಯೋ ಭೀಮ ಇತ್ಯೇಷ ಯಃ ಸ್ಯಾದಷ್ಟಾದಶಾಕ್ಷರಃ ||”

—ತಂತ್ರಸಾರ

“ನ ಭೇಜಿರೇ ಭೀಮವಿಷೇಣ ಭೀತಿಮ್”— ಭಯಂಕರವಾದ ಹಾಲಾಹಲವಿಷದಿಂದಲೂ ಭೀತಿಹೊಂದದವನು. ಸಿಂಹ; ಏಕಾದಶರುದ್ರರಲ್ಲೊಬ್ಬ; ವೈಕುಂಠದ ಒಬ್ಬ ದೇವ; ೩ನೇ ಗಣದ ಒಬ್ಬ ಮರುತ್ತು; ಒಬ್ಬ ಮೌನೇಯಗಂಧರ್ವ; ಭೂತ - ಸರೂಪೆಯರ ಏಕಾದಶರುದ್ರರೆನಿಸಿದ ೧೧ ಮಂದಿ ಪುತ್ರರಲ್ಲೊಬ್ಬ; ಆಕಾಶದ ಅಧಿದೇವತೆ; ಅತಲಲೋಕದ ಒಬ್ಬ ಅಸುರ— ಇತ್ಯಾದಿ ಅನೇಕ ಅರ್ಥಗಳು “ಭೀಮ” ಶಬ್ದಕ್ಕಿವೆ. ಪ್ರಸ್ತುತ ಶಿವಪರವಾದವುಗಳು ಗ್ರಾಹ್ಯ. ಉಳಿದವುಗಳು ಸಂದರ್ಭೋಚಿತವಲ್ಲದಿದ್ದರೂ, ಶಬ್ದದ ನಾನಾರ್ಥಗಳನ್ನು ಅಧ್ಯಯನ ಮಾಡುವ ಉದ್ದೇಶಕ್ಕೆ ಪೂರಕ. 

ಇನ್ನು ಕರವೀರ ಶಬ್ದದ ಅರ್ಥಗಳನ್ನು ನೋಡೋಣ. “ಕರಂ ವೀರಯತಿ ಇತಿ ಕರವೀರಃ”— ಕೈಯನ್ನು ವೀರ್ಯ-ಶೌರ್ಯ-ಪರಾಕ್ರಮಯುತವನ್ನಾಗಿ ಮಾಡುತ್ತದೆಂಬುದರಿಂದ ಕರವೀರವು. ಖಡ್ಗವು. ಶ್ಮಶಾನವು. ಭೋಗವತೀಪುರದ ಒಂದು ಪೌರಾಣಿಕ ನಾಗ. ದೈತ್ಯರಲ್ಲೊಬ್ಬ. ಪರ್ವತಗಳಲ್ಲೊಂದು; ಪುರಗಳಲ್ಲೊಂದು; ವೃಕ್ಷಗಳಲ್ಲೊಂದು; ಅಶ್ವಾರಿ, ಅಶ್ವಘ್ನಗುಣ-ನಾಮಗಳುಳ್ಳ ವೃಕ್ಷ / ಪುಷ್ಪ;

“ಕರವೀರೇ ಕರೀರೇ ತು ಕ್ರಕರಗ್ರನ್ಥಿಲಾವುಭೌ |

ಉನ್ಮತ್ತಃ ಕಿತವೋ ಧೂರ್ತೋ ಧತ್ತೂರಃ ಕನಕಾಹ್ವಯಃ ||”

(—ಅಮರಕೋಷೇ)

 ದೇವಮಾತೆ ಅದಿತಿಯ ಹೆಸರುಗಳಲ್ಲೊಂದು; ಶ್ರೇಷ್ಠ ಗೋವು; ಮಗುವಿರುವ ತಾಯಿ; ಹೆಬ್ಬೆರಳು; ಕದ್ರುವಿನ ಒಬ್ಬ ನಾಗರೂಪೀ ಮಗ; ದಕ್ಷಿಣ ಮೇರುವಿನ ಒಂದು ಶಿಖರ.

          ಭೀಮಾಕಾರದ, ಭಯವನ್ನು ಹುಟ್ಟಿಸುವಂಥ ಭೀಮಗಾತ್ರದವನಾದ ಪರಶಿವನ ರೌದ್ರರೂಪಕ್ಕೆ ಖಡ್ಗಾಯುಧವನ್ನರ್ಪಿಸಿದಂತೆ, ಶ್ಮಶಾನವೆಂಬ ಶಿವನ ವಾಸಸ್ಥಾನವನ್ನು ಶಿವನಿಗೆ ಅರ್ಪಿಸಿದಂತೆ, ನಾಗಾಭರಣನಿಗೆ ನಾಗನನ್ನರ್ಪಿಸಿದಂತೆ, ಶಿವವಾಹನವಾದ ನಂದಿಯನ್ನರ್ಪಿಸಿದಂತೆ, ಜಗತ್ತಿಗೇ ಜನಕನಾದವನಿಗೇ ತಾಯಿಯನ್ನರ್ಪಿಸಿದಂತೆ, ಸಕಲ ದೇವತೆಗಳು ಹಸ್ತದ ೪ ಬೆರಳುಗಳ ಪ್ರತೀಕವಾದರೆ ಹೆಬ್ಬೆರಳಿನ ಪ್ರತೀಕದಂತಿರುವ ಸಕಲದೇವತೆಗಳಲ್ಲೂ ಶ್ರೇಷ್ಠನಾದ ಪರಶಿವ / ಪರಬ್ರಹ್ಮನಿಗೆ ದಾನವಸೇನೆಯ ಅಶ್ವಗಳ ನಾಶಕಗುಣವುಳ್ಳ, ಸಮಸ್ತದೇವತಾಜನನಿಯಾದ ಅದಿತಿರೂಪಿಣಿಯಾದ, ಕರವೀರಪುರವೆಂಬ ಮೇರುಗಿರಿಯ ತೀರ್ಥಕ್ಷೇತ್ರಕ್ಕೋ / ದೃಷದ್ವತೀತೀರದ ಕ್ಷೇತ್ರಕ್ಕೋ ಸಮನಾದ ಪುಣ್ಯತಮವಾದ ಕರವೀರವೆಂಬ ಸುಮವನ್ನು ಭಕ್ತಿಯಿಂದ ಅರ್ಪಿಸುತ್ತೇನೆ.


ಓಂ ಮಹತೇ ದೇವಾಯ ನಮಃ | ದ್ರೋಣಪುಷ್ಪಂ ಸಮರ್ಪಯಾಮಿ ||


ಮಹಾದೇವನೆನಿಸಿದ ಪರಮೇಶ್ವರನಿಗೆ ನಮಸ್ಕಾರ. ನಿನಗೆ ದ್ರೋಣಪುಷ್ಪ / ತುಂಬೆಹೂವನ್ನು ಸಮರ್ಪಿಸುತ್ತಿದ್ದೇನೆ.

         “ಮಹಾನ್ ಚ ಅಸೌ ದೇವಃ ಚ ಇತಿ ಮಹಾದೇವಃ” (“ಮಹಾಂಶ್ಚಾಸೌ ದೇವಶ್ಚೇತಿ ಮಹಾದೇವಃ”)— ದೊಡ್ಡವನೂ / ಹಿರಿಯನೂ / ಶ್ರೇಷ್ಠನೂ, ದೇವನೂ ಆದವನು ಮಹಾದೇವನು (ಶಿವನು). “ಮಹತಾಂ ದೇವಾದೀನಾಂ ದೇವಃ”— ಮಹಾನ್ ದೇವಾದಿಗಳ ದೇವನು ಮಹಾದೇವನು. ಶಿವನ ಅಷ್ಟಮೂರ್ತಿಗಳಲ್ಲಿ ಮಹಾದೇವನು ಸೋಮಮೂರ್ತಿಯು. “ಮಹಾದೇವಾಯ ಸೋಮಮೂರ್ತಯೇ ನಮಃ”— ಎಂದಿದೆ ಶಿವಪೂಜಾಪದ್ಧತಿ. ಮಹಾದೇವ ಶಬ್ದದ ವ್ಯುತ್ಪತ್ತಿಯು ಬ್ರಹ್ಮವೈವರ್ತಪುರಾಣದ ಪ್ರಕೃತಿಖಂಡದ ೫೩ನೇ ಅಧ್ಯಾಯದಲ್ಲಿ ಹೀಗಿದೆ—


“ಬ್ರಹ್ಮಾದೀನಾಂ ಸುರಾಣಾಂ ಚ ಮುನೀನಾಂ ಬ್ರಹ್ಮವಾದಿನಾಮ್ |

ತೇಷಾಂ ಚ ಮಹತಾಂ ದೇವೋ ಮಹಾದೇವಃ ಪ್ರಕೀರ್ತಿತಃ ||

ಮಹತೀ ಪೂಜಿತಾ ವಿಶ್ವೇ ಮೂಲಪ್ರಕೃತಿರೀಶ್ವರೀ |

ತಸ್ಯಾ ದೇವಃ ಪೂಜಿತಶ್ಚ ಮಹಾದೇವಃ ಸ ಚ ಸ್ಮೃತಃ ||”


      ಬ್ರಹ್ಮನೇ ಮುಂತಾದ ದೇವತೆಗಳ, ಹಾಗೆಯೇ, ಮುನಿಗಳ, ಬ್ರಹ್ಮವಾದಿಗಳ— ಇಂತಹ ಮಹಾತ್ಮರ ದೇವನು ಮಹಾದೇವನೆಂದು ಪ್ರಸಿದ್ಧನಾಗಿರುವನು. ಮಹತೀ / ದೊಡ್ಡವಳು ಎಂದು ವಿಶ್ವದಲ್ಲಿ ಮೂಲಪ್ರಕೃತಿಯಾದ ಈಶ್ವರಿಯು ಪೂಜಿಸಲ್ಪಟ್ಟಿರುವಳು. ಅಂಥವಳ ಪತಿಯಾದ ಶಿವನು ಮಹಾದೇವನೆಂದು ಪೂಜಿಸಲ್ಪಟ್ಟಿರುವನು. ಅವನ ನಾಮೋಚ್ಚಾರಣಫಲವು ಹೀಗಿದೆ— 


“ಕೋಟಯೋ ಬ್ರಹ್ಮಹತ್ಯಾನಾಮಗಮ್ಯಾಗಮಕೋಟಯಃ |

ಸದ್ಯಃ ಪ್ರಲಯಮಾಯಾನ್ತಿ ಮಹಾದೇವೇತಿ ಕೀರ್ತನಾತ್ ||

ಮಹಾದೇವ ಮಹಾದೇವ ಮಹಾದೇವೇತಿ ವಾದಿನಮ್ |

ವತ್ಸಂ ಗೌರಿವ ಗೌರೀಶೋ ಧಾವನ್ತಮನುಧಾವತಿ ||”


ಮಹಾದೇವನ ನಮಸ್ಕಾರಮಂತ್ರ— 

“ನಮಸ್ಯೇ ತ್ವಾಂ ಮಹಾದೇವ! ಲೋಕಾನಾಂ ಗುರುಮೀಶ್ವರಮ್ |

ಪುಂಸಾಮಪೂರ್ಣಕಾಮಾನಾಂ ಕಾಮಪೂರಾಮರಾಙ್ಘ್ರಿಪಮ್ ||”

(—ಭಾಗವತಪುರಾಣೇ)


“ಮಹಾದೇವಂ ಮಹಾತ್ಮಾನಂ ಮಹಾಯೋಗಿನಮೀಶ್ವರಮ್ |

ಮಹಾಪಾಪಹರಂ ದೇವಂ ಮಕಾರಾಯ ನಮೋ ನಮಃ ||”

(—ತಂತ್ರಶಾಸ್ತ್ರೇ)


ಮಹಾದೇವನ ಹಿಂದಿನ ಅವತಾರಗಳಲ್ಲೊಂದು ಕೃಷ್ಣಾವತಾರವೆಂದಿದೆ “Purana index”. ಸೋಮಪಾನ ಮಾಡುವವನು. ಹಿಂದೆ ಲವಣಾಸುರನಿಂದ ಪೂಜಿತನಾದವನು. ಕೈಲಾಸಗಿರಿವಾಸನು. ಭಂಡಾಸುರಾನುಯಾಯಿಗಳಿಂದ ಪೂಜಿತನು. ಭೃಗುವು ತನ್ನ ಮಗನೆಂದವನು. ದಕ್ಷನ ಮಾನಸಪುತ್ರರು ವರ್ಧಿಸದಂತೆ ಮಾಡಿದವನು. ಸುರಭಿಗೆ ಏಕಾದಶರುದ್ರರೆಂಬ ೧೧ ಪುತ್ರರನ್ನು ಅನುಗ್ರಹಿಸಿದವನು. ಅಸುರಗುರು ಶುಕ್ರಾಚಾರ್ಯನು ಈತನಲ್ಲಿಗೆ ನೀತಿಶಾಸ್ತ್ರವನ್ನರಿಯಲು ಹೋಗಿದ್ದನು. ಪಾರ್ವತಿಯೊಂದಿಗೆ ಮಹಾಕಾಲವನವಿಹಾರಗೈದವನು. 

          ಇನ್ನು ದ್ರೋಣ ಶಬ್ದದ ಬಗ್ಗೆ ಚರ್ಚಿಸೋಣ. “ದ್ರವತಿ ಇತಿ ದ್ರೋಣಃ” ಕರಗಿಹೋಗುವ ಎಂಬರ್ಥದ ದ್ರು ಗತೌ ಧಾತು. ಯಜ್ಞಾಗ್ನಿಯನ್ನುತ್ಪಾದಿಸುವ ಅರಣಿಮಂಥನ ಕಾಷ್ಠ. ಕಾಷ್ಠನಿರ್ಮಿತ ಕಲಶ / ಮರದಿಂದ ಮಾಡಿದ ಬೋಗುಣಿ / ದೋಣಿಯಾಕಾರದ ಪಾತ್ರೆ. ಯಜ್ಞಪಾತ್ರೆ / ಸೋಮಪಾತ್ರೆ / ದ್ರೋಣಕಲಶ (“ದ್ರೋಣಕಲಶಶ್ಚ ಮೇ”— ತೈತ್ತಿರೀಯಸಂಹಿತಾಯಾಂ ಚಮಕಪ್ರಶ್ನೇ). ಹಸುವಿಗೆ ಹಟ್ಟಿಯಲ್ಲಿ ಹುಲ್ಲುಹಾಕಲು ಮಾಡಿದ ಜಾಗ (ಬೈಹುಲ್ಲಿನ ಪಣೆ / ಬೈಪ್ಪಣೆ). ಮರದ ರಥ. ಕಲಶ / ದ್ರೋಣದಲ್ಲಿ ಹುಟ್ಟಿದವನು ದ್ರೋಣಾಚಾರ್ಯ (“ತತೋऽಸ್ಯ ರೇತಶ್ಚಸ್ಕನ್ದ ತದೃಷಿರ್ದ್ರೋಣ ಆದಧೇ”— ಆಗ ಆತನ / ಭರದ್ವಾಜಮುನಿಯ ರೇತಸ್ಸು / ವೀರ್ಯವು ಸ್ಖಲಿಸಿತು. ಆ ಋಷಿಯು ಅದು ಚೆಲ್ಲಿಹೋಗದಂತೆ ದ್ರೋಣಪಾತ್ರೆಯನ್ನು ಹಿಡಿದ / ಇಟ್ಟ ಎಂದಿದೆ ಮಹಾಭಾರತ ೧.೧೩.೩೭. ಈ ದ್ರೋಣನು ಕೃಪೀ ಎಂಬವಳ ಪತಿ, ಅಶ್ವತ್ಥಾಮನ ತಂದೆ). ಚೇಳು. ಮರ.

 ಒಂದು ಧಾನ್ಯದ ಅಳತೆಯ ಏಕಮಾನ— ಸುಮಾರು ೧೩ ಕೆಜಿ (ಅಥವಾ ೩ ಕೆಜಿ). ೪ ಆಢಕ (/ ೧ ಆಢಕ) ಪರಿಮಾಣ. ಅಳತೆಯ ಏಕಮಾನ— ೩೨ ಸೇರು / ೧೨೮ ಸೇರು / ೬೪ ಪೌಂಡ್ ಗಿಂತ ಹೆಚ್ಚು.

“ಅಷ್ಟಮುಷ್ಟಿರ್ಭವೇತ್ ಕುಞ್ಚಿಃ ಕುಞ್ಚಯೋऽಷ್ಟೌ ತು ಪುಷ್ಕಲಮ್ |

ಪುಷ್ಕಲಾನಿ ಚ ಚತ್ವಾರಿ ಆಢಕಃ ಪರಿಕೀರ್ತಿತಃ |

ಚತುರಾಢಕೋ ಭವೇತ್ ದ್ರೋಣ ಇತ್ಯೇತತ್ ಮಾನಲಕ್ಷಣಮ್ ||”

೧ ದ್ರೋಣ = ೪ ಆಢಕ = ೧೬ ಪುಷ್ಕಲ = ೧೨೮ ಕುಞ್ಚಿ = ೧,೦೨೪ ಮುಷ್ಟಿ = ೨೦೦ ಪಲ = ೧/೨೦ ಕುಂಭ = ೧/೧೬ ಖರೀ ಅಥವಾ = ೨ ಆಡಕ = ೧/೨ ಶೂರ್ಪ = ೬೪ ಸೇರ ಅಥವಾ ೩೨ ಸೇರ)

ಕಾಗೆಯ ಪ್ರಭೇದ. ದಂಡಕಾಕ.

೪೦೦ ಬಿಲ್ಲಂತರದ ಜಲಾಶಯ— 


“ಶತೇನ ಧನುರ್ಭಿಃ ಪುಷ್ಕರಿಣೀ | ತ್ರಿಭಿಃ ಶತೈಃ ದೀರ್ಘಿಕಾ | ಚತುರ್ಭಿಃ ದ್ರೋಣಃ | ಪಞ್ಚಭಿಃ ತಡಾಗಃ | ದ್ರೋಣಾತ್ ದಶಗುಣಾ ವಾಪೀ | ಇತಿ ಜಲಾಶಯತತ್ತ್ವಮ್ ||”— 

೧೦೦ ಬಿಲ್ಲಂತರದ ಜಲಾಶಯ— ಪುಷ್ಕರಿಣೀ 

೩೦೦ ಬಿಲ್ಲಂತರದ ಜಲಾಶಯ— ದೀರ್ಘಿಕಾ

೪೦೦ ಬಿಲ್ಲಂತರದ ಜಲಾಶಯ— ದ್ರೋಣ

೫೦೦ ಬಿಲ್ಲಂತರದ ಜಲಾಶಯ— ತಡಾಗ

೧೦ ದ್ರೋಣ = ೪,೦೦೦ ಬಿಲ್ಲಂತರದ ಜಲಾಶಯ— ವಾಪೀ

ಎಂಬವು ಜಲಾಶಯದ ವಿಧಗಳು.

ಮೇಘನಾಯಕವು ದ್ರೋಣವು / ಪ್ರಳಯಮೇಘಗಳಲ್ಲೊಂದು—

“ತ್ರಿಯುತೇ ಶಾಕವರ್ಷೇ ತು ಚತುರ್ಭಿಃ ಶೇಷಿತಃ ಕ್ರಮಾತ್ |

ಆವರ್ತಂ ವಿದ್ಧಿ ಸಂವರ್ತಂ ಪುಷ್ಕರಂ ದ್ರೋಣಮಂಬುದಮ್ ||

ಆವರ್ತೋ ನಿರ್ಜಲೋ ಮೇಘಃ ಸಂವರ್ತಶ್ಚ ಬಹೂದಕಃ |

ಪುಷ್ಕರೋ ದುಷ್ಕರಜಲೋ ದ್ರೋಣಃ ಶಸ್ಯಪ್ರಪೂರಕಃ ||

ಇತಿ ಜ್ಯೋತಿಸ್ತತ್ತ್ವಮ್ ||”

ತುಂಬೆಹೂವು. ಬಿಳಿಬಣ್ಣದ ಕಿರುಪುಷ್ಪ ಪ್ರಭೇದ—

“ಬ್ರಹ್ಮವಿಷ್ಣುಶಿವಾದೀನಾಂ ದ್ರೋಣಪುಷ್ಪಂ ಸದಾ ಪ್ರಿಯಮ್ |

ತತ್ತೇ ದುರ್ಗೇ ಪ್ರಯಚ್ಛಾಮಿ ಪವಿತ್ರಂ ತೇ ಸುರೇಶ್ವರಿ ||”

(—ಸ್ಮಾರ್ತದುರ್ಗಾರ್ಚಾಪ್ರಯೋಗೇ)

ಶಾಕದ್ವೀಪಾಂತರ್ಗತ / ಶಾಲ್ಮಲೀ / ಕುಶದ್ವೀಪಾಂತರ್ಗತ ವರ್ಷ / ದೇಶ / ಪರ್ವತವಿಶೇಷ. ತುಂಡಾದ ಅಂಗ / ಮೂಳೆಯನ್ನು ಸೇರಿಸುವ ವಿಶಲ್ಯಕರಣೀ ಹಾಗೂ ಮೃತಸಂಜೀವನೀ ಮುಂತಾದ ಔಷಧೀಯಸಸ್ಯಗಳಿರುವ ಪರ್ವತಶಿಖರ. ಮತ್ಸ್ಯಪುರಾಣದಲ್ಲಿ ಹೀಗಿದೆ—

“ಚತುರ್ಥಃ ಪರ್ವತೋ ದ್ರೋಣೋ ಯತ್ರೌಷಧ್ಯೋ ಮಹಾಗಿರೌ |

ವಿಶಲ್ಯಕರಣೀ ಚೈವ ಮೃತಸಞ್ಜೀವನೀ ತಥಾ ||”

ಭಾರತವರ್ಷದ ಸಾಗರತೀರದ ಒಂದು ಪರ್ವತಶಿಖರ. ಇದು ಇಂದ್ರನ ಭಯದಿಂದ ಸಾಗರದೊಳಗಡಗಿತು.

ಒಂದು ನದಿಯ ಹೆಸರು ದ್ರೋಣೀ.

೨ ಪರ್ವತಗಳ ನಡುವಿನ ಕಣಿವೆ.

ವಸುಪುತ್ರರಲ್ಲೊಬ್ಬ. ಭಾಗವತದಲ್ಲಿರುವಂತೆ—

“ವಸವೋऽಷ್ಟೌ ವಸೋಃ ಪುತ್ರಾಸ್ತೇಷಾಂ ನಾಮಾನಿ ಮೇ ಶೃಣು |

ದ್ರೋಣಃ ಪ್ರಾಣೋ ಧ್ರುವೋऽರ್ಕೋऽಗ್ನಿರ್ದೋಷೋ ವಾಸ್ತುರ್ವಿಭಾವಸುಃ ||”

(ಈತನು ನಂದನೆಂಬ ಹೆಸರಿನಿಂದ ಹುಟ್ಟಿದವನು, ಅಭಿಮತಿಯ ಪತಿ, ಹರ್ಷ,ಶೋಕ,ಭಯ ಮುಂತಾದವರ ತಂದೆ)


ದ್ರೋಣ, ಪ್ರಾಣ, ಧ್ರುವ, ಅರ್ಕ, ಅಗ್ನಿ, ದೋಷ, ವಾಸ್ತು, ವಿಭಾವಸು— ಎಂಬ ವಸುವಿನ ೮ ಮಂದಿ ಪುತ್ರರಲ್ಲಿ ದ್ರೋಣನೂ ಒಬ್ಬ.

ಒಂದು ವಿಧದ ಶಾರ್ಙ್ಗಕ ಪಕ್ಷಿ.

      ದೇವಾಧಿದೇವನಾದ ಕರ್ಪೂರಗೌರವರ್ಣದ ಮಹಾದೇವನಿಗೆ ಪವಿತ್ರತಮವಾದ ಬಿಳಿಯ ದ್ರೋಣಪುಷ್ಪಗಳ ಸಮರ್ಪಣೆ. ಸೋಮಮೂರ್ತಿಗೆ ಸೋಮಪಾತ್ರೆಯ ಪ್ರತಿನಿಧಿಯಾದ ದ್ರೋಣಪುಷ್ಪ / ತುಂಬೆಹೂವಿನ ಸಮರ್ಪಣೆ. ಅಭಿಷೇಕಪ್ರಿಯನಾದ ಪರಮೇಶ್ವರನಿಗೆ ಕುಂಭದ್ರೋಣವರ್ಷದ ಪ್ರತೀಕವಾಗಿ ದ್ರೋಣಕುಸುಮದ ಅರ್ಪಣೆ. ಸಜ್ಜನರ ಕಷ್ಟಕ್ಕೆ ಕರಗಿಹೋಗುವ, ದುರ್ಜನರನ್ನು ರೋದಿಸುವಂತೆ ಮಾಡುವ ರುದ್ರನಿಗೆ ಕರಗಿಹೋಗುವ ಎಂಬುದರ ಪ್ರತೀಕವಾದ (ದ್ರು ಗತೌ) ದ್ರೋಣಸುಮದ ಅರ್ಪಣೆ. ಪ್ರಥಮ ದೈವೀ ಭಿಷಗ್ವರನಿಗೆ ಭೇಷಜಾಶ್ರಯವಾದ ದ್ರೋಣಪರ್ವತದ ಹೆಸರಿನದೇ ಹೂವಿನ ಸಮರ್ಪಣೆ. ರುದ್ರನಿಗೆ ವಸುವಿನ ಪ್ರತಿನಿಧಿಯಾದ ದ್ರೋಣಪುಷ್ಪದ ಸಮರ್ಪಣೆ. ಪಿನಾಕಧನುರ್ಧಾರಿಗೆ ಧನುರ್ವಿದ್ಯಾಚಾರ್ಯನಾದ ದ್ರೋಣನ ಹೆಸರಿನ ಸುಮಾರ್ಚನೆ. ಕೈಲಾಸಗಿರಿವಾಸನಿಗೆ ದ್ರೋಣಗಿರಿಯ ಹೆಸರಿನ ಪುಷ್ಪಾರ್ಚನೆ. ಹಿಮವತ್ಪರ್ವತಶ್ರೇಣಿಗಳ ರಾಜನ ಅಳಿಯನಿಗೆ ಪರ್ವತ ಕಣಿವೆ / ಕಂದರ ಪ್ರತೀಕವಾದ ದ್ರೋಣನಾಮಕ ಕುಸುಮಮಾಲೆ. ಪ್ರಳಯಕಾರಕ ಸಂಹಾರಕನಿಗೆ ಪ್ರಳಯಮೇಘವಾದ ದ್ರೋಣನಾಮಕ ಸುಮಗಳ ಸಮರ್ಚನೆ. ಆನಂದತಾಂಡವಮೂರ್ತಿಗೆ ನಮ್ಮ ಹರ್ಷ-ಶೋಕ-ಭಯಾದಿಗಳ ಅಭಿಮತಗಳನ್ನು ಹೋಗಲಾಡಿಸುವ ನಂದನಾಮಕ ವಸುವಿನ ಪ್ರತೀಕವಾದ ದ್ರೋಣಪುಷ್ಪಾರ್ಚನೆ. ಹಾಲಾಹಲವುಂಡು ಜಗವನುಳಿಸಿದ ನಂಜುಂಡನಿಗೆ ವಿಷತಾಪ ಪರಿಹಾರಕವಾದ ನಿರಂತರ ದ್ರೋಣೀನದೀಪ್ರವಾಹದ ಪ್ರತೀಕವಾದ ದ್ರೋಣಕುಸುಮಾರ್ಚನೆ. ಕೈಲಾಸವಾಸಿಗೆ ಕೈಲಾಸದ ಮಾನಸ ಸರೋವರದ ಪ್ರತೀಕವಾದ ದ್ರೋಣಸುಮಾರ್ಪಿತ. ಕಾಕವಾಹನ ಶನಿಯಿಂದಾದ ದೋಷಪರಿಹಾರಕನಾದ ಶಿವನಿಗೆ ಕಾಕಪ್ರತೀಕ ದ್ರೋಣಪುಷ್ಪವಿದೋ ಅರ್ಪಿತ. ಕಾಲಕಾಲನಿಗೆ ಅಳತೆಯ ಮಾನದ ಪ್ರತೀಕವಾಗಿ ದ್ರೋಣಪುಷ್ಪಾರ್ಪಣೆ. ದುಷ್ಟರಿಗೆ ಚೇಳುಕುಟುಕಿದ ಅನುಭವನೀಡುವವನಿಗೆ ಚೇಳಿನ ಪ್ರತೀಕವಾದ ದ್ರೋಣಸುಮ. ನಂದಿವಾಹನನಿಗೆ ಬೈಪ್ಪಣೆಯ / ಹಟ್ಟಿಯಲ್ಲಿ ಮೇಯಲು ಹುಲ್ಲುಹಾಕುವ ಸ್ಥಳದ ಪ್ರತೀಕ ದ್ರೋಣಪುಷ್ಪ. ಉನ್ನತ ಶಿಖರದಲ್ಲಿರುವವನಿಗೆ ಉನ್ನತವಾಗಿ ಹಾರಾಡುವ ದ್ರೋಣಪಕ್ಷಿಯ ಪ್ರತೀಕ ಪುಷ್ಪಾರ್ಚನೆ. ವೃಕ್ಷದಂತೆ ಸಕಲರಿಗೆ ಆಶ್ರಯದಾತನಾದ ಶಿವನಿಗೆ ವೃಕ್ಷಾರ್ಥಕವಾದ ದ್ರೋಣಸುಮಾರ್ಪಣೆ. ಊರ್ಧ್ವರೇತಸನಿಗೆ ದ್ರೋಣಪಾತ್ರೆಯಲ್ಲಿ ರೇತಃಸ್ಖಲನದಿಂದ ಜನಿಸಿದ ದ್ರೋಣಾಚಾರ್ಯನ ಹೆಸರಿನ ಪುಷ್ಪದಿಂದ ಅರ್ಚನೆ. ನಂದಿಯೇ ರಥವಾಗುಳ್ಳ ಪರಶಿವನಿಗೆ ಮರದ ರಥದ ಪ್ರತೀಕವಾದ ದ್ರೋಣಪುಷ್ಪದಿಂದ ಪೂಜೆ. ಯಜ್ಞಮೂಲನಿಗೆ, ಯಜ್ಞಪುರುಷನಿಗೆ ಯಜ್ಞದ ಅರಣಿಮಂಥನ ಕಾಷ್ಠದ ಪ್ರತೀಕವಾದ ದ್ರೋಣಸುಮ. ಹರ ಹರ ಮಹಾದೇವ..ಜಯ ಜಯ ಪರಮಾತ್ಮನ್...ಓಂ ನಮೋ ಪರಬ್ರಹ್ಮಣೇ ಪ್ರಣವಾರ್ಥಾಯ….ಶಂಭೋ ಮಹಾದೇವ…

೮೩) ಶಿವನ ಅಷ್ಟಮೂರ್ತಿಗಳ ಹಿಂದಿನ ಪೌರಾಣಿಕ ಕಥೆಯೇನು?

ಟಿಪ್ಪಣಿ (ಟಿಪ್ಪನೀ)—


ರುದ್ರನ ಅಷ್ಟಮೂರ್ತಿಗಳು ಹಾಗೂ ಅವರ ಪತ್ನೀ-ಸುತರ ಕುರಿತು ವಿಷ್ಣುಪುರಾಣ (ಅಂಶ ೧, ಅಧ್ಯಾಯ ೮, ಶ್ಲೋಕ.೫—೧೪) ಹೀಗೆ ಹೇಳುತ್ತದೆ—


ತತೋऽನ್ಯಾನಿ ದದೌ ತಸ್ಮೈ ಸಪ್ತ ನಾಮಾನಿ ವೈ ಪ್ರಭುಃ |

ಸ್ಥಾನಾನಿ ಚೈಷಾಮಷ್ಟಾನಾಂ ಪತ್ನೀಃ ಪುತ್ರಾಂಶ್ಚ ವೈ ಪ್ರಭುಃ || ೫ ||

ಭವಂ ಶರ್ವಮಥೇಶಾನಂ ತಥಾ ಪಶುಪತಿಂ ದ್ವಿಜ |

ಭೀಮಮುಗ್ರಂ ಮಹಾದೇವಮುವಾಚ ಸ ಪಿತಾಮಹಃ || ೬ ||

ಚಕ್ರೇ ನಾಮಾನ್ಯಥೈತಾನಿ ಸ್ಥಾನಾನ್ಯೇಷಾಂ ಚಕಾರ ಸಃ |

ಸೂರ್ಯೋ ಜಲಂ ಮಹೀ ವಾಯುರ್ವಹ್ನಿರಾಕಾಶಮೇವ ಚ |

ದೀಕ್ಷಿತೋ ಬ್ರಾಹ್ಮಣಸ್ಸೋಮ ಇತ್ಯೇತಾಸ್ತನವಃ ಕ್ರಮಾತ್ || ೭ ||

ಸುವರ್ಚಲಾ ತಥೈವೋಷಾ ಸುಕೇಶೀ ಚಾಪರಾ ಶಿವಾ |

ಸ್ವಾಹಾ ದಿಶಸ್ತಥಾ ದೀಕ್ಷಾ ರೋಹಿಣೀ ಚ ಯಥಾಕ್ರಮಮ್ || ೮ ||

ಸೂರ್ಯಾದೀನಾಂ ದ್ವಿಜಶ್ರೇಷ್ಠ ರುದ್ರಾದ್ಯೈರ್ನಾಮಭಿಸ್ಸಹ |

ಪತ್ನ್ಯಸ್ಸ್ಮೃತಾ ಮಹಾಭಾಗ ತದಪತ್ಯಾನಿ ಮೇ ಶ್ರುಣು || ೯ ||

ಏಷಾಂ ಸೂತಿಪ್ರಸೂತಿಭ್ಯಾಮಿದಮಾಪೂರಿತಂ ಜಗತ್ || ೧೦ ||

ಶನೈಶ್ಚರಸ್ತಥಾ ಶುಕ್ರೋ ಲೋಹಿತಾಙ್ಗೋ ಮನೋಜವಃ |

ಸ್ಕನ್ದಃ ಸ್ವರ್ಗೋऽಥ ಸನ್ತಾನೋ ಬುಧಶ್ಚಾನುಕ್ರಮಾತ್ಸುತಾಃ || ೧೧ ||

ಏವಂ ಪ್ರಕಾರೋ ರುದ್ರೋऽಸೌ ಸತೀಂ ಭಾರ್ಯಾಮವಿನ್ದತ |

ಉಪಯೇಮೇ ದುಹಿತರಂ ದಕ್ಷಸ್ಯೈವ ಪ್ರಜಾಪತೇಃ || ೧೨ ||

ದಕ್ಷಕೋಪಾಚ್ಚ ತತ್ಯಾಜ ಸಾ ಸತೀ ಸ್ವಕಳೇಬರಮ್ |

ಹಿಮವದ್ದುಹಿತಾ ಸಾऽಭೂನ್ಮೇನಾಯಾಂ ದ್ವಿಜಸತ್ತಮ || ೧೩ ||

ಉಪಯೇಮೇ ಪುನಶ್ಚೋಮಾಮನನ್ಯಾಂ ಭಗವಾನ್ ಹರಃ || ೧೪ ||


ಪಿತಾಮಹ ಬ್ರಹ್ಮನಿಗೆ ತನ್ನಂತಹ ಶಕ್ತಿವಂತನನ್ನು ಸೃಜಿಸಬೇಕೆಂಬ ಸಂಕಲ್ಪವು ಮೂಡಿದೊಡನೆಯೇ ಆತನ ಅಂಕ / ತೊಡೆಯಲ್ಲಿ ನೀಲಲೋಹಿತನೆಂಬ ಬಾಲಕನು ಮಧುರಸ್ವರದಿಂದ ತನಗೆ ಹೆಸರನ್ನಿಡಬೇಕೆಂದು ಅಳುತ್ತಿರುವಾಗ್ಗೆ ಪಿತಾಮಹನು ಭವ, ಶರ್ವ, ಈಶಾನ, ಪಶುಪತಿ, ರುದ್ರ, ಉಗ್ರ, ಭೀಮ, ಮಹಾದೇವ— ಎಂಬ ೮ ಹೆಸರುಗಳನ್ನಿಟ್ಟು, ಅವರಿಗೆ ಅನುಕ್ರಮವಾಗಿ ಸೂರ್ಯ, ಜಲ, ಭೂಮಿ, ವಾಯು, ಅಗ್ನಿ, ಆಕಾಶ, ಯಜ್ಞದೀಕ್ಷಿತನಾದ ಬ್ರಾಹ್ಮಣ ಹಾಗೂ ಸೋಮ / ಚಂದ್ರ— ಎಂಬ ೮ ಸ್ಥಾನಗಳನ್ನು / ಅಷ್ಟಮೂರ್ತಿಗಳನ್ನು ವಿನಿರ್ಮಿಸಿದನು. ಅವರಿಗೆ ಕ್ರಮವಾಗಿ ಸುವರ್ಚಲಾ, ಉಷಾ, ಸುಕೇಶೀ, ಶಿವಾ, ಸ್ವಾಹಾ, ದಿಶ, ದೀಕ್ಷಾ ಹಾಗೂ ರೋಹಿಣಿ— ಎಂಬವರು ಪತ್ನಿಯರು. ಇವರಿಗೆ ಅನುಕ್ರಮವಾಗಿ ಶನೈಶ್ಚರ / ಶನಿ, ಶುಕ್ರ, ಅಂಗಾರಕ / ಲೋಹಿತಾಂಗ / ಮಂಗಳ, ಮನೋಜವ / ಮನೋವೇಗಿ / ಮಾರುತಿ, ಸ್ಕನ್ದ / ಕುಮಾರ / ಸುಬ್ರಹ್ಮಣ್ಯ, ಸ್ವರ್ಗ, ಮಾನವಸಂತಾನ ಹಾಗೂ ಬುಧ— ಇವರೇ ೮ ಮಂದಿ ಪುತ್ರರು. ಈ ಶಿವನ ಅಷ್ಟಮೂರ್ತಿದಂಪತಿಗಳ ಮಕ್ಕಳು-ಮೊಮ್ಮಕ್ಕಳೇ ಮುಂತಾದ ಸಂತತಿಯಿಂದ ಈ ಜಗತ್ತೆಲ್ಲವೂ ತುಂಬಿಹೋಗಿರುವುದು.


ಹೀಗೆಯೇ, ರುದ್ರನು ದಕ್ಷಪ್ರಜಾಪತಿಯ ಮಗಳಾದ ಸತಿ / ದಾಕ್ಷಾಯಿಣಿಯನ್ನು ಪತ್ನಿಯಾಗಿ ಪರಿಗ್ರಹಿಸಿದನು. ಆಕೆಯು ದಕ್ಷಾಧ್ವರಕಾಲದಲ್ಲಿ ದಕ್ಷಕೋಪಕ್ಕೆ ತುತ್ತಾಗಿ ಯೋಗಾಗ್ನಿಯಲ್ಲಿ ದಹಿಸಿಕೊಂಡು, ಬಳಿಕ ಹಿಮವಂತನ ಪುತ್ರಿಯಾಗಿ ಜನಿಸಿದಾಗ ಭಗವಾನ್ ಹರನು ಪುನಃ ಅನನ್ಯಳೂ ಅದ್ವಿತೀಯಳೂ ಆದ ಆ ಉಮೆಯನ್ನು ಪರಿಗ್ರಹಿಸಿದನು.


        



Comments

Popular posts from this blog

ಲಘುನ್ಯಾಸದ ಬೆಳಕಿನಲ್ಲಿ ಶಿವದರ್ಶನ ೧೩—ಲಘುನ್ಯಾಸಮನ್ತ್ರಾರ್ಥವಿಚಾರ ೮

ಲಘುನ್ಯಾಸದ ಬೆಳಕಿನಲ್ಲಿ ಶಿವದರ್ಶನ ೯—ಲಘುನ್ಯಾಸಮಂತ್ರಾರ್ಥವಿಚಾರ ೪

ತೈತ್ತಿರೀಯಕೃಷ್ಣಯಜುಸ್ಸಂಹಿತಾಭಾಷ್ಯಾರ್ಥಸಮುಚ್ಚಯಃ ೧.೧.೪