ಲಘುನ್ಯಾಸದ ಬೆಳಕಿನಲ್ಲಿ ಶಿವದರ್ಶನ ೧೦—ಲಘುನ್ಯಾಸಮಂತ್ರಾರ್ಥವಿಚಾರ ೫

 

ಲಘುನ್ಯಾಸಭಾಷ್ಯಮ್ ೫

೫೩) ದೈವೀಕಾರ್ಯಕ್ಕೆ ದಂಪತಿಗಳನ್ನು ಸಶಕ್ತರನ್ನಾಗಿಸಲು ಯಾವ ವೈದಿಕಮಂತ್ರವಿದೆ?

ಕರ್ಮಣೇ ವಾಂ ದೇವೇಭ್ಯಃ ಶಕೇಯಂ ವೇಷಾಯ ತ್ವಾ ||


ಹೇ ರುದ್ರರೂಪೀ ಭಗವಂತನೇ! ನಿನ್ನನ್ನು ಪರಿಚರ್ಯಾ-ಸೇವಾದಿಗಳಿಂದ ತುಷ್ಟಿಪಡಿಸಲೂ (ತ್ವಾ / ತ್ವಾಮ್ ವೇಷಾಯ), ಇತರ ದೇವತಾಕರ್ಮಗಳನ್ನು ಆಚರಿಸಲೂ (ದೇವೇಭ್ಯಃ ಕರ್ಮಣೇ— ದೇವಕರ್ಮಣೇ), ಯಜಮಾನ ದಂಪತಿಗಳಾದ / ಕರ್ತೃಗಳಾದ ಸತಿ-ಪತಿಯರಾದ ನಿಮ್ಮಿಬ್ಬರನ್ನು / ಇವರಿಬ್ಬರನ್ನು (ವಾಮ್ / ಯುವಾಮ್), ಶಕ್ತರನ್ನಾಗಿ ಮಾಡು (ಶಕೇಯಮ್).


೫೪) ವೇದದಲ್ಲಿ ಕೇಳಿರುವ ಇಷ್ಟಾರ್ಥಗಳ ರಹಸ್ಯಾರ್ಥವೇನು?

ಶಂ ಚ ಮೇ ಮಯಶ್ಚ ಮೇ ಪ್ರಿಯಂ ಚ ಮೇऽನುಕಾಮಶ್ಚ ಮೇ ಕಾಮಶ್ಚ ಮೇ ಸೌಮನಸಶ್ಚ ಮೇ ಭದ್ರಂ ಚ ಮೇ ಶ್ರೇಯಶ್ಚ ಮೇ ವಸ್ಯಶ್ಚ ಮೇ ಯಶಶ್ಚ ಮೇ ಭಗಶ್ಚ ಮೇ ದ್ರವಿಣಂ ಚ ಮೇ ಯಂತಾ ಚ ಮೇ ಧರ್ತಾ ಚ ಮೇ ಕ್ಷೇಮಶ್ಚ ಮೇ ಧೃತಿಶ್ಚ ಮೇ ವಿಶ್ವಂ ಚ ಮೇ ಮಹಶ್ಚ ಮೇ ಸಂವಿಚ್ಚ ಮೇ ಜ್ಞಾತ್ರಂ ಚ ಮೇ ಸೂಶ್ಚ ಮೇ ಪ್ರಸೂಶ್ಚ ಮೇ ಸೀರಂ ಚ ಮೇ ಲಯಶ್ಚ ಮ ಋತಂ ಚ ಮೇऽಮೃತಂ ಚ ಮೇऽಯಕ್ಷ್ಮಂ ಚ ಮೇऽನಾಮಯಚ್ಚ ಮೇ ಜೀವಾತುಶ್ಚ ಮೇ ದೀರ್ಘಾಯುತ್ವಂ ಚ ಮೇऽನಮಿತ್ರಂ ಚ ಮೇऽಭಯಂ ಚ ಮೇ ಸುಗಂ ಚ ಮೇ ಶಯನಂ ಚ ಮೇ ಸೂಷಾ ಚ ಮೇ ಸುದಿನಂ ಚ ಮೇ ||


ನನಗೆ (ಮೇ) ಶುಭವನ್ನೂ (ಶಂ ಚ), ನನಗೆ (ಮೇ / ಮಹ್ಯಮ್) ಸುಖವನ್ನೂ / ಸುಖವಾಗಿ ಹೋಗಲು ಅನುಕೂಲವಾದ ವೇಗವಾಗಿ ಚಲಿಸುವ (ಮಯತೇ ದ್ರುತಂ ವೇಗೇನ ಗಚ್ಛತಿ ಇತಿ ಮಯಃ) ಉಷ್ಟ್ರ— ಒಂಟೆ / ಅಶ್ವತರ— ಕತ್ತೆಕಿರುಬದಂತಹ ವಾಹನವನ್ನೂ ಅಥವಾ ದಾನವಶಿಲ್ಪಿ ಮಯನಂತೆ ನಿಪುಣನಾದ ವಾಸ್ತುಶಿಲ್ಪಿಯನ್ನೂ (ಮಯಃ ಚ), ನನಗೆ(ಮೇ), ನನ್ನ ಇಷ್ಟವಾದ / ಪ್ರಿಯವಾದ ವಸ್ತು / ವ್ಯಕ್ತಿಗಳನ್ನೂ / ಪ್ರಿಯನಾದ ಪತಿಯನ್ನೂ / ಅಳಿಯನನ್ನೂ / ಸಂಜೀವಕವಾದ ಅಥವಾ ಋದ್ಧಿಯೆಂಬ ಔಷಧವನ್ನೂ (ಪ್ರಿಯಂ ಚ), ನನಗೆ (ಮೇ), ಬಯಸಿದ್ದಕ್ಕೆ ಅನುರೂಪವಾದುದನ್ನೂ (ಅನುಕಾಮಃ ಚ), ಅಥವಾ ನನಗೆ ನಾನು ಬಯಸಿದಂಥ ಅನುರೂಪನಾದ ಪತಿಯನ್ನೂ, (ಮೇ) ನನಗೆ, ಸಂತಾನೋತ್ಪತ್ತಿಕಾರಕ ಕಾಮಶಕ್ತಿಯನ್ನೂ / ರೇತೋವೃದ್ಧಿಯನ್ನೂ / ಬಯಸಿದ ಅಭಿಲಾಷೆಗಳನ್ನೂ / ಮಾಡಬೇಕೆಂದಿರುವ ಕಾರ್ಯಗಳಿಗೆ ಅನುಜ್ಞೆ / ಅನುಮತಿಯನ್ನೂ / ಸಾಕೆನ್ನುವಷ್ಟು ಅತಿಶಯವಾದ ಇಚ್ಛಾಪೂರ್ತಿಯನ್ನೂ / ವಿಷಯಸುಖವನ್ನೂ / ದಾಂಪತ್ಯಸುಖವನ್ನೂ / ಪರಮೇಶ್ವರನ ಕೃಪೆಯನ್ನೂ / ವಿಷ್ಣುವಿನ ಕೃಪೆಯನ್ನೂ ("ಕಾಮಹಾ ಕಾಮಕೃತ್ ಕಾಂತಃ ಕಾಮಃ ಕಾಮಪ್ರದಃ ಪ್ರಭುಃ" — ವಿಷ್ಣುಸಹಸ್ರನಾಮ) / ಕೃಷ್ಣ-ರುಕ್ಮಿಣೀಪುತ್ರನಾದ ಮನ್ಮಥ / ಪ್ರದ್ಯುಮ್ನ / ಕಾಮದೇವನ ಕೃಪೆಯನ್ನೂ / ಬಲರಾಮನ ದಯೆಯನ್ನೂ (ಅವನ ಕಾಮಪಾಲಕತ್ವದಿಂದಾಗಿ) / ಕಕಾರವೆಂಬ ಅಕ್ಷರಸಿದ್ಧಿಯನ್ನೂ [“ಶಿವಬೀಜಂ (ಹ) ತಥಾ ಕಾಮಮ್ (ಕ) ಇಂದ್ರಂ (ಲ) ದೇವೀಂ (ಸ) ನಿಯೋಜಯೇತ್ ”— ಎಂದು ಷೋಡಶೀವಿದ್ಯೆಯ ಶಕ್ತಿಕೂಟೋದ್ಧಾರದಲ್ಲಿದೆ] /ಕಾಮೇಚ್ಛೆಯನ್ನೂ (ಕಾಮವು ಬ್ರಹ್ಮನ ಹೃದಯದಿಂದ ಹುಟ್ಟಿತು) / ಮನೋರಥ ಅಥವ ವಾಂಛಿತಾರ್ಥವನ್ನೂ / ಶಿವನ ಕೃಪೆಯನ್ನೂ (“ಗಣಕರ್ತಾ ಗಣಪತಿರ್ದಿಗ್ವಾಸಾಃ ಕಾಮ ಏವ ಚ”— ಎಂದು ಮಹಾಭಾರತದಲ್ಲಿದೆ) / ಮಹಾರಾಜವೆಂಬ ಹೆಸರಿನ ಮಾವಿನ ಫಲವನ್ನೂ / ರಜೋಗುಣೋದ್ಭವವಾದ ಕಾಮವನ್ನೂ (ಕಾಮಃ ಚ) ಅನುಗ್ರಹಿಸು.


(ಮೇ) ನನಗೆ, (ಸೌಮನಸಃ ಚ) ಒಳ್ಳೆಯ ಮನಸ್ಸನ್ನೂ / ಪ್ರಶಸ್ತವಾದ ಚಿತ್ತವನ್ನೂ, (ಮೇ) ನನಗೆ (ಭದ್ರಂ ಚ) ಮಂಗಲವನ್ನೂ / ಭದ್ರಮುಷ್ಟಿಯೆಂಬ ಔಷಧೀಯ ಸಸ್ಯವನ್ನೂ / ಚಿನ್ನವನ್ನೂ / ವೃಷಭವನ್ನೂ / ಚಂದನವನ್ನೂ / ಶ್ರೀಗಂಧವನ್ನೂ / ತುಷ್ಟಿಯನ್ನೂ / ಕಲ್ಯಾಣವನ್ನೂ / ಸುಖವನ್ನೂ, (ಮೇ) ನನಗೆ, (ಶ್ರೇಯಃ ಚ) ಶ್ರೇಯಸ್ಸನ್ನೂ, ಕೀರ್ತಿಯನ್ನೂ, ಧರ್ಮವನ್ನೂ, ಮುಕ್ತಿಯನ್ನೂ, ಶುಭವನ್ನೂ, ಧರ್ಮಾರ್ಥಕಾಮಮೋಕ್ಷವೆಂಬ ಚತುರ್ವಿಧ ಪುರುಷಾರ್ಥವನ್ನೂ, ಅತಿಶಯವಾಗಿ ಯೋಗ್ಯವಾದುದನ್ನೂ (ಅತಿಶಯೇನ ಪ್ರಶಸ್ಯಮ್), ಸರ್ವೌಷಧವಾಗಿರುವ ಅಳಲೆಕಾಯಿಯನ್ನೂ, ಗಜಹಿಪ್ಪಲಿಯನ್ನೂ, ಪಾಠಾ / ಅಂಬಷ್ಠಾ / ಪದವಲ್ಲಿಯೆಂಬ ಔಷಧೀಯಲತೆಯನ್ನೂ, ರಾಸ್ನಾ / ಚಿತ್ರಮೂಲಕವೆಂಬ ಔಷಧೀಯ ಸಸ್ಯವನ್ನೂ ಅನುಗ್ರಹಿಸು ಪರಮೇಶ್ವರನೇ.


( ಮೇ) ನನಗೆ, (ವಸ್ಯಃ ಚ) ವಾಸಯೋಗ್ಯ ಮನೆಯನ್ನೂ (ವಸ ನಿವಾಸೇ ಧಾತುಃ), ಧರಿಸಲು ವಸನ / ವಸ್ತ್ರವನ್ನೂ (ವಸ ಆಚ್ಛಾದನೇ), ಶತ್ರುಚ್ಛೇದಕ ಆಯುಧವನ್ನೂ (ವಸ ಚ್ಛೇದನೇ), ಸ್ನೇಹಯೋಗ್ಯ ಮಿತ್ರರನ್ನೂ (ವಸ ಸ್ನೇಹನೇ), ಪ್ರವಾಸಯೋಗ್ಯ ಪ್ರೇಕ್ಷಣೀಯ ಹಾಗೂ ಪುಣ್ಯ ಧಾಮ / ಕ್ಷೇತ್ರದರ್ಶನವನ್ನೂ (ವಸ ಪ್ರವಾಸೇ), (ಮೇ) ನನಗೆ, (ಯಶಃ ಚ) ಸುಖ್ಯಾತಿಯನ್ನೂ, ಸುಕೀರ್ತಿಯನ್ನೂ (ಅಶ್ನುತೇ ವ್ಯಾಪ್ನೋತೀತಿ ಯಶಃ— ಹೊಂದುತ್ತಾನೆ, ವ್ಯಾಪಿಸುತ್ತದೆ ಎಂಬುದರಿಂದಾಗಿ ಯಶಸ್ಸು), (“ದಾನಾದಿಪ್ರಭವಾ ಕೀರ್ತಿಃ ಶೌರ್ಯಾದಿಪ್ರಭವಾ ಯಶಃ”— ಮಾಧವೀಯ; ದಾನಾದಿಗಳಿಂದ ಉಂಟಾಗುವುದು ಕೀರ್ತಿಯು, ಶೌರ್ಯಪರಾಕ್ರಮಗಳಿಂದ ಯಶಸ್ಸು), ಅನ್ನವನ್ನೂ (“ವಯಂ ಸ್ಯಾಮ ಯಶಸೋ ಜನೇಷು— ಋಗ್ವೇದ ೪.೫೨.೧೧; “ಯಶಸಃ ಕೀರ್ತೇಃ ಅನ್ನಸ್ಯ ವಾ” ಎಂದು ಅದರ ಸಾಯಣಭಾಷ್ಯ) ನೀಡು ಹೇ ಭಗವಾನ್ ರುದ್ರ!


( ಮೇ) ನನಗೆ, (ಭಗಃ ಚ) ಸೂರ್ಯನ ಕೃಪೆಯನ್ನೂ, ಅಣಿಮಾ-ಮಹಿಮಾ-ಗರಿಮಾ-ಲಘಿಮಾ-ಪ್ರಾಪ್ತಿ-ಪ್ರಾಕಾಮ್ಯ-ಈಶಿತ್ವ-ವಶಿತ್ವಗಳೆಂಬ ಅಷ್ಟಸಿದ್ಧಿಗಳನ್ನೂ (ಅಣಿಮಾದ್ಯಷ್ಟವಿಧ-ಐಶ್ವರ್ಯೇ— ವಾಚಸ್ಪತ್ಯಮ್ ಶಬ್ದಕೋಷ), (ಭಜ್ಯತೇ ಇತಿ ಭಗಃ, ಭಜ ಸೇವಾಯಾಮ್, ಭಜಿಸಲ್ಪಡುವವನು, ಸೇವಿಸಲ್ಪಡುವವನು), ಸರ್ವರಿಂದ ಪ್ರಶಂಸೆಗೊಳಗಾಗುವಿಕೆಯನ್ನೂ (ಭಗಃ ಸರ್ವೈಃ ಭಜನೀಯಃ— ಸಾಯಣಋಗ್ಭಾಷ್ಯ; ಎಲ್ಲರೂ ಹೊಗಳುವಂಥವನನ್ನಾಗಿ ಮಾಡು), (“ಐಶ್ವರ್ಯಸ್ಯ ಸಮಗ್ರಸ್ಯ ವೀರ್ಯಸ್ಯ ಯಶಸಃ ಶ್ರಿಯಃ | ಜ್ಞಾನವೈರಾಗ್ಯಯೋಶ್ಚೈವ ಷಣ್ಣಾಂ ಭಗ ಇತೀಂಗನಾ ||”— ಸಮಗ್ರವಾದ - ಈಶ್ವರತ್ವ / ಆಧಿಪತ್ಯ, ವೀರ್ಯ-ಪರಾಕ್ರಮ, ಜಯ-ವಿಜಯ-ಯಶಃಕೀರ್ತಿಗಳು, ಸಿರಿ-ಸಂಪತ್ತು, ಜ್ಞಾನ, ಮತ್ತು ವೈರಾಗ್ಯಗಳೆಂಬ ಆರನ್ನು ಭಗವೆನ್ನುವರು.) ಐಶ್ವರ್ಯಾದಿ ಷಟ್ಕ / ಆರನ್ನೂ, ಸುಖಭೋಗಗಳಿಗೆ ಅವಕಾಶವನ್ನೂ (ಭಗಃ ಭೋಗಾಸ್ಪದತ್ವಮ್— ಶ್ರೀಧರಸ್ವಾಮಿಗಳ ಭಾಗವತಟೀಕಾ), ಧರ್ಮವನ್ನೂ, ಮೋಕ್ಷವನ್ನೂ, ಸೌಭಾಗ್ಯವನ್ನೂ, ಕಾಂತಿಯನ್ನೂ, ಇಚ್ಛಾಶಕ್ತಿಯನ್ನೂ, ಚಂದ್ರಾನುಗ್ರಹವನ್ನೂ, ಧನಕನಕವನ್ನೂ, ಪರಮಪದವನ್ನೂ ದಯಪಾಲಿಸು ಹೇ ಸದಾಶಿವರುದ್ರನೇ!


( ಮೇ) ನನಗೆ, (ದ್ರವಿಣಂ ಚ) ಧನಸಂಪತ್ತನ್ನೂ, ಬಂಗಾರವನ್ನೂ, ಬಲ-ಪರಾಕ್ರಮಗಳನ್ನೂ, ವಾಂಛಿತಾರ್ಥವನ್ನೂ (ದ್ರವತಿ ಗಚ್ಛತಿ ದ್ರೂಯತೇ ಪ್ರಾಪ್ಯತೇ ವಾ ಇತಿ ದ್ರವಿಣಮ್— ದ್ರು ಗತೌ ಧಾತುಃ; ದ್ರವಿಸಿ, ಕರಗಿಹೋಗುವಂಥದ್ದು, ದ್ರವ್ಯರೂಪವಾಗಿ ಸಂಚಯ / ಸಂಗ್ರಹವಾಗಿ ಪ್ರಾಪ್ತಿಯಾಗುವಂಥದ್ದು, ಹೀಗಾಗಿ ಸದಾ ಗತಿಶೀಲ ಅಥವಾ ಚಂಚಲ / ಸ್ಥಿರವಲ್ಲದ್ದು ದ್ರವಿಣ) ಕೊಡು ಶಿವನೇ!


(ಮೇ) ನನಗೆ, (ಯಂತಾ ಚ) ಸಾರಥಿಯನ್ನೂ, ವಾಹನಚಾಲಕನನ್ನೂ, ಮಾವುತನನ್ನೂ, ಸಂಯಮಯುಕ್ತತ್ವವನ್ನೂ, ಇಂದ್ರಿಯ-ಮನೋನಿಗ್ರಹತ್ವವನ್ನೂ, (ಮೇ) ನನಗೆ, (ಧರ್ತಾ ಚ) ಧಾರಣಾಶಕ್ತಿಯನ್ನೂ, ಧರ್ಮವನ್ನೂ, ಮನೆಯನ್ನೂ, ಯಾಗವನ್ನೂ, ಕಲಶವನ್ನೂ, (ಮೇ) ನನಗೆ, (ಕ್ಷೇಮಃ ಚ) ಕ್ಷೇಮವನ್ನೂ, ಕುಶಲವನ್ನೂ, ಇರುವ / ಪ್ರಾಪ್ತವಾದ ಸಂಪತ್ತಿನ ರಕ್ಷಣೆಯನ್ನೂ, ಮೋಕ್ಷವನ್ನೂ, (ಮೇ) ನನಗೆ, (ಧೃತಿಃ ಚ) ತುಷ್ಟಿಯನ್ನೂ, ಧೈರ್ಯವನ್ನೂ, ಧಾರಣಾಶಕ್ತಿಯನ್ನೂ, ಸುಖವನ್ನೂ, ಕ್ರತುವನ್ನೂ, ಷೋಡಶಮಾತೃಕೆಯರಲ್ಲಿ ಒಬ್ಬಳಾದ ೧೩ನೇ ಮಾತೃಕೆಯಾದ ಧೃತಿಯ ಕೃಪೆಯನ್ನೂ, ೧೮ ಅಕ್ಷರವೃತ್ತಿಯುಳ್ಳ ಧೃತಿಯೆಂಬ ಛಂದಸ್ಸಿದ್ಧಿಯನ್ನೂ, ಧೃತಿಯೆಂಬ ಪ್ರಾಜ್ಞತ್ವ-ಸಂಹೃಷ್ಟಮನಃಸ್ಥಿತಿ-ಸಭಾವಾಗ್ಮಿತ್ವ / ವಾವದೂಕತಾ(ವಾಕ್ಪಟುತ್ವ)-ಸೌಶೀಲ್ಯ-ವಿನಯಶೀಲತೆಯುಳ್ಳ ಯೋಗವನ್ನೂ (“ಧೃತಿಯೋಗಸಮುತ್ಪನ್ನಃ ಪ್ರಾಜ್ಞಃ ಸಂಹೃಷ್ಟಮಾನಸಃ | ವಾವದೂಕಃ ಸಭಾಯಾಂ ಚ ಸುಶೀಲೋ ವಿನಯಾನ್ವಿತಃ ||”— ಕೋಷ್ಠೀಪ್ರದೀಪಃ ಎಂಬ ಕೃತಿಯಲ್ಲಿದೆ.), ಇಷ್ಟಿಯೆಂಬ ಯಾಗಭೇದವನ್ನೂ, ಇಚ್ಛೆಯನ್ನೂ, ವಿಶ್ವೇದೇವನಾದ ಧೃತಿಯ ಕೃಪೆಯನ್ನೂ, (ಮೇ) ನನಗೆ, (ವಿಶ್ವಂ ಚ) ಅನುಕೂಲಕರವಾದ ಜಗತ್ತನ್ನೂ, ಸಂಸಾರವನ್ನೂ, ಶತಾವರಿಯನ್ನೂ, ಮಹೌಷಧವಾದ ಶುಂಠಿಯನ್ನೂ, ವಿಷ್ಣುಕೃಪೆಯನ್ನೂ (“ವಿಶ್ವಂ ವಿಷ್ಣುರ್ವಷಟ್ಕಾರೋ”— ವಿಷ್ಣುಸಹಸ್ರನಾಮ), ಆರೋಗ್ಯಪೂರ್ಣದೇಹವನ್ನೂ, ಸರ್ವವನ್ನೂ ದಯಪಾಲಿಸು ಹೇ ಶಂಭೋ! ಶಂಕರನೇ!


( ಮೇ) ನನಗೆ, (ಮಹಃ ಚ) ತೇಜಸ್ಸನ್ನೂ (ಮಹ್ಯತೇ ಪೂಜ್ಯತೇ ಇತಿ— ಪೂಜಿಸಲ್ಪಡುತ್ತದೆಂಬುದರಿಂದ), ಸದಾ ಉತ್ಸವದಂತಹ ದಿನವನ್ನೂ (ಮಹ್ಯತೇ ಪೂಜ್ಯತೇ ಅಸ್ಮಿನ್ ಇತಿ— ಇದರಲ್ಲಿ ಪೂಜಿಸಲ್ಪಡುತ್ತದೆ, ಪೂಜಾದಿಗಳು ಮಾಡಲ್ಪಡುತ್ತದೆ), ಯಜ್ಞವನ್ನೂ (ಮಹ್ಯಂತೇ ಪೂಜ್ಯಂತೇ ದೇವಾದಯಃ ಅಸ್ಮಿನ್ ಇತಿ— ಇದರಲ್ಲಿ ದೇವಾದಿಗಳು ಪೂಜಿಸಲ್ಪಡುತ್ತಾರೆ), ಉದಕವನ್ನೂ / ನೀರನ್ನೂ (ವೈದಿಕ ನಿಘಂಟು), ಪೂಜ್ಯತೆಯನ್ನೂ (“ಜಿಹ್ವಾ ಮೇ ಭದ್ರಂ ವಾಕ್-ಮಹೋ ಮನೋ ಮನ್ಯುಃ ಸ್ವರಾತ್ ಭಾಮಃ”— ವಾಜಸನೇಯೀ-ಶುಕ್ಲಯಜುರ್ವೇದ-ಸಂಹಿತಾ; “ವಾಕ್ ವಾಗಿಂದ್ರಿಯಂ ಮಹಃ ಪೂಜ್ಯಮಾನಾ ಅಸ್ತು”— ಇತಿ ತದ್ಭಾಷ್ಯೇ ಮಹೀಧರಃ— ವಾಕ್ಕು ಮಹಃ ಎಂದರೆ ಪೂಜ್ಯಮಾನ / ಯೋಗ್ಯವಾದುದಾಗಲಿ ಎಂದಿದೆ ಮಹೀಧರಭಾಷ್ಯ), ವಿಪುಲತೆಯನ್ನೂ , ರಾಜ್ಯವನ್ನೂ, ಮಹತ್ತ್ವವನ್ನೂ, ಮಹರ್ಲೋಕವನ್ನೂ, ಪರಬ್ರಹ್ಮಜ್ಞಾನ ವನ್ನೂ (“ಮಹ ಇತಿ ಬ್ರಹ್ಮ”— ತೈತ್ತಿರೀಯೋಪನಿಷತ್) ಅನುಗ್ರಹಿಸು ಪರಶಿವನೇ!


(ಮೇ) ನನಗೆ, (ಸಂವಿತ್ ಚ) ಸತ್ಕಾರ್ಯಕ್ಕೆ ಅಂಗೀಕಾರ / ಅನುಮತಿಯನ್ನೂ, ಜ್ಞಾನವನ್ನೂ (ಸಂ + ವಿದ್), ಒಳ್ಳೆಯ ಮಾತನ್ನೂ (ಸಂಭಾಷಾ), ಸದಾಚಾರವನ್ನೂ, ಒಳ್ಳೆಯ ಹೆಸರನ್ನೂ, ಸಂತೋಷವನ್ನೂ, ಯೋಗದ ಚರಮಸ್ಥಿತಿಯಾದ ಸಮಾಧಿಯನ್ನೂ, (ಮೇ) ನನಗೆ, (ಜ್ಞಾತ್ರಂ ಚ) ಜ್ಞಾನಶೀಲತೆಯನ್ನೂ, (ಮೇ) ನನಗೆ (ಸೂಃ ಚ) ಸತ್ಪ್ರೇರಣೆಯನ್ನೂ, ದೇವತಾಪ್ರೀತ್ಯರ್ಥವಾದ ಯಜ್ಞಕ್ಕೆ ಬೇಕಾದ ಸೋಮಲತೆಯು ಹುಟ್ಟುವ ಭೂಭಾಗವನ್ನೂ (ಅಭಿಷೂಯತೇ ಕಂಡ್ಯತೇ ಸೋಮಃ ಅಸ್ಯಾಮ್ ಇತಿ— ಸೂತಿಃ / ಸೂಃ,  ಸೋಮಾಭಿಷವಭೂಮಿಃ), ಜನನವನ್ನೂ / ಹುಟ್ಟನ್ನೂ, ಸಂತಾನವನ್ನೂ, ಗರ್ಭಿಣಿಗೆ ಸುಖಪ್ರಸವವನ್ನೂ, ವಿವಾಹಿತ ಸ್ತ್ರೀಗೆ ಬೇಕಾದಾಗ ಗರ್ಭಕಟ್ಟುವಿಕೆಯನ್ನೂ / ಗರ್ಭಧಾರಣೆಯನ್ನೂ, ಫಲಪುಷ್ಪಾದಿಗಳನ್ನೂ (ಮೇದಿನೀಕೋಷ), ಆಜ್ಞಾಶಕ್ತಿಯನ್ನೂ (“ಮರುತಾಂ ಪ್ರಸವೇನ ಜಯ |”— ವಾಜಸನೇಯ-ಶುಕ್ಲಯಜುರ್ವೇದ-ಸಂಹಿತಾ; “ಹೇ ಧುರ್ಯ! ಮರುತಾಂ ದೇವಾನಾಂ ಪ್ರಸವೇನ ಆಜ್ಞಯಾ ತ್ವಂ ಜಯ ಶತ್ರೂನ್ ಇತಿ ಶೇಷಃ ||” ಇತಿ ತದ್ಭಾಷ್ಯೇ ಮಹೀಧರಃ), ನಿಂದೆಯನ್ನೂ (ಸೂಃ— ಕ್ಷೇಪೇ ಇತಿ ವಾಚಸ್ಪತ್ಯೇ— ನಿಂದಕರಿರಬೇಕು ನಮ್ಮ ಪಾಪ ತಿನ್ನಲು, ಹಾಗಾಗಿ ನಿಂದೆಯನ್ನು ಕೊಟ್ಟು ಪಾಪಕ್ಷಯವನ್ನುಂಟುಮಾಡು), ತ್ಯಾಗವನ್ನೂ, ಅಡೆತಡೆಗಳನ್ನೂ (ನಮ್ಮ ಸತ್ವಪರೀಕ್ಷೆಗಾಗಿ, ನಮ್ಮನ್ನು ಮತ್ತಷ್ಟು ಗಟ್ಟಿಗೊಳಿಸಲು, ನಮ್ಮನ್ನು ಚೆನ್ನಾಗಿ ಸಾಣೆಹಿಡಿದು ಪ್ರಕಾಶಿಸುವಂತೆ ಮಾಡಲು), ಶರವನ್ನೂ / ಬಾಣವನ್ನೂ (ಕ್ಷೇಪಃ— ವಿಕ್ಷೇಪಃ, ಇತಿ ಶಬ್ದಕಲ್ಪದ್ರುಮೇ; ವಿಕ್ಷೇಪಃ— ತ್ಯಾಗೇ, ಪ್ರೇರಣೇ, ದೂರೀಕರಣೇ, ಅಂತರಾಯೇ, ಶರೇ ಚ ಇತಿ ವಾಚಸ್ಪತ್ಯೇ), (ಮೇ) ನನಗೆ, (ಪ್ರಸೂಃ ಚ) ತಾಯಿಯನ್ನೂ, ಕುದುರೆಯನ್ನೂ, ಬಾಳೆಗಿಡವನ್ನೂ, ಕತ್ತರಿಸಿದಷ್ಟೂ ವಿಸ್ತೃತವಾಗಿ ಬೆಳೆಯುವ ವೀರುಧ / ವೀರುತ್ ಲತೆಯನ್ನೂ (ವಿರೋಹತಿ ವಿಶೇಷೇಣ ರುಣದ್ಧಿ ವೃಕ್ಷಾನ್ ಅನ್ಯಾನ್— ಚೆನ್ನಾಗಿ ಮೇಲೇರಿ ಹಬ್ಬಿ, ತಾನಾಶ್ರಯಿಸಿದ ಮರದ ಬೆಳವಣಿಗೆಯನ್ನೇ ತಡೆಯುವಂಥ ಗುಲ್ಮಲತಾದಿ ಬಳ್ಳಿಗಳು; ಔಷಧಿಸಸ್ಯ;  ಪ್ರಸೂಃ— ವೀರುತ್ ಇತಿ ಮೇದಿನೀ— ಶಬ್ದಕಲ್ಪದ್ರುಮೇ), ಹೆರಿಗೆ ಮಾಡಿಸುವವಳನ್ನೂ / ಸೂಲಗಿತ್ತಿಯನ್ನೂ (ಪ್ರಸೂಃ— ಪ್ರಸವಕರ್ತ್ರೀ, ಯಥಾ ಸುಶ್ರುತೇ ಉತ್ತರತಂತ್ರೇ ೩೮ ಅಧ್ಯಾಯೇ ಇತಿ ಶಬ್ದಕಲ್ಪದ್ರುಮೇ) ದಯಪಾಲಿಸು ಪ್ರಭೋ ಉಮಾಪತಿಯೇ! 


( ಮೇ) ನನಗೆ, (ಸೀರಂ ಚ) ಸೂರ್ಯದೇವನ ಕೃಪೆಯನ್ನೂ, ಸೂರ್ಯಲೋಕವನ್ನೂ, ಎಕ್ಕದ ಮರವನ್ನೂ / ಅರ್ಕವೃಕ್ಷವನ್ನೂ, ಹಲ/ನೇಗಿಲನ್ನೂ, ಉಳುಮೆ ಮಾಡಲು ಎತ್ತನ್ನೂ,  ತಿಮಿಂಗಿಲದಂತಹ ಮತ್ಸ್ಯಪ್ರಕಾರವನ್ನೂ, ತಾರಾತ್ಮಕ ಅಚ್ಯುತ ಚಕ್ರವನ್ನೂ / ಮತ್ಸ್ಯಾಕೃತಿಯ ನಕ್ಷತ್ರಪುಂಜಸಹಿತನಾದ ಅನಂತ ಕ್ಷೀರಪಥ (milky way / ಹಾಲುಹಾದಿ / ಆಕಾಶಗಂಗೆ) ಗಳಿಂದ ಕೂಡಿದ ಜಗಚ್ಚಕ್ರಧಾರಿಯಾದ ಎಂದಿಗೂ ಚ್ಯುತಿ / ನಾಶವಿರದ ಅಚ್ಯುತವಾಚ್ಯನಾದ ಮಹಾವಿಷ್ಣುವಿನ ಕೃಪೆಯನ್ನೂ, ಧ್ರುವನ ಪತ್ನಿಯಾದ ಭ್ರಮಿಯ ತಂದೆಯಾದ ಶಿಶುಮಾರನೆಂಬ ಪ್ರಜಾಪತಿಯ ಕೃಪೆಯನ್ನೂ, ಶಿಶುಮಾರಚಕ್ರವೆಂಬ ಶ್ರೀಹರಿಯ ಒಂದು ಯೋಗಶಕ್ತಿಯ ಕೃಪೆಯನ್ನೂ, (ಈ ಚಕ್ರದ ಬಾಲದಲ್ಲಿ ಇಂದ್ರ, ಅಗ್ನಿ, ಕಶ್ಯಪಾದಿಗಳು, ಅದರ ತುದಿಯಲ್ಲಿ ಧ್ರುವನೂ, ಅದರ ಹಿಂಭಾಗದಲ್ಲಿ ಅಜವೀಥಿಯೂ, ಅದರ ಉದರಭಾಗದಲ್ಲಿ ಗಂಗೆಯೂ ಹಾಗೂ ಅದರ ದೇಹದ ವಿವಿಧ ಬಾಹುಭಾಗಗಳಲ್ಲಿ ಎಲ್ಲಾ ನಕ್ಷತ್ರಪುಂಜಗಳೂ, ಗ್ರಹಸಮೂಹಗಳೂ ನೆಲೆಸಿವೆ), ತಾರಾಮಯವಾದ ದೈವಿಕ ಕಾಯದ ಕೃಪೆಯನ್ನೂ (ಈ ಕಾಯದ ಮೇಲ್ದವಡೆಯೇ ಧ್ರುವನ ತಂದೆಯಾದ, ಸ್ವಾಯಂಭುವಮನುವಿನ ಪುತ್ರನಾದ ಉತ್ತಾನಪಾದನು, ಯಜ್ಞವೇ ಇದರ ಕೆಳತುಟಿ, ಧರ್ಮವೇ ಶಿರ, ನಾರಾಯಣನೇ ಹೃದಯ,ಸಾಧ್ಯರು-ಅಶ್ವಿನಿಗಳೇ ಮುಂಗಾಲುಗಳೂ, ವರುಣ-ಅರ್ಯಮರೇ ಹಿಂಗಾಲುಗಳು, ಸಂವತ್ಸರಗಳೇ ಮಕ್ಕಳೂ, ಮಿತ್ರನೇ ಇದರ ದೇಹದ ಅಪಾನವೂ, ಅಗ್ನಿ-ಮಹೇಂದ್ರ-ಮರೀಚಿ-ಕಶ್ಯಪ-ಧ್ರುವರು ಬಾಲವೂ, ಸಮಸ್ತಗ್ರಹಗಳೂ ಧ್ರುವನಲ್ಲೇ / ಧ್ರುವನನ್ನೇ ಕೇಂದ್ರೀಕೃತವಾಗಿಯೂ ಇವೆ), ಶಿಶುಮಾರಪುರ / ದಿಕ್ಕನ್ನೂ (—ಮಹಾಭಾರತ, ಪುರಾಣಗಳ ಆಧಾರದಲ್ಲಿ), ಸಕ್ಕರೆಯನ್ನೂ (ಪಂಚವಿಂಶಬ್ರಾಹ್ಮಣದ ಪ್ರಕಾರ), ಶಿಶುಮಾರ ಋಷಿಯ ಕೃಪೆಯನ್ನೂ (ಪಂಚವಿಂಶ ಬ್ರಾಹ್ಮಣ ಭಾಷ್ಯದಂತೆ) ದಯಪಾಲಿಸು ಹೇ ಭಗವನ್! ಪರಮೇಶ್ವರನೇ!


(ಮೇ) ನನಗೆ, (ಲಯಃ ಚ) ಲಯ / ಕ್ರಮಬದ್ಧವಾದ ಗತಿಯನ್ನೂ, ಅಹಂಭಾವದ ನಾಶ / ಲಯವನ್ನೂ, ಭಗವಂತನ ಅಪ್ಪುಗೆಯನ್ನೂ, ದುರ್ಗುಣಾದಿಗಳ ನಾಶವನ್ನೂ, ಮನೋಲಯಃಸಮಾಧಿಯನ್ನೂ, ಚಿತ್ತವೃತ್ತಿಗಳ ಲಯವನ್ನೂ, ನಿದ್ರೆಯನ್ನೂ, ಭಗವಲ್ಲೀನತೆಯನ್ನೂ, ಆವರಣಾತ್ಮಕತೆಯುಳ್ಳ ಸಂಸಾರವನ್ನೂ, ಅಧರ್ಮದ ನಾಶವನ್ನೂ, ದುಷ್ಟರ ನಾಶವನ್ನೂ, ಕಲಿಯುಗದ / ಅಧರ್ಮದ ಪ್ರಲಯವನ್ನೂ / ಅಂತ್ಯವನ್ನೂ, ಪರಮೇಶ್ವರನ ಕೃಪೆಯನ್ನೂ, ಸಂಗೀತದ ತಾಳ-ರಾಗ-ಲಯವನ್ನೂ (“ಲಯೇನ ವಶ್ಯೋ ಭಗವಾನ್ ಲಯೇ ಲೀನೋ ಜನಾರ್ದನಃ”— ಲಯದಿಂದ ಭಗವಂತನೂ ಒಲಿಯುವನು, ಜನಾರ್ದನನೂ ಲಯದಲ್ಲೇ ತಲ್ಲೀನನಾಗಿರುವನು), (ಮೇ) ನನಗೆ, (ಋತಂ ಚ) ಬಿದ್ದುಹೋದ ಧಾನ್ಯಾದಿಗಳನ್ನೂ (ಉಂಛಶಿಲಮ್), ನೀರನ್ನೂ (ಋಗ್ವೇದೇ ೭.೧೦೧.೬— “ತನ್ಮ ಋತಂ ಪಾತು ಶತಶಾರದಾಯ” | “ಋತಮ್ ಉದಕಮ್ ” ಇತಿ ತದ್ಭಾಷ್ಯೇ), ಪರಮಸತ್ಯವನ್ನೂ, ಸತ್ಕರ್ಮದ ಫಲವನ್ನೂ (“ಋತಂ ಪಿಬಂತೌ ಸುಕೃತಸ್ಯ ಲೋಕೇ”— ಶ್ರುತಿಃ), ವಿಷ್ಣುಕೃಪೆಯನ್ನೂ, ಸೂರ್ಯಾನುಗ್ರಹವನ್ನೂ, ಪರಬ್ರಹ್ಮಾನುಭವಜ್ಞಾನವನ್ನೂ, ಸತ್ಯಾಚಾರವನ್ನೂ (ದಯಾನಂದಋಗ್ಭಾಷ್ಯೇ), ರುದ್ರಾನುಗ್ರಹವನ್ನೂ (ಸಾಮಗಾನಾಂ ಸಂಧ್ಯಾಮಂತ್ರೇ ರುದ್ರೋಪಸ್ಥಾನೇ— “ಋತಮ್ ಇತ್ಯಸ್ಯ ಕಾಲಾಗ್ನೀ ರುದ್ರ ಋಷಿಃ, ಅನುಷ್ಟುಪ್ ಛಂದಃ, ರುದ್ರೋ ದೇವತಾ, ರುದ್ರೋಪಸ್ಥಾನೇ ವಿನಿಯೋಗಃ”), ಬ್ರಹ್ಮಜ್ಞಾನವನ್ನೂ (“ಋತಮ್ ಉಂಛಶಿಲೋ ಜ್ಞೇಯಮ್” ಇತ್ಯುಕ್ತೇ ಬ್ರಾಹ್ಮಣಸ್ಯ ಉಪಜೀವ್ಯವೃತ್ತಿಭೇದೇ— ಬ್ರಹ್ಮಜ್ಞಾನಿಯ ಜೀವನೋಪಾಯವೃತ್ತಿಗಳಲ್ಲೊಂದು ಉಂಛಶಿಲ— ಬಿದ್ದ ಧಾನ್ಯಕಣಗಳನ್ನು ಮಾತ್ರ ಹೆಕ್ಕಿ ಹೊಟ್ಟೆ ಹೊರೆದುಕೊಳ್ಳುವುದು), ಮೋಕ್ಷವನ್ನೂ, ಪ್ರಿಯವಾದ ಹಾಗೂ ಒಳ್ಳೆಯ ಮಾತನ್ನೂ, ಮನಸ್ಸಿನಲ್ಲೂ ಸತ್ಯಭಾವನೆಯನ್ನೂ, ಜ್ಞಾನದೀಪ್ತಿಯನ್ನೂ, ಪೂಜ್ಯತೆಯನ್ನೂ, ಯಜ್ಞದಂಥ ಪವಿತ್ರಕರ್ಮವನ್ನೂ, ಆದಿತ್ಯಲೋಕವನ್ನೂ, ಆದಿತ್ಯಾನುಗ್ರಹವನ್ನೂ, ಋತದೇವನ ಕೃಪೆಯನ್ನೂ, ವಹ್ನಿಯೆಂಬ ಋಷಿಯ ಕೃಪೆಯನ್ನೂ ದಯಪಾಲಿಸು ಹೇ ಪಶುಪತಿಯೇ!


( ಮೇ) ನನಗೆ, (ಅಮೃತಂ ಚ) ಅಮೃತ / ಸುಧೆಯನ್ನೂ, ಜರಾ-ಮರಣವಿಲ್ಲದಿರುವಿಕೆಯನ್ನೂ, ಅಮೃತತ್ತ್ವ / ಮೋಕ್ಷವನ್ನೂ (“ವಿದ್ಯಯಾऽಮೃತಮಶ್ನುತೇ”— ಈಶಾವಾಸ್ಯ / ಯಾಜ್ಞಿಕೀ ಉಪನಿಷತ್), ಪ್ರಾಣವುಳಿಯಲು ಅಗತ್ಯವಾದ ಜಲವನ್ನೂ, ಘೃತವನ್ನೂ (“ಆಯುರ್ವೈ ಘೃತಮ್ ”), ಯಜ್ಞಶೇಷದ್ರವ್ಯವನ್ನೂ (“ಯಜ್ಞಶೇಷೋऽಮೃತಂ ಸ್ಮೃತಮ್ ”), ಬೇಡದೇ ದೊರಕಿದ ಭಿಕ್ಷೆಯನ್ನೂ (“ಮೃತಂ ಸ್ಯಾದ್ಯಾಚಿತಂ ಭೈಕ್ಷ್ಯಮ್ ಅಮೃತಂ ಸ್ಯಾದಯಾಚಿತಮ್ ” ; “ಋತಾಮೃತಾಭ್ಯಾಂ ಜೀವೇತ ”— ಮನುಸ್ಮೃತಿಃ— ಋತ / ಬಿದ್ದ ಧಾನ್ಯಾದಿಗಳು ಹಾಗೂ ಅಮೃತ / ಬೇಡದೇ ಸಿಕ್ಕ ಭಿಕ್ಷೆಯಿಂದ ಸ್ವಾಧ್ಯಾಯ-ಜ್ಞಾನಯಜ್ಞಾದಿಗಳನ್ನು ಮಾಡಿಕೊಂಡು ಬ್ರಾಹ್ಮಣನು / ಬ್ರಹ್ಮವಿದ್ಯಾಸಾಧಕನು ಜೀವಿಸಬೇಕು, ಬದುಕಬೇಕು. ), ಹಾಲನ್ನೂ (ಅದರ ದೇಹಧಾರಕತ್ವಗುಣದಿಂದ), ಔಷಧವನ್ನೂ, ಪಾದರಸವನ್ನೂ, ಅನ್ನವನ್ನೂ (“ಅನ್ನಮೂಲಂ ಹಿ ಜೀವನಮ್ ”— ಜೀವನವು ಅನ್ನಮೂಲವಾದದ್ದು;  ಅನ್ನದಿಂದ, ಅನ್ನಕ್ಕಾಗಿ), ಧನವನ್ನೂ, ಸ್ವರ್ಣವನ್ನೂ (“ಅಗ್ನೌ ಸುವರ್ಣಮ್ ಅಕ್ಷೀಣಮ್”— ಬೆಂಕಿಯಿಂದ ಸುಟ್ಟರೂ ನಾಶವಾಗದ ಗುಣವುಳ್ಳ ಚಿನ್ನವು; “ಅಮೃತಂ ವೈ ಹಿರಣ್ಯಮ್”— ಶತಪಥಬ್ರಾಹ್ಮಣ), ಭಕ್ಷಿಸಲು ಯೋಗ್ಯವಾದ ದ್ರವ್ಯವನ್ನೂ, ಹೃದ್ಯವಾದುದನ್ನೂ, ಸ್ವಾದಭರಿತ ದ್ರವ್ಯವನ್ನೂ, ಅಮೃತತ್ತ್ವಸಾಧಕವಾದ ದ್ರವ್ಯವನ್ನೂ, ಕತ್ತರಿಸಿದಷ್ಟೂ ಸಾಯದೇ ಬೆಳೆಯಬಲ್ಲ ಸುವರ್ಣಗಡ್ಡೆಯನ್ನೂ, ಕಡಿದಷ್ಟೂ ಬೆಳೆಯುವ ಔಷಧಿಯುಕ್ತ ವನಮುದ್ಗವನ್ನೂ /ಕಾಡುಹೆಸ್ರುಕಾಳನ್ನೂ / ಕಾಡುಹಸರನ್ನೂ, ಗರಿಕೆಯನ್ನೂ, ಅಮೃತದಂಥ ಗುಣಗಳಿರುವ ಔಷಧವಾಗಿರುವ ನೆಲ್ಲಿಕಾಯಿಯನ್ನೂ, ಹರೀತಕೀಯನ್ನೂ, ತುಲಸಿಯನ್ನೂ, ಪಿಪ್ಪಲಿಯನ್ನೂ, ಸೂರ್ಯಚಂದ್ರ ಅಮೃತಮಯ ಕಿರಣಗಳನ್ನೂ, ಯಾರ ಕೃಪೆಯಿಂದ ಜರಾಮರಣವಿರದೋ ಅಂತಹ ವಿಷ್ಣುವಿನ ಕೃಪೆಯನ್ನೂ (“ಅಮೃತಃ ಶಾಶ್ವತಃ ಸ್ಥಾಣುಃ”— ವಿಷ್ಣುಸಹಸ್ರನಾಮ), ಅಮೃತಯೋಗ / ಘಳಿಗೆಯನ್ನೂ, ಪರಬ್ರಹ್ಮತ್ವವನ್ನೂ ಅನುಗ್ರಹಿಸು ಹೇ ಜಗದೀಶ್ವರನೇ!


 (ಮೇ) ನನಗೆ, (ಅಯಕ್ಷ್ಮಂ ಚ) ನಿರೋಗತೆಯನ್ನೂ (“ನಾಸ್ತಿ ಯಕ್ಷ್ಮಾ ರೋಗೋ ಯಸ್ಯ”— ಯಾರಿಗೆ ರೋಗವಿಲ್ಲವೋ ಅಂತಹ ನಿರೋಗತ್ವ), ಉಪದ್ರವ-ರಹಿತತೆಯನ್ನೂ / ತೊಂದರೆಯಿಲ್ಲದ ಪರಿಸ್ಥಿತಿ, ಸನ್ನಿವೇಶಗಳನ್ನೂ, ಶ್ವಾಸಕೋಶದ ಕ್ಷಯರೋಗವಿಲ್ಲದಿರುವಿಕೆಯನ್ನೂ, ಯಾವುದೇ ಅಂಗದ ಕ್ಷಯ / ಕ್ಷಯಿಸುವಿಕೆ / ಒಣಗುವಿಕೆ ಅಥವಾ ಶೋಷಣೆಯಿಲ್ಲದಿರುವಿಕೆಯನ್ನೂ, (ಮೇ) ನನಗೆ, (ಅನಾಮಯತ್ ಚ) ಅನಾಮಯತ್ವ / ಅನಾಮಯತೆ / ಆಮವಿಲ್ಲದಿರುವಿಕೆ / ರೋಗವಿಲ್ಲದಿರುವಿಕೆ / ಆರೋಗ್ಯ (“ನಾಸ್ತಿ ಆಮಯೋ ರೋಗೋ ಯಸ್ಯ”— ಇಲ್ಲ ಆಮವು ರೋಗವು ಯಾವನಿಗೋ”) / ದುಃಖವಿಲ್ಲದಿರುವಿಕೆ (“ಜನ್ಮಬಂಧವಿನಿರ್ಮುಕ್ತಾಃ ಪದಂ ಗಚ್ಛಂತ್ಯನಾಮಯಮ್”— ಜನ್ಮಬಂಧನದಿಂದ ಮುಕ್ತರಾಗಿ, ದುಃಖರಹಿತವಾದ ಪದವನ್ನು / ಗತಿಯನ್ನು ಹೊಂದುತ್ತಾರೆ— ಭಗವದ್ಗೀತೆ)/ ವಿಷ್ಣುಪದ (“ಪುಣ್ಯಕೀರ್ತಿರನಾಮಯಃ”— ವಿಷ್ಣುವಾದರೋ ಬಾಹ್ಯಾಭ್ಯಂತರಪೀಡೆಗಳನ್ನು / ತೊಂದರೆಗಳನ್ನು ನಿವಾರಿಸುತ್ತಾನಾದ್ದರಿಂದ ಅನಾಮಯನು— ವಿಷ್ಣುಸಹಸ್ರನಾಮ) / ವೈಕುಂಠ / ಮುಕ್ತಿ / ಶಿವಪದವನ್ನೂ, (ಮೇ) ನನಗೆ, (ಜೀವಾತುಃ ಚ) ಜೀವನೌಷಧವನ್ನೂ (“ಜೀವತಿ ಅನೇನ ಇತಿ”— ಇದರಿಂದ ಬದುಕುತ್ತಾನೆ ಎಂದು), ಜೀವಿತವನ್ನೂ / (ಅಕಾಲ ಮರಣವಾಗದಂಥ) ಜೀವವನ್ನೂ, ಮೃತಸಂಜೀವನೌಷಧವನ್ನೂ, (“ಆಯುರ್ಜೀವಿತಕಾಲೋ ವಾ ಜೀವಾತುರ್ಜೀವನೌಷಧಮ್ ”— ಜೀವಿತಕಾಲವೇ ಆಯುಷ್ಯ, ಬದುಕಿಸುವ ಔಷಧವೇ ಜೀವಾತುವು), ಅನ್ನಾಹಾರವನ್ನೂ, ಅಸ್ತಿತ್ವವನ್ನೂ, ಭಕ್ತ / ಭತ್ತ / ಅನ್ನ / ಧನವನ್ನೂ ಅನುಗ್ರಹಿಸು ಹೇ ದೇವದೇವನೇ!


(ಮೇ) ನನಗೆ, (ದೀರ್ಘಾಯುತ್ವಂ ಚ) ದೀರ್ಘಾಯುಷ್ಯ / ದೀರ್ಘಾಯುಸ್ಸನ್ನೂ, (ಮೇ) ನನಗೆ, (ಅನಮಿತ್ರಂ ಚ) ಅಜಾತಶತ್ರುತ್ವವನ್ನೂ / ಅಮಿತ್ರರಿಲ್ಲದಿರುವಿಕೆಯನ್ನೂ / ವೈರಿಗಳಿರದಿರುವಿಕೆಯನ್ನೂ (ಅನ್ + ಅ + ಮಿತ್ರ— ಅನ್ + ಅಮಿತ್ರ— ಅನ್ + ಶತ್ರು— ಶತ್ರುವಿಲ್ಲದಿರುವಂತೆ), (ಮೇ) ನನಗೆ, (ಅಭಯಂ ಚ) ಅಭಯವನ್ನೂ, ಭಯರಹಿತ ಸ್ಥಿತಿಯನ್ನೂ, ಸದಾ ಧೈರ್ಯವನ್ನೂ (“ಧೈರ್ಯಂ ಸರ್ವತ್ರ ಸಾಧನಮ್ ”— ಧೈರ್ಯವು ಎಲ್ಲಾ ಕಡೆಯಲ್ಲೂ ಯಶಸ್ಸಿಗೆ ಸಾಧನವಾದುದು. ಆದ್ದರಿಂದ, ದಾನಗಳಲ್ಲಿ ಅಭಯದಾನವು ಸರ್ವಶ್ರೇಷ್ಠ. ಭಗವಂತನು ಸದಾ ಅಭಯಮುದ್ರಾಂಕಿತ ಹಸ್ತನು.), (ಮೇ) ನನಗೆ, (ಸುಗಂ ಚ) ಚೆನ್ನಾಗಿ ಗಮನ ಮಾಡುವ / ಸಂಚರಿಸುವ ಶಕ್ತಿಯನ್ನೂ, ಸರಿಯಾದ ಮಲಶೋಧನಾ ಶಕ್ತಿಯನ್ನೂ (“ಸುಷ್ಠು / ಸುಖೇನ ಗಚ್ಛತಿ ನಿರ್ಯಾತಿ ಇತಿ”— ಮಲವಿಸರ್ಜನೆ ಸರಿಯಾದರೆ ಜೀರ್ಣಶಕ್ತಿ ಸರಿಯಿದೆಯೆಂದೂ, ಕರುಳಿನ ಹೀರುವಿಕೆ-ಚಲನೆಗಳೂ ಆರೋಗ್ಯಕರವಾಗಿವೆಯೆಂದೂ, ಪ್ರಾಣ-ಅಪಾನವಾಯುಗಳು ಸರಿಯಾಗಿ ಹೊಂದಾಣಿಕೆಯಿಂದ ಕೆಲಸಮಾಡುತ್ತಿವೆಯೆಂದೂ ಸೂಚಿಸುವುದಲ್ಲದೆ ವ್ಯಕ್ತಿಯ ಆರೋಗ್ಯಕ್ಕೊಂದು ಸೂಚ್ಯಂಕವೂ ಹೌದು), ಸುಖವಾಗಿ ಗಮಿಸಬಲ್ಲ ದೇಶಾದಿಗಳನ್ನೂ (“ಸುಖಗಂತವ್ಯೋ ದೇಶಾದಿಃ”, “ಸುಂದರಗಾಮಿನಿ”), ಚೆನ್ನಾಗಿ ಗಾಯನ ಮಾಡುವ ಕಲೆಯನ್ನೂ (“ಸುಂದರಂ ಗಾಯತಿ ಇತಿ”, “ಶೋಭನಗೀತಶಾಲಿನಿ ಚ”), (ಮೇ) ನನಗೆ, (ಶಯನಂ ಚ) ಸಕಾಲದಲ್ಲಿ ಸಾಕಷ್ಟು ಒಳ್ಳೆಯ ನಿದ್ದೆಯನ್ನೂ, ಉತ್ತಮವಾದ ಆರೋಗ್ಯಕರವಾದ ಹಾಸಿಗೆಯನ್ನೂ, ಒಳ್ಳೆಯ ಮೈಥುನ / ಲೈಂಗಿಕ / ಪತ್ನೀಸಂಭೋಗ ಸುಖವನ್ನೂ, ಸೂಕ್ತವಾದ ನಿದ್ರಾಸ್ಥಳವನ್ನೂ, (ಮೇ) ನನಗೆ, (ಸೂಷಾ ಚ) ಒಳ್ಳೆಯ ಬೆಳಗನ್ನೂ / ಉತ್ತಮ ಜ್ಞಾನಜ್ಯೋತಿಯನ್ನೂ, ವಿಘ್ನರಹಿತ ಮುಂಜಾನೆಯನ್ನೂ, ಸುಖಪ್ರದ ಪ್ರಾತಃಕಾಲವನ್ನೂ (ಸು - ಉಷಾ— ಒಳ್ಳೆಯ ಉಷಃಕಾಲ / ಬೆಳಗ್ಗೆ / ಶುಭೋದಯ / good morning), ಗರ್ಭಿಣಿ ಸ್ತ್ರೀಯರಿಗೆ ಒಳ್ಳೆಯ ಸುಖಪ್ರಸವವನ್ನೂ (“ಸೂಷತಿ ಇತಿ”), (ಮೇ) ನನಗೆ, (ಸುದಿನಂ ಚ) ಸು-ದಿನವನ್ನೂ / ಶುಭದಿನವನ್ನೂ (good day), ಪ್ರಶಸ್ತವಾದ ಹಗಲನ್ನೂ, ಯೋಗ್ಯವಾದ - ವ್ಯರ್ಥವಾಗಿ ಕಳೆದುಹೋಗದ - ಸಾರ್ಥಕ ದಿವಸವನ್ನೂ, ಪುಣ್ಯಪ್ರದವಾದ ದಿನವನ್ನೂ ದಯಪಾಲಿಸು ಹೇ  ಜಗದೊಡೆಯನಾದ ಭಗವಾನ್ ಉಮಾಮಹೇಶ್ವರನೇ! ಚಂದ್ರಮೌಳೀಶ್ವರನೇ! ಪರಮಾತ್ಮನೇ!


೫೫) ರುದ್ರನು ಜಗತ್ತಿನ ಮೊತ್ತಮೊದಲ ಮಹರ್ಷಿಯು ಹೇಗೆ?

ಯೋ ದೇವಾನಾಂ ಪ್ರಥಮಂ ಪುರಸ್ತಾದ್ವಿಶ್ವಾಧಿಯೋ ರುದ್ರೋ ಮಹರ್ಷಿಃ | ಹಿರಣ್ಯಗರ್ಭಂ ಪಶ್ಯತ ಜಾಯಮಾನಗ್ಂ ಸ ನೋ ದೇವಃ ಶುಭಯಾ ಸ್ಮೃತ್ಯಾ ಸಂಯುನಕ್ತು ||


(ಯಃ) ಯಾವ, (ರುದ್ರಃ) ಭಗವಾನ್ ರುದ್ರದೇವನು, (ದೇವಾನಾಮ್) ದೇವತೆಗಳ ಪಂಕ್ತಿಯಲ್ಲಿ, (ಪುರಸ್ತಾತ್) ಮುಂದಿನಿಂದ, (ಪ್ರಥಮಮ್) ಮೊದಲನೆಯವನೂ, (ವಿಶ್ವಾ-ಧಿಯಃ) ಜಗತ್ತಿನ ಸಮಸ್ತ ಜೀವರ ಬುದ್ಧಿ / ವಿಶ್ವಪ್ರಜ್ಞೆಗೆ ಮೂಲನೂ, (ಮಹರ್ಷಿಃ) ವಿಶ್ವಪ್ರಜ್ಞೆ / ಪರಬ್ರಹ್ಮಪ್ರಜ್ಞೆಯನ್ನು ಮೊದಲು ಕಂಡುಕೊಂಡ ಮಹಾನ್ ಋಷಿ / ದಾರ್ಶನಿಕನು. (ಹಿರಣ್ಯಗರ್ಭಮ್) ಜಗತ್ ಸೃಷ್ಟಿಯ ಮೊತ್ತಮೊದಲ ಚಿನ್ನದ ಬಣ್ಣದ ಹಿರಣ್ಯಗರ್ಭವೆಂಬ ಬ್ರಹ್ಮಾಂಡತತ್ತಿ / ಅಂಡಾಕಾರದ ವಿಶ್ವಮೂಲಕಾಯವನ್ನು / ಹಿರಣ್ಯಗರ್ಭನೆಂದು ಕರೆಯಲ್ಪಟ್ಟ ಸೃಷ್ಟಿಕರ್ಮವನ್ನು ಮಾಡುವ ಮೊದಲ ಪ್ರಜಾಪತಿಯೆನಿಸಿದ ಚತುರ್ಮುಖ ಬ್ರಹ್ಮನನ್ನು, (ಜಾಯಮಾನಮ್ ಪಶ್ಯತ) ಹುಟ್ಟುವಾಗಲೇ ನೋಡಿದಂತಹ (ಅಥವಾ ಆ ಜಗತ್ಕಾರಣನಾದ ಹಿರಣ್ಯಗರ್ಭನೂ ಆದಂತಹ ಪರಶಿವನನ್ನು ನೋಡಿರಿ), (ಸಃ ದೇವಃ) ಆ ಜ್ಯೋತಿರ್ಮಂಡಲಯುಕ್ತನಾಗಿ ಬೆಳಗುವ ದೇವದೇವನು, (ನಃ— ಅಸ್ಮಾನ್) ನಮ್ಮನ್ನು, (ಶುಭಯಾ ಸ್ಮೃತ್ಯಾ) ಮಂಗಲಕರವಾದ, ಮಂಗಲಮಯವಾದ ಸ್ಮೃತಿಯೊಂದಿಗೆ /  ನೆನಪುಶಕ್ತಿಯೊಂದಿಗೆ / ಉತ್ತಮ ಧಾರಣಾಶಕ್ತಿಯೊಂದಿಗೆ / ಆ ಪರಶಿವನ ಮಂಗಲತಮವಾದ ಸ್ಮರಣೆಯೊಂದಿಗೆ, (ಸಂ-ಯುನಕ್ತು) ಸದಾ, ಸತತವೂ, ನಿರಂತರವಾಗಿ, ಎಡೆಬಿಡದೆ, ಚೆನ್ನಾಗಿ ಸಂಯೋಜಿಸಲಿ / ಸೇರಿಸಲಿ. ಅರ್ಥಾತ್, ನಮ್ಮ ಮನಬುದ್ಧಿಗಳನ್ನು ಸದಾ ಭಗವಂತನ ಚಿಂತನೆಗಳೊಂದಿಗೆ ಸೇರಿಸಲಿ / ಸದಾ ಭಗವತ್ ಸ್ಮರಣೆ ನಮಗಿರುವಂತೆಯೂ, ಭಗವತ್ ಪ್ರತಿಪಾದ್ಯ ವೇದ-ಶಾಸ್ತ್ರಾದಿಗಳ ಅರ್ಥಾನುಸಂಧಾನಪೂರ್ವಕವಾದ ಸ್ಮರಣೆಯು ಚಿರವಾಗಿ ನಮ್ಮ ಬುದ್ಧಿಯಲ್ಲಿ ನೆಲೆನಿಲ್ಲಲಿ.


ಇತಿ ರುದ್ರಪೀಠಿಕಾ


ಇಲ್ಲಿಗೆ ರುದ್ರಪೀಠಿಕೆಯು ಮುಗಿಯಿತು. 


(ಇಲ್ಲಿಯವರೆಗಿನ ಮಂತ್ರಭಾಗವನ್ನು ರುದ್ರಪೀಠಿಕೆಯೆಂದೂ, ಇನ್ನು ಮುಂದಿನದ್ದನ್ನು ಲಘುನ್ಯಾಸವೆಂದೂ ಕರೆಯುವ ಒಂದು ವಾಡಿಕೆ  / ಸಂಪ್ರದಾಯ / ಪದ್ಧತಿ / ಪರಂಪರೆ / ರೂಢಿ / ಕ್ರಮವೂ ಇದೆ.)

Comments

Popular posts from this blog

ಲಘುನ್ಯಾಸದ ಬೆಳಕಿನಲ್ಲಿ ಶಿವದರ್ಶನ ೧೩—ಲಘುನ್ಯಾಸಮನ್ತ್ರಾರ್ಥವಿಚಾರ ೮

ಲಘುನ್ಯಾಸದ ಬೆಳಕಿನಲ್ಲಿ ಶಿವದರ್ಶನ ೯—ಲಘುನ್ಯಾಸಮಂತ್ರಾರ್ಥವಿಚಾರ ೪

ತೈತ್ತಿರೀಯಕೃಷ್ಣಯಜುಸ್ಸಂಹಿತಾಭಾಷ್ಯಾರ್ಥಸಮುಚ್ಚಯಃ ೧.೧.೪