ಲಘುನ್ಯಾಸದ ಬೆಳಕಿನಲ್ಲಿ ಶಿವದರ್ಶನ ೧೨—ಲಘುನ್ಯಾಸಮಮಂತ್ರಾರ್ಥವಿಚಾರ ೭
ಲಘುನ್ಯಾಸಭಾಷ್ಯಮ್ ೭
೮೪) ಶಿವನ ಅಷ್ಟಮೂರ್ತಿಗಳ ಪತ್ನಿಯರು ಯಾರು?
ಓಂ ಭವಸ್ಯ ದೇವಸ್ಯ ಪತ್ನ್ಯೈ ನಮಃ | ಅರ್ಕಪುಷ್ಪಂ ಸಮರ್ಪಯಾಮಿ ||
ಭವಸಾಗರತಾರಕನಾದ ಭವನಾಮಕ ಪರಮೇಶ್ವರನ ಪತ್ನಿಯಾದ ಭವಾನೀದೇವಿಗೆ (ಸುವರ್ಚಲಾದೇವಿಗೆ) ಕೋಟಿಕೋಟಿ ನಮನಗಳು. ಆ ಭವತಾರಿಣಿಯಾದ ಜಗನ್ಮಾತೆಗೆ ಜ್ಞಾನಸೂರ್ಯನನ್ನು ನಮ್ಮೊಳಗೆ ಬೆಳಗಿಸಿ, ಭವಸಾಗರದಿಂದ ನಮ್ಮನ್ನು ಪಾರುಮಾಡಲೋಸುಗ, ಅರ್ಕಪುಷ್ಪ (ಅರ್ಕ=ಸೂರ್ಯ) / ಎಕ್ಕದ ಹೂವನ್ನು ಶ್ರದ್ಧಾಭಕ್ತಿಗಳಿಂದ ಸಮರ್ಪಿಸುತ್ತೇನೆ.
ಓಂ ಶರ್ವಸ್ಯ ದೇವಸ್ಯ ಪತ್ನ್ಯೈ ನಮಃ | ಚಂಪಕಪುಷ್ಪಂ ಸಮರ್ಪಯಾಮಿ ||
ಲೋಕಪ್ರಲಯಕಾರಕನೂ, ಭಕ್ತರ ಪಾಪನಾಶಕಾರಕನೂ ಆಗಿ ಶರ್ವನೆನಿಸಿದ ಸದಾಶಿವನ ಪತ್ನಿಯಾದ ‘ಶರ್ವಾಣೀ’ದೇವಿಗೆ (ಉಷಾದೇವಿಗೆ) ಅನಂತಾನಂತ ನಮಸ್ಕಾರಗಳು. ಆ ಜಗಜ್ಜನನಿಗೆ ಪರಿಮಳಯುಕ್ತವಾದ / ಸುವಾಸನೆಯಿಂದ ಕೂಡಿದ ಸಂಪಿಗೆ ಹೂವನ್ನು, ನಮ್ಮ ಚಿತ್ತಕಲ್ಮಷಗಳ ದುರ್ಗಂಧದ ಲಯ / ನಾಶಕ್ಕಾಗಿ, ಪೂರ್ವಾಚರಿತ ಪಾಪಲಯಕ್ಕಾಗಿ ಹಾಗೂ ಆತ್ಯಂತಿಕವಾಗಿ ಸಂಪೂರ್ಣಚಿತ್ತಲಯದ ಮೂಲಕ ಪುಣ್ಯಾಪುಣ್ಯವರ್ಜನೆಗಾಗಿ, ತ್ರಿಗುಣಾತೀತತೆ ಮತ್ತು ಆತ್ಮಜ್ಞಾನ / ಬ್ರಹ್ಮಜ್ಞಾನಕ್ಕಾಗಿ / ದುಃಖಾದಿಗಳಿಲ್ಲದ ಶಾಶ್ವತಾನಂದಕ್ಕಾಗಿ, ಆದರಪೂರ್ವಕ ಸಮರ್ಪಿಸುತ್ತಿದ್ದೇನೆ.
ಓಮ್ ಈಶಾನಸ್ಯ ದೇವಸ್ಯ ಪತ್ನ್ಯೈ ನಮಃ | ಪುನ್ನಾಗಪುಷ್ಪಂ ಸಮರ್ಪಯಾಮಿ ||
ಈಶಾನ್ಯದಿಶಾಧಿಪತಿಯಾದ, ಸಕಲ ವಿದ್ಯೆಗಳ ಗುರುವಾದ / ಅಧಿಪತಿಯಾದ ರುದ್ರಭಗವಂತನ ಈಶಾನಮೂರ್ತಿಯ ಪತ್ನಿಯೆನಿಸಿದ ಐಶಾನೀಗೆ ಅಥವಾ ಈಶಪತ್ನಿಯಾದ ಈಶಾನೀಗೆ (ಸುಕೇಶೀದೇವಿಗೆ) ನಮಸ್ಕಾರವು. ಹೇ ಐಶಾನೀ ದುರ್ಗೆಯೆ! ಜಗಜ್ಜನನಿಯೆ!! ನಿನಗೆ ಪುನ್ನಾಗ / ಸುರಹೊನ್ನೆಯ ಹೂವನ್ನು ನಿನ್ನ ದಾಸನಾದ, ಪುತ್ರನಾದ ನಾನು ಭಕ್ತ್ಯಾದರಾತಿಶಯಗಳಿಂದ ಸಮರ್ಪಣೆ ಮಾಡುತ್ತೇನೆ. ಸುರರ ಮೂಲಕ ಧರ್ಮವನ್ನೂ, ತನ್ಮೂಲಕ ಲೋಕವನ್ನೂ ರಕ್ಷಿಸು. ಪುತ್ ಎಂಬ ನರಕದ ನಾಗಬಂಧನದಂಥ ಬಂಧನವಾಸದಿಂದ ನಮ್ಮನ್ನು ಪಾರುಮಾಡು.
ಓಂ ಪಶುಪತೇರ್ದೇವಸ್ಯ ಪತ್ನ್ಯೈ ನಮಃ | ನಂದ್ಯಾವರ್ತಪುಷ್ಪಂ ಸಮರ್ಪಯಾಮಿ ||
ಸಕಲ ಚರಾಚರಗಳ ಸ್ವಾಮಿಯಾಗಿ ಪಶುಪತಿಯೆನಿಸಿದ ಭಗವಾನ್ ಶಂಕರನ ಅರ್ಧಾಂಗಿನಿಯಾದ ಪಾರ್ವತಿಗೆ (ಶಿವಾದೇವಿಗೆ / ಶಿವೆಗೆ) ನಮನ. ನಂದಿವಾಹನನ ಪತ್ನಿಯಾದ ನಿನಗೆ ನಂದಿಬಟ್ಟಲು ಹೂವನ್ನು ಎಂದೂ ನಂದದ ಆನಂದಪ್ರಾಪ್ತಿಗಾಗಿ ಸಮರ್ಪಿಸುತ್ತಿರುವೆ. ಇದರಿಂದ ನೀನೂ ಪ್ರಸನ್ನಳಾಗು; ನಮಗೂ ಸದಾನಂದವನ್ನು, ಪರಮಾನಂದವನ್ನು ನೀಡು. ಪುನರಾವೃತ್ತಿಯಿಲ್ಲದ ಮೋಕ್ಷವನ್ನು ಅನುಗ್ರಹಿಸು.
ಓಂ ರುದ್ರಸ್ಯ ದೇವಸ್ಯ ಪತ್ನ್ಯೈ ನಮಃ | ಪಾಟಲೀಪುಷ್ಪಂ ಸಮರ್ಪಯಾಮಿ ||
ಅಗ್ನಿರೂಪನೂ ಆದ ರುದ್ರದೇವರ ಪತ್ನಿಯಾದ ರುದ್ರಾಣಿಗೆ (ಸ್ವಾಹಾದೇವಿಗೆ) ನಮಸ್ಕಾರ. ಪಾಟಲೀ / ಪಾದರಿ / ಕುಲಾದ್ರಿ ಪುಷ್ಪವನ್ನು ನಿನಗೆ ಸಮರ್ಪಿಸುವೆ. ಇದರಿಂದ ನಮ್ಮ ಬದುಕಿನ / ದೇಹ-ಇಂದ್ರಿಯ-ಮನ-ಬುದ್ಧಿಗಳ ಪಾಟವ / ಸಾಮರ್ಥ್ಯ ವರ್ಧಿಸಲಿ. ನಮ್ಮ ಪಾದಗಳು ಸದಾ ನಿನ್ನ ತೀರ್ಥಕ್ಷೇತ್ರಗಳನ್ನು ಸ್ಪರ್ಶಿಸಲಿ. ನಮ್ಮ ಕುಲಗಳು ಪಾವನವಾಗಿ, ವರ್ಧಿಸಲಿ.
ಓಮ್ ಉಗ್ರಸ್ಯ ದೇವಸ್ಯ ಪತ್ನ್ಯೈ ನಮಃ | ಬೃಹತೀಪುಷ್ಪಂ ಸಮರ್ಪಯಾಮಿ ||
ಉಗ್ರಸ್ವರೂಪಿಯಾದ ಮಹಾದೇವ ರುದ್ರನ ಪತ್ನಿಯಾದ ಉಗ್ರಾಣೀದೇವಿಗೆ / ಉಗ್ರಾದೇವಿಗೆ (ದಿಶಾದೇವಿಗೆ) ನಮಸ್ಕಾರ. (ಶಿವಃ— ಶಿವಾನೀ; ರುದ್ರಃ— ರುದ್ರಾಣೀ; ರಕಾರ / ರೇಫ ಬಂದಕಾರಣ ನಕಾರವು ಣಕಾರವಾಗಿದೆ. ಕರ್ನಾಟಕ ✘ ; ಕರ್ಣಾಟಕ ✔) ಮುಳ್ಳುಗಳಿರುವುದರಿಂದ ತನ್ನನ್ನು ಸ್ಪರ್ಶಿಸುವವರಿಗೆ ಉಗ್ರಸ್ವರೂಪವಾದ ಬೃಹತೀ / ಕುದನೆ / ಕಾಟುಕಾಯಿ ಗಿಡದ ಹೂವನ್ನು ಉಗ್ರಾಣೀದೇವಿಗೆ ಸಮರ್ಪಿಸುತ್ತೇನೆ. ಇದರಿಂದ ನಮ್ಮ ಲೌಕಿಕ-ಪಾರಮಾರ್ಥಿಕ ಪ್ರಗತಿಯು ಬೃಹತ್ತಾಗಿ ವರ್ಧಿಸಲಿ.
ಓಂ ಭೀಮಸ್ಯ ದೇವಸ್ಯ ಪತ್ನ್ಯೈ ನಮಃ | ಕರವೀರಪುಷ್ಪಂ ಸಮರ್ಪಯಾಮಿ ||
ಭೀಮದೇವನೆಂಬ ಹೆಸರುಳ್ಳ ಮಹಾಕಾಯನೂ, ಮಹಾಬಲನೂ ಆದ ಭಗವಾನ್ ಶಂಕರನ ಪತ್ನಿಯಾದ ಭೀಮಾದೇವಿಗೆ (ದೀಕ್ಷಾದೇವಿಗೆ) ನಮನಗಳು. ತನ್ನ ಬಾಹುಬಲದಲ್ಲಿ ಅತಿವೀರ್ಯವಂತನಾದ, ಕರಗಳಿಂದ ವೀರಾಯುಧಗಳನ್ನು ಧರಿಸಿ ಶತ್ರುಸಂಹಾರಕನಾದ ದೇವ ಶಂಭುವಿನ ಪತ್ನಿಗೆ ಕರವೀರಸುಮವನ್ನು ಸಮರ್ಪಣೆ ಮಾಡುತ್ತೇನೆ. ಇದರಿಂದ ನನ್ನ ಕರಗಳೂ ವೀರ್ಯವತ್ತಾಗಲಿ, ಪುಣ್ಯಕರ್ಮಿಗಳಾಗಲಿ, ಲೋಕೋಪಕಾರಕಗಳಾಗಲಿ, ಧರ್ಮರಕ್ಷಕಗಳಾಗಲಿ; ಎಂದಿಗೂ ಸತ್ಕಾರ್ಯಗಳಲ್ಲಿ ಕೈಗಳಿಗೆ ಹಿಂಜರಿಕೆ ಬಾರದಿರಲಿ. ದುಷ್ಕಾರ್ಯಗಳತ್ತ ಪ್ರವರ್ತಿಸದಿರಲಿ.
ಓಂ ಮಹತೋ ದೇವಸ್ಯ ಪತ್ನ್ಯೈ ನಮಃ | ದ್ರೋಣಪುಷ್ಪಂ ಸಮರ್ಪಯಾಮಿ ||
ಮಹಾದೇವನ ಪತ್ನಿಯಾದ ಮಹಾದೇವಿಯೆನಿಸಿದ ಪಾರ್ವತೀದೇವಿಗೆ (ರೋಹಿಣೀದೇವಿಗೆ) ನಮನಗಳು. ದ್ರೋಣವೆಂದರೆ ಅಳತೆಯ ಒಂದು ಮೂಲಮಾನ, ಕಾಷ್ಠನಿರ್ಮಿತ / ಮರದ ಕಟ್ಟಿಗೆಯ ಕಲಶ / ರಥ. ಪಾರ್ವತಿಯ ಕೀರುತಿಯನ್ನು ಸಾರುತ್ತಾ, ಮನಸಾ ದಾರುಮಯರಥದಲ್ಲಿ ಆಕೆಯನ್ನು ಮಹಾದೇವಸಹಿತವಾಗಿ ಉತ್ಸವೋಪಾಧಿಯಲ್ಲಿ ಜನಸ್ತೋಮದ ನಡುವೆ ಮೆರವಣಿಗೆಯಲ್ಲಿ ಕರೆದೊಯ್ಯುತ್ತಾ, ಭಕ್ತ್ಯಾದರಶ್ರದ್ಧೆಗಳಿಂದ ದ್ರೋಣಪುಷ್ಪವನ್ನು ಸಮರ್ಪಿಸುತ್ತೇನೆ. “ದ್ರವತೀತಿ ದ್ರೋಣಃ”, “ರುದಾನ್ ದ್ರಾವಯತಿ ಇತಿ ರುದ್ರಃ”— ಎಂಬಂತೆ, ನಿನ್ನಲ್ಲೇ ಶರಣಾಗಿ ಕರಗಿ ಮನಸಾ ಲೀನವಾಗಿ ಹೋಗುವೆನು ಎಂಬ ಸದ್ಭಾವದಿಂದ ಜಗನ್ಮಾತಾಪಿತರನ್ನು ಭಕ್ತಿಯಿಂದ (“ವಾಗರ್ಥಾವಿವ ಸಂಪೃಕ್ತೌ ವಾಗರ್ಥಪ್ರತಿಪತ್ತಯೇ | ಜಗತಃ ಪಿತರೌ ವಂದೇ ಪಾರ್ವತೀಪರಮೇಶ್ವರೌ ||”— ಮಾತು ಮತ್ತು ಅರ್ಥಗಳು ಹೇಗೆ ಒಂದನ್ನೊಂದು ಅಗಲಿರಲಾರವೋ ಹಾಗೆಯೇ ಒಂದಿಗಿರುವ ಜಗದ ಮಾತಾಪಿತೃಗಳಾದ ಪಾರ್ವತೀಪರಮೇಶ್ವರರನ್ನು, ಸಕಲ ವೇದಶಾಸ್ತ್ರಾದಿಗಳ ಅರ್ಥಗಳ ಸಿದ್ಧಿಗಾಗಿ / ಪ್ರಾಪ್ತಿಗಾಗಿ / ಪ್ರತಿಪತ್ತಿಗಾಗಿ / ನಿಷ್ಪತ್ತಿಗಾಗಿ ವಂದಿಸುತ್ತೇನೆ ಎಂಬಂತೆ) ಲಘುನ್ಯಾಸ, ರುದ್ರ, ಚಮಕ, ಪುರುಷಸೂಕ್ತ, ಶಿವಸಹಸ್ರನಾಮ, ಅಭಿಷೇಕ, ಷೋಡಶೋಪಚಾರಾದಿ ಸಕಲವಿಧಗಳಿಂದ (“ಅಲಙ್ಕಾರಪ್ರಿಯೋ ವಿಷ್ಣುಃ, ಅಭಿಷೇಕಪ್ರಿಯಃ ಶಿವಃ | ನಮಸ್ಕಾರಪ್ರಿಯೋ ಭಾನುಃ ಬ್ರಾಹ್ಮಣೋ ಮಧುರಪ್ರಿಯಃ ||”) ಅರ್ಚಿಸುತ್ತೇನೆ.
೮೫) ಶಿವತರ್ಪಣದ ಮಂತ್ರಗಳಾವುವು?
ಅಥ ತರ್ಪಣಮ್ ||
ಓಂ ಭವಂ ದೇವಂ ತರ್ಪಯಾಮಿ ||
“ಭವತಿ ಅಸ್ಮಾದ್ ಇತಿ, ಭೂಯತೇ ಅನೇನ ಇತಿ ವಾ ಭವಃ ಶಿವಃ”— ಈತನಿಂದಲೇ ಈ ಭವ / ಸಂಸಾರ / ಸೃಷ್ಟಿ / ಜನ್ಮ ಉಂಟಾಗುತ್ತದೆಂಬುದರಿಂದಾಗಿ ಸದಾಶಿವ / ಪರಶಿವ ನು ಭವನೆನಿಸಿದನು. ಅಂತಹ ದೇವದೇವನಾದ, ಭವನಾಮಕನಾದ, ಕ್ಷೀರಸಾಗರಮಥನೋದ್ಭೂತ ಕಾಲಕೂಟ / ಹಾಲಾಹಲವೆಂಬ ಮಹಾವಿಷವನ್ನುಂಡು ಲೋಕರಕ್ಷಕನೆನಿಸಿ ಅದರ ತಾಪವನ್ನು ತಣಿಸಲೋ ಎಂಬಂತೆ ಅಭಿಷೇಕಪ್ರಿಯನಾದ, ಪರಾತ್ಪರ ಪರಮೇಶ್ವರನನ್ನು ತೃಪ್ತಿಪಡಿಸುತ್ತೇನೆ / ಜಲತರ್ಪಣದ ಮೂಲಕ ಪ್ರಸನ್ನೀಕರಿಸುತ್ತೇನೆ.
ಓಂ ಶರ್ವಂ ದೇವಂ ತರ್ಪಯಾಮಿ ||
“ಶೃಣಾತಿ ಸಂಹರತಿ ವಾ ಸರ್ವಪಾಪಾನ್, ಪ್ರಲಯೇ ಸರ್ವಾನಪಿ ಚ ಇತಿ ಶರ್ವಃ” ಎಂಬರ್ಥದ ‘ಶೄ ಹಿಂಸಾಯಾಮ್’ ಧಾತುಜನ್ಯವಾದುದು ಶರ್ವಶಬ್ದ. ಸಕಲದುರಿತಹರನೂ, ಪ್ರಲಯಕಾಲದಲ್ಲಿ ಸರ್ವಸಂಹಾರಕನೂ ಆಗಿ ಶರ್ವನೆನಿಸಿದ ಮಹಾದೇವ ಶಂಭುವನ್ನು ಜಲತರ್ಪಣಾದಿ ಸತ್ಕರ್ಮಗಳ ಮೂಲಕ ತೃಪ್ತಿಪಡಿಸುತ್ತೇನೆ.
ಓಮ್ ಈಶಾನಂ ದೇವಂ ತರ್ಪಯಾಮಿ ||
“ಈಶ್+ತಾಚ್ಛೀಲ್ಯವಯೋವಚನಶಕ್ತಿಷು ಚಾನಶ್”— ಎಂಬಂತೆ ‘ಈಶ್ ಐಶ್ವರ್ಯೇ’ ಧಾತುಜನ್ಯವಾದ ಈಶಾನಶಬ್ದವು ಈಶ್ವರತ್ವ / ಒಡೆತನ ಎಂಬುದರ ವಾಚಕವಾಗಿದೆ. ಆ ಪ್ರಭುಶೀಲತೆಯು / ಪ್ರಭುತ್ವಗುಣವು ಆತನ ವಯಸ್ಸು / ಹಿರಿತನ, ಮಾತು / ಆಜ್ಞೆ, ಶಕ್ತಿ / ಸಾಮರ್ಥ್ಯಗಳೆಲ್ಲದರಲ್ಲಿ ಲೋಕಸೀಮಾತೀತವಾಗಿರುವುದರಿಂದ ಆತನು ಈಶಾನನು. ಅಂತಹ ಈಶಾನ್ಯದಿಗಧಿಪತಿಯೂ ಆದ ದೇವ ಪರಮೇಶ್ವರನನ್ನು ಪ್ರಸನ್ನಗೊಳಿಸುತ್ತೇನೆ, ಅಭಿಷೇಕ-ಪೂಜಾದಿ ಸೇವೆಗಳಿಂದ ತೃಪ್ತಿಪಡಿಸುತ್ತೇನೆ.
ಓಂ ಪಶುಪತಿಂ ದೇವಂ ತರ್ಪಯಾಮಿ ||
“ತೃಪ ಪ್ರೀಣನೇ” ಧಾತುಜನ್ಯವಾದದ್ದು ತರ್ಪಯಾಮಿ ಎಂಬ ಕ್ರಿಯಾಪದ. ಹೀಗಾಗಿ ತರ್ಪಣವೆಂದರೆ ಪ್ರಿಯವನ್ನುಂಟುಮಾಡುವಿಕೆ, ತೃಪ್ತಿಯನ್ನುಂಟುಮಾಡುವಿಕೆ ಎಂದರ್ಥ. “ಪಶೂನಾಂ ಸ್ಥಾವರಜಙ್ಗಮಾನಾಂ ಜೀವಾನಾಂ ವಾ ಪತಿಃ ಪಶುಪತಿಃ ಶಿವಃ”— ಸಮಸ್ತ ಚರಾಚರಸೃಷ್ಟಿಯ / ಸಕಲ ಜೀವಿಗಳ ಪತಿಯೇ ಪಶುಪತಿನಾಮಕನಾದ ಪರಶಿವನು.
“ಬ್ರಹ್ಮಾದ್ಯಾಃ ಸ್ಥಾವರಾನ್ತಾಶ್ಚ ಪಶವಃ ಪರಿಕೀರ್ತಿತಾಃ |
ತೇಷಾಂ ಪತಿರ್ಮಹಾದೇವಃ ಸ್ಮೃತಃ ಪಶುಪತಿಃ ಶ್ರುತೌ ||”
(ಚಿಂತಾಮಣಿ)
ಬ್ರಹ್ಮಾದಿಸ್ತಂಭಪರ್ಯನ್ತವಾದ ಸಕಲ ಚರಾಚರಗಳೂ ಪಶುಗಳೆನಿಸಿವೆ. ಅವೆಲ್ಲದರ ಪತಿಯಾದ ಮಹಾದೇವನು ಪಶುಪತಿಯೆಂದು ವೇದಗಳಲ್ಲಿ ಸ್ಮೃತನಾಗಿರುವನು / ಸ್ಮರಿಸಲ್ಪಟ್ಟಿರುವನು.
“ಅಯಂ ಚ ಸರ್ವವಿದ್ಯಾನಾಂ ಪತಿರಾದ್ಯಃ ಸನಾತನಃ |
ಅಯಂ ವೈ ಪತಿಭಾವೇನ ಪಶುಮಧ್ಯೇ ವ್ಯವಸ್ಥಿತಃ |
ಅತಃ ಪಶುಪತಿರ್ನಾಮಾಯಂ ಲೋಕೇ ಖ್ಯಾತಿಮೇಷ್ಯಸಿ ||”
(ವರಾಹಪುರಾಣ)
ಈತನೇ ಸಕಲವಿದ್ಯೆಗಳ ಆದಿಮಗುರುವು, ಮೊದಲ ಒಡೆಯನು, ಸನಾತನನು. ಈತನೇ ಪಶುಭಾವ / ಜೀವಭಾವದಿಂದ ಸಕಲ ಚರಾಚರಗಳೊಳಗೆ ವ್ಯಾಪಿಸಿರುವನು. ಹಾಗಾಗಿ, ಜಗದಲ್ಲಿ ಪಶುಪತಿಯೆಂಬ ಹೆಸರಿನ ಈತನು ಪ್ರಖ್ಯಾತಿಯನ್ನು ಹೊಂದುವನು ಎಂದಿದೆ ವರಾಹಪುರಾಣ.
“ಪಶುಪತಯೇ ಯಜಮಾನಮೂರ್ತಯೇ ನಮಃ ||” ಎಂದಿದೆ ಅಷ್ಟಮೂರ್ತಿಪೂಜಾವಿಚಾರದಲ್ಲಿ ಭವಿಷ್ಯಪುರಾಣ. ಹೀಗಾಗಿ, ಮನೆಗೆ / ಕುಟುಂಬಕ್ಕೆ ಹೇಗೆ ಯಜಮಾನನು ಪತಿಯೋ ಅಂತೆಯೇ ಸಕಲ ಚರಾಚರಗಳ ಪತಿಯಾಗಿರುವ ಪಶುಪತಿನಾಮಕ ಶಿವನು ಯಜಮಾನಮೂರ್ತಿಯಾಗಿ ಉಪಾಸಿಸಲ್ಪಡುವನೆಂಬುದು ಭವಿಷ್ಯಪುರಾಣದ ಮತ.
ಸಂಸಾರಿಗಳ / ಜೀವರ ಆತ್ಮವು ಪಾಂಚಭೌತಿಕಶರೀರದೊಳಗೆ ಬಂಧಿಸಲ್ಪಟ್ಟು ಪಶುವೆನಿಸಿದೆ. ಅಂತಹ ಸಕಲ ಜೀವಾತ್ಮರ ಪತಿಯೇ ಪಶುಪತಿಯು.
ಪಶುವೆಂದರೆ ಯಜ್ಞವೆಂಬ ಅರ್ಥವೂ ಇದ್ದು, ಪಶುಪತಿಯು ಯಜ್ಞೇಶ್ವನಾಗಿರುವನು.
ಸಾಧಕರ ಭಾವತ್ರಯದಲ್ಲಿ ಮೊದಲನೆಯದೇ ಪಶುಭಾವವು. ಅಂತಹ ಈಶ-ಜೀವವೆಂಬ ಪಶುಭಾವದ ಸಾಧಕರ ಪತಿಯೇ ಪಶುಪತಿಯು. ನೇಪಾಲದ ರಾಜಧಾನಿಯಾದ ಕಾಠ್ಮಂಡುವಿನಲ್ಲಿ ಜಗತ್ಪ್ರಸಿದ್ಧವಾದ ಪಶುಪತಿನಾಥನ ಬೃಹತ್ ಮಂದಿರವಿದೆ.
ಅಂತಹ ಪಶುಪತಿಯೆನಿಸಿದ ಭಗವಾನ್ ಶಂಕರನನ್ನು ಜಲತರ್ಪಣಾದಿಗಳಿಂದ ಪ್ರಸನ್ನಗೊಳಿಸುತ್ತೇನೆ.
ಓಂ ರುದ್ರಂ ದೇವಂ ತರ್ಪಯಾಮಿ ||
ದುಃಖಿಗಳ ಕಣ್ಣೊರೆಸುವ, ರೋದಿಸುತ್ತಿರುವವರ ರೋದನದ ಕಾರಣವನ್ನು ಬಹುಬೇಗನೆ ಪರಿಹರಿಸಬಲ್ಲ ಭಗವಾನ್ ರುದ್ರದೇವನನ್ನು ಜಲತರ್ಪಣಾದಿಗಳಿಂದ ತೃಪ್ತಿಪಡಿಸುತ್ತೇನೆ.
ಭಗವಾನ್ ಶಂಕರನು ತನ್ನ ಭಕ್ತರ ಮೊರೆಗೆ ಬಹುಬೇಗ ಪ್ರಸನನ್ನಾಗಿ / ಕರಗಿ ಸ್ಪಂದಿಸುವ ದೇವದೇವನು. ಹಾಗಾಗಿಯೇ ಆತನು “ಆಶು-ತೋಷ”ನೆಂದು ಪ್ರಸಿದ್ಧನು. (ಆಶು— ತತ್-ಕ್ಷಣ, ಶೀಘ್ರ; ತೋಷ— ಸಂತೋಷ, ಪ್ರಸನ್ನನಾಗುವಿಕೆ. ಇನ್ನು, ರುದ್ರ ಶಬ್ದಕ್ಕೆ ಬಹಳಷ್ಟು ನಿರ್ವಚನಗಳಿದ್ದು, ಅವುಗಳಲ್ಲಿ ಹಲವನ್ನು ಹಿಂದೆಯೇ ಚರ್ಚಿಸಿದ್ದೇವೆ.)
ಓಮ್ ಉಗ್ರಂ ದೇವಂ ತರ್ಪಯಾಮಿ ||
ದುಷ್ಟರ ಪಾಲಿಗೆ ಉಗ್ರಮೂರ್ತಿಯಾದ (“ಉಚ್ಯತಿ ಕ್ರುಧಾ ಸಂಬಧ್ಯತೇ ಇತಿ ಉಗ್ರಃ— ಕ್ರೋಧಗುಣಕ್ಕೆ ಸಂಬಂಧಿಸಿದ ಸ್ವರೂಪ), ಕ್ರೋಧಮೂರ್ತಿಯಾದ, ಕ್ರೂರಸ್ವರೂಪಿಯಾದ, ರೌದ್ರರಸಯುಕ್ತನಾದ, ಅರಿಭಯಂಕರನೂ ಸಿಂಹಸ್ವಪ್ನನೂ ಆದ, ಸರ್ವಜೀವರ ಪಾಲಿನ ಪ್ರಾಣಸ್ವರೂಪವಾದ ವಾಯುಮೂರ್ತಿಯಾದ (“ಉಗ್ರಾಯ ವಾಯುಮೂರ್ತಯೇ ನಮಃ” ಎಂದಿದೆ ತಿಥಿತತ್ತ್ವದಲ್ಲಿ ಅಷ್ಟಮೂರ್ತಿಪೂಜನಸಂದರ್ಭದಲ್ಲಿ) ಉಗ್ರನಾಮಕನಾದ ದೇವದೇವ ಸದಾಶಿವನನ್ನು ಪ್ರಸನ್ನಗೊಳಿಸುತ್ತೇನೆ / ಜಲತರ್ಪಣದಿಂದ ತೃಪ್ತಿಪಡಿಸುತ್ತೇನೆ / ರುದ್ರಾಭಿಷೇಕ, ಪಾರಾಯಣ, ಪ್ರಾರ್ಥನೆ, ಪೂಜಾದಿಗಳಿಂದ ಒಲಿಸಿಕೊಳ್ಳುತ್ತೇನೆ.
ಓಂ ಭೀಮಂ ದೇವಂ ತರ್ಪಯಾಮಿ ||
“ಬಿಭೇತಿ ಅಸ್ಮಾತ್, ಇತಿ ಭೀಮಃ”— ಇವನಿಂದ, ಇವನ ಭಯಕಾರಕ ಬೃಹತ್ ಗಾತ್ರಸ್ವರೂಪ / ಭೀಮಕಾಯತ್ವ, ಹಣೆಗಣ್ಣು, ಮಹಾಪರಾಕ್ರಮ, ಚಿತಾಭಸ್ಮಧಾರಣೆ, ಶ್ಮಶಾನವಾಸ / ರುದ್ರಭೂವಾಸ, ಕ್ರೋಧ-ತಾಂಡವಾದಿ ಹಾವಭಾವ, ಸರ್ಪ-ರುಂಡಮಾಲಾದಿ ವೇಷಭೂಷಣಗಳು, ಕ್ರೂರ ಭಯಂಕರರಾದ ವೀರಭದ್ರ-ಭೈರವಾದಿ ಗಣಗಳು, ಸಂಹಾರಕರ್ಮಾದಿಗಳಿಂದ ಇತರರು ಭಯಭೀತರಾಗುತ್ತಾರೆಂಬುದರಿಂದಾಗಿ ಪರಶಿವನು ಭೀಮನೆನಿಸಿರುವನು. “ಭೀಮಾಯ ಆಕಾಶಮೂರ್ತಯೇ ನಮಃ” ಎಂದಿದೆ ಶಿವಪೂಜಾಪ್ರಯೋಗದಲ್ಲಿ ತಿಥ್ಯಾದಿತತ್ತ್ವದಲ್ಲಿ. ಹೀಗಾಗಿ ಈತನು ಆಕಾಶದಂತೆ ಒಳಹೊರಗೂ ಸರ್ವವ್ಯಾಪಿಯಾದ ವಿಶಾಲಸ್ವರೂಪಿಯು. ಅಂತಹ ಭೀಮನಾಮಕನಾದ ದೇವದೇವ ಶಂಭುವನ್ನು ಜಲತರ್ಪಣ, ಅಭಿಷೇಕ (“ಅಭಿಷೇಕಪ್ರಿಯಃ ಶಿವಃ”)ಆರಾಧನೆಗಳಿಂದ ತೃಪ್ತಿಪಡಿಸಿ, ಪ್ರಸನ್ನೀಕರಿಸುತ್ತೇನೆ.
ಓಂ ಮಹಾನ್ತಂ ದೇವಂ ತರ್ಪಯಾಮಿ ||
ಮಹಾದೇವನಾದ ಪರಶಿವನನ್ನು ತೃಪ್ತಿಪಡಿಸುತ್ತೇನೆ / ಆತನಿಗೆ ಪ್ರಿಯವಾಗುವಂತೆ ಆತನನ್ನು ಉಪಾಸಿಸುತ್ತೇನೆ. “ಮಹಾಂಶ್ಚಾಸೌ ದೇವಶ್ಚ (ಮಹಾನ್ ಚ ಅಸೌ ದೇವಃ ಚ)”— ದೊಡ್ಡವನಾದ, ಸರ್ವಾಧಿಕನಾದ ದೇವನು ಮಹಾದೇವನು. ಅಥವಾ, “ಮಹತಾಂ ದೇವಾದೀನಾಂ ದೇವಃ”— ಲೋಕದಲ್ಲಿ ಮಹಿಮಾವಂತರೆನಿಸಿದ ಸಕಲ ದೇವಾದಿಗಳ ದೇವದೇವನು ಮಹಾದೇವನು. “ಮಹಾದೇವಾಯ ಸೋಮಮೂರ್ತಯೇ ನಮಃ” ಎಂದಿದೆ ಶಿವನ ಅಷ್ಟಮೂರ್ತ್ಯುಪಾಸನೆಯಲ್ಲಿ ಶಿವಪೂಜಾಪದ್ಧತಿಯಲ್ಲಿ.
“ಜಲಂ ವಹ್ನಿಸ್ತಥಾ ಯಷ್ಟಾ (ಆತ್ಮಾ) ಸೂರ್ಯಾಚಂದ್ರಮಸೌ ತಥಾ |
ಆಕಾಶಂ ವಾಯುರವನೀ ಮೂರ್ತಯೋऽಷ್ಟೌ ಪಿನಾಕಿನಃ ||”
ಹೀಗಾಗಿ, ಶಿವನ ಅಷ್ಟಮೂರ್ತಿಗಳಾದ ಜಲ, ಅಗ್ನಿ, ಯಜಮಾನ / ಆತ್ಮಾ, ಸೂರ್ಯ, ಸೋಮ / ಚಂದ್ರ, ಆಕಾಶ, ವಾಯು, ಅವನಿ / ಪೃಥ್ವಿ—ಗಳಲ್ಲಿ ಮಹಾದೇವಮೂರ್ತಿಯು ಸೋಮಮೂರ್ತಿಯೆನಿಸಿರುವನು.
ಹೀಗೆ, ಭವನು ಜಲಮೂರ್ತಿಯಾಗಿ, ಶರ್ವನು ಅವನಿಮೂರ್ತಿಯಾಗಿ, ಈಶಾನನು ಸೂರ್ಯಮೂರ್ತಿಯಾಗಿ, ಪಶುಪತಿಯು ಯಷ್ಟಾ / ಯಜಮಾನಮೂರ್ತಿಯಾಗಿ, ರುದ್ರನು ಅಗ್ನಿಮೂರ್ತಿಯಾಗಿ, ಉಗ್ರನು ವಾಯುಮೂರ್ತಿಯಾಗಿ, ಭೀಮನು ಆಕಾಶಮೂರ್ತಿಯಾಗಿ, ಮಹಾದೇವನು ಸೋಮಮೂರ್ತಿಯಾಗಿ ಉಪಾಸಿಸಲ್ಪಡುತ್ತಾರೆ.
ಓಂ ಭವಸ್ಯ ದೇವಸ್ಯ ಪತ್ನೀಂ ತರ್ಪಯಾಮಿ ||
ಓಂ ಶರ್ವಸ್ಯ ದೇವಸ್ಯ ಪತ್ನೀಂ ತರ್ಪಯಾಮಿ ||
ಓಮ್ ಈಶಾನಸ್ಯ ದೇವಸ್ಯ ಪತ್ನೀಂ ತರ್ಪಯಾಮಿ ||
ಓಂ ಪಶುಪತೇರ್ದೇವಸ್ಯ ಪತ್ನೀಂ ತರ್ಪಯಾಮಿ ||
ಓಂ ರುದ್ರಸ್ಯ ದೇವಸ್ಯ ಪತ್ನೀಂ ತರ್ಪಯಾಮಿ ||
ಓಮ್ ಉಗ್ರಸ್ಯ ದೇವಸ್ಯ ಪತ್ನೀಂ ತರ್ಪಯಾಮಿ ||
ಓಂ ಭೀಮಸ್ಯ ದೇವಸ್ಯ ಪತ್ನೀಂ ತರ್ಪಯಾಮಿ ||
ಓಂ ಮಹತೋ ದೇವಸ್ಯ ಪತ್ನೀಂ ತರ್ಪಯಾಮಿ ||
ದೇವನಾದ ಭವನ ಪತ್ನಿಯಾದ ಭವಾನೀ (ಸುವರ್ಚಲಾ)ದೇವಿಯನ್ನೂ, ಶರ್ವದೇವನ ಪತ್ನಿಯಾದ ಶರ್ವಾಣಿ(ಉಷಾದೇವಿ)ಯನ್ನೂ, ಈಶಾನದೇವನ ಪತ್ನಿಯಾದ ಐಶಾನೀ / ಈಶಪತ್ನಿಯಾದ ಈಶಾನೀ (ಸುಕೇಶೀದೇವಿ)ಯನ್ನೂ, ಪಶುಪತಿದೇವನ ಪತ್ನಿಯಾದ ಪಾರ್ವತಿ (ಶಿವೆ)ಯನ್ನೂ, ರುದ್ರದೇವನ ಪತ್ನಿಯಾದ ರುದ್ರಾಣೀ(ಸ್ವಾಹಾದೇವಿ)ಯನ್ನೂ, ಉಗ್ರದೇವನ ಪತ್ನಿಯಾದ ಉಗ್ರಾಣೀ / ಉಗ್ರಾ (ದಿಶ)ದೇವಿಯನ್ನೂ, ಭೀಮದೇವನ ಪತ್ನಿಯಾದ ಭೀಮಾ(ದೀಕ್ಷಾ)ದೇವಿಯನ್ನೂ, ಮಹಾದೇವನ ಪತ್ನಿಯಾದ ಮಹಾದೇವಿ(ರೋಹಿಣಿ)ಯನ್ನೂ— ಹೀಗೆ ಪರಮೇಶ್ವರನ ೮ ರೂಪಗಳಿಗನುರೂಪವಾದ ಪತ್ನಿಯರಾದ ೮ ಪರಮೇಶ್ವರೀರೂಪಗಳನ್ನು ಜಲತರ್ಪಣಾರಾಧನಾದಿಗಳಿಂದ ಪ್ರಸನ್ನೀಕರಿಸುತ್ತೇನೆ.
ಇತಿ ತರ್ಪಯಿತ್ವಾ ||
೮೬) ರುದ್ರನ ಘೋರ ಹಾಗೂ ಅಘೋರರೂಪಗಳೆಂದರೇನು?
ಅಥಾಸ್ಯಾಘೋರತನೂರುಪತಿಷ್ಠತೇ ||
ಹೀಗೆಂದು ತರ್ಪಣವಿಧಿಯನ್ನು ನೆರವೇರಿಸಿ, ಬಳಿಕ (ಅಥ), ಇವನ / ಪರಶಿವನ (ಅಸ್ಯ), ಅ-ಘೋರ / ರೌದ್ರವಲ್ಲದ ಸೌಮ್ಯಮೂರ್ತಿಯನ್ನು ಅಥವಾ ಅಘೋರಿ (?ಬಾಬಾ)ಗಳೆಂಬ ಸನಾತನಧರ್ಮಸಂರಕ್ಷಕ ಗಣಗಳ ಸ್ವರೂಪವನ್ನು ಉಪಾಸಿಸಲಾಗುತ್ತದೆ (ಅಘೋರತನೂರುಪತಿಷ್ಠತೇ).
ಓಮ್ ಅಘೋರೇಭ್ಯೋऽಥ ಘೋರೇಭ್ಯೋ ಘೋರಘೋರತರೇಭ್ಯಃ | ಸರ್ವೇಭ್ಯಃ ಸರ್ವಶರ್ವೇಭ್ಯೋ ನಮಸ್ತೇ ಅಸ್ತು ರುದ್ರರೂಪೇಭ್ಯಃ ||
(ತೈತ್ತಿರೀಯೋಪನಿಷತ್ ೪-೧೯)
ಕ್ರೂರವಲ್ಲದ ಸೌಮ್ಯಸ್ವರೂಪರಾದ ರುದ್ರರೂಪಿಗಳಿಗೆ ನಮಸ್ಕಾರ ಇರಲಿ (ಅಘೋರೇಭ್ಯಃ ರುದ್ರರೂಪೇಭ್ಯಃ ನಮಃ ಅಸ್ತು). ಅನಂತರ (ಅಥ), ಭೀಕರಸ್ವರೂಪರಾದ, ಮತ್ತಷ್ಟು ಘೋರರೂಪರಾದ ರುದ್ರಾಂಶರಿಗೆ ನಮಸ್ಕಾರವಿರಲಿ (ಘೋರೇಭ್ಯಃ ಘೋರಘೋರತರೇಭ್ಯಃ). ಇಂತಹ ಎಲ್ಲರಿಗೂ, ಸಂಹಾರಕರ್ತೃವಾದ ಶರ್ವನ ಎಲ್ಲ ರೂಪಗಳಿಗೂ ನಮಸ್ಕಾರವಿರಲಿ (ಸರ್ವೇಭ್ಯಃ ಸರ್ವಶರ್ವೇಭ್ಯಃ).
೮೭) ರುದ್ರಗಾಯತ್ರೀ ಅಥವಾ ತತ್ಪುರುಷಗಾಯತ್ರೀ ಎಂದರೆ ಯಾವುದು?
ಓಂ ತತ್ಪುರುಷಾಯ ವಿದ್ಮಹೇ ಮಹಾದೇವಾಯ ಧೀಮಹಿ | ತನ್ನೋ ರುದ್ರಃ ಪ್ರಚೋದಯಾತ್ ||
(ತೈತ್ತಿರೀಯೋಪನಿಷತ್ ೪-೧, ೪-೨೦)
ಆ ತದ್ವಾಚ್ಯನಾದ (ತತ್), ಸಮಸ್ತ ಸೃಷ್ಟಿಗೆ ಬಲವನ್ನು ತುಂಬುವ (ಪಿಪರ್ತಿ ಪೂರಯತಿ ಬಲಂ ಯಃ, ಪುರಿ ದೇಹೇ ಶೇತೇ ಪೂರ್ವಮೇವ ಇತಿ ಪುರುಷಃ) ಸರ್ವರೊಳಗೆ ಮೊತ್ತಮೊದಲೇ ಸೇರಿಕೊಂಡು ಸರ್ವರನ್ನೂ ಸಚೇತನರನ್ನಾಗಿಸುವ ಪರಾತ್ಪರ ಪರಂಜ್ಯೋತಿ ಪರಮಾತ್ಮ ಸ್ವರೂಪಿಯನ್ನು (ಸದ್ಯೋಜಾತ, ವಾಮದೇವ, ಅಘೋರ, ಈಶಾನ, ತತ್ಪುರುಷ— ಎಂಬ ಪಂಚಮುಖಗಳಲ್ಲಿ ಪರಶಿವನ ತತ್ಪುರುಷಮೂರ್ತಿಯನ್ನು), ನೇತಿ ನೇತಿ (ಪರಮಾತ್ಮ / ಆತ್ಮವು ಇದಲ್ಲ ಅದಲ್ಲ, ಈ ದೇಹವಲ್ಲ, ಮನಸ್ಸಲ್ಲ ಎಂದು, ನ ಇತಿ) ಮುಂತಾಗಿ ಮಥಿಸಿ ವಿಚಾರಮಾಡಿ (ವಿದ್ಮಹೇ— ವಿದ್ ವಿಚಾರಣೇ), ತಿಳಿದುಕೊಂಡು / ಅರಿತುಕೊಂಡು (ವಿದ್ಮಹೇ— ವಿದ್ ಜ್ಞಾನೇ), ಆತನನ್ನು / ಆತನ ಸ್ವರೂಪಜ್ಞಾನವನ್ನು ಪ್ರಾಪ್ತಿಮಾಡಿಕೊಂಡು (ವಿದ್ಮಹೇ— ವಿದ್ ಲಾಭೇ), ಆತನ ಬಗ್ಗೆ ವ್ಯಾಖ್ಯಾನಿಸತೊಡಗುತ್ತೇವೆ; ಆತನ ಮಹಿಮೆಯ ಬಗ್ಗೆ ಹೇಳುತ್ತೇವೆ (ವಿದ್ಮಹೇ— ವಿದ್ ಆಖ್ಯಾನೇ). ಆ ದೇವದೇವನಾದ ಮಹಾದೇವನನ್ನು ಸದಾ ಚಿಂತಿಸುತ್ತಾ ಧ್ಯಾನಿಸುತ್ತೇವೆ (ಮಹಾದೇವಾಯ ಧೀಮಹಿ— ಧ್ಯೈ ಚಿನ್ತಾಯಾಮ್). ಆದ್ದರಿಂದ ಆ ತದ್ವಾಚ್ಯ ಪರಮಪುರುಷನಾದ ಭಗವಾನ್ ರುದ್ರದೇವನು(ತತ್ / ತಸ್ಮಾತ್ ರುದ್ರಃ), ನಮ್ಮನ್ನು (ನಃ / ಅಸ್ಮಾನ್), ಕಾಯೇನ-ವಾಚಾ-ಮನಸಾ ತ್ರಿಕರಣಪೂರ್ವಕವಾಗಿ ಸನ್ಮಾರ್ಗದಲ್ಲಿ ಪ್ರಚೋದಿಸಲಿ (ಪ್ರಚೋದಯಾತ್).
ಇತಿ ದಶಕೃತ್ವಶ್ಶತಕೃತ್ವಸ್ಸಹಸ್ರಕೃತ್ವೋऽಪರಿಮಿತಕೃತ್ವೋ (ದಶಕೃತ್ವಃ ಶತಕೃತ್ವಃ ಸಹಸ್ರಕೃತ್ವಃ, ಅಪರಿಮಿತಕೃತ್ವಃ) ವಾ | ಅಥೈನಮಾಯುರಾಶಾಸ್ತ (ಅಥ ಏನಮ್ “ಆಯುರಾಶಾಸ್ತೇ”) ಇತಿ ಜಪೇತ್ ||
ಹೀಗೆ ಮೇಲಿನ ತತ್ಪುರುಷಗಾಯತ್ರೀಮಂತ್ರವನ್ನು ೧೦ ಬಾರಿಯೋ, ೧೦೦ ಬಾರಿಯೋ, ೧೦೦೦ ಬಾರಿಯೋ, ಅಪರಿಮಿತ / ಅನಂತಾವರ್ತಿಯೋ ಉಚ್ಚರಿಸಿ, ಬಳಿಕ ಆತನನ್ನು “ಆಯುರಾಶಾಸ್ತೇ” ಇತ್ಯಾದಿ ಮಂತ್ರಗಳಿಂದ ಜಪಿಸಬೇಕು.
೮೮) ಯಜಮಾನ ಹಾಗೂ ಋತ್ವಿಜರು ರುದ್ರಾರಾಧನೆಯಿಂದ ಏನೇನು ಫಲಗಳನ್ನು ಬಯಸುತ್ತಾರೆ?
ಓಂ ಆಶಾಸ್ತೇऽಯಂ ಯಜಮಾನೋऽಸೌ | ಆಯುರಾಶಾಸ್ತೇ | ಸುಪ್ರಜಾಸ್ತ್ವಮಾಶಾಸ್ತೇ | ಸಜಾತವನಸ್ಯಾಮಾಶಾಸ್ತೇ | ಉತ್ತರಾಂ ದೇವಯಜ್ಯಾಮಾಶಾಸ್ತೇ | ಭೂಯೋ ಹವಿಷ್ಕರಣಮಾಶಾಸ್ತೇ | ದಿವ್ಯಂ ಧಾಮಾऽऽಶಾಸ್ತೇ | ವಿಶ್ವಂ ಪ್ರಿಯಮಾಶಾಸ್ತೇ | ಯದನೇನ ಹವಿಷಾऽऽಶಾಸ್ತೇ | ತದಶ್ಯಾತ್ತದೃಧ್ಯಾತ್ | ತದಸ್ಮೈ ದೇವಾ ರಾಸನ್ತಾಮ್ | ತದಗ್ನಿರ್ದೇವೋ ದೇವೇಭ್ಯೋ ವನತೇ | ವಯಮಗ್ನೇರ್ಮಾನುಷಾಃ | ಇಷ್ಟಂ ಚ ವೀತಂ ಚ | ಉಭೇ ಚ ನೋ ದ್ಯಾವಾ ಪೃಥಿವೀ ಅಗ್ಂಹಸಸ್ಪಾತಾಮ್ | ಇಹ ಗತಿರ್ವಾಮಸ್ಯೇದಂ ಚ | ನಮೋ ದೇವೇಭ್ಯಃ ||
(ತೈತ್ತಿರೀಯಬ್ರಾಹ್ಮಣ ಅಷ್ಟಕ ೩, ಪ್ರಪಾಠಕ ೫, ಅನುವಾಕ ೧೦)
ಅನುವಾದ—
ಈ (ಅಯಮ್), ಯಜಮಾನನು (ಯಜಮಾನಃ), ಹಾಗೂ ಈ ಋತ್ವಿಜನಾದ ನಾನು (ಅಸೌ), ಆಶಿಸುತ್ತಾನೆ (ಆಶಾಸ್ತೇ). ಆಯುಸ್ಸನ್ನು (ಆಯುಃ) ಆಶಿಸುತ್ತಾನೆ (ಆಶಾಸ್ತೇ). ಒಳ್ಳೆಯ ಸಂತತಿಯನ್ನು / ಸತ್ಸಂತಾನವಿರುವಿಕೆಯನ್ನು (ಸುಪ್ರಜಾಸ್ತ್ವಮ್) ಬಯಸುತ್ತಾನೆ (ಆಶಾಸ್ತೇ). ವನಸ್ಪತ್ಯಾದಿ ಸಕಲ ಸಸ್ಯಸಂಪತ್ತಿನ ಉತ್ಪನ್ನವಾಗುವಿಕೆಯನ್ನು ಹಾಗೂ ಅವುಗಳ ಉತ್ಪನ್ನಗಳನ್ನೂ (ಸಜಾತವನಸ್ಯಾಮ್) ಆಶಿಸುತ್ತಾನೆ (ಆಶಾಸ್ತೇ). ಉತ್ತರವೇದಿಕೆಯಲ್ಲಿ ಸಮಸ್ತದೇವತಾಯಜನ-ಪೂಜನವನ್ನು (ಉತ್ತರಾಂ ದೇವಯಜ್ಯಾಮ್) ಮಾಡಬಯಸುತ್ತಾನೆ (ಆಶಾಸ್ತೇ). ಪುನಃ ಮತ್ತೊಮ್ಮೆ ಅಧಿಕಾಧಿಕ (ಭೂಯಃ) ಹವಿರ್ದಾನಮಾಡುವ ಯಜ್ಞವನ್ನು ಆಚರಿಸಲು (ಹವಿಷ್ಕರಣಮ್) ಆಶಿಸುತ್ತಾನೆ (ಆಶಾಸ್ತೇ). ದಿವ್ಯಧಾಮವಾದ ಸ್ವರ್ಗ / ಮೋಕ್ಷ / ವೈಕುಂಠ / ಕೈಲಾಸಾದಿಗಳನ್ನು (ದಿವ್ಯಂ ಧಾಮ) ಆಶಿಸುತ್ತಾನೆ (ಆಶಾಸ್ತೇ). ಲೋಕಹಿತವನ್ನು (ವಿಶ್ವಂ ಪ್ರಿಯಮ್) ಬಯಸುತ್ತಾನೆ (ಆಶಾಸ್ತೇ). ಇದೆಲ್ಲವನ್ನೂ (ಯದ್) ಈ ಹವಿರ್ಯಜ್ಞದಿಂದ (ಅನೇನ ಹವಿಷಾ) ಬಯಸುತ್ತಾನೆ (ಆಶಾಸ್ತೇ). ಈ ಆಶಯಫಲಗಳನ್ನು ಈತನು ಉಣ್ಣಲಿ (ತದ್ ಅಶ್ಯಾತ್) ಹಾಗೂ ಈತನ ಆಶೋತ್ತರಗಳು ಸಮೃದ್ಧವಾಗಲಿ (ತದ್ ಋಧ್ಯಾತ್). ಇದನ್ನು (ತದ್), ಇವನಿಗೆ (ಅಸ್ಮೈ), ದೇವತೆಗಳು (ದೇವಾಃ), ಕೈಗೂಡಿಸಿಕೊಡಲಿ / ಈಡೇರಿಸಿಕೊಡಲಿ / ಸಾಧಿಸಿಕೊಡಲಿ / ಒದಗಿಸಿಕೊಡಲಿ (ರಾಸನ್ತಾಮ್). ಇದನ್ನು (ತದ್), ಅಗ್ನಿದೇವನು (ಅಗ್ನಿಃ ದೇವಃ), ಇತರ ದೇವತೆಗಳಿಗೆ (ದೇವೇಭ್ಯಃ), ವಿನಂತಿಸುತ್ತಾನೆ (ವನತೇ). ನಾವು (ವಯಮ್), ಆ ಅಗ್ನಿಯ (ಅಗ್ನೇಃ) ಜನರು (ಮಾನುಷಾಃ). ಇಷ್ಟಿಗಳ ಮೂಲಕ ಹೋಮಿಸಿದ್ದೂ (ಇಷ್ಟಂ ಚ), ಬಿಟ್ಟುಹೋದ ಲೋಪಗಳೂ (ವೀತಂ ಚ)— ಇವೆರಡರಲ್ಲೂ (ಉಭೇ ಚ) ಆಗಿರುವ ಲೋಪದೋಷಜನ್ಯಪಾಪಗಳಿಂದ (ಅಗ್ಂಹಸಃ / ಅಂಹಸಃ), ನಮ್ಮನ್ನು (ನೋ / ನಃ), ಭೂಮ್ಯಾಕಾಶಗಳು (ದ್ಯಾವಾಪೃಥಿವೀ) ರಕ್ಷಿಸಲಿ (ಪಾತಾಮ್). ವಿರುದ್ಧಾಚರಣೆಯ ದೋಷವನ್ನು ನಿವಾರಿಸಲೂ ಕೂಡ (ವಾಮಸ್ಯ ಇದಂ ಚ), ಇದುವೇ ದಾರಿಯಾಗಿದೆ ( ಇಹ ಗತಿಃ). ದೇವತೆಗಳಿಗೆ (ದೇವೇಭ್ಯಃ), ನಮಸ್ಕಾರ (ನಮಃ).
ಭಟ್ಟಭಾಸ್ಕರಭಾಷ್ಯ—
ಆಶಾಸ್ತೇ ಅಯಂ ಯಜಮಾನಃ, ಅಸೌ—
ಏವಮ್ ಅಹಮ್ ಆಶಾಸೇ, ಅಯಮ್ ಅಪಿ ಯಜಮಾನಃ, ಇದಮ್ ಆಶಾಸ್ತೇ | ಋಧೇಃ ಲೇಟಿ ವ್ಯತ್ಯಯೇನ ಶಃ | ಅಸೌ— ಇತ್ಯತ್ರ ಯಜಮಾನ-ನಾಮ ಗೃಹ್ಯತೇ ವಿಷ್ಣುಶರ್ಮಾ ರುದ್ರಶರ್ಮಾ ಇತಿ | ಬ್ರಾಹ್ಮಣಂ ಚ— “ಯರ್ಹಿ (ಯಃ ಹಿ) ಹೋತಾ ಯಜಮಾನಸ್ಯ ನಾಮ ಗೃಹ್ಣೀಯಾತ್” ಇತಿ ||
ಹೀಗೆ / ಈ ರೀತಿಯಾಗಿ ನಾನು (ಪುರೋಹಿತನು) ಆಶಿಸುತ್ತೇನೆ / ಬಯಸುತ್ತೇನೆ, ಈ ಯಜಮಾನನೂ ಕೂಡ, ಇದನ್ನೇ ಬಯಸಿ ಆಶಿಸುತ್ತಾನೆ. “ಋಧು ವೃದ್ಧೌ” ಎಂಬ ವೃದ್ಧಿಸೂಚಕ ಧಾತುವಿಗೆ ವೈದಿಕ ಲೇಟ್ ಲಕಾರ ಪ್ರಯೋಗದಿಂದ ವ್ಯತ್ಯಾಸವಾಗಿ ಶ-ಕಾರವು ಬಂದಿದೆ. (ಹೀಗಾಗಿ ‘ಋಧ್ನೋತಿ’ ಗೆ ಬದಲಾಗಿ ‘ಆಶಾಸ್ತೇ’ ಬಂದಿದೆ). ಅಸೌ— ಎಂಬಲ್ಲಿ ಯಜಮಾನನ ವಿಷ್ಣುಶರ್ಮಾ / ರುದ್ರಶರ್ಮಾ ಇತ್ಯಾದಿ ಅಂಕಿತನಾಮವು ಪರಿಗ್ರಹಿಸಲ್ಪಡುತ್ತದೆ. ಇದಕ್ಕೆ ಆಧಾರವಾಗಿ ತೈತ್ತಿರೀಯಬ್ರಾಹ್ಮಣಭಾಗ (ತೈ.ಸಂ.೧.೭.೪ರಲ್ಲಿ ಹೇಳಿದೆ)— “ಯಾರು ಹೋತೃವೆಂಬ ಋತ್ವಿಜನಿರುವನೋ ಆತನು (ಈ ಸಂದರ್ಭದಲ್ಲಿ) ಯಜ್ಞಕರ್ತೃ / ಯಜ-ಮಾನ ನ ಹೆಸರನ್ನು ತೆಗೆದುಕೊಳ್ಳಬೇಕು” ಎಂದು.
ಇದಾನೀಂ ಋದ್ಧಿವಿಶೇಷಾನ್ ಏಕೈಕಶ್ಯೇನ ಆಹ— ಆಯುಃ ಶತವರ್ಷಪ್ರಮಾಣಮ್ | ಸುಪ್ರಜಾಸ್ತ್ವಂ ಶೋಭಮಾನ-ಅಪತ್ಯತ್ವಮ್ | ……| ಸಜಾತವನಸ್ಯಾಂ ಸಮಾನಜಾತೀಯೈಃ ಪ್ರಾಣೈಃ ವಾ ವನನಂ ಸೇವ್ಯತ್ವಮ್ ಆತ್ಮನಃ …..| ಉತ್ತರಾಮ್ ಉತ್ತರಕಾಲಭಾವಿನೀಂ ದೇವಯಜ್ಯಾಂ ದರ್ಶಪೂರ್ಣಮಾಸಾದಿಕಾಂ ಭೂಯಃ ಬಹುತರಂ ಹವಿಷ್ಕರಣಂ ಯಾಗಂ, ದಿವ್ಯಂ ದಿವಿ ಭವಂ ಧಾಮ ಸ್ಥಾನಮ್ | ಕಿಂ ಬಹುನಾ— ಸರ್ವಂ ಪ್ರಿಯಮ್ ಆತ್ಮನಃ, ಆಶಾಸ್ತೇ |
ಈಗ ಸಂಪತ್-ಸಿದ್ಧಿವಿಶೇಷಗಳನ್ನು ಏಕೈಕಶಃ / ಒಂದೊಂದಾಗಿ (ಏಕೈಕಶಸ್ಯ ಭಾವಃ ಏಕೈಕಶ್ಯಮ್, ತೇನ ಏಕೈಕಶ್ಯೇನ— ಒಂದೊಂದಾಗಿ ಹೇಳುವಿಕೆಯ ಭಾವವು ಏಕೈಕಶ್ಯಮ್, ಆ ಭಾವದಿಂದ) ಹೇಳುತ್ತಾನೆ— ಆಯುಃ ಮಾನವನಿಗೆ ನಿಗದಿತವಾದ ನೂರುವರ್ಷಗಳ ದೀರ್ಘಾಯುಷ್ಯವನ್ನು; ಸು-ಪ್ರಜಾಸ್ತ್ವಂ ಶ್ರೇಷ್ಠವಾಗಿ ಶೋಭಿಸುವ ಸಂತತಿಯನ್ನು; ಸಜಾತವನಸ್ಯಾಂ ಸಮಾನಜಾತಿಯವರಿಂದ / ಮಾನವ ಸೇವಕರಿಂದ ತಾನು ಸೇವೆಮಾಡಲ್ಪಡುವ ಯೋಗ್ಯತೆಯನ್ನು ಅಥವಾ ಪಂಚಪ್ರಾಣೋಪಪ್ರಾಣಗಳಿಂದ ಸದಾ ಸೇವಿಸಲ್ಪಡುತ್ತಿರುವ ಆತ್ಮ / ಜೀವಾತ್ಮ ವು ತನ್ನದಾಗುವಂತೆ; ಉತ್ತರಾಂ ಇನ್ನು ಮುಂದಿನ ಭವಿಷ್ಯತ್ಕಾಲದಲ್ಲಿ, ದೇವಯಜ್ಯಾಂ ದರ್ಶ (ಯಾಗವಿಶೇಷ / ಅಮಾವಾಸ್ಯಾ—ವಿಧಾತೃ-ಸಿನೀವಾಲೀಯರ ಪುತ್ರ; “ಅನ್ಯೋऽನ್ಯಂ ಚನ್ದ್ರಸೂರ್ಯೌ ತು ದರ್ಶನಾದ್ದರ್ಶ ಉಚ್ಯತೇ”— ಮತ್ಸ್ಯಪುರಾಣ— ಸೂರ್ಯಚಂದ್ರರು ಪರಸ್ಪರರನ್ನು ಹಗಲೇ ದರ್ಶನಮಾಡುವುದರಿಂದ, ರಾತ್ರಿ ಚಂದ್ರನಿರದ ಅಮಾವಾಸ್ಯೆಯು ದರ್ಶ ಎನಿಸಿದೆ)-ಪೂರ್ಣಮಾಸ (ಯಾಗವಿಶೇಷ / ಪೌರ್ಣಮೀ) ಮುಂತಾದ, ಭೂಯಃ ಬಹುವಿಧವಾದ, ಹವಿಷ್ಕರಣಂ ಹವಿಃಪ್ರದಾನಿಸುವಿಕೆ / ಯಾಗಗಳನ್ನು; ದಿವ್ಯಂ ದೇವಲೋಕದಲ್ಲಿರುವ / ದಿವ್ಯವಾದ, ಧಾಮ ಪುಣ್ಯನಿವಾಸಸ್ಥಳವನ್ನು / ಸ್ವರ್ಗಾದಿ ಪುಣ್ಯಲೋಕಗಳನ್ನು; ಹೆಚ್ಚೇಕೆ? ತನಗೆ ಪ್ರಿಯವಾದುದೆಲ್ಲವನ್ನೂ (ಯಜಮಾನನು) ಬಯಸಿ, ಆಶಿಸುತ್ತಿರುವನು.
ಕಿಂ ಚ— ಯದ್ ಅನೇನ ಪ್ರಶಸ್ತತರ-ಆಜ್ಯೇನ ಪ್ರಹ್ರಿಯಮಾಣೇನ ಹವಿಷಾ ಆಶಾಸ್ತೇ ತದಶ್ಯಾತ್ ತತ್ಫಲಂ ಭುಙ್ಕ್ತಾಮ್, ತತ್ ಚ ಫಲಂ ಋಧ್ಯಾತ್ ಸಮೃದ್ಧಮ್ ಅಸ್ಯ ಭವತು | ತದಸ್ಮೈ ಯಜಮಾನಾಯ ದೇವಾಃ ಅಗ್ನಿ-ಆದಯಃ ರಾಸನ್ತಾಂ ಸಂಸಾಧಯನ್ತಾಮ್ | ತತ್-ಫಲಮ್ ಅಸ್ಮೈ ದಾತುಂ ಅಗ್ನಿಃ ದೇವಃ ಸನ್ ದೇವೇಭ್ಯೋ (ದೇವೇಭ್ಯಃ) ದೇವಸಕಾಶಾತ್ ವನತೇ ಸಂಭಜತೇ | ವಯಂ ಚ ಮಾನುಷಾಃ ಸನ್ತಃ ಅಗ್ನೇಃ ಏವ ಪ್ರಸಾದೇನ ಮನುಷ್ಯಸಕಾಶಾತ್ ತಸ್ಮೈ ದಾತುಂ ವನಾಮಃ |
ಅಲ್ಲದೆ— ಯದ್ ಅನೇನ ಯಾವುದನ್ನು ಈ ಶ್ರೇಷ್ಠವಾದ ತುಪ್ಪವೆಂಬ ಹವಿಷಾ ಆಶಾಸ್ತೇ ತದ್ ಅಶ್ಯಾತ್ ಹವಿಸ್ಸಿನ ಸಮರ್ಪಣೆಯಿಂದ ಬಯಸುತ್ತಾನೋ, ಆ ಫಲವನ್ನು ಭೋಗಿಸುವಂತಾಗಲಿ, ಹಾಗೂ ಆ ಫಲವು ಋಧ್ಯಾತ್ ಈತನಿಗೆ ಸಮೃದ್ಧವಾಗಿ ದೊರಕಲಿ. ತದ್ ಅಸ್ಮೈ ಅದನ್ನು ಯಜಮಾನನಿಗೆ, ದೇವಾಃ ಅಗ್ನಿಯೇ ಮೊದಲಾದ ದೇವತೆಗಳು ರಾಸನ್ತಾಮ್ ಸಂಸಾಧಿಸಿ / ಸಂಪಾದಿಸಿ ಕೊಡಲಿ, ಒದಗಿಸಿ ಕೊಡಲಿ. ಆ ಫಲವನ್ನು ಈತನಿಗೆ ನೀಡಲು ಅಗ್ನಿಃ ಅಗ್ನಿಯು ದೇವನಾಗಿ ದೇವೇಭ್ಯಃ ಸಕಲ ದೇವತೆಗಳಿಂದ ವನತೇ ಭಜಿಸಲ್ಪಡುತ್ತಾನೆ, ವಿನಂತಿಸಲ್ಪಡುತ್ತಾನೆ. ವಯಂ ನಾವಾದರೋ (ಋತ್ವಿಜರಾದರೋ) ಮಾನುಷಾಃ ಮನುಷ್ಯರಾಗಿರುವುದರಿಂದ / ಭೂಮಿಯಲ್ಲಿನ ಮಾನುಷಲೋಕದ ಸುರರಾಗಿರುವುದರಿಂದ, ಪೃಥ್ವಿಯಲ್ಲಿ ದೇವಲೋಕದ ಪ್ರತ್ಯಕ್ಷದೇವನಾದ ಅಗ್ನೇಃ ಅಗ್ನಿಯ ಪ್ರಸಾದದಿಂದಲೇ / ಕೃಪೆಯಿಂದಲೇ / ಆಶೀರ್ವಾದದಿಂದಲೇ, ಮನುಷ್ಯರಿಂದ ಹವಿಸ್ಸನ್ನು ದೇವತೆಗಳಿಗೆ ಸಮರ್ಪಿಸಲು ಅಗ್ನಿಯನ್ನು ವಿನಂತಿಸುತ್ತಾ ಪ್ರಾರ್ಥಿಸುತ್ತೇವೆ (ವನ ಭಕ್ತೌ— ಭಜಿಸು).
ಕಿಂ ಪುನಃ ತತ್-ಫಲಮ್ ಇತಿ ಆಹ— ಇಷ್ಟಂ ಯಾಗನಿಮಿತ್ತಂ ಸ್ವರ್ಗಾದಿಕಮ್ | ವೀತಂ ಅಶನ-ಖಾದ್ಯಾದಿ-ರೂಪಂ ಯದ್ ಅಸ್ತಿ ತತ್-ಮಾನುಷಮ್ |
ಹಾಗೆಯೇ, ಅದರ ಫಲವೇನೆಂದು ಮತ್ತೆ ಹೇಳುತ್ತಾನೆ— ಇಷ್ಟಂ ಕಾಮ್ಯ ಇಷ್ಟಿರೂಪೀ ಯಾಗಗಳಿಂದ ಮರಣೋತ್ತರವಾಗಿ ಪ್ರಾಪ್ತವಾಗುವ ದಿವ್ಯವಾದ ಸ್ವರ್ಗಾದಿ ಪರಗತಿಗಳು / ಶ್ರೇಯಸ್ಸು. ವೀತಂ ಚ ಹಾಗೂ ಈ ಮಾನುಷಲೋಕಕ್ಕೆ / ಇಹಕ್ಕೆ ಬೇಕಾದ ಅನ್ನಾಹಾರಪದಾರ್ಥಭಕ್ಷ್ಯಭೋಜ್ಯಾದಿ ಸಕಲ ಲೌಕಿಕಭೋಗಗಳು / ಪ್ರೇಯಸ್ಸು.
ಕಿಂ ಚ— ಉಭೇ ದ್ಯಾವಾ-ಪೃಥಿವ್ಯೌ ಅಂಹಸಃ ಪಾಪಾತ್ ಕರ್ಮ-ಅಪಚಾರ-ನಿಮಿತ್ತಾತ್ ಪಾತಾಮ್ ರಕ್ಷತಾಮ್ | ಇಹ ಹವಿಷಿ ವಾಮಸ್ಯ ವನನೀಯಸ್ಯ ಧನಸ್ಯ ಗತಿಃ ವ್ಯಾಪ್ತಿಃ | ಇದಂ ಚ ಏತತ್-ಹವಿರ್ಲಕ್ಷಣಂ ನಮಃ ಅನ್ನಂ ದೇವೇಭ್ಯಃ ಅಸ್ತು ಇತಿ ಶೇಷಃ | ಯದ್ವಾ— ಇದಮ್ ಏವ ನಮಃ ಪ್ರಶಸ್ತಂ ಹವಿಃ ದೇವೇಭ್ಯಃ, ಏವ, ದೇವಾಃ, ಏವ ಅಶ್ನನ್ತಿ ||
ಹಾಗೆಯೇ— ಉಭೇ ದೇವಲೋಕ-ಭೂಲೋಕಗಳೆಂಬ ಉಭಯ / ಎರಡೂ ಲೋಕಗಳ ಅಭಿಮಾನಿ ದೇವತೆಗಳು, ಅಂಹಸಃ (ನಾವು) ಮಾಡುವ ಕರ್ಮಗಳಲ್ಲಿ ಆಗಬಹುದಾದ ಅಪಚಾರ / ಪ್ರಮಾದ, ಲೋಪಾದಿ ಪಾಪಗಳಿಂದ, ಪಾತಾಮ್ ನಮ್ಮನ್ನು (ಋತ್ವಿಜ-ಯಜಮಾನರನ್ನು) ರಕ್ಷಿಸಲಿ. ಇಹ ಈ ಹವಿಸ್ಸಿನಲ್ಲಿ ವಾಮಸ್ಯ ಸರ್ವರಿಂದ ಪ್ರಶಂಸಿತವಾದ ಸಂಪತ್ತಿನ (ವಾಮಮ್— ಧನಮ್), ಗತಿಃ ಹರವು / ವ್ಯಾಪ್ತಿ-ವಿಸ್ತಾರಗಳಿವೆ. ಸಂಪತ್ತನ್ನುಂಟುಮಾಡುವ ಸಾಮರ್ಥ್ಯವಿದೆ. ಇದಂ ಚ ಈ ಯಜ್ಞಹವಿಸ್ಸಿನ ಗುಣಲಕ್ಷಣಗಳಿರುವ, ನಮಃ ಅನ್ನವು (‘ಸ'ಕಾರಾನ್ತ ನಪುಂಸಕಲಿಙ್ಗ ‘ನಮಸ್’ ಶಬ್ದಕ್ಕೆ ಯಾಸ್ಕ ‘ನಿಘಂಟು'ವಿನಲ್ಲಿ ‘ಅನ್ನಮ್’ ಎಂಬರ್ಥವಿದೆ), ದೇವೇಭ್ಯಃ ದೇವತೆಗಳಿಗಾಗಿ ಇರಲಿ ಎಂದರ್ಥ. ಅಥವಾ— ಈ ಶ್ರೇಷ್ಠವಾದ ಹವಿಸ್ಸು ದೇವತೆಗಳಿಗೇ ಮೀಸಲು, ದೇವತೆಗಳೇ ಇದನ್ನುಣ್ಣುತ್ತಾರೆ.
Comments
Post a Comment