ಲಘುನ್ಯಾಸದ ಬೆಳಕಿನಲ್ಲಿ ಶಿವದರ್ಶನ ೭—ಲಘುನ್ಯಾಸಮಂತ್ರಾರ್ಥವಿಚಾರ ೨
ಲಘುನ್ಯಾಸಭಾಷ್ಯಮ್ ೨
(ದಯಾನಂದಭಾಷ್ಯ ಮುಂದುವರಿದುದು)
(ದೇವಮ್) ದಾತಾರಂ ಹರ್ಷಕರಂ ವಿಜೇತಾರಂ ದ್ಯೋತಕಂ ವಾ—
ದೇವನನ್ನು— ಬೇಡಿದ್ದನ್ನು ಕೊಡುವ ದಾತಾರನನ್ನು / ಸಂತೋಷವನ್ನುಂಟುಮಾಡುವವನನ್ನು / ಸದಾ ವಿಜಯಶಾಲಿಯಾದವನನ್ನು, ಸ್ವಯಂಪ್ರಕಾಶದಿಂದ ಬೆಳಗುವವನನ್ನು;
(ಋತ್ವಿಜಮ್) ಯಃ, ಋತೌ ಋತೌ ಪ್ರತ್ಯುತ್ಪತ್ತಿಕಾಲಂ ಸಂಸಾರಂ ಸಂಗತಂ ಯಜತಿ ಕರೋತಿ ತಥಾ ಚ ಶಿಲ್ಪಸಾಧನಾನಿ ಸಂಗಮಯತಿ ಸರ್ವೇಷು ಋತುಷು ಯಜನೀಯಃ ತಮ್ | “ಋತ್ವಿಗ್-ದಧೃಗ್…”(ಅಷ್ಟಾಧ್ಯಾಯೀ ೩. ೨. ೫೯)— ಅನೇನ ಕರ್ತರಿ ನಿಪಾತನಮ್, ತಥಾ “ಕೃತೋ ಬಹುಲಮ್ ” ಇತಿ ಕರ್ಮಣಿ ವಾ |
ಋತ್ವಿಜನನ್ನು— ಯಾವನು ಋತು-ಋತುವಿನಲ್ಲೂ / ಪ್ರತೀ ತಿಂಗಳ ಸಂತಾನೋತ್ಪತ್ತಿಯ ಕಾಲದಲ್ಲಿ ಸಂಸಾರ ಸಮೇತನಾಗಿ ಯಜ್ಞಮಾಡುತ್ತಾನೋ, ಹಾಗೆಯೇ, ಶಿಲ್ಪಸಾಧನಗಳು / ತಾಂತ್ರಿಕ ಅಥವಾ ಯಾಂತ್ರಿಕ ಸಾಧನ ಸಲಕರಣೆಗಳನ್ನು ಚೆನ್ನಾಗಿ ನಡೆಸುತ್ತಾನೋ / ಸರ್ವ ಋತುಗಳಲ್ಲೂ ಯಜ್ಞ ಮಾಡುವನೋ ಅಂಥವನನ್ನು ಎಂದರ್ಥ. “ಋತ್ವಿಗ್-ದಧೃಗ್…” ಎಂಬ ಪಾಣಿನೀಯ ಸೂತ್ರದಿಂದ ಕಾಲಕಾಲಕ್ಕೆ ಸಮಯೋಚಿತವಾಗಿ ಯಜ್ಞಮಾಡುವವನೆಂಬ ಕರ್ತರೀಪ್ರಯೋಗಾರ್ಥವಾದರೆ, “ಕೃತೋ ಬಹುಲಮ್” ಎಂಬಂತೆ ಯಾವನಿಂದ ಬಹಳಷ್ಟು ಸಕಾಲಿಕ ಯಜ್ಞಾದಿಗಳ ಅನುಷ್ಠಾನವಾಗಿರುವುದೋ ಅಂಥವನನ್ನು ಎಂಬ ಕರ್ಮಣೀಪ್ರಯೋಗಾರ್ಥಕವೂ ಹೌದು. (ಋತ್ವಿಜರು ಯಜ್ಞವನ್ನು ಮಾಡುತ್ತಾರೆ— ಕರ್ತರೀ. ಋತ್ವಿಜರಿಂದ ಯಜ್ಞವು ಮಾಡಲ್ಪಡುತ್ತದೆ— ಕರ್ಮಣೀ.)
(ಹೋತಾರಮ್) ದಾತಾರಮ್ ಆದಾತಾರಂ ವಾ— ಹೋತೃವನ್ನು / ಹೋತಾರನನ್ನು— ಹವಿಸ್ಸನ್ನು / ಬೇಡಿದ್ದನ್ನು ಕೊಡುವವನನ್ನು / ಪಡೆದುಕೊಳ್ಳುವವನನ್ನು;
(ರತ್ನಧಾತಮಮ್) ರಮಣೀಯಾನಿ ಪೃಥಿವೀ-ಆದೀನಿ ಸುವರ್ಣಾದೀನಿ ಚ ರತ್ನಾನಿ ದಧಾತಿ ಧಾಪಯತಿ ಇತಿ ರತ್ನಧಾ, ಅತಿಶಯೇನ ರತ್ನಧಾ ಇತಿ ರತ್ನಧಾ-ತಮಃ, ತಮ್ || ೧ ||
ರತ್ನಾಭರಣಾದಿಗಳನ್ನೀಯುವವನನ್ನು— ರಮಣೀಯವಾದ / ಸುಂದರವಾದ ಭೂಮಿ ಮುಂತಾದ ಹಾಗೂ ಚಿನ್ನ ಮೊದಲಾದ ರತ್ನಗಳನ್ನು / ಬೆಲೆಬಾಳುವ ವಸ್ತುಗಳನ್ನು ಕೊಡುತ್ತಾನೆ / ಕೊಡಿಸುತ್ತಾನೆ ಎಂಬುದರಿಂದ ರತ್ನಧಾ; ಅತಿಶಯವಾಗಿ, ಅಧಿಕತಮವಾಗಿ / ಇತರ ಎಲ್ಲ ದೇವರಿಗಿಂತ ಹೆಚ್ಚು ಪ್ರಮಾಣದಲ್ಲಿ ರತ್ನಾದಿಗಳನ್ನೀಯುವವನು ಎಂಬುದರಿಂದ ರತ್ನಧಾ-ತಮನು; ಅಂಥವನನ್ನು ಸ್ತುತಿಸುತ್ತೇನೆ ಎಂಬುದಾಗಿ “ಅಗ್ನಿಮೀಳೇ..” ಋಙ್ಮಂತ್ರದ ದಯಾನಂದಭಾಷ್ಯದ ಭಾವಾರ್ಥವು.
ಅನ್ವಯಃ—
(ಅಹಂ) ಯಜ್ಞಸ್ಯ ಪುರೋಹಿತಂ ಋತ್ವಿಜಂ ಹೋತಾರಂ ರತ್ನಧಾತಮಂ ದೇವಮ್ ಅಗ್ನಿಮ್ ಈಳೇ || ೧ ||
ನಾನು ಯಜ್ಞದ ಪುರೋಹಿತನೂ, ಋತ್ವಿಜನೂ, ಹೋತೃವೂ, ರತ್ನಾದಿ ಸಂಪತ್ತನ್ನು ಹೇರಳವಾಗಿ ನೀಡುವವನೂ, ದೇದೀಪ್ಯಮಾನನೂ ಆದ ಅಗ್ನಿದೇವನನ್ನು ಸ್ತುತಿಸುತ್ತೇನೆ.
ಭಾವಾರ್ಥಃ—
ಅತ್ರ ಶ್ಲೇಷಾಲಂಕಾರೇಣ ಉಭಯಾರ್ಥ-ಗ್ರಹಣಮ್ ಅಸ್ತಿ ಇತಿ ಬೋಧ್ಯಮ್ (ಇಲ್ಲಿ “ನಾನಾರ್ಥಶಬ್ದವಿನ್ಯಾಸಃ ಶ್ಲೇಷಃ”— ಎಂಬಂತೆ ನಾನಾರ್ಥ ಕೊಡುವ ಶಬ್ದವಿನ್ಯಾಸವುಳ್ಳ ಶ್ಲೇಷಾಲಂಕಾರದಿಂದ ಎರಡೂ ಅರ್ಥಗಳ ಪರಿಗ್ರಹ / ಸ್ವೀಕಾರ ಎಂದು ತಿಳಿಯಬೇಕು.) |
ಇತಃ ಅಗ್ರೇ ಯತ್ರ ಯತ್ರ ಮಂತ್ರಭೂಮಿಕಾಯಾಮ್ ಉಪದಿಶ್ಯತೇ - ಇತಿ ಕ್ರಿಯಾಪದಂ ಪ್ರಯುಜ್ಯತೇ ಅಸ್ಯ ಸರ್ವತ್ರ ಕರ್ತಾ ಈಶ್ವರಃ - ಏವ ಬೋಧ್ಯಃ (ಇನ್ನು ಮುಂದೆ ಎಲ್ಲೆಲ್ಲಿ ಮಂತ್ರಭೂಮಿಕೆಯಲ್ಲಿ “ಉಪದಿಶ್ಯತೇ” ಎಂಬ ಕ್ರಿಯಾಪದವು ಪ್ರಯೋಗಿಸಲ್ಪಡುವುದೋ, ಇದಕ್ಕೆ ಎಲ್ಲಾ ಕಡೆಗಳಲ್ಲೂ ಜಗತ್ಕರ್ತನೂ, ವೇದಸ್ರಷ್ಟಾರನೂ ಆದ ಪರಮೇಶ್ವರನಿಂದಲೇ ಉಪದೇಶಿಸಲ್ಪಡುತ್ತದೆಂಬುದಾಗಿ ತಿಳಿಯಬೇಕು.) |
ಕುತಃ, ವೇದಾನಾಂ ತೇನ ಏವ ಉಕ್ತತ್ವಾತ್ ಪಿತೃವತ್ ಕೃಪಾಯಮಾಣಃ - ಈಶ್ವರಃ ಸರ್ವವಿದ್ಯಾ-ಪ್ರಾಪ್ತಯೇ ಸರ್ವಜೀವಹಿತಾರ್ಥಂ ವೇದೋಪದೇಶಂ ಚಕಾರ (ಯಾಕೆ? ವೇದಗಳ, ಅವನಿಂದಲೇ ಹೇಳಲ್ಪಟ್ಟಿರುವಿಕೆಯ ಮೂಲದಿಂದಾಗಿ; ತಂದೆಯಂತೆ ಕೃಪೆತೋರಿ ಲೋಕದ ಈಶ್ವರನು ಸರ್ವರಿಗೂ ಸರ್ವವಿದ್ಯೆಗಳ ಪ್ರಾಪ್ತಿಯಾಗಲೆಂದೂ, ಸರ್ವ ಜೀವರ ಹಿತಕ್ಕಾಗಿ ವೇದೋಪದೇಶವವನ್ನು ಮಾಡಿರುತ್ತಾನೆ.) |
ಯಥಾ ಪಿತಾ ಅಧ್ಯಾಪಕಃ ಸ್ವಪುತ್ರಂ ಶಿಷ್ಯಂ ಚ ತ್ವಮ್ ಏವಂ ವದ ಏವಂ ಕುರು ಸತ್ಯಂ ವದ ಪಿತರಮ್ ಆಚಾರ್ಯಂ ಚ ಸೇವಸ್ವ, ಅನೃತಂ ಮಾ ಕುರು ಇತಿ ಉಪದಿಶತಿ, ತಥಾ ಏವ ಅತ್ರ ಬೋಧ್ಯಮ್ (ಹೇಗೆ ತಂದೆಯೂ, ಅಧ್ಯಾಪಕನೂ ತನ್ನ ಪುತ್ರನಿಗೂ, ಶಿಷ್ಯನಿಗೂ ‘ನೀನು ಹೀಗೆ ಹೇಳು, ಹೀಗೆ ಮಾಡು, ಸತ್ಯವನ್ನು ಹೇಳು, ಪಿತೃವನ್ನೂ ಆಚಾರ್ಯನನ್ನೂ ಸೇವೆ ಮಾಡು, ಅಸತ್ಯವನ್ನು / ಮೋಸ-ವಂಚನೆಯನ್ನು ಮಾಡಬೇಡ’ ಎಂದು ಉಪದೇಶಿಸುವನೋ, ಅಂತೆಯೇ ಎಂದು ಇಲ್ಲಿಯೂ ತಿಳಿಯಬೇಕು.) |
ವೇದಃ ಚ ಸರ್ವಜೀವ-ಕಲ್ಯಾಣಾರ್ಥಮ್ ಆವಿರ್ಭೂತಃ (ಮತ್ತು, ವೇದವು ಸರ್ವಜೀವರ ಕಲ್ಯಾಣ / ಶುಭಕ್ಕಾಗಿ ಆವಿರ್ಭವಿಸಿತು.) |
ಏವಮ್ ಅರ್ಥಃ ಅತ್ರ ಉತ್ತಮಪುರುಷ-ಪ್ರಯೋಗಃ (ಇದಕ್ಕಾಗಿಯೇ ಇಲ್ಲಿ ಪ್ರತಿಯೊಬ್ಬ ವೇದಪಾಠಕನಿಗೂ ತಾನೇ ಸ್ವತಃ ಸ್ತುತಿಸುವವನೆಂಬರ್ಥದಿಂದ ಪ್ರಯೋಜನ ಸಿಗಲೆಂದೇ ಉತ್ತಮಪುರುಷವನ್ನು ಪ್ರಯೋಗಿಸಲಾಗಿದೆ “ಈಳೇ”— “ನಾನು ಸ್ತುತಿಸುತ್ತೇನೆ” ಎಂಬುದಾಗಿ.) |
ವೇದೋಪದೇಶಸ್ಯ ಪರೋಪಕಾರಾರ್ಥತ್ವಾತ್ (ವೇದೋಪದೇಶಕ್ಕೆ ಪರೋಪಕಾರದೃಷ್ಟಿಯಿರುವುದರಿಂದಾಗಿ ಇಂತಹ ಪ್ರಯೋಗವಿದೆ.) |
ಅತ್ರ ಅಗ್ನಿಶಬ್ದೇನ ಪರಮಾರ್ಥ-ವ್ಯವಹಾರ-ವಿದ್ಯಾ-ಸಿದ್ಧಯೇ ಪರಮೇಶ್ವರ-ಭೌತಿಕೌ ದ್ವೌ ಅರ್ಥೌ ಗೃಹ್ಯೇತೇ (ಇಲ್ಲಿ ಅಗ್ನಿಶಬ್ದದಿಂದ ಪಾರಮಾರ್ಥಿಕ ಹಾಗೂ ಲೌಕಿಕ ವ್ಯವಹಾರದಲ್ಲಿ ಫಲಸಿದ್ಧಿಯಾಗಲು ಪರಮೇಶ್ವರ ಹಾಗೂ ಭೌತಾಗ್ನಿ ಎಂಬ ಎರಡರ್ಥಗಳೂ ಸ್ವೀಕೃತವಾಗಿವೆ.) |
ಪುರಾ ಆರ್ಯೈಃ ಯಾ ಅಶ್ವ-ವಿದ್ಯಾ-ನಾಮ್ನಾ ಶೀಘ್ರ-ಗಮನ-ಹೇತುಃ ಶಿಲ್ಪವಿದ್ಯಾ ಸಂಪಾದಿತಾ ಇತಿ ಶ್ರೂಯತೇ ಸಾ ಅಗ್ನಿವಿದ್ಯಾ ಏವ ಆಸೀತ್ (ಹಿಂದೆ ಸತ್ಪುರುಷ ಮಹಾತ್ಮರಿಂದ ಯಾವ ಅಶ್ವವಿದ್ಯೆಯೆಂಬ ಶೀಘ್ರ ಸಂಚಾರಕ್ಕೆ ಕಾರಣವಾದ ತಾಂತ್ರಿಕ ವಿದ್ಯೆಯು ಸಂಪಾದಿತವಾಯಿತೆಂದು ಕೇಳಿಬರುತ್ತದೋ ಅದು ಅಗ್ನಿವಿದ್ಯೆಯೇ ಆಗಿತ್ತು.) |
ಪರಮೇಶ್ವರಸ್ಯ ಸ್ವಯಂ-ಪ್ರಕಾಶತ್ವ-ಸರ್ವ-ಪ್ರಕಾಶಕತ್ವಾಭ್ಯಾಮ್ ಅನಂತ-ಜ್ಞಾನವತ್ತ್ವಾತ್ ಭೌತಿಕಸ್ಯ ರೂಪ-ದಾಹ-ಪ್ರಕಾಶ-ವೇಗ-ಛೇದನಾದಿ-ಗುಣವತ್ತ್ವಾತ್ ಶಿಲ್ಪವಿದ್ಯಾಯಾಂ ಮುಖ್ಯಹೇತುತ್ವಾತ್ ಚ ಪ್ರಥಮಂ ಗ್ರಹಣಂ ಕೃತಮ್ ಅಸ್ತಿ ಇತಿ ವೇದಿತವ್ಯಮ್ {ಪರಮೇಶ್ವರನ ಸ್ವಯಂ ಪ್ರಕಾಶಕತ್ವ ಹಾಗೂ ಸಮಸ್ತವನ್ನೂ ಪ್ರಕಾಶಿಸುವ ಗುಣಗಳಿಂದ, ಅನಂತವಾದ ಜ್ಞಾನವಿರುವಿಕೆಯಿಂದ, ಭೌತಿಕಾಗ್ನಿಯ ವಸ್ತುಗಳ ರೂಪ ತಿಳಿಯಲು ಅಗತ್ಯವಾದ ಬೆಳಕಿನ ಗುಣ (ಕತ್ತಲೆಯಲ್ಲಿ ರೂಪ ತಿಳಿಯದು), ದಹನಗುಣ, ಪ್ರಕಾಶಿಸುವ ಸ್ವಭಾವ, ವೇಗ, ಉರಿಸಿ ಛೇದಿಸುವ ಗುಣ ಮುಂತಾದವುಗಳಿಂದ ಹಾಗೂ ತಾಂತ್ರಿಕ ವಿನ್ಯಾಸ / (material design technology) / ಶಿಲ್ಪವಿದ್ಯೆಯಲ್ಲಿ ಮುಖ್ಯಕಾರಣನೂ ಆಗಿರುವುದರಿಂದಾಗಿ ಮೊತ್ತಮೊದಲಿಗೆ ಅಗ್ನಿಸ್ವರೂಪವನ್ನು ಸ್ವೀಕರಿಸಲಾಗಿದೆ ಎಂದು ತಿಳಿಯಲ್ಪಡಬೇಕು.} || ೧ ||
ಇಲ್ಲಿಗೆ “ಅಗ್ನಿಮೀಳೇ..” ಋಕ್ಕಿನ ದಯಾನಂದಭಾಷ್ಯವು ಸಂಪೂರ್ಣವು.
“ಅಗ್ನಿಮೀಳೇ...” ಮಂತ್ರಸ್ಯ ಜಯದೇವಶರ್ಮಕೃತ-ಭಾಷಾಭಾಷ್ಯಾನುವಾದಃ— (ಹಿಂದೀಭಾಷ್ಯದ ಅನುವಾದ)
ಪರಮೇಶ್ವರ-ಪರವಾಗಿ—
ನಾನು ಯಜ್ಞವನ್ನೂ, ಬ್ರಹ್ಮಾಂಡದ ಸಮಸ್ತ ಸೃಷ್ಟಿಯನ್ನೂ ಧರಿಸಿರುವ, ಅದಕ್ಕೂ ಪೂರ್ವದಲ್ಲಿ (ಹಿಂದೆ) ನಡೆದ ಪ್ರತಿಯೊಂದು ಸೃಷ್ಟಿಕಾಲದಲ್ಲೂ ಸೃಷ್ಟಿಯ ಸಮಸ್ತ ಘಟಕಗಳನ್ನು ಸಂಯೋಜಿಸಿದ, ಆನಂದದಿಂದ ಸಕಲ ಜೀವರಿಗೂ ಬದುಕಿ ಬಾಳಲು ಯೋಗ್ಯವಾದ ಪೃಥ್ವಿಯೇ ಮುಂತಾದ ಸಕಲ ಲೋಕಗಳನ್ನು (ಆ)ಧರಿಸಿರುವ, ಸರ್ವ ವಸ್ತುಗಳ ದಾತಾ, ದ್ರಷ್ಟಾ ಹಾಗೂ ಪ್ರಕಾಶಕವಾದ ಅಗ್ನಿಸ್ವರೂಪಿಯಾದ, ಎಲ್ಲರಿಗಿಂತಲೂ ಮೊದಲೇ ಇದ್ದ ಜ್ಞಾನೀ, ಬೆಳಕಿನರೂಪವಾದ ಪರಂಜ್ಯೋತಿಯಾದ ಪರಮೇಶ್ವರನನ್ನು ಸ್ತುತಿಸುತ್ತೇನೆ.
ರಾಜ ಹಾಗೂ ವಿದ್ವಾನನ ( ಜ್ಞಾನಿ / ದೇವತೆಯ) ಪರವಾಗಿ—
ಪ್ರಜಾಪಾಲನರೂಪೀ ಯಜ್ಞ / ಪ್ರಜಾಪತಿಯ ಕಾರ್ಯವನ್ನು ವಹಿಸಿಕೊಂಡಿರುವ, ಎಲ್ಲರೆದುರು ಪ್ರಮಾಣರೂಪವಾಗಿ ಸ್ಥಿತನಾದ, ಸಕಲರಿಗೂ ಪೂರ್ವದಲ್ಲೇ ಜಗವನ್ನು ಧಾರಣೆ ಮಾಡಿದ, ಸಭಾಪತಿಯಾಗಿ ಸಭಾಸದರ ಪ್ರೇರಕನಾದ, ಸಕಲ ರಮಣೀಯ / ಉತ್ತಮ ಗುಣಗಳನ್ನು ಧಾರಣೆ ಮಾಡಿದ, ಬೆಲೆಬಾಳುವ ರತ್ನ-ಸುವರ್ಣಾದಿಗಳನ್ನು ಧರಿಸಿರುವ ಅಗ್ನಿ / ಅಗ್ರಣಿ / ನಾಯಕನೂ, ದಾನಶೀಲನೂ, ವಿಜಯಶೀಲನೂ ಆದ ರಾಜ / ಸಭಾಪತಿ / ಸೇನಾಪತಿ ಪುರುಷನನ್ನು ಪ್ರಜೆಯಾದ ನಾನು ಆದರದಿಂದ ಸತ್ಕರಿಸುತ್ತೇನೆ.
ಭೌತಿಕಪರವಾಗಿ—
ಯಜ್ಞ, ಶಿಲ್ಪಾದಿಗಳ ಕರ್ತೃವೂ, ಮೊದಲೇ ಛೇದನ-ಭೇದನ-ಕೆತ್ತನೆ ಮುಂತಾದ ಕೌಶಲ್ಯಗಳಿಂದ ಕೂಡಿದ, (ದೇವ=) ಪ್ರಕಾಶಮಯವಾದ, ಗತಿ / ಚಲನಶೀಲತೆಯನ್ನುಂಟುಮಾಡುವ ಸಾಧನ-ಸಲಕರಣೆ-ಯಂತ್ರಾದಿಗಳ ಸುಸ್ಥಿತಿಕಾರಕ / ಸಂಯೋಜಕವಾದ, ರಥಾದಿ ಯಂತ್ರಗಳನ್ನು ಹೊಂದಿದ / ಆಧರಿಸಿದ, ಜ್ಯೋತಿರ್ಮಯ ಕಿರಣಗಳಿಂದ ಕೂಡಿರುವುದನ್ನು ನಾನು ಪ್ರೇರಿಸುತ್ತೇನೆ / ಅದನ್ನು ಯಜ್ಞ ಹಾಗೂ ಯಂತ್ರಗಳಲ್ಲಿ ಉಪಯೋಗಿಸುತ್ತೇನೆ. (ಅಗ್ನಿ— ಯಂತ್ರ, ವಾಹನಾದಿಗಳ ಇಂಧನ / ಕೆತ್ತನೆಯ ಆಯುಧ / ರಥದ ಚಕ್ರ)
ಯಜ್ಞಾಗ್ನಿಪರವಾಗಿ—
ಯಜ್ಞಕ್ಕರ್ಪಿಸುವ ಆಹುತಿಯನ್ನು ಸ್ವೀಕರಿಸುವ, ಋತ್ವಿಜರಿಗೆ ಸರಿ-ಸಮಾನವಾಗಿ ಆಯಾ ಋತುವಿನಲ್ಲಿ / ಕಾಲ ಕಾಲಕ್ಕೆ ಸೂಕ್ತ ಯಜ್ಞ ಮಾಡುವ, ಪುರೋಹಿತರಂತೆ ಮೊದಲು ಗೌರವಾದರಪೂರ್ವಕವಾಗಿ ಅಗ್ನ್ಯಾಧಾನಾದಿಗಳನ್ನು ಮಾಡುವ, ಪ್ರಕಾಶಯುಕ್ತ ಯಜ್ಞಾಗ್ನಿಯನ್ನು ನಾನು ಪ್ರಜ್ವಲಿಸುತ್ತಿದ್ದೇನೆ.
ಸುಬೋಧ-ಹಿಂದೀಭಾಷ್ಯಾನುವಾದ—
ಪುರೋಹಿತಮ್— ತಾನೇ ಮುಂದಿದ್ದು ಜನರಿಗೆ ಹಿತವನ್ನು ಉಂಟುಮಾಡುವ,
ಯಜ್ಞಸ್ಯ ದೇವಮ್— ಯಜ್ಞದ ಪ್ರಕಾಶಕನಾದ,
ಋತ್ವಿಜಮ್— ಋತುವಿಗನುಸಾರವಾಗಿ ಯಜ್ಞವನ್ನು ಮಾಡುವ,
ಹೋತಾರಮ್— ದೇವತೆಗಳನ್ನು ಆಹ್ವಾನಿಸುವ,
ರತ್ನಧಾತಮಮ್— ರತ್ನಗಳನ್ನು ಧರಿಸಿರುವ,
ಅಗ್ನಿಮ್— ಅಗ್ನಿದೇವನನ್ನು (ನಾನು),
ಈಳೇ— ಸ್ತುತಿಸುತ್ತೇನೆ.
ವಿವರಣೆ—
ಪುರೋಹಿತ— ಪುರ / ನಗರ / ರಾಷ್ಟ್ರದ ಹಿತವನ್ನು ಬಯಸುವವನು, ಅದಕ್ಕಾಗಿ ಶ್ರಮಿಸುವವನು, ಮುಂದೆ ಇರುವವನು (ಪುರೋ / ಪುರಃ, ಅಗ್ರೇ ನಿಹಿತಃ ಸ್ಥಿತಃ), ಹಿಂದೆ ಇರುವವನಲ್ಲ.
ಹೋತಾ— ದೇವತೆಗಳನ್ನು ಕರೆಯುವವ, ಆಹ್ವಾನಿಸುವವ.
ಅಗ್ನಿ— ಅಗ್ರಣಿ, ನೇತಾರ.
ಇಂತಹ ಗುಣಗಳುಳ್ಳ ನಾಯಕನನ್ನು ಎಲ್ಲೆಡೆಯಲ್ಲೂ ಎಲ್ಲರೂ ಹೊಗಳುತ್ತಾರಲ್ಲವೆ? ಹಾಗಾಗಿಯೇ,
ಈಳೇ— ಅಂಥವನನ್ನು ಪ್ರಶಂಸಿಸುತ್ತೇನೆ.
ಯಜ್ಞಸ್ಯ ದೇವಃ— ಸಮಾಜದ ಸಂಘಟನೆಯ ಸಂಚಾಲಕ, ಯಜ್ಞತುಲ್ಯವಾದ ಪವಿತ್ರ / ಶುಭಕರ್ಮಗಳನ್ನು ಮಾಡುವವನು.
ಅಗ್ನಿ— ಅಗ್ರಣಿ, ನೇತೃ, ಮುಂದಾಳು, ಅಗ್ನಿಯಂಥ ತೇಜಸ್ಸುಳ್ಳವನು.
ಭಾವಾರ್ಥ—
ಎಲ್ಲರಿಗೂ ಹಿತವನ್ನುಂಟುಮಾಡುವ, ಯಜ್ಞವನ್ನು ಪ್ರಕಾಶಿಸುವ / ಬೆಳಗುವ, ಸದಾ ಸಕಲರಿಗೂ ಹಿತವಾದ, ಲೋಕಕಲ್ಯಾಣಾರ್ಥವಾದ ಯಜ್ಞದಂಥ ಕರ್ಮವನ್ನೇ ಮಾಡುವ, ದೇವತೆಗಳಿಗೆ ಹವಿಸ್ಸನ್ನೊಯ್ದು ಮುಂತಾಗಿ ಸಹಾಯಕನಾದ, ಧನ-ಕನಕಾದಿಯುಕ್ತನಾದ ಅಗ್ನಿದೇವನನ್ನು ನಾನು ಸ್ತುತಿಸುತ್ತೇನೆ.
ಕಪಾಲಿಶಾಸ್ತ್ರೀಕೃತಭಾಷ್ಯ
(ಅರವಿಂದಪ್ರೇರಿತ-ವೇದಗುಪ್ತಾರ್ಥ-ಸಿದ್ಧಾಂಜನಭಾಷ್ಯ)
ಓಂ ಅಗ್ನಿಮೀಳೇ ಪುರೋಹಿತಂ ಯಜ್ಞಸ್ಯ ದೇವಮೃತ್ವಿಜಮ್ | ಹೋತಾರಂ ರತ್ನಧಾತಮಮ್ || ೧ ||
ಅಗ್ನಿಂ ಅಗ್ನಿನಾಮಕಂ (ದೇವಂ), ಈಳೇ ಅಧ್ಯೇಷಣೀಯತ್ವೇನ ಸ್ತೌಮಿ |
(ಅಗ್ನಿಯೆಂಬ ಹೆಸರಿನ ದೇವನನ್ನು ಯಾಚನಾರೂಪವಾಗಿ / ಪ್ರಾರ್ಥನಾರೂಪದಿಂದ / ಬೇಡಿಕೊಳ್ಳುತ್ತಾ ಸ್ತುತಿಸುತ್ತೇನೆ / ಹೊಗಳುತ್ತೇನೆ / ಪ್ರಶಂಸಿಸುತ್ತೇನೆ.)
ಕೀದೃಶಮ್? (ಅವನೆಂಥವನು?)
ಪುರೋಹಿತಂ ಪುರಸ್ತಾತ್ ನಿಹಿತಂ ಕಾರ್ಯನಿರ್ವಾಹಾಯ (ಪುರೋಹಿತನಾದವನನ್ನು, ಕಾರ್ಯನಿರ್ವಹಣೆಗಾಗಿ ಮುಂದೆ ಕುಳ್ಳಿರಿಸಲ್ಪಟ್ಟವನನ್ನು) ,
ಪುನಃ ಕೀದೃಶಮ್? (ಮತ್ತೆ ಎಂಥವನನ್ನು?) ಯಜ್ಞಸ್ಯ ದೇವಮ್ ಋತ್ವಿಜಂ ದೇವತಾಸಮ್ಭಾವನಾರ್ಥಮ್ ಅನುಷ್ಠೀಯಮಾನಸ್ಯ ಯಾಗಸ್ಯ ನಿರ್ವರ್ತನೇ ಯಃ ದೇವಃ ಏವ ಋತ್ವಿಕ್ ಭೂತಃ ತಮ್ | (ಯಜ್ಞದ ದೇವನೂ, ಋತ್ವಿಜನೂ ಆದವನನ್ನು; ಸಮಸ್ತದೇವತೆಗಳನ್ನು ಚೆನ್ನಾಗಿ ಭಾವಪೂರ್ವಕವಾಗಿ ಧ್ಯಾನಿಸಲು, ಗೌರವಿಸಲು, ಪ್ರಾರ್ಥಿಸಲು, ಸ್ತುತಿಸಲು ಅನುಷ್ಠಾನಿಸಲ್ಪಡುವ ಯಾಗದ / ಯಜ್ಞದ ನಿರ್ವಹಣೆಯಲ್ಲಿ / ಪ್ರವರ್ತನೆಯಲ್ಲಿ ಯಾವ ದೇವನೇ ಋತ್ವಿಜರೂಪಿಯಾಗಿರುವನೋ ಅಂತಹ ಅಗ್ನಿದೇವನನ್ನು.)
ಪುನಃ ಚ ಕೀದೃಶಮ್? (ಮತ್ತೂ ಎಂಥವನನ್ನು?) ಹೋತಾರಂ ಹ್ವಾತಾರಂ ಸಾಮರ್ಥ್ಯಾತ್ ದೇವಾನಾಮ್ | (ಹೋತಾರನನ್ನು / ಹೋತೃವನ್ನು; ಸಮಸ್ತದೇವತೆಗಳನ್ನು ಆಹ್ವಾನಿಸುವ ಸಾಮರ್ಥ್ಯದಿಂದಾಗಿ ಹೋತೃವೆನಿಸಿದ ಅಗ್ನಿದೇವನನ್ನು.)
ಪುನರಪಿ (ಪುನಃ ಅಪಿ) ಕಥಂ ಭೂತಮ್? (ಮತ್ತೂ ಕೂಡ / ಸಹ ಹೇಗಿರುವವನನ್ನು ಸ್ತುತಿಸುತ್ತೇನೆ?) ರತ್ನಧಾತಮಮ್ ರಮಣೀಯಾನಾಂ ರತೀನಾಮ್ ಅತಿಶಯೇನ ಧಾರಕಮ್ || (ರತ್ನಧಾ-ತಮ-ನನ್ನು; ರಮಣೀಯವಾದ, ರಮಿಸಲು / ಕ್ರೀಡಿಸಲು / ಆನಂದಿಸಲು / ಸುಖಪಡಲು ಯೋಗ್ಯವಾದ, ಸುಖಸಾಧನಗಳನ್ನು ಅತಿಶಯವಾಗಿ / ವಿಪುಲವಾಗಿ / ಹೇರಳವಾಗಿ ಧಾರಣೆಮಾಡಿದವನನ್ನು, ಅವುಗಳ ತವನಿಧಿಯಾಗಿರುವವನನ್ನು ಸ್ತುತಿಸುತ್ತೇನೆ.)
ಅಗ್ನಿಮ್ ( ಅಗ್ನಿಯನ್ನು) ― …“ಸ ವಾ ಏಷೋऽಗ್ರೇ ದೇವತಾನಾಮಜಾಯತ ತಸ್ಮಾದಗ್ನಿರ್ನಾಮ” ಇತ್ಯಾದಿಬ್ರಾಹ್ಮಣವಾಕ್ಯಾನಿ “ಅಗ್ರಣೀಃ” ಇತ್ಯಾದಿನಿರ್ವಚನಸ್ಯ ಮೂಲಮ್ ಇತಿ ಜ್ಞಾಯತೇ | (“ದೇವತೆಗಳಲ್ಲಿ ಆ ಅಗ್ನಿಯಾದರೋ— ಅಗ್ರೇ ಜಾತಃ— ಮೊದಲು ಹುಟ್ಟಿದನೆಂಬುದರಿಂದಾಗಿ ಅಗ್ನಿಯೆಂಬ ಹೆಸರು” ಮುಂತಾದ ಬ್ರಾಹ್ಮಣವಾಕ್ಯಗಳು “ಅಗ್ರಣೀಃ / ಮುಂದಾಳು” ಮುಂತಾದ ನಿರ್ವಚನದ / ನಿಷ್ಪತ್ತಿಯ ಮೂಲವೆಂದು ತಿಳಿಯುವುದು)…ಅಙ್ಗತಿ ಗಚ್ಛತಿ ಊರ್ಧ್ವಂ, ಹವಿಃ ಸ್ವರ್ಗಂ ನೇತುಮ್ ಇತಿ ವಾ ವ್ಯುತ್ಪತ್ತಿಮ್ ಆಚಕ್ಷತೇ | (ಅಥವಾ, ಮೇಲಕ್ಕೆ ಹೋಗುತ್ತಾನೆ, ಸ್ವರ್ಗಕ್ಕೆ ಹವಿಸ್ಸನ್ನೊಯ್ಯಲು ಎಂದೂ ವ್ಯುತ್ಪತ್ತಿಯನ್ನು ಹೇಳುತ್ತಾರೆ.) ಪ್ರಾಚೀನ-ಆರ್ಯ-ಭಾಷಾಶಾಖೀಯಾನಾಂ ಅಗ್ನ್ಯರ್ಥಕ-ಧಾತೂನಾಂ ಪರೀಕ್ಷಣೇ ಬಲವದ್-ದೀಪ್ತಿಮದ್-ಗತಿಃ-ಅವಯವಾರ್ಥಃ ಭವತಿ… || (ಹಿಂದಿನ ಸನಾತನ ಆರ್ಯಾವರ್ತದ / ಭಾರತೀಯ ಭಾಷಾಶಾಖೆಯವರ ಅಗ್ನಿಯ ಅರ್ಥಕೊಡುವ ವಿವಿಧ ಧಾತುಗಳನ್ನು ಪರೀಕ್ಷಿಸಲಾಗಿ, ಬಲವುಳ್ಳ, ದೀಪ್ತಿಯುಳ್ಳ / ಬೆಳಕುಳ್ಳ, ಗತಿಶೀಲತೆ / ಚಲನಶೀಲತೆ / ಗಮನಶೀಲತೆ ಎಂಬ ಆಂಶಿಕ ಅರ್ಥವು ಆಗುವುದು.)
ಈಳೇ (ಸ್ತುತಿಮಾಡುತ್ತೇನೆ) ― ಸ್ತೌಮಿ ಇತಿ ಸಾಯಣಃ, ಯಾಚಾಮಿ ಇತಿ ಯಾಸ್ಕಃ | (ಸ್ತುತಿಸುತ್ತೇನೆಂದು ಚತುರ್ವೇದಭಾಷ್ಯಕಾರರಾದ ಸಾಯಣರೂ, ಯಾಚಿಸುತ್ತೇನೆಂದು ವೇದಾಂಗವಾದ ನಿರುಕ್ತದ ಕರ್ತೃವಾದ ಯಾಸ್ಕರೂ ಹೇಳಿರುವರು). ಧಾತೂನಾಂ ಬಹ್ವರ್ಥತ್ವೇ ನ ವಿವಾದಃ | (ಕ್ರಿಯಾಪದಗಳ ಮೂಲಗಳಾದ ಧಾತುಗಳಿಗೆ ಅನೇಕಾರ್ಥಗಳಿವೆಯೆಂಬುದಕ್ಕೆ ಎದುರುಮಾತಿಲ್ಲ). ಈಳತಿಃ ಯಾಞ್ಚಾಕರ್ಮ, ಅಧ್ಯೇಷಣಾಕರ್ಮ, ಪೂಜಾಕರ್ಮ ವಾ ಇತಿ ಯಾಸ್ಕಃ | (ಈಳತೇ / ಈಡತೇ ಎಂಬ ಕ್ರಿಯಾಪದಕ್ಕೆ ಯಾಚನೆ, ಪ್ರಾರ್ಥನೆ ಅಥವಾ ಪೂಜೆ ಎಂಬರ್ಥಗಳಿವೆ ಎಂಬುದು ಯಾಸ್ಕಮಹರ್ಷಿಯ ಮತ). ಅಗ್ನಿಸ್ವರೂಪ-ತದಧಿಕಾರ-ತನ್ನಿರ್ವಾಹಾಪೇಕ್ಷಯಾ ಅಧ್ಯೇಷಣಾಕರ್ಮ ಇತಿ ಉಪಪನ್ನತಮಮ್ | (ಅಗ್ನಿಯ ಸ್ವರೂಪ, ಆತನ ಅಧಿಕಾರವ್ಯಾಪ್ತಿ, ಆತನ ನಿರ್ವಹಣಾಸಾಮರ್ಥ್ಯಗಳನ್ನು ಹೊರತುಪಡಿಸಿ, ಪ್ರಾರ್ಥನೆ / ಅಧ್ಯೇಷಣೆ ಯೆಂಬುದೇ ಹೆಚ್ಚು ಸೂಕ್ತವಾದದ್ದು). ಅಧ್ಯೇಷಣಾ ಅಧಿಕಾ ಏಷಣಾ ಪ್ರೇರಣಾ ಭವತಿ | (ಅಧ್ಯೇಷಣೆಯೆಂದರೆ ಅಧಿಕವಾದ ಏಷಣೆ / ಪ್ರೇರಣೆ ಎಂದೂ ಆಗುತ್ತದೆ). ಪೂಜ್ಯಸ್ಯ ಪುರೋಹಿತಸ್ಯ ಅಗ್ನೇಃ ದೇವಸ್ಯ ವಾ ಸತ್ಕಾರಪೂರ್ವಕಂ ಕರ್ತವ್ಯವಿಶೇಷೇಷು ನಿಯೋಜನಮ್ ಅಧ್ಯೇಷಣಾ ಇತಿ ಉಚ್ಯತೇ | ಈಳೇ ಅಧ್ಯೇಷೇ || (ಯಜ್ಞದಂತಹ ವಿಶೇಷಕರ್ತವ್ಯಗಳಲ್ಲಿ ಪೂಜ್ಯನಾದ ಪುರೋಹಿತನ ಅಥವಾ ದೇವನಾದ ಅಗ್ನಿಯ ಸತ್ಕಾರಪೂರ್ವಕವಾದ ನಿಯೋಜನೆಯು ಅಧ್ಯೇಷಣೆ ಎನ್ನಲ್ಪಡುವುದು. ಈಳೇ / ಅಧ್ಯೇಷೇ ಅಂದರೆ ಇದೇ ಅರ್ಥವು).
ಪುರೋಹಿತಮ್ (ಪುರೋಹಿತನನ್ನು) ― ಯಜನಕರ್ಮ-ನಿರ್ವಾಹಾಯ ಯಜಮಾನಸ್ಯ ಪುರಸ್ತಾದ್ ಅಗ್ರೇ ನಿಹಿತಃ ಅಗ್ನಿಃ | (ಯಜನ / ಯಜ್ಞಮಾಡುವಿಕೆಯ ಕರ್ಮದ ನಿರ್ವಹಣೆಗಾಗಿ ಯಜಮಾನನ ಮುಂದೆ ಅಗ್ರಸ್ಥಾನದಲ್ಲಿ ಇಡಲ್ಪಟ್ಟ ಅಗ್ನಿಯೇ ಪುರೋಹಿತನು). ಅತ ಏವ ತಂ ಋಷಿಃ ಅನ್ತರ್ಯಾಗೇ, ಯಜಮಾನೋ ಬಹಿರ್ಯಾಗೇ ಅಧ್ಯೇಷತೇ | (ಅದಕ್ಕಾಗಿಯೇ, ಆತನನ್ನು / ಅಗ್ನಿಯನ್ನು, ಋಷಿಯು ತಪಸ್ಸೆಂಬ ಅಂತರ್ಯಾಗದಲ್ಲಿಯೂ, ಯಜ-ಮಾನನು ಯಜ್ಞವೆಂಬ ಬಹಿರ್ಯಾಗದಲ್ಲಿಯೂ ಅಗ್ನಿಯನ್ನು ಸತ್ಕಾರಪೂರ್ವಕವಾಗಿ ನಿಯೋಜಿಸುತ್ತಾನೆ). ಏವಂ ಚ ಉಪಪದ್ಯತೇ, ಈಳತಿಃ ಅಧ್ಯೇಷಣಾರ್ಥಃ | (ಈಳೇ ಎಂಬುದಕ್ಕೆ ಹೀಗೆ ಸತ್ಕಾರಪೂರ್ವಕ ನಿಯೋಜನೆ ಅಥವಾ ಅಧ್ಯೇಷಣೆ ಎಂಬ ಅರ್ಥವು ಉಂಟಾಗುತ್ತದೆ). ಪುರೋಹಿತಮ್― “ಪುರಃ ಏನಂ ದಧತೇ” ಇತಿ ಆಮ್ನಾಯಃ ಚ ಸಂ-ಗಚ್ಛತೇ | (ಪುರೋಹಿತನನ್ನು― “ಮುಂದೆ / ಅಗ್ರಭಾಗದಲ್ಲಿ ಇವನನ್ನು ಕುಳ್ಳಿರಿಸಲಾಗುತ್ತದೆ” ಎಂದು ಆಮ್ನಾಯ / ವೇದವು ಹೇಳುತ್ತಾ ಹೋಗುತ್ತದೆ). “ಯಜ್ಞಸ್ಯ ಪುರೋಹಿತಮ್” “ಹೋತಾರಂ ದೇವಮ್ ಋತ್ವಿಜಮ್” “ರತ್ನಧಾತಮಮ್” ಇತಿ ವ್ಯಾಖ್ಯಾತೄಣಾಮ್ ಅನ್ವಯಃ ನ ಅವಶ್ಯಕಃ ನ ಚ ಸಮೀಚೀನಃ, ಇತಿ ದ್ರಷ್ಟವ್ಯಮ್ | (“ಯಜ್ಞದ ಪುರೋಹಿತನೂ, ಹೋತಾರನೂ / ಹೋತೃವೂ, ದೇವನೂ ಸಂಪತ್ಪ್ರದಾಯಕನೂ ಆದ ಋತ್ವಿಜನನ್ನು” ಎಂಬ ವ್ಯಾಖ್ಯಾನಕಾರರ ಅನ್ವಯವು ಅನವಶ್ಯಕವೂ, ಅಸಮೀಚೀನವೂ / ಸರಿಯಲ್ಲದ್ದೂ ಎಂದು ಕಾಣಬೇಕು / ತಿಳಿಯಬೇಕು). ಪಾದಶಃ ಅನ್ವಯಸ್ಯ ಸಮ್ಭವೇ ಸತಿ, ಪಾದಾನ್ತರಸ್ಥಪದೈಃ ಪಾದಾನ್ತರಸ್ಥಪದಾನಾಂ ಯೋಜನಾ ನ ಋಜ್ವೀ | (ಪ್ರತಿ ಪಾದ / ಚರಣ ದ ಅನ್ವಯವು ಆಗುವುದಾದರೆ, ಒಂದು ಪಾದದ ಪದಗಳೊಂದಿಗೆ ಬೇರೆ ಚರಣದ ಪದಗಳ ಸಂಯೋಜನೆ / ಸೇರಿಸುವಿಕೆ ಋಜುವಾದುದಲ್ಲ / ಸೂಕ್ತವಾದುದಲ್ಲ). ತಸ್ಮಾದ್ “ಯಜ್ಞಸ್ಯ ದೇವಂ ಋತ್ವಿಜಮ್ (ಪುರೋಹಿತಮ್ ಅಗ್ನಿಮ್ ಈಳೇ)” ಇತಿ ಪಾದೋ (ಪಾದೌ) ವ್ಯಾಖ್ಯಾತಃ (ವ್ಯಾಖ್ಯಾತೌ) || [ಆದ್ದರಿಂದ, “ಯಜ್ಞದ ದೇವನಾದ ಋತ್ವಿಜ (ನೂ, ಪುರೋಹಿತನೂ ಆದ ಅಗ್ನಿಯನ್ನು ಸ್ತುತಿಸುತ್ತೇನೆ)ನನ್ನು” ಎಂದು ಪಾದವು / ಚರಣವು (ಪಾದದ್ವಯ / ಚರಣದ್ವಯ ವು) ವ್ಯಾಖ್ಯಾನಿಸಲ್ಪಟ್ಟಿದೆ (ವ್ಯಾಖ್ಯಾನಿಸಲ್ಪಟ್ಟಿವೆ)].
ಹೋತಾರಮ್ (ಹೋತಾರನನ್ನು / ಹೋತೃವನ್ನು)― ಸ್ವಯಂ ದೇವಃ ಸನ್ ಅನ್ಯಾನ್ ಯಜ್ಞೇ ಸಮ್-ಉಪಸ್ಥಿತಾನ್ ಕರ್ತುಮ್ ಆಹ್ವಯತಿ | (ತಾನೇ ದೇವನಾಗಿದ್ದು ಇತರ ದೇವತೆಗಳನ್ನು ಯಜ್ಞದಲ್ಲಿ ಸಮುಪಸ್ಥಿತರಾಗುವಂತೆ / ಆಗಮಿಸಿ ಸಾನ್ನಿಧ್ಯ ವಹಿಸುವಂತೆ ಮಾಡಲು ಆಹ್ವಾನಿಸುತ್ತಾನೆ). ಏವಮ್, ಆಹ್ವಾನಪ್ರಭುಃ ಅಗ್ನಿಃ || (ಹೀಗೆ, ಸಮಸ್ತದೇವತೆಗಳನ್ನು ಆಹ್ವಾನಿಸಬಲ್ಲ ಪ್ರಭು / ಒಡೆಯನು ಅಗ್ನಿಯು).
ರತ್ನಧಾತಮಮ್― ರಮೇಃ ಧಾತೋಃ ಔಣಾದಿಕ-ಕ್ನ-ಪ್ರತ್ಯಯಾನ್ತಂ ರತ್ನಪದಮ್ ಇತಿ ಸರ್ವೇಷಾಮ್ ಅಭಿಮತಮ್ | (ರಮ್ ಧಾತುವಿನ ಔಣ ಆದಿಯಾಗಿ, ಕ್ನ ಪ್ರತ್ಯಯವು ಕೊನೆಗಿರುವುದೇ ರತ್ನ ಪದವು ಎಂದು ಎಲ್ಲರ ಅಭಿಪ್ರಾಯವು). “ರತ್ನಂ ಸುಖಂ ಧತ್ತೇ― ಇತಿ ರತ್ನಧಾಃ, ಅತಿಶಯೇನ (ಇತಿ) ರತ್ನಧಾಸ್ತಮಃ, ತಮ್” ಇತಿ ಮನ್ತ್ರಾರ್ಥಮಞ್ಜರೀನಿರ್ವಚನಮ್ ಅನ್ತರ್ಯಾಗಪರಾಣಾಂ ನಃ (ಅಸ್ಮಭ್ಯಂ) ಸಮ್ಮತಮ್ | (“ರತ್ನವನ್ನು / ಸುಖವನ್ನು ಉಂಟುಮಾಡುತ್ತಾನೆ― ಎಂಬುದರಿಂದ ರತ್ನಧಾಃ; ಅತಿಶಯವಾಗಿ / ವಿಪುಲವಾಗಿ / ಹೇರಳವಾಗಿ / ಸಾಕಷ್ಟು ಎಂಬುದರಿಂದ ರತ್ನಧಾಸ್ತಮಃ, ಅವನನ್ನು” ಎಂಬ ಮಂತ್ರಾರ್ಥಮಂಜರೀನಿರ್ವಚನವು ಅಂತರ್ಯಾಗಪರರಾದ ನಮಗೆ ಸಮ್ಮತವಾದುದು / ಒಪ್ಪುವಂಥದ್ದು). ಅನ್ತರ್ಯಜನೇ ಪ್ರವೃತ್ತಸ್ಯ ಋಷೇಃ ಯಜಮಾನಸ್ಯ ಅರ್ಪಣಾನಾಂ ಫಲಭೂತಾಃ ರತ್ನಪದವಾಚ್ಯಾಃ, ಯಾಃ, ರತಯಃ, ತಾಸಾಂ ಧಾರಕಃ ಪ್ರತಿಷ್ಠಾಪಕಃ ಅಗ್ನಿಃ ಏವ ಭವತಿ ಇತಿ ಅನ್ತರರ್ಥಃ | (ಅಂತರ್ಯಜ್ಞದಲ್ಲಿ ತೊಡಗಿದ ಋಷಿಯ / ಯಜಮಾನನ ಸಮರ್ಪಣೆಯ ಫಲಸ್ವರೂಪವಾದ ರತ್ನಶಬ್ದದಿಂದ ಕರೆಯಲ್ಪಡುವ ಯಾವ ರತಿಗಳು / ಸುಖಗಳು / ಸಂಪತ್ತುಗಳು ಇವೆಯೋ, ಅವುಗಳನ್ನು ಧಾರಣೆ ಮಾಡಿರುವವನೂ, ನಮ್ಮಲ್ಲೂ ಅವುಗಳನ್ನು ಪ್ರತಿ-ಸ್ಥಾಪಿಸುವವನೂ ಅಗ್ನಿಯೇ ಆಗಿರುವನೆಂಬುದು ಗೂಢಾರ್ಥ. “ಶ್ರಿಯಮಿಚ್ಛೇತ್ ಹುತಾಶನಾತ್” ಸಿರಿಯನ್ನು ಇಚ್ಛಿಸಬೇಕು ಅಗ್ನಿಯಿಂದ ಎಂದಿರುವುದು ಇದಕ್ಕೇ ಆಗಿದೆ). ಬಹಿರ್ಯಾಗಾತ್ ನ ಅನ್ಯದ್ ಅಸ್ತಿ ಇತಿ ವಾದಿನಾಂ ಪಕ್ಷೇ, ರತ್ನಂ ಧನಂ ಯಾಗಫಲಭೂತಂ ಗವ-ಅಶ್ವಾದಿಕಂ, ತಸ್ಯ ಅತಿಶಯೇನ ದಾತಾ ಅಗ್ನಿಃ, ತಮ್, ಇತಿ || (ಬಾಹ್ಯ ಯಜ್ಞಕ್ಕಿಂತ ಬೇರೆ ಯಜ್ಞಗಳಾವುವೂ ಇಲ್ಲ ಎಂದು ವಾದಿಸುವವರ ಪಕ್ಷದಲ್ಲಿ, ರತ್ನ / ಧನಕನಕಗಳು, ಯಾಗಫಲರೂಪವಾದ ಗೋ-ಅಶ್ವಾದಿ ಪಶುಸಂಪತ್ತು ― ಇವುಗಳನ್ನು ಅತಿಶಯವಾಗಿ, ಧಾರಾಳವಾಗಿ, ಬೇಕಾದಷ್ಟು ನೀಡುವವನು ಅಗ್ನಿಯು, ಅಂತಹ ಅಗ್ನಿಯನ್ನು ಎಂದು).
ಇದಂ ಚ ಋಚಃ ತಾತ್ಪರ್ಯಂ ಭವತಿ (ಈ ಋಕ್ಕಿನ ತಾತ್ಪರ್ಯವಿದು)― “ಯಃ, ಯಜ್ಞಸ್ಯ ನಿರ್ವೋಢಾ, ಅಗ್ರಣೀಃ ಪುರೋಹಿತಃ, ಯಃ ಚ ಕಾಲೇ ಕರ್ತವ್ಯಸ್ಯ ಯಜ್ಞಸ್ಯ ಕರ್ತಾ ಕಾರಯಿತಾ ಚ ಋತ್ವಿಗ್-ಭೂತಃ ದೇವಃ, ಯಃ ದೇವಾನ್ ಯಜ್ಞೇ ಸನ್ನಿಧಾಪಯಿತುಂ ಪ್ರಭವನ್ ತೇಷಾಮ್ ಆಹ್ವಾತಾ, ಯಃ ಪುನಃ ಯಜಮಾನೇ ಪ್ರಹರ್ಷ-ಅತಿಶಯಾನ್ ಆ-ಧಾಯಕಃ, ತಮ್ ಅಗ್ನಿಮ್ ಅಧ್ಯೇಷಣೀಯಮ್ ಅಭಿಕಾಙ್ಕ್ಷಾಮಿ” ಇತಿ || (ಯಾವನು ಯಜ್ಞದ ನಿರ್ವಾಹಕನೂ, ಮುಂದಾಳುವೂ, ಪುರೋಹಿತನೂ, ಹಾಗೂ ಯಾರು ಸಕಾಲದಲ್ಲಿ / ಸುಮುಹೂರ್ತದಲ್ಲಿ ಮಾಡಬೇಕಾದ ಯಜ್ಞವನ್ನು ಮಾಡುವವನೂ, ಮಾಡಿಸುವವನೂ ಆಗಿ ಋತ್ವಿಜನೆನಿಸಿದ ದೇವನೋ, ಯಾರು ಸಕಲ ದೇವತೆಗಳನ್ನು ಯಜ್ಞದಲ್ಲಿ ಸನ್ನಿಧಾನ ವಹಿಸುವಂತೆ ಮಾಡಲು ಸಮರ್ಥನಾಗಿ, ಅವರನ್ನೆಲ್ಲ ಆಹ್ವಾನಿಸುವವನೋ, ಅಲ್ಲದೆ ಯಾರು ಯಜ್ಞವನ್ನು ಮಾಡುವ ಯಜಮಾನನಲ್ಲಿ ಅತಿಶಯವಾದ ಶ್ರೇಷ್ಠ / ಪ್ರಕೃಷ್ಟವಾದ ಹರ್ಷ / ಆನಂದ / ಪರಮಾನಂದ ವನ್ನು ಉಂಟುಮಾಡುವನೋ, ಅಂತಹ ಸತ್ಕಾರಪೂರ್ವಕ ನಿಯೋಜಿಸಲ್ಪಡಲು ಯೋಗ್ಯನಾದ / ಅಧ್ಯೇಷಣೀಯನಾದ ನಮ್ಮ ಅಭಿಮುಖವಾಗಿರುವ ಅಗ್ನಿದೇವನನ್ನು ಮನಸ್ಸಂಕಲ್ಪಪೂರ್ವಕವಾಗಿ ನನ್ನ ಅಭಿಲಾಷಾಸಿದ್ಧಿಗಾಗಿ ಬಯಸಿ ಪ್ರಾರ್ಥಿಸುತ್ತೇನೆ).
ಆಧ್ಯಾತ್ಮಿಕಭಾಷ್ಯ (ಆರ್. ಯಲ್. ಕಶ್ಯಪ್ ರ ಆಂಗ್ಲಾನುವಾದದ ಕನ್ನಡಾನುವಾದ)—
ಅಗ್ನಿಮೀಳೇ ಪುರೋಹಿತಂ ಯಜ್ಞಸ್ಯ ದೇವಮೃತ್ವಿಜಮ್ | ಹೋತಾರಂ ರತ್ನಧಾತಮಮ್ ||
(ಋಗ್ವೇದಸಂಹಿತಾ ೧.೧.೧)
ಅಗ್ನಿಯು (ಅಂತರ್ ಹಾಗೂ ಬಾಹ್ಯ) ಯಜ್ಞವನ್ನು ಮುನ್ನಡೆಸುತ್ತಾನೆ
ಹೇ ಅಗ್ನಿಯೆ! ಅಗ್ರಣಿಯಾದ / ನೇತಾರನಾದ / ಎಲ್ಲರ ಮುಂದಿಡಲ್ಪಟ್ಟವನಾದ, ಋತ್ವಿಕ್ / ಶಾಶ್ವತಸತ್ಯವೆಂಬ ಅಮೃತಾನಂದವನ್ನು ಹೊಂದಿದ, ಹೋತೃ / ಆಹ್ವಾನಿಸುವವನಾದ, ಮಾನವನಲ್ಲಿ ಸುಪ್ತವಾಗಿರುವ ಆತ್ಮಸುಖದ ಅರಿವನ್ನು ಅತ್ಯುತ್ತಮವಾಗಿ ಸಕ್ರಿಯ / ಜಾಗೃತ ಗೊಳಿಸುವಂತಹ ಯಜ್ಞದೇವತೆಯಾದ ನಿನ್ನನ್ನು ನಾನು ಸ್ತುತಿಸುತ್ತೇನೆ.
ವಿವರಣೆ— ಈ ಪ್ರಮುಖ ಮಂತ್ರದ ಪರಿಕಲ್ಪನೆಯಾದರೋ— “ಆರಾಧ್ಯನೂ, ಯಜ್ಞವನ್ನು ನಿರ್ವಹಿಸುವ ಅಗ್ರಣಿ / ಮುಂದಾಳು / ನಾಯಕನೂ ಆದ ಅಗ್ನಿಗಾಗಿ ನಾನು ತೀವ್ರವಾಗಿ / ಅತಿಶಯವಾಗಿ ಹಂಬಲಿಸುತ್ತೇನೆ / ಆಕಾಂಕ್ಷೆಯುಳ್ಳವನಾಗಿರುವೆನು. ಆತನು ಯಜ್ಞವನ್ನು ಆಯಾ ಕಾಲಗಳಿಗೆ ಸರಿಯಾಗಿ ಮಾಡುವನು (ಯಜನ) ಹಾಗೂ ಮಾಡಿಸುವನು (ಯಾಜನ). ಆತನು, (ಋಗ್ವೇದಿ ಹೋತೃ, ಯಜುರ್ವೇದಿ ಅಧ್ವರ್ಯು, ಸಾಮವೇದಿ ಉದ್ಗಾತೃ, ಅಥರ್ವವೇದಿ / ಚತುರ್ವೇದಿ ಬ್ರಹ್ಮ ― ಇವರು ನಾಲ್ವರು ಯಾಗದ ಪ್ರಧಾನ ಋತ್ವಿಜರು) ದೇವತೆಗಳನ್ನು ಆಹ್ವಾನಿಸುವ ಹೋತೃವೆಂಬ ಋತ್ವಿಜನಾಗಿ, ಸಮಸ್ತ ದೇವತಾಸಮೂಹವನ್ನೇ ಇಲ್ಲಿಗೆ, ಯಜ್ಞದ ಬಳಿಗೆ ಕರೆತರಲು ಸಮರ್ಥನಾಗಿರುವನು. ಆತನು ಸಾಧಕನಲ್ಲಿ / ಸಕಾಮಕರ್ಮಿಯಲ್ಲಿ ಅತ್ಯುತ್ತಮವಾದ ಆನಂದವನ್ನು, ಸುಖವನ್ನು ಉಂಟುಮಾಡುವನು.”
ಲಕ್ಷಾಂತರ ವರ್ಷಗಳಿಗೂ ಪ್ರಾಚೀನವಾಗಿ ಋಷಿದರ್ಶಿತವಾದ ಈ ಸೂಕ್ತದಲ್ಲಿ ನಾವು ಅರ್ವಾಚೀನ ವೇದಾಂತಚಿಂತನೆಯ ಬೀಜಗಳನ್ನು ಕಾಣಬಹುದು. ಉದಾಹರಣೆಗೆ, ಯಜ್ಞದಲ್ಲಿ ಅಗ್ನಿಯೇ ಋತ್ವಿಜನೂ ಹೌದು, ಆಹ್ವಾನಿಸಲ್ಪಡುವ ದೇವನೂ ಹೌದು. ಆತನು ಮಾನವನಿಗೆ / ಸಾಧಕನಿಗೆ ಪರಿಪೂರ್ಣತೆಯೆಡೆಗಿನ ಪಥದಲ್ಲಿ ಸಕ್ರಿಯ ಮಾರ್ಗದರ್ಶಕನಾಗಿರುವನು. ನಾವಿಲ್ಲಿ “ಆತ್ಮನಿಂದ ಆತ್ಮನ ಪೂಜೆ” ಯ ಪರಿಕಲ್ಪನೆಯನ್ನು ಕಾಣಬಹುದು. ಇದೇ ಮುಂದೆ ವಿಸ್ತಾರಗೊಂಡು ಜ್ಞಾನಯೋಗವಾಗಿ ವಿಕಸಿತವಾಯಿತು. ಉದಾ— ಭಗವದ್ಗೀತೆ (೪-೨೪) ಹೇಳಿದೆ— “ಬ್ರಹ್ಮಾರ್ಪಣಂ ಬ್ರಹ್ಮಹವಿರ್ಬ್ರಹ್ಮಾಗ್ನೌ ಬ್ರಹ್ಮಣಾ ಹುತಮ್ | ಬ್ರಹ್ಮೈವ ತೇನ ಗನ್ತವ್ಯಂ ಬ್ರಹ್ಮಕರ್ಮಸಮಾಧಿನಾ ||”— “ಬ್ರಹ್ಮವೆಂಬ ಯಜ್ಞದಲ್ಲಿ / ಅಗ್ನಿಯಲ್ಲಿ ಆ ಬ್ರಹ್ಮದಿಂದಲೇ, ಬ್ರಹ್ಮಕರ್ಮದಲ್ಲೇ ತಲ್ಲೀನವಾಗಿ ಸಮಾಧಿಸ್ಥಿತಿಯನ್ನು ಹೊಂದಿರುವ ಸ್ಥಿತಿಯಲ್ಲಿ, ಹುತವಾದ / ಹೋಮಿಸಲ್ಪಟ್ಟ ಬ್ರಹ್ಮಸ್ವರೂಪಿ ಹವಿಸ್ಸು ಕೊನೆಗೆ ಆ (ಪರ)ಬ್ರಹ್ಮವನ್ನೇ ಕುರಿತು ಗಮಿಸಿ, ಅದನ್ನೇ ಸೇರಬೇಕು.” ಅಂದರೆ, ಸಮರ್ಪಣೆಯೂ ಬ್ರಹ್ಮವಸ್ತುವಿಗೆ. ಸಮರ್ಪಿತವಾದ ಹವಿಸ್ಸೂ ಬ್ರಹ್ಮ. ಯಜ್ಞಾಗ್ನಿಯೂ ಬ್ರಹ್ಮ. ಹೋಮಿಸುವವನೂ ಬ್ರಹ್ಮ. ಮಾಡುವ ಈ ಯಜ್ಞಕರ್ಮವೂ ಬ್ರಹ್ಮ ಅಥವಾ ಬ್ರಹ್ಮಕರ್ಮವೆಂಬ ಭಾವದ ಸಮಾಧಿಸ್ಥಿತಿಯಲ್ಲೇ ಯಜ್ಞಕರ್ಮವನ್ನು ಮಾಡುವ ಯೋಗಿಗೆ ದೊರೆಯುವ ಅಂತಿಮಫಲವೂ ಬ್ರಹ್ಮವೇ ಆಗಿರುವುದು.
ಅಗ್ನಿ— ‘ಅಗ್ನಿ’ ಶಬ್ದವು ‘ಅಙ್ಗ ಪದೇ’ ಎಂಬ ಹೆಜ್ಜೆಯಿಡುವಿಕೆ ಎಂಬರ್ಥದ ಧಾತುವಿನಿಂದ ನಿಷ್ಪನ್ನವಾಗಿರುವುದು. ಇದು ಭೌತಿಕ ಬೆಂಕಿಯ / ದೈವಿಕ ಅಗ್ನಿಯ ಬಲಯುತವಾದ ಹಾಗೂ ಹೊಳೆಯುವ / ಬೆಳಗುವ ಚಲನೆಯನ್ನು ಸೂಚಿಸುತ್ತದೆ.
ಈಳೇ— ಆರಾಧನೆಯ, ಹಂಬಲಿಸುವಿಕೆಯ, ಮಹತ್ವಾಕಾಂಕ್ಷೆಯ ಕ್ರಿಯೆಯ ವಾಚಕ.
ಪುರೋಹಿತಮ್— ಪುರ ಹಾಗೂ ಹಿತಮ್ ಎಂಬ ೨ ಶಬ್ದಗಳಿರುವ ಇದು ಮುಂಭಾಗದಲ್ಲಿ ಇಡಲ್ಪಟ್ಟ / ನಿಹಿತವಾದ ಎಂಬ ಅರ್ಥವನ್ನು ಕೊಡುತ್ತದೆ. ಇದನ್ನು ಕೇವಲ ಆಧುನಿಕ ಕಾಲದ ಧಾರ್ಮಿಕ ಆಚರಣೆಗಳನ್ನು ನಡೆಸಿಕೊಡುವ ಸಾಂಪ್ರದಾಯಿಕ ಪುರೋಹಿತ ಮಾತ್ರ ಎಂದು ತಿಳಿಯಬಾರದು. ಹಿಂದೆ ರಾಮಾಯಣಕಾಲದಲ್ಲೂ ಪುರೋಹಿತನೆಂದರೆ ಸಾಮಯಿಕ / ಸಕಾಲಿಕ / ಶುಭಮುಹೂರ್ತಗಳಿಗೆ ಸಂಬಂಧಿಸಿದ ಹಾಗೂ ಆಧ್ಯಾತ್ಮಿಕ ವಿಚಾರಗಳನ್ನು ನಿರ್ದೇಶಿಸುವ, ರಾಜನ ಆಧ್ಯಾತ್ಮಿಕ ನಿರ್ದೇಶಕ ಮಾತ್ರವಲ್ಲದೆ, ರಾಜನು ಇತರ ರಾಜರುಗಳನ್ನು ಭೇಟಿಮಾಡುವ ಸಂದರ್ಭದ ಮೆರವಣಿಗೆಗಳಲ್ಲೂ ಅಗ್ರಭಾಗದಲ್ಲಿ ಮುಂದಾಳುವಾಗಿರುತ್ತಿದ್ದನೆಂಬ ಅರ್ಥವನ್ನು ಕೊಡುತ್ತದೆ (ವಾಲ್ಮೀಕಿರಾಮಾಯಣ, ಬಾಲಕಾಂಡ, ೬೯-೪-೫). ರಹಸ್ಯಾರ್ಥದ ದೃಷ್ಟಿಯಲ್ಲಿ, ಅಗ್ನಿಯೆಂದರೆ ವ್ಯಕ್ತಿಯೋರ್ವನು ಮೇಲ್ಮಟ್ಟಕ್ಕೇರಲು ಮಾರ್ಗದರ್ಶಿಯಾದ ಆತನೊಳಗಿನ ದೈವೀಸಂಕಲ್ಪವೇ ಆಗಿರುವುದು. ಇದಕ್ಕೆ ಋಗ್ವೇದ (೧-೧-೫)ದಲ್ಲೇ ಬರುವ “ಅಗ್ನಿರ್ಹೋತಾ ಕವಿಕ್ರತುಃ..”— “ಅಗ್ನಿಯು ಕ್ರಾಂತದರ್ಶಿ, ಕವಿ...” ಎಂಬ ಮಂತ್ರವೇ ಪ್ರಮಾಣವಾಗಿರುವುದು.
ದೇವ— ದೇವರು, ಬೆಳಕಿನಿಂದ ಕೂಡಿದ ಬ್ರಹ್ಮಾಂಡದ ಒಂದು ಶಕ್ತಿ. ಇದು “ದಿವು ದ್ಯುತೌ” ― ಎಂಬ ಬೆಳಗುವ, ದ್ಯುತಿಯುಳ್ಳ ಎಂಬ ಅರ್ಥದ ಧಾತುವಿನಿಂದ ಬಂದದ್ದು. ದೇವ / God ಶಬ್ದವು ಅನ್ಯಮತಗಳಲ್ಲಿ ಕೊಡುವ ವಿಭಿನ್ನ ಅರ್ಥದಿಂದಾಗಿ ಓದುಗನನ್ನು ಗೊಂದಲಗೊಳಿಸಬಹುದಾದರೂ ಇಲ್ಲಿ ಅದನ್ನೇ ಬಳಸಲಾಗಿದೆ. ವೇದದಲ್ಲಿ ದೇವತೆಗಳು ಗ್ರೀಕರ ದೇವತೆಗಳಂತೆಯೇ ಪರಸ್ಪರ ಕಚ್ಚಾಡದೆ ಹೊಂದಾಣಿಕೆಯಿಂದಿರುತ್ತಾರೆ. ದೇವತೆಗಳು ಮಾನವರಿಗೆ ಸದಾ ಸಹಕಾರಿಗಳಾಗಿ, ಅವರಿಗೆ ಪರಿಪೂರ್ಣತೆಹೊಂದಲು ಸಹಾಯಮಾಡುತ್ತಿರುತ್ತಾರೆ.
ಯಜ್ಞಸ್ಯ ದೇವಮ್ ― ಯಜ್ಞದ ದೇವನನ್ನು. ಯಜ್ಞವು, ಮಾನವ ಸಾಧಕ ಹಾಗೂ ಬ್ರಹ್ಮಾಂಡದ ಅತಿಮಾನುಷ ದೈವೀಶಕ್ತಿಗಳ ಸೂಕ್ಷ್ಮಶರೀರಗಳಲ್ಲಿ ನಡೆಯುವ, ಇವರೀರ್ವರ ನಡುವಿನ ಪರಸ್ಪರ ಸಹಕಾರಿ ಚಟುವಟಿಕೆಯಾಗಿದೆ. ಇದು ಒಳಗಿರುವ ದೈವತ್ವಕ್ಕೆ, ಎಲ್ಲ ಕರ್ಮಗಳ ಹಾಗೂ ಗಳಿಕೆಗಳ ಸಮರ್ಪಣೆಯೇ ಆಗಿರುವುದು. ಸರಿಯಾದ ಯಜ್ಞದಿಂದ ಒಬ್ಬ ವ್ಯಕ್ತಿಯು ತನ್ನೆಲ್ಲ ಕರ್ಮಗಳಲ್ಲೂ ಪರಿಪೂರ್ಣತೆಯನ್ನು ಹೊಂದಲು ಸಾಧ್ಯ. ಬಾಹ್ಯಯಜ್ಞದ ಆಚರಣೆಯು ಇಂತಹ ಅಂತರ್ಯಜ್ಞದ ಭೌತಿಕ ಸಂಕೇತ. ವ್ಯಕ್ತಿಯೋರ್ವನನ್ನು ಸಮರ್ಪಣಾಭಾವದಲ್ಲಿ ತನ್ನೆಲ್ಲ ಕರ್ಮಗಳನ್ನೂ ಮಾಡುವಂತೆ ಹಾಗೂ ಈ ಸಮಸ್ತಕರ್ಮಗಳಿಂದುಂಟಾದ ಸಂತೋಷವನ್ನೂ ಕೂಡ ಮಥಿಸಿ ದೇವತೆಗಳಿಗೆ ಸಮರ್ಪಿಸುವಂತೆ ಪ್ರೇರೇಪಿಸುವ ಆತನೊಳಗಿನ ದೈವೀಸಂಕಲ್ಪವೇ ಅಗ್ನಿಯಾಗಿರುವುದು. ಮಾನವನು ತನ್ನ ಹೊರಗಿನ ಕರ್ಮಗಳಲ್ಲಿ ದೈವೀ ಅಸ್ತಿತ್ವದ ಪ್ರಜ್ಞೆಯನ್ನು ಹೊಂದಿರದಿದ್ಜರೂ, ಅಗ್ನಿಯು ಸಾಧಕನನ್ನು ಅಂತರ್ಯಜ್ಞದಲ್ಲಿ / ಭಗವದ್ಧ್ಯಾನದಲ್ಲಿ ತೊಡಗುವಂತೆ ಮಾಡುತ್ತಾನೆ.
ಸಂಪ್ರದಾಯವಾದಿಗಳ ಒಂದು ಪಂಗಡವಾದ ಮೀಮಾಂಸಕರ ಪ್ರಕಾರ, ಯಜ್ಞವು ಹೊರಗಿನದಲ್ಲದೆ ಬೇರೆಯಲ್ಲ ಹಾಗೂ ವೇದಸಂಹಿತೆಗಳು ಕೇವಲ ಕರ್ಮಕಾಂಡಗಳು, ವೇದೋಕ್ತ ಕರ್ಮಾಚರಣೆಗಳ ಕುರಿತಾದವು. ಆದರೂ, ಋಗ್ವೇದದ ೧೦೨೮ ಮಂತ್ರಗಳ ಪೈಕಿ ಯಾವೊಂದು ಮಂತ್ರವೂ ಬಾಹ್ಯಯಜ್ಞದ ವಿವರಗಳನ್ನಿತ್ತಿಲ್ಲ. ಸಂಹಿತೆಯಲ್ಲಿ ಕೇವಲ ಯಜ್ಞ, ಅಧ್ವರ, ಯಜ ಮುಂತಾದ ಕೆಲಶಬ್ದಗಳು ಮಾತ್ರ ಆಚರಣೆಗಳಿಗೆ ಸಂಬಂಧಿಸಿವೆ. ಆದರೆ, ಈ ಪದಗಳಿಗೆ ವಿಭಿನ್ನವಾದ ಆಧ್ಯಾತ್ಮಿಕ ಅರ್ಥಗಳಿವೆ.
ಋತ್ವಿಕ್ ― ಶ್ರೀ ಅರವಿಂದಮಹರ್ಷಿಗಳ “The Secret of the Veda” ಕೃತಿಯ ಪ್ರಕಾರ, ಋತ್ವಿಕ್ ಶಬ್ದವು ಋತ್ (ನೈಜ, ಕಾಲಿಕ ಸತ್ಯ) ಹಾಗೂ ವಿ (ಅಮೃತಾನಂದ, ಪರಮಾನಂದ, ಆತ್ಮಾನಂದ, ಬ್ರಹ್ಮಾನಂದ) ಎಂಬ ಶಬ್ದಗಳಿಂದಾಗಿದೆ. ಹಾಗಾಗಿ, ಈ ಶಬ್ದವು ಪರಮಸತ್ಯದ ಅಮೃತತ್ವಾನಂದವು ಯಾರಲ್ಲಿದೆಯೋ ಅಂಥವನಿಗೇ ಹೇಳಲ್ಪಟ್ಟಿದೆ. ಹಾಗೆಯೇ, ವೇದದಲ್ಲಿ ಋತು ಎಂದರೆ ಸತ್ಯದ ಅನುಕ್ರಮತ್ವ ಮತ್ತು, ವಿಭಿನ್ನ ಕಾಲ ಹಾಗೂ ಸನ್ನಿವೇಶಗಳಲ್ಲಿ ಸತ್ಯದ ಸುವ್ಯವಸ್ಥೀಕರಣ. ಋತದ ನಿಯಮ, ಶಾಸನ ಹಾಗೂ ಕಾಲಗಳಿಗೆ ಸರಿಯಾಗಿ ಯಜ್ಞಸದೃಶ ಸಮರ್ಪಣೆಗಳನ್ನು ನಿರ್ವಹಿಸುವ ಋತ್ವಿಜ ಅಥವಾ ಬ್ರಹ್ಮಾಂಡದ ಪ್ರಾತಿನಿಧಿಕ ಶಕ್ತಿಯೇ ಅಗ್ನಿಯು. ಇಲ್ಲಿ ಎಲ್ಲಾ ಕ್ರಿಯೆಗಳೂ ಸಮರ್ಪಣೆಯೆಂದೇ ತಿಳಿಯಬೇಕು.
ಹೋತಾರಮ್― ಆಹ್ವಾನಿಸುವ ಋತ್ವಿಜನನ್ನು / ಹೋತೃವನ್ನು / ನಡೆಯುತ್ತಿರುವ ಯಜ್ಞಕ್ಕೆ ಸರ್ವ ದೇವಾನುದೇವತೆಗಳನ್ನೂ ಅಥವಾ ಬ್ರಹ್ಮಾಂಡದ ಶಕ್ತಿಗಳನ್ನೂ ಆಮಂತ್ರಿಸುವವನನ್ನು. ಅಗ್ನಿಯು ಮಾನವ ಸಾಧಕನಿಗೆ ಆಯಾಯ ರೀತಿಗಳಲ್ಲಿ ಸಹಕರಿಸುವುದಕ್ಕಾಗಿ ವಿವಿಧ ದೈವೀಶಕ್ತಿಗಳನ್ನು ಕರೆಯುತ್ತಾನೆ.
ರತ್ನಧಾತಮಮ್― ವೇದದಲ್ಲಿ ರತ್ನವೆಂದರೆ ಸಂತೋಷ ಅಥವಾ ಪರಮಾನಂದ / ಅಮೃತತ್ವ. ರತ್ನಧಾ ಎಂದರೆ ಆನಂದವನ್ನು ಧರಿಸಿಕೊಂಡಿರುವವನು / ಧಾರಣೆಮಾಡಿದವನು. ತಮಪ್ ಪ್ರತ್ಯಯವು ಅತ್ಯುತ್ತಮ ಎಂಬ ಅರ್ಥಪ್ರದ. ಯಜ್ಞದಲ್ಲಿ ಋಷಿಯ / ಸಾಧಕನ ಸಮರ್ಪಣೆಯ ಫಲವೇ ಆನಂದ. ಅಗ್ನಿಯು ಆತನಲ್ಲಿ / ಆಕೆಯಲ್ಲಿ ಆನಂದವನ್ನುಂಟುಮಾಡುತ್ತಾನೆ. ಕೇವಲ ಅನಂತರದ ಸಂಸ್ಕೃತದಲ್ಲಿ ರತ್ನವೆಂದರೆ ಆಭರಣ / ಸಂಪತ್ತು ಎಂಬ ಅರ್ಥ ಬಂತು. ಯಜ್ಞವನ್ನು ಯಜಮಾನನನ್ನು ಸಮಾಧಾನಪಡಿಸುವ ಆಚರಣೆಯೆಂದು ನೋಡುವ ವ್ಯಾಖ್ಯಾನಕಾರರು, ಈ ಪದವನ್ನು “ಗೋವು ಹಾಗೂ ಅಶ್ವಗಳನ್ನು ನೀಡುವವನು” ಎಂದು ಅರ್ಥೈಸಿದ್ದಾರೆ.
೪೫) ಯಜುರ್ವೇದಾರಂಭಮಂತ್ರವು ಯಾವುದು? ಅದರ ನಾನಾ ಅರ್ಥ-ವಿವರಣೆಗಳೇನು?
ಓಂ ಇಷೇ ತ್ವೋರ್ಜೇ ತ್ವಾ ವಾಯವಃ ಸ್ಥೋಪಾಯವಃ ಸ್ಥ ದೇವೋ ವಃ ಸವಿತಾ ಪ್ರಾರ್ಪಯತು ಶ್ರೇಷ್ಠತಮಾಯ ಕರ್ಮಣೇ ||
ರುದ್ರಾಭಿಷೇಕ ಕರ್ಮದಲ್ಲಿ ಅನುಕ್ರಮವಾಗಿ ಲಘುನ್ಯಾಸ / ಮಹಾನ್ಯಾಸ, ರುದ್ರಪ್ರಶ್ನ, ಸರ್ವೋ ವೈ ರುದ್ರ, ಚಮಕಪ್ರಶ್ನಗಳನ್ನು ಪಠಿಸುವುದು ಒಂದು ಪದ್ಧತಿ. ಅದರಲ್ಲಿ, ಲಘುನ್ಯಾಸದಲ್ಲಿ ಚತುರ್ವೇದಗಳ ಆರಂಭಿಕ ಮಂತ್ರಗಳ ಸಂಕಲನವಿದೆ. ಈಗಾಗಲೇ ಋಗ್ವೇದಾರಂಭ ಮಂತ್ರವಾದ “ಅಗ್ನಿಮೀಳೇ…”— ಇದರ ವಿಸ್ತಾರವಾದ ವಿವರಣೆ ನೀಡಿದೆ. ಇನ್ನು “ಇಷೇ ತ್ವಾ..”— ಎಂಬ ಯಜುರ್ವೇದಾರಂಭ ಮಂತ್ರಾರ್ಥವನ್ನು ಸಂಕ್ಷಿಪ್ತವಾಗಿ ಚಿಂತಿಸೋಣ. ಮುಂದೆ, ಸಾಮವೇದಾರಂಭ ಹಾಗೂ ಅಥರ್ವವೇದಾರಂಭ ಮಂತ್ರಗಳ ನಂತರ ಪುನಃ ಇದೇ ಯಜುರ್ವೇದಾರಂಭ ಮಂತ್ರವು ಸ್ವಲ್ಪ ದೀರ್ಘವಾಗಿ, ಇನ್ನಷ್ಟು ಯಜುರ್ಮಂತ್ರಗಳೊಡನೆ ಬಂದಾಗ, ವಿಸ್ತೃತವಾಗಿ ಚರ್ಚಿಸೋಣ.
ಹೇ ಗೋವುಗಳೇ! ನೀವು ವಾಯುದೇವನ ರಕ್ಷಣೆಯಲ್ಲಿ ಕಾಡಿಗೆ ಹೋಗಿ ಮೇಯುವವುಗಳು ಆಗಿರುವಿರಿ (ವಾಯವಃ ಸ್ಥ). ವಾಯುದೇವನ ರಕ್ಷಣೆಯಿಂದ ಪುನಃ ಮನೆಗೆ ಮರಳುವವುಗಳೂ ಆಗಿರುವಿರಿ (ಉಪ-ಆಯವಃ). ಅನ್ನಕ್ಕಾಗಿ / ಆಹಾರಕ್ಕಾಗಿ ನಿಮ್ಮನ್ನು (ಇಷೇ ತ್ವಾ), ಶಕ್ತಿಭರಿತರಾಗಲು / ಊರ್ಜಾಯುತರಾಗಲು ನಿಮ್ಮನ್ನು (ಊರ್ಜೇ ತ್ವಾ ), ಸವಿತೃಸೂರ್ಯನಾರಾಯಣ ದೇವನು ನಿಮ್ಮನ್ನು (ಸವಿತಾ ದೇವಃ ವಃ / ಯುಷ್ಮಾನ್), ನಮಗೆ ಯಜ್ಞಾದಿ ಶ್ರೇಷ್ಠತಮವಾದ ಕರ್ಮಗಳಿಗಾಗಿ ಘೃತಾದಿ ಸಕಲ ಹವಿಸ್ಸುಗಳನ್ನೂ, ತನ್ಮೂಲಕ ಯಜ್ಞಾದಿಗಳಿಂದ ಪ್ರಸನ್ನರಾದ ದೇವತೆಗಳಿಂದ ಸಕಲ ಸಿರಿಸಂಪದವನ್ನೂ ಪ್ರಾಪ್ತಿಮಾಡಿಕೊಳ್ಳಲು (ಶ್ರೇಷ್ಠತಮಾಯ ಕರ್ಮಣೇ), ನಿಮ್ಮನ್ನು ಚೆನ್ನಾಗಿ ಮೇಯಲು ತನ್ಮೂಲಕ ಅಧಿಕಾಧಿಕ ಹಾಲು, ತುಪ್ಪ ನೀಡಿ, ಅದರಿಂದ ಉತ್ತಮೋತ್ತಮವಾಗಿ ದೇವತಾಸೇವೆ ಮಾಡುವ ಮೂಲಕ ಅತಿಶಯವಾದ ದೇವತಾಪ್ರಸನ್ನತೆಯಾಗಿ, ಅಧಿಕಾಧಿಕ ಸಂಪದವನ್ನು ಪಡೆಯಲೋಸುಗ ಪ್ರೇರೇಪಿಸಲಿ / ಪ್ರಚೋದಿಸಲಿ (ಪ್ರಾರ್ಪಯತು).
೪೬) ಸಾಮವೇದಾರಂಭ ಮಂತ್ರ ಯಾವುದು? ಅದರ ಅರ್ಥವೇನು?
ಸಾಮವೇದಾರಂಭಮಂತ್ರ—
ಓಂ ಅಗ್ನ ಆಯಾಹಿ ವೀತಯೇ ಗೃಣಾನೋ ಹವ್ಯದಾತಯೇ | ನಿಹೋತಾ ಸತ್ಸಿ ಬರ್ಹಿಷಿ ||
ಸುಬೋಧ ಹಿಂದೀಭಾಷ್ಯ (ದಾಮೋದರ ಸಾತವಲೆಕರ್)ದ ಸಂಸ್ಕೃತ-ಕನ್ನಡಾನುವಾದ—
ಹೇ ಅಗ್ನೇ!— ಅಯ್ಯಾ ಅಗ್ನಿಯೇ!
ತ್ವಂ— ನೀನು,
ವೀತಯೇ ಹವಿರ್ಭಕ್ಷಣಾರ್ಥಮ್— ಯಜ್ಞಾರ್ಪಿತ ಹವಿಸ್ಸನ್ನು ಉಣ್ಣುವುದಕ್ಕಾಗಿ,
ಆಯಾಹಿ, ಆಗಚ್ಛತು— ಬಾ.
ದೇವಾನಾಂ ಹವ್ಯದಾತಯೇ ಹವಿರ್ದಾನಾರ್ಥಂ ಯಃ— ದೇವತೆಗಳಿಗೆ ಹವಿಸ್ಸನ್ನು ನೀಡುವುದಕ್ಕಾಗಿ ಯಾವನು,
ಗೃಣಾನಃ ಸ್ತೂಯಮಾನಃ— ಸ್ತುತಿಸಲ್ಪಡುವನೋ,
ತಾದೃಶಃ ತ್ವಂ ಹೋತಾ ಯಜ್ಞೇ ಹೋತೃನಾಮಕಃ ಋತ್ವಿಜಃ ಸನ್— ಅಂತಹ ನೀನು ಯಜ್ಞದಲ್ಲಿ ಹೋತೃವೆಂಬ ಹೆಸರಿನ ಋತ್ವಿಜನಾಗಿ,
ಬರ್ಹಿಷಿ ಯಜ್ಞಸ್ಯ ದರ್ಭಪರಿಸ್ತರಣರೂಪ್ಯಾಸನೇ— ಯಜ್ಞಕುಂಡದ ಸುತ್ತಲಿನ / ಸಮೀಪದ ದರ್ಭಪರಿಸ್ತರಣರೂಪಿಯಾದ ಆಸನದಲ್ಲಿ,
ನಿ ಸತ್ಸಿ ಉಪವಿಶನ್ ಅಸಿ— ಕುಳಿತವನಾಗಿರುವಿ.
ವೀತಿಃ— ಹೋಗುವಿಕೆ, ಗತಿಶೀಲತೆ, ಉತ್ಪಾದಿಸುವಿಕೆ, ಉಪಭೋಗಿಸುವಿಕೆ, ತಿನ್ನುವಿಕೆ, ಶುದ್ಧಿಗೊಳಿಸುವಿಕೆ, ಹಂಚುವಿಕೆ ಪಾಲುಮಾಡುವಿಕೆ, ಬೀಸುವಿಕೆ, ಅರೆಯುವಿಕೆ.
ಬರ್ಹಿಃ— ಆಸನ, ಅಂತರಿಕ್ಷ, ಜಲ, ಯಜ್ಞ, ದರ್ಭೆ.
ಜಯದೇವಶರ್ಮರ ಭಾಷಾ(ಹಿಂದೀ)ಭಾಷ್ಯದ ಅನುವಾದ—
ಬಾರ್ಹಸ್ಪತ್ಯ ಭರದ್ವಾಜಮುನಿಯೇ ಋಷಿಯು. ಗಾಯತ್ರೀಚ್ಛಂದಸ್ಸು. (ಅಗ್ನಿಯೇ ದೇವತೆ)
(ಅಗ್ನೇ) ಹೇ ಪರಮಾತ್ಮನಾದ ಅಗ್ನಿಯೇ!, (ವೀತಯೇ) ಎಲ್ಲೆಡೆ ಪ್ರಕಾಶಕನಾಗಲು ಹಾಗೂ ವ್ಯಾಪಕನಾಗಲು, (ಹವ್ಯದಾತಯೇ) ಹವ್ಯ / ದಾನ ಮತ್ತು ಭೋಗಯೋಗ್ಯ ಪದಾರ್ಥಗಳನ್ನು ಪ್ರದಾನಮಾಡಲು ನೀನು, (ಆಯಾಹಿ) ಆಗಮಿಸು / ಬಾ. ನೀನು (ಗೃಣಾನಃ) ಸ್ತುತಿಮಾಡಲು ಯೋಗ್ಯವಾದ, (ಹೋತಾ) ಸಕಲ ಸುವಸ್ತುಗಳನ್ನು ನೀಡುವವನಾಗಿ, ಯಜ್ಞದಲ್ಲಿ ಆಸನದ ಮೇಲೆ ಹೋತೃವಿನ ಸಮಾನನಾಗಿದ್ದು, (ಬರ್ಹಿಷಿ) ಯಜ್ಞ / ಆತ್ಮಾ / ಬ್ರಹ್ಮಾಂಡದಲ್ಲಿ, (ನಿ-ಸತ್ಸಿ) ವಿರಾಜಮಾನನಾಗಿದ್ದಿ.
ದಯಾನಂದಭಾಷ್ಯ (ಹಿಂದೀಮೂಲದ ಕನ್ನಡಾನುವಾದ)—
ಅಗ್ನ ಆಯಾಹಿ ಇತ್ಯಸ್ಯಾಃ, ಭರದ್ವಾಜಃ (ವಾಜಸ್ಯ ಅನ್ನಸ್ಯ ಭರಣಾತ್ ಭರದ್ವಾಜಃ ಇತಿ ಸಾರ್ಥಃ ಅಯಂ ಸಂಜ್ಞಾ—) ಋಷಿಃ | ಅಗ್ನಿರ್ದೇವತಾ | ಗಾಯತ್ರೀಚ್ಛಂದಃ || (ಅಗ್ನ ಆಯಾಹಿ ಎಂಬುದಕ್ಕೆ, ಭರದ್ವಾಜನು ಋಷಿಯು. ವಾಜವೆಂದರೆ ಅನ್ನ. ವಾಜವನ್ನು ಭರಿಸಿ / ಸಂಗ್ರಹಿಸಿ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನಿಟ್ಟುಕೊಂಡಿರುವವ ಅಥವಾ ವಾಜದ ಭರಣಮಾಡುವವನೆಂದು ಭರದ್ವಾಜನೆಂಬುದಕ್ಕೆ ಅರ್ಥ. (ಸಂಗ್ರಹಿಸಿ ದಾಸ್ತಾನಿಡಲು ಬಳಸುವ ಪಾತ್ರೆಗೂ ಭರಣಿ ಎನ್ನುತ್ತಾರೆ. "ವಾಜಮ್ ಅನ್ನಂ ಭರತಿ ಇತಿ ಭರದ್ವಾಜಃ"— ವಾಜ / ಅನ್ನವನ್ನು ಭರಿಸುತ್ತಾನೆಂಬುದರಿಂದ ಭರದ್ವಾಜನು.) ಅಗ್ನಿಯು ದೇವತೆಯು. ಈ ಮಂತ್ರವು ಗಾಯತ್ರೀಚ್ಛಂದಸ್ಸಿನಲ್ಲಿದೆ.
ಈ ಛಂದಾರ್ಚಿಕವೆಂಬ ಸಾಮವೇದದ ಪ್ರಥಮ ಭಾಗದಲ್ಲಿ ೩ ಪರ್ವಗಳಿವೆ— ೧) ಆಗ್ನೇಯ, ೨) ಐಂದ್ರ ಹಾಗೂ ೩) ಪಾವಮಾನ. ಇವುಗಳಲ್ಲಿ ಮೊದಲನೆಯದಾದ ಆಗ್ನೇಯ ಪರ್ವದಲ್ಲಿ ೧೧೪ ಮಂತ್ರಗಳಿವೆ. ಇವುಗಳಲ್ಲಿ ವಿಶೇಷವಾಗಿ ಅಗ್ನಿಪದವಾಚ್ಯನಾದ ಪರಮಾತ್ಮನ ವರ್ಣನೆ ಇದೆ. ಇದರ ಪ್ರಥಮ ಪ್ರಪಾಠಕದ ಪ್ರಥಮಾರ್ಧದ ಮೊದಲ ಅಧ್ಯಾಯದ ಮೊದಲ ದಶತಿಯಲ್ಲಿ (೧೦ ಮಂತ್ರಗಳಲ್ಲಿ) ಮೊದಲ ಮಂತ್ರವಿದು.
ಪ್ರತಿಪದ-ಅರ್ಥ— (ಅಗ್ನೇ!) ಹೇ ಪ್ರಕಾಶದ ಪುಂಜವೇ!, (ವೀತಯೇ) ಕಾಂತಿಯನ್ನೀಯಲು / ಹವಿಸ್ಸನ್ನುಣ್ಣಲು, (ಆಯಾಹಿ) ಆಗಮಿಸು. ನೀನು ಹೇಗಿದ್ದಿ? (ಗೃಣಾನಃ) ಸ್ತುತಿಸಲ್ಪಡುವವನಾಗಿ, (ಹೋತಾ) ಯಜ್ಞಕ್ಕೆ ಬೇಕಾದ ಹವ್ಯಪದಾರ್ಥಗಳನ್ನು ನೀಡುವವನಾಗಿದ್ದಿ. (ಬರ್ಹಿಷಿ) ಯಜ್ಞದಲ್ಲಿ, (ನಿ ಸತ್ಸಿ) ವಿರಾಜಮಾನನಾಗು; (ಹವ್ಯದಾತಯೇ) ವಾಯು ಮುಂತಾದ ದೇವತೆಗಳಿಗೆ ಹವಿಸ್ಸನ್ನು ನೀಡಲು / ಕೊಂಡೊಯ್ಯಲು.
ಹೀಗೆ, ವೇದದಲ್ಲಿ ಅಚೇತನವಾದ, ಕೇವಲ ಪಂಚಭೂತಗಳಲ್ಲೊಂದಾದ ಅಗ್ನಿಯನ್ನು, “ಹೇ ಅಗ್ನಿಯೇ” ಎಂದು ಮುಂತಾಗಿ ಸಂಬೋಧಿಸಿದ್ದೇಕೆ? ಎಂದು ಕೆಲವರು ಪ್ರಶ್ನಿಸಬಹುದು. ನಿರುಕ್ತ (೭.೧)ದಲ್ಲಿ ಹೀಗಿದೆ— “ವೇದಗಳಲ್ಲಿ ೩ ವಿಧವಾದ ಮಂತ್ರಗಳಿವೆ - ೧) ಪರೋಕ್ಷಕೃತ, ೨) ಪ್ರತ್ಯಕ್ಷಕೃತ ಹಾಗೂ ೩) ಆಧ್ಯಾತ್ಮಿಕ.” ಹಾಗೆಯೇ, ನಿರುಕ್ತ (೭.೨)ದಲ್ಲಿ, ಮಧ್ಯಮಪುರುಷ ಪ್ರಯೋಗವಿರುವ ಹಾಗೂ ‘ತ್ವಮ್’ ಎಂಬ ಸರ್ವನಾಮವು ಪ್ರಯೋಗವಾಗಿರುವ ಮಂತ್ರಗಳು ಪ್ರತ್ಯಕ್ಷಕೃತಗಳು ಎನ್ನಲಾಗಿದೆ. ಇದಕ್ಕಾಗಿಯೇ, ವೇದದಲ್ಲಿ ಅಗ್ನಿಯೇ ಮುಂತಾದ ಪ್ರತ್ಯಕ್ಷಗೋಚರವಾದ ವ್ಯಾವಹಾರಿಕ ದೇವತೆಗಳಿಗೆ ಮಧ್ಯಮಪುರುಷಪ್ರಯೋಗ ಹಾಗೂ ‘ನೀನು’ ಎಂಬ ಸರ್ವನಾಮದಿಂದ ಸಂಬೋಧಿಸಿ ವರ್ಣಿಸಲಾಗಿದೆ. ಇದೊಂದು ವೈದಿಕಶೈಲಿಯಾಗಿದೆ. ಅಗ್ನಿಯನ್ನು ಅಗ್ನಿಕುಂಡಕ್ಕೆ ಆಹ್ವಾನಿಸಲು ಹಾಗೂ ಯಜ್ಞಾರ್ಪಿತ ಹವಿಸ್ಸನ್ನು ತನ್ಮೂಲಕ ವಾಯುವೇ ಮುಂತಾದ ಇತರ ದೇವತೆಗಳಿಗೆ ತಲುಪಿಸಲು ಅಥವಾ ಸ್ವತಃ ಭಕ್ಷಿಸಲು ಅಗ್ನಿಯನ್ನು ಸಂಬೋಧಿಸಲಾಗಿದೆಯೆಂಬುದು ಇದರ ತಾತ್ಪರ್ಯ.
ಆ ಅಗ್ನಿಯು ಎಂಥವನು / ಬೆಂಕಿಯು ಹೇಗಿದೆ? ಅವನ ಸ್ತುತಿಯು ಸರ್ವತ್ರ ಕಾಣುತ್ತದೆ. ಅಗ್ನ್ಯಾದಿ ಜಡಪದಾರ್ಥಗಳ ಸ್ತುತಿಯಿಂದೇನು ಫಲ? ಹೇಗೆ ಪರಮೇಶ್ವರನ ಸ್ತುತಿ / ಗುಣಗಳ ಪ್ರಶಂಸೆಯಿಂದ ಆತನಲ್ಲಿ ಶ್ರದ್ಧೆಯುಂಟಾಗುತ್ತದೋ ಹಾಗೆಯೇ ಅಗ್ನ್ಯಾದಿ ಜಡವಸ್ತುಗಳ ಗುಣವರ್ಣನೆಯಿಂದ ಆ ಗುಣಗಳ ಮೂಲಕ ಉಪಕಾರ ಪಡೆಯುವ ಶ್ರದ್ಧೆ / ವಿಶ್ವಾಸವು ಉಂಟಾಗುವುದು; ಅಂದರೆ, ಹೋಮಾದಿಗಳಿಂದ ಏನು ಲಾಭ? ಶಿಲ್ಪಾದಿ ಕಲೆಗಳಲ್ಲಿ (ಚಿನ್ನ, ಬೆಳ್ಳಿ, ಕಬ್ಬಿಣ, ಹಿತ್ತಾಳೆ ಮುಂತಾದ ಲೋಹಗಳ ಕೆಲಸಗಳಲ್ಲಿ) ಅಗ್ನಿಯು ಹೇಗೆ ಉಪಕಾರಿ?— ಇತ್ಯಾದಿಗಳು ತಿಳಿಯುತ್ತವೆ. ಆದ್ದರಿಂದ, ಗುಣಸಂಕೀರ್ತನೆಯು ವ್ಯರ್ಥವಲ್ಲ.
ಈ ಮಂತ್ರಕ್ಕೆ ಅಗ್ನಿಯು ದೇವತೆಯು, ಅರ್ಥಾತ್ ಇದರಲ್ಲಿ ಅಗ್ನಿಯ ವರ್ಣನೆ / ಸ್ತುತಿ ಇದೆ. ಇದರಲ್ಲಿ ಅಗ್ನಿಶಬ್ದವು ಮುಖ್ಯಭೂಮಿಕೆಯಲ್ಲಿದ್ದು, ಅದು ಪರಮಾತ್ಮನ ವಾಚಕವೇ ಆಗಿದೆ. ಹಾಗಾಗಿ ಈಶ್ವರಪರವಾದ ಶ್ಲೇಷಾಲಂಕಾರಿಕಾರ್ಥಗಳಿಂದ (ನಾನಾರ್ಥಶಬ್ದವಿನ್ಯಾಸಃ ಶ್ಲೇಷಃ) ಈ ಕೆಳಗಿನ ಆಶಯವು ಬರುವುದು—
ಹೇ (ಅಗ್ನೇ!) ಪ್ರಕಾಶಮಯನೇ! ನೀನು ನಮ್ಮ (ಬರ್ಹಿಷಿ) ಯಜ್ಞದಲ್ಲಿ / ಜ್ಞಾನಯಜ್ಞರೂಪೀ ಧ್ಯಾನದಲ್ಲಿ, (ಆಯಾಹಿ) ಪ್ರಾಪ್ತನಾಗು / ಆಗಮಿಸು / ಬಾ. (ಗೃಣಾನಃ) ನೀನು ಸ್ತುತಿಸಲ್ಪಡುವವನೂ, (ಹೋತಾ) ಸರ್ವರಿಗೂ ಸಕಲವನ್ನೂ ನೀಡುವ ದಾತಾರನೂ ಆಗಿರುವಿ. (ನಿ ಸತ್ಸಿ) ವಿರಾಜಮಾನನಾಗು. ಯಾಕಾಗಿ? (ವೀತಯೇ) ನಮ್ಮ ಹೃದಯದಲ್ಲಿ ಪ್ರಕಾಶಿಸಲು ಹಾಗೂ (ಹವ್ಯದಾತಯೇ) ಭಕ್ತಿಯೆಂಬ ಫಲವನ್ನು ನಮಗೆ ನೀಡುವುದಕ್ಕಾಗಿ.
ವೇದಗಳಲ್ಲಿ ಸುಮಾರಾಗಿ ಅಲ್ಲಲ್ಲಿ ಶ್ಲೇಷಾಲಂಕಾರಪ್ರಯೋಗವು ಕಾಣಬರುವುದರಿಂದ, ಎರಡು ಅರ್ಥಗಳು ಪ್ರಧಾನವಾಗಿದ್ದರೂ ಅದರಲ್ಲಿ ಪರಮಾತ್ಮಪರ ಅರ್ಥವು ಪ್ರಮುಖವಾಗಿದೆ. ಯಾಕೆಂದರೆ, ಕಠೋಪನಿಷತ್ (೨.೫) ನಲ್ಲಿ— “ಸರ್ವೇ ವೇದಾ ಯತ್ ಪದಮ್ ಆಮನಂತಿ…” ಸಮಸ್ತವೇದಗಳು ಯಾವ ಪರಮಪದವನ್ನು ನಾನಾ ಪ್ರಕಾರವಾಗಿ ಮನನ ಮಾಡುತ್ತವೋ (ಮನನಾತ್ ತ್ರಾಯತೇ ಇತಿ ಮಂತ್ರಃ— ಮನನ ಮಾಡಿದರೆ ರಕ್ಷಿಸುವಂಥದ್ದೇ ಮಂತ್ರವು), ಅದು ಓಂಕಾರವೇ ಆಗಿದೆ. ಹಾಗೆಯೇ, ಯೋಗಶಾಸ್ತ್ರದ ಪ್ರಕಾರ (೧. ೨೭) ಓಂಕಾರವು ಪರಮಾತ್ಮವಾಚಕವಾಗಿದೆ. ಹಾಗಾಗಿ ಅಗ್ನ್ಯಾದಿ ಪದಗಳನ್ನು ಪರಮಾತ್ಮವಾಚಕವಾಗಿ ಪರಿಗ್ರಹಿಸಿದರೆ, ಇಡಿಯ ವೇದವು ಪರಮಾತ್ಮನನ್ನೇ ವರ್ಣಿಸಿ, ಸ್ತುತಿಸುತ್ತವೆಂದು ಹೇಳಬಹುದು. ವಾಸ್ತವವಾಗಿ, ಪ್ರಕಾಶಾದಿ ಯಾವ ದಿವ್ಯಗುಣಗಳಿವೆಯೋ ಅವು ಪರಮಾತ್ಮನಲ್ಲಿ ಅ-ಸೀಮ / ಅಪರಿಮಿತವಾಗಿವೆ. ಇದಕ್ಕಾಗಿಯೇ, ಅಗ್ನ್ಯಾದಿಶಬ್ದಗಳ ಮುಖ್ಯಾರ್ಥವು ಪರಮಾತ್ಮನೇ ಆಗಿದೆ. ಆದರೆ, ಅಂತಹ ಪ್ರಕಾಶಾದಿ ಗುಣಗಳು ಸ-ಸೀಮ / ಮಿತಿಯುಳ್ಳವುಗಳಾಗಿ ಅಗ್ನಿಯೇ ಮುಂತಾದ ಭೌತಿಕ ಪದಾರ್ಥಗಳಲ್ಲಿ ಕಿಂಚಿದಂಶವಾಗಿರುವುದರಿಂದ, ಅಂತಹ ಭೌತಿಕವಸ್ತುಗಳು ದೇವತೆಯೆನಿಸಿವೆ. ಹೀಗಾಗಿ, ಭಾಗಶಃ ಗುಣವಿಶೇಷಗಳಿಂದ ಕೂಡಿದ ನಾನಾ ದೇವತೆಗಳ ಸ್ತುತಿ-ವರ್ಣನಾದಿ ರೂಪೀ ಸಮಗ್ರವೇದವು ಪೂರ್ಣತ್ವದಿಂದ ಪರಮಾತ್ಮನನ್ನೇ ಪೊಗಳುವುದಾದರೂ, ಆಯಾಯ ಯೌಗಿಕಾರ್ಥಪರ ಭೌತಿಕಾರ್ಥಗಳೂ ಸಾಂದರ್ಭಿಕವಾಗಿ ಸ್ವೀಕರಣೀಯವೇ ಆಗಿವೆ.
ಈ ರೀತಿಯಿಂದ, ಮಂತ್ರದಲ್ಲಿ ವಿವರಿಸಲ್ಪಟ್ಟ ಪ್ರಧಾನ ವಿಷಯ / ವಸ್ತು / ವ್ಯಕ್ತಿ / ಪದಾರ್ಥವನ್ನು “ದೇವತೆ” ಯೆಂದೂ, ಆ ಮಂತ್ರದ ಅರ್ಥವನ್ನು ಕಂಡವನು “ಋಷಿ” ಯೆಂದೂ, ಮಂತ್ರಪ್ರತಿಪಾದ್ಯ ದೇವತೆಯ ಗುಣವರ್ಣನೆಯನ್ನು “ಸ್ತುತಿ” ಯೆಂದೂ ಹಾಗೂ ಆಯಾಯ ದೇವತೆ / ಪದಾರ್ಥದ ಪ್ರತ್ಯಕ್ಷದರ್ಶನವಾಗಿರುವಿಕೆಯನ್ನು “ಸಂಬೋಧನೆ” ಎಂದೂ ತಿಳಿಯಬೇಕು. ಈ ಋಕ್ಕು ಋಗ್ವೇದದ ೬ನೇ ಮಂಡಲದ ೧೬ನೇ ಸೂಕ್ತದಲ್ಲೂ, ೧೦ನೇ ಮಂಡಲದಲ್ಲೂ ಕಾಣಬರುತ್ತದೆ.
ಸಾಯಣಭಾಷ್ಯ—
ಪ್ರಥಮೇ ಖಂಡೇ ಅಗ್ನ ಆಯಾಹಿ - ಇತ್ಯೇಷಾ ಭರದ್ವಾಜೇನ ದೃಷ್ಟಾ ಗಾಯತ್ರೀ ಆಗ್ನೇಯೀ (ಸಾಮವೇದದ ಪೂರ್ವಾರ್ಚಿಯ ಮೊದಲ ಖಂಡದಲ್ಲಿ, “ಅಗ್ನ ಆ ಯಾಹಿ” ಎಂಬ ಸಾಮಮಂತ್ರವು ಭರದ್ವಾಜಮುನಿಯಿಂದ ದರ್ಶಿತವಾದ ಗಾಯತ್ರೀಚ್ಛಂದಸ್ಸಿನಲ್ಲಿರುವ ಅಗ್ನಿದೇವತಾಕವಾದ ಮಂತ್ರವು.) |
ಸಾ ಏಷಾ ಪ್ರಥಮಾ (ಅಂತಹ ಇದು ಮೊದಲನೆಯದು.) |
ಹೇ ಅಗ್ನೇ! ಅಂಗನಾದಿ-ಗುಣ-ವಿಶಿಷ್ಟ! ತ್ವಮ್ ಆಯಾಹಿ ಅಸ್ಮದ್ ಯಜ್ಞಂ ಪ್ರತಿ ಆಗಚ್ಛ (ಅಯ್ಯಾ ಅಗ್ನಿಯೇ! ವಕ್ರಗಮನಾದಿಗಳಿಂದ ವಿಶೇಷಿತನಾದವನೇ! ನೀನು ನಮ್ಮ ಯಜ್ಞದೆಡೆಗೆ ಬಾ / ಆಗಮಿಸು.) |
ಕಿಮರ್ಥಮ್? ವೀತಯೇ | ಹವಿಷಾಂ ಚರು-ಪುರೋಡಾಶಾದೀನಾಂ ಭಕ್ಷಣಾಯ (ಯಾಕೆ? ಚರು-ಪುರೋಡಾಶಾದಿ ಹವಿಸ್ಸುಗಳ ಭಕ್ಷಣೆಗಾಗಿ.) |
ಕೀದೃಶಃ ಸನ್? ಗೃಣಾನಃ ಅಸ್ಮಾಭಿಃ ಸ್ತೂಯಮಾನಃ (ವ್ಯತ್ಯಯೇನ ಕರ್ಮಣಿ ಕರ್ತೃಪ್ರತ್ಯಯಃ) (ಎಂಥವನಾಗಿ? ನಮ್ಮಿಂದ ಸ್ತುತಿಸಲ್ಪಡುವವನಾಗಿ.) |
ಪುನಶ್ಚ ಕಿಮರ್ಥಮ್? ಹವ್ಯದಾತಯೇ, ದೇವೇಭ್ಯೋ ಹವಿಃಪ್ರದಾನಾಯ (ಪುನಃ ಯಾಕಾಗಿ? ದೇವತೆಗಳಿಗೆ ಹವಿಸ್ಸನ್ನೀಯಲು.) |
ಆಗತ್ಯ ಚ ಹೋತಾ, ದೇವಾನಾಮ್ ಆಹ್ವಾತಾ ಸನ್, ಬರ್ಹಿಷಿ ಆಸ್ತೀರ್ಣೇ ದರ್ಭೇ ನಿಷತ್ಸಿ ನಿಷೀದ (ಹಾಗೆಯೇ, ಬಂದು ದೇವತೆಗಳನ್ನು ಆಹ್ವಾನಿಸುವ ಹೋತೃವಾಗಿದ್ದು, ನೆಲದಲ್ಲಿ ಹರಡಿದ ದರ್ಭಾಸನದಲ್ಲಿ ಕುಳಿತು ವಿರಾಜಮಾನನಾಗು.) || ೧ ||
೪೭) ಅಥರ್ವವೇದಾರಂಭದ ಮಂತ್ರವು ಯಾವುದು? ಅದರ ತಾತ್ಪರ್ಯವೇನು? ಅದರಲ್ಲಿ ನೀರನ್ನು ಹೇಗೆ ವರ್ಣಿಸಲಾಗಿದೆ?
ಅಥರ್ವವೇದ ಕಾಂಡ ೧. ಅನುವಾಕ ೧. ಸೂಕ್ತ ೬. ಮಂತ್ರ ೧. (ಜಲಸೂಕ್ತದ ಭಾಗ)
ಸುಬೋಧ ಹಿಂದೀಭಾಷ್ಯ (ದಾಮೋದರ ಸಾತವಾಲೇಕರ್)ದ ಅನುವಾದ—
(ಸಿಂಧುದ್ವೀಪ ಋಷಿಃ | ಅಪಾಂನಪಾತ್ / ಆಪೋ ದೇವತಾ |)
ಓಂ ಶನ್ನೋ ದೇವೀರಭಿಷ್ಟಯ ಆಪೋ ಭವಂತು ಪೀತಯೇ | ಶಂಯೋರಭಿಸ್ರವಂತು ನಃ ||
(ದೇವೀಃ ಆಪಃ) ದಿವ್ಯವಾದ ಜಲರಾಶಿ / ನೀರಿನ ಬಿಂದುಗಳು, (ನಃ ಶಮ್) ನಮಗೆ ಸುಖ-ಶಾಂತಿಯನ್ನೀಯಲಿ ಹಾಗೂ (ಅಭಿಷ್ಟಯೇ) ನಮ್ಮ ಅಭೀಷ್ಟಸಿದ್ಧಿಗಾಗಿ, ಅಂತೆಯೇ (ಪೀತಯೇ) ಕುಡಿಯಲು / ಕುಡಿದು ಬಾಯಾರಿಕೆ ತಣಿಸಲು, (ಅಭಿ ಸ್ರವಂತು) ನಮ್ಮ ಅಭಿಮುಖವಾಗಿ / ಮುಂದೆ / ಸಮೀಪದಲ್ಲೇ ನೀರಿನ ಸೆಲೆ / ಜಲಮೂಲವು ಸ್ರವಿಸಲಿ.
ದೇವೀಃ ಆಪಃ / ದಿವ್ಯಾಃ ಆಪಃ / ವಾರ್ಷಿಕೀಃ ಆಪಃ— ಇಂದ್ರಾಗ್ನಿವರುಣವಾಯ್ವಾದಿ ದೇವತಾನುಗ್ರಹದಿಂದ ಮೋಡದಿಂದ ವರ್ಷಧಾರೆಯಾಗಿ ಸುರಿಯುವ ಜಲ.
ಸಾಯಣಭಾಷ್ಯಮ್—
ಪದಪಾಠಃ— ಶಮ್ | ನಃ | ದೇವೀಃ | ಅಭಿಷ್ಟಯೇ | ಆಪಃ | ಭವಂತು | ಪೀತಯೇ | ಶಮ್ | ಯೋಃ | ಅಭಿ | ಸ್ರವಂತು | ನಃ ||
“ದೇವೀಃ” ದೇವ್ಯಃ ದ್ಯೋತನಾದಿ-ಗುಣಯುಕ್ತಾಃ | ದಿವು ಕ್ರೀಡಾ-ವಿಜಿಗೀಷಾ-ವ್ಯವಹಾರ-ದ್ಯುತಿ-ಸ್ತುತಿ-ಮೋದ-ಮದ-ಸ್ವಪ್ನ-ಕಾಂತಿ-ಗತಿಷು ||
"ದೇವೀಃ" (ಎಂದರೆ) ದೇವಿಯರು, (ದೇವೀ ದೇವ್ಯೌ ದೇವ್ಯಃ, ಈಕಾರಾನ್ತ ಸ್ತ್ರೀಲಿಙ್ಗ ದೇವೀಶಬ್ದದ ಪ್ರಥಮಾವಿಭಕ್ತಿಯ ಏಕವಚನ, ದ್ವಿವಚನ ಹಾಗೂ ಬಹುವಚನರೂಪಗಳು) ಬೆಳಗುವ / ಪ್ರಕಾಶಿಸುವ / ದ್ಯುತಿ (ಬೆಳಕು)ಶೀಲ ಗುಣಯುಕ್ತವಾಗಿರುವವರು. "ದಿವು" ಧಾತುವು ಕ್ರೀಡೆ, ಜಯಿಸುವ ಇಚ್ಛೆ, ವ್ಯವಹಾರ, ಬೆಳಕು, ಸ್ತುತಿ (ಪ್ರಶಂಸೆ), ಮೋದ (ಮುದ, ಹರ್ಷ), ಮದ (ದರ್ಪ), ಕನಸು, ಕಾಂತಿ (ಬೆಳಕು, ಕಾಂತಶೀಲತೆ, ಆಕರ್ಷಣ), ಗತಿ (ಚಲನಶೀಲತೆ) ಎಂಬ ಅರ್ಥಗಳುಳ್ಳದ್ದು. (ಈ ಧಾತುವಿನಿಂದ "ದೇವೀಃ" ಪದವು ನಿಷ್ಪನ್ನವಾಗಿದೆ)
…ಯಾಸ್ಕಃ ತು ದೇವಶಬ್ದಂ ಬಹುಧಾ ನಿರ್-ಅವೋಚತ್— “ದೇವೋ ದಾನಾದ್ವಾ, ದೀಪನಾದ್ವಾ, ದ್ಯೋತನಾದ್ವಾ, ದ್ಯುಸ್ಥಾನೋ ಭವತೀತಿ ವಾ” (ಯಾಸ್ಕನಿರುಕ್ತ ೭.೧೫) ಇತಿ ||
ನಿರುಕ್ತಕಾರ ಯಾಸ್ಕರಾದರೋ ದೇವಶಬ್ದವನ್ನು ಬಹುವಿಧವಾಗಿ ನಿರ್ವಚಿಸಿರುವರು— "ದೇವನು ದಾನಗುಣದಿಂದಲೋ, (ಉರಿಯುವಿಕೆಯಿಂದಲೋ) ಬೆಳಗುವಿಕೆಯಿಂದಲೋ, ಪ್ರಕಾಶಿಸುವಿಕೆಯಿಂದಲೋ, ದ್ಯುಲೋಕ / ದೇವಲೋಕ / ಸ್ವರ್ಗದಲ್ಲಿ ಇರುತ್ತಾನೆಂಬುದರಿಂದಲೋ" ಎಂಬುದಾಗಿ.
ಏವಮಾತ್ಮಿಕಾ “ಆಪಃ ನಃ” ಅಸ್ಮಾಕಮ್ “ಅಭಿಷ್ಟಯೇ” ಅಭಿ-ಯಜನಾಯ | ಯಜ ದೇವಪೂಜಾ-ಸಂಗತಿಕರಣ-ದಾನೇಷು |… ಅಭಿತಃ ಸರ್ವತಃ - ಯಾಗಾರ್ಥಂ “ಶಂ” ಸುಖಂ ಭವಂತು | ಸುಖಕಾರಿಣ್ಯಃ ಭವಂತು ಇತಿ ಅರ್ಥಃ ||
ಇಂತಹ ಗುಣಯುಕ್ತವಾದ "ಆಪಃ" ನೀರಹನಿಗಳು / ಜಲರಾಶಿಯು "ನಃ" ನಮ್ಮ "ಅಭಿಷ್ಟಯೇ" ಅಭಿಯಜನಕ್ಕಾಗಿ. ಯಜ ಧಾತುವು ದೇವರ ಪೂಜೆ, ದೇವರ ಬಗೆಗಿನ ಜ್ಞಾನ-ಧ್ಯಾನ-ಯೋಗ, ದೇವರಿಗೆ ಸಮರ್ಪಣೆ ಮುಂತಾದ ಅರ್ಥವುಳ್ಳದ್ದು. ಅಭಿ ಎಂದರೆ ಎಲ್ಲೆಡೆಯಿಂದ ದೇವಯಜ್ಞಕ್ಕಾಗಿ, ಆರಾಧನೆಗಾಗಿ, ಉಪಾಸನೆಗಾಗಿ (ಜಲರಾಶಿಯು) "ಶಂ" ಸುಖಕಾರಿಗಳಾಗಲಿ, ಹಿತಕಾರಿಗಳಾಗಲಿ, ಸಹಕಾರಿಗಳಾಗಲಿ, ಪೂರಕವಾಗಲಿ ಎಂದರ್ಥ. ದೇವತಾರಾಧನೆಗೆ ಸಾಕಷ್ಟು ಶುದ್ಧಜಲವು ನಮಗೆ ಲಭಿಸಲಿ ಎಂದರ್ಥ.
ತಥಾ “ಪೀತಯೇ” ಪಾನಾಯ ಚ ಶಂ ಭವಂತು | ಪೀಯಮಾನಾಃ-ಆಪಃ ಸ್ವಾದುತಮಾಃ ಸುಖಾಯ ಭವಂತು ಇತಿ ಅರ್ಥಃ ||
ಹಾಗೆಯೇ, "ಪೀತಯೇ" (ನೀರು ನಮಗೆ) ಕುಡಿಯಲೂ ಹಿತಕರವಾಗಿರಲಿ. ಕುಡಿಯುವ ನೀರೂ ರುಚಿಕರವಾಗಿ, ಪರಿಶುದ್ಧವಾಗಿ, ಸುಖವನ್ನುಂಟುಮಾಡಲೆಂದು ಅರ್ಥ.
...ಅಪಿ ಚ, “ನಃ” ಅಸ್ಮಾಕಂ “ಶಂ” ಪ್ರಾಪ್ತಾನಾಂ ರೋಗಾಣಾಂ ಶಮನಾಯ “ಯೋಃ” ಅ-ಪ್ರಾಪ್ತಾನಾಂ ರೋಗಾಣಾಂ ಪೃಥಕ್-ಕರಣಾಯ ಚ ತಾ ಆಪಃ “ಅಭಿ ಸ್ರವಂತು” ಅಸ್ಮದ್-ಆಭಿಮುಖ್ಯೇನ ಗಚ್ಛಂತು | ಯದ್-ವಾ, “ಶಂ ಯೋಃ” ಇತಿ ರೋಗಾಣಾಂ ಶಮನಂ ಚೋರ-ವ್ಯಾಘ್ರಾದಿ-ಜನಿತ-ಭಯಾನಾಂ ಪೃಥಕ್ಕರಣಂ ಚ ಯಥಾ ಭವತಿ ತಥಾ ಇತ್ಯರ್ಥಃ | ತದುಕ್ತಂ ಯಾಸ್ಕೇನ — “ಶಮನಂ ಚ ರೋಗಾಣಾಂ ಯಾವನಂ ಚ ಭಯಾನಾಮ್” (೪.೨೧) ಇತಿ | ಶಮು ಉಪಶಮನೇ | ಯು ಮಿಶ್ರಣ-ಅಮಿಶ್ರಣಯೋಃ ||
ಹಾಗೆಯೇ, "ನಃ" ನಮಗೆ "ಶಂ" ಪ್ರಾಪ್ತವಾದ (ಒದಗಿಬಂದ) ರೋಗಗಳ ಶಮನಕ್ಕೆ ಹಾಗೂ "ಯೋಃ" ಇನ್ನೂ ಬಾರದಿರುವ ರೋಗಗಳನ್ನು ದೂರಮಾಡಲು, ಬರದಂತೆ ತಡೆಯಲು, ಆ ಜಲರಾಶಿಯು "ಅಭಿ-ಸ್ರವನ್ತು" ನಮ್ಮ ಮುಂದೆಯೇ ಹರಿಯುತ್ತಿರಲಿ. ಅಥವಾ, "ಶಂ ಯೋಃ" ಎಂದರೆ, ರೋಗಗಳ ಶಮನ ಹಾಗೂ ಕಳ್ಳರ, ಹುಲಿಯೇ ಮುಂತಾದ ಕ್ರೂರಪ್ರಾಣಿಗಳಿಂದುಂಟಾದ ಹೆದರಿಕೆಯನ್ನು ದೂರಮಾಡುವಿಕೆಯು ಹೇಗೆ ಆಗುವುದೋ ಹಾಗೆ ಎಂದರ್ಥ. ಹಾಗಾಗಿಯೇ ಯಾಸ್ಕರಿಂದ ಹೇಳಲ್ಪಟ್ಟಿದೆ— "ರೋಗಗಳ ಶಮನವೂ, ಭಯಗಳ ನಿವಾರಣೆಯೂ" ಎಂಬುದಾಗಿ. ಶಮು ಧಾತುವಿಗೆ ಉಪಶಮನ, ಗುಣಪಡಿಸುವಿಕೆ ಎಂದರ್ಥ. ಯು ಧಾತುವಿಗೆ ಮಿಶ್ರಣ ಹಾಗೂ ಬೇರ್ಪಡಿಸುವಿಕೆ ಎಂಬೆರಡರ್ಥಗಳಿವೆ. (ಇಲ್ಲಿ ಭಯಗಳ ಬೇರ್ಪಡಿಸುವಿಕೆ, ದೂರಮಾಡುವಿಕೆ)
ದಯಾನಂದಭಾಷ್ಯಮ್—
ಸಿಂಧುದ್ವೀಪಃ - ಅಥರ್ವಾಕೃತಿಃ - ಋಷಿಃ | ಆಪಃ ದೇವತಾಃ | ಗಾಯತ್ರೀಚ್ಛಂದಃ | ಆರೋಗ್ಯತಾ-ಉಪದೇಶಃ |
ಪ್ರತಿಪದ-ಅರ್ಥ— (ದೇವೀಃ) ದಿವ್ಯಗುಣವುಳ್ಳವುಗಳಾದ, (ಆಪಃ) ನೀರು (/ ನೀರಿನಂತೆ ಉಪಕಾರಿಯಾದ ಮನುಷ್ಯರು), (ನಃ) ನಮ್ಮ, (ಅಭಿಷ್ಟಯೇ) ಅಭೀಷ್ಟಸಿದ್ಧಿಗಾಗಿ ಹಾಗೂ, (ಪೀತಯೇ) ಕುಡಿಯಲು (/ರಕ್ಷಣೆ ಮಾಡಲು) ಪಾಲಿಸಲು, (ಶಮ್) ಸುಖದಾಯಕ, (ಭವಂತು) ಆಗಲಿ. ಹಾಗೆಯೇ (ನಃ) ನಮ್ಮ, (ಶಮ್) ರೋಗದ ಶಾಂತಿ / ಶಮನಕ್ಕಾಗಿ ಮತ್ತು, (ಯೋಃ) ಭಯವನ್ನು ದೂರಮಾಡಲು, (ಅಭಿ) ಎಲ್ಲ ದಿಕ್ಕುಗಳಿಂದ, (ಸ್ರವಂತು) ವರ್ಷಿಸಲಿ / ಸುರಿಯಲಿ.
ಭಾವಾರ್ಥ— ಮಳೆನೀರಿನಂತೆ ಉಪಕಾರೀ ವ್ಯಕ್ತಿಯು ಸರ್ವರ ದುಃಖನಿವೃತ್ತಿ (ಕಷ್ಟ-ದುಃಖಾದಿಗಳನ್ನು ದೂರಮಾಡಲು) ಹಾಗೂ ಸುಖಪ್ರವೃತ್ತಿಯಲ್ಲಿ (ಹಿತವನ್ನುಂಟುಮಾಡಲು) ಪ್ರಯತ್ನಿಸುತ್ತಲೇ ಇರಲಿ.
ಜಯದೇವಶರ್ಮಕೃತಭಾಷ್ಯ—
ನೀರಿನ ವರ್ಣನೆ
ಅಪೋನಪ್ತ್ರೀಯಂ ಸೂಕ್ತಮ್ (ಆಪೋನಪ್ತ್ರೀ ಎಂಬೀ ಸೂಕ್ತವು.) | ಅಥರ್ವಾ ಕೃತಿಃ ಸಿಂಧುದ್ವೀಪಃ ಚ ಋಷಿಃ (ಅಥರ್ವವೇದದ ಮಂತ್ರವು ಮತ್ತು ಸಿಂಧುದ್ವೀಪನು ಋಷಿಯು.) | ಋಗ್ವೇದೇ ತ್ರಿಶಿರಾಃ ತ್ವಾಷ್ಟ್ರಃ ಸಿಂಧುದ್ವೀಪಃ - ಅಂಬರೀಷಃ ಋಷಿಃ (ಋಗ್ವೇದದಲ್ಲಿ ೩ ಶಿರಗಳುಳ್ಳ ತ್ವಷ್ಟೃಬ್ರಹ್ಮನ ಮಗನೂ, ಸಿಂಧುದ್ವೀಪನೂ, ಬಳಿಕ ಅಂಬರೀಷನೂ ಈ ಮಂತ್ರವನ್ನು ಕಂಡ ಋಷಿಗಳು.) | ಆಪೋ ದೇವತಾಃ (ನೀರೇ ದೇವತೆಯು.) | ಪಥ್ಯಾ-ಪಂಕ್ತಿಃ ಛಂದಃ (ಪಥ್ಯಾ-ಪಂಕ್ತಿಯೆಂಬುದಿದರ ಛಂದಸ್ಸು.) | ಚತುರ್-ಋಚಂ ಸೂಕ್ತಮ್ (೪ ಋಕ್ಕುಗಳ ಸೂಕ್ತವಿದು. ಲಘುನ್ಯಾಸದಲ್ಲಿ ಮೊದಲ ಋಕ್ಕನ್ನು ಮಾತ್ರ ಸಂಕಲಿಸಲಾಗಿದೆ.) ||
(ಋ. ೧೦.೯.೪; ಯಜು. ೩೬.೧೨)
(ದೇವೀಃ) ದಿವ್ಯಗುಣಯುಕ್ತವಾದ, (ಆಪಃ) ಜಲವೇ! ನೀನು, (ನಃ) ನಮ್ಮ, (ಅಭಿಷ್ಟಯೇ) ಯಜ್ಞ ಹಾಗೂ ಇತರ ಅಭೀಪ್ಸಿತ ಸುಖ-ಸಾಧನಗಳಿಗಾಗಿ ಹಾಗೂ (ಪೀತಯೇ) ಕುಡಿಯುವುದಕ್ಕಾಗಿ, (ಶಮ್) ಶುಭಕರವಾಗು. ಹಾಗೆಯೇ, (ನಃ) ನಮಗೆ, (ಶಮ್) ಬಂದಿರುವ ರೋಗಗಳ ಶಮನ ಹಾಗೂ, (ಯೋಃ) ಇನ್ನೂ ಬಾರದಿರುವ ರೋಗಗಳನ್ನು ದೂರದಿಂದಲೇ ಬರದಂತೆ ನಿವಾರಿಸಲು / ತಡೆಗಟ್ಟಲು, (ಅಭಿಸ್ರವಂತು) ಎಲ್ಲೆಡೆಗಳಿಂದ ಹರಿದು, ಬಾ, ಸುರಿದು ಬಾ, ಸ್ರವಿಸಿ ಬಾ.
೪೮) ಯಜುರ್ವೇದಾರಂಭದಲ್ಲಿ ಗೋವುಗಳ ಮಹಿಮೆಯನ್ನು ಹೇಗೆ ಹೇಳಿದ್ದಾರೆ? ಪಲಾಶವೃಕ್ಷದ ಮಹತ್ವವೇನು?
(ಪುನಃ ಯಜುರ್ವೇದಾರಂಭಮಂತ್ರವಿಸ್ತಾರ)
ಓಂ ಇಷೇ ತ್ವೋರ್ಜೇತ್ವಾ1 ವಾಯವ: ಸ್ಥೋಪಾಯವ: ಸ್ಥ2 ದೇವೋ ವ: ಸವಿತಾ ಪ್ರಾರ್ಪಯತು ಶ್ರೇಷ್ಠತಮಾಯ ಕರ್ಮಣ3 ಆ ಪ್ಯಾಯಧ್ವಮಘ್ನಿಯಾ ದೇವಭಾಗಮೂರ್ಜಸ್ವತೀ: ಪಯಸ್ವತೀ: ಪ್ರಜಾವತೀರನಮೀವಾ ಅಯಕ್ಷ್ಮಾ ಮಾ ವ: ಸ್ತೇನ ಈಶತ ಮಾऽಘಶಗ್ಂಸೋ4 ರುದ್ರಸ್ಯ ಹೇತಿ: ಪರಿ ವೋ ವೃಣಕ್ತು5 ಧ್ರುವಾ ಅಸ್ಮಿನ್ಗೋಪತೌ ಸ್ಯಾತ ಬಹ್ವೀರ್6 ಯಜಮಾನಸ್ಯ ಪಶೂನ್ಪಾಹಿ7 ||೧||
ಸಾಯಣಭಾಷ್ಯಾರ್ಥ( ಸಾ.ಭಾ.)-
ಇಷೇ ತ್ವಾ - ದರ್ಶಯಾಗಮಾಡಲಿಚ್ಛಿಸುವವನು ಅಮಾವಾಸ್ಯೆಯಲ್ಲಿ ಪ್ರಾತರಗ್ನಿಯನ್ನು ಹೋಮಿಸಿ, ದರ್ಶಯಾಗಕ್ಕಾಗಿ ‘ಮಮಾಗ್ರೇ ವರ್ಚ:’ ಇತ್ಯಾದಿ ಮಂತ್ರಗಳಿಂದ ಅಗ್ನಿಯಲ್ಲಿ ಸಮಿತ್ತುಗಳನ್ನರ್ಪಿಸುವ ಮೂಲಕ ಅಗ್ನಿಯನ್ನು ಸ್ಥಿರಗೊಳಿಸಿ, ವತ್ಸಾಪಾಕರಣಾರ್ಥಮಂತ್ರದಿಂದ ಪಲಾಶವೃಕ್ಷದ ಗೆಲ್ಲನ್ನು ಕತ್ತರಿಸಬೇಕು. ಬೋಧಾಯನರ ಪ್ರಕಾರ, “ತಾಮ್ ಆಚ್ಛಿನತ್ತಿ ಇಷೇ ತ್ವಾ ಊರ್ಜೇ ತ್ವಾ” - “ಇಷೇ ತ್ವೋರ್ಜೇ ತ್ವಾ” ಎಂಬ ಮಂತ್ರದಿಂದ ಆ ಪಲಾಶದ ಗೆಲ್ಲನ್ನು ಕತ್ತರಿಸುತ್ತಾನೆ.
ಊರ್ಜೇ ತ್ವಾ - ಆಪಸ್ತಂಬರ ಪ್ರಕಾರ, “ಇಷೇ ತ್ವೋರ್ಜೇ ತ್ವೇತಿ ತಾಮ್ ಆಚ್ಛಿನತ್ತಿ ಅಪಿ ವಾ ಇಷೇ ತ್ವಾ ಇತಿ ಆಚ್ಛಿನತ್ತಿ ಊರ್ಜೇ ತ್ವಾ ಇತಿ ಸಂನಮಯತಿ ಅನುಮಾರ್ಷ್ಟಿ ವಾ” - “ಇಷೇ ತ್ವಾ” ಎಂದು ಕತ್ತರಿಸುತ್ತಾನೆ ಮತ್ತು “ಊರ್ಜೇ ತ್ವಾ” ಎಂದು ಕತ್ತರಿಸಿದ ಪಲಾಶಶಾಖೆಯನ್ನು ಕೆತ್ತಿ, ಕತ್ತರಿಸಿ ಸರಿಪಡಿಸುತ್ತಾನೆ ಅಥವಾ ಕತ್ತರಿಸಿದ ಅನಂತರ ಅದನ್ನು ಚೆನ್ನಾಗಿ ತೊಳೆದು, ಧೂಳು,ಕೊಳೆ ಇತ್ಯಾದಿಗಳನ್ನು ಹೋಗಲಾಡಿಸುತ್ತಾನೆ. “ಸಂನಮನಂ ಋಜುಕರಣಮ್ | ಅನುಮಾರ್ಜನಮ್ ಆನುಲೋಮ್ಯೇನ ಸಂಲಗ್ನಧೂಲ್ಯಾದಿ-ಅಪನಯನಮ್ ||”
“ಇಡ್ ಇತಿ ಅನ್ನಂ ಸರ್ವೈ: ಪ್ರಾಣಿಭಿ: ಇಷ್ಯಮಾಣತ್ವಾತ್ | ಊರ್ಕ್ ಬಲಹೇತು:, ರಸ: | ಊರ್ಜ ಬಲಪ್ರಾಣನಯೋ: ಇತಿ ಧಾತು: | ಊರ್ಜ್ಯತೇ ಬಲಂ ಸಂಪಾದ್ಯತೇ ಅನಯಾ ರಸರೂಪಯಾ ಇತಿ ಊರ್ಕ್ | ಹೇ ಪಲಾಶಶಾಖೇ! ದೇವಾನಾಂ ಭಾಗರೂಪದಧ್ಯರ್ಥಂ ತ್ವಾಮ್ ಆಚ್ಛಿನದ್ಮಿ | ತಸ್ಯ ದೇವಸ್ಯ ಬಲಪ್ರದ-ರಸಾರ್ಥಂ ತ್ವಾಮಾಚ್ಛಿನದ್ಮಿ ಇತಿ ವಾಕ್ಯಾರ್ಥ: | ಮಂತ್ರದ್ವಿತ್ವಪಕ್ಷೇ ವಿನಿಯೋಗಾನುಸಾರೇಣ ಊರ್ಜೇ ತ್ವಾಮ್ ಅನುಮಾರ್ಜ್ಮಿ ಇತಿ ಅಧ್ಯಾಹಾರ್ಯಮ್ | ಏತತ್ ಮಂತ್ರ: ತಾವಕಮ್ ಅರ್ಥವಾದಮ್ ಆಹ - ಇಷಮ್ ಏವ ಊರ್ಜಂ ಯಜಮಾನೇ ದಧಾತಿ (ತೈ.ಬ್ರಾಹ್ಮಣ, ಕಾಂಡ ೩, ಪ್ರಶ್ನ ೨, ಅಧ್ಯಾಯ ೧) ಇತಿ | ಏತನ್ಮಂತ್ರಪಾಠೇನ ಅಧ್ವರ್ಯು: ಭೋಜನಾಯ ಅನ್ನಂ ಬಲಾಯ ಚ ರಸಂ ಯಜಮಾನೇ ಸಂಪಾದಯತಿ |”
ಅನುವಾದ— ಎಲ್ಲ ಪ್ರಾಣವಂತರಿಂದ ಇಷ್ಟಪಡಲ್ಪಡುವಂಥದ್ದು ಎಂಬುದರಿಂದಾಗಿ ಇಡ್ ಅಂದರೆ ಅನ್ನ. ಊರ್ಕ್ ಎಂದರೆ ಬಲಕ್ಕೆ ಕಾರಣವಾದ ರಸ. ಊರ್ಜ ಬಲಪ್ರಾಣನಯೋಃ ಎಂಬ ಧಾತು(ಕ್ರಿಯಾಪದದ ಮೂಲರೂಪ). ಈ ರಸರೂಪದಿಂದ ಬಲವು/ಊರ್ಜೆಯು ಸಂಪಾದಿಸಲ್ಪಡುವುದು, ಎಂಬುದರಿಂದಾಗಿ ಊರ್ಕ್. ಹೇ ಪಲಾಶದ ಗೆಲ್ಲೇ! ದೇವತೆಗಳ ಹವಿರ್ಭಾಗವನ್ನು ಯಜ್ಞಮುಖೇನ ಅರ್ಪಿಸಲೋಸುಗ ನಿನ್ನನ್ನು ಕತ್ತರಿಸುತ್ತೇನೆ. ಆ ದೇವನ ಬಲಪ್ರದವಾದ ರಸಪ್ರಾಪ್ತಿಗಾಗಿ ನಿನ್ನನ್ನು ತುಂಡರಿಸುತ್ತೇನೆ ಎಂದು ವಾಕ್ಯದ ಅರ್ಥ. ಇಷೇ ತ್ವೋರ್ಜೇತ್ವಾ - ಇಲ್ಲಿ ೨ ಮಂತ್ರಗಳಿವೆಯೆಂಬ ಪಕ್ಷದಲ್ಲಿ, ವಿನಿಯೋಗಾನುಸಾರವಾಗಿ ಊರ್ಜೆ/ಬಲಕ್ಕಾಗಿ ನಿನ್ನನ್ನು ತೊಳೆದು(ಮಾರ್ಜನ ಮಾಡಿಸುತ್ತೇನೆ) ಸ್ವಚ್ಛಗೊಳಿಸುತ್ತೇನೆ ಎಂದು ಅಧ್ಯಾಹಾರ ಮಾಡಿಕೊಳ್ಳಬೇಕು. ಈ ಕೆಳಗಿನ ತೈತ್ತಿರೀಯ ಬ್ರಾಹ್ಮಣದ ಮಂತ್ರವು ಅಂತಹ ಅರ್ಥವಾದವನ್ನು ಹೇಳಿದೆ- ಅನ್ನವೇ ಬಲವನ್ನು ಯಜಮಾನನಿ(ಯಜ್ಞಕರ್ತೃವಿ)ಗೆ ಕೊಡುತ್ತದೆ ಎಂದು. ಈ ಮಂತ್ರದ ಪಠಣದಿಂದ ಯಜ್ಞದ ಅಧ್ವರ್ಯುವು (ಹವಿಸ್ಸನ್ನು ಯಜುರ್ಮಂತ್ರಗಳನ್ನುಚ್ಚರಿಸುತ್ತಾ ಹೋಮಿಸುವ ಋತ್ವಿಜನು) ಯಜಮಾನನಿಗೆ ಉಣ್ಣಲು ಅನ್ನ ಹಾಗೂ ಬಲಕ್ಕೆ ಪೂರಕವಾದ ರಸವನ್ನು ಸಂಪಾದಿಸಿ ಕೊಡುತ್ತಾನೆ.
ವಾಯವಃ ಸ್ಥ ಉಪಾಯವಃ ಸ್ಥ - ಬೋಧಾಯನರು ಹೇಳುತ್ತಾರೆ- “ತಯಾ ವತ್ಸಾನಪಾಕರೋತಿ ವಾಯವಃ ಸ್ಥೋಪಾಯವಃ ಸ್ಥೇತಿ” ಎಂದು. ಈ ಮಂತ್ರದಿಂದ ಗೋವುಗಳ ಕರುಗಳನ್ನು ಮೇಯಲು ಹಟ್ಟಿಯಿಂದ ಹೊರಕ್ಕೆ ಕಳುಹಿಸುತ್ತಾನೆ.
“ವಾಂತಿ ಗಚ್ಛಂತಿ ಇತಿ ವಾಯವಃ ಗಂತಾರಃ | ಉಪಸಮೀಪೇ ಯಜಮಾನಗೃಹೇ ಪುನರಾಯಾಂತಿ ಆಗಚ್ಛಂತಿ ಇತಿ ಉಪಾಯವಃ |” - ಬೀಸುತ್ತವೆ, ಚಲಿಸುತ್ತವೆ, ಹೋಗುತ್ತವೆ ಎಂಬುದರಿಂದಾಗಿ ವಾಯುಗಳು ಎನ್ನಲ್ಪಡುತ್ತವೆ. ಯಜಮಾನನ ಮನೆಗೆ ಪುನ: ಬರುತ್ತವೆ ಎಂಬುದರಿಂದಾಗಿ ‘ಉಪಾಯವಃ’. ಹೇ ಕರುಗಳೇ! ಹುಲ್ಲುಮೇಯಲು, ಮೊದಲು ತಾಯ ಸಾಮೀಪ್ಯವನ್ನು ತೊರೆದು ಅರಣ್ಯದಲ್ಲಿ ಸ್ವೇಚ್ಛೆಯಿಂದ ವಿಹರಿಸುವವರಾಗಿರಿ. ಸಂಜೆ ಪುನಃ ಯಜಮಾನನ ಮನೆಗೆ ಬರುವವರಾಗಿರಿ ಎಂದು ಅಧ್ವರ್ಯುಗಳು ಯಜ್ಞಕರ್ತೃವಿನ ಪರವಾಗಿ ಪ್ರಾರ್ಥಿಸುತ್ತಾರೆ.
-ಅಥವಾ-
“ವಾಯವಃ ಸ್ಥ ಇತಿ ಆಹ | ವಾಯುಃ ವಾ ಅಂತರಿಕ್ಷಸ್ಯ ಅಧ್ಯಕ್ಷಾಃ | ಅಂತರಿಕ್ಷದೇವತ್ಯಾಃ ಖಲು ವೈ ಪಶವಃ | ವಾಯವಃ ಏವ ಏನಾನ್ ಪರಿದದಾತಿ |” ಎಂಬ ತೈ.ಬ್ರಾಹ್ಮಣದ ನಿರ್ವಚನದಂತೆ, ವಾಯುವು ಅಂತರಿಕ್ಷದೆಲ್ಲೆಡೆ ಸಂಚಾರದಲ್ಲಿದ್ದು, ಸ್ಥಿತವಾಗಿರುವುದರಿಂದ, ಕರುಗಳ ಸಂಚಾರಕ್ಕೆ ಬೇಕಾದಷ್ಟು ಅವಕಾಶವನ್ನು ನೀಡುತ್ತಾನೆ. ಆದ್ದರಿಂದ, ಕರು/ಪಶುಗಳನ್ನು ವಾಯುವಿನ ಸುಪರ್ದಿಗೆ ಕೊಟ್ಟು, ಪುನ: ಮರಳುವವರೆಗೆ ಅವುಗಳನ್ನು ಕಾಪಾಡಬೇಕೆಂದು ಪ್ರಾರ್ಥಿಸಲಾಗಿದೆ. ತೈ.ಬ್ರಾಹ್ಮಣದಲ್ಲಿ ಇನ್ನೊಂದೆಡೆ ಹೀಗೆ ಹೇಳಲಾಗಿದೆ- “ಪ್ರ ವಾ ಏನಾನ್ ಏತತ್ ಆಕರೋತಿ | ಯತ್ ಆಹ | ವಾಯವಃ ಸ್ಥ ಇತಿ |” - ವಾಯುವು ಈ ಪಶುಗಳನ್ನು ಕೊಂಡೊಯ್ಯುತ್ತಾನೆ. ಅಧ್ವರ್ಯುವು ಈ ಮಂತ್ರೋಚ್ಚಾರದಿಂದ ಪಶುಗಳನ್ನು ವಾಯುತಾದಾತ್ಮ್ಯಗೊಳಿಸುತ್ತಾನೆ. “ಉಪಾಯವಃ ಸ್ಥ ಇತಿ ಆಹ | ಯಜಮಾನಾಯ ಏವ ಪಶೂನ್ ಉಪಾಹ್ವಯತೇ |” - ಯಜಮಾನನಿಗೇ ಪಶುಗಳನ್ನು ಪುನಃ ವಾಯುವು ತಂದೊಪ್ಪಿಸುತ್ತಾನೆ. ಕರೆತರುವಂತೆ ಅಧ್ವರ್ಯುವು ವಾಯುದೇವನನ್ನು ಪ್ರಾರ್ಥಿಸುತ್ತಾನೆ.
ಹೇ ಕರುಗಳೇ ! ನೀವು ಮನೆಯಿಂದ ಕಾಡಿಗೆ ಮೇಯಲು ಹೋಗುವವುಗಳಾಗಿ; ಮರಳಿ ಸಂಜೆ ಬರುವವುಗಳೂ ಆಗಿರಿ, ಎನ್ನುವ ವಿಧ್ಯರ್ಥಕ (ವಿಧಿಲಿಙ್ ಲಕಾರಾರ್ಥಕ) ವಾಕ್ಯ ಇದಾಗಿದೆ. ಯಾಕೆಂದರೆ, ವೇದಗಳು ಪ್ರಭುಸಂಮಿತ ಗ್ರಂಥಗಳು; ರಾಜಶಾಸನದಂತೆ ಧರ್ಮಕರ್ಮಾದಿಗಳನ್ನು ಹೀಗೆಯೇ ಮಾಡಬೇಕೆಂದು ವಿಧಿಸುವ, ಬೇರೆ ಮೂಲಪ್ರಮಾಣವನ್ನು ಅಪೇಕ್ಷಿಸದ, ಇದಮಿತ್ಥಂ ಎಂಬ ಶ್ರುತಿ/ಆಗಮ ಪ್ರಮಾಣಗಳಾಗಿವೆ.
“ಉಪವ್ಯಾನೇऽನುವಾದೋ ವಾ ವಿಧಿರ್ವಾऽऽದ್ಯೋ ಯತಃ ಸ್ಮೃತೌ |
ಪ್ರಾಪ್ತಂ ಮೈವಮಪೂರ್ವತ್ವಾತ್ ಕ್ರತೌ ಲೇಟಾ ವಿಧೀಯತೇ ||”
ತಲೆಬಾಗಿ ನಮಸ್ಕರಿಸುವಾಗ/ದೇವತೋಪಾಸನೆಯಲ್ಲಿ, ಮಂತ್ರಗಳ ಅನುವಾದವನ್ನು ಬ್ರಾಹ್ಮಣಾದಿಗಳಲ್ಲಿ ಮಾಡುವಾಗ, ಪ್ರಧಾನವಾದ/ಮೂಲ ಕರ್ಮವಿಧಿಗಳನ್ನು- ಯಾವುದಕ್ಕಾಗಿ ಸ್ಮೃತಿಗಳುದ್ಭವಿಸಿದವೋ ಅಂಥವುಗಳನ್ನು- ಹೇಳುವಾಗ, ಯಾವ ಯಜ್ಞಾದಿ ವಿಧಿವಿಧಾನಗಳಿಗೆ ಈ ವಿಧವಾಗಿ ಇದಕ್ಕೂ ಪೂರ್ವದಲ್ಲಿ(ಹಿಂದೆ) ಯಾವ ಬೇರೆ ಆಧಾರ ಪ್ರಮಾಣಗಳಿಲ್ಲವೋ, ಅಂತಹ ಸಂದರ್ಭಗಳಲ್ಲಿ ವೇದಗಳಲ್ಲಿ ಕ್ರಿಯಾಪದಗಳಿಗೆ ‘ಲೇಟ್ ಲಕಾರ’ರೂಪಗಳು ಬಳಸಲ್ಪಟ್ಟಿವೆ.
“ವಾಯವಃ ಸ್ಥೋಪಾಯವಃ ಸ್ಥ- ಇತ್ಯತ್ರ ತಸ್ಯ ಚ ವಿಧಾಯಕತ್ವಂ ಲಿಙರ್ಥೇ ಲೇಟ್ (ಪಾಣಿನೀಯಸೂತ್ರ೭, ಪಾದ ೪, ಅಧ್ಯಾಯ ೩) ಇತಿ ಸೂತ್ರಸಿದ್ಧಮ್ ||” ಇದರ ಸೂಚನೆಯು - ಲಿಙ್ ಲಕಾರಾರ್ಥಕವಾಗಿ ಲೇಟ್ ಲಕಾರ. ಆದ್ದರಿಂದ, ಸವತ್ಸ ಗೋವುಗಳು ಮೇಯಲು ಹೋಗುವವುಗಳಾಗಲಿ; ನಂತರ, ಸಂಜೆ ಮರಳಿ ಬರುವವುಗಳಾಗಲಿ- ಎಂಬ ವಿಧಿಲಿಙ್ ಅರ್ಥಕವಾದ ಲೇಟ್ ಲಕಾರವನ್ನು ಪ್ರಯೋಗಿಸಿ ‘ಸ್ಥ’ವನ್ನು ಬಳಸಲಾಗಿದೆ.(ಅಸ ಭುವಿ ಧಾತು, ಅಸ್ತಿ- ಲಟ್ ಲಕಾರರೂಪ, ಇರುವಿಕೆ, ಆಗಿರುವಿಕೆ, ಅಸ್ತಿತ್ವ ಎಂಬರ್ಥ ಸೂಚಕ).
ದೇವೋ ವಃ - ಬೌಧಾಯನರು ಈ ಮಂತ್ರದ ವಿನಿಯೋಗವನ್ನು ಹೀಗೆ ಹೇಳುತ್ತಾರೆ - “ಅನಂತರ ಈ ಕರುಗಳ ಅಮ್ಮಂದಿರನ್ನು/ಗೋಮಾತೆಯರನ್ನು ಈ ಮಂತ್ರಗಳಿಂದ ಪ್ರೇರಿಸುತ್ತಾನೆ”.
ಆಪಸ್ತಂಬರಾದರೋ ಈ ಮೂರು ಮಂತ್ರಗಳಿಗೆ ಪ್ರತ್ಯೇಕವಾದ ೩ ವಿನಿಯೋಗಗಳನ್ನು ಹೇಳುತ್ತಾರೆ.
೧) “ದೇವೋ ವಃ ಸವಿತಾ ಪ್ರಾರ್ಪಯತು ಶ್ರೇಷ್ಠತಮಾಯ ಕರ್ಮಣೇ |” ಎಂಬ ಮಂತ್ರದಿಂದ ಪಲಾಶಕೋಲಿನಿಂದ ಗೋವುಗಳನ್ನು ಗೋಚರ(ಗೋವುಗಳು ಮೇಯುವ/ಸಂಚರಿಸುವ ಸ್ಥಳ)ಕ್ಕೆ ಹೊರಡಿಸುತ್ತಾನೆ.
೨) “ಆಪ್ಯಾಯಧ್ವಮಘ್ನಿಯಾ ದೇವಭಾಗಮೂರ್ಜಸ್ವತೀಃ ಪಯಸ್ವತೀಃ ಪ್ರಜಾವತೀರನಮೀವಾ ಅಯಕ್ಷ್ಮಾ ಮಾ ವಃ ಸ್ತೇನ ಈಶತ ಮಾऽಘಶಗ್ಂಸಃ |” - ಈ ಮಂತ್ರದಿಂದ, ಈಗಾಗಲೇ ಹೊರಟು ನಿಂತಿರುವ ಗೋಮಾತೆಯರಲ್ಲಿ ಒಂದನ್ನು ಕರುಗಳ,ದೇವತೆಗಳ ಹಾಗೂ ಮನುಷ್ಯರ ಅಭಿವರ್ಧನೆಗಾಗಿ ಪ್ರೀತಿಯಿಂದ ವರ್ತಿಸುವಂತೆ ದರ್ಭೆಗಳಿಂದ ನಯವಾಗಿ ಸ್ಪರ್ಶಿಸುತ್ತಾನೆ.
೩) “ರುದ್ರಸ್ಯ ಹೇತಿ: ಪರಿ ವೋ ವೃಣಕ್ತು |” ಎಂಬ ಮಂತ್ರವನ್ನು, ಗೋಚರಕ್ಕೆ ಹೊರಟಿರುವ ಗೋವುಗಳು ಮನೆಯಿಂದ ದೂರಹೋದ ಬಳಿಕ, ಪಠಿಸುತ್ತಾ, ರುದ್ರನ ಆಯುಧವು ದುಷ್ಟಶಕ್ತಿಗಳಿಂದ ಗೋವುಗಳನ್ನು ರಕ್ಷಿಸಲಿ ಎಂದು ಪ್ರಾರ್ಥಿಸಲಾಗಿದೆ.
ವಿವರಣೆ:-
೧) ಹೇ ಗೋವುಗಳೇ ! ಸಮಸ್ತ ಲೋಕದ ಪ್ರೇರಕನೂ, ದಿವ್ಯನೂ, ಅಂತರ್ಯಾಮಿಯೂ ಆದ ಪರಮೇಶ್ವರನು, ಅತ್ಯಂತ ಶ್ರೇಷ್ಠತಮವಾದ ಇಂದ್ರದಧಿರೂಪವಾದ {(ದಧಿ-ಮೊಸರು); ಇಂದ್ರಾದಿದೇವತೆಗಳಿಗೆ ಅರ್ಪಿಸಲು ಬೇಕಾದ ಯಜ್ಞಹವಿಸ್ಸಾದ ಆಜ್ಯ(ಘೃತಮ್, ಸರ್ಪಿಃ, ತುಪ್ಪ)ವನ್ನು ಸಂಪಾದಿಸಿಕೊಡುವ ಹಾಲು, ಅದರಿಂದ ಮೊಸರು- ಇತ್ಯಾದಿಗಳ ಹೇರಳ ಲಭ್ಯತೆಗೆ ಪೂರಕವಾಗಿ ಹಸುಗಳು ಪುಷ್ಟಿ ಹೊಂದಲು} ಕರ್ಮಕ್ಕೋಸ್ಕರವಾಗಿ ನಿಮ್ಮನ್ನು(ವಃ/ಯುಷ್ಮಾನ್, ಗೋವುಗಳನ್ನು) ಅರಣ್ಯಕ್ಕೆ ಹೋಗಿ ಗ್ರಾಸ(ಅವುಗಳ ಆಹಾರವಾದ ಹುಲ್ಲು, ಸೊಪ್ಪು ಇತ್ಯಾದಿ)ವನ್ನು ತಿನ್ನಲು/ ಮೇಯಲು ಪ್ರೇರಿಸಲಿ. “ಸವಿತಾ ಪ್ರಾರ್ಪಯತು(ಪ್ರೇರಯತು)” ಎಂಬಲ್ಲಿನ ಸವಿತೃ ಶಬ್ದದ ತಾತ್ಪರ್ಯವನ್ನು ತೈ.ಬ್ರಾಹ್ಮಣವು ಹೀಗೆ ಹೇಳುತ್ತದೆ - “ದೇವೋ ವಃ ಸವಿತಾ ಪ್ರಾರ್ಪಯತು ಇತ್ಯಾಹ ಪ್ರಸೃತ್ಯೈ |” ; ಪ್ರೇರಣೆಗಾಗಿ ಎಂದರ್ಥ. “ಶ್ರೇಷ್ಠತಮಾಯ ಕರ್ಮಣ ಇತ್ಯಾಹ | ಯಜ್ಞೋ ಹಿ ಶ್ರೇಷ್ಠತಮಂ ಕರ್ಮ | ತಸ್ಮಾತ್ ಏವಮ್ ಆಹ |”(ತೈ.ಬ್ರಾ.) ಯಜ್ಞವೇ ಸರ್ವಶ್ರೇಷ್ಠವಾದ ಕರ್ಮವಷ್ಟೆ? ಆದ್ದರಿಂದ ಹೀಗೆ ಹೇಳಲಾಗಿದೆ. ಯಜ್ಞಕ್ಕೆ ಬೇಕಾದ ಘೃತವೆಂಬ ಹವಿಸ್ಸನ್ನು ಪಡೆಯಲು, ಗೋವುಗಳು ನೀಡುವ ಹಾಲೇ ಮೂಲವಾದ್ದರಿಂದ ಅವುಗಳು ಹೆಚ್ಚು ಹೆಚ್ಚು ಹಾಲು ಕೊಡಲು, ಚೆನ್ನಾಗಿ ಮೇಯಲು, ಪರಮಾತ್ಮನು ಅವುಗಳನ್ನು ಪ್ರೇರಿಸಲಿ ಎಂದರ್ಥ.
೨) ದ್ವಿತೀಯಮಂತ್ರದ ಪದವಿಭಾಗ - “ಆಪ್ಯಾಯಧ್ವಮ್ ಅಘ್ನಿಯಾಃ ದೇವಭಾಗಮ್ ಊರ್ಜಸ್ವತೀಃ ಪಯಸ್ವತೀಃ ಪ್ರಜಾವತೀಃ ಅನಮೀವಾಃ ಅಯಕ್ಷ್ಮಾಃ ಮಾ ವಃ ಸ್ತೇನಃ ಈಶತ ಮಾ ಅಘಶಂಸಃ |”
(ಹೇ)ಅಘ್ನಿಯಾಃ(ಗಾವಃ) - ಎಲೈ ಹಿಂಸಿಸಲ್ಪಡಬಾರದ, ಹತ್ಯೆಗೊಳಪಡಬಾರದ(ಗೋವುಗಳ ಹತ್ಯೆ,ಹಿಂಸೆ ಮಾಡಲೇಬಾರದು) ಗೋವುಗಳೇ! ,
ದೇವಭಾಗಮ್ - ದೇವನಾದ ಇಂದ್ರನ ದಧಿ/ಹವಿಸ್ಸಿನ ರೂಪವಾದ ಯಜ್ಞಭಾಗವನ್ನು,
ಆಪ್ಯಾಯಧ್ವಮ್ - ಹೇರಳವಾದ ಗ್ರಾಸಭಕ್ಷಣೆಯಿಂದ ಹೆಚ್ಚುಮಾಡಿ.
ಊರ್ಜಸ್ವತೀಃ - ಹೆಚ್ಚಿನ ಊರ್ಜೆ/ಶಕ್ತಿಯುತರಾಗಿರಿ.
ಪಯಸ್ವತೀಃ - ಹೆಚ್ಚು ಹಾಲು(ಪಯಃ)ನೀಡುವವರಾಗಿರಿ.
ಪ್ರಜಾವತೀಃ - ಹೆಚ್ಚು ಕರು/ಸಂತಾನವುಳ್ಳವರಾಗಿರಿ.
ಅನಮೀವಾಃ - (ಅಮ್ ರೋಗೇ+ಭಾವೇ ಘಞ್ ಮಾಂತತ್ವಾತ್ ವೃದ್ಧಭಾವಃ, ಅಮೋ ರೋಗೋ ವಿದ್ಯತೇ ಅಸ್ಯ ಇನ್; ಅಮೀ-ರೋಗೀ) ಕ್ರಿಮಿರೋಗ/ಸೋಂಕುರೋಗ/ಅಂಟುಜಾಡ್ಯ(infection)ಗಳಿಂದ ಮುಕ್ತರಾಗಿರಿ.
ಅಯಕ್ಷ್ಮಾಃ - ಕ್ಷಯ/ಯಕ್ಷ್ಮರೋಗ ರಹಿತರಾಗಿರಿ; ರಸಧಾತುಗಳು ಬತ್ತಿಹೋಗುವಂತಹ, ಕ್ಷಯಿಸುವಂತಹ(ಹಾಲು ಕ್ಷೀಣಿಸುವ) ಇತರ ಕಾಯಿಲೆಗಳಿಂದಲೂ ಮುಕ್ತರಾಗಿರಿ.
ಸ್ತೇನಃ - ಚೋರ/ಕಳ್ಳನು,
ವಃ(ಯುಷ್ಮಾನ್ ಚೋರಯಿತುಂ) - ನಿಮ್ಮನ್ನು ಕದ್ದುಕೊಂಡೊಯ್ಯಲು,
ಮಾ ಈಶತ - ಸಮರ್ಥರು/ಶಕ್ತರು ಆಗದಿರಲಿ.
ಮಾ ಅಘಶಗ್ಂಸಃ(ಮಾ ಅಘಶಂಸಃ) - ವ್ಯಾಘ್ರವೇ ಮುಂತಾದ ಪಾಪ(ಅಘ)ಕರ್ಮಕ, ಮಾಂಸಭಕ್ಷಕ, ಹಿಂಸ್ರ ಪ್ರಾಣಿಗಳಿಂದ/ಇತರರಿಂದಲೂ ತೊಂದರೆಗೊಳಗಾಗದಿರಲಿ. (ಅಘಮ್ ಅನಿಷ್ಟಂ ಶಂಸತಿ, ಇಚ್ಛತಿ, ಅನಿಷ್ಟಸಂಪಾದಕೇ ಚೌರೇ; ವ್ಯಸನಸೂಚನೇ)
“ದೇವಭಾಗಮ್” ಪದದ ವಿವರಣೆ:-
ಯಾಗಪೂರ್ವದಲ್ಲಿ ಹೇರಳವಾದ ಗೋಗ್ರಾಸಭಕ್ಷಣೆಯಿಂದ ಗೋವುಗಳ ಕರುಗಳಿಗೂ, ಮನುಷ್ಯರಿಗೂ ಸಾಕಷ್ಟು ಹಾಲು ಸಿಗುವುದರಿಂದ ವತ್ಸಭಾಗ ಹಾಗೂ ಮನುಷ್ಯಭಾಗಗಳು ಪ್ರವೃದ್ಧವಾಗುತ್ತವೆ. ಇದರಿಂದ ತುಪ್ಪವೂ ಅಧಿಕವಾಗಿ, ದಧಿ/ಹವಿರ್ಭಾಗವೂ ಹೆಚ್ಚಿ, ಇಂದ್ರ/ದೇವಭಾಗವೂ ಪ್ರವರ್ಧಿಸುತ್ತದೆ. ಇದರಿಂದ ತುಷ್ಟರಾದ ದೇವತೆಗಳು, ಮನುಷ್ಯರ ಇಷ್ಟಾರ್ಥಗಳನ್ನು ಸಾಕಷ್ಟು ಅನುಗ್ರಹಿಸುವುದರಿಂದ, ಪುನಃ ಮನುಷ್ಯಭಾಗವೂ ವರ್ಧಿಸುವುದು.
೩) ತೃತೀಯಮಂತ್ರದ ಪದವಿಭಾಗ - “ರುದ್ರಸ್ಯ ಹೇತಿಃ ಪರಿ ವಃ ವೃಣಕ್ತು |”
ರುದ್ರನೆಂಬ ಕ್ರೂರದೇವನ(ರುದ್ರಸ್ಯ) ಆಯುಧವು(ಹೇತಿಃ- ಹನ್ಯತೇ ಅನಯಾ ಇತಿ - ಅಸ್ತ್ರಮ್) ನಿಮ್ಮನ್ನು (ವಃ/ಯುಷ್ಮಾನ್) ಎಲ್ಲೆಡೆಯಿಂದ ರಕ್ಷಿಸಲಿ( ಪರಿವೃಣಕ್ತು).
ಧ್ರುವಾ ಅಸ್ಮಿನ್ ಗೋಪತೌ ಸ್ಯಾತ ಬಹ್ವೀಃ - ಬೌಧಾಯನರ ವಿನಿಯೋಗ - ಈ ಮಂತ್ರವನ್ನುಚ್ಚರಿಸುತ್ತಾ ಅಧ್ವರ್ಯುವು ಯಜಮಾನನನ್ನು ನೋಡುತ್ತಾನೆ. ಆಪಸ್ತಂಬರ ವಿನಿಯೋಗ - ಈ ಮಂತ್ರವನ್ನುಚ್ಚರಿಸುತ್ತಾ ಯಜಮಾನನ ಮನೆಯ ಮುಂದೆ ಹಾಗೂ ಸುತ್ತಲೂ ಸುತ್ತುಹಾಕಬೇಕು.
ಅರ್ಥ :- ಈ ಗೋವುಗಳು ಯಜಮಾನನಲ್ಲೇ (ಅಸ್ಮಿನ್ ಗೋಪತೌ), ಬಹುಸಂತತಿಯಿಂದ ವೃದ್ಧಿಹೊಂದಿ (ಬಹ್ವೀಃ), ಶಾಶ್ವತವಾಗಿ ನೆಲೆಸಿರಿ(ಧ್ರುವಾಃ ಸ್ಯಾತ).
ಯಜಮಾನಸ್ಯ ಪಶೂನ್ ಪಾಹಿ - ಹೇ ಪರಮಾತ್ಮನೇ ! ಯಜಮಾನನ ಪಶು/ಗೋವುಗಳನ್ನು ಸಂರಕ್ಷಿಸು.
ವಿವರಣೆ-
“ಪಾದೇನ ಅರ್ಧ-ಋಚೇನ ಚ ಉಪೇತಾಃ ವೃತ್ತಬದ್ಧಾಃ ಮಂತ್ರಾಃ ‘ಋಚಃ’ | ಗೀತಿ-ಉಪೇತಾಃ ಮಂತ್ರಾಃ ಸಾಮಾನಿ | ವೃತ್ತ-ಗೀತಿ-ವರ್ಜಿತತ್ವೇನ ಪ್ರಶ್ಲಿಷ್ಠಪಠಿತಾಃ ಮಂತ್ರಾಃ ‘ಯಜೂಂಷಿ’ ಇತಿ ವ್ಯವಸ್ಥಿತಂ ಲಕ್ಷಣಮ್ ||”
‘ಋಚ್ಯಂತೇ ಸ್ತೂಯಂತೇ ದೇವಾಃ ಅನಯಾ ಇತಿ ಋಚ್, ಋಚ ಸ್ತುತೌ ‘ಕ್ವಿಪ್’ ಪ್ರತ್ಯಯಾದೇಶಃ (ಶಬ್ದಾರ್ಥಕೌಸ್ತುಭ) |’ ಇದರಿಂದ ದೇವತೆಗಳು ಸ್ತುತಿಸಲ್ಪಡುತ್ತಾರೆ ಎಂಬುದರಿಂದಾಗಿ ಋಚ್. ಪಾದವ್ಯವಸ್ಥೆಯಿಂದ ಕೂಡಿದ, ಸ್ತುತ್ಯರ್ಥಕ ವಾಕ್ಕಿನ ಅರ್ಧಾಂಶ/ ಭಾಗಮಾತ್ರವನ್ನು ಹೊಂದಿದ, ಹಾಗೂ ಛಂದೋನಿಯಮಗಳಿಗೆ ಬದ್ಧವಾಗಿರುವ ಮಂತ್ರಗಳು ‘ಋಕ್/ಋಚ’ಗಳು. ‘ಋಚ್’- ‘ಚ’ಕಾರಾಂತ ಸ್ತ್ರೀಲಿಂಗ ಶಬ್ದ. ಋಕ್, ಋಚೌ, ಋಚಃ - ಇವು ಪ್ರಥಮಾ ವಿಭಕ್ತಿಯ ಏಕವಚನ, ದ್ವಿವಚನ(ಸಂಸ್ಕೃತದ ವಿಶೇಷ) ಹಾಗೂ ಬಹು-ವಚನರೂಪಗಳು. ಗಾಯನಯೋಗ್ಯ, ಗೀತರೂಪದ ಮಂತ್ರಗಳು ಸಾಮಗಳು. ವೃತ್ತ ಹಾಗೂ ಗೀತಾರಹಿತವಾಗಿ, ನಿಯಮಿತವಾದ ಪದಗಳ ಸುಂದರ ಜೋಡಣೆಯಿಂದ ಕೂಡಿ, ಗದ್ಯರೂಪದಲ್ಲಿ (ನಿಗದ) ಕ್ರಮಬದ್ಧವಾಗಿ, ಸಾಮೂಹಿಕವಾಗಿ ಪಠಿಸುವಂತೆ ನಿಬದ್ಧವಾಗಿರುವ ಮಂತ್ರಗಳು ಯಜುಸ್ಸುಗಳು. (ಪ್ರ+ಶ್ಲಿಷ ಆಲಿಂಗನೇ ‘ಕ್ತಃ’ | ‘ಪ್ರಶ್ಲಿಷ್ಟ’- ಚೆನ್ನಾಗಿ ಒಂದಕ್ಕೊಂದು ಸೇರಿಕೊಂಡಿರುವ, ಅಂಟಿಕೊಂಡಿರುವ.)
ಈ ಅನುವಾಕದಲ್ಲಿರುವ ಮಂತ್ರಗಳ ವಿನಿಯೋಗದ ಸಂಗ್ರಹಶ್ಲೋಕ -
ಇಷೇ ಶಾಖಾಂ ಛಿನತ್ತ್ಯೂರ್ಜೇ ಮಾರ್ಷ್ಟಿ ವಾಯೇತಿ ವತ್ಸಕಾನ್ |
ಅಪಾಕೃತ್ಯಾಥ ದೇವೋ ಗಾಃ ಪ್ರಸ್ಥಾಪ್ಯಾऽऽಪ್ಯೇತಿ ಗಾಃ ಸ್ಪೃಶೇತ್ ||
ರುದ್ರಸ್ಯೇತ್ಯಭಿಮಂತ್ರ್ಯೈತಾ ಧ್ರುವೇತಿ ಗೃಹಮಾವ್ರಜೇತ್ |
ಯಜೇತಿ ಶಾಖೋಪಗೂಹ ಇತ್ಯಷ್ಟಾವನುವಾಕಗಾಃ ||
( ||ಇತಿ ಶ್ರೀಮತ್ಸಾಯಣಾಚಾರ್ಯವಿರಚಿತ ಮಾಧವೀಯ ವೇದಾರ್ಥಪ್ರಕಾಶದಲ್ಲಿ ತೈತ್ತಿರೀಯಕೃಷ್ಣಯಜುರ್ವೇದಭಾಷ್ಯದ ಪ್ರಥಮಕಾಂಡದ ಪ್ರಥಮಪ್ರಪಾಠಕದಲ್ಲಿ ಪ್ರಥಮ ಅನುವಾಕದ ದಂಬೆಕೃಷ್ಣಮೂರ್ತಿವಿರಚಿತ ಕನ್ನಡಭಾಷಾನುವಾದವು ಮುಗಿಯಿತು|| )
ಭಟ್ಟಭಾಸ್ಕರಭಾಷ್ಯಾರ್ಥ(ಭ.ಭಾ.)-
“ತತ್ರ ಅಮಾವಾಸ್ಯಾಯಾಂ ಸಂನಯತ: ಶಾಖಾಮ್ ಆಚ್ಛಿನತ್ತಿ ಅಧ್ವರ್ಯು: - ಇಷೇ ತ್ವೋರ್ಜೇ ತ್ವಾ ಇತಿ | ಈ ಮಂತ್ರಪೂರ್ವಕವಾಗಿ ಯಜ್ಞದ ಅಧ್ವರ್ಯುವು ಅಮಾವಾಯಸ್ಯೆಯಂದು ಪಲಾಶವೃಕ್ಷದ ಶಾಖೆಯನ್ನು ಬಹು ನಾಜೂಕಿನಿಂದ ಛೇದಿಸುತ್ತಾನೆ. ಇಲ್ಲಿಂದ ಮುಂದೆ ಉಭಾ ವಾಮಿಂದ್ರಾಗ್ನೀ ಎಂಬಲ್ಲಿವರೆಗಿನ ಮಂತ್ರಗಳಿಗೆ ಪ್ರಜಾಪತಿಯು ಕಾಂಡ ಋಷಿಯು.
ಮಂತ್ರಾರ್ಥ- “ಇಡ್ ಅನ್ನಂ ಸರ್ವೈಃ ಏಷಣೀಯತ್ವಾತ್ | ಇಹ ತು ಸಾನ್ನಾಯ್ಯಲಕ್ಷಣಂ ಗೃಹ್ಯತೇ | ಊರ್ಕ್ ರಸಃ ಬಲಪ್ರಾಣಯೋಃ ಉದ್ದೀಪಕಃ | ಇಷು ಇಚ್ಛಾಯಾಂ, ಊರ್ಜ ಬಲಪ್ರಾಣನಯೋಃ ಆಭ್ಯಾಂ ಕರ್ಮಣಿ ಕರಣೇ ಚ | ಹೇ ಶಾಖೇ! ಇಡರ್ಥಂ ತ್ವಾಂ ಛಿನದ್ಮಿ | ಊರ್ಗರ್ಥಂ ತ್ವಾಂ ಛಿನದ್ಮಿ ||”
ಇಡ್ ಅಂದರೆ ಅನ್ನ , ಎಲ್ಲರೂ ಇಷ್ಟಪಡುವುದರಿಂದಾಗಿ. ಇಲ್ಲಿ ಹೋಮಕ್ಕಾಗಿ ತಂದ ಪಾಯಸಾನ್ನವೆಂದು ಅರ್ಥ. ಊರ್ಕ್ ಅಂದರೆ ರಸ, ಬಲಪ್ರಾಣಗಳನ್ನು ಉದ್ದೀಪನಗೊಳಿಸುವಂಥದ್ದು/ ವರ್ಧಿಸುವಂಥದ್ದು. ಇಷು ಇಚ್ಛೆಯಲ್ಲಿ, ಊರ್ಜ ಬಲಪ್ರಾಣದಾಯಕ ಕರ್ಮಗಳನ್ನು ಮಾಡುವುದರಲ್ಲಿ ಬಳಸಲ್ಪಟ್ಟಿದೆ. ಎಲೈ ಪಲಾಶದ ಗೆಲ್ಲೇ! ಪರಮಾನ್ನಕ್ಕಾಗಿ ನಿನ್ನನ್ನು ಕತ್ತರಿಸುತ್ತಿದ್ದೇನೆ. ಬಲಪ್ರಾಣಗಳ ವರ್ಧನೆಗಾಗಿ ನಿನ್ನನ್ನು ತುಂಡರಿಸುತ್ತಿದ್ದೇನೆ. (ಯಜ್ಞದ್ವಾರಾ ದೇವತಾಪ್ರಸನ್ನತೆಯಿಂದ ಅನ್ನ,ಬಲ,ಪ್ರಾಣಗಳನ್ನು ಹೆಚ್ಚಿಸಿಕೊಳ್ಳಲು, ಯಜ್ಞಹವಿಸ್ಸಾದ ತುಪ್ಪವನ್ನು ಹೆಚ್ಚು ಪಡೆಯಲು ಹಸುಗಳು ಕಾಡಿನಲ್ಲಿ ಚೆನ್ನಾಗಿ ಮೇಯುವಾಗ, ಅವುಗಳ ರಕ್ಷೆಗಾಗಿ ಪಲಾಶಕೋಲನ್ನು ಭೂಮಿಯಡಿ ಹೂತಿಡಲು ಕತ್ತರಿಸುತ್ತಿದ್ದೇನೆ ಎಂದರ್ಥ.)
“ವತ್ಸಾನ್ ಅಪಾಕರೋತಿ - ವಾಯವಃ ಸ್ಥೋಪಾಯವಃ ಸ್ಥ - ಇತಿ | ವಾಯವಃ ಗಂತಾರಃ | ಉಪಾಯವಃ ಉಪಗಂತಾರಃ | ಸ್ಥ ಇತಿ ಅಸ್ತೇಃ ಪಂಚಮಲಕಾರರೂಪಮ್ | ಹೇ ವತ್ಸಾಃ ! ಮಾತೃಸಕಾಶಾದ್ ಗಂತಾರೋ ಭವತ , ಪುನಃ ದೋಹಕಾಲೇ ಉಪಗಂತಾರೋ ಭವತ ಇತಿ | ವಾಯುಶಬ್ದೇನ ಏಷಾಮ್ ಅಭಿಧಾನಂ ವಾಯ್ವಧಿಷ್ಠಾತೃಕತ್ವಮ್ ಏಷಾಂ ಪ್ರದರ್ಶಯಿತುಮ್ | ‘ವಾಯುರ್ವಾ ಅಂತರಿಕ್ಷಸ್ಯ ಅಧ್ಯಕ್ಷಾಃ’ ಇತಿ (ತೈ.)ಬ್ರಾಹ್ಮಣಮ್ ||”
ಈ ಮಂತ್ರದಿಂದ ಕರುಗಳನ್ನು ಕಾಡಿಗೆ ಮೇಯಲು ಬಿಡುತ್ತಾನೆ/ ದೂರಕಳುಹಿಸುತ್ತಾನೆ. ವಾಯವಃ ಎಂದರೆ ಹೋಗುವವುಗಳು. ಉಪಾಯವಃ ಎಂದರೆ ಹತ್ತಿರಕ್ಕೆ ಬರುವವುಗಳು. ಸ್ಥ ಎಂಬುದು ಅಸ್ತಿ ಎಂಬುದರ ೫ನೇ ಲಕಾರ(ಲೇಟ್ ಲಕಾರ)ರೂಪ .
[ ಸಂಸ್ಕೃತದಲ್ಲಿ ಕ್ರಿಯೆಯ ಕಾಲಸೂಚಕವಾದ ೧೦ ಲಕಾರರೂಪಗಳಿವೆ—
“ಲಟ್- ವರ್ತಮಾನೇ ಲೇಟ್ ವೇದೇ ಭೂತೇ ಲಙ್-ಲುಙ್-ಲಿಟಃ ತಥಾ |
ವಿಧಿ-ಆಶಿಷೋಃ ಚ ಲಿಙ್-ಲೋಟೌ ಲುಟ್-ಲೃಟ್-ಲೃಙ್ ಚ ಭವಿಷ್ಯತಿ ||”
ಹೀಗೆ ವರ್ತಮಾನಕಾಲಸೂಚಕ ಲಟ್ ಲಕಾರ, ವೇದದಲ್ಲಿ ಮಾತ್ರ ಬರುವ ಲೇಟ್ ಲಕಾರ, ಭೂತಕಾಲಾರ್ಥಕ ಲಙ್, ಲುಙ್, ಲಿಟ್ ಲಕಾರಗಳು, ಹಾಗೆಯೇ, ವಿಧಿ-ಆಶೀರ್ವಾದ/ಹಾರೈಕೆಯ ಅರ್ಥದಲ್ಲಿ ಲಿಙ್-ಲೋಟ್ ಲಕಾರಗಳು (ವಿಧಿಲಿಙ್+ಆಶೀರ್ಲಿಙ್ ಎಂದು ಲಿಙ್ ಲಕಾರ ೨ ವಿಧ), ಭವಿಷ್ಯವಾಚ್ಯವಾಗಿ ಲುಟ್, ಲೃಟ್ ಹಾಗೂ ಲೃಙ್ ಲಕಾರಗಳಿವೆ. ಹೀಗೆ ಲ-ಕಾರದ ಕಾಗುಣಿತಾನುಕ್ರಮದಲ್ಲಿ ಅಂದರೆ, ಲಟ್, ಲಿಟ್, ಲುಟ್, ಲೃಟ್, ಲೇಟ್, ಲೋಟ್, ಲಙ್, ಲಿಙ್, ಲುಙ್, ಲೃಙ್ ಎಂಬ ೧೦ ಲಕಾರಗಳಲ್ಲಿ ಲೇಟ್ ಲಕಾರವು ೫ನೆಯದಾಗಿರುವುದರಿಂದ ಬಹುಶಃ ಭಟ್ಟಭಾಸ್ಕರರು “ಸ್ಥ” ವನ್ನು ಪಂಚಮಲಕಾರರೂಪವೆಂದಿರಬಹುದು. ]
ಹೇ ಕರುಗಳೇ! ನೀವು ನಿಮ್ಮ ತಾಯಂದಿರ ಬಳಿಯಿಂದ ಹೋಗುವವರಾಗಿರಿ, ಪುನಃ ಹಾಲು ಕರೆಯುವ ಕಾಲಕ್ಕೆ ಬರುವವರಾಗಿರಿ. ಇವುಗಳನ್ನು ವಾಯುಶಬ್ದದಿಂದ ಸಂಬೋಧಿಸಿರುವುದು ಇವುಗಳ ವಾಯುದೇವತಾಶ್ರಯತ್ವವನ್ನು ತೋರಿಸಲು, ಅರ್ಥಾತ್ ಕರುಗಳು ಮೇಯಲು ವಾಯುಸಂಚಾರ ಮಾಡುವಾಗ, ವಾಯುವಿನ ಅಧೀನಕ್ಕೆ ಬರುತ್ತವೆ. ‘ವಾಯುವೇ ಅಂತರಿಕ್ಷದ ಪ್ರಧಾನ ಅಧಿದೇವತೆ’ ಎಂಬುದು ತೈತ್ತಿರೀಯಬ್ರಾಹ್ಮಣದ ನಿರ್ವಚನ.
“ಗೋಚರಾಯ ಗಾಃ ಪ್ರಸ್ಥಾಪಯತಿ - 1ದೇವೋ ವಃ ಸವಿತಾ ಪ್ರಾರ್ಪಯತು ಶ್ರೇಷ್ಠತಮಾಯ ಕರ್ಮಣ1 2ಆಪ್ಯಾಯಧ್ವಮಘ್ನಿಯಾ ದೇವಭಾಗಮೂರ್ಜಸ್ವತೀಃ ಪಯಸ್ವತೀಃ ಪ್ರಜಾವತೀರನಮೀವಾ ಅಯಕ್ಷ್ಮಾ ಮಾ ವಃ ಸ್ತೇನ ಈಶತ ಮಾऽಘಶಗ್ಂಸೋ2 3ರುದ್ರಸ್ಯ ಹೇತಿಃ ಪರಿವೋ ವೃಣಕ್ತು3 -ಇತಿ |
ಈ ೩ ಋಕ್ಕುಗಳಿಂದ ಗೋವುಗಳನ್ನು ಮನೆಯಿಂದ ಗೋಚರ/ಹುಲ್ಲುಗಾವಲು/ಕಾಡಿಗೆ ಹೊರಡಿಸುತ್ತಾನೆ. ಅವುಗಳಲ್ಲಿ 1ಮೊದಲಮಂತ್ರದಿಂದ ಸವಿತೃವನ್ನು ಪ್ರಾರ್ಥಿಸಲಾಗಿದೆ.
“ಷೂ ಪ್ರೇರಣೇ | ದೇವಸ್ಸವಿತಾ ಸರ್ವಸ್ಯ ಪ್ರೇರಕಃ, ಯೇನ ವಿನಾ ತೃಣಾಗ್ರಮಪಿ ನ ಚಲತಿ , ಸಃ ಯುಷ್ಮಾನ್ ಪ್ರಾರ್ಪಯತು ಪ್ರಸ್ಥಾಪಯತು | ಕಿಮರ್ಥಮ್? ಶ್ರೇಷ್ಠತಮಾಯ ಕರ್ಮಣೇ ಯಜ್ಞಾಯ | ತೃಣಾದಿಭಕ್ಷಣೇನ ಸಾನ್ನಾಯ್ಯನಿಷ್ಪತ್ತ್ಯರ್ಥತ್ವಾದ್ ಯಜ್ಞಾರ್ಥಂ ಪ್ರೇರಣಮ್ ||”
‘ಷೂ’ ಪ್ರೇರಣಾರ್ಥಕ ಧಾತು. ದೇವನಾದ ಸವಿತೃವು ಎಲ್ಲದರ ಪ್ರೇರಕ; ಅವನಿಲ್ಲದೆ ಹುಲ್ಲಿನ ತುದಿಯೂ ಚಲಿಸದು; ಅವನು ನಿಮ್ಮನ್ನು(ಗೋವುಗಳನ್ನು) ಮೇಯಲು ಹೊರಡಿಸಲಿ. ಯಾತಕ್ಕಾಗಿ? ಶ್ರೇಷ್ಠತಮವಾದ ಯಜ್ಞಕರ್ಮಕ್ಕಾಗಿ. ಹುಲ್ಲು ಮುಂತಾದ ಮೇವನ್ನು ತಿನ್ನುವ ಮೂಲಕ ಯಜ್ಞಕ್ಕೋಸ್ಕರವಾದ ಪರಮಾನ್ನರೂಪ/ಘೃತ ಹವಿಸ್ಸಿನ ಉತ್ಪತ್ತಿಗಾಗಿ ಅವುಗಳನ್ನು ಪ್ರೇರಿಸಬೇಕೆಂಬ ಪ್ರಾರ್ಥನೆ.
2ನಂತರ ಎರಡನೆಯ ಮಂತ್ರದಲ್ಲಿ ಹೊರಡಿಸಲಿರುವ ಗೋವುಗಳನ್ನೇ ಪ್ರಾರ್ಥಿಸಲಾಗಿದೆ -
“ಹೇ ಅಘ್ನಿಯಾಃ ಗಾವಃ ಅಹನನಾರ್ಹಾಃ ! ದೇವಸ್ಯ ಇಂದ್ರಸ್ಯ ಭಾಗಂ ಸಾನ್ನಾಯ್ಯಲಕ್ಷಣಂ ಯೂಯಂ ಆಪ್ಯಾಯಧ್ವಮ್ ಆಪ್ಯಾಯಯತ | ಊರ್ಜಸ್ವತ್ತ್ವಾದಿಗುಣಯುಕ್ತಾಃ ಯೂಯಮ್ ಆಪ್ಯಾಯಧ್ವಮ್ | ಯದ್ವಾ - ಊರ್ಜಸ್ವತ್ತ್ವಾದಿಗುಣಯುಕ್ತಾನ್ ಯುಷ್ಮಾನ್ ಸ್ತೇನಃ ಮಾ ಈಶತ/(ಚೋರಯತು )ಇತಿ | ಊರ್ಜಸ್ವತ್ಯಃ ಬಲವತ್ಯಃ, ಬಹುರಸಾಃ ವಾ | ಪಯಸ್ವತ್ಯಃ ಬಹುಪಯಸ್ಕಾಃ | ಪ್ರಜಾವತ್ಯಃ ಬಹ್ವಪತ್ಯಾಃ(ಬಹು+ಅಪತ್ಯಾಃ) | ಅನಮೀವಾಃ ಅರೋಗಾಃ | ಅಮೀವಾ ಉದರವ್ಯಾಧಿಃ, ತದ್ರಹಿತಾಃ ಅನಮೀವಾಃ | ಅಯಕ್ಷ್ಮಾಃ, ಯಕ್ಷ್ಮಾ ವ್ಯಾಧಿಃ, ತದ್-ರಹಿತಾಃ | ಸ್ತೇನಃ | ಸ್ತೇನ ಚೌರ್ಯೇ | ಅಪಹರ್ತಾ (ಚೋರಃ ) | ಮಾ ಯುಷ್ಮಾಕಮ್ ಈಶತ ಈಶಿಷ್ಟ , ಸ್ವವಶಾಃ ಯುಷ್ಮಾನ್ ಮಾ ಕಾರ್ಷೀತ್ | ಕಿಂ ಚ - ಅಘಂಶಸಃ ಅಪಿ ಯುಷ್ಮಾನ್ ಮಾ ಈಶಿಷ್ಟ, ಮಾ ವಃ(ಯುಷ್ಮಾನ್) ಜಿಘಾಂಸೀತ್ | ಅಘೇ ಪಾಪೇ ಭಕ್ಷಣಲಕ್ಷಣೇ ಶಂಸಾ ಅಭಿಲಾಷೋ ಯಸ್ಯ ನಿಯೋಗೇನ ಸಃ ಅಘಶಂಸಃ ಪಾಪತತ್ಪರಃ | ಅಂಘತೇ ಗಚ್ಛತಿ ದಾನಾದಿನಾ ಇತಿ ಅಘಃ ||”
ಅಯ್ಯಾ ವಧೆ/ಹತ್ಯೆ/ಹಿಂಸೆಗೆ ಅರ್ಹವಲ್ಲದ ಗೋವುಗಳಿರಾ ! ದೇವೇಂದ್ರನ ಪರಮಾನ್ನ(ಶ್ರೇಷ್ಠವಾದ ಅನ್ನ)ರೂಪವಾದ ಹವಿರ್ಭಾಗ(ಆಜ್ಯ/ತುಪ್ಪ)ವನ್ನು ನೀವುಗಳು ಅಧಿಕಗೊಳಿಸಿ. ಊರ್ಜಸ್ವತ್ತ್ವ ಮುಂತಾದ ಗುಣಯುತರಾದ ನೀವು ಹವಿಸ್ಸನ್ನು ವರ್ಧಿಸಿ. ಅಥವಾ - ಊರ್ಜಸ್ವತ್ತ್ವಾದಿಗುಣಯುಕ್ತರಾದ ನಿಮ್ಮನ್ನು ಕಳ್ಳನು ಕದ್ದು ಕೊಂಡೊಯ್ಯದಿರಲಿ. ಊರ್ಜಸ್ವತಿಯರೆಂದರೆ ಬಲವತಿಯರು ಅಥವಾ ಬಹುರಸವುಳ್ಳವರೆಂದರ್ಥ. ಪಯಸ್ವತಿಯರು ಅಧಿಕಹಾಲುಳ್ಳವುಗಳು. ಪ್ರಜಾವತಿಯರು ಬಹು ಸಂತಾನ/ಕರುಗಳುಳ್ಳವುಗಳು. ಅನಮೀವಾಃ ಎಂದರೆ (ಅನ್+ಅಮೀವಾಃ)ರೋಗವಿಲ್ಲದವುಗಳು. ಅಮೀವಾ ಎಂದರೆ ಹೊಟ್ಟೆಯ ವ್ಯಾಧಿ. ಅದಿಲ್ಲದವು ಅನಮೀವಾಃ | ಅಯಕ್ಷ್ಮಾಃ, ಯಕ್ಷ್ಮಾ ಎಂದರೆ ವ್ಯಾಧಿ; ವ್ಯಾಧಿರಹಿತವಾದವುಗಳು. ಸ್ತೇನಃ=ಚೋರ, ಕಳ್ಳ, ಅಪಹರಿಸುವವ. ಅವನು ನಿಮ್ಮನ್ನು ಅಪಹರಿಸದಿರಲಿ, ತನ್ನ ವಶಮಾಡಿಕೊಳ್ಳದಿರಲಿ. ಹಾಗೆಯೇ, ಹಿಂಸ್ರಕರು ಕೂಡ ನಿಮ್ಮನ್ನು ಅಪಹರಿಸದಿರಲಿ, ಹಿಂಸಿಸದಿರಲಿ. ಪಾಪವುಣ್ಣುವುದರಲ್ಲಿ ಮಹದಾಸೆಯು ಯಾರಿಗಿದೆಯೋ ಅವನು ಅಘಶಂಸನು, ಪಾಪದಲ್ಲಿ ತೊಡಗಿದವನು, ಪಾಪಕಾರ್ಯವನ್ನು ಪ್ರಶಂಸಿಸುವವನು. ದಾನಾದಿಗಳಿಂದ ಪರಿಹಾರವಾಗುತ್ತದೆಂಬುದರಿಂದಾಗಿ ಪಾಪವು ಅಘ ಎಂದೂ ಕರೆಯಲ್ಪಟ್ಟಿದೆ.
3ಅಂತೆಯೇ, ಕೇವಲ ಮನುಷ್ಯಮಾತ್ರರಲ್ಲದೆ, ದೇವನೂ ನಿಮ್ಮನ್ನು ಹಿಂಸಿಸದಿರಲೆಂದು ೩ನೇ ಮಂತ್ರಭಾಗದಿಂದ ಪ್ರಾರ್ಥಿಸಲಾಗಿದೆ. ರುದ್ರನ ಆಯುಧವು ನಿಮ್ಮನ್ನು ಸರ್ವತಃ(ಎಲ್ಲೆಡೆಯಲ್ಲೂ) ವರ್ಜಿಸಲಿ, ಹಿಂಸಿಸದಿರಲಿ.
ಧ್ರುವಾ ಅಸ್ಮಿನ್ ಗೋಪತೌ ಸ್ಯಾತ ಬಹ್ವೀಃ - ಎಂದು ಅಧ್ವರ್ಯುವು ಯಜಮಾನನನ್ನು ಗಮನಿಸುತ್ತಾನೆ. “ಗವಾಂ ಪತಿಃ ಗೋಪತಿಃ ಯಜಮಾನಃ । ಅಸ್ಮಿನ್ ಯಜಮಾನೇ । ಧ್ರುವಾಃ ಅವಿನಾಶಾಃ । ಸ್ಯಾತ ಭವತ । ಬಹ್ವ್ಯಃ ಚ ಸಂತಾನವೃದ್ಧ್ಯಾ ಭವತ ।”
ಯಜಮಾನಸ್ಯ ಪಶೂನ್ ಪಾಹಿ - ಎಂದು ಪಲಾಶಶಾಖೆಯನ್ನು ಬಳಿಯಲ್ಲೇ ಹೂತಿಡುತ್ತಾನೆ. ಹೇ ಶಾಖೆಯೇ! ಯಜಮಾನನ ಪಶುಗಳನ್ನು ಸಂಜೆ ಮರಳಿ ಬರುವವರೆಗೆ ರಕ್ಷಿಸು. “ತಸ್ಮಾತ್ ಸಾಯಂ ಪಶವಃ” ಇತ್ಯಾದಿಯಾಗಿ ತೈ.ಬ್ರಾ. ಹೇಳಿದೆ.
ಹೀಗೆ ಒಂದನೇ ಅನುವಾಕದಲ್ಲಿ ಒಟ್ಟು 7 (ಬೌಧಾಯನರಂತೆ ಇಷೇ ತ್ವೋರ್ಜೇತ್ವಾ ಎಂಬುದನ್ನು ೧ ಮಂತ್ರವಾಗಿ ಗಣಿಸಿದರೆ) ಅಥವಾ 8 (ಇಷೇತ್ವಾ ಊರ್ಜೇತ್ವಾ ಎಂದು ಆಪಸ್ತಂಬರಂತೆ ೨ ಮಂತ್ರಗಳಾಗಿ ಪರಿಗಣಿಸಿದರೆ) ಮಂತ್ರಗಳಿವೆ.
(ಇಲ್ಲಿಗೆ ದಂಬೆಕೃಷ್ಣಮೂರ್ತಿಶಾಸ್ತ್ರಿಕೃತ, ಭಟ್ಟಭಾಸ್ಕರೀಯ ತೈತ್ತಿರೀಯಭಾಷ್ಯದ ೧ನೇ ಅನುವಾಕಭಾಷ್ಯಾನುವಾದವು, ಸಂಪೂರ್ಣವಾಯಿತು.)
ಆಧ್ಯಾತ್ಮಿಕಭಾಷ್ಯ(೧.೧.೧)
(೪ ಯಜುಸ್ ಗಳು; ೪ ಋಕ್ ಗಳು)
(ಛಂದಸ್ಸುಗಳು— ದ್ವಿಪದಾ ವಿರಾಟ್ ೪ನೇ ಋಕ್ ಮಂತ್ರ; ಮಧ್ಯೇಜ್ಯೋತಿಸ್ತ್ರಿಷ್ಟುಪ್ ೫ನೆಯದು; ಏಕಪದಾ ತ್ರಿಷ್ಟುಪ್ ೬,೭ನೆಯ ಋಕ್ ಮಂತ್ರಗಳು; ೧,೨,೩,೮ ಛನ್ದೋರಹಿತ ಯಜುರ್ ಗದ್ಯಗಳು)
(ಮಹರ್ಷಿ ಅರವಿಂದರ ಮಾರ್ಗದಲ್ಲಿ ಆರ್.ಎಲ್.ಕಶ್ಯಪರು ಆಂಗ್ಲಭಾಷೆಯಲ್ಲಿ ಬರೆದ ಭಾಷ್ಯಕ್ಕೆ ರ.ವಿ.ಜಹಗೀರದಾರರು ಮಾಡಿದ ಕನ್ನಡಾನುವಾದದ ಆಧಾರದಲ್ಲಿ)
ಸಾಯಣಾದಿ ಸಾಂಪ್ರದಾಯಿಕರು ಬಹಿರ್ಯಜ್ಞವನ್ನೇ ಉದ್ದೇಶಿಸಿ ಭಾಷ್ಯಬರೆದರೆ, ಪ್ರಸ್ತುತ ಭಾಷ್ಯವು ಅಂತರ್ಯಜ್ಞದ ಹಿನ್ನೆಲೆಯಲ್ಲಿ ಆಧ್ಯಾತ್ಮಿಕ ಗೂಢಾರ್ಥ/ಪರೋಕ್ಷಾರ್ಥವನ್ನು ನೀಡಿದೆ. “ಪರೋಕ್ಷಪ್ರಿಯ ಇವ ಹಿ ದೇವಾ: ಪ್ರತ್ಯಕ್ಷದ್ವಿಷ:”(ಐತರೇಯ ಉಪನಿಷದ್ ೩.೧೪, ಬೃಹದಾರಣ್ಯಕ ಉಪನಿಷದ್ ೪.೨.೨)- ಜ್ಞಾನಿಗಳು ಮೇಲ್ಮೈ ಅರ್ಥದಲ್ಲಿ ತೃಪ್ತರಾಗುವುದಿಲ್ಲ; ಅವರು ನಿಗೂಢಾರ್ಥವನ್ನು ತಿಳಿಯಬಯಸುತ್ತಾರೆ. ಇದು ತೋರಿಕೆ ಹಾಗೂ ವಾಸ್ತವಗಳ ಅಂತರವನ್ನು ಬೊಟ್ಟುಮಾಡಿ ತೋರಿಸುತ್ತದೆ.
೧ನೇ ಅನುವಾಕದ ಮಂತ್ರಗಳು ಸಾಂಪ್ರದಾಯಿಕರಿಗೆ ವತ್ಸಾಪಾಕರಣಾರ್ಥಮಂತ್ರಗಳಾಗಿ ಗೋಚರಿಸಿದರೆ, ಆಧ್ಯಾತ್ಮಿಕಾರ್ಥಪ್ರಿಯರು ಇದನ್ನು “ಜ್ಞಾನಕಿರಣಗಳನ್ನು ಕ್ರಮಬದ್ಧಗೊಳಿಸುವ ಮಂತ್ರಗಳು” ಎಂಬುದಾಗಿ ಕಂಡುಕೊಂಡರು.
ಇಷೇ ತ್ವೋರ್ಜೇ ತ್ವಾ ವಾಯವಃ ಸ್ಥೋಪಾಯವಃ ಸ್ಥ -
ತ್ವಾ ಶಬ್ದವು ಜೀವಶಕ್ತಿಗಳಿಗೂ, ವಾಯು ಹಾಗೂ ಇತರ ದೇವತೆಗಳಿಗೂ ಅನ್ವಯಿಸುವುದು. ಜಗತ್ತಿನ ಪ್ರತಿಯೊಂದು ಕರ್ಮವೂ ಒಂದು ಯಜ್ಞ. ನಮ್ಮ ಶರೀರದಲ್ಲಿ ನಡೆಯುವ ಸಕಲ ವೈವಿಧ್ಯಮಯ ಅಂತರ್ಯಜ್ಞರೂಪೀ ಚಟುವಟಿಕೆಗಳ ಸಮಗ್ರ ಸಂಯೋಜನೆಯಿಂದ ಮಾತ್ರ ಯಾವುದೇ ಕಾರ್ಯದಲ್ಲಿ ಯಶಸ್ಸು ಸಾಧ್ಯ. ಇದಕ್ಕಾಗಿ, ಈ ಮಂತ್ರದಲ್ಲಿ ಪ್ರಾರ್ಥಿಸಲಾಗಿದೆ.
“ಹೇ ವಾಯುವೇ(ಜೀವಶಕ್ತಿಗಳೇ)! ಪ್ರೇರಣೆಗಾಗಿ (ಇಷೇ) ಹಾಗೂ ವರ್ಧಮಾನಶಕ್ತಿಗಾಗಿ (ಊರ್ಜೇ) ನಿನ್ನನ್ನು(ನಿಮ್ಮನ್ನು) ಆವಾಹಿಸುತ್ತೇವೆ. ನೀನು(ನೀವು) ಮನುಷ್ಯರಿಗಾಗಿ ಇದ್ದೀಯೆ(ಇದ್ದೀರಿ).”
ದೇವೋ ವಃ ಸವಿತಾ ಪ್ರಾರ್ಪಯತು ಶ್ರೇಷ್ಠತಮಾಯ ಕರ್ಮಣೇ -
“ಸವಿತೃದೇವನು ಅತ್ಯುತ್ಕೃಷ್ಟಕಾರ್ಯಗಳನ್ನು ಮಾಡಲು ನಿಮ್ಮನ್ನು(ಜನರನ್ನು) ಪ್ರೇರೇಪಿಸುವಂತಾಗಲಿ.”
ಆಪ್ಯಾಯಧ್ವಮಘ್ನಿಯಾ…………...ಮಾऽಘಶಗ್ಂಸಃ -
“ಓ ಅವಧ್ಯನೇ! ದೇವತೆಗಳ ಪಾಲನ್ನು ಹೆಚ್ಚಿಸು. ಬಲಭರಿತನೇ, ಪ್ರೀತಿಭರಿತನೇ, ಸಂತಾನಭರಿತನೇ, ದು:ಖರಹಿತನೇ, ಸೀಮಾತೀತನೇ! ಚೋರರೂ ಪಾಪಿಗಳೂ ನಿನ್ನನ್ನು ನಿಯಂತ್ರಿಸದಿರಲಿ.”
ರುದ್ರಸ್ಯ ಹೇತಿಃ ಪರಿ ವೋ ವೃಣಕ್ತು -
“ರುದ್ರನ ಈಟಿಯು ನಿಮ್ಮನ್ನು(ಜನರನ್ನು) ಇರಿಯುವಂತೆ ಆಗದಿರಲಿ.”
(ಜ್ಞಾನಕಿರಣಗಳನ್ನು ದುರುಪಯೋಗಪಡಿಸಿಕೊಳ್ಳದಂತೆ ರುದ್ರನ ಶಕ್ತಿಯು ಸಂರಕ್ಷಿಸುತ್ತದೆ.)
ಧ್ರುವಾ ಅಸ್ಮಿನ್ ಗೋಪತೌ ಸ್ಯಾತ ಬಹ್ವೀಃ -
“ಬಹುಮುಖನಾದ ನೀನು ಈ ಜ್ಞಾನದ ಅಧಿದೇವತೆಯೊಂದಿಗೆ ಸದಾ ನೆಲೆಸು.”
ಯಜಮಾನಸ್ಯ ಪಶೂನ್ ಪಾಹಿ -
“ಯಜ್ಞಕರ್ತೃವಿನ ಜ್ಞಾನವನ್ನು (ಜ್ಯೋತಿರ್ಗೋವುಗಳನ್ನು) ಸಂರಕ್ಷಿಸು.”
ದಯಾನಂದಭಾಷ್ಯಾನುವಾದ
(ಶುಕ್ಲಯಜುರ್ವೇದೀಯ ವಾಜಸನೇಯೀಸಂಹಿತಾಧಾರಿತ)
ಇಷೇತ್ವಾ ಇತ್ಯಸ್ಯ ಪರಮೇಷ್ಠೀ ಪ್ರಜಾಪತಿಃ - ಋಷಿಃ | ಸವಿತಾ ದೇವತಾ | ಇಷೇ ತ್ವಾ ಇತ್ಯಾರಭ್ಯ ಭಾಗಪರ್ಯ್ಯಂತಸ್ಯ ಸ್ವರಾಡ್-ಬೃಹತೀಚ್ಛಂದಃ | ಮಧ್ಯಮಃ ಸ್ವರಃ | ಅಗ್ರೇ ಸರ್ವಸ್ಯ ಬ್ರಾಹ್ಮೀ-ಉಷ್ಣಿಕ್ ಛಂದಃ | ಋಷಭಃ ಸ್ವರಃ ||
ಅಥ ಉತ್ತಮಕರ್ಮಸಿದ್ಧ್ಯರ್ಥಮ್ ಈಶ್ವರಃ ಪ್ರಾರ್ಥನೀಯಃ - ಇತಿ ಉಪದಿಶ್ಯತೇ ||
“ಇಷೇ ತ್ವಾ..” ಎಂಬೀ ಮಂತ್ರಕ್ಕೆ ಪರಮೇಷ್ಠೀ ಪ್ರಜಾಪತಿಯು ದ್ರಷ್ಟಾರನು / ಋಷಿಯು. ಸವಿತೃವೇ ದೇವತೆಯು. “ಇಷೇ ತ್ವಾ” ಎಂಬಲ್ಲಿಂದ ಆರಂಭಿಸಿ “ಭಾಗಂ” ಎಂಬ ಮಂತ್ರಪರ್ಯಂತ / ಇಲ್ಲಿವರೆಗಿನ ಮಂತ್ರಕ್ಕೆ ಸ್ವರಾಡ್ - ಬೃಹತೀ ಎಂಬ ಛಂದಸ್ಸು. ಉಚ್ಚಾರಣಾ ಸ್ವರವು ಮಧ್ಯಮ (ಸರಿಗಮಾದಿ ಸಪ್ತಸ್ವರಗಳಲ್ಲಿ “ಮ”). ಈ ಮಂತ್ರದ “ಭಾಗಂ” ಎಂಬಲ್ಲಿಂದ ಮುಂದಿನ ಎಲ್ಲದಕ್ಕೆ ಬ್ರಾಹ್ಮೀ - ಉಷ್ಣಿಕ್ ಛಂದಸ್ಸು. ಸ್ವರವು ಋಷಭವು (“ರಿ”).
ಹೀಗೆ, ಉತ್-ತಮ (ಶ್ರೇಷ್ಠ)ವಾದ (ಉತ್ - positive degree, ಉತ್ತರ - comparative degree, ಉತ್ತಮ - superlative degree; 3 degrees of comparison eg., good, better, best. ತರಪ್, ತಮಪ್ ಪ್ರತ್ಯಯಗಳು ಕ್ರಮವಾಗಿ ೨ / ಕೆಲವು ವಸ್ತುಗಳ ತುಲನೆ ಹಾಗೂ ತುಂಬಾ ವಸ್ತುಗಳ ಹೋಲಿಕೆ / ಬೇರೆಲ್ಲದಕ್ಕಿಂತ ಹೆಚ್ಚಿನ / ತೀರಾ ಕಳಪೆಯ ಎಂಬರ್ಥದಲ್ಲಿ ಬಳಸಲ್ಪಡುವುದು.) ಕರ್ಮದ ಸಿದ್ಧಿಗಾಗಿ ಪರಮೇಶ್ವರನು ಪ್ರಾರ್ಥಿಸಲ್ಪಡಬೇಕು - ಎಂದು ಉಪದೇಶಿಸಲ್ಪಡುತ್ತದೆ.
ಮಂತ್ರ—
ಓ೩ಮ್ ಇಷೇ ತ್ವೋರ್ಜೇ ತ್ವಾ ವಾಯವ ಸ್ಥ ದೇವೋ ವಃ ಸವಿತಾ ಪ್ರಾರ್ಪಯತು ಶ್ರೇಷ್ಠತಮಾಯ ಕರ್ಮಣऽಆಪ್ಯಾಯಧ್ವಮಘ್ನ್ಯಾऽಇಂದ್ರಾಯ ಭಾಗಂ ಪ್ರಜಾವತೀರನಮೀವಾऽಅಯಕ್ಷ್ಮಾ ಮಾ ವ ಸ್ತೇನऽಈಶತ ಮಾಘಶಗ್ಂಸೋ ಧ್ರುವಾऽಅಸ್ಮಿನ್ ಗೋಪತೌ ಸ್ಯಾತ ಬಹ್ವೀರ್ಯಜಮಾನಸ್ಯ ಪಶೂನ್ ಪಾಹಿ || ೧ ||
ಪದಾರ್ಥಃ—
(ಇಷೇ) ಅನ್ನ-ವಿಜ್ಞಾನಯೋಃ ಪ್ರಾಪ್ತಯೇ | “ಇಷಮ್ ಇತಿ ಅನ್ನ-ನಾಮಸು ಪಠಿತಮ್” (ನಿಘಂಟು ೨.೭), “ಇಷತಿ ಇತಿ ಗತಿಕರ್ಮಸು ಪಠಿತಮ್” (ನಿಘಂಟು ೨.೧೪) |.......
ದೇಹಕ್ಕೆ ಬೇಕಾದ ಅನ್ನಾಹಾರ ಹಾಗೂ ಮನಸ್ಸಿಗೆ ಬೇಕಾದ ವಿಶೇಷವಾದ ಜ್ಞಾನಗಳ ಪ್ರಾಪ್ತಿಗಾಗಿ. ವೈದಿಕ ನಿಘಂಟುವಿನಂತೆ, ಇಷಮ್ ಎಂಬುದು ಅನ್ನದ ವಿವಿಧ ಹೆಸರುಗಳಲ್ಲೊಂದೆಂಬುದಾಗಿ ಹೇಳಲ್ಪಟ್ಟಿದೆ. ಹಾಗೆಯೇ, ಇಷತಿ ಎಂಬುದು ಗತಿ / ಗಮನಶೀಲತೆ / ಚಲನಶೀಲತೆಯೆಂಬ ಕರ್ಮದ ವಿಧಗಳಲ್ಲೊಂದು.
(ತ್ವಾ) ತ್ವಾಮ್ / ವಿಜ್ಞಾನಸ್ವರೂಪಂ ಪರಮೇಶ್ವರಂ |
ನಿನ್ನನ್ನು / ವಿಜ್ಞಾನಸ್ವರೂಪಿಯಾದ ಪರಮೇಶ್ವರನನ್ನು;
(ಊರ್ಜ್ಜೇ) ಪರಾಕ್ರಮೋತ್ತಮ-ರಸ-ಲಾಭಾಯ | “ಊರ್ಗ್ರಸಃ” (ಊರ್ಕ್+ರಸಃ) (ಶ.ಬ್ರಾ.೫.೧.೨.೮) |
ಉತ್ತಮವಾದ ಪರಾಕ್ರಮ/ ಪೌರುಷಪ್ರಾಪ್ತಿಗೆ ಅಗತ್ಯವಾದ ರಸ-ಧಾತುಗಳನ್ನು ಪಡೆಯಲು / ಅಂತಹ ದ್ರವ-ರಸ-ಸಾರವನ್ನು ಪಡೆಯಲು;
(ತ್ವಾ) ಅನಂತಪರಾಕ್ರಮ-ಆನಂದರಸಘನಮ್ |
ಅಂತ್ಯವಿಲ್ಲದ ಪರಾಕ್ರಮವುಳ್ಳ, ಸತ್-ಚಿತ್-ಆನಂದಪೂರ್ಣನನ್ನು;
(ವಾಯವಃ) ಸರ್ವಕ್ರಿಯಾಪ್ರಾಪ್ತಿಹೇತವಃ ಸ್ಪರ್ಶಗುಣಾಃ ಭೌತಿಕಾಃ ಪ್ರಾಣಾದಯಃ | “ವಾಯುರಿತಿ ಪದನಾಮಸು ಪಠಿತಮ್” (ನಿಘಂಟು ೫.೪) | ಅನೇನ ಪ್ರಾಪ್ತಿಸಾಧಕಾಃ ವಾಯವಃ ಗೃಹ್ಯಂತೇ | ವಾ ಗತಿ-ಗಂಧನಯೋಃ - ಇತ್ಯಸ್ಮಾತ್ | ಅನೇನ ಅಪಿ ಉಕ್ತಾರ್ಥೋ ಗೃಹ್ಯತೇ |
ಸಕಲ ಕ್ರಿಯೆಗಳ ಪ್ರಾಪ್ತಿಗೆ ಕಾರಣಗಳಾದ ಸ್ಪರ್ಶ ಗುಣ / ತನ್ಮಾತ್ರೆಯುಳ್ಳ ಭೌತಿಕವಾದ ಪ್ರಾಣ-ಅಪಾನ-ವ್ಯಾನ-ಉದಾನ-ಸಮಾನವೆಂಬ ೫ / ಪಂಚ ಪ್ರಾಣಗಳು (ಹಾಗೂ ನಾಗ-ಕೂರ್ಮ-ಕೃಕಲ-ದೇವದತ್ತ-ಧನಂಜಯವೆಂಬ ಪಂಚ ಉಪಪ್ರಾಣಾದಿಗಳು). ವೈದಿಕ ನಿಘಂಟು, ವಾಯುವೆಂಬುದು ಪದ / ಪದವಿ / ಸ್ಥಾನಗಳ ವಿವಿಧ ಹೆಸರುಗಳಲ್ಲಿ ಬರುವುದೆಂದಿದೆ. ಈ ಪದದಿಂದ ಎಲ್ಲದರ ಪ್ರಾಪ್ತಿಗೆ ಸಾಧಕವಾದ ವಾಯುಗಳು ಪರಿಗಣಿತವಾಗುತ್ತವೆ. ‘ವಾ’ ಗತಿಶೀಲತೆ ಹಾಗೂ ಸುಗಂಧಾದಿಗಳ ಪಸರಿಸುವಿಕೆ ಎಂಬರ್ಥದ ಧಾತುವಿನಿಂದಾಗಿದೆ. ಇದರಿಂದಲೂ ಮೇಲೆ ಹೇಳಿದ ಪ್ರಾಪ್ತಿಯೆಂಬರ್ಥವು ಸ್ವೀಕೃತವಾಗುತ್ತದೆ. ಅರ್ಥಾತ್ ಗಮನಾಗಮನ / ಸದ್-ಗತಿ ಹಾಗೂ ಸುಗಂಧಾದಿ ಪ್ರಾಪ್ತಿಸಾಧಕ.
(ಸ್ಥ) ಸಂತಿ | ಅತ್ರ ಪುರುಷವ್ಯತ್ಯಯೇನ ಪ್ರಥಮಪುರುಷಸ್ಯ ಸ್ಥಾನೇ ಮಧ್ಯಮಪುರುಷಃ |
ಆಗಿವೆ. ಇಲ್ಲಿ ಪುರುಷದ ವ್ಯತ್ಯಾಸದಿಂದ ಪ್ರಥಮಪುರುಷದ ಸ್ಥಾನದಲ್ಲಿ ಮಧ್ಯಮಪುರುಷವು ಪ್ರಯುಕ್ತವಾಗಿದೆ.
(ದೇವಃ) ಸರ್ವೇಷಾಂ ಸುಖಾನಾಂ ದಾತಾ ಸರ್ವವಿದ್ಯಾದ್ಯೋತಕಃ | “ದೇವೋ ದಾನಾದ್ವಾ ದೀಪನಾದ್ವಾ ದ್ಯೋತನಾದ್ವಾ ದ್ಯುಸ್ಥಾನೋ ಭವತೀತಿ ವಾ ಯೋ ದೇವಃ ಸಾ ದೇವತಾ” (ನಿರುಕ್ತ ೭.೧೫) |
ಸರ್ವರ ಸರ್ವ ಸುಖಗಳ ದಾತೃ / ಕೊಡುವವ, ಎಲ್ಲ ವಿದ್ಯೆಗಳ ದ್ಯೋತಕ / ಪ್ರಕಾಶಕ (ದ್ಯುತಿ— ಪ್ರಕಾಶ). ನಿರುಕ್ತವು ಹೇಳಿದೆ— ದೇವಶಬ್ದವು ದಾನದಿಂದಲೋ, ದೀಪನ / ಉರಿಸುವಿಕೆಯಿಂದಲೋ, ದ್ಯೋತನ / ಬೆಳಗುವಿಕೆಯಿಂದಲೋ, ದೇವಲೋಕದಲ್ಲಿರುವುದರಿಂದಲೋ ಯಾವನು ದೇವನೋ ಅದೇ ದೇವತೆಯು. (ದೇವ=ದೇವತೆ; ಉದಾ— ಅಗ್ನಿ, ವಾಯು…)
(ವಃ) ಯುಷ್ಮಾಕಮ್ |— ನಿಮ್ಮನ್ನು;
(ಸವಿತಾ) ಸರ್ವಜಗದುತ್ಪಾದಕಃ, ಸಕಲೈಶ್ವರ್ಯವಾನ್, ಜಗದೀಶ್ವರಃ |
ಇಡಿಯ ಜಗತ್ತಿನ ಸೃಷ್ಟಿಕರ್ತ, ಎಲ್ಲ ಐಶ್ವರ್ಯ / ಸಂಪತ್ತು / ಈಶ್ವರತ್ವ / ಆಧಿಪತ್ಯವುಳ್ಳ, ಜಗದೀಶ್ವರನು.
(ಪ್ರಾರ್ಪಯತು) ಪ್ರಕೃಷ್ಟತಯಾ ಸಂಯೋಜಯತು |
ಚೆನ್ನಾಗಿ ಸಂಯೋಜಿಸಲಿ, ಸೇರಿಸಲಿ, ಹೊಂದಿಸಲಿ, ಪ್ರೇರಿಸಲಿ.
(ಶ್ರೇಷ್ಠತಮಾಯ) ಅತಿಶಯೇನ ಪ್ರಶಸ್ತಃ ಸಃ ಅತಿಶಯಿತಃ, ತಸ್ಮೈ ಯಜ್ಞಾಯ |
ಅತಿಶಯವಾಗಿ, ಬಹಳವಾಗಿ, ಅತಿಯಾಗಿ ಪ್ರಶಸ್ತವಾದ, ಯೋಗ್ಯವಾದದ್ದು ಯಜ್ಞವು; ಅಂತಹ ಯಜ್ಞಕ್ಕಾಗಿ, ಯಜ್ಞಾನುಷ್ಠಾನಕ್ಕಾಗಿ, ಯಜ್ಞವನ್ನು ಮಾಡಲು,
(ಕರ್ಮಣೇ) ಕರ್ತುಂ ಯೋಗ್ಯತ್ವೇನ ಸರ್ವೋಪಕಾರಾರ್ಥಾಯ |
ಕರ್ತುಂ ಯೋಗ್ಯಂ ಕರ್ಮ— ಮಾಡಲು ಯೋಗ್ಯವಾದದ್ದು ಕರ್ಮವು. ಅಂತಹ ಸರ್ವರಿಗೂ ಉಪಕಾರಕವಾದ ಕರ್ಮಗಳನ್ನು ಮಾಡಲು.
(ಆಪ್ಯಾಯಧ್ವಮ್) ಆಪ್ಯಾಯಾಮಹೇ ವಾ |
ಅನ್ನ/ವಿಜ್ಞಾನರೂಪನೂ ಉತ್ತಮ ರಸರೂಪನೂ (ರಸೋ ವೈ ಸಃ— ತೈ.ಉಪನಿಷತ್) ಹೀಗೆ ೨ ರೂಪಗಳಿಂದ ನೀನು ನಮ್ಮನ್ನು ಪ್ರೀತಿಯಿಂದ ಅನುಗ್ರಹಿಸು; ಅಥವಾ, ಆಪ್ಯಾಯಮಾನವಾಗಿ / ಬಹು ಆದರ-ಭಕ್ತಿಗಳಿಂದ ನಿನ್ನನ್ನು ನಮಿಸುತ್ತೇವೆ.
(ಅಘ್ನ್ಯಾಃ) ವರ್ಧಯಿತುಮ್ ಅರ್ಹಾಃ, ಹಂತುಮ್ ಅನರ್ಹಾಃ ಗಾವಃ, ಇಂದ್ರಿಯಾಣಿ, ಪೃಥಿವ್ಯಾದಯಃ, ಪಶವಃ ಚ | “ಅಘ್ನ್ಯಾಃ - ಇತಿ ಗೋನಾಮಸು ಪಠಿತಮ್” (ನಿಘಂಟು ೨.೧೧) |
ಬೆಳೆಸಲು, ಸಾಕಿ ಸಲಹಲು, ಪೋಷಿಸಲು, ಸಂತತಿವರ್ಧಿಸಲು ಯೋಗ್ಯವಾದ, ಕೊಲ್ಲಲು / ಹಿಂಸಿಸಲು ಅರ್ಹವಲ್ಲದ ಗೋವುಗಳು / ಇಂದ್ರಿಯಗಳು / ಪೃಥಿವೀ ಮುಂತಾದವು / ಹಾಗೂ ಪಶುಗಳು. “ಅಘ್ನ್ಯಾಃ” ಎಂದು ಗೋವಿನ ನಾನಾ ನಾಮಗಳಲ್ಲೊಂದೆಂದು ವೈದಿಕನಿಘಂಟಿನಲ್ಲಿ ಬರುತ್ತದೆ.
(ಇಂದ್ರಾಯ) ಪರಮೈಶ್ವರ್ಯಯೋಗಾಯ |
ಶ್ರೇಷ್ಠವಾದ ಐಶ್ವರ್ಯ / ಆಧ್ಯಾತ್ಮಿಕ ಸಂಪತ್ತಿನ ಪ್ರಾಪ್ತಿಗಾಗಿ.
(ಭಾಗಮ್) ಸೇವನೀಯಂ ಭಾಗಾನಾಂ ಧನಾನಾಂ ಜ್ಞಾನಾನಾಂ ವಾ ಭಾಜನಮ್ |
ಸೇವೆಮಾಡಲ್ಪಡಲು ಯೋಗ್ಯನಾದವನನ್ನು / ಸೇವನೀಯನಾದವನನ್ನು ಅಥವಾ ಭಾಗ =ಧನಸಂಪತ್ತುಗಳ / ಜ್ಞಾನಗಳ ನಿಧಿಯಾದವನನ್ನು,
(ಪ್ರಜಾವತೀಃ) ಭೂಯಸ್ಯಃ ಪ್ರಜಾ ವರ್ತಂತೇ ಯಾಸು ತಾಃ |....
ಬಹುಮಂದಿ ಸಂತಾನಗಳು ಯಾರಲ್ಲಿವೆಯೋ ಅಂಥವುಗಳು,
(ಅನಮೀವಾಃ) “ಅಮ ರೋಗೇ” - ಇತ್ಯಸ್ಮಾದ್ ಬಾಹುಲಕಾದ್ ಔಣಾದಿಕಃ ‘ಈವನ್’ ಪ್ರತ್ಯಯಾದ್ ಅಮೀವಃ ವ್ಯಾಧಿಃ, ನ ವಿದ್ಯತೇ ಯಾಸು ತಾಃ |
ಅಮ = ರೋಗ ಎಂಬುದರಿಂದ ನಿಷ್ಪನ್ನವಾದ ಅಮೀವಃ = ವ್ಯಾಧಿಯು, ಯಾರಲ್ಲಿ ಇರುವುದಿಲ್ಲವೋ ಅಂತಹವುಗಳು ಅನಮೀವಾಃ,
(ಅ-ಯಕ್ಷ್ಮಾಃ) ನ ವಿದ್ಯತೇ ಯಕ್ಷ್ಮಾ ರೋಗರಾಜಃ, ಯಾಸು ತಾಃ |
ಯಕ್ಷ್ಮವೆಂದು ಕರೆಯಲ್ಪಡುವ ರೋಗಗಳ ರಾಜನೆನಿಸಿದ ರಾಜಯಕ್ಷ್ಮ / ಕ್ಷಯರೋಗವು ಯಾರಲ್ಲಿಲ್ಲವೋ ಅಂಥವುಗಳು,
(ಮಾ) ನಿಷೇಧಾರ್ಥೇ |— ನಿಷೇಧಾರ್ಥಸೂಚಕ.
(ವಃ) ತಾಃ |— ಅವುಗಳನ್ನು.
(ಸ್ತೇನಃ) ಚೋರಃ |— ಕಳ್ಳ.
(ಈಶತ) ಈಷ್ಟಾಂ ಸಮರ್ಥೋ ಭವತು |
ಕದಿಯಲು ಸಮರ್ಥರಾಗಲಿ. ಇಲ್ಲಿಗೆ ಮೇಲಿನ ನಿಷೇಧಾರ್ಥಕ “ಮಾ” ಅನ್ವಯವಾದಾಗ ಕದಿಯಲು ಸಮರ್ಥರಾಗದೆ ಇರಲಿ ಎಂದಾಗುತ್ತದೆ.
(ಮಾ) ನಿಷೇಧಾರ್ಥೇ |— ನಿಷೇಧವಾಚಕ.
( ಅಘಶಗ್ಂಸಃ) ಯಃ, ಅಘಂ ಪಾಪಂ ಶಂಸತಿ ಸಃ |
ಯಾವನು ಅಘ / ಪಾಪವನ್ನು ಹೊಗಳುತ್ತಾನೋ / ಪ್ರಶಂಸಿಸಿ ಪ್ರೋತ್ಸಾಹಿಸುತ್ತಾನೋ ಅಂಥವನು.
(ಧ್ರುವಾಃ) ನಿಶ್ಚಲಸುಖಹೇತವಃ |— ಸ್ಥಿರವಾದ ಸುಖಕ್ಕೆ ಕಾರಣವಾದವುಗಳು.
(ಅಸ್ಮಿನ್) ವರ್ತಮಾನೇ ಪ್ರತ್ಯಕ್ಷೇ |— ಈ ಕಣ್ಣೆದುರಿಗೆ ಕಾಣಿಸುತ್ತಿರುವ,
(ಗೋಪತೌ) ಯೋ ಗವಾಂ ಪತಿಃ ಸ್ವಾಮೀ, ತಸ್ಮಿನ್ |— ಯಾವ ಗೋವುಗಳ ಪಾಲಕ / ಸ್ವಾಮಿ / ಒಡೆಯನಿರುವನೋ ಅವನಲ್ಲಿ,
(ಸ್ಯಾತ) ಭವೇಯುಃ |— ಇರಲಿ.
(ಬಹ್ವೀಃ) ಬಹ್ವಯಃ, ಅತ್ರ |— ಇಲ್ಲಿ ಬಹುಸಂಖ್ಯೆಯಲ್ಲಿ.
(ಯಜಮಾನಸ್ಯ) ಯಃ ಪರಮೇಶ್ವರಂ ಸರ್ವೋಪಕಾರಂ ಧರ್ಮಂ ಚ ಯಜತಿ, ತಸ್ಯ ವಿದುಷಃ |
ಯಾವನು ಪರಮೇಶ್ವರನನ್ನೂ, ಸರ್ವಹಿತಕಾರಕ ಧರ್ಮವನ್ನೂ ಕುರಿತು ತಪೋಯಜ್ಞಾದಿ ಅನುಷ್ಠಾನ, ಆಚರಣೆಗಳನ್ನು ಮಾಡುವನೋ, ಅಂತಹ ಜ್ಞಾನಿಯ,
(ಪಶೂನ್) ಗೋ-ಅಶ್ವ-ಹಸ್ತ್ಯಾದೀನ್ ಶ್ರಿಯಃ ಪ್ರಜಾಃ ವಾ | “ಶ್ರೀಃ ಹಿ ಪಶವಃ” (ಶ.ಬ್ರಾ. ೧.೬.೩.೩೬), “ಪ್ರಜಾಃ ವೈ ಪಶವಃ” (ಶ.ಬ್ರಾ. ೧.೪.೬.೧೭) |
ಗೋವು, ಕುದುರೆ, ಆನೆ ಮುಂತಾದ ಸಾಕುಪ್ರಾಣಿಗಳನ್ನು ಅಥವಾ ಸಂತಾನವನ್ನು; ಶತಪಥ ಬ್ರಾಹ್ಮಣವು ಹೇಳಿದೆ— “ಪಶುಗಳೆಂದರೆ ಸಂಪತ್ತು / ಶ್ರೀ / ಸಿರಿ”, “ಪ್ರಜೆಗಳು / ಮಕ್ಕಳು ಪಶುಗಳು”.
(ಪಾಹಿ) ರಕ್ಷ ||— ರಕ್ಷಿಸು / ಪಾಲಿಸು.
ಅಯಂ ಮಂತ್ರಃ ಶತಪಥಬ್ರಾಹ್ಮಣೇ (೧.೫.೪.೧-೮) ವ್ಯಾಖ್ಯಾತಃ || ೧ ||
ಈ ಮಂತ್ರವು ಶತಪಥ ಬ್ರಾಹ್ಮಣದಲ್ಲಿ ವ್ಯಾಖ್ಯಾನಿಸಲ್ಪಟ್ಟಿದೆ.
ಅನ್ವಯಃ—
ಹೇ ಮನುಷ್ಯಾಃ! (ಎಲೈ ಮನುಜರೇ!), ಅಯಂ ಸವಿತಾ ದೇವಃ (ಈ ಜಗತ್ಕರ್ತನೂ, ಸಕಲೈಶ್ವರ್ಯಯುಕ್ತನೂ, ಸಕಲರಿಗೆ ಸರ್ವಸುಖಗಳ ದಾತೃವೂ ಆದ ಜಗದೀಶ್ವರನು), ಭಗವಾನ್ (ಭಗವಂತನು), ವಾಯವಃ ಸ್ಥ ಯಾನ್ಯಸ್ಮಾಕಂ ವಃ, ಯುಷ್ಮಾಕಂ ಪ್ರಾಣಾಂತಃಕರಣೇಂದ್ರಿಯಾಣಿ ಸಂತಿ (ಯಾವ ನಮ್ಮ ನಿಮ್ಮ ಪ್ರಾಣ-ಅಂತಃಕರಣ-ಇಂದ್ರಿಯಗಳಿವೆಯೋ), ತಾನಿ ಶ್ರೇಷ್ಠತಮಾಯ ಕರ್ಮಣೇ ಪ್ರಾರ್ಪಯತು (ಅವುಗಳನ್ನು ಶ್ರೇಷ್ಠತಮವಾದ ಕರ್ಮಗಳಲ್ಲಿ ತೊಡಗಿಸಲಿ / ಸಂಯೋಜಿಸಲಿ.)|
ವಯಮ್ ಇಷೇ, ಅನ್ನಾಯ ಉತ್ತಮೇಚ್ಛಾಯೈ (ನಾವು ಅನ್ನಕ್ಕಾಗಿ, ಉತ್ತಮ ಇಚ್ಛಾಶಕ್ತಿಗಾಗಿ, ಜ್ಞಾನಕ್ಕಾಗಿ), ಸವಿತಾರಂ ದೇವಂ ತ್ವಾ ತ್ವಾಂ ತಥಾ (ಜಗತ್ತಿನ ಪ್ರಸವಕ್ಕೆ ಕಾರಣನಾಗಿ ಸವಿತೃವೆನಿಸಿದ ದೇವನಾದ ನಿನ್ನನ್ನು), ಊರ್ಜ್ಜೇ ಪರಾಕ್ರಮ-ಉತ್ತಮ-ರಸಪ್ರಾಪ್ತಯೇ ಭಾಗಂ ಭಜನೀಯಂ ತ್ವಾ ತ್ವಾಂ ಸತತಮ್ ಆಶ್ರಯಾಮಃ (ಉತ್ತಮ ಶಕ್ತಿಪರಾಕ್ರಮಗಳಿಗಾಗಿ ಬೇಕಾದ ಶ್ರೇಷ್ಠ ರಸಧಾತುಗಳ ಪ್ರಾಪ್ತಿಗಾಗಿ ಭಜಿಸಲ್ಪಡಲು ಯೋಗ್ಯನಾದ ನಿನ್ನನ್ನು ಸತತವೂ ಆಶ್ರಯಿಸುತ್ತೇವೆ.);
ಏವಂ ಭೂತ್ವಾ ಯೂಯಮ್ ಆಪ್ಯಾಯಧ್ವಮ್ ವಯಂ ಚ ಆಪ್ಯಾಯಾಮಹೇ (ಈ ರೀತಿಯಾಗಿ ನೀವುಗಳು / ಶಿಷ್ಯರು ಭಗವಂತನನ್ನು ಪ್ರೇಮದಿಂದ ಕಾಣಿರಿ ಹಾಗೂ ನಾವೂ /ಗುರುಗಳೂ ಸಹ ಆತನನ್ನು ಸಾದರಾತಿಶಯದಿಂದ ಭಜಿಸುತ್ತೇವೆ. - ಅಥವಾ - ಹೀಗೆ ಮಾನವರಾದ ನೀವು ಭಗವಂತನನ್ನು ಅತಿಶಯ ಭಕ್ತಿಯಿಂದ ಕಾಣಿರಿ; ಭಗವತ್ಸ್ವರೂಪರಾದ ದೇವತೆಗಳಾದ ನಾವೂ ಅಂತೆಯೇ ನಿಮ್ಮನ್ನು ಆಪ್ಯಾಯತೆಯಿಂದ ನೋಡಿಕೊಳ್ಳುವೆವು / ಯೋಗಕ್ಷೇಮವನ್ನು ನಿರ್ವಹಿಸುವೆವು.) |
ಹೇ ಪರಮೇಶ್ವರ! ಭವಾನ್ ಕೃಪಯಾ ಅಸ್ಮಾಕಮ್ ಇಂದ್ರಾಯ ಪರಮೈಶ್ವರ್ಯಪ್ರಾಪ್ತಯೇ ಶ್ರೇಷ್ಠತಮಾಯ ಕರ್ಮಣೇ ಚ ಇಮಾಃ, ಪ್ರಜಾವತೀಃ ಅನಮೀವಾಃ, ಅಯಕ್ಷ್ಮಾಃ, ಗಾಃ ಸದಾ ಏವ ಪ್ರಾರ್ಪಯತು (ಅಯ್ಯಾ ಪರಮೇಶ್ವರನಾದ ಭಗವಂತನೇ! ನೀನು ಕೃಪೆಯಿಂದ ನಮಗೆ ಪರಮೈಶ್ವರ್ಯ ಪ್ರಾಪ್ತಿಯಾಗಲು ಶ್ರೇಷ್ಠತಮವಾದ ಯಜ್ಞಾದಿ ಕರ್ಮಗಳನ್ನು ಮಾಡಲನುವಾಗುವಂತೆ, ಅದಕ್ಕೆ ಬೇಕಾದ ತುಪ್ಪ ಮುಂತಾದ ಸುವಸ್ತುಗಳನ್ನೂ, ಉತ್ತಮ ಬುದ್ಧಿಯನ್ನೂ ನೀಡು ಹಾಗೂ ಅದಕ್ಕಾಗಿ ಈ ಬಹುಸಂತತಿಯುಳ್ಳ, ರೋಗರಹಿತರಾದ, ಕ್ಷಯರಹಿತರಾದ ಗೋವುಗಳನ್ನು ಸದಾ ಪ್ರೇರಿಸು.) |
ಹೇ ಪರಮಾತ್ಮನ್! ಭವತ್ಕೃಪಯಾ ಅಸ್ಮಾಕಂ ಮಧ್ಯೇ ಕಶ್ಚಿದ್ ಅಘಶಂಸಃ ಪಾಪೀ ಸ್ತೇನಃ ಚೋರಃ ಚ ಮಾ ಈಶತ, ಕದಾಚಿತ್ ಮಾ ಉತ್ಪದ್ಯತಾಮ್ (ಹೇ ಪರಮಾತ್ಮನೇ! ನಿನ್ನ ದಯೆಯಿಂದ ನಮ್ಮ ನಡುವೆ ಸಮಾಜದಲ್ಲಿ ಯಾವನೇ ಪಾಪಬುದ್ಧಿಯ ಕಳ್ಳನು ಉಂಟಾಗದಿರಲಿ / ಯಾವನೂ ಕೂಡ ಪಾಪಿಯೂ, ಕಳ್ಳನೂ ಆಗದಿರಲಿ.) |
ತಥಾ, ತ್ವಮ್ ಅಸ್ಯ ಯಜಮಾನಸ್ಯ ಜೀವಸ್ಯ ಪಶೂನ್ ಪಾಹಿ ಸತತಂ ರಕ್ಷ (ಹಾಗೆಯೇ, ನೀನು ಈ ಯಜಮಾನನಾದ ಜೀವಾತ್ಮನ ಸಂತತಿಯನ್ನೂ, ಗೌ, ಹಸ್ತಿ, ಅಶ್ವಾದಿ ಸಾಕುಪ್ರಾಣಿಗಳನ್ನೂ, ಸಕಲ ಸಿರಿಸಂಪದವನ್ನೂ ಎಡೆಬಿಡದೆ ಸದಾಕಾಲವೂ ರಕ್ಷಿಸು.)|
ಯತಃ, ವಃ, ತಾಃ ಗಾಃ, ಇಮಾನ್ ಪಶೂನ್, ಚ ಅಘಶಂಸಃ ಸ್ತೇನಃ ಮಾ ಈಶತ (ಹೀಗೆ ನೀನು ರಕ್ಷಿಸಿದರೆ, ಇವುಗಳನ್ನು ಪಾಪೀ ಚೋರನು ಕದ್ದೊಯ್ಯಲಾರನು.) |
ಹರ್ತುಂ ಸಮರ್ಥಃ, ನ ಭವೇತ್ ಯತಃ, ಅಸ್ಮಿನ್ ಗೋಪತೌ ಪೃಥಿವ್ಯಾದಿ-ರಕ್ಷಣಮ್ ಇಚ್ಛುಕಸ್ಯ ಧಾರ್ಮಿಕಮನುಷ್ಯಸ್ಯ ಬಹ್ವೀಃ, ಬಹ್ವ್ಯಃ ಗಾವಃ ಧ್ರುವಾಃ ಸ್ಯಾತ ಭವೇಯುಃ (ಹೀಗೆ ಚೋರನು ಅಪಹರಿಸಲು ಸಮರ್ಥನಾಗದಿದ್ದರೆ, ಇದರಿಂದಾಗಿ ಈ ಗೋಪಾಲಕನಾದ ಯಜಮಾನನಲ್ಲಿ / ಭೂಮಿಯೇ ಮುಂತಾದ ಸಂಪತ್ತನ್ನು ರಕ್ಷಿಸಲು ಇಚ್ಛೆಯುಳ್ಳ ಧಾರ್ಮಿಕನಾದ ನರನಿಗೆ ಬಹುಸಂಖ್ಯೆಯ ಗೋವುಗಳು / ಅತುಲವಾದ ಧಾರ್ಮಿಕ ಪರಮೈಶ್ವರ್ಯವು / ಅತಿಶಯವಾದ ಭೂಮ್ಯಾದಿ ಸಕಲ ಸಿರಿಸಂಪದವು ಒದಗಿಬರಲಿ.) || ೧ ||
ಭಾವಾರ್ಥಃ—
ಮನುಷ್ಯೈಃ ಸದಾ ಏವ ಧರ್ಮ್ಯಂ ಪುರುಷಾರ್ಥಮ್ ಆಶ್ರಿತ್ಯ, ಋಗ್ವೇದಾಧ್ಯಯನೇನ ಗುಣಗುಣಿನೌ ಜ್ಞಾತ್ವಾ, ಸರ್ವಪದಾರ್ಥಾನಾಂ ಸಂಪ್ರಯೋಗೇಣ ಪುರುಷಾರ್ಥಸಿದ್ಧಯೇ ಶ್ರೇಷ್ಠತಮಾಭಿಃ ಕ್ರಿಯಾಭಿಃ ಸಂಯುಕ್ತೈಃ ಭವಿತವ್ಯಮ್ (ಮನುಷ್ಯರಿಂದ ಯಾವಾಗಲೂ ಧರ್ಮಯುಕ್ತವಾದ ಅರ್ಥ-ಕಾಮಾದಿ ಪುರುಷಾರ್ಥಗಳನ್ನು ಆಶ್ರಯಿಸಿ, ಋಗ್ವೇದದ ಅಧ್ಯಯನದಿಂದ ಪರಮಾತ್ಮನ ಗುಣಗಳನ್ನೂ, ಗುಣಯುಕ್ತನಾದ ಪರಮಾತ್ಮನನ್ನೂ ತಿಳಿದು, ಸಕಲ ಸುವಸ್ತುಗಳ / ಸೂಕ್ತ-ಮಂತ್ರಾದಿಗಳ ಸದ್ಬಳಕೆಯಿಂದ ಧರ್ಮ-ಅರ್ಥ-ಕಾಮ-ಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥಗಳ ಸಿದ್ಧಿಗಾಗಿ, ಶ್ರೇಷ್ಠತಮವಾದ ಕ್ರಿಯೆಗಳಿಂದ ಕೂಡಿರಲ್ಪಡತಕ್ಕದ್ದು.) |
ಯತಃ, ಈಶ್ವರಾನುಗ್ರಹೇಣ ಸರ್ವೇಷಾಂ ಸುಖೈಶ್ವರ್ಯಸ್ಯ ವೃದ್ಧಿಃ ಸ್ಯಾತ್ (ಯಾಕೆಂದರೆ / ಯಾವ ಇದರಿಂದ / ಹೀಗೆ ಮಾಡುವುದರಿಂದ, ಪರಮೇಶ್ವರನ ಅನುಗ್ರಹವುಂಟಾಗಿ ಎಲ್ಲರ ಸುಖ-ಸಂಪತ್ತುಗಳ ವೃದ್ಧಿ / ಹೆಚ್ಚಳವಾಗುವುದು.) |
ತಥಾ ಸಮ್ಯಕ್ ಕ್ರಿಯಯಾ ಪ್ರಜಾಯಾಃ, ರಕ್ಷಣ-ಶಿಕ್ಷಣೇ ಸದಾ ಏವ ಕರ್ತವ್ಯೇ (ಹಾಗೆಯೇ, ಇಂತಹ ಒಳ್ಳೆಯ / ಸರಿಯಾದ ಕ್ರಿಯಾಕರ್ಮಗಳಿಂದ ಸತ್ಪ್ರಜೆಗಳ / ಸತ್ಸಂತತಿಯ / ಮಕ್ಕಳ ಪಾಲನೆ-ಶಿಕ್ಷಣಾದಿಗಳು ಸರ್ವದಾ ಮಾಡಲ್ಪಡಬೇಕಾದುದು / ಕರ್ತವ್ಯವು.) |
ಯತಃ, ನೈವ ಕಶ್ಚಿತ್ ರೋಗಾಖ್ಯಃ, ವಿಘ್ನಃ ಚೋರಃ ಚ ಪ್ರಬಲಃ ಕದಾಚಿದ್ ಭವೇತ್, ಪ್ರಜಾಃ ಚ ಸರ್ವಾಣಿ ಸುಖಾನಿ ಪ್ರಾಪ್ನುಯುಃ (ಯಾಕೆಂದರೆ, ಹೀಗಿದ್ದರೆ ಭಗವದನುಗ್ರಹದಿಂದ ಎಂದಿಗೂ ಯಾವುದೇ ರೋಗವೆಂಬ ಹಾಗೂ ಚೋರನೆಂಬ ಪ್ರಬಲವಾದ ವಿಘ್ನವು ಎಂದಿಗೂ ಉಂಟಾಗಲಾರದು; ಸಕಲ ಪ್ರಜೆಗಳೂ / ಮಕ್ಕಳೂ ಎಲ್ಲರೀತಿಯ ಧರ್ಮಯುಕ್ತ ಸುಖವನ್ನು ಹೊಂದುವರು.) |
ಯೇನ ಇಯಂ ವಿಚಿತ್ರಾ ಸೃಷ್ಟಿಃ-ರಚಿತಾ, ತಸ್ಮೈ ಜಗದೀಶ್ವರಾಯ ಸದಾ ಏವ ಧನ್ಯವಾದಾಃ, ವಾಚ್ಯಾಃ (ಯಾವನಿಂದ ಈ ಚಿತ್ರ-ವಿಚಿತ್ರವಾದ / ವೈವಿಧ್ಯಮಯವೂ ಅದ್ಭುತವೂ ಆದ ಸೃಷ್ಟಿಯು ರಚಿಸಲ್ಪಟ್ಟಿತೋ, ಅಂತಹ ಜಗತ್ತಿನ ಒಡೆಯನಿಗೆ ಯಾವಾಗಲೂ ಧನ್ಯವಾದಗಳು ಹೇಳಲ್ಪಡಬೇಕು.) |
ಏವಂ ಕುರ್ವತಃ, ಭವತಃ, ಪರಮದಯಾಲುಃ ಈಶ್ವರಃ ಕೃಪಯಾ ಸದೈವ ರಕ್ಷಯಿಷ್ಯತಿ ಇತಿ ಮಂತವ್ಯಮ್ (ಹೀಗೆ ಮಾಡುವುದರಿಂದ ತಮ್ಮನ್ನೆಲ್ಲ ಪರಮದಯಾಳುವಾದ ಪರಮಾತ್ಮನು ಕೃಪೆಯಿಂದ ಯಾವಾಗಲೂ ಕೂಡ ರಕ್ಷಿಸುವನೆಂದು ತಿಳಿಯಬೇಕು.)||
ಜಯದೇವಶರ್ಮಕೃತಭಾಷ್ಯಾನುವಾದ
(ಶುಕ್ಲಯಜುರ್ವೇದೀಯ ವಾಜಸನೇಯೀಸಂಹಿತಾಧಾರಿತ)
ಹೇ ಪರಮೇಶ್ವರನೇ!, (ಇಷೇ) ಅನ್ನ, ಉತ್ತಮ ವೃಷ್ಟಿ / ಮಳೆ ಮುಂತಾದವುಗಳ ಪ್ರಾಪ್ತಿಗಾಗಿ ಹಾಗೂ, (ಊರ್ಜೇ) ಸರ್ವೋತ್ತಮವಾದ ಪುಷ್ಟಿಕಾರಕ ರಸದ ಪ್ರಾಪ್ತಿಗಾಗಿ, (ತ್ವಾ ತ್ವಾ) ನಿನ್ನ ಉಪಾಸನೆಯನ್ನು ಮಾಡುತ್ತೇವೆ. ಹೇ ಪ್ರಾಣಗಳೇ (ಪಂಚಪ್ರಾಣಾದಿಗಳು) ಹಾಗೂ ಪ್ರಾಣಿಗಳೇ (ಪ್ರಾಣವಿರುವ ಸಕಲ ಜೀವರೇ)! ನೀವು, (ವಾಯವಃ ಸ್ಥ) ಎಲ್ಲರೂ ವಾಯುಸ್ವರೂಪರಾಗಿರುವಿರಿ; ಪ್ರಾಣವಾಯುವಿನ ಮೂಲಕವೇ ತಮ್ಮ ತಮ್ಮ ಪ್ರಾಣಗಳನ್ನು ಶರೀರದಲ್ಲಿ ಹಿಡಿದಿಟ್ಟುಕೊಂಡಿರುವಿರಿ / ಧರಿಸಿರುವಿರಿ. (ವಃ / ಯುಷ್ಮಾಕಮ್) ನಿಮ್ಮೆಲ್ಲರ, (ಸವಿತಾ) ಪ್ರಸವಿತೃ / ಪ್ರಸವಿಸಿದ / ಹೆತ್ತ ಸೃಷ್ಟಿಕರ್ತನಾದ ಪರಮೇಶ್ವರನಾದರೋ, (ದೇವಃ) ಸರ್ವಶ್ರೇಷ್ಠ ದೇವನಾಗಿ, ಸಕಲ ಸುಖ ಹಾಗೂ ಸುವಸ್ತುಗಳ ಪ್ರಕಾಶಕನೂ, ಪ್ರದಾಯಕನೂ ಆಗಿದ್ದಾನೆ. ಅವನು ನಿಮ್ಮನ್ನು, (ಶ್ರೇಷ್ಠತಮಾಯ) ಅತ್ಯಂತ ಶ್ರೇಷ್ಠವಾದ, ಎಲ್ಲಕ್ಕಿಂತ ಉತ್ತಮವಾದ, (ಕರ್ಮಣೇ) ಮೋಕ್ಷದಾಯಕ ಕರ್ಮಾಚರಣೆಗೆ, (ಪ್ರಾರ್ಪಯತು) ಪ್ರೇರಿಸಲಿ. ಅಂತೆಯೇ, (ಅಘ್ನ್ಯಾಃ) ಎಂದೂ ವಧಾರ್ಹವಲ್ಲದ ಇಂದ್ರಿಯಗಳಲ್ಲಿನ ಪ್ರಾಣಗಳೇ! ಯಜ್ಞಯೋಗ್ಯವಾದ ಗೋವುಗಳೇ! ಪೃಥಿವಿಯೇ ಮುಂತಾದ ಲೋಕಗಳೇ! ನೀವೆಲ್ಲರೂ, (ಆಪ್ಯಾಯಧ್ವಮ್) ಚೆನ್ನಾಗಿ ಬಲ-ಪುಷ್ಟಿಯುತರಾಗಿರಿ. ನೀವು, (ಇಂದ್ರಾಯ) ಐಶ್ವರ್ಯವಂತ ಪುರುಷ / ರಾಜನಿಗಾಗಿ, (ಭಾಗಮ್) ಭಜನೆ / ಸೇವೆ ಮಾಡಲು / ಸಮರ್ಪಿಸಲು ಯೋಗ್ಯವಾದ ಭಾಗವಾಗಿರಿ. ನೀವು, (ಪ್ರಜಾವತೀಃ) ಪ್ರಜಾಜನರ, ಕರುಗಳ, ಮಕ್ಕಳೇ ಮುಂತಾದವರ ಸಹಿತ, (ಅನಮೀವಾಃ) ರೋಗರಹಿತರಾಗಿ, (ಅಯಕ್ಷ್ಮಾಃ) ರಾಜಯಕ್ಷ್ಮಾದಿರಹಿತರಾಗಿರಿ. (ವಃ / ಯುಷ್ಮಾನ್ / ಯುಷ್ಮಾಕಮ್ ಉಪರಿ) ನಿಮ್ಮ ಮೇಲೆ, (ಸ್ತೇನಃ) ಕಳ್ಳಕಾಕರು, (ಮಾ ಈಶತ) ಈಶತ್ವ / ಪ್ರಭುತ್ವ / ಗೆಲುವನ್ನು ಹೊಂದದಿರಲಿ; ನಿಮ್ಮನ್ನು ಚೋರರು ಆಳದಿರಲಿ / ಸೋಲಿಸದಿರಲಿ / ಹೊಂದದಿರಲಿ. (ಅಘಶಂಸಃ) ಸದಾ ಪಾಪಕರ್ಮದ ಬಗ್ಗೆಯೇ ಚರ್ಚಿಸುತ್ತಿರುವ, ಇತರರನ್ನೂ ಪಾಪಕಾರ್ಯಗಳಿಗೆ ಪ್ರಚೋದಿಸುವ ನೀಚರು, (ವಃ ಮಾ ಈಶತ) ನಿಮ್ಮನ್ನು ಗೆಲ್ಲದಿರಲಿ. ಹೇ ಗೋವುಗಳೇ! ನೀವು, (ಗೋಪತೌ) ಗೋಪಾಲಕರ, ಭೂಪಾಲಕರ ಅಧೀನದಲ್ಲಿ, (ಧ್ರುವಾಃ) ಸ್ಥಿರವಾಗಿ / ಶಾಶ್ವತವಾಗಿ, (ಬಹ್ವೀಃ) ಬಹುಸಂಖ್ಯೆಯಲ್ಲಿ, (ಸ್ಯಾತ) ವಾಸವಾಗಿರಿ / ನೆಲೆಸಿರಿ. ಹೇ ವಿದ್ವಾನ್ ಪುರುಷನೇ! ಸೇನಾಪತಿಯೇ! ಮಂತ್ರಿಯೇ! ನೀನೂ, (ಯಜಮಾನಸ್ಯ) ಯಜ್ಞಮಾಡುವ, ದಾನಾದಿಗಳನ್ನಾಚರಿಸುವ ಶ್ರೇಷ್ಠ ವ್ಯಕ್ತಿಗಳ, (ಪಶೂನ್ ಪಾಹಿ) ಪಶುಗಳನ್ನು ಪಾಲಿಸು. (ಶತಪಥ ಬ್ರಾಹ್ಮಣ ೧.೭.೧. ೧-೭)
Comments
Post a Comment